Home / ಕಥೆ / ಸಣ್ಣ ಕಥೆ / ನಿರ್ಭಾಗ್ಯ ಚಾಮರಾಜ

ನಿರ್ಭಾಗ್ಯ ಚಾಮರಾಜ

ದೊಡ್ಡ ಕೃಷ್ಣರಾಜ ಒಡೆಯರಿಗೆ ಮಕ್ಕಳಿರಲಿಲ್ಲ. ಅವರು ತೀರಿಹೋದ ತರುವಾಯ ಅವರ ಹಿರಿಯರಸಿ ದೇವಾಜಮ್ಮಣ್ಣಿಯವರು ಮುಖ್ಯಾಧಿಕಾರಿಗಳಾಗಿದ್ದ ದಳವಾಯಿ ದೇವರಾಜಯ್ಯ, ಸರ್ವಾಧಿಕಾರಿ ನಂಜರಾಜಯ್ಯಂದಿರನ್ನು ಕರೆಯಿಸಿ “ನಮ್ಮ ಜ್ಞಾತಿಯಾದ ಅಂಕನಹಳ್ಳಿ ದೇವರಾಜೇ ಅರಸಿನವರ ಪುತ್ರ ೨೮ ವರ್ಷ ವಯಸ್ಸುಳ್ಳ ಚಾಮರಾಜಯ್ಯನನ್ನು ಸಕುಟುಂಬವಾಗಿ ಕರೆಯಿಸಿ ನಮಗೆ ಸ್ವೀಕಾರ ಮಾಡಿಸಿ, ಅವರಿಗೆ ಪಟ್ಟ ಕಟ್ಟಿ” ಎಂದು ಹೇಳಿದರು. ಮುಖ್ಯಾಧಿಕಾರಿಗಳಿಗೆ ತಮ್ಮ ಅಧಿಕಾರವನ್ನು ಹೆಚ್ಚಿಸಿಕೊಳ್ಳಬೇಕೆಂಬ ಉದ್ದೇಶವಿತ್ತು. ತಮ್ಮ ಅಧಿಕಾರದ ಗೋಜಿಗೆ ಬರುವುದಿಲ್ಲವೆಂದು ಪಟ್ಟಕಟ್ಟುವ ಮೊದಲೇ ಮುಂದಿನ ರಾಜರಿಂದ ಹೇಳಿಸಿಬಿಡಬೇಕೆಂದು ಸಂಕಲ್ಪಮಾಡಿಕೊಂಡರು. ಅದರಂತೆ ಆ ಯುಧಿಕಾರಿಗಳು ಚಾಮರಾಜಒಡೆಯರನ್ನು ಕರೆಕಳುಹಿಸಿ ಪಶ್ಚಿಮವಾಹಿನಿಯನ್ನು ದಾಟುವುದಕ್ಕೆ ಮೊದಲು ಒಪ್ಪಂದಮಾಡಿಸಿ, ಅಭಿಷೇಕಮಾಡಿಸಿದರು.

