ಪೊನ್ನಮ್ಮ

ಪೊನ್ನಮ್ಮ

ಇದು ಬಹಳ ವರ್ಷಗಳ ಹಿಂದಿನ ಕತೆ, ಒಂದೂರಿನಲ್ಲಿ ಒಬ್ಬ ಕೊಡಗನೂ ಒಬ್ಬ ಕೊಡಗಿತಿಯೂ ಇದ್ದರು. ಅವರಿಗೆ ಒಬ್ಬ ಮಗಳಿದ್ದಳು. ಅವಳ ಹೆಸರು ಪೊನ್ನಮ್ಮ. ಪೊನ್ನಮ್ಮ ಬಹಳ ಚೆಂದದ ಹುಡುಗಿ ಅವಳ ತಾಯಿಯು ಮನೆಗೆಲಸ ಮಾಡುವಾಗ ಚಿಕ್ಕ ಪೊನ್ನಮ್ಮ ಅಂಗಳದಲ್ಲಿ ಆಟವಾಡಿಕೊಂಡಿರುತ್ತಿದ್ದಳು. ಅವಳು ಎಂದೂ ಅತ್ತು ಕೊಂಡು ತಾಯಿಯನ್ನು ತೊಂದರೆಪಡಿಸುತ್ತಿರಲಿಲ್ಲ. ಅವಳ ತಂದೆ ಅವಳಿಗೊಂದು ಪುಟ್ಟ ನಾಯಿಮರಿಯನ್ನು ತಂದುಕೊಟ್ಟಿದ್ದನು. ಅದನ್ನು ಅವಳು ಬಹಳ ಪ್ರೀತಿಯಿಂದ ಸಾಕುತ್ತಿದ್ದಳು. ಅದಕ್ಕೆ ‘ಮೋತಿ’ ಎಂದು ಹೆಸರಿಟ್ಟುಕೊಂಡು ಅದರ ಜೊತೆಯಲ್ಲಿ ಆಡುತ್ತಿದ್ದಳು. ತಾಯಿಯ ಮನೆಗೆಲಸಗಳು ಮುಗಿಯುವ ಹೊತ್ತಿಗೆ ತಂದೆಯು ಗದ್ದೆಯಿಂದ ಮನೆಗೆ ಬರುತ್ತಿದ್ದನು. ತಂದೆ ಮನೆಗೆ ಬಂದ ಮೇಲೆ ಪುಟ್ಟ ಪೊನ್ನಮ್ಮನನ್ನು ಹತ್ತಿರ ಕರೆದು ಕೂರಿಸಿಕೊಂಡು ಪಾಠ ಹೇಳಿಕೊಡುತ್ತಿದ್ದನು. ತಾಯಿ ಕತೆಗಳನ್ನು ಹೇಳುತ್ತಿದ್ದಳು. ಹೀಗೆ ಅವರೆಲ್ಲರೂ ಬಹಳ ಸುಖವಾಗಿ ಇದ್ದರು.

