ಅಳಮಂಡ ದೊಡ್ಡವ್ವ

ಅಳಮಂಡ ದೊಡ್ಡವ್ವ

ಚಿತ್ರ: ಪಿಕ್ಸಾಬೇ
ಚಿತ್ರ: ಪಿಕ್ಸಾಬೇ

ಕೊಡಗಿನಲ್ಲಿ ಹಾಲೇರಿ ಸಂಸ್ಥಾನವನ್ನು ಕಟ್ಟಿದ ವೀರಪ್ಪರಾಜನ ಮೊಮ್ಮಗ ಮೊದಲನೆ ಮುದ್ದುರಾಜನ ಕಾಲದ ಕತೆಯಿದು. ಮುದ್ದುರಾಜ ಸುಮಾರು ಐವತ್ತನಾಲ್ಕು ವರ್ಷಗಳ ಕಾಲ ಕೊಡಗನ್ನು ಆಳಿ ಅದನ್ನು ಕಾವೇರಿಯಿಂದ ಕುಮಾರಧಾರಾ ನದಿಯವರೆಗೆ ವಿಸ್ತರಿಸಿದ. ಅವನು ಬಲಿಷ್ಠವಾದ ಸೇನಾಪಡೆಯೊಂದನ್ನು ಕಟ್ಟಲು ಹಾಲೇರಿಯಲ್ಲಿ ಎಂಟು ದಿನಗಳಿಗೊಮ್ಮೆ ತೊಂಬರದೂಟವೆಂಬ ಭರ್ಜರಿ ಭೋಜನವನ್ನು ಏರ್ಪಡಿಸಿ ಅದಕ್ಕೆ ತರುಣರನ್ನು ಆಹ್ವಾನಿಸುತ್ತಿದ್ದ. ಅವರಲ್ಲಿ ಬಲಿಷ್ಠರನ್ನು ಆಯ್ದು ಪಡೆಗೆ ಸೇರಿಸಿಕೊಳ್ಳುತ್ತಿದ್ದ. ಹಾಗೆ ಸೇನೆಯನ್ನು ಸೇರಿಕೊಂಡ ಬೆಪ್ಪು ನಾಡಿನ ಅರಮೇರಿಯು ದನಗಾಹಿ ಉತ್ತನನ್ನು ನಾಯಕಪಟ್ಟಕ್ಕೇರಿಸಿ ಸೇನೆಗೆ ದೃಢಕಾಯದ ತರುಣರನ್ನು ಆರಿಸುವ ಜವಾಬ್ದಾರಿಯನ್ನು ಅವನಿಗೆ ಹೊರಿಸಿದ.

ಒಂದು ದಿನ ಉತ್ತನಾಯಕ ಮುದ್ದುರಾಜನ ಭೇಟಿಗೆ ಬಂದ. ಮಹಾಪ್ರಭುಗಳು ನಿಧಾನವಾಗಿ ಯೋಚಿಸಿ ಒಂದು ತೀರ್ಮಾನಕ್ಕೆ ಬರಬೇಕು. ಕೊಡಗಿನ ತರುಣಿಯರಲ್ಲಿ ಅನೇಕರು ಬಲಾಢ್ಯರಿರುವುದನ್ನು ನಾನು ಗಮನಿಸಿದ್ದೇನೆ. ಅವರೂ ಆಯುಧ ಹಿಡಿದು ಪುರುಷರಷ್ಟೇ ಕೆಚ್ಚಿನಿಂದ ಹೋರಡಬಲ್ಲರು. ತಾವು ಯಾಕೆ ಅವರನ್ನೂ ಪಡೆಗೆ ಸೇರಿಸಬಾರದು.

