ವಸ್ತುಮಧ್ಯ: ಆದಿ ಅಂತ್ಯಗಳ ನಡುವೆ

ವಸ್ತುಮಧ್ಯ: ಆದಿ ಅಂತ್ಯಗಳ ನಡುವೆ

‘ಒಂದಾನೊಂದು ಊರಿನಲ್ಲಿ ಒಬ್ಬ ರಾಜ ಇದ್ದ’ (ಅಥವಾ ಇನ್ನು ಯಾರೋ ಇದ್ದರು) ಎಂಬ ಕಥಾರಂಭವನ್ನು ನಾವೆಲ್ಲರೂ ಚಿಕ್ಕಂದಿನಲ್ಲೇ ಕೇಳಿದ್ದೇವೆ. ಇಂಗ್ಲಿಷ್‌ನಲ್ಲಾದರೆ, Once upon a time ‘ಒಂದಾನೊಂದು ಕಾಲದಲ್ಲಿ’ ಎಂದು ಊರಿನ ಬದಲು ಕಾಲದ ರಂಗದಲ್ಲಿ ಕಥಾಪಾತ್ರಗಳು ಪ್ರವೇಶ ಮಾಡುತ್ತವೆ. ಇದು ಜನಪದ ಸಂಪ್ರದಾಯದ ಮೌಖಿಕ ಕಥನಗಳ ಆರಂಭ. ಕತೆಗೊಂದು ಕಾಲ ಮತ್ತು ದೇಶದ ಹಿನ್ನೆಲೆಯನ್ನು ಒದಗಿಸುವುದು ಇಲ್ಲಿನ ಕ್ರಮ. ಸ್ವಲ್ಪ ಹೆಚ್ಚು ಪರಿಷ್ಕಾರದ ಕಥನ ಸರಣಿಗಳಲ್ಲಿ ಹಾಗೂ ಮೌಖಿಕ ಮೂಲವಾದ ಪುರಾಣ ಕತೆಗಳಲ್ಲಿ ಇತರ ರೀತಿಯ ಆರಂಭಗಳನ್ನು ಕಾಣಬಹುದು: ಯಾರು ಯಾರಾನ್ನೋ ಕತೆ ಹೇಳಲು ಕೋರುತ್ತಾರೆ; ಈ ‘ಸೂತಪುರಾಣಿಕರು’ ಅರ್ಥಾತ್ ಕಥನಕಾರರು ಕತೆಯನ್ನು ಇನ್ನು ಯಾರಿಂದಲೋ ಕೇಳಿರುತ್ತಾರೆ; ತಾವು ಕೇಳಿದ ಕತೆಯನ್ನು ಅವರು ಈಗ ಅದೇ ರೀತಿ ಹೇಳಲು ತೊಡಗುತ್ತಾರೆ. ರಾಮಾಯಣ, ಮಹಾಭಾರತಗಳ ಕಥಾರಂಭ ಈ ತರದವು. ಅರೇಬಿಯನ್ ನೈಟ್ಸ್‌ನ‌ಲ್ಲಿ ಕತೆ ಹೇಳುವವಳು ಶೆಹರಝಾದೆ; ಆದರೆ ಇವಳು ಯಾಕೆ ಕತೆ ಹೇಳಲು ಬದ್ಧಳಾಗುತ್ತಾಳೆ ಎ೦ಬುದಕ್ಕೆ ಕಾರಣವೊಂದನ್ನು ಹೆಣೆಯಲಾಗುತ್ತದೆ. ಮೌಖಿಕ ಸಂಪ್ರದಾಯದಲ್ಲಿ ಬಂದಂಥ ಹಲವು ಕತೆಗಳು ಕತೆಗಳಿಗೊಂದು ಕಾರಣ ನೀಡುವುದು ಸ್ವಾರಸ್ಯಕರ ವಿಚಾರ.

ಹಲವು ಕತೆಗಳು ಕಥಾಮಧ್ಯದಲ್ಲಿ ಆರಂಭವಾಗುತ್ತವೆ. ಹಿಂದಣ ಕಾವ್ಯಗಳಲ್ಲಿ ಹಲವಾರು ಈ ತರ ಮಧ್ಯದಲ್ಲಿ ತೊಡಗುವಂಥವು. ಇಂಥ ಕಥಾರಂಭಕ್ಕೆ ಪುರಾತನ ಲ್ಯಾಟಿನ್ ಕವಿ ಮತ್ತು ವಿಮರ್ಶಕ ಹೊರೇಸ್ ಉಪಯೋಗಿಸುವ ಪದ in medias res ‘ವಸ್ತು ಮಧ್ಯೆ’ ಎಂಬುದು-ಆಧುನಿಕ ವಿಮರ್ಶಾ ಪರಿಭಾಷೆಯಲ್ಲಿ ಜನಪ್ರಿಯವಾಗಿರವಂಥ ಪದ. ಉದಾಹರಣೆಗೆ, ಹೋಮರನ ಈಲಿಯಡ್ ಮತ್ತು ಒಡಿಸ್ಸಿ ಎಂಬ ಎರಡೂ ಮಹಾಕಾವ್ಯಗಳೂ ಕಥಾಮಧ್ಯದಲ್ಲೇ ಆರಂಭಗೊಳ್ಳುತ್ತದೆ. ಈಲಿಯಡ್ ಕಾವ್ಯ ಹೆಲೆನಳಿಗೋಸ್ಕರ ಗ್ರೀಕ್ ಮತ್ತು ಟ್ರೋಜನ್ ಪಡೆಗಳ ನಡುವೆ ಹತ್ತು ವರ್ಷಗಳ ಸುದೀರ್ಘ ಕಾಲ ನಡೆದ ಯುದ್ಧದ ಕತೆಯನ್ನು ಒಳಗೊಂಡಿದ್ದರೂ ಅದು ನಿಜವಾಗಿಯೂ ಉಪಯೋಗಿಸಿಕೊಳ್ಳುವುದು ಕೇವಲ ಹತ್ತನೆಯ ವರ್ಷದ ಕೊನೆಯ ಐವತ್ತೈದು ದಿನಗಳ ಕತೆಯನ್ನು ಮಾತ್ರ. ಜಗತ್ಪ್ರಸಿದ್ಧವಾದ ಈ ಕಾವ್ಯದ ಆರಂಭವಾದರೂ ಎಂಥದು! ಗ್ರೀಕ್ ಮಹಾವೀರ ಏಖಿಲಸ್ ಕೊಳ್ಳೆಹೊಡೆದ ಟ್ರೋಜನ್ ಹುಡುಗಿಯೊಬ್ಬಳನ್ನು ಗ್ರೀಕ್ ಪಡೆಗಳ ದಂಡನಾಯಕ ಅಗಮೆಮ್ನೋನ್ ತನ್ನ ವಶಕ್ಕೆ ತೆಗೆದುಕೊಂಡ ಕಾರಣ ಈ ಇಬ್ಬರು ಪರಾಕ್ರಮಿಗಳ ನಡುವೆ ಉಂಟಾಗುವ ವಿರಸದ ಚಿತ್ರಣದೊಂದಿಗೆ! ಒಡಿಸ್ಸಿಯ ಆರಂಭವೂ ಹೀಗೇ `ವಸ್ತುಮಧ್ಯ’ದಲ್ಲಿ: ಟ್ರೋಜನ್ ಯುದ್ಧದಲ್ಲಿ ಜಯಗಳಿಸಿದ ನ೦ತರ ಗ್ರೀಕ್ ಪಡೆಗಳು ತಂತಮ್ಮ ರಾಜ್ಯಗಳಿಗೆ ಮರಳುತ್ತವೆ; ಆದರೆ ವೀರನೂ ಚಾಣಾಕ್ಷನೂ ಆದ ಯೂಲಿಸಿಸ್ ಮಾತ್ರ ಸಮುದ್ರರಾಜನ ಕೋಪಕ್ಕೆ ಗುರಿಯಾಗಿ ದಾರಿತಪ್ಪಿ ಮತ್ತೆ ಹತ್ತು ವರ್ಷಗಳ ಕಾಲ ಅಲೆಯಬೇಕಾಗುತ್ತದೆ. ಇಂಥ ಯೂಲಿಸಿಸ್‌ನ ಸಾಹಸಗಳನ್ನು ಚಿತ್ರಿಸುವ ಕಾವ್ಯವೇ ಒಡಿಸ್ಸಿ (ಒಡೀಸಿಯಸ್ ಎನ್ನುವುದು ಯೂಲಿಸಿಸ್‌ನ ಇನ್ನೊಂದು ಹೆಸರು). ಇದೂ ಕ್ರಮಾಗತವಾಗಿ ಸುರುವಾಗುವುದಿಲ್ಲ. ಯಾವುದೋ ದೂರದ ದ್ವೀಪವೊಂದರಲ್ಲಿ ಯೂಲಿಸಿಸ್ ಕಾಲಿಪ್ಸೋ ಎಂಬ ದೇವತೆಯ ವಶ ಇದ್ದಾನೆಂದು ಗೊತ್ತಾಗುತ್ತದೆ. ನಂತರ ನಮಗೆ ಯೂಲಿಸಿಸ್ ನೇರವಾಗಿ ಕಾಣಿಸಿಕೊಳ್ಳುವುದು ಕಾವ್ಯದ ಐದನೆಯ ಅಧ್ಯಾಯದಲ್ಲಿ. ಅದು ಹೇಗೋ ಬಂಧನದಿಂದ ಬಿಡುಗಡೆಗೊಂಡು ಬರುವಾಗ ಆತನ ಹಡಗು ಒಡೆದು ಚೂರು ಚೂರಾಗುತ್ತದೆ. ಯೂಲಿಸಿಸ್ ಮಾತ್ರವೇ ಬದುಕಿ ಫೀಶಿಯನ್ ಜನರ ದ್ವೀಪದಲ್ಲಿ ಆಶ್ರಯ ಪಡೆಯುತ್ತಾನೆ. ಅಲ್ಲಿನ ಅರಸನ ಆಸ್ಥಾನದಲ್ಲಿ ಯೂಲಿಸಿಸ್ ತನ್ನ ಇದುವರೆಗಿನ ಸಾಹಸಗಳ ಕತೆಯನ್ನು ತಾನೇ ಹೇಳುತ್ತಾನೆ. ಹೀಗೆ ಒಡಿಸ್ಸಿಯೂ ವಸ್ತುಮಧ್ಯದಲ್ಲಿ ಸುರುವಾಗಿ ಹಿಂದಕ್ಕೆ ಹೋಗಿ ಮತ್ತೆ ಮುಂದರಿಯುತ್ತದೆ.

ಕನ್ನಡದ ಅನೇಕ ಕಾವ್ಯಗಳಲ್ಲಿ ಈ ತಂತ್ರವನ್ನು ಕಾಣುತ್ತೇವೆ. ರನ್ನನ ಗದಾಯುದ್ಧ ಕಾವ್ಯ ಮಹಾಭಾರತ ಯುದ್ಧದ ಕೊನೆಯ ದಿನವನ್ನು ಚಿತ್ರಿಸುವುದಾದರೂ, ‘ಸಿ೦ಹಾವಲೋಕನ’ ಕ್ರಮದಿಂದ ಕವಿ ಇಡೀ ಕತೆಯನ್ನು ಓದುಗರಿಗೆ ನೆನಪು ಮಾಡುತ್ತಾನೆ. ಇದಕ್ಕಿಂತಲೂ ಸ್ವಾರಸ್ಯಕರವಾಗಿರುವುದು ಜನ್ನನ ಯಶೋಧರ ಚರಿತೆ. ಇದು ಕತೆಯ ಮಧ್ಯದಲ್ಲಿ ಮೊದಲಾಗುತ್ತದೆ ಎನ್ನುವುದಕ್ಕಿಂತಲೂ ಕೊನೆಯಿಂದ ಆರಂಭವಾಗುತ್ತದೆ ಎನ್ನುವುದೇ ಹೆಚ್ಚು ಸೂಕ್ತವಾದೀತು. ಅಯೋಧ್ಯೆಯ ರಾಜ ಮಾರಿದತ್ತ ಕಾಳಿಕಾದೇವಿಗೆ ಬಲಿಕೊಡುವುದಕ್ಕೆಂದು ಅಭಯರುಚಿ ಮತ್ತು ಅಭಯಮತಿ ಎಂಬ ಇಬ್ಬರು ಮಕ್ಕಳನ್ನು ಹಿಡಿದು ತರುವುದು ಕಾವ್ಯದ ಆರಂಭ. ಸಾಯಲು ಪ್ರತಿಭಟಿಸದ ಈ ಮಕ್ಕಳ ಮನೋಧರ್ಮಕ್ಕೆ ಆಶ್ಚರ್ಯಚಕಿತನಾದ ಮಾರಿದತ್ತನಿಗೆ ಅವನ ಕೋರಿಕೆಯ ಮೇಲೆ ಅಭಯರುಚಿ ತಮ್ಮಿಬ್ಬರ ಜನ್ಮಾಂತರದ ಕತೆಯನ್ನು ನಿರೂಪಿಸುವುದೇ ಜನ್ನನು ಬಳಸಿರುವ ನಿರೂಪಣಾತಂತ್ರ. ಯಶೌಘನೆಂಬ ಅರಸನ ಮಗನಾದ ಯಶೋಧರ ಮತ್ತು ಅವನ ತಾಯಿ ಚಂದ್ರಮತಿಯರ ‘ಸಂಕಲ್ಪ ಹಿಂಸೆ’ ಹಾಗೂ ತತ್ಪಲವಾಗಿ ಅವರು ಅನುಭವಿಸಬೇಕಾಗಿ ಬರುವ ಜನ್ಮ ಜನ್ಮಾಂತರಗಳ ಕತೆ ಆರಂಭವಾಗುವುದು ಇಲ್ಲಿಂದಲೇ. ಹೀಗೆ ಇಡೀ ವಿಶ್ವ ಸಾಹಿತ್ಯದಲ್ಲೇ ಬಹುಶಃ ಅನನ್ಯವೆನಿಸುವ ನಾಟಕೀಯ ಆರಂಭವೊಂದನ್ನು ಜನ್ನ ತನ್ನ ಕಾವ್ಯಕ್ಕೆ ನೀಡುತ್ತಾನೆ.

ಇನ್ನು ನಾಟಕಕ್ಕೆ ಬಂದರೆ, ನಾಟಕದ ಜಾಯಮಾನವೇ ‘ವಸ್ತು ಮಧ್ಯ’ ಎನ್ನಬಹುದು. ಆದರೂ ನಾಟಕದಲ್ಲಿ ಕೂಡಾ ಕತೆಗೊಂದು `ಕಾರಣ’ ನೀಡುವ ತಂತ್ರವನ್ನು ಕೆಲವೆಡೆ ಕಾಣುತ್ತೇವೆ. ಶೇಕ್ಸ್‌ಪಿಯರನ ‘ಮಿಡ್‌ಸಮ್ಮರ್ ನೈಟ್ಸ್ ಡ್ರೀಮ್’ನಲ್ಲಿ ಇಂಥ ತಂತ್ರವಿದೆ. ಸಂಸ್ಕೃತದಲ್ಲಿ ಸೂತ್ರಧಾರ ಅಥವಾ ‘ನಟ ನಟಿ’ಯರು ಬಂದು ನಾಟಕದ ವಸ್ತುವನ್ನು ಮುಂದಾಗಿ ಸೂಚಿಸುವ ‘ನಾಂದಿ’ ಸರ್ವೇ ಸಾಮಾನ್ಯವಾದ ಸಂಪ್ರದಾಯ. ಶೇಕ್‌ಸ್ಪಿಯರ್ ಕೂಡಾ ಕೆಲವೆಡೆ ನಾಟಕಾರಂಭದಲ್ಲಿ ನಾಂದಿಯನ್ನು ಬಳಸಿಕೊಳ್ಳುತ್ತಾನಾದರೂ ಇದೇನೂ ಆತನಿಗೆ ಅಷ್ಟು ಪ್ರಿಯವಾದ ಸಂಗತಿಯೆಂದು ತೋರುವುದಿಲ್ಲ. ತಟಕ್ಕನೆ ನಾಟಕ ಸುರುಮಾಡುವುದೇ ಶೇಕ್‌ಸ್ಪಿಯರನ ಶೈಲಿ. ಆಧುನಿಕ ನಾಟಕಗಳ್ಳಂತೂ ನಾವು ವಸ್ತುಮಧ್ಯ ಪ್ರವೇಶಕ್ಕೆ ಎಷ್ಟೊಂದು ಒಗ್ಗಿಹೋಗಿದ್ದೇವೆಂದರೆ ನಮಗಿದು ವಿಶೇಷವೆಂದು ಅನಿಸುವುದೇ ಇಲ್ಲ. ಈ ಕಾರಣಕ್ಕೆ ಗಿರೀಶ ಕಾರ್ನಾಡರ ‘ಹಯವದನ’ದ ಆರಂಭ ಆಕರ್ಷಕವಾಗುತ್ತದೆ: ಕಾರ್ನಾಡರು ಈ ನಾಟಕದಲ್ಲಿ ಜನಪದ ನಾಟಕವಾದ ಯಕ್ಷಗಾನದ ಸಾಂಪ್ರದಾಯಿಕ ಆರಂಭವನ್ನು ಬಳಸಿಕೊಳ್ಳುತ್ತಾರೆ.

ವೃತ್ತಿಪರ ರಂಗಭೂಮಿಯಲ್ಲಿ ಇಂಥ ನಾಂದಿ ಸಂಪ್ರದಾಯ ಸಾಮಾನ್ಯವಾದರೂ, ಆಧುನಿಕ ಕನ್ನಡ ನಾಟಕದಲ್ಲಿ ಸಾಂಪ್ರದಾಯಿಕ ಆರಂಭವೊಂದು ಸೃಜನಾತ್ಮಕವಾಗಿ ಬಳಕೆಯಾದ್ದು ಬಹುಶಃ ಇದೇ ಮೊದಲ ಸಲವಾಗಿರಬಹುದು-ಇದು ಸೃಜನಾತ್ಮಕ ಯಾಕೆಂದರೆ ನಾಟಕ ಎತ್ತುವ ‘ಪೂರ್ಣತೆ’ಯ ಸಮಸ್ಯೆಗೆ ಈ ಆರಂಭ ವಸ್ತುಶಃ ಸಮಂಜಸವಾಗುತ್ತದೆ. ಇದರಿಂದ ಪ್ರೇರಿತವಾಗಿಯೋ ಏನೋ ಬಿ. ವಿ. ಕಾರಂತರು ಹಲವು ನಾಟಕಗಳ ಪ್ರಯೋಗಗಳಲ್ಲಿ ಪಠ್ಯಗಳಲ್ಲಿ ಇಲ್ಲದಿದ್ದರೂ ಇಂಥ ಸಾಂಪ್ರದಾಯಿಕ ಪರಿಕರಗಳನ್ನು ಸೇರಿಸಿಕೊಂಡು ಅವು ‘ಆಧುನಿಕತೆ’ಗೆ ವಿರುದ್ಧವಾಗಬೇಕಾದ್ದಿಲ್ಲ ಬದಲು ಪರವಾಗಬಹುದು ಎನ್ನುವುದನ್ನು ತೋರಿಸಿಕೊಟ್ಟರು. ಆಧುನಿಕ ಮನೋಧರ್ಮದ ಕಾರಂತರು ಸಾಕಷ್ಟು ಕಾಲ ವೃತ್ತಿ ರಂಗಭೂಮಿಯಲ್ಲಿ ಕೆಲಸ ಮಾಡಿದವರು ಎಂಬುದು ಕಾಕತಾಳೀಯವೇನೂ ಆಗಿರಲಾರದು. ಆದರೂ ಮತ್ತೆ ಮತ್ತೆ ಬಳಕೆಯಾದಾಗ ಇಂಥ ತಂತ್ರಗಳು ತಮ್ಮ ಸತ್ವವನ್ನು ಕಳೆದುಕೊಳ್ಳುತ್ತವೆ ಎನ್ನುವುದೂ ಅಷ್ಟೇ ಸತ್ಯ.

ಆಧುನಿಕ ಕಾವ್ಯವೂ ವಸ್ತುಮಧ್ಯದಲ್ಲೇ ಆರಂಭಗೊಳ್ಳುವುದು. ಆದರೆ ಆಧುನಿಕ ಕಾವ್ಯ ಕತೆ ಕಾದಂಬರಿಯ ಹಾಗಲ್ಲ; ಅದಕ್ಕೊಂದು ಕತೆಯಿಲ್ಲ. ಆದ್ದರಿಂದ ಇಲ್ಲಿ ವಸ್ತುಮಧ್ಯೆ ಎಂಬ ಮಾತಿಗೆ ಹೆಚ್ಚಿನ ಅರ್ಥವೇನೂ ಬರುವುದಿಲ್ಲ. ಯಾಕೆಂದರೆ ಕತೆಯಿಲ್ಲದಲ್ಲಿ ಆದಿ ಅಂತ್ಯಗಳ ಪ್ರಶ್ನೆ ಬರದು. ಆದರೆ ಇಲ್ಲೂ ಹಲವು ಪ್ರಯೋಗಗಳು ಸಾಧ್ಯ ಎನ್ನುವುದಕ್ಕೆ ಇಂಗ್ಲಿಷ್ನಲ್ಲಿ ಎಜ್ರಾ ಪೌಂಡ್‌ನ ಪ್ರಾಯೋಗಿಕ ಕಾವ್ಯ Cantos (ಕಾಂಟೋಸ್ `ಕಾಂಡಗಳು’) ಒಂದು ಪ್ರಸಿದ್ಧ ಉದಾಹರಣೆ. ಇದರ ಮೊದಲ ಕಾಂಡ And then went down to the ship ‘ಆಮೇಲೆ ನೌಕೆಗೆ ಇಳಿದು’ ಎಂದು ‘ಆಮೇಲೆ’ ಎಂಬ ಪದದೊಂದಿಗೆ ಕರ್ತ್ರುಪದವಿಲ್ಲದೆ ಆರಂಭವಾಗಿ, So that: ‘ಆದ್ದರಿಂದ’ ಎಂದು ಕೊನೆಗೊಳ್ಳುತ್ತದೆ. ಈ ಕುರಿತಾಗಿ ವಿಮರ್ಶಕ ಹ್ಯೂ ಕೆನ್ನರ್ ಬರೆದ The ಫound Era ‘ಪೌ೦ಡ್ ಯುಗ’ ಎಂಬ ಪುಸ್ತಕದಲ್ಲಿ ‘ಆಮೇಲಿನ ಮೊದಲೇನು?’ ಎಂಬ ಸ್ವಾರಸ್ಯಕರವಾದ ಜಿಕಜ್ಞಾಸೆಯಿದೆ. ಪೌಂಡ್‌ನ ಕಾವ್ಯ ಇಂಥ ಹಲವಾರು ವಿಚಿತ್ರಗಳ ಜೇನುಗೂಡು: ಇದನ್ನು ಸವಿಯಬಹುದು. ಇದರಿಂದ ಕಡಿಸಿಕೊಳ್ಳಬಹುದು, ತಲೆಕೆಡಿಸಿಕೊಳ್ಳಲೂಬಹುದು!

ಆರಂಭಕ್ಕಿಂತಲೂ ಸಮಸ್ಯಾತ್ಮಕವಾದುದು ಅಂತ್ಯ. ಜನಪದ ಕತೆಗಳಲ್ಲಾದರೆ, ಕಂಟಕಗಳೆಲ್ಲ ಮುಗಿದು ನಾಯಕ ಮತ್ತು ನಾಯಕಿ ಒಂದುಗೂಡುವುದರೊಂದಿಗೆ ಹೆಚ್ಚಾಗಿ ಕಥನ ಅಂತ್ಯವಾಗುತ್ತದೆ. ಅಥವಾ ಪ್ರಮುಖ ಪಾತ್ರ ದೇಹ ತೊರೆದು ದೈವವಾಗಿ ನೆಲೆಗೊಳ್ಳಬಹುದು. ಹೋಮರನ ಓಡಿಸ್ಸಿ ಸುಖಾಂತ ಕಾವ್ಯ: ಯೂಲಿಸಿಸ್ ಮತ್ತು ಅವನಿಗೋಸ್ಕರ ಇಪ್ಪತ್ತು ವರ್ಷಗಳಷ್ಟು ದೀರ್ಘ ಕಾಲ ಕಾದು ಕುಳಿತ ಅವನ ನಿಷ್ಠಾವಂತ ಪತ್ನಿ ಪೆನಿಲಪಿ ಕೊನೆಗೂ ಒಂದುಗೂಡುವುದರೊಂದಿಗೆ ಕಾವ್ಯ ಕೊನೆಗೊಳ್ಳುತ್ತದೆ. ಆದರೆ ಈಲಿಯಡ್‌ನ ಕೊನೆ ಹಾಗಿಲ್ಲ.

ಅದು ಟ್ರೋಜನ್ ವೀರ ಹೆಕ್ಟರನ ಶವದಫನದೊಂದಿಗೆ ಕೊನೆಗೊಳ್ಳುವುದು- ಇದರೊಂದಿಗೆ ಟ್ರೋಜನರ ಅವಸಾನವಾಯಿತೆಂದೇ ಲೆಕ್ಕ. ಕತೆ ಕಾವ್ಯಗಳಿಗೆ ಕೊನೆಯೆಂಬುದಿದೆಯೇ ಎ೦ಬ ಪ್ರಶ್ನೆಯೇಳುತ್ತದೆ. ಅವಕ್ಕೆ ನಿಜಕ್ಕೂ ಆದಿ ಅಂತ್ಯಗಳೇ ಇರುವುದಿಲ್ಲ. ಲೇಖಕ ಎಲ್ಲಿ ಕೊನೆಗೊಳಿಸಿದ ನೋ ಅದೇ ಅ೦ತ್ಯ. ಅನಂತಮೂರ್ತಿಯವರ ಪ್ರಸಿದ್ಧ ಕಾದಂಬರಿ ‘ಸಂಸ್ಕಾರ’ ಒಂದು ನೀಳ್ಗತೆಯಾಗಿ ಸುರುವಾದುದು; ಇದನ್ನು ಪ್ರಾಣೇಶಾಚಾರ್ಯರು ಊರು ಬಿಡುವಲ್ಲಿ ಮುಗಿಸಬೇಕೆಂದು ಬಹುಶಃ ಲೇಖಕರು ಬಯಸಿದ್ದರು. ಆದರೆ ಪುಟ್ಟನ ಪ್ರವೇಶದೊಂದಿಗೆ ಆಚಾರ್ಯರ ಇನ್‌ಫರ್ನೋ ‘ನರಕದರ್ಶನ’ ಸುರುವಾಗಿ ನೀಳ್ಗತೆಯೊಂದು ಕಾದಂಬರಿಯಾಗಿ ಬೆಳೆಯುತ್ತದೆ. ಕೊನೆಯಲ್ಲಿ ಆಚಾರ್ಯರು ತಮ್ಮ ‘ಪತನ’ವನ್ನು ಊರವರ ಮುಂದೆ ಹೇಳಬೇಕೆಂದು ನಿರ್ಧರಿಸಿ ದೂರ್ವಾಸಪುರಕ್ಕೆ ಹೊರಟ ಎತ್ತಿನ ಗಾಡಿಯೊಂದನ್ನು ಏರುತ್ತಾರೆ. ಕಾದಂಬರಿ ಇಲ್ಲಿ ಕೊನೆಗೊಂಡಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ: ಯಾಕೆಂದರೆ ಆಮೇಲೇನು. ಎಂಬ ಮುಖ್ಯವಾದ ಪ್ರಶ್ನೆಯಿದೆ. ಆಚಾರ್ಯರಂಥ ಕರ್ಮಠ ಬ್ರಾಹ್ಮಣರೊಬ್ಬರಿಗೆ ‘ಆತ್ಮಜ್ಞಾನ’ ದೊರಕಿದ ಮೇಲೆ ಅವರು ಮುಂದೆ ಹೇಗೆ ಜೀವಿಸುತ್ತಾರೆ ಎನ್ನುವುದು ಓದುಗರನ್ನು ಕಾಡುವ ಸಮಸ್ಯೆ. ಅನಂತಮೂರ್ತಿಯವರ ಮುಂದಿನ ಕಾದಂಬರಿಗಳಾದ ‘ಭಾರತೀಪುರ’ ಮತ್ತು `ಅವಸ್ಥೆ’ `ಸಂಸ್ಕಾರ’ದ ನಂತರದ ಭಾಗಗಳೇ? ಕೆ.ವಿ.ಸುಬ್ಬಣ್ಣನವರು `ಅನಂತಮೂರ್ತಿಯವರ ಕಾದಂಬರಿ’ ತ್ರಿವಳಿ ಲೇಖನವನ್ನು ಗಮನಿಸಿ ಕೆ.ವಿ.ಸುಬ್ಬಣ್ಣ ಆಯ್ದ ಬರಹಗಳು ಕನ್ನಡ ವಿವಿ ಹಂಪಿ’ ಆಧುನಿಕ ಕಥನ ಯಾವತ್ತೂ ಮುಂದೇನು ಎಂಬ ಪ್ರಶ್ನೆಯಲ್ಲೇ ಕೊನೆಗೊಳ್ಳುವುದು; ಅರ್ಥಾತ್ ಅದಕ್ಕೆ ಕೊನೆಯೆಂಬುದೇ ಇಲ್ಲ.

ಆದರೆ ಕಾಲದೇಶಗಳ ಚೌಕಟ್ಟಿಲ್ಲದೆ ಯಾವುದಕ್ಕೂ ಅರ್ಥವೂ ಇಲ್ಲ. ಬಹುಶಃ ಇದನ್ನು ತಿಳಿದೇ ನಪದ ಸಾಹಿತ್ಯ ಇಂಥ ಆದಿ ಅ೦ತ್ಯಗಳನ್ನು ಕತೆಗಳಿಗೆ ನೀಡಿರಬಹುದು. ಆದರೆ ಆಧುನಿಕ ಪ್ರಜ್ಞೆ ಈ ತರದ ಆದಿ ಅಂತ್ಯಗಳನ್ನು ಇಂದಿನ ಕಾಲಕ್ಕೆ ಸ್ವೀಕರಿಸಲು ತಯಾರಿಲ್ಲ. ಯಾಕೆಂದರೆ ಇಲ್ಲಿ ಎಲ್ಲವೂ ಒಂದರ ಜತೆ ಒಂದು ತಳುಕುಹಾಕಿಕೊಂಡಿರುತ್ತವೆ. ಮೇರಿ ಕ್ವೀನ್ ಆಫ್ ಸ್ಕಾಟ್ಸ್ ವಧಾಸ್ಥಾನದಲ್ಲಿ ಹೇಳಿದಂತೆ, `ನನ್ನ ಅಂತ್ಯದಲ್ಲಿ ನನ್ನ ಆರಂಭ.’ ಅನಾದಿಯಾದ ಆದಿಯಾಗಲಿ, ಅನಂತವಾದ ಅಂತರವಾಗಲಿ ನಮ್ಮನ್ನು ಅತಿಭೌತಿಕತೆಯತ್ತ ಒಯ್ಯುತ್ತವೆ. ಅವೂ ಕೂಡಾ ಮನುಷ್ಯ ಜೀವನವನ್ನು ನಿರರ್ಥಕವಾಗಿ ಮಾಡುವಂಥವು. ಆದ್ದರಿಂದ ಆಧುನಿಕ ಸಾಹಿತ್ಯ ಇತಿಹಾಸದಂತೆ `ವ್ಯಕ್ತಮಧ್ಯ’ದಲ್ಲೇ ತನ್ನ ಅರ್ಥವನ್ನು ಕಂಡುಕೊಳ್ಳುವುದಕ್ಕೆ ಬಾಧ್ಯವಾಗಿರುವುದು. ಇಲ್ಲಿ ವ್ಯಕ್ತಮಧ್ಯಕ್ಕೂ ವಸ್ತುಮಧ್ಯಕ್ಕೂ ವ್ಯತ್ಯಾಸವಿಲ್ಲ ಎನ್ನುವುದನ್ನು ತಿಳಿದುಕೊಳ್ಳಬೇಕು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯೆಂಡದ್ ತೊಂದ್ರೆ
Next post ಸಮಾಜದೈವತ

ಸಣ್ಣ ಕತೆ

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…