‘ನಕ್ಕನ್, ನಮ್ಮನ್, ಬನ್ರೇಲೇ… ಯೀವತ್ತು ನಾನಿರ್‍ಬೇಕು! ಯಿಲ್ಲ ನೀವೀರೇಕು! ಏನ್ ನಡ್ಸಿರೇನ್ರಲೇ? ಸಣ್ಣ ಸೂಳೇ ಮಕ್ಳೇ… ನೀವೇನು ಮೇಲಿಂದಿಳಿದು ಬಂದಿರೇನ್ರಲೇ? ಚೋದಿ ಮಕ್ಳೇ… ಸತ್ ದನಾ ತಿನ್ನೋ ದಗಡಿಗಂಡು ಮಾದಿಗ ನನ್ಮಕ್ಳೇ… ಯೇಳ್ ಮಿಂಡ್ರಿಗಳೇ… ದೊಡ್ ಗಾಂಚಾಲಿ ಮಾಡ್ತೀರೇನ್ರಲೇ… ಒಂದ್ ಕೈ ನಿಮ್‌ನ್ನೆಲ್ಲ ನೋಡೇ ಬಿಡ್ತೀನಿ ಬನ್ರಾಲೇ… ಯೇನ್ ವೂರುಕೇರಿ ಒಂದಾಗಿ ಬರ್‍ತೀರಾ?! ಯಿಲ್ಲಾ… ಯಿಡೀ ತಾಲ್ಲೂಕು, ಜಿಲ್ಲಾ ಒಂದಾಗಿ ಬರ್‍ತೀರಾ ಬರ್ರೆಲೇ.. ನಾನೊಬ್ನೇ ಸಾಕ್ರಲೇ… ನಿಮ್ನ ಬಗ್ಗು ಬಡಿಯಲು ಕೆತ್ತಿ ಕೆತ್ತಿ ಬಗ್ಗಿಸಿ ಗೂಟಾ ಜಡಿಯಲು…!” ಯಂದು ಮೊಂಜಾಲಿಂದ ಯಿಕ್ಕಿದ ಪದ ಯಿಕ್ಕಿದಂಗೇ ಒಂದ್ ವಾರದಿಂದ ಒಂದೇ ಸಮ್ನೆ ಡೊಳ್ಳು ಬಡ್ದಿಂಗೆ ಕೆತ್ತು ಕೇರಿ ಯಜಮಾನ್ರುನ ಹಟ್ಟು ಹಟ್ಟು ಆರ್‍ಬಾಡ್ಸಿ ತಿಮ್ಮಣ್ಣ ಹಾಕತೊಡ್ಗಿದ್ದ!
‘ಲೇ ತಿಮ್ಗಾ ನೀ ಗಂಡಸೇ ಆಗಿದ್ರೆ, ನಿಮ್ ಅಪ್ಪನಿಗೆ ನೀ ಹುಟ್ಟಿದ್ರೆ ನೀ ಎದುರಿಗೆ ಎದೆ ಒದ್ದಂಗೆ ಅವರೆದುರಿಗೆ ಬೈಯ್ಯಲೇ… ತೊಡೆ ತಟ್ಟಿ ಮೀಸೆ ಹುರಿ ಮಾಡ್ಲೇ? ಅದು ಬಿಟ್ಟು ವುತ್ರಕುಮಾರ್‍ನಂಗೆ ನೀ ಗ್ವಾಡೇ ಸಾಟ್ಲೀ ಅವರಿವರ ಹಿಂದೆ ಮುಂದೆ ಅವರಿವರ್‍ನ ನೆವ ಮಾಡಿ ಬೈಯ್ಯಬೇಡ್ಲೇ…’ ಎಂದು ವೂರು ಶಾನುಭೋಗ್ರು ತಿಮ್ಮಣ್ಣನಿಗೆ ಕೋತಿ ಮಾಡಿ ಕುಣಿಸಿದ್ರು….
‘ಯೇನ್ ಬುದ್ಧೀ ನನ್ನೇನು ಯರ್ರಪುಕ್ಲ ಮಾಡಿರೇನು? ನನ್…ಗೊಂಡು ಗೊಡ್ಲಿ ತುಕ್ಕು ಹಿಡಿದೈತಿ, ಪಂಚಪಾಂಡವರಂಗೆ ಅಜ್ಞಾತ ವಾಸದಲ್ಲಿದ್ದೇನೆ. ಅಂಗೆಂದು ಬಿಟ್ಟು ಕಾವಿ ತೊಟ್ಟಿನೆಂದೆಲ್ಲ! ಯೀ ಮಣೆಗಾರರ್‍ನ ಕೈಮಾ ಮತ್ತೊಮ್ಮೆ ಜೈಲಿಗೋಗಲು ಸಿದ್ಧ. ನನ್ನ ಸಿಟ್ಟಿಗೂ ಬದ್ಧ. ಶಾಂತಿಗೂ ಬುದ್ಧ… ಸಮಾಧಾನದಲಿ ಬಗೆ ಹರಿದ್ರೆ ಸರಿ! ಯಿಲ್ಲಾ ರುದ್ರಾವತಾರ ತಾಳುವೆ’ ಎಂದು ತಿಮ್ಮಣ್ಣ, ರೆಟ್ಟೆಗಡುತ್ರ ಮೀಸೆ ಕಿತ್ತಾಕಿದ. ಯಿಷ್ಟು ಬಾಯಿ ಆಗಿದ್ದೇ ತಡಾ ಜನ ಬದುಕು ಒಗತನ ಬಿಟ್ಟು ಗೊಂಬಿಯಂಗೆ ತೇರು ಪರೀಷೆ ಸೇರಿದ್ರು…
‘ಲೇ ನಾನಿಷ್ಟು ದಿನಗಳಿಂದ ಕೇಳುತ್ತಿದ್ದೇನೆ. ಕೇರ್‍ಯಾಗೆ ಒಬ್ರಾದ್ರು ಕಲಾಸ್ಸಾಗಲಿಲ್ಲ! ಬರೇ ಬಾಯಿಲಿ ಗುದ್ದಾಡಿದ್ರೆ ಮಕ್ಳಾಗಲ್ಲ. ಕೆಡಿವ್ಯಾಕಿ ಬುಡುಮಟ್ಟ ಹಟ್ರೆ ಬಿಳಿರಸ ಉಕ್ಕುತ್ತೆ ಮದ್ಲು ನೀ ಹಂಗೆ ಮಾಡಿ ತೋರ್‍ಸುಲೇ ತಿಮ್ಯಾ ಆವಾಗ ನಿನ್ನ ಮಣೆಗಾರನಂಥಾ ಕರೀತ್ತೀನಿ! ಸಣ್ಣ ಸೂಳೇ ಮಗ್ನೇ… ಸುಮ್ನೇ ಕಜ್ಜಿ ನಾಯಿಯಂಗೆ ರಾತ್ರಿಯೆಲ್ಲ ಬೊಗ್ಳಿದ್ರೇನು ಲಾಭಲೇ?’ ಎಂದು ಮತ್ತೇ… ಶಾನುಭೋಗ್ರು ತಿಮ್ಮಣ್ಣನ ಹುರಿದುಂಬ್ಸಿ ಕೈ ಬಿಟ್ಟ್ರು.
‘ಬುದ್ಧಿ… ಹೇಳಾರ್‍ದೇನು ಒತ್ತೀತು? ಸೀದೀತು ಬುದ್ಧೀ…? ಹಾರ ಭಾರ ಹೋರಾನು ನಾ… ನೋಡಾತನ್ಕಾ ನೋಡ್ತೀನಿ! ತಲೆಕೆಟ್ರೆ ಒಂದೇ ತುಂಡಿಗೆ ಕಚಕ್ ಅಂತಾ ಹಾಕೇ ಬಿಡ್ತೀನಿ! ಯಲ್ರು ಹಂಗೆ ನೋಡ್ತಾ ಯಿರ್ರಿ’ ಅಂತಾ ತಿಮ್ಮಣ್ಣ ಅಬ್ರಿಸಿ ಬೊಬ್ಬಿಟ್ಟ.
