ವಿಶಿಷ್ಟ ವಸ್ತು ಸಂಗ್ರಹಾಲಯ

-ರಾವೂಫ್ ಮ್ಯೂಸಿಯಂ

ಈಗ ಬೀಳುತ್ತವೆಯೋ ಆಗ ಬೀಳುತ್ತವೆಯೋ ಎನ್ನುವಂತೆ ತೋರುವ, ಹಿಂದೆ ಹಾಜಿಗಳಿಗಾಗಿ ಕಟ್ಟಿದ್ದ ಕಟ್ಟಡಗಳು ಇಂದು ಸುಮಾರಾಗಿ ಅರ್ಧಕ್ಕಿಂತಲೂ ಹೆಚ್ಚು ಕೆಡವಿ ಹೊಸ ಹೊಸ ಮುಗಿಲೆತ್ತೆರದ ಐಷಾರಾಮಿ ಕಟ್ಟಡಗಳಾಗುತ್ತಿರುವದು ನೋಡಿದಾಗ ನಮಗೆ ಬಹಳ ಆಶ್ಚರ್ಯವೆನಿಸುತ್ತದೆ. ನಾವು ಹದಿನೈದು ವರ್ಷಗಳ ಹಿಂದೆ ಬಂದಾಗ ಹಳೇ ಕಟ್ಟಡಗಳಿಂದ ಕೂಡಿದ ಜೆಡ್ಡಾ ಇತ್ತು. ಇಂದು ಮಹಾ ಬದಲಾವಣೆ. ನಮ್ಮ ಮುಂದೆಯೇ ಇಂತಹ ಬದಲಾವಣೆ ನಂಬಲಸಾಧ್ಯ. ಜೊತೆಗೆ ನೀರು-ಲೈಟುಗಳು ಮಹಾಸಾಧನೆಯೂ ಅಚ್ಚರಿ ಪಡಬೇಕಾದುದೇ. ಕೇವಲ 10-15 ವರ್ಷಗಳಲ್ಲಿ ಈ ಅರಬರು ಅದೆಷ್ಟು ಐಷಾರಾಮಿ ಆಗಿದ್ದಾರೆ ಅಂದರೆ-ಸಾಕಷ್ಟು ಹಣ, ದೊಡ್ಡ ದೊಡ್ಡ ಮನೆಗಳು, ಒಳಗೆಲ್ಲ ವಿದೇಶಿ ಸಾಮಗ್ರಿಗಳಿಂದ ಕೂಡಿದ ಝಗಝಗಿಸುವ ಕೊಠಡಿಗಳು ನೋಡುವಾಗ ಇವರು ತಮ್ಮ ಹಳೆಯ ಸಂಪ್ರದಾಯ ಪೂರ್ತಿ ಬದಿಗೊತ್ತುತ್ತಿದ್ದಾರೆಂದು ಅನಿಸದೇ ಇರದು. ಇನ್ನೊಂದು 20 ವರ್ಷ ಇದೇ ತರಹ ಹಣದ ಬಲ ಜೋರಾಗಿ ನಡೆದರೆ ತಮ್ಮ ಸಂಪ್ರದಾಯ ಸಂಸ್ಕೃತಿ ಮರೆತುಬಿಡುತ್ತಾರೇನೋ.

ಇಂತಹ ಅನೇಕ ಮರೆಯಾಗುತ್ತಿರುವ ಸಂಪ್ರದಾಯಿಕ ಪದ್ಧತಿಗಳನ್ನು ವಸ್ತು ಗಳನ್ನು ಸಂಗ್ರಹಿಸುವಲ್ಲಿ ಸ್ಥಳೀಯ ಆಶಾವಾದಿ ಅಬ್ದುಲ್ ರಾವೂಫ್ ಸಾಕಷ್ಟು ಸಾಹಸ ಮಾಡಿದ್ದಾರೆ..ಇವರ “ರಾವೂಫ್ ಹಸನ್ ಖಾಲೀಲ್ ಮ್ಯೂಸಿಯಂ” ಶುರುವಾಗಿ ಈಗ 10 ವರ್ಷಗಳಾಗಿವೆ. ಇದು ಸರಕಾರದ್ದಾಗಲೀ, ಯಾವ ಗುಂಪಿನ ಜನರದ್ದಾಗಲೀ ಅಲ್ಲ. ಒಂದೇ ವ್ಯಕ್ತಿಯ ಉತ್ಕಟ ಕಲಾಭಿರುಚಿಯ ಸಂಗ್ರಹ. ನಮ್ಮಲ್ಲಿನ ಪೂನಾದ “ಕೇಳ್ಕರ್ ಸಂಗ್ರಹಾಲಯ, ಹೈದರಾಬಾದಿನ ಸಾಲಾರ್ಜಂಗ್ ಮ್ಯೂಸಿಯಯಳಂತೆ. ಪ್ರತಿ ಜನಾಂಗಕ್ಕೂ ತನ್ನದೇ ಆದ ವೈಶಿಷ್ಟ್ಯ ಇರುವದನ್ನುವದು ಇಲ್ಲಿ ಪ್ರತಿಯೊಂದು – ವಸ್ತುವಿನಲ್ಲಿ ತೋರಿಸಿಕೊಟ್ಟಿದ್ದಾರೆ. ಚಿಕ್ಕದರಲ್ಲಿಯೇ ಚೊಕ್ಕಟತೆ ಎದ್ದುಕಾಣುವದು. ನಿಧಾನವಾಗಿ ಪ್ರತಿಯೊಂದು ವಸ್ತುವಿನ ಮೇಲೆ ಕಣ್ಣಾಡಿಸುತ್ತ ಹೋದರೆ ಎರಡು ತಾಸು ಸಾಕು.

