ಪದಾರ್ಥ ಚಿಂತಾಮಣಿ

ಪದಾರ್ಥ ಚಿಂತಾಮಣಿ

ಓದಿನಲ್ಲಿ ಹಲವು ರೀತಿಗಳಿರುತ್ತವೆ: ಕೆಲವು ಪಠ್ಯಗಳನ್ನು ನಾವು ಶೀಘ್ರಗತಿಯಲ್ಲಿ ಓದಿ ಮುಗಿಸುತ್ತೇವೆ: ಯಾಕೆಂದರೆ ಅವುಗಳ ಸಾರಾಂಶವಷ್ಟೇ ನಮಗೆ ಬೇಕಾಗುವುದು -ಪತ್ರಗಳು, ಪತ್ರಿಕೆಗಳು, ಜನಪ್ರಿಯ ಕತೆ ಕಾದಂಬರಿಗಳು ಇತ್ಯಾದಿ. ಇನ್ನು ಕೆಲವನ್ನು ನಿಧಾನಗತಿಯಲ್ಲಿ ಓದಿಕೊಂಡು ಹೋಗುತ್ತೇವೆ: ಉದಾಹರಣೆಗೆ ಸಂಕೀರ್ಣವಾದ ವೈಚಾರಿಕ ಲೇಖನಗಳು, ಗಂಭೀರ ಸಾಹಿತ್ಯ ಇತ್ಯಾದಿ-ಇಲ್ಲಿ ನಮಗೆ ಬೇಕಾಗಿರುವುದು ಸಾರಾಂಶವಷ್ಟೇ ಅಲ್ಲ, ಇಡಿಯಾದ ಅರ್ಥ, ಆ ಅರ್ಥ ಪ್ರಕಟಗೊಳ್ಳುವ ಪರಿ. ಮೊದಲ ರೀತಿಯ ಓದನ್ನು ಅಪೇಕ್ಷಿಸುವ ಬರವಣಿಗೆಯನ್ನು ರೊಲಾನ್ ಬಾರ್ತ್ readerly text ‘ವಾಚನೀಯ ಪಠ್ಯ’ ಎಂದೂ ಎರಡನೆ ರೀತಿಯ ಬರವಣಿಗೆಯನ್ನು writerly text ‘ಲೇಖನೀಯ ಪಠ್ಯ’ ಎಂದೂ ಕರೆಯುತ್ತಾನೆ. ಮೊದಲನೆ ರೀತಿಯಲ್ಲಿ ಓದುಗ ಸುಮ್ಮನೆ ಓದುತ್ತ ಹೋಗುತ್ತಾನೆ-ಅದರಲ್ಲಿ ಓದುಗನೊಬ್ಬ ಭೋಗಿಯಾಗುತ್ತಾನೆ; ಎರಡನೆಯ ರೀತಿಯಲ್ಲಿ ಓದುಗ ತಾನೇ ಬರೆಯುತ್ತ ಹೋಗುತ್ತಾನೆ; ಎಂದರೆ ಓದುಗ ಖುದ್ದಾಗಿ ಪಠ್ಯವನ್ನ ಸೃಜಿಸಬೇಕಾಗುತ್ತದೆ-ಇಲ್ಲಿ ಓದುಗ ಉತ್ಪಾದಕನೂ ಆಗಿರುತ್ತಾನೆ!

