ಕಾಗದ ಚೂರು

ಕಾಗದ ಚೂರು

ಚಿತ್ರ: ಪಿಕ್ಸಾಬೇ

ಕಾಗದದ ಚೂರು ಎಂದೊಡನೆ ನಿಮ್ಮ ಚೂರಿಯಂತಹ ನಿರ್ಲಕ್ಷತೆಯಿಂದ ಮುಂದೆ ಸಾಗಬೇಡಿ. ಕಾಗದದ ಚೂರಿನಲ್ಲಿ ಬ್ರಹ್ಮಾಂಡವಡಗಿದೆ. ತೀರ ಕ್ಷುಲ್ಲಕ ವಸ್ತುವೂ ಅನಂತತೆಯನ್ನು ಹೊಂದಿರುವ ಸತ್ಯವನ್ನು ಇದು ವಿವರಿಸುತ್ತದೆ. ಕಾಗದದ ಚೂರು ಸಂಸ್ಕೃತಿಯ ಪುರಾತನತೆಯನ್ನು ಸಾರುತ್ತದೆ. ಕವಿಯ ಅಗಾಧ ಸ್ಪೂರ್ತಿಯ ಹಿನ್ನೆಲೆಯೂ ಇದಾಗಬಹುದು. ಚಿತ್ರಕಾರನ ಕುಶಲ ಕುಂಚದ ಕ್ಯಾನ್ವಾಸ್ ಕೂಡ ಇದಾಗಲೂ ಸಾಧ್ಯವಿದೆ. ಜೀವನವು ಕೆಲ ಕ್ಷುಲ್ಲಕ ಸನ್ನಿವೇಶಗಳ, ಘಟನೆಗಳ ಸರಮಾಲೆ ಎಂದಾಗ, ಕ್ಷುಲ್ಲಕವಾದರೂ ಉಪಯುಕ್ತ ವಸ್ತುಗಳ ನೆನಪು ಭಾವನೆಯನ್ನು ಉದ್ದೀಪಿಸುವದು; ಹೃನ್ಮನಗಳನ್ನು ಬೆಳಗುವದು. ಅಂಥವುಗಳಲ್ಲಿ ಎದ್ದುಕಾಣುವ ವಸ್ತುವೆಂದರೆ ಕಾಗದದ ಚೂರು. ಅಂತರಂಗವನ್ನು ಬಹಿರಂಗವನ್ನಾಗಿ ಮಾಡುವ ಸಾಧನವಿದು. ಆತನ ಅಸ್ತವ್ಯಸ್ತತೆ-ಅರೆ ಕೊರೆಗಳಿಗೆ ಹಿಡಿದ ರಾವುಗನ್ನಡಿ.

