ಬೇಟೆ

ಬೇಟೆ

ನಾ ಈಗ ಒಂದೇ ಕತೆ ಹೇಳೀಕೆ ಹೊರಟೊಳೆ. ಕತೆ ಅಂದ್ರೆ ನಾ ಕಟ್ಟಿದ್ದಲ್ಲ. ಕೇಳಿದ್ದ್‌. ಈ ಕತೆನ ನಾಯಕ ಈಗ ಬೊದ್ಕಿತ್ಲೆ. ಕತೆ ಹೇಳ್ದೊವೂ ಬೊದ್ಕಿತ್ಲೆ. ಆದ್ರೆ ಕತೆಯಾಗಿ ಇಬ್ರೂ ಬೊದುಕ್ಯೊಳೋ.

ನಮ್ಮೊದ್‌ ಮಲೆನಾಡ್‌. ಕೊಡಗ್‌ಗೆ ಅಂಟಿಕಂಡೇ ಇರುವ ಊರ್‌. ಇಲ್ಲಿ ಒಂದ್‌ ಗುಡಿ ಉಟ್ಟು. ಅದ್‌ ಬೈನಾಟಿ ಭೂತದ್ದ್‌. ವರ್ಷಕ್ಕೊಮ್ಮೆ ಬೈನಾಟಿ ಭೂತದ ಜಾತ್ರೆ ಆದೆ. ಬೈನಾಟಿ ಭೂತ ಅಂದ್ರೆ ಅರ್ಜುನ್ನ ಪರೀಕ್ಷೆ ಮಾಡಿಕೆ ಹೊರಟ ಈಸರ ದೇವ್ರ್. ಬೈನಾಟಿ ಜಾತ್ರೆಯಂದ್‌ ಊರವೆಲ್ಲಾ ಸೇರಿ ಕೂಡು ಬೇಟೆ ಆಡುವೆ. ಈಗ ಕಾಡ್‌ ಇಲ್ಲೆ, ಮೃಗನೂ ಇಲ್ಲೆ. ಆದ್ರೂ ನಾವೆಲ್ಲಾ ಬೆಡಿ ಹಿಡ್ದ್ ಗುಡ್ಡ ಸುತ್ತಿ ಕಾಲಿ ಕೈಲಿ ಬಂದವೆ. ಸಂಪ್ರದಾಯ ಬುಡಿಕೆ ಬೊತ್ತಲ್ಲೆ?

ಅಂತಾ ಒಂದ್‌ ದಿನ ಅಪ್ಪಯ್ಯ ಗೌಡ್ರ್ ಬೂತಕಲ್‌ ಗುಡ್ಡೆ ಮೇಲೆ ಹೇಳ್ದೊ. “ಈ ಗುಡ್ಡೇಲಿ ನಾ ನೂರಾದರೂ ಹುಲಿಗಳ ಕೊಂದಿರುವೆ. ಉಳ್ದ ಚಿಲ್ರೆ ಪಲ್ರೆ ಬುಡಿ. ಆದ್‌ರೆ ಕೂಸಪ್ಪ ಗೌಡ್ರ ಹಾಂಗೆ ನಮ್ಮಂದ ಯಾರಂದ್ಲೂ ಮಾಡಿಕ್ಕೆ ಆತ್ಲೆ ಬುಡಿ”

“ಯಾವ ಕೂಸಪ್ಪ ಗೌಡ್ರ್?”

ಅಪ್ಪಯ್ಯ ಗೌಡ್ರ್ ನಮ್ಮ ಪ್ರಸ್ನೆಗೆ ನೆಗಾಡ್ದೊ. ಹಕ್ಕಲೆ ಇದ್ದ ದೊಡ್ಡ ಬಂಡೆಗಲ್ನ ಮೇಲೆ ಕುದ್ದೋ. ನಾವು ಕೂಡಾ ಸುತ್ತಮುತ್ತಕುದ್ದೊ. ತಮ್ಮ ಸಡನ್ನ್ ಡೆತ್ತ್ ಬೆಡೀನ ಬಂಡೆ ಮೇಲೆ ಇಸಿ ಗೌಡ್ರ್ ಚೋಯಂಬುನ ಹಕ್ಕಲೆ ಒಂದ್‌ ಬೀಡಿ ಕೇಳ್ದೊ. ಬೀಡಿ ಎಳ್ಕಂಡ್‌ ಅದ್‌ರ ಹೊಗೇನೇ ನೋಡ್ಕಂಡು ಹಳೇದ್‌ರ ನೆಂಪು ಮಾಡೀಕ್ಕೆ ಸುರುಮಾಡ್‌ದೊ.

“ಆಗ ಈ ಸೀಮೆಗೆ ಅಮರ ಸುಳ್ಯಾಂತ ಹೆಸ್‌ರ್‌. ಕೊಡಗ್‌ನ ಚಿಕ್ಕವೀರ ರಾಜೇಂದ್ರ ದೊರೆಗಳ ಆಡಳ್ತಕ್ಕೆ ಇದ್‌ ಒಳಪಟ್ಟಿತ್ತ್. ಅವು ಲಿಂಗಾಯತ್ರ್‌. ಈ ಸೀಮೇಲಿ ಲಿಂಗಾಯಿತ್ರೆ ಇತ್ಲೆ. ಆದ್‌ರೂ ಜನ ಅವ್‌ರ ಪ್ರೀತಿಸ್ತಿದ್ದೊ.”