ಜನ್ರಿಗೆ ವುಚಿತ ಮನರಂಜನೆ ಸಿಕ್ಕಿತು! ಅವರವರಲ್ಲೇ ಜನ್ರು ಗುಸು ಗುಸು ಪಿಸ ಪಿಸಾ ಮಾಡಿದ್ರು…
‘ಯೀ ಜನ್ರ ಹಣೆಬರಹನೇ ಯಿಷ್ಟು ನೋಡ್ರೀ.. ಎಷ್ಟು ಜನ… ಬುದ್ಧ ಬಸವ ಅಂಬೇಡ್ಕರುಗಳು ಬಂದು ಹೋದ್ರೂ… ಯಿವ್ರನ ಸುಧಾರಿಸಲು ಸಾಧ್ಯವೇ ಯಿಲ್ಲ! ಕೇರಿಯೊಳಗೊಂದು ಕೇರಿ, ಕೇರಿ ಹೊರಗೊಂದು ಕೇರಿ! ಹೊರಗಿನವರು… ದಕ್ಕಲಿಗರು… ಮಾಚಾಳ್ರು… ಮಣೆಗಾರ ಗೌಡ್ರು, ಮಾದಿಗರು, ಹೊಲ್ಯಾರು, ಬಾಲ ಬಸವ್ರು… ವೊಂಡ್ರು. ದಾಸ್ರು… ಅಬ್ಬಾ! ಸಿಬ್ರು ಸೀಳೋಂಗೆಲ್ಲ ಜಾತಿ, ಮತ, ಕುಲ, ಬೇಧಗಳು…. ಯಿವ್ರೆಲ್ಲ ಯೆಂದು ಒಂದಾಗ್ಗೇಕು? ವೂರಿನವರ ಅಕ್ಕ ಪಕ್ಕ ಸರಿಸಮಾನಾಗಿ ಎಂದು ಬಾಳಿ ಬದುಕ ಬೇಕು….?!’ ಎಂದು ಮೂಲೆ ಮನೆ ಸವಿತಾ ಶೆಟ್ಟಿ… ತಲೆ ತಲೆ ಗಟ್ಸಿ ಗಂಡ್ಲು.
ಪಟ ಪಟನೆ ಹರಳು ಉರಿದಂಗೆ ಯಲ್ರ ಮುಂದೆ ಮಾತುಗಳು ತರಾವರಿಯಾಗಿ ಉರುಳಿದವು. ಜನ ಮುಸಿಣೆ ಉಬ್ಸಿಗಂಡು ಎಳೆ ನಿಂಬೆಕಾಯಿಗಳಂಗೆ ತಲೆದೂಗುತ್ತಾ ನಿಂತ್ರು… ನಿಂತ್ರು… ನಿಂತೇ ಯಿದ್ರು….
ಎಷ್ಟು ಜನ್ರು ಹೇಳಿದ್ರು… ಇಡೀ ಊರು ಕೇರಿ ಕೇಳಿದ್ರು… ಕೊಬ್ರಿ ಕಾಳಗ ಮಾತ್ರ ಕಾದ ಕಬ್ಬಿಣದ ಕಾವಾಗಿತು! ಅನ್ನಂಗಿಲ್ಲ. ಅನುಭವ್ಸಿಂಗಿಲ್ಲ. ವೂರು ಕೇರಿಯಲ್ಲಿ ಯರ್‍ಡು ಪಾರ್‍ಟಿಯಾದ್ವು, ತಿಮ್ಮಣ್ಣನ ಕಡೆಗೆ ತುಸು ಜನರಾದ್ರು… ಕೇರಿ ಮಣೆಗಾರರ ಕಡೆಗೆ ರಾವ್ವಾಷ್ಟು ಜನರಾದ್ರು. ಪರ-ವಿರೋಧದ-ವಾದ ವಿವಾದದ, ಮಾತು ಕತೆಗಳು ಹುತ್ತ ಕಟ್ಟಿದವು!
ತಿಮ್ಮಣ್ಣ ಅಂದ್ರೆ… ಯಲ್ರಿಗೇನು?! ಯಿಡೀ ಊರು ಕೇರಿಗೇನು?! ಸುತ್ತಾ ಹದಿನೆಂಟು ಹಳ್ಳಿಗೇ ಯೇಳು ಮಿಕ್ಕಿದವ್ನು… ಅಮ್ಮ ಯಿತಿಹಾಸ ಬಲು ದೊಡ್ಡದು! ನೋಡ್ಲು ಕಾರ್ರಗೆ ಎಮ್ಮೆಂಗೇ…. ದುಂಡು ದುಂಡ್ಗೆ ಬುಡ್ಮೆಕಾಯಿಯಂಗೇ… ಗುಂಗ್ರು ಗುಂಗ್ರು ಕೂದ್ಲು ಬೆಳ್ಳಿ ಗಡ್ಡ ನಿಗಿ ನಿಗಿ ಉರಿಯುತ್ತಿರುವ ಕಣ್ಣು ಗುಡ್ಡೆಗಳು ಮೋಟು ಕಾಲು, ಮೋಟುಗೈಗಳು… ಅಗಲವಾದ ಎದೆ, ಹಣೆ, ಹಂದಿ ಮುಸಿಣಿ… ನೋಡಿದ್ರೆ ಭಯಾ ಗಂಗೇ….
ಐವತ್ತು ವರ್ಷಗಳ ಹಿಂದೆ… ಯೀ ನಮ್ಮ ಊರು ಕೇರಾಗೆ ಒಬ್ರು ಪಸಂದ ಕಾಣಂಗಿಲ್ಲ! ಅವ್ರುನ ಹಂಗೆ ಬಾಚಿ ಅಂತ್ರಿಲೇ ಯಿದೇ ತಿಮ್ಮಣ್ಣ ಸೀದಾ ಹಾಳು ಗೋಡೆ ಮರೆಗೋ…. ಉಳ್ಳಾಗಡ್ಡಿ ಗರ್ಸಿಗೋ… ಗುಡಿಗೋ… ಎತ್ತಿಕೊಂಡು ಹೋಗಿ, ಕೆಡ್ಸಿ ಕುಲ್ಗೆಡಿಸಿ, ಅನುಭವ್ಸಿನೇ ತೀರಾನಾಗಿದ್ದ! ಅಕ್ಕ ತಂಗಿ ಚಿಕ್ಕ ಮಕ್ಳನಾ ಬಿಟ್ಟಾನಲ್ಲ! ಅವ್ನು ಬೀದಿಗೆ ಬಿದ್ರೆ ಯಲ್ರು ಕದ ಮುಚ್ಚಿಕೊಳ್ಳುತ್ತಿದ್ರು… ಅವ್ರು ಕುಡಿದು ಗದ್ರಿದ್ರೆ ಮಕ್ಳೇನು…. ದೊಡ್ಡವ್ರು ಒಂದೂ ಯರ್‍ಡು ಬುತ್ತಿಕಟ್ಟಿಕೊಳ್ಳುತಿದ್ರು…
ಇನ್ನು ಕಳ್ಳತನದಲ್ಲೋ ಎತ್ತಿದ ಕೈ…! ಕಣ್ಣು ಮುಚ್ಚಿ ಕಣ್ಣು ತೆರೆಯಾದ್ರಲ್ಲಿ ಆ ವಸ್ತು ಒಡವೆಗಳೆಲ್ಲ ಮಾಯ. ದೇವ್ರ ದುಡ್ಡಿಗೆ ಕೈ ಹಾಕುತ್ತಿದ್ದ ಭೂಪ! ಯಲ್ರಿಗೆ ತಲೆನೋವಾಗಿದ್ದ.
ಯಿನ್ನು ಸುಳ್ಳು ತನದಲ್ಲೋ… ಯೇಳು ಹಳ್ಳಿನೇ ಸೋಲು ಬಡಿದ ಭೂಪ. ಊರು ಜಗಳಗಂಟ. ಬಡಿಸಿಗಂಡು ಬಡಿಸಿಗಂಡು ಮೈಮನವೆಲ್ಲ ಮರಗಟ್ಟಿ ಕಲ್ಲು ಕಲ್ಲು ಕಗ್ಗಲ್ಲಾಗಿದ್ದ. ಅಷ್ಟೇ ಅಲ್ಲ… ಹತ್ತು ಮಂದೀನ ಬೀಸಿ ಒಗೆದು, ಓಟ ಕಿತ್ರೆ… ಚಿರತೆಯಷ್ಟು ವೇಗದಿ ಓಡಿ… ಓಡಿ… ಗುಡ್ಡ ಗಾಡು ಅಡವಿ ಸೇರಿದಾ ಅಂದ್ರೆ… ಮತ್ತೆ ಹುಲಿಯಂಗೆ ಪ್ರತ್ಯಕ್ಷನಾಗುತ್ತಿದ್ದುದು ತಿಂಗಳಿಗೋ. ಮೂರು ತಿಂಗಳಿಗೋ…?!
ಯಿವ್ನ ಸಹವಾಸ ಯಾಕೆ ಅಂತಾ ಕೆಲವ್ರು ರಕ್ತ, ಕಾಳು, ಕಡಿ, ಬಟ್ಟೆ, ಬರೆ ಕೊಟ್ಟು ಒಳ್ಳೆಯವರಾಗ್ಲು ಪ್ರಯತ್ನಿಸುತ್ತಿದ್ರು…
ಅಬ್ಬಾ! ಎಲ್ಲಿರುತ್ತಿದ್ದ ಹೋಗುತ್ತಿದ್ದ ಒಂದೂ ಒಬ್ರಿಗೆ ಗೊತ್ತಿರಲಿಲ್ಲ… ತಿಂದು ತಿಂದು ವಳ್ಳೇ ಅಡ್ಡಿ ಹಂದಿಯಂಗೆ, ಮೇಲಿಂದ ಕೆಳಗೆ ಏಕಾ ಸೀಟೀ…. ಹಲ್ಬಿಟ್ರೆ ಅವೊಂದೇ ಕಾಣಾವು! ಅಂಥಾ ತೀರಿಗೆ ಅಷ್ಟು ಉರಿತಿದ್ದ! ಕಿಡಿ ಕಿಡಿ ಭಸ್ಮಾಸೂರನೇ ಆಗಿದ್ದ! ಯೀಗ ಹೋಗಿ ಹೋಗಿ ಅವನ ಮೇಲೆ ಯಿವ್ರೆಲ್ಲ ಕುಸ್ತಿ ಒಗೆದಾರಲ್ಲಾ…. ಎಂದು ಜನ್ರೆಲ್ಲ ಬೆಚ್ಚಿಬಿದ್ರು…!
