ಚಿತ್ರ: ಪಿಕ್ಸಾಬೇ
ಚಿತ್ರ: ಪಿಕ್ಸಾಬೇ

ದೊಡ್ಡವೀರ ರಾಜ ಕೊಡಗೆಂಬ ನಾಡನ್ನು ಕಟ್ಟಿದ ಕಲಿ. ಅವನ ಎಳವೆ ತುಂಬಾ ಯಾತನಾಮಯವಾಗಿತ್ತು. ಆತನ ಅಪ್ಪ ಲಿಂಗರಾಜೇಂದ್ರ ಸತ್ತ ತಕ್ಷಣ ಇಡೀ ಕೊಡಗನ್ನು ಹೈದರಾಲಿ ತನ್ನ ವಶಕ್ಕೆ ತೆಗೆದುಕೊಂಡ. ಲಿಂಗರಾಜೇಂದ್ರನ ಅಷ್ಟೂ ಮಂದಿ ರಾಣಿಯರನ್ನು ಮತ್ತು ಮಕ್ಕಳನ್ನು ಪೆರಿಯಾಪಟ್ಟಣದಲ್ಲಿ ಸೆರೆಯಲ್ಲಿರಿಸಿ ಅವರು ತಪ್ಪಿಸಿಕೊಂಡು ಹೋಗದಂತೆ ಬಲವಾದ ಕಾವಲಿಟ್ಟ. ಕೊಡಗರಿಗೆ ಅವರೆಲ್ಲಿದ್ದಾರೆಂಬ ಸುಳಿವೂ ಸಿಗದಂತೆ ನೋಡಿಕೊಂಡ.

ಅದಷ್ಟೇ ಆಗಿದ್ದರೆ ದೊಡ್ಡ ರಾಜ ಚಿಂತಿಸಬೇಕಾಗಿರಲಿಲ್ಲ. ಒಂದು ದಿನ ಪೆರಿಯಾಪಟ್ಟಣದ ಕೋಟೆಗೆ ಶ್ರೀರಂಗಪಟ್ಟಣದಿಂದ ಮೂವರು ಮತ ಪಂಡಿತರು ಬಂದರು. ಅವರ ಜತೆಯಲ್ಲಿ ಮೂವರು ಯುನಾನಿ ವೈದ್ಯರೂ ಇದ್ದರು. ಕೋಟೆ ಖಾದರ್‌ಖಾನ್‌ ಕೈಸಗಿಯ ಅಧೀನದಲ್ಲಿತ್ತು. ಅವನು ಧೀರ ಯೋಧನಾಗಿ ಸೇನಾಧಿಪತಿಯ ಸ್ಥಾನಕ್ಕೆ ಏರಿದವನು. ಶ್ರೀರಂಗಪಟ್ಟಣದಿಂದ ಬಂದವರು ಖಾದರ್‌ಖಾನನಲ್ಲಿ ಏನನ್ನೋ ಸಂಭಾಷಿಸಿದರು. ಖಾದರ್‌ ಖಾನ್‌ ಆಳುಗಳಿಗೆ ಆಜ್ಞೆಯಿತ್ತು ದೊಡ್ಡವೀರ ರಾಜ, ಅವನ ತಮ್ಮಂದಿರಾದ ಅಪ್ಪಾಜಿ ರಾಜ ಮತ್ತು ಲಿಂಗರಾಜರನ್ನು ಕರೆತರಲು ಆಜ್ಞಾಪಿಸಿದ.

ಆಳುಗಳು ಮೂವರನ್ನೂ ಕರೆತಂದರು.

ಅರಸು ಮಕ್ಕಳು ಕೇಳಬೇಕು. ನಮ್ಮ ನವಾಬು ಹೈದರಾಲೀಖಾನ್‌ ಖಾವಂದರು ನಿಮ್ಮ ಆರೋಗ್ಯದ ಬಗ್ಗೆ ಚಿಂತೆಗೀಡಾಗಿದ್ದಾರೆ. ನಿಮ್ಮನ್ನು ಪರೀಕ್ಷಿಸಲು ವೈದ್ಯರುಗಳನ್ನು ಕಳಿಸಿದ್ದಾರೆ. ನಾಳೆ ಕೊಡಗನ್ನು ಆಳಬೇಕಾದವರು ನೀವು. ನಿಮ್ಮ ಆರೋಗ್ಯ ಸರಿ ಇಲ್ಲದಿದ್ದರೆ ಹೇಗೆ? ಪರೀಕ್ಷಗೆ ಅವಕಾಶ ಮಾಡಿಕೊಡಿ.
ಮೂವರು ರಾಜಕುಮಾರರನ್ನು ಮೂರು ಕೋಣೆಗಳಿಗೆ ಆಳುಗಳು ಕರಕೊಂಡು ಹೋದರು. ಜತೆಗೆ ಮತ ಪಂಡಿತರು ಮತ್ತು ಯುನಾನಿ ವೈದ್ಯರು. ಸ್ವಲ್ಪ ಹೊತ್ತಿನಲ್ಲಿ ಕೋಣೆಗಳಿಂದ ಆರ್ತನಾದ ಕೇಳಿಸಿತು. ವೈದ್ಯರುಗಳು ಒಂದು ವಾರ ನೋವಿರುತ್ತದೆ. ಮತ್ತೆ ಮೊದಲಿನಂತಾಗುತ್ತದೆ ಎಂದು ಸಮಾಧಾನಿಸುವುದೂ ಖಾದರ್‌ಖಾನ್‌ ಕೈಸಗಿಯ ಕಿವಿಗೆ ಬಿತ್ತು.

ಕೋಣೆಯಿಂದ ಹೊರಬರುವಾಗ ರಾಜಕುಮಾರರ ಬಟ್ಟೆಯ ಮಧ್ಯಪ್ರದೇಶದಲ್ಲಿ ರಕ್ತದ ಕಲೆಗಳಿದ್ದವು. ಕಣ್ಣುಗಳಲ್ಲಿ ನೀರು ಮತ್ತು ಮುಖಗಳಲ್ಲಿ ಅಪಾರ ನೋವು. ಅವರಲ್ಲಿ ಹಿರಿಯವ ದೊಡ್ಡ ವೀರ ರಾಜ ಖಾದರ್‌ ಖಾನ್‌ನ ಮೇಲೆ ರೇಗಿದ.