ಈ ಮ್ಯೂಸಿಯಂ ಹೊಸದಾಗಿ ಶುರುವಾದಾಗ (84ರಲ್ಲಿ) ಪ್ರವೇಶಧನ 300 ರೂ. ಇತ್ತು. (ನಮ್ಮ ಕಡೆಯ ರೂಪಾಯಿಯಲ್ಲಿ ಯೇ ಪರಿವರ್ತಿಸಿ ಹೇಳುತ್ತಿದ್ದೇನೆ) ಯುರೋಪಿನ ಪ್ರಸಿದ್ಧ ಲೂವ್ರ್ , ವ್ಯಾಟಿಕನ್, ರಿಕ್ಸ್, ಬ್ರಿಟಿಷ್ ಮ್ಯೂಸಿಯಂ ಮುಂತಾದ ವಿಶ್ವಮಾನ್ಯ ಮ್ಯೂಸಿಯಂಗಳನ್ನು ನೋಡಿದ ನಮಗೆ ಇಲ್ಲಿ ಇಷ್ಟು ಹಣ ಕೊಟ್ಟು ನೋಡುವಲತಹದೇನಿಲ್ಲ ಎಂದು ಸುಮ್ಮನೆ ಇದ್ದೆವು. ಮರೆತುಬಿಟ್ಟಿದ್ದವೆಂದರೂ ಸರಿ.

ಅದರೆ 1988ರಲ್ಲಿ ನಮ್ಮ ಕ್ಯಾಂಪಸ್ಸಿನ ಏರಪೋರ್ಟ್ ಸರ್ಕಲ್ ಲೇಡೀಸ್ ವಿಂಗ್‌ದವರು ಒಮ್ಮೆ ಕಾರ್ಯಕ್ರಮ ಹಾಕಿಕೊಂಡರು. ಮ್ಯೂಸಿಯಂ ವ್ಯಕ್ತಿ ಅಬ್ದುಲ್ ಖಾಲೀಲ್ ಜೊತೆ ಮಾತಾಡಿ ಪ್ರವೇಶಧನ ಕಡಿಮೆ ಮಾಡಲು ಕೇಳಿಕೊಂಡರು, ಮೊದಲಿನದು ಅತೀ ದುಬಾರಿಯೆಂದು ಬಹುಶಃ ಪ್ರೇಕ್ಷಕರು ಇರಲಿಕ್ಕಿಲ್ಲ. ಅಂತೆಯೇ ಈಗ ಕಡಿಮೆ ಮಾಡಿದರಂತಾ ಕಾಣುತ್ತದೆ. ಒಮ್ಮಯೇ 45-50 ಮಹಿಳೆಯರು ಬರುತ್ತೇವೆ, ಇನ್ನೂ ಕಡಿಮೆ ಮಾಡಬೇಕೆಂದಾಗ ಕೊನೆಗೆ 100 ರೂಪಾಯಿಗೆ ಇಳಿಸಿದರು.

ಹೊರನೋಟದಲ್ಲಿಯೇ ಮ್ಯೂಸಿಯಂ ತೆರೆದಿಟ್ಟಂತಿದೆ. ಆಕರ್ಷಕ ಬಣ್ಣಗಳ ಆರು ಪ್ರಮುಖ ಕಟ್ಟಡಗಳು ನಿಚ್ಚಳವಾಗಿ ಕಾಣುವವು. ಇವುಗಳೆಂದರೆ. ಮಸೀದಿಗಳು, ಕೋಟೆ ಅಥವಾ ಕಿಲ್ಲೆಗಳ ಮುಂಭಾಗ, ಸೌದಿ ಅರೇಬಿಯದ ಪೂರ್ವ ಇತಿಹಾಸ, ಇಸ್ಲಾಂ ಧರ್ಮ ಹಾಗೂ ಜಾಗತಿಕ ವಿಷಯಗಳೆಂದು. ಒಳಗಿರುವ ಕಲಾಸಂಗ್ರಹ ಪ್ರತಿನಿಧಿಸುವ ಸುಂದರ ಕಲಾತ್ಮಕ ಕಟ್ಟಡಗಳಿವು. ಇವೆಲ್ಲ ಇಸ್ಲಾಮೀಯ ಪದ್ದತಿಯ ಪ್ರಕಾರ ಗುಂಬಜಗಳನ್ನೊಳಗೊಂಡಿವೆ. ಇಲ್ಲಿ ಜಗತ್ತಿನ ಪ್ರಮುಖ ಮುಸ್ಲೀಂ ಗುಂಬಜಗಳ ಚಿಕ್ಕ ಕೃತಿಗಳನ್ನು ಕಾಣುತ್ತೇವೆ. ಉತ್ತರ ಭಾಗದ ಮ್ಯೂಸಿಯಂ ಕಟ್ಟಡದ ಮೇಲೆ ಸಿರಿಯಾ ಗುಂಬಜಗಳು ಕಾಣಿಸಿದರೆ ಪಶ್ಚಿಮದ ಕಡೆಗೆ ಮೊರೆಕ್ಕೊ-ಇಜಿಪ್ತದ ಗುಂಬಜಗಳಿವೆ. ಪೂರ್ವದ ಕಡೆಗೆ ಇರಾಕ್, ಇರಾನ್, ಪಾಕಿಸ್ತಾನಗಳ ಗುಂಬಜಗಳು ಕಾಣುವದರ ಜೊತೆಗೆ ಸೌದಿ ಅರೇಬಿಯದವುಗಳೂ ಇವೆ.

ಈ ಕೆಲವೊಂದು ಗುಂಬಜಗಳಿಗೆ ಒಳಗೆ ಕಿಟಕಿಗಳಿವೆ. ಬಹುಶಃ ಒಳಗಡೆ ಬೆಳಕು ಗಾಳಿಗೆಂದು ಇರಬಹುದು. ಕೆಲವೊಂದಕ್ಕೆ ಬಾಗಿಲುಗಳಿದ್ದು ದಾಟಿ ವಿಶಾಲವಾದ ಬಾಲ್ಕನಿಗೆ ಬರುವಂತಿದೆ. ಪ್ರತಿಯೊಂದೊಂದು ಗುಮ್ಮಟಗಳ ಮೇಲೆ ಅರ್ಧಚಂದ್ರನ ಪತಾಕೆಗಳಿವೆ. ಚರ್ಚ್‌ಗಳ ಮೇಲೆ ಕ್ರಾಸ್ ಕಂಡಂತೆ ಇಲ್ಲಿ ಇವು. ಒಟ್ಟಾರೆ ಸುತ್ತೆಲ್ಲ ಒಂದಕ್ಕಿಂತ ಮತ್ತೊಂದು ಸುಂದರವಾದ 9 ಗುಂಬಜಗಳು ಕಾಣುವವು.

