ದಾಸ ಸಾಹಿತ್ಯ – ಪರ್‍ಯಾಯವಾದಿ ನೆಲೆಗಳು

ದಾಸ ಸಾಹಿತ್ಯ – ಪರ್‍ಯಾಯವಾದಿ ನೆಲೆಗಳು

ಕನ್ನಡದಲ್ಲಿ ಪರ್‍ಯಾಯ ಎನ್ನುವುದು ಸದಾ ಜೀವಂತವಿರುವ ಪ್ರಕ್ರಿಯೆ. ಯಾಜಮಾನ್ಯದ ಪರಿಕಲ್ಪನೆಯಲ್ಲಿ ವಿವರಿಸಲ್ಪಡುವ ಸಂಗತಿಗಳಿಗೆ ಪರ್‍ಯಾಯ ಎನ್ನುವುದು ಒದಗಿ ಬರುವ ಪದವೇ ಆಗಿದೆ. ಕನ್ನಡದ ಮಟ್ಟಿಗೆ ಸದಾ ಯಜಮಾನ-ದಾಸತ್ವದ ಬಾಧೆಗಳು ಇದ್ದವು ಎನ್ನುವುದೊಂದೇ ಇದರ ಅರ್‍ಥವಲ್ಲ. ಅದು ಬಹುತ್ವದ ಅನೇಕ ಸ್ರೋತಗಳುಳ್ಳ ಪ್ರವಾಹ ಎನ್ನುವ ಅರ್‍ಥದಲ್ಲಿಯೂ ವಿಸ್ತಾರಗೊಳ್ಳಬಹುದು. ಇಂದಿನ ನಮ್ಮ ಚಿಂತನೆಗಳಲ್ಲಿ ಪ್ರಧಾನ ಅಪ್ರಧಾನವೆಂಬ ದ್ವಿತ್ವದ ಬಳಕೆಯೇ ಹೆಚ್ಚುತ್ತಾ ನಿಶ್ಚಿತತೆಗಳ ಸ್ವರೂಪದಲ್ಲಿ ಸಾಹಿತ್ಯವನ್ನು ವಿವರಿಸಿಕೊಳ್ಳುತ್ತಿದ್ದೇವೆ. ಇದರಿಂದ ಸೂಕ್ಷ್ಮ ಅಧ್ಯಯನಗಳು ಸಾಧ್ಯವಾಗಿರುವಂತೆ ಸಮಗ್ರತೆಯ ಒಟ್ಟಂದವನ್ನು ಎಲ್ಲೋ ನಿರಾಕರಿಸುತ್ತಾ ದ್ವೀಪಗಳಾಗುವ ಸಂಭವವನ್ನೂ ಕಾಣುತ್ತಿದ್ದೇವೆ. ಒಂದು ಭಾಷಿಕ ಸಮುದಾಯದ ದೃಷ್ಟಿಯಿಂದ ನೋಡುವಾಗ ದಾಯಿತ್ವದ ನೆಲೆಯಿಂದ ಹೊರಡುವ ಸಂಗತಿ ಮುಖ್ಯವಾದುದು. ಅದನ್ನೇ ಆಧಾರವಾಗಿಟ್ಟುಕೊಂಡು ಅನ್ಯತೆಯನ್ನು ಸ್ವೀಕರಿಸುವ ಅಥವಾ ನಿರಾಕರಿಸುವ ಕ್ರಿಯೆಗಳು ಸಾಂಸ್ಕೃತಿಕವಾಗಿ ಮಹತ್ವ ಪಡೆದುಕೊಳ್ಳುತ್ತವೆ. ಈ ಅನ್ಯದೊಂದಿಗಿನ ಅನುಸಂಧಾನವಾದರೋ ಸರಳರೇಖಾತ್ಮಕವಾದ ಕ್ರಿಯೆಯಲ್ಲ. ಅದರ ಬೆನ್ನ ಹಿಂದೆ ಸಂಕೀರ್‍ಣ ಅವಸ್ಥಾಂತರಗಳೂ ಮರೆಮಾಚಿನ ದಾರಿಗಳೂ ಅಡಗಿಕೊಂಡಿವೆ ಎನ್ನುವುದನ್ನು ಮರೆಯಲಾಗದು. ಈ ಹಿನ್ನೆಲೆಯಲ್ಲಿ ದಾಸ ಸಾಹಿತ್ಯವನ್ನು ನಿರಚನೆ ಮಾಡುತ್ತಾ ಓದುವ ಕ್ರಮವನ್ನು ಈಚೆಗಷ್ಟೆ ರೂಢಿಸಿಕೊಳ್ಳಲಾಗುತ್ತಿದೆ.

ದಾಸ ಮತ್ತು ಶರಣ ಎನ್ನುವ ಭಾವವನ್ನು ಪ್ರಧಾನವಾಗಿರಿಸಿಕೊಂಡ ಕನ್ನಡ ಸಂವೇದನೆಯನ್ನು ಗರಿಮೆಯನ್ನಾಗಿ ಭಾವಿಸುತ್ತಾ ಬಂದ ಹೊತ್ತಿನಲ್ಲಿ ಅವು ರೂಪಿಸಿಕೊಂಡ ಪರ್‍ಯಾಯ ನೆಲೆಗಳನ್ನು ವಿವೇಚಿಸಿಕೊಳ್ಳುವ ಕ್ರಿಯೆಯನ್ನು ಕನ್ನಡದ ಓದು ಮಾಡುತ್ತಲೇ ಬಂದಿದೆ. ಕನ್ನಡದ ಸಂದರ್‍ಭದಲ್ಲಿ ದೇಸಿತನವನ್ನು ಮೈಗೂಡಿಸಿಕೊಳ್ಳುವುದು ಒಂದು ಪರ್‍ಯಾಯವಾದಿ ಲಕ್ಷಣ. ದೇಸಿತನವೆಂದರೆ ಯಾವುದು? ಅದು ಭಾಷಿಕವೇ ಅಥವಾ ಸಂಸ್ಕೃತಿ ಸಂಬಂಧಿಯೇ ಅಥವಾ ಪ್ರಾದೇಶಿಕತೆಯೇ? ಅಥವಾ ಇವುಗಳೆಲ್ಲವೂ ಕೂಡಿದ ಒಟ್ಟುತನವೇ? ಭಾಷಿಕವಾಗಿ ನೆಲದ ಭಾಷೆ, ಮಟ್ಟು, ಗೇಯತೆ ಮತ್ತು ಆಡುಮಾತಿನ ಸೊಲ್ಲನ್ನು ದೇಸಿ ಎಂದು ಪರಿಗಣಿಸಲಾಗುತ್ತದೆ. ಇದನ್ನೇ ವಿಸ್ತರಿಸಿಕೊಂಡಂತೆ ಸಂಸ್ಕೃತಿನಿಷ್ಠ ಓದುಗಳು ನಿಶ್ಚಿತತೆಗಳನ್ನು ಪ್ರಧಾನವಾಗಿ ಕೇಂದ್ರೀಕರಿಸಿಕೊಳ್ಳುತ್ತವೆ. ಶರಣ ಅಥವಾ ದಾಸ ಸಾಹಿತ್ಯಗಳು ಈ ಹಿನ್ನೆಲೆಯಲ್ಲಿ ದೇಸೀಯತೆಯನ್ನು ಮೈಗೂಡಿಸಿಕೊಂಡ ಎರಡು ಪ್ರಧಾನ ಧಾರೆಗಳಾಗಿ ಕನ್ನಡದಲ್ಲಿ ಕಾಣಿಸಿಕೊಂಡಿವೆ.

ಹನ್ನೆರಡನೆಯ ಶತಮಾನದಲ್ಲಿ ಬಂದ ಶರಣರ ಕ್ರಾಂತಿಯು ಸಾಹಿತ್ಯ ಸಂಸ್ಕೃತಿಗಳೊಡಗೂಡಿಯೇ ಒಂದು ಆಂತರಿಕ ಜಾಗೃತಿಯ ಸಂವೇದನೆಯನ್ನು ಉಂಟು ಮಾಡಿತು. ಪಂಪನ ಕಾಲದಲ್ಲಿ ನಿರ್‍ವಚನಗೊಂಡ ದೇಸಿ ಮಾರ್‍ಗದ ಬಳಕೆಯ ವಿವೇಚನೆಯು ವಚನ ಸಾಹಿತ್ಯದ ಮೂಲಕ ಇನ್ನಷ್ಟು ನಿಚ್ಚಳವಾಗಿ ದೇಸಿಯು ಮೈದೆರೆಯುತ್ತಾ ಬಂದಿತು. ಇದರಿಂದ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ತನ್ನದೇ ಆದ ನುಡಿಗಟ್ಟು ಮತ್ತು ಅಭಿವ್ಯಕ್ತಿ ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟಂತಾಯಿತು ಎನ್ನುವುದನ್ನು ನಮ್ಮ ಈವರೆಗಿನ ಓದುಗಳು ಪ್ರತಿಪಾದಿಸುತ್ತಾ ಬಂದಿವೆ. ಆದರೆ ದಾಸ ಪರಂಪರೆಯ ಬಗ್ಗೆ ಈ ತೆರನಾದ ಅಭಿಪ್ರಾಯವಿಲ್ಲ. ದಾಸ ಸಾಹಿತ್ಯವು ವೈದಿಕ ಸಂಸ್ಕೃತಿಯ ಪಡಿನೆಳಲಾಗಿ ಬಂದಿತೆಂದೂ ಅದಕ್ಕೆ ಪರ್‍ಯಾಯ ಗುಣಗಳು ಕಡಿಮೆ ಇವೆಯೆಂದೂ ಅಭಿಪ್ರಾಯವಿದೆ. ಇದು ಸ್ವಲ್ಪಮಟ್ಟಿಗೆ ನಿಜವೂ ಆಗಿದೆ. ಏಕೆಂದರೆ ದಾಸ ಸಾಹಿತ್ಯ ಸಂಸ್ಕೃತಿಗಳ ಸ್ವರೂಪವು ಬಿಡುಬೀಸಾಗಿ ಕ್ರಾಂತಿಯನ್ನು ಪ್ರಚುರ ಪಡಿಸುವಂತಿಲ್ಲ. ಅದರ ಪರ್‍ಯಾಯವು ಕಾಣಿಸಿಕೊಳ್ಳುವುದು ಅಡಗಿ ಬಿಚ್ಚಿಕೊಳ್ಳುವ ಪ್ರಕ್ರಿಯೆಯಲ್ಲಿ. ಹೀಗಾಗಿ ವಚನ ಸಾಹಿತ್ಯದ ಅಳತೆಗೋಲುಗಳಲ್ಲಿ ದಾಸ ಸಾಹಿತ್ಯವನ್ನು ಅಳೆಯಲು ಕಷ್ಟವೆನಿಸುತ್ತದೆ.