ಈ ರಕ್ಕಸರ ಕೈಗೆ ಕೊಟ್ಟು ನಮ್ಮನ್ನು ಹೀಗೆ ಸುನ್ನತಿ ಮಾಡಿಸಿ ಧರ್ಮ ಭ್ರಷ್ಟರನ್ನಾಗಿ ಮಾಡುವ ಬದಲು ಒಂದೇ ಸಲಕ್ಕೆ ಕೊಂದು ಬಿಡಬಹುದಿತ್ತು. ನೀನು ಮನುಷ್ಯನಾ, ರಾಕ್ಷಸನಾ?
ಖಾದರ್‌ ಖಾನ್‌ ನೆಲನೋಟಕನಾಗಿ ತಗ್ಗಿದ ಸ್ವರದಲ್ಲೆಂದ.
ನಾವು ಇದನ್ನೆಲ್ಲಾ ಮಾಡಿಸಿಕೊಂಡವರು. ಇದಕ್ಕೆ ಧರ್ಮದ ಲೇಪನವಿಲ್ಲ. ಆರೋಗ್ಯದ ದೃಷ್ಟಿಯಿಂದ ಎಲ್ಲರೂ ಸುನ್ನತಿ ಮಾಡಿಸಿಕೊಳ್ಳುವುದು ಒಳ್ಳೆಯದೆಂದು ಆರೋಗ್ಯ ಶಾಸ್ತ್ರದಲ್ಲಿದೆ. ಇದರಲ್ಲಿ ಧರ್ಮ ಭ್ರಷ್ಟತೆಯ ಮಾತಿಲ್ಲ. ನೀವು ಕುರಾನು ಓದಬೇಕು, ನಮಾಜು ಮಾಡಬೇಕೆಂದು ನಾವು ಬಲವಂತ ಮಾಡಿಲ್ಲ. ಮಾಡುವುದೂ ಇಲ್ಲ.
ದೊಡ್ಡ ವೀರ ರಾಜ ಪ್ರತಿಭಟಿಸಿದ.
ಹೋಗು ನಿನ್ನ ನವಾಬನಿಗೆ ಹೇಳು ಅವನನ್ನು ಅಲ್ಲಾನೂ ಕ್ಷಮಿಸುವುದಿಲ್ಲವೆಂದು. ವ್ಯಕ್ತಿಯೊಬ್ಬನ ಇಷ್ಟಕ್ಕೆ ವಿರುದ್ಧವಾದುದನ್ನು ಮಾಡೆಂದು ಯಾವ ಧರ್ಮವೂ ಹೇಳುವುದಿಲ್ಲ. ನಿನ್ನ ನವಾಬ ಗೆದ್ದೆನೆಂದು ಬೀಗುವುದು ಬೇಡ. ನಾಳೆಯ ದಿನ ನನ್ನದಾಗಬಹುದು. ಆಗ ಅವನಿಗೆ ನಾನು ಪಾಠ ಕಲಿಸದಿರುವುದಿಲ್ಲ.
ಶ್ರೀರಂಗಪಟ್ಟಣದಿಂದ ಬಂದವರು ದೊಡ್ಡ ವೀರನ ಮಾತುಗಳನ್ನು ಗಣನೆಗೆ ತೆಗೆದುಕೊಳ್ಳಲೇ ಇಲ್ಲ. ನಸುನಗುತ್ತಾ ಕುದುರೆಗಳನ್ನೇರಿ ಶ್ರೀರಂಗಪಟ್ಟಣದ ಹಾದಿ ಹಿಡಿದರು.
ಒಂದು ವಾರದಲ್ಲಿ ಉರಿ ಕಡಿಮೆಯಾಯಿತು. ಎರಡನೇ ವಾರದಲ್ಲಿ ನೋವು ಸಂಪೂರ್ಣ ಮಾಯವಾಯಿತು. ದೊಡ್ಡ ವೀರ ರಾಜನ ಮನಸ್ಸಲ್ಲಿನ ನೋವು ಮಾತ್ರ ಸ್ವಲ್ಪವೂ ಕಡಿಮೆಯಾಗಲಿಲ್ಲ. ಹೈದರಾಲಿ ಈಗ ಸುನ್ನತಿ ಮಾಡಿಸಿದವ ನಾಳೆ ತನ್ನ ಕಡೆಯ ಹೆಣ್ಣೊಬ್ಬಳನ್ನು ಕರೆತಂದು ಬಲಾತ್ಕಾರದಿಂದ ಮದುವೆ ಮಾಡಿಸಿದರೆ ಏನು ಗತಿ ಎಂಬ ಭೀತಿ ಅವನನ್ನು ಕಾಡತೊಡಗಿತು. ಅವನು ಖಾದರ್‌ ಖಾನ್‌ ಕೈಸಗಿಯನ್ನು ಏಕಾಂತದಲ್ಲಿ ಭೇಟಿಯಾದ.
ಏನು ರಾಜಕುಮಾರರು ನನ್ನ ಭೇಟಿಗೆ ಬಂದದ್ದು? ಮೊನ್ನೆಯ ಪ್ರಕರಣದಲ್ಲಿ ನನ್ನದೇನೂ ತಪ್ಪಿಲ್ಲ. ನವಾಬರು ಹೇಳುವಾಗ ಇಲ್ಲವೆಂದು ನಾನು ಹೇಗೆ ಹೇಳಿಯೇನು? ಅದು ನಮಕು ಹರಾಮು ಕೆಲಸವಾಗುತ್ತದೆ. ರಾಜಕುಮಾರರು ನನ್ನನ್ನು ಮಾಪು ಮಾಡಬೇಕು.
ನಿನ್ನ ಅಧೀನದಲ್ಲಿರುವ ನಾನು ನಿನ್ನನ್ನು ಕ್ಷಮಿಸುವುದೆ? ಹಾಗೆ ಕೇಳುವುದು ನಿನ್ನ ಒಳ್ಳೆಯ ತನ. ಈಗೇನೋ ಸುನ್ನತಿ ಮಾಡಿದ್ದಾಯಿತು. ನಾಳೆ ನಿಮ್ಮೊಬ್ಬಳು ಹುಡುಗಿಯನ್ನು ತಂದು ನಿಮ್ಮ ನವಾಬ ನನ್ನ ಕುತ್ತಿಗೆಗೆ ಕಟ್ಟಿ ಶಾದಿ ಮಾಡಿ, ನಿಮ್ಮ ಕಿತಾಬು ಓದಲು ಹೇಳಿ ನಮಾಜು ಮಾಡಬೇಕೆಂದು ಬಲಾತ್ಕರಿಸಿದರೇನು ಮಾಡುವುದು ಎಂಬ ಭೀತಿ ನನ್ನನ್ನು ಕಾಡುತ್ತಿದೆ. ಆ ಹೆದರಿಕೆಯಿಂದಾಗಿ ನನಗೆ ಸರಿಯಾಗಿ ನಿದ್ದೆ ಬರುತ್ತಿಲ್ಲ. ನನಗೆ ಸಹಾಯ ಮಾಡುತ್ತೀಯಾ ಖಾದರ್‌ ಖಾನ್.
ಖಾದರ್‌ ಖಾನಿಗೆ ತನ್ನ ಮತದಲ್ಲಿ ಅಪಾರ ವಿಶ್ವಾಸವಿತ್ತು. ತನ್ನ ಮತವನ್ನು ಒಪ್ಪದವರನ್ನು ಅವನೆಂದೂ ಕಾಫಿರ್‌ ಎಂದು ಕರೆದವನಲ್ಲ. ನವಾಬ ಹೈದರಾಲಿ ಹಿಂದೂ ದೇವರುಗಳಿಗೆ ಜಹಗೀರು ಬಿಟ್ಟು ಕೊಟ್ಟಿದ್ದ. ಅರಮನೆಯಲ್ಲಿ ಹಿಂದೂಗಳ ಪೂಜೆ, ಹೋಮ ನಡೆಸುತ್ತಿದ್ದ. ರಾಜನಾದವನಿಗೆ ತಮ್ಮ ಎಲ್ಲಾ ಪ್ರಜೆಗಳ ಮತಧರ್ಮಗಳನ್ನು ಗೌರವಿಸುವ ಒಳ್ಳೆಯತನ ಇರಲೇಬೇಕು ಎಂದವನು ಹೇಳುತ್ತಿದ್ದ. ದೊಡ್ಡ ವೀರನ ಮತ್ತು ಅವನ ತಮ್ಮಂದಿರ ಸುನ್ನತಿಗೆ ಹೈದರಾಲಿಯ ಧರ್ಮಾಂಧತೆ ಕಾರಣವಲ್ಲವೆನ್ನುವುದು ಖಾದರ್‌ ಖಾನಿಗೆ ಖಚಿತವಾಗಿ ತಿಳಿದಿತ್ತು. ಕೊಡಗಿನ ರಾಜನನ್ನಾಗಿ ದೊಡ್ಡ ವೀರನನ್ನು ಅಂಗೀಕರಿಸುವ ಮುನ್ನ ಅವನನ್ನು ಇಸ್ಲಾಮಿಗೆ ಮತಾಂತರಿಸಿದರೆ ಇಂಗ್ಲೀಷರ ವಿರುದ್ಧ ಅವನು ನಿಲ್ಲಬೇಕಾಗುತ್ತದೆಂದು ಹೈದರಾಲಿಗೆ ಅನಿಸಿರಬೇಕೆಂದು ಖಾದರ್‌ ಖಾನ್‌ ತರ್ಕಿಸಿದ್ದ. ಸುನ್ನತಿ ನವಾಬನ ರಾಜ ಕಾರಣದ ಒಂದು ಭಾಗವಾಗಿರಬೇಕು. ಆದರೆ ದೊಡ್ಡ ವೀರನ ಭೀತಿ ಕೂಡಾ ಸಕಾರಣವಾದುದು. ಏನೇ ಆದರೂ ದೇವರು, ಮತಧರ್ಮಗಳನ್ನು ರಾಜಕೀಯಕ್ಕೆ ಬಳಸುವುದು ತಪ್ಪು ಎಂದು ಖಾದರ್‌ ಖಾನ್‌ ಅಂದುಕೊಂಡ.

ದೊಡ್ಡ ವೀರ ರಾಜರು ಯೋಚಿಸಬೇಕಾಗಿಲ್ಲ. ಅಂತಹ ಸಂದರ್ಭ ಬರಲಾರದು. ಬಂದರೆ ಈ ಖಾದರ್‌ ಖಾನ್‌ ತನ್ನ ಜೀವ ಒತ್ತೆಯಿಟ್ಟು ನಿಮ್ಮನ್ನು ರಕ್ಷಿಸುತ್ತಾನೆ. ಅಲ್ಲಾ ಪರವರ್ದಿಗಾರನಾಣೆ.