ನಮ್ಮ ಕೋಲ್ಚಾರ್‌ ಕೂಸಪ್ಪ ರಾಜರ ಸೈನ್ಯಲಿ ಇತ್ತ್. ಬರ್ಜರಿ ಆಳಂಗದ ಸೀಪಾಯಿ. ಆರೂವರೆ ಅಡಿಯಸ್ಟ್ ಎತ್ತ್‍ರ ಇತ್ತ್. ಅಗಲ ಮೋರೆ, ದೊಡ್ಡ ಮೂಕು, ಬರ್ಜರಿ ಹುರಿ ಮೀಸೆ ಮತ್ತೆ ಹೆದ್ರಿಕೆ ಹುಟ್ಟುಸ್‌ವ ಕೆಂಪು ಕಣ್ಣುಗ! ಅವ್‌ರ ಬಲವಾದ ತೋಳುಗ, ದೃಢವಾದ ಕಾಲ್‌ಗ, ಮಾಸಲವಾದ ಗಟ್ಟಿ ಸರೀರ ಅವ್‌ರ ನಾಯಕನಾಗಿ ಮಾಡಿತ್ತ್. ಅವ್‌ರ ಸೇನಾ ನಾಯಕ ಕುಳ್ಳ ಕುಂಡೋಚ್ಚ. ಕೂಸಪ್ಪ ಗೌಡ್ರೀಗೆ ಏನಾದ್‌ರೂ ಹೇಳೋ ಕೂಂತಾದ್‌ರೆ ಅವಂಗೆ ತುಂಬಾ ಕಸಿವಿಸಿ ಆತಿತ್ತ್‌. ಈ ಕೂಸಪ್ಪ ಎಂತಾ ವ್ಯಕ್ತಿಯೆಂದ್‌ರೆ, ಮೊದುವೆಗೆ ಹೋದ್‌ರೆ ಪಂತ ಹಾಕಿ ನಾಲ್‌ಕ್‌ ಕವಂಗ ಪಾಯ್ಸ ಕುಡೀತೀತ್‌ಗಡ. ಹಲ್ಲ್‌ಂದ ಅಕ್ಕಿ ಮುಡೀ ಎತ್ತ್‌ತೀತ್‌ ಗಡ!

ಒಂದ್ ಸರ್ತಿ ರಜಾ ತಕಂಡ್‌ ಊರಿಗೆ ಬಂದ ಕೂಸಪ್ಪ ಗೌಡ್‌ರೀಗೆ ಬೇಟೆ ಆಡ್‌ವ ಮನಸ್ಸಾತ್‌. ಬಾಳ್‌ ಕತ್ತಿ ಸೊಂಟಕ್ಕೆ ಸಿಗ್ಸಿ, ಕೇಪಿನ ಬೆಡಿಗೆ ಮೊದ್ದ್ ಜಡ್‌ದ್‌ ಅವು ಬಂದದ್ದ್ ಇದೇ ಭೂತಕಲ್‌ ಗುಡ್ಡೆಗೆ. ಹೆದ್ರಿಕೆ ಅಂತ ಹೇಳ್‌ರೆ ಏನ್‌ತ ಗೊತ್ತೆ ಇರ್‌ದ ಅವು ಒಬ್ಬನೇ ಬೇಟೆಗೆ ಬಂದಿದ್ದೊ ಗಡ.

ಆಗ ಈ ಗುಡ್ಡೆ ಹೀಂಗೆ ಇತ್ಲೆ. ಗಿಡ ಮೊರಂದ ತುಂಬಿ ಎಲ್ಲೆಲ್ಲೂ ಪಚ್ಚೆರ್‌. ಒಳಗೆ ಸಂಕಪಾಲ, ಕಾಟಿ, ಹಂದಿ ಹುಲಿಗೊ ತುಂಬಿಕೊಂಡಿತ್ತ್ ಗಡ. ಆದ್‌ರೆ ಕೂಸಪ್ಪ ಗೌಡ್ರ್ ಸ್ವಲ್ಪಾನೂ ಹೆದ್ರಿಕೆ ಇಲ್ಲದೆ ಬರುತ್ತಿದ್ದೊ ಗಡ. ಮರದ ಮೇಲಿದ್ದ ಒಂದು ಮುಚ್ಚ ಇವ್‌ರ ನೋಡಿ ‘ಕೀಚ್ ಕೀಚ್’ ಅಂತೇಳಿ ಮತ್ತೊಂದ್‌ ಮರಕ್ಕೆ ಹಾರಿತ್‌ಗಡ. ಮುಚ್ಚನ ಮಾಸ ಬಾರಿ ರುಚಿ. ಕೂಸಪ್ಪ ಗೌಡ್ರ್ ಬೆಡಿ ಎತ್ತಿದೊ. “ಬೇಡ. ಇದ್ಕಿಂತ ಒಳ್ಳೇದ್‌ ಸಿಕ್ಕುದು. ಹಾಳಾದ್ದ್ ಮತ್ತೆ ಯಾರ್‌ ಮೊದ್ದು ಜಡಿಯುದು” ಎಂದು ಕೆಳಗಿಳಿಸಿದೊ. ಮುಚ್ಚ ಮತ್ತೊಂದು ಮರಕ್ಕೆ ಹಾರಿ ಕಾಣೆಯಾತ್‌.

ಆಗ ಆ ಮರದ ಬುಡದತ್ತ ಅವ್‌ರ ದೃಸ್ಟಿ ಹೋತ್‌. ಒಂದು ಕಣ ಅವು ಮರಗಟ್ಟಿ ಹೋದೊ. ಅಲ್ಲಿ ಎರಡ್‌ ಹಡೀ ಗಾತ್ರದ ಕಾಟಿಗೊ ಇವರ್ನೇ ನೋಡ್ತಿತ್‌! ಯಾದಕ್ಕೆ ಗುಂಡು ಹೊಡಿಯೋದು? ಈ ಗುಡ್ಡೆಲಿ ಕಾಟಿಂದ ಜೋರಾಗಿ ಓಡಿಕೆ ಬೊತ್ತು. ಮಳೆಗಾಲ ಆದರ್‌ಂದ ಮರ ಹತ್ತಿ ಬೊದ್ಕಿಕೂ ಬೊತ್ತು.

ಅವು ಗೇನ ಮಾಡಿಕಂಡು ಇದ್ದಾಂಗೆ ಸಣ್ಣ ಕಾಟಿ ಹಾಯಕೆ ಬಾತ್‌. ಕೂಸಪ್ಪ ಗೌಡ್ರ್ ನೋಟ ನೋಡಿ ಕುದ್ರೆ ಅದುಮಿದೊ. ಕಾಟಿ ಬೀತ್. ನೋಡಿ ಓ ಅಲ್ಲಿ ದೊಡ್ಡ ಗುಂಡಿ ಕಂಡದೆಲ್ಲಾ. ಅದ್ಕೆ ಕಾಟಿ ಹೊಣ್‌ಕ್ಯಂಡ್‌ ಹೋಗಿ ಬೀತ್‌.