‘ಮುಖವು ವ್ಕಕ್ತಿತ್ವದ ಕೈಗನ್ನಡಿ’. ‘ಮುಖದ ಮೇಲೆ ಅರಳಿದ ಮುಗುಳ್ನಗೆ ವ್ಯಕ್ತಿಯ ಶ್ರೀಮಂತಿಕೆಯ ಲಕ್ಷಣ’ವೆಂದು ಹೇಳುವವರು ಹೇಳಲೊಲ್ಲರೇಕೆ. ನಾನು ಮಾತ್ರ ಹೇಳುತ್ತೇನೆ. ವ್ಯಕ್ತಿಯ ಜೇಬಿನಲ್ಲಿ ಏನು ಇವೆಯೋ ಅದೇ ಅವನಿರುತ್ತಾನೆ-ಎಂದು. ವ್ಯಕ್ತಿವ್ಯಕ್ತಿಗೂ ಆತ್ಮ ಮನಸ್ಸು ಇರುವದು ಎಷ್ಟು ನಿಜವೋ, ಆಧುನಿಕ ಮನುಷ್ಯನಿಗೆ ಜೇಬು ಇರುವದೂ ಅಷ್ಟೇ ಸತ್ಯ. ಇಂದಿನ ಫ್ಯಾಶನ್ ಯುಗದಲ್ಲಿ ಜೇಬೊಂದು ಆಭರಣವಿದ್ದಂತೆ. ಕಂಠಾಭರಣದಂತೆ ಇದೊಂದು ದೇಹಾಭರಣ. ಜೀಬಿಲ್ಲದ ವ್ಯಕ್ತಿಯು ಧರ್ಮನೀತಿ ಬಾಹಿರನು. ಹೀಗೆಂದು ಜೇಬಿದ್ದವನೇ ಆರ್ಯನೆಂದು ಅನ್ನಬೇಕಾಗುವದು. ಇಲ್ಲದವನು ಅನಾರ್ಯವೆನ್ನುವದು ಸ್ವತಸಿದ್ಧ. ಮಾನವ ಜನಾಂಗದಲ್ಲಿ ನಾನು ಮೂರು ಭಾಗಗಳನ್ನು ಮಾಡುತ್ತೇನೆ. ಜೀಬಿನಲ್ಲಿ ಏನೂ ಇಲ್ಲದೆ ಖಾಲಿ ಪರ್ಸು ಇಟ್ಟುಕೊಂಡು ತಿರುಗುವ ಮಹನೀಯರದೊಂದು ಜಾತಿ. ಹೋಟೇಲಿನಲ್ಲಿ ಬಿಲ್ಲು ಕೊಡುವಂತೆ ನಟಿಸಿ ಮುಂದೆ ಹೋಗುವ ಚಟ ಇವರದು. ಇದು ಒಂದನೆಯ ವರ್ಗ. ಟರ್ಲಿನ್ ಷರ್ಟಿನಲ್ಲಿ ಹೊಚ್ಚ ಹೊಸ ಕರೆನ್ಸಿ ನೋಟೊಂದನ್ನಿಟ್ಟು ಶ್ರೀಮದ್ಗಾಂಭೀರ್ಯದಲ್ಲಿರುವ ಷೋಕಿಲಾಲರದು ಇನ್ನೊಂದು ವರ್ಗ. ದೇಹವನ್ನು ಮುಚ್ಚಿರುವ ಎಲ್ಲ ವಸ್ತುಗಳ ಮೇಲೆ ಕೌತುಕದ ಭಾಂಡಾರದಂತೆ ಇರುವ ಜೇಬುಗಳಲ್ಲೆಲ್ಲ ಕಾಗದದ ಚೂರುಗಳನ್ನೂ, ಕರವಸ್ತ್ರ ಅಲ್ಲ ಕರಿವಸ್ತ್ರವನ್ನೂ ತುಂಬಿಕೊಂಡಿರುವವರದು ಮೂರನೆಯ ವರ್ಗ. ಮೊದಲಿನ ಉಚ್ಚ ವರ್ಗಗಳನ್ನು ಅವುಗಳ ಪಾಡಿಗೆ ಬಿಟ್ಟು, ಅಧಮ ವರ್ಗದ ಬಗ್ಗೆ ಕೈತೊಳೆದುಕೊಂಡು ಬೆನ್ನು ಹತ್ತುವದು ಯೋಗ್ಯ ಉಪಾಯವಾಗಿದೆ. ಯಾಕೆಂದರೆ ಇದು ಅಧಮರ ಯುಗ. ಅಧಮಶ್ರೀಗೆ ಜಯವಾಗುವ ಕಾಲ.

