Home / ಲೇಖನ / ಚಲನಚಿತ್ರ / ಬಿ.ಎಸ್.ರಂಗಾ- ವರ್‍ಣಚಿತ್ರಗಳ ‘ಶಿಲ್ಪಿ’

ಬಿ.ಎಸ್.ರಂಗಾ- ವರ್‍ಣಚಿತ್ರಗಳ ‘ಶಿಲ್ಪಿ’

ಅಧ್ಯಾಯ ಹದಿನೈದು
ಅರವತ್ತರ ದಶಕ ಆರಂಭವಾಗುವವರೆಗೂ ಭಾರತೀಯ ಚಿತ್ರರಂಗ ಕಪ್ಪು-ಬಿಳುಪಿನ ಯುಗವೇ ಆಗಿತ್ತು. ವರ್ಣದಲ್ಲಿ ಚಿತ್ರಗಳನ್ನು ತೆಗೆಯುವುದು ಪ್ರೇಕ್ಷಕರನ್ನು ಸೆಳೆಯುವ ಒಂದು ವಿಧಾನವಾಗಿದ್ದ ಕಾಲ ಅದು. ವರ್ಣಚಿತ್ರ ನಿರ್ಮಾಣ ದುಬಾರಿಯಾದ ಕಾರಣ ಆ ಸಾಹಸಕ್ಕೆ ಕೈಹಾಕುತ್ತಿದ್ದ ಚಿತ್ರ ತಯಾರಕರು ಕಡಿಮೆ ಸಂಖ್ಯೆಯಲ್ಲಿದ್ದರು. ವಿ. ಶಾಂತಾರಾಮ್, ರಾಜ್‌ಕಪೂರ್, ಗುರುದತ್, ಕೆ. ಆಸೀಫ್‌ರವರಿಂದ ಹಿಡಿದು ಎವಿ‌ಎಂ, ಜೆಮಿನಿ ಸಂಸ್ಥೆಗಳು ಸಹ ತಮ್ಮೆಲ್ಲ ಪ್ರಯೋಗಗಳನ್ನು ಕಪ್ಪು-ಬಿಳುಪಿನಲ್ಲಿಯೇ ನಡೆಸಿದ್ದವು. ಕೆ.ಆಸೀಫ್‌ರವರಂತಹ ಶ್ರೀಮಂತ ನಿರ್ಮಾಪಕ ಮತ್ತು ನಿರ್ದೇಶಕ ಸಹ ತಮ್ಮ ಅಭಿಜಾತ ಕೃತಿ ‘ಮೊಘಲ್-ಎ-ಆಜಾಂ’ ಚಿತ್ರವನ್ನು ಭಾಗಶಃ ವರ್ಣದಲ್ಲಿ ತಯಾರಿಸಿದ್ದರು. ಐತಿಹಾಸಿಕ ಚಿತ್ರ ನಿರ್ಮಾಪಕರಾದ ಸೊಹ್ರಾಬ್ ಮೋದಿ, ನಾಗಿರೆಡ್ಡಿ-ಚಕ್ರಪಾಣಿಯಂತಹ ನಿರ್ಮಾಪಕರು ಅದ್ದೂರಿತನಕ್ಕಾಗಿ ವರ್ಣಚಿತ್ರ ತಯಾರಿಕೆಗೆ ಒಲವು ವ್ಯಕ್ತಪಡಿಸಿದ್ದರು. ಅಪರೂಪಕ್ಕೊಮ್ಮೆ ವರ್ಣಚಿತ್ರ ತಯಾರಿಸುತ್ತಿದ್ದರು. ಅದೂ ವಿವಿಧ ಬಗೆಯ ವಸ್ತ್ರವಿನ್ಯಾಸಗಳಿಗೆ, ವೈಭವದ ಸೆಟ್‌ಗಳಿಗೆ ಮತ್ತು ಅದ್ದೂರಿಯ ದೃಶ್ಯಗಳಿಗೆ ಅವಕಾಶವಿರುವಂಥ ಐತಿಹಾಸಿಕ, ಪೌರಾಣಿಕ ಮತ್ತು ಜಾನಪದ ವಸ್ತುಗಳಿದ್ದರೆ ಮಾತ್ರ ಬಣ್ಣದಲ್ಲಿ ತಯಾರಿಸಿದರೆ ಚಿತ್ರಕ್ಕೆ ಮೆರಗು ಬರುತ್ತದೆಂಬ ನಂಬಿಕೆಯಿದ್ದ ಕಾಲವದು.

ಕನ್ನಡದ ಸೀಮಿತ ಮಾರುಕಟ್ಟೆ ಮತ್ತು ವರ್ಣಚಿತ್ರ ನಿರ್ಮಾಣದ ದುಬಾರಿ ವೆಚ್ಚಗಳು ಬಣ್ಣದ ಚಿತ್ರಗಳ ತಯಾರಿಕೆಗೆ ತಣ್ಣೀರೆರಚಿದ್ದವು. ಕನ್ನಡ ಚಿತ್ರರಂಗದ ಮಾರುಕಟ್ಟೆ ವಿಸ್ತರಿಸಿರಲಿಲ್ಲ. ಪ್ರೇಕ್ಷಕರ ಸಂಖ್ಯೆ ವೃದ್ಧಿಸಿರಲಿಲ್ಲ. ಒಂದರಿಂದ ಒಂದೂಕಾಲು ಲಕ್ಷದಲ್ಲಿ ಕಪ್ಪು-ಬಿಳುಪು ಚಿತ್ರಗಳನ್ನು ತಯಾರಿಸಬಹುದಾಗಿದ್ದ ಕಾಲದಲ್ಲಿ ವರ್ಣಚಿತ್ರ ನಿರ್ಮಾಣ ವೆಚ್ಚ ಏಳೆಂಟು ಲಕ್ಷ ರೂಪಾಯಿಗಳ ವಹಿವಾಟಾಗಿತ್ತು. ಇದರಿಂದಾಗಿ ಕನ್ನಡ ಚಿತ್ರರಂಗದಲ್ಲಿ ಅದ್ಧೂರಿತನವಾಗಲೀ, ವರ್ಣ ಶ್ರೀಮಂತಿಕೆಯಾಗಲೀ ಕಾಣುವುದು ದುಸ್ತರವಾಗಿತ್ತು. ಭಾಗಶಃ ವರ್ಣದಲ್ಲಿ ತಯಾರಾದ ‘ಸ್ತ್ರೀ ರತ್ನ’(೧೯೫೫)ದಂತಹ ಕೆಲವು ಪ್ರಯೋಗಗಳನ್ನು ಹೊರತುಪಡಿಸಿದರೆ, ಸಂಪೂರ್ಣ ವರ್ಣದಲ್ಲಿ ಚಲನಚಿತ್ರ ನಿರ್ಮಿಸುವ ಕನಸು ನನಸಾಗಿರಲೇ ಇಲ್ಲ.

