ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಆಶ್ರಮದ ಮೂಲೆಯೊಂದರಲ್ಲಿ ಒಂದೆಡೆ ದೃಷ್ಟಿ ನೆಟ್ಟು ಕುಳಿತಿದ್ದ ಆ ಮಧ್ಯ ವಯಸ್ಕಳನ್ನು ಕಂಡಾಗ ಏನೋ ವಿಶೇಷ ಆಕರ್ಷಣೆ. ಜೊತೆಗೆ ಮನದೊಳಗೆ ಮರುಕ. ನನ್ನ ಕಾಲುಗಳು ಆಕೆಯತ್ತ ಸೆಳೆದವು. ನನ್ನನ್ನು ನೋಡಿ ಅವಳ ಮುಖದಲ್ಲಿ ಗಾಬರಿ! ನಾನು ಸಮಾಧಾನದ ಸ್ವರದಲ್ಲಿ ನನ್ನ ಪರಿಚಯ ಹೇಳಿಕೊಂಡೆ.

ಆಕೆಯ ಮುಖ ಅರಳಿತು.”ಮರೆತೇ ಬಿಟ್ಟಿದ್ದೆ ನಿನ್ನನ್ನು ಎಷ್ಟು ವರ್ಷವಾಯಿತು ನೋಡಿ. ನಿನ್ನ ಅಪ್ಪ ನಾನು ಒಟ್ಟಿಗೆ ಓದಿದವರು ಹ್ಹೂ…..ಎಲ್ಲವೂ ಈಗ ನೆನಪು ಮಾತ್ರ.”ಇದೇ ಸರಿಯಾದ ಸಮಯವೆಂದು ನಾನು ಕೇಳಿದೆ. “ನೀವು ಯಾಕೆ ಹೀಗೆ, ಆಶ್ರಮಕ್ಕೆ ಸೇರಿಕೊಂಡಿದ್ದೀರಿ? ನೀವು ಸಂತೋಷವಾಗಿಲ್ಲ ಎನ್ನುವುದನ್ನು ನಿಮ್ಮ ಮುಖ ತಿಳಿಸುತ್ತದೆ. ವಯಸ್ಸಿನಲ್ಲಿ ನೀವು ದೊಡ್ಡವರು. ಆದರೂ…. ನನಗನ್ನಿಸುತ್ತದೆ, ನಮ್ಮ ಸಂತೋಷಕ್ಕೆ ಮತ್ತು ದುಃಖಕ್ಕೆ ನಾವೇ ಕಾರಣರೆಂದು. ಬನ್ನಿ ಹೋಗುವಾ, ನಿಮ್ಮನ್ನು ಮನೆಗೆ ಬಿಡುತ್ತೇನೆ.”

ಆಕೆ ಅಸಮ್ಮತಿಯಿಂದ ತಲೆ ಅಲ್ಲಾಡಿಸಿದಳು. “ಮತ್ತೆ ಅವನು ಹಾಗೆ ಮಾಡಬಹುದಾ? ನನಗೆ ಇರುವವನು ಒಬ್ಬನೇ ಮಗ. ಈಗ ಅವನೂ ಇಲ್ಲ ಎಂದುಕೊಂಡಿದ್ದೇನೆ. ನಮ್ಮ ಹೆತ್ತವರ ಇಷ್ಟಕ್ಕೆ ವಿರುದ್ಧವಾಗಿ ನಡಕೊಳ್ಳುವ ಮಗ ಇದ್ದರೇನು? ಇಲ್ಲದಿದ್ದರೇನು?”

ನನಗೆ ನಗು ಬಂತು.”ಹೌದಮ್ಮ, ಮಕ್ಕಳಿಗೂ ಒಂದು ಇಷ್ಟ ಅನ್ನುವುದು ಇರುತ್ತದಲ್ಲಾ….ನೀವೇನೋ ನಿಮ್ಮಿಷ್ಟದಂತೆ ನಡಕೊಳ್ಳಬೇಕೆಂದು ಬಯಸುತ್ತೀರಿ. ಆದರೆ ಒಲ್ಲದವಳನ್ನು ಕಟ್ಟಿಕೊಂಡು ಬದುಕು ಸುಖವಾಗಿರಲು ಸಾಧ್ಯವಾ? ….ಇಷ್ಟಕ್ಕೂ ಮಕ್ಕಳು ಮಾಡಿದ ತಪ್ಪನ್ನು ಹೆತ್ತವರು ಹೊಟ್ಟಿಗೆ ಹಾಕಿಕೊಳ್ಳಬೇಕಲ್ಲವಾ?…”

