ಭಾವ ಬಂಧನ

ಭಾವ ಬಂಧನ

ಭಾವ ಬಂದು ತುಂಬಾ ದಿನಗಳಾದುವು. ವಾರದಲ್ಲಿ ಮೂರು ಸರ್ತಿ ಬಂದು ಹೋಗುತ್ತಿದ್ದರು. ಮೊದಲ ದಿನಗಳಲ್ಲಿ ಪ್ರತಿಸಂಜೆಯೂ ಅವರ ಸವಾರಿ ಬಂದು ಕೆಲಹೊತ್ತು ಇದ್ದು ಗಂಡ ಬಂದ ಕೆಲವೇ ಕ್ಷಣಗಳಲ್ಲಿ ಹೋಗುತ್ತಿತ್ತು. ಈ ಸಲ ಮಾತ್ರ ಒಂದು ತಿಂಗಳೆ ಆಯಿತಲ್ಲ. ಹೀಗೆಂದೂ ಆಗಿರಲಿಲ್ಲ ನಮ್ಮ ಇಪ್ಪತ್ತು ವರ್ಷಗಳ ಜೀವನದಲ್ಲಿ.

ಇಂದು ಭಾವನನ್ನು ಕಾಣುವ, ಮಾತಾಡಿಸುವ ಇಚ್ಛೆ ತುಂಬಾ ಆಗಿದೆ. ಸಂಜೆಗೆ ಅಕ್ಕನ ಮನೆಗಾದರೂ ಹೋಗಿ ಅವರನ್ನು ಕಾಣಬೇಕು. ಭೆಟ್ಟಿಯಾಗದಿದ್ದರೆ ಕಾಯಬೇಕು. ಅಕ್ಕನಲ್ಲಿ ಅವರ ಈಚಿನ ಒಲವುಗಳ ಕುರಿತು ಕೇಳಬೇಕು… ಎಂದೆಲ್ಲ ಯೋಚಿಸುತ್ತಿದ್ದಂತೆಯೆ ಅವಳ ದಿನದ ಕೆಲಸ ಮುಗಿದು ಮಧ್ಯಾಹ್ನ ಕಳೆಯಿತು. ಆತುರದಲ್ಲಿ ಸಮಯ ಓಡಿದ್ದೆ ತಿಳಿಯಲಿಲ್ಲ. ತನ್ನೆರಡು ಮಕ್ಕಳೂ ಶಾಲೆ-ಕಾಲೇಜಿಗೆ ಹೋಗಿದ್ದರ ಅರಿವಾಗಲಿಲ್ಲ. ಕೆಲಸದಾಕೆ ಬಂದು ಮನೆ ಕೆಲಸ ಮಾಡಿ ಹೋದುದರ ನೆನಪೆ ಉಳಿಯಲಿಲ್ಲ. ಎಷ್ಟೋ ದಿನಗಳ ನಂತರ ಇಷ್ಟೊಂದು ತುಡಿತವೇಕೋ ಶರೀರಕ್ಕೆ ಮುಪ್ಪು ಬರುತ್ತಿರುವ ಪ್ರಜ್ಞೆ ಮನಸ್ಸಿಗೆ ಏಕಿಲ್ಲ. ಯವ್ವನದ ರೀತಿಯದೊಂದು ಉದ್ವೇಗ ಮೈಮನಗಳಲ್ಲಿ ಇಂದು ಏಕೆ ಉಂಟಾಗಿದೆಯೆಂದು ಸ್ವಲ್ಪ ಗೊಂದಲವಾಯಿತು.

ಸುಮಾರು ನಾಲ್ಕರ ಹೊತ್ತಿಗೆ ಚಾಕ್ಕೆ ನೀರಿಟ್ಟು ಕೂದಲು ಬಾಚಿಕೊಳ್ಳಲು ಮುಡಿ ಬಿಚ್ಚಿದಳು. ಕೈತುಂಬ ಸಿಕ್ಕಿದ ಕೂದಲನ್ನು ಜಾಡಿಸಿ ಸಿಕ್ಕುಬಿಡಿಸತೊಡಗಿದಳು. ಉದ್ದ ಕನ್ನಡಿಯೆದುರು ಬಂದು ಬಾಚಣಿಗೆ ಹಿಡಿದು ಬಾಚಿಕೊಂಡಳು. ಯಾವ ರೀತಿಯ ‘ಹೈರ್‌ಡು’ ಮಾಡುವುದೆಂದು ಕ್ಷಣ ಹೊತ್ತು ಧ್ಯಾನಿಸಿದಳು. ಆಗ ಅವಳ ನೆತ್ತಿಯಲ್ಲಿ ಕೂದಲ ಬಿಳಿ ಮೂಲಗಳು ಕಾಣಿಸಿದವು. ಮತ್ತಷ್ಟು ಕೆದಕಿ ನೋಡಿದಾಗ ಬಿಳಿಕೂದಲ ರಾಶಿಯೆ ಕಾಣಿಸಿತು. ಎದೆ ಜಗ್ಗೆಂದಿತು. ಎಷ್ಟು ಕಪ್ಪು ಬಳಿದರೂ ಬಿಳಿವಲಯವನ್ನು ಮರೆಸಲು ಸಾಧ್ಯವಾಗುತ್ತಿಲ್ಲ. ತನ್ನ ಪ್ರಾಯ ಹೀಗೆ ಇಣುಕು ಹಾಕುವ ಪರಿ ಅವಳನ್ನು ನೋಯಿಸಿತು. ಉದ್ದ, ದಟ್ಟ ಕೂದಲ ರಾಶಿ, ಹೆಮ್ಮೆ ಪಡುತ್ತಿದ್ದ, ವಿವಿಧ ಭಂಗಿಯಲ್ಲಿ ಕಟ್ಟಿ ಯುವಕರ ಎದೆಯ ಎಳೆಯನ್ನು ಜಗ್ಗುತ್ತಿದ್ದ ಕಪ್ಪು ಮುಡಿಯಲ್ಲಿ ಬಿಳಿಯ ಸಾಲುಸಾಲು, ಮುಖ ನೋಡಿದಳು, ಸಮಾಧಾನವಾಗಲಿಲ್ಲ. ಸೋಪು ಹಾಕಿ ತೊಳಕೊಂಡು ಟರ್ಕಿ ಟವಲಿನಿಂದ ಸರಿಯಾಗಿ ಒರಸಿ ಕನ್ನಡಿಯಲ್ಲಿ ಮತ್ತೆ ನೋಡಿದಳು. ಹಣೆಯಲ್ಲಿ ಸಣ್ಣ ಗೆರೆ, ಕೆನ್ನೆಯಲ್ಲಿ ಸುಕ್ಕಿನ ಪರೆ, ಕಣ್ಣ ಸುತ್ತ ತಿಳಿಯಾಗಿ ಹಬ್ಬುತ್ತಿರುವ ಕಪ್ಪು ವಲಯ. ಈ ವ್ಯತ್ಯಾಸದ ಕಲ್ಪನೆಯಿಂದ ಅವಳಿಗೆ ಗಾಬರಿಯಾಯಿತು. ಶರೀರದ ಇತರ ಭಾಗಗಳಲ್ಲಿಯೂ ಹೀಗೆಯೆ ಆಗಿದೆ ಎಂಬ ಚಿಂತೆಯಲ್ಲಿ ಕುಸಿದು ಬೀಳುವಂತಾಯಿತು. ಹೀಗೆ ಒಮ್ಮೆಲೆ ಭಾವನನ್ನು ಕಾಣಬೇಕೆಂಬ ಆತುರದ ನಡುವೆ ಮನೋಬಲ ಜಗ್ಗಲು ಕಾರಣವಾದ ಸಂಗತಿ ಯಾವುದೆಂದು ಹೊಳೆಯಲು ಅವಳಿಗೆ ತಡವಾಗಲಿಲ್ಲ.

ಭಾವನಿಗೆ ನನ್ನ ಮೇಲಿನ ಆಸಕ್ತಿ ಕಡಿಮೆಯಾಗಿದೆ. ಇಷ್ಟು ವರ್ಷಗಳ ಕಾಲ ಅವನನ್ನು ಒಂದೇ ಸವನೆ ಮೊದಲು ಅಕ್ಕನನ್ನು ವಂಚಿಸಿ, ನಂತರ ಅಕ್ಕನೊಂದಿಗೆ ಸಂಧಾನ ಮಾಡಿಕೊಂಡು, ಲೋಕಲಜ್ಜೆ, ಉಪಹಾಸ-ಅಪವಾದಗಳನ್ನು ಲೆಕ್ಕಿಸದೆನನ್ನೆಡೆಗೆ ಎಳೆಯುತ್ತಿದ್ದ ವಸ್ತು ರೂಪ-ಯವ್ವನ-ಹೆಣ್ತನ. ಅದೀಗ ಕಾಲ ನಿಯಮದಂತೆ ಕ್ಷಯಿಸುತ್ತಿದೆ.