ಮ್ಯೂಸಿಯಂದ ಹೊರಡೆಗಳು ಒಳ್ಳೇ ಬಿಳಿ ಗುಲಾಬಿ ಬಣ್ಣ ಇರುವ ಗ್ರಾನೈಟ್ ಕಲ್ಲುಗಳಿಂದ ಜೋಡಿಸಿರುವದರಿಂದ ಬಹಳ ನುಣಪಾಗಿ ಮಿರಗುತ್ತ ಆಕರ್ಷಿಸುವವು. ಇದರ ಜೊತೆಗೆ ಅಲ್ಲಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಾರ್ಬಲ್ಲದಲ್ಲೂ ಇಸ್ಲಾಂ ಕಲೆ ಎದ್ದು ಕಾಣುವದು. ಸಾಕಷ್ಟು ಖುರಾನಿನ ಪಂಕ್ತಿಗಳನ್ನು ಕೈ ಬರವಣಿಗೆಯಲ್ಲಿ ಸೂಕ್ಷ್ಮವಾಗಿ ಸುಂದರವಾಗಿ ಕೆತ್ತಲಾಗಿದೆ.

ಮ್ಯೂಸಿಯಂದ ಹೊರ ಅಂಗಳದಲ್ಲಿ ಕಾಣುವ 13 ಕಾರಂಜಿಗಳು ಚಿತ್ತಾಕರ್ಷಕವಾದವುಗಳು. ಅವುಗಳಿಗೆಲ್ಲ ನೀರು ಒಳನೆಲದ ಪೈಪುಗಳ ಮುಖಾಂತರ ಒಂದನ್ನೊಂದು ಜೋಡಿಸಿದ್ದರೂ ಅವನ್ನು ಹರಿಬಿಡುವ ವಿನ್ಯಾಸ  ಅಪೂರ್ವ- ವಾದುದು. ಪ್ರತಿಯೊಂದು ಕಾರಂಜಿಗೂ ಒಂದೊಂದು ಅರಬ್ಬಿ ಹೆಸರಿದೆ. ಇವುಗಳಲ್ಲಿ ‘ಜೀರ್’ ಕಾರಂಜಿ ದೊಡ್ಡದಿದ್ದು ನಡುವೆ ದೊಡ್ಡ ಜಾರ್‌ನಿಂದ ನೀರು ಬೀಳುತ್ತದೆ. ಇದರ ಸುತ್ತ ನಾಲ್ಕು ನೀರಿನ ಗ್ಲಾಸುಗಳು, ನಾಲ್ಕು ನೀರಿನ ಫ್ಲಾಸ್ಕ್‌- ಗಳಿವೆ. ಇನ್ನೊಂದು ‘ಜೆಜ್ಹಾ’ ಎನ್ನುವ ಹೆಸರಿನ ಕಾರಂಜಿಯ ಅಕರ್ಷಣೆಯೇ ಬೇರೆ. ಟ್ರೇದೊಳಗೆ ಚಹದ ಪಾಟ್ ಸುತ್ತೆಲ್ಲ ಕಪ್ಪುಗಳು, ಮತ್ತೊಂದು ಸಕ್ಕರೆಯ ಬಟ್ಟಲು, ಇನ್ನೊಂದು ಚಹದ ಬಟ್ಟಲು. ಮತ್ತೊಂದು ಕಾರಂಜಿಯಲ್ಲಿ ಸೌದಿ ಅರೇಬಿಯದ ಧ್ವಜದ ಚಿತ್ರ. ಎರಡು ಕತ್ತಿಗಳು ನಡುವೆ ಖರ್ಜೂರದ ಗಿಡ ಇರುವ ಕಾರಂಜಿ. ಪಕ್ಕದಲ್ಲಿ ಭಾವಿಯಂತೆ ಮಾಡಿದ್ದಾರೆ. ಪ್ರತಿಯೊಂದು ಕಾರಂಜಿಯ ಸುತ್ತೆಲ್ಲ ರಾಶಿಚಕ್ರದ ಚಿತ್ರವನ್ನು ಮಾರ್ಬಲ್‌ದಲ್ಲಿ ಹೊಂದಿಸಲಾಗಿದೆ.

ಒಂದು ದಂದೆಗೆ ತಂಪಾದ ಕುಡಿಯುವ ನೀರಿನ  ವ್ಯವಸ್ಥೆ ಮಾಡಿದ್ದಾರೆ. ಎರಡೂ ಬದಿಗೂ ಮಾರ್ಬಲ್ ಬೆಂಚುಗಳಿದ್ದು, ಅಲ್ಲಿ ಸ್ವಲ್ಪ ಹೊತ್ತು ಕುಳಿತು ಈ ಎಲ್ಲ ಕಾರಂಜಿಗಳನ್ನು ನೋಡಬಹುದು. ಒಟ್ಬಾರೆ ಈ ಹೊರ ಅಂಗಳವೆಲ್ಲ ಒಳ್ಳೇ ಗ್ರಾನಾಯಿಟ್-ಮಾರ್ಬಲ್‌ಗಳಿಂದ ಹೊಂದಿಸಿ ಅರೇಬಿಕ್ ಕಲೆ ಎದ್ದು ಕಾಣುವಂತೆ ಮಾಡಿರುವರು. ಪ್ರವೇಶ ದ್ವಾರದಲ್ಲಿ ಮ್ಯೂಸಿಯಂದ ಮೇಲ್ಗಡೆ ಹೋಗುವ ಬಾಲ್ಕನಿಯ ಕಂಬಗಳು ಕೂಡಾ ಗ್ರಾನೈಟ್ ಎಂದರೆ ಅಶ್ಚರ್ಯವಾಗುತ್ತದೆ. ಕಟ್ಟಡದ ಹೊದಿಕೆಯ ಚೌಕಟ್ಟು ಗಳಲ್ಲೂ ಮೂರು ತರಹದ ಇಸ್ಲಾಂ ಅರ್ಚ್‌ಗಳು ಕಾಣುವವು.