ಈಗ ದೊಡ್ಡ ಕಾಟಿ ಕೊಂಬು ಚಾಚಿ ಮುಂದೆ ಬಾತ್‌. ಮೊದ್ದ್ ಜಡ್ಯಕೆ ಸಮಯ ಇಲ್ಲೆ. ಸಿಟ್ಟ್‌ಂದ ಸುಳುಂಪಿಕಂಡ ಬಾವ ಕಾಟಿನ ನೋಡಿ ಗೌಡ್ರಿಗೆ ಎಲ್ಲಾ ದೇವ್‌ರ, ಬೂತೊಗಳ ನೆಂಪಾಗಿರ್ದ್‌. ಮೈಸಾಸುರ್ನ ಅವ್ತಾರದಂಗೆ ಕಾಣ್‌ವ ಕಾಟಿ ಅವ್‌ರ ಕುತ್ತಿದೆಂ ತಾಕನ ಅವುಕೆ ಸೈನ್ಯಲಿ ದಿನಾ ಮಾಡುವ ಕವಾಯಿತು ನೆಂಪಾಗಿ ಅವು ಕಾಲ್‌ ಅಗಲ್‌ಸಿ ಮೇಲೆ ಹಾರ್ದೊ. ಕಾಟಿ ತಲೆ ಬೊಗ್ಸಿದರ್‌ದ ಅವು ಸರ್ಯಾಗಿ ಬೆನ್‌ನ ಮೇಲೆ ಕುದ್ದಿದ್ದೊ. ಕಾಟಿ ಗಾಬ್ರೀಲಿ ಅತ್ತಿತ್ತ ಓಡೀಕೆ ಸುರು ಮಾಡ್ತ್.

ಹೆಂಗೋ ಸರಿ ಮಾಡಿಕಂಡ ಅವು ತಿರ್ಗಿ ಕಾಟಿನ ಬೆನ್ನು ಮೇಲೆ ಸರ್ಯಾಗಿ ಕುದ್ದೊ. ಕಾಟಿನ ದೊಡ್ಡ ಕೊಂಬುಗ ಅವ್‌ರ ಕೈಗೆ ಸರ್ಯಾಗಿ ಸಿಗ್ತಿತ್‌. ಕೊಂಬ್‌ ಹಿಡ್ಕಂಡ್‌ ಜೋರಾಗಿ ಅಲ್ಗ್‍ಸಿಕೆ ಅವು ಸುರು ಮಾಡ್ದೊ. ಕಾಟಿ ತಲೆನ ಅತ್ತಿತ್ತ ಆಡ್ಸಿಕೆ ಸುರು ಮಾಡ್ತ್‌. ಅವು ಹಿಡ್‌ದ ಪಟ್ಟ್‌ ಬುಟ್ಟತ್ತಿಲ್ಲೆ. ಬಲವಾಗಿ ಹಿಡ್ದ್ ಕುತ್ತಿಗೇನ ಎಡಕ್ಕೆ ತಿರ್‌ಗಿಸ್ದೊ. ಲಟಕ್ಕ್‌ ಸಬುದ ದೊಟ್ಟಿಗೆ ಕುತ್ತಿಗೆ ಮುರ್ತ್. ಅವು ಕೆಳಗೆ ಬಿದ್ರೂ ಕೊಂಬುನ ಬುಟ್ಟತ್ಲೆ. ಕಾಟಿ ಅಡ್ಡಬಿದ್ದು ಹೊರಳ್ಲಿಕ್ಕೆ ಸುರು ಮಾಡ್ತ್. ಆಗ ಅವು ಕೊಂಬುನ ಬುಟ್ಟೊ. ಅವುಕೆ ಬಾಳ್‌ ಕತ್ತಿ ನೆಂಪಾತ್‌. ಅದ್‌ ಉರ್ಡಾಟ ಮಾಡಕನ ಹಂ ಞದೂರಲೇ ಬಿದ್ದೀತ್‌. ಅವು ಓಡಿ ಹೋಗಿ ಕತ್ತೀನ ತಂದೊ. ಎರಡ್‌ ಕಡ್ಯಟಲಿ ತಲೆ ಬೇರೆ ಆತ್‌. ಕಾಟೀನ ಸರೀರ ಹೊಣ್‌ಕಿ ಹೊಣ್‌ಕಿ ಅಲ್ಲೇ ಆ ಹೊಂಡಕ್ಕೆ ಬೀತ್.
* * *

ಅಪ್ಪಯ್ಯ ಗೌಡ್ರ್ ಚೋಯಂಬುನ ಹಕ್ಕಲೆ ಇನ್ನೊಂದ್‌ ಬೀಡಿ ಕೇಳ್ದೊ. ನಾವು ಆಸ್ಚರ್ಯಪಟ್ಟ್‌ ಕೂತಿದ್ದೊ. ಬೀಡಿ ಎಳ್ಕೂಂಡ್‌ ಇದ್ದಂಗೆ ಅಪ್ಪಯ್ಯ ಗೌಡ್ರ್ “ಆತಲ್ಲಾ ಇನ್ನ್ ಎದ್ರಿ. ಅಂದಿನೋ, ಮೊಲನೋ ಸಿಕ್ಕಿದೆನೋ ನೋಡಮಾ” ಅಂತೇಳಿ ಎದ್ರಿಕೆ ನೋಡ್ದೊ. ನಾವು ಬುಡೋಕಲೆ? “ಕುದ್ರಿ ಕುದ್ರಿ. ಕೂಸಪ್ಪ ಗೌಡ್ರ ಕತೆ ಹೇಳಿ” ಎಂದ್‌ ನಾವ್‌ ಅವ್‌ರ ಕುದ್ರಿಸಿದೋ. ಅಪ್ಪಯ್ಯ ಗೌಡ್ರ್ “ಬೇಡ ಬುಡಿ. ಅದ್‌ ದೊಡ್ಡ ರಾಮಾಯಣನೇ ಆದೆ” ಎಂದೋ. ನಾವ್‌ ಕೇಳೊಕಲೆ? “ಆತ್‌ ಇಲ್ಲಿ ಮುರ್ಗಗೊ ಇಲ್ಲೆ. ಇಂದ್ ನಾವ್ ಬೇಟೆ ಆಡ್ದಂಗೆ” ಎಂದ್ ಅವು ಕುದ್ದೊ. ಬೀಡಿ ಎಳ್ಕಂಡ್‌ ಮೊತ್ತೆ ನೆಂಪು ಮಾಡೀಕೆ ಸುರು ಮಾಡ್ದೊ.
* * *

