ಕಣ್ಣಕನ್ನಡಿಯಲ್ಲಿ ಕಂಡ ಆ ಅವನು
ಸೊಂಟ ಬಳಸಿ ಬಿಸಿಯುಸಿರ ಬಿಟ್ಟದ್ದು;
ಮಧುಮತ್ತ ಮುಖಮಡಕೆಯನ್ನು
ಕೈಯ ಇಕ್ಕಳದಲ್ಲಿ ಹಿಡಿದದ್ದು;
ವಿದ್ಯುದುನ್ಮಾದ ನಾದಕ್ಕುಬ್ಬಿ ಎದೆ ಬಿರಿದದ್ದು;
ಬಂದ ನೋವು ನಲಿವುಗಳನ್ನುಂಡದ್ದು;
-ಈ ಎಲ್ಲ ಮೆಲಕುಗಳಲ್ಲಿ ಮೈತುಂಬಿ
ಬೆಳೆದಿತ್ತು ಭ್ರೂಣ
ಹುಟ್ಟಿತ್ತೊಂದು ದಿನ ಕಿಲಕಿಲ ಕಂದ
ತುಂಬ ಜಾಣ.
*****