ಓದಿನ ಈ ಭಿನ್ನತೆಗೆ ಪಠ್ಯದ ಆಂತರಿಕ ಗುಣ ಸಾಕಷ್ಣುಮಟ್ಟಗೆ ಕಾರಣವಾಗಿದ್ದರೂ, ಓದಿನ ಹೊಣೆಗಾರಿಕೆ ಅಂತಿಮವಾಗಿ ಇರುವುದು ಓದುಗನ ಮೇಲೆಯೇ ಅಲ್ಲದೆ ಲೇಖಕನ ಮೇಲಲ್ಲ. ಸಾಮಾನ್ಯವಾಗಿ ಓದುಗರು ಕೇವಲ ಭೋಗಿಗಳಾಗಿರಲು ಮಾತ್ರ ಇಷ್ಟಪಡುತ್ತಾರೆ. ಯಾಕೆಂದರೆ ‘ಲೇಖನೀಯ’ ಓದಿಗೆ, ಇಂದು ಸಾಧಾರಣವಾಗಿ ಅಲಭ್ಯವಾಗಿರುವ, ಹೆಚ್ಚಿನ ಪರಿಶ್ರಮ ಹಾಗೂ ಕಾಲಾವಕಾಶ ಬೇಕಾಗುತ್ತದೆ. ಆದ್ದರಿಂದ ನಡುನಡುವೆ ಪಠ್ಯದಲ್ಲಿ ಎಡವಿದರೂ ಅದನ್ನು ಹಾರಿಸಿಕೊಂಡು ಓದುತ್ತೇವೆ: ಬಾಹುಕನ ರೂಪದಲ್ಲಿದ್ದ ನಳ ರಥವನ್ನು ಹಾರಿಸಿದಂತೆ! ಈ ನಾಗಲೋಟದ ನಡುವೆಯೂ ಋತುಪರ್ಣನಂತೆ ವೃಕ್ಷದ ಎಲೆಗಳನ್ನು ಎಣಿಸಬಲ್ಲವರು-ಅರ್ಥಾತ್ ಪಠ್ಯಕ್ಕೆ ಗಮನ ಕೊಡಬಲ್ಲವರು-ಅಪರೂಪವೇ ಸರಿ. ಇಂದಿನ ವೇಗವರ್ಧಿತ ಯುಗ ಭೋಗ ಸಂಸ್ಕೃತಿಯ ಯುಗವೂ ಆಗಿರುವುದು ಕಾಕತಾಳೀಯವಲ್ಲ.

ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’ದ ಮೊದಲನೆ ಅಧ್ಯಾಯದಲ್ಲಿ ಕುಕವಿನಿಂದೆಯ ಸಂದರ್ಭ ‘ಮುಂತೆ ಸರಿಯಿಲ್ಲೆಂದು ಪೊಗಳ್ದವರು ಪೊರಮಟ್ಟ ಪಿ೦ತವನ ಕವಿತೆಯೇನೆಂದು ನಿಂದಿಸಿ’ ಎಂಬ ಮಾತು ಬರುತ್ತದೆ. ಇದೇನು, ಸರಿಯಿಲ್ಲ ಎನ್ನುವುದು ಹೊಗಳಿಕೆ ಹೇಗಾಗುತ್ತದೆ ಎಂದು ನಾವು ಆಶ್ಚರ್ಯಪಡಬಹುದು. ರಾಘವಾಂಕ ಆರಂಭದಲ್ಲೇ ತೂಕಡಿಸಿದನೇ? ಖಂಡಿತಾ ಇಲ್ಲ. ‘ಸರಿಯಿಲ್ಲ’ ಎಂದರೆ ಇಲ್ಲಿ ಎಣೆಯಿಲ್ಲ ಎಂಬ ಅರ್ಥ: ಸರಿ ಎಂಬ ಪದಕ್ಕೆ ಸಮಾನ, ಎಣೆ, ಹೋಲಿಕೆ ಮುಂತಾದ ಪದಗಳು ಸೂಚಿಸುವ ಅರ್ಥವೂ ಇದೆ. ಕವಿಯ ಮುಂದೆ ಆಹಾ ನಿನ್ನ ಕವಿತೆಗೆ ಎಣೆಯಿಲ್ಲ ಎಂದು ಹೊಗಳಿದವರು ಕವಿ ಹೊರಟುಹೋದ ಮೇಲೆ, ಅವನ ಬೆನ್ನ ಹಿಂದೆ, ಏನಿವನ ಕವಿತೆ ಇದು ಎಂದು ನಿಂದಿಸುವ ಪ್ರಸಂಗವನ್ನು ರಾಘವಾಂಕ ಇಲ್ಲಿ ವರ್ಣಿಸಿದ್ದಾನೆ ಅಷ್ಟೆ. ಆದರೆ ನಮಗೆ ‘ಸರಿ’ ಎಂಬ ಪದ ತಟ್ಟನೆ ‘ತಪ್ಪು’ ಎಂಬುದರ ವಿರೋಧಶಬ್ದವಾಗಿ ಅನಿಸುವುದರಿಂದ, ‘ಸರಿಯಿಲ್ಲ’ ಎನ್ನುವುದನ್ನು ‘ತಪ್ಪಾಗಿದೆ’ ಎಂದು ಅರ್ಥಮಾಡಿಬಿಡುತ್ತೇವೆ. ಕರ್ತೃಪದ ಲೋಪವಾಗಿರುವುದರಿಂದ ಈ ತಪ್ಪರ್ಥಕ್ಕೆ ಎಡೆಯಾಗಿದೆ. ಆದರೆ ಸ್ವಲ್ಪ ಯೋಚಿಸಿದರೆ ತಪ್ಪರ್ಥ ಮಾಯವಾಗಿ ಸರಿಯಾದ ಅರ್ಥ ಹೊಳೆಯುತ್ತದೆ.