ಮುದ್ದುರಾಜನ ಹುಬ್ಬುಗಳು ಮೇಲೇರಿದವು. ಹಾಲೇರಿ ಸಂಸ್ಥಾನಕ್ಕೆ ಬಲಾಢ್ಯವಾದ ಶಾಶ್ವತ ಸೇನೆ ಎಂಬುದಿರಲಿಲ್ಲ. ಯುದ್ಧಕಾಲ ಸನ್ನಿಹಿತವಾಗುತ್ತಿದೆಯೆಂದಾದಾಗ ವೀರರನ್ನು ಕರೆಸಿ ಪಡೆ ಸಿದ್ಧಪಡಿಸಿ ಹೋರಾಟ ನಡೆಸುವುದು ವಾಡಿಕೆ. ಮುದ್ದುರಾಜನ ಅಪ್ಪ ಅಪ್ಪಾಜಿ ರಾಜನ ಕಾಲದಲ್ಲಿ ಇಕ್ಕೇರಿಯ ವೆಂಕಟಪ್ಪ ನಾಯಕನ ಸೇನೆಯೊಡನೆ ದೊಡ್ಡ ಯುದ್ಧ ನಡೆದಿತ್ತು. ಹಾಲೇರಿ ಸೇನೆ ಸಂಪೂರ್ಣವಾಗಿ ಸೋತು ಶರಣಾಗಿತ್ತು. ಹಾಲೇರಿಯ ಮೂಲ ಪುರುಷ ವೀರಪ್ಪರಾಜ ಇಕ್ಕೇರಿ ಮೂಲದವನಾದವನಾದುದರಿಂದ ವೆಂಕಟಪ್ಪ ನಾಯಕನು ಅಪ್ಪಾಜಿ ರಾಜನನ್ನು ಕ್ಷಮಿಸಿ ಬಂಧನದಿಂದ ಬಿಡುಗಡೆ ಮಾಡಿದ್ದ. ಮುದ್ದು ರಾಜ ಇಕ್ಕೇರಿಯ ಸಾರ್ವಭೌಮತ್ವವನ್ನು ಒಪ್ಪಿಕೊಂಡದ್ದರಿಂದ ಪ್ರಭು ಶಿವಪ್ಪನಾಯಕ ಕೊಡಗಿನೊಡನೆ ಸ್ನೇಹದಿಂದಿದ್ದ. ಮುದ್ದುರಾಜನಿಗೆ ಇಳಿಗಾಲದಲ್ಲಿ ಗಂಡು ಸಂತಾನವಾದಾಗ ಸ್ನೇಹದ ಸಂಕೇತವಾಗಿ ತನ್ನ ವಶದಲ್ಲಿದ್ದ ಅಮರ ಮತ್ತು ಸುಳ್ಯ ಮಾಗಣೆಗಳನ್ನು ಮುದ್ದುರಾಜನ ಮಗನಿಗೆ ಉಡುಗೊರೆಯಾಗಿ ಬಿಟ್ಟುಕೊಟ್ಟಿದ್ದ. ಇಕ್ಕೇರಿಯ ಪ್ರಾಬಲ್ಯದಿಂದಾಗಿ ದಕ್ಷಿಣದಿಂದ ಮಲೆಯಾಳದ ದಂಡಾಗಲೀ, ಉತ್ತರದಿಂದ ಮೈಸೂರಿನ ದಂಡಾಗಲೀ ಆಕ್ರಮಣ ಮಾಡುವ ಭೀತಿ ಇರಲಿಲ್ಲ.

ಆದರೂ ರಾಜಕೀಯ ಒಂದೇ ರೀತಿ ಇರುವುದಿಲ್ಲ. ಅಲ್ಲಿ ಮಿತೃತ್ವ ಶಾಶ್ವತವಾದುದಲ್ಲ. ಯಾವಾಗ ರಾಜ್ಯವಿಸ್ತರಣೆಯ ದಾಹ ಯಾವ ರಾಜನಲ್ಲಿ ಮೂಡುತ್ತದೆಯೋ ಹೇಳಲಿಕ್ಕಾಗುವುದಿಲ್ಲ. ಈಗೇನೋ ಯುಧ್ಧ ಇಲ್ಲದೆ ಇರಬಹುದು. ಆದರೆ ಮಗ ದೊಡ್ಡವೀರಪ್ಪ ಪಟ್ಟಕ್ಕೇರಿದ ಮೇಲೆ ಏನಾಗುತ್ತದೆಯೊ? ಒಂದು ಬಲಿಷ್ಠ ಸುಸಜ್ಜಿತ ಸೇನೆ ನಿರ್ಮಾಣವಾದರೆ ಕೊಡಗನ್ನು ಆಕ್ರಮಿಸುವ ಧೈರ್ಯವನ್ನು ಯಾವ ರಾಜನೂ ತೋರಲಾರ.

ಮುದ್ದುರಾಜ ತಲೆದೂಗಿದ.

ನೀನು ಹೇಳುವುದೇನೋ ಸರಿ ಉತ್ತ. ಆದರೆ ಹೆಣ್ಣುಗಳನ್ನು ಸೇನೆಗೆ ಸೇರಿಸುವುದೆ? ನನಗೆ ಗೊತ್ತಿರುವ ಹಾಗೆ ಈವರೆಗೆ ಯಾವ ರಾಜನೂ ಹೆಣ್ಣುಗಳ ಸೇನೆ ಕಟ್ಟಿದ್ದಿಲ್ಲ. ಅಪರೂಪಕ್ಕೆ ಸಿಂಹಾಸನವೇರಿ ರಾಜ್ಯವಾಳಿದ ಹೆಣ್ಣುಗಳಿರಬಹುದು. ಆದರೆ ಹೆಣ್ಣುಗಳನ್ನು ಪಡೆಗೆ ಸೇರಿಸಿಕೊಳ್ಳುವುದು ಹೊಸ ಸಂಪ್ರದಾಯ ವೆಂದೇ ನನ್ನ ಭಾವನೆ. ಅದು ನನ್ನಿಂದ ಆರಂಭವಾಗಲಿ ಎಂದು ಬಯಸುತ್ತಿದ್ದೀಯಾ ಉತ್ತ.