ನಾನು ಅಧಮ ವರ್ಗಕ್ಕೆ ಸೇರಿದ್ದು – ಈ ಆಯ್ಕೆಗೆ ಇನ್ನೊಂದು ಕಾರಣ. ನನಗೂ ಕಾಗದದ ಚೂರಿಗೂ ಬಹು ಪುರಾತನ ಸಂಬಂಧ. ನನಗೆ ವರ್ಣಮಾಲೆ ಕಲಿಸಿದ ಗುರುಗಳು ನನಗೆ ಉಪಕಾರವನ್ನೇನೂ ಮಾಡಲಿಲ್ಲ. ಹಲಗೆಯ ಮೇಲೆ ಬರೆದು ಬಳಪಿನಿಂದ ‘ಶ್ರೀ ಗಣೇಶಾಯ ನಮಃ’ ಎಂದು ಕಲಿಸಿದ ಆ ಮಾಸ್ತರರಿಗೆ ಈ ಶಿಷ್ಯನ ಅಗಾಧ ವ್ಯಕ್ತಿತ್ವದ ಅರಿವಾಗಲಿಲ್ಲವೇನೋ. ತಿಪ್ಪೆಯಲ್ಲಿ ಬಿದ್ದಿರಲಿ, ಪಡಸಾಲೆಯ ಮೂಲೆಯಲ್ಲಿಯೇ ವಾಸ ಮಾಡಿಕೊಂಡಿರಲಿ, ಸಿಕ್ಕಲ್ಲಿ ಕಾಗದದ ಚೂರುಗಳನ್ನು ಓದುತ್ತ ಕೂಡವದು ನನಗೆ ಅಂದಿನಿಂದ ಇಂದಿನವರೆಗೆ ಅಂಟಿಕೊಂಡ ಜಾಡ್ಯ. ವೃತ್ರಪತ್ರಗಳಿಗೆ ಅಂಟಿಸಿದ ರ್‍ಯಾಪರ್ ಭಾಗವನ್ನೂ ಕೂಡ ಬಿಡದ ಕಾಗದಭಕ್ಷಕನು ನಾನು. ಮತ್ತೊಂದು ವಿಶೇಷವೆಂದರೆ ನನ್ನ ಜೀಬುಗಳಲ್ಲೆಲ್ಲ ತೀರ ನಿರುಪಯುಕ್ತವಾದರೂ ಕೌತುಕಪೂರ್ಣವಾದ ಕಾಗದದ ಚೂರುಗಳು ತುಂಬಿಕೂಂಡು ನನ್ನನ್ನು ಆಗಾಗ ವಿಸ್ಮಯಗೊಳಿಸುತ್ತಿರುವುದುಂಟು. ಆರು ತಿಂಗಳ ಹಿಂದೆ ಬಂದ ಗೆಳಯನೊಬ್ಬನ ಪತ್ರ, ಕಳೆದ ಬೇಸಿಗೆ ಸೂಟಿಯಲ್ಲಿ ಪ್ರವಾಸ ಮಾಡಿದ್ದುದರ ವಿಜಯಪತಾಕೆಗಳಂತಿರುವ ಬಸ್ ಟಿಕೆಟ್ಟುಗಳು, ಯಾರಿಗೋ ಬರೆದ ಚೀಟಿಯ ಅರ್ಧಮರ್ಧ ಭಾಗ; ಕ್ಲಾಸಿನಲ್ಲಿ ನೆನಪು ಉಳಿಯಲೋಸುಗ ಗುರುತಿಸಿಕೊಂಡ ಮುದ್ದೆಗಳು. ಇವೇ ನನ್ನ ಜೀಬಿನ ಭಾರವನ್ನು ಹೆಚ್ಚು ಮಾಡುವವು. ತತ್ಪರಿಣಾಮವಾಗಿ ನನ್ನ ವ್ಯಕ್ತಿತ್ವದ ಭಾರವೂ ಹೆಚ್ಚಾದಂತೆ ಭಾಸವಾಗುವುದು. ಆದರೆ ಇವೇ ಕಾಗದದ ಚೂರುಗಳು ಹೊತ್ತಿಗೊದಗದೆ ನನ್ನ ಗಂಟಲಗಾಳಾಗಿದ್ದು, ಪೇಚಿನಲ್ಲಿ ಸಿಲುಕಿಸಿದ್ದೂ ಉಂಟು. ನನ್ನ ಅಸ್ತವ್ಯಸ್ತತೆ, ಅಶಿಸ್ತುಗಳನ್ನು ಇವು ಅಣಕಿಸುವಂತೆ ನನಗೆ ತೋರುತ್ತದೆ.

ಕಾಲೇಜು ಕುವರನಾಗಿ ದೂರದ ಪಟ್ಟಣದಿಂದ ನಮ್ಮ ಊರಿಗೆ ಸಮೀಪದಲ್ಲಿರುವ ಸ್ಟೇಶನ್ನಿಗೆ ಟಿಕೇಟೊಂದನ್ನು ಪಡೆದು ಮೂರನೆ ವರ್ಗದ ಕಂಪಾರ್ಟಮೆಂಟೊಂದರಲ್ಲಿ ಆಸೀನನಾದೆ. ನನ್ನ ಆಂಗ್ಲ ವೇಷಭೂಷಣ, ಕಣ್ಣಿನ ತಂಪು ಕನ್ನಡಕ, ಬಾಯ ಸಿಗರೇಟು, ಕೈಯೊಳಗಿನ ಹದಿನಾರು ಪುಟದ ಇಂಗ್ಲಿಷ್ ಪೇಪರು ನನ್ನನ್ನು ಸಾಹೇಬತನದ ಗದ್ದುಗೆಯ ಮೇಲೇರಿಸಿದ್ದವು. ನನ್ನ ಹತ್ತಿರ ಕುಳಿತ ಹಳ್ಳಿಯ ಯಜಮಾನರುಗಳಿಗೆ ನನ್ನೊಡನೆ ಮಾತನಾಡುವ ಧೈರ್ಯ ಬರಲಿಲ್ಲ. ಇಂಥ ಸಾಹೇಬನಾದ ನಾನು ಸ್ಟೇಶನ್ನಿನಲ್ಲಿ ಹೊರಬಂದಾಗ ನನ್ನ ದ್ರಾವಿಡ ವರ್ಗದ ಮುಖ ಕೆಂಪಾಗಿತ್ತು. (ನೀರೊಳಗಿರ್ದುಂ ಬೆಮರ್ತನುರಗಪತಾಕಂ) ಹಳ್ಳಿಯ ಯಜಮಾನರಿಬ್ಬರ ಅಣುಕುನಗೆ ನನ್ನ ಹೃದಯಾಂತರಾಳವನ್ನು ಘಾಸಿಗೊಳಿಸಿತು. ಕರವಸ್ತ್ರದಿಂದ ಮುಖವನ್ನೊರಿಸಿ ಮುಂದೆ ಸಾಗಿದೆ. ಆ ಟಿಕೇಟು ನನ್ನ ಜೀಬಿನಲ್ಲಿಯ ಅಜ್ಜಾತವಾಸವನ್ನು ಮುಗಿಸಿ ಮೊನ್ನೆ ಮಾತ್ರ ಕೈಗೆ ಅವಗತವಾಯಿತು.

ಹೊತ್ತಿಗೊದಗಿದ ಮಾತು ಸತ್ತವನು ಎದ್ದಂತೆ ಎಂದುಸುರಿದ ಸರ್ವಜ್ಞನ ನುಡಿಯನ್ನು ಸ್ವಲ್ಪ ತಿರುಗಿಸಿ ಹೊತ್ತಿಗೊದಗಿದ ಕಾಗದದ ಚೂರು ಎಂದು ತಿದ್ದಿಕೊಳ್ಳಬಹುದು. ಅಂಥ ಕಾಗದ ಚೂರು ವಕೀಲರಿಗೆ ಕೇಸನ್ನು ಗೆದೆಯಲು ಸಹಾಯ ಮಾಡಬಲ್ಲದು. ಶಿಕ್ಷಕನಿಗೆ ಕ್ಲಾಸಿನ ಸಮುದ್ರದಲ್ಲಿ ಪಾರುಗಾಣಿಸುವ ಈಸುಗುಂಬಳಕಾಯಿಯೂ ಆಗಬಹುದು. ತದ್ವಿರುದ್ಧವಾಗಿ ಹೊತ್ತಿಗಾಗದ ಕಾಗದದ ಚೂರು ನಿರರ್ಥಕ. ಈ ಮಾತು ಇಂದಿನ ವಿದ್ಯಾರ್ಥಿಗಳಿಗಂತೂ ಅಕ್ಷರಶಃ ಮನದಟ್ಟಾಗಿರಬೇಕು. ಮಾರ್ಚ್ ತಿಂಗಳ ಮೊದಲ ವಾರವೆಂದರೆ ಕಾಗದ ಚೂರುಗಳ ವಸಂತ ಕಾಲ; ವರ್ಷವೆಲ್ಲ ಸುಖೋಲ್ಲಾಸದಲ್ಲಿ ವೇಳೆಯನ್ನು ತೂರಿದ ವಿದ್ಯಾರ್ಥಿ ರೂಮಿನಲ್ಲಿ ಕುಳಿತು ಏನನ್ನೋ ಬರೆಯುತ್ತಿರುವನಲ್ಲ! ಇದಕ್ಕಿಂತಲೂ ವಿಸ್ಮಯಪೂರಿತ ಸಂಗತಿ ಇನ್ನೇನಾದರೂ ಉಂಟೆ? ವಿವಿಧ ವಿಷಯಗಳ ಮೇಲೆ ಅವನದೂ ಗಂಭೀರ ಅಭ್ಯಾಸ ನಡೆದಿರುತ್ತವೆ. ಪರೀಕ್ಷಾರಾಕ್ಷಸನನ್ನು ಸದೆಬದಿಯಲು ತಯಾರಿಸಲ್ಪಡುವ ಆಯುಧಗಳೇ ಕಾಗದದ ಚೂರುಗಳು, ಅರ್ಥಶಾಸ್ತ್ರವ ಆಯುಧಗಳು ಸಮಾಜಶಾಸ್ತ್ರದ ರಾಕ್ಷಸನನ್ನು ಎದುರಿಸಲು ಅಸಮರ್ಥವಾಗಿವೆ. ಇಂತಹವೇ ಪ್ರಸಂಗ ಬಂದು ವಿದ್ಯಾರ್ಥಿಯೊಬ್ಬ ಗೋಳಿಟ್ಟುದು ನನಗೆ ಗೊತ್ತಿದೆ. ಜಾಗರೂಕತೆ ವಹಿಸಿದರೂ ಆ ರೀತಿ ಕಾಗದ ಚೂರುಗಳ ಅದಲು ಬದಲು ಆಗುವುದು ಸೃಷ್ಟಿಯ ನಿಯಮದಷ್ಟೇ ಕಟುಸತ್ಯವಾಗಿದೆ. ಅದಕ್ಕಾಗಿ ಇಂದಿನ ವಿದ್ಯಾರ್ಥಿಗಳಲ್ಲಿ ನನ್ನದೊಂದು ಕಿವಿಮಾತು. ನಿಮ್ಮ Pocket moneyಯಲ್ಲಿ ಸ್ಥಲ್ಪ ಹೆಚ್ಚು ಭಾಗ ವಿವಿಧ ವರ್ಣದ ಕಾಗದ ಕೊಳ್ಳುವಲ್ಲಿ ವೆಚ್ಚಮಾಡಿರಿ. ಒಂದೊಂದು ವಿಷಯಕ್ಕಾಗಿ ಒಂದೊಂದು ಬಣ್ಣದ ಕಾಗದ ಉಪಯೋಗಿಸಿರಿ. ಸೂಚಿಪತ್ರವೊಂದನ್ನು ತಯಾರಿಸಿರಿ. ಈ ಮಾರ್ಗದಲ್ಲಿದೆ ನಿಮ್ಮ ಯಶಸ್ಸಿನ ಗುಟ್ಟು.

ಈ ಗುಟ್ಟನ್ನರಿಯದೆ, ಕಾಗದ ಚೂರಿನ ಪವಿತ್ರತೆಯನ್ನು ಪರಿಭಾವಿಸದೆ ಗಾಂಧಿಯಂತಹ ಮಹಾತ್ಮರೂ ಸೋತರು. ಸೀಜರನಂತಹ ಯೋಧರೂ ಮಣ್ಣುಗೂಡಿದರು. ಗಾಂಧಿಯವರು ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದಾಗ ಸಾಹೇಬರೊಬ್ಬರು ಶಾಲೆಗೆ ಭೇಟಿಯಿತ್ತರು. ಅಲ್ಲಿಯ ಶಿಕ್ಷಕರು ಸಾಹೇಬರು ಹೇಳಿದ ಶಬ್ದ ಒಂದನ್ನು ಸಣ್ಣ ಚೀಟಿಯಲ್ಲಿ ಬರೆದು ವಿದ್ಯಾರ್ಥಿಗಳಿಗೆ ಜಾಣರಾಗುವ ಪದ್ಧತಿಯನ್ನು ತೋರಿದರು. ಆವಾಗಲೆ ನಮ್ಮ ಅವ್ಯವಹಾರಿ ಮಹಾತ್ಮನಿಗೆ ಸತ್ಯದ ಹುಚ್ಚು ಹಿಡಿದಿತ್ತು. ಇಡಿಯ ಕ್ಲಾಸಿನಲ್ಲಿ ಶಿಕ್ಷಕರ ವಚನವನ್ನು ಪಾಲಿಸದೆ- ದಡ್ಡ ವಿದ್ಯಾರ್ಥಿ ಎಂದು ಅನ್ನಿಸಿಕೊಂಡವರು ಅವರೊಬ್ಬರೇ ಆಗಿದ್ದರು.

ಗಾಂಧಿಯವರು ಈ ಗುಟ್ಟನ್ನರಿಯದೆ ಇರುವುದಕ್ಕೆ ಅವರ ಪ್ರತ್ಯೇಕವಾದ ಅಣು ರಚನೆಯೇ ಕಾರಣವಾಗಿತ್ತು. ಅವರು ಎಲ್ಲದರಲ್ಲಿ ಕಲೆಯನ್ನು ಕಾಣುವ ಹುಚ್ಚು ಹವ್ಯಾಸಕ್ಕೆ ಹೋಗದೆ, ಆ ವಸ್ತುಗಳ ಉಪಯೋಗದ ಕಡೆ ತಮ್ಮ ಲಕ್ಷ್ಯವನ್ನೆಳೆಯುತ್ತಿದ್ದರು. ಅವರು ವೃತ್ತಪತ್ರಗಳ ರ್‍ಯಾಪರ್ ಭಾಗವನ್ನಾಗಲಿ, ಸಣ್ಣ ಕಾಗದದ ತುಂಡನ್ನಾಗಲಿ, ಎರಡನೆಯವರಿಗೆ ಪತ್ರ ಬರೆಯುವುದರಲ್ಲಿ ಉಪಯೋಗಿಸುತ್ತಿದ್ದರು. ಕಾಗದ ಚೂರು ಕಲಾಸುಧೆಯ ಉಗಮ ಸ್ಥಾನವಾಗಿದೆ, ಚಿಕ್ಕಮಕ್ಕಳು ಕಾಗದದ ಚೂರಿನಿಂದ ಹಡಗೊಂದನ್ನು ಮಾಡಿ ನೀರಿನಲ್ಲಿ ತೇಲಿ ಬಿಡುವುದನ್ನು ಅದಾರು ನೋಡಿಲ್ಲ? ಆಕಾಶದಲ್ಲಿ ಹಾರಿಬಿಡುವ, ಹಕ್ಕಿಯೊಂದಿಗೆ ಸ್ಪರ್ಧೆಗೆ ನಿಲ್ಲುವ ಗಾಳಿಪಟ ಅದಾರ ಮನಸ್ಸನ್ನು ಸೂರೆಗೊಂಡಿಲ್ಲ? ಕಾಗದದ ಹೂಗಳು ಪ್ರಕೃತಿಯ ಹೂಗಳಿಗಿಂತ ಹೆಚ್ಚು ಶಾಶ್ವತವೂ ಸೌಂದರ್ಯಯುತವೂ ಆಗಿರುವುದನ್ನು ಅದಾರ ರಸಿಕಮನಸ್ಸು ಒಪ್ಪಿಲ್ಲ? ಕಾಗದದ ಚೂರುಗಳನ್ನು ಪಾರ್ಸಲಿನ ಭದ್ರತೆಗಾಗಿ ಉಪಯೋಗಿಸುವುದು ಮಾನವನ ಜನ್ಮಗುಣವಾದ ಕಲಾಪ್ರೇಮವೇ ಅಲ್ಲದೆ ಮತ್ತೇನು? ಅದಕ್ಕೆಂತಲೇ ಕಾಗದದ ಚೂರುಗಳನ್ನು ಕಂಡಾಗಲೊಮ್ಮೆ ನನಗೆ ಆದಿ ಅಂತ್ಯಗಳಿಲ್ಲದ ಸಂಸ್ಕೃತಿಯ ನೆನಪೇ ಆಗುತ್ತದೆ.

ನನಗು ಕಾಗದದ ಚೂರಿಗೂ ಬಹು ಪುರಾತನ ಸಂಬಂಧವಿದೆ ಎಂದು ಹೇಳಿದ್ದೇನೆ. ಆ ಸಂಬಂಧದ ನೆವಮಾಡಿ ಕಲ್ಪನೆಯ ಶಿಖರವನ್ನೇರಿ ಕುಳಿತು ಚಿಂತಿಸುತ್ತೇನೆ. ನಾನೂ ಕಾಗದದ ಚೂರು ಅದೇಕಾಗಲಿಲ್ಲವೆಂದು? ಪ್ರಕೃತಿಯ ಪ್ರತಿ ಸೃಷ್ಟಿಕರ್ತನಾದ ಕವಿಯ ಬ್ರಹ್ಮಬರಹಗಳನ್ನು ಧರಿಸುವ ಧನ್ಯತೆ ಕಾಗದದ ಚೂರಿಗಲ್ಲದೆ ಇನ್ನಾರಿಗೆ ದಕ್ಕೀತು?

ಪುಸ್ತಕಗಳ ರಾಜ್ಯದಲ್ಲಿ ಕುಳಿತು ಕಣ್ಣನ್ನೂ ಕಿವಿಯನ್ನೂ ಕಳೆದುಕೊಂಡಿರುವ ಪಂಡಿತ ಪ್ರಕಾಂಡರಿಗೆಲ್ಲ ಗೊತ್ತು, ‘ಕೀಟ್ಸ್’ ಕವಿಯ Ode to Nightingaleದ ವ್ಯಕ್ತಸ್ಪೂರ್ತಿಯು ಅಭಿವ್ಯಕ್ತಗೊಂಡಿದ್ದು ಕೆಲ ಕಾಗದದ ಚೂರುಗಳ ಮೇಲೆ. ಚಸ್ಟರಟನ್ನಂತೂ ಕಾಗದದ ಚೂರುಗಳೊಂದಿಗೆ ಪ್ರೀತಿ ಮಧುರ ಸಂಬಂಧವನ್ನೇ ಇರಿಸದಂತೆ ತೋರುತ್ತದೆ. ‘What I found in my pocket’ನಲ್ಲಿ ಅವನು ಮುಕ್ತಕಂಠನಾಗಿ ಹೊಗಳಿದ್ದು ಟ್ರಾಮು ಟಿಕೇಟುಗಳನ್ನು. ‘A piece of chalk’ನಲ್ಲಿ ಆತನ ಮನಸ್ಸು ಕೇಂದ್ರೀಕೃತವಾದದ್ದು-ಕಂದು ಬಣ್ಣದ ಕಾಗದ ತುಂಡೊಂದರ ಮೇಲೆ, ಮಧುರಚೆನ್ನರ ಲೇಖನಗಳು, ಟಿಪ್ಪಣಿಗಳು ಯಾವುದೋ ವೃತ್ತಪತ್ರದ ಅಚ್ಚಾಗದೆ ಉಳಿದ ಭಾಗದಲ್ಲಿ, ಯಾರದೋ ಪತ್ರದ ತುದಿಯಲ್ಲಿ ಸೂಚಿತವಾಗಿದ್ದನ್ನು ನೋಡಿದವರು ಇದ್ದಾರೆ. ಅದಕ್ಕೆಲ್ಲ ಕವಿಗಳ ಅಸಾಧ್ಯ ಪ್ರಕೃತಿಯೇ ಕಾರಣ. ಯಾವಾಗ ಅವರ ಮೇಲೆ ಸ್ಪೂರ್ತಿಕನ್ನಿಕೆಯ ಕೃಪೆಯೋ ತಿಳಿದವರಾರು? ಅಂತೂ ಕವಿಗಳಿಗೆ ಕಾಗದದ ಚೂರಿನ ಮೇಲೆ, ತಾಯಿಗೆ ತನ್ನ ಪ್ರಥಮ ಶಿಶುವಿನ ಮೇಲೆ ಇರುವಷ್ಟು ವಾತ್ಸಲ್ಯ, ಪ್ರೇಮ. ಕಾಗದದ ಚೂರೆಂದರೆ ಕವಿಯ ಪ್ರಸವವೇದನೆಯನ್ನು ಕೊನಗಾಣಿಸಲು ನಿಂತ ಸೂಲಗಿತ್ತಿ-ಶಟಕವ್ವ ದೇವತೆ.