ಕುವೆಂಪು ಅವರು ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯದ ಆರಂಭದ ಸಂಚಿಕೆಯಲ್ಲಿ ವೀಣಾಪಾಣಿಗೆ ವಂದಿಸುತ್ತ, ‘ಕೃಪೆಗೆಯ್ ತಾಯೆ, ಪುಟ್ಟನಂ, ಕನ್ನಡದ ಪೊಸಸುಗ್ಗಿ ಬನದ ಈ ಪರಪುಟ್ಟನಂ’ ಎನ್ನುತ್ತಾರೆ. ಪುಟ್ಟ ಎಂದರೆ ಕವಿ ಪುಟ್ಟಪ್ಪ ಆದರೆ ‘ಪರಪುಟ್ಟ’ ಎಂದರೆ ಯಾರು? ಪರರ ಪಾಲಾದ (ಅರ್ಥಾತ್ ಅನಾಥನಾದ, ಬಡ) ಪುಟ್ಟನೆಂದೇ? ಹೀಗೆ ಉಡಾಫೆಯ ಅರ್ಥಮಾಡಿದರೆ ಅದು ತಪ್ತಾಗುತ್ತದೆ. ರೂಢಿಯಲ್ಲಿಲ್ಲದ ಪದ ಇದು: ನಿಘಂಟುವಿನ ಮರೆಹೊಗದೆ ಉಪಾಯವಿಲ್ಲ. ನಿಘಂಟು ನೋಡಿದರೆ ಗೊತ್ತಾಗುತ್ತದೆ ಪರಪುಟ್ಟ ಎಂಬಲ್ಲಿನ ಪುಟ್ಟ ಶಬ್ದಕ್ಕೂ, ಪುಟ್ಟಪ್ಪ ಎಂಬ ಹೆಸರಿನಲ್ಲಿರುವ ಪುಟ್ಟ ಶಬ್ದಕ್ಕೂ ಧ್ವನಿಯಲ್ಲಲ್ಲದೆ ಇನ್ನು ಯಾವ ಸಂಬಂಧವೂ ಇಲ್ಲ ಎನ್ನುವುದು. ಪರಪುಟ್ಟ ಎನ್ನುವುದು ಪರಪುಷ್ಟ ಎನ್ನುವ ಸಂಸ್ಕೃತ ಸಮಾಸಪದದ ತದ್ಬವ: ಪರರಿಂದ ಸಾಕಲ್ಪಟ್ಟ ಎಂದು ಅರ್ಥ. ಕೋಗಿಲೆ ಎಂಬ ಅರ್ಥವೂ ಇದೆ. ಕೋಗಿಲೆಯ ಮೊಟ್ಟೆಗಳನ್ನು ಕಾಗೆ ಸಲಹುತ್ತದೆ ಎಂಬ ನಂಬಿಕೆಯಿಂದಾಗಿ ಕೋಗಿಲೆಗೆ ಇದೊಂದು ಅನ್ವರ್ಥನಾಮವಾಗಿ ಬಂದಿರಬಹುದು. ‘ಕನ್ನಡದ ಪೊಸಸುಗ್ಗಿ ಬನದ ಈ ಪರಪುಟ್ಟನಂ’ ಎನ್ನುವುದಕ್ಕೆ ಈಗೊಂದು ಅರ್ಥ ಬರುತ್ತದೆಯಲ್ಲವೇ? ಮಾತ್ರವಲ್ಲ, ಪುಟ್ಟ ಎಂಬ ಪದ ಹೀಗೆ ಇನ್ನೊಂದು ಶಬ್ದದ ಅಂಗವಾಗಿ ಆಕಸ್ಮಿಕವೆನ್ನುವಂತೆ ಮರುಕಳಿಸಿದಾಗ ಅದಕ್ಕೊಂದು ಸೊಗಸೂ ಬರುತ್ತದೆ.