ಹೊಸ ಸಂಪ್ರದಾಯ ಎನ್ನುವುದಕ್ಕಿಂತ ಕಾಲದ ಅಗತ್ಯ ಎನ್ನಬಹುದು ಪ್ರಭೂ. ದೃಢಕಾಯ ಒಂದಿದ್ದರೆ ಸಾಲದು. ಯುಧ್ಧ ಗೆಲ್ಲಬೇಕಾದರೆ ಗಟ್ಟಿಯಾದ ಗುಂಡಿಗೆ ಇರಬೇಕು. ಅಂತಹ ಧೈರ್ಯವಂತರು ಹೆಣ್ಣುಗಳಲ್ಲೂ ಇರಬಹುದಲ್ಲಾ ಪ್ರಭೂ.

ನೀನು ಹೇಳುವುದು ಸರಿಯೇ. ಮಹಾಭಾರತ ಕಾಲದಲ್ಲಿ ಮಲೆಯಾಳದಲ್ಲಿ ಗಂಡಸರೇ ಇರಲಿಲ್ಲವಂತೆ. ಪ್ರಮೀಳೆಯೆಂಬವಳು ಸ್ತ್ರೀ ರಾಜ್ಯವನ್ನೇ ಕಟ್ಟಿದ್ದಳಂತೆ. ಆದರೆ ಉತ್ತಾ, ಇದಕ್ಕಿದ್ದ ಹಾಗೆ ಇಂಥದ್ದೊಂದು ಯೋಚನೆ ನಿನ್ನ ತಲೆಯಲ್ಲಿ ಹುಟ್ಟಿಕೊಂಡದ್ದು ಯಾರಿಂದಾಗಿ.

ಅಳಮಂಡ ದೊಡ್ಡವ್ವನಿಂದ ಪ್ರಭೂ.

ಅವಳ ಹೆಸರು ಅರಮನೆಗೆ ಎಂದೋ ಮುಟ್ಟಿತ್ತು. ದೊಡ್ಡವ್ವ ಉತ್ತನಾಯಕನ ಊರಿನವಳೇ. ಬೆಪ್ಪುನಾಡಿನ ಒಂದು ಭಾಗವಾಗಿದ್ದ ಅರಮೇರಿಯಲ್ಲಿ ಶೂರರ ಒಂದು ಗುಂಪು ನಿರ್ಮಾಣವಾಗಿತ್ತು. ಮಲೆಯಾಳ ದೇಶದಿಂದ ಅರಮೇರಿಗೆ ನುಗ್ಗಿ ದರೋಡೆ ಮಾಡುವ ಕಳ್ಳಕಾಕರನ್ನು ಆ ಗುಂಪು ಎದುರಿಸಿ ಓಡಿಸುತ್ತಿತ್ತು. ಅಳಮಂಡದ ತರುಣರಲ್ಲದೆ ತರುಣಿಯರೂ ಸ್ವಲ್ಪ ಯುಧ್ಧವಿದ್ಯೆ ಕಲಿತಿದ್ದರು. ಅವರಲ್ಲಿ ದೊಡ್ಡವ್ವನಿಗೆ ಅದಾಗಲೇ ದೊಡ್ಡ ಹೆಸರಿತ್ತು. ದೊಡ್ಡ ಶರೀರದ ಸಾಹಸಿ ಚೆಲುವೆಯನ್ನು ಊರವರು ಅಭಿಮಾನದಿಂದ ದೊಡ್ಡವ್ವನೆಂದೆ ಅನ್ವರ್ಥನಾಮದಿಂದ ಕರೆಯುತ್ತಿದ್ದರು. ಅದು ಎಷ್ಟು ಪ್ರಚಲಿತವಾಗಿತ್ತೆಂದರೆ ತನ್ನ ಮೂಲ ಹೆಸರು ಸ್ವತಾಃ ದೊಡ್ಡವ್ವನಿಗೇ ಮರೆತು ಹೋಗುವಷ್ಟು.