ಪೊನ್ನಮ್ಮನಿಗೆ ಆರು ವರ್ಷಗಳಾದವು. ಅವಳು ಶಾಲೆಗೆ ಹೋಗತೊಡಗಿದಳು. ಶಾಲೆಯಲ್ಲಿಯೂ ಅವಳು ಬಹಳ ಚೆನ್ನಾಗಿ ಪಾಠ ಕಲಿತು ಒಳ್ಳೆಯವಳೆನಿಸಿಕೊಳ್ಳ ಹತ್ತಿದಳು. ಹೀಗಿರುವಾಗ ಒಂದು ದಿನ ಅವಳು ಶಾಲೆಯಿಂದ ಮನೆಗೆ ಬರುವಾಗ ಎಂದಿನಂತೆ ಅವಳ ತಾಯಿ ಬಾಗಿಲಲ್ಲಿರಲಿಲ್ಲ. ಯಾವಾಗಲೂ ಅವಳು ಬರುವುದನ್ನೇ ಕಾಯುತ್ತ ಅವಳ ತಾಯಿ ಬಾಗಿಲಲ್ಲಿ ನಿಂತಿರುವುದು ವಾಡಿಕೆ. ಆ ದಿನ ತಾಯಿಯನ್ನು ಕಾಣದೆ ಪೊನ್ನಮ್ಮನಿಗೆ ಆಶ್ಚರ್ಯವಾಯಿತು. ಅವಳು ಓಡುತ್ತ ಒಳಗೆ ಹೋಗಿ ‘ಅಮ್ಮಾ, ಅಮ್ಮಾ’ ಎಂದು ಕೂಗಿದಳು. ಅವಳ ತಾಯಿ ಮಲಗಿದ್ದಳು. ಪೊನ್ನಮ್ಮನನ್ನು ನೋಡಿ ‘ಇಲ್ಲಿ ಬಾ ಪೊನ್ನು’ ಎಂದಳು. ಪೊನ್ನಮ್ಮ ತಾಯಿಯ ಹತ್ತಿರ ಹೋದಳು. ಅವಳ ತಾಯಿಗೆ ಬಹಳ ಜ್ವರ ಬಂದಿತ್ತು. ಅಷ್ಟು ಹೊತ್ತಿಗೆ ಅವಳ ತಂದೆಯೂ ಬಂದನು. ತಾಯಿಗೆ ಜ್ವರ ಬಂದುದನ್ನು ನೋಡಿ ಮದ್ದು ತಂದುಕೊಟ್ಟನು. ಆ ದಿವಸವೆಲ್ಲ ಪೊನ್ನಮ್ಮ ತಾಯಿಯ ಹತ್ತಿರವೇ ಕೂತುಕೊಂಡು ಅವಳ ಸೇವೆ ಮಾಡಿದಳು. ಆದರೆ ಜ್ವರ ಮಾತ್ರ ಬಿಡಲೇ ಇಲ್ಲ.

ಬೆಳಗಾಗುವ ಮೊದಲೇ ಅವಳ ತಾಯಿ ಸತ್ತು ಹೋದಳು. ಪೊನ್ನಮ್ಮನಿಗೂ ಅವಳ ತಂದೆಗೂ ಬಹಳ ವ್ಯಸನವಾಯಿತು. ಅವರಿಬ್ಬರೂ ಬಹಳ ಅತ್ತರು.

ತಾಯಿ ಸತ್ತು ಹೋದ ಮೇಲೆ ಪೊನ್ನಮ್ಮನನ್ನು ನೋಡಿಕೊಳ್ಳಲು ಯಾರೂ ಇಲ್ಲದೆ ಹೋದರು. ಅವಳ ತಂದೆಗೆ ಗದ್ದೆಯ ಕೆಲಸವಿತ್ತು. ಪೊನ್ನಮ್ಮನಿಗೆ ಸ್ನಾನ ಮಾಡಿಸಿ, ಊಟ ಉಣಿಸಿ, ಕತೆ ಹೇಳಿ ಮುದ್ದಿಸಲು ಅವನಿಗೆ ಸಮಯವಿರುತ್ತಿರಲಿಲ್ಲ. ಆದುದರಿಂದ ಏನು ಮಾಡುವುದು ಎಂದು ಬಹಳ ಯೋಚಿಸಿ ಕೊನೆಗೆ ಒಬ್ಬಳನ್ನು ಮದುವೆಯಾದನು. ಅವಳ ತಂದೆ ಮದುವೆಯಾದ ಎರಡನೆಯ ಹೆಂಡತಿ ಪೊನ್ನಮ್ಮನಿಗೆ ಚಿಕ್ಕ ತಾಯಿಯಾದಳು. ಈ ಚಿಕ್ಕ ತಾಯಿಯು ಬಂದ ಸುರುವಿನಲ್ಲಿ ಪೊನ್ನಮ್ಮನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಳು. ಸ್ವಲ್ಪ ದಿನಗಳಲ್ಲಿ ಅವಳಿಗೂ ಒಂದು ಮಗು ಆಯಿತು. ಆ ಮಗುವಿನ ಹೆಸರು ಬೋಜಮ್ಮ, ಬೋಜಮ್ಮ ಹುಟ್ಟಿದ ಮೇಲೆ ಚಿಕ್ಕತಾಯಿ ಪೊನ್ನಮ್ಮನನ್ನು ಮೊದಲಿನಷ್ಟು ಪ್ರೀತಿಸುತ್ತಿರಲಿಲ್ಲ.