ಆಗ ಇಂಗ್ಲೀಸರ ಆರ್‌ವಾಡ ಜೋರಿದ್ದ ಕಾಲ. ಮೈಸೂರ್ನ ಸ್ವಾಧೀನ ಮಾಡ್ಕೂಂಡ ಮೇಲೆ ಅವ್‌ರ ಕಣ್ಣ್ ಕೊಡಗ್‌ನ ಮೇಲೆ ಬೀತ್‌. ಅವ್‌ರ ಯಜಮಾನಿಕೆ ಒಪ್ಪಿಕೊಣೊಕು ಅಂತೇಳಿ ರಾಜಂಗೆ ಕರೆ ಬಾತ್‌. ರಾಜನ ಸೇನಾಪತಿಗೊ ಯುದ್ಧ ಮಾಡೋಮಾ ಅಂತ ಹೇಳ್ದೊಗಡ. ಸೇನೆಲಿ ಬರಿಕೈಲಿ ಹುಲಿಕೊಂದ ನಂಜಯ್ಯ ಎಂಬ ಸುಬೇದಾರ ಇತ್ತ್‌. ನಮ್ಮಲ್ಲಿ ಕೋಟಿ ಚೆನ್ನ‍ಯ್ಯರ್ ಒಳೊಲ್ಲ. ಹಾಂಗೆ ಸೇನೆಲಿ ಕರ್ತು ಮತ್ತು ಚೆಟ್ಟಿ ಅಂತ್‌ ಇಬ್ರ್‌ ಮಲೆಕುಡೀರು ಇದ್ದೊಗಡ. ಬಾಳ ಧೈರ್ಯವಂತೊಗಡ. ಕೂಸಪ್ಪ ಗೌಡ್ರ್ ಕೇಳ್‌ದೇ ಬೇಡ. ಇವು ಎಲ್ಲಾ ಯುದ್ಧಕ್ಕೆ ತಯಾರಾಕನ ದೀವಾನ ಬೋಪು ಅಡ್ಡಿ ಮಾಡ್ತ್ ಗಡ. ರಾಜಿ ಮಾಡ್‌ದೇ ಒಳ್ಳೇದ್‌ ಅಂತ ರಾಜನ್ನ ಒಪ್ಪಿಸಿದೊಗಡ. ಯುದ್ಧನೇ ಇಲ್ಲ್‍ದೆ ಕೊಡಗು ಇಂಗ್ಲೀಷರ ಕೈಗೆ ಹೋತ್‌. ಅವು ರಾಜನ ಬಲಾತ್ಕಾರಲಿ ಕಾಸಿಗೆ ಓಡ್ಸಿದೊ ಗಡ.

ಆಗ ರಾಜನಿಸ್ಟ್ರು ಅಮರ ಸುಳ್ಯಕ್ಕೆ ಬಂದೊ. ಅವುಕ್ಕೆ ಆಸ್ರಯ ಸಿಕ್ಕಿದ್ದ್ ಕೆದುಂಬಾಡಿ ರಾಮಗೌಡ್ರಲ್ಲಿ. ಇಂಗ್ಲೀಷರು ಹೊಸೆಪು ಮತ್ತು ಉಪ್ಪುಗೆ ತೆರಿಗೆ ಹಾಕಿದ್ದೊ ಕಂದಾಯ ಹಣ ರೂಪಲೇ ಕೊಡೊಕುಂತೇಳಿ ಸಾಸ್ನ ಮಾಡ್ದೋ. ಅದ್‌ ಇಲ್ಲಿನ ಬೇಸಾಯಗಾರ್ರ ಕೆರಳಿಸೀತ್‌. ಕೆದುಂಬಾಡಿ ರಾಮ ಗೌಡ್ರ್ ಆಗ ಅಮರ ಸುಳ್ಯ ಸೀಮೇಲಿ ತುಂಬಾ ಹೆಸರು ಗಳ್‌ಸಿದ್ದೊ. ಕೂಸಪ್ಪ ಗೌಡ್ರಿಗೂ ಜನ ಬೆಂಬಲ ಇತ್ತ್. ಇವೆಲ್ಲಾ ಸೇರಿ ಸೋಮವಾರಪೇಟೆ ಕಡೆಯ ಒಬ್ಬ ಲಿಂಗಾಯ್ತನ್ನ ಕರ್ಕೂಂಡು ಬಂದೊ. ಅವಂಗೆ ಕಲ್ಯಾಣಪ್ಪಂತ ಹೆಸ್ರು ಕೊಟ್ಟು, ರಾಜ್‌ರ ನೆಂಟಂತೇಳಿ ಸುದ್ದಿ ಹಬ್ಸಿ ಸೇನಾಪತಿ ಮಾಡಿ ಸೇನೆ ಕಟ್ಟಿದೊ. ಇಂಗ್ಲೀಸ್‌ರ ಕಂದಾಯ ತೆಗ್ದು ಹಾಕಿ ಮೂರು ವರ್ಸ ಕಂದಾಯ ಮಾಪಿ ಅಂತೇಳಿ ಇಸ್ತಿಯಾರು ಹೊರಡಿಸಿದೊ.