ಅವಳಪ್ಪನಿಗೆ ಅವಳು ಒಬ್ಬಳೇ ಮಗಳು. ಅವಳನ್ನು ಮಾತಂಡ ಉತ್ತಚ್ಚನಿಗಿತ್ತು ಅಪ್ಪ ಅವನನ್ನು ತನ್ನ ಮನೆಯಳಿಯನನ್ನಾಗಿ ಮಾಡಿಕೊಂಡಿದ್ದ. ಆ ಸಂಪ್ರದಾಯವನ್ನು ಕೊಡಗರು ಮಕ್ಕ ಪರಿಜೆ ಎಂದು ಕರೆಯುತ್ತಿದ್ದರು. ದೊಡ್ಡವ್ವನಲ್ಲಿ ಶಕ್ತಿ ಮತ್ತು ಚೆಲುವಿನೊಡನೆ ಬುದ್ಧಿವಂತಿಕೆಯೂ ಇತ್ತು. ತನಗಿಂತ ಅಧಿಕ ಬುದ್ಧಿವಂತನಾದ ಗಂಡು ತನ್ನ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಬಹುದೆಂಬ ಭಾವದಿಂದ, ಕಪಟವರಿಯದ, ಸಾಧು ಸ್ವಭಾವ ಮಾತಂಡ ಉತ್ತಚ್ಚನನ್ನು ಮದುವೆಯಾಗಲು ಒಪ್ಪಿದ್ದಳು. ಪತಿನಿಷ್ಠಳಾಗಿ ಸುಖಸಂಸಾರ ಸಾಗಿಸುತ್ತಿದ್ದಳು. ಇದೆಲ್ಲವನ್ನೂ ಮುದ್ದುರಾಜ ಕೇಳಿದ್ದ.

ಉತ್ತನಾಯಕಾ, ನೀನು ಇಷ್ಟು ಹೇಳಿದ ಮೇಲೆ ನನಗೆ ದೊಡ್ಡವ್ವನ ಸಾಹಸಗಳನ್ನು ಕಣ್ಣಾರೆ ಕಾಣಬೇಕೆಂದಿದೆ. ರಾಜನ ಆಜ್ಞೆಯೆಂದು ಹೇಳು. ಎಲ್ಲಾ ಏರ್ಪಾಡುಗಳನ್ನು ಮಾಡು.

ಪುಟ್ಟ ಊರು ಅರಮೇರಿಗೆ ಅಂದು ಎಂದಿಲ್ಲದ ಪುಳಕ. ಕೊಡಗನ್ನು ಆಳುವ ದೊರೆ ಆಗಮಿಸುತ್ತಿದ್ದಾನೆ. ಊರು ಸಿಂಗಾರಗೊಂಡಿತು. ಜನರು ಎಣ್ಣೆ ಹಚ್ಚಿ ಸ್ನಾನ ಮಾಡಿ ಹೊಸಬಟ್ಟೆ ಹಾಕಿಕೊಂಡರು. ರಾಜನಿಗೆ ಗೌರವದ ಸ್ವಾಗತ ಸಿಕ್ಕಿತು. ಊರ ಮುಂದಿನ ಬಯಲಿನಲ್ಲಿ ಹಾಕಿದ ಚಪ್ಪರದಲ್ಲಿ ರಾಜ ಎತ್ತರದ ಆಸನದಲ್ಲಿ ಮಂಡಿಸಿದ. ಉತ್ತನಾಯಕ ರಾಜನ ಎಡಬದಿಯಲ್ಲಿ ಅಂಗರಕ್ಷಕನಾಗಿ ನಿಂತುಕೊಂಡಿದ್ದ. ಊರ ಹಿರಿಯರು ಬಂದು ಬಲಗೈಯನ್ನು ಎದೆಯ ಮೇಲಿಟ್ಟು ರಾಜನಿಗೆ ಗೌರವದಿಂದ ತಲೆಬಾಗಿದರು. ಹಣ್ಣು ಹರಿವಾಣವನ್ನು ಮುಂದಿಟ್ಟು ಅವನ ಆಜ್ಞೆಗಾಗಿ ಕಾದರು. ಮುದ್ದುರಾಜ ಮಾತಾಡಿದ.

ಕಾವೇರಿ ಅಂಮೆಯ ಮತ್ತು ಪಾಡಿ ಇಗ್ಗುತ್ತಪ್ಪನ ದಯೆಯಿಂದ ನಮ್ಮ ಕಾಲದಲ್ಲಿ ಕೊಡಗಿನ ಮೇಲೆ ಬೇರೆ ರಾಜರ ಆಕ್ರಮಣ ಆಗಿಲ್ಲ. ಆದರೆ ಪುಂಡು ಪೋಕರಿಗಳ ದಂಡು ಅರಮೇರಿಗೆ ಬಂದು ದರೋಡೆ ಮಾಡುತ್ತಿದೆಯೆಂದು ಕೇಳಿದ್ದೇನೆ. ಅರಮೇರಿಯ ಗಂಡು ಗಲಿಗಳು ತಂಡವೊಂದನ್ನು ಕಟ್ಟಿ ದರೋಡೆದಂಡನ್ನು ಹಿಮ್ಮೆಟ್ಟಿಸಿ ನಮ್ಮ ಕೆಲಸವನ್ನು ಹಗುರಗೊಳಿಸಿದ್ದೀರಿ. ಅದಕ್ಕಾಗಿ ನಿಮ್ಮಲ್ಲರನ್ನು ನಾನು ಅಭಿಮಾನದಿಂದ ಅಭಿನಂದಿಸುತ್ತಿದ್ದೇನೆ.