ಕನ್ನಡದಲ್ಲಿ ವರ್ಣಚಿತ್ರ ನಿರ್ಮಾಣಕ್ಕೆ ನಾಂದಿ ಹಾಡಿದವರು ಬಿ.ಎಸ್.ರಂಗಾ ಅವರು. ಬೇಲೂರು ಚನ್ನಕೇಶವ ದೇವಾಲಯವನ್ನು ನಿರ್ಮಿಸಿದ ಶಿಲ್ಪಿಯೆಂದು ಜನರು ನಂಬಿರುವ ಜಕಣಾಚಾರಿಯ ಬದುಕನ್ನು ಅವರು ವರ್ಣದಲ್ಲಿ ನಿರೂಪಿಸಲು ಸಂಕಲ್ಪಿಸಿದ್ದರು. ೧೯೫೭ರಲ್ಲಿ ರಂಗಾ ಅವರು ‘ರಾಜಾ ಮಲಯ ಸಿಂಹನ್’ ಎಂಬ ತಮಿಳು ಚಿತ್ರವನ್ನು ಭಾಗಶಃ ವರ್ಣದಲ್ಲಿ ತಯಾರಿಸಿದ್ದರು. ಆ ಅನುಭವದ ಹಿನ್ನೆಲೆಯಲ್ಲಿ ಕನ್ನಡದಲ್ಲೊಂದು ಬಣ್ಣದ ಚಲನಚಿತ್ರ ತಯಾರಿಸಲು ನಿರ್ಧರಿಸಿದಾಗ ದೃಶ್ಯವೈಭವ ಬಿಂಬಿಸುವ ಕಾಸ್ಟ್ಯೂಮ್ ಡ್ರಾಮಾವನ್ನೇ ಆಯ್ಕೆ ಮಾಡಿಕೊಂಡರು. ಕನ್ನಡದಲ್ಲಿ ವರ್ಣಚಿತ್ರ ತಯಾರಿಕೆ ನಷ್ಟದ ಬಾಬ್ತು ಎಂದು ಅವರಿಗೂ ಅರಿವಿತ್ತು. ವ್ಯಾಪಾರದ ಕುಶಲತೆಯನ್ನು ಬಲ್ಲ ರಂಗಾರವರು ತೆಲುಗು ಮತ್ತು ಕನ್ನಡ ಭಾಷೆಯಲ್ಲಿ ಏಕಕಾಲಕ್ಕೆ ಜಕಣಾಚಾರಿಯ ಬದುಕನ್ನು ತೆರೆಯ ಮೇಲೆ ತರಲು ನಿರ್ಧರಿಸಿದರು. ಚಿತ್ರದ ಕತೆಯನ್ನು ಕೇಳಿದ ಎ.ನಾಗೇಶ್ವರರಾವ್ ತೆಲುಗು ಅವತರಣಿಕೆಯಲ್ಲಿ ನಾಯಕನ ಪಾತ್ರ ವಹಿಸಲು ಮುಂದೆ ಬಂದರು. ಕನ್ನಡ ಅವತರಣಿಕೆಯ ನಾಯಕನ ಪಾತ್ರಕ್ಕೆ ಕಲ್ಯಾಣಕುಮಾರ್ ಮತ್ತು ಎರಡೂ ಭಾಷೆಗಳ ನಾಯಕಿಯಾಗಿ ಖ್ಯಾತ ನಟಿ ಬಿ.ಸರೋಜಾದೇವಿ ಆಯ್ಕೆಯಾದರು.

ಕೇಂದ್ರ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆಯಿಂದ ಅನುಮತಿ ಪಡೆದು ಬೇಲೂರು, ಹಳೆಬೀಡುಗಳಲ್ಲಿ ಹೊರಾಂಗಣ ಚಿತ್ರೀಕರಣ ನಡೆಸಿದ ರಂಗಾ ಅವರು, ತಮ್ಮದೇ ಸ್ಟುಡಿಯೋನಲ್ಲಿ ಒಳಾಂಗಣ ಚಿತ್ರೀಕರಣ ನಡೆಸಿದರು. ಎರಡೂ ಆವೃತ್ತಿಗಳ ಒಟ್ಟು ತಯಾರಿಕಾ ವೆಚ್ಚ ಹನ್ನೊಂದು ಲಕ್ಷಗಳಷ್ಟಾಗಿತ್ತು. ಕನ್ನಡದಲ್ಲಿ ಚಿತ್ರ ಅಭೂತಪೂರ್ವ ಯಶಸ್ಸು ಗಳಿಸಿ ಏಳು ಲಕ್ಷ ರೂಪಾಯಿ ಸಂಪಾದನೆ ಮಾಡಿದರೆ, ತೆಲುಗು ಆವೃತ್ತಿ ಅದೇ ಯಶಸ್ಸನ್ನು ಪುನರಾವರ್ತನೆಗೊಳಿಸಿ ಹದಿನೇಳು ಲಕ್ಷ ರೂಪಾಯಿಗಳನ್ನು ಗಳಿಸಿತೆಂದು ಹೇಳಲಾಗಿದೆ.

೧೯೬೪ರಲ್ಲಿ ಬಿಡುಗಡೆಯಾದ ‘ಅಮರಶಿಲ್ಪಿ ಜಕಣಾಚಾರಿ’ ಇತಿಹಾಸದ ಹಿನ್ನೆಲೆಯ ಒಂದು ಕಾಲ್ಪನಿಕ ಕತೆಯಿರುವ ಚಿತ್ರ. ಆರ್.ನಾಗೇಂದ್ರರಾಯರ ‘ವಿಜಯನಗರದ ವೀರಪುತ್ರ’ (೧೯೬೧) ಚಿತ್ರದಂತೆಯೇ ಇದು ಸಹ ಕಥೆಯೊಂದನ್ನು ನಿರೂಪಿಸಲು ಇತಿಹಾಸವನ್ನು ನೆಪವಾಗಿಟ್ಟುಕೊಂಡ ಚಿತ್ರ. ಹಾಗಾಗಿ ಇವುಗಳನ್ನು ಐತಿಹಾಸಿಕ ಚಿತ್ರಗಳ ಸಾಲಿಗೆ ಸೇರಿಸಲಾಗದು. ಬೇಲೂರು ದೇವಸ್ಥಾನದ ನಿರ್ಮಾಣದ ಹಿನ್ನೆಲೆ ಬಗ್ಗೆಯೇ ಇತಿಹಾಸಕಾರರಲ್ಲಿ ಒಮ್ಮತವಿಲ್ಲ. ಹನ್ನೆರಡನೇ ಶತಮಾನದ ಆರಂಭದ ವೇಳೆಗೆ ನಿರ್ಮಾಣವಾಯಿತೆಂದು ಹೇಳಲಾದ ಬೇಲೂರು ದೇವಾಲಯ, ಚೋಳರನ್ನು ಕನ್ನಡದ ಗಡಿ ದಾಟಿಸಿದ ವಿಜಯಸ್ಮಾರಕವಾಗಿ ಹೊಯ್ಸಳ ವಂಶದ ವಿಷ್ಣುವರ್ಧನ ನಿರ್ಮಿಸಿದ ಐದು ವೈಷ್ಣವ ದೇವಾಲಯಗಳಲ್ಲೊಂದು ಎಂದು ಒಂದು ವರ್ಗದ ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಶ್ರೀರಾಮಾನುಜಾಚಾರ್ಯರ ಪ್ರಭಾವಕ್ಕೆ ಸಿಲುಕಿ ತನ್ನ ಜೈನಧರ್ಮವನ್ನು ತ್ಯಜಿಸಿ ವೈಷ್ಣವಧರ್ಮವನ್ನು ಸ್ವೀಕರಿಸಿದ ವಿಷ್ಣುವರ್ಧನ ಹೊಸಧರ್ಮದ ಪ್ರಚಾರಕ್ಕಾಗಿ ಐದು ವೈಷ್ಣವ ದೇವಾಲಯಗಳನ್ನು ನಿರ್ಮಿಸಿದನೆಂದು ಮತ್ತೊಂದು ಇತಿಹಾಸಕಾರ ಗುಂಪು ತರ್ಕಿಸುತ್ತದೆ. ದಾಸೋಜ ಮತ್ತು ಚವಣ ಎಂಬ ತಂದೆ-ಮಕ್ಕಳೇ ಬೇಲೂರು ದೇವಾಲಯದ ರೂವಾರಿಗಳೆಂದು ಇತಿಹಾಸಕಾರರು ಸಂಶೋಧಿಸಿದ್ದಾರೆ. ಅಲ್ಲದೆ ಕೇಶವನ ದೇವಾಲಯದ ಸುತ್ತ ಇರುವ ಮದನಿಕೆಯರು ಮತ್ತು ಮುಖ್ಯ ಶಿಲಾಪ್ರತಿಮೆಗಳಲ್ಲಿ ಅವುಗಳನ್ನು ಕೆತ್ತಿದ ಶಿಲ್ಪಿಗಳ ಹೆಸರು- ಉದಾ: ತಾನಗುಂದೂರ ಹರಿದಾಸಿ, ಬೇಲೂರ ಲಕಪ, ಕೇತಣ, ಚಿಕ್ಕಹಂಪ, ನಾಗೋಜ- ಇರುವುದರಿಂದ ಕರ್ನಾಟಕದ ವಿವಿಧ ಭಾಗಗಳಿಂದ ಬಂದ ರೂವಾರಿಗಳು ಈ ದೇವಾಲಯದ ರಚನೆಯಲ್ಲಿ ಪಾಲ್ಗೊಂಡಿರುವುದು ಸ್ಪಷ್ಟವಾಗಿದೆ.

ಚಲನಚಿತ್ರವೊಂದು ಇತಿಹಾಸಕ್ಕೆ ನಿಷ್ಠವಾಗಿರಬೇಕಾದ ಅಗತ್ಯವೇ ಇಲ್ಲ. ಇತಿಹಾಸದ ವಾಸ್ತವಾಂಶಗಳನ್ನು ಮೀರಿಯೂ ಉತ್ತಮ ಕೃತಿಯೊಂದನ್ನು ರಚಿಸುವ ಸಾಧ್ಯತೆಯನ್ನು ‘ಜಕಣಾಚಾರಿ’ ತೋರಿಸಿಕೊಟ್ಟಿದೆ. ಒಂದು ಕಾಲಘಟ್ಟದಲ್ಲಿ ಶಿಲ್ಪಿಯೊಬ್ಬನ ಬದುಕಿನ ವೃತ್ತಾಂತವೆಂದು ಮಾತ್ರ ಸ್ವೀಕರಿಸಿದರೆ ಉಳಿದೆಲ್ಲ ಆಕ್ಷೇಪಗಳು ಗೌಣವಾಗುತ್ತವೆ. ಹಾಗಾಗಿ ‘ಅಮರಶಿಲ್ಪಿ ಜಕಣಾಚಾರಿ’ ಐತಿಹಾಸಿಕ ಕತೆಯಲ್ಲ. ಜನರ ನಡುವೆ ಪ್ರಚಲಿತವಿರುವ ಶಿಲ್ಪಿಯೊಬ್ಬನ ಏಳುಬೀಳುಗಳ ಬದುಕನ್ನು ಕುರಿತ ಚಿತ್ರ. ಹುಟ್ಟಾ ಪ್ರತಿಭಾವಂತ ಜಕಣಾಚಾರಿ ತನ್ನ ಶಿಲ್ಪಕಲೆಗೆ ಸ್ಫೂರ್ತಿಯೆನಿಸಿದ ನೃತ್ಯಗಾತಿಯೊಬ್ಬಳನ್ನು ತಂದೆಯ ವಿರೋಧದ ನಡುವೆ ಮದುವೆಯಾಗುತ್ತಾನೆ. ನೃತ್ಯಗಾರ್ತಿಯ ತಾಯಿಯ ಸಂಚಿನಿಂದ ಅವಳ ಶೀಲ ಶಂಕಿಸಿದ ಜಕಣಾಚಾರಿ ದೇಶಾಂತರ ಅಲೆದು ಕೊನೆಗೆ ಬೇಲೂರು ಚೆನ್ನಕೇಶವ ದೇವಾಲಯದ ನಿರ್ಮಾಣದಲ್ಲಿ ತನ್ನ ಬದುಕಿನ ನೋವು ಮರೆಯಲೆತ್ನಿಸುತ್ತಾನೆ. ಗಂಡನಿಂದ ಪರಿತ್ಯಕ್ತಳಾದ ಹೆಂಡತಿ ಆತನಿಗೆ ತಿಳಿಯದಂತೆ ಅವನ ನೆರವಿಗೆ ನಿಲ್ಲುತ್ತಾಳೆ. ಹುಟ್ಟಿನಿಂದ ತಂದೆಯ ಮುಖವನ್ನೆ ಕಾಣದ ಡಂಕಣಾಚಾರ್ಯ ತಂದೆ ಕಡೆದ ಶಿಲ್ಪದಲ್ಲಿ ದೋಷವಿರುವುದನ್ನು ಪಣವೊಡ್ಡಿ ಸಾಬೀತು ಮಾಡುತ್ತಾನೆ. ಪಣದಲ್ಲಿ ಸೋತ ತಂದೆ ಕೈಕತ್ತರಿಸಿಕೊಳ್ಳುತ್ತಾನೆ. ತಂದೆ-ಮಗ ಪರಸ್ಪರ ತಿಳಿದು, ನಂತರ ಮೊಂಡುಗೈಯಲ್ಲೇ ಚನ್ನಕೇಶವ ವಿಗ್ರಹವನ್ನು ಕಡೆದು ದೇವರ ಅನುಗ್ರಹದಿಂದ ಜಕಣಾಚಾರಿ ಕೈಗಳನ್ನು ಮರಳಿ ಪಡೆಯುತ್ತಾನೆ.

ಇತಿಹಾಸದ ಹಂಗಿಲ್ಲದ ಈ ಚಿತ್ರ ಮನರಂಜನೆಯ ಸರಕನ್ನು ಧಾರಾಳವಾಗಿ ಬಳಸಿಕೊಂಡಿದೆ. ಇಲ್ಲಿ ವಿಶಾಲವಾದ, ಭವ್ಯವಾದ ಸೆಟ್‌ಗಳು, ಮನಸೆಳೆಯುವ ವಸ್ತ್ರವಿನ್ಯಾಸ, ಸೊಬಗಿನ ನೃತ್ಯ, ಹಾಸ್ಯ ಸನ್ನಿವೇಶಗಳಿವೆ. ಕಲ್ಯಾಣಕುಮಾರ್, ಬಿ.ಸರೋಜಾದೇವಿ, ಉದಯಕುಮಾರ್, ಚಿತ್ತೂರು ನಾಗಯ್ಯ, ಬಿ.ಎಂ. ವೆಂಕಟೇಶ್, ನರಸಿಂಹರಾಜು ಅವರ ಉತ್ತಮ ಅಭಿನಯವಿದೆ. ಚಿ. ಸದಾಶಿವಯ್ಯನವರು ಬರೆದಿರುವ ಸಂಭಾಷಣೆ ಮತ್ತು ನವಿರಾದ ಹಾಡುಗಳಿವೆ. ಎಸ್. ರಾಜೇಶ್ವರರಾವ್ ಅವರು ಚಿರಕಾಲ ನೆನಪಿನಲ್ಲುಳಿಯುವ ಹಾಡುಗಳನ್ನು ಸಂಯೋಜಿಸಿದ್ದಾರೆ. “ಚೆಲುವಾಂತ ಚನ್ನಿಗನೆ ನಲಿದಾಡು ಬಾ…”, “ನಿಲ್ಲುನೀ ನಿಲ್ಲುನೀ ನೀಲವೇಣಿ”, “ಈ ಕಪ್ಪನೆ ಶಿಲೆಯಲ್ಲಿ…”, “ಸುರಸುಂದರಾಂಗ ಕೃಷ್ಣ ನೀ ಬಾರೋ” ಮುಂತಾದ ಇಂದಿಗೂ ಜನಪ್ರಿಯತೆಯನ್ನು ಉಳಿಸಿಕೊಂಡಿರುವ ಹಾಡುಗಳಿವೆ. ಎಲ್ಲಕ್ಕಿಂತಲೂ ಮಿಗಿಲಾಗಿ ಕನ್ನಡ ನಾಡಿನ ಸಂಸ್ಕೃತಿಯ ಸಂಕೇತಗಳಲ್ಲೊಂದೆನಿಸಿದ ಹೊಯ್ಸಳ ರಾಜರ ಕಲಾದರ್ಶನ ಈ ಚಿತ್ರದ ಆಕರ್ಷಣೆಯ ಅಂಶಗಳಲ್ಲೊಂದು.

ಇದು ಬಿ.ಎಸ್.ರಂಗಾ ಎಂಬ ಅಪ್ಪಟ ಸಾಹಸಿಯು ನಿರ್ಮಿಸಿದ ಚಿತ್ರಗಳಲ್ಲೇ ಪ್ರಾತಿನಿಧಿಕವೆನಿಸಿದ ಚಿತ್ರ. ಆದರೆ ಇದೊಂದು ಚಿತ್ರದ ಬಗ್ಗೆ ಮಾತ್ರ ಹೇಳಿದರೆ ಬಿ.ಎಸ್.ರಂಗಾ ಎಂಬ ಸಾಹಸಿಯ ಬದುಕಿನ ಸಮಗ್ರ ದರ್ಶನವಾಗುವುದಿಲ್ಲ. ಬಿಂಡಿಗನವಿಲೆ ಶ್ರೀನಿವಾಸ ಅಯ್ಯಂಗಾರ್ ರಂಗಾ ಅವರು ಭಾರತೀಯ ಚಿತ್ರೋದ್ಯಮ ಕಂಡ ಅಪರೂಪದ ಸಾಹಸಿ. ಸಿನಿಮಾಗೆ ಮಾತು ಬಂದ ಕಾಲದಿಂದಲೂ ಅವರಿಗೆ ಚಿತ್ರರಂಗದ ನಂಟು. ಐವತ್ತರ ದಶಕದ ಉತ್ತರಾರ್ಧದಲ್ಲಿ ಕನ್ನಡ ಚಿತ್ರ ನಿರ್ಮಾಣಕ್ಕೆ ಇಳಿದ ಅವರು ಅರವತ್ತು ಎಪ್ಪತ್ತರ ದಶಕದಲ್ಲಿ ಕನ್ನಡ ಚಿತ್ರೋದ್ಯಮ ಉಳಿಯಲು ಕಾರಣರಾದವರು. ಸೀಮಿತ ಮಾರುಕಟ್ಟೆಯನ್ನು ನಂಬಿ ಸೊರಗಿದ್ದ ಕನ್ನಡ ಚಿತ್ರರಂಗಕ್ಕೆ ಅದ್ಧೂರಿತನವನ್ನು ತಂದುಕೊಟ್ಟವರಲ್ಲಿ ಮೊದಲಿಗರು. ಅಪಾರ ವೆಚ್ಚದಲ್ಲಿ ಮೊದಲ ವರ್ಣಚಿತ್ರವನ್ನು ಕನ್ನಡ ಜನತೆಗೆ ಸಮರ್ಪಿಸಿದ ಸಾಹಸಿ. ಕನ್ನಡ ಚಿತ್ರೋದ್ಯಮ ತಾಯ್ನಾಡಿನಲ್ಲೇ ನೆಲೆಯೂರಬೇಕೆಂಬ ಕನಸು ಕಂಡು ನಲವತ್ತರ ದಶಕದಲ್ಲಿಯೇ ಸಂಸ್ಕರಣ ಪ್ರಯೋಗಾಲಯವನ್ನು ಬೆಂಗಳೂರಿನಲ್ಲಿ ನಿರ್ಮಿಸಿದ ಉದ್ಯಮಿ.

ಈ ಅಪ್ರತಿಮ ಸಾಹಸಿ ಜನಿಸಿದ್ದು ೧೯೧೭ರ ನವೆಂಬರ್ ಹನ್ನೊಂದರಂದು ಬೆಂಗಳೂರಿನಲ್ಲಿ. ತಂದೆ ಬಿ.ಎಸ್. ಅಯ್ಯಂಗಾರ್‌ರವರು ‘ಅಮೆಚೂರ್ ಡ್ರಾಮಾಟಿಕ್ ಅಸೋಸಿಯೇಷನ್’ ಸ್ಥಾಪಕರು. ಕೈಲಾಸಂ, ದೇವುಡು, ಬಳ್ಳಾರಿ ರಾಘವ ಅವರಲ್ಲದೆ ಚಿ.ಸದಾಶಿವಯ್ಯರಂಥವರೂ ಅದರ ಸದಸ್ಯರು. ತಂದೆಯ ಪ್ರಭಾವದಿಂದ ರಂಗಾ ಅವರಿಗೆ ರಂಗಭೂಮಿಯಲ್ಲಿ ಆಸಕ್ತಿ ಮೂಡಿತು. ಜೊತೆಗೆ ಛಾಯಾಗ್ರಹಣದ ಹುಚ್ಚು. ಹದಿನೇಳು ವರ್ಷದ ರಂಗಾ ಅವರು ಕಳುಹಿಸಿದ ಚಿತ್ರಗಳು ಲಂಡನ್‌ನ ರಾಯಲ್ ಸೊಸೈಟಿಯಲ್ಲಿ ಪ್ರದರ್ಶನ ಕಂಡಿದ್ದವು. ರಾಯಲ್ ಫೋಟೋಗ್ರಾಫಿಕ್ ಸೊಸೈಟಿಯ ಆನರರಿ ಫೆಲೋ ಆಗಿಯೂ ಆಯ್ಕೆಯಾಗಿದ್ದರು.

ಛಾಯಾಗ್ರಹಣವನ್ನು ಗುರುಗಳ ನೆರವಿಲ್ಲದೇ ಕಲಿತ ರಂಗಾ ಅವರು ಚಲನಚಿತ್ರ ಛಾಯಾಗ್ರಹಣದಲ್ಲಿ ಪರಿಶ್ರಮ ಪಡೆಯುವ ಹಂಬಲದಿಂದ ೧೯೪೦ರಲ್ಲಿ ಮುಂಬೈನ ರಣಜಿತ್ ಸ್ಟುಡಿಯೋಗೆ ಹೋದರು. ‘ಅಚ್ಯುತ್’, ‘ತುಲುಸಿದಾಸ್’, ‘ಹೋಲಿ’, ‘ಪಾಗಲ್’ ಮುಂತಾದ ಚಿತ್ರಗಳಲ್ಲಿ ಸಹಾಯಕ ಕ್ಯಾಮೆರಾಮೆನ್ ಆಗಿ ಕಾರ್ಯನಿರ್ವಹಿಸಿ ಅನುಭವ ಪಡೆದರು. ವಾಪಸ್ಸು ಮದರಾಸಿಗೆ ಬಂದು ಜೆಮಿನಿ ಸ್ಟುಡಿಯೋನಲ್ಲಿ ಛಾಯಾಗ್ರಾಹಕ ಹುದ್ದೆಗೆ ಸೇರಿಕೊಂಡರು. ಅದಕ್ಕೂ ಮುನ್ನ ಹಾಲಿವುಡ್‌ನ ‘ಟ್ವೆಂಟಿಯತ್ ಸೆಂಚುರಿ ಫಾಕ್ಸ್’ ಸಂಸ್ಥೆಯು ಹಿಮಾಲಯದ ಬಗ್ಗೆ ನಿರ್ಮಿಸಿದ ಸಾಕ್ಷ್ಯಚಿತ್ರದ ಸಹಛಾಯಾಗ್ರಾಹಕರಾಗಿ ದುಡಿದಿದ್ದರು.

೧೯೪೦ರಲ್ಲಿ ಜೆಮಿನಿಯವರು ನಿರ್ಮಿಸಿದ ‘ದಾಸಿ ಅಪರಂಜಿ’ ತಮಿಳು ಚಿತ್ರ ರಂಗಾ ಅವರು ಸ್ವತಂತ್ರವಾಗಿ ಛಾಯಾಗ್ರಹಣ ಮಾಡಿದ ಚಿತ್ರ. ಅನಂತರ ಅಲ್ಲಿ ತಯಾರಾದ ‘ಭಕ್ತನಾರದ’, ‘ನಂದನಾರ್’, ‘ತಿರುಗುಬಟ್ಟು’, ‘ಲೈಲಾ ಮಜ್ನು’, ‘ದೇವದಾಸ್’, ‘ಮೊದಟಿ ರಾತ್ರಿ’ ಮುಂತಾದ ತೆಲುಗು ಚಿತ್ರಗಳ ಛಾಯಾಗ್ರಾಹಕರಾಗಿದ್ದರು. ಮೂರು ಶಿಫ್ಟ್‌ಗಳಲ್ಲಿ ಬಿಡುವಿಲ್ಲದ ದುಡಿಮೆಯಿಂದ ಚಲನಚಿತ್ರರಂಗದ ಎಲ್ಲಾ ಮಗ್ಗಲುಗಳನ್ನು ಅರಿತಿದ್ದ ರಂಗಾ ಅವರು ‘ಲೈಲಾ ಮಜ್ನು’ ಚಿತ್ರದ ಛಾಯಾಗ್ರಾಹಕರಾಗಿದ್ದಾಗ ಬೆಂಗಳೂರಿಗೆ ಸಮೀಪದ ನಾಯಂಡನಹಳ್ಳಿಯಲ್ಲಿ ದಕ್ಷಿಣ ಭಾರತದ ಮೊದಲ ಆಟೊಮ್ಯಾಟಿಕ್ ಪ್ರೊಸೆಸಿಂಗ್ ಲ್ಯಾಬ್ ಸ್ಥಾಪಿಸಿದರು. ಆದರೆ ಸಂಸ್ಥೆ ಆರ್ಥಿಕ ಮುಗ್ಗಟ್ಟಿನಿಂದ ಬಳಲಿತು. ಅದನ್ನು ಉಳಿಸಲು ಮದರಾಸಿಗೆ ವರ್ಗಾಯಿಸಿದರು. ಈ ನಡುವೆ ಸ್ವತಂತ್ರವಾಗಿ ‘ಭಕ್ತ ತುಲಸಿದಾಸ’ (೧೯೪೭) ಚಿತ್ರವನ್ನು ತಮಿಳು ಭಾಷೆಯಲ್ಲಿ ನಿರ್ದೇಶಿಸಿದರು. ಅನಂತರ ‘ಮಾ ಗೋಪಿ’ (೧೯೪೭) ಎಂಬ ಭರ್ಜರಿ ಯಶಸ್ಸು ಸಾಧಿಸಿದ ತೆಲುಗು ಚಿತ್ರ ನಿರ್ಮಿಸಿ-ನಿರ್ದೇಶಿಸಿದರು. ಅದು ಹಿಂದಿಯಲ್ಲಿ ‘ಬಾಲಕ್’ ಎನ್ನುವ ಹೆಸರಿನಲ್ಲಿ ರೀಮೇಕ್‌ಆಗಿ ಯಶಸ್ಸು ಕಂಡಿತು.

ಒಂದು ಸ್ಟುಡಿಯೋ ನಿರ್ಮಿಸಬೇಕೆಂದು ಕನಸು ಕಂಡ ರಂಗಾ ಅವರು ಬೇರೊಂದು ಸ್ಟುಡಿಯೋ ಮಾಲೀಕರು ಮಾರುತ್ತಿದ್ದ ಉಪಕರಣಗಳನ್ನು ಕೊಂಡರು. ಒಮ್ಮೆ ಜೆಮಿನಿಯಿಂದ ಕೆಲಸ ಮುಗಿಸಿ ಹೊರಬರುತ್ತಿದ್ದಾಗ ಆಕಸ್ಮಿಕವಾಗಿ ಅವರಿಗೆ ವಿಕ್ರಮ ಶಕೆಯ ನಾಣ್ಯವೊಂದು ಸಿಕ್ಕಿತು. ವಿಕ್ರಮಾದಿತ್ಯನ ಶಿರವಿದ್ದ ನಾಣ್ಯ ಮುಂದೆ ರಂಗಾರವರು ಸ್ಥಾಪಿಸಿದ ‘ವಿಕ್ರಂ ಸ್ಟುಡಿಯೋಸ್’ನ ಲಾಂಛನವಾಯಿತು. ಈ ಸ್ಟುಡಿಯೋದಲ್ಲಿ ಅವರು ತಯಾರಿಸಿದ ಮೊದಲ ಚಿತ್ರ ‘ಭಕ್ತ ಮಾರ್ಕಂಡೇಯ’. ಅದು ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾದ ಚಿತ್ರ. ಚಿತ್ತೂರು ನಾಗಯ್ಯ ಮತ್ತು ಪುಷ್ಪವಲ್ಲಿ ತಾರಾಗಣದ, ಚಿತ್ರಸಾಹಿತಿ ಚಿ.ಸದಾಶಿವಯ್ಯನವರು ನಟಿಸಿದ ಚಿತ್ರ. ಅನಂತರ ಅವರು ತಮಿಳು-ತೆಲುಗಿನಲ್ಲಿ ‘ತೆನಾಲಿ ರಾಮಕೃಷ್ಣ’ (೧೯೫೭) ಚಿತ್ರವನ್ನು ನಿರ್ಮಿಸಿ-ನಿರ್ದೇಶಿಸಿ ರಾಷ್ಟ್ರಪ್ರಶಸ್ತಿ ಪಡೆದರು.

೧೯೫೯ರಲ್ಲಿ ವಿಕ್ರಂ ಪ್ರೊಡಕ್ಷನ್ಸ್ ಮೂಲಕ ‘ಮಹಿಷಾಸುರ ಮರ್ದಿನಿ’ಯನ್ನು ನಿರ್ಮಿಸಿದ ರಂಗಾ ಅವರು ಅದನ್ನು ಹಿಂದಿಗೆ ‘ದುರ್ಗಾಮಾತಾ’ ಎನ್ನುವ ಹೆಸರಿನಲ್ಲಿ ಡಬ್ ಮಾಡಿ ಬಿಡುಗಡೆ ಮಾಡಿದರು. ರಾಜ್‌ಕುಮಾರ್, ಸಾಹುಕಾರ್ ಜಾನಕಿ, ಉದಯಕುಮಾರ್, ಚಿತ್ತೂರು ನಾಗಯ್ಯರವರ ಉತ್ತಮ ಅಭಿನಯವಿದ್ದ ಚಿತ್ರದಲ್ಲಿ ರಂಗಾ ಅವರ ಅದ್ಧೂರಿತನ ಎದ್ದು ಕಾಣುತ್ತಿತ್ತು. ಅನಂತರ ಇಪ್ಪತ್ತು ವರ್ಷಗಳ ಕಾಲ ರಂಗಾ ಅವರು ’ವಿಕ್ರಂ ಪ್ರೊಡಕ್ಷನ್’, ’ವಸಂತ್ ಪಿಕ್ಚರ್ಸ್’ ಮತ್ತು ’ವರ್ಣ ಪ್ರೊಡಕ್ಷನ್ಸ್’ ಲಾಂಛನಗಳಡಿ ಸುಮಾರು ೨೦ ಕನ್ನಡ ಚಿತ್ರಗಳನ್ನು ನಿರ್ಮಿಸಿದರು. ಹಿಂದೆ ತೆಲುಗಿನಲ್ಲಿ ಯಶಸ್ವಿಯಾಗಿದ್ದ ‘ಮಾ ಗೋಪಿ’ ಚಿತ್ರವನ್ನು ೧೯೮೧ರಲ್ಲಿ ನಿರುಪಮಾ ಆರ್ಟ್ಸ್ ಸಂಸ್ಥೆಗೆ ‘ಭಾಗ್ಯವಂತ’ ಹೆಸರಿನಲ್ಲಿ ರೀಮೇಕ್ ಮಾಡಿಕೊಟ್ಟರು. ಪುನೀತ್ ರಾಜ್‌ಕುಮಾರ್ ಬಾಲನಟನಾಗಿ ಉತ್ತಮ ಅಭಿನಯ ನೀಡಿದ್ದ ಚಿತ್ರಗಳಲ್ಲಿ ಅದೂ ಒಂದು.

ರಂಗಾ ಅವರು ಹೆಚ್ಚಾಗಿ ನಿರ್ಮಿಸಿದ್ದು ಪೌರಾಣಿಕ ಮತ್ತು ಜಾನಪದ ಚಿತ್ರಗಳನ್ನು. ‘ಭಕ್ತ ಮಾರ್ಕಂಡೇಯ’, ‘ಮಹಿಷಾಸುರ ಮರ್ದಿನಿ’, ‘ಚಂದ್ರಹಾಸ’, ‘ಮಹಾಸತಿ ಅನಸೂಯ’, ‘ಪಾರ್ವತಿ ಕಲ್ಯಾಣ’ ಚಿತ್ರಗಳಲ್ಲದೆ ಇತಿಹಾಸದ ಹಿನ್ನೆಲೆಯಿದ್ದ ‘ಜಕಣಾಚಾರಿ’ ಮತ್ತು ‘ಹಾಸ್ಯರತ್ನ ರಾಮಕೃಷ್ಣ’ಗಳನ್ನು ನಿರ್ದೇಶಿಸಿದರು. ಅದಲ್ಲದೆ ಜಿ.ವಿ.ಅಯ್ಯರ್ ನಿರ್ದೇಶನದಲ್ಲಿ ‘ದಶಾವತಾರ’, ‘ಕಿಲಾಡಿರಂಗ’, ‘ರಾಜಶೇಖರ’, ಬಿ.ಎನ್. ಹರಿದಾಸ್ ನಿರ್ದೇಶನದಲ್ಲಿ ‘ಒಡಹುಟ್ಟಿದವರು’ ಮತ್ತು ಕೆ.ವಿ. ಶ್ರೀನಿವಾಸ್ ನಿರ್ದೇಶನದಲ್ಲಿ ‘ಶಿವಭಕ್ತ’ ಚಿತ್ರಗಳನ್ನು ನಿರ್ಮಿಸಿದರು. ಜೊತೆಗೆ ಸಾಮಾಜಿಕ ಚಿತ್ರಗಳಾದ ‘ಪ್ರತಿಜ್ಞೆ’, ‘ಭಲೇಬಸವ’, ‘ಮಿ. ರಾಜ್‌ಕುಮಾರ್’, ‘ಸಿಡಿಲಮರಿ’, ‘ಮಣ್ಣಿನ ಮಗಳು’, ‘ಸುಳಿ’, ‘ಹುಲಿಯಾದ ಕಾಳ’ ಮತ್ತು ‘ಬಂಗಾರದ ಬದುಕು’ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದರು. ಕೀಳು ಅಭಿರುಚಿಯಿಂದ ದೂರವಾದ, ಶುದ್ಧ ಮನರಂಜನೆಯ, ತಿಳಿಹಾಸ್ಯದ ಚಿತ್ರಗಳಿಗೆ ರಂಗಾ ಅವರ ಚಿತ್ರಗಳು ಹೆಸರುವಾಸಿಯಾಗಿದ್ದವು.