ಕೇಳ್‌ದೇನ್‌ ? ಅಮರ ಸುಳ್ಯದ ಬೇಸಾಯಗಾರ್ರೆಲ್ಲಾ ಜಾತಿ ಮರ್ತು ಒಂದಾದೊ. ರಾಜ್‌ರ ಸೈನ್ಯದ ಸೈನಿಕಂಗ ಈ ಸುದ್ದಿನ ಕೇಳಿ ತುಂಬಾ ಜನ ಒಂದಾಗಿ ಅಮರ ಸುಳ್ಯಕ್ಕೆ ಬಂದೊ. ಜನವೋ ಜನ. ಸಿಕ್ಕಿದ್ದೇ ಆಯುಧ. ಬೆಳ್ಳಾರೆ, ಪಂಜ, ಪುತ್ತೂರು, ವಿಟ್ಲ, ಪಾಣೆಮಂಗಳೂರು ಆಗಿ ದೊಡ್ಡ ಪಡೆ ಮಂಗಳೂರಿಗೆ ಹೋತ್‌. ಅಲ್ಲಲ್ಲಿ ತುಂಡರಸ್ರ್ ಸೈನ್ಯನ ಸೇರಿಕೊಂಡೊ. ಈ ದೊಡ್ಡ ಸೈನ್ಯದ ಎದ್‌ರ್‌ ನಿಲ್ಲೀಕೆ ಆಗ್‌ದೆ ಇಂಗ್ಲೀಸ್ರ್ ಕಣ್ಣಾನೂರ್‌ಗೆ ಓಡ್ದೊ.

“ಕಲ್ಯಾಣಪ್ಪ ರಾಜ್ಯಪಾಲ ಆತ್‌. ಹದಿಮೂರ್‌ ದಿನ ರಾಜ್‌ರ ಹೆಸ್ರೀಲಿ ಆಡಳ್ತೆ ನಡೆಸ್ತ್‌. ಹದಿಮೂರ್ನೆ ರಾತ್ರೆ ಕಲ್ಯಾಣಪ್ಪನ ಪಡೆ ನಿದ್ರೆ ಮಾಡಿಕೊಂಡಿರಕನ ಇಂಗ್ಲೀಸ್‌ರ ದೊಡ್ಡ ಪಡೆ ಬೆಡಿ, ಫಿರಂಗಿ ಒಟ್ಟಿಗೆ ಧಾಳಿ ಮಾಡ್ತ್. ಕಲ್ಯಾಣಪ್ಪ ಮತ್ತು ಅವ್ನು ಬಂಟ್ರ್‍ಗಳ ಇಂಗ್ಲೀಸ್ರು ಗಲ್ಲಿಗೇರಿಸಿದೊ.”
* * *

ಅಪ್ಪಯ್ಯ ಗೌಡ್ರ್ ಕತೆ ನಿಲ್ಸಿದೊ. ನಾವು ಕಲ್ಲ್ ನಂಗೆ ಕುದ್ದಿದೊ. ಬಾಡು ನಾಯ್ಕ ಲೊಚಗುಟ್ಟಿತ್‌. ಅಯ್ಯಯೋ ಪಾಪ. ಕೂಸಪ್ಪ ಗೌಡ್ರ್ ಹಂಗಾರೆ ಮಂಗ್ಳೂರ್‍ಲೇ ಸತ್ತ್ ಹೋತ್‌ ಅಂತ ಬೇಜಾರಿಲಿ ಹೇಳ್ತ್‌.

“ಇಲ್ಲೆ ಇಲ್ಲೆ” ಅಪ್ಪಯ್ಯ ಗೌಡ್ರ್ ಹೇಳ್ದೊ. “ಕಲ್ಯಾಣಪ್ಪ ಮಂಗ್ಳೂರ್‌ನ ವಸ ಮಾಡ್ದ್‌ ಗೊತ್ತಾಕನ ಮಡ್ಕೇರಿಲಿ ಇಂಗ್ಲೀಸರ ಸೈನ್ಯಾಧಿಕಾರಿ ಲೀಹಾರ್ಡಿ ಅಮರ ಸುಳ್ಯಕ್ಕೆ ಸೇನೆಯೊಟ್ಟಿಗೆ ಬಾತ್‌. ಇದ್‌ ಗೊತ್ತಾಗಿ ಕಲ್ಯಾಣಪ್ಪ ಕುಡಿಯ ಸೋದರ್ರು ಕೂಸಪ್ಪ ಗೌಡ್ರೊಟ್ಟಿಗೆ ಅಮರ ಸುಳ್ಯಕ್ಕೆ ಸೇನ್ನೆ ಕಳಿಸಿಕೊಟ್ಟತ್ತ್‌. ಕುಡಿಯ ಸೋದರ್ರು ಲೀಹಾರ್ಡಿಗೆ ಸಿಕ್ಕಿ ಬಿದ್ದೊ. ಕೂಸಪ್ಪ ಗೌಡ್ರು ತೊಪ್ಪುಸಿ ಕೊಂಡು ಓಡ್ದೊ.”

“ಓ ಅಸ್ಟೇನಾ ಮತ್ತೆ ಎಂಥದ್‌ ಅವರ ಧೈರ್ಯ?” ಚೊಯಂಬ್‌ ಕೇಳಕನ ಅಪ್ಪಯ್ಯ ಗೌಡ್ರಿಗೆ ನೆಗೆ ಬಾತ್‌.

“ಅಂದ್‌ ನೀ ಮಾಡ್ದ್‌ ಎಂತದ್ದ್‌? ಹುಲಿನ ಕಂಡಾಕನ ಹೆದ್ರಿ ಓಡಿ ಮರ ಹತ್ತಿತ್ಲೆನಾ? ಹುಲಿನ ಕೊಂದ ಮೇಲೆ ನಾನೆ ಅಲ್ಲೆನ ನಿನ್ನ ಮರಂದ ಇಳ್ಸಿದ್‌? ಮತ್ತೆ ಹುಲಿ ಜೊರ ಬಂದ್‌ ನೀ ಒಂದ್‌ ತಿಂಗೊ ಮಲಗಿತ್ಲೆನಾ? ಬಾರಿ ಧೈರ್ಯವಂತ ನೀ”. ನಾವ್ ಎಲ್ಲಾ ನೆಗಾಡ್ದೊ. ಚೋಯಂಬು ಕೂಡಾ ನೆಗಾಡ್‌ತ್‌.