ದಾಸ ಸಾಹಿತ್ಯ ಪರ್‍ಯಾಯವಾದಿ ಎಂದು ಗುರುತಿಸಲ್ಪಡುವುದಕ್ಕೆ ಕಾರಣಗಳಿವೆ. ಮೊದಲನೆಯದಾಗಿ ದಾಸ ಸಾಹಿತ್ಯವು ಕನ್ನಡಕ್ಕೆ ಅಲಭ್ಯವೆನಿಸಿದ್ದ ವೈದಿಕ ತತ್ವವನ್ನು ಕನ್ನಡದ ಸೊಲ್ಲಿನಲ್ಲಿ ಅಭಿವ್ಯಕ್ತಿ ಪಡಿಸಿದ್ದು ಎರಡನೆಯದಾಗಿ, ನೆಲದ ಭಾಷೆ ಬಳಸಿ ಜನಸಾಮಾನ್ಯರೂ ತತ್ವ ಅರಿಯಬಹುದೆಂಬ ವಿಶ್ವಾಸ ತುಂಬಿದ್ದು. ಇದರಿಂದ ಭಾವ ತುಂಬಿ ದೇಸಿಯಲ್ಲಿ ದೇವರನ್ನು ಕಾಣುವ ವಿಶ್ವಾಸ ಮೂಡಿತು. ಪ್ರಾರ್ಥನೆಯನ್ನು ಸರಳಗೊಳಿಸಿ ಪುರೋಹಿತಶಾಹಿಯ ಪಾತ್ರವನ್ನು ಕಡಿಮೆ ಮಾಡಿದ್ದು ದಾಸ ಪಂಥದ ಸಾಧನೆ. ಎಲ್ಲಕ್ಕಿಂತ ಮುಖ್ಯವಾಗಿ ದಾಸ ಪಂಥವು ಭಾರತದ ಅನೇಕ ಭಕ್ತಿಪಂಥಗಳಂತೆ ಜಾತಿ, ಮತ, ಲಿಂಗ ಮತ್ತು ವರ್ಗಗಳಿಂದ ಮುಕ್ತಗೊಳಿಸಿದಂತಹ ವೇದಿಕೆಯನ್ನು ನಿರ್ಮಿಸಿದ್ದು ಅದರ ಪರ್ಯಾಯದ ಗುಣವನ್ನು ತೋರುತ್ತದೆ. ಸಾಮಾಜಿಕವಾಗಿ ಸಂರಚನಾತ್ಮಕ ಬದಲಾವಣೆಯನ್ನು ಮಾಡಲಾಗದಿದ್ದರೂ ಅವನ್ನು ಅಲುಗಿಸುವ, ಬದಲೀ ರಚನೆಗಳತ್ತ ಕೈಚಾಚುವುದನ್ನಿಲ್ಲಿ ಕಾಣಬಹುದು.

ದಾಸ ಸಾಹಿತ್ಯವನ್ನು ವಚನ ಸಾಹಿತ್ಯದ ಜೊತೆಯಲ್ಲಿಟ್ಟು ನೋಡುವ ಪರಿಪಾಠವಿದೆ. ಈ ಬಗೆಯ ಓದು ದಾಸ ಸಾಹಿತ್ಯಕ್ಕೆ ಅಷ್ಟೇನೂ ಅನುಕೂಲಕರವಾಗದು. ಏಕೆಂದರೆ ವಚನ ಸಾಹಿತ್ಯದ ಕ್ರಾಂತಿಕಾರಕ ಗುಣ, ದೇಸಿಯ ಅಭಿವ್ಯಕ್ತಿಗಳು ಮೇಲ್ನೋಟಕ್ಕೇ ದಾಸ ಸಾಹಿತ್ಯವನ್ನು ಪೇಲವಗೊಳಿಸುತ್ತದೆ. ದಾಸ ಸಾಹಿತ್ಯವು ಧಾರ್ಮಿಕವಾದ ಶಾಖೆಯ ಕವಲಾಗಿ ಹೊರಟಿದ್ದರಿಂದ ಅದಕ್ಕೆ ಮತೀಯವಾದ ಚಹರೆ ಬಂದಿತು. ಇರುವ ಮತವನ್ನು ತಿದ್ದಿ, ನೇರ್ಪುಗೊಳಿಸಿಕೊಳ್ಳುವತ್ತ ದಾಸ ಪಂಥ ಗಮನ ಹರಿಸಿದ್ದರಿಂದ ನಿರ್ದಾಕ್ಷಿಣ್ಯವಾಗಿ ವೇದಪ್ರಮಾಣಗಳನ್ನು ಅಥವಾ ವೈದಿಕ ಸಾಹಿತ್ಯದ ಆಕರಗಳನ್ನು ಅದು ಬಿಟ್ಟುಕೊಡಲಿಲ್ಲ. ಹೀಗಾಗಿ ಪುನರುಜೀವಕ ಅಂಶಗಳನ್ನು ಅದು ಹೆಚ್ಚು ಹೆಚ್ಚು ರೂಢಿಸಿಕೊಳ್ಳುತ್ತಾ ಬಂದಿತು. ಕ್ರಾಂತಿಕಾರಕ ಸ್ವರೂಪಕ್ಕಿಂತ ಸಮನ್ವಯದ ಸ್ವರೂಪವು ಅದಕ್ಕೆ ಸಿದ್ಧಿಸುತ್ತಾ ಬಂದಿತು. ಪರಂಪರೆಯ ಆವರಣದಲ್ಲೇ ಬೆಳೆದು ಬಂದ ದಾಸರು ಅದರೊಳಗಿನ ಕುಂದುಕೊರತೆಗಳನ್ನು ಹೇಳುವ ಮನಸ್ಸು ಮಾಡಿದರು. ಆದುದರಿಂದ ಸಮಾಜ ಸುಧಾರಣೆಯ ಕ್ರಾಂತಿಕಾರಕ ವ್ಯವಸ್ಥೆಯ ರೂಪವಾಗಿ ದಾಸಪಂಥ ಪರಿಣಮಿಸಲಿಲ್ಲ ಎನ್ನುವ ತಿಪ್ಪೇರುದ್ರಸ್ವಾಮಿಯವರ ಮಾತು ಇಲ್ಲಿ ಸಲ್ಲುತ್ತದೆ(ಕರ್ನಾಟಕ ಸಾಹಿತ್ಯ ಸಮೀಕ್ಷೆ, ಎಚ್‌.ತಿಪ್ಪೇರುದ್ರಸ್ವಾಮಿ, ಪು.೩೬೭).

ದಾಸ ಸಾಹಿತ್ಯದ ಮತ್ತೊಂದು ಮುಖ್ಯವಾದ ಮಿತಿ ಎಂದರೆ ಅದರ ಒಂದು ಪಾರ್ಶ್ವ ಮಾತ್ರ ಸಾಮಾನ್ಯರಿಗೆ ಸಲ್ಲುವಂತದ್ದು. ದಾಸ ಸಾಹಿತ್ಯವನ್ನು ವಿಶೇಷ ಪಂಥೀಯ ಮತ್ತು ಸಾಧಾರಣ ಎಂಬ ಮೂರು ಭಾಗಗಳಿವೆ (ಯುಗಯಾತೀ ಭಾರತೀಯ ಸಂಸ್ಕೃತಿ, ಪು.೨೬೮), ಅವುಗಳಲ್ಲಿ ಮೊದಲನೆಯದು ಬ್ರಾಹ್ಮಣರಿಗೆ, ಎರಡನೆಯದು ದೇವತಾಶಾಸ್ತ್ರೀಯ ರಚನೆಗಳಾದರೆ ಮೂರನೆಯದು ಸಾಮಾನ್ಯರಿಗೆ ಮುಕ್ತವಾಗಿರುವಂತದ್ದು. ಈ ಆಂಶಿಕ ಭಾಗವನ್ನು ದಾಸ ಸಾಹಿತ್ಯದ ಮುಖ್ಯ ಭಾಗ ಎಂದು ಗಮನಿಸಬೇಕಿದೆ.

ದಾಸ ಸಾಹಿತ್ಯದ ಓದುಗಳಲ್ಲಿ ಬ್ರಾಹ್ಮಣ ವಿರೋಧಿ ಅಥವಾ ವೈದಿಕ ವಿರೋಧಿ ಅಲೆ ಸೃಷ್ಟಿಯಾಗಲಿಲ್ಲ. ಅಖಿಲ ಭಾರತೀಯ ಸಂದರ್ಭದಲ್ಲಿ ಪರ್ಯಾಯದ ನೆಲೆಗಳು ಬ್ರಾಹ್ಮಣ ವಿರೋಧಿ ನೆಲೆಗಳಾಗಿವೆ. ಜಾತಿ ಮತ್ತು ಔನ್ನತ್ಯದ ದೃಷ್ಟಿಯಿಂದ ಯಜಮಾನಿಕೆಯನ್ನು ಹೊಂದಿರುವ ಬ್ರಾಹ್ಮಣ ಜಾತಿ/ಧರ್ಮವನ್ನು ನಿರಾಕರಿಸುವುದು ಪರ್ಯಾಯ ಮಾದರಿಯ ಮುಖ್ಯ ಅಭಿವ್ಯಕ್ತಿಯಾಗಿತ್ತು. ಆದರೆ ಈ ಬಗೆಯ ನಿಲುವುಗಳು ಬ್ರಾಹ್ಮಣ ಮತ್ತು ಶೂದ್ರ ಎಂಬ ದ್ವಿತ್ವಗಳನ್ನು ಸೃಷ್ಟಿಸಿ ಅವುಗಳಲ್ಲೇ ಆಸಕ್ತವಾಗಿ ಬಿಡುತ್ತವೆ. ಈ ದ್ವಿತ್ವಗಳ ನಡುವೆ ಇರಬಹುದಾದ ಅನೇಕಗಳನ್ನು ಅವು ಬೀಸು ವರ್ಗೀಕರಣದಲ್ಲಿ ಮಸಕುಗೊಳಿಸುತ್ತವೆ. ಆದ್ದರಿಂದಲೇ ವೈದಿಕ ಪುರಾಣ, ಆಕರಗಳನ್ನು ಆಧರಿಸಿದ ದಾಸ ಸಾಹಿತ್ಯವು ಪರ್ಯಾಯ ಎನ್ನಿಸಲು ಸಾಧ್ಯವಿಲ್ಲ ಎನ್ನುವ ಭಾವನೆ ಸಾರ್ವತ್ರಿಕವಾಗಿದೆ. ಇದನ್ನು ತುಂಬಾ ಸೂಕ್ಷ್ಮವಾಗಿ ಪರಿಶೀಲಿಸಿಕೊಳ್ಳಬೇಕಾಗಿದೆ.