1. ಮೇಲ್ಮಖ ಬಾಣದ ಅಕಾರದವು Î Î Î Î
2. ಅರ್ಧಚಂದ್ರಾಕಾರದವು ˘ ˘ ˘ ˘
3.ಗರಗಸದ ಹಲ್ಲಿನಂತೆ ಅಂಕು ಡೊಂಕಾದವು
^^^^
ಈ ಮ್ಮೂಸಿಯಂದ ಹೊರಗಿನ ಅಂಗಳದ ಸುತ್ತಳತೆ 382 ಮಿಟರ್. ಸುತ್ತೆಲ್ಲ ಕಾಂಪೌಂಡ್ ಗೋಡೆ. ಮಾರ್ಬಲ್‌, ಗ್ರಾನೈಟ್‌ಗಳಿಂದ ಕೂಡಿದ 307 ಕಂಬಗಳನ್ನು ನೋಡುತ್ತೇವೆ.

ಈ ಮೇಲೆ ತಿಳಿಸಿದ  ವಿಷಯಗಳನ್ನೆಲ್ಲ ಪ್ರವೇಶ ಧನ ಇಲ್ಲದೆಯೂ ಕಾಂಪೌಂಡ್ ಸುತ್ತುವರೆದು ನೋಡಬಹುದು. ರಾತ್ರಿ ಸಮಯದಲ್ಲಿ ನೋಡುವದಂತೂ ಇನ್ನೂ ಚೆಂದ.

ಇನ್ನು ಪ್ರವೇಶಧನ ಕೊಟ್ಟು ಒಳಗೆ ಹೋಗೋಣ. ಪೋಟೋ ತೆಗೆದುಕೊಳ್ಳಲು ಅವಕಾಶ ಇಲ್ಲ. ಕ್ಯಾಮರಾ, ಪರ್ಸ್ ಹೊರಗಡೆಯೇ ಪೆಟ್ಟಿಗೆಯಲ್ಲಿಟ್ಟು ಕೇವಲ ಟಿಕೆಟ್ ಹಿಡಿದುಕೊಂಡು ಹೋಗಬೇಕು. ಚಪ್ಪಲೀ-ಬೂಟುಗಳಂತೂ ಹೊರಗಡೆಯೇ ಬಿಡಬೇಕು. ಒಳಗೆ ಬೆಲೆಯುಳ್ಳ ಕಾರ್ಪೆಟ್  ಗಳಿರುವದರಿಂದ ಇವುಗಳಿಗೆ ಮೊನಚು ಷೂ ಗಳಿಂದ ಧಕ್ಕೆಯಾಗಬಾರದೆಂದು ಮುನ್ನಚ್ಚರಿಕೆ.

ಒಳಗಡೆಯೂ 6 ಭಾಗಗಳಾಗಿ ವಿಂಗಡಿಸಿದ್ದಾರೆ. ಅವುಗಳ ಪ್ರತಿ ಹೊರಗಡೆಯೇ ಕಾಣುವದೆಂದು ಹೇಳಿದೆ. ಅದರೂ ಒಳಗಿನ ಅಂದ ಚೆಂದವೇ ಬೇರೆ. ಮೊದಲು ಸೌದಿ ಅರೇಬಿಯದ ಸಾಂಪ್ರದಾಯಿಕ ಕೊಠಡಿಗೆ ಪ್ರವೇಶಿಸಿದಾಗ ಆನಂದಾಶ್ಚರ್ಯಗಳು ಒಮ್ಮೆಲೆ ಆಗುವವು. ಸೌದಿ ಅರೇಬಿಯದ  ಪರಿಚಯ ಇಲ್ಲಿ ಸಿಗುವದು. ಪುಸ್ತಕಗಳಲ್ಲಿ ಓದಿ-ಪರಿಚಯಿಸಿಕೊಳ್ಳುವದಕ್ಕಿಂತ ಸಮಕ್ಷಮ ಕೂಲಂಕಂಷವಾಗಿ ನೋಡಿ ಚರ್ಚಿಸಿ ತಿಳಿದುಕೊಳ್ಳಲು, ಬೇಕಿದ್ದರೆ ಅಭ್ಯಸಿಸಲೂ  ಸದವಕಾಶ ಇಲ್ಲಿದೆ.

ಅರಬ್ಬೀ ಜನರ ರೀತೀನೀತಿ, ವೇಷಭೂಷಣ, ಸಾಮಾಜಿಕ, ಧಾರ್ಮಿಕ, ಆರ್ಥಿಕ ಪರಿಚಯ ನೋಡುವಾಗ ಅವರ ದಿನನಿತ್ಯದ (ಈಗಲೂ ನಡೆಯುತ್ತಿರುವ) ಜೀವನವೇ ಕಂಡು ಬಂದಂತೆನಿಸುತ್ತದೆ. ಉದಾಹರಣೆಗೆ ಹೇಳಬೇಕಿದ್ದರೆ, ಅರಬ್ಬೀ ಸ್ತ್ರೀಯರು ಪರಿಚಯವಿಲ್ಲದವರ ಹತ್ತಿರವಾಗಲೀ ಗಂಡಸರ ಹತ್ತಿರವಾಗಲೀ ಸರಳವಾಗಿ ಮಾತಾಡ
ವರಿತಿಲ್ಲ. ಅಂತೆಯೇ ಅವರಿಗಾಗಿ ವಿರಮಿಸುವ, ಹರಟೆ ಹೊಡೆಯುವ ಕೊಠಡಿಗಳು ಒಳಗಡೆ ಇರುತ್ತವೆ. ಈ ಕೊಠಡಿಗಳಿಗೆ ಕಿಟಕಿಗಳು ಬೇರೆ ರೀತಿಯವು. ಹೊರಗಿನ ಬೆಳಕು ಧಾರಾಳವಾಗಿ ಬರಬೇಕು. ಅದರ ಹೊರಗಿನ ಜನ ಇವರನ್ನು ನೋಡದೆಂತೆ ಕಿಟಕಿಯ ಕಟ್ಟಿಗೆಯ ಪಟ್ಟಿಗಳನ್ನು ಇಳಿಜಾರು ಮಾಡಿರುವರು. ಒಳಗಿನಿಂದ ಇವರು ಏನೆಲ್ಲ
ನೋಡುವಂತಿರುತ್ತದೆ. ಇಂತಹ ಕಿಟಕಿಗಳನ್ನು ನಮ್ಮಲ್ಲಿಯ ಯಾವುದಾದರೂ ಹೋಟೆಲ್ ಗಳಲ್ಲಿ, ಬಾತ್ರೂಂಗೆ ಗ್ಲಾಸಿನವುಗಳಲ್ಲಿ ಹೊಂದಿಸಿದವು ನೋಡಿದರೆ ಅರ್ಥವಾಗುವುದು.