ಊರು ಹೋ ಎಂದು ಚಪ್ಪಾಳೆ ತಟ್ಟಿ ಆನಂದಿಸಿತು.

ಈಗೇನೋ ನಾಡಿನಲ್ಲಿ ಶಾಂತಿಯಿದೆ. ಇದನ್ನು ಶಾಶ್ವತ ಎನ್ನುವಂತಿಲ್ಲ. ಭವಿಷ್ಯವನ್ನು ಮುಂದಾಲೋಚಿಸಿ ನಾವೊಂದು ಬಲಿಷ್ಠ ಕೊಡಗ ಸೇನೆಯನ್ನು ಕಟ್ಟಬೇಕಿದೆ. ಅದರಲ್ಲಿ ತರುಣಿಯರೂ ಇರಬೇಕು. ಅದು ನಿಮ್ಮ ಊರಿನಿಂದಲೇ ಆರಂಭವಾಗಬೇಕು. ಅಳಮಂಡ ದೊಡ್ಡವ್ವನ ಶಕ್ತಿ ಸಾಮರ್ಥ್ಯವನ್ನು ನೋಡಿದ ಮೇಲೆ ತರುಣಿಯರನ್ನು ಕೊಡಪಡೆಗೆ ಸೇರಿಸುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ. ಎಲ್ಲಿ ದೊಡ್ಡವ್ವ?

ದೊಡ್ಡವ್ವ ಮುಂದಕ್ಕೆ ಬಂದು ರಾಜನ ಪಾದ ಮುಟ್ಟಿ ನಮಸ್ಕರಿಸಿದಳು. ಅವಳ ಮುಖದಲ್ಲಿ ಗಂಭೀರ ಭಾವವಿತ್ತು.

ಮುದ್ದುರಾಜ ಗೌರವದಿಂದ ಅವಳನ್ನು ಮಾತಾಡಿಸಿದ. ಅರಮೇರಿಯ ವೀರರ ಬಗ್ಗೆ ನಮಗೆ ಹೆಮ್ಮೆಯಿದೆ. ದೊಡ್ಡವ್ವನ ಹೆಸರು ಅರಮನೆಯಲ್ಲೂ ಪ್ರತಿಧ್ವನಿಸಿದೆ. ಅರಮೇರಿಯನ್ನು ಕಂಡ ಹಾಗಾಯಿತು, ದೊಡ್ಡವ್ವನ ಸಾಹಸ ನೋಡಿದ ಹಾಗೂ ಆಯಿತು ಎಂದು ಬಂದೆ.

ದೊಡ್ಡವ್ವ ತಲೆ ತಗ್ಗಿಸಿದಳು. ಅವಳ ಕೆನ್ನೆಗಳು ಕೆಂಪಗಾಗಿದ್ದವು.

ಊರು ಮಾತಾಡಿಕೊಂಡಿತು.

ದೊಡ್ಡವ್ವನಲ್ಲೂ ನಾಚಿಕೆ ಇದೆ.

ದೊಡ್ಡವ್ವ ತಲೆ ತಗ್ಗಿಸಿಯೇ ನಿಂತಿದ್ದಳು.

ಊರು ಒಕ್ಕೊರಲಿನಿಂದ ಹೇಳಿತು.

ನಿನ್ನ ಶಕ್ತಿಯನ್ನು ಮಹಾರಾಜರು ನೋಡಲಿ ದೊಡ್ಡವ್ವಾ.

ದೊಡ್ಡವ್ವ ತಲೆ ಎತ್ತಿದಳು.

ಸೆರಗನ್ನು ಸೊಂಟಕ್ಕೆ ಬಿಗಿದು ಗಂಡ ಎಲ್ಲೆಂದು ನೋಡಿದಳು.

ಅವಳ ಗಂಡ ಮಾತಂಡ ಉತ್ತಚ್ಚ ಗುಂಪಿನ ಹಿಂದೆ ಅಡಗುವುದರಲ್ಲಿದ್ದ. ಜನರು ಅವನನ್ನು ಮುಂದೆ ತಳ್ಳಿದರು. ಅವನು ಓಡಿ ಹೋಗದಂತೆ ಅಡ್ಡ ನಿಂತರು.

ದೊಡ್ಡವ್ವ ಅವನಿಗೆ ಪ್ರದಕ್ಷಿಣೆ ಬಂದು ಅವನ ಹಿಂಬದಿಯಿಂದ ಎರಡು ಕಾಲುಗಳ ನಡುವೆ ನುಸುಳಿ ಅವನ್ನು ಭುಜದ ಮೇಲೇರಿಸಿ ಎದ್ದು ನಿಂತಳು. ಅನಾಮತ್ತಾಗಿ ನೂರು ಗಜಗಳಷ್ಟು ನಡೆದು ಹಿಂದಿರುಗಿ ಬಂದು ಮುದ್ದಯ್ಯ ರಾಜನೆದುರು ಅವನನ್ನು ಇಳಿಸಿದಳು.