ಹೈದರಾಲಿ ದೊಡ್ಡ ವೀರನನ್ನು ಇಸ್ಲಾಮಿಗೆ ಮತಾಂತರಿಸಲಿಲ್ಲ. ಅವನ ಮರಣದ ಬಳಿಕ ಟಿಪ್ಪು ಪಟ್ಟವೇರಿದ. ಅವನಿಗೆ ದೊಡ್ಡ ವೀರ ರಾಜನ ಸುನ್ನತಿಯ ಬಗ್ಗೆ ತಿಳಿದಿರಲಿಲ್ಲ. ಕೊಡಗು ಮಲೆಯಾಳ, ಮಂಗಳೂರುಗಳಿಗೆ ಕೇಂದ್ರ ಸ್ಥಾನದಲ್ಲಿದೆ. ಬ್ರಿಟಿಷರನ್ನು ಸದೆ ಬಡಿಯಲು ಮೈಸೂರಿನಿಂದ ದಂಡು ಹೊರಡಿಸುವ ಅಗತ್ಯ ಬಿದ್ದರೆ ಕೊಡಗಿನ ಮೂಲಕ ಅದು ಹಾದು ಹೋಗ ಬೇಕಾಗುತ್ತದೆ. ಅದಕ್ಕೆ ಕೊಡಗಿನಲ್ಲಿ ತನ್ನ ಮಿತ್ರ ರಾಜನಿರಬೇಕು. ಇಲ್ಲದಿದ್ದರೆ ಕೊಡಗು ತನ್ನ ಅಧೀನದಲ್ಲೇ ಇರಬೇಕು. ಟಿಪ್ಪು ಒಂದು ತೀರ್ಮಾನಕ್ಕೆ ಬಂದು ಖಾದರ್‌ ಖಾನನ್ನು ಶ್ರೀರಂಗ ಪಟ್ಟಣಕ್ಕೆ ಕರೆಯಿಸಿಕೊಂಡ.

ಖಾದರ್‌ ಖಾನ್‌, ಕೊಡಗಿನ ದೊರೆ ಲಿಂಗರಾಜೇಂದ್ರನ ಕುಟುಂಬ ಪರಿವಾರ ನಿನ್ನ ಸುಪರ್ದಿಯಲ್ಲಿ ಪೆರಿಯಾಪಟ್ಟಣ ಕೋಟೆಯಲ್ಲಿರುವುದು ತಿಳಿಯಿತು. ಅವರಲ್ಲಿ ಮದುವೆ ಪ್ರಾಯದ ಹೆಣ್ಣುಗಳಿದ್ದಾರಾ?

ಖಾದರ್‌ ಖಾನ್‌ ಒಂದು ಕ್ಷಣ ತಲ್ಲಣಿಸಿ ಹೋದ.

ನವಾಬರು ಮಾಪು ಮಾಡಬೇಕು. ತಮ್ಮ ಉದ್ದೇಶವೇನೆಂದು ಅರ್ಥವಾಗಲಿಲ್ಲ.

ಈಗೇನೋ ನಾನು ಇಂಗ್ಲೀಷರನ್ನು ಸೋಲಿಸಿ ಬಂದಿದ್ದೇನೆ ಖಾದರ್‌ ಖಾನ್‌. ನಾಳೆ ಅವರು ಕಾಲು ಕೆದರಿ ಜಗಳಕ್ಕೆ ಬಂದೇ ಬರುತ್ತಾರೆ. ದೆಹಲಿಯ ಸುಲ್ತಾನ, ಹೈದ್ರಾಬಾದಿನ ನವಾಬ, ಈಚೆ ಮರಾಠರು‌ ಎಲ್ಲಾ ಕಡೆ ಶತ್ರುಗಳೇ ತುಂಬಿ ಹೋಗಿದ್ದಾರೆ. ಇಂಗ್ಲೀಷರನ್ನು ಹಿಂದುಸ್ಥಾನದಿಂದ ಓಡಿಸುವ ನನ್ನ ಪ್ರಯತ್ನಕ್ಕೆ ಯಾರ ಬೆಂಬಲವೂ ದೊರಕುತ್ತಿಲ್ಲ. ಕೊಡಗು ಬಹಳ ಆಯಕಟ್ಟಿನ ಪ್ರದೇಶ. ಅಲ್ಲೊಬ್ಬ ಮಿತ್ರರಾಜನಿದ್ದರೆ ನಮ್ಮ ಉದ್ದೇಶ ಈಡೇರುತ್ತದೆ.

ನವಾಬರು ದೊಡ್ಡ ವೀರರಾಜರನ್ನು ಬಿಡುಗಡೆ ಮಾಡುತ್ತೀರಾ?