ಇನ್ನೊಂದು ಬಹುಮುಖ್ಯವಾದ ಪ್ರಶ್ನೆ ಎಂದರೆ ದಾಸ ಸಾಹಿತ್ಯವನ್ನು ಸಾಹಿತ್ಯ ಎಂದು ಕರೆಯಬಹುದೇ ಎಂಬ ಸಂದಿಗ್ಧಗಳು ಕನ್ನಡದ ಓದುಗಳಲ್ಲಿ ಪುನಾ ಪುನಾ ಕಾಣಿಸಿಕೊಳ್ಳುತ್ತವೆ. ಜಿ.ಎಚ್.ನಾಯಕರು ಸಹ ಇದನ್ನು ಗುರುತಿಸುತ್ತಾ ಒಟ್ಟಾರೆ ಬ್ರಾಹ್ಮಣ ಸಾಹಿತ್ಯದಲ್ಲಿ ಕಾವ್ಯಾನುಭವ ಕಡಿಮೆ ಏಕೆಂದರೆ ‘ಮುಖ್ಯವಾಗಿ ಈ ಎಲ್ಲ ಮತಪಂಥೀಯ ದೃಷ್ಟಿಗಳು ವಿಶಾಲವಾದ ಅರ್ಥದಲ್ಲಿ ‘ವೈಷ್ಣವ’ ಇಲ್ಲವೆ ‘ವೈದಿಕ’ ಎನ್ನಬಹುದಾದ ಚೌಕಟ್ಟಿನಲ್ಲಿ ವ್ಯವಹರಿಸುವ ದರ್ಶನ ಮೀಮಾಂಸೆಗಳಾಗಿರುವುದೂ ಇದಕ್ಕೆ ಕಾರಣಗಳಾಗಿರಬಹುದು’ ಎನ್ನುತ್ತಾರೆ. (ಸಾಹಿತ್ಯ ಸಮೀಕ್ಷೆ, ಪು.೧೧೮). ದಾಸ ಸಾಹಿತ್ಯದಲ್ಲಿ ಪ್ರಬಲವಾದ ವಿರೋಧಿ ದನಿಗಳು ಆನುಷಂಗಿಕ ಎನ್ನಿಸುವುದಕ್ಕೆ ಕಾರಣಗಳಿವೆ. ಬಹುಮುಖ್ಯವಾಗಿ ಅದು ಧಾರ್ಮಿಕ ಸಾಹಿತ್ಯ, ನಿರ್ದಿಷ್ಟ ತತ್ವ ಪ್ರಸರಣಕ್ಕಾಗಿ ಅದನ್ನು ಬರೆಯಲ್ಪಟ್ಟಿದೆ ಎಂಬ ಮೇಲ್ನೋಟಕ್ಕೆ ಅನ್ನಿಸುವಂತಿದೆ. ಕರ್ನಾಟಕದ ಸಂದರ್ಭದಲ್ಲಿ ಮಾಧ್ವ ಮತಾನುಯಾಯಿಗಳೇ ದಾಸ ಸಾಹಿತ್ಯದ ಮುಂಚೂಣಿಯಲ್ಲಿದ್ದು, ಮಾಧ್ವ ಮತವನ್ನು ಕನ್ನಡದಲ್ಲಿ ಹೇಳುವ ಸಂದರ್ಭಕ್ಕಾಗಿ ದಾಸ ಸಾಹಿತ್ಯವು ಬಳಕೆಯಾಗಿದೆ. ದೈತ ತತ್ವವನ್ನು ಹೇಳಿದ ಮಧ್ವರ ದೇವ-ಭಕ್ತ ತತ್ವವು ದಾಸ ಪಂಥಕ್ಕೆ ಹೊಂದುವುದರಿಂದ ಆ ಮತದವರೇ ಇದನ್ನು ಹೆಚ್ಚಿಗೆ ಬಳಕೆ ಮಾಡಿರುವ ಸಾಧ್ಯತೆಗಳೂ ಇವೆ. ಆದರೆ ದಾಸ ಪಂಥದಲ್ಲಿ ಸ್ಮಾರ್ತ, ಶ್ರೀವೈಷ್ಣವ ಮತಗಳೇ ಅಲ್ಲದೆ ಅವಧೂತ ಗೀತೆಗಳೂ ರಚನೆಯಾಗಿವೆ. ದಾಸ ಸಾಹಿತ್ಯವು ಒಟ್ಟಾರೆ ಅನೇಕ ಮತ, ಪಂಥಗಳ ತತ್ವಗಳನ್ನು ಸರಳಗೊಳಿಸಿ ಕನ್ನಡದಲ್ಲಿ ಅಭಿವ್ಯಕ್ತಿಸಲು ಬಳಕೆಯಾಗಿದೆ ಎನ್ನಬಹುದು. ದಾಸ ಸಾಹಿತ್ಯದಲ್ಲಿ ಮುಖ್ಯವಾಗಿ ಮಾಧ್ವ ಮತವು ಪ್ರತಿಪಾದಿಸಲ್ಪಟ್ಟಿದೆ ಎನ್ನುವ ಅಂಶವು ದಾಸ ಸಾಹಿತ್ಯದ ನೆಲೆ ಬೆಲೆಯನ್ನೇ ಕೆದಕುವಂತಿದೆ. ಏಕೆಂದರೆ ದೈತವು ಜಿಜ್ಞಾಸೆಯನ್ನು ಆಧರಿಸಿದ್ದು, ಮೈಮರೆಯುವ ಭಕ್ತಿಯನ್ನು ಅದು ಒಗ್ಗಿಸಿಕೊಳ್ಳದು. ಇನ್ನೊಂದು ದೈತವು ದ್ವಿತ್ವದಲ್ಲಿ ವಿಹರಿಸುತ್ತಾ ತಾರತಮ್ಯವನ್ನು ತನ್ನ ತತ್ವದ ಬಹುಮುಖ್ಯ ಅಂಶವಾಗಿ ಪ್ರತಿಪಾದಿಸುವುದರಿಂದ ಅದನ್ನು ವರ್ಣಾಶ್ರಮ ಧರ್ಮಕ್ಕೂ ಅನ್ವಯಿಸಿ ನೋಡುವ ಕ್ರಮ ಬೆಳೆದು ಬಂದಿತು. ಭೇದವೇ ಪ್ರಧಾನವಾದ ಕಾರಣ ಮುಮುಕ್ಷುಗಳಿಗೆ ಮೋಕ್ಷವು ಜೈನರ ದಿಗಂಬರ ಪಂಥದಂತೆಯೇ ಜನ್ಮಜಾತವಾದ ಲಿಂಗ ಮತ್ತು ಜಾತಿ ನಿಶ್ಚಿತತೆಗಳನುಸಾರಿಯಾಗಿ ಸಿಗುವಂತದ್ದು. ಈ ಎಲ್ಲಾ ಕಾರಣಗಳು ಹರಿದಾಸ ಸಾಹಿತ್ಯವೂ ಹರಿಪಾರಮ್ಯದ ಸ್ತುತಿ, ಬಣ್ಣನೆಗೆ ಆಸಕ್ತವಾಗಬೇಕಾದ ಅನಿವಾರ್ಯತೆಯನ್ನು ತಂದೊಡ್ಡಿದವು. ಇದು ದಾಸ ಸಾಹಿತ್ಯವನ್ನು ಮಿತಿಗೊಳಿಸಿ ನೋಡಲು ಅವಕಾಶ ಮಾಡಿಕೊಡುವ ಸಂಗತಿ.

ಹರಿದಾಸ ಸಾಹಿತ್ಯವು ನಾದ/ಸಂಗೀತ ಮತ್ತು ಧಾರ್ಮಿಕತೆಯಂತಹ ಬಲವಾದ ನೆಲೆಗಟ್ಟುಗಳಿಂದ ನಿರ್ವಹಿಸಲ್ಪಡುತ್ತದೆ. ಸಂಗೀತ ಮತ್ತು ಧಾರ್ಮಿಕತೆಗಳೆರಡೂ ಸಾಹಿತ್ಯವನ್ನು ತಮ್ಮ ಸಾಧನ ಸಲಕರಣವಾಗಿ ನೋಡುತ್ತಾ ಅದರ ಸಾಹಿತ್ಯಕ ಮೌಲ್ಯವನ್ನು ಕಡಿಮೆ ಮಾಡುತ್ತವೆ. ಈ ಕಾರಣದಿಂದ ದಾಸ ಸಾಹಿತ್ಯವನ್ನು ಸಾಹಿತ್ಯವೆಂದೇ ಓದುವ ಕೇಂದ್ರ ಅನೇಕ ಸಂದರ್ಭಗಳಲ್ಲಿ ಇಲ್ಲದಾಗುತ್ತದೆ. ಮೊಕಾಶಿ ಕೂಡ ಈ ವಿಷಯದಲ್ಲಿ ಅನುಮಾನ ವ್ಯಕ್ತ ಪಡಿಸಿದ್ದಾರೆ. ‘ಹರಿದಾಸ ಕೀರ್ತನೆಗಳು ಕಾವ್ಯವೇ? ಕಾವ್ಯ ಎಂಬ ವ್ಯಾಪಕ ಪದದಲ್ಲಿ ನಾಟಕವೂ ಸೇರಿದೆ, ಗೀತಿಕೆಯೂ ಸೇರಿದೆ, ಗದ್ಯವೂ ಸೇರಿದೆ. ಇಂಥ ವ್ಯಾಪಕ ಪದಕ್ಕೆ ಪೊಯಟ್ರಿ ಎಂದು ಕರೆಯಲು ಕೆಲವು ಅಡಚಣೆಗಳು ಬರುತ್ತವೆ'(ನೀರ ಬೆಳಗು, ಪು.೧೪೧). ವಚನಗಳಿಗೆ ಈ ಸಮಸ್ಯೆ ಹೆಚ್ಚಾಗಿ ಬಾಧಿಸಲಿಲ್ಲ. ಅವು ವಚನ(ಮಾತು) ಎಂದೇ ಪ್ರಚಲಿತವಾದುದರಿಂದ ಅವಕ್ಕೆ ನಾದದ ಹಂಗು ಬೇಕು ಎನ್ನುವಂತಿರಲಿಲ್ಲ. ಜಿಜ್ಞಾಸೆಯೇ ಅವುಗಳ ಮುಖ್ಯ ಧಾತುವಾಗಿ ಕಾವ್ಯದ ನೆಲೆಯಲ್ಲಿ ಅವನ್ನು ಮಂಡಿಸಿದ್ದರಿಂದ ಅವು ಉಜ್ವಲವಾದ ಗದ್ಯಪದ್ಯದ ಹದವನ್ನು ಪಡೆದುಕೊಂಡವು. ‘ದ್ವೈತ ಮತ ಹುಟ್ಟಿದ್ದು ಕರ್ನಾಟಕದಲ್ಲಿ, ಆದರೆ ಅದು ಮೂಲತಃ ರೂಪ ಪಡೆದಿದ್ದು ಸಂಸ್ಕೃತದಲ್ಲಿ. ಕನ್ನಡ ಭಾಷೆ ಮತ್ತು ಜನಜೀವನದ ಅನಿವಾರ್ಯ ಸಂಬಂಧದಲ್ಲಿ ವೀರಶೈವ ರೂಪ ಪಡೆದಂತೆ ಅದು ಪಡೆಯಲಿಲ್ಲ'(ನಾಯಕ್, ಸಾಹಿತ್ಯ ಸಮೀಕ್ಷೆ, ಪು.೧೧೮), ಅವುಗಳ ಸಂವಿಧಾನವು ಸಾಹಿತ್ಯಕ ಚೌಕಟ್ಟಿನಲ್ಲಿ ಗಟ್ಟಿಮುಟ್ಟಾಗಿ ನೆಲೆಗೊಂಡಿತು.

