Home / ಲೇಖನ / ಸಾಹಿತ್ಯ / ಅಕ್ಕನ ಅಗ್ನಿದಿವ್ಯದ ಹಾದಿಯಲ್ಲಿ ಇಂದಿನ ತಳಮಳಗಳ ನೆನೆದು

ಅಕ್ಕನ ಅಗ್ನಿದಿವ್ಯದ ಹಾದಿಯಲ್ಲಿ ಇಂದಿನ ತಳಮಳಗಳ ನೆನೆದು

ಸಹಜ ಬೆಳಕಿಗೆ ಬೆನ್ನುಹಾಕಿ ಕೃತಕ ಬೆಳಕು ಲಕಲಕಿಸುತ್ತಿರುವ ಗೋಡೆಗಳ ನಡುವೆ ಕುಳಿತು ಅಕ್ಕಮ್ಮಹಾದೇವಿಯ ‘ಚಂದನವ ಕಡಿದು ಕೊರೆದು ತೇದಡೆ ನೊಂದೆನೆಂದು ಕಂಪ ಬಿಟ್ಟಿತ್ತೆ?’ ವಚನದಲ್ಲಿ ಮುಳುಗಿಹೋಗಿದ್ದೇನೆ. ಈಕ್ಷಣ ಹಳ್ಳಿಯಿಂದ ಬೆಂಗಳೂರು ಪೇಟೆಗೆ ಬಂದ ಹೆಣ್ಣುಮಕ್ಕಳು ನೆನಪಾಗುತ್ತಿದ್ದಾರೆ. ಭವಿಷ್ಯವನ್ನರಸುತ್ತ ಬೆಂಗಳೂರಿಗೆ ವಲಸೆ ಬಂದ ಮನೆಯವರ ಜೊತೆ ಬಂದವರು, ಮದುವೆಯಾಗಿ ಗಂಡನನ್ನು ಹಿಂಬಾಲಿಸಿದವರು ನಗರದ ಬಣ್ಣಗಳೊಂದಿಗೆ ಸುಲಭವಾಗಿ ಕರಗಿ ಹೋಗುವುದು ಆಚ್ಚರಿಯನ್ನಿಸುತ್ತದೆ, ನೈಟಿಗಳಲ್ಲಿ ಮುಳುಗಿಹೋದ ಈ ಹೆಣ್ಣುಮಕ್ಕಳು ತಮ್ಮ ಮಕ್ಕಳೊಂದಿಗೆ ನಾಲಗೆ ತಿರುಗದ ಇಂಗ್ಲಿಷ್‍ನಲ್ಲಿ ಮಾತನಾಡುವುದನ್ನು ತಮ್ಮ ಪುಟಾಣಿಗಳ ಬಾಯಲ್ಲಿ ಮಮ್ಮಿ-ಡ್ಯಾಡಿ ಎಂದು ಹೇಳಿಸುತ್ತಾ ಧನ್ಯತೆ ಅನುಭವಿಸುವುದನ್ನು ‘ಎ, ಬಿ. ಸಿ, ಡಿ’ ಹೇಳಿಸಿ ಖುಷಿಪಡುವುದನ್ನು ನೋಡುವುದೇ ಒಂದು ಚೆಂದ. ಅಪ್ಪಟ ಕನ್ನಡ ಪರಿಸರದಲ್ಲಿ ಬೆಳೆದವರು ತಮ್ಮ ಕರುಳಕುಡಿಗಳು ತಮ್ಮಂತಾಗಬಾರದು ಎಂದು ತಹತಹಿಸುವುದು. ಅದಕ್ಕಾಗಿ ತಮ್ಮ ವ್ಯಕ್ತಿತ್ವವನ್ನೇ ಬದಲಿಸಿಕೊಳ್ಳಲು ಒದ್ದಾಡುವುದನ್ನು ನೋಡಿದಾಗ ಮರುಕವೂ ಉಂಟಾಗುತ್ತದೆ. ಇದು ಕೇವಲ ಹೆಣ್ಣುಮಕ್ಕಳ ಒದ್ದಾಟವಲ್ಲ. ತಮ್ಮ ಹಾಗೂ ತಮ್ಮ ಭವಿಷ್ಯದ ಕುರಿತ ಆತಂಕ ಹಿಂದೆಂದೂ ಕಾಡದಷ್ಟರ ಮಟ್ಟಿಗೆ ಗಂಡಸರನ್ನೂ ಕಾಡುತ್ತಿದೆ. ಈ ಆತಂಕವನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲವರು ಇಂಗಿಷ್‍ನಲ್ಲಿ ಬೆಳಕು ಹುಡುಕುತ್ತಿದ್ದಾರೆ.