ರಾಜಪದವಿಗೆ ಬಂದ ಚಾಮರಾಜಒಡೆಯರಿಗೆ ಸ್ವಲ್ಪವಾದರೂ ಅವಕಾಶವಿಲ್ಲದ ಹಾಗಿತ್ತು. ದೇವರಾಜಯ್ಯ, ನಂಜರಾಜಯ್ಯಂದಿರೇ ಅರಮನೆಯ ಊಳಿಗದವರನ್ನೂ ಸೇನೆಯನ್ನೂ ಇತರ ಅಧಿಕಾರಿಗಳನ್ನೂ ವಶದಲ್ಲಿಟ್ಟುಕೊಂಡು ರಾಜ್ಯದ ಆದಾಯ ವ್ಯಯವನ್ನು ತಾವೇ ನಡೆಸುತ್ತ ದೊರೆಯನ್ನು ಮೂಲವಿಗ್ರಹದಂತಿಟ್ಟು ನಿರೂಪದಸ್ಕತ್ತುಗಳನ್ನು ಮಾತ್ರ ಮಾಡಿಸುತ್ತಲಿದ್ದರು. ಎಂಟು ತಿಂಗಳು ನಡೆಯಿತು. ಆಗ ಚಾಮರಾಜ ಒಡೆಯರು “ಇನ್ನು ಮೇಲೆ ನಾವು ಉದಾಸೀನರಾಗಿರುವುದು ಸರಿಯಲ್ಲ ; ಈ ಜನಗಳ ಅಧಿಕಾರವನ್ನು ತೆಗೆದು ನಮ್ಮ ಆಪ್ತರಿಗೆ ಅಧಿಕಾರಕೊಡಬೇಕು” ಎಂಬದಾಗಿ ಯೋಚಿಸಿದರು. ಇದರ ಸುಳಿವು ಹೇಗೋ ದಳವಾಯಿ ದೇವರಾಜಯ್ಯನಿಗೆ ತಿಳಿಯಿತು. ಕೂಡಲೆ ದೇವರಾಜಯ್ಯನು ಅಂತಃಪುರಕ್ಕೆ ಹೋಗಿ ದೇವಾಜಮ್ಮಣ್ಣಿಯವರನ್ನು ಕಂಡು “ನಿಮ್ಮ ಸ್ವೀಕೃತ ಪುತ್ರರು ರಹಸ್ಯವಾಗಿ ಏನೇನೋ ಯೋಚನೆ ಮಾಡುತ್ತಿದ್ದಾರೆ. ಆಗಲೇ ಕೆಲವು ಚಾಕರರನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ನೋಡಿದರೆ ನಮ್ಮನ್ನೂ ತಪ್ಪಿಸುವ ಯೋಚನೆಯನ್ನು ಬಳೆಸುತ್ತಲಿರುವಂತಿದೆ. ಸ್ವಲ್ಪ ದಿನದಲ್ಲಿಯೇ ಇದು ವಿಪರೀತವಾದರೂ ಆದೀತು. ಅವರು ತಮ್ಮಲ್ಲಿ ಬಂದು ಏನಾದರೂ ಅರಿಕೆಮಾಡಿದರೆ ಅನುಮಾನದಿಂದ ತಾವದನ್ನು ಕೇಳಬೇಕು. ಇಲ್ಲದೆ ಈಗಲೇ ತಕ್ಕ ಉಪಾಯವನ್ನು ಮಾಡುವಂತೆ ತಾವು ಅಪ್ಪಣೆ ಕೊಟ್ಟರೆ ಹಾಗೆಮಾಡಲು ಸಿದ್ಧರಾಗಿದ್ದೇವೆ” ಎಂದು ಏಕಾಂತವಾಗಿ ಹೇಳಿದನು. ರಾಣಿಯವರು “ಹೇಗೆ ಹಿತವೋ ಹಾಗೆ ಮಾಡ ಬೇಕು. ನೀವೆಲ್ಲರೂ ಸಹಾಯಮಾಡದಿದ್ದರೆ ರಾಜ್ಯವು ನಿಷ್ಕಂಟಕವಾಗಿ ನಡೆಯುವುದೇ?” ಎಂದರು. ಸಮಯ ನಿರೀಕ್ಷೆಮಾಡುವುದೊಳ್ಳೆಯದೆಂದುಕೊಂಡು ದೇವರಾಜಯ್ಯನು ಅರಮನೆಯನ್ನು ಬಿಟ್ಟು ತನ್ನ ಮನೆಗೆ ಹೋಗಿ ತನ್ನ ಆಪ್ತರೊಡನೆ ಆಲೋಚನೆ ಮಾಡುತ್ತಿದ್ದನು.