(ಅ)
ದಾಸ ಸಾಹಿತ್ಯದ ಪರ್ಯಾಯ ಲಕ್ಷಣಗಳು ಸಾಮಾನ್ಯವಾಗಿ ವಿವರಿಸಲ್ಪಡುವುದುಂಟು. ದಾಸ ಸಾಹಿತ್ಯದ ಪರ್ಯಾಯವನ್ನು ಗಮನಿಸಬೇಕಾದಾಗ ಅದರ ಚಾರಿತ್ರಿಕ ವ್ಯಾಪ್ತಿಯನ್ನು ಅಲಕ್ಷಿಸುವಂತಿಲ್ಲ. ದಾಸ ಸಾಹಿತ್ಯವು ಅನೇಕವಾಗಿರುವಂತೆಯೇ ಅನೇಕ ಕಾಲ ದೇಶಗಳಿಗೆ ಸೇರುತ್ತದೆ. ಪಂಚಮುಖಿಯವರು ಗುರುತಿಸುವಂತೆ ಸುಮಾರು ಹನ್ನೆರಡನೆಯ ಶತಮಾನದಿಂದ ಹಿಡಿದು ಇಪ್ಪತ್ತನೆಯ ಶತಮಾನಗಳಿಗೆ ವ್ಯಾಪಿಸಿದೆ. ಪಂಚಮುಖಿಯವರು ಇದನ್ನು ನಾಲ್ಕು ಕಾಲಘಟ್ಟಗಳಾಗಿ ವಿಂಗಡಿಸುತ್ತಾರೆ(ನೋ. ಕರ್ನಾಟಕ ಸಾಹಿತ್ಯ ಸಮೀಕ್ಷೆ, ಪು.೨೦೫). ವಿಭಿನ್ನ ಕಾಲಘಟ್ಟದಲ್ಲಿ ಆಗಿಹೋದ ದಾಸರನ್ನು ಒಂದು ನಿರ್ದಿಷ್ಟ ಪರ್ಯಾಯವಾದಿ ನೆಲೆಯಡಿ ತರುವುದು ಉಚಿತವಾಗಲಾರದು. ಏಕೆಂದರೆ ಯುಗಧರ್ಮವು ರೂಪಿಸುವ ಒತ್ತಡಗಳಿಗನುಸಾರಿಯಾಗಿ ಪರ್ಯಾಯವಾದಿ ಗ್ರಹಿಕೆಗಳು ಬೆಳೆಯುತ್ತಾ ಹೋಗುತ್ತವೆ. ಉತ್ತರ ಕರ್ನಾಟಕವೇ ಪ್ರಧಾನ ದಾಸ ಪಂಥದ ನೆಲೆ ಎಂದು ಗುರುತಿಸಿದರೂ ಮೈಸೂರು, ಮುಳಬಾಗಿಲು, ಬೆಂಗಳೂರು, ಮೈಸೂರು, ಚಿತ್ರದುರ್ಗ ಸೀಮೆಯ ದಾಸರುಗಳು ತಮ್ಮದೇ ಆದ ಪ್ರಾದೇಶಿಕ ಅಸ್ಮಿತೆಗಳನ್ನು ಹೊಂದಿದ್ದು ದಾಸ ಪಂಥದಲ್ಲಿ ಅವರ ಪಾಲೂ ಸಾಕಷ್ಟಿದೆ. ಕನಕ ಪುರಂದರರ ಕಾಲದ ವಿಜಯನಗರದ ಅರಸರ ಕಾಲದ ಹಿನ್ನೆಲೆಯು ಅವರ ಮನೋಧರ್ಮವನ್ನು ರೂಪಿಸಿದ್ದರೆ, ಬಿಜಾಪುರ ಮುಸ್ಲಿಮ್ ದೊರೆಗಳ ಸೀಮೆಯಲ್ಲಿ ಬದುಕಿದವರಿಗೆ ಭಿನ್ನವಾದ ಪ್ರೇರಣೆ ಸಿಕ್ಕಿರಲೂ ಸಾಕು. ದಾಸ ಸಾಹಿತ್ಯದ ಕೊನೆಯ ಘಟ್ಟದಲ್ಲಿ ಬಂದ ಗೋಪಾಲದಾಸರು, ಜಗನ್ನಾಥದಾಸರು ದಾಸತ್ವವನ್ನು ಒಂದು ಪರಂಪರೆಯಾಗಷ್ಟೇ ಅಲ್ಲದೆ ನಿಜಜೀವನದಲ್ಲೂ ರಾಜಾಶ್ರಯವಿಲ್ಲದೆ ಬಡತನ, ಜೀವನದ ಅನಿಶ್ಚಿತತೆಗಳಿಂದ ಅನುಭವಿಸಿದವರು. ಕನ್ನಡದಲ್ಲಿ ಬರೆಯುವುದು ಇವರಿಗೆ ಜೀವನದ ಪ್ರಶ್ನೆಯೇ ಆಗಿತ್ತು. ಹೀಗಾಗಿ ಪರ್ಯಾಯ ಎನ್ನುವಾಗ ಕಾಲಘಟ್ಟವು ಪ್ರಮಾಣವಾಗುತ್ತದೆ.

ದಾಸ ಸಾಹಿತ್ಯದ ಚರ್ಚೆಗೆ ಸಾಮಾನ್ಯವಾಗಿ ಒದಗುವ ದಾಸರೆಂದರೆ ಪುರಂದರ ಕನಕರು. ಇವರು ಪ್ರತಿನಿಧಿಸುವ ಕಾಲ ಸಾಂಸ್ಕೃತಿಕವಾಗಿ ಮಹತ್ವ ಪಡೆದ ಕಾಲವಾಗಿದೆ. ಇವರ ಕಾಲದಲ್ಲಿ ಜಾನಪದೀಯತೆಯ ಅಭಿವ್ಯಕ್ತಿಗೆ ಮನ್ನಣೆ ಸಿಕ್ಕಿದ್ದು, ಅದನ್ನು ಬಳಸಿಕೊಂಡದ್ದು ಪುರಂದರ ದಾಸ ಮತ್ತು ಕನಕದಾಸರಿಬ್ಬರ ಕಾವ್ಯಕ್ಕೆ ಅನುಕೂಲವಾಗಿದೆ. ಕನ್ನಡದ ಅಭಿವ್ಯಕ್ತಿ ಮತ್ತು ಗೇಯಗುಣಗಳನ್ನು ಬಳಸಿಕೊಂಡಿದ್ದಕ್ಕೆ ಚಾರಿತ್ರಿಕವಾದ ಹಿನ್ನೆಲೆಯೂ ಇದೆ. ಇದೇ ಸಂದರ್ಭದಲ್ಲಿಯೇ ವ್ಯಾಸಕೂಟ ಮತ್ತು ದಾಸಕೂಟಗಳ ಪಂಗಡಗಳ ಕವಲು ಉಂಟಾಗಿದ್ದರಿಂದ ದಾಸ ಕೂಟದ ದೇಸಿ ಅಭಿವ್ಯಕ್ತಿ ಮಹತ್ವ ಪಡೆಯುತ್ತದೆ. ವ್ಯಾಸಕೂಟವು ವ್ಯಾಸರ ಪ್ರಮಾಣವನ್ನು ಅಂದರೆ ವೈದಿಕ ಗ್ರಂಥಗಳನ್ನು ಆಧರಿಸಿ ಶಾಸ್ತ್ರಾಚಾರಗಳಿಗೆ ಪ್ರಾಮುಖ್ಯತೆ ನೀಡಿತು. ವೈದಿಕತೆಯ ಶುದ್ಧತೆಯನ್ನು ಕಾಪಾಡಿಕೊಳ್ಳುವ ಆಸಕ್ತಿಯನ್ನೂ ತೋರಿತು. ದಾಸಕೂಟವು ಇದಕ್ಕೆ ಪ್ರತಿಯಾಗಿ ಭಾಗವತ ಧರ್ಮದ ನಿಷ್ಠೆಯನ್ನು ಉಳಿಸಿಕೊಂಡು ಆಚರಣೆಗಳನ್ನು ನಿರಾಕರಿಸಿತು ಅಥವಾ ಆಚರಣೆಗಳನ್ನು ಸರಳಗೊಳಿಸಿಕೊಳ್ಳಲೆತ್ನಿಸಿತು. ಇದು ನಿರ್ದಿಷ್ಟವಾಗಿ ಇದೇ ಕಾಲದಲ್ಲಿ ನಡೆಯಿತು ಎಂದು ಹೇಳಲು ಆಧಾರವಿಲ್ಲ ಎಂಬುದು ವಿದ್ವಾಂಸರ ಅಭಿಪ್ರಾಯ(ನೋಡಿ, ಸಾ.ಕೃ.ರಾಮಚಂದ್ರರಾಯರ ದಾಸ ಸಾಹಿತ್ಯ ಮತ್ತು ಸಂಸ್ಕೃತಿ), ಇದೇನೆ ಆದರೂ ದಾಸಕೂಟದಲ್ಲಿ ನಾನಾ ಧರ್ಮೀಯರು ಹಾಗೂ ಜಾತಿಗಳವರು ಬಂದು ಸೇರಲು ಅವಕಾಶವಾಯಿತು. ದಾಸತ್ವದ ದೀಕ್ಷೆ ಪಡೆದುಕೊಂಡವರು ತಮ್ಮದೇ ಆದ ಪರ್ಯಾಯ ಆಚರಣೆಗಳ ಮೂಲಕ ಅಸ್ತಿತ್ವವನ್ನು ಪಡೆದುಕೊಂಡರು.

(ಆ)

ದಾಸ ಸಾಹಿತ್ಯವು ‘ಅನುಸರಿಸುವ’ ಧೋರಣೆಯುಳ್ಳದ್ದಾಗಿರುವುದರಿಂದ ಅದರಲ್ಲಿ ಸಂಸ್ಕೃತೀಕರಣದ ಪ್ರಕ್ರಿಯೆಯು ನಿಚ್ಚಳವಾಗಿ ಕಾಣುತ್ತದೆ. ಸಂಸ್ಕೃತೀಕರಣದ ಕಾರಣದಿಂದ ನೆಲ ಸಂಸ್ಕೃತಿ ಹಾಗೂ ಉನ್ನತೀಕರಣದ ವಾಂಛೆಗಳು ಪರಸ್ಪರ ಮೇಲಾಟ ನಡೆಸುತ್ತವೆ. ಸಂಸ್ಕೃತೀಕರಣದಲ್ಲಿ ಸ್ವೀಕಾರ ಮತ್ತು ನಿರಾಕರಣ ಎರಡೂ ಇವೆ. ಸಾಮಾನ್ಯವಾಗಿ ಸ್ವೀಕರಣೆಯು ಪ್ರಜ್ಞಾಪೂರ್ವಕವಾಗಿದ್ದು ತನ್ನನ್ನು ಪ್ರಭಾವಿಸಿದ ಸಂಸ್ಕೃತಿಯ ಲಕ್ಷಣಗಳನ್ನು ಹೊಂದಿಸಿಕೊಳ್ಳುವ ಕಾತುರವಿರುತ್ತದೆ. ಮೌಲ್ಯ ವಿವೇಚನೆಯು ಸಹ ಇದರಂತೆ ಬದಲಾಯಿಸಿಕೊಳ್ಳುತ್ತಲಿರುತ್ತದೆ. ಇದೇ ವೇಳೆ ಅಸಮರ್ಪಕವೆನ್ನಿಸುವ ಸಂಗತಿಗಳನ್ನು ಅಪ್ರಜ್ಞಾಪೂರ್ವಕವಾಗಿ ಕಳಚಿಕೊಂಡು ತನ್ನ ಮೂಲ ಸಂಸ್ಕೃತಿಗೆ ತಕ್ಕನಾಗಿ ತಿದ್ದಿ ಹದಗೊಳಿಸುವ ಪ್ರಕ್ರಿಯೆಯೂ ಅಲ್ಲಿ ನಡೆಯುತ್ತಿರುತ್ತದೆ. ಇದರಿಂದ ದಾಸಪಂಥದಲ್ಲಿ ವೈರುಧ್ಯವು ಸಾಮಾನ್ಯವಾದ ಅಂಶ.