ನಮ್ಮ ಗುರಿಗಳು ಈಗ ಬದಲಾಗಿವೆ. ಆರಂಕುಶವಿಟ್ಟರೂ ಎನ್ನ ಮನಸ್ಸು ಬನವಾಸಿಯನ್ನೇ ನೆನೆಯುತ್ತದೆ ಪಂಪನ ಪೀಳಿಗೆ ನಮ್ಮದಲ್ಲ. ದುಡ್ಡಿಗಾಗಿ ಊರನ್ನು ಭಾಷೆಯನ್ನು ಮರೆಯಲು ಸಿದ್ದವಾಗಿರುವವರು ನಾವು. ಏನನ್ನಾದರೂ ಪಡೆಯಲು ಏನನ್ನಾದರೂ ಕಳೆದುಕೊಳ್ಳಲೇಬೇಕು ಎನ್ನುವ ವಾಸ್ತವ ನಮಗೆ ಚೆನ್ನಾಗಿ ಗೊತ್ತು. ಈ ಕಳೆದುಕೊಳ್ಳುವ ಪಟ್ಟಿಯಲ್ಲಿ ಭಾಷೆ, ಭಾವನೆ ಏನು ಬೇಕಾದರೂ ಇರಬಹುದು.

ಮತ್ತೆಮತ್ತೆ ಒದಿಸಿಕೊಳ್ಳುತ್ತಿರುವ ‘ಚಂದನವ ಕಡಿದು ಕೊರೆದು ತೇದಡೆ/ ನೊಂದೆನೆಂದು ಕಂಪ ಬಿಟ್ಟಿತ್ತೆ?’ ಎನ್ನುವ ಅಕ್ಕಮಹಾದೇವಿಯ ವಚನಕ್ಕೂ ವರ್ತಮಾನದ ತಲ್ಲಣಗಳಿಗೂ ಎತ್ತಣ ಸಂಬಂಧ? ಈ ಸಂಬಂಧವನ್ನು ಸ್ಪಷ್ಟಗೊಳಿಸುವ ಉದಾಹರಣೆಗಳಂತೆ ಪ್ರತಿಭಾ ರವಿಶಂಕರ್ ಮತ್ತು ತಾನಿಯಾ ಬ್ಯಾನರ್ಜಿ ಎನ್ನುವ ನತದೃಷ್ಟ ಹೆಣ್ಣುಮಕ್ಕಳ ಪ್ರಕರಣಗಳು ಕಾಡುತ್ತಿವೆ. ಕೊಲೆಗೀಡಾದ ಈ ಇಬ್ಬರು ಕಾಲ್‍ಸೆಂಟರ್‌ಗಳಲ್ಲಿ ಕೆಲಸ ಮಾಡುತ್ತಿದ್ದ ನತದೃಷ್ಟ ಹೆಣ್ಣಮಕ್ಕಳು, ಇಬ್ಬರೂ ಒಳ್ಳೆಯ ಸಂಬಳ ಹೊಂದಿದ್ದರು. ಇಬ್ಬರೂ ಕೊಲೆಯಾದುದು ಲೈಂಗಿಕ ಕಾರಣಗಳಿಗಾಗಿ. ಪ್ರತಿಭಾ ಕಾಮುಕನ ತೃಷೆಗೆ ಬಲಿಯಾದರೆ, ತಾನಿಯಾ ತನ್ನ ಗೆಳೆಯನಿಂದಲೇ ಕೊಲೆಯಾದಳು. ಕೊಲೆಗಳ ನಂತರ ಕಾಲ್‍ಸೆಂಟರ್‍ಗಳಲ್ಲಿನ ಮುಕ್ತ ವಾತಾವರಣವನ್ನು ಆಕ್ಷೇಪಿಸುವ ಹಾಗೂ ಅಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳ ಭದ್ರತೆಯ ಬಗ್ಗೆ ಅನುಮಾನ ವ್ಯಕ್ತಪಡಿಸುವ ಅದೇ ಕಾಲಕ್ಕೆ ಅವರ ನಡತೆಯ ಬಗ್ಗೆಯೂ ಅನುಮಾನ ವ್ಯಕ್ತಪಡಿಸುವ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾದವು.

ಪ್ರತಿಭಾ ಮತ್ತು ತಾನಿಯಾ ಹಾಗೂ ಆಕ್ಕಮಹಾದೇವಿಯ ನಡುವಣ ಹೋಲಿಕೆ, ಅವರೆಲ್ಲರೂ ಮಹಿಳೆಯರಾಗಿದ್ದರು ಎನ್ನುವ ಒಂದೇ ಲಕ್ಷಣಕ್ಕೆ ಕೊನೆಗೊಳ್ಳುತ್ತದೆ. ಅಕ್ಕನ ಹಾದಿಯೇ ಬೇರೆ. ನತದೃಷ್ಟ ಹುಡುಗಿಯರ ಸಂಗತಿಯೇ ಬೇರೆ. ಆದರೆ ಅಕ್ಕ ಕೂಡ ಒಂದು ಬಗೆಯ ಲೈಂಗಿಕ ಶೋಷಣೆಗೆ ಒಳಗಾಗಿದ್ದಳು ಎನ್ನುವುದನ್ನು ಮರೆಯುವಂತಿಲ್ಲ.