ಚಾ ಮಾಡಿ ತಂದು ನಿಲುವು ಕನ್ನಡಿಯ ಪಕ್ಕದ ಸ್ಟೂಲಿನಲ್ಲಿರಿಸಿದಳು. ಅದರ ಬಿಸಿಯನ್ನು ಊದಿ ಚಪ್ಪರಿಸುತ್ತ ಕುಡಿಯುವಾಗ ಕನ್ನಡಿಯಲ್ಲಿ ಉದ್ದಕ್ಕೂ ಕಾಣುವ ತನ್ನನ್ನು ಸೂಕ್ಷ್ಮವಾಗಿ ವೀಕ್ಷಿಸಿದಳು. ಇಂಥಾ ಸಂದರ್ಭಗಳಲ್ಲಿ ಭಾವ ಹಿಡಿದು ಕೆನ್ನೆಯ ಹತ್ತಿರಕ್ಕೆ ಮುಖ ತಂದು ‘ಸುನೀ’ ಎಂದು ಬಿಸಿಯುಸಿರು ಬಿಟ್ಟಿದ್ದು ನೆನಪಾಯಿತು. ಮದುವೆಯಾದ ಮೂರನೆಯ ತಿಂಗಳಿಂದಲೆ ಅವನಿಗೂ-ತನಗೂ ಉಂಟಾದ ಆಕರ್ಷಣೆಯ ಅರ್ಥ ಅಂದು ಆಗಿರಲೇ ಇಲ್ಲ. ‘ಸುನೀ…. ನಾನು ನಿನ್ನನ್ನೇ ಮದುವೆಯಾಗಬೇಕಿತ್ತು. ನಾವು ಹುಟ್ಟಿದ್ದೆ ಒಬ್ಬರೊಬ್ಬರಿಗಾಗಿ…’ ಎಂದು ಕಿವಿಯಲ್ಲಿ ಮಾದಕವಾಗಿ ಉಸಿರಾಡುತ್ತಿದ್ದಾಗಲೆಲ್ಲ ನಮ್ಮ ಸಂಬಂಧದ ಅರ್ಥ ಹೊಳೆಯ ತೊಡಗಿತ್ತು. ಮದುವೆಯೊಂದು ದೈವೀಕೃತ ಘಟನೆ, ಹೃದಯ ಶರೀರಗಳ ಸಂಬಂಧ ಒಂದು ಆಕರ್ಷಣೆ. ಒಂದು ಜೀವ ಇನ್ನೊಂದು ಜೀವವನ್ನು ಆಕರ್ಷಿಸಿದಾಗ ನಿಜವಾದ ಸಂಬಂಧ ಉಂಟಾಗುತ್ತದೆ. ಹೀಗಲ್ಲವೆ ಭಾವ ಮತ್ತೆ ಮತ್ತೆ ಹೇಳುತ್ತಿದ್ದುದು?

‘ನಿನ್ನ ರೂಪಕ್ಕೆ, ನಿನ್ನ ಚಾಂಚಲ್ಯಕ್ಕೆ ನಿನ್ನ ಗಂಡ ನಿನಗೆ ಸರಿಯಲ್ಲ. ನಿನಗೆ ನನ್ನಂಥ – ಚಂದದ, ಸ್ಫೂರ್ತ ಹೃದಯವಂತ ಪುರುಷಬೇಕು ಅದಕ್ಕೆ ನಾನು….’