ಜನರು ಚಪ್ಪಾಳೆ ತಟ್ಟಿದರು. ರಾಜನ ಕಣ್ಣುಗಳಲ್ಲಿ ಮೆಚ್ಚುಗೆಯ ಭಾವವಿತ್ತು.

ಉತ್ತನಾಯಕ ಎರಡು ಮುಡಿ ಅಕ್ಕಿ ತರಿಸಿದ. ದೊಡ್ಡವ್ವ ಅವುಗಳನ್ನು ಒಂದರ ಮೇಲೊಂದು ಇರಿಸಿ ಪ್ರದಕ್ಷಿಣೆ ಬಂದು ನಮಸ್ಕರಿಸಿದಳು. ಕುಕ್ಕರುಗಾಲಲ್ಲಿ ಕೂತು ಬಲವನ್ನೆಲ್ಲಾ ಹಾಕಿ ಅವುಗಳನ್ನು ತಾನೇ ತಲೆಯ ಮೇಲಿರಿಸಿ ಮತ್ತೆ ನೂರು ಗಜ ನಡೆದು ಹಿಂದಕ್ಕೆ ಬಂದು ನಿಧಾನವಾಗಿ ಬಗ್ಗಿ ಕುಕ್ಕರುಗಾಲಲ್ಲಿ ಕೂತು ಒಂದೊಂದಾಗಿ ಎರಡು ಮುಡಿಗಳನ್ನು ಕೆಳಗಿರಿಸಿದಳು. ನಿಬ್ಬೆರಗಾಗಿ ಸ್ವತಾಃ ಮುದ್ದುರಾಜನೇ ಕೈಚಪ್ಪಾಳೆ ತಟ್ಟಿದ.

ದೊಡ್ಡವ್ವ ಹಣೆಯ ಬೆವರನ್ನು ಸೆರಗಿನ ತುದಿಯಿಂದ ಒರಸಿಕೊಂಡು ಅದರಲ್ಲೇ ಗಾಳಿ ಹಾಕಿಕೊಂಡಳು. ರಾಜ ಮುಂದೇನು ಎಂಬಂತೆ ನೋಡಿದ.

ಇಬ್ಬರು ತರುಣರು ದೊಡ್ಡದಾದ ಉಪ್ಪಿನ ಮೂಟೆಯೊಂದನ್ನು ಕಷ್ಟಪಟ್ಟು ಎತ್ತಿಕೊಂಡು ಬಂದು ರಾಜ ಕೂತಿದ್ದ ಚಪ್ಪರದೆದುರು ತಂದಿರಿಸಿದರು.

ದೊಡ್ಡವ್ವ ಮತ್ತೆ ಸೆರಗನ್ನು ಸಿಕ್ಕಿಸಿಕೊಂಡಳು. ಅಷ್ಟು ದೊಡ್ಡ ಮೂಟೆಯನ್ನು ಒಂದು ಬದಿಯಿಂದ ಎರಡೂ ಕೈಗಳಲ್ಲಿ ಎತ್ತಿ ಮೂರು ಸುತ್ತು ತಿರುಗಿ ಅಷ್ಟು ದೂರಕ್ಕೆ ಮೂಟೆಯನ್ನು ಬೀಸಿ ಒಗೆದಳು. ಮುದ್ದು ರಾಜ ವಿಸ್ಮಯದಿಂದ ಎದ್ದು ನಿಂತ.

ದೊಡ್ಡವ್ವ ಚಪ್ಪರದಲ್ಲಿ ರಾಜನಿಗೆಂದು ಇರಿಸಿದ್ದ ನೀರ ತಂಬಿಗೆಯನೆತ್ತಿ ಗಟಗಟನೆ ಅಷ್ಟೂ ನೀರನ್ನು ಕುಡಿದು ಸುಧಾರಿಸಿಕೊಂಡಳು.

ದೊಡ್ಡವ್ವನಿಗೆ ದೊಡ್ಡದೊಂದು ಜಹಗೀರನ್ನು ಉಡುಗೊರೆಯಾಗಿ ನೀಡಬೇಕೆಂದು ನಾವು ನಿಶ್ಚಯಿಸಿದ್ದೇವೆ. ಊರ ಸಮಸ್ತರ ಒಪ್ಪಿಗೆ ಬೇಕು.

ಊರು ಹೋ ಎಂದು ಸಾಮೂಹಿಕ ಒಪ್ಪಿಗೆ ಸೂಚಿಸಿತು.

