ಅರಿಯದಲೆ ಧಾವಿಸಿದೆ. ಹಸುಳನನು ಕ್ಷಮಿಸುವದು.
ನಿನ್ನ ತಣ್ಣೆಲರೊಲವು ಬಂದು ಬೀಸಿತು ನನ್ನ
ಆತುಮನ ನಂದನದಿ. ಉತ್ತಿ ಬಿತ್ತಿದ ಬೀಜ
ವ್ಯಕ್ತವಾಯಿತು ಇಂದು. ನಿನ್ನ ಗೆಳತಿಯರಿವರು
ಅಪ್ಸರಿಯರೆಲ್ಲ ನೀರೆರೆದ ಕೂದಲಿನಿಂದ
ತಂದೀಂಟಿಸಿದರೆನಗೆ ದಿವ್ಯ ಜೀವಾಮೃತವ.
ಹೂಬಿಸಿಲಿನಲಿ ಹಸಿರು ತಲೆದೊಡಿಗೆಯನು ಧರಿಸಿ
ಕಿನ್ನರರು ಬಂದು ಎಲೆಯಾಟವನು ಹೂಡಿದರು.
ಮನ್ಮಥ ವಸಂತರೀ ಜೀವರಾಶಿಯನೆಲ್ಲ
ಕೊನರಿಸುತ ಮಲರುಮಲರಾಗಿಸಲು ಜೀವವಿದು
ಸುರರ ಕರಸ್ಪರ್‍ಶದಲಿ ಮಿಡಿಗೊಂಡು ಕೊನೆದಿಹುದು.
ಇಂದೋರ್‍ವ ದೇವಿಯಾ ಪರಮ ಕೋಮಲ ಸ್ಪರ್‍ಶ-
ದಿಂದ ಬಂದಿತು ಫಲೋನ್ಮುಖತೆಯೇ ಬಾಳುವೆಗೆ.
ನೀನು ಬೆಳೆಸಿದ ಹಣ್ಣು,- ನಿನ್ನಿಚ್ಛೆಯೆಂದಿಹೆನು!
*****



