ಅತ್ತ ರಾಜರಿಗೆ ದೇವರಾಜಯ್ಯನು ಮಾತುಶ್ರೀಯವನ್ನು ಏಕಾಂತದಲ್ಲಿ ಕಂಡುಬಂದ ವರ್ತಮಾನವ ತಿಳಿಯಿತು. ಇನ್ನು ತಡಮಾಡಾರದೆಂದು ರಾಜರು ದಳವಾಯಿ ದೇವರಾಜನ ಅಧಿಕಾರವನ್ನು ತೆಗೆದು ದೇವಯ್ಯನೆಂಬ ಬ್ರಾಹ್ಮಣನಿಗೆ ಆ ಅಧಿಕಾರವನ್ನು ಕೊಟ್ಟು, ಸರ್ವಾಧಿಕಾರಿ ನಂಜರಾಜಯ್ಯನ ಬದಲಿ ವೀರಶೆಟ್ಟಿ ಎಂಬುವನನ್ನು ನೇಮಕಮಾಡಿ, ಗೋಪೀನಾಥಯ್ಯನೆಂಬಾತನಿಗೆ ಪ್ರಧಾನತನವನ್ನು ಕೊಟ್ಟು, ಕಂಠೀರವಯ್ಯ, ಕಡೂರು ಚಿಕ್ಕಯ್ಯ, ನಾರಣಪ್ಪ, ಶಿವನಪ್ಪ-ಎಂಬ ನಾಲ್ವರು ಆಪ್ತಮಿತ್ರರನ್ನು ತಮ್ಮ ಮಂತ್ರಾಲೋಚನೆಗೆ ಇಟ್ಟುಕೊಂಡು ಸ್ವಂತವಾಗಿ ಅಳಲು ಮೊದಲಿಟ್ಟರು.

ಈ ವಿಧವಾದ ಸ್ವತಂತ್ರ ಆಚರಣೆಯು ಅರಮನೆಯಲ್ಲಿ ಊಳಿಗದವರನೇಕರಿಗೆ ಸರಿಬೀಳಲಿಲ್ಲ. ಅವರು ಮಾತುಶ್ರೀಯವರಲ್ಲಿ ಹೋಗಿ ದೂರು ಕೇಳಿಕೊಂಡು ಅವರಿಬ್ಬರಲ್ಲಿಯೂ ವಿರೋಧಹುಟ್ಟುವಂತೆ ಮಾಡಿದರು. ಮಾತುಶ್ರೀಯವರು ಹಿಂದೆ ದೇವರಾಜಯ್ಯನು ಸೂಚಿಸಿದ್ದು ನಿಜವಾಯಿತೆಂದು ಸುಮ್ಮನಿದ್ದರು. ಇಂತಹ ಸಮಯದಲ್ಲಿ ದೇವರಾಜಯ್ಯ, ನಂಜರಾಜಯ್ಯಂದಿರು ರಾಜರು ಸ್ವಂತವಾಗಿ ನಡೆಸುತ್ತಿದ್ದ ವಿಚಾರಣೆಯಲ್ಲಿ ತಮ್ಮ ಆಡಳಿತದ ಲೋಪಗಳು ಕಂಡು ಬಂದಾವೆಂದು ಶಂಕೆಪಟ್ಟು ಸೈನ್ಯವನ್ನು ತಮ್ಮ ಕಡೆ ಮಾಡಿಕೊಳ್ಳಬೇಕೆಂದು ಬಗೆದರು. ಸೈನ್ಯದಲ್ಲಿದ್ದ ಹೈದರಲ್ಲಿ ಮುಂತಾದ ಅಧಿಕಾರಿಗಳನ್ನು ರಾತ್ರಿ ವೇಳೆಯಲ್ಲಿ ಗೋಪ್ಯವಾಗಿ ಕೋಟೆಯ ಹೊರಗೆ ಕಂಡು ಅವರಿಗೆ ದ್ರವ್ಯವನ್ನು ಕೊಟ್ಟು “ನೀವೆಲ್ಲರೂ ಶೂರರು. ಪೂರ್ವದಿಂದಲೂ ನೀವು ನಮ್ಮಿಂದ ಪೋಷಿತರಾದವರು. ನಮಗೆ ಈಗ ಸಮಯ ಬಂದಿದೆ. ಆದ್ದರಿಂದ ನೀವು ಅರಮನೆಯಿಂದ ನಿಮಗೆ ಸಲ್ಲಬೇಕಾದ ಸಂಬಳಸಾರಿಗೆಗಳನ್ನು ತೆಗೆದುಕೊಂಡು ರಾಜರಿಗೆ ಇನ್ನು ಮೇಲೆ ಚಾಕರಿಮಾಡುವುದಿಲ್ಲವೆಂದು ಹೇಳಿ ಹೊರಟು ಬರಬೇಕು. ನಿಮ್ಮನ್ನು ಯಾವ ಲೋಪವೂ ಇಲ್ಲದೆ ನಾವೇ ಕೆಲಸದಲ್ಲಿಟ್ಟುಕೊಳ್ಳುತ್ತೇವೆ. ಹೀಗೆ ನೀವು ಮಾಡಿದರೆ ನಿಮಗೆ ತುಂಬಾ ಪ್ರಯೋಜನವುಂಟು” ಎಂದು ಹೇಳಿ ಒಪ್ಪಿಸಿದರು. ಅದರಂತೆಯೇ ಮರುದಿನ ೨೦೦೦ ರಾವುತರು, ೬೦೦೦ ಬಾರಿನವರು ಸಂಬಳವನ್ನು ತೆಗೆದುಕೊಂಡು ಚಾಕರಿಬಿಟ್ಟು ಕೋಟೆಯ ಹೊರಗೆ ಒಂದು ಹರದಾರಿ ದೂರದಲ್ಲಿಳಿದುಕೊಂಡರು.