ಬೆವತು ಒದ್ದೆಯಾಗಿದ್ದ ದೊಡ್ಡವ್ವನೆಂದಳು.

ಬೇಡಿ ದೊರೆ. ನನಗೇನೂ ಬೇಡ. ಅಪ್ಪ ಮಾಡಿದ್ದೇ ಸಾಕಷ್ಟಿದೆ. ನಮ್ಮ ಅರಮೇರಿ ಊರಿನ ಮೇಲೆ ಹಾಲೇರಿಯ ಕೃಪಾದೃಷ್ಟಿ ಇದ್ದರೆ ಅದುವೇ ದೊಡ್ಡ ಉಡುಗೊರೆ.

ಮುದ್ದುರಾಜನ ಹುಬ್ಬು ಮೇಲೇರಿತು. ದೊಡ್ಡವ್ವನಲ್ಲಿ ಲವಲೇಶ ಸ್ವಾರ್ಥವಿಲ್ಲ.

ಅರಮೇರಿಯಲ್ಲಿ ಅಂದು ಹಬ್ಬದೂಟ.

ಊಟದ ಬಳಿಕ ರಾಜ ಉತ್ತನಾಯಕನಲ್ಲಿ ಹೇಳಿ ಕಳುಹಿಸಿದ.

ದೊಡ್ಡವ್ವ ಬಂದಳು.

ರಾಜ ತನ್ನ ಸುತ್ತಲಿದ್ದವರಿಗೆ ದೂರ ಹೋಗಲು ಆದೇಶಿಸಿದ. ದೊಡ್ಡವ್ವ ಅಚ್ಚರಿ ಯಿಂದ ರಾಜನ್ನು ನೋಡಿದಳು.

ಸೇನೆಯಲ್ಲಿ ತರುಣಿಯರನ್ನು ಸೇರಿಸಬೇಕೆಂದಿದ್ದೇನೆ. ನೀನು ಸೇರುತ್ತೀಯಾ ದೊಡ್ಡವ್ವ.

ಇಲ್ಲ ದೊರೆ. ಯಾರು ಯಾವುದಕ್ಕೆ ಅರ್ಹರೋ ಅದನ್ನೇ ಮಾಡಬೇಕು.

ಹೆಣ್ಣುಗಳಿಗೆ ಹೋರಾಟದ ಸಾಮರ್ಥ್ಯ ಇಲ್ಲ ಅನ್ನುತ್ತೀಯಾ?

ಹೆಣ್ಣುಗಳಿಗಾಗಿ ಸೇನೆಯ ಒಳಗೆ ನಡೆಯಬಹುದಾದ ಹೋರಾಟದ ಬಗ್ಗೆ ಹೇಳುತ್ತಿದ್ದೇನೆ.

ರಾಜನಿಗೆ ಅವಳನ್ನು ಮೆಚ್ಚದಿರಲು ಸಾಧ್ಯವಾಗಲೇ ಇಲ್ಲ.

ದೊಡ್ಡವ್ವಾ.

ಹೇಳಿ ದೊರೆ.

ನೀನ್ಯಾಕೆ ಇಷ್ಟು ತಡವಾಗಿ ನನ್ನ ಕಣ್ಣಿಗೆ ಬಿದ್ದೆ?

ಮುದ್ದುರಾಜನ ಮಾತಿಗೆ ಅವಳಲ್ಲಿ ಲಜ್ಜೆ ಮೂಡಿತು. ಅವಳು ಗಂಡನಿಗೆ ನಿಷ್ಠಳಾಗಿದ್ದಳು. ಅವನೂ ಅವಳನ್ನು ಅಪಾರ ಪ್ರೀತಿಸುತ್ತಿದ್ದ. ಅವಳ ಮಾತನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದ. ಅವಳೆಂದೂ ಅವನ ಇಷ್ಟಕ್ಕೆ ವಿರುದ್ಧವಾಗಿ ಹೋದವಳಲ್ಲ. ಅವನು ಅವಳ ದೇಹಕ್ಕೆ ಒಡೆಯನಾಗಿದ್ದ. ಆದರೆ ಅವಳ ಭಾವವನ್ನು ಆಳಲು ಅವನಿಂದ ಆಗಿರಲಿಲ್ಲ. ಆಗ ಎಲ್ಲರೆದುರು ರಾಜ ತನ್ನನ್ನು ಮೆಚ್ಚಿಕೊಂಡಿದ್ದಾನೆ. ಈಗ ಏಕಾಂತದಲ್ಲಿ ಹೃದಯವನ್ನು ಬಿಚ್ಚಿಡುತ್ತಿದ್ದಾನೆ. ತನ್ನ ಗಂಡನೆಂದೂ ಹೀಗೆ ಮಾಡಿರಲಿಲ್ಲ. ಅವಳಿಗೆ ಮೊದಲ ಬಾರಿಗೆ ತನ್ನ ಬಾಳು ಸಾರ್ಥಕವಾಯಿತು ಎಂದನ್ನಿಸಿತು.

