ಅನುಭಾವಿ ಚಿಂತಕ – ವಿಟ್‌ಮ್ಯಾನ್ ಕವಿತೆಗಳು

ಅನುಭಾವಿ ಚಿಂತಕ – ವಿಟ್‌ಮ್ಯಾನ್ ಕವಿತೆಗಳು

ಭಾಗ – ೨

ವಿಟ್‌ಮ್ಯಾನ್ ನ “Drum Taps” ಯುದ್ಧ ಕವಿತೆಗಳನ್ನು ಒಳಗೊಂಡು ಹೊಸ ಸಾಂಪ್ರದಾಯಿಕ ಕಾವ್ಯ ಶೈಲಿಗೆ ಸಡ್ಡು ಹೊಡೆದು ಅಪಾರ ಜನಪ್ರಿಯತೆ ಪಡೆಯಿತು. ಅದರಲ್ಲಿಯ “When Lilacs lost in the dooryard bloom’d” ಹಾಗೂ “O, Captain, My Captain” ಎಂಬ ಎಲೆಜಿ[ಶೋಕಗೀತೆಗಳು]ಗಳಲ್ಲಿ ಅಮೇರಿಕಾದ ಅಂದಿನ ಪ್ರೆಸಿಡೆಂಟ್ ಲಿಂಕನ್‌ರ ಸಾವು ಕವಿಯಲ್ಲಿ ಹೆಪ್ಪುಗಟ್ಟಿದ ಅಸದಳ ನೋವನ್ನು ವಿವಿಧ ಆಯಾಮಗಳಲ್ಲಿ ಕೆತ್ತಿದಂತಿವೆ. ಬದುಕಿನುದ್ದಕ್ಕೂ ಲಿಂಕನ್‌ನ್ನು ಒಮ್ಮೆಯೂ ಭೇಟಿಯಾಗದೆ ಇದ್ದರೂ ತನ್ನ ತಾಯಿಯ ನಂತರ ತನ್ನ ಆತ್ಮಕ್ಕೆ ಹತ್ತಿರದವನೆಂದರೆ ಲಿಂಕನ್ ಎಂದು ಉಲ್ಲೇಖಿಸಿದ್ದಾನೆ. ವಿಟ್ ಮ್ಯಾನ್ ಪ್ರಕಾರ ಲಿಂಕನ್ ಅಮೇರಿಕಾದ ಆದರ್ಶಗಳ ಪ್ರತಿರೂಪದಂತೆ. ಜಗತ್ತಿನಾದ್ಯಂತ ಹತ್ತೊಂಬತ್ತನೇ ಶತಮಾನದ ಅತ್ಯಂತ ಉತ್ಕೃಷ್ಠ ವ್ಯಕ್ತಿಯೆಂದರೆ ಅಬ್ರಾಹಿಂ ಲಿಂಕನ್ ಎಂಬುದು ಅವನ ಗೃಹಿಕೆ.