ಜಾಗತೀಕರಣದ ಸಂದರ್ಭದಲ್ಲಿ ದೇಹದ ಕೊಳೆಯಷ್ಟೇ ಸಲೀಸಾಗಿ ದೇಸೀತನವನ್ನು ನೀಗಿಕೊಳ್ಳುತ್ತಿರುವ ವಾಸ್ತವ ಹಾಗೂ ಕಾಲ್‍ಸೆಂಟರ್ ಹೆಣ್ಣುಮಕ್ಕಳ ದುರಂತಗಳು ಮಾಹಿತಿ ತಂತ್ರಜ್ಞಾನ ಯುಗದ ಜಾಣಜಾಣೆಯೆರ ಬದುಕಿನ ಗುರಿಯನ್ನು ಬೆಟ್ಟು ಮಾಡುತ್ತಿದೆ ಅನ್ನಿಸುತ್ತದೆ. ಮೇಲ್ನೋಟಕ್ಕೆ ತಾಳೆಯಾಗದಂತೆ ಕಾಣುವ ಈ ಸಂಗತಿಗಳಿಗೆ ಪರಸ್ಪರ ಸಂಬಂಧವಿದೆ. ಬದುಕಿನ ಎಲ್ಲ ಮಗ್ಗುಲುಗಳನ್ನು ಹಣವೇ ಆವಾಹಿಸಿಕೊಂಡಿರುವ ಸಂದರ್ಭದಲ್ಲಿ ಮೌಲ್ಯಗಳೂ ಕ್ಲೀಷೆ ಅನ್ನಿಸುವುದರಲ್ಲಿ ಆಶ್ಚರ್‍ಯೇವೇನೂ ಇಲ್ಲ. ಈ ಬೆರಗು ಹಾಗೂ ಆತಂಕದಲ್ಲೇ ಅಕ್ಕನ ಕವಿತೆ ಮರೆತುಹೋದ ಹಾದಿಯನ್ನು ನೆನಪಿಸುವಂತೆ ಕಾಣುತ್ತಿದೆ.

ವರ್ತಮಾನದ ತಲ್ಲಣಗಳಿಗೆ ಉತ್ತರವಾಗಿ ಕಂಡ ಆಕ್ಕನ ವಚನ ಈ ರೀತಿ ಇದೆ:

ಚಂದನವ ಕಡಿದು ಕೊರೆದು ತೇದಡೆ
ನೊಂದೆನೆಂದು ಕಂಪ ಬಿಟ್ಟಿತ್ತೆ?
ತಂದು ಸುವರ್ಣವ ಕಡಿದೊರೆದಡೆ
ಬೆಂದು ಕಳಂಕ ಹಿಡಿಯಿತ್ತೆ?
ಸಂದುಸಂದು ಕಡಿದ ಕಬ್ಬನು ತಂದು ಗಾಣದಲ್ಲಿಕ್ಕಿ ಅರೆದಡೆ,
ಬೆಂದು ಪಾಕಗುಡದೆ ಸಕ್ಕರೆಯಾಗಿ ನೊಂದೆನೆಂದು ಸಿಹಿಯಬಿಟ್ಟಿತ್ತೆ?
ನಾ ಹಿಂದೆ ಮಾಡಿದ ಹೀನಂಗಳೆಲ್ಲವ ತಂದು
ಮುಂದಿಳುಹಲು ನಿಮಗೇ ಹಾನಿ,
ಎನ್ನ ತಂದೆ ಮಲ್ಲಿಕಾರ್ಜುನಯ್ಯಾ,
ನೀ ಕೊಂದಡೆಯೂ ಶರಣೆಂಬುದ ಮಾಣೆ.

ಚೆಲುವಾದ, ಮೊದಲ ಓದಿಗೆ ಸರಳ ಎನ್ನಿಸುವ ವಚನವಿದು. ಅಕ್ಕ ಮಹಾದೇವಿಯ ಉಳಿದ ವಚನಗಳಲ್ಲಿನ ಅರ್ಥದ ತಿಳಿ, ಮಾಧುರ್ಯ ಈ ವಚನದಲ್ಲಿಯೂ ಇದೆ.

‘ಚಂದನವ ಕಡಿದು ಕೊರೆದು ಅರೆದೊಡೆ’ ಎನ್ನುವ ಮೊದಲ ಸಾಲು ಸುಲಭವಾಗಿ ಅರ್ಥವಾಗುತ್ತದೆ. ಮರವನ್ನು ಕಡಿಯುವುದು ಮನುಷ್ಯ ಸಹಜ ಸ್ವಭಾವ. ಗಾಯಗೊಂಡ ಮನುಷ್ಯ ದ್ವೇಷ ಸಾಧಿಸುತ್ತಾನೆಯೇ ಹೊರತು ಮರಗಳಿಗೆ ಹಗೆತನ ಗೊತ್ತಿಲ್ಲ. ಅದು ಬೇರೆಯದೇ ವಿಷಯ. ಇಲ್ಲಿನ ಶ್ರೀಗಂಧದ ಮರವನ್ನು ನೋಡಿ. ಮರವನ್ನು ಕಡಿಯಲಾಗಿದೆ. ಅದರ ಕೆಲವು ಭಾಗಗಳನ್ನು ತಿದ್ದಿ ತೀಡಿ ಕೊರೆದು ಮೂರ್ತಿಗಳನ್ನಾಗಿ ಮಾಡಲಾಗಿದೆ. ಕೆಲವು ತುಣುಕುಗಳನ್ನು ತೇದು ದೇಹಕ್ಕೆ ಧರಿಸುವ ಗಂಧವನ್ನಾಗಿ ಪರಿವರ್ತಿಸಲಾಗುತ್ತದೆ. ರೂಪಾಂತರ ಅದೇನೇ ಇರಲಿ, ಗಂಧದ ಕಂಪು ಮಾತ್ರ ಕೊಂಚವೂ ಕಡಿಮೆ ಆಗುವುದಿಲ್ಲ. ತೇದಷ್ಟೂ ಗಂಧದ ಪರಿಮಳ ಹೆಚ್ಚುತ್ತಲೇ ಇರುತ್ತದೆ.