ಆಕೆಯ ಮುಖದಲ್ಲಿ ಸಿಟ್ಟು ಕಾಣಿಸಿಕೊಂಡಿತು. “ರಶ್ಮಿ ಯಾರೆಂದುಕೊಂಡಿದ್ದೆ. ನನ್ನ ತಮ್ಮನ ಮಗಳು. ಅವಳಿಗೇನು ಕಡಿಮೆಯಾಗಿದೆ. ನೋಡಲು ಲಕ್ಷಣವಾಗಿದ್ದಾಳೆ. ಸೀರೆ ಉಟ್ಟರೆ ವರಲಕ್ಷ್ಮಿಯೇ. ಈಗ ಕಟ್ಟುಕೊಂಡಿದ್ದಾನಲ್ಲಾ ಶ್ವೇತಾಳನ್ನು ನೆಟ್ಟಗೊಂದು ಸೀರೆ ಉಡೋದಿಕ್ಕೆ ಬರೋದಿಲ್ಲ. ಮೂತಿನಲ್ಲೊಂದು ಕಳೆ ಇಲ್ಲ. ಇದೆಲ್ಲಾ ನಿನಗೆ ಹೇಗೆ ಅರ್ಥವಾಗಬೇಕು? ನೀನು ಸುಮ್ಮನೆ ಹೊರಟು ಹೋಗು.”

ನಾನು ಪಟ್ಟು ಬಿಡಲಿಲ್ಲ. ’ಹಾಗೆಂದರೆ ಹೇಗಮ್ಮ. ಪ್ರಾಮಾಣಿಕವಾಗಿ ಹೇಳಿ. ಇಲ್ಲಿ ಶಾಂತಿ ಸಿಗುತ್ತದೆಂದು ಬಂದಿದ್ದೀರಿ, ನಮ್ಮನ್ನು ಪ್ರೀತಿಸುವವರೇ ಇಲ್ಲದ ಸ್ಥಳದಲ್ಲಿ ಇರಲು ಸಾಧ್ಯವೇ? ಇಲ್ಲಿ ಏನಿದ್ದರೂ ಯಾಂತ್ರಿಕ ಬದುಕು, ಏನೇ ಆದರೂ ಸೂರಜ್ ನಷ್ಟು ನಿಮ್ಮನ್ನು ಪ್ರೀತಿಸುವವರು ಜಗತ್ತಿನಲ್ಲಿ ಬೇರೆ ಯಾರು ಇರಲು ಸಾಧ್ಯ? ಮನೆಯಲ್ಲಿ ಸಿಗದ ಶಾಂತಿ ಆಶ್ರಮದಲ್ಲಿ ಸಿಗಲಾರದು.’

ನನಗಿನ್ನು ಮಾತಾಡಲು ಏನೂ ಉಳಿದಿರಲಿಲ್ಲ. ಅಷ್ಟು ಹೊತ್ತಿಗೆ ಆಶ್ರಮದ ಪ್ರಾರ್ಥನಾಸಭಾಂಗಣದತ್ತ ಎಲ್ಲರೂ ಹೋಗುವುದನ್ನು ಕಂಡು ನಾನು ಅತ್ತ ಧಾವಿಸಿದೆ. ಆಶ್ರಮದ ಮುಖ್ಯಸ್ಥೆ ಎತ್ತರದ ವೇದಿಕೆ ಯಲ್ಲಿ ಕುಳಿತು ಅದೇನೋ ಉಪದೇಶಿಸುತ್ತಿದ್ದರು. ನನಗದು ಅರ್ಥವಾಗದೆ ಅಲ್ಲಿಂದ ಹೊರಬಂದೆ, ಆಶ್ರಮದ ಸ್ವಾಗತಕಾರಿಣಿಗೆ ನನ್ನ ಹೆಸರು, ದೂರವಾಣಿ ನೀಡಿ ಅಗತ್ಯ ಬಿದ್ದಾಗ ಸಂಪರ್ಕಿಸುವಂತೆ ಸೂಚನೆಯಿತ್ತು ಬಂದುಬಿಟ್ಟೆ.