ಸಂದೇಹವಿರುವಲ್ಲಿ ಸಾಮಾನ್ಯವಾಗಿ ನಮ್ಮ ಮನಸ್ಸಿಗೆ ಹತ್ತಿರವಾದ ಅರ್ಥವೇ ಮುಂದಕ್ಕೆ ಬಂದು ಅದು ಬೇರೆ ಅರ್ಥವನ್ನು ಮರೆಸುವುದು ಸ್ವಾಭಾವಿಕ. ಇದಕ್ಕೆ ಇಂದು ಪ್ರಚಲಿತವಿರುವ ಉದಾಹರಣೆಯೆಂದರೆ ನೃಪತುಂಗನ ‘ಆ ಕನ್ನಡದೊಳ್ ಭಾವಿಸಿದ ಜನಪದಂ’ ಎಂಬ ಮಾತು; ಇದನ್ನಿಂದು ಹಲವರು ‘ಆ ಕನ್ನಡವೆಂಬ ಭಾಷೆಯಲ್ಲಿ ಯೋಚಿಸಿದ ಜನರು’ ಎಂದು ಅರ್ಥಮಾಡುವಂತೆ ಕಾಣುತ್ತದೆ. ಯಾಕೆಂದರೆ, ಕನ್ನಡ ಎಂಬ ಪದಕ್ಕೆ ಇಂದು ಕನ್ನಡನುಡಿ ಎಂಬ ಅರ್ಥ ಮಾತ್ರ ಇರುವುದಲ್ಲದೆ ಕನ್ನಡನಾಡು ಎಂಬ ಇನ್ನೊಂದು ಅರ್ಥವಿಲ್ಲ; ಅದೇ ರೀತಿ, ‘ಭಾವಿಸು’ ಎಂಬ ಕ್ರಿಯಾಪದಕ್ಕೆ ಇಂದು ‘ಯೋಚಿಸು’ ಎಂಬ ಅರ್ಥ ಮಾತ್ರವೇ ಇದೆಯಲ್ಲದೆ, ‘ಜನಿಸು’ ಎಂಬ ಅರ್ಥವಿಲ್ಲ. ಹಾಗೂ ‘ಕನ್ನಡದಲ್ಲಿ ಯೋಚಿಸು ಎಂಬುದು (ಇಂಗ್ಲಿಷ್ನಲ್ಲಿ ಯೋಚಿಸು ಎಂಬುದಕ್ಕೆ ಸಂವಾದಿಯಾಗಿ) ಇಂದು ನಮಗೆ ಹತ್ತಿರವಾದ ಪರಿಕಲ್ಪನೆಯೂ ಹೌದು. ‘ಆ ಕನ್ನಡದೊಳ್ ಭಾವಿಸಿದ ಜನಪದಂ’ ಎನ್ನುವ ಮಾತು ಈಗ ಎಷ್ಟು ಸ್ವಾಯತ್ತತೆಯನ್ನು ಪಡದುಕೊಂಡಿದೆಯೆಂದರೆ ಅದನ್ನು ಅರ್ಥಮಾಡಿಕೊಳ್ಳುವಲ್ಲಿ ಅದರ ಹಿಂದಣ ವಾಕ್ಯವನ್ನು ನಾವು ಗಣನೆಗೆ ತೆಗೆದುಕೊಳ್ಳುವುದೇ ಇಲ್ಲ.