ಯಿದೇ ಛಾನ್ಸು ಅಂತಾ… ಹಟ್ಟಿ ಮಣೆಗಾರರ ಹತ್ರ, ಸೋಮಣ್ಣ ಒಂದು ದಿನ ಟೆಂಟು ಹಾಕಿದ. ಸೋಮಣ್ಣನ ಮಾತೆಂದ್ರೆ ಕಡ್ಡಿ ಯರ್‍ಡು ತುಂಡು ಮಾಡ್ದಿಂಗೇ… ಸೋಮಣ್ಣನ ಕಂಡು ಮಲ್ಲಣ್ಣ ಜೊಲ್ಲಣ್ಣ ಸಾಬಣ್ಣ…. ತ್ವಟ್ಗು ಮುಟ್ಟಿ ಮುಟ್ಟಿ ನೋಡಿಕೊಂಡ್ರು… ಆದ್ರೂ… ಅಂಗೇ, ಕಂಡೂ ಕಾಣದಂಗೇ, ಕೇಳಿದ್ರೂ ಕೇಳ್ಸಿದಂಗೇ ಮೂವ್ವರೂ ನಾಟ್ಕ ಮಾಡತೊಡ್ಗಿದರು.
ಸೋಮಣ್ಣನ ಹತ್ರ ಯಿಂಥಾ ಅವತಾರವೆಲ್ಲ ನಡಿಯಲ್ಲ! ಸೀದಾ ಸಾದಾ… ಹಂಗೆ ಬಲು ಬಿಕ್ಕಟ್ಲಿ ಬಂದವನು! ಯಿಂಗಾಗಿ ವೂರು ಕೇರಿಗೇ ಫೇಮಸ್ಸು ಅನ್ನೋದಕ್ಕಿಂತಾ ಅಸುವಲ್ದನೆಂದು ಜನ್ರು ಜರ್‍ಜರಿತರಾಗುತ್ತಿದ್ರು…
‘ಥೂ… ನಿಮ್ ಜಲ್ಮಕಿಷ್ಟು ಬೆಂಕಿ ಹಾಕಾ… ಯಿಷ್ಟು ಮಾತುಗಳು ನಿಮ್ಗೆ ಬೇಕಾಗಿದ್ವಾ? ಬಂದಿದ್ದಲ್ಲಾ ಭಾರ್‍ಸಿದ್ದಲ್ಲಾ ಉಂಡಿದ್ದಲ್ಲಾ ಕಂಡಿದ್ದಲ್ಲಾ! ಕೊಬ್ರಿ ಉಸಾಬರಿ ಯಾಕೆ ಬೇಕಾಗಿತ್ತೇಳ್ರೀ? ಹೊಟ್ಟೆ ತುಂಬಾದಲ್ಲಾ ನೆತ್ತಿ ತುಂಬಾದಲ್ಲಾ… ಯೀಗ ಅನುಭವಿಸ್ರೀ….! ಕ್ವಾಣಗರ ಸಳ್ಳೆ ತಿಂದಂಗಾಗುತ್ತೇನ್ರಲೇ? ಯೀರಿ, ಲಲ್ಡಿ, ಪಚ್ಚಿ, ಗುಂಡ್ಗೆ, ಎದೆಗೂಡಿನ ಶೆರಿಬಿ ತುಂಡು ಸವಿದಾಂಗಾಗುತ್ತೇನ್ರಲೇ? ಹೋಗಿ ಹೋಗಿ ವೂರು ಕೇರ್‍ಯಾಗ್ಳು ಕೊಬ್ರಿ ಬಟ್ಲಕೆ ಆಸ್ಬಿದ್ದು ಯೀಗ ಮರ್‍ಯಾದೆ ಮಾನ ಮೂರು ಕಾಸ್ಗೆ ಹರಾಜಾಕುತಿದ್ದಾನೆ! ನಿಮ್ ಹೆಂಡ್ರು, ಮಕ್ಳತಾಗೆ ಬಂದು ಮಲ್ಗುತ್ತಾನೆ! ಅವ್ನು ಸುದ್ದಿ ನಿಮ್ಗೆ ಬೇಕಾಗಿತ್ತಾ? ಕೆಲ್ಸಕ್ಕೆ ಬರ್‍ದು ಕೆಲ್ಸವೆಂದ್ರೆ ಯಿದೇ ನೋಡ್ರೀ’ ಅಂತಾ ಸೋಮಣ್ಣ ಅವರು ಬೆರಳು ತಗಂಡು ಅವ್ರ ಕಣ್ಗೇ ಯೆಟ್ಟಿದ.
“ನಮ್ಮೆ ಯಿದೆಲ್ಲ ಹಕೀಕತ್ತು ಗೊತ್ತಿಲ್ಲ ಬಿಡು! ಆಹಾ… ಅವ್ನು ಹಿಂಗೆ ಅಂದಾನಾ?! ಅವಳಮ್ಮನ ಡಿಗ್ರುನ್ಹಾಡ. ಅವ್ನ ಮುಗ್ಳಿನ್ಹಾಡ. ಅವ್ನ ಹೆಂಡ್ತಿ ಬೊಕ್ಕಣಾನ್ಹಾಡ ಯೆಷ್ಟು ರಸಕೆ ಹುಟ್ಯಾನೆ ಅವ್ನು… ಅವ್ನು ಸಿಗ್ದು ತೋರಣ ಕಟ್ಟಿ ಬಿಡ್ತೀವಿ! ನಮ್ ಸುದ್ದಿಗೆ ಬಂದ್ರೆ ಉಡುದಾರ ಹರ್‍ದು ವೂರು ಬಾಗ್ಲಿಗೆ ಕಟ್ಬಿಡ್ತೀವಿ! ಕರುಳು ಹರ್‍ದು ಕೋಳಿ ನಾಯಿಗೆ ಹಂಚಿಬಿಡ್ತವೆ… ಬೋಳಿ ಮಗನು… ಸೂಳೇ ಮಗನು… ನೆಟ್ಗೆ ಹೆಂಡ್ತಿತಾಗೆ ಮಲ್ಗಾದು ಗೊತ್ತಿಲ್ಲ… ನಮ್ನ ಹೆದ್ರುಸ್ತಾನೇನು?!’ ಎಂದು ಜೊಲ್ಲಣ್ಣ, ಮಲ್ಲಣ್ಣ, ಸಾಬಣ್ಣ ಮೂವ್ವರೂ ತ್ರಿಮೂರ್‍ತಿಗಳಂಗೆ ಒಟ್ಟಿಗೆ ಎದ್ದು ನಿಂತ್ರು.