ಹಾಗೆಂದು ಯೋಚಿಸುತ್ತಿದ್ದೇನೆ ಖಾದರ್‌ ಖಾನ್‌. ಅದಕ್ಕೆ ಮೊದಲು ಒಂದು ಕೆಲಸವಾಗಬೇಕು. ಹೇಳು, ವಿವಾಹ ಯೋಗ್ಯ ಹೆಣ್ಣುಗಳು ಅವರಲ್ಲಿ ಎಷ್ಟಿದ್ದಾರೆ?
ಖಾದರ್‌ ಖಾನ್‌ ನಿಜವನ್ನೇ ಹೇಳಿದ.
ಮೂವರು ಖಾವಂದ್‌. ದೊಡ್ಡವೀರ ರಾಜನ ದೊಡ್ಡಮ್ಮನ ಮಕ್ಕಳು.
ಟಿಪ್ಪು ಸುಲ್ತಾನನ ಮುಖ ಅರಳಿತು.
ಇನ್‌ಶಾನಲ್ಲಾ. ಬಹಳ ಒಳ್ಳೆಯದಾಯಿತು. ನೀನು ತಕ್ಷಣ ಅವರನ್ನು ಮೂವರನ್ನೂ ಇಲ್ಲಿಗೆ ಕರಕೊಂಡು ಬಾ. ಮತ್ತೆ ಮುಂದಿನ ಮಾತು.
ಖಾದರ್‌ ಖಾನ್‌ ಟಿಪ್ಪುವಿನ ಮಾತನ್ನು ಮೀರುವಂತಿರಲಿಲ್ಲ. ಮೂವರು ರಾಜಕುಮಾರಿಯರನ್ನು ಮೇನೆಗಳಲ್ಲಿ ಹೊರಿಸಿಕೊಂಡು ಅವನು ಶ್ರೀರಂಗಪಟ್ಟಣಕ್ಕೆ ಬಂದ. ಟಿಪ್ಪು ಅವರನ್ನು ವೀಕ್ಷಿಸಿದ.
ಇವರಲ್ಲಿ ದೊಡ್ಡವರು ಯಾರು?
ಇಬ್ಬರು ರಾಜಕುಮಾರಿಯರು ಎರಡು ಹೆಜ್ಜೆ ಮುಂದೆ ಬಂದು ತಲೆ ತಗ್ಗಿಸಿ ನಿಂತರು. ಮುಂದೇನೋ ಕಾದಿದೆಯೋ ಎಂಬ ಭೀತಿಯಿಂದ ಅವರು ನಡುಗುತ್ತಿದ್ದರು.
ಟಿಪ್ಪು ಪ್ರೀತಿ ತುಂಬಿದ ಸ್ವರದಲ್ಲಿ ನುಡಿದ.
ಹೆದರಬೇಡಿ. ನಿಮ್ಮ ಕುಟುಂಬಕ್ಕೆ ಒಳ್ಳೆಯದನ್ನು ಮಾಡುವುದು ನನ್ನ ಉದ್ದೇಶ. ನಿಮ್ಮ ತಂದೆಯವರಿಗೂ ನಮ್ಮ ತಂದೆಯವರಿಗೂ ಆದ ಮೈತ್ರಿ ಒಪ್ಪಂದದಿಂದಾಗಿ ನಮಗೂ ಕೊಡಗಿಗೂ ಬಾಂಧವ್ಯ ಬೆಳೆಯಿತು. ರಾಜಕೀಯ ಸಂಬಂಧಗಳು ಶಾಶ್ವತವಲ್ಲ. ರಕ್ತ ಸಂಬಂಧ ಮಾತ್ರ ಶಾಶ್ವತ. ನಿಮ್ಮ ಇಬ್ಬರನ್ನು ನನ್ನ ರಾಣಿಯರನ್ನಾಗಿ ಮಾಡುತ್ತಿದ್ದೇನೆ. ಅರಮನೆಯಲ್ಲಿ ನಿಮಗೆ ಎಲ್ಲಾ ಸ್ವಾತಂತ್ರ್ಯವಿರುತ್ತದೆ. ನಿಮ್ಮ ದೇವರ ಪೂಜೆ, ವ್ರತಗಳನ್ನು ಮಾಡಲು ಅವಕಾಶ ಮಾಡಿಕೊಡುತ್ತೇನೆ. ಈ ಮದುವೆ ನಡೆದ ಮೇಲೆ ದೊಡ್ಡವೀರನ ಬಿಡುಗಡೆಯಾಗುತ್ತದೆ. ಅವನೇ ಕೊಡಗಿನ ರಾಜನಾಗುತ್ತಾನೆ.
ಖಾದರ್‌ ಖಾನನಿಗೆ ಟಿಪ್ಪುವಿನ ತೀರ್ಮಾನದಲ್ಲಿ ತಪ್ಪು ಕಾಣಲಿಲ್ಲ.
ಅದು ಒಳ್ಳೆಯದೇ ನವಾಬ್‌. ಈ ಚೋಕರಿ ಇದ್ದಾಳಲ್ಲಾ ಮೂರನೆಯವಳು, ಇವಳನ್ನು ಏನು ಮಾಡೋಣ?
ಟಿಪ್ಪು ಸುಲ್ತಾನ ನಕ್ಕ.
ಇಂತಹ ಅಮೂಲ್ಯ ರತ್ನಗಳನ್ನು ತಂದು ನನಗೆ ಒಪ್ಪಿಸಿದ್ದಕ್ಕೆ ಅವಳನ್ನು ನಿನಗೆ ಇನಾಮಾಗಿ ಕೊಡುತ್ತಿದ್ದೇನೆ. ಟಿಪ್ಪುವಿನ ಸೇನಾಧಿಪತಿಗೂ ಕೊಡಗಿನ ರಾಜ ಸಂಬಂಧವಿರಲಿ. ಅಲ್ಲದೆ ಇನ್ನು ಮುಂದೆ ನೀನು ನಮಗೂ ತಮ್ಮನಾಗಿ ಬಿಡುತ್ತೀಯಾ?
ಟಿಪ್ಪು ಅವರಿಬ್ಬರನ್ನು ವಿವಾಹವಾಗಿ ಸೂರ್ಯ, ಚಂದ್ರ ಎಂದು ಹೆಸರಿಟ್ಟ. ಖಾದರ್‌ ಖಾನನಿಗೆ ರಾಜ ಸಂಬಂಧ ಬೇಕಾಗಿರಲಿಲ್ಲ. ಅವನು ತನ್ನ ಪಾಲಿಗೆ ಬಂದಿದ್ದ ಹುಡುಗಿಯನ್ನು ಒಬ್ಬ ಶಿವಾಚಾರದವನಿಗಿತ್ತು ಶಾಸ್ತ್ರೋಕ್ತ ವಿವಾಹ ಮಾಡಿಸಿದ. ಪೆರಿಯಾ ಪಟ್ಟಣಕ್ಕೆ ವಾಪಾಸಾದವನು ನಡೆದುದೆಲ್ಲವನ್ನೂ ದೊಡ್ಡವೀರ ರಾಜನಿಗೆ ವರದಿ ಮಾಡಿದ.
ದೊಡ್ಡ ವೀರರಾಜನ ರಕ್ತ ಕುದಿಯತೊಡಗಿತು. ಆದರೆ ಅವನೇನೂ ಮಾಡುವಂತಿರಲಿಲ್ಲ.
ಅದೇ ಸಮಯದಲ್ಲಿ ಕೆಲವು ಧೈರ್ಯವಂತ ಕೊಡಗ ತರುಣರು ಪೆರಿಯಾ ಪಟ್ಟಣಕ್ಕೆ ಬಂದರು. ದೊಡ್ಡ ವೀರ ರಾಜನ ಪರಿವಾರವನ್ನು ಸೆರೆಮನೆಯಿಂದ ಬಿಡಿಸುವುದು ಅವರ ಉದ್ದೇಶವಾಗಿತ್ತು. ಭದ್ರ ಕಾವಲಿರುವ ಕೋಟೆಯಿಂದ ಅವರನ್ನು ಬಿಡಿಸಿ ತರುವುದು ಹೇಗೆಂದು ತೋಚದೆ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ತರುಣರು ಟಿಪ್ಪುವಿನ ಅಧಿಕಾರಿಗಳಲ್ಲಿ ಒಬ್ಬನಾಗಿದ್ದ ಹೊಂಬಾಳೆ ನಾಯಕನ ಕಣ್ಣಿಗೆ ಬಿದ್ದರು. ಹೊಂಬಾಳೆ ನಾಯಕ ಟಿಪ್ಪುವಿನಿಂದ ದೊಡ್ಡ ವೀರನಿಗೆ ಅನ್ಯಾಯವಾಗಿದೆಯೆಂದು ಖಚಿತವಾಗಿ ನಂಬಿದ್ದ. ಖಾದರ್‌ ಖಾನನಲ್ಲಿ ಹಾಗಂತ ಹೇಳಿಯೂ ಇದ್ದ. ಖಾದರ್‌ ಖಾನನು ಹೌದೆಂದು ಒಪ್ಪಿಕೊಂಡಿದ್ದ.
ಹೊಂಬಾಳೆ ನಾಯಕ ಕೊಡಗ ತರುಣರಲ್ಲಿ ಹೇಳಿದ.
ಕೊಡಗು ಅರಾಜಕವಾಗಿ ದರೋಡೆ ಕೋರರಿಂದ ಸೂರೆ ಹೋಗುವಾಗ ರಾಜನಾದ ಬೇಕಾದವ ಬಂಧನದಲ್ಲಿರುವುದು ಸರಿಯಲ್ಲ. ನಿಮ್ಮೊಟ್ಟಿಗೆ ನಾನಿದ್ದೇನೆ. ರಾತ್ರೆ ಕೆಲಸ ಸಾಧಿಸೋಣ.
ಹೊಂಬಾಳೆ ನಾಯಕ ಖಾದರ್‌ ಖಾನನಿಗೆ ವಿಷಯ ತಿಳಿಸಿದ.
ನಾಯಕರು ಹೇಳಿದ್ದು ಸರಿ. ದೊಡ್ಡ ವೀರ ರಾಜ ಇಂದು ಪರಿವಾರ ಸಹಿತ ತಪ್ಪಿಸಿಕೊಂಡು ಹೋಗಿಬಿಡಲಿ. ನಾನು ಅದಕ್ಕೆ ನೆರವಾಗುತ್ತೇನೆ. ಒಂದು ನಾಡಿನ ರಾಜನಾಗ ಬೇಕಾದವನನ್ನು ಸುನ್ನತಿ ಮಾಡಿಸಿ ಬಲಾತ್ಕಾರದಿಂದ ಸೆರೆಮನೆಯಲ್ಲಿ ಕೊಳೆಯಿಸುವುದವನ್ನು ಅಲ್ಲಾ ಪರವರ್ದಿಗಾರನೂ ಒಪ್ಪಲಾರ.
ರಾತ್ರೆ ಕಾವಲುಗಾರರು ನಿದ್ದೆಯಲ್ಲಿರುವಾಗಿ ಖಾದರ್‌ ಖಾನನೇ ರಾಜ ಪರಿವಾರ ವನ್ನು ಬಿಡುಗಡೆಗೊಳಿಸಿದ. ಹೊಂಬಾಳೆ ನಾಯಕ ನಿಷ್ಠೆ ಬದಲಾಯಿಸಿ ದೊಡ್ಡ ವೀರರಾಜನನ್ನು ಸೇರಿಕೊಂಡ. ಕೊಡಗ ತರುಣರ ಬಲವಾದ ಕಾವಲಿನಲ್ಲಿ ಹೊಂಬಾಳೆ ನಾಯಕ ನೊಡನೆ, ರಾಜ ಪರಿವಾರ ಸಹಿತ ದೊಡ್ಡ ವೀರ ರಾಜ ದಕ್ಷಿಣ ಕೊಡಗಿನ ಶ್ರೀಮಂಗಲದತ್ತ ಕತ್ತಲಲ್ಲಿ ಸಾಗಿದ.