ಅಪ್ಪಯ್ಯ ಗೌಡ್ರ್ ಇನ್ನೊಂದ್ ಬೀಡಿ ತಕಂದ. ಹೊಗೆ ಬುಟ್ಟುಕಂಡ್ ಮತ್ತೆ ಕತೆ ಮುಂದುವರ್ಸಿದೊ. “ಕೂಸಪ್ಪ ಗೌಡ್ರ್ ಓಡಿದ್ದ್‌ ಇಂಗ್ಲೀಸ್ರಿಗೆ ಹೆದ್ರಿ ಅಲ್ಲ. ಜನ್ರ ಒಪಾಸು ಒಟ್ಟಿಗೆ ಮಾಡಿ ಇಂಗ್ಲೀಸ್‌ರ ಓಡ್ಸಿಕೆ. ಈ ಪೆರಮುಂಡ, ಕರಿಕ್ಕೆ, ಕೋಲ್ಚಾರು, ಆಲೆಟ್ಟಿ, ಅಜ್ಜಾವರ, ಉಳುವಾರು, ಪೆರಾಜೆ, ನಿಡ್ಯಮಲೆ, ಅರಂತೋಡು, ಕಾಂತಮಂಗ್ಲ, ಮಂಡೆಕೋಲ್‌, ಸುಳ್ಯ, ತೊಡಿಕ್ಕಾನ ಸುತ್ತಿ ಬೇಸಾಯಗಾರ್ರ ಒಟ್ಟ್‌ ಸೇರ್ಸಿಕೆ ಸುರು ಮಾಡ್ದೊ. ಕಲ್ಯಾಣಪ್ಪನ ಗಲ್ಲಿಗೇರಿಸಿದ್ದಕ್ಕೆ ಕಂದಾಯ ಕಟ್ಬೇಡಿ ಎಂದು ಎಲ್ಲವುಕ್ಕೆ ಹೇಳ್ದೊ. ಅಮರ ಸುಳ್ಯ ಮಾಗಣೆಂದ ಒಂದು ಕಾಸೂ ಕಂದಾಯ ಸಿಕ್ಕದೆ ಹೋಕನ ಲೀಹಾರ್ಡಿ ಗೂಢಚಾರ್ರ ಅಟ್ಟಿತ್. ಕೂಸಪ್ಪ ಗೌಡ್ರ ಕಾರ್‌ಬಾರ್‌ ತಿಳ್ದ್‌ ಸಿಟ್ಟ್‌ ಬಾತ್‌. ಗೌಡ್ರ ತಲೆಗೆ ಐದ್ಸಾವಿರ ರೂಪಾಯಿ ಬೊಹುಮಾನ ಫೋಷಣೆ ಮಾಡ್ತ್‌. ಲೀಹಾರ್ಡಿನ ಪರ್ಮಾನು ಹೊರಟ ಮೇಲೆ ಕೂಸಪ್ಪ ಗೌಡ್ರ್‌ ಅಡಂಗಿಕೊಂಡ್‌ ತಿರ್ಗಿಕೆ ಸುರು ಮಾಡ್ದೊ. ಸಾವ್ನು ಹೆದ್ರಿಕೆಂದ ಅಲ್ಲ. ಸಿಕ್ಕಿ ಬಿದ್ದರೆ ಇಂಗ್ಲೀಸ್ರ ವಿರುದ್ಧ ಹೋರಾಡೊವು ಇಲ್ಲೇಂತ ಆದೆ ಎಂದ್‌ ಅವುಕೆ ಗೊತ್ತಿತ್ತ್‌.”

ಸ್ವಲ್ಪ ಹೊತ್ತ್ ಅಪ್ಪಯ್ಯ ಗೌಡ್ರ್ ನಿಲ್ಸಿದೊ. ನವುಗೆ ತುಂಬಾ ಕುತೂಹಲ ಆಗಿತ್ತ್‌. ತಡ್ಯಕೆ ಆಗ್ದೆ ಕೇಳ್ದೊ.

“ಮುಂದೇನಾತ್?”

ಅಪ್ಪಯ್ಯ ಗೌಡ್ರ್‌ ನಿಟ್ಟುಸಿರ್‌ ಬುಟ್ಟೊ. “ಆದ್‌ ಏನ್‌? ದುಡ್ಡ್‌ನ ಆಸೆ ಯಾರಿಗೆ ಇರ್ದುಲೆ ಹೇಳಿ? ಕೂಸಪ್ಪ ಗೌಡ್ರು ಅಡುಂಗುವ ಜಾಗೆನ ಯಾರೋ ಒಬ್ಬ ಲೀಹಾರ್ಡಿಯ ಸೈನಿಕರಿಗೆ ತೋರ್ಸಿತ್.”

ಅದ್‌ ಮಂಡೆಕೋಲಿನ ಒಬ್ಬ ಮಧ್ಯಮ ವರ್ಗದ ಬೇಸಾಯಗಾರ್‍ನ ಮನೆ. ಮಳೆಗಾಲದ ಕರ್ಚಿಗೇಂತೇಳಿ ಅಟ್ಟದ ಮೇಲೆ ಅವ ಮುಡೀನ ಸರ್ಯಾಗಿ ಜೋಡ್ಸಿ ಇಟ್ಟಿತ್‌. ಸೈನಿಕ ನೋಡ್ದ ಕೂಸಪ್ಪ ಗೌಡ್ರು ಅಟ್ಟಹತ್ತಿ ಮುಡಿಗಳ ಹಿಂದೆ ಅಡಗಿ ಕುದ್ದತ್‌. ಸೈನಿಕಂಗ ಎಂಟು ಜನ ಇದ್ದೊ. ಆದ್ರೂ ಅಟ್ಟಕ್ಕೆ ಹತ್ತಿಕೆ ಸುರುಗೆ ಅವುಕೆ ಧೈರ್ಯ ಬಾತ್ಲೆ. ಕಡೇಗೆ ಹಣದ ಆಸೆ ಗೆದ್ದತ್ತ್‌. ಇಬ್ಬೋರು ಧೈರ್ಯ ಮಾಡಿ ಸುರುಗೆ ಅಟ್ಟ ಹತ್ತಿದೊ. ಉಳ್ದೊವು ಹಿಂದೆಂದ ಹತ್ತಿದೊ. ಕತ್ತಿ ಹಿಡ್ಕೂಂಡ್‌ ನಿಧಾನಲಿ ಮುಂದೆ ಹೋದೊ.