ಈ ಸಂಗತಿಯು ದೇವರಾಜಯ್ಯನಿಗೆ ತಿಳಿಯಿತು. ಕೂಡಲೆ ಆತನು ಜಗನ್ನಾಥ ದಾಸನೆಂಬ ಸಾಹುಕಾರನಿಂದ ೨ ಲಕ್ಷ ರೂ. ಗಳನ್ನು ಕಡವಾಗಿ ತೆಗೆದು ಆ ದುಡ್ಡನ್ನು ದೂರದಲ್ಲಿ ಸಿಬಿರಮಾಡಿದ್ದ ಸೈನ್ಯಕ್ಕೆ ಕಳುಹಿಸಿಕೊಟ್ಟು “ನಾವು ಹೇಳಿ ಕಳುಹಿಸಿದ ಕೂಡಲೆ ಯುದ್ಧ ಸನ್ನದ್ದರಾಗಿ ಬರತಕ್ಕದ್ದು” ಎಂದು ಆಜ್ಞೆಯನ್ನು ಕಳುಹಿಸಿ ಸಮಯ ನಿರೀಕ್ಷಿಸುತ್ತಲಿದ್ದನು.

ಶುಕ್ರವಾರ ಬಂತು. ಪ್ರತಿ ಶುಕ್ರವಾರವೂ ಪದ್ಧತಿಯ ಮೇರೆ ಹೊಸ ದಳವಾಯಿ ದೇವಯ್ಯನು ಸೇನೆಯನ್ನು ತೆಗೆದುಕೊಂಡು ಕೋಟೆಯ ಹೊರಗೆ ೨ ಹರದಾರಿ ದೂರದಲ್ಲಿದ್ದ ಮೈದಾನದಲ್ಲಿ ಕವಾಯಿತು ಮಾಡಿಸಲು ಹೊರಟನು. ಅವರು ಹೊರಟುಹೋದ ಸ್ವಲ್ಪ ಹೊತ್ತಿಗೆ ಸರಿಯಾಗಿ ದೇವರಾಜಯ್ಯನು ತನ್ನ ವಶವಾದ ಸೈನ್ಯವನ್ನು ಕರೆಸಿಕೊಂಡು ಕವಾಯತಿಗೆ ಹೋಗಿದ್ದ ದಂಡು ಒಳಗೆ ಬಾರದಂತೆ ಕೋಟೆಯ ಬಾಗಿಲುಗಳನ್ನು ಭದ್ರಪಡಿಸಿಬಿಟ್ಟು ಅರಮನೆಯ ಮುಂದೆ ಬಂದು ಸೈನ್ಯದೊಡನೆ ಸಿದ್ಧನಾದನು.