ಸೂರಜ್ ನನ್ನ ಎಳವೆಯ ಸ್ನೇಹಿತ. ಕಥೆ, ಕವನಗಳನ್ನು ಬರೆಯುತ್ತಿದ್ದ. ಆಗಾಗ ಪತ್ರಿಕೆಗಳಲ್ಲಿ ಅವುಗಳು ಪ್ರಕಟವಾಗುತ್ತಿದ್ದವು. ಕೆಲವು ನನ್ನನು ಸೆರೆ ಹಿಡಿದುಬಿಡುತ್ತಿದ್ದವು. ವಾರದ ಹಿಂದೆ ಪ್ರಕಟವಾಗಿದ್ದ ಅವನ ಕಥೆ ಅವನಮ್ಮನದ್ದೇ ಆಗಿತ್ತು. ತಾಯಿ ಆಶ್ರಮಕ್ಕೆ ಹೋದ ಬಳಿಕ ಅವನು ಕಂಗಾಲಾಗಿದ್ದನೆಂದು ಕಾಣುತ್ತದೆ. ’ತಬ್ಬಲಿಯು ನಾನಾದೆ’ ಎಂಬ ಶೀರ್ಷಿಕೆ ನೋಡಿ ನಾನು ಕಣ್ಣೀರಾಗಿದ್ದೆ. ಹೋಗಿ ಮಾತಾಡಿಸಬೇಕೆಂದು ಅಂದುಕೊಂಡರೂ ಯಾವುದೋ ಕೆಲಸದಿಂದ ಹೋಗಲಾಗಲಿಲ್ಲ. ಕೊನೆಗೂ ಒಂದು ದಿನ ಬಿಡುವು ಮಾಡಿಕೊಂಡು ಹೋದೆ. ಹೋಗುವ ಮುನ್ನ ಸಾಕಷ್ಟು ಮಾನಸಿಕ ತಯಾರಿ ನಡೆಸಿದ್ದೆ. ಸೂರಜ್ ನನ್ನು ಹೇಗೆ ಸಮಾಧಾನಪಡಿಸುವುದು, ಅವನ ಹೆಂಡತಿಯನ್ನು ಹೇಗೆ ಮಾತಾಡಿಸುವುದು ಎನ್ನುವುದಕ್ಕೆ ನಾನು ಓದಿದ ಕಥೆ, ಕಾದಂಬರಿಗಳಿಂದ ಸಾಕಷ್ಟು ಸಾಲುಗಳನ್ನು ಹೆಕ್ಕಿ ನೆನಪಿಸಿಕೊಳ್ಳುತ್ತಾ ಹೋಗಿ ಬಾಗಿಲು ತಟ್ಟಿದೆ.

ಬಾಗಿಲು ತೆರೆದವನು ಸೂರಜ್. ಅವನ ಮುಖದಲ್ಲಿ ಅದೇನೋ ಹೊಸ ಕಳೆ ಇತ್ತು. ನನಗದನ್ನು ಕಂಡು ತೀರಾ ಅಚ್ಚರಿಯಾಯ್ತು. ನಾನು ಉರುಹೊಡೆದ ಕಾದಂಬರಿಯ ಸಾಲುಗಳು ಇಲ್ಲಿ ಉಪಯೋಗಕ್ಕೆ ಬರಲಾರವೆನಿಸಿತು. ಮನೆ ಒಳಗೆ ಕಾಲಿಡುತ್ತಿದ್ದಂತೆ ಆ ಧ್ವನಿ ಕೇಳಿಸಿತು. ಅದರ ಹಿಂದೆಯೇ ಕಾಣಿಸಿಕೊಂಡ ಸೂರಜ್ ನ ಅಮ್ಮ! ’ಓ ನೀನಾ? ನನ್ನನ್ನು ನೋಡಿ ಆಶ್ಚರ್ಯವಾಗಿರಬೇಕಲ್ಲವೇ?” ಅಷ್ಟು ಹೊತ್ತಿಗೆ ಒಳಗಿನಿಂದ ಶ್ವೇತಾಳೂ ಬಂದು. ಅತ್ತೆಯನ್ನು ಒಂದು ಕೈಯಲ್ಲಿ ಆವರಿಸಿಕೊಂಡು ನನ್ನನ್ನು ನೋಡಿ ನಕ್ಕಳು. ನನಗೆ ಪರಮಾಶ್ಚರ್ಯ.

’ನೀನು ಹೋದಮೇಲೆ ತುಂಬಾ ಯೋಚಿಸಿದೆ. ನೀನಂದದ್ದೂ ನಿಜ. ಸುಖ ಅನ್ನುವುದು ನಮ್ಮೊಳಗೇ ಇದೆ. ನಾವು ಈ ಪ್ರಪಂಚ ನಾವಂದಂತೇ ನಡೆಯಬೇಕು ಅಂದುಕೊಳ್ಳುತ್ತೇವೆ. ಅದುವೇ ನಮ್ಮ ದುಃಖಕ್ಕೆ ಕಾರಣ. ಏನೇ ನಡೆಯಲಿ ನಾವು ಬಂದದ್ದನ್ನು ಬಂದ ಹಾಗೆ ಸ್ವೀಕರಿಸುವುದೇ ಸರಿ.’