ನಾನು ಬಯಸದ ಗಂಡನನ್ನು ಅಕ್ಕನ ಮದುವೆಯಸಲುವಾಗಿ ಒಪ್ಪಿಕೊಂಡು ವರಿಸಿಕೊಂಡೆ. ಭಾವ ಅಂದಿನಿಂದಲೆ ಬಯಸಿದ್ದರೆಂದು ನನಗೆ ಅವರು ತೋರಿಸುತಿದ್ದ ಆಮಿಷ-ಸಲಿಗೆಗಳಿಂದ ತಿಳಿಯುತ್ತಿತ್ತು. ಗಂಡನನ್ನು ಅವರು ತನ್ನ ಅಂಕಿತದಲ್ಲಿಡುತ್ತಿದ್ದ ನನ್ನ ಕಡೆಗೆ ಉಪಾಯವಾಗಿ ಬಂದು ಸೇರಿಕೊಂಡದ್ದು ಎಷ್ಟು ನಿಷ್ಣಾತರಾಗಿ, ತನ್ನ ಕಾರಿನಲ್ಲಿ ಎಲ್ಲಿಗೊ ಮದುವೆ, ಪಾರ್ಟಿ, ಸಮಾರಂಭಗಳಿಗೆ ನನ್ನನ್ನು ತನ್ನೊಂದಿಗೆ ಮರೆಯದೆ ಕರೆದೊಯ್ದು ಮೆರೆಸುತ್ತಿದ್ದಾಗ ಎದೆಯಲ್ಲಿ ಬೆಳೆಯುತ್ತಿದ್ದ ಸಂತಸ ಸಂಭ್ರಮದ ರೋಮಾಂಚನಗಳ ಹಿಂದೆ ಭಾವನ ಕುರಿತು ಕೃತಜ್ಞತೆಯ ಭಾವ ಎಷ್ಟು ಉಳಿಯುತ್ತಿತ್ತು. ಕಡಿಮೆ ಸಂಬಳದ, ಕಡಿಮೆ ಯೋಗ್ಯ ಗಂಡ ನನಗಾಗಲಿಲ್ಲ. ಮೊದಲಿನಿಂದಲು ಅವನು ನನಗೆ ಬೇಕಾದ ಪುರುಷ ಲಕ್ಷಣಗಳನ್ನು-ಭಾವನಂತೆ-ತೋರಿಸಿ ತನ್ನೆಡೆಗೆ ಸೆಳೆದುಕೊಳ್ಳಲು ಸಮರ್ಥವಾಗಲಿಲ್ಲ. ಎರಡು ಮಕ್ಕಳ ತಂದೆಯಾದರೂ ಭಾವನ ವ್ಯಕ್ತಿತ್ವದ ಕೆಳಗೆ ದಬ್ಬಿಹೋದ. ಕೊನೆಗೆ ನನ್ನನ್ನೆ ಕಳಕೊಂಡ.

ನಮ್ಮ ಸಂಬಂಧ ತಿಳಿದುಕೊಂಡು ಅವನು ದಿನದಿನವೂ ಕುಗ್ಗುವುದು ನನಗೆ ಕಾಣುತ್ತಿತ್ತು. ರಾತ್ರಿಯಲ್ಲಿ ಬೇಕೆಂದೆ ತಡವಾಗಿ ಕುಡಿದು ಬಂದು ‘ನಿನ್ನ ನಿಜವಾದ ಗಂಡ ಹೋದನೇ… ನಿಮ್ಮಿಬ್ಬರ ಸಂಬಂಧ ಮೊದಲೇ ಇದ್ದು ನನಗೆ ಮೋಸ ಮಾಡಿದಿರಿ ನೀತಿಗೆಟ್ಟವರು…’ ಎನ್ನುತ್ತ ಜಗಳಕ್ಕೆ ಹೊರಟು ಮಲಗಿ ಬಿಡುವನು, ಭಾವನಿಗೆ ಇದೆಲ್ಲ ತಿಳಿದು ತನ್ನ ವರ್ಚಸ್ಸನ್ನು ಉಪಯೋಗಿಸಿದಾಗ ಜಗಳವಾಗಿ ನಾಲ್ಕು ದಿನ ಮನೆಗೆ ಬಾರದೆ ಆಸ್ಪತ್ರೆ ಸೇರಿದ. ಯಾವದೊ ಕೊರಗು-ನನ್ನದೇ-ಅವನನ್ನು ತಿನ್ನುತ್ತಿತ್ತೆಂದು ನನಗೆ ತಿಳಿಯುತ್ತಿದ್ದರೂ ಅವನು ನನ್ನವನೆಂಬ ಉತ್ಕಂಠ ನನಗೆ ಎಂದೆಂದೂ ಯಾಕಾಗಲಿಲ್ಲವೋ…