* * *

ಸೇನಾಧಿಪತಿ ಖಾದರ್‌ ಖಾನನೊಡನೆ ಟಿಪ್ಪು ಸುಲ್ತಾನ ಆಪ್ತ ಸಮಾಲೋಚನೆ ನಡೆಸುತ್ತಿದ್ದ. ಕೊಡಗನ್ನು ದೊಡ್ಡ ವೀರ ರಾಜ ಟಿಪ್ಪುವಿನ ಹಿಡಿತದಿಂದ ಮುಕ್ತಿಗೊಳಿಸಿದ್ದ. ನಿಷ್ಠಾಂತರ ಮಾಡಿ ದೊಡ್ಡವೀರ ರಾಜನ ದಿವಾನನಾದ ಹೊಂಬಾಳೆ ನಾಯಕ ತುಳುನಾಡಿನ ಮೇಲೆ ದಂಡೆತ್ತಿ ಹೋಗಿ ಅದನ್ನು ಕೊಡಗಿಗೆ ಸೇರಿಸಿದ್ದ. ಸಾಲದ್ದಕ್ಕೆ ದೊಡ್ಡವೀರ ರಾಜ ಇಂಗ್ಲೀಷರೊಡನೆ ಒಪ್ಪಂದ ಮಾಡಿಕೊಂಡು ಶ್ರೀರಂಗಪಟ್ಟಣಕ್ಕೆ ಬ್ರಿಟಿಷ್‌ ಸೇನೆ ಕೊಡಗಿನ ಮೂಲಕ ಹಾದು ಹೋಗಲು ಪರವಾನಿಗೆ ನೀಡಿದ್ದಾನೆಂಬ ಸುದ್ದಿ ಗುಪ್ತಚರರ ಮೂಲಕ ಟಿಪ್ಪುವಿಗೆ ಮುಟ್ಟಿತ್ತು. ಇಂಗ್ಲೀಷರ ಫಿರಂಗಿದಳದೊಡನೆ ಕೊಡಗಿನ ಗಜಸೇನೆ ಸೇರಿಕೊಳ್ಳಲಿದೆ ಎಂಬ ವಾರ್ತೆಯಿಂದ ಅವನಿಗೆ ಆತಂಕ ಉಂಟಾಗಿತ್ತು.
ಖಾದರ್‌ ಖಾನ್‌, ಯುದ್ಧದ ಕಾರ್ಮೋಡಗಳು ಕೊಡಗಿನ ಕಡೆಯಿಂದ ಶ್ರೀರಂಗ ಪಟ್ಟಣಕ್ಕೆ ಬರುವ ಹಾಗಿದೆ. ಒಂದು ಬಾರಿ ಗೆಲವು ನಮ್ಮದಾಗಿದೆ. ಈ ಸಲ ಏನಾದೀತೆಂದು ನಿನಗನಿಸುತ್ತದೆ?
ಖಾದರ್‌ ಖಾನನ ಹಣೆಯಲ್ಲಿ ಗೆರೆಗಳು ಕಾಣಿಸಿಕೊಂಡವು.
ಕಷ್ಟವಿದೆ ಖಾವಂದ್‌. ಕೊಡಗು ತುಳುನಾಡು ತಪ್ಪಿ ಹೋಗಿವೆ. ದೊಡ್ಡ ವೀರರಾಜ ಇಂಗ್ಲೀಷರ ಜತೆ ಕೈ ಜೋಡಿಸಿದ್ದಾನೆ. ಪರಿಸ್ಥತಿ ನಮಗೆ ವಿರುದ್ಧವಾಗಿದೆ ಖಾವಂದ್‌.
ಟಿಪ್ಪು ಸುಲ್ತಾನ ತಲೆದೂಗಿದ.
ಅದಕ್ಕೇ ನಿನ್ನನ್ನೀಗ ಕರೆಸಿರುವುದು. ನೀನೀಗ ಒಂದು ಪ್ರಯತ್ನ ಮಾಡಬೇಕು. ಅಲ್ಲಾ ಪರವರದಿಗಾರ ನಮ್ಮ ಕಡೆಗಿದ್ದರೆ ಗೆಲವು ನಮ್ಮದಾಗುತ್ತದೆ.
ಖಾದರ್‌ ಖಾನ್‌ ತಲೆ ಕರೆದುಕೊಳ್ಳುತ್ತಾ ಪ್ರಶ್ನಿಸಿದ.
ಏನು ಮಾಡಬೇಕು ಖಾವಂದ್‌?
ನೀನು ಕೊಡಗಿಗೆ ಹೋಗಿ ದೊಡ್ಡ ವೀರ ರಾಜನನ್ನು ನಮ್ಮ ಕಡೆ ಸೇರುವಂತೆ ಮಾಡಬೇಕು.
ಖಾದರ್‌ ಖಾನ್‌ ಬೆಚ್ಚಿಬಿದ್ದ.
ಖಾವಂದ್‌, ನಾನೇ ಯುದ್ಧ ಸನ್ನಿಹಿತವಾಗಿರುವಾಗ ದೊಡ್ಡವೀರರಾಜ ಶತ್ರು ಪಾಳಯ ಸೇರಿರುವಾಗ, ಟಿಪ್ಪುಸುಲ್ತಾನರ ಸೇನಾಧಿಪತಿ ಮಾತು ಕತೆಗೆ ಹೋಗುವುದೆ?
ಹೌದು ಖಾದರ್‌ ಖಾನ್‌. ನಿನ್ನಿಂದ ಅದು ಸಾಧ್ಯವಿದೆ. ಅಂದು ಬೂದಿ ಚಾವಡಿ ಯುದ್ಧದಲ್ಲಿ ನೀನು ಸೋತಾಗ ದೊಡ್ಡವೀರ ರಾಜ ಪ್ರಾಣಸಹಿತ ನಿನ್ನನ್ನು ಬಿಟ್ಟು ಬಿಡಲಿಲ್ಲವೆ? ಅದು ಯಾಕಿರಬಹುದು?
ಖಾದರ್‌ ಖಾನ್‌ ತಲ್ಲಣಿಸಿ ಹೋದ. ದೊಡ್ಡವೀರ ರಾಜ ಸೆರೆಯಿಂದ ತಪ್ಪಿಸಿ ಕೊಳ್ಳಲು ತಾನು ಮಾಡಿದ ಸಹಾಯ ಸುಲ್ತಾನನಿಗೆ ವರದಿಯಾಗಿರಬದುದೆ? ಹಣೆಯ ಬೆವರು ಒರಸಿಕೊಳ್ಳುತ್ತಾ ಅವನೆಂದ.
ಗೊತ್ತಾಗಲಿಲ್ಲ ಖಾವಂದ್‌.
ನಾನು ದೊಡ್ಡ ವೀರ ರಾಜನ ಇಬ್ಬರು ತಂಗಿಯಂದಿರನ್ನು ಮದುವೆಯಾಗಲಿಲ್ಲವೆ? ಸಂಬಂಧದಲ್ಲಿ ಟಿಪ್ಪು ಸುಲ್ತಾನ ದೊಡ್ಡ ವೀರರಾಜನಿಗೆ ಭಾವನಾಗುವುದಿಲ್ಲವೆ? ಅದಕ್ಕೇ. ಅದೇ ಕಾರಣದಿಂದ ಅವನು ನಮ್ಮ ಜತೆ ಸೇರುವ ಸಾಧ್ಯತೆಗಳೂ ಇವೆಯಲ್ಲವೆ? ಭಾವ ಸತ್ತು ತಂಗಿಯಂದಿರು ವಿಧವೆಯರಾಗುವುದನ್ನು ಆತ ಸಹಿಸಲಾರ ಅಲ್ಲವೇ.
ಖಾವಂದರು ತಪ್ಪು ತಿಳಿಯಬಾರದು. ಇದನ್ನು ನಾನು ದೊಡ್ಡವೀರ ರಾಜನಲ್ಲಿ ಹೇಳಲು ಸಾಧ್ಯವಿದೆಯೆ? ಹೇಳಿದರೆ ಅವನು ಒಪ್ಪಿಯಾನೆ?
ಟಿಪ್ಪು ಸುಲ್ತಾನ ನಕ್ಕ.
ಒಪ್ಪದೆ ಏನು ಮಾಡುತ್ತಾನೆ ಖಾದರ್‌ ಖಾನ್‌? ಅವನ ಒಬ್ಬಳು ತಂಗಿ ನಿನ್ನ ಜನಾನಾದಲ್ಲಿ ಇದ್ದಾಳಲ್ಲಾ? ಸಂಬಂಧದಲ್ಲಿ ಅವನು ನಿನಗೂ ಭಾವನಾಗುತ್ತಾನಲ್ಲಾ?
ಖಾದರ್‌ ಖಾನ್‌ ಭಯದಿಂದ ಬಿಳಿಚಿಕೊಂಡ.
ಖಾವಂದರು ಮಾಪು ಮಾಡಬೇಕು. ರಾಜ ಮನೆತನದ ಹೆಣ್ಣನ್ನು ಮದುವೆಯಾಗಲು ಮನಸ್ಸು ಒಪ್ಪಲಿಲ್ಲ. ಅವಳನ್ನು ಶಿವಾಚಾರದವನೊಬ್ಬನಿಗೆ ಮದುವೆ ಮಾಡಿಸಿಕೊಟ್ಟೆ. ಅದನ್ನು ಅಂದೇ ಹೇಳಲು ಭಯವಾಯ್ತು. ತಪ್ಪು ಎಂದಾದರೆ ಈ ತಲೆಯನ್ನು ಖಾವಂದರು ತೆಗೆಯಬಹುದು.
ಟಿಪ್ಪು ಸುಲ್ತಾನ ಮತ್ತೊಮ್ಮೆ ನಕ್ಕ.
ನಿನ್ನ ತಲೆ ತೆಗೆಯಬೇಕೆಂದಿದ್ದರೆ ನೀನು ದೊಡ್ಡ ವೀರ ರಾಜನನ್ನು ಸೆರೆಯಿಂದ ಹೋಗಗೊಟ್ಟಾಗಲೇ ತೆಗೆಯಬಹುದಿತ್ತು. ನಿನ್ನ ಆತ್ಮಸಾಕ್ಷಿಗೆ ಸರಿಕಂಡದ್ದನ್ನು ನೀನು ಮಾಡಿದೆ. ಹೊಂಬಾಳೆ ನಾಯಕನ ಹಾಗೆ ನೀನು ನಮಕು ಹರಾಮು ಕೆಲಸ ಮಾಡಲಿಲ್ಲ. ನೀನು ಅವನನ್ನು ಹೋಗಗೊಟ್ಟದ್ದು ತಪ್ಪೇ. ಅದಕ್ಕೆ ಪ್ರತಿಯಾಗಿ ಬೂದಿ ಚಾವಡಿ ಯುದ್ಧ ದಲ್ಲಿ ಸೋತು ನಿನ್ನನ್ನು ಸೈನ್ಯ ಸಹಿತ ಶ್ರೀರಂಗಪಟ್ಟಣಕ್ಕೆ ಬರಲು ಬಿಟ್ಟಿದ್ದಾನೆ. ಅವನಿಗೆ ನಿನ್ನೆಡೆಗೊಂದು ಕೃತಜ್ಞತೆ ಇದೆ. ನೀನು ಮಾಡಿದ್ದು ತಪ್ಪೇ ಆದರೂ ಅದರ ಪರಿಣಾಮ ಒಳ್ಳೆಯದಾಗುವಂತಿದೆ. ಹೋಗಿ ದೊಡ್ಡವೀರ ರಾಜನ ಮನಸ್ಸನ್ನು ಒಲಿಸಿ ನಮ್ಮ ಕಡೆಗೆ ಸೇರುವಂತೆ ಮಾಡು.