ನಾನು ದಂಗಾಗಿ ನಿಂತೆ . ’ಅದುಸರಿ. ಆದರೆ ನೀವು ಇಲ್ಲಿಗೆ ಬಂದದ್ದು ಹೇಗೆ. ಸೂರಜ್ ಆಶ್ರಮಕ್ಕೆ ಬಂದಿದ್ದನಾ?’

ಸೂರಜ್ ಎಂದ.’ಹೋಗಬೇಕೆಂದು ಎಷ್ಟೋ ಸಲ ಅಂದುಕೊಂಡಿದ್ದೆ. ಆದರೆ ಅಮ್ಮ ಅಲ್ಲಿ ಏನೇನೂ ಮಾತಾಡಿ ಎಂಥ ವಾತಾವರಣ ಸೃಷ್ಟಿಸುತ್ತಿರೋ ಎಂದು ಭೀತಿಗೊಂಡಿದ್ದೆ. ಶ್ವೇತಾಳೂ ಹೋಗುವಂತೆ ಪ್ರೇರೇಪಣೆ ನೀಡುತ್ತಿದ್ದಳು. ಧೈರ್ಯ ಬರಲಿಲ್ಲ. ಪುಣ್ಯಕ್ಕೆ ಅಮ್ಮ ಅವರರಾಗಿಯೆ ಬಂದುಬಿಟ್ಟರು.”

ಅಷ್ಟರಲ್ಲಿ ಅಮ್ಮನೂ ’ನಾನು ಸೂರಜ್ ನನ್ನು ಅರ್ಥಮಾಡಿಕೊಳ್ಳದೆ ದೊಡ್ಡ ತಪ್ಪು ಮಾಡ್ಬಿಟ್ಟೆ ಕಣೋ! ಎಷ್ಟು ದಿವಸ ನಾವು ಬದುಕುತ್ತೇವೆ. ಅಲ್ಲದೆ ಮಕ್ಕಳ ಇಷ್ಟವೇ ಹೆತ್ತವರ ಇಷ್ಟು ಆಗಬೇಕೆಂದು ನನಗೆ ಆಶ್ರಮದಲ್ಲಿದ್ದಾಗ ಮನವರಿಕೆ ಯಾಗಿತ್ತು. ಅದೊಂದು ದಿನ ಆಶ್ರಮದ ಲೈಬ್ರರಿಯಲ್ಲಿ ಪತ್ರಿಕೆಯ ಪುಟಗಳನ್ನು ತಿರುವಿ ಹಾಕುತ್ತಿದ್ದಂತೆಯೇ ಸೂರಜ್ ಎಂಬ ಹೆಸರು ನೋಡಿ ಒಮ್ಮೆಲೇ ಸ್ಥಬ್ದಗೊಂಡೆ. ಕೆಳಗೆ ನೋಡುತ್ತೇನೆ `ತಬ್ಬಲಿಯು ನಾನಾದೆ’ ಎಂಬ ಶೀರ್ಷಿಕೆ ಬೇರೆ. ಕುತೂಹಲದಿಂದ ಓದಿದೆ. ಅದು ನನ್ನದೇ ಕಥೆ ಯಾಗಿತ್ತು. ಓದಿ ಕಣ್ಣೀರಾದೆ. ಆಮೇಲಂತೂ ನಾನೇ ತಪ್ಪಿತಸ್ಥಳೊ ಎಂಬ ಅಪರಾಧಿಭಾವ ಬಹುವಾಗಿ ಕಾಡತೊಡಗಿತು. ಸೀದಾ ಹೊರಟು ಬಂದು ಬಿಟ್ಟೆ. ನಿಜ ಹೇಳಬೇಕಾದರೆ ಆಶ್ರಮದಲ್ಲಿ ಇಲ್ಲದ ಶಾಂತಿ ಇಲ್ಲಿ ಸಿಗುತ್ತಿದೆ’, ಎಂದು ಸೂರಜ್ ಶ್ವೇತಾಳತ್ತ ಮೆಚ್ಚುಗೆಯೆ ನೂಟ ಬೀರಿ ನೋಡಿದರು.

ಆ ಆನಂದದ ಕ್ಷಣಗಳಲ್ಲಿ ನಾ ಮೈಮರತೆ.
*****

Latest posts by ಪ್ರತಿಮಾ ಪನತ್ತಿಲ (see all)