ಮೊದಲ ಕವಿತೆಯ ಸಾರ ಮೂರು ಪ್ರತಿಮೆಗಳಿಂದ ಹಣೆಯಲ್ಪಟ್ಟಿದೆ. ಲಿಲ್ಯಾಕ್ ಹೂ, {ಬೂದು ಬಣ್ಣದ ಸುಹಾಸನೆಯಹೂ} ಹೊಳೆಯುವ ತಾರೆ ಹಾಗೂ ವಿರಕ್ತ ಪಕ್ಷಿ. ಹಳೆಯ ತೋಟದಲ್ಲಿ ಅರಳಿದ ಲಿಲ್ಯಾಕ್ ಲಿಂಕನ್‌ರ ಪ್ರಾರಂಭಿಕ ಬದುಕಿಗೆ ರೂಪಕವಾಗಿ ನಿಲ್ಲುತ್ತದೆ. ಲಿಲ್ಯಾಕ್ ಹೂವಿನಂತೆ ಅಪರೂಪದ ಇತರರು ಅನುಕರಿಸಲಾಗದ ಅಧಿಕಾರ ಗತ್ತುಗಳಿಗೆ ಮಾರುಹೋಗದ ಲಿಂಕನ್ ವಿಧಿವಶರಾಗಿದ್ದಾರೆ. ಶಕ್ತಿಶಾಲಿ ಹೊಳಪುಳ್ಳ ಆದರೂ ಉರುಳಿಬಿದ್ದ ತಾರೆ ಲಿಂಕನ್ ರ ಸಾವಿಗೆ ಸಾಂಕೇತಿಕವಾಗಿದೆ. ಜಗತ್ತು {ಅಮೇರಿಕಾ} ಕಗ್ಗತ್ತಲೆಗೆ ಶರಣಾಗಿದೆ. ಅದೇ ಕಗ್ಗತ್ತಲ ಏಕಾಂತದ ಮಧ್ಯೆ ವಿರಕ್ತ ಹಕ್ಕಿಯ ಹಾಡು ಸಾಗಿದೆ. ಶಾಂತ ಸಮಾಧಿಸ್ಥ ಮನಸ್ಥಿತಿಯ ತೆಳ್ಳಗಿನ ಧೀಮಂತ ವ್ಯಕ್ತಿತ್ವದ ಲಿಂಕನ್ ಗೂ ವಿರಕ್ತ ಪಕ್ಷಿಗೂ ಸಾದೃಶ ಹೋಲಿಕೆ ಗಮನಾರ್ಹ. ಕ್ರಮೇಣ ಕವಿಯ ಆತ್ಮದ ಹಾಡು ವಿರಕ್ತ ಹಕ್ಕಿಯ ಹಾಡಿನೊಂದಿಗೆ ಸೇರಿದೆ. ಶೋಕಭರಿತ ಕವಿಯ ಕೈಗಳು ತಾರೆ ಮತ್ತು ಲಿಲ್ಯಾಕ್ ಜೊತೆ ಬೆಸೆದುಕೊಂಡಿದೆ. ಕವನದ ಕ್ಲೈಮಾಕ್ಸ್ ಅರ್ಥಪೂರ್ಣ ಜೀವನ ಸಿದ್ದಾಂತದ ಕಡೆ ಹೊರಳುತ್ತದೆ. ಈಗ ಸಾವು ಕರಾಳ ಬೆದರಿಕೆಯಲ್ಲ. ಬದಲಿಗೆ “dark mother always gliding near with soft feet” ಹಂತಹಂತವಾಗಿ ನಾಯಕನ ಸಾವಿನ ಶೋಕದ ಹಾಡು ಸಾಂತ್ವನದ ಹಾಡಾಗುತ್ತದೆ.

ಪ್ರತಿಯೊಬ್ಬರೂ ಸಾವಿನ ಬಗ್ಗೆ ಅದರ ಅನೂಹ್ಯವಾದ, ಅತೀತವಾದ ಕಲ್ಪನೆಗಳನ್ನು ಹೊಂದಿರುತ್ತೇವೆ. ಸಾವು ಮಾನವ ಸಮುದಾಯವನ್ನು ಸದಾ ಕಾಡುವ ಹೊಂಚು ಹಾಕುವ ಭಯಂಕರ ಸಂಗತಿ. ಸಾವಿನ ಬಗ್ಗೆ ಚಿಂತೆ ಬದುಕಿನ ಬಗ್ಗೆ ಬರಡು ಭಾವ ಮೂಡಿಸಿದರೆ, ಅದೇ ಮರಣ ಜ್ಞಾನ ಸಾವನ್ನು ಬದುಕಿನ ಒಂದು ಹಂತವಾಗಿ ನೋಡುತ್ತದೆ. ಅದೊಂದು ಅನುಸಂಧಾನ. ಸಾವನ್ನು ಎರಡು ಕೈಗಳಿಂದ ಸ್ವಾಗತಿಸಿ ಒಪ್ಪಿಸಿಕೊಂಡಾಗ ಬದುಕಿಗೆ ಪೂರ್ಣ ಅರ್ಥ. ಈ ಎರಡು ವಿರುಧ್ಧ ವಿಚಾರಗಳ ಒಂದೇ ಕವನದಲ್ಲಿ ಶ್ರುತಪಡಿಸಿರುವುದು ಕವಿಯ ಕೌಶಲ್ಯಕ್ಕೆ ಕನ್ನಡಿ.

