ಬಾಳೆಹೊನ್ನೂರಿನಲಿ ತಾಯಿ ಪ್ರೀತಿಯ ಕಂಡೆ
ಮಾವು ಮಲ್ಲಿಗಿ ಜಾಜಿ ಬಕುಲ ಕಂಡ
ಬೆಟ್ಟ ಬೆಟ್ಟದ ಮ್ಯಾಲ ಮುಗಿಲ ಅಟ್ಟವ ಕಂಡೆ
ಪಂಚಪೀಠದ ಚಲುವ ತೇರು ಕಂಡೆ

ವೇದಶಾಸ್ತ್ರದ ಮಣಿಯ ಸಕಲ ಆಗಮ ಗಣಿಯ
ಪಂಚ ಪಂಚಾಕ್ಷರಿಯ ಗಿಣಿಯ ಕಂಡೆ
ಚಿ೦ತೆ ಹೋಯಿತು ಇಲ್ಲಿ ಚಿತೆಯು ಆರಿತು ಇಲ್ಲಿ
ತಂಪು ತಪೋವನ ಶಾಂತ ಗುರುವ ಕ೦ಡೆ

ಗಗನದೆತ್ತರ ಜ್ಞಾನ ಕಡಲಿನಾಳದ ಮೌನ
ಆದಿ ಬ್ರಹ್ಮನ ಭಾವ ಬೆಳಕು ಕಂಡೆ
ಕಣ್ತುಂಬ ಶಿವಶಿವಾ ಎದೆತುಂಬ ಶಿವಶಿವಾ
ಅಂತರಾತ್ಮದ ಕಮಲ ಪುಷ್ಪಕಂಡೆ

ಮನುಜ ಧರ್ಮವೆ ಧರ್ಮ ಕರುಣೆಯ ಶಿವಧರ್ಮ
ವಿಶ್ವಸತ್ಯದ ಶಿಖರ ತತ್ವ ಕಂಡೆ
ಅಂಗವೇ ಆಚಾರ ಲಿ೦ಗವೇ ಸುವಿಚಾರ
ಹಾಲುಜೇನಿನ ಲಿಂಗ ರುಚಿಯ ಕಂಡೆ
*****