ಚಾಮರಾಜ ಒಡೆಯರಿಗೆ ಗತಿ ತೋರಿದಾಯಿತು. ಆಗ “ನಾವು ಸ್ವತಂತ್ರವಾಗಿ ರಾಜ್ಯಭಾರ ಮಾಡಿದ್ದರಿಂದ ನಿಮಗೂ ನಮಗೂ ಮನಸ್ತಾಪವುಂಟಾಯಿತು. ಇನ್ನು ಮೇಲೆ ನಿಮ್ಮ ಅನು ಮತಿಯಿಂದಲೇ ಎಲ್ಲ ಕಾರ್ಯಗಳನ್ನೂ ಮಾಡುತ್ತೇವೆ” ಎಂದು ದೇವರಾಜಯ್ಯನಿಗೆ ಹೇಳಿಕಳುಹಿಸಿದರು. ದೇವರಾಜಯ್ಯನು ಮನಸ್ಸಿನಲ್ಲಿ “ಇವು ನಂಬತಕ್ಕ ಮಾತುಗಳಲ್ಲ, ನನ್ನ ಸಹಾಯದಿಂದಲ್ಲವೇ ಈತನು ರಾಜನಾದುದು, ಸಮಯ ಬಂದಾಗ ಈಗ ನಡೆಸಿದಂತೆಯೇ ಪುನಃ ನಡೆಸುವುದರಲ್ಲಿ ಅನುಮಾನವಿಲ್ಲ” ಎಂದು ಯೋಚಿಸಿ `ರಾಮಬಾಣ’ ವೆಂಬಾನೆಯಿಂದ ಅರಮನೆಯ ಬಾಗಲನ್ನು ಒಡೆಸಿ ಬಾಗಿಲಿನಲ್ಲಿ ತನ್ನ ಕಡೆಯವರನ್ನೇ ಪಹರೆಗಿಡಿಸಿದನು. ಅರಮನೆಯಲ್ಲಿ ಎಲ್ಲೆಲ್ಲಿಯೂ ಕೋಲಾಹಲವೆದ್ದಿತು; ಆದರೆ ಎಲ್ಲವೂ ದೇವರಾಜನ ವಶದಲ್ಲಿತ್ತು. ಮುಂದೆ ದೇವರಾಜಯ್ಯನು ನಾಗೋಜಿ ರಾಯನೆಂಬ ಜಮಾದಾರನೊಬ್ಬನನ್ನು ಕರೆದು ರಾಜ ಚಿಹ್ನೆಗಳಾದ ಪಟ್ಟದ ಕತ್ತಿ ಮತ್ತು ಶಿಖಾಮೊಹರುಗಳನ್ನು ಆ ಚಾಮರಾಜರಿಂದ ತೆಗೆದುಕೊ” ಎಂದು ಆಜ್ಞಾಪಿಸಿ ಹಿಂದೆಯೇ ತಾನೂ ಒಳಕ್ಕೆ ಬಂದನು.