ಲಿಂಕನ್ ಮೇಲಿನ ಆಳ ಪ್ರೀತಿಗೆ ದ್ಯೋತಕವಾಗಿ ನಿಂತ ಸರಳ ಕವಿತೆ “O, Captain, My Captain” ಆ ಹಡಗು ಇನ್ನೇನು ಬಂದರಿಗೆ ಕಣ್ಣಳತೆಯಲ್ಲಿದೆ. ಅದರೆ ಆಗಮನದ ಸಂಕೇತವಾಗಿ ಬೆಲ್ ಬಾರಿಸುತ್ತಿದೆ. ಜನರೆಲ್ಲ ಉತ್ಸುಕರಾಗಿದ್ದಾರೆ. ಆದರೆ ಅನಿರೀಕ್ಷಿತ ಅವಘಡ ಸಂಭವಿಸಿದೆ. ಕ್ಯಾಪ್ಟನ್ ಡೆಕ್ ಮೇಲೆ ಕುಸಿದು ಬೀಳುತ್ತಾನೆ. ರಕ್ತದ ಹನಿ ಹೊಳೆಯಾಗಿ ಹರಿಯುತ್ತಿದೆ. ಸಹ ನಾವಿಕ ಸತ್ತ ನಾಯಕನ ಎಬ್ಬಿಸುವ ವಿಫಲ ಯತ್ನದಲ್ಲಿದಾನೆ. ಬಾವುಟ ಹಾರಾಡುತ್ತಿದೆ, ಕಹಳೆಗಳು ಮೊಳಗುತ್ತಿವೆ ಹೂಮಾಲೆ ಹಾರಗಳು ಹರಡಿಹಾರಾಡಿವೆ. ಯಾವುದು ನಾಯಕ ಸ್ವೀಕರಿಸುತ್ತಿಲ್ಲ. ಇದ್ಯಾವುದು ನಾಯಕನಿಗೆ ಕೇಳುತ್ತಿಲ್ಲ. ಆತ ಯಾವುದಕ್ಕೂ ಉತ್ತರಿಸುತ್ತಿಲ್ಲ. ನೋವು ಮಡುಗಟ್ಟಿದೆ. ಆದರೂ ಕವನ ಕೊನೆಯಲ್ಲಿ ಆಶಾವಾದ ಬಿಂಬಿಸಿದೆ. ಹಡಗು ದಡ ಸೇರಿದೆ ಗುರಿ ಮುಟ್ಟದೆ. ಬಾಳೆಂಬ ನದಿಗೆ ಸಾವೆಂಬ ಸೆಳೆತ ಸಹಜ. ನಾಯಕ ಲಿಂಕನ್ರ ಅನೀರಿಕ್ಷತ ಸಾವು ಅಮೇರಿಕಾದ ಗೆಲುವಿನ ಸ್ವಾದವನ್ನು ಕಬಳಿಸಿದ್ದನ್ನು ಕವಿ ಶೋಕ ಮತ್ತು ಜಯದ ಕಲ್ಪನೆಗಳೊಂದಿಗೆ ನಿರೂಪಿಸಿದ್ದು ಸದಾ ನೆನಪಾಗಿ ಕಾಡುವ ಕವಿತೆ.

ಇಂಗ್ಲೀಷ ಸಾಹಿತ್ಯದಲ್ಲೇ ಮೈಲಿಗಲ್ಲು ಎಂದು ಕರೆಸಿಕೊಂಡ “Leaves of grass” ೯ ಮುದ್ರಣಗಳನ್ನು ಕಂಡ ಅಪರೂಪದ ಸಂಕಲನ. ಅದರಲ್ಲಿಯ ಕವನ “Out of the Cradle Endlessly Rocking” ನಲ್ಲಿ ಕವಿ ಬದುಕು ಮತ್ತು ಸಾವಿನ ಬಂಧ ಕಟ್ಟಿಕೊಟ್ಟಿದ್ದು ಹೀಗೆ. “Paumanok” ಲಾಂಗ ಐಲ್ಯಾಂಡ್ಗೆ ಇರುವ ಅಮೇರಿಕನ್ ಹೆಸರು. ಅಲ್ಲೆಲ್ಲ ಲಿಲ್ಯಾಕ್ ಹೂವಿನ ಸುಗಂಧ ಹಬ್ಬಿದೆ. ಮೇ ತಿಂಗಳಿನ ಹುಲ್ಲು ಪೊಗದಸ್ತಾಗಿ ಬೆಳೆದಿದೆ. ಎಲ್ಲ ಕಡೆಯಲ್ಲಿ ಸಮೃದ್ಧಿ ತುಳುಕಾಡುತ್ತಿದೆ. ಆ ಹಾಡುಹಕ್ಕಿ ತನ್ನ ಜೊತೆಗಾತಿಯೊಂದಿಗೆ ಜೊತೆಜೊತೆಯಾಗಿ ಇಟ್ಟ ಮೊಟ್ಟೆಗಳಿಗೆ ಕಾವುಣಿಸುತ್ತಿದೆ. ರಾತ್ರಿ ಹಗಲು ಮಳೆಗಾಳಿ ಯಾವುದಕ್ಕೂ ಅವುಗಳ ಹಾಡು ಭಂಗಗೊಂಡಿಲ್ಲ. ಅದೇ ಆ ಹುಡುಗ ಆ ಹಕ್ಕಿಗಳ ದಿನಬಿಡದೆ ವೀಕ್ಷಿಸುತ್ತಾನೆ. ಆಕಸ್ಮಿಕವೆಂಬಂತೆ ಹೆಣ್ಣುಹಕ್ಕಿ ಗೂಡಿಗೆ ಮರಳಿಲ್ಲ. ಗಂಡು ಕಾದು ಬಸವಳಿದಿದೆ. ಅದರ ಸಂತೋಷದ ಹಾಡು ಈಗ ವೇದನೆಯ ಹಾಡಾಗಿದೆ. ಹುಡುಗ ಚಡಪಡಿಸುತ್ತಿದ್ದಾನೆ ಆ ಹಾಡಿಗೆ ಅದೇ ಮೊದಲು ಕೇಳಿದ ರಾಗಕ್ಕೆ. ಇವೆಲ್ಲ ಬದುಕಿನ ಸಾಮಾನ್ಯ ಸಂಗತಿಗಳು. ತೊಟ್ಟಿಲು ಜನನದ ಸಂಕೇತ. ಅದರಿಂದ ಹೊರಗಡಿಯಿಡುತ್ತಿದ್ದಂತೆ ಸಾವಿನ ಕ್ಷಣಗಳು ಪ್ರಾರಂಭ. ನಿರಂತರ ಕೊನೆಯಿಲ್ಲದ ತುಯ್ದಾಟ. ಮಗು ಸತ್ಯಗಳನ್ನು ಅರಗಿಸಿಕೊಳ್ಳಲು ಪ್ರಯತ್ನಿಸುತ್ತದೆ. ಕ್ರಮೇಣ ಪ್ರೌಢನಾಗುವ ಮಗು ಇವುಗಳ ಅರ್‍ಥೈಸಿಕೊಳ್ಳುತ್ತದೆ. ನೋವು ಮತ್ತು ನಲಿವಿನ ಶ್ರೋತೃನಾಗುತ್ತಾನೆ ಆತ.

ಇದು ಹಕ್ಕಿಯ ಅಥವಾ ಕವಿಯ ಹಾಡಲ್ಲ. ಜಗತ್ತಿನ ನೋವಿನ ಹಾಡು. ಹೆಣ್ಣು ಹಕ್ಕಿಯ ನಿರ್ಗಮನ ಅಥವಾ ಸಾವು, ಬದುಕು, ಬಂಧನ, ಬೇರ್ಪಡುವಿಕೆ ಸಾರ್ವತ್ರಿಕ ನೈಸರ್‍ಗಿಕ ನಿಯಮ ಎಂಬ ಸಮುದ್ರದ ಪಿಸುಮಾತು ಬದುಕಿನ ಸಾರ ಸಾರುತ್ತದೆ….

ಇದೇ ಸಂಕಲನದ ಇನ್ನೊಂದು ಅನುಭಾವಿ ಕವಿತೆ “A Noiseless Patient Spider” ಜೇಡರ ಹುಳು ಸುರಕ್ಷಿತವಾಗಿ ತನ್ನನ್ನು ಬಲೆಯಲ್ಲಿ ಹಿಡಿದಿಟ್ಟುಕೊಳ್ಳಲು ಬದುಕಿನುದ್ದಕ್ಕೂ ಹಲವಾರು ಬಲೆಗಳನ್ನು ಹಣೆಯುತ್ತಾ ನಿರಂತರ ಕಾರ್ಯತತ್ಪರತೆಯಲ್ಲಿ ಮುಳುಗಿರುವಂತೆ ಕವಿಯ ಆತ್ಮ ಕೂಡ ಪರಮಾತ್ಮನ ಸಾನಿಧ್ಯಕ್ಕಾಗಿ ನಿಲ್ಲದೆ ಹೆಣಗಾಡುತ್ತಿದೆ. ಶಾಶ್ವತ ನೆಲೆಗಾಗಿ ನಿರಂತರ ಹುಡುಕಾಡುತ್ತದೆ. ಕವನ ಚಲನಶೀಲತೆ- ಜಡತ್ವ, ಜೀವಾತ್ಮದ ಅಲ್ಪತೆ-ವಿಶ್ವಾತ್ಮದ ಅಗಾಧತೆ, ಜೇಡನ ಕ್ಷುಲಕ ಅಸ್ಥಿತ್ವ-ನಿಸರ್ಗದ ವಿಶಾಲತೆಗಳ ಸುತ್ತ ಸುತ್ತಾಡುವ ಕವಿತೆ ಆತ್ಮೋನ್ನತಿಯ ಅಲೌಖಿಕ ವಿಚಾರಗಳ ಸುತ್ತ ಹೆಣೆಯಲ್ಪಟ್ಟಿದೆ.

ಹೀಗೆ ಶ್ರೇಷ್ಠ ಅನುಭಾವಿ ಚಿಂತಕನಾಗಿದ್ದ ವಾಲ್ಟ ವಿಟ್‌ಮ್ಯಾನ್ ೧೮೯೨ರಲ್ಲಿ ಇಹಲೋಕ ತ್ಯಜಿಸಿದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕುಣಿಯೋದು
Next post ಅಭಿವ್ಯಕ್ತಿ

ಸಣ್ಣ ಕತೆ

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…