‘ಛೇ ಛೇ ದನಾ ತಿನ್ನೋ ನಿಮ್ಮ ಬುದ್ಧಿ ಲದ್ಧಿ ಯರ್‍ಡೂ ಒಂದೇ! ಸೇಮು ದನಾನೇ ಆಗೀರಿ! ಥೂ ನಿಮ್ನ… ಹಂಚಿಕೊಂಡು, ಹೊಂದಿಕೊಂಡು ನೆಟ್ಗೆ ಬಾಳಾದು ಗೊತ್ತಿಲ್ಲ. ನಿಮ್ಗೇ…! ಕೇರಿ ಮಣೆಗಾರರೆಂದ್ರೆ ವೂರ್‍ಗಾಳ ಗೌಡ್ರು, ಕುಲಕರ್‍ಣಿ, ಶ್ಯಾನುಭೋಗ್ರು… ಗಂಚಿಗಾರ ಅಂತಾ ತಿಳುಕೊಂಡ್ರೀ…. ಸರಿಯಾಗಿ ಕುಂಡಿ ತೊಳಕಾಂಬಾದು ಗೊತ್ತಿಲ್ಲ…. ಕಣ್ಣುಗ್ಳು ನೆತ್ತಿ ಮೇಲೆ ಬಂದಾವೆ. ತೆಲ್ಗಿ ಕಾಲ್ಮರಿ ಕೇಳ್ತಿದ್ದೀರಿ… ಒಬ್ರ್ನ ನೋಡಿದ್ರೆ ವಬ್ರಿಗೆ ಆಗಲ್ಲ. ಪಿತ್ರು ಪಿತ್ರು ಹುಡುಕುತ್ತೀರಿ… ಯಿಂಗ್ಯಾದ್ರೆ ಯಂಗೇ? ದೇವ್ರಿಗಿಟ್ಟ ಕೊಬ್ರಿಗಳು ಆವು! ನೂರಾರು… ಯಲ್ರು ಸಮನಾಗಿ ಪಾಲು ಮಾಡಿಕೊಂಡು ತಿಂದಿದ್ರೆ ಏನಾಗುತಿತ್ತು?! ದೇವ್ರಿಗೆ ಪ್ರೀತಿ ಆಗುತಿತ್ತು… ಅವ್ನು ತಿಮ್ಮಣ್ಣ ಮೂರೇ ಮೂರು ಕೊಬ್ರಿ ಬಟ್ಲ ಕೊಡ್ರಿ… ದನದ್ದು ಸಳ್ಳೆ ಪಲ್ಲೆಗೆ ರುಬ್ಬಿ ಹಾಕಿದ್ರೆ ಬಲು ರುಚಿ ಬರುತ್ತೆ… ದೇವ್ರಿಗೆ ಒಡೆದ ಕಾಯಿಗಳಿರ್‍ಬೇಕಾದ್ರೆ ನಾನೇನು ರಕ್ಕ ಕೊಟ್ಟು ಕೊಂಡು ತರ್‍ಲೀ…. ಅಂತಾ ಅಂಗಲಾಚಿದ! ಕೊಟ್ಟಿದ್ರೆ ನಿದ್ದೇನು ಗಂಟು ಹೋಗುತ್ತಿತ್ತೇಳ್ರಿ? ನೀವು ಯಿನ್ನು ದೊಡ್ ಮನುಶ್ಯರು ಅನ್ಸಿಕೊಳ್ತಿದ್ರಿ… ಕೊಬ್ರಿ ಕಾಳಗ ತಪ್ಪುತ್ತಿತ್ತು. ಯಿಂಗೆ ವೂರು ಕೇರಿ ಪಾರ್‍ಟಿ ಆಗಾದು ತಪ್ಪುತ್ತಿತ್ತು… ಏನು?!’ ಅಂತಾ ಸೋಮಣ್ಣ, ಅವ್ರು ಮೂವ್ವರ್‍ನ ಭೇಷ್ ಒಳ್ಳಾಕೆ ಹಾಕಿ ರುಬ್ಬತೊಡಗಿದ.
ಯೀ ಮೂವ್ವರ ಯೀ… ಮೂರು ಮಕಗಳು – ಮೂರು ಕಣ್ಣಿನ ಚಿಪ್ಪಾದ್ವು ಆದ್ರೂ ತೋರ್‍ಪಡ್ಸಿಗಳ್ಲಿಲ್ಲ.
‘ಸೋಮಣ್ಣ ನೀ ಸದ್ರಾ ಕೊಟ್ರೆ ತುಲ್ಲಾಕೆ ಕೈ ಯಿಡ್ತೀಗಿ! ರ್‍ವಾಸ, ಪಂಥಾ, ಅರಿವು, ಅಳ್ತೆ, ಪ್ರಜ್ಞೆಯಿಲ್ದಾನು ಮಾತಾಡಿದಂಗೇ ನೀ ಮಾತಾಡ್ತೀಗಿ! ಯಿದು, ಕೌರವರ ನಾಡು, ಸತ್ಯಹರಿಶ್ಚಂದ್ರಕಾದ ಸುಡುಗಾಡು, ಪಾಂಡವರು ಮೂರು ಹಳ್ಳಿ ಕೇಳಿದ್ರು! ಕೌರವರು ಬಿಟ್ಟು ಕೊಟ್ರಾ?! ಸೀತಾ ದೇವಿಗೆ ಏಳು ಮಂಡಲ ಹಾಕಿ, ಯಿದ್ನ ದಾಟಿ ಹೋಗ್ಬೇಡ ತಾಯಿ… ಅಂತಾ ಲಕ್ಷ್ಮಣದೇವ್ರು ಅಂದ… ಕೇಳಿದ್ಲಾ….? ನಾವು ನಮ್ಮಪ್ಪನ ತುಣ್ಣೆಗೆ ಹುಟ್ಟೀವಿ! ಅವರಿವರಂಗೆ ವೂರ್‍ಗಾಳ ಗೌಡ್ರು, ಕುಲಕರ್‍ಣಿ, ಶಾನುಭೋಗರ ಅಷ್ಟೇ ಏಕೆ ಬ್ರಿಟೀಶರ ತುಣ್ಣೆಗೆ ಹುಟ್ಟಿಲ್ಲ! ನಾವು ಅವ್ನಿಗೆ ಬರೀ ಕೊಬ್ರಿಯಲ್ಲ. ಗುಕ್ಕು ನೀರೂ ಬಾಯಿಗೆ ಹಾಕಾರಲ್ಲ… ಅದೆಲ್ಲಿಗೆ ಹೋಗ್ತಾನೋ ಹೋಗ್ಲಿ ಲವ್ಡಿ ಮಗ! ಹಡ್ಸಿ ಚಿನಾಲಿ, ಸುವ್ವಾರ್, ಸೂಳೇ ಮಗ! ಅವನಿಗೈತಿ ನಮಗೈತಿ… ಹುಟ್ಟೋದೂ ಒಂದು ದಿವ್ಸಾ! ಸಾಯೋದೂ… ಅರೆ ನಿಮ್ಸಿ… ಜೊಲ್ಲಣ್ಣ ಜೊಲ್ಲು ಸಿಡ್ಸಿಗ್ಯಾಂತ, ವುಗ್ಳು ನುಂಗಿಕ್ಯಾಂತ ಕ್ವಾರೆ ಮೀಸೆನಾ ಹುರಿ ಮಾಡಿ, ತೊಡೆ ತಟ್ಟಿ, ಕಟಿ ಕಟಿ ಹಲ್ಲು ಮಸ್ದೆ.
ಮಾತ್ಗೆ ಮಾತು ಬೆಳೆದು… ಕಿಡಿ ಕಿಡಿ… ರಾವು ರಾವು… ಎದ್ದೇಳಿತು! ಆ ಕ್ಷಣ-ವೂರು ಕೇರಿ ಬಿಸಿಯೇರ ತೊಡ್ಗಿತು….
‘ತುಣ್ಣೆಂಥಾ ಕೊಬ್ರಿಗೆ ನಿಮ್ ಹೆಂಡ್ರು ಮಕ್ಳ ತುಲ್ಲು ಊರು ಬಾಗ್ಲು ಆಗಿದೆ! ಯೀಗ ನಮ್ ಊರು ಕೇರಿನೇನು ಕಟ್ಟೆಮನೆನೇನು ಹದಿನೆಂಟು ಹಳ್ಳಿಗಳನೇ ಪಾರ್‍ಟಿ ಪಂಗಡ ಮಾಡ್ತೀರಾ?! ಯಿದ್ಯಾವ ನ್ಯಾಯ? ಯೇನು ಅನ್ಯಾಯಲೇರೇ…?? ನಿಮ್ ನಿಮ್ ತುಣ್ಣೆ ತಿಂಡಿಗೆ ವೂರು ಕೇರಿಯ ನಿದ್ದೆ ಹಾಳ್ ಮಾಡೀರಿ… ಯಿತ್ತ ಕೇರಿ ಮಾದಿಗರ ಬಾಯಿ ಮೇಲೆ ಬಡಿದು ವುದ್ಧಾರವಾಗಲು ಪ್ರಯತ್ನಿಸ್ತೀರಲ್ಲಲೇ? ನಿಮ್ ಮಕ್ಳು ಮರಿಗೆ ಒಳ್ಳೇದು ಆಗ್ಬೇಕೋ ಬೇಡವೋ?’ ಸೋಮಣ್ಣ ಅಲ್ಲಿದ್ದವರಿಗೆ ಗೀತೋಪದೇಶ ಮಾಡಲು ಶುರುವಿಟ್ಟುಗೊಂಡ. ಯೀ ಮೂವ್ವರಿಗೆ ಸೋಮಣ್ಣನ ಮಾತುಳು ಪಥ್ಯವಾಗ್ಲಿಲ್ಲ! ಮಕಗಳು ಜೋಲು ಬಿದ್ವ… ಆದ್ರೂ….
‘ನಮ್ಮಲ್ಲಿ ದುರ್‍ಯೋಧನನ ಛಲ, ಕೌರವರ ಹಠ, ಹಾವಿನ ದ್ವೇಷ, ತ್ರಿಮೂರ್‍ತಿಗಳ ಸೇಡಿದೆ…. ಅವ್ನಿಗೆ ಕೊಬ್ರಿಯಲ್ಲ ಯಿನ್ನು ಮುಂದೆ… ಸಳ್ಳೆಪಾಲಾಗಲಿ, ಒಂದೆಲೆ ಒಂದಡಿಕೆಯಾಗಲಿ, ಅಣ್ಣ ತಮ್ಮಗಳ ಬಾಬತ್ತು, ಈಳೇವಿನ ವಂತಿಗೆ, ತೆರವು, ಬಿಟ್ಟೆ ಸರತಿ… ಸುಡುಗಾಡಿನ ಪಾಲಾಗ್ಲಿ… ಯಿನ್ಮೆಲೆ ಯಾವುದೂ ಹಂಚಲ್ಲ! ಯೇನು ಕಿತ್ತು ಗುಡ್ಡೆ ಹಾಕ್ತಾನೋ ಹಾಕ್ಲಿ! ನಾವೂ ಒಂದ್ ಕೈ ನೋಡೇ ಬಿಡ್ತೀವಿ’ ಎಂದು ಮೂವ್ವರು ಒಗ್ಗಟ್ಲಿ ಮೀಸೆ ಹುರಿ ಮಾಡಿ ಬೊಬ್ಬಿಟ್ರು…
ಸೋಮಣ್ಣನಿಗೆ ತಲೆ ಬಿಸಿಯಾಗ ತೊಡಗಿತು. ಯರ್‍ಡು ಕೋಣಗಳ ಮಧ್ಯೆ ತಂಗ್ಡಿ ಗಿಡದಂತಾದ!