ಮನೆಗೆಲಸಗಳನ್ನೆಲ್ಲ ಪೊನ್ನಮ್ಮನಿಂದಲೇ ಮಾಡಿಸುತ್ತಿದ್ದಳು. ಕೋಳಿ ಕೂಗುವ ಮೊದಲೇ ಪೊನ್ನಮ್ಮ ಎದ್ದು ಎಲ್ಲ ಕೆಲಸಗಳನ್ನೂ ಮಾಡಬೇಕಾಯಿತು. ಚಿಕ್ಕತಾಯಿಯು ಅವಳನ್ನು ಶಾಲೆಗೆ ಹೋಗಲೂ ಬಿಡುತ್ತಿರಲಿಲ್ಲ. ಬೊಜಮ್ಮನನ್ನು ಮಾತ್ರ ಒಳ್ಳೆಯ ಬಟ್ಟೆಗಳನ್ನು ಹಾಕಿ ಶಾಲೆಗೆ ಕಳಿಸುತ್ತಿದ್ದಳು. ಬೋಜಮ್ಮನಿಗೆ ಒಳ್ಳೊಳ್ಳೆಯ ಆಟಿಗೆಗಳನ್ನೂ ಬೊಂಬೆಗಳನ್ನೂ ಕೊಡುತ್ತಿದ್ದಳು. ಪೊನ್ನಮ್ಮನಿಗೆ ಏನೂ ಕೊಡುತ್ತಿರಲಿಲ್ಲ.

ಆದರೆ ಪೊನ್ನಮ್ಮ ಬಹಳೇ ಒಳ್ಳೆಯ ಹುಡುಗಿ, ಅವಳಿಗೆ ಕೆಲಸಮಾಡಲು ಸ್ವಲ್ಪವಾದರೂ ಬೇಸರವಿರಲಿಲ್ಲ. ಚಿಕ್ಕತಾಯಿಯು ಅವಳನ್ನು ಪ್ರೀತಿಸದಿದ್ದರೂ ಪೊನ್ನಮ್ಮ ಅವಳನ್ನು ಪ್ರೀತಿಸುತ್ತಿದ್ದಳು. ಅವಳು ಹೇಳಿದ ಯಾವ ಮಾತನ್ನೂ ಮೀರುತ್ತಿರಲಿಲ್ಲ.

ಪೊನ್ನಮ್ಮನಿಗೆ ಪ್ರಾಣಿಗಳಮೇಲೆ ಬಹಳ ದಯೆ ಇತ್ತು. ಅವಳು ಅವುಗಳಿಗೆ ಹೊಡೆಯುತ್ತಿರಲಿಲ್ಲ. ಅದರಿಂದಲೇ ಹಟ್ಟಿಯ ನಾಯಿಗಳೂ ಕೊಟ್ಟಿಗೆಯ ದನಗಳೂ ಅವಳನ್ನು ಬಹಳವಾಗಿ ಪ್ರೀತಿಸುತ್ತಿದ್ದವು. ಸಿಡುಕಿನ ಸ್ವಭಾವದವಳಾದ ಬೋಜಮ್ಮನನ್ನು ಕಂಡರೆ ಅವುಗಳಿಗಾಗುತ್ತಿರಲಿಲ್ಲ.

ಹೀಗಿರುವಾಗ ಒಂದು ದಿನ ಚಿಕ್ಕ ತಾಯಿಯು ಒಂದು ಹರಕು ಕುಕ್ಕೆ (ಬುಟ್ಟಿ)ಯಲ್ಲಿ ಸ್ವಲ್ಪ ಅಕ್ಕಿನುಚ್ಚನ್ನು ಹಾಕಿ ಪೊನ್ನಮ್ಮನ ಹತ್ತಿರ ಕೊಟ್ಟು “ಕಾಲುವೆಗೆ ಹೋಗಿ ತೊಳೆದುಕೊಂಡು ಬಾ” ಎಂದಳು. ಕುಕ್ಕೆ ಹರಿದಿದ್ದುದರಿಂದ ಪೊನ್ನಮ್ಮ ತೊಳೆಯುವಾಗ ನುಚ್ಚೆಲ್ಲಾ ನೀರಿಗೆ ಬಿದ್ದು ಹರಿದುಹೋಯಿತು. ಅದನ್ನು ಕೇಳಿ ಚಿಕ್ಕತಾಯಿಯು ಕೋಪದಿಂದ “ನುಚ್ಚನ್ನು ತರದೆ ಮನೆಗೆ ಬರಬೇಡ” ಎಂದು ಗದರಿಸಿ ಅಟ್ಟಿಬಿಟ್ಟಳು.

ಪಾಪ! ಪೊನ್ನನ್ನು ನೀರಿನಲ್ಲಿ ಹೋದ ನುಚ್ಚನ್ನು ತರುವುದು ಹೇಗೆ? ಅವಳಿಗೆ ಬಹಳ ವ್ಯಸನವಾಯಿತು. ತನ್ನ ಸತ್ತ ತಾಯಿಯನ್ನು ನೆನಿಸಿಕೊಂಡು ಗೊಳೋ ಎಂದು ಅತ್ತಳು.

ಅಳುತ್ತಾ ಅಳುತ್ತಾ ಪೊನ್ನಮ್ಮ ಹರಿದುಹೋಗುತ್ತಿರುವ ನುಚ್ಚಕ್ಕಿಯನ್ನು ಕುರಿತು “ನುಚ್ಚಕ್ಕಿ ನುರಿಯಕ್ಕಿ ನಾ ಬಪ್ಪೀ ನೀ ನಿಲ್ಲೂ” ಅಂದರೆ “ನುಚ್ಚಕ್ಕಿ ನುರಿಯಕ್ಕಿ ನಾನು ಬರುತ್ತೇನೆ ನೀನು ನಿಲ್ಲೂ” ಎಂದುಕೊಂಡು ಕಾಲುವೆಯ ಏರಿಯ ಮೇಲೆಯೇ ಹಿಂಬಾಲಿಸತೊಡಗಿದಳು.

ಹೀಗೆಯೇ ಹೋಗುತ್ತಿರುವಾಗ ದಾರಿಯಲ್ಲಿ ಒಂದು ದನವು ಬಹಳ ಸೋತು ಏಳಲಾರದೆ ಬಿದ್ದುಕೊಂಡಿತ್ತು. ಅದನ್ನು ನೋಡಿ ಪೊನ್ನಮ್ಮನಿಗೆ ಬಹಳ ವ್ಯಸನವಾಯಿತು. ಅದಕ್ಕೆ ನೀರು ಕುಡಿಸಿ ಹುಲ್ಲು ಕುಯಿದು ತಂದು ಹಾಕಿದಳು. ದನಕ್ಕೆ ಸಂತೋಷವಾಗಿ ಹುಲ್ಲು ತಿನ್ನತೊಡಗಿತು. ತರುವಾಯ ಪೊನ್ನಮ್ಮ ಮುಂದೆ ಹೊರಟಳು. ಸ್ವಲ್ಪ ದೂರ ಹೋಗುವಾಗ ದಾರಿಯಲ್ಲಿ ಒಬ್ಬ ಹಣ್ಣು-ಹಣ್ಣು ಮುದುಕನು ಕೂತಿದ್ದನು. ಅವನನ್ನು ನೋಡಿ ಪೊನ್ನಮ್ಮನು “ಅಜ್ಜಯ್ಯ ಇಲ್ಲಿ ಏಕೆ ಕೂತಿದ್ದೀರಿ?” ಎಂದು ಕೇಳಿದಳು. ಅದಕ್ಕೆ ಆ ಮುದುಕ “ಮಗೂ ಇಲ್ಲಿ ಹತ್ತಿರವೇ ನನ್ನ ಮನೆ ಇದೆ. ಆದರೆ ನನಗೆ ನಡೆಯಲು ಶಕ್ತಿಯೇ ಇಲ್ಲ” ಎಂದನು. ಅದನ್ನು ಕೇಳಿ ಕನಿಕರದಿಂದ ಪೊನ್ನಮ್ಮ ಆತನನ್ನು ಮೆಲ್ಲನೆ ಕೈ ಹಿಡಿದು ಎಬ್ಬಿಸಿ ಅವನ ಮನೆಗೆ ಕರೆದುಕೊಂಡು ಹೋದಳು.