ಮುಂದೆ ಹೋದಂತೆ ಮರುಭೂಮಿ ಜನಾಂಗದ ಪರಿಚಯ ಸಿಗುವುದು. ಮರುಭೂಮಿಯಲ್ಲಿ ಯ ಬುಡವಿನ್‌ಗಳ ಮನೆಗಳು, ಅವರ ವೇಷ ಭೂಷಣಗಳು, ಅವರು ಉಪಯೋಗಿಸುವ ಪಾತ್ರೆ- ಬಟ್ಟೆ, ಸಾಮಾನುಗಳು ಇವೆ. ಪ್ರಮುಖವಾಗಿ ಕಾಣುವ ಅವರು ಹೊಲೆದ ಬಣ್ಣ ಬಣ್ಣದ ಕೌದಿಗಳು ನಮ್ಮ ಕಡೆಯವುಗಳಂತೆಯೇ ಇವೆ.

ಬುಡ್ವಿನ್‌ಗಳು ಟೆಂಟ್‌ಗಳ ಒಳಗೆ ಹೇಗೆ ಸಾಮಾನುಗಳನ್ನು ಅಲಂಕರಿಸಿರುತ್ತಾರೆ ಎನ್ನುವದನ್ನು ಇಲ್ಲಿ ಪ್ರದರ್ಶಿಸಿದ್ದಾರೆ. ಮರುಭೂಮಿಯಲ್ಲಿ ಪ್ರವಾಸಿಸುವಾಗ ಬೇಕಾದ ನೀರಿನ ಸಂಗ್ರಹಗಳ ತೊಗಲಿನ ಚೀಲಗಳು, ಅವುಗಳಿಗೆ ಹೊಂದಿಸಿದ ಸುಂದರ ಬೆಲ್ಟುಗಳು ನೋಡುವಂಥವು.

ಇಲ್ಲಿ ಕಾಣುವ ತೈಲ ಚಿತ್ರಗಳಲ್ಲಿ ಅರೇಬಿಯದ ಜನಜೀವನದ ಜೊತೆಗೆ ಈಗ ಅಳುತ್ತಿರುವ ರಾಜ ಹಾಗೂ ಇತರ ಪ್ರಮುಖ ವ್ಯಕ್ತಿಗಳ ಚಿತ್ರಗಳಿವೆ. ಯುರೋಪಿನ ಕಲಾಕೃತಿಗಳ ಮುಂದೆ ಇವು ಕಡಿಮೆ. ಸಮಯ ಕಳೆಯದೇ ಮುಂದೆ ಹೋದೆವು.

ಮುಂದ ಇಸ್ಲಾಂ ಧಾರ್ಮಿಕ ಕೊಠಡಿ-ಇಲ್ಲಿ ಹೆಚ್ಚಾಗಿ ಧಾರ್ಮಿಕ ವಿಷಯಗಳೇ ಕಾಣುವವು. ಮಸೀದಿಗಳು, ಅವುಗಳೊಳಗೆ ಹಾಕಿದ ಕಾರ್ಪೆಟ್, ಮೇಲೆ ದೀಪದ ಗುಚ್ಛಗಳು(ಶಾಂಡಿಲೀಯರ್) ಬಣ್ಣದ ಕಾಜಿನ ಕಿಟಕಿಗಳು, ಮೊಸಾಯಿಕ್‌ದಲ್ಲಿ ಬಣ್ಣದ ಮಾರ್ಬಲ್‌ಗಳನ್ನು ಹೊಂದಿಸಿದೆ. ನೆಲದ ಮೇಲಿನ ಚಿತ್ರಗಳು, ಇಸ್ಲಾಮಿಕ್ ಭೆಟ್ಟಿ ಅಥವಾ
ಚರ್ಚೆಯ ಸ್ಥಳಗಳದ್ದು ಒಳ್ಳೆಯ ಸೋಫಾಗಳಿಂದ ಕೂಡಿದ ದೊಡ್ಡ ಕೋಣೆಯ ಮಧ್ಯದಲ್ಲಿ ಸಣ್ಣ ಕಾರಂಜಿ ಇದೆ. ಇವೆಲ್ಲವುಗಳಿಗಿಂತ ಕಟ್ಟಿಗೆಯಲ್ಲಿ ಕೊರೆದ ಸೂಕ್ಷ್ಮ ಚಿತ್ರಗಳು, ಅವುಗಳಿಗೆ ಬಳೆದ ಬಣ್ಣ, ಸುಂದರವೆನಿಸಿದರೂ ಒಟ್ಟಾರೆ ನೋಡುವಾಗ ಗಜಿಬಿಜಿ ಅನಿಸಿತು. ಬಹುರ್ಷ ವಿಶಾಲ ಸ್ಥಳವಿಲ್ಲವೆಂದಿರಬೇಕು.