‘ಕೇಳಾರಿಗಾದ್ರೆ ಹೇಳ್ಬಹುದು. ನೀವು ತಲಿಗೆ ಕಾಲ್ಮರಿ, ಪಾಪಸಿ… ಕೇಳೋ ತಲಿವೈಕ್ರು… ಯೀ ವೂರು ಕೇರಿಗೇನು ಕೇಡುಗಾಲ ಕಾದೈತೋ….? ಶಿವ್ನೇ ಭವ ಹರ್‍ನೇ… ಯೇನು ಕಾಲ ಬಂದೈತೋ… ಅವುನು ನೋಡಿದ್ರೆ ಯೀ ಸಲದ ಅಲಾಯಿ ಹಬ್ಬದಾಗೆ… ಮಟ ಮಟ. ಮಧ್ಯಾಹ್ನದ ಸರಗಸ್ತಿ ದಿನ… ಯಿಲ್ಲಾ ರಾತ್ರಿ ಸರಗಸ್ತಿ ದಿನ ನಿಮ್ ಮೂವ್ವರ್‍ನ ಒಂದೇ ತುಂಡಿಗೆ ಕೋಣನ ಕತ್ರಿಸಿದಂಗೆ ಕತ್ರಿಸ್ಲಿಲ್ಲಾ… ನನ್ ಹೆಸ್ರು ತಿಮ್ಮರಾಜುನೇ ಅಲ್ಲ ಕೋತಿರಾಜು ಅಂತಾ ಕರಿರಿಲೇ… ಅಂತಾ ಗೊಂಡು ಗೊಡ್ಲಿನೇ ಮಸೀತಿದ್ದಾನೇ… ನಾ ಯಾವ ವೂರು ಕೇರ್‍ಯಾಗ್ಹೋಗಿ ಬಚ್ಚಿಟ್ಟುಗೊಳ್ಲಿ?’ ಸೋಮಣ್ಣ ಜಲ ಜಲಾ ಬೆಮತು ಹೋದ.
‘ಥೂ ನರಸತ್ತಾನೇ ಯೆದ್ದು ನಡೀ ಆಚೆ ಕಡ್ಗೇ… ಅವನೇನು ಹುಲಿ ಪಾಲು ಕುಡಿದು ಹುಟ್ಯಾನೇನ್ಲೇ? ನಮ್ಮಂಗೆ ನಿಮ್ಮಂಗೆ ಅದೇ ತುಲ್ಲಾಗೆ ಹುಟ್ಟಿ ಬಂದಾನೆ. ಅದೇ ತುಲ್ಲಿಗೀಗ ಆಸೆ ಬಿದ್ದು ತುಲ್ಹಾರಿಯಂಗೇ ಒದಿಸಿಗೊಂಡು ಐದಾರು ಸಲ ಜೈಲು ಕಂಡಾನೇ… ಬೊಗಳೋ ನಾಯಿ ಕಚ್ಚಲ್ಲ! ಕಚ್ಚೋ ನಾಯಿ ಬೊಗಳಲ್ಲ ಅಂಬೋನವನು! ನಿಗ್ರಾದೂ ಅಷ್ಟ್ರಾಗಿದೆ! ನಾವೇನು ಕೈಗೆ ಬಳೆ ತೊಟ್ಟಿಲ್ಲ! ಮೂರು ಮೊಳದ್ದು ಸೀರೆ ಉಟ್ಟಿಲ್ಲ. ಒಂದ್ಕೈ ನಾವೂ ನೋಡ್ಲಿಲ್ಲಾ ನಮ್ಮಪ್ಪನ ತುಣ್ಣೆಗೆ ನಾವು ಹುಟ್ಟೇ ಇಲ್ಲಾ….’ ಅಂತಾ ಜೊಲ್ಲಣ್ಣ, ಸಾಬಣ್ಣ, ಮಲ್ಲಣ್ಣ ಜಂಟಿಯಾಗಿ ಮೀಸೆ ಮೀಸೆ ಕಿತ್ರು.
ಸೋಮಣ್ಣನಿಗೆ ಗೊತ್ತಾತು! ಕೋಣನ ಮುಂದೆ ಕಿನ್ನರಿ ಭಾರ್‍ಸಿದಂಗೆಂದು! ಮೆಲ್ಗೆ ಜಾಗ ಖಾಲಿ ಮಾಡಿ ಹೋಗಾದು ಪಾಡೆಂದು ಯೆದ್ದ…
‘ನಾನಿನ್ನು ಬರ್‍ತೀನಿ! ನಿಮ್ ಸಹವಾಸವೂ ಹೆಣ್ಣು ಕರಡಿಯ ಸಹವಾಸನೂ ಒಂದೇ…. ನೀವೋ… ಸೇರಿಗೆ ಸವಾಸೇರು! ಅವನೋ ಸೀಮ್ಯಾಗಿಲ್ಲದವನು! ಭೇಷ್ ಸೇರ್‍ಕೊಂಡ್ರಿರೇಳು…’ ಎಂದು ವಟ ವಟ ಅಂದ್ಕೋಳ್ತಾ ಸೋಮಣ್ಣ ಮೆಲ್ಲಗೆ ಟುವ್ಹಾಲು ಜಾಡ್ಸಿಗೊಂತಾ ಯಿವ್ರತಾಗಿಂದಾ ಪೆಂಟೆಕಿತ್ತ.
ಸೋಮಣ್ಣನ ತಲೆ ತಲೆಯೆಲ್ಲ ಗಿರ್ ಗುಟ್ಟಿ ಹೋಯ್ತು! ‘ಥೂ… ಯಿವ್ರ್ನ ಮನುಶ್ಯರು ಅಂತಾ ಯಾರು ಅಂಬುತ್ತಾರೆ ಹೇಳಿ?’ ಅಂತಾ ತನ್ನಷ್ಟಕ್ಕೆ ತಾನೇ ಪ್ರಶ್ನಿಸಿಕೊಂಡು ನಾಲ್ಕು ಹೆಜ್ಜೆ ಕಿತ್ತಿಟ್ಟ! ಅಷ್ಟ್ರಾಗ…
ಅಲ್ಲೇ ಹದ್ದಿನಂಗೆ ಗುಡ್ಲು ಹತ್ರ ಬಕ ಪಕ್ಷಿಯಂಗೆ ಸಂಗಿನೊತ್ತಿನಿಂದಾ ಕಾದಿದ್ದ… ತಿಮ್ಮಣ್ಣನಿಗೆ ಸೋಮಣ್ಣ ಹಾವಿನಂಗೆ ಸಿಕ್ಕಿದ್ದೇ ತಡಾ ಹಂಗೆ ಅವನನ್ನು ತನ್ನ ಗುಡಿಸಿಲಿಗೆ ಅಂತಿರ್‍ಲೇ ಕರೆದೊಯ್ದು ತಲ್ಯಾಗುಳ್ದು ಕೂದ್ಲು ಹಿಕ್ಬಿಡ್ಸಿದಂಗೆ ಒಂದಡೆಯಿಂದಾ… ಹಿಂಗಿಡಿಸ್ತಾ ಹೋದ. ಸೋಮಣ್ಣ ಎದೆಗೆ ಒದ್ದಂಗೆ ಅವ್ರು ಹೇಳಿದ್ದನ್ನೆಲ್ಲ ಒಂದ್ ಕಡೆಯಿಂದ ಹಲ್ಲು ಸುಳಿಯಂಗೆ… ಹೇಳುತ್ತಾ ಹೋದ.
‘ಯೀಗ ಕೊಬ್ರಿ ಕಾಳಗಕ್ಕೆ ಸಿತಾರ ಬಂತ್ನೊಡು’ ಅಂತಾ ಮನಸ್ಸಿನಾಗೆ ಅಂದ್ಕೊಳ್ತಾ… ತಿಮ್ಮಣ್ಣನ ಮಿಂಗಾನು ನೋಡ್ದಿಂಗೆ ನೋಡ್ತಾ ಕುಂತ…
‘ಓಹೋ ಮಣ್ಯಾರಿಗೆ ಮಣೆತ್ತೆ ಕಣ್ಹೀಕಲ್ಲು ಕೋಣ! ಅಂಬಂಗೆ ಯಿವ್ರನ ಕಟ್ಟೇ ಮನೇಗೆ ಎಳ್ತೀನಿ ಸೋಮಣ್ಣ. ಹುಟ್ಟಿದ್ದೆಲ್ಲ ಕಾಣ್ಸೆ ಏಳು ಅಂಗ ಮೂರು ಭಂಗ ಕಾಣ್ಸೆ… ಯೇಳು ಕೆರೆ ನೀರು ಕುಡ್ಸಿತ್ತೀನಿ’ ಎಂದು ಎದ್ದು, ಪುಟ್… ಪುಟ್… ಮೋಟ್ರು ಹತ್ತಿ, ಸೀದಾ ದ್ಯಾಸಂದ್ರದ ಕಡೆಗೆ ರವೌದೆಯಂಗೆ ಹೊರಟೆಬಿಟ್ಟ!