ಕೂಸಪ್ಪ ಗೌಡ್ರ್ ಆಗ್ಲೂ ಹೆದರ್‌ತ್ಲೆ. ತನ್ನಕಲೆ ಇದ್ದ ಅಕ್ಕಿ ಮುಡಿನ ಎತ್ತಿ ಒಬ್ಬ ಸೈನಿಕನ ಮೇಲೆ ಬಿಸಾಡ್ದೊ. ಅಂವ ಬೇನೆಲಿ ಅಯ್ಯಯ್ಯಯೋ ಅಂತೇಳಿ ಬೊಬ್ಬೆ ಹಾಕಿತ್‌. ಕೂಸಪ್ಪ ಗೌಡ್ರ್ ಇನ್ನೊಂದ್‌ ಅಕ್ಕಿ ಮುಡಿ ತೆಗ್ದ್ ಬಿಸಾಡ್ದೊ. ತಪ್ಪಿಸಿಕೊಂಡ್‌ ಸೈನಿಕಂಗ ಅವುರ ಸುತ್ತು ಹಾಕ್ದೊ. ಸಿಟ್ಟಿಲಿ ಕೂಸಪ್ಪ ಗೌಡ್ರ್‌ ಒಂದೇ ಸಮನೆ ಅಕ್ಕಿ ಮುಡೀನ ಎತ್ತಿ ಬಿಸಾಡಿಕೆ ಸುರು ಮಾಡ್ದೊ. ಆಗ ಒಬ್ಬ ಸೈನಿಕ ಅವ್‌ರ ಎಡ ಬಾಗಲಿ ಕತ್ತೀನ ಸರ್ಯಾಗಿ ಬೀಸಿತ್‌. ಅವ್‌ರ ಎಡಕೈ ತುಂಡಾಗಿ ಕೆಳಗೆ ಬೀತ್‌. ಆಗ ಬಲಬಾಗಲಿ ಸೈನಿಕ ಕೊರ್ಳಿಗೆ ಸರ್ಯಾಗಿ ಕತ್ತಿ ಬೀಸಿತ್. ಛಿಲ್ಲಂತ ರಕ್ತ ಚುಮ್ಮಿ ಅವ್‌ರ ರುಂಡ ಮುಂಡಂದ ಬೇರ್‍ಯಾಗಿ ಕೆಳಕ್ಕೆ ಬೀತ್‌. ಸೈನಿಕ್ರ ಮುಖಕ್ಕೆ ರಕ್ತದ ಓಕುಳಿ ಆತ್‌. ತಲೆಕಡ್ದ ಸೈನಿಕ ಬಿದ್ದ ರುಂಡನ ಎತ್ತಿಕೊಂಡ್‌ ಅಟ್ಟಾಸ ಹಾಕ್ತ್.
* * *

ಅಪ್ಪಯ್ಯ ಗೌಡ್ರ ಮೋರೇಲಿ ನೋವು ಹೆಪ್ಪ್‌ಗಟ್ಟಿತ್ತ್‌. ನಾವ್‌ ಏನ್‌ ಮಾಡಿಕಾಗದೆ ತುಂಬಾ ಬೇಜಾರಿಲಿ ಇದ್ದೊ. ಸೊಲ್ಪ ಹೊತ್ತಾದ ಮೇಲೆ ಚೋಯಂಬು ಮಾತಾಡಿತ್‌. “ಅಂತೂ ಎಂಟ್‌ ಜನ ಸೇರಿ ಆಯ್ದ ಇಲ್ಲದ ಒಬ್ಬನ ಕೊಂದ್‌ಬುಟ್ಟೊ! ಅವುಕೆ ಬಹುಮಾನ ಸಿಕ್ಕಿರೊಕ್ಕಲ್ಲಾ? ಅವ್‌ರ ಕುಟುಂಬದವ್‌ಕೆ ಭೂಮಿ ಕೊಟ್ಟಿರುವೊ.”

“ಅದೋ” ಅಪ್ಪಯ್ಯ ಗೌಡ್ರ್‌ ಕತೆ ಮತ್ತೆ ಮುಂದುವರ್ಸಿದೊ. ಆ ಕತೆ ಬಾಳ ಲಾಯಿಕುಟ್ಟು. ಈ ಸೈನಿಕ್ರು ಕೂಸಪ್ಪ ಗೌಡ್ರ ರುಂಡ ತಕಂಡ್‌ ಲೀಹಾರ್ಡಿನ ನೋಡೀಕೆ ಹೋದೊ. ಕೂಸಪ್ಪ ಗೌಡ್ರ ತಲೆ ಹಾರ್ಸಿದವ್ನೆ ಅದ್ರ ಹಿಡ್ಕೂಂಡಿತ್ತ್‌. ಲೀಹಾರ್ಡಿಗೆ ವಿಸ್ಯ ಗೊತ್ತಾಗಿ ಕ್ಯಾಪ್ಟನ್‌ ಡ್ರೆಸ್ಸಲ್ಲೇ ಹೊರಗೆ ಬಾತ್‌.

ಸೈನಿಕ್ರು ಲೀಹಾರ್ಡಿನ ಕಂಡ್‌ ಮಿಲಿಟ್ರಿ ಗತ್ತ್‌ಲಿ ಸೆಲ್ಯೂಟ್‌ ಹೊಡ್ದೊ. ರುಂಡ ಹಿಡ್ದವ ಅದರ ಲೀಹಾರ್ಡಿನ ಮುಂದೆ ಇಸಿತ್‌. ಅದರ ನೋಡ್ದ ಲೀಹಾರ್ಡಿನ ಹುಬ್ಬುಗೊ ಮೇಲೆ ಹೋತ್. “ದೇವ್ರೇ….. ಇದ್‌ ಎಂತಾ ಭವ್ಯತೆ” ಎಂದ್ ಅವ ಉದ್ಗರಿಸಿತ್‌.

ಮಾಮೂಲು ಸ್ಥತಿಗೆ ಬಂದ ಲೀಹಾರ್ಡಿ ಮತ್ತೆ ಕೇಳ್ತ್‌. “ಇವನ್ನ್ ಕೊಂದದ್ದ್‌ ಯಾರ್‌?”