When in doubt go philological ‘ಸ೦ದೇಹವಿದ್ದಾಗ ಭಾಷಾಶಾಸ್ತ್ರದ ಮರೆಹೊಗು’ ಎಂಬ ಮಾತು ನೆನಪಾಗುತ್ತದೆ-ಬಹುಶಃ ಪಾಲ್ ದ ಮನ್ (Paul de Man) ಹೇಳಿದ್ದು. ಪದ್ಯಾರಂಭದ `ಕಾವೇರಿಯಿಂದಮಾ ಗೋದಾವರಿ ವರಮಿರ್ಪ ನಾಡದು’ (ಕಾವೇರಿಯಿಂದ ಆ ಗೋದಾವರಿವರೆಗೆ ಇರುವ ನಾಡು ಅದು) ಎಂಬ ವಾಕ್ಯವನ್ನು ನಾವು ಪರಿಗಣಿಸಬೇಕಾಗುತ್ತದೆ. ‘ಆ ಕನ್ನಡದೊಳ್’ ಎಂಬಲ್ಲಿ ಕನ್ನಡ ಎಂಬ ಪದ ನಾಡನ್ನು ಉದ್ದೇಶಿಸಿದ್ದಲ್ಲದೆ ನುಡಿಯನ್ನಲ್ಲ. ‘ಆ’ ಎಂಬ ಸರ್ವನಾಮ ವಿಶೇಷಣ ಅದರ ಹಿಂದಣ ನಾಡು ಎಂಬ ನಾಮಪದವನ್ನು ಸೂಚಿಸುವಂಥದಲ್ಲದೆ ಮುಂದಣ ಜನಪದ ಎಂಬ ಪದಕ್ಕಲ್ಲ. ‘ಭಾವಿಸು’ ಎಂಬ ಪದಕ್ಕೆ ಕಿಟ್ಟೆಲ್ ನಿಘಂಟುವಿನಲ್ಲಿ ಮೊದಲನೇ ಅರ್ಥವೇ To occur, to appear ಎಂದಿದೆ; ಹಾಗೂ ನಿಘಂಟು ‘ಶಬ್ದಮಣಿದರ್ಪಣ’ದ ಆಧಾರ ಕೊಡುತ್ತದೆ. ನಿಜ, ಕನ್ನಡಕ್ಕೆ ನುಡಿ ಎಂಬ ಅರ್ಥ ಇರುವಂತೆಯೇ, ಭಾವಿಸು ಎನ್ನುವುದಕ್ಕೆ ಯೋಚಿಸು ಎನ್ನುವ ಅರ್ಥವೂ ಇದೆ; ಮಾತ್ರವಲ್ಲ ಈ ಎರಡೂ ಶಬ್ಬಗಳಲ್ಲೂ ಇಂದು ಪ್ರಚಲಿತವಿರುವುದು ಈ ಅರ್ಥಗಳು ಮಾತ್ರವೇ. ಆದರೆ ಈ ಕಾರಣಕ್ಕಾಗಿ ಪಠ್ಯವನ್ನು ಹಾಗೆ ಓದುವುದು ಸರಿಯಲ್ಲ. ಒ೦ದು ವೇಳೆ ಭಾವಿಸು ಎಂಬ ಪದವನ್ನು ಯೋಚಿಸು ಎಂಬುದಾಗಿ ನೃಪತುಂಗ ಉಪಯೋಗಿಸಲು ಉದ್ದೇಶಿಸಿದ್ದರೆ ಆತ ಭೂತಕಾಲದ ಪ್ರತ್ಯಯವನ್ನು ಅದಕ್ಕೆ ಹಚ್ಚಿರುವುದು ಆಶ್ಚರ್ಯಕರವೇ ಸರಿ. ‘ಭಾವಿಸುವ’ ಎಂದೋ ‘ಭಾವಿಪ್ಪ’ ಎಂದೋ ಸಾರ್ವಕಾಲಿಕ ಪ್ರತ್ಯಯವನ್ನು ಉಪಯೋಗಿಸುತ್ತಿದ್ದ. ಯಾಕೆಂದರೆ ಜನಿಸು ಎಂಬ ಅರ್ಥದಲ್ಲಿ ‘ಭಾವಿಸಿದ’ ಎಂಬುದಕ್ಕೆ ವಿಶೇಷಣ ಪದದ ಗುಣ ಬರುತ್ತದೆ: ‘ಕರ್ನಾಟಕದಲ್ಲಿ ಹುಟ್ಟದವರೆಲ್ಲರೂ ಕನ್ನಡಿಗರು ಎಂಬಲ್ಲಿ ‘ಹುಟ್ಟಿದ’ ಶಬ್ದಕ್ಕೆ ಇರುವಂತೆ. ಆದರೆ ಯೋಚಿಸು ಎಂಬ ಅರ್ಥದಲ್ಲಿ ಭಾವಿಸು ಕೇವಲ ಕ್ರಿಯಾಪದವಾಗಿ ಉಳಿಯುವುದರಿಂದ ಅದಕ್ಕೆ ಭೂತಕಾಲ ಪ್ರತ್ಯಯ ಹಚ್ಚಿದರೆ ಅದು ಭೂತಕಾಲಕ್ಕೇ ಸಂಬಂಧಿಸುತ್ತದೆ. ನೃಪತುಂಗ ಒಂದು ಕಾಲದಲ್ಲಿ ಕನ್ನಡನುಡಿಯಲ್ಲಿ ಯೋಚಿಸಿದವರ ಕುರಿತು ಹೇಳುತ್ತಿದ್ದಾನೆಯೇ? ಅಥವಾ ಸದ್ಯದವರ ಬಗ್ಗೆಯೇ? ಅಷ್ಪಕ್ಕೂ ‘ಕನ್ನಡದಲ್ಲಿ ಯೋಚಿಸು’ ಎಂಬ ಆಧುನಿಕ ಪರಿಕಲ್ಪನೆಯನ್ನು ಒಂದು ಸಾವಿರ ವರ್ಷ ಹಿಂದಿನ ಶಾಸ್ತ್ರಜ್ಞನಿಗೆ ಹಚ್ಚುವುದು ಸರಿಯೆನಿಸುವುದಿಲ್ಲ. ನಮ್ಮ ಇಂದಿನ ಸ್ವೀಕೃತ ಶಬ್ದಾರ್ಥಕ್ಕೆ ಹೊಂದದ ಮಾತನ್ನು ಅರ್ಥೈಸುವುದರಲ್ಲಿನ ತೊಂದರೆಯನ್ನು ವಿವರಿಸುವುದಕ್ಕೆ ಈ ಸುಪ್ರಸಿದ್ಧ ಉದಾಹರಣೆಯನ್ನು ತೆಗೆದುಕೊಳ್ಳಬೇಕಾಯಿತು. ಆದರೆ ಹೆರಾಲ್ಡ್ ಬ್ಲೂಮ್ (Harold Bloom) ಹೇಳುವ ಬೇಕೆಂದೇ ಬೇಕಾದ ಅರ್ಥದಲ್ಲಿ ಓದುವ ಓದಿನ ಹಕ್ಕಾದ misreading ‘ತಪ್ಪೋದು’ ಕುರಿತಾಗಿ ನನ್ನದೇನೂ ಆಕ್ಷೇಪವಿಲ್ಲ.