ಗಂಡನಿಗೆ ತಾನು ಅನ್ಯಾಯ ಮಾಡಿದ್ದೇನೆಯೆ ಎಂಬ ಪಾಪಪ್ರಜ್ಞೆ ಅವಳಿಗೆ – ಈಗಿನ ದಿನಗಳಲ್ಲಿ ಆಗಹತ್ತಿದೆ. ಆದ್ದರಿಂದ ಇಂದು ಭಾವನನ್ನು ಕಾಣಲೇಬೇಕು. ಒಳಗಿರುವ ಹಲವಾರು ಗೊಂದಲಗಳನ್ನು ಹೊರಗೆಳೆದು ಅವನೆದುರು ಬಿಚ್ಚಬೇಕು. ಬೆಳೆಯುತ್ತಿರುವ ಏಕಾಕಿತನ, ಮಾನಸಿಕ ವ್ಯಥೆಗಳಿಗೆ ಪರಿಹಾರ ಅವನಲ್ಲುಂಟೆ ಕೇಳಬೇಕು. ಗಂಡನನ್ನು ಬಿಡಲು ಕೋರ್ಟಿನಲ್ಲಿ ಒಪ್ಪಿಕೊಂಡಾಗ ಆ ಮೊದಲು-ನಂತರ ಅವರು ಕೊಟ್ಟ ಭರವಸೆಗಳ ನೆನಪು ಹುಟ್ಟಿಸಬೇಕು. ಅವರಾಗಿಯೆ ಬಂದಿದ್ದರೆ ಎಷ್ಟು ಚೆನ್ನಾಗಿತ್ತು. ಮೈಮನಸ್ಸಿನಿಂದ ಮೆಚ್ಚಿಕೊಂಡ ಪುರುಷನ ಸಹವಾಸದ ಅಗತ್ಯ ಎಷ್ಟೆಂದು ಅಳೆಯಲು ಅವಳಿಗೆ ಸಾಧ್ಯವಾಗದಾಯಿತು.

ಹಾಗೆ ಆ ನಿಟ್ಟಿನಲ್ಲಿ ಅವಳೆಂದೂ ಯೋಚಿಸಿರಲೇ ಇಲ್ಲ. ಅಂಥಾ ಅವಕಾಶವನ್ನು ಅವನು ಹತ್ತಿರ ಬರಗೊಡಲಿಲ್ಲವೆಂದೊ ಏನೊ…. ಸಿನೇಮಾ, ಪಾರ್ಟಿ, ಟಿ.ವಿ, ವಿಡಿಯೋ, ಗೆಳೆಯರು, ಸಂಬಂಧಿಕರು, ಸುಖ-ಭೋಗಗಳಲ್ಲಿಯೇ ಕಳೆಯುತ್ತಿದ್ದ ದಿನ, ಸಮಯಗಳಿಂದ ಜೀವನದ ಇನ್ನೊಂದು ಮುಖವನ್ನು ನೋಡುವ ನೆನಪೇ ಆಗಲಿಲ್ಲ. ನೆನಪು ಆಗಿದ್ದರೂ ಯಾವ ದೃಷ್ಟಿಯಿಂದ ನೋಡಬೇಕೆಂಬ ಜ್ಞಾನ ಅವಳಿಗಿರಲಿಲ್ಲ. ಒಂದು ಸಾರಿ ಅಕ್ಕ ಬಂದು ಬೈದು ಹೋದಾಗ, ಗಂಡ ರಾತ್ರಿಯಲ್ಲಿ ಕುಡಿದು ಅವಾಚ್ಯ ಶಬ್ದಗಳಿಂದ ನನ್ನ ಮತ್ತು ಭಾವನ ಸಂಬಂಧವನ್ನು ವರ್ಣಿಸಿ, ನಿಂದಿಸಿ, ಹೊಡೆಯಲು ಬಂದಿದ್ದಾಗ ರಾತ್ರಿ ಎಷ್ಟೋ ಹೊತ್ತು ರೆಪ್ಪೆ ಮುಚ್ಚಿರಲಿಲ್ಲ. ಕಣ್ಣೀರಿನಿಂದ ಒದ್ದೆಯಾದ ಹಾಸಿಗೆಯಲ್ಲಿ ಅವ್ಯಕ್ತ ನೋವಿನಿಂದ ಹೊರಳಾಡುವಾಗ ಉಂಟಾದದ್ದು ಉದ್ವೇಗ ಮಾತ್ರ ವಿವೇಕವಲ್ಲ. ಮರುದಿನ ಭಾವನಿಗೆ ಎಲ್ಲವನ್ನೂ ಹೇಳಿದಾಗ ಅವರು ಬಿಗಿಯಾಗಿ ಅಪ್ಪಿಕೊಂಡು ಹೇಳಿದ ಸಮಾಧಾನದ, ಪುಸಲಾಯಿಸುವ ಮಾತುಗಳು ಹೃದಯಕ್ಕೆ ತಂಪನ್ನು ಇತ್ತಿದ್ದವು. ಆದರೆ ತನ್ನ ತಪ್ಪಿನ, ಅಪರಾಧದ ಅಭಾಸ ಗಂಡನನ್ನು ವಂಚಿಸುವಾಗ, ನೋಯಿಸುವಾಗ ಒಮ್ಮೆಯೂ ಉಂಟಾಗದಿರಲು ಭಾವನು ಹಾಕಿದ ಮೋಡಿ ಕಾರಣವೋ, ತನ್ನ ಭೋಗಾಭಿಲಾಶೆಯ ಮಂಕು ಕಾರಣವೋ ತುಂಬಾ ಈಚಿನವರೆಗೂ ತಿಳಿಯಲಿಲ್ಲ. ಗಂಡನಿಂದ ವಿಚ್ಛೇದನ ಪಡೆದು ಮನೆಗೆ ಬಂದ ರಾತ್ರಿ ಅವನು ಬಂದು-