* * * *

ಖಾದರ್‌ ಖಾನನ್ನು ದೊಡ್ಡ ವೀರ ರಾಜ ಪ್ರೀತಿಯಿಂದ ಬರಮಾಡಿಕೊಂಡ.
ಏನು ಖಾದರ್‌ ಖಾನ್‌ ಕೈಸಗಿಲ ಯುದ್ಧ ಸನ್ನಿಹಿತವಾದಾಗ ಟಿಪ್ಪುಸುಲ್ತಾನನ ಸೇನಾಧಿಪತಿಯೇ ಹೀಗೆ ಶತ್ರುವಿನಲ್ಲಿಗೆ ಬರುವುದೆಂದರೇನು. ಹೊಂಬಾಳೆ ನಾಯಕನ ಹಾಗೆ ನೀನೂ ನಿಷಾಠಂತರ ಮಾಡಿಲ್ಲವಲ್ಲಾ.
ಖಾದರ್‌ ಖಾನ್‌ ರಾಜನ ಮಾತಿಗೆ ನಕ್ಕ.
ಉಂಟೆ ಪ್ರಭೂ ಟಿಪ್ಪು ಸುಲ್ತಾನರ ರಾಯಭಾರಿಯಾಗಿ ಬಂದವನು ನಾನು. ಸುಲ್ತಾನರು ನಿಮ್ಮತ್ತ ಸ್ನೇಹ ಹಸ್ತ ಚಾಚುತ್ತಿದ್ದಾರೆ. ಕೊಡಗಿನ ಮಹಾರಾಜರು ದೊಡ್ಡ ಮನಸ್ಸು ಮಾಡಿ, ಹಿಂದಿನದೆಲ್ಲವನ್ನೂ ಮರೆತು ಟಿಪ್ಪು ಸುಲ್ತಾನ ಗೆಳೆಯರಾಗಬೇಕು. ಇದು ಸುಲ್ತಾನರ ವಿನಂತಿ.
ಖಾದರ್‌ ಖಾನನ ನೇರ ಮಾತುಗಳಿಂದ ನಿಬ್ಬೆರಗಾದ ದೊಡ್ಡ ವೀರರಾಜ ತನ್ನನ್ನು ಹೇಗೋ ನಿಯಂತ್ರಿಸಿಕೊಂಡು ಕೇಳಿದ.
ಅದಕ್ಕೆ ಏನು ಪ್ರತಿಫಲ ನೀಡುತ್ತಾನಂತೆ ನಿಮ್ಮ ಸುಲ್ತಾನ.
ಹಾಸ್ಯದ ಮಾತುಗಳೆಂದರಿಯದೆ ಖಾದರ್‌ ಖಾನನೆಂದ.
ಹೆಗ್ಗಡದೇವನಕೋಟೆ, ಪೆರಿಯಾಪಟ್ಟಣ, ಕೊಣನೂರು ಮತ್ತು ಅರಕಲ ಗೂಡು ತಾಲ್ಲೂಕುಗಳನ್ನು ಕೊಡಗಿಗೆ ಬಿಟ್ಟು ಕೊಡುತ್ತಾರಂತೆ.
ದೊಡ್ಡವೀರ ರಾಜ ದೊಡ್ಡ ದನಿಯಲ್ಲಿ ನಕ್ಕ.
ಹಾಸ್ಯವನ್ನು ಅರಿಯಲಾಗದ ಮುಗ್ಧ ನೀನು. ನಿಮ್ಮ ಸುಲ್ತಾನ ನನ್ನನ್ನು ಸೆರೆಯಲ್ಲಿಟ್ಟೇ ಕೊಲ್ಲಿಸುತ್ತಿದ್ದ. ನಿನ್ನಿಂದಾಗಿ ನಾನು ಪಾರಾಗಿ ಬಂದು ಈ ಸ್ಥತಿಗೆ ಏರಿದ್ದೇನೆ. ಹೋಗಲಿ, ಮಡಿಕೇರಿಯನ್ನು ವಶಪಡಿಸಿಕೊಳ್ಳುವವರೆಗೂ ಅವನ ಸ್ನೇಹ ಹಸ್ತ ಎಲ್ಲಿತ್ತಂತೆ?
ಖಾದರ್‌ ಖಾನ್‌ ಸಮಜಾಯಿಸಿದ.
ಹಿಂದೆ ನಡೆದು ಹೋದ ಪ್ರಮಾದಗಳಿಗೆ ಖಾವಂದರು ವಿಷಾದ ವ್ಯಕ್ತಪಡಿಸಿದ್ದಾರೆ ಪ್ರಭೂ. ಸುಲ್ತಾನರು ಈಗ ತೀರಾ ಸಂದಿಗ್ಧದಲ್ಲಿದ್ದಾರೆ. ದೆಹಲಿಯ ಸುಲ್ತಾನರಿಗೆ, ಇಂಗ್ಲೆಂಡಿನ ಫರಂಗಿಗಳಿಗೆ ಸಡ್ಡು ಹೊಡೆದ ಹುಲಿ ಅವರು. ಮರಾಠರು ಮತ್ತು ನಿಜಾಮರು ಅವರನ್ನು ವಿನಾಕಾರಣ ದ್ವೇಷಿಸುತ್ತಿದ್ದಾರೆ. ರಾಜ್ಯ ವಿಸ್ತಾರವಾಗುವಾಗ ಕೆಲವು ವ್ಯಕ್ತಿಗತ ನಷ್ಟಗಳಾಗುತ್ತವೆ. ಅದನ್ನು ತಾವು ಚೆನ್ನಾಗಿ ಬಲ್ಲಿರಿ.
ದೊಡ್ಡ ವೀರರಾಜನಿಗೆ ಕುರುಚ್ಚಿ ಅರಮನೆಯಲ್ಲಿ ನಮಕು ಹರಾಮು ನಾಗಪ್ಪಯ್ಯನಿಂದಾಗಿ ದಹಿಸಿಹೋದ ತನ್ನ ಬಂಧು ಬಾಂದವರ ನೆನಪಾಯಿತು.
ಅದೇನೋ ಸರಿಯೇ ಖಾದರ್‌ ಖಾನ್‌. ಆದರೆ ನೀನೇ ಸ್ವಲ್ಪ ಯೋಚಿಸಿ ನೋಡು. ಟಿಪ್ಪು ಸುಲ್ತಾನನ ಅಪ್ಪ ಹೈದರಾಲಿ ಕೊಡಗಿಗೆ ಬರುವಂತಾದದ್ದು ನಮ್ಮ ಅಪ್ಪ ಲಿಂಗ ರಾಜೇಂದ್ರನಿಂದಾಗಿ. ಅಂತಹ ಮಿತ್ರತ್ವವನ್ನು ಮರೆತು ಹೈದರಾಲಿ ನಮ್ಮನ್ನೆಲ್ಲಾ ಸೆರೆಮನೆಯಲ್ಲಿರಿಸಿದ. ಅದೂ ಸಾಲದೆಂಬಂತೆ ಬಲಾತ್ಕಾರದ ಸುನ್ನತಿ ಮಾಡಿಸಿದ. ಆಮೇಲೆ ನಿಮ್ಮ ಸುಲ್ತಾನ ನನ್ನ ತಂಗಿಯಂದಿರನ್ನು ಬಲಾತ್ಕಾರದಿಂದ ತನ್ನ ಜನಾನಾಕ್ಕೆ ಸೇರಿಸಿಕೊಂಡ. ನಾನು ಅವನ ಯಾವ ಮಾತನ್ನೂ ನಂಬುವುದಿಲ್ಲ. ಹೇಳು ನಾನೀಗ ಏನು ಮಾಡಬೇಕು?
