ಮೂಲ: ಸುತಪಾ ಸೇನ್‌ಗುಪ್ತ
ಮೂವಿ ಮುಗಿದಿದೆ; ಚಿಕ್ಕ ಓಣಿಗಳ ದಾಟಿ
ಬಂದಿದ್ದೀಯೆ ಈಗ ಮುಖ್ಯರಸ್ತೆಗೆ ನೀನು
ನಟ್ಟ ನಡುರಾತ್ರಿ;
ಹೊರಟಿದ್ದೀಯೆ ಮತ್ತೆ ಮನೆಕಡೆಗೆ – ಬಲು ದೂರ.
ರೈಲ್ವೆ ಹಳಿಬದಿಯಲ್ಲಿ ನಡೆಯಬೇಕಿದೆ ನೀನು
ಮಂದ ಬೆಳಕಿನ ಕಂದೀಲನ್ನು ಹಿಡಿದು.
ನಿನ್ನಾತ್ಮ ದಣಿದು ಮಾತಿಗೆ ಕಾತರಿಸಿದೆ
ತೇಕುತ್ತಿದೆ ನಾಯಿಯಂತೆ ಬಾಯಿ ತೆರೆದು.
ನಿನ್ನ ಹೆಜ್ಜೆಯ ಸದ್ದು ಕೇಳುತ್ತಿದೆ ನಗರದ
ಎಲ್ಲಾ ಮನೆಗಳಲ್ಲೂ
ತೆರೆಯುತ್ತಿಲ್ಲ ನಿನಗೆ ಯಾವ ಮನೆಬಾಗಿಲೂ
ಬಹುಶಃ ಹೋಗುವೆ ನೀನು ಹಳೆಯ ಛತ್ರವ ದಾಟಿ.
ಅಲ್ಲಿ ದುಂಬಿಗಳಂತೆ ಸುತ್ತ ಮುತ್ತುವರು ಜನ
ವೇಶ್ಯೆಯೋ ಎಂದು ಕಾತರಿಸಿ
ಎಷ್ಟೋ ಜನ ರಸಿಕರು ಮೈಯೊತ್ತಿ ಹಾಯುವರು
‘ಕ್ಷಮಿಸಿ ಮೇಡಂ’ ಎಂದು ಹಲ್ಲುಕಿರಿಯುವರು
ಏನೇ ಆದರೂ ನೀನು ಆ ಹೊಲಸು ಛತ್ರವನ್ನು
ಹಾದು ಹೋಗಲೆಬೇಕು.
ಮೂವಿ ಮುಗಿದಿದೆ ಈಗ
ಅಲ್ಲದೆ ನಿನಗೀಗ ಬೇರೆ ಎಲ್ಲಿದೆ ಜಾಗ?
ಹೊರಟಿದ್ದೀಯೆ ಮತ್ತೆ ಮನೆಯತ್ತ ಬಲುದೂರ.
*****
