ಸುಂದರ ಲಿಪಿಗಳ (Caligraphy) ದೊಡ್ಡ ಸಂಗ್ರಹ ಬೇರೆ ಯಾವ ಮ್ಯೂಸಿಯಂದಲ್ಲಿ ಕಾಣದಷ್ಟು ಇಲ್ಲಿದೆ. ಎಲ್ಲ ಅರಬ್ ರಾಷ್ಟ್ರಗಳ ಬೇರೆ ಬೇರೆ ಲಿಪಿಗಳನ್ನೆಲ್ಲ ಕಾಣಬಹುದು. ಇದರಲ್ಲಿ ಅಲೆಪ್ಪೋ ಲಿಪಿ ಸರಕಾರಿ ಆಫೀಸುಗಳಲ್ಲಿ ಉಪಯೋಗಿಸುವರು. ಸ್ವಲ್ಪ ಡೊಂಕಾಗಿದ್ದು ನೋಡಲು ಸುಂದರವಾಗಿರುವದು. ಕುಫಿ ಲಿಪಿಯೂ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಆದರೆ ಪರ್ಸಿಯನ್ ಲಿಪಿಯು ಇಲ್ಲೆಲ್ಲ ಸಾಕಷ್ಟು ಪರಿಚಿತವಿರುವದ ರಿಂದ ಸುಂದರವಾಗಿದ್ದು ಹೊಂದಿಸುವಲ್ಲಿ ಸರಳ ಮತ್ತು ನೀಟಾಗಿ ಕಾಣುವದು. ಇವೆಲ್ಲ ಬೇರೆ ಬೇರೆ ಕೈ ಲಿಪಿಗಳು. ನಿಧಾನವಾಗಿ-ಕಲ್ಲು ಕಟ್ಟಿಗೆ ಬಟ್ಟೆಗಳ ಮೇಲೆ ಖುರಾನಿನ ಪಂಕ್ತಿಗಳನ್ನು ಕೆತ್ತಿದವುಗಳು. ಅದರೆ ಈಗಿನ ಆಧುನಿಕ ಯುಗದಲ್ಲಿ ಜೊತೆಗೆ ತ್ವರಿತ ಗತಿಯಲ್ಲಿ ಓಡುವ ಕಾಲದಲ್ಲಿ ಯಾರು ಕೆತ್ತುತ್ತ ಕುಳಿತಾರು ? ಈಗ ಎಷ್ಟೋ ಜನ ಮಶೀನ್‌ಗಳ ಮೇಲೆ ಲಿಪಿಗಳು, ಚಿತ್ರಗಳು ತಯಾರಿಸುತ್ತಿದ್ದಾರೆ. ಕಂಬಗಳ ಮೇಲೆ, ಗೋಡೆಗಳ ಮೇಲೆ ಕಟ್ಟಿಗೆಯ ಪಟ್ಟಿಗಳಲ್ಲಿ-ಅರಿವೆಯ ಪಟ್ಟಿಯ ಮೇಲೆ ಎಲ್ಲ ಕಡೆಗೆ ಖುರಾನಿನ ಪಂಕ್ತಿಗಳಿವೆ.

ಮಂದಿನ ಕೋಣೆಯಲ್ಲಿ ಕೆಲವೊಂದು ಆಕರ್ಪಕ ವಸ್ತುಗಳಿವೆ. ಚೈನಾ ಮಣ್ಣಿನ ಪಾತ್ರೆಗಳಿಂದ ಹಿಡಿದು ಕ್ರಿಸ್ಟಲ್‌ಗಳ ವರೆಗೆ ಬಣ್ಣ ಬಣ್ಣಗಳಿಂದ ಕೂಡಿದ ಸಾಮಾನುಗಳಿವೆ. ಆಚೆಗೆ ಇರುವ ಆಭರಣಗಳ ಕೋಣೆಯಂತೂ ಬಹಳಷ್ಟು ಹೊತ್ತು ನಿಂತು ನೋಡು ವಂತಿದೆ. ಎಷ್ಟೋ ಸುಂದರ ಸುಂದರ ಕೆತ್ತನೆಯನ್ನು ಹೊಂದಿದೆ. ಬಳೆ-ಉಂಗುರಗಳು, ಕೊರಳ ಹಾರಗಳು, ಕಿವಿಯೋಲೆ ಇತ್ಯಾದಿ. ನಮ್ಮ ಭಾರತೀಯ ಕೊರಳಹಾರಗಳು-ಕಿವಿಯೋಲೆ ಇಲ್ಲಿ ಅಧಿಕ. ಜೊತೆಗೆ ಒಳ್ಳೆಯ  ಹವಳ, ರತ್ನಗಳ ಸಂಗ್ರಹ ಸಾಕಷ್ಟಿದೆ. ಬಹುಶಃ ಈ ಕೋಣೆಯಲ್ಲಿ ನಮ್ಮ ಮಹಿಳಾ ಮಂಡಲಿ ಕಳೆದಷ್ಟು ಸಮಯ ಬೇರೆ ಎಲ್ಲೂ
ಕಳೆಯಲಿಲ್ಲ. ಕೆಲವು ಯುರೋಪಿಯನ್ನ ಅಮೇರಿಕನ್ನ ಮಹಿಳೆಯರು ಮಾಡುವ ಅತಿಯಾದ ಸಾಮಾನುಗಳ ಹೊಗಳಿಕೆ ಅಲ್ಲಲ್ಲಿ ಬೇಸರವೂ ತರುತ್ತದೆ. ನೊಡಿದದೆಲ್ಲ ಬ್ಯೂಟಿಫುಲ್, ಪ್ರೆಟೀ, ನೈಸ್‌-ಹೀಗೆ ಉದ್ಗಾರ ತೆಗೆಯುತ್ತ ಮತ್ತೂ ಮತ್ತೂ ವರ್ಣಿಸುತ್ತಿದ್ದರು. ಪ್ರತಿಯೊಂದು ಸಾಮಾನಿನ ಮುಂದೆ ಪರಿಚಯ ಪಟ್ಟಿ ಇರುತ್ತದೆ.

ಮುಂದ ನಾಣ್ಯಗಳ ಸಂಗ್ರಹ ಕೋಣೆ ಇಲ್ಲಿ ಎಲ್ಲ ದೇಶಗಳ ನಾಣ್ಯಗಳು ನೋಟುಗಳನ್ನು ನೋಡುತ್ತೇವೆ. ನಂತರ ಶಸ್ತ್ರಗಳ ಅಧಿಕ ಸಂಗ್ರಹ. ಮೊದಲ ಮಹಡಿಯ ಮೇಲೆ ಒಳ್ಳೇ ಪೀಠೋಪಕರಣಗಳು ಇವೆ.