ಕನ್ನಡ ಕಲಾವಿದರ ಬಳಗದ ‘ರಣಧೀರ ಕಂಠೀರವ’ ಚಿತ್ರ ನಿರ್ಮಾಣ ಕಾಲದಲ್ಲಿ ಅವರ ನೆರವಿಗೆ ಬಂದ ಬಿ.ಎಸ್. ರಂಗಾ ತಮ್ಮ ಇಳಿವಯಸ್ಸಿನಲ್ಲಿ ಚಿತ್ರ ನಿರ್ಮಾಣವನ್ನು ಕಡಿಮೆ ಮಾಡಿ ಬೆಂಗಳೂರಿನಲ್ಲಿ ‘ವಸಂತ್ ಕಲರ್ ಲ್ಯಾಬೋರೇಟರಿ’ ಸ್ಥಾಪಿಸಿದರು. ಚಿತ್ರ ನಿರ್ಮಾಣದ ವಿವಿಧ ಕ್ಷೇತ್ರಗಳನ್ನು ಸ್ವಯಮಾಚಾರ್ಯರಾಗಿಯೇ ಕಲಿತ ರಂಗಾ ಅವರದು ಬತ್ತದ ಉತ್ಸಾಹ. ಅದಮ್ಯವಾದ ಸಾಹಸದಿಂದ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ದುಡಿದಿದ್ದಾರೆ. ಹಾಗಾಗಿ ಕನ್ನಡ ಚಿತ್ರೋದ್ಯಮದ ಪ್ರಾತಃಸ್ಮರಣೀಯರಲ್ಲಿ ಬಿ.ಎಸ್. ರಂಗಾ ಅವರೂ ಒಬ್ಬರು.

ಸೈಡ್ ರೀಲ್

– ‘ಅಮರಶಿಲ್ಪಿ ಜಕಣಾಚಾರಿ’ ಸಂಪೂರ್ಣವಾಗಿ ವರ್ಣದಲ್ಲಿ ತಯಾರಾದ ಮೊದಲನೇ ಚಿತ್ರ. ಕನ್ನಡದಲ್ಲಿ ಬಿಡುಗಡೆಯಾದ ಮೊದಲ ಐದು ವರ್ಣಚಿತ್ರಗಳಲ್ಲಿ ನಾಲ್ಕನ್ನು ನಿರ್ಮಿಸಿದವರು ಬಿ.ಎಸ್. ರಂಗಾ (‘ಅಮರಶಿಲ್ಪಿ’, ‘ಭಲೇ ಬಸವ’, ‘ಮಿಸ್ಟರ್ ರಾಜ್‌ಕುಮಾರ್’ ಮತ್ತು ‘ಸಿಡಿಲ ಮರಿ’). ಉಳಿದ ಒಂದು ವರ್ಣಚಿತ್ರವೆಂದರೆ ಪಂತುಲು ಅವರ ‘ಶ್ರೀ ಕೃಷ್ಣ ದೇವರಾಯ’ (೧೯೭೦).

– ‘ಅಮರಶಿಲ್ಪಿ ಜಕಣಾಚಾರಿ’ ಚಿತ್ರದಲ್ಲಿ ನಟಿ ಜಯಲಲಿತ ಅವರು ಹಾಡೊಂದರಲ್ಲಿ (’ಮಲ್ಲಿಗೆಯಾ ಹೂವಿನಂಥ ಮೈನೋಳೆ, ಮನಸ್ಸೆಲ್ಲ ನಿನ್ನ ಮೇಲೆ ಐತೆಕಳ್ಳೆ’) ನರ್ತಿಸಿದ್ದಾರೆ. ಪ್ರಾಯಶಃ ಅದು ಅವರು ಕ್ಯಾಮೆರಾ ಎದುರಿಸಿದ ಮೊದಲ ಚಿತ್ರವಿರಬೇಕು.

– ‘ತುಂಬಿತು ಮನವ ತಂದಿತು ಸುಖವ’- ‘ಮಹಿಷಾಸುರ ಮರ್ದಿನಿ’ ಚಿತ್ರದ ಈ ಯುಗಳ ಗೀತೆ ಹಾಡಿದವರು ರಾಜ್ ಮತ್ತು ಎಸ್.ಜಾನಕಿ. ತಮ್ಮ ಪಾತ್ರಕ್ಕೆ ತಾವೇ ಹಾಡಿದ ರಾಜ್‌ರವರ ಮೊದಲ ಯುಗಳ ಗೀತೆ ಬರೆದವರು ಚಿ.ಸದಾಶಿವಯ್ಯನವರು. ಸಂಗೀತ-ಜಿ.ಕೆ.ವೆಂಕಟೇಶ್. ಮತ್ತೆ ರಾಜ್ ತಮ್ಮ ಪಾತ್ರಗಳಿಗೆ ಹಾಡಲು ಆರಂಭಿಸಿದ್ದು ‘ಸಂಪತ್ತಿಗೆ ಸವಾಲ್’ (೧೯೭೪)ನ ಎಮ್ಮೆ ಹಾಡಿನ ಮೂಲಕ.

– ಬೆಂ ಗಳೂರಿನ ನ್ಯಾಷನಲ್ ಸ್ಕೂಲ್‌ನಲ್ಲಿ ಉಪಾಧ್ಯಾಯರಾಗಿದ್ದ ಚಿ.ಸದಾಶಿವಯ್ಯನವರು ‘ಭಕ್ತ ಮಾರ್ಕಂಡೇಯ’ ಚಿತ್ರದ ಪಾತ್ರ ವೊಂದರಲ್ಲಿ ನಟಿಸಿ, ಸಾಹಿತ್ಯ ನೀಡಿದ್ದರು. ವಿಕ್ರಂ ಸಂಸ್ಥೆಯ ಚಿತ್ರಗಳ ಖಾಯಂ ಸಾಹಿತಿಯಾದ ಅವರು ಐವತ್ತರ ದಶಕ ದಲ್ಲಿಯೇ ವೃತ್ತಿಗೆ ರಾಜೀನಾಮೆ ನೀಡಿ ಮದರಾಸಿನಲ್ಲಿ ನೆಲೆಯಾದರು.

– ಚಿ.ಸದಾಶಿವಯ್ಯರವರ ಪುತ್ರ ಚಿ.ಉದಯಶಂಕರ್ ಸಹ ರಂಗಾರವರ ’ಭಕ್ತ ಮಾರ್ಕಂಡೇಯ’, ‘ಮಹಿಷಾಸುರ ಮರ್ದಿನಿ’ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದರು. ರಂಗಾ ಅವರು ನಿರ್ದೇಶಿಸಿದ ಕೊನೆಯ ಚಿತ್ರ ‘ಬಂಗಾರದ ಬದುಕು’. ಇದರಲ್ಲಿ ಲಕ್ಷ್ಮಿ ಮತ್ತು ಪ್ರಭಾಕರ್ ಜೋಡಿಯಾಗಿ ನಟಿಸಿದ್ದು ವಿಶೇಷ.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....