ಹತ್ತೇರೆ ಎಂಥಾ ಕಾಲ ಬಂದೈತಪ್ಪಾ ನಮ್ಮೂರು ಕೇರಾಗೆ ಒಬ್ರನ್ನ ನಾಯಾಪಂಚಾಯ್ತಿ ಹೇಳೋ ಹಮ್ಮಿರರೇ ಯಿಲ್ದಾಂಗಾದ್ರು… ಐವತ್ತು ವರ್‍ಷದ ಹಿಂದೆ ನಾನೆಂಗೆ ಹರ್‍ಷದಿ ಇದ್ದೇ… ಆ ಕಾಲ, ಆ ಜನ, ಆ ನೆಲ, ಗಾಳಿನೇ ಚೆಂದಿತ್ತು! ಹೀಗೀಗ ಎಲ್ಲಾ ಬದಲಾಗೈತೇ…. ತಿಮ್ಮಣ್ಣ ಒಬ್ನೇ ಏನೇನೋ ಒಟಗುಟ್ಟಿಗ್ಯಾಂತ ಬಿರಿಸ್ಲಿ ಹೊಂಟಿದ್ದ…
ತಿಮ್ಮಣ್ಣ ಹೊಂಟ ದೆಬ್ಬಿಗೆ ಕೆಂಧೂಳ ಕೈಲಾಸಕ್ಕೆ ಹಾರಿತು. ತಲೆಗೂದಲು ನವಿಲು ಗರಿಗಳಂಗೆ ನೆಟ್ಟೆ ನಿಗ್ರಿ ನಿಂತವು…
ಕಟ್ಟೆ ಮನೆಯ ಮಣೆಗಾರರನ್ನು ತಿಮ್ಮಣ್ಣ ಕಂಡು ಕೊಬ್ರಿ ಕಾಳಗದ ಬಗ್ಗೆ ವಿವರಿಸಿ, ಮುಂದಿನ ಮಂಗಳವಾರ ಮಾಯಕಾರ್‍ತಿ ವಾರದ ದಿನ ನಿಟ್ಟೂಸಿರು ಬಿಟ್ಟ ನ್ಯಾಯ ಪಂಚಾಯ್ತಿ ಸೇರಲು… ವಾಯಿದೆ ಗೊತ್ತು ಮಾಡಿದರು.
ಅಂತು ಇಂತು… ದ್ಯಾಸಂದ್ರದ ಕಟ್ಟೆಮನೆಗೆ ಕೊಬ್ರಿ ಕಾಳಗ ವರ್‍ಗಾವಣೆಗೊಂಡಿತು! ಅಂದು ಮಂಗಳವಾರ ದಿನ ತಿಮ್ಮಣ್ಣ ನಡುಕಟ್ಟಾಕಿ, ತನ್ನ ಪರವಾಗಿ ಸಾಕ್ಷಿದಾರರನ್ನಾಗಿ ಶಿವಾನಂದ ಭಜಂತ್ರಿ, ರಾಜಣ್ಣ ಬಡಿಗೇರ, ಕಡೇಮನಿ ಕಲ್ಲಣ್ಣ ನನ್ನು ಕರೆದು ತಂದಿದ್ದ.
ಯವೆಲ್ಲ ಫುಲ್ ಭಟ್ಟಿ ಸಾರಾಯಿ ಏರ್‍ಸಿ… ಟೈಟ್ ಆದ್ರು… ‘ಯಾರ್‍ದೋ ರಕ್ಕ… ಯಲ್ಲಮ್ಮನ ಲೆಕ್ಕ. ದಿನಾ ವೂರು ಕೇರ್‍ಯಾಗೆ ಹಿಂಗಿರ್‍ಲಿ… ಜಗಳ, ತಂಟೆ, ತಕರಾರು…’ ಅಂತಾ ಯೀ ಮೂವ್ವರು ಗುಸು ಗುಸು ನಡ್ಸಿದ್ರು…
ಈಗಾಗಲೇ ಒಳ ಒಳಗೆ… ಯಾರಿಗೆ ಗೊತ್ತಾಗದಂಗೇ… ವುಪಾಯವಾಗಿ ರಾಂಪುರ, ಒಡೇರಹಳ್ಳಿ, ಜಮ್ಲಿಮಲಿಕಿ, ತಮ್ಮೇನಹಳ್ಳಿ, ಕೋನಾಪುರ, ಬೊಮ್ಮಕ್ಕನಹಳ್ಳಿ, ಸಿರೇಕೊಳ್ಳ, ಕರಡಿಹಳ್ಳಿ, ತಿಮ್ಮಲಾಪುರ, ವಿಠಲಾಪುರ, ವೆಂಕಟಾಪುರ… ಜೀರಳ್ಳಿ, ಬಿಸಲಹಳ್ಳಿ, ಏಳು, ಮಂಡಲರಾಯಾಪುರ, ಆಶೋಕ ಸಿದ್ದಾಪುರಗಳಿಗೆ ಪುಟ್ ಪುಟ್ ಮೋಟ್ರು ಮೇಲೆ ಹೋಗಿ, ಅಲ್ಲಿನ ಕೇರಿ ಮಣೆಗಾರರಿಗೆ ಭೇಷ್ ತಿನ್ಹಾಕಿ, ಕೈಗೆ ಬಾಯಿಗೆ ಬೆಚ್ಚಗೆ ಮಾಡಿ, ತನ್ನ ಪರವಾಗಿ ವಾದ ವಿವಾದ ಮಾಡಿ, ನ್ಯಾಯ ಕೊಡಿಸುವಂತೆ ತಿದ್ದಗ್ಗಲ್ಲು ಮಾಡಿ ಬಂದಿದ್ದ! ಯೇನ್ ಮಾಡಿ ಏನ್ ಬಂದ್ರೇನು? ನಮ್ ಜನ ಸಣ್ಣ ಸೂಳೇ ಮಕ್ಳಿದ್ದಂಗೇ… ಯಾವಾಗ ಯತ್ತ ವಾಲುತ್ತಾರೋ ಅಂತಾ ತಿಮ್ಮಣ್ಣ ಅಳ್ಳೋಗಿದ್ದ…
ಅಂದು ಕಟ್ಟೆ ಮನೆಯಲ್ಲಿ-ಹದಿನೆಂಟು ಹಳ್ಳಿಯ ಹದಿನೆಂಟು ಪಣಕಟ್ಟಿನ ಕೇರಿ ಮಣಿಗಾರರೂ… ಕುರುಬುಗೌಡರು, ಕುಲದ ಗುರುಗಳು, ವೂರು ಗೌಡರು, ಸಾಕ್ಷಿ ಗುರುಗಳೂ…. ಕಟ್ಟೆ ಮನೆಯ ಪಂಚ ಪಾಂಡವರಂಗೆ ಐದು ಜನ ಯಜಮಾನ್ರು… ಕರಿಯ ಕಂಬಳಿ ಹಾಸಿ, ಕಳಸ ವಿಭೂತಿ ಹೂಡಿ, ದೀಪ ಮುಡಿಸಿ ಪದ್ಧತಿಯಂಗೆ ವೀಳ್ಯದೆಲೆ ದಕ್ಷಿಣೆಯಿಟ್ಟು… ತಿಮ್ಮಣ್ಣ ನ್ಯಾಯಸ್ಥಾನದಲ್ಲಿ ದೈವದವರಿಗೆ ತೀರ್‍ಪು ನೀಡಲು ಕೋರಿ ಕೈ ಮುಗಿದು ಎದ್ದು ನಿಂತ!
‘ಹಿಂಗೆ ನೀರಾಗೆ ಯೆಮ್ಮೆ ಮಲ್ಗಿಸಿ… ಅಡ್ಡಗೋಡೆ ಮೇಲೆ ದೀಪವಿಟ್ಟು, ನ್ಯಾಯ ಕೊಡು ಅಂದ್ರೆ ಯಂಗೆ ಕೊಡಾದು? ನಮ್ಮ ಹಿಂದ್ಲುದು ಮುಂದ್ಲುದು ಯೇನು ಗೊತ್ತಿಲ್ಲ! ಯೀಗ ಏಕದಮ್ಮಾಗಿ ತೀರ್‍ಪು ಕೊಡಾದೆಂದ್ರೆ ಯೇನು ತಮಾಶೆನಾ?’ ಯೆಂದು ವೂರು ಗೌಡ್ರು ನಾರಾಯಣಗೌಡ್ರು ಕೇರಿ ಮಣೆಗಾರರ ಮಕಗಳನ್ನೆಲ್ಲ ಗಿಬರಾಡಿಬಿಟ್ರು… ಮೊದ್ಲೆ ಆಪಾಟಿ, ಯಿನ್ನು ಯೀಗ ಕೇಳ್ಬೇಕೆ? ಯಲ್ಲ ಕತ್ರಿಸಿ ಬಿತ್ತು.