ಅಕ್ಕಮಹಾದೇವಿಯ ವಚನದ ಎರಡನೇ ಚರಣ ಚಿನ್ನದ ಶ್ರೇಷ್ಠತೆಗೆ ಸಂಬಂಧಿಸಿದ್ದು. ಅಕ್ಕಸಾಲಿಗನ ಕುಲುಮೆಯಲ್ಲಿ ಬೆಂದಷ್ಟೂ ಹದಗೊಳ್ಳುವ ಬಂಗಾರ, ಕುಸುರಿಕಲೆಯಲ್ಲಿ ಆಭರಣವಾಗಿ ಅರಳುತ್ತದೆ. ಈ ಬೇಯುವ ಅರೆಯುವ ಕ್ರಿಯಯಲ್ಲಿ ಬಂಗಾರ ಪರಿಶುದ್ಧಗೊಳ್ಳುವುದೇ ಹೊರತು, ಕಲುಷಿತಗೊಳ್ಳುವ ಪ್ರಶ್ನೆಯೇ ಇಲ್ಲ.

ವಚನದ ಮೂರನೇ ಚರಣ ಕೂಡ ಗುಣವಿಶೇಷಣಕ್ಕೆ ಸಂಬಂಧಪಟ್ಟಿದ್ದೇ ಆಗಿದೆ. ಕಬ್ಬನ್ನು ತಂದು, ಅದರ ಗೆಣ್ಣುಗಳನ್ನು ಸವರಿ ಗಾಣದಲ್ಲಿಕ್ಕಿ ಅರೆಯಲಾಗುತ್ತದೆ. ನಾವೀಗ ಗಾಣದ ಮನೆಯನ್ನು ಅಂದರೆ ಆಲೆಮನೆಯನ್ನು ನೆನಪಿಸಿಕೊಳ್ಳಬೇಕು, ಆಲ್ಲಿಹೊರೆಹೊರೆ ಕಬ್ಬು ಗಾಣದ ಬಾಯಿಗೆ ಸಿಕ್ಕಿ ನಜ್ಜುಗುಜ್ಜಾಗಿ ರಸ ಕಕ್ಕುತ್ತದೆ. ಕಬ್ಬಿನ ರಸ ದೊಡ್ಡ ಕೊಪ್ಪರಿಗೆಗಳಲ್ಲಿ ಸಂಗ್ರಹವಾಗುತ್ತದೆ. ಆ ಬೆಂಕಿಯ ಮೂಲವಾದರೂ ಯಾವುದು? ರಸ ಕಳೆದುಕೊಂಡು ಶುಷ್ಕವಾದ ಕಬ್ಬಿನ ಸಿಪ್ಪಯೇ ಬೆಂಕಿಯಾಗಿ ಉರಿಯುತ್ತದೆ. ರಸ ಕುದ್ದು ಒಂದು ಹದದಲ್ಲಿ ಸಕ್ಕರೆಯಾಗುತ್ತದೆ. ಇದೆಲ್ಲ ನೋವಿನ ಪ್ರಕ್ರಿಯೆಯ ನಡುವೆಯೂ ಕಬ್ಬಿನ ಸಹಜ ಸಿಹಿ ಯಾವ ಹಂತದಲ್ಲಿಯೂ ಕೊಂಚವೂ ಕಡಿಮೆಯಾಗುವುದಿಲ್ಲ. ನೊಂದೆನೆಂದು ಕಬ್ಬು ಸಿಹಿಯ ಬಿಟ್ಟುಕೊಡುವುದಿಲ್ಲ.

ಮತ್ತೆ ವಚನವನ್ನು ಮೊದಲಿಂದ ಓದಿಕೊಳ್ಳೋಣ. ತೀಡಿದಷ್ಟೂ ಪರಿಮಳ ನೀಡುವ ಚಂದನ, ಪುಟವಿಟ್ಟಷ್ಟೂ ಹೊಳೆಯುವ ಚಿನ್ನ, ಬೆಂದು ಪಾಕವಾಗಿ ಸಕ್ಕರೆಯಾಗುವ ಕಬ್ಬು- ಇವೆಲ್ಲ ನಮ್ಮ ಅನುಭವಕ್ಕೆ ನಿಲಾಕುವ ಸಂಗತಿಗಳೇ ಆಗಿವೆ. ಆದರೆ ವಚನದ ಮುಂದಿನ ಸಾಲುಗಳಲ್ಲಿ ಅಕ್ಕ ಅಂತರ್‍ಮುಖಿಯಾಗುತ್ತಾಳೆ.

ಗಂಧ, ಚಿನ್ನ ಕಬ್ಬಿನ ಉದಾಹರಣೆಗಳ ನಂತರ ಅಕ್ಕ ಹೇಳುತ್ತಾಳೆ:

ನಾ ಹಿಂದೆ ಮಾಡಿದ ಹೀನಂಗಳೆಲ್ಲವ
ತಂದು ಮುಂದಿಳುಹಲು ನಿಮಗೇ ಹಾನಿ
ಎನ್ನ ತಂದೆ ಚನ್ನಮಲ್ಲಿಕಾರ್ಜುನಯ್ಯಾ
ನೀ ಕೊಂದಡೆಯೂ ಶರಣೆಂಬುದ ಮಾಣೆ

ವಚನದ ಮೊದಲ ಭಾಗದಲ್ಲಿ ಲೋಕದ ಸಂಗತಿಗಳನ್ನು ಹೇಳುವ ಅಕ್ಕ, ಉತ್ತರಾರ್ಧದಲ್ಲಿ ಅಂತರ್ಮುಖಿಯಾಗಿಬಿಡುತ್ತಾಳೆ. ಚನ್ನಮಲ್ಲಿಕಾರ್ಜುನನ ಕುರಿತ ತನ್ನ ಬದಲಾಗದ ನಿಷ್ಠೆಯನ್ನು ಅತ್ಯಂತವಾಗಿ ನಿವೇದಿಸಿಕೊಳ್ಳುತ್ತಿದ್ದಾಳೆ. ಆ ನಿಷ್ಠೆಯಾದರೊ ಎಂತಹುದು?

ಮುನ್ನ ಮಾಡಿದ ಅಪರಾಧಗಳೆನ್ನಲ್ಲವನ್ನು ಪಟ್ಟಿ ಮಾಡಿ ಮುಂದಿಟ್ಟು, ಈ ಕಾರಣಗಳಿಂದಾಗಿ ನೀನು ನನ್ನ ಸಂಗಕ್ಕೆ ಯೋಗ್ಯಳಲ್ಲ ಎಂದು ಚನ್ನಮಲ್ಲಿಕಾರ್ಜುನ ನಿರಾಕರಿಸಿದರೂ ಅಕ್ಕ ಸೋಲುವಳಲ್ಲ. ಇಂಥ ನಿರಾಕರಣೆಯಿಂದ ನಿಮಗೇ ಹಾನಿ ಎನ್ನುವುದು ಆಕೆಯ ಸ್ಪಷ್ಟ ನಿಲುವು. ಅಂದರೆ ಪಾಪಗಳ ಮುಂದಿರಿಸಿ ನಿರಾಕರಿಸುವುದು ವ್ಯರ್ಥ ಕಸರತ್ತೇ ಹೊರತು, ಅದರಿಂದ ಯಾವುದೇ ಉಪಯೋಗವಿಲ್ಲ, ಏಕೆಂದರೆ ಅಕ್ಕ ಚನ್ನಮಲ್ಲಿಕಾರ್ಜುನನಿಗೆ ಶರಣಾಗಿದ್ದಾಳೆ. ದಂಡಿಸಿದಷ್ಟೂ ತಾಯಿಗೆ ಜೋತು ಬೀಳುವ ಕೂಸಿನ ಮನಸ್ಥಿತಿ ಅಕ್ಕನದು. ಅದು ಕೊಂದರೂ ಬದಲಾಗದ ಶರಣಾಗತಿ ಭಾವ.

ಅದೆಲ್ಲಾ ಸರಿ. ಚಂದನದ ಕಂಪಿಗೊ, ಪುಟವಿಟ್ಟ ಚಿನ್ನದ ಹೊಳಪಿಗೂ, ಸಿಹಿಯ ಮತ್ತೊಂದು ರೂಪವಾಗಿ ಬದಲಾದ ಕಬ್ಬಿಗೂ ಹಾಗೂ ಅಕ್ಕನ ಶರಣಾಗತಿಗೂ ಎತ್ತಣ ಸಂಬಂಧ? ವಚನ ಮರು ಓದನ್ನು ಬಯಸುವುದೂ ಇಲ್ಲಿಯೇ. ಸೂಕ್ಷ್ಮವಾಗಿ ಗಮನಿಸಿ. ಶ್ರೀಗಂಧದದ ಪರಿಮಳ ಹೆಚ್ಚಳವಾಗುವ ಹಿನ್ನೆಲೆಯಲ್ಲೊಂದು ನೋವಿದೆ. ಚಿನ್ನ ಶುದ್ದಗೊಳ್ಳುವ, ಆಭರಣವಾಗಿ ಪರಿವರ್ತನೆಗೊಳ್ಳುವ ಹಾದಿಯಲ್ಲೊಂದು ನೋವಿದೆ. ಕಬ್ಬು ಗಾಣದ ಬಾಯಿಯಿಂದ ಹಾದು, ಕೊಪ್ಪರಿಗೆಯಲ್ಲಿ ಬೆಂದು ಸಕ್ಕರೆಯಾಗಿ ಹರಳುಗಟ್ಟುವ ಪ್ರಕ್ರಿಯೆಯಲ್ಲೂ ನೋವಿದೆ. ಇಂಥದ್ದೇ ಸಂಕಟಗಳ ಹಾದಿಯಲ್ಲಿ ಪರೀಕ್ಷೆಗಳ ಅಗ್ನಿದಿವ್ಯಗಳಲ್ಲಿ ಅಕ್ಕ ಹಾದುಬಂದಿದ್ದಾಳೆ. ಅಂತಿಮವಾಗಿ ಆಕೆಯ ಬದುಕಿನ ಸಾರ್ಥಕತೆಯ ಪರಿಮಳ-ಸಿಹಿ-ಪರಿಶುದ್ದತೆ ಸಾಧ್ಯವಾಗಿರುವುದು ಚನ್ನಮಲ್ಲಿಕಾರ್‍ಜುನನ ಸಂಗದಲ್ಲಿ, ಶರಣಾಗತಿಯಲ್ಲಿ.

ವಚನದಲ್ಲಿನ ಚಂದನ, ಸುವರ್ಣ, ಕಬ್ಬು ಹಾಗೂ ಅಕ್ಕಮಹಾದೇವಿಯನ್ನು ಬೇರೆಬೇರೆಯಾಗಿ ನೋಡಬೇಕಿಲ್ಲ ಪುಟವಿಟ್ಟಷ್ಟೂ ಹೊಳೆಯುವ ಚಿನ್ನದಂತೆ, ತೇದಷ್ಟೂ ಇಮ್ಮಡಿಗೊಳ್ಳುವ ಗಂಧದ ಪರಿಮಳದಂತೆ, ನೊಂದಷ್ಟೂ ಸಿಹಿಯ ಬಿಟ್ಟುಕೊಡುವ ಕಬ್ಬಿನಂತೆ, ಪರೀಕ್ಷೆಗಳು ಎದುರಾದಂತೆಲ್ಲ ಅಕ್ಕಮಹಾದೇವಿಯ ಹಾದಿ ನಿಚ್ಚಳವಾಗಿದೆ. ಆ ದಾರಿಯಾದರೂ ಎಂತಹುದು?

ಹರಯ ಕಣ್ತೆರೆಯುವ ಸಮಯದಲ್ಲಿ ಎದುರಾದವನು ಕೌಶಿಕ. ಆತನ ಅಧಿಕಾರ, ಶ್ರೀಮಂತಿಕೆ, ದೇಹಮದವನ್ನು ತಿರಸ್ಕರಿಸಿ ಅರಮನೆಯಿಂದ ಅರಿವಿನ ದಾರಿಗೆ ನಡೆದವಳು ಅಕ್ಕ, ಈ ಹಾದಿಯಲ್ಲಿ ದೇಹದ ಮೇಲಿನ ಮೋಹವನ್ನು ಕಳೆದುಕೊಂಡಳು. ಆಕೆ ತನ್ನ ದೇಹದ ಮೇಲಿನ ಮೋಹವನ್ನು ತೊರೆದರೂ, ಲೋಕದ ಕಣ್ಣಿಗೆ ಮಾತ್ರ ಅಕೆಯೂ ಒಂದು ಹೆಣ್ಣು! ಅದರಲ್ಲೂ ಯೌವನ ತುಂಬಿದ ಹೆಣ್ಣು. ಅನುಭವ ಮಂಟಪದಲ್ಲಿ ಅಲ್ಲಮಪ್ರಧು ಕೂಡ ಇದೇ ಮಾತನ್ನಾಡುತ್ತಾನೆ.

ಉದಮದದ ಯೌವನವನೊಳಕೊಂಡ ಸತಿ ನೀನು
ಇತ್ತಲೇಕೆ ಬಂದೆಯವ್ವಾ?
ಸತಿಯೆಂದರೆ ಮುನಿವರು ನಮ್ಮ ಶರಣರು
ನಿನ್ನ ಪತಿಯ ಕುರುಹ ಹೇಳಿದರೆ ಬಂದು ಕುಳ್ಳಿರು
ಅಲ್ಲವಾದರೆ ತೊಲಗು ತಾಯೆ

– ಎನ್ನುವ ಆಲ್ಲಮ, ಅಕ್ಕನ ಕುರಿತ ಸಮಾಜದ ಸಂಶಯಕ್ಕೆ ಮಾತು ನೀಡುತ್ತಾನೆ. ಆಕೆಯ ನಿಗ್ರಹ ಶಕ್ತಿಯನ್ನು ಪ್ರಶ್ನಿಸುತ್ತಾನೆ.

ಆಲ್ಲಮನ ಶಂಕೆಗೆ ಅಕ್ಕನದು ಸ್ಪಷ್ಟ ಉತ್ತರ: ಶಿವ ಮನ್ಮಥನ ಕೊಂದ. ಆನಂತರ ಕರುಣೆಯಿಂದ, ಎಲ್ಲರ ಮನಸ್ಸಿನಲ್ಲಿ ನೀನು ಹುಟ್ಟು ಎಂದು ಮನ್ಮಥನನ್ನು ಮನಸಿಜನನ್ನಾಗಿ ಮಾಡಿದ. ಆ ಮನಸಿಜನ ಹಣೆಯ ಬರಹವನ್ನೇ ತೊಡೆದು ಹಾಕಿದವಳು ನಾನು. ಅಂದರೆ ನಾನು ಕಾಮಮುಕ್ತಳು ಎನ್ನುತ್ತಾಳೆ.

ಅಲ್ಲಮ ಬಡಪೆಟ್ಟಿಗೆ ಬಗ್ಗುವುದಿಲ್ಲ. ದೇಹವನ್ನು ಕೂದಲಿನಿಂದ ಮುಚ್ಚಿದ ಅಕ್ಕನ ಉದ್ದೇಶವನ್ನೇ ಪ್ರಶ್ನಿಸಿ, ದೇಹದ ಮೋಹದಿಂದ ನೀನಿನ್ನೂ ಮುಕ್ತಳಾಗಿಲ್ಲ ಎನ್ನುತ್ತಾನೆ. ಅಕ್ಕನೋ ಜಾಣ ಶಿಷ್ಯೆ. ಗುರುವಿನ ಮಾತನ್ನೇ ತಿರುಗಿಸುತ್ತಾಳೆ. ‘ನೀವೇ ಹೇಳಿದಂತೆ ಉದಮದದ ಹೆಣ್ಣು ನಾನು. ಈ ಹೆಣ್ಣಿನ ಕಾಮಮುದ್ರೆಯ ಕಂಡು ನಿಮಗೆ ನೋವಾದೀತು’ ಎಂದು ಕೇಶವಸ್ತ್ರವ ಧರಿಸಿದುದಾಗಿ ಹೇಳುತ್ತಾಳೆ.

‘ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚೆಲುವಂಗೆ
ಭವವಿಲ್ಲದ ಭಯವಿಲ್ಲದ ನಿರ್ಭಯ ಚೆಲುವಂಗೆ
ನಾನೊಲಿದೆನಯ್ಯಾ, ಚೆನ್ನಮಲ್ಲಿಕಾರ್ಜುನ ಗಂಡನೆನಗೆ,
ಮಿಕ್ಕಿನ ಲೋಕದ ಗಂಡರೆನಗೆ ಸಂಬಂಧವಿಲ್ಲವಯ್ಯಾ’

ಎಂದು ಆಕ್ಕ ತನ್ನ ಪುರುಷನ ವಿಳಾಸವ, ತನ್ನ ಸತೀತ್ವದ ನಿಷ್ಟೆಯ ಪ್ರಕಟಪಡಿಸುತ್ತಾಳೆ. ಅಲ್ಲಮನಿಗೆ ಒಪ್ಪಿಕೊಳ್ಳದೆ ವಿಧಿಯಿಲ್ಲ.

‘ತನುವಿನೊಳಗಿದ್ದು ತನುವ ಗೆದ್ದಳು
ಮನದೊಳಗಿದ್ದು ಮನವ ಗೆದ್ದಳು
ವಿಷಯದೊಳಗಿದ್ದು ವಿಷಯಂಗಳ ಗೆದ್ದಳು’

– ಎಂದು ಅನುಭವ ಮಂಟಪ ಆಕ್ಕಮಹಾದೇವಿಯ ಶ್ಲಾಘಿಸುತ್ತದೆ. ಇದು ಅಕ್ಕ ಸಾಗಿಬಂದ ಪರೀಕ್ಷೆ ಹಾಗೂ ಆ ಪರೀಕ್ಷೆಯಲ್ಲಿ ಅವಳ ವ್ಯಕ್ತಿತ್ವ ಉಜ್ಜಲವಾಗಿ ಪ್ರಕಟಗೊಂಡ ಒಂದು ಉದಾಹರಣೆ. ಪುಟವಿಟ್ಟಾಗ ಚಿನ್ನ ಕಂಗೊಳಿಸುತ್ತದಲ್ಲ- ಅಂಥ ಉದಾಹರಹೆ.

ಈ ಪರೀಕ್ಷೆಯ ಹಾದಿಯಲ್ಲಿ ಅಕ್ಕ ಉದ್ಗರಿಸುತ್ತಾಳೆ-

ಉಡುವೆ ನಾನು ಲಿಂಗಕ್ಕೆಂದು
ತೊಡುವೆ ನಾನು ಲಿಂಗಕ್ಕೆಂದು
ಮಾಡುವೆ ನಾನು ಲಿಂಗಕ್ಕೆಂದು
ನೋಡುವೆ ನಾನು ಲಿಂಗಕ್ಕೆಂದು
ಎನ್ನಂತರಂಗ ಬಹಿರಂಗಗಳು ಲಿಂಗಕ್ಕಾಗಿ.

ಲಿಂಗವನ್ನು ಹೊರತುಪಡಿಸಿ ತನಗೆ ಬದುಕೇ ಇಲ್ಲ ಎನ್ನುವ ಈ ವಚನ, ‘ನೀ ಕೊಂದಡೆಯೂ ಶರಣೆಂಬುದ ಮಾಣೆ’ ಎನ್ನುವ ಸಾಲಿಗೆ ಸಮರ್ಥನೆಯಂತಿದೆ.

ಶರಣಾಗತಿ ಅಕ್ಕಮಹಾದೇವಿಗೆ ಮಾತ್ರ ಸೀಮಿತವಾದುದಲ್ಲ. ಎಲ್ಲ ಶರಣರೂ ತಮ್ಮ ತಪ್ಪುಗಳನು ಒಪ್ಪಿಕೊಂಡು, ಲಿಂಗಕೆ ಶರಣು ಎಂದವರೇ. ಬಸವಣ್ಣನನ್ನೇ ನೋಡಿ: ‘ಎನ್ನ ತಪ್ಪು ಅನಂತಕೋಟಿ/ನಿಮ್ಮ ಸೈರಣೆಗೆ ಲೆಕ್ಕವಿಲ್ಲವಯ್ಯಾ’ ಎನ್ನುತ್ತಾರೆ. ಇದೇ ಬಸವಣ್ಣ

ಬೆದಕದಿರು ಬೆದಕದಿರು; ಬೆದಕಿದರೆ ಹುರುಳಿಲ್ಲ
ಚಿತ್ತರಟ್ಟೆಯ ಕಾಯಲ್ಲಿ ಮತ್ತೇನನರಸುವಿರಿ
ನಿಮ್ಮುತ್ತಮಿಕೆಯ ಮೆರೆಯಯ್ಯಾ ಕೂಡಲಸಂಗಮದೇವಾ

-ಎನ್ನುತ್ತಾರೆ.

‘ನಿಮ್ಮುತ್ತಮಿಕೆಯ ಮೆರೆಯಯ್ಯಾ ಎನ್ನುವ ಮಾತು, ಹೀನಂಗಳೆಲ್ಲವ ತಂದು ಮುಂದಿಳುಹಲು ನಿಮಗೇ ಹಾನಿ’ ಎನ್ನುವ ಅಕ್ಕನ ವಚನದ ಸಾಲನ್ನು ನೆನಪಿಸುವಂತಿದೆ.

ಭಕ್ತಿ ಹಾಗೊ ಬಂಡಾಯದ ಬಗ್ಗೆ ಮಾತನಾಡುವಾಗಲೆಲ್ಲ ಅಕ್ಕನ ನೆನಪಾಗುತ್ತದೆ. ಈ ಎರಡೂ ಮುಖಗಳನ್ನು ‘ಚಂದನವ ಕಡಿದು…’ ವಚನದಲ್ಲಿಯೂ ಕಾಣಬಹುದು. ಶರಣಾಗತಿ ಆಕೆಯ ಭಕ್ತಿಯ ಮುಖ. ‘ಹೀನಂಗಳೆಲ್ಲವ ತಂದು ಮುಂದಿಳುಹಲು ನಿಮಗೇ ಹಾನಿ’ ಎನ್ನುವ ಎಚ್ಚರಿಕೆಯಲ್ಲಿ ‘ನೀ ಕೊಂದರೂ ಶರಣೆಂಬುದ ಮಾಣೆ’ ಎನ್ನುವ ನಿಶ್ಚಯದಲ್ಲಿ ಆಕೆಯ ಬಂಡಾಯ ಮನೋಧರ್‍ಮವಿದೆ.

ಅಕ್ಕನ ಬದುಕು, ಭಕ್ತಿ ಎಲ್ಲವನ್ನೂ ಮರೆತು ‘ಚಂದನವ..’ ವಚನವನ್ನು ಆಸ್ವಾದಿಸಬಹುದು. ಇದು ಬೆಳದಿಂಗಳಿನ ಸಹಜ ಸೌಂದರ್‍ಯ ಮೈಗೂಡಿಸಿಕೊಂಡಿರುವ ಕವಿತೆ. ಬಂಡಾಯ-ಭಕ್ತಿ ಎಲ್ಲವನ್ನೂ ಮೀರಿದ ಚೆಲುವನ್ನು ಅಂತರ್‍ಗತವಾಗಿಸಿಕೊಂಡಿರುವ ಕವಿತೆ.
* * *

ವಚನದ ಚಂದನ, ಚಿನ್ನ ಕಬ್ಬನ್ನು ಮತ್ತೆ ನೆನೆಯಬೇಕು. ಗಂಧದ ಪರಿಮಳ, ಚಿನ್ನದ ಪ್ರಭೆ, ಕಬ್ಬಿನ ಸಿಹಿ- ಅವುಗಳ ಸಹಜ ಗುಣ. ಆದರೆ ಈ ಗುಣಗಳು ಅನುಭವಕ್ಕೆ ಬರಬೇಕಾದರೆ, ಅಭಿವ್ಯಕ್ತಗೊಳ್ಳಬೇಕಾದರೆ ಅಗ್ನಿದಿವ್ಯಕ್ಕೆ ಈಡಾಗಲೇಬೇಕು.

ಕೃತಕ ಪರಿಮಳ, ಕೃತಕ ಸಿಹಿ, ಕೃತಕ ಪ್ರಭೆಗಳನ್ನು ಸೃಷಿಸುತ್ತಿರುವ ಕಾಲದಲ್ಲಿ ಬದುಕತ್ತಿರುವವರು ನಾವು. ಇಂಥ ಸಂದರ್‍ಭದಲ್ಲಿ ಅಕ್ಕನ ಅಗ್ನಿದಿವ್ಯದ ಹಾದಿ ಕೃತಕವಾಗಿ ಕಂಡರೆ ಅಚ್ಚರಿಯಿಲ್ಲ. ಆದರೆ ಇಂದಿನ ಬಹುತೇಕ ತಳಮಳ, ಬಿಕ್ಕಟ್ಟುಗಳಿಗೆ ಈ ಅಗ್ನಿದಿವ್ಯದ ಹಾದಿಯಲ್ಲಿಯೇ ಉತ್ತರವಿದೆ. ಅದನ್ನು ಕಂಡುಕೊಳ್ಳುವ ಸಹನೆ ನಮಗೆ ಬೇಕಷ್ಟೇ?
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...