ಬುದ್ಧಿಜೀವಿಗಳ ಮೊದಲಪ್ರಯೋಗ

ಬುದ್ಧಿಜೀವಿಗಳ ಮೊದಲಪ್ರಯೋಗ

೧ ಅಧ್ಯಾಯ ಒಂದು

ಬುದ್ಧಿಜೀವಿಗಳ ಮೊದಲಪ್ರಯೋಗ

‘ಸ್ಥಿರ’ ಚಿತ್ರವು ‘ಚಾಲನೆ’ಯನ್ನು ಪಡೆದುಕೊಂಡು ೨೦೦೮ಕ್ಕೆ ನೂರ ಹದಿಮೂರು ವರ್‍ಷಗಳಾದುವು. ವೈಜ್ಞಾನಿಕ ಆಟಿಕೆಯಾಗಿ ಅರಳಿದ ‘ಚಲನಚಿತ್ರ’ ಕ್ರಮೇಣ ‘ಸಿನಿಮಾ’ ರೂಪವನ್ನು ತಾಳಿ ಜನಪ್ರಿಯ ಮನರಂಜನಾ ಮಾಧ್ಯಮವಾಗಿದೆ. ಕಲೆ-ತಂತ್ರಜ್ಞಾನದ ಸಂಯೋಜನೆಯ ಜೊತೆಗೆ ವ್ಯಾಪಾರದ ಚಾಕಚಕ್ಯತೆ ಮತ್ತು ಮಾರಾಟದ ಜಾಲವನ್ನು ಮೈಗೂಡಿಸಿಕೊಂಡು ವಿಶ್ವವ್ಯಾಪಿಯಾಗಿದೆ. ಅಪಾರ ಮೊತ್ತದ ಬಂಡವಾಳ ತೊಡಗಿಸಿಕೊಂಡು ಹಲವಾರು ಉಪ ಕೈಗಾರಿಕೆಗಳಿಗೆ ಆಧಾರವಾಗಿ ಅಸಂಖ್ಯಾತ ಜನರಿಗೆ ಉದ್ಯೋಗವೊದಗಿಸಿದೆ. ಆದರೂ ಇದೊಂದು ಕೈಗಾರಿಕೆಯೋ, ಅಲ್ಲವೋ ಎಂಬ ಜಿಜ್ಞಾಸೆಗೆ ಖಚಿತ ಉತ್ತರ ಇನ್ನೂ ದೊರೆತಿಲ್ಲ. ಇರಲಿ, ಸಿನಿಮಾ ಹುಲುಮಾನವರನ್ನು ಅತಿಮಾನುಷರನ್ನಾಗಿಸಿ ವಾಸ್ತವ ಮತ್ತು ಭ್ರಮೆಯ ನಡುವಿನ ಗೆರೆಯನ್ನು ಅಳಿಸಿಹಾಕಿ ಒಂದರೊಳಗೊಂದು ಬೆರೆಯುವಂತೆ ಮಾಡಿದೆ. ಜಗತ್ತಿನ ಅತ್ಯಂತ ಜನಪ್ರಿಯ ಹಾಗೂ ಅಗ್ಗದ ಮನರಂಜನಾ ಮಾಧ್ಯಮವೆಂದು ಖ್ಯಾತಿಗಳಿಸಿದೆ.

ಆರಂಭದಲ್ಲಿ ತಯಾರಾಗುತ್ತಿದ್ದ ಮಾತಿಲ್ಲದ ಮೂಕಿ ಸಿನಿಮಾಗಳು ಭಾಷೆಯ ಗೈರು ಹಾಜರಿಯಿಂದಲೇ ಜಾಗತಿಕ ಸ್ವರೂಪ ಪಡೆದಿದ್ದವು. ಮಾತಿನ ಅಳವಡಿಕೆಯ ನಂತರ ಅವುಗಳಿಗೆ ಪ್ರಾದೇಶಿಕ ಲಕ್ಷಣ, ಸೊಬಗು ಬಂತು. ‘ಮಾತಿ’ನ ಒಂದೇ ಕಾರಣಕ್ಕಾಗಿ ಚಲನಚಿತ್ರರಂಗ ಬೇರೆ ಬೇರೆ ಇತಿಹಾಸಗಳನ್ನು ಪಡೆದಿದೆ. ಜಾಗತಿಕ ಸಿನಿಮಾ ಜನ್ಮ ತಾಳಿ (೧೮೯೫) ನೂರಾ ಹದಿಮೂರು ವರ್‍ಷಗಳಾದರೆ ಭಾರತೀಯ ಚಲನಚಿತ್ರರಂಗ (೧೯೧೩)ಕ್ಕೆ ತೊಂಬತ್ತಾರರ ಹರೆಯ. ೧೯೩೧ರಲ್ಲಿ ಹಿಂದಿ ಭಾಷೆಯ ಸಿನಿಮಾ ‘ಆಲಂಆರಾ’ ತೆರೆಕಾಣುವ ಮೂಲಕ ಭಾರತದಲ್ಲಿ ‘ಟಾಕಿ’ ಯುಗ ಆರಂಭವಾಯಿತು. ಅದಾದ ಮೂರು ವರ್‍ಷಗಳ ತರುವಾಯ ಕನ್ನಡದ ವಾಕ್ಚಿತ್ರ ‘ಸತಿ ಸುಲೋಚನಾ’ ತೆರೆಯ ಮೇಲೆ ಮೂಡಿತು. ಹಾಗಾಗಿ ಕನ್ನಡ ವಾಕ್ಚಿತ್ರ ಈಗ ತನ್ನ ಎಪ್ಪತ್ತೈದನೇ ವರ್‍ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದೆ. (ದಿನಾಂಕ ೧೪.೪.೨೦೦೮ರಂದು ಪ್ರಕಟವಾದ ಲೇಖನ).

ಆದರೂ ಕರ್ನಾಟಕ ಚಲನಚಿತ್ರರಂಗದ ಇತಿಹಾಸವನ್ನು ಮೂಕಿಯುಗದಿಂದಲೇ ಗುರುತಿಸುವುದು ಸೂಕ್ತ. ಹಾಗೆ ಮಾಡದಿದ್ದರೆ ಈ ನೆಲದಲ್ಲಿ ಸಂಭವಿಸಿದ ಒಂದು ಅಪರೂಪದ ಸಂಭ್ರಮವನ್ನು ಇತಿಹಾಸದಿಂದ ಹೊರಗಿಟ್ಟ ಅಪಚಾರವಾಗುತ್ತದೆ. ಚಲನಚಿತ್ರಗಳ ತಯಾರಿಕೆ ಕನ್ನಡ ನೆಲದಲ್ಲೇ ನಡೆದ ಕಾರಣಕ್ಕಾಗಿ ಕರ್ನಾಟಕದ ಚಲನಚಿತ್ರರಂಗದ ಇತಿಹಾಸವನ್ನು ಗುರುತಿಸಲು ಸ್ವಲ್ಪ ಹಿಂದಕ್ಕೆ ಹೋಗಬೇಕಾದ ಅನಿವಾರ್ಯವಿದೆ. ೧೯೨೫ರಲ್ಲಿ ತಯಾರಾದ ‘ವಸಂತ ಸೇನಾ’ ಮೂಕಿ ಚಿತ್ರವು ಕರ್ನಾಟಕ ಚಲನಚಿತ್ರ ಚರಿತ್ರೆಯಲ್ಲಿ ಒಂದು ಮೈಲಿಗಲ್ಲು. ಅದೊಂದು ಬುದ್ಧಿಜೀವಿಗಳ ಪ್ರಾಯೋಗಿಕ ಪ್ರಯತ್ನ. ಭಿನ್ನ ಕ್ಷೇತ್ರಗಳ ಪ್ರತಿಭಾವಂತರ ಅಪೂರ್ವ ಸಂಗಮ. ‘ವಸಂತ ಸೇನಾ’ ಚಲನಚಿತ್ರ ತಯಾರಿಕೆ ಆರಂಭವಾದದ್ದು ವಿಚಿತ್ರ ಸಂದರ್ಭದಲ್ಲಿ. ಅದಕ್ಕೆ ನಾಂದಿ ಹಾಡಿದವರು ಮೋಹನ್ ಭವನಾನಿ ಮತ್ತು ನಾಟಕಕಾರ ಟಿ.ಪಿ. ಕೈಲಾಸಂ. ಮೋಹನ್ ಭವನಾನಿ ಜರ್ಮನಿಯಲ್ಲಿ ತರಬೇತು ಪಡೆದಿದ್ದ ಕ್ಯಾಮೆರಾಮೆನ್. ಕೇಂದ್ರ ಫಿಲಂ ಡಿವಿಜನ್‌ನಲ್ಲಿದ್ದ ಉತ್ತರ ಭಾರತೀಯ. ಅವರಿಗೂ ಮೈಸೂರಿಗೂ ಎಲ್ಲಿಲ್ಲದ ನಂಟು. ಮೈಸೂರು ದಸರಾ, ಜಂಬೂಸವಾರಿ, ಅರಮನೆಯ ದರ್ಬಾರ್, ಸಂಗೀತ ಕಚೇರಿ ಮತ್ತು ಖೆಡ್ಡಾ ಕಾರ್ಯಾಚರಣೆಯನ್ನು ಅವರು ಚಿತ್ರೀಕರಿಸಿದ್ದರು. ಆ ಬಗ್ಗೆ ಸಾಕ್ಷ್ಯಚಿತ್ರ ಕೂಡ ತಯಾರಿಸಿದ್ದರು. ಆ ಮೂಲಕ ಕನ್ನಡ ನಾಡಿನ ಸಂಸ್ಕೃತಿಯ ವೈಶಿಷ್ಟ್ಯವನ್ನು ಅರಿತಿದ್ದರು. ಜೊತೆಗೆ ಕರ್ನಾಟಕದ ಬುದ್ಧಿಜೀವಿಗಳೊಡನೆ ಸಂಪರ್ಕ ಸಹ ಬೆಳೆದಿತ್ತು. ಒಮ್ಮೆ ಟಿ.ಪಿ. ಕೈಲಾಸಂ ಅವರೊಡನೆ ಮಾತನಾಡುತ್ತಿರುವಾಗ ಮೈಸೂರಿನಲ್ಲಿ ತಾವೊಂದು ಕಥಾ ಸಿನಿಮಾ ತಯಾರಿಸುವ ಪ್ರಸ್ತಾಪ ಮುಂದಿಟ್ಟರಂತೆ. ಕೈಲಾಸಂರವರು ಶೂದ್ರಕನ ‘ಮೃಚ್ಛಕಟಿಕಂ’ ನಾಟಕವನ್ನು ಚಿತ್ರ ಮಾಡಲು ಸೂಚಿಸಿದರಂತೆ. ಭಾರತೀಯ ಸಾಹಿತ್ಯದಲ್ಲೇ ಸರ್ವಕಾಲದ ಮೇರು ಕೃತಿಯಲ್ಲೊಂದೆನಿಸಿದ ‘ಮೃಚ್ಛಕಟಿಕಂ’ನ ವಸ್ತುವೂ ಭವನಾನಿಯವರಿಗೆ ಒಪ್ಪಿತವಾಯಿತು.

ವಸಂತಸೇನಾ ಚಿತ್ರದ ಧೃಶ್ಯಗಳು

‘ಮೃಚ್ಛಕಟಿಕಂ’ ಯಾವುದೇ ಕಾಲಕ್ಕೆ ಸಲ್ಲುವ ನಾಟಕ. ಈ ಕೃತಿಯ ರಚನೆಕಾರನ ಬಗ್ಗೆ ಒಮ್ಮತವಿಲ್ಲ. ರಚನೆಯಾದ ಕಾಲದ ಬಗ್ಗೆಯೂ ಖಚಿತವಿಲ್ಲ. ಆದರೆ ಬೌದ್ಧ ಧರ್ಮದ ಪ್ರಭಾವವಿರುವಂತೆ ಕಾಣುವ ಈ ನಾಟಕವು ಕ್ರಿ.ಪೂ. ಎರಡನೇ ಶತಮಾನದಲ್ಲಿ ಬದುಕಿದ್ದನೆಂದು ಹೇಳಲಾದ ದೊರೆ ಶೂದ್ರಕ ಬರೆದ ಕೃತಿಯೆಂಬ ಅಭಿಪ್ರಾಯ ಸ್ವೀಕೃತವಾಗಿದೆ. ‘ಮೃಚ್ಛಕಟಿಕಂ’ ಬಿಟ್ಟರೆ ಸಂಸ್ಕೃತದಲ್ಲಿ ಮತ್ತೆ ಎರಡು ನಾಟಕಗಳನ್ನು ಶೂದ್ರಕ ರಚಿಸಿದ್ದನೆಂಬ ಅಭಿಪ್ರಾಯವಿದೆ. ಅವು ಲಭ್ಯವಿಲ್ಲ. ಪಂಡಿತರ ಪ್ರಕಾರ ಜಗತ್ಪ್ರಸಿದ್ಧ ಕಾಳಿದಾಸ ಬದುಕಿದ್ದ ಕಾಲಕ್ಕಿಂತ ಸುಮಾರು ಆರು ನೂರು ವರ್‍ಷಗಳ ಹಿಂದೆಯೇ ರಚನೆಗೊಂಡ ಶ್ರೇಷ್ಟ ಕೃತಿ ಇದು. ಆದರೆ ‘ಮೃಚ್ಛಕಟಿಕಂ’ ಕಾಳಿದಾಸನ ‘ಅಭಿಜ್ಞಾನ ಶಾಕುಂತಲಾ’ದಷ್ಟು ಲೋಕ ಪ್ರಸಿದ್ಧಿ ಪಡೆಯಲಿಲ್ಲ. ಮುಖ್ಯವಾಗಿ ಯೂರೋಪಿಯನ್ ರೊಮ್ಯಾಂಟಿಕ್ ಯುಗದ ಜನರು ಶಕುಂತಲೆಯ ನವಿರು ದುರಂತಕ್ಕೆ ಮಾರು ಹೋದ ಕಾರಣ ‘ಮೃಚ್ಛಕಟಿಕಂ’ ಬಹುಕಾಲ ವಿದೇಶಿ ವಿದ್ವಾಂಸರ ಗಮನ ಸೆಳೆಯಲಿಲ್ಲ. ಈಗ ಅದು ಕಾಳಿದಾಸ, ಷೇಕ್ಸ್‌ಪಿಯರ್‌ರವರ ಯಾವುದೇ ಕೃತಿಗೂ ಸರಿಸಮಾನವಾಗಿ ನಿಲ್ಲಬಲ್ಲ ನಾಟಕ ಎಂದು ಜಾಗತಿಕ ಮನ್ನಣೆ ಪಡೆದಿದೆ (ಸೈಡ್ ರೀಲ್ ನೋಡಿ).

ಪಾಟಲೀಪುತ್ರ ಪ್ರಾಂತ್ಯದ ಆವಂತಿಯಲ್ಲಿ ನಾಲ್ಕು ದಿನಗಳ ಅವಧಿಯಲ್ಲಿ ಘಟಿಸುವ ಈ ನಾಟಕ ಹತ್ತು ಅಂಕಗಳಲ್ಲಿ ವಿಸ್ತಾರ ಪಡೆದಿದೆ. ಸಂಸ್ಕೃತ ನಾಟಕಗಳ ಪ್ರಧಾನ ಲಕ್ಷಣವಾದ ಶೃಂಗಾರ, ಹಾಸ್ಯರಸಗಳ ಅಭಿವ್ಯಕ್ತಿಯ ಜೊತೆಗೆ ಜನಸಾಮಾನ್ಯ ಬದುಕಿನ ಕುಡಿತ, ಕಳ್ಳತನ, ಜೂಜು, ಹಾದರ, ದ್ರೋಹ, ಸ್ನೇಹ, ಸಾಮಾಜಿಕ-ರಾಜಕೀಯ ವಿಪ್ಲವ, ಅಧಿಕಾರ ಮದದ ವಿಕಾರತೆ, ಸಾಮಾಜಿಕ ಚಲನಶೀಲತೆ ಹೀಗೆ ಅನೇಕ ಪದರಗಳನ್ನು ಈ ಕೃತಿ ಅನಾವರಣಗೊಳಿಸುತ್ತದೆ. ಜೊತೆಗೆ ನಾಟಕೀಯ ತಿರುವುಗಳಿಂದ ಕುತೂಹಲವನ್ನು ಕಾಯ್ದುಕೊಳ್ಳುತ್ತದೆ. ಪುರಾಣ ವ್ಯಕ್ತಿಗಳು, ದೇವ ಪ್ರಪಂಚದ ಆಗುಹೋಗುಗಳು, ರಾಜರ ವೈಭವದ ಬದಲು ಜನ ಸಾಮಾನ್ಯರ ಬದುಕಿನ ಸೀಳುನೋಟವನ್ನು ನೀಡುವಲ್ಲಿ ಆ ಕಾಲಕ್ಕೆ ನಾಟಕ ಅಚ್ಚರಿಪಡುವಷ್ಟು ಹೊಸತನದಿಂದ ಕೂಡಿದೆ. ರಾಜರಿಂದ ಹಿಡಿದು ವ್ಯಾಪಾರಿಯವರೆಗೆ, ದನಗಾಹಿಯಿಂದ ಹಿಡಿದು ನರ್ತಕಿಯವರೆಗೆ, ಸಮಾಜದ ಎಲ್ಲ ಸ್ತರದ ಜನರಿಗೆ ಇಲ್ಲಿ ಪ್ರಾತಿನಿಧ್ಯ ಸಿಕ್ಕಿದೆ.

ಮುಖ್ಯ ಕಥಾನಕವು ಗಣಿಕೆ ಅಥವಾ ‘ನಗರವಧು’ವೆನಿಸಿದ ವಸಂತಸೇನೆ ಮತ್ತು ವ್ಯಾಪಾರದಲ್ಲಿ ನಷ್ಟ ಅನುಭವಿಸಿ, ಪತ್ನಿಯಿಂದ ದೂರವಾಗಿ, ಮಿತ್ರ(ಮೈತ್ರೇಯ)ನ ಜೊತೆ ವಾಸಿಸುತ್ತಿರುವ ಆವಂತಿಯ ಚಾರುದತ್ತ- ಇವರಿಬ್ಬರ ನಡುವಿನ ಪ್ರಣಯವೇ ಆಗಿದೆ. ಅದೇ ವೇಳೆ ವಸಂತಸೇನೆಯಿಂದ ಆಕರ್‍ಷಣೆಗೊಂಡ ಪಾಲಕ ರಾಜನ ತಿಕ್ಕಲ ಭಾವಮೈದ ಸಂಸ್ಥಾನಕನ ಕುಟಿಲೋಪಾಯಗಳು, ಹುಚ್ಚಾಟಗಳು ಪ್ರಣಯಕತೆಯನ್ನು ಸಿಕ್ಕು ಸಿಕ್ಕಾಗಿಸುತ್ತವೆ. (ಸಂಸ್ಥಾನಕ ‘ಸ’ ಅಕ್ಷರವನ್ನು ‘ಶ’ ಎಂದು ಉಚ್ಛರಿಸಿ ನಗೆ ತರಿಸುತ್ತಾನೆ. ಆ ಪಾತ್ರಕ್ಕೆ ಕನ್ನಡದಲ್ಲಿ ಶಕಾರ ಎಂದು ನಾಮಕರಣ ಮಾಡಿದೆ). ಇದರ ಜೊತೆಗೆ ಕಳ್ಳರು, ಜೂಜುಕೋರರು ಮತ್ತು ಬಂಡುಕೋರರಿಂದ ಕತೆ ಮತ್ತಷ್ಟು ವಿಸ್ತಾರ ಪಡೆದು ಒಂದು ಕಾಲಘಟ್ಟದ ಸಾಮುದಾಯಿಕ ಬದುಕಿನ ಚಿತ್ರವನ್ನು ಬಿಡಿಸಿಡುತ್ತದೆ. ಸಂಸ್ಕೃತ ನಾಟಕ ಸಾಮಾನ್ಯವಾಗಿ ದಿವ್ಯವಾದ ಪ್ರೀತಿ, ಪುರಾಣ ಪುರುಷರ ಕಥನವನ್ನು ಇಲ್ಲವೆ ಮಹಾಭಾರತದ ಪ್ರಕರಣಗಳನ್ನು ಆಧರಿಸಿದ್ದ ಕಾಲದಲ್ಲಿ ವಸಂತಸೇನೆ ರದನಿಕೆ, ಮೈತ್ರೇಯ, ಆರ್ಯಕ, ಸರ್ವಳಕರಂಥ ಸಾಮಾನ್ಯ ಮನುಷ್ಯ ಪಾತ್ರಗಳಿದ್ದ ‘ಮೃಚ್ಛಕಟಿಕಂ’ ಒಂದು ಅನನ್ಯ ಪ್ರಯೋಗವೇ ಸರಿ!

ವಸಂತಸೇನಾ ಚಿತ್ರದ ಧೃಶ್ಯಗಳು

ಬೌದ್ಧ ಧರ್ಮದ ದಟ್ಟ ಪ್ರಭಾವವು ಈ ನಾಟಕದ ಮೇಲಿರುವುದನ್ನು ವಿಮರ್ಶಕರು ಗುರುತಿಸಿದ್ದಾರೆ. ಕತೆಯ ಕೇಂದ್ರವು ಪ್ರಣಯ ಪ್ರಕರಣವೇ ಆದರೂ ಅಂದಿನ ಸಾಮಾಜಿಕ ಚಲನಶೀಲತೆಯನ್ನು ತೆರೆದಿಡುವ ರೀತಿಯೇ ಅನನ್ಯವಾದದ್ದು. ಆ ಕಾಲದಲ್ಲಿ ‘ಕಾಮಕಲೆ’ಯಲ್ಲಿ ಪರಿಣಿತರಾದ ‘ನಗರವಧು’ ಪರಂಪರೆಗೆ ಸೇರಿದವರು ಒಬ್ಬನೊಡನೆ ಕೂಡಿ, ಬೇಕಾದರೆ ಆತನನ್ನು ಅಧಿಕೃತವಾಗಿ ವಿವಾಹವಾಗಬಹುದಿತ್ತು. ವಸಂತಸೇನೆ ಕೊನೆಗೆ ಚಾರುದತ್ತನನ್ನೇ ವರಿಸುತ್ತಾಳೆ. ಹಾಗಾಗಿ ‘ನಗರವಧು’ಗಳಿಗೆ ಏಕಕಾಲದಲ್ಲಿ ಸಾಮಾಜಿಕ ಚಲನೆಯಲ್ಲಿ ಪಾಲ್ಗೊಳ್ಳುವ ಹಾಗೂ ವ್ಯಕ್ತಿಸ್ವಾತಂತ್ರ್ಯವನ್ನು ಅನುಭವಿಸುವ ಅವಕಾಶವಿತ್ತು. ಪ್ರಜೆಗಳ ಬಗ್ಗೆ ನಿರಾಸಕ್ತಿಯಿಂದಿದ್ದ ಪಾಲಕ ರಾಜನ ವಿರುದ್ಧ ದನಗಾಹಿ ‘ಆರ್ಯಕ’ ಬಂಡೆದ್ದು ಸಿಂಹಾಸನವನ್ನು ಉರುಳಿಸಿ ತಾನೇ ರಾಜನಾಗುವ ರಾಜಕೀಯ ಚಲನಶೀಲತೆಯನ್ನು ನಾಟಕ ವಿಜೃಂಭಿಸುತ್ತದೆ. ಹಾಗಾಗಿ ಈ ನಾಟಕ ಮುಖ್ಯವಾಗಿ ಸಾಮಾಜಿಕ ನೆಲೆಯಲ್ಲಿ ಇಂದಿಗೂ ಪ್ರಸ್ತುತವಾಗಿಯೇ ಉಳಿದಿದೆ. ಇಂಥ ಕತೆಯನ್ನು ಚಿತ್ರವಾಗಿಸಲು ಕೈಲಾಸಂ ಅವರು ಸೂಚಿಸಿರುವುದರಲ್ಲಿ ಆಶ್ಚರ್ಯವೇನೂ ಕಾಣದು.

ವಸಂತಸೇನಾ ಚಿತ್ರದ ದೃಶ್ಯ

ಭವನಾನಿ ಚಿತ್ರ ನಿರ್ಮಾಣಕ್ಕೆ ಅಣಿಯಾದರು. ಅದು ಸುಶಿಕ್ಷಿತರು ಚಲನಚಿತ್ರರಂಗಕ್ಕೆ ಬರಲು ಅಸಹ್ಯಪಟ್ಟುಕೊಳ್ಳುತ್ತಿದ್ದ ಕಾಲ. ಆದರೂ ತಮ್ಮ ಪ್ರಸಿದ್ಧಿಯಿಂದ ಕೈಲಾಸಂ ಮತ್ತು ಭವನಾನಿ ವಿವಿಧ ಕ್ಷೇತ್ರಗಳ ಬುದ್ಧಿಜೀವಿಗಳನ್ನು, ಹವ್ಯಾಸಿ-ವೃತ್ತಿ ಕಲಾವಿದರನ್ನು, ತಂತ್ರಜ್ಞರನ್ನು ಎಳೆತಂದರು. ಕೇವಲ ಹೊಸತನದ ಅನುಭವಕ್ಕಾಗಿ ದುಡಿಯಲು ಸಿದ್ಧವಾಗಿದ್ದ ಪ್ರಸಿದ್ಧರ ದಂಡು ಅದು. ಕಲಾವಿದರ ಪಟ್ಟಿಯನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಅದಾಗಲೇ ಚಲನಚಿತ್ರ ನಿರ್ಮಾಪಕರಾಗಿ ನಿರ್ದೇಶಕರಾಗಿ ಜಿ.ಕೆ. ನಂದಾ ಹೆಸರಿನಿಂದ ಪ್ರಸಿದ್ಧರಾಗಿದ್ದ ಜೈಕಿಷನ್ ನಂದಾ (ನಾಯಕ ಚಾರುದತ್ತನ ಪಾತ್ರ), ಕಲಾವಿದೆ ಏಣಾಕ್ಷಿ ರಾಮರಾವ್ (ವಸಂತ ಸೇನ), ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿದ್ದ ಡಾ.ಎಸ್.ಎಸ್. ನಾರಾಯಣಶಾಸ್ತ್ರಿ (ದೊರೆ ಪಾಲಕ), ಮುಂಬೈನ ಮೂಕಿ ಚಿತ್ರ ಕಲಾವಿದೆ ನಳಿನಿ ಪರ್ಕಾಡ್ (ರದನಿಕೆ), ಸಮಾಜ ಸೇವಾಕರ್ತೆ ಶ್ರೀಮತಿ ಕಮಲಾದೇವಿ ಚಟ್ಟೋಪಾಧ್ಯಾಯ (ದಂತಾ), ಕತೆಗಾರ ‘ಆನಂದ’ ಕಾವ್ಯನಾಮದ ಅಜ್ಜಂಪುರ ಸೀತಾರಾಂ (ಆರ್ಯಕ), ಅವರು ಪ್ರಧಾನ ಭೂಮಿಕೆಯಲ್ಲಿದ್ದರು. ಕೈಲಾಸಂರವರು ಶಕಾರನ ಪಾತ್ರ ಮಾಡುವುದಾದರೆ ಚಿತ್ರ ನಿರ್ಮಾಣ ಮಾಡುವೆನೆಂಬ ಷರತ್ತನ್ನು ಭವನಾನಿ ಹಾಕಿದ್ದರು. ಅದರಂತೆ ಕೈಲಾಸಂ ಮೃಚ್ಛಕಟಿಕಂ ನಾಟಕದ ಜೀವಾಳವೇ ಆದ ‘ಶಕಾರ’ನ ಪಾತ್ರ ವಹಿಸಿದ್ದರು. ಆದರೆ ನಟರಾಗಿ ಶಕಾರನ ಸಂಕೀರ್ಣ ವ್ಯಕ್ತಿತ್ವವನ್ನು ಅಭಿವ್ಯಕ್ತಿಸುವಲ್ಲಿ ಅವರು ಸೋತಿದ್ದರು ಎಂಬುದು ಅನೇಕರ ಅಭಿಪ್ರಾಯವಾಗಿತ್ತು.

ಟಿ ಪಿ ಕೈಲಾಸಂ

ಕಲೆ, ಸಾಹಿತ್ಯ, ಶಿಕ್ಷಣ ಕ್ಷೇತ್ರದ ಪ್ರಸಿದ್ಧರ ಜೊತೆಗೆ ಕೈಲಾಸಂರವರಿಗೆ ಆಪ್ತರಾಗಿದ್ದ ಪತ್ರಕರ್ತ ಬಿ.ಎಸ್.ರಾಮರಾವ್, ಇಂಗ್ಲಿಷ್-ಕನ್ನಡ ನಿಘಂಟು ಖ್ಯಾತಿಯ ಡಾ.ಡಿ.ಕೆ. ಭಾರದ್ವಾಜ್, ಅವರ ಮಗ ಹರೀಂದ್ರ (ಬಾಲನಟ), ಆಗತಾನೇ ವೃತ್ತಿರಂಗಭೂಮಿಯಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಎಂ.ವಿ.ರಾಜಮ್ಮ ಸಹ ಈ ಚಿತ್ರದಲ್ಲಿ ನಟಿಸಿದ್ದರು.

ಬೌದ್ಧರ ಯುಗದಲ್ಲಿ ನಡೆಯುವ ಕತೆಯನ್ನು ಹೊಂದಿರುವ ‘ವಸಂತ ಸೇನಾ’ ಚಿತ್ರಕ್ಕೆ ಅಜಂತಾ ಗುಹೆಗಳ ಆಳ ಅಭ್ಯಾಸ ಮಾಡಿದ್ದ ಕಲಾವಿಮರ್ಶಕ, ಚಿತ್ರಗಾರ ಜಿ. ವೆಂಕಟಾಚಲಂ ಚಿತ್ರದ ಸೆಟ್ ನಿರ್ಮಿಸಿದ್ದರು. ಅದೇ ಕಾಲದ ಉಡುಗೆ-ತೊಡುಗೆಗಳನ್ನು ಅಭ್ಯಾಸ ಮಾಡಿ ವಿಶೇಷವಾಗಿ ಚಿತ್ರದ ಪಾತ್ರಗಳಿಗೆ ವಸ್ತ್ರವಿನ್ಯಾಸ ಸಹ ಮಾಡಿದ್ದರು.

ಉತ್ತರ ಭಾರತದಿಂದ ದಕ್ಷಿಣ ಭಾರತದವರೆಗಿನ ಪ್ರತಿಭಾವಂತರನ್ನು ಕಲೆ ಹಾಕಿದ್ದ ಭವನಾನಿಯವರು ಚಿತ್ರದ ವ್ಯಾಖ್ಯಾನ (ಸಿನಾಪ್ಸಿಸ್) ಅಥವಾ ಚಿತ್ರ ಸಾರಾಂಶವನ್ನು ಕವಿ-ಬರಹಗಾರ ಜೇಮ್ಸ್ ಎಚ್.ಕಸಿನ್ಸ್‌ರವರಿಂದ ಬರೆಸಿದ್ದರು. ಪ್ರೊ.ವಿ.ಸೀ.ಯವರು ಈ ಚಿತ್ರದ ಸಲಹೆಗಾರರಲ್ಲೊಬ್ಬರು.

ಕನ್ನಡ ನಾಡಿನ ಆಕರ್‍ಷಣೀಯ ಸ್ಥಳಗಳಾದ ಶ್ರೀರಂಗಪಟ್ಟಣ, ಟಿಪ್ಪು ಅರಮನೆ, ಬೇಲೂರು, ಹಳೇಬೀಡು, ಸೋಮನಾಥಪುರ, ಬಾಹುಬಲಿಯ ಸನ್ನಿಧಿ, ಲಾಲ್‌ಬಾಗ್ ತೋಟದಲ್ಲಿ ಬಹುತೇಕ ಚಿತ್ರೀಕರಣ ನಡೆಯಿತು. ಬ್ರಿಟಿಷ್ ಸೇನೆಯ ಸಿಪಾಯಿಯಾಗಿ ಬೆಂಗಳೂರಿಗೆ ಬಂದಾಗ ವಿನ್ಸ್‌ಟನ್ ಚರ್ಚಿಲ್‌ರವರು ತಂಗಿದ್ದ ರಿಚ್‌ಮಂಡ್ ರಸ್ತೆಯಲ್ಲಿದ್ದ ಪ್ರಸಿದ್ಧ ‘ದಿಲ್‌ಕುಷ್’ ಕಟ್ಟಡದಲ್ಲಿದ್ದ ಸ್ಟುಡಿಯೋನಲ್ಲಿ ಒಳಾಂಗಣ ಚಿತ್ರೀಕರಣ ನಡೆಯಿತು.

ಈ ಚಿತ್ರದಲ್ಲಿ ಬರುವ ನೃತ್ಯಗಳನ್ನು ಸಂಯೋಜಿಸಿದವರು ಮೈಸೂರು ಶೈಲಿಯ ನೃತ್ಯ ಸಂಪ್ರದಾಯದಲ್ಲಿ ಅಸಮಾನರಾಗಿ ಮೆರೆದ ಜಟ್ಟಿ ತಾಯಮ್ಮನವರು. ಅನೇಕ ಕಲಾವಿದರಿಗೂ ನೃತ್ಯವನ್ನು ಹೇಳಿಕೊಟ್ಟರು. ಪತ್ರಕರ್ತ ತಿ.ತಾ.ಶರ್ಮರವರ ಪತ್ನಿ ತಿರುಮಲೆ ರಾಜಮ್ಮನವರು ನೃತ್ಯಗಳಿಗೆ ವೀಣೆ ನುಡಿಸಿದ್ದರು. ಮೂಕಿ ಚಿತ್ರವಾದರೂ ಸಂಗೀತಕ್ಕೆ ತಕ್ಕಂತೆ ಮಾಡಿದ ನರ್ತನವನ್ನೇ ಚಿತ್ರೀಕರಿಸುತ್ತಿದ್ದರು. ಮೈಸೂರು ಸಂಸ್ಥಾನದಲ್ಲಿ ಪ್ರಸಿದ್ಧರಾದ ಸಂಗೀತ ಕಲಾವಿದರಿಂದಲೇ ಸಂಗೀತ ನುಡಿಸಿದ್ದು ಮತ್ತೊಂದು ವಿಶೇಷ.

ಮತ್ತೊಂದು ವಿಶಿಷ್ಟತೆಯೆಂದರೆ, ಕಲಾವಿದರು, ತಂತ್ರಜ್ಞರಿಗೆ ಗೌರವಧನ ಕರಾರುವಾಕ್ಕಾಗಿ ಪ್ರತಿವಾರವೂ ಸಂದಾಯವಾಗುತ್ತಿದ್ದ ವಿಧಾನ. ಬಳಿಕ ಕಪ್ಪು ಬಿಳುಪು ಚಿತ್ರಕ್ಕೆ ಜರ್ಮನಿಯಲ್ಲಿ ಬಣ್ಣದ ಲೇಪನ ಮಾಡಿ ತರಿಸಿದರು. ಹಾಗಾಗಿ ಎಂಟು ಸಾವಿರ ಅಡಿಯ ‘ವಸಂತಸೇನಾ’ ಚಿತ್ರಕ್ಕೆ ಆ ಕಾಲದಲ್ಲಿ ಒಂದು ಲಕ್ಷ ರೂಪಾಯಿ ಖರ್ಚಾಯಿತು. ‘ವಸಂತಸೇನಾ’ ದೇಶದಾದ್ಯಂತವಲ್ಲದೆ, ಕೆಲವು ವಿದೇಶಗಳಲ್ಲೂ ಪ್ರದರ್ಶನದ ಭಾಗ್ಯ ಕಂಡಿತು. ಒಟ್ಟು ಐದು ಲಕ್ಷ ರೂಪಾಯಿ ಸಂಪಾದಿಸಿತೆಂಬ ಅಂದಾಜು.

ಅದೇನೇ ಇರಲಿ, ತಾಂತ್ರಿಕವಾಗಿ ಬೆಳೆಯದಿದ್ದ ಕಾಲದಲ್ಲಿ, ಸಿನಿಮಾ ತಂತ್ರಜ್ಞರು ಮತ್ತು ಉಪಕರಣಗಳ ಕೊರತೆಯಿದ್ದ ಮೈಸೂರು ಪ್ರಾಂತ್ಯದಲ್ಲಿ ಒಂಬತ್ತು ದಶಕಗಳ ಹಿಂದೆ ನಡೆದ ಈ ಪ್ರಯತ್ನ ಅಪೂರ್ವವಾದದ್ದು. ಸಾಹಿತ್ಯ, ಸಂಗೀತ, ಶಿಕ್ಷಣ, ರಂಗಭೂಮಿ ಮತ್ತು ಕಲಾರಂಗದ ಅನೇಕ ಪ್ರತಿಭಾವಂತರು ಒಗ್ಗೂಡಿದ್ದು ಭಾರತದ ಚಲನಚಿತ್ರರಂಗದ ಇತಿಹಾಸದಲ್ಲಿ ಅದೇ ಮೊದಲು. ಆ ಪ್ರಯೋಗ ನಡೆದದ್ದು ಕರ್ನಾಟಕದಲ್ಲಿ. ಅಂಥ ಸಾಧನೆ ಇಂದಿಗೂ ಚಲನಚಿತ್ರರಂಗದ ಇತಿಹಾಸದಲ್ಲಿ ಒಂದು ಸುವರ್ಣ ಅಧ್ಯಾಯ. ಕನ್ನಡದ ಮಟ್ಟಿಗೆ ಆ ಅಧ್ಯಾಯ ಪುನರಾವರ್ತನೆಯಾದದ್ದು ಕಳೆದ ಶತಮಾನದ ಎಪ್ಪತ್ತರ ದಶಕದ ‘ಸಂಸ್ಕಾರ’ ಚಿತ್ರ ನಿರ್ಮಾಣದ ಮೂಲಕ.
* * *

ವಸಂತಸೇನಾ ವಾಕ್ಚಿತ್ರದಲ್ಲಿ ಎಸ್ ಕೆ ಪದ್ಮಾದೇವಿ, ಲಕ್ಷ್ಮೀಬಾಯಿ, ಎಂ ವಿ ಸುಬ್ಬಯ್ಯ ನಾಯ್ಡು

ಮೂಕಿ ‘ವಸಂತಸೇನಾ’ ಬುದ್ಧಿಜೀವಿಗಳ ಪ್ರಯೋಗವಾದರೆ ೧೯೪೧ರಲ್ಲಿ ತೆರೆಕಂಡ ವಾಕ್ಚಿತ್ರ ‘ವಸಂತಸೇನಾ’ ಕನ್ನಡದ ಎರಡು ಅಮೋಘ ಪ್ರತಿಭೆಗಳ ಅನನ್ಯ ಪ್ರಯತ್ನದ ಫಲವಾಗಿತ್ತು. ಆಗಿನ್ನೂ ಎಂ.ವಿ.ಸುಬ್ಬಯ್ಯನಾಯ್ಡು ಮತ್ತು ಆರ್.ನಾಗೇಂದ್ರರಾಯರು ಜೋಡಿಯಾಗಿ ರಂಗಭೂಮಿ ಮತ್ತು ಚಲನಚಿತ್ರಗಳಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದ ಕಾಲ. ಇಬ್ಬರೂ ಅಪ್ರತಿಮ ಕಲಾವಿದರು. ನಟನೆಯಲ್ಲಿ ಇಬ್ಬರದೂ ಪ್ರತ್ಯೇಕ ಹಾದಿ. ಆರೆನ್ನಾರ್‌ರವರು ಮೇಯಪ್ಪ ಚೆಟ್ಟಿಯಾರ್‌ರವರೊಡನಿದ್ದ ಸುಖ್ಯದಿಂದ ಅವರನ್ನು ನಿರ್ಮಾಪಕರನ್ನಾಗಿಸಿದರು. ಪ್ರಗತಿ ಪಿಕ್ಚರ್ಸ್ ಸಂಸ್ಥೆಯಡಿ ಆರೆನ್ನಾರ್-ಎಂ.ವಿ.ಎಸ್ ಸಹ ಪಾಲುದಾರರಾದರು. ಶೂದ್ರಕನ ‘ಮೃಚ್ಛಕಟಿಕಂ’ನ ಸಂಸ್ಥಾನಕನ ಪಾತ್ರಕ್ಕೆ ಶಕಾರನೆಂದು ನಾಮಕರಣ ಮಾಡಿದ ಆರೆನ್ನಾರ್ ಅವರು ಚಿತ್ರಕತೆ ಮತ್ತು ಸಂಭಾಷಣೆ ರಚಿಸಿ ಎರಡು ಗೀತೆಗಳಿಗೂ ರಾಗ ಸಂಯೋಜನೆ ಮಾಡಿದರು. ಉಳಿದ ನಾಲ್ಕುಗೀತೆಗಳಿಗೆ ಪಿ.ಕಾಳಿಂಗರಾವ್ ಸಂಗೀತ ನೀಡಿದರು. ಸುಬ್ಬಯ್ಯನಾಯ್ಡು ಮತ್ತು ಲಕ್ಷ್ಮೀಬಾಯಿ ಅವರು ಹಾಡಿದ್ದ ಯುಗಳ ಗೀತೆಗಳು- “ಇದೇ ಮಹಾ ಸುದಿನ” ಮತ್ತು “ಅತಿ ಮುದದಲಿ ನಲಿ ನಲಿವಾ- ಸತಿಪತಿಯ ತೆರೆದಲಿ ನಾವೀಗ”- (ರಚನೆ: ಗಮಕಿ ರಾಮಕೃಷ್ಣಶಾಸ್ತ್ರಿ) ಅರವತ್ತರ ದಶಕದಲ್ಲಿಯೂ ಜನಮಾನಸದಲ್ಲಿ ನೆಲೆಯಾಗಿದ್ದವು. ಬಯಲು ನಾಟಕಗಳಲ್ಲಿ (ರಾಮಾಯಣ, ದಾನಶೂರ ಕರ್ಣ, ಕುರುಕ್ಷೇತ್ರ) ಈ ಯುಗಳ ಗೀತೆಗಳನ್ನು ರಾಮ-ಸೀತೆ, ಕರ್ಣ ಸ್ವಯಂಪ್ರಭೆ, ಅಭಿಮನ್ಯು, ಉತ್ತರೆ ಪಾತ್ರಗಳಿಗೆ ಅಳವಡಿಸುತ್ತಿದ್ದರು.

ನಗೆಯೇ ಪ್ರಧಾನವಾಗಿದ್ದ ಚಿತ್ರದಲ್ಲಿ ಆರೆನ್ನಾರ್ ಶಕಾರನ ಪಾತ್ರದಲ್ಲಿ ಪ್ರೇಕ್ಷಕರನ್ನು ನಗಿಸಿದ ಪರಿಯನ್ನು ನನ್ನ ಹಿಂದಿನ ತಲೆಮಾರಿನ ಜನರು ಮೆಲುಕು ಹಾಕುತ್ತಿದ್ದರು. ಅದರಲ್ಲೂ “ಕತ್ತೆಗಳೂ, ನಾಯಿಗಳೂ ನನ್ನ ಹಾಡನ್ನು ಕೇಳಿ…” ಹಾಡನ್ನು ವಿಶಿಷ್ಟ ಆಂಗಿಕ ಚಲನೆಯಿಂದ ನಾಗೇಂದ್ರರಾಯರು ಅಭಿನಯಿಸಿದ್ದು ನಗೆಯುಕ್ಕಿಸುತ್ತಿತ್ತಂತೆ. ಪುರಾಣ ಪಾತ್ರಗಳಿಗೆ ಜೀವತುಂಬಿ ಅಭಿನಯ ಶೈಲಿಯೊಂದನ್ನು ರೂಪಿಸಿದ್ದ ಎಂ.ವಿ.ಎಸ್‌ರವರಿಗೆ ಮಾತ್ರ ಶಾಂತ ಸ್ವಭಾವದ ಚಾರುದತ್ತನ ಪಾತ್ರ ರುಚಿಸಿರಲಿಲ್ಲವಂತೆ. ಆದರೆ ಆ ಪಾತ್ರದ ಸಂಯಮಪೂರ್ಣ ಅಭಿನಯ, ತಮ್ಮ ತಂದೆಯ ಅತ್ಯುತ್ತಮ ನಟನೆಗಳಲ್ಲೊಂದಾಗಿತ್ತು ಎಂದು ಅವರ ಪುತ್ರ ಲೋಕೇಶ್ ಸ್ಮರಿಸಿದ್ದಾರೆ.

ಚಿತ್ರೀಕರಣಕ್ಕೂ ಮೊದಲೇ ಹಾಡುಗಳನ್ನು ಧ್ವನಿಮುದ್ರಿಸಿಕೊಂಡು ಅದಕ್ಕೆ ತಕ್ಕಂತೆ ಅಭಿನಯಿಸಿ ಹಾಡುಗಳನ್ನು ಅಳವಡಿಸುವ ತಂತ್ರ ಈ ಚಿತ್ರದಿಂದಲೇ ಆರಂಭವಾಯಿತು.

ಸುಬ್ಬಯ್ಯ ನಾಯ್ಡುರವರ ಪತ್ನಿ ಲಕ್ಷ್ಮೀಬಾಯಿ (ವಸಂತಸೇನೆ) ಎಸ್.ಕೆ. ಪದ್ಮಾದೇವಿ (ಮದನಿಕೆ) ಅವರ ಜೊತೆಗೆ ಪಿ.ಕಾಳಿಂಗರಾವ್ ಅವರು ಜೈನ ಸನ್ಯಾಸಿಯ ಪಾತ್ರ ವಹಿಸಿದ್ದು ವಿಶೇಷವಾಗಿತ್ತು.

ವಿಚಿತ್ರವೆಂದರೆ, ಚಿತ್ರದ ಟೈಟಲ್ ಕಾರ್ಡ್‌ನಲ್ಲಿ ನಿರ್ದೇಶಕ ರಾಮಯ್ಯ ಶಿರೂರ್ ಎಂದಿದ್ದರೂ, ಇಡೀ ಚಿತ್ರವನ್ನು ರೂಪಿಸಿದವರು ಆರ್.ನಾಗೇಂದ್ರರಾಯರು.

ಸೈಡ್ ರೀಲ್

  • ಕರ್ನಾಟಕದಲ್ಲಿ ‘ವಸಂತಸೇನಾ’ ಚಿತ್ರಕ್ಕೆ ಮೊದಲು ಮೂಕಿ ಚಿತ್ರಗಳು ತಯಾರಾಗಿದ್ದವು. ಆದರೆ ಅವು ಈಗಿನ ಪರಿಭಾಷೆಯಲ್ಲಿ ಹೇಳುವುದಾದರೆ ಕಥಾ ಚಿತ್ರಗಳಲ್ಲ. ರಂಗಭೂಮಿಯಲ್ಲಿ ಅಭಿನಯಿಸುವ ನಾಟಕಗಳನ್ನು ಚಿತ್ರಿಸಿ ಸಿನಿಮಾ ಮಾಡಿ ತೋರಿಸುತ್ತಿದ್ದರು. ‘ವಸಂತ ಸೇನಾ’ ಚಿತ್ರವು ಲೊಕೇಷನ್ ಮತ್ತು ಸ್ಟುಡಿಯೋಗಳಲ್ಲಿ ಚಿತ್ರಿಸಿ ಸಂಕಲನಗೊಂಡ ಚಿತ್ರ. ಬಳಿಕ ತಯಾರಾದ ಮೂಕಿ ಚಿತ್ರಗಳು ಇದರ ಪರಂಪರೆಗೆ ಸೇರಿದಂಥವು.
  • ಕನ್ನಡ ನೆಲದಲ್ಲಿ ಮೂಕಿ ಚಿತ್ರಗಳು ಯುಗವು ೧೯೨೧ರಿಂದ ಆರಂಭವಾಗಿರುವುದನ್ನು ಚಲನಚಿತ್ರ ಇತಿಹಾಸಕಾರ ಗಂಗಾಧರ ಮೊದಲಿಯಾರ್ ಗುರುತಿಸಿದ್ದಾರೆ. ೧೯೨೧ರಿಂದ ೧೯೩೩ರವರೆಗೆ ಸುಮಾರು ೧೭೫ ಚಿತ್ರಗಳು ತಯಾರಾಗಿರಬಹುದೆಂದು ತರ್ಕಿಸಿ ಲಭ್ಯವಿರುವ ೫೪ ಚಿತ್ರಗಳ ಹೆಸರುಗಳನ್ನು ಪಟ್ಟಿ ಮಾಡಿದ್ದಾರೆ. ಮೈಸೂರಿನ ಅಂದಿನ ಯುವರಾಜರಾದ ಶ್ರೀ ಕಂಠೀರವ ನರಸಿಂಹರಾಜ ಒಡೆಯರ್ ಅವರು ಅರಮನೆಯಲ್ಲಿ ಪ್ರದರ್ಶನವಾದ ಎ.ವಿ. ವರದಾಚಾರ್ಯರು ಅಭಿನಯಿಸಿದ್ದ ರತ್ನಾವಳಿ ಥಿಯೇಟ್ರಿಕಲ್ ಕಂಪನಿಯ ನಾಟಕ ‘ನಿರುಪಮಾ’ (೧೯೨೧)ವನ್ನು ಕೈಯಲ್ಲಿ ಸುತ್ತುವ ಕ್ಯಾಮೆರಾದಿಂದ (ಕ್ರಾಂಕಿಂಗ್ ಮಿಷಿನ್) ಚಿತ್ರೀಕರಿಸಿದ್ದರಂತೆ. ಹಾಗಾಗಿ ಎ.ವಿ. ವರದಾಚಾರ್ಯರು ಕನ್ನಡ ನೆಲದಲ್ಲಿ ಚಿತ್ರೀಕರಣಗೊಂಡ ಮೂಕಿ ಚಿತ್ರದ ಮೊದಲ ನಾಯಕ. ಕಂಠೀರವ ನರಸಿಂಹರಾಜ ಒಡೆಯರ್ ಮೊದಲ ನಿರ್ಮಾಪಕ. ೧೯೨೫ರಲ್ಲಿ ಗುಬ್ಬಿ ಚನ್ನಬಸವೇಶ್ವರ ಕಂಪನಿಯು ತರೀಕೆರೆಯಲ್ಲಿ ಪ್ರದರ್ಶನಗೊಳ್ಳುತ್ತಿದ್ದ ‘ಮಹಾತ್ಮಾ ಕಬೀರ್’ ಚಿತ್ರವನ್ನು ಚಿತ್ರೀಕರಿಸಿ ಸಿನಿಮಾ ಮಾಡಿತು. ನಾಯಕ ಕಬೀರನ ಪಾತ್ರವನ್ನು ಅಭಿನವ ಶಿರೋಮಣಿ ಸಿ.ಬಿ. ಮಲ್ಲಪ್ಪನವರು ವಹಿಸಿದ್ದರು.
  • ಮೂಕಿ ಚಿತ್ರಗಳ ತಯಾರಿಕೆಗೆ ಆಗ ಮುಂಬೈ ಕೇಂದ್ರವಾಗಿತ್ತು. ಅಲ್ಲಿನ ಶಾರದಾ ಫಿಲಂ ಕಂಪನಿಯ ಪಾಲುದಾರರಲ್ಲೊಬ್ಬರಾದ ಹರಿಭಾಯ್ ಆರ್. ದೇಸಾಯಿ ಅವರು ೧೯೨೮ರಲ್ಲಿ ಬೆಂಗಳೂರಿನ ದಂಡು ಪ್ರದೇಶದಲ್ಲಿ ಸೂರ್ಯ ಫಿಲಂ ಕಂಪನಿ ಸ್ಟುಡಿಯೋಸ್ ಸ್ಥಾಪಿಸಿ ೧೯೩೩ರವರೆಗೆ ಅಂದಾಜು ೪೦ ಚಿತ್ರಗಳನ್ನು ನಿರ್ಮಿಸಿದರೆಂದು ದಾಖಲಾಗಿದೆ. ಕನ್ನಡ ವಾಕ್ಚಿತ್ರದ ಮೊದಲ ನಾಯಕಿ ಲಕ್ಷ್ಮೀಬಾಯಿ ಅವರ ವೃತ್ತಿ ಬದುಕು ಆರಂಭವಾದದ್ದೇ ಸೂರ್ಯ ಫಿಲಂ ಕಂಪನಿಯ ಮೂಕಿ ಚಿತ್ರಗಳ ಮೂಲಕ. ಸಂಸ್ಥೆ ನಿರ್ಮಿಸಿದ ೪೦ ಚಿತ್ರಗಳ ಪೈಕಿ ಲಕ್ಷ್ಮೀಬಾಯಿಯವರು ಹದಿನೈದು ಚಿತ್ರಗಳಲ್ಲಿ ನಾಯಕಿಯಾಗಿ ‘ಸೂರ್ಯಸ್ಟಾರ್’ ಎಂದೇ ಪ್ರಸಿದ್ಧರಾಗಿದ್ದರು. ಅವರು ಅಭಿನಯಿಸಿದ ಮೊದಲ ಮೂಕಿ ಚಿತ್ರ ‘ರಾಜ ಹೃದಯ’ ಅವರಿಗೆ ಹಣ-ಕೀರ್ತಿ ತಂದು ಕೊಟ್ಟಿತು. ಅದರ ಯಶಸ್ಸು ಮುಂದಿನ ಚಿತ್ರಗಳಲ್ಲಿ ನಾಯಕಿಯ ಪಾತ್ರ ವಹಿಸುವಂತೆ ಮಾಡಿತು. ಜೊತೆಗೆ ಅವರ ಸೋದರಿ ಕಮಲಾಬಾಯಿಯವರೂ ಮೂಕಿ ಚಿತ್ರಗಳ ತಾರೆಯಾದರು. ಬಗೆಬಗೆಯ ಪ್ರಚಾರ ತಂತ್ರಗಳಿಂದ ಪ್ರೇಕ್ಷಕರನ್ನು ಸೆಳೆಯುತ್ತಿದ್ದ ಸೂರ್ಯ ಕಂಪನಿಯ ನಿರ್ಮಾಣದ ಚಿತ್ರಗಳಿಗೆ ಮಾತಿಲ್ಲದ ಕಾರಣಕ್ಕಾಗಿಯೇ ಭಾರತದಾದ್ಯಂತ ಬೇಡಿಕೆಯಿತ್ತು.
  • ಸೂರ್ಯ ಫಿಲಂ ಕಂಪನಿಯ ಯಶಸ್ಸು ಮತ್ತು ಸಾಹಿತಿ ದೇವುಡು ನರಸಿಂಹಶಾಸ್ತ್ರಿ ಅವರ ಒತ್ತಾಸೆಯಿಂದ ಗುಬ್ಬಿ ವೀರಣ್ಣನವರು ಕರ್ನಾಟಕ ಪಿಕ್ಚರ್ಸ್ ಕಾರ್ಪೊರೇಷನ್ ಸಂಸ್ಥೆಯನ್ನು ಹುಟ್ಟು ಹಾಕಿ ‘ಹಿಸ್ ಲವ್ ಅಫೇರ್’ (೧೯೩೬), ‘ಸಾಂಗ್ ಆಫ್ ಲೈಫ್’ (೧೯೩೧) ಮತ್ತು ‘ಹರಿಮಾಯ’ (೧೯೮೦) ಎಂಬ ಮೂರು ಚಿತ್ರಗಳನ್ನು ನಿರ್ಮಿಸಿದರು. ಆದರೆ ವೀರಣ್ಣನವರ ಪಾಲಿಗೆ ಮೂಕಿ ಚಿತ್ರ ನಿರ್ಮಾಣ ಒಂದು ದುಸ್ಸಾಹಸವಾಗಿತ್ತು. (ವಿವರಗಳಿಗೆ ಅಧ್ಯಾಯ ಆರು ನೋಡಿ).
  • ನಿರಂತರ ಪ್ರಯೋಗಶೀಲರಾಗಿದ್ದ ಕೋಟ ಶಿವರಾಮಕಾರಂತ ಅವರೂ ಮೂಕಿ ಚಿತ್ರ ನಿರ್ಮಾಣಕ್ಕೆ ಕೈಹಾಕಿದ್ದು ಮತ್ತೊಂದು ಸಾಹಸ. ಹರಿಜನರ ಬದುಕನ್ನು ಆಧರಿಸಿದ್ದ ‘ಡೊಮಿಂಗೋ’ (೧೯೩೦) ಚಿತ್ರವನ್ನು ತಾವೇ ಚಿತ್ರೀಕರಿಸಿ, ಅಭಿನಯಿಸಿ ನಿರ್ದೇಶಿಸಿದ್ದರು. ಅನಂತರ ‘ಭೂತರಾಜ್ಯ’ (೧೯೩೧) ಎಂಬ ಚಿತ್ರವನ್ನು ಸಹ ನಿರ್ಮಿಸಿದರು.
  • ಕನ್ನಡದ ಮೊದಲ ಮಾತನಾಡುವ ಚಿತ್ರ ‘ಸತಿ ಸುಲೋಚನ’ ಬಿಡುಗಡೆಯ ವೇಳೆಗೆ ಮೂಕಿ ಯುಗ ಅಂತ್ಯ ಕಂಡಿತು.
  • ‘ವಸಂತಸೇನಾ’ ಮೂಕಿ ಚಿತ್ರದಲ್ಲಿ ಅಭಿನಯಿಸಿದ್ದ ಅಜ್ಜಂಪುರ ಸೀತಾರಾಂ ಅವರೇ ಉದಯರವಿ ಪ್ರಕಾಶನದ ಕುವೆಂಪು ಅವರ ಎಲ್ಲ ಕೃತಿಗಳ ರಕ್ಷಾಪುಟಗಳಲ್ಲಿರುವ ಜೋಡಿ ಕಾಜಾಣ ಚಿತ್ರ ರಚಿಸಿದವರು. ಚಿತ್ರದ synopsis ಬರೆದ ಐರಿಶ್ ಕವಿ ಜೇಮ್ಸ್ ಎಚ್. ಕಸಿನ್ಸ್ ಅವರೇ ಕುವೆಂಪು ಅವರಿಗೆ ಕನ್ನಡದಲ್ಲಿ ಬರೆಯಲು ದೀಕ್ಷೆ ನೀಡಿದವರು.

  • ‘ಮೃಚ್ಛಕಟಿಕಂ’ ನಾಟಕವು ಪಾಶ್ಚಾತ್ಯರ ಗಮನ ಸೆಳೆದದ್ದು ಇತ್ತೀಚೆಗೆ ಅದು ಫ್ರೆಂಚ್, ಗ್ರೀಕ್ ಮತ್ತು ಇಂಗ್ಲೀಷ್ ಭಾಷೆಗೆ ಅನುವಾದಗೊಂಡು ರಂಗದ ಮೇಲೂ ಯಶಸ್ವಿಯಾಗಿದೆ. ನಿರ್ದೇಶಕ ಬಾಜ್ ಲಹರ್‌ಮನ್‌ರವರು ೨೦೦೧ರಲ್ಲಿ ‘ಮೌಲಿನ್ ರೋಗ್’ ಎಂಬ ಚಲನಚಿತ್ರ ತಯಾರಿಸಿದ್ದರು. ಎಂಟು ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶನ ಪಡೆದಿದ್ದ ಆ ಚಿತ್ರ ಅಂತಿಮವಾಗಿ ಎರಡು ಪ್ರಶಸ್ತಿ ಗಳಿಸಿತು. ‘ಮೌಲಿನ್ ರೋಗ್’ ಎನ್ನುವುದು ಜೋಸೆಫ್ ಒಲರ್ ಎಂಬಾತ ಪ್ಯಾರಿಸ್ಸಿನ ‘ಕೆಂಪುದೀಪ’ದ ತಾಣ ಎಂದೇ ಹೆಸರಾದ ಪಿಕಲ್ಲೆಯಲ್ಲಿ ೧೮೮೯ರಲ್ಲಿ ನಿರ್ಮಿಸಿದ ಅಮೋದ ತಾಣ. ಅದು ಮುಖ್ಯವಾಗಿ ಕಲಾವಿದರು, ಶ್ರೀಮಂತರ ಕಾಮತೃಷೆಯನ್ನು ತಣಿಸುವ, ಕುಡಿತ, ಮೋಜಿನ ಕೇಂದ್ರ. ತನ್ನ ಕೃತಿಗೆ ಸ್ಫೂರ್ತಿಯನ್ನು ಹುಡುಕಿ ಮೌಲಿನ್ ರೋಗ್‌ಗೆ ಬರುವ ಬ್ರಿಟನ್‌ನ ಲೇಖಕ ಕ್ರಿಶ್ಚಿಯನ್ ಮತ್ತು ಕ್ಯಾಬರೆ ನರ್ತಕಿ ಸ್ಯಾಟಿನ್ ನಡುವಿನ ಪ್ರಣಯದ ಕತೆಯನ್ನು ‘ಮೌಲಿನ್ ರೋಗ್’ ಚಿತ್ರವು ನಿರೂಪಿಸುತ್ತದೆ. ಜೊತೆಗೆ ಸ್ಯಾಟಿನ್‌ಳನ್ನು ಬೆನ್ನು ಹತ್ತುವ ತಿಕ್ಕಲ ಡ್ಯೂಕ್‌ನ ಕಥೆಯೂ ಇದೆ. ಸ್ಯಾಟಿನ್ ಪಾತ್ರವನ್ನು ಪ್ರಸಿದ್ಧ ಹಾಲಿವುಡ್ ನಟಿ ನಿಕೋಲೆ ಕಿಡ್ಮನ್ ವಹಿಸಿದ್ದಾಳೆ. ಅದೇ ಚಿತ್ರದಲ್ಲಿ ಮತ್ತೊಂದು ಚಿತ್ರದ ಕತೆಯೂ ಅಡಕಗೊಂಡಿದೆ. ‘ಸ್ಪೆಕ್ಟಾಕ್ಯುಲರ್ ಸ್ಪೆಕ್ಟಾಕ್ಯುಲರ್’ ಎಂಬ ನಾಟಕದ ಆ ಕತೆಯು ‘ಮೃಚ್ಛಕಟಿಕಂ’ ನಾಟಕದ ಸಂಕ್ಷಿಪ್ತ ರೂಪ!
  • ‘ಮೃಚ್ಛಕಟಿಕಂ’ ನಾಟಕಕ್ಕೂ ಕರ್ನಾಟಕಕ್ಕೂ ವಿಚಿತ್ರ ಸಂಬಂಧವಿರುವ ಹಾಗೆ ಕಾಣುತ್ತದೆ. ಇದೇ ಕೃತಿಯನ್ನು ಆಧರಿಸಿ ಹಿಂದೀ ನಟ ಶಶಿಕಪೂರ್ ಅವರು ‘ಉತ್ಸವ್’ (೧೯೮೪) ಚಿತ್ರ ನಿರ್ಮಿಸಿದ್ದರು. ನಿರ್ದೇಶಕರು ನಮ್ಮ ನಾಟಕಕಾರರೇ ಆದ ಗಿರೀಶ್ ಕಾರ್ನಾಡ್. ಇಲ್ಲಿ ಮುಖ್ಯ ಕತೆಯ ಜೊತೆಗೆ ವಾತ್ಸಾಯನನ ಪಾತ್ರವನ್ನೂ ಅಳವಡಿಸಿದ್ದರು. ಕಾಮಸೂತ್ರ ರಚಿಸಿದ ವಾತ್ಸಾಯನ ತನ್ನ ಕೃತಿಗಾಗಿ ‘ನಗರವಧು’ಗಳ, ಮುಖ್ಯವಾಗಿ ‘ವಸಂತಸೇನೆ’ಯು ನೀಡುವ ಶೃಂಗಾರಕಲೆಯ ಶಿಕ್ಷಣವನ್ನು ದಾಖಲು ಮಾಡಿಕೊಳ್ಳುತ್ತಾನೆ. ಶೃಂಗಾರ ಮತ್ತು ಹಾಸ್ಯರಸಕ್ಕೆ ಒತ್ತು ನೀಡಿದ ನಿರ್ದೇಶಕರು ವಸಂತಸೇನೆಯ ಸೌಂದರ್ಯವನ್ನು ಕಲಾತ್ಮಕವಾಗಿ ಅನಾವರಣಗೊಳಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅರಂಗೇಟ್ರಂ ಮಾಡಿದ ನಟಿ ರೇಖಾ ಈ ಚಿತ್ರದಲ್ಲಿ ವಸಂತಸೇನೆಯಾಗಿ ತನ್ನ ಮಾದಕತೆಯಿಂದ ಸೆಳೆದರೆ, ಚಾರುದತ್ತ(ಶೇಖರ್ ಸುಮನ್)ನ ಮಗ ರೋಹಸೇನನ ಪಾತ್ರದಲ್ಲಿ ಮಾಸ್ಟರ್ ಮಂಜುನಾಥ್ ಮುದ್ದಾಗಿ ನಟಿಸಿದ್ದಾರೆ.
  • ಈ ಚಿತ್ರದ ಸಂಪೂರ್ಣ ಚಿತ್ರೀಕರಣ ನಡೆದದ್ದು ಕರ್ನಾಟಕದಲ್ಲಿ- ಬೆಂಗಳೂರು, ಕುಂದಾಪುರದ ಮರವಂತೆ, ಕೊಳಕೆಬೈಲು, ಚಿಕ್ಕಮಗಳೂರಿನ ತನ್ನೂಡಿ ಮುಂತಾದ ರಮ್ಯ ಪ್ರದೇಶಗಳಲ್ಲಿ. ಆ ಕಾಲದ ಪರಿಸರವನ್ನು ನಿರ್ಮಿಸಲು ಕಾರ್ನಾಡರು ಸ್ಥಳೀಯ ಪರಿಕರಗಳನ್ನೇ ಬಳಸಿದ್ದಾರೆ. ದಕ್ಷಿಣ ಕನ್ನಡದ ಪುರಾತನ ಮನೆಗಳ ಕಲಾತ್ಮಕ ಕೆತ್ತನೆಯ ಕಂಬಗಳು, ಹಜಾರಗಳು, ಹಸಿರುಕ್ಕುವ ಬಯಲು, ಒಲೆ, ಮಡಿಕೆ, ಕುಡಿಕೆ ಇತ್ಯಾದಿಗಳಲ್ಲಿ ಕನ್ನಡ ಸಂಸ್ಕೃತಿಯ ಮುದ್ರೆಯಿದೆ.
    *****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅರುಣಗೀತ
Next post ಬಂದೂಕು

ಸಣ್ಣ ಕತೆ

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

cheap jordans|wholesale air max|wholesale jordans|wholesale jewelry|wholesale jerseys