ಬೆಳಗೆರೆ ಕೃಷ್ಣಶಾಸ್ತ್ರಿಯವರು ತಮ್ಮ ‘ರಾಜರತ್ನಂ ಸ್ಮೃತಿ’ ಎಂಬ ಲೇಖನದಲ್ಲಿ ರಾಜರತ್ನಂ ಅವರ ಶಬ್ದಾಸಕ್ತಿಯ ಕುರಿತಾದ ಘಟನೆಯೊಂದನ್ನು ಪ್ರಸ್ತಾಪಿಸುತ್ತಾರೆ. (ನೋಡಿ: ‘ಸಾಹಿತಿಗಳ ಸ್ಮೃತಿ’, ಮನೋಹರ ಗ್ರಂಥಮಾಲೆ, ಧಾರವಾಡ ೧೯೯೩; ‘ಕನ್ನಡದ ಗರಡಿಯಾಳು’: ಅಭಿನವ ಚಾತುರ್ಮಾಸಿಕ, ಬೆಂಗಳೂರು, ೨೦೦೭- ೦೮.) ಘಟನೆ ರನ್ನನ ಗಧಾಯುದ್ಧದಲ್ಲಿ ಬರುವ ‘ಕುರು ಭೂ ಭ್ರತ್ ಚಲ ತೂಲಕೂಲ ಪವನಂ, ಕೌರವ್ಯ ಗಂಧೇಭ ಕೇಸರಿ…ದುಶ್ಶಾಸನ ರಕ್ತ ರಕ್ತ ವದನಂ’ ಎಂಬ ಸಾಲಿಗೆ ಸಂಬಂಧಿಸಿದುದು. ದುಶ್ಶಾಸನ ರಕ್ತ ರಕ್ತವದನಂ ಎಂದರೇನು ಎಂದು ರಾಜರತ್ನಂ ಕೃಷ್ಣ ಶಾಸ್ತ್ರಿಯವರನ್ನು ಕೇಳುತ್ತಾರೆ. ಶಾಸ್ತ್ರಿಯವರಿಗೆ ಈ ಪ್ರಶ್ನೆ ಆಶ್ಚರ್ಯ ಹುಟ್ಟಿಸುತ್ತದೆ: ಇದರ ಅರ್ಥ ಸರಳವಾಗಿಯೇ ಇರುತ್ತ ರಾಜರತ್ನಂ ಯಾಕೆ ಇದನ್ನು ಕೇಳಿದರು ಎನ್ನುವುದೇ ಅವರ ಆಶ್ಚರ್ಯ. ‘ದುಶ್ಶಾಸನನ ರಕ್ತ ಭೀಮನ ಮುಖಕ್ಕೆಲ್ಲ ಬಳಿದುಕೊಂಡಿತ್ತು’ ಎಂಬ ಪ್ರಚಲಿತ ಅರ್ಥವನ್ನು ಹೇಳಿ, ಈಗೇನು ಇದರ ವಿಶೇಷ?’ ಎಂದು ವಿಚಾರಿಸುತ್ತಾರೆ. ಆಗ ರಾಜರತ್ನಂ ಇದರ ಹಿಂದಿನ ಇಡೀ ಕತೆಯನ್ನು ವಿವರಿಸುತ್ತಾರೆ. ವಾಸ್ತವದಲ್ಲಿ ಈ ಪ್ರಶ್ನೆಯನ್ನು ಎತ್ತಿದುದು ಚಿತ್ರದುರ್ಗದಲ್ಲಿ ಆಗ ಪೆಟ್ರೋಲ್ ಬಂಕ್ ಒಂದನ್ನು ನಡೆಸುತ್ತಿದ್ದ ಶ್ರೀನಿವಾಸರಾವ್ ಎಂಬವರು. ಅವರ ಸಂದೇಹಕ್ಕೆ ಕಾರಣವೆಂದರೆ: ಕೌರವನ ಬಲ ಒಂದು ಹಕ್ಕಿಯ ಗರಿಯಾದರೆ ಭೀಮ ಅದಕ್ಕೆ ಕಾಲಪವನ; ಕೌರವಕುಲದ ಕೀರ್ತಿ ಒಂದು ಆನೆಯಾದರೆ ಭೀಮ ಅದಕ್ಕೆ ಸಿಂಹ; ದುರ್ಯೋಧನನ ತೊಡೆಗಳು ಒಂದು ಬೆಟ್ಟವಾದರೆ ಭೀಮ ಅದಕ್ಕೆ ವಜ್ರಾಯುಧ; ಹೀಗೆ ಹೇಳಿಕೊಂಡು ಬಂದ ರನ್ನ ದುಶ್ಶಾಸನನ ರಕ್ತಕ್ಕೆ ಭೀಮ ರಕ್ತವದನ೦ ಎಂದರೆ ಅದರರ್ಥ ರಕ್ತಕ್ಕಿಂತಲೂ ಪ್ರಬಲವಾದ ಇನ್ನೇನೋ ಇರಬೇಕಲ್ಲವೇ? ಅದುವರೆಗೆ ಪ್ರಚಲಿತವಾದ ಸರಳ ಅರ್ಥವನ್ನೇ ಮಾಡಿಕೊಂಡಿದ್ದ ರಾಜರತ್ನಂಗೆ ಇದೊಂದು ಸಮಸ್ಯೆಯೇ ಆಯಿತು-ಅದೂ ಪೆಟ್ರೋಲ್ ವ್ಯಾಪಾರಿಯೂಬ್ಬನಿಂದ ಬಂದುದು! ಆದರೂ ಸಮಸ್ಯೆ ಸಮಸ್ಯೆಯೇ. ಮೈಸೂರಿನ ಗಂಗೋತ್ರಿಯ ಲೈಬ್ರರಿಯಲ್ಲಿ ಇದಕ್ಕೆ ಉತ್ತರ ಸಿಗಲಿಲ್ಲ. ಅದುವರೆಗಿನ ಕನ್ನಡದ ಘಟಾನುಘಟಿ ಪ್ರಾಧ್ಯಾಪಕರುಗಳಿಗೆಲ್ಲ ಇಂಥದೊಂದು ಯೋಚನೆಯೆ ಬಂದಿರಲಿಲ್ಲ. ರಾಜರತ್ನಂ ಮನಸ್ಸಿನಲ್ಲಿ ಕಾಡುತ್ತಿದ್ದ ಈ ಸಮಸ್ಯೆಗೆ ಪರಿಹಾರ ಸಿಕ್ಕಿದ್ದು ಎಂದೋ ಒಮ್ಮೆ ಅವರು ಮದರಾಸಿಗೆ ಹೋಗಿದ್ದಾಗ. ಅಲ್ಲಿನ ಓರಿಯೆಂಟಲ್ ಲೈಬ್ರರಿಯಲ್ಲಿ ಒಂದು ಹಳೆಯದಾದ ಸಂಸ್ಕೃತ-ಸಂಸ್ಕೃತ- ಇಂಗ್ಲಿಷ್ ನಿಘಂಟುವಿನಲ್ಲಿ ‘ರಕ್ತವದನ: ರಕ್ತಮುಖ: ಲೀಚ್ (Leach)’ ಎ೦ದು ಬರೆದಿತ್ತು! ಅದರ ಪಕ್ಕದಲ್ಲಿ ಜಿಗಣೆಯ ಚಿತ್ರವೂ ಇದ್ದಿತು. ರನ್ನ ನೀಡುವ ರೂಪಕ ಸರಣಿಗೆ ರಕ್ತವದನದ ಈ ಅರ್ಥ ಎಷ್ಟೊಂದು ಹೊಂದಿಕೆಯಾಗುತ್ತದೆ ಅನಿಸಿ ರಾಜರತ್ನಂಗೆ ಆದ ಸಂತೋಷ ಅಷ್ಟಿಷ್ಟಲ್ಲ. ಈ ಬಗ್ಗೆ ಅವರೊಂದು ಲೇಖನವನ್ನೂ ಬರೆದಿರಬೇಕು. ಆದರೆ ರಾಜರತ್ನಂ ಅವರ ಈ ಶೋಧನೆ ಕನ್ನಡ ಪಾಠಕ್ರಮದಲ್ಲಿ ಸೇರಿಕೊಂಡಿದೆಯೋ ಇಲ್ಲವೋ ಎನ್ನುವುದು ತಿಳಿಯದು. ಇದಕ್ಕೆಲ್ಲ ರಾಜರತ್ನಂರ ಈ ಶೋಧನೆಗೆ ಮೂಲಪ್ರೇರಣೆ ಶ್ರೀನಿವಾಸರಾವ್ ಅವರ ಕಟ್ಟೆಚ್ಚರದ ಓದು ಎನ್ನುವುದನ್ನು ಮರೆಯಬಾರದು. ಆದರೆ ಇಂಥ ಓದಾಗಲಿ, ಅದಕ್ಕೆ ಸಂಬಂಧಿಸಿದ ಸಂಶೋಧನೆಯಾಗಲಿ ಪ್ರತಿಯೊಬ್ಬನಿಗೂ ಸಾಧ್ಯವಾಗಲಾರದು. ಸಾಧಾರಣವಾಗಿ ಅದರ ಅಗತ್ಯವೂ ಇರುವುದಿಲ್ಲ. ಆದರೂ ಕೆಲವರಾದರೂ ಇದರಲ್ಲಿ ಆಸಕ್ತರಾಗಿರುವುದು ನಮ್ಮ ಭಾಗ್ಯವೆಂದೇ ಹೇಳಬೇಕು. ಮರವನ್ನು ರಕ್ಷಿಸದವ ಕಾಡನ್ನೂ ರಕ್ಷಿಸಲಾರ. ಆದ್ದರಿಂದ ಕೆಲವೊಮ್ಮೆಯಾದರೂ ನಾವು ‘ಪದಾರ್ಥ ಚಿಂತಾಮಣಿ’ ಗಳಾಗುವುದು ಅಗತ್ಯ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೋಯ್ಲು
Next post ಕಾಯಿಸುವುದು

ಸಣ್ಣ ಕತೆ

 • ಟೋಪಿ ಮಾರುತಿ

  "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

 • ಬಸವನ ನಾಡಿನಲಿ

  ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

 • ತೊಳೆದ ಮುತ್ತು

  ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

 • ಬೆಟ್ಟಿ

  ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

 • ಮಂಜುಳ ಗಾನ

  ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…