ಅವಳ ಮೌನ ರಾಜನನ್ನು ಚಿಂತೆಗೀಡು ಮಾಡಿತು.

ಯಾಕೆ ಮೌನವಾದೆ ದೊಡ್ಡವ್ವಾ? ನಾನು ತಪ್ಪು ಹೇಳಿದೆನೆ?

ಇಲ್ಲ ದೊರೆ. ಧರೆಯಾಳುವವನಾಡಿದನೆಂದು ದೊಡ್ಡವ್ವ ಅಂತಹ ಮಾತುಗಳನ್ನು ಆಡಬಹುದೆ?

ಮುದ್ದು ರಾಜ ಮನದಲ್ಲೇ ಅಂದುಕೊಂಡ.

ಇವಳು ಬುದ್ಧಿವಂತೆ.

ನಮ್ಮ ಅಜ್ಜ, ಹಾಲೇರಿ ವಂಶದ ಮೂಲ ಪುರುಷ ಮದುವೆಯಾದದ್ದು ಹೊರ ಜಾತಿಯಿಂದ. ನಾನು ಇನ್ನೊಂದು ಮದುವೆಯಾಗಬೇಕೆಂದಿದ್ದೇನೆ ಜಾತಿ ಕಟ್ಟಳೆ ಮೀರಿ.

ಅದು ತಪ್ಪು ಅಂತೀಯಾ?

ಅನ್ನೋಕೆ ನಾನ್ಯಾವಳು ದೊರೆ? ನಿಜವಾದ ಸುಖ ಹೊರಗಿರುವುದಾದರೆ ಜಾತಿ ಮತಗಳ ಕಟ್ಟಳೆ ಮುರಿಯುವುದು ತಪ್ಪೆಂದು ನಾನು ಹೇಳುವುದಿಲ್ಲ.

ನೀನು ಸುಖವಾಗಿದ್ದೀಯಾ ದೊಡ್ಡವ್ವ?

ಸುಖವನ್ನು ನಮ್ಮೊಳಗೇ ಹುಡುಕಿಕೊಳ್ಳಬೇಕು ದೊರೆ. ಅದು ಹೊರಗೆಲ್ಲೋ ಇರುವುದಿಲ್ಲ.

ರಾಜ ಎದ್ದು ನಿಂತ. ತನ್ನ ಎಡಗೈ ಕಿರುಬೆರಳಿನ ಉಂಗುರವನ್ನು ತೆಗೆದು ಅವಳಿಗಿತ್ತ.

ತೆಗೆದುಕೋ ದೊಡ್ಡವ್ವ. ಮೆಚ್ಚಿ ಕೊಡುವುದನ್ನು ಬೇಡವೆನ್ನಬೇಡ.

ದೊಡ್ಡವ್ವ ನಕ್ಕಳು.

ಧರೆಯಾಳುವ ದೊರೆ ದೇವರಿಗೆ ಸಮಾನ. ಅವನು ನೀಡಿದ್ದನ್ನು ಬೇಡವೆನ್ನುವುದು ಉದ್ಧಟತನವಾಗುತ್ತದೆ.

ನಾವಿನ್ನು ಬರುತೀವಿ ದೊಡ್ಡವ್ವಾ.

ಆಗಲಿ ದೊರೆ.

ದೊಡ್ಡವ್ವ ಬಾಗಿ ಮುದ್ದುರಾಜನ ಪಾದಮುಟ್ಟಿ ಕೈಗಳನ್ನು ಕಣ್ಣಿಗೊತ್ತಿಕೊಂಡಳು.

ರಾಜ ಉತ್ತನಾಯಕನೊಡನೆ ಹಾಲೇರಿಗೆ ಹಿಂದಿರುಗಿದ.

ಮಗ ದೊಡ್ಡವೀರಪ್ಪನ್ನು ಕರೆದು ಪಟ್ಟದ ಕತ್ತಿಯನ್ನು ಅವನ ಕೈಯಲ್ಲಿರಿಸಿ ಹೇಳಿದ.

ವಾನಪ್ರಸ್ಥದ ವಯಸ್ಸು ನಮ್ಮದು. ಜೀವ ವಿಶ್ರಾಂತಿ ಬಯಸುತ್ತಿದೆ. ಕೊಡಗು ಮೆಚ್ಚುವ ಅರಸನಾಗಿ ರಾಜ್ಯವಾಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಾತ್ರೆ ಓದಿದ ದುಃಖಗಳು
Next post ಏಪ್ರಿಲ್ ತಿಂಗಳ ಮೂರು ರಾತ್ರೆಗಳು

ಸಣ್ಣ ಕತೆ

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys