ನಿನ್ನೊಲವಿನಾಳದಲಿ ಮುಳುಗಿ ಮರೆತಿಹೆ ನನ್ನ
ಮನವ ಮುತ್ತಿದ ಮಣ್ಣ ತೊಡರುಗಳ ಕಿತ್ತೊಗೆದು
ನಿನ್ನೊಲವ ಜೊನ್ನದಲಿ ಮಿಂದು ಉನ್ಮದಿಸಿರುವೆ
ಹಿರಿಮೆ ಹೊನ್ನುಗಳಾಸೆ ವಿಫಲನವೆನಿಸಿತು ಮನಕೆ
ಸಂತೃಪ್ತ, ಸಂಪನ್ನ, ಪೂತ, ಸ್ವಾಂತಃಪೂರ್ಣ
ನಿದ್ದೆಯಾ ಮರೆಯಿಲ್ಲ, ಎಚ್ಚರದ ಕರೆಯಿಲ್ಲ,
ನಿಷ್ಪಂದ, ನಿಶ್ಶಬ್ದ ಶಾಂತಿಯಲಿ ಸಮಾಧಿಯ
ನೈದಿಹುದು ಎನ್ನ ಬಗೆ.
ಈ ಕ್ಷಣವು ಭಂಗುರವೆ?
ಆಗಸದ ಅಶಿಷಗಳೆನೆ ತಂಗದಿರ ಸೊದೆ,
ಮನದನ್ನೆ ಮೈಮನವನರಳಿಸಿದೆ. ಇಂಗಡಲ
ಸವಿಯಲ್ಲಿ ಮೈಮರೆತರೊ ತಾರೆಗಳು ಕಾ-
ಯುತಿವೆಯೆಮ್ಮನ್ನು. ದೇವರಿಗು ಸುಪ್ರೀತ
ವೀಕ್ಷಣವು. ನಕ್ಷತ್ರದೊಲಕ್ಷಯವು ಬಾಳು
*****


















