ಮನೆ ಮಗಳು “ಸೋನಿ” ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು. ದಕ್ಷಿಣ ಕನ್ನಡದವರು ‘ಬಸುರಿ ಊಟ’, ಉತ್ತರ ಕರ್ನಾಟಕದವರ ‘ಉಡಿ ತುಂಬುವಿಕೆ’, ಬೆಂಗಳೂರು ಮೈಸೂರು ಕಡೆ ‘ಬಳೆತೊಡಸುವಿಕೆ’ ಸಮಾರಂಭದಂತೆ ಉಡಿತುಂಬುವ ದಿನ ಮನೆಮಂದಿ, ಬಂಧು ಬಳಗ ಸ್ನೇಹಿತರು ಎಲ್ಲರೂ ಸೇರಿ ಬಸುರಿಗೆ ಉಡಿತುಂಬಿ ಹೂ, ಬಳೆ, ಸೀರೆ, ಕುಪ್ಪಸ ತಿಂಡಿ ತಿನಸು ಊಟ ಸಮಾರಾಧನೆ ಮಾಡುವ ವಾಡಿಕೆ.
“ಸೋನಿ” ಗರ್ಭಿಣಿಯಾದಾಗ ಮನೆಮಂದಿಗೆಲ್ಲಾ ಅತ್ಯಂತ ಸಂತಸವಾಗಿತ್ತು. ಅವಳು ಮನೆಮಂದಿಗೆಲ್ಲಾ ಬಲುಪ್ರಿಯಳಾದವಳು. ಎಲ್ಲರ ಸ್ನೇಹ, ಮಮತೆ, ಪ್ರೀತಿ ಬೆಳಿಸಿಕೊಂಡು ಬೆಳದವಳು. ಅವಳನ್ನು ಕಂಡರೆ ದೊಡ್ಡವರಿಗೆ, ಚಿಕ್ಕವರಿಗೆ, ಮಕ್ಕಳಿಗೆ ಎಲ್ಲರಿಗೂ ಬಲುಪ್ರಿಯ. ಅವಳು ಗಾಂಭೀರ್ಯ ನಿಲುವಲ್ಲಿ ಮನೆಬಾಗಿಲಲ್ಲಿ ನಿಂತಳೆಂದರೆ ದೃಷ್ಟಿ ತೆಗೆದು ಹಾಕುವಷ್ಟು ಆಕರ್ಷಕವಾಗಿ ಕಾಣುತ್ತಿದ್ದಳು. ಅವಳ ಹೊಳಪಿನ ಕಣ್ಣುಗಳು, ಮೈಬಣ್ಣ, ಅವಳ ಬುದ್ದಿವಂತಿಕೆ ಎಲ್ಲರಿಗೂ ಪ್ರಿಯವಾಗಿತ್ತು.
ಗರ್ಭಿಣಿ ‘ಸೋನಿ’ಗೆ ಉಡಿತುಂಬುವ ಕಾರ್ಯವನ್ನು ‘ಡಿಫರೆಂಟ್’ ಆಗಿ ಮಾಡಬೇಕೆಂದು ನಿರ್ಧರಿಸಿ ಸ್ನೇಹಿತ ಬಳಗ ಇಬ್ಬರು ಸಹೋದರರು ಇದಕ್ಕೊಂದು ಶುಭದಿನವನ್ನು ಪುರೋಹಿತರಿಂದ ಗೊತ್ತುಪಡಿಸಿಕೊಂಡರು. ಆ ದಿನದಂದು ಪತ್ನಿ ಪರಿವಾರದೊಂದಿಗೆ ಸಾಯಂಕಾಲ ವೇಳೆಯಲ್ಲಿ ಪೀರಗೌಡರ ಮನೆಯಲ್ಲಿ ನೆರೆದರು. ಮೊದಲೇ ಹೂವು, ಬಳೆ, ಹೊಸ ಉಡುಪುಗಳಿಂದ ಸೋನಿಯನ್ನು ಸಿಂಗರಿಸಿದ್ದರು. “ಸೋನಿ” ಲಕ್ಷಣವಾಗಿ ಕಾಣುತ್ತಿದ್ದಳು. ಬಂದ ಎಲ್ಲ ಜನರ ಪ್ರೀತಿ, ಸ್ನೇಹದಿಂದ “ಸೋನಿ”ಗೂ ಬಹಳ ಸಂತಸವಾಗಿತ್ತು.
“ಸೋನಿ” ಅಲಂಕೃತ ಸೋಫಾದಲ್ಲಿ ಕುಳಿತಿದ್ದಳು. ಮನೆಯ ಪಡಸಾಲೆ ತುಂಬ ಜನ ತುಂಬಿದ್ದರು. ಪಡಸಾಲೆ ವಿದ್ಯುತ್ ದೀಪಗಳಿಂದ ಅಲಂಕೃತವಾಗಿತ್ತು. ತಲಬಾಗಿಲಲ್ಲಿ ಮಾವು ತೋರಣ, ಹೂವು ಕಂಗೊಳಿಸುತಿತ್ತು. ಸುಗಂಧ ದ್ರವ್ಯಗಳು, ಕುಂಕುಮ ಅರಿಶಿನ ಬೆಳ್ಳಿ ತಟ್ಟೆಯಲ್ಲಿ ರಾರಾಜಿಸುತ್ತಿದ್ದವು. ಒಂದು ತಟ್ಟೆಯಲ್ಲಿ ನಾನಾ ಬಗೆಯ ಹಣ್ಣು ಹಂಪಲು, ಮತ್ತೊಂದು ತಟ್ಟೆಯಲ್ಲಿ ಚಿಕ್ಕ ಉಂಡೆ ತಿನಿಸುಗಳು, ಮಗದೊಂದು ತಟ್ಟೆಯಲ್ಲಿ “ಸೋನಿ”ಯನ್ನು ಸಿಂಗರಿಸುವ ಉಡುಪು ಎಲ್ಲಾ ಸಿದ್ದವಾಗಿದ್ದವು. ಒಂದು ಕಡೆ ಊದುಕಡ್ಡಿಯ ಪರಿಮಳದ ಹೊಗೆ ಮತ್ತೊಂದು ಕಡೆ ಶ್ರೀಗಂಧದ ವಾಸನೆ ಮನೆ ಎಲ್ಲಾ ತುಂಬಿ ಪಸರಿಸಿ ಒಂದು ಸುಂದರ ವಾತಾವರಣವೇರ್ಪಟ್ಟಿತ್ತು. ಎಲ್ಲಾ ಸುವಾಸಿನಿಯರು ಸೇರಿ “ಸೋನಿ”ಗೆ ಅರಿಶಿನ ಕುಂಕುಮ, ಗಂಧ ಲೇಪನ ಮಾಡಿ ಹೂ ಮುಡಿಸಿ ಅಕ್ಷತೆಯ ಹಾಕಿ ಆಶೀರ್ವದಿಸಿ ಉಡಿ ತುಂಬಿದ ಚೀಲಕ್ಕೆ ಹಾಕುತ್ತಿದ್ದರು.
ಎಲ್ಲ ಸುವಾಸಿನಿಯರು ಸೇರಿ ಕಂಚಿನ ಕಂಠದಲ್ಲಿ ಶೋಭಾನೆ ಪದಗಳನ್ನು ಹಾಡಿ ಕೊನೆಗೆ ಆರತಿ ಅಕ್ಷತೆಯೊಂದಿಗೆ ಎಲ್ಲರ ತನುಮನಗಳು ಉಲ್ಲಾಸಗೊಂಡವು.
“ಇಂತಹ ಉಡಿ ತುಂಬುವ ಸಮಾರಂಭ ನಾವು ಇದೇ ಮೊದಲು ನೋಡಿದ್ದು” ಎಂದು ಕೆಲವರು ಹೇಳುತ್ತಿದ್ದರು.
“ಸೋನಿ ಬಹಳ ಅದೃಷ್ಟವಂತೆ” ಎಂದು ಕೆಲವರು ಹೇಳುತ್ತಿದ್ದರು.
“ಸುಖವಾಗಿ ಮೈಕಳೆದು ಸೋನಿ ಸಂತೋಷವಾಗಿರಲಿ” ಎಂದು ಮತ್ತೆ ಕೆಲವರು ಹರಸುತ್ತಿದ್ದರು.
ಮಕ್ಕಳು ಕೂಡ “ಸೋನಿ” ಪಕ್ಕದಲ್ಲಿ ಕುಳಿತು ಫೋಟೋಗಳನ್ನು ತೆಗೆಸಿ ಕೊಳ್ಳುತ್ತಿದ್ದರು.
ನಮಗೂ ಇಂತಹ ಅಪರೂಪದ ಉಡಿತುಂಬಿಸಿಕೊಂಡ ‘ಸೋನಿ’ಯ ಚಿತ್ರ ಬೇಕೆಂದು ಸ್ನೇಹಿತರು ಒಂದು ಫೋಟೋ ಕಾಫಿ ಕೇಳುತ್ತಿದ್ದರು.
ಇಷ್ಟೇ ಸಾಲದೆಂಬಂತೆ ಪೀರಗೌಡ ಪಾಟೇಲರ ತಮ್ಮ ಮಹದೇವ ಪಾಟೀಲರು ದಿನಪತ್ರಿಕೆಯ ಪತ್ರಕರ್ತರನ್ನು, ದೂರದರ್ಶನದ ವೀಡಿಯೋಕಾರರನ್ನು ಕರೆಸಿದ್ದರು. “ಗರ್ಭಿಣಿ ಸೋನಿ” ಎಲ್ಲರು ತೆಗೆದುಕೊಳ್ಳುವ Vedio photo ಗಳಿಗೆ ಸಹಕರಿಸುತ್ತಿದ್ದಳು. ಸೋಫಾದಲ್ಲಿ ಕುಳಿತು ಸಾಕಾದಾಗ ಸ್ವಲ್ಪ ಜನರ ಮಧ್ಯೆ ಅಡ್ಡಾಡುತ್ತಿದ್ದಳು.
ಉಡಿತುಂಬುವ ಸಮಾರಂಭವಾದ ಮೇಲೆ ಹಬ್ಬದ ಊಟವೂ ಎಲ್ಲರಿಗಾಗಿ ಕಾದಿತ್ತು. ನಾಲ್ಕಾರು ಸಿಹಿ ಭಕ್ಷ್ಯಗಳಿಂದ ಲಡ್ಡು ಜಿಲೇಬಿ, ಹೋಳಿಗೆ, ಕಡಬು ಎಲ್ಲಾ ಸಿದ್ಧವಾಗಿತ್ತು. ಕೆಲವರು ತಮ್ಮ ಪ್ರೀತಿತೋರಲು ಗರ್ಭಿಣಿ ಸೋನಿಗೆ ಪ್ರಿಯವಾದ ಪ್ರತ್ಯೇಕ ರೀತಿಯ ಬಿಸ್ಕತ್ತಿನ ಪ್ಯಾಕೇಟುಗಳನ್ನು ತಂದಿದ್ದರು. ಎಲ್ಲಾರೂ ಮೃಷ್ಟಾನ್ನ ಭೋಜನ ಮಾಡಿ ಹೋಗುವಾಗ “ಸೋನಿ bye” ಹೇಳಲು ಬಾಗಿಲವರೆಗೆ ಬಂದು ಬಾಲ ಅಲ್ಲಾಡಿಸಿ ಬೌ ಬೌ ಎಂದು ತನ್ನ ಕೃತಜ್ಞತೆಯನ್ನು ತೋರುತ್ತಿದ್ದಳು.
ಮನೆಯ ಹೆಣ್ಣು ಮಗಳು ಪ್ರಥಮ ಬಾರಿಗೆ ಗರ್ಭಿಣಿಯಾದಾಗ ಸಂಪ್ರಾದಾಯ ಬದ್ದವಾಗಿ ತುಂಬಾ ಅಕ್ಕರೆ ಪ್ರೀತಿಯಿಂದ ಉಡಿತುಂಬುವ ಕಾರ್ಯವನ್ನು ಮಾಡುವುದು ವಾಡಿಕೆ. ತಮ್ಮ ಮನೆಯಲ್ಲಿ ಸಾಕಿಕೊಂಡ ಅಲ್ಲೇಸಿಸಿಯನ್ ನಾಯಿ ಕೂಡ ಗರ್ಭಿಣಿಯಾದಾಗ ಈ ಸಂಪ್ರದಾಯಕ್ಕೆ ಹೊರತಾಗಲಿಲ್ಲ. ನಾಯಿಯನ್ನು ಮನೆಯ ಮಗಳಂತೆ ಆದರಿಸಿ ಸಿಂಗರಿಸಿ ಪ್ರೀತ್ಯಾದರ ತೋರಿ ಅಕ್ಕರೆಯಿಂದ ಉಡಿತುಂಬಿ ಹಾಡಿ ಹರಸಿದ ಘಟನೆ ಎಲ್ಲರ ಮನದಲ್ಲಿ ಸ್ಥಾಯಿಯಾಗಿ ಉಳಿಯಿತು. ಮೂಕ ಪ್ರಾಣಿ ಪ್ರೇಮಕ್ಕೆ ದ್ಯೋತಕವಾಗಿ ಎಲ್ಲರ ಮನದಲ್ಲಿ ಸಂತಸದ ಚಿಲುಮೆ ಹರಿಸಿತು.
*****