ದಾಸರಲ್ಲಿ ಹರಿಪಾರಮ್ಯವೇ ಮುಖ್ಯ ಎಂಬ ಆಧಾರದ ಮೇಲೆ ದಾಸ ಸಾಹಿತ್ಯದ ಕೇಂದ್ರವನ್ನು ಭಾಗವತ ಹಾಗೂ ಪುರಾಣಗಳು ಎಂದು ಗುರುತಿಸಲಾಗುತ್ತದೆ. ಹರಿಯೇ ಕೇಂದ್ರ ಎಂಬ ಭಾವನೆಯು ಸಂಸ್ಕೃತಿಯನ್ನು ಮೇಲಾಟಕ್ಕೆ ಕಾರಣವಾಗುತ್ತದೆ. ಹರಿ ದೈವದ ಮುಂದೆ ‘ಬಣಗು ದೈವ’ಗಳ ತುಲನೆ ಮಾಡಿ ನೋಡುವ ದಾಸರ ಅನೇಕ ಕೀರ್ತನೆಗಳು ಹರಿಕೇಂದ್ರವನ್ನು ಸ್ಥಾಪಿಸಲೆತ್ನಿಸುತ್ತಿರುತ್ತವೆ. ಕನಕದಾಸರ ಕೀರ್ತನೆಯನ್ನು ಇಲ್ಲಿ ಉದಾಹರಿಸಬಹುದಾದರೆ, ‘ರಂಗನಾಥನು ಇರಲಿಕ್ಕೆ ಜಂಗುಳಿ ದೈವಗಳೇಕೆ? ಎನ್ನುತ್ತಾ ಇತರೆ ಪ್ರಾದೇಶಿಕ ದೇವಿಯರನ್ನು ಖಂಡಿಸುತ್ತಾರೆ.

ಎಕ್ಕನಾತಿ ಎಲ್ಲಮ್ಮ ಮಾರಿ ದುರ್ಗಿಯು ಚೌಡಿ
ಅಕ್ಕರಿಂದಲಿ ಪೂಜೆ ಮಾಡಲೇಕೆ
ಕಿಕ್ಕಿರಿದು ಯಮನ ದೂತರೆಳೆದೊಯ್ವಾಗ
ಶಕ್ತೇರು ಬಿಡಿಸಿಕೊಂಡಾರೇನೊ ಮರುಳೆ||

ಇಂತಹ ಅನೇಕ ಕೀರ್ತನೆಗಳು ಏಕಕಾಲದಲ್ಲಿ ಪಿತೃಪ್ರಧಾನತೆ ಮತ್ತು ಯಜಮಾನಿಕೆಯನ್ನು ಸಂಸ್ಕೃತೀಕರಣದ ಹೆಸರಲ್ಲಿ ಸ್ಥಾಪಿಸಿಕೊಳ್ಳುತ್ತಿರುತ್ತವೆ. ದೇಸಿ ಕನ್ನಡ ಹಾಗು ಜಾನಪದೀಯವಾದ ಅಂಶಗಳ ಮೂಲಕ ದಾಸರು ವೈದಿಕ ಪುರಾಣಗಳನ್ನು ಕಟ್ಟಿಕೊಟ್ಟರು (ಉದಾಹರಣೆಗೆ ಅರಿಶಿನ ಎಣ್ಣೆ ಹಾಡು, ಮುಯ್ಯದ ಹಾಡುಗಳು, ಲಾಲಿಪದ ಇತ್ಯಾದಿಗಳನ್ನು ದಾಸ ಸಾಹಿತ್ಯ ಬಳಸಿಕೊಂಡಿದ್ದು. ಇದರಿಂದ ಕೆಲವೊಮ್ಮೆ ದೇಸೀಯತೆಯ ಮೂಲದಲ್ಲಿದ್ದ ಅನೇಕ ಸಂಗತಿಗಳು ವಿಸ್ಮೃತಿಗೆ ಸರಿದು ಹೋಗುತ್ತವೆ. (ಇಂಗ್ಲೆಂಡಿನ ಚರ್ಚುಗಳು ಆರಂಭದಲ್ಲಿ ಇದೇ ಮಾರ್ಗವನ್ನು ಅನುಸರಿಸಿದವು. ಮೂಲನಿವಾಸಿಗಳ ಜಾತ್ರೆ ಮತ್ತು ಹಬ್ಬಗಳನ್ನು ಬಳಸಿಕೊಂಡು ಕ್ರಿಶ್ಚಿಯಾನಿಟಿಯನ್ನು ಪ್ರಚಾರ ಮಾಡಿದವು). ಹೀಗಾಗಿ ಸ್ಥಳೀಯ ಸಂಸ್ಕೃತಿ ಮತ್ತು ಆಚರಣೆಗಳನ್ನು ಬಳಸಿಕೊಂಡ ದಾಸ ಪಂಥವು ವೈದಿಕ ಧರ್ಮದ ಲಕ್ಷಣಗಳನ್ನು ಪ್ರಧಾನವಾಗಿರಿಸಿಕೊಳ್ಳುವುದನ್ನು ಎಚ್ಚರಿಕೆಯಿಂದ ಗಮನಿಸಬೇಕಾಗುತ್ತದೆ.

ದಾಸ ಸಾಹಿತ್ಯದಲ್ಲಿ ದಾಸತ್ವವು ಒಂದು ವಿಶಿಷ್ಟ ಭಾವ. ಇದು ಬರುಬರುತ್ತಾ ಆ ಪಂಥದ ಕುರುಹು ಎಂಬಂತೆ ಆಯಿತು. ದಾಸಪಂಥದಲ್ಲಿ ಅನೇಕ ಜಾತಿ ಮತಗಳ ದಾಸರು ಇದ್ದು ಇವರ ಸೇರ್ಪಡೆಯಿಂದಲೇ ದಾಸತ್ವದ ನಿಜಭಾವವು ಸ್ವಾಭಾವಿಕವೋ ಎನ್ನುವಂತೆ ಕಾಣುತ್ತದೆ. ಅಂದರೆ ಬ್ರಾಹ್ಮಣನಾದ ದಾಸರಿಗೆ ಊಂಛ ವೃತ್ತಿಯಿಂದ ದೇಹಿ ಎನ್ನುವ ಭಾವವು ಬರುವುದರಿಂದ ದಾಸತ್ವವು ನೆಲೆಗೊಂಡರೆ, ಜಾತಿಯಲ್ಲಿ ಕೀಳಾದ ದಾಸರಿಗೆ ಸ್ವಾಭಾವಿಕವಾಗಿಯೇ ಕೀಳುಗಳೆದು ನೋಡಿಕೊಳ್ಳುವ ಭಾವ ಇರುತ್ತದೆ. ಬಡತನವನ್ನು ಹೊದ್ದ ಬ್ರಾಹ್ಮಣರು ಹಾಗೂ ಜಾತಿಯಿಂದ ಕೀಳಾದ ಇತರರಲ್ಲಿ ದಾಸತ್ವವು ಸಹಜವಾಗಿಯೇ ನೆಲೆಗೊಂಡಿರುತ್ತದೆ.

ದಾಸತ್ವದಿಂದ ಭಗವದ್ ಭಕ್ತಿಯು ಉಂಟಾಗುವುದರೊಂದಿಗೆ ಬಿಡುಗಡೆಯ ಉಪಾಯವೂ ಇಲ್ಲಿಯೇ ಹೊಳೆಯುತ್ತದೆ. ಭಕ್ತಿಯ ಪರಿಕಲ್ಪನೆಯನ್ನು ನಾರದೀಯ ಮತ್ತು ಶಾಂಡಿಲ್ಯ ಸೂತ್ರಗಳು ಸಾದ್ಯಂತವಾಗಿ ವಿವರಿಸುತ್ತಾ ಭಕ್ತಿ ಎನ್ನುವುದು ವ್ಯಕ್ತಿತ್ವ ವಿಕಸನದ ಹಾದಿ ಎಂಬುದನ್ನು ಪ್ರತಿಪಾದಿಸುತ್ತವೆ. ಕನ್ನಡದ ದಾಸ ಸಂದರ್ಭದಲ್ಲಿ ಭಕ್ತಿ ಎನ್ನುವುದು ನೈತಿಕತೆಯ ಆತ್ಮವಿಕಾಸನದ ದಾರಿಯಾಗಿದೆ. ಇಲ್ಲಿ ದಾಸತ್ವವನ್ನೇ ಹೆಗ್ಗುರುತನ್ನಾಗಿ ಮಾಡಿಕೊಂಡು ಅಹಂಕಾರವನ್ನು ಕಳೆದುಕೊಳ್ಳುತ್ತಾ ದಾಸತ್ವದ ಹೊಸ ವರ್ಗೀಕರಣವೇ ಆಗುತ್ತದೆ. ಅವಧೂತ ಪರಂಪರೆಯಲ್ಲಿ ಸಾಧಾರಣವಾಗುವ ಕ್ರಿಯೆಯಂತೆಯೇ ದಾಸತ್ವವು ಸಾಧಾರಣೀಕರಿಸಿಕೊಳ್ಳುವ ಯತ್ನ. ಇದನ್ನು ಶಾಸ್ತ್ರೀಯವಾದ ಭಕ್ತಿ ಪ್ರಮೇಯಕ್ಕೆ ಕಟ್ಟಿಹಾಕಲು ಸಾಧುವೆನಿಸದು. ಈ ಕೆಳಗಿನ ಉದಾಹರಣೆಗಳನ್ನು ಗಮನಿಸಬಹುದು.

೧. ಬಂಟನಾಗಿ ಬಾಗಿಲ ಕಾಯ್ವ ಹರಿಯ
ಎಂಜಲ ಹರಿವಾಣಗಳ ಬೆಳಗುವೆ
ಸಂಜೆಗೆ ಪಂಜಿನ ದಾಸನಾಗಿರುವೆ
ಮೀಸಲ ಊಳಿಗ ನಾ ಮಾಡಿಕೊಂಡಿರುವೆ
………..
ದಾಸರದಾಸರ ದಾಸರ ಮನೆಯ ದಾಸ ನಾನು
-ಕನಕದಾಸ

೨. ಭಗವಂತ ದಾಸರ ಮನೆಯ ಬಾಗಿಲ ಕಾಯುವ ಕುನ್ನಿ ನಾನು
-ಗೋಪಾಲದಾಸ

೩. ತಿರುಕದಾಸ ನಾನು ಹರಕುದಾಸ ನಾನು
ಕರಕರಿಯನ್ನು ಮಾಡಿ ಪರರ ಪೀಡಿಸಿ, ಉದರ
ಪೊರೆವ ದಾಸನು ನಾನು, ಬರಿಯ ದಾಸ ನಾನು
-ವಿಜಯ ವಿಠ್ಠಲ

ಬಸವಣ್ಣ ಅವರ ಡೋಹಾರ ಕಕ್ಕಯ್ಯನ ಮನೆಯ ಆಳುಮಗ ನಾನು ಎನ್ನುವ ವಚನದ ಸಾಲಿನಂತೆಯೇ ಇರುವ ಈ ಮೇಲಿನ ಸಾಲುಗಳು ಅಭಿಮಾನವನ್ನು ಕಳಚಿಕೊಳ್ಳಲು ಬಯಸುತ್ತಿರುವುದನ್ನು ಹೇಳುತ್ತಿವೆ. ದಾಸರು ತಮ್ಮ ದಾಸತ್ವದಲ್ಲಿ ಹೆಮ್ಮೆ ಇಡುವುದು ಒಂದು ರೀತಿಯ ಪರ್ಯಾಯ ಮಾರ್ಗ, ಕೀಳು ಸ್ಥಿತಿಯನ್ನು ಉನ್ನತೀಕರಿಸಿಕೊಂಡು ಅದಕ್ಕೊಂದು ಮೌಲ್ಯವನ್ನು ಕಟ್ಟಿಕೊಳ್ಳುವ ಮೂಲಕ ಸಾಮಾನ್ಯತೆಯಿಂದ ಅಸಾಮಾನ್ಯತೆಯನ್ನು ಪಡೆದುಕೊಳ್ಳುವ ಪ್ರತಿರೋಧದ ಕ್ರಿಯೆಯೂ ಆಗುತ್ತದೆ. ದಾಸ ಸಾಹಿತ್ಯದಲ್ಲಿ ಈ ಕ್ರಮವು ನೇರವಾಗಿ ಅಲ್ಲದಿದ್ದರೂ ತನ್ನ ಒಳದಾರಿಗಳಿಂದ ಆತ್ಮಾಭಿಮಾನದ ಸಂಗತಿಯಾಗಿ ನಿರೂಪಿಸಲ್ಪಡುತ್ತದೆ. ಇದರಿಂದ ದಾಸಪಂಥಕ್ಕೆ ಒಂದು ಚಹರೆಯು ಲಭಿಸಿತು.