ಕೊಂದ ಸೈನಿಕ ಒಂದು ಹೆಜ್ಜೆ ಎದ್ರ್‌ ಬಂದ್‌ ಎದೆ ಮುಂದೆ ಮಾಡಿ ಹೇಳ್ತ್‌. “ನಾನ್”. ಉಳಿದೋವ್ಕೆಲ್ಲಾ ಬಹುಮಾನಲಿ ಪಾಲ್‌ ತಪ್ಪಿ ಹೋಕೆ ಬೊತ್ತುಂತೇಳಿ ಗಾಬ್ರಿಂದ “ನಾವ್ ಎಲ್ಲಾ ಇದ್ದದರ್‌ಂದ ಇವನ ಕೊಲ್ಲಿಕೆ ಸಾಧ್ಯ ಆದ್ದ್” ಎಂತ ಹೇಳ್ದೊ.

ಲೀಹಾರ್ಡಿಗೆ ನೆಗೆ ಬಾತ್‌. “ಆತ್‌…… ಆತ್‌…… ಬಹುಮಾನ ಎಲ್ರಿಗೂ ಕೊಡೊಮಾ. ಸುರುಗೆ ಇವಂಗೆ. ಮತ್ತೆ ನಿವುಗೆಲ್ಲಾ. ನೀ ಬಾ, ಹಕ್ಕಲೆ ಬಾ”.

ಕೂಸಪ್ಪ ಗೌಡ್ರ ಕೊಂದವ ಉಳ್‌ದವ್ರೆಲ್ಲಾ ನೋಡಿ ಕುಸಿಲಿ ನೆಗಾಡಿ ಲೀಹಾರ್ಡಿ ಹಕ್ಕಲೆ ಬಂದ್‌ ನಿತ್ತತ್‌. ಈ ಮಾತ್‌ಕತೆನೆಲ್ಲಾ ಕೇಳಿ ಅಲ್ಲೇ ಒಂದ್‌ ಕೋಣೇಲಿ ಬರ್‌ಕೊಂಡು ಕುದ್ದಿದ್ದ ಬೋಪು ದಿವಾನ ಹೊರಗೆ ಬಂದ್‌ ನೋಡ್ತ್‌.

ಲೀಹಾರ್ಡಿ ಹಕ್ಕಲೆ ಬಂದ್‌ ನಿಂತ ಸೈನಿಕನ ಒಂದ್‌ ಸರ್ತಿ ಸರ್ಯಾಗಿ ನೋಡ್ತ್‌. ಮಿಂಚಿನಾಂಗೆ ಅವನ ಒರೆಲಿದ್ದ ಕತ್ತಿನ ತೆಗ್ದ್‌ ಅವನ ತಲೆನ ಕಚ್ಕಂತೇಳಿ ಕತ್ತರಿಸಿತ್‌. ಇದ್ರ ನೋಡಿ ಹೆದ್ರಿ ಹೋದ ಬೋಪು ‘ಇಗ್ಗುತ್ತಪ್ಪಾ’ ಎಂತೇಳಿ ಬೊಬ್ಬೆ ಹಾಕಿತ್‌. ಹೆದ್ರಿ ಹೋದ ಸೈನಿಕರ್‌ ಜೀವ ಉಳಿಸಿಕೊಂಬಕೆ ಬೇಕಾಗಿ ಮೊರ್ಲರಂಗೆ ಸಿಕ್ಕಾಬಟ್ಟೆ ಓಡ್ದೊ.

ಲೀಹಾರ್ಡಿ ಕೂಸಪ್ಪ ಗೌಡ್ರ ತಲೆನ ಕೈಲಿ ಹಿಡ್‌ಕೊಂಡ್ತ್‌. ಹೆಣಾಗಿ ಬಿದ್ದ ಸೈನಿಕನ ಕುತ್ತಿಗೆಂದ ಉಕ್ಕಿ ಹರಿತ್ತಿದ್ದ ರಕ್ತಲಿ ತನ್ನ ಬಲಗೈ ತೋರು ಬೆರಳನ ಮುಳ್ಗಿಸಿತ್‌. ಆ ರಕ್ತಲಿ ಗೌಡ್ರ ಹಣೆಗೆ ಬೊಟ್ಟು ಹಾಕಂಡ್‌ ನಡ್‌ಗಿಕೊಂಡ್‌ ಹೇಳ್ತ್‌. “ಓ ವೀರಯೋಧ! ನನ್ನ ಕ್ಷಮಿಸ್‌. ಇದ್ಕಿಂತ ಹೆಚ್ಚಿಗೆ ನಿಂಗೆ ನಾ ಏನೂ ಕೊಡೀಕೆ ಆದುಲೆ.”

ಬೋಪು ದಿವಾನ ಹೆದ್ರಿಕಂಡ್‌ ನಡ್ಗ್ಯಂಡ್‌ ಇದರ ನೋಡ್ತಿತ್ತ್‌.
* * *

ಕತೆ ಮುಗ್ಯಕನ ಎಲ್ರ ಕಣ್ಣ್‌ಲಿ ನೀರ್‌ ತುಂಬಿತ್ತ್‌. ಅಪ್ಪಯ್ಯ ಗೌಡ್ರ್‌ ಎದ್ದೊ. “ನಿವುಗೆ ಅಂದಿಗೈಪು ಅಪ್ಪದಿಟ್ಟು ತಿಂಬ ಯೋಗ ಇಲ್ಲೆ ನಡಿನಿ” ಎಂತ ಹೇಳ್ದೊ.

ಅಂದಿ ಕಾಂಬುಕೆ ಸಿಕ್ರೂ ಅವುಕೆ ಅಂದ್‌ ಅದ್ರ ಕೊಲ್ಲಿಕೆ ಮನ್ಸ್‌ ಬಾತಿತ್ತೊ ಇಲ್ಲೆನೋ!
*****
೧೯೯೬

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪತಿರೂಪ
Next post ನಮಗಲ್ಲ!

ಸಣ್ಣ ಕತೆ

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

cheap jordans|wholesale air max|wholesale jordans|wholesale jewelry|wholesale jerseys