‘ಈಗ ನಿನಗೆ ರೂಪ-ಯವ್ವನದ ಸೊಕ್ಕು ನೀತಿ ಅನೀತಿಯ ಹೊಳಹಿಲ್ಲ ಆ ಲಫಂಗ ನನಗೆ ಮೋಸಮಾಡಿ ನಿನ್ನನ್ನು ಬಗಲಿಗೆ ಹಾಕಿಕೊಂಡ. ನೀವೆಲ್ಲರೂ ಹೊಲೆಯ ಜಾತಿಯವರು-ಮರ್ಯಾದೆಗೆಟ್ಟವರು ಕೆಟ್ಟು ಹೋಗುತ್ತೀರಿ… ಒಂದು ದಿನ ನೀನು ಒಂಟಿಯಾಗುತ್ತೀ….’ ಎಂದು ಎಲ್ಲರ ಎದುರಿಗೆ ಒದರಿ ಹೋದ ಮಾತುಗಳು ಅಂದಿನ ರಾತ್ರಿ ಮಾತ್ರ ಮನಸ್ಸನ್ನು ಕದಡಿದ್ದವು. ಈ ದಿನಗಳಲ್ಲಿ ತಾನು ಒಬ್ಬಳೆ ಕೂತಿರುವಾಗ, ಹಾಸಿಗೆಯಲ್ಲಿ ಅಸ್ವಸ್ಥಳಾಗಿ ಹೊರಳಾಡುವಾಗ, ಅವುಗಳ ನೆನಪಾಗಿ ಮನಸ್ಸನ್ನು ಕಾಡತೊಡಗಿವೆ.

ಇದಕ್ಕೆ ಭಾವ ಬರುವದನ್ನು ಕಡಿಮೆ ಮಾಡಿರುವ, ಮಗ ಬೆಳೆಯುತ್ತಿದ್ದಂತೆ ಒರಟನೂ, ಮುಂಗೋಪಿಯೂ ಆಗುತ್ತಿರುವ, ಮನೆಯಲ್ಲಿ ಕೆಲವೊಮ್ಮೆ ಏನನ್ನೂ ಮಾಡಲಾಗದೆ ಅನ್ಯಮನಸ್ಕಳಾಗಿ ಜೀವಿಸುವ ಪರಿಸ್ಥಿತಿಯೇ ಕಾರಣವಾಗಿರಬಹುದೆಂದು ಊಹಿಸಿದಂತೆ ಭಯ ಒಡಲನ್ನಾವರಿಸಿ ನಡುಗಿಸುತ್ತದೆ. ಗಂಡನ ಮನೆಯಂತೂ ತನಗೆ ಸಿಕ್ಕಿದೆ. ಅವನಿಂದಲೆ ಬರುವ ಖರ್ಚು ಹಣ ಸಾಕಾಗುತ್ತಾ ಇಲ್ಲ. ಭಾವ ನಿಭಾಯಿಸುತ್ತಿದ್ದಾರೆ. ಆದರೆ ಇಲ್ಲಿಯ ತನಕ ಅವರಿಗೆ ಸ್ವಂತದ ಮನೆ-ಸಂಸಾರ-ಆಡಂಬರದ ಬದುಕು. ