ಮಹಿಳಾ ಸಾಹಿತ್ಯದ ತಾತ್ವಿಕ ಆಯಾಮಗಳು

ಮಹಿಳಾ ಸಾಹಿತ್ಯದ ತಾತ್ವಿಕ ಆಯಾಮಗಳು

ಸಾಹಿತ್ಯವೆಂದ ಮೇಲೆ ಸಾಹಿತ್ಯ. ಅದರಲ್ಲಿ ಮಹಿಳಾ ಸಾಹಿತ್ಯವೇನು, ಪುರುಷ ಸಾಹಿತ್ಯವೇನು? ಎಂಬ ಮಾತನ್ನು ಎಷ್ಟೋ ಜನ ಆಡಿದರೂ ಅದು ನಾಲಗೆ ತುದಿಯ ಮಾತಾಗಿಯೇ ಉಳಿದಿರುವುದಕ್ಕೆ, ಪ್ರತ್ಯೇಕ ಮಹಿಳಾಗೋಷ್ಠಿಗಳನ್ನು ನಡೆಸುವುದೂ ಮಹಿಳಾ ಸಾಹಿತ್ಯವನ್ನು ಅಡಿಗೆಮನೆ ಸಾಹಿತ್ಯ ಎಂದು ಪರಿಗಣಿಸಿ ಗಂಭೀರ ವಿಮರ್ಶೆಯಿಂದ ಹೊರಗಿಟ್ಟಿರುವುದೂ ಒಂದು ಉದಾಹರಣೆಯಷ್ಟೆ. ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಚರಿತ್ರೆಯ ಹಾದಿಯಲ್ಲೇ ಹೆಜ್ಜೆ ಹಾಕಿ ಅಕ್ಕಮಹಾದೇವಿಯಿಂದ ಹಿಡಿದು ಇಂದಿನವರೆಗೆ ಮಹಿಳಾ ಸಾಹಿತ್ಯವನ್ನು ಅದರ ತಾತ್ವಿಕ ಆಯಾಮಗಳೊಂದಿಗೆ ಗುರುತಿಸುವ ಈ ಪ್ರಯತ್ನವು ಕೇವಲ ಒಂದು ಪಕ್ಷಿನೋಟ ಎಂದು ನಾನು ಭಾವಿಸುವೆ.

ಒಂದು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಸಾಹಿತ್ಯದ ಮೊಟ್ಟಮೊದಲ ಹೆಣ್ಣು ಧ್ವನಿಯೇ ತುಂಬಾ ರೋಚಕವಾಗಿದೆ. ವಚನ ಚಳವಳಿಯ ಹಲವು ಆಯಾಮಗಳಲ್ಲಿ ಕೆಳವರ್ಗದವರಿಗೆ ಮತ್ತು ಹೆಣ್ಣುಮಕ್ಕಳಿಗೆ ಅಭಿವ್ಯಕ್ತಿಗೆ ಅವಕಾಶ ಕಲ್ಪಿಸಿಕೊಡುವುದೂ ಒಂದು ಆಯಾಮವಾಗಿತ್ತು. ಬಸವಣ್ಣನವರು ಪ್ರಾರಂಭಿಸಿದ ಚಳವಳಿ ಧಾರ್ಮಿಕ ರಾಜಕೀಯ ಮತ್ತು ಸಾಮಾಜಿಕ ಬದಲಾವಣೆಗಳನ್ನು ಗುರಿಯಾಗಿಟ್ಟುಕೊಂಡಿದ್ದರೂ ತಮ್ಮ ಅನಿಸಿಕೆಯನ್ನು ಹೊರಗೆಡವಲು ಅವರು ಆರಿಸಿಕೊಂಡ ಸರಳವಾದ ಕನ್ನಡ ಭಾಷೆ ಮತ್ತು ಸ್ವಚ್ಛಂದ ಛಂದಸ್ಸು, ಜೊತೆಗೇ ಸ್ತ್ರೀಯರಿಗೆ ಅನುಭವ ಮಂಟಪದ ಚರ್ಚೆಗಳಲ್ಲಿ ಭಾಗವಹಿಸಲು ನೀಡಿದ ಮುಕ್ತ ಅವಕಾಶ, ಇದರ ಪರಿಣಾಮವಾಗಿ ನೂರಾರು ಶಿವಶರಣೆಯರು ಅಕ್ಕನೂ ಸೇರಿದಂತೆ ವಚನಗಳನ್ನು ರಚಿಸಿದ್ದು ಇಡೀ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿಯೇ ದಾಖಲಾಗಬೇಕಾದ ಪ್ರಮುಖ ಘಟ್ಟವಾಯಿತು. ‘ಮೊಲೆ ಮೂಡಿ ಬಂದರೆ ಹೆಣ್ಣೆಂಬರು, ಗಡ್ಡ ಮೀಸೆ ಬಂದರೆ ಗಂಡೆಂಬರು ನಡುವೆ ಸುಳಿವಾತ್ಮನು ‘ಗಂಡೂ ಅಲ್ಲ, ಹೆಣ್ಣೂ ಅಲ್ಲ’ ಎಂಬ ದೇವರದಾಸಿಮಯ್ಯನ ಮಾತು ಮತ್ತು ಕೇಶಾಂಬರೆಯಾಗಿ ಅಕ್ಕ ಕೌಶಿಕನ ಅರಮನೆಯನ್ನು ತ್ಯಜಿಸಿ ಹೊರಟ ಪರಿ – ಇವು ಲಿಂಗಭೇದ ವ್ಯವಸ್ಥೆಯನ್ನೇ ವಿರೋಧಿಸಿತು. ಸಮಾಜವು ಒಂದು ಹೆಣ್ಣಿಗೆ ವಿಧಿಸಬಹುದಾದ ಎಲ್ಲಾ ನಿರ್ಬಂಧಗಳನ್ನು ಮೀರಿದ ಅಕ್ಕನ ನಿಲುವು ಇಂದಿಗೂ ಮಾದರಿ. ಯಾರೂ ಎಟುಕಲಾರದ ಮಾದರಿ. ಅವಳು ತನ್ನ ವಚನಗಳ ಮೂಲಕ ತನ್ನ ಮತ್ತು ಚೆನ್ನಮಲ್ಲಿಕಾರ್ಜುನನ ನಡುವಿನ ಸಂಬಂಧವನ್ನು ಬಿಚ್ಚಿಟ್ಟ ಪರಿ ಅದೂ ಒಂದು ಮಾದರಿ, ಅನಂತರದ ಮೀರಾಬಾಯಿ, ಅಂಡಾಳ, ಸಕ್ಕೂಬಾಯಿ, ಬೀಬಿ ನಾಚಿಯಾರ್ ಮೊದಲಾದವರಿಗೆ ಒಂದು ಮಾದರಿ, ಇವಳೊಂದಿಗೆ ಸುಮಾರು ಮೂವತ್ತು ಮಂದಿ ಶರಣೆಯರು ರಚಿಸಿರುವ ಸುಮಾರು ಎರಡು ಸಾವಿರದಷ್ಟು, ವಚನಗಳು ದೊರೆತಿವೆ. ಮೇಲುನೋಟಕ್ಕೆ ಇವು ಅಂತಹ ಉತ್ತಮ ಮಟ್ಟದ ಅಭಿವ್ಯಕ್ತಿ ಸಾಮರ್ಥ್ಯವನ್ನು ಹೊಂದಿಲ್ಲವೆಂಬಂತೆ ತೋರಿದರೂ ಮುಕ್ತಾಯಕ್ಕ, ನೀಲಮ್ಮ, ಗೊಗ್ಗವ್ವೆ – ಇವರು ಸಾಕಷ್ಟು ದಿಟ್ಟರಾಗಿಯೇ ಮುಕ್ತ ಅಭಿಪ್ರಾಯ ನೀಡಿದ್ದಾರೆ. ಆದರೆ ವಚನ ಸಾಹಿತ್ಯವು ಸೃಷ್ಟಿಸಿದ ಈ ಬೆರಗುಗೊಳಿಸುವ ವೈಚಾರಿಕತೆ ಇಲ್ಲಿಗೇ ನಿಂತಂತೆ ತೋರುತ್ತದೆ. ಕಲ್ಯಾಣದ ರಕ್ತ ಕ್ರಾಂತಿಯಲ್ಲಿ ರಚಿತವಾದ ವಚನಗಳನ್ನು ಉಳಿಸಿಕೊಳ್ಳುವುದೇ ಒಂದು ಸಾಹಸವಾಗಿ ಅನಂತರದಲ್ಲಿ ಸುಮಾರು ಐನೂರು ವರ್ಷಗಳ ಕಾಲ ವೀರಶೈವ ಧರ್ಮಕ್ಕೂ ಮಹಿಳಾ ಸಾಹಿತ್ಯಕ್ಕೂ ಗ್ರಹಣದ ಕಾಲವಾಗಿತ್ತು.