ಮುಂದಿನ ಜಗತ್ತಿನ (ಜಾಗತಿಕ) ಕೋಣೆಯಲ್ಲಿ ಬೇರೆ ಬೇರೆ ದೇಶಗಳ ಪರಿಚಯ ಅಲ್ಪ ಸ್ವಲ್ಪ ತಿಳಿಯುವಂತೆ ಮಾಡಿದ್ದಾರೆ. ಇಜಿಪ್ತ ಸುಮೇರಿಯೆನ್, ಗ್ರೀಕ್, ರೋಮ್ ಪರ್ಷಿಯನ್, ಜಪಾನ್, ಮುಂತಾದವುಗಳ ಕಡೆಯಿಂದ ಒಳ್ಳೇ ಕಲಾತ್ಮಕ ವಸ್ತು ಗಳನ್ನು ತಂದಿಟ್ಟಿದ್ದಾರೆ. ಮೊಗಲ್, ಸ್ಪೆನಿಷ್, ಟರ್ಕಿಷ್ ಪದ್ದತಿಯ ಆಚರಣೆಗಳನ್ನೆಲ್ಲ ಕಾಣುವೆವು. ಯುರೋಪಿಯನ್ ಪದ್ಧತಿಯ ಬೆಡ್‌ರೂಂ, ಬಾತ್ರೂಂಗಳು. ಅರೇಬಿಯನ್ ಪದ್ಧತಿಯ ಮನೆ ಸಾಮಾನುಗಳೂ ಇವೆ. ಕೆಲವೊಂದು ಸಲ ಅದನ್ನೇ ಎರಡೆರಡು ಕಡೆಗೆ ಹೊಂದಿಸಿರುವದರಿಂದ ತಿರು ತಿರುಗಿ ನೋಡಲು ಬೇಸರವೆನಿಸುವದು. ಏಷ್ಯಯಾ ವಿಭಾಗದಲ್ಲಿ ಒಳ್ಳೊಳ್ಳೆಯ ಸಂಗ್ರಹ ಇದೆ. ಇಲ್ಲಿ ನಮ್ಮ ಭಗವದ್ಗೀತೆಯ ಕೃಷ್ಣನ ಬೆಳ್ಳಿಯ ರಥ ಕೂಡ ಇದೆ.

ಒಟ್ಬಾರೆ ಇಸ್ಲಾಮೀಯ ತತ್ವ ಹಿನ್ನೆಲೆಯಾಗಿಟ್ಟುಕೊಂಡು ಇಸ್ಲಾಂ ದೇಶಗಳ ರೂಪ ರೇಷೆಗೆ ಹೆಚ್ಚು ಪ್ರಾಮುಖ್ಯತೆ ಕೊಟ್ಟುದ್ದನ್ನು ಇಲ್ಲಿ ಕಾಣುವೆವು. ಅದು ಸಹಜವೇ ಆಗಿದೆ. ಇದು ಒಬ್ಬ ವ್ವಕ್ತಿಯ ಅಭಿರುಚಿ ಎಂದ ಮೇಲೆ ಅವನಿಗನಿಸಿದ್ದು ಮಾಡುವ ಹಕ್ಕು ಇದ್ದೇ ಇದೆ. ಆದರೂ ಪರವಾಗಿಲ್ಲ- ಅಬ್ದುಲ್ ಖಾಲೀಲ್ ಸಾಕಷ್ಟು ಪರಿಶ್ರಮ ತೆಗೆದುಕೊಂಡಿದ್ದಾರೆ. ಸಾಕಷ್ಟು ಅಭ್ಯಾಸ ಮಾಡಿದ್ದಾರೆ, ಎಲ್ಲದಕ್ಕೂ ಮೇಲಾಗಿ ಸಾಕಷ್ಟು ಹಣ ಸುರಿಯುವ ಧಾರಾಳತನವನ್ನೂ ಮೆರೆದಿದ್ದಾರೆ.

ಇದನ್ನು ಕಟ್ಟಬೇಕೆನ್ನುವ ವಿಚಾರ ತಮಗೆ ಬಂದದ್ದು ಹಾಗೂ ತಮ್ಮ ಅನುಭವಗಳನ್ನೆಲ್ಲಾ ತಮ್ಮ ಅಫೀಸಿನಿಂದ ಎದ್ದು ಬಂದು ಹೊರಗಡೆಗೆ ನಿಂತು ಹೇಳತೊಡಗಿದರು. ಅಬ್ದುಲ್ ಖಾಲೀಲ್‌ರ ಮೊದಲನೆಯ ಸಂಗ್ರಹವೆಂದರೆ ಅವರ ತಾಯಿಯಕೊಡುಗೆಯಿಂದ ಬಂದ ಕಟ್ಟಿಗೆಯ ಹಗುರಾದ ಬೂಟುಗಳು. ಅವಕ್ಕೆ ಬೆಳ್ಳಿ ಎಳೆಗಳ ರೇಖುಗಳಿದ್ದು ಬಹಳ ಅಕರ್ಷಕವೆನಿಸಿತಂತೆ. ಅದನ್ನೇ ಜೋಪಾನವಾಗಿಟ್ಟುಕೊಂಡಿದ್ದರಂತೆ. ನಂತರ ಕೈರೋದಲ್ಲಿ ವಿದ್ಯಾರ್ದಾಥಿಯಾದಾಗ ನೋಡಿದ ಮಸೀದಿಗಳು, ಮ್ಯೂಸಿಯಂಗಳು, ಬಹಳ ಪರಿಣಾಮ ಮಾಡಿದವಂತೆ. ನಂತರ ಬೇರೆ ಬೇರ ದೇಶಗಳಿಗೆಭೆಟ್ಟಿಯಾದಾಗ ನೋಡಿದ ಅನೇಕ ಅನುಭವಗಳು ಸ್ಪೂರ್ತಿಯಾದವಂತೆ. ಈ ಸ್ಪೂರ್ತಿಯೇ
ಅನೇಕ ಸುಂದರ ವಸ್ತುಗಳ ಸಂಗ್ರಹಣೆಗೆ ಕಾರಣವಾದವಂತೆ. ಸುಮಾರು 1974ರಿಂದ ವಸ್ತುಗಳ ಸಂಗ್ರಹಣೆ ನಡೆಸಿದ್ದಾರೆ. ಇನ್ನೂ ಬೆಳೆಯುತ್ತಲೇ ಇದೆ. 1985ರಲ್ಲಿ ಸಾರ್ವಜನಿಕರಿಗೆ ನೋಡಲು ಅವಕಾಶ ಮಾಡಿಕೊಟ್ಟುರು. ಸುಮಾರು 14,000 ವಸ್ತುಗಳನ್ನು 67 ಕೊಠಡಿಗಳಲ್ಲಿ ಚೊಕ್ಕಾಗಿ ಹೊಂದಿಸಿದ್ದಾರೆ. ಸಾಹಿತ್ಯ, ಇತಿಹಾಸ, ವಿಜ್ಞಾನಗಳ
ಸಂಗ್ರಹಣೆಯೂ ಮೆಚ್ಚಬೇಕಾದಷ್ಟಿದೆ ಇಲ್ಲಿ.

