ಇದಾವ ಹಾಡು ?
ಇದಾವ ತಾಲ ?
ಇದಾವ ರಾಗ ?
ನನ್ನ ಪುಟ್ಟ ಪುರಂದರ ವಿಠಲಾ !
ಕೈಯ ತಾರಮ್ಮಯ್ಯಕ್ಕೆ ತೊದಲು ನುಡಿಯ ತಿಲ್ಲಾಣ;
ಬಾಯಬೆಲ್ಲವ ಚಪ್ಪರಿಸಿ ಕಾಯಪರವಶನಾದೆ;
ಇದಾವ ರಸ ?
ಇದಾವ ಭಾವ ?
ಇದಾವ ಹಾವ ?
ನನ್ನ ಪುಟ್ಟ ಪುರಂದರ ವಿಠಲಾ !
ಮಾತಿನ ಸೂತಕವಿಲ್ಲದ ನಾದವ ನಾದುವ ಸೊಲ್ಲು,
ಅರ್ಥದ ಪಾತಕವಿಲ್ಲದ ಜೀವದ ಭಾವದ ಸೊಲ್ಲು,
ಇದಾವ ರೀತಿ ?
ಇದಾವ ಗಮಕ ?
ಇದಾವ ಯಮಕ ?
ನನ್ನ ಪುಟ್ಟ ಪುರಂದರ ವಿಠಲಾ !
ತಿಲ್ಲಾಣದಲ್ಲಿ ಪಲ್ಲವಿಸಿ, ಮುಂದೆ ಪಾಡಿಗೆ ಬರುವ ನಿನ್ನೀ
ಪಾಡು ವಾಚಾಮಗೋಚರವೇ-ಈ ನಿನ್ನ ಧ್ವನಿಕಾವ್ಯ . . . .
ಹಿಂದಿನ ನೆನಸೋ ?
ಇಂದಿನ ಮನಸೊ ?
ಮುಂದಿನ ಕನಸೊ ?
ನನ್ನ ಪುಟ್ಟ ಪುರಂದರ ವಿಠಲಾ !
*****

