ಮತ್ತೆ ನಾವು ಹೆಣ್ಣಿನ ಧ್ವನಿ ಕೇಳಬೇಕಾದರೆ ಹದಿನೇಳನೇ ಶತಮಾನಕ್ಕೆ ಬರಬೇಕು. ಸಾಹಿತ್ಯ, ಸಂಗೀತ, ವಿದ್ವತ್ ಸೇವೆಗಳಿಗೆ ಸಮಾನ ಪ್ರಾಶಸ್ತ್ಯ ನೀಡಿದ ಮೈಸೂರು ಒಡೆಯರ ಕಾಲದಲ್ಲಿ ಅನೇಕ ಆಸ್ಥಾನ ಕವಿಗಳ, ಕವಯತ್ರಿಯರ ಗುಂಪೇ ಕಾಣಿಸಿಕೊಳ್ಳುತ್ತದೆ. ಆದರೆ ಮೈಸೂರು ಒಡೆಯರ ಸಾಂಪ್ರದಾಯಿಕ ಮನೋಭಾವದಡಿಯಲ್ಲಿ ತಾವೂ ರಚಿಸಿದ ಹೊನ್ನಮ್ಮನಾಗಲೀ, ಶೃಂಗಾರಮ್ಮನಾಗಲೀ, ಗಿರಿಯಮ್ಮನಾಗಲೀ, ಅಕ್ಕಮಹಾದೇವಿಯಂತ ಕ್ರಾಂತಿಕಾರಕವಾದುದೇನನ್ನೂ ಹೇಳುವ ಸ್ಥಿತಿಯಲ್ಲಿರಲಿಲ್ಲ. ಪುರುಷಪ್ರಧಾನ ಸಮಾಜದ ಮೌಲ್ಯಗಳನ್ನ ಒಪ್ಪಿ ಮುನ್ನಡೆಯುವ ಅನಿವಾರ್ಯತೆ ಅವರಿಗಿತ್ತು. ಅದನ್ನೇ ಅವರು ತಮ್ಮ ಕಾವ್ಯಗಳಲ್ಲಿ ಪ್ರತಿಬಿಂಬಿಸಬೇಕಾಯಿತು. ‘ಪೆಣ್ಣಲ್ಲವೇ ನಮ್ಮನ್ನೆಲ್ಲ ಪಡೆದ ತಾಯಿ, ಪೆಣ್ಣಲ್ಲವೇ ಪೊರೆದವಳು ಪೆಣ್ಣು ಪೆಣ್ಣೆಂದೇತಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು’ ಎಂದು ‘ಹದಿಬದೆಯ ಧರ್ಮ’ದ ಒಂದು ಪ್ರಾತಿನಿಧಿಕ ಪದ್ಯವನ್ನಿಟ್ಟುಕೊಂಡು ಉಳಿದಂತೆ ಅವಳು ಹೆಣ್ಣು ಮಕ್ಕಳಿಗೆ ವಿಧಿಸುವ ನಿರ್ಬಂಧವನ್ನು ಅಲಕ್ಷ್ಯ ಮಾಡುವುದು ಸರಿಯಲ್ಲ. ವಾಲ್ಮೀಕಿ ಪ್ರತಿಪಾದಿಸುವ ‘ರಾಮಾಯಣ’ ಕತೆಯ ಪಿತೃಪ್ರಧಾನ ಕುಟುಂಬ ವ್ಯವಸ್ಥೆಯ ಮೌಲ್ಯಗಳಿಗೆ ವಿರುದ್ಧವಾದ ಮಧುಗಿರಿಯ ‘ಚಿತ್ರಪಟ ರಾಮಾಯಣ’ದ ಕತೆಯನ್ನೇ ಹೋಲುವ ‘ಲವಕುಶರ ಕಾಳಗ’ವನ್ನು ಹೆಳವನಕಟ್ಟೆ ಗಿರಿಯಮ್ಮ ರಚಿಸಿರುವುದು ಆಶ್ಚರ್ಯದ ಸಂಗತಿಯಾದರೂ ಹಾಗೆ ತಾನು ಹೊಸದಾದ ಯಾವುದನ್ನೂ ಹೇಳುತ್ತಿರುವೆ ಎಂಬ ಪ್ರಜ್ಞಾಪೂರ್ವಕ ಅರಿವಿನಿಂದೇನೂ ಅವಳು ಬರೆಯುವುದಿಲ್ಲ. ಹೀಗಾಗಿ ಆಧುನಿಕ ಕನ್ನಡ ಸಾಹಿತ್ಯಕ್ಕೆ ಬರುವವರೆಗೆ ಹನ್ನೆರಡನೇ ಶತಮಾನವು ಕಂಡ ಮಿಂಚನ್ನು ಮಹಿಳಾ ಸಾಹಿತ್ಯದ ದೃಷ್ಟಿಯಿಂದ ನಾವು ಮತ್ತೆ ಕಾಣುವುದು ಸಾಧ್ಯವಿಲ್ಲವೆಂದೇ ತೋರುತ್ತದೆ. ಹದಿನೇಳನೇ ಶತಮಾನದಿಂದ ಹತ್ತೊಂಬತ್ತನೇ ಶತಮಾನಕ್ಕೆ ಬಂದರೆ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯ ಮಹಿಳಾ ಯುಗವನ್ನು ನಾವು ಪ್ರವೇಶಿಸುತ್ತೇವೆ.

ಪ್ರಾಚೀನ ಸಾಹಿತ್ಯದಲ್ಲಿ ಇಷ್ಟೊಂದು ವಿರಳವಾದ, ಬೆರಳೆಣಿಕೆಯಂತಿರುವ, ಈ ಲೇಖಕಿಯರ ಸಂಖ್ಯೆ ಆಧುನಿಕ ಕಾಲದಲ್ಲಿ ಅಪರಿಮಿತ ವೇಗದಲ್ಲಿ ವೃದ್ಧಿಯಾಗಲು ಮೊದಲ ಕಾರಣ, ಬ್ರಿಟಿಷ್ ಸರ್ಕಾರದ ನೆರವಿನಿಂದ ಭಾರತದಲ್ಲಿ ಜಾರಿಗೆ ಬಂದ ಮಹಿಳಾ ವಿದ್ಯಾಭ್ಯಾಸ. ಅದರೊಂದಿಗೆ ಬ್ರಹ್ಮ ಸಮಾಜ, ಆರ್ಯಸಮಾಜಗಳ ಮೂಲಕ ರಾಜಾರಾಂ ಮೋಹನ್‌ರಾಯ್, ದಯಾನಂದ ಸರಸ್ವತಿಯವರು ಸತಿ ಪದ್ಧತಿ ಮತ್ತು ಬಾಲ್ಯವಿವಾಹದಂತಹ ಅನಿಷ್ಟಗಳ ವಿರುದ್ಧ ಮಾಡಿದ ಹೋರಾಟ. ಇದೇ ಸಂದರ್ಭಕ್ಕೆ ಚಿಗುರೊಡೆದು ಭಾರತದಾದ್ಯಂತ ಹಬ್ಬಿದ, ಅಹಿಂಸಾತ್ಮಕ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮಹಾತ್ಮಗಾಂಧಿ ಕೊಟ್ಟ ಕರೆ ಮತ್ತು ಮಹಿಳೆಯರು ಅದರಲ್ಲಿ ಭಾಗವಹಿಸಲು ದೊರತ ಮುಕ್ತ ಅವಕಾಶ – ಈ ಮೂರು ಅಂಶಗಳೂ ಬಂಗಾಳೀ ಲೇಖಕರ ಸಾಮಾಜಿಕ ಕಾದಂಬರಿಗಳ ರಚನೆಗೆ ಪ್ರೇರಣೆ ನೀಡಿದವು. ರವೀಂದ್ರನಾಥ ಠಾಗೋರ್, ಬಂಕಿಮಚಂದ್ರ ಚಟರ್ಜಿ, ಶರಶ್ಚಂದ್ರ ಚಟರ್ಜಿ ಮೊದಲಾದವರು ಇಂತಹ ವಸ್ತುಗಳನ್ನಿಟ್ಟುಕೊಂಡು ರಚಿಸಿದ ಕಾದಂಬರಿಗಳು ಕನ್ನಡಕ್ಕೂ ಅನುವಾದವಾಗಿ ಇಲ್ಲೊಂದು ಹೊಸಗಾಳಿ ಬೀಸಿತು. ಮಹಿಳಾ ಸಾಹಿತ್ಯ ಚರಿತ್ರೆಯ ಮೇಲೆ ಬೀಸಿದ ಈ ಹೊಸಗಾಳಿಯ ಪ್ರಭಾವವು ಪ್ರಾರಂಭವಾದ ಸುಮಾರು ಒಂದು ನೂರು ವರುಷಗಳಲ್ಲಿ ಎಷ್ಟೆಲ್ಲಾ ಬದಲಾವಣೆಯಾಗಿದೆಯೆಂದರೆ ಅದರ ವ್ಯಾಪ್ತಿಯನ್ನು ಗಮನಿಸಿಯಾದರೂ ಅಧ್ಯಯನದ ದೃಷ್ಟಿಯಿಂದ ಅದನ್ನು ಸ್ಥೂಲವಾಗಿ ಮೂರು ವಿಭಾಗ ಮಾಡಬೇಕಾಗುತ್ತದೆ. ಹಾಗೆ ಮಾಡುವ ಮೂಲಕ ಮೊದಲ ತಲೆಮಾರಿನ ಲೇಖಕಿಯರ ಕೊಡುಗೆಯನ್ನು, ಅದರ ಐತಿಹಾಸಿಕ ಮಹತ್ವವನ್ನು ಗುರುತಿಸಿದರೆ, ಎರಡನೇ ಮತ್ತು ಮೂರನೇ ತಲೆಮಾರಿನ ಲೇಖಕಿಯರ ಅಂದರೆ ಈಗ ಬರೆಯುತ್ತಿರುವ ಲೇಖಕಿಯರ ಕೊಡುಗೆ ಸೇರಿಸಿ ತೌಲನಿಕ ಅಧ್ಯಯನಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ.

ಆಧುನಿಕ ಕನ್ನಡ ಸಾಹಿತ್ಯದ ಮೊದಲ ಲೇಖಕಿ ನಂಜನಗೂಡು ತಿರುಮಲಾಂಬಾ ಲೇಖಕಿ, ಪತ್ರಕರ್ತೆ, ಸಮಾಜಸುಧಾರಕಿ ಮತ್ತು ಉದ್ಯಮಿ, ‘ಸತೀ ಹಿತೈಷಿಣಿ’ ಎಂಬ ಗ್ರಂಥಮಾಲೆಯಲ್ಲಿ ‘ಕರ್ನಾಟಕ ನಂದಿನಿ’ ಮತ್ತು ‘ಸನ್ಮಾರ್ಗ ದರ್ಶಿನಿ’ ಎಂಬ ಪತ್ರಿಕೆಗಳನ್ನು ನಡೆಸಿಕೊಂಡು ಬಂದರು. ಹನ್ನೆರಡು ಕಾದಂಬರಿ, ನಾಲ್ಕು ನಾಟಕ, ಮೂರು ಕವಿತಾ ಸಂಕಲನಗಳನ್ನು ಪ್ರಕಟಿಸಿದರು. ವರದಕ್ಷಿಣೆ, ವಧೂದಹನ, ಬಾಲ್ಯವಿವಾಹ, ವಿಧವಾ ಸಮಸ್ಯೆ ಇವು ಅವರ ಮುಖ್ಯ ಕಾಳಜಿಗಳು, ಚರ್ವಿತಚರ್ವಣ ಎಂಬಂತೆ ತೋರುವ ಅವರ ಬರವಣಿಗೆಯಲ್ಲಾ ಅಂದಿನ ಕಾಲದ ಮಧ್ಯಮದ ವರ್ಗದ ಸಂಸಾರದ ಚಿತ್ರಣ, ಸಂಪ್ರದಾಯ ಕ್ರಾಂತಿ ಎರಡೂ ಒಟ್ಟೊಟ್ಟಿಗೇ ಸ್ಫೋಟಗೊಳ್ಳುವುದು ಅವರ ಬರವಣಿಗೆಯ ವಿಶೇಷ. ಸ್ತ್ರೀಯರಿಗೆ ಕಾಡುಹರಟೆ ಸಲ್ಲ, ಶಿಕ್ಷಣ ಬೇಕು ಎಂದು ಹೇಳುವ ಅವರು ಪತಿಯೇ ಪರದೈವ ಎಂದೂ ಹೇಳುತ್ತಾರೆ. ಹೆಣ್ಣಿಗೆ ಮರುಮದುವೆ ಬೇಕೆಂದು ವಾದಿಸುವಂತೆ ತೋರಿದರೂ ಕೊನೆಗೆ ಬೇಡ ಎಂದುಬಿಡುತ್ತಾರೆ. ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಪುಟಗಳ ಇವರ ಸಾಹಿತ್ಯದ ಮೇಲೆ ಅಂದಿನ ಬಂಗಾಳಿ ಕಾದಂಬರಿಗಳ ಪ್ರಭಾವ ಆಗಿರುವುದನ್ನು ಗುರುತಿಸಬಹುದು. ಮಹಿಳೆಯೇ ಇವರ ಮುಖ್ಯ ಕಾಳಜಿಯಾಗಿದ್ದು ಅಂದಿನ ಸಂಪ್ರದಾಯದ ಭಾರದಡಿ ನರಳುತ್ತಾ ಹೊಸಗಾಳಿಗೆ ತುಡಿಯುವ ಕಾತರವನ್ನು ಅವರ ಕಾದಂಬರಿಯ ಪಾತ್ರಗಳು ತೋರುತ್ತವೆ.

ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದ ಹೆಚ್.ವಿ. ನಂಜುಂಡಯ್ಯನವರ ಮೊಮ್ಮಗಳಾದ ಹೆಚ್.ವಿ. ಸಾವಿತ್ರಮ್ಮನವರು ತಮ್ಮ ‘ರಾಮಸೀತೆ ರಾವಣ’ ಕಾದಂಬರಿಯ ಹೊಸ ಒಳನೋಟದಿಂದ ಹೆಸರಾದವರು, ಇದು ಸಾಕಷ್ಟು ಪ್ರಮಾಣದಲ್ಲಿ ಸಹೃದಯರ ಮತ್ತು ವಿಮರ್ಶಕರ ಗಮನಸೆಳೆದ ಕೃತಿ, ವಾಲ್ಮೀಕಿ ಕಥೆಯ ಚೌಕಟ್ಟಿನಲ್ಲಿಯೇ ದಶರಥನು ಕೈಕೇಯಿಯನ್ನು ಮದುವೆಯಾದಾಗ ಕೌಸಲ್ಯೆಗಾದ ಬೇಸರ, ರಾವಣನನ್ನು ಕಂಡು ಆಕರ್ಷಿತಳಾದ ಸೀತೆಯ ಕಾತರ, ಇಂತಹ ಹೊಸ ವಿಷಯಗಳಿಂದ ಕೂಡಿದ್ದಲ್ಲದೇ ವಾಲ್ಮೀಕಿಯ ಶಿಷ್ಟಶೈಲಿಯಲ್ಲಿ ಪುರುಷ ಪಾತ್ರಗಳ ಮನೋಜ್ಞ ಭೂಮಿಕೆಗೆ ಮಾತ್ರ ಪ್ರಧಾನ ಪಾತ್ರವಿದ್ದು ಸ್ತ್ರೀಯ ಮನಸ್ಸಿನ ಭಾವನೆಗಳಿಗೆ ಮಾತು ಕೊಡಲಾಗದೇ ಸೋತು ಹೋಗಲಾಗಿದ್ದ ಹಿನ್ನೆಲೆಯಲ್ಲಿ ಕೌಸಲ್ಯೆ, ಸುಮಿತ್ರೆ, ಕೈಕೇಯಿ, ಊರ್ಮಿಳೆ, ಸೀತೆ, ಮಂಡೋದರಿ ಬಾಯಿಬಿಟ್ಟು, ಮಾತನಾಡಿದ್ದೇ ಇಲ್ಲಿಯ ವಿಶೇಷ. ಇದೇ ಉಸುರಿನಲ್ಲಿ ಪ್ರಸ್ತಾಪಿಸಬೇಕಾದ ಅವರ ಇನ್ನೊಂದು ಕಾದಂಬರಿ ‘ವಿಮುಕ್ತೆ’. ಈ ಎರಡೂ ಕಾದಂಬರಿಗಳಲ್ಲಿ ರಾಮಾಯಣ ಮತ್ತು ಉತ್ತರಕಾಂಡದ ಕತೆಗಳ ಮೂಲಕ ರಾಮಾಯಣಕ್ಕೆ ಹೊಸ ಭಾಷ್ಯ ಬರೆದರು. ತಮ್ಮ ಒಂದು ಪ್ರಬಂಧದಲ್ಲಿ ಮದುವೆಯಾಗದೇ ಹಣ್ಣೊಬ್ಬಳು ತಾಯಿಯಾದಾಗ ಮತ್ತು ಮಗುವನ್ನು ಸಾಕಿ ಬೆಳೆಸಿದಾಗ ಮಾತ್ರ ಪುರುಷಪ್ರಧಾನ ಸಮಾಜದ ಬೇರುಗಳನ್ನು ಸಡಿಲಗೊಳಿಸಲು ಸಾಧ್ಯ ಎಂಬಂತಹ ಮಾತುಗಳನ್ನು ‘ಸ್ತ್ರೀವಾದ’ ಎಂಬ ಪದವನ್ನೇ ಕನ್ನಡ ಸಾಹಿತ್ಯದಲ್ಲಿ ಕೇಳರಿಯದಿದ್ದ ಕಾಲದಲ್ಲಿ ಹೇಳಿ ಎಲ್ಲರನ್ನೂ ಬೆಚ್ಚಿ ಬೀಳಿಸಿದ್ದರು.

ಕನ್ನಡದಲ್ಲಿ ಮೊದಲ ಐತಿಹಾಸಿಕ ಕಾದಂಬರಿ ಬರೆದ ಲೇಖಕಿ ಎಂಬ ಅಗ್ಗಳಿಕೆಗೆ ಪಾತ್ರರಾದ ಸಿ.ಎನ್. ಜಯಲಕ್ಷ್ಮಿದೇವಿಯವರದು ಆ ಕಾಲಕ್ಕೆ ವಿಶಿಷ್ಟವಾದ ಸಾಧನೆ. ಅವರ ‘ಮಹಿಳಾ ಸ್ವಾತಂತ್ರ್ಯ ಪರಿಕಲ್ಪನೆ’ ಎಂಬ ಲೇಖನವು ಸ್ವಾತಂತ್ರ್ಯದ ಬಗೆಗಿನ ಅವರ ಧೋರಣೆಗಳನ್ನು ಬಿಂಬಿಸಿದರೆ ‘ಸುಮ’ ಅತ್ಯಾಚಾರಕ್ಕೊಳಗಾದರೂ ಆತ್ಮವಿಶ್ವಾಸದಿಂದ ಸಮಾಜವನ್ನೆದುರಿಸಿ ಹೆಣ್ಣುಮಕ್ಕಳಿಗೆ ಮಾದರಿಯಾಗುವ ಕತೆ. ಅಂದಿನ ಕಾಲಕ್ಕೆ ಅವರ ಸಮಕಾಲೀನರಂತೆ ಅವರದೂ ಪ್ರಗತಿ ಪರತೆಯೇ.

‘ಭಾರತಿ’ ಎಂಬ ಕಾವ್ಯನಾಮದಿಂದ ನವೋದಯದ ಕಾಲದಲ್ಲೇ ತಮ್ಮ ಕಾವ್ಯ ಕೃಷಿ ಪ್ರಾರಂಭಿಸಿದ ತಿರುಮಲೆ ರಾಜಮ್ಮ ಅವರು ತೀ.ತಾ. ಶರ್ಮರ ಹೆಂಡತಿ. ಶಿವಮೊಗ್ಗೆಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯೂ ಆಗಿದ್ದ ರಾಜಮ್ಮ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಸಂಗೀತದಲ್ಲೂ ಪರಿಣತಿಯಿದ್ದು ಗಾಂಧೀಜಿಯವರನ್ನು ಮೆಚ್ಚಿಸಿ ‘ವೀಣಾ ಭಾರತಿ’ ಎಂದೂ ಹೆಸರು ಪಡೆದಿದ್ದರಂತೆ. ತಮ್ಮ ನಾಟಕಗಳಲ್ಲಿ ೧೯೭೦ರಷ್ಟು ಹಿಂದೆಯೇ ಸರಳ ರಗಳೆಯನ್ನು ತಂದಿದ್ದ ಪ್ರಯೋಗ ಶೀಲೆ.

‘ಮಕ್ಕಳ ಕೂಟ’ವನ್ನು ಸ್ಥಾಪಿಸಿದ ಆರ್. ಕಲ್ಯಾಣಮ್ಮ ‘ಸರಸ್ವತಿ’ ಎಂಬ ಪತ್ರಿಕೆಯನ್ನು ನಾಲ್ಕು ದಶಕಗಳ ಕಾಲ ನಡೆಸಿದವರು. ಬೆಂಗಳೂರಿನ ಸಾರ್ವಜನಿಕ ಜೀವನದ ಬಹು ಮುಖ್ಯ ಕಾರ್ಯಕ್ಷೇತ್ರಗಳಲ್ಲಿ ದುಡಿದವರು. ಕನ್ನಡ ಸಾಹಿತ್ಯ ಪರಿಷತ್ತಿಗಾಗಿ ಹತ್ತು ವರ್ಷ ದುಡಿದವರು. ತಿರುಮಲಾಂಬಾ ವಿಧವೆಗೆ ಮರುಮದುವೆ ಬೇಡ ಎಂದು ಹೇಳಿದ್ದ ಹಿನ್ನಲೆಯಲ್ಲಿ ಇವರು ತಮ್ಮ ‘ನಿರ್ಭಾಗ್ಯ ವನಿತೆ’ ಎಂಬ ಕತೆಯ ಇಂದಿರೆಗೆ ಅವಳ ಪ್ರಿಯಕರ ಸುಂದರೇಶನೊಂದಿಗೆ ಮದುವೆ ಮಾಡಿಸಿಯೇಬಿಡುತ್ತಾರೆ. ಅಂದು ವಿಧವಾ ವಿವಾಹಕ್ಕೆ ಪ್ರೋತ್ಸಾಹ ನೀಡಿದ್ದ ವ್ಯಕ್ತಿಗಳು ಮತ್ತು ಸಂಸ್ಥೆಗಳ ಅರಿವು ಕಲ್ಯಾಣಮ್ಮನವರಿಗೆ ಚೆನ್ನಾಗಿಯೇ ಇದ್ದು, ಅವರ ಹೆಸರುಗಳನ್ನು ಪ್ರಸ್ತಾಪಿಸಿ ಕಥಾನಾಯಕನೊಂದಿಗೆ ಅವರ ಚರ್ಚೆಯನ್ನೇರ್ಪಡಿಸಿದ್ದಾರೆ.

ಹೆಚ್. ಶ್ಯಾಮಲಾದೇವಿಯವರು ಸಾರ್ವಜನಿಕ ಕಾರ್ಯಕ್ಷೇತ್ರದಲ್ಲೂ ದುಡಿದು ‘ಜಯ ಕರ್ನಾಟಕ’ ಪತ್ರಿಕೆಯ ಮಹಿಳಾ ವಿಭಾಗದ ಸಂಪಾದಕಿಯಾಗಿ ಆ ಪತ್ರಿಕೆಗೆ ಹೊಸ ಆಯಾಮ ತಂದುಕೊಟ್ಟವರು. ‘ಸಾಹಿತ್ಯದಲ್ಲಿ ನಾರಿಯ ಸ್ಥಾನ’ ಎಂಬ ಪ್ರಬಂಧದಲ್ಲಿ ‘ಸ್ತ್ರೀಯು ತನ್ನ ದೃಷ್ಟಿಯಿಂದ ನೋಡಿ ಅದರ ಬಗ್ಗೆ ಅವಳು ಅಭಿಪ್ರಾಯಪಡುವುದೇನು, ಅವಳ ಆಸೆ-ಆಕಾಂಕ್ಷೆಗಳು ಯಾವ ರೀತಿಯಾಗಿವೆ, ಸಮಾಜ ಸುಧಾರಣೆಯ ವಿಷಯದಲ್ಲಿ ಅವಳ ಅಭಿಪ್ರಾಯ ಎಂಥವು ಎಂದು ತಿಳಿಯದೆ ಮಾಡಿದ ಸಮಾಜ ನಿರ್ಮಾಣ ಕಾರ್ಯ ಪೂರ್ಣ ವಾಗದು’ ಎಂದು ಹೇಳಿ ಸಾಹಿತ್ಯ ಕಲೆಗಳು ಸ್ತ್ರೀಯರ ನೈಸರ್ಗಿಕ ಅಂಶ ಎಂದು ನಂಬಿದವರು. ಹೆಣ್ಣಿನ ಸಮಸ್ಯೆಯನ್ನೇ ಚಿತ್ರಿಸುವ ಇವರೂ ತರ್ಕ ಸಿದ್ಧಾಂತಕ್ಕಿಂತ ಅನುಪಮ ತನ್ಮಯತೆಗೆ ಒತ್ತು ಕೊಡುತ್ತಾರೆ.

ಇವರ ಸಮಕಾಲೀನರೇ ಆದ ಸ್ತ್ರೀಪರವಾದ ಮತ್ತು ಉದಾರ ಮಾನವೀಯತೆ ನೆಲೆಗೆ ಸಲ್ಲುವ ದೃಷ್ಟಿಕೋನ ಮತ್ತು ಹಾಸ್ಯ ಮನೋಭಾವದಿಂದ ಕೂಡಿದ ಕೊಡಗಿನ ಗೌರಮ್ಮ, ವಾಸ್ತವದ ಮೌಲ್ಯಗಳನ್ನರಿತು ಹೊಸ ದೃಷ್ಟಿಕೋನದಿಂದ ವಿಚಾರ ಮಾಡುವ, ಅದನ್ನು ನಿರ್ಭೀತಿಯಿಂದ ವ್ಯಕ್ತಗೊಳಿಸುವ ಬೆಳಗೆರೆ ಜಾನಕಮ್ಮ, ಮಹಿಳೆಯರಿಗೆ ಮೀಸಲಾಗಿದ್ದ ‘ಸುಪ್ರಭಾತ’ ಪತ್ರಿಕೆ ನಡೆಸುತ್ತಿದ್ದ ಸರಸ್ವತಿಬಾಯಿ ರಾಜವಾಡೆ, ವಿಧವಾ ಸಮಸ್ಯೆ ಮತ್ತು ಕುಟುಂಬ ಯೋಜನೆಯಂತಹ ಸಾಮಾಜಿಕ ವಿಷಯಗಳ ಬಗ್ಗೆ ಬರೆದ ಉಳ್ಳೂರು ಮೂಕಾಂಬಿಕಮ್ಮ, ಪ್ರಗತಿಪರ ಕತೆಗಳನ್ನು ಬರೆದ ಹೆಚ್.ಎಸ್. ಕಾತ್ಯಾಯನಿ, ಅನುವಾದ ಕ್ಷೇತ್ರದಲ್ಲಿ ಪಳಗಿ ಹೆಚ್.ವಿ. ಸಾವಿತ್ರಮ್ಮನವರ ಕೆಲಸ ಮುಂದುವರಿಸಿದ ಸೀತಾದೇವಿ ಪಡುಕೋಣೆ ಇವರೆಲ್ಲರನ್ನು ಸ್ಥೂಲವಾಗಿ ಒಂದನೇ ತಲೆಮಾರಿನ ಲೇಖಕಿಯರೆಂದು ಪರಿಗಣಿಸುವುದಾದರೆ ಇವರ ಒಂದೊಂದು ಕೃತಿಗಳನ್ನು ಮಾದರಿಯಾಗಿಟ್ಟುಕೊಂಡು ಇಂದಿನ ವಿಮರ್ಶೆಯ ಮಾನದಂಡಗಳಿಂದ ಅಳೆಯುವುದು ತಪ್ಪು. ಏಕೆಂದರೆ ಅಂದಂದಿಗೆ ಅವರದ್ದು ಪ್ರಗತಿಪರ ಪ್ರಯೋಗವೇ ಆಗಿತ್ತು. ಆದರೂ ಸಂಪ್ರದಾಯದ ಬಂಧನದಿಂದ ಪೂರ್ತಿ ಬಿಡಿಸಿಕೊಂಡು ಹೊಸದಾಗಿ, ತೀರಾ ಹೊಸದಾಗಿ ಬರೆಯಲು ಅವರಿಗೆ ಸಾಧ್ಯವಾಗಲಿಲ್ಲ. ಹಾಗೆಂದು ಸುಧಾರಣೆಯ ಹೊಸ ಗಾಳಿಗೆ ಬೆನ್ನು ತಿರುಗಿಸಲೂ ಆಗಲಿಲ್ಲ. ಹೀಗಾಗಿ ಹಳತು ಹೊಸತರ ಗಾಬರಿಯ ಮಿಶ್ರಣವನ್ನು ಅಲ್ಲಿ ನೋಡಬಹುದು. `ಅವರ ಕೃತಿಗಳು ನವೋದಯದ ಆಶಯವನ್ನೇ ಬಿಂಬಿಸಿವೆ. ಇಲ್ಲಿನ ಹೋರಾಟದ ಕ್ರಮ ಆಕ್ರದ ವಿರುದ್ಧದ ರಕ್ಷಣಾ ಕ್ರಮ ಮಾತ್ರ, ಹೊಸದಿಗಂತದ ಕಡೆಗೆ ಹಾಕುವ ದಿಟ್ಟ ಹೆಜ್ಜೆಯಲ್ಲ. ಅಂದಿನ ಪರಿಸ್ಥಿತಿಗೆ ಅಷ್ಟಾದುದೇ ಹೆಚ್ಚು’ ಎಂದು ಹೇಳಬಹುದೇ ಹೊರತು, ಸಾರಾಸಗಟಾಗಿ ‘ಅವರು ಕಲಾತ್ಮಕವಾಗಿ ಬರೆದರು ಜಾಗೃತಿ ಮೂಡಿಸಿದರು’ ಎಂದು ಹೇಳಲಾಗುವುದಿಲ್ಲ.

ಈ ಲೇಖಕಿಯರು ತಮ್ಮ ಸಮಕಾಲೀನರಾಗಿದ್ದ ಮಾಸ್ತಿ, ಕುವೆಂಪು, ಬೇಂದ್ರೆಯವರನ್ನು ಅನುಸರಿಸದೇ ಅವರಿಗಿಂತ ಹಿಂದಿನವರಾದ ಸುಧಾರಣಾ ಮನೋಧರ್ಮದ ಕರ್ಕಿ ವೆಂಕಟರಮಣ ಶಾಸ್ತ್ರಿ, ವೆಂಕಟರಂಗೋ ಕಟ್ಟಿ, ಆಲೂರು ವೆಂಕಟರಾಯರು, ಮುದವೀಡು ಕೃಷ್ಣರಾಯರು, ಕೆರೂರು ವಾಸುದೇವಚಾರ್ಯರು ಇವರ ಧೋರಣೆಗಳನ್ನು ಅನುಸರಿಸಿದ್ದರಿಂದ ಅವರ ಸಾಹಿತ್ಯ ಸಮಾಜಮುಖಿಯಾಯಿತು. ಆದರೆ ದುರದೃಷ್ಟವಶಾತ್ ಇವರ ನಂತರ ಬಂದ ಎರಡನೇ ತಲೆಮಾರಿನ ಲೇಖಕಿಯರು ಸಮೃದ್ಧವಾಗಿ ಕಥೆ-ಕಾದಂಬರಿ ಬರೆಯುವಾಗ ಈ ಹಿರಿಯ ಲೇಖಕಿಯರ ಸುಧಾರಣಾವಾದೀ ಮನೋಭಾವದ ಕಡೆಗೆ ಬೆನ್ನು ತಿರುಗಿಸಿ ಜನಪ್ರಿಯತೆಯ ಕಡೆಗೆ ಒಲಿದದ್ದರಿಂದ ಮತ್ತು ರಮ್ಯ ಸಂಪ್ರದಾಯದ ತರಾಸು, ಅನಕೃ, ನಿರಂಜನ ಅವರ ಶೈಲಿಯನ್ನು ಅನುಸರಿಸಿದ್ದರಿಂದ, ‘ಬದುಕಿನ’ ವಾಸ್ತವ ನಿಷ್ಟುರಗಳಿಗೆ ಬೆನ್ನು ತಿರುಗಿಸಿದ್ದರಿಂದ, ಪುರುಷ ಮಾದರಿಗಳಲ್ಲೇ ಚಿಂತಿಸಿ ಬರೆದುದರಿಂದ, ಓದುಗರನ್ನು ಹುಸಿಲೋಕದ ಭ್ರಮೆಯ ಪ್ರಪಂಚಕ್ಕೆ ಎಳೆದೊಯ್ದುದರಿಂದ ಇಂದಿಗೂ ಮಹಿಳಾ ಸಾಹಿತ್ಯವೆಂದರೆ ಮೂಗು ಮುರಿಯುವ ಮಹನೀಯರು ಮಹಿಳಾ ಸಾಹಿತ್ಯದಲ್ಲೇನಿದೆ ಮಹಾ? ಅದೇ ಬಂಗಲೆ, ಕಾರು, ಒಡವೆ, ಸೀರೆ ಎನ್ನುವುದು; ಅಡಿಗೆ ಮನೆ ಸಾಹಿತ್ಯ ಎಂದು ಅಣಕಿಸುವುದು ನಡೆದೇ ಇದೆ. ಪ್ರತಿ ಗೋಷ್ಠಿ ಯಲ್ಲಿಯೂ ವೇದಿಕೆಯ ಮೇಲಿನಿಂದ ಒಬ್ಬ ಲೇಖಕಿಯ ಹೆಸರನ್ನೂ ಪ್ರಸ್ತಾಪಿಸದಿರುವುದು, ಪ್ರತ್ಯೇಕ ಮಹಿಳಾ ಗೋಷ್ಠಿಗಳನ್ನು ನಡೆಸುವುದೂ ನಡೆದೇ ಇದೆ.

ತ್ರಿವೇಣಿಯವರಿಂದ ಪ್ರಾರಂಭವಾಗುವ ಈ ಎರಡನೇ ತಲೆಮಾರಿನ ಲೇಖಕಿಯರಲ್ಲಿ ಕೆಲವರು ಇನ್ನೂ ಬದುಕಿದ್ದು ಬರೆಯುತ್ತಿರುವ, ಕೆಲವರು ಬದುಕಿಲ್ಲದಿರುವ ಕಾರಣ ಇಷ್ಟೇ ಎಂದು ಪಟ್ಟಿ ಮಾಡಿ ಮುಗಿಸಲಾಗದು. ಇದೇ ಕಾಲಕ್ಕೆ ಸಾಹಿತ್ಯ ಚರಿತ್ರೆಯ ನವೋದಯದ ಹಂತವು ಮುಗಿದು ನವ್ಯವು ಪ್ರವೇಶಿಸಿತು. ನವೋದಯ ಹಂತವು ಕವಯತ್ರಿಯರನ್ನೂ ಕತೆಗಾರ್ತಿಯರನ್ನೂ ಏಕಕಾಲಕ್ಕೆ ಪ್ರಭಾವಿಸಿದಂತೆ ನವ್ಯ ಮನೋಧರ್ಮವು ಪ್ರಭಾವ ಬೀರಿದಂತೆ ಕಾಣುವುದಿಲ್ಲ. ಏಕೆಂದರೆ ನವ್ಯವು ಕೇವಲ ಬುದ್ದಿ ಜೀವಿಗಳ ಸ್ವತ್ತಾಗಿದ್ದು ಲೇಖಕಿಯರನೇಕರು ಗೃಹಿಣಿಯರಾಗಿದ್ದ ಕಾರಣದಿಂದ ಮೂರನೇ ತಲೆಮಾರಿನ ಸುಮಾರು ಲೇಖಕಿಯರು ಇನ್ನೂ ನವೋದಯದ ಜಾಡಿನಲ್ಲಿ ರಮ್ಯ ಕತೆಗಳನ್ನು ಹೆಣೆಯುತ್ತಲೇ ಇದ್ದಾರೆ. ಹೀಗಾಗಿ ನವ್ಯದ ಪ್ರಮುಖ ಲೇಖಕಿಯರನ್ನು ಗುರುತಿಸಿದರೆ ಅನಂತರ ಬರೆದ ಲೇಖಕಿಯರೆಲ್ಲರೂ ತಮ್ಮ ಹಿಂದಿನವರನ್ನು ಮಾದರಿಯಾಗಿಟ್ಟುಕೊಳ್ಳದೇ ಕಾದಂಬರಿ ಪ್ರಕಾರವನ್ನು ಸಮೃದ್ಧಗೊಳಿಸುವ ಪ್ರಯತ್ನದಲ್ಲಿ ಅನಕೃ ಅವರನ್ನೂ ರಂಜನೀಯವಾಗಿ ಬರೆಯುವುದರಲ್ಲಿ ತರಾಸು, ನಿರಂಜನ ಅವರನ್ನೂ ಮಾದರಿಯಾಗಿ ಇಟ್ಟುಕೊಂಡುದರಿಂದ ಸಮಾಜ ಸುಧಾರಣೆ ದೂರ ಉಳಿದು ಚಲನಚಿತ್ರಗಳ ಕೆಲಸವನ್ನೇ ಇವೂ ಮಾಡಿದವು. ತ್ರಿವೇಣಿಯವರ ನಂತರದಲ್ಲಿ ಕನ್ನಡ ಕಾದಂಬರಿ ಕ್ಷೇತ್ರ ಸಮೃದ್ಧವಾಗಿ ಬೆಳೆಯಿತು. ಅವರು ಹಾಕಿಕೊಟ್ಟ ಮನಶ್ಯಾಸ್ತ್ರೀಯ ಅಧ್ಯಯನದ ಹಿನ್ನಲೆಯಲ್ಲಿ ಪಾತ್ರಗಳನ್ನು ಚಿತ್ರಿಸುವ ದಾರಿಯಲ್ಲಿ ಸಾಗಲು ಡಾ.ಹೆಚ್.ಗಿರಿಜಮ್ಮನವರೆಗೆ ಕಾಯಬೇಕಾಯಿತು. ಆದರೆ ವಿಧವಾ ವಿವಾಹದ ಸಮಸ್ಯೆ ಬಹುಶಃ ರಾಜಾರಾಂ ಮೋಹನ್‌ರಾಯ್‌ರಂತಹವರ ಸುಧಾರಣೆಗಳಿಂದ ಕನ್ನಡ ಕಾದಂಬರಿಗಳಲ್ಲಿ ವಿಶೇಷವಾಗಿ ತಿರುಮಲಾಂಬಾ ಮತ್ತು ಕಲ್ಯಾಣಮ್ಮನವರ ಕೃತಿಗಳಲ್ಲಿ ಆಗಲೇ ಹೊಳಹುಗೊಟ್ಟಿದ್ದರಿಂದ ಕಾಲಮಾನದಿಂದ ಮುಂದಿದ್ದ ತ್ರಿವೇಣಿಯವರಿಗೆ ‘ದೂರದ ಬೆಟ್ಟ’ದಲ್ಲಿ ಮತ್ತೆ ಆ ವಸ್ತುವನ್ನೆತ್ತಿಕೊಳ್ಳುವುದು ಸುಲಭವಾಯಿತು. ‘ನಭಾ’ ಮತ್ತು ‘ನಿರ್ಭಾಗ್ಯ ವನಿತೆ’ಯ ಪರಿಷ್ಕೃತ ಚಿತ್ರಣ ಇದು. ಉಷಾನವರತ್ನರಾಂರವರ ‘ಆಂದೋಲನ’, ‘ಆಶ್ವಾಸನ’ದ ವೇಳೆಗೆ ಈ ದಾರಿ ಇನ್ನಷ್ಟು ಸುಗಮವಾಯಿತು. ಕಪ್ಪು ಬಿಳುಪಿನ ಪಾತ್ರಗಳನ್ನು ಚಿತ್ರಿಸುವಲ್ಲಿ ತ್ರಿವೇಣಿಯವರ ‘ಕೀಲುಗೊಂಬೆ’ಯಿಂದ ಪ್ರಾರಂಭವಾದ ಅಷ್ಟೇನೂ ಆರೋಗ್ಯಕರವಲ್ಲದ ಒಂದು ಪರಂಪರೆ ವೀಣಾ ಶಾಂತೇಶ್ವರ ಅವರ ‘ಬಿಡುಗಡೆ’ಯವರೆಗೂ ಹರಡಿದೆ. ಸಮಕಾಲೀನ ಲೇಖಕಿಯರನೇಕರ ಕಾದಂಬರಿಗಳಿಗೂ ಈ ಮಾತು ಅನ್ವಯವಾಗುತ್ತದೆ.

ಸಾಯಿಸುತೆಯವರ ಅನೇಕ ಕಾದಂಬರಿಗಳಲ್ಲಿ ಪ್ರೇಮ, ಪ್ರಣಯದ ಅಸಹಜ ಚಿತ್ರಣಗಳಿರುತ್ತವೆ. ಇಂದು ಪ್ರೌಢಶಾಲೆಯ ಮಕ್ಕಳಿಗೂ ಲೈಂಗಿಕ ಶಿಕ್ಷಣ ಕೊಡುವುದರಿಂದ ಆರೋಗ್ಯಕರವಾದ ರೀತಿಯಲ್ಲಿಯೇ ಮಕ್ಕಳಿಗೆ ಗಂಡು, ಹೆಣ್ಣಿನ ಸಂಬಂಧದ ಅರಿವು ನೀಡಬೇಕೆಂಬವಾದ ಪ್ರಬಲವಾಗುತ್ತಿರುವಾಗ ನಮ್ಮ ಇಂದಿನ ಅನೇಕ ಚಲನಚಿತ್ರಗಳಂತೆ ಈ ರೀತಿ ಅಪರಿಮಿತ ಸಂಖ್ಯೆಯಲ್ಲಿ ಕಾರ್ಖಾನೆಯಲ್ಲಿ ತಯಾರಾಗುವ ವಸ್ತುಗಳಂತೆ ಬಂದು ಬೀಳುವ ಕತೆಗಳು, ಕಾದಂಬರಿಗಳು ಯುವ ಜನಾಂಗವನ್ನು ವೈಚಾರಿಕತೆಯಿಂದ ದೂರ ಉಳಿಯುವಂತೆ ಮಾಡುತ್ತವೆ. ಕಪ್ಪು-ಬಿಳುಪಿನ ಪಾತ್ರಗಳನ್ನೇ ಚಿತ್ರಿಸಿದರೂ ವೀಣಾ ತಮ್ಮ ‘ಮುಳ್ಳುಗಳು’ ಎಂಬ ಮೊದಲ ಕತೆಯಿಂದಲೇ ವಿಮರ್ಶಕರ ಗಮನಸೆಳೆದವರು. ಅವರ ಕತೆಗಳಲ್ಲಿ ಬದುಕಿಗೆ ಹತ್ತಿರವಾದ ಚಿತ್ರಗಳಿರುವುದರಿಂದ ಅವರು ಸತ್ಯವನ್ನೇ ಹೇಳುತ್ತಿದ್ದಾರೆಂದು ಬದುಕನ್ನು ಬಲ್ಲವರಿಗೆ ಅನ್ನಿಸಿದ್ದರಿಂದ ಅವರು ನವ್ಯದ ಮೂಲದಿಂದ ಬಂದು ಗಮನಸೆಳೆದ ಕತೆಗಾರ್ತಿಯಾದರು. ಆದರೆ ನವ್ಯದ ನಂತರ ಬಂದ ಕತೆಗಾರ್ತಿಯರಿಗೆ ಅವರು ಮಾದರಿಯಾಗದೇ ಹೋದುದು ಒಂದು ದುರಂತ, ಆದರೂ ತೀರಾ ಇತ್ತೀಚೆಗೆ ತುಳಸಿ ವೇಣುಗೋಪಾಲ್, ಮಿತ್ರಾ ವೆಂಕಟರಾಜ, ಗಂಗಾ ಪಾದೇಕಲ್ ಈ ಪರಂಪರೆಯು ಮುಂದುವರಿಸಿರುವುದೊಂದು ಆಶಾ ದಾಯಕ ಅಂಶ. ಭೈರಪ್ಪನವರ ‘ಪರ್ವ’ ತನಗೆ ತಾನೇ ಶ್ರೇಷ್ಟವಾದರೂ ಅನಂತರ ಪೌರಾಣಿಕ ವಸ್ತುಗಳ ಪರಂಪರೆಯನ್ನೇ ವಿಜೃಂಭಿಸಿ ‘ರಾಮಾಯಣ’, ‘ಮಹಾಭಾರತ’, ‘ಭಾಗವತ’ಗಳನ್ನು ಇದ್ದುದಿದ್ದಂತೆ ಪವಾಡ ಸಮೇತ ಬರೆದರು. ಎ. ಪಂಕಜ ಮೂರನ್ನೂ ಹೀಗೆ ಬರೆದಿದ್ದಾರೆ.

ಡಾ. ಪ್ರಭುಶಂಕರ ತಮ್ಮ ‘ಆಮ್ರಪಾಲಿ’ ನಾಟಕದಲ್ಲಿ ಒಬ್ಬ ವೇಶ್ಯೆಯ ದುಃಖ ತಳಮಳಗಳಿಗೆ ಬಾಯಿಕೊಟ್ಟಂತೆ ‘ವೈಶಾಲಿಯ ನಗರವಧು’ ಕಾದಂಬರಿಯಲ್ಲಿ ಡಾ. ನಿರುಪಮಾ ಅವರಿಗೆ ಕೊಡಲಾಗಲಿಲ್ಲ. ಈ ಕಾರಣಕ್ಕಾಗಿಯೇ ಅನುಪಮಾ ನಿರಂಜನ ಅವರ ‘ಮಾಧವಿ’ ವಿಶಿಷ್ಟವಾಯಿತು. ಇದಕ್ಕೆ ಮೊದಲೇ ತಿರುಮಲಾಂಬಾ ಬರೆದ ‘ವಿವೇಕೋದಯ’ ನಾಟಕದಲ್ಲೇ ಈ ವಸ್ತುವಿದ್ದರೂ ಅಲ್ಲಿ ಸ್ತ್ರೀ ಸಂವೇದನೆ ಸ್ಫೋಟಗೊಂಡಿರಲಿಲ್ಲ. ತಮ್ಮ ಮೊದಲ ಕಾದಂಬರಿಗೇ ಆ ವರ್ಷದ ಎಲ್ಲಾ ಪ್ರಶಸ್ತಿಗಳನ್ನೂ ಪಡೆದ ಸುನಂದಾ ಬೆಳಗಾಂವಕರ ಅವರ ‘ನಾಸು’ ‘ಅಪ್ಪಟ ಸ್ತ್ರೀವಾದಿ ಕಾದಂಬರಿ, ಟಿ.ಪಿ. ಕೈಲಾಸಂ ಅವರ ‘ಟೊಳ್ಳು ಗಟ್ಟಿಯ ಮಾಧುವನ್ನು ಮೊದಲ ನೋಟಕ್ಕೆ ನೆನಪಿಸುವ ಈ ಕತೆಯ ನಾಯಕ ಹೆಂಗರುಳಿನವನು. ಹೀಗೆ ಕಾದಂಬರಿಗಳಲ್ಲದೇ ವಿಮರ್ಶೆ, ಸಂಶೋಧನೆಗಳಲ್ಲೂ ಹೆಸರು ಮಾಡಿದ ಶಾಂತಾದೇವಿ ಮಾಳವಾಡ, ಕಮಲಾ ಹಂಪನಾ, ವಿಜಯಾ ದಬ್ಬೆ, ಗಾಯತ್ರಿ ನಾವಡ, ಸುಮಿತ್ರಾ ಬಾಯಿ ಮೊದಲಾದ ಲೇಖಕಿಯರೂ ಈ ತಲೆಮಾರಿಗೆ ಸೇರಿ ಮಹಿಳಾ ಸಾಹಿತ್ಯದ ಆಯಾಮಗಳನ್ನು ಹಿಗ್ಗಿಸಿದ್ದಾರೆ. ಎಲ್ಲರ ಹೆಸರನ್ನೂ ಈ ಸಣ್ಣ ಲೇಖನದಲ್ಲಿ ತರುವುದು ಸಾಧ್ಯವೂ ಇಲ್ಲ. ಸಾಧುವೂ ಅಲ್ಲ. ಇತ್ತೀಚೆಗೆ ಒಬ್ಬ ಲೇಖಕಿಯನ್ನು ಒಂದು ಪತ್ರಿಕೆ ‘ಮಹಿಳಾ ಸಾಹಿತ್ಯ’ ಎಂಬ ಲೇಖನ ಬರೆದುಕೊಂಡುವಂತೆ ಕೇಳಿತಂತೆ. ಆಕೆ ತನಗೆ ತಿಳಿದಿದ್ದ ಎಲ್ಲಾ ಲೇಖಕಿಯರ ಹೆಸರನ್ನೂ ಪಟ್ಟಿಮಾಡಿ ಇವರು ಇಂತಿಂತಹ ಕ್ಷೇತ್ರಗಳಲ್ಲಿ ಕೃಷಿ ಮಾಡಿದ್ದಾರೆ ಎಂಬುದನ್ನು ಸೂಚಿಸಿದರಂತೆ. ಪತ್ರಿಕಾ ಸಂಪಾದಕರು ವಿಮರ್ಶೆಯನ್ನೇ ಮಾಡಿಲ್ಲವಲ್ಲಾ ಎಂದು ಅಸಮಾಧಾನ ಸೂಚಿಸಿದರೂ ಲೇಖನವನ್ನು ಪ್ರಕಟಿಸಿದರಂತೆ. ಅನಂತರವೂ ನನ್ನ ಹೆಸರು ಬಿಟ್ಟುಹೋಗಿದೆ ಎಂಬ ಫೋನ್ ಕರೆಗಳು ಆಕೆಗೆ ಬಂದುವಂತೆ, ಸಮಕಾಲೀನ ಲೇಖಕಿಯರೆಲ್ಲರೂ ನನ್ನ ಸ್ನೇಹಿತರು, ನಾನು ಅವರ ದ್ವೇಷವನ್ನು ಹೇಗೆ ಕಟ್ಟಿಕೊಳ್ಳಲಿ ಎಂಬುದು ಆಕೆಯ ಕೊರಗು. ಈ ಅರ್ಥದಲ್ಲಿ ಪುರುಷರ ಸಾಹಿತ್ಯದ ವಿಮರ್ಶೆಯನ್ನು ಪುರುಷರೇ ನಿರ್ಭಿಡೆಯಿಂದ ಮಾಡುವಂತೆ ಮಹಿಳಾ ಸಾಹಿತ್ಯದ ವಿಮರ್ಶೆಯನ್ನು ಮಹಿಳೆಯರು ನಿರ್ಭಿಡೆಯಿಂದ ಮಾಡಲಾಗುವುದಿಲ್ಲ ಎಂದು ಒಪ್ಪಿಕೊಂಡಂತಾಗುತ್ತದೆ. ಹೆಸರು ಬರುವಂಥದನ್ನು ಬರೆದಿದ್ದರೆ ಒಂದಲ್ಲಾ ಒಂದು ದಿನ ಹೆಸರು ಬಂದೇ ಬರುತ್ತದೆ ಎಂದು ಲೇಖಕಿಯರು ಭಾವಿಸಬೇಕು ಮತ್ತು ಹೆಸರಿಗಾಗಿ ಹಾಗೆ ತಹತಹಿಸಬಾರದು. ಹಾಗೇ ವಿಮರ್ಶೆ ಬರೆಯುವವರೂ ಎಡವಿರುವ ಹೆಜ್ಜೆ ಗುರುತುಗಳನ್ನು ಬೆರಳು ಮಾಡಿ ತೋರಿಸಬೇಕು. ಇಲ್ಲದಿದ್ದರೆ ತಾವು ಬರೆದುದೇ ಶ್ರೇಷ್ಠ ಎಂದು ತಾವೇ ಬೀಗುತ್ತಾ ‘ಹೆತ್ತವರಿಗೆ ಹೆಗ್ಗಣ ಮುದ್ದು’ ಎಂಬಂತೆ ತಮ್ಮ ಕೃತಿಗಳ ಹಿರಿಮೆಯನ್ನು ತಾವೇ ಭ್ರಮಿಸುತ್ತ ಸುತ್ತಣ ಪ್ರಪಂಚಕ್ಕೆ ಕುರುಡಾಗಿ ಬೆಳವಣಿಗೆಯಿಲ್ಲದೆ ಕುಬ್ಬರಾಗುತ್ತಾರೆ. ಈಗ ಆಗಿರುವುದೂ ಅದೇ, ಕೆಲವು ಅಪವಾದಗಳನ್ನು ಹೊರತುಪಡಿಸಿ.

ಬಂಡಾಯ ಕಾವ್ಯದೊಳಕ್ಕೆ ಬಂದ ಮುಸ್ಲಿಂ ಸಂವೇದನೆಯಲ್ಲಿ ಕಾವ್ಯವನ್ನು ಮುಖ್ಯವಾಗಿ ಕಂಡರೂ ಕತೆ ಕಾದಂಬರಿಗಳ ಮಹತ್ವ ಏನೂ ಕಡಿಮೆಯದಲ್ಲ. ಸಾರಾ ಅಬೂಬಕರ್ ಅವರ ‘ಮುಸ್ಲಿಂ ಹುಡುಗಿ ಶಾಲೆ ಕಲಿತದ್ದು’ ಎಂಬ ಕತೆಯಿಂದ ಸಾಹಿತ್ಯ ಲೋಕದೊಳಕ್ಕೆ ಹೊಸ ಜಗತ್ತೊಂದು ಪ್ರವೇಶಿಸಿತು. ಅದು, ಅದುವರೆಗೆ ಅನಾವರಣಗೊಳ್ಳದಿದ್ದ ಮುಸ್ಲಿಂ ಸ್ತ್ರೀ ಜಗತ್ತು, ಬುರ್ಖಾದ ಒಳಗೆ ಸದಾ ಅಡಗಿರುತ್ತಿದ್ದ, ಸದಾ ಖುರಾನ್ ಪಠಿಸುತ್ತಿದ್ದ, ಮೂರು ಬಾರಿ ತಲಾಖ್ ಹೇಳಿದರೆ ವಿವಾಹದಿಂದ ಬಿಡುಗಡೆ ಎಂದು ಎಲ್ಲರೂ ಭಾವಿಸಿದ್ದ ಲೋಕ ಅದು. ಆ ಲೋಕದ ಸ್ತ್ರೀಯರ ಮನಸೂ ನಮ್ಮೆಲ್ಲರ ಮನಸ್ಸಿನಂತೆಯೇ ವರ್ತಿಸುತ್ತದೆ ಎಂದು ಸಾರಾ ದಿಟ್ಟತನದಿಂದಲೇ ತಿಳಿಸಿದರು. ಅನಂತರ ಈ ಸಾಲಿನಲ್ಲಿ ಬಾನು ಮುಷ್ತಾಕ್, ಶರೀಫಾ, ರಜಿಯಾ, ಸಬೀಹಾ ಭೂಮಿಗೌಡ ಮೊದಲಾದವರೂ ಇದ್ದಾರೆ.

ಸಾಮಾನ್ಯವಾಗಿ ಎಲ್ಲಾ ವಿಮರ್ಶಕರಿಂದಲೂ ನಿರ್ಲಕ್ಷ್ಯಕ್ಕೆ ಗುರಿಯಾಗಿರುವ, ಒಂದು ಗುಂಪಿನ ವಿಮರ್ಶಕರಿಂದ ಇವರ ಹೆಸರು ಹೇಳುವುದೂ ಸಲ್ಲದು ಎಂಬ ಅಸ್ಪಶ್ಯತೆಗೆ ಗುರಿಯಾಗಿರುವ, ಜನಪ್ರಿಯ ಸಾಹಿತ್ಯ ಬರೆಯುವರು ಎಂಬ ಲೇಬಲ್ ಅಂಟಿಸಿಕೊಂಡ ಒಂದು ಲೇಖಕಿಯರ ಗುಂಪೇ ಇದೆ. ಇಂದು ಪ್ರಕಟವಾಗುತ್ತಿರುವ ಬಹುತೇಕ ಪತ್ರಿಕೆಗಳು ಇಂತಹ ಜನಪ್ರಿಯ ಸಾಹಿತ್ಯವನ್ನೇ ಬಯಸುತ್ತವೆ. ಗಂಭೀರ ಬರವಣಿಗೆ ಸಾಮಾನ್ಯ ಜನರಿಗೆ ಇಷ್ಟವಾಗುವುದಿಲ್ಲ ಎಂಬ ನೆಪವೊಡ್ಡಿ ಜನರಲ್ಲಿ ಅಭಿರುಚಿ ನಿರ್ಮಾಣ ಮಾಡುವುದಕ್ಕೆ ಬದಲಾಗಿ ಅವರ ಅಭಿರುಚಿಯ ಮಟ್ಟಕ್ಕೆ ತಾವೂ ಇಳಿಯುತ್ತವೆ ಅಥವಾ ಕೆಡಿಸುತ್ತವೆ. ಕಾರಂತ ಅಥವಾ ಭೈರಪ್ಪನವರ ಸಾಹಿತ್ಯ ಬೇಕಿರುವವರು ಗ್ರಂಥಾಲಯಕ್ಕೂ ಪುಸ್ತಕದಂಗಡಿಗೋ ಹೋಗಲಿ, ನಮ್ಮ ಪತ್ರಿಕೆಯ ಓದುಗರಿಗೆ ಇಷ್ಟು ಸಾಕು ಎಂಬ ಅಭಿಪ್ರಾಯ ಅವಕ್ಕಿರುತ್ತದೆ. ಮತ್ತು ಜನಪ್ರಿಯ ಸಾಹಿತ್ಯ ಬರೆಯುವ ಬಹುಪಾಲು ಲೇಖಕಿಯರ ಪುಸ್ತಕಗಳ ಖರೀದಿ, ಬರೀ ಗ್ರಂಥಾಲಯಕ್ಕೆ ಮಾತ್ರ ಸೀಮಿತವಾಗಿದ್ದು ಇನ್ನಾವ ಪ್ರದರ್ಶನ ಪ್ರಶಸ್ತಿಗಳಲ್ಲಿ ಅವು ಇರುವುದಿಲ್ಲ.

ಮೂರನೇ ತಲೆಮಾರಿನ ಲೇಖಕಿಯರ ಒಂದು ಸಾಧನೆಯೆಂದರೆ ಅದುವರೆಗಿನ (ಕೆಲವು ಅಪವಾದಗಳನ್ನು ಹೊರತುಪಡಿಸಿ) ಮಹಿಳಾ ಸಾಹಿತ್ಯವೆಂದರೆ ಕತೆ ಕಾದಂಬರಿಗಳೆಂಬ ಭಕ್ಷ್ಯ ಭೋಜ್ಯಗಳೇ ಎಂಬ ಮಾತನ್ನು ಸುಳ್ಳು ಮಾಡಿ ಎಲ್ಲಾ ಪ್ರಕಾರಗಳಿಗೆ ಕೈಹಾಕಿದ್ದು. ಒಂದು ಸಾವಿರ ವರ್ಷಗಳ ಇತಿಹಾಸದಲ್ಲಿ ಒಬ್ಬ ಮಹಿಳೆಯೂ ಕೈಹಾಕದಿರುವ ಮಹಾಕಾವ್ಯ ರಚನೆಗೆ ಕೈಹಾಕಿದ ಜಯದೇವಿ ತಾಯಿ ಲಿಗಾಡೆ ಅವರನ್ನಾಗಲೀ, ಮಲ್ಲಿಕಾ ಕಡಿದಾಳ ಅವರನ್ನಾಗಲೀ ಕುವೆಂಪು ಕುಮಾರವ್ಯಾಸರಿಗೆ ಹೋಲಿಸಿ ನೋಡಬಾರದು. ಗಂಡು ಕ್ಷೇತ್ರವೇ ಆದ ನಾಟಕ ರಚನೆಗೂ ಅಭಿನಯಕ್ಕೂ ನಿರ್ದೇಶನಕ್ಕೂ ಮಹಿಳೆಯರು ಕೈಹಾಕಿದ್ದಾರೆ. ಡಾ. ವಿಜಯಾ ಅವರ ‘ಚಿತ್ರಾ’ ತಂಡ, ಹೇಮಾ ಪಟ್ಟಣಶೆಟ್ಟಿಯವರ ‘ಧಾರಕ’ ಇಲ್ಲಿ ಉಲ್ಲೇಖನಾರ್ಹ. ಕೊರವಂಜಿಯ ರಾಶಿ ಅವರಿಂದ ಪ್ರಾರಂಭವಾದ ಹಾಸ್ಯ ಸಾಹಿತ್ಯ ಪರಂಪರೆಯನ್ನು ಮುಂದುವರೆಸಿಕೊಂಡು ಬಂದು ಹಾಸ್ಯ ಸಾಹಿತ್ಯದ ಅನಭಿಷಕ್ತ ಸಾಮ್ರಾಜ್ಞಿ ಎಂದು ಹೆಸರಾಗಿದ್ದ ಟಿ. ಸುನಂದಮ್ಮನವರ ‘ಮೈಲಾರಿ ಸರಸ’ ಎಂಬ ಸ್ಥಾಯೀ ಪಾತ್ರಗಳು, ಮುಂದೆ ಇವರ ಹಾದಿಯಲ್ಲಿಯೇ ಬರೆದು ಪತ್ರಿಕೆಗಳ ಮೂಲಕ ಇಂದು ಹೆಸರಾಗಿರುವ ಭುವನೇಶ್ವರಿ ಹೆಗಡೆಯವರೂ ಸೇರಿದಂತೆ ತುಂಬಾ ಮಂದಿ ಲೇಖಕಿಯರಿಗೆ ಸ್ಫೂರ್ತಿಯಾಗಿದೆ.

ಈ ಶತಮಾನದ ಕೊನೆಯ ದಶಕದ ಇನ್ನೊಂದು ಸಾಧನೆ ಎಂದರೆ ಅನುವಾದ. ಕೆ.ಎನ್‌. ವಿಜಯಲಕ್ಷ್ಮಿಯವರ ಸ್ಯಾಫೋಕಾವ್ಯ ಮತ್ತು ಸಿಲ್ವಿಯಾ ಪ್ಲಾತಳ ಕಾವ್ಯದ ಅನುವಾದ ಒಂದು ಮಹತ್ವದ ಪ್ರಯತ್ನ, ‘ಏಷಿಯಾದ ಹಣತೆಗಳು’, ‘ತೇರಿಗಾಥಾ’ – ಇವನ್ನೂ ಉಲ್ಲೇಖಿಸಬಹುದು. ವೀಸೀಯವರ ‘ಪಂಪಾಯಾತ್ರೆ’ಯಿಂದ ಪ್ರಾರಂಭವಾದ (ವಿದೇಶ) ಪ್ರವಾಸ ಪ್ರಬಂಧ ಇಂದು ಹೆಮ್ಮರವಾಗಿ ಬೆಳೆದಿದೆ. ಇತ್ತೀಚಿನ ದಿನಗಳಲ್ಲಿ ಈ ಕ್ಷೇತ್ರಕ್ಕೆ ಲೇಖಕಿಯರ ಕೊಡುಗೆ ಗಮನಾರ್ಹ.

ಸಂಶೋಧನಾ ಕ್ಷೇತ್ರದ ಹೆಬ್ಬಾಗಿಲು ಬದುಕಿನ ಇತರ ಕ್ಷೇತ್ರಗಳಂತೆ ಮೊದಮೊದಲು ಪುರುಷರಿಗೆ ಮಾತ್ರ ತೆರೆದಿತ್ತು ಎಂದೇ ಹೇಳಬೇಕು. ಪಾಶ್ಚಾತ್ಯ ವಿದ್ವಾಂಸರು ನಮ್ಮ ಸಾಹಿತ್ಯ ಚರಿತ್ರೆಯನ್ನು ಕಟ್ಟಿದ್ದರು, ಗ್ರಂಥಗಳನ್ನು ಸಂಪಾದಿಸಿದರು, ವ್ಯಾಕರಣ ಭಾಷಾ ಶಾಸ್ತ್ರಗಳನ್ನು ಬರೆದರು. ಆ ಹಂತದಲ್ಲಿ ಆರ್. ನರಸಿಂಹಚಾರ್, ಡಿ.ಎಲ್.ಎನ್., ಆ.ನೇ. ಉಪಾಧ್ಯೆ ಮೊದಲಾದ ಮೊದಲ ತಲೆಮಾರಿನ ವಿದ್ವಾಂಸರು ಯಾವ ಪದವಿಯ ಆಮಿಷವೂ ಇಲ್ಲದೆ ಕೇವಲ ಜ್ಞಾನಾರ್ಜನೆಗಾಗಿಯೇ ಸಂಶೋಧನೆಯನ್ನು ಕೈಗೊಂಡರು. ಯಾವಾಗ ವಿಶ್ವವಿದ್ಯಾಲಯಗಳಲ್ಲಿ ಪಿಹೆಚ್.ಡಿ. ಪದವಿಗಾಗಿ ಸಂಶೋಧನೆ ನಡೆಸುವ ಪ್ರವೃತ್ತಿಯು ಪ್ರಾರಂಭವಾಯಿತೋ ಆಗ ಆ ಕ್ಷೇತ್ರದ ಬಾಗಿಲು ಸ್ತ್ರೀಯರಿಗೂ ತೆರೆಯಿತು. ಈಗ ಕನ್ನಡವೊಂದರಲ್ಲಿಯೇ ರಾಜ್ಯದ ಒಂಬತ್ತು ವಿಶ್ವವಿದ್ಯಾಲಯಗಳಲ್ಲಿ ಎಂ.ಫಿಲ್‌. ಮತ್ತು ಪಿಹೆಚ್.ಡಿ. ಮಾಡುತ್ತಿರುವ ಸ್ತ್ರೀಯರ ಪಟ್ಟಿ ದೊಡ್ಡದಿದೆ. ಮಹಿಳಾ ಸಾಹಿತ್ಯವನ್ನು ಕುರಿತ ಸಂಶೋಧನೆಗಳನ್ನು ಮಾಡಿದ ಮಾಡುತ್ತಿರುವವರ ಪಟ್ಟಿಯೂ ದೊಡ್ಡದಿದೆ. ಕಮಲಾ ಹಂಪನಾ, ಬಿ.ಟಿ. ಲಲಿತಾ ನಾಯಕ್, ಶೈಲಜಾ ಉಡಚಣ ಇಂತಹ ಹಿರಿಯ ಲೇಖಕಿಯರೂ ಈಗಾಗಲೇ ಸಂಶೋದನೆಗೆ ವಸ್ತುವಾಗಿದ್ದಾರೆ. ಸ್ತ್ರೀ ಸಂವೇದನೆಯನ್ನು ಕುರಿತೂ ಸಂಶೋಧನೆಗಳು ನಡೆಯುತ್ತಿವೆ.

ಕಾವ್ಯಲೋಕವೆಂಬುದೇ ಒಂದು ವಿಸ್ಮಯ. ‘ನನಗೂ ನಿನಗೂ ಅಂಟಿದ ನಂಟಿನ ಕೊನೆ ಬಲ್ಲವರಾರು ಕಾಮಾಕ್ಷಿಯೇ’ ಎಂದು ಬೇಂದ್ರ ಹೇಳುವಂತೆ ‘ಪದ್ಮಂ ವದ್ಯಂ ಗದ್ಯಂ ಹೃದ್ಯಂ’ ಎಂದು ಮುದ್ದಣ ಹೇಳಿದ್ದು ಕೇವಲ ಬಾಯಿಮಾತಿಗಿರಬೇಕು. ‘ಗದ್ಯಂ ಕವೀನಾಂ ನಿಕಷಂ ವದಂತಿ’ ಎಂಬ ಮಾತು ಏಳನೇ ಶತಮಾನದ ಬಾಣಭಟ್ಟನು ತನ್ನ ‘ಕಾದಂಬರಿ’ಯನ್ನು ಗದ್ಯದಲ್ಲಿ ಬರೆದ ನಂತರ ಜಾರಿಗೆ ಬಂದುದರಿಂದ ಅನಂತರ ಕನ್ನಡದಲ್ಲೂ ಯಾರೂ ಗದ್ಯ ಬರೆಯಲೇ ಇಲ್ಲ ಎಂದೂ ಹೇಳುವುದುಂಟು. ಒಟ್ಟಿನಲ್ಲಿ ‘ವಡ್ಡಾರಾಧನೆ’, ‘ಚಾವುಂಡರಾಯ ಪುರಾಣ’ಗಳ ನಂತರ ಕನ್ನಡದಲ್ಲಿ ಪದ್ಯದ್ದೇ ವಿಜೃಂಭಣೆ, ಈ ಪದ್ಯದ ಮಹಾಪೂರದಲ್ಲಿ ಪ್ರಾರಂಭದಲ್ಲಿ ಹೆಣ್ಣಿನ ಧ್ವನಿ ಕೇಳಿಸಿದ್ದೇ ಅಸ್ಪಷ್ಟವಾಗಿ, ಕ್ಷೀಣವಾಗಿ, ತಿರುಮಲೆ ರಾಜಮ್ಮನವರ ಸಮಕಾಲೀನರ ಕವಿತೆಗಳಲ್ಲಿ ದೇಶಪ್ರೇಮ, ಪ್ರೀತಿ-ವಾತ್ಸಲ್ಯ, ಭಕ್ತಿ – ಇವೇ ಕಾವ್ಯದ ವಸ್ತುವಾಗಿ ತಮ್ಮ ರಮ್ಯ ಸಂಪ್ರದಾಯವನ್ನುಳಿಸಿಕೊಂಡು ನವೋದಯದ ಪರಂಪರೆಗೆ ಅನುಗುಣವಾಗಿದೆ. ನಿಜವಾದ ಮಹಿಳಾ ಕಾವ್ಯವನ್ನು ನಾವು ನೋಡಬೇಕಾದರೆ ನವೋದಯ, ನವ್ಯ, ಪ್ರಗತಿಶೀಲವನ್ನು ದಾಟಿ ಬಂಡಾಯಕ್ಕೆ ಬರಬೇಕು. ಬಂಡಾಯ ಕಾವ್ಯದ ಪ್ರತಿಭಟನಾ ಮನೋಭಾವ ಮತ್ತು ಡಾ. ಸಿದ್ದಲಿಂಗಯ್ಯ ‘ಇಕ್ರಲಾ ವದೀರ್ಲ’ ಮೂಲಕ ಹಾಕಿಕೊಟ್ಟಿದ್ದ ಹೊಸತನಗಳು ನವ್ಯದ ಸಿನಿಕತನ ಮತ್ತು ಒಂಟಿತನಗಳು ಮೂಡಿಸಿದ್ದ ಜಡತ್ವವನ್ನು ತೊಡೆದು ಹಾಕಿ ಕಾವ್ಯದಲ್ಲಿ ತಮ್ಮ ಅಸ್ತಿತ್ವವನ್ನು ಹುಡುಕಿಕೊಳ್ಳತೊಡಗಿದ್ದ ಕವಯತ್ರಿಯರಿಗೆ ಬಂಡಾಯದ ವೇದಿಕೆ ಪ್ರಶಸ್ತಿವಾಗಿ ಪರಿಣಮಿಸಿತು. ಮುಸ್ಲಿಮರಿಗೂ ಇದೇ ಕಾರಣದಿಂದ ಬಂಡಾಯ ಪ್ರಿಯವಾಯಿತು. ಕಾವ್ಯವಲ್ಲದೇ ತಮ್ಮನ್ನು ತೊಡಗಿಸಿಕೊಳ್ಳಲು ಪ್ರಬಂಧ, ವಿಮರ್ಶೆ, ವೈದ್ಯಕೀಯ ಸಾಹಿತ್ಯ, ಶಿಶು ಸಾಹಿತ್ಯ, ವೈಚಾರಿಕ ಸಾಹಿತ್ಯ ಈ ಪ್ರಕಾರಗಳನ್ನೂ ಆರಿಸಿ ಕೊಂಡುದರಿಂದ ಮಹಿಳಾ ಸಾಹಿತ್ಯದ ತಾತ್ವಿಕ ಆಯಾಮಗಳು ಹಿಗ್ಗತೊಡಗಿದವು.

ಆದರೂ… ಆದರೂ… ಕೆಲವು ಲೇಖಕಿಯರು ನೂರಾರು ಸಾಮಾಜಿಕ ಕಾದಂಬರಿಗಳನ್ನು ಬರೆದು ಜನಪ್ರಿಯತೆಯನ್ನು ಸಾಧಿಸಿದ್ದಾರೆ ಎಂಬುದರ ಹೊರತು ಮತ್ತೇನೂ ಹೇಳಬಹುದಾದ ವಿಶಿಷ್ಟತೆಯಿಲ್ಲ ಎಂದು ಹೇಳಿ ಜನಪ್ರಿಯ ಎಂಬ ಪದವನ್ನೇ ಅಸ್ಪ್ರಶ್ಯತೆಯಿಂದ ಕಾಣುವುದೂ ಉಂಟು. ಈ ಹಿನ್ನಲೆಯಲ್ಲಿ ಪ್ರಕಾಶಕಿಯಾಗಿಯೂ ಲೇಖಕಿಯಾಗಿಯೂ ಬೆಳೆದಿರುವ ಡಾ. ನಿರುಪಮಾ ಅವರಾಗಲೀ, ಪ್ರೇಮಾಭಟ್ ಅವರಾಗಲೀ ಬದುಕಿನಲ್ಲೂ ಸಾಹಿತ್ಯದಲ್ಲೂ ರಾಜೀಮಾರ್ಗಕ್ಕೆ ಒತ್ತುಕೊಡುವವರು. ಪ್ರೇಮಾಭಟ್‌ ಅರವತ್ತು ತುಂಬಿದ ಸಂದರ್ಭದಲ್ಲಿ ‘ನನ್ನ ಯಜಮಾನರು ಬರೆಯುವುದು ಬೇಡ ಎಂದಿದ್ದರೆ ನಾನು ಬರೆಯುತ್ತಿರಲಿಲ್ಲ’ ಎಂದರು. ನಿರುಪಮಾಗೆ ಅನುಪಮಾ ಪ್ರಶಸ್ತಿ ಬಂದಾಗ ಅವರು ‘ಸ್ವೇಚ್ಛೆಯೇ ಸ್ವಾತಂತ್ರ್ಯವಲ್ಲ’ ಎಂದರು. ಇಂದಿನ ವಿಮರ್ಶಕರು ಈ ಮಾತುಗಳನ್ನು ಪ್ರತಿಗಾಮಿ ಎನ್ನುತ್ತಾರೆ ಮತ್ತು ಅವರ ಸಾಹಿತ್ಯದಲ್ಲಿ ಗಂಭೀರವಾದುದನ್ನೇ ಹುಡುಕುತ್ತಾರೆ. ಅವರು ಬೆಳೆದುಬಂದ ಕುಟುಂಬದ ವಾತಾವರಣವೇ ಅವರ ಮಿತಿಯಾಗಿದ್ದು ಆ ಮಿತಿಯಲ್ಲೂ ಅವರ ಸಾಧನೆಯನ್ನು, ಜೀವಮಾನದ ಸಾಧನೆಯನ್ನು ಗುರುತಿಸುವುದು ನಮಗೆ ಏಕೆ ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆಯನ್ನೂ ನಾವು ಕೇಳಿಕೊಳ್ಳಬೇಕಾಗಿದೆ.

ಕನ್ನಡ ಸಾಹಿತ್ಯದಲ್ಲಿ ನವೋದಯ, ನವ್ಯ, ಪ್ರಗತಿಶೀಲ, ದಲಿತ, ಬಂಡಾಯದ ನಂತರದ ಕಾಲವನ್ನು ಸ್ತ್ರೀವಾದದ ಕಾಲವೆಂದು ಗುರುತಿಸಲೇಬೇಕಾದ ಅನಿವಾರ್ಯತೆಯಿರುವ ಈ ಸಂದರ್ಭದಲ್ಲಿ ಬಂಡಾಯೋತ್ತರ ಮತ್ತು ನವ್ಯೋತ್ತರ ಕಾವ್ಯ ಸಂದರ್ಭಕ್ಕೆ ಸಮಾನಾಂತರವಾಗಿ ಮಹಿಳಾ ಸಾಹಿತ್ಯ ಬೆಳೆಯಬೇಕಾಗಿದೆ. ಸಾಹಿತ್ಯದ ಮುಖ್ಯವಾಹಿನಿಯಲ್ಲಿ ಮಹಿಳಾ ಸಾಹಿತ್ಯವನ್ನು ಗುರುತಿಸುವಂತಾಗುವ ಕಾಲಕ್ಕೆ ಕಾಯಬೇಕಾಗಿದೆ.
*****
ಡಾ. ವಿಜಯಾದಬ್ಬೆಯವರ ಅಭಿನಂದನಾ ಗ್ರಂಥಕ್ಕಾಗಿ ಬರೆದಿದ್ದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮರವಾಗಿದ್ರೆ
Next post ರತ್ನನ್ ಪರ್‍ಪಂಚ

ಸಣ್ಣ ಕತೆ

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…