ಮೊದಲು ಸ್ವಂತಕ್ಕಾಗಿ ಸಂಗ್ರಹಣೆ ಶುರುವಾದದ್ದು ನಂತರ ವಿಸ್ತರಿಸಿ ಇಂದು ಜಗತ್ತಿನಲ್ಲಿ ಇದೂ ಒಂದು ಮುಖ್ಯವಾದ ಖಾಸಗಿ ವಸ್ತು ಸಂಗ್ರಹಾಲಯಗಳ ಪಟ್ಟಿಯಲ್ಲಿ ಸೇರಿದೆ ಅಂದರೆ ಅಚ್ಚರಿಪಡುವ ವಿಷಯವೇ. ಕೊನೆಗೆ ಮ್ಯೂಸಿಯಂದ ಮೇಲ್ಭಗದ ಕೋಣೆಯ ಅಕರ್ಷಣೆ ತೋರಿಸಲು ತಾವೇ ಸ್ವತಃ ಮುಂದಾದರು. ಮರುಭೂಮಿಯ ದೃಶ್ಯ. ಅದರಲ್ಲಿ ಬುಡವಿನ್‌ಗಳ ಅಕರ್ಷಕ ಟೆಂಟ್. ವಿಶಾಲವಾದ ಈ ಟೆಂಟದ ಒಳಗಡೆ ಹೊರಗಡೆ ಕುರಿಯ ಉಣ್ಣೆಯ ಕಂಬಳಿಗಳಿಂದ ಹೊದೆಸಿದ್ದಾರೆ. (ನಮ್ಮ ಕಡೆಯಂತೆಯೇ ಕರಿ ಬಿಳಿ ಕಂಬಳಿಗಳು) ಒಳಗೆ ಇಂಬಾಗಿ ಆಧಾರವಾಗಿ  ಕೂಡ್ರಲು ಲೋಡ್‌ಗಳು, ಚಹಾ ತಟ್ಟೆಬಟ್ಟಲುಗಳು, ನಡುವೆ ದೊಡ್ಡ ಚಹಾದ ಹೂಜಿ. ಜೊತೆಗೆ ಒಂಟೆ ಚರ್ಮದ ನೀರು ತುಂಬುವ ಚೀಲಗಳು. ಈ ಎಲ್ಲ  ಸ್ವಾಭಾವಿಕವಾಗಿರುವರಿತೆಯೇಮಾಡಿದ್ದಾರೆ.

ಮತ್ತೊಂದು ಕೋಣೆಯಲ್ಲಿ “Spring time in Mughal India” ಎಂದು ಮೊಘಲರ್ ದರ್ಬಾರ್ ಇದೆ.  ಮತ್ತೊದೆಡೆಗೆ ವಿಶಾಲವಾದ ಕೋಣೆ. ಅದನ್ನು ಪ್ರೇಯರ್ (Prayer) ಹಾಲ್ ಎಂದು ಉಪಯೋಗಿಸುವರು.

ಎಷ್ಟೋ ಜನರಿಗೆ ಗತಕಾಲಿನ ವಸ್ತುಗಳನ್ನು ಕೂಡಿಸುವ ಆಸೆ ಇದ್ದರೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣ ಹಾಕಿ ಮ್ಯೂಸಿಯಂ ಮಾಡುವದು ಸಾಧ್ಯವಿಲ್ಲ. ಅಬ್ದುಲ್ ಖಾಲಿಲ್‌ಗೆ ಈಗ 50-55 ವರ್ಷಗಳಾದರೂ ಇರಬಹುದು. ಇನ್ನೂ ಬಹಳ ವಸ್ತುಗಳನ್ನು ಸಂಗ್ರಹಿಸುವ ಅಸೆಯಂತೆ. ನೋಡಲು ಗಟ್ಟಿ ಮುಟ್ಟಾದ ವ್ಯಕ್ತಿ. ಇನ್ನೂ ಮ್ಯೂಸಿಯಂ ವಿಸ್ತರಿಸುವಲ್ಲಿ ಸಂಶಯವೇ ಇಲ್ಲ. ವಿಸ್ತರಿಸುತ್ತಾರೆ. ಜೆಡ್ಡಾ ಜನರಿಗೆ, ಜೊತೆಗೆ ಸೌದಿ ಅರೇಬಿಯಕ್ಕೆ ಇದೊಂದು ಅವರ ಅತ್ಮೀಯ ಕಾಣಿಕೆ ಎಂದು ಹೇಳಬಹುದು.

ನಾನು ಊರಿಗೆ ಬಂದು ಇಲ್ಲಿ ನೆಲೆಸಿದ ಮೇಲೆ ಈ ದಿನಗಳಲ್ಲಿ ನಮ್ಮ ಸಾಹಿತಿ ಶ್ರೀ ಎಚ್.ಎಲ್. ನಾಗೇಗೌಡರು ಬೆಂಗಳೂರು ಬಳಿಯ ರಾಮನಗರದಲ್ಲಿ ಬೆಳೆಸುತ್ತಿರುವ “ಜಾನಪದ ಲೋಕ” ನೋಡಿದೆ. ನಮ್ಮ ಭಾರತದ ಪರಿಸ್ಥಿತಿಯಲ್ಲಿ, ಇಲ್ಲಿ ಕಚೇರಿಗಳಲ್ಲಿ ಕಾಗದ ಪತ್ರಗಳು ಚಲಿಸುವ ವೇಗವನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡಿದಾಗ, ಖಚಿತವಾಗಿ ಇದು ಅಬ್ದುಲ್ ಖಾಲೀಲ್‌ರ ಸಾಹಸಕ್ಕಿಂತ ದೊಡ್ಡದು ಎನ್ನಿಸಿದೆ. ಯಾವ ದೇಶವೇ ಆಗಲಿ, ಆ ನಾಡಿಗೆ ಹೆಮ್ಮೆಯುಂಟಾಗುವುದು ಇಂಥ ಜನರ ಪ್ರಯತ್ನಗಳಿಂದಲೇ.

***

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾನೇರಿದೆತ್ತರಕೆ
Next post ಹಾಡಬೇಕು

ಸಣ್ಣ ಕತೆ

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

cheap jordans|wholesale air max|wholesale jordans|wholesale jewelry|wholesale jerseys