ಚಾಮರಾಜರಿಗೆ ಸಹಾಯಕರೇ ಇರಲಿಲ್ಲ. ನಾಗೋಜಿ ರಾಯನು ಬಂದು ಕೇಳಿದೊಡನೆಯೇ ರಾಜಚಿಹ್ನೆಗಳನ್ನು ತೆಗೆದು ಕೊಟ್ಟುಬಿಟ್ಟರು. ದೇವರಾಜಯ್ಯನು “ಅವೆರಡನ್ನು ಸಿಂಹಾಸನದ ಮೇಲಿಟ್ಟು ಪೂಜೆ ಮಾಡಿಸಿ” ಎಂದು ಕಟ್ಟುಮಾಡಿ, ಮಾತಿಲ್ಲದೆ ಚಾಮರಾಜರನು ಒಂದುಸಲ ನೋಡಿ “ಇವರನ್ನು ಬಂಧಿಸಿ ಕಬ್ಬಾಳದುರ್ಗಕ್ಕೆ ಕರೆದುಕೊಂಡು ಹೋಗಿ ಅಲ್ಲಿ ನಮ್ಮಾಜ್ಞೆಯನ್ನು ತಿಳುಹಿಸಿ ಒಪ್ಪಿಸಿ ಬನ್ನಿ” ಎಂದು ಸೈನ್ಯದಧಿಕಾರಿಗಳಿಗೆ ಗೊತ್ತುಮಾಡಿದನು. ನಿರ್ಭಾಗ್ಯರಾದ ಚಾಮರಾಜರು ತಮ್ಮ ಪರವಾಗಿ ಒಂದೇಟು ಕೊಡುವದಕ್ಕೂ ಪ್ರಯತ್ನ ಮಾಡದೆ ಖಿನ್ನತೆಯಿಂದ ನಿರ್ಬಂಧಕ್ಕೊಳಗಾಗಿ ಕಬ್ಬಾಳದುರ್ಗದಲ್ಲಿ ಕುಟುಂಬ ಸಮೇತರಾಗಿ ಸೆರೆಯಾದರು. ಪ್ರಧಾನತನವನ್ನು ಮಾಡುತ್ತಿದ್ದ ಗೋಪೀನಾಥಯ್ಯ, ದಳವಾಯಿ ದೇವಯ್ಯ, ಸರ್ವಾಧಿಕಾರಿ ವೀರಸೆಟ್ಟಿ ಮುಂತಾದ ಏಳುಮಂದಿ ಆಪ್ತರನ್ನು ದೇವರಾಜಯ್ಯನ ಪಹರೆಯಲ್ಲಿಡಿಸಿದನು.

ಇಷ್ಟು ಸಾಹಸದಿಂದ ದೇವರಾಜಯ್ಯನು ಪಿತೂರಿಯನ್ನು ಮುಗಿಸಿಕೊಂಡು ಮಾತುಶ್ರೀಯವರಿಗೆ “ತಾವು ಚಿಕ್ಕನಹಳ್ಳಿ ಚಾಮೇ ಅರಸಿನವರ ೩ ವರ್ಷ ವಯಸ್ಸಿನ ಪುತ್ರರನ್ನು ದತ್ತಕ ಮಾಡಿಕೊಂಡು ಆ ಬಾಲಕರಿಗೆ ಪಟ್ಟವನ್ನು ಕೊಡಬೇಕು” ಎಂದು ಹೇಳಿ ಒಪ್ಪಿಸಿ, ಆ ಬಾಲಕನನ್ನು ಕರೆಯಿಸಿ ಅಭಿಷೇಕ ಮಾಡಿಸಿ ಸಮಸ್ತಾಧಿಕಾರವನ್ನೂ ತನ್ನ ಕೈಯಲ್ಲಿಯೇ ಇಟ್ಟುಕೊಂಡಿದ್ದನು. ಈ ಅರಸರು ಚಿಕ್ಕ ಕೃಷ್ಣರಾಯರೆಂಬ ಹೆಸರಿನಿಂದ ೧೭೨೪ ರಿಂದ ೧೭೬೬ ರವರೆಗೆ ಆಳಿದರು. ಆಡಳಿತವೆಲ್ಲವೂ ದಳವಾಯಿ ದೇವರಾಜಯ್ಯ ಮತ್ತು ಸರ್ವಾಧಿಕಾರಿ ನಂಜರಾಜಯ್ಯಂದಿರ ಕಯ್ಯಲ್ಲಿತ್ತು.
*****
[ವಿಲ್ಕ್ಸ್, ವಂಶರತ್ನಾಕರ, ಪುಟ ೧೫೭-೧೬೨, ವಂಶಾವಳಿ, ಪುಟ ೧೬೫-೧೭೧]

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...