‘ಗೌಡ್ರೇ… ನೀವು ಹಾಲು ತುಪ್ಪ ಸಣ್ಣಕ್ಕಿ ಬಾನ ಉಣ್ಣೋ ಜನ್ರು… ನೀವೇ ಹಿಂಗೆ ಸಂಣ್ಣಂಗಿ ಪದವಾಡಿದ್ರೆ ನಮ್ಮಗತಿ ಯಂಗೇ? ಹೀಗಾಗ್ಲೆ ತಿಂಗಳಿಂದ ಹದಿನೆಂಟು ಹಳ್ಳಿಯ ವೂರು ಕೇರಿ ತುಂಬಾ ಸುದ್ದಿ ಮೆರೆಯುತ್ತಿದೆ. ಯೀಗ ನೀವು ಯೇನು ಗೊತ್ತಿಲ್ಲದಾರು ಅಂದಂಗೆ ಅಂದ್ರೆ ಯೆಂಗೇ?’ ತಿಮ್ಮಣ್ಣ ಸೆಡ್ವಿಲಿ ಗೌಡನ ಎಳ್ಳುಕೊಡ್ವಿದಂಗೆ ಕೊಡ್ವಿ ಕೈಬಿಟ್ಟ.
‘ಹೌದ್ಲೇ ತಿಮ್ಗಾ ನನ್ಗೆ ಯೀ ಸಂಧು ಸಮುಸುವಲ್ದು, ನೀವು ಬಾ ಅಂದಿದ್ದಕೆ ನಾನಂಗೇ ಯೆದ್ದು ಬಂದೆ! ನನ್ಗೂ ಯೇನು ಅರ್‍ಥಿಲ್ಲ ಅಮಾಸಿಲ್ಲ ಬಿಡು!’ ಯೆಂದು ವೂರು ಗೌಡ್ರು ಮಾತಿಗೆ ಕೋಪು ಕಲೆ ಹಾಕಿದ್ರು.
‘ರೆಡ್ಡಿ ಹೆಸ್ರು ಮೊದ್ಲು ಎತ್ತಿಗಾ ಅಂಬಂಗೆ…. ಲೇ ತಿಮ್ಗಾ ಕೊಬ್ರಿ ಕಾಳಗದ ಬಗ್ಗೆ ಇನ್ನೊಮ್ಮೆ ಮಗದೊಮ್ಮೆ ರವ್ವಾಟು ಹಂಗೆ ಅನ್ಲೇ… ಬಲು ಪಸಂದಾಗಿ ಹೇಳ್ತೀಗಿ ಕೇಳಾನಾ…’ ಅಂತಾ ಕಟ್ಟೆ ಮನೆಯ ಕಲ್ಲಪ್ಪ ಬೀಸಿ ಕಲ್ಲು ಒಗೆದೇ ಬಿಟ್ಟ!
‘ರಾತ್ರಿಯಲ್ಲಿ ರಾಮಾಯಾಣ ಕೇಳಿ… ಬೆಳಿಗ್ಗೆ ರಾಮ ಸೀತೆಗೆ ಏನಾಗ್ಬೇಕು? ಅಂದಂಗೆ ಕೆಲ್ಸವಿಲ್ಲದ ಕೆಲಸವೆಂದರೆ ಯೀ ಕೊಬ್ರಿ ಕಾಳಗ ನೋಡು! ಯಿಲ್ಲಿ ಯಾರು ಸಣ್ಣ ಬಾಲಮ್ಮ ಅದ್ಯಾರ್‍ಹೇಳು? ಮೂತಿಗೆ ತೂತಿಗೆ ನೆರೆ ಬಂದಾವೆ! ತಲ್ಯಾಗೆ ಕೂದ್ಲು ಯೇಸು ಅದ್ಯಾವೆ ಅಷ್ಟು ನ್ಯಾಯ ಪಂಚಾಯ್ತಿ ಮಾಡಿ ಮುಗ್ಸೀವಿ! ಆಯ್ತು! ಹೇಳೂ ತಿಮ್ಗಾ…’ ಅಂತಾ ಕುರುಬುಗೌಡ್ರು ಮತ್ತೂ ಯಡವಟ್ಲಿ ಬಾಯಿಬಿಟ್ರು….
ತಿಮ್ಮಣ್ಣನಿಗೆ ಕೋಪ ನೆತ್ತಿಗೇರಿತು. ಆದ್ರೂ ಶಾಂತಿ, ಸಮಾಧಾನ, ತಾಳ್ಮೆ ತೋರ್‍ದಿ. ಅಲ್ಲಿದ್ದವರಿಗೆಲ್ಲ ಸೋಜಿಗವೆನಿಸಿತು. ಅಷ್ಟ್ರಾಗೆ…
‘ನೀವೆಲ್ಲ ರಾಕ್ಷಸರು, ದಡ್ಡ ಶಿಖಾಮಣಿಗಳು. ಯೀಗಾಗ್ಲೆ ವೂರು ಕೇರಿಯ ನೆಮ್ಮದಿ, ಸುಖ, ಶಾಂತಿ.. ಯೀ ಜಗಳದಿಂದ ಹಾಳಾಗಿ ನಿಸಂತ್ರಾಗಿ ಹೋಗಿ ಬಿಟ್ಟಾತೆ. ಅಂಥಾದ್ರಲ್ಲಿ ಹೇಳಾಕೇನು ಉಳಿದೈತಿ?’ ಅಂತಾ ನಾನು ನಿಮ್ಮ ಪ್ರಶ್ನೆ ಮಾಡಲ್ಲ! ಅಂತಾ ತಿಮ್ಮಣ್ಣ… ಮೇಲ್ಗೆ ವುಪಾಯವಾಗಿ ನಾಲ್ಗೆ ಒಳ್ಳಿಸ್ದಿ. ಅಲ್ಲಿದ್ದವರಿಗೆಲ್ಲ ಬೆಚ್ಚಗಾಗಿತು. ಮಿಕಿ ಮಿಕಿ ಯಲ್ರು ತಿಮ್ಮಣ್ಣನ ನೋಡಿದ್ರು…
‘ನಾನೂ ಕೇರ್‍ಯಾಗ ಐವತ್ತು ವರ್ಷದಿಂದ ಹರ್ಷದಿಂದ ಊರುಕೇರಿ ಕಸ ಹೊಡ್ತೀನಿ. ಸತ್ತ ದನ ಕರು ಹೊರ್‍ತೀನಿ. ಸಾಸುದ್ದಿ ಮುಟ್ಟಿಸ್ತೀನಿ. ಮದುವೆ ಮುಂಜಿಲಿ ಬಿಟ್ಟಿ ಕೆಲಸ ಮಾಡ್ತೀನಿ. ಸುಡುಗಾಡಿನಲಿ ಎಲ್ರ ಕುಣಿನೂ ನಾನೇ ತೆಗಿತೀನಿ. ಈಳೇವು ಎಲೆಗತ್ರಿ ನಾನೇ ಹಂಚೋನು! ಪಟ್ಟಿ ಎತ್ತಿ, ಊರ ಹಬ್ಬ, ಹೊಲಮ್ಯಾರಿ ಸರಗ ಚೆಲ್ಲೋ ಕುಳಾನೂ ನಾನೇ… ಹೀಗೆ ನಾನಿಲ್ಲದೆ ವೂರು ಕೇರಿ ಇಲ್ಲ… ಪೂರ್‍ಣ ಪರಿಪೂರ್‍ಣ ಪರಿವರ್‍ತನೆಗೊಂಡೀನಿ! ಬಲು ಸುಧಾರಿಸೀನಿ…! ಅಂಥಾದ್ರಲ್ಲಿ ಮೊನ್ನೆ ದಿನ ದಸರಾ ಹಬ್ಬದ ನೂರಾರು ಕೊಬ್ರಿ ಬಟ್ಲಗಳನ್ನು ಪಾಲು ಕೊಡದೆ ಬೇಬಿಟ್ಟಿ ಮಾಡ್ಯಾರೆ! ಅವಮಾನ ಮಾಡ್ಯಾರೇ! ನಾನೂ ಮಣೆಗಾರ ಗೌಡನಲ್ಲವೇ? ನಾನೇನು ಸಣ್ಣ ಮಾದಿಗ ಮುಂಡೆ ಮಗನೇನು? ನನ್ಗೆ ನ್ಯಾಯ, ತಪ್ಪು ದಂಡ ಕೊಡ್ಸಿಬೇಕು ನಿಮ್ಮ ನಂಬಿ ಬಂದೀನಿ. ದೈವದವರು ನನ್ನ ಹೊಟ್ಟೆಯಲ್ಲಿ ಹಾಕಿಕೊಳ್ಳಬೇಕು’ ಎಂದು ತಿಮ್ಮಣ್ಣ ವಿನಯದಲಿ ಅಲ್ಲಿದ್ದವರಿಗೆಲ್ಲ ಕವಣೆಕಲ್ಲು ಬೀಸಿ ಒಗೆದಂಗೆ ಗುರಿಯಿಟ್ಟು ಒಗೆದ.