ಇಷ್ಟಾಗಿಯೂ ಮರಿಕವಿಗಳಿಗೆ ಇದನ್ನು ಕಂಡಾಗ ಮನಸ್ಸಿನಲ್ಲಿ ಬಿರುಗಾಳಿಯೇ ಏಳುವ ಸಂಭವವಿದೆ. ಯಾಕೆಂದರೆ ಇವರು ಬರೆಯುವುದು ಕಾಗದದ ತುಂಡಿನ ಮೇಲೆ ಅಲ್ಲ; ಸೊಗಸಾದ ಗ್ಲೇಜಿಂಗ್ ಪೇಪರಿನ ಮೇಲೆ. ಅವರ ಕೃತಿಗಳೆಂದರೆ ಅಕಾಲಿಕ ಗರ್ಭಪಾತಗಳು. ಗಟಾರವನ್ನು ಸೇರಲರ್ಹವಾದವು. ಸಂಪಾದಕನ ಕಸದ ಬುಟ್ಟಿಗೂ ಸರಕಾರದ ಆಫೀಸುಗಳಲ್ಲಿ ಕುತ್ತುಸಿರು ಬಿಡುವ ಫೈಲುಗಳ ಗತಿಯೂ ಒಂದೇ. ಹೀಗಾಗಿ ಆ ಕಾಗದದ ತುಂಡೊಂದನ್ನು ನೋಡಿದಾಗ ತಮ್ಮ ಅಣುಕುಚಿತ್ರವನ್ನೇ ಕಂಡಂತಾಗಿ ಅವರು ಕು-ದಿ-ದೇಳುವರು.

ಹೀಗೆ ಕಾಗದದ ಚೂರನ್ನು ನೋಡುತ್ತಿದ್ದಂತೆಯೇ ನನಗೆ ವಿಶ್ವದ ವಿರಾಟ್ ಸ್ವರೂಪವೇ ಅರ್ಥವಾಗುತ್ತದೆ. ಯಶೋದಾ ಕೃಷ್ಣನ ನಾಲಿಗೆಯ ಮೇಲೆ ವಿಶ್ಚರೂಪವನ್ನೇ ಕಂಡಂತೆ. ಯಾವುದೋ ಮೂಲೆಯಲ್ಲಿ ಒಗೆದರೆ ಬಿದ್ದುಕೊಂಡಿರುವ ವಸ್ತುವು ಜೀವನದ ಸಾವು-ನೋವುಗಳನ್ನೂ, ನಗು-ನಲಿವುಗಳನ್ನೂ, ದ್ದೇಷ-ಅಸೂಯೆಗಳನ್ನೂ, ಪ್ರೇಮ ಕಲಾಭಿಜ್ಞತೆಗಳನ್ನು-ವಿವರಿಸುತ್ತದಲ್ಲ! ಇಂದು ಅಮರಕೃತಿಗಳೆಂದು ಜನರ ನಾಲಿಗೆಯ ಮೇಲೆ ನಲಿಯುತ್ತಿರುವ ಸಾಹಿತ್ಯಸುಧಾ ಪ್ರವಾಹದ ಉಗಮ ಒಂದು ನಿರ್ಲಕ್ಷತೆಗೀಡಾದ ಕಾಗದದ ಚೂರೇ ಎಂದಾಗ ವಿಶ್ವದ ಮಹಿಮೆಯ ಮನವರಿಕೆಯಾಗುವದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುವ್ವಾಲೆ
Next post ಗಲ್ಲ

ಸಣ್ಣ ಕತೆ

 • ಇರುವುದೆಲ್ಲವ ಬಿಟ್ಟು

  ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

 • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

  ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

 • ಮೋಟರ ಮಹಮ್ಮದ

  ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

 • ದೇವರು ಮತ್ತು ಅಪಘಾತ

  ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

 • ಲೋಕೋಪಕಾರ!

  ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…