ನಿಮ್ಮ ಸಿಟ್ಟನ್ನು ಮರೆತು ಒಮ್ಮೆ ವಾಸ್ತವವನ್ನು ಅರ್ಥಮಾಡಿಕೊಳ್ಳಬೇಕು ಪ್ರಭೂ. ಒಂದೆಡೆಯಿಂದ ನಿಜಾಮರು, ಇನ್ನೊಂದೆಡೆಯಿಂದ ಮರಾಠಾ ಪೇಶ್ವೆಗಳು, ಮತ್ತೊಂದೆಡೆ ಯಿಂದ ಇಂಗ್ಲೀಷರು, ಮಗದೊಂದೆಡೆಯಿಂದ ದಿಲ್ಲಿ ಸುಲ್ತಾನರು. ಈಗ ನೀವು ಇಂಗ್ಲೀಷರ ಜತೆ ಸೇರಿಕೊಂಡಿದ್ದೀರಿ. ಹೀಗೆ ಎಲ್ಲರೂ ಸುಲ್ತಾನರೊಬ್ಬರ ವಿರುದ್ಧ ಒಂದಾದರೆ ಅವರಾದರೂ ಏನು ಮಾಡಬೇಕು? ಅದಕ್ಕೆ ನಿಮ್ಮೊಳಗಿನ ರಕ್ತ ಸಂಬಂಧವನ್ನು ನೆನಪಿಸಿದ್ದಾರೆ. ಭಾವನ ಮೇಲಿನ ಸಿಟ್ಟಿಗೆ ತಂಗಿಯರನ್ನು ವಿಧವೆಯರನ್ನಾಗಿ ಮಾಡಬಾರದು ಎಂದು ಬೇಡಿಕೊಂಡಿದ್ದಾರೆ.
ದೊಡ್ಡ ವೀರ ರಾಜ ಒಂದು ಕ್ಷಣ ಚಿಂತಾಕ್ರಾಂತನಾದ.
ಖಾದರ್‌ ಖಾನ್‌, ರಾಜಕಾರಣದಲ್ಲಿ ಬಾಂಧವ್ಯಕ್ಕೆ ಮತ್ತು ಭಾವನೆಗಳಿಗೆ ಯಾರೂ ಬೆಲೆ ಕೊಡುವುದಿಲ್ಲ. ಸುಲ್ತಾನರೊಡನೆ ಬಾಂಧವ್ಯ ನಮ್ಮ ಇಷ್ಟಕ್ಕೆ ವಿರುದ್ಧವಾದದ್ದು. ಬಲಾತ್ಕಾರದಿಂದ ಬಾಂಧವ್ಯ ಬೆಳೆಯುವುದಿಲ್ಲ. ನನ್ನನ್ನು ಕೊಡಗಿನ ರಾಜನನ್ನಾಗಿ ಮಾಡಿರುವ ಕೊಡಗರಿಗೆ ಟಿಪ್ಪು ಸುಲ್ತಾನನ ಮೇಲೆ ಅಸಾಧ್ಯ ಕೋಪವಿದೆ. ಅವರ ಕೆಲವು ಬಂಧು ಬಾಂಧವರು ಶ್ರೀರಂಗಪಟ್ಟಣದಲ್ಲಿ ಬಲಾತ್ಕಾರದ ಮತಾಂತರಕ್ಕೆ ಒಳಗಾಗಿರುವಾಗ ಇಲ್ಲಿ ಇವರು ಸುಖವಾಗಿರಲು ಸಾಧ್ಯವೆ.
ಮಹಾರಾಜರು ಕ್ಷಮಿಸಬೇಕು. ಟಿಪ್ಪು ಸುಲ್ತಾನರು ಮಾತುಕತೆಗೆ ಎಷ್ಟು ಸಲ ಕರೆದರೂ ಬಾರದೆ ಕಾಡು ಸೇರಿ ಆಡಳಿತಕ್ಕೆ ತೊಂದರೆ ಕೊಟ್ಟ ಒಂದಷ್ಟು ಕೊಡಗರನ್ನು ಸೆರೆ ಹಿಡಿದು ಸುಲ್ತಾನರು ಬಂಧಿಸಿ ಇಸ್ಲಾಮಿಗೆ ಸೇರಿಸಿದ್ದು ಹೌದು. ಅದು ರಾಜಕೀಯದ ಒಂದು ಭಾಗ. ಸುಲ್ತಾನರಿಗೆ ಧರ್ಮ ಪ್ರಸಾರದ ಉದ್ದೇಶವಿಲ್ಲ. ಇರುತ್ತಿದ್ದರೆ ನಿಮ್ಮ ತಂಗಿಯರಿಗೆ ಅರಮನೆಯಲ್ಲಿ ಶಿವಾಚಾರವನ್ನು ಮುಂದುವರಿಸಿಕೊಂಡು ಹೋಗಲು ಬಿಡುತ್ತಿರಲಿಲ್ಲ. ನಮ್ಮ ಸುಲ್ತಾನರು ಧರ್ಮಾಂಧರಲ್ಲ.
ದೊಡ್ಡ ವೀರರಾಜ ಅದನ್ನು ಅಲ್ಲಗಳೆಯಲಿಲ್ಲ.
ಒಪ್ಪಿಕೊಂಡೆ ಖಾದರ್‌ ಖಾನ್‌. ಅಂದು ಕೊಡಗರು ಯಾಚಿಸಿದಾಗ ಸುಲ್ತಾನ ನನ್ನನ್ನು ಸೆರೆಯಿಂದ ಬಿಡುಗಡೆ ಮಾಡಲಿಲ್ಲ. ನನ್ನನ್ನು ಬಿಡಿಸಿ, ಟಿಪ್ಪುವಿನ ಸೇನೆಯನ್ನು ಇಲ್ಲಿಂದ ಓಡಿಸಿ, ಕೊಡಗಿನ ರಾಜಪೀಠದಲ್ಲಿ ಕುಳ್ಳಿರಿಸಿದ್ದು ಕೊಡಗರು. ಅವರು ಇಂಗ್ಲೀಷ ರೊಡನೆ ಮೈತ್ರಿ ಬೆಳೆಸಲು ಸೂಚಿಸಿದವರು. ನಾನೇನಾದರೂ ಈಗ ಸುಲ್ತಾನರತ್ತ ಸ್ನೇಹಹಸ್ತ ಚಾಚಿದರೆ ನನ್ನನ್ನೇ ಗಡಿಪಾರು ಮಾಡಿ ಇನ್ನೊಬ್ಬನನ್ನು ರಾಜನನ್ನಾಗಿ ಮಾಡುತ್ತಾರೆ. ತುಂಬಾ ತಡವಾಗಿ ಹೋಯಿತು ಖೈದರ್‌ ಖಾನ್‌. ನನ್ನನ್ನು ಹುಲಿಯ ಬೆನ್ನೇರುವಂತೆ ಮಾಡಿದವನು ನಿನ್ನ ಸುಲ್ತಾನ. ಇನ್ನು ನಾನು ಕೆಳಗಿಳಿಯಲು ಸಾಧ್ಯವೇ ಇಲ್ಲ.

* * *

ಯುದ್ಧದಲ್ಲಿ ಟಿಪ್ಪು ಸುಲ್ತಾನ ಸೋತುಹೋದ.
ಯುದ್ಧ ಸಂದರ್ಭದ ಗೊಂದಲದಲ್ಲಿ ಈ ಹಿಂದೆ ಟಿಪ್ಪು ಇಸ್ಲಾಮಿಗೆ ಸೇರಿಸಿದ ಕೊಡಗರಲ್ಲಿ ಹೆಚ್ಚಿನವರು ಶ್ರೀರಂಗಪಟ್ಟಣದಿಂದ ತಪ್ಪಿಸಿಕೊಂಡು ಕೊಡಗಿಗೆ ಬಂದು ಬಿಟ್ಟರು. ಕೊಡಗಿನ ಸಮೃದ್ಧ ಖಾಲಿ ಭೂಮಿಯನ್ನು ರಾಜ ಅವರಿಗೆ ಹಂಚಿದ. ಕೊಡಗ ಮುಖಂಡರ ಸಭೆ ಕರೆದು ವಿನಂತಿ ಮಾಡಿಕೊಂಡ.
ಇವರೆಲ್ಲಾ ನಿಮ್ಮವರು. ಬಲಾತ್ಕಾರದಿಂದ ಇಸ್ಲಾಮಿಗೆ ಸೇರಿಸಲ್ಪಟ್ಟವರು. ಈಗ ನಿಮ್ಮ ಆಶ್ರಯ ಬೇಡಿ ಬಂದಿದ್ದಾರೆ. ಇವರನ್ನು ನಿಮ್ಮ ಜಾತಿಗಳಿಗೆ ದಯವಿಟ್ಟು ಸೇರಿಸಿಕೊಳ್ಳಿ. ಅದು ನ್ಯಾಯ ಮತ್ತು ಧರ್ಮ.
ಕೊಡಗಿನಲ್ಲಿ ಆಗ ಕೊಡಗ ಭಾಷೆಯನ್ನಾಡುವ ಹದಿನೆಂಟು ಜಾತಿಗಳ ಜನರಿದ್ದರು. ಬೇರೆ ಧರ್ಮಕ್ಕೆ ಸೇರಿ ತಿರುಗಿ ಬಂದವರನ್ನು ಏನು ಮಾಡಬೇಕೆಂಬುದರ ಬಗ್ಗೆ ಈವರೆಗೆ ಯೋಚಿಸುವ ಪ್ರಮೇಯ ಒದಗಿ ಬಂದಿರಲಿಲ್ಲ. ಇಷ್ಟು ದಿನ ಇಸ್ಲಾಮುಗಳಾಗಿದ್ದವರನ್ನು ಮತ್ತೆ ತಮ್ಮ ಜಾತಿಗಳಿಗೆ ಸೇರಗೊಟ್ಟರೆ ಕುಲಾಚಾರ ಪದ್ಧತಿ ಕೆಡುತ್ತದೆಂದು ಹೆದರಿ ಅವರು ಸುಮ್ಮನಾಗಿ ಬಿಟ್ಟರು.
ಟಿಪ್ಪು ಸುಲ್ತಾನ ಯಾರನ್ನು ಬೇಕಾದರೂ ತನ್ನ ಧರ್ಮಕ್ಕೆ ಸೇರಿಸಿಕೊಳ್ಳುತ್ತಾನೆ. ನೀವು ನಿಮ್ಮದೇ ಜನರನ್ನು ನಿರಾಕರಿಸುತ್ತಿದ್ದೀರಿ. ಆಮಿಷಕ್ಕೆ ಒಳಗಾಗಿ ಮತಾಂತರವಾದವರು ಎಂದಾಗಿದ್ದರೆ ನಿಮ್ಮ ಮೌನಕ್ಕೆ ಅರ್ಥವಿರುತ್ತಿತ್ತು. ಬಲಾತ್ಕಾರಕ್ಕೆ ಒಳಗಾದ ನಿರ್ಭಾಗ್ಯರ ಬಗ್ಗೆ ಕಟುಕರಾಗಿ ನಡಕೊಳ್ಳಲು ಯಾವ ದೇವರು ಹೇಳಿದ್ದಾರೆ, ಯಾವ ಧರ್ಮ ಹೇಳಿದೆ, ಮನುಷ್ಯರಾ ನೀವು.
ಈಗಲೂ ಜಾತಿ ಮುಖಂಡರು ತುಟಿ ಬಿಚ್ಚಲಿಲ್ಲ.
ಉಂಬಲ್ಲಿ ಉಡುವಲ್ಲಿ ಕುಲವಳಿಯಿತ್ತೆಂಬಿರಿ. ಕೊಂಬಲ್ಲಿ ಕೊಡುವಲ್ಲಿ ಕುಲವನರಸುವರ ಏನೆಂಬೆನಯ್ಯ? ಇವರನೆಂತು ಭಕ್ತರನೆಂಬೆನಯ್ಯ? ಅವರಲ್ಲಿ ಕುಲವ ನೋಡದೆ ಆಚಾರವ ನೋಡಿ ಅವರಿಂಗೆ ಬೇಕಾದ ಹೆಣ್ಣು ಕೊಟ್ಟು ತಮಗೆ ಬೇಕಾದ ಹೆಣ್ಣ ತಂದುಕೊಂಬದು
ಇದು ನಮ್ಮ ಬಸವಣ್ಣ ಹೇಳಿದ ಮಾತು. ಕೊಲುವವನೆ ಮಾದಿಗ. ಹೊಲಸ ತಿಂಬವನೆ ಹೊಲೆಯ ಅಷ್ಟೆ. ಇವರು ನಿಮ್ಮವರು. ಈಗ ನೀವು ಇವರನ್ನು ನಿಮ್ಮ ಜಾತಿಗೆ ಸೇರಿಸದಿದ್ದರೆ ಮುಂದೊಂದು ದಿನ ಕುಲಸಂಬಂಧೀ ಜಗಳಗಳಿಂದ ನಾಡು ಹೊತ್ತಿ ಉರಿದೀತು, ಎಚ್ಚರ.
ಜಾತಿ ಮುಖಂಡರು ನಿಶ್ಚಲರಾಗಿ ನಿಂತರು. ರಾಜ ಗಂಭೀರ ಸ್ವರದಲ್ಲಿ ತನ್ನ ನಿರ್ಧಾರ ಪ್ರಕಟಿಸಿದ.
ಶ್ರೀರಂಗಪಟ್ಟಣದಿಂದ ಬಂದವರಿಗೆ ಇಸ್ಲಾಮು ಬೇಕೆಂದಾದರೆ ಮಸೀದಿ ನಿರ್ಮಾಣ ಮಾಡಿಕೊಡುತ್ತೇನೆ. ಬೇಡವೆಂದಾದರೆ ನಿಮಗೆ ಲಿಂಗದೀಕ್ಷ ನೀಡಿ ಶಿವಾಚಾರಿಗಳನ್ನಾಗಿ ಮಾಡುತ್ತೇನೆ. ಆ ಮಹಾದೇವನಿಗೆ ಜಾತಿ ಮತಗಳ ಗೊಡವೆಯಿಲ್ಲ.
*****