ಆ ಮುದುಕನಿಗೆ ಬಹಳ ಸಂತೋಷವಾಯಿತು. ಅವನು ಪೊನ್ನಮ್ಮನಿಂದ ಅವಳ ಕತೆಯನ್ನೆಲ್ಲಾ ಕೇಳಿ ತಿಳಿದುಕೊಂಡನು. ಅವನಿಗೆ ವ್ಯಸನವಾಯಿತು. ಅವಳಿಗೆ ಒಂದು ಸೇರು ನುಚ್ಚನ್ನೂ ಒಂದು ಪೆಟ್ಟಿಗೆ ತುಂಬ ಚಿನ್ನ ವನ್ನೂ ಕೊಟ್ಟನು. ಪೊನ್ನಮ್ಮ ಆತನಿಗೆ ನಮಸ್ಕರಿಸಿ ಪೆಟ್ಟಿಗೆಯನ್ನು ಹೊತ್ತುಕೊಂಡು ಮನೆಗೆ ಹೊರಟಳು. ದಾರಿಯಲ್ಲಿ ಪೊನ್ನಮ್ಮ ನೀರು ಕುಡಿಸಿದ್ದ ದನವು ಅವಳ ಜೊತೆಯಲ್ಲಿಯೇ ಹೊರಟಿತು. ಪೊನ್ನಮ್ಮ ಪೆಟ್ಟಿಗೆಯನ್ನು ತೆಗೆದು ಕೊಂಡು ದನದ ಜೊತೆಯಲ್ಲಿ ಸಾಯಂಕಾಲದ ಹೊತ್ತಿಗೆ ಮನೆಗೆ ತಲುಪಿದಳು. ಚಿಕ್ಕ ತಾಯಿಯು ಹೊಟ್ಟೆ ಕಿಚ್ಚಿನಿಂದ ಪೊನ್ನಮ್ಮನನ್ನು ಅಟ್ಟಿದ್ದರೂ ಪೊನ್ನಮ್ಮ ಒಳ್ಳೆಯವಳಾದುದರಿಂದ ಅವಳಿಗೆ ದೇವರು ಒಳ್ಳೆಯದನ್ನೇ ಮಾಡಿದನು. ಇದನ್ನು ನೋಡಿ ಚಿಕ್ಕ ತಾಯಿಗೆ ಬುದ್ದಿ ಬಂತು. ಅವಳು ಪೊನ್ನಮ್ಮನನ್ನು ಪುನಃ ಪ್ರೀತಿಸ ತೊಡಗಿದಳು. ಬೋಜಮ್ಮನೂ ಪೊನ್ನಮ್ಮನನ್ನು ನೋಡಿ ಅವಳಂತೆಯೇ ಒಳ್ಳೆಯವಳಾಗಲು ಪ್ರಯತ್ನಿಸತೊಡಗಿದಳು. ಇದನ್ನು ಕಂಡು ಪೊನ್ನಮ್ಮ ಬೋಜಮ್ಮನನ್ನು ಮೊದಲಿಗಿಂತಲೂ ಮಿಗಿಲಾಗಿ ಪ್ರೀತಿಸಹತ್ತಿದಳು.

ಹೀಗೆ ಎಲ್ಲರೂ ಸುಖವಾಗಿ ಇದ್ದರು. ಪೊನ್ನಮ್ಮನಂತೆ ಮಕ್ಕಳು ಒಳ್ಳೆಯವರಾಗಿದ್ದರೆ ಎಲ್ಲರೂ ಅವರನ್ನು ಪ್ರೀತಿಸುತ್ತಾರೆ. ಆದುದರಿಂದ ನಾವೆಲ್ಲರೂ ಒಳ್ಳೆಯವರಾಗಬೇಕು. ಪ್ರಾಣಿಗಳಲ್ಲಿ ದಯೆಯನ್ನಿಡಬೇಕು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೪೦
Next post ನೋಡಲು ಕ್ರಿಕೇಟು ಮ್ಯಾಚು

ಸಣ್ಣ ಕತೆ

 • ಅವಳೇ ಅವಳು

  ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

 • ನಂಟಿನ ಕೊನೆಯ ಬಲ್ಲವರಾರು?

  ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

 • ವಾಮನ ಮಾಸ್ತರರ ಏಳು ಬೀಳು

  "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

 • ಮೋಟರ ಮಹಮ್ಮದ

  ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

 • ಮಿಂಚು

  "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

cheap jordans|wholesale air max|wholesale jordans|wholesale jewelry|wholesale jerseys