(ಇ)
ದಾಸಪಂಥವು ಆಚರಣೆಯಿಂದ ಮುಕ್ತವಾಗಿದೆ. ದೀಕ್ಷೆ ತೆಗೆದುಕೊಂಡವರಿಗೆ ‘ಜುಟ್ಟು ಜನಿವಾರ ಇಲ್ಲ’ ಎಂಬುದು ಸರ್ವೇ ಸಾಧಾರಣವಾಗಿ ಪ್ರಚಲಿತವಾಗಿತ್ತು. ದಾಸ ಪಂಥವು ಬಾಹ್ಯವಾದ ಆಚರಣೆಗಳಿಗಿಂತ ಮಾನಸಿಕವಾದ ಶ್ರದ್ಧೆ, ನೀತಿವಂತ ಸಾಮಾಜಿಕ ನಡವಳಿಕೆಗಳ ಮೇಲೆ ಹೆಚ್ಚಿನ ಒತ್ತನ್ನು ನೀಡುತ್ತದೆ. ಹೀಗೆ ಕ್ರಿಯಾವಿಧಿಗಳನ್ನು ಬಿಟ್ಟುಕೊಟ್ಟಿದ್ದರಿಂದ ದಾಸಪಂಥವು ಎಲ್ಲರಿಗೂ ಸಲ್ಲಬಹುದಾದ ಗುಂಪಾಯಿತು. ಇದರಿಂದ ದಾಸಕೂಟವು ಅಮೂರ್ತವಾಗುತ್ತಾ ಬಂದು, ಮಾನಸಿಕವಾದ ಸ್ಥಿತಿಯಲ್ಲಿಯೇ ಅದು ತನ್ನ ನೆಲೆ ಕಂಡುಕೊಳ್ಳಲು ಯತ್ನಿಸಿತು. ‘ದಾಸಕೂಟ ಕಾಲ್ಪನಿಕವಾದ ಭಾವಪ್ರಧಾನವಾದ ಒಂದು ವ್ಯವಸ್ಥೆಯಲ್ಲಿ ನಿಂತಿರುವುದು ಸ್ವಾರಸ್ಯ. ಆದರೆ ದಾಸಕೂಟದ ವ್ಯವಸ್ಥೆ ವಿಚಿತ್ರವಾದುದು. ಅದಕ್ಕೆ ಒಂದೆಡೆ ನೆಲೆಯೆಂಬುದಿಲ್ಲ.. ..ಅದಕ್ಕೆ ಎಲ್ಲಿಯೂ ಯಾವ ಬಗೆಯದೂ ಮೂರ್ತ ಸ್ವರೂಪವಿಲ್ಲ. ಅದಕ್ಕೆ ಹೊರಗಿನ ಆಕಾರವಿಲ್ಲ’ ಎಂದು ಸಾ.ಕೃ.ರಾಮಚಂದ್ರರಾಯರು ಗುರುತಿಸುತ್ತಾರೆ. (ದಾಸಸಾಹಿತ್ಯ ಮತ್ತು ಸಂಸ್ಕೃತಿ, ಪ.೨೩೩). ಮುಂದುವರೆದು ಹೇಳುವುದಾದರೆ, ದಾಸರ ಗುರಿ ಬಿಂಬೋಪಾಸನೆ; ಅಂತರಂಗ ಸಾಧನೆ, ಮಾನಸ ಪೂಜೆ(ಸಾ.ಕೃ.ಅದೇ ಪು.೨೨೨), ಭಾಗವತ ಸಂಪ್ರದಾಯದಲ್ಲಿ ಪೂಜೆ ವೇದೋಕ್ತವೇ ಆಗಬೇಕಿಲ್ಲ(ಸಾ.ಕೃ, ಅದೇ) ಎನ್ನಲಾಗುತ್ತದೆ. ಉದಾಹರಣೆಗೆ, ಕನಕದಾಸರ ಈ ಸಾಲು:

ತೀರ್ಥ ಪಿಡಿದವರೆಲ್ಲ ತಿರುನಾಮಧಾರಿಗಳೆ

ವಿಜಯದಾಸರ ಕೀರ್ತನೆಯು ಇದೇ ಭಾವವನ್ನು ವಿವರಿಸುತ್ತದೆ:
ಅಂತರಂಗದಲ್ಲಿ ಹರಿಯ ಕಾಣದವ ತಾ ಹುಟ್ಟುಗುರುಡನೊ
……….
ಹರಿಯ ನಾಮವೇ ಸ್ನಾನ, ಹರಿನಾಮವೇ ಧ್ಯಾನ
ಹರಿಯ ನಾಮವೇ ಗಾನ, ಹರಿನಾಮವೇ ಜ್ಞಾನ

ದಾಸರಲ್ಲಿ ಹೊರಗಿನ ಆಚರಣೆಗಳನ್ನು ಖಂಡಿಸುವ ಪರಿಪಾಠವಿದೆ. ಅಂತರಂಗ ಶುದ್ಧವಿಲ್ಲದವರ ಆಚಾರಗಳನ್ನು ವ್ಯಂಗ್ಯೋಕ್ತಿಗಳಿಂದ ಸಂಬೋಧಿಸುವ ಪದಗಳೂ ದಾಸರಲ್ಲಿ ಹೇರಳವಾಗಿವೆ.

ನೀರ ಮುಳುಗಲು ಏಕ ನಾರಿಯನು ಬಿಡಲೇಕೆ
ವಾರಕೊಂದುಪವಾಸ ಇರಲೇತಕೆ?
ನಾರಸಿಂಹನ ದಿವ್ಯ ನಾಮವನು ನೆನೆದರೆ
ಘೋರಪಾತಕವೆಲ್ಲಾ ಇಂಗಿ ಹೋಗುವುವು
– ಕನಕದಾಸ

ಚರ್ಮವ ತೊಳೆದರೆ ಕರ್ಮವು ಹೋಹುದೆ
ಮರ್ಮವ ತಿಳಿಯದೆ ಬಿಕನಾಶಿ
-ಪುರಂದರದಾಸ

ದಾಸರು ಆಚರಣಾ ನಿಷ್ಠೆಯನ್ನು ಅಂತರಂಗದ ಬಯಲಿಗೆ ವರ್ಗಾಯಿಸಲು ಯತ್ನಿಸವುದು ಅವರ ಪರ್ಯಾಯ ಚಲನೆಯನ್ನು ತೋರುತ್ತದೆ. ಸಂರಚನೆಗಳನ್ನು ನಿರಾಕರಿಸಲು ದಾಸ ಪಂಥವು ಅಮೂರ್ತತೆಯತ್ತ ತಿರುಗಿದ್ದು ಸಹಜವಾಗಿಯೇ ಇದೆ. ಮೂಲತಃ ದಾಸ ಪಂಥವು ಪ್ರೊಟೆಸ್ಟೆಂಟ್ ಗುಂಪಾದ್ದರಿಂದ ಸಹಜವಾಗಿಯೇ ಅದರಲ್ಲಿ ಆಚರಣೆಗಳ ಬಗೆಗೆ ಆಕ್ರೋಶವಿದೆ. ಶಾಸ್ತ್ರನಿಷ್ಠೆಯನ್ನು ತೊರೆದು ಭಾವನಿಷ್ಠೆಯಲ್ಲಿ ಇರುವ ಹಂಬಲದಿಂದ ಮಾನಸಿಕವಾದ ಸದಾಚಾರ, ಶೀಲಗಳನ್ನು ತನ್ನ ಪಂಥದ ಚಿಹ್ನೆಗಳಾಗಿಸಿಕೊಳ್ಳಲು ಆಸಕ್ತವಾಗಿದ್ದು ದಾಸ ಪಂಥದ ಅಸ್ಮಿತೆಯಾಗಿದೆ. ಇದಕ್ಕೆ ಪೂರಕವಾಗಿ ದಾಸ ಸಾಹಿತ್ಯದಲ್ಲಿ ಪ್ರಚಲಿತವಾಗಿರುವ ಅಜಾಮಿಳನೆಂಬ ಧರ್ಮಭ್ರಷ್ಟ ಬ್ರಾಹ್ಮಣನ ಜೀವನ ಕಥೆಯನ್ನು ಗಮನಿಸಬೇಕು. ಅಜಾಮಿಳ ಎಂಬ ಬ್ರಾಹ್ಮಣನು ಶೂದ್ರ ಸ್ತ್ರೀಯೊಡನೆ ಕಾಲ ಕಳೆಯುತ್ತಿದ್ದು, ತನ್ನ ಕೊನೆಗಾಲದಲ್ಲಿ ತನ್ನ ಮಗನಾದ ನಾರಗನನ್ನು ಹೆಸರು ಹಿಡಿದು ಕರೆಯುವಾಗ ಅವನಿಗೆ ವಿಷ್ಣು ಸಾಯುಜ್ಯವು ಸಿಗುತ್ತದೆ ಎನ್ನಲಾಗಿದೆ. ಆಚಾರಗಳನ್ನು ಕೈಬಿಟ್ಟ ಮನುಷ್ಯನು ಆಚರಣೆಗಳನ್ನು ಬಿಟ್ಟರೂ ದೇವ ನಾಮ ಸ್ಮರಣೆಯಿಂದಲೇ ಉನ್ನತ ಪದವಿಯನ್ನು ಪಡೆಯಬಹುದು ಎಂಬ ಅರ್ಥವನ್ನು ದಾಸ ಸಾಹಿತ್ಯ ಸೂಚಿಸುತ್ತಿರುವಂತಿದೆ. ದೇವರು ‘ಆತ್ಮಾಂತರಾತ್ಮ ನೆಲೆಯಾದಿಕೇಶವ’. ಹಾಗೆಂದೇ ಅವನ ಸ್ತುತಿಗೆ ಮಹತ್ವವಿದೆ. ಆದರೆ ‘ನೀನ್ಯಾಕೋ ನಿನ್ನ ಹಂಗ್ಯಾಕೊ’ ಎಂದು ನಾಮಬಲವನ್ನು ನೆಚ್ಚಿದ್ದ ದಾಸರು ಕಡೆಗೂ ವಾಲಿದ್ದು ಸಗುಣಾರಾಧನೆಯ ಪ್ರತಿಮೆಯ ಬಣ್ಣನೆಯತ್ತಲೇ ಎಂಬುದು ವೈರುಧ್ಯದಂತೆ ಕಾಣುತ್ತದೆ.

ಇದೇ ಬಗೆಯ ಅಮೂರ್ತತೆಯು ಜಾತಿಮತಗಳ ಆಚರಣೆಗಳನ್ನೂ ನಿರಾಕರಿಸುತ್ತದೆ. ಮೊದಲಿಗೆ ದಾಸ ಪಂಥವು ಜಾತಿ/ಕುಲಗಳನ್ನೇ ನಿರಾಕರಿಸುತ್ತದೆ. ಪುರಂದರದಾಸರ ‘ಆವ ಕುಲವಾದರೇನು, ಆವನಾದರೇನು, ಆತ್ಮ ಭಾವವನ್ನರಿತ ಮೇಲೆ’ ಎಂಬ ಸಾಲು, ಕನಕದಾಸರ `ಆತನೊಲಿದ ಮ್ಯಾಲೆ ಯಾತರ ಕುಲವಯ್ಯ’ ಎನ್ನುವ ಸಾಲು ಇದೇ ಅರ್ಥದಲ್ಲಿ ಹೊಮ್ಮಿದಂತವು. ಮೀರುವಿಕೆ ಎನ್ನುವುದು ದಾಸ ದರ್ಶನದಲ್ಲಿ ಬಹುಮುಖ್ಯ ಆದರೆ ದಾಸ ಪಂಥವು ಜಾತಿಯನ್ನು ಸಾಮಾಜಿಕ ಪದ್ಧತಿಯಾಗಿ ಗ್ರಹಿಸಿತೇ ಎನ್ನುವ ಪ್ರಶ್ನೆಯನ್ನಿಲ್ಲಿ ಎತ್ತ ಬೇಕಾಗುತ್ತದೆ. ಸಾಮಾನ್ಯವಾಗಿ ಭಕ್ತಿ ಚಳವಳಿಯ ಪಂಥಗಳಲ್ಲಿ ಜಾತಿಯನ್ನು ಶೀಲ, ನೈತಿಕತೆಯ ಆಧಾರದ ಮೇಲೆ ನಿರ್ಧರಿಸುವುದು ನಿರ್ಧಾರಕ ಅಂಶವಾಗಿದೆ. ಅಂತೆಯೇ ದಾಸ ಪಂಥವೂ ಸಹ ಅಮೂರ್ತವಾದ ಶೀಲವನ್ನು ಪ್ರಮುಖವಾಗಿ ನಿರೂಪಿಸುತ್ತಾ ಜಾತಿಯ ವಾಸ್ತವಕ್ಕೆ ಪರ್ಯಾಯವನ್ನು ರೂಪಿಸಿಕೊಳ್ಳುತ್ತದೆ. ‘ಹೊಲೆಯ ಹೊರಗಿಹನೆ ಊರೊಳಗಿಲ್ಲವೆ?’ ‘ಪರಧನ ಪರಸತಿ ಅಳುಪಿದವನೇ ಹೊಲೆಯ/ಗುರುಹಿರಿಯರ ಕಂಡು ಎರಗದಿದ್ದವ ಹೊಲೆಯ..’ ಎಂಬ ಪುರಂದರದಾಸರ ಸಾಲುಗಳಲ್ಲಿ ಈ ಬಗೆಯ ಪರಿವರ್ತನೆಯನ್ನು ಗಮನಿಸಬಹುದು. ಆದರೆ ಕಾಲಾಂತರದಲ್ಲಿ ಅಮೂರ್ತತೆಯು ಮೌಲ್ಯವಾಗಿ ಉಳಿಯದೇ ಹೋಯಿತು.’ಭಕ್ತಿ ಪಂಥದ ನೆಲೆಗಳು ಗಟ್ಟಿಗೊಳ್ಳುತ್ತಿದ್ದಂತೆ ಜಾತಿ ವ್ಯವಸ್ಥೆಯನ್ನು ವಿರೋಧಿಸಿದ ಬ್ರಾಹ್ಮಣ ಪ್ರಭುತ್ವವನ್ನು ನಿರಾಕರಿಸಿದಂತಹ ಸಂತರು ಕೊನೆಯಲ್ಲಿ ಒಂಟಿಯಾದುದಷ್ಟೇ ಅಲ್ಲ, ದುರಂತಮಯವಾದ ಜೀವನವನ್ನು ಅನುಭವಿಸಲೇ ಬೇಕಾಯ್ತು'(ರಹಮತ್, ಕರ್ನಾಟಕದ ಸೂಫಿಗಳು, ಪು.೧೯೧). ಇದು ಪರ್ಯಾಯವಾದಕ್ಕೆ ದೊಡ್ಡ ಪೆಟ್ಟನ್ನೇ ಕೊಟ್ಟಂತಾಗಿ ಮತ್ತೆ ಸಂಸ್ಥೆಯ ನೆಲೆಯೂರುವಿಕೆಗೆ ಕಾರಣವಾಗುತ್ತಾ ಬಂದಿತು.

ದಾಸ ಸಾಹಿತ್ಯದ ಬಹುಮುಖ್ಯ ಆಕರಗಳೆಂದರೆ ಪುರಾಣಗಳು, ವೈದಿಕ ಪುರಾಣಗಳನ್ನು ನಿರೂಪಿಸುವಾಗ ನೆಲಕ್ಕೆ ಸಂವಾದಿಯಾದ ಪರ್ಯಾಯಗಳನ್ನು ಅವು ಮಂಡಿಸುತ್ತವೆ. ಅವು ಒಳಪಠ್ಯಗಳಲ್ಲಿ ಹೆಚ್ಚು ಧ್ವನಿಪೂರ್ಣವಾಗಿರುತ್ತದೆ. ಇಂತಹ ಪಠ್ಯಗಳಲ್ಲಿ ನಿರಂತರವಾಗಿ ವರ್ಗೀಕರಣ, ಪುನರ್ ವರ್ಗೀಕರಣಗಳು ನಡೆಯುತ್ತಿರುತ್ತವೆ. ಆ ಮೂಲಕ ಒಳಬಾಳಿನ ಮೌಲಗಳನ್ನು ಅವು ಖಚಿತಗೊಳಿಸಿಕೊಳ್ಳುತ್ತಿರುತ್ತವೆ. ತುಂಬ ಪರಿಚಿತವಾದ ಕನಕದಾಸರ ರಾಮಧಾನ್ಯ ಚರಿತೆಯು ರಾಗಿಯನ್ನು ಮೇಲಕ್ಕೆತ್ತಿ, ‘ಶೂದ್ರಾನ್ನವಾದೆಯಲಾ’ ಎಂಬ ನಿಂದೆಯನ್ನು ಸಾರ್ವಜನಿಕವಾಗಿ ಎದುರಿಸುತ್ತದೆ. ರಾಗಿಗೆ ನ್ಯಾಯ ಸಿಗುವ ಮೂಲಕ ಸಾಮಾಜಿಕ ನ್ಯಾಯವು ಮುಂಚೂಣಿಯಲ್ಲಿ ಬರುತ್ತದೆ. ಇಲ್ಲಿ ವಸ್ತು ಧ್ವನಿಯೇ ಮುಖ್ಯವಾಗುತ್ತದೆ. ಇದೇ ರೀತಿ ಹೆಳವನಕಟ್ಟೆ ಗಿರಿಯಮ್ಮನ ‘ಶಂಕರ ಗಂಡನ ಕಥೆ’ಯಲ್ಲಿ ಜೋಳವು ಅಪವರ್ಗೀಕರಣ ಗೊಂಡಿರುವಂತದ್ದು. ಅದನ್ನು ಹೀನಾಯಗೊಳಿಸಿದ ಮನ್ಮಥನಿಗೆ ಶಿವ ಪಾಠ ಕಲಿಸುತ್ತಾನೆ. ಶಿವ ಇಲ್ಲಿ ಸಾಮಾನ್ಯರ ಪ್ರತಿನಿಧಿ, ಅವನು ತಿನ್ನುವ ಆಹಾರವಾಗಿ ಜೋಳ ಬರುವುದು ಮೌಲೀಕರಣದ ಅಂಶ, ದೇವರನ್ನು ಸಾಮಾನೀಕರಿಸುವ ಮುಯ್ಯದ ಹಾಡುಗಳು, ಅರಿಶಿನದೆಣ್ಣೆ ಶಾಸ್ತ್ರ, ಉರುಟಣೆ ಇತ್ಯಾದಿಗಳಲ್ಲಿ ಪುರಾಣಗಳ ಮರುಕಟ್ಟುವಿಕೆ ಇದೆ. ದೇಸಿಯತೆಯಲ್ಲಿ ತಮ್ಮನ್ನು ಪ್ರಭಾವಿಸಿದ ದೇವರನ್ನು ಕಟ್ಟಿಕೊಳ್ಳುವುದು ಪರ್ಯಾಯವಾದಿ
ನಡೆ.