ಅಲ್ಲಿದ್ದವರೆಲ್ಲ ಮುಂದ್ಲುದು ಹಿಂದ್ಲುದು ಸವರಾಡಿಕೊಂಡರು. ಯಲ್ರ ಮಕಗಳೆಲ್ಲ ಮಸಿಬಟ್ಟೆಯಂಗಾದ್ವು…
‘ಏನ್ರಾಲೇ… ಮಲ್ಲಣ್ಣ, ಜೊಲ್ಲಣ್ಣ, ಸಾಬಣ್ಣ… ನಿಮ್ಮ ಯಜಮಾನ್ರು ಅಂತಾ ಮುಂದಿಟ್ರೆ ನೆರೆತ ಹೆಣ್ಣು ನಮಗಿರಲಿ ಅಂದಂಗೆ ನೀವೇನು ನಡ್ಸಿರೇಲೇ? ಯಿದೇನು ಬ್ರಿಟೀಶರ ಕಾಲನೇ? ನಿಜಾಮರ – ತೊಘಲಕ್ ದರ್‍ಬಾರನೇ? ಒಂದು ಕೇರ್‍ಯಾಗಿದ್ದು, ಒಂದೇ ಪಣಕಟ್ಟಿನವರಿದ್ದು, ಅಣ್ಣ ತಮ್ಮಗಳಾಗಿದ್ದುಕೊಂಡು, ಸೆಂಟಕಿಸಿಲಾರ್‍ದು ಕೊಬ್ರಿಗೆ ಏಳು ಜೊತೆ ಕಾಲ್ಮರಿ ಸವಿಬೇಕೇನ್ರಾಲೇ? ನಿಮ್ಗೈತಿ ಹೈನಾತಿ ದಂಡದ ಶಿಕ್ಷೆಯೆಂದು’ ಕಟ್ಟೆ ಮನೆಯ ಹಿರಿಯ ಮುಖಂಡ ಕೆಂಡಮಂಡಲಗೊಂಡ.
ಅಲ್ಲಿದ್ದವರೇನು… ಸ್ವತಃ ಮಲ್ಲಣ್ಣ ಸಾಬಣ್ಣ ಜೊಲ್ಲಣ್ಣರೇ ಮುದುಡಿ ಮುದ್ದೆಯಾಗಿ ಹೋದ್ರು! ‘ಅವ್ನ ಪೂರ್‍ವಾಪರ ನಿಮ್ಗೆಲ್ಲ ಗೊತ್ತಿದೆ ತಾನೇ? ಅವನ್ಯಾವ ಸಮ್ರವಂತಾಂತಾ ನೀವು ಬೆನ್ನಾಯಿಸಿಗಂತೀರಿ? ನಮ್ಗೆ ಸೋಜಿಗವಾಗಿದೆಯೆಂದು’ ಮೂವ್ವರು ಒಂದಾಗಿ ಕೂಗಿದ್ರು… ಯಾರೊಬ್ರು ಯಿವ್ರ ಮಾತಿಗೆ ಸೊಪ್ಪಾಕಲಿಲ್ಲ. ನರಿಯ ಕೂಗು ಗಿರಿಗೆ ಮುಟ್ಲಿಲ್ಲ…
ತಿಮ್ಮಣ್ಣನ ತೂಗೋ ತಕ್ಕಡಿ-ಬೆಲ್ಲ-ಮೇಲಕ್ಕೆ ಎದ್ದಾಳಿತು!
‘ನದಿ ಮೂಲ ಋಷಿ ಮೂಲ ಹೆಣ್ಣಿನ ಮೂಲ ಕೆದ್ಕಬಾರ್‍ದು, ವ್ಯಾಸರ ಮೂಲ ಬೇಕಾಗಿಲ್ಲ! ಅವ್ರ ಮಹಾಭಾರತ ನಮಗೀಗ ಬೇಕು. ವಾಲ್ಮೀಕಿಯ ವೃತ್ತಾಂತ ನಮಗೆ ಬೇಕಿಲ್ಲ. ಅವರ ರಾಮಾಯಾಣ ನಮಗೆ ಬೇಕು. ಶ್ರೀಕೃಷ್ಣಪರಮಾತ್ಮ ಜೈಲಲ್ಲಿ ಹುಟ್ಟಿದ್ದು ನಮಗೆ ಬೇಕಿಲ್ಲ ಅವನ ಗೀತೋಪದೇಶ ಬೇಕು. ಕರ್‍ಣ ಎಲ್ಲಿ ಬೆಳದ ಮುಖ್ಯ ಅಲ್ಲ! ಅವನ ದಾನಶೂರ ವೀರತ್ವ ನಮಗೆ ಬೇಕು. ಅದೇ ರೀತಿ ತಿಮ್ಮಣ್ಣನ ಹಿನ್ನಲೆ ಮುಖ್ಯ ಅಲ್ಲ ಈಗವನು ಹೇಗೆ ಮಾಡಿಂಬುತ್ತಾನೆಂಬುದು ನಮಗೆ ಮುಖ್ಯ. ಈಗೀಗ ಸರ್‍ವ ಧರ್ಮಿಯರೂ ಸುಧಾರಣೆಯಾದ್ರು. ನಾವು-ಹೊರಗಿನವರು ಯಾವಾಗ ಸುಧಾರಿಸುವುದು? ಬುದ್ಧ, ಬಸವ, ಅಂಬೇಡ್ಕರ್ ಕಲ್ಸಿದ್ದು ಇದೇನಾ? ಕಾಗೆ, ಕೋಗಿಲೆ, ಕೋಳಿಗೂ ಕಡೆಯಾಗುವುದು ಬೇಡ. ಸಣ್ಣ ಶಿಕ್ಷೆಯಾಗಿ ನೀವೀಗ ಎಲೆ ಅಡಿಕೆ ತಪ್ಪು ದಂಡವಾಗಿ ಕಟ್ಟೆ ಮನೆಗೆ ಕೊಡ್ಬೇಕು. ಮಣೆಗಾರರಿಗೆಲ್ಲ ಹೆಂಡ ಸಾರಾಯಿ ಕೋಣಗರದ ಸಳ್ಳೆ ಪಲ್ಲೆ, ರಾಗಿ ಮುದ್ದೆ, ಅಕ್ಕಿ ಬಾನದ ಔತಣವನ್ನು ಮುಂದಿನ ಮಂಗಳವಾರ ಕೊಡಮಾಡ್ಬೇಕು! ಯಿದ್ಕೆ ತಪ್ಪಿದರೆ-ಕುಲದಿಂದ ಒಂದು ವರ್‍ಷ ಸಮಾಜಿಕ ಬಹಿಷ್ಕಾರ…. ನಿಮ್ ಯಜಮಾನಿಕೆನೆ ಯೀ ತಿಮ್ಮಣ್ಣನಿಗೆ ಬಿಟ್ಟುಕೊಡೇಕು! ನಿಮ್ಮ ಸಳ್ಳೆ ಪಾಲು, ಮಾದಿತನದ ಪಾಲು, ಹಣ್ಣು ಹೂವಿನ ಪಾಲು, ಅಣ್ಣ ತಮ್ಮಗಳ ಬಾಬತ್ತು… ಎಲ್ಲಾ ಕಟ್ಟಿ ಹಾಕ್ತೀವಿ’ ಎಂದು ಕಟ್ಟೆ ಮನೆಯ ಮುದುಕಪ್ಪ ತೀರ್‍ಪಿತ್ತ!
ಅಲ್ಲಿದ್ದ ದೈವದವರೆಲ್ಲ “ಹೌದೌವುದು…” ಎಂದು ಧ್ವನಿಗೂಡಿಸಿದ್ರು! ಅಲ್ಲಿದ್ದವ್ರೆಲ್ಲ ಒಂದಾದ್ರು, ಯಿವ್ರು ಮೂವ್ವರು ಅಡಿಕೆ ಕತ್ರಿಗೆ ಸಿಕ್ಕರು! ಜೊಲ್ಲಣ್ಣ, ಸಾಬಣ್ಣ, ಮಲ್ಲಣ್ಣ ಮಿಕಿ ಮಿಕಿ ಕಣ್ಣು ಕಾಲು ಬಿಟ್ರು… ಕೊನೆಗೆ ಮೂವ್ವರು-ಮೂರು ಮಂಗಾದ್ರು! ಕಟ್ಟೆ ಮನೆಗೆ-ತಪ್ಪು ದಂಡ ಕಟ್ಟಿ ಕೊಟ್ರು… ರಾಜಿಯಾದ್ರು…
*****


















