ಮುಚ್ಚು ಮುಚ್ಚು ಬಾಗಿಲ
ಜೀವವಾಯ್ತು ವ್ಯಾಕುಲ.
ಹೊರಗೆ ಬರಿಯ ಬಿಸಿಲು ಧೂಳಿ
ದೇಹ ಮನವನೆಲ್ಲ ಹೂಳಿ
ಮೇಲೆ ಕುಣಿವಳವಳು ಕಾಳಿ
ನೋವು ನರನ ಕೊರಳ ತಾಳಿ!
ಮುಚ್ಚು ಮುಚ್ಚು ಬಾಗಿಲ
ಜೀವವಾಯ್ತು ವ್ಯಾಕುಲ.
ಎಲ್ಲ ಕಡೆಗೆ ವಿಷದ ಗಾಳಿ
ತಡೆಯಲಾರೆ ಅದರ ದಾಳಿ
ನನ್ನ ಬಾಳು ಬಿಳಿಯ ಹಾಳಿ
ಗೀಚುತಿಹರು ದುಃಖ ಬಳ್ಳಿ
ಎಂಥ ಕೀಳು ಜನವಲ
ಮುಚ್ಚು ಮುಚ್ಚು ಬಾಗಿಲ.
ನನ್ನದು ಇದು ಸಖಿ ದೇಗುಲ
ನೀ ಕಟ್ಟಿದ ಮನೆ ಮಂಗಲ
ನಿನ್ನೊಲುಮೆಯ ಸಿರಿ ಸೋಜ್ವಲ
ಚಂದ್ರಚಾರು ಮನ ಬಾಂದಳ
ನನ್ನಾಸೆಯ ತವರಲ
ಮುಚು ಮುಚ್ಚು ಬಾಗಿಲ.
ದೈವೋದ್ಧತ ಪ್ರಹರಿತ ಧರೆ
ಜನಮನವನು ಕಚ್ಚಿತು ಜರೆ
ಸ್ನೇಹಮೂರ್ತಿ ನೀ ನಿರ್ಜರೆ
ನಿನ್ನೆಡೆಯಲಿ ಇಲ್ಲ ಅರೆ
ಮುಚ್ಚು ಮುಚ್ಚು ಬಾಗಿಲ
ಜೀವ ವಾಯ್ತು ವ್ಯಾಕುಲ.
ಕುಣಿಯುತಿರಲಿ ಕೆಡುಕು ಪಡೆ
ಈ ಹೊಸತಿಲದಾ ಹೊರಗಡೆ
ನೀನಿರುತಿರೆ ನನ್ನಕಡೆ
ಬೇರೆ ಬೇರೆ ಅಡ್ಡಿ ತಡೆ
ಸಖಿಯೆ ನೀನು ಸ್ನೇಹಲ
ಮುಚ್ಚು ಮುಚ್ಚು ಬಾಗಿಲ.
ಕಮಲೋದರದತಿ ಕೋಮಲ
ಬೆಳುದಿಂಗಳ ಸುಖ ಶೀತಲ
ಆಲಿಂಗನಕೆದೆ ವ್ಯಾಕುಲ
ವಿಸ್ಮೃತಿಗಿದು ಮಧು ಫೇನಿಲ
ನಿನ್ನ ಪ್ರೀತಿ ನಿಶ್ಚಲ
ಮುಚ್ಚು ಮುಚ್ಚು ಬಾಗಿಲ.
ಮುರಿದೆದೆಯಲಿ ನಾ ಬಂದರೆ
ಇದೆ ತೋಳ್ಗಳ ಈ ಸವಿಸೆರೆ
ದಣಿದವನಿಗೆ ನಿನ್ನಾಸರೆ
ನಗೆ ನಯಗಳು, ಮಧುರಾಧರೆ!
ಮುಚ್ಚು ಮುಚ್ಚು ಬಾಗಿಲ
ಜೀವವಾಯ್ತು ವ್ಯಾಕುಲ.
ಯಾನ ದೈವ ಜೋಡಿಸಿಹುದು
ನಮ್ಮೆದೆಗಳ ಕೂಡಿಸಿಹುದು
ಮಂಗಲವನು ಮೂಡಿಸಿಹದು.
ಕೆಡುಕೆಲ್ಲವನೋಡಿಸಿಹುದು
ಮುಚ್ಚು ಸಖಿಯೆ ಬಾಗಿಲ
ತೆರೆದು ಹೃದಯ ಸ್ನೇಹಲ
ಹೊಮ್ಮಿಸುತ್ತ ಪರಿಮಳ.
*****



