(ಈ)
ಭಕ್ತರ ಜೀವನೇತಿಹಾಸಗಳನ್ನು ನೋಡಿದರೆ ಅವರು ‘ಉಲ್ಲಂಘನೆ’ ಮತ್ತು ‘ಸಂಕರ’ಗಳ ಮೂಲಕ ಸಂರಚನಾತ್ಮಕ ಬದಲಾವಣೆಯನ್ನು ಕಂಡುಕೊಳ್ಳಲು ಯತ್ನಿಸಿರುವುದು ಕಾಣುತ್ತದೆ. ಭಕ್ತಿ ಪಂಥಗಳಲ್ಲಿ ಕಾಣುವ ಮಹಿಳಾ ಭಕ್ತರು, ಅನುಭಾವಿಗಳು, ಶರಣೆಯರು ದಾಸರು ಇವರು ಮುಖ್ಯ ವಾಹಿನಿಯಲ್ಲಿ ಜಾಗ ಸಿಕ್ಕದವರು. ಪಿತೃಪ್ರಧಾನ ಸಮಾಜವು ಮಹಿಳಾ ಜೀವನದಲ್ಲಿ ವಿಧಿ ನಿಷೇಧಗಳನ್ನು ಹೇರಿ, ಶಾಸ್ತ್ರಾಚಾರಗಳ ಮೂಲಕ ಅವನ್ನು ಸ್ಥಿರಗೊಳಿಸುತ್ತಾ ಬಂದಿರುವುದನ್ನು ಮಹಿಳಾ ಭಕ್ತಿಯರು ಅನುಭಾವಿಕ ನೆಲೆಯಲ್ಲಿ ವಿಮೋಚನೆಗೊಳಿಸಿಕೊಳ್ಳಲೆತ್ನಿಸಿದರು. ಹಾಗೆಂದೇ ಸಮಾಜದಲ್ಲಿ ಅವರ ಪಾತ್ರ ಸಂದಿಗ್ಧ ಹಾಗು ಸಂಕೀರ್ಣವಾಗಿರುತ್ತದೆ. ಅಕ್ಕ ಮಹಾದೇವಿ ಮತ್ತು ಮೀರಾಬಾಯಿಯರ ಜೀವನ ಚರಿತ್ರೆಗಳಲ್ಲಿ ಅವರು ಎದುರಿಸುವ ಪಿತೃಪ್ರಧಾನತೆಯು ಗಂಡಸರ ಮೂಲಕ ಮಾತ್ರವಲ್ಲದೇ, ಶಾಸ್ತ್ರಾಚಾರಗಳು, ಸಂಸ್ಥೆಗಳಲ್ಲಿಯೂ ಇದೆ. ಮದುವೆಯಂತಹ ಸಂಸ್ಥೆಗಳು, ವೈಧವ್ಯದಂತಹ ವಿಧಿಗಳು ಅವರನ್ನು ಸಾಧನೆಯ ಪಥಗಳಿಂದ ದೂರ ಸರಿಸುತ್ತಿರುತ್ತವೆ. ಇಂತಹ ಹೊತ್ತಲ್ಲಿ ಅವರ ಅಭಿವ್ಯಕ್ತಿ ಯಾವ ತೆರನಾದುದು? ಒಂದೊ ಪ್ರತಿಭಟನೆಯ ಮೂಲಕ ಅಥವಾ ಒಳ ಅಥವಾ ಕೆಳದನಿಗಳ ಮೂಲಕ ಪ್ರತಿರೋಧನವನ್ನು ಸೂಚಿಸುವುದು. ಈ ಎರಡೂ ಬಗೆಗಳನ್ನು ಚರಿತ್ರೆಯಲ್ಲಿ ಕಾಣಬಹುದಾಗಿದೆ. ಮೀರಾ ಮತ್ತು ಅಕ್ಕರ ಉದಾಹರಣೆಗಳು ಪ್ರತಿಭಟನೆಯ ಪ್ರಖರ ನೆಲೆಗಳಾದರೆ, ಹರಿದಾಸ ಭಕ್ತಿಯರದು ಅನುಸರಿಸುವ ಮಾರ್ಗದವರು. ವೈದಿಕತೆಯನ್ನು ಪ್ರಧಾನವಾಗಿರಿಸಿಕೊಂಡ ಹರಿದಾಸ ಸಾಹಿತ್ಯದಲ್ಲಿ ಮಹಿಳಾ ಕೀರ್ತನಕಾರ್ತಿಯರು ಹರಿ ಪಾರಮ್ಯವನ್ನು ಒಪ್ಪಿ, ಮಹಿಳಾ ಸತ್ವಗಳನ್ನು ಮಂಡಿಸುವ ಒಳ ಪಠ್ಯಗಳನ್ನು ಸೃಷ್ಟಿಸುತ್ತಾರೆ. ಇದೇ ಅವರ ಶಕ್ತಿಯೂ ಆಗಿದೆ. ಸಾಂಪ್ರದಾಯಿಕತೆಯನ್ನು ನಿರಾಕರಿಸದೆ ಅವರು ಸೃಷ್ಟಿಸುವ ಪುರಾಣಗಳು ಸ್ತ್ರೀ ಅಭಿವ್ಯಕ್ತಿಯ ನಿರೂಪಗಳಾಗಿವೆ. ಹೆಳವನಕಟ್ಟೆ ಗಿರಿಯಮ್ಮನ ಚಿತ್ರಪಟದ ಕಥೆಯ ಸೀತೆ ಮನಸಿನಾಳದಲ್ಲೆಲ್ಲೋ ರಾವಣ ಅಡಗಿ ಕುಳಿತದ್ದನ್ನು ಕಂಡು ಬೆಚ್ಚಿ ಬೀಳುತ್ತಾಳೆ. ಅದು ಗಂಡ ಹೆಂಡಿರ ನಡುವೆ ಭೇದವನ್ನೂ ಉಂಟು ಮಾಡುವುದಲ್ಲದೆ, ಸೀತೆ ರಾಮನಿಂದ ದೂರ ಹೋಗಬೇಕಾಗುತ್ತದೆ. ಹರಪನಹಳ್ಳಿ ಭೀಮವ್ವ ಅವರ ‘ರತಿ ಕಲ್ಯಾಣ’ದಲ್ಲಿ ದ್ರೌಪದಿ ರತೀದೇವಿಯನ್ನು ರಕ್ಷಿಸಲು ಯುದ್ಧಕ್ಕೆ ಹೊರಡುತ್ತಾಳೆ. ಅವಳನ್ನು ಕಳುಹಿಸುವುದು ರುಕ್ಕಿಣಿ, ದ್ರೌಪದಿ ಭೀಮ ದುಶ್ಯಾಸನನ ಕರುಳು ಬಗೆದಂತೆ ಕೌಂಡ್ರಕನ ಒಡಲು ಬಗೆದು ಕರುಳನ್ನು ಕಿತ್ತು ರತಿಯನ್ನು ಬಗಲಲ್ಲಿ ಎತ್ತಿಕೊಂಡು ಬರುತ್ತಾಳೆ. ಈ ಬಗೆಯ ಸ್ತ್ರೀ ಪುರಾಣಗಳು ಅಪರೂಪವೆನಿಸುವಂತವು. ಇಂತಹ ಅಭಿವ್ಯಕ್ತಿ ದನಿಗಳನ್ನು ಸಮೃದ್ಧವಾಗಿ ಹೊಂದಿರುವ ಪಠ್ಯಗಳು ಮಹಿಳಾ ಕೀರ್ತನೆಕಾರರಲ್ಲಿ ಹೆಚ್ಚು ಹೆಚ್ಚು ಕಾಣುವುದು ಆಕಸ್ಮಿಕವಿರಲಾರದು. ಅವರು ತಮ್ಮ ಅಭಿವ್ಯಕ್ತಿಗಾಗಿ ಆರಿಸಿಕೊಂಡ ಪೌರಾಣಿಕ ಪಾತ್ರಗಳನ್ನು ನೆಲಕ್ಕೆ ತಾಗುವ ರೀತಿಯಲ್ಲಿ ಚಿತ್ರಿಸುವುದರೊಂದಿಗೆ ಜನಸಾಮಾನ್ಯರ ಜೀವನವನ್ನು ಮರು ನಿರೂಪಣೆ ಮಾಡುತ್ತಿದ್ದಾರೆ. ಹೀಗೆಂದೇ ಅವರ ಪಠ್ಯಗಳು ಇನ್ನಷ್ಟು ವಿಸ್ತಾರವಾದ ಓದನ್ನು ಬೇಡುತ್ತಿವೆ.

(ಊ)
ಆಧುನಿಕ ಕಾಲದಲ್ಲಿ ದಾಸ ಸಾಹಿತ್ಯದ ದಾಸತ್ವದ ನೆಲೆ ಬೆಲೆ ಏನು ಎಂಬುದೇ ಪ್ರಸ್ತುತವಾದ ಪ್ರಶ್ನೆ. ಈ ಪ್ರಬಂಧದ ಮೊದಲ ಭಾಗದಲ್ಲಿ ಉಲ್ಲೇಖಿಸಿದಂತೆ ದಾಸ ಸಾಹಿತ್ಯವನ್ನು ರಸಪೂರ್ಣವಾಗಿ ಅಥವಾ ಭಕ್ತಿ ಭಾವದಿಂದ ಸವಿಯುವ ದೃಷ್ಟಿಕೋನಗಳನ್ನು ಮೀರಿ ನಿಶ್ಚಿತತೆಗಳನ್ನು ಪ್ರಧಾನವಾಗಿರಿಸಕೊಂಡ ಓದುಗಳು ತುಂಬಿಕೊಳ್ಳುತ್ತಿವೆ. ದಾಸರ ಜಾತಿ, ವರ್ಗ, ಲಿಂಗಗಳ ಹಿನ್ನೆಲೆಯಲ್ಲಿ ಓದುವಾಗ ಯಾಜಮಾನ್ಯ ಧೋರಣೆಯನ್ನು ಪ್ರತಿಪಾದಿಸುವ ಆಚಾರ್ಯರುಗಳ ತತ್ವಗಳನ್ನು ಕನ್ನಡದಲ್ಲಿ ಓದುವ ಉದ್ದೇಶದಿಂದ ಏನಾದರೂ ಫಲಶೃತಿ ದಕ್ಕುವುದುಂಟೇ ಎಂಬ ಆತಂಕ ಇಲ್ಲಿ ಬಾಧಿಸುತ್ತದೆ. ಪರದ ನೆಲೆಗಿಂತ ಇಹದ ಸಂರಚನೆಗಳ ಚೌಕಟ್ಟನ್ನು ವಾಸ್ತವದಲ್ಲಿ ಎದುರಿಸಬೇಕಾದ ಸವಾಲನ್ನೆ ಕೇಂದ್ರೀಕರಿಸಿಕೊಳ್ಳುವ ಹೊತ್ತಿನಲ್ಲಿ ದಾಸ ಸಾಹಿತ್ಯವನ್ನು ಪರ್ಯಾಯವಾಗಿ ನೋಡಲು ಸಾಧ್ಯವಿದೆಯೇ ಎಂಬುದರತ್ತ ಗಮನ ಹರಿಸುವುದು ಒಳ್ಳೆಯದು. ಇಲ್ಲಿ ಈ ಬಗ್ಗೆ ಬಹಳಷ್ಟು ಚಿಂತನೆ ನಡೆಸಿರುವ ಆನಂದ ಝುಂಜರವಾಡರು ಎತ್ತುವ ಕೆಲವು ಪ್ರಶ್ನೆಗಳನ್ನು ಪರಿಗಣಿಸಬೇಕು. ಝುಂಜರವಾಡ ಅವರ ಪ್ರಕಾರ ಮಾಧ್ವರು ನಂಬಿದ್ದು ವೈದಿಕ ವಾದ ಪದ್ಧತಿಯ ಅಪೌರುಷೇಯ ಭಾಷಿಕ ಪ್ರಮಾಣಗಳನ್ನು, ಆಚಾರ್ಯರು ಬರುವುದಕ್ಕಿಂತ ಸ್ವಲ್ಪ ಮುಂಚೆ ಬಂದು ಹೋಗಿದ್ದ ವಚನಕಾರರ ತಾತ್ವಿಕತೆ ನೆಲಮೂಲವಾಗಿದ್ದರೆ, ಆಚಾರ್ಯರು ಅದನ್ನು ಬಿಟ್ಟುಕೊಟ್ಟಿದ್ದಾರೆ. ಇದರಿಂದ ಅವರು ಪ್ರತಿಪಾದಿಸುವ ತತ್ವಜ್ಞಾನವು ಉನ್ನತ ವರ್ಗ/ವರ್ಣಗಳಿಗೆ ಎನ್ನವುದು ವಿದಿತ. ಅದಕ್ಕೆ ಝುಂಜರವಾಡ ಅವರು ರೂಪಕದ ಮೂಲಕ ಪ್ರತಿಪಾದಿಸುವುದೇನೆಂದರೆ, ಹಾಲು ಒಡೆಯುವುದು ಮುಂಚೆ ಅಪ್ರಯೋಜಕ ಎನ್ನಿಸುವ ಸಂಗತಿ ಆಗಿತ್ತು; ಆದರೀಗ ಹಾಲನ್ನು ಒಡೆದು ಪದಾರ್ಥ ಮಾಡಿಕೊಳ್ಳುವ ಸಂಸ್ಕಾರ ಬಂದಿದೆ. ಆ ರೀತಿ ಮಧ್ವ ತತ್ವವೂ ಬೆಳೆಯಬೇಕು. (ಬರದ ನಾಡಿನ ಬರಹಗಳು, ಝುಂಜರವಾಡ), ಈ ಮಾತುಗಳನ್ನು ಎಚ್ಚರಿಕೆಯಿಂದ ಗಮನಿಸಬೇಕು. ಶುದ್ಧತೆಯನ್ನು ಕಾಪಾಡಿಕೊಳ್ಳುವ ಧರ್ಮಗಳು ಸಾಂಸ್ಥಿಕರಣವನ್ನು ಮುಂದುಮಾಡುತ್ತಾ ಆಧುನಿಕ ಕಾಲವನ್ನು ಪ್ರಾಚೀನತೆಗೆ ತಳ್ಳುತ್ತಿರುವುದು ಕಾಲದ ಪಲ್ಲಟಗಳಿಗೆ ಕಾರಣವಾಗುತ್ತಾ ಸಂವಹನದಿಂದ ದೂರ ಉಳಿಯುತ್ತವೆ. ಸಂಕರಗಳು ಯಾವತ್ತೂ ಸಮಾಜದ ಬದಲಾವಣೆಯ ಸೂಚಿಗಳು ಎನ್ನುವುದನ್ನು ಮರೆಯಬಾರದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಣ್ಣು
Next post ಶಿವಸಮಾಗಮ

ಸಣ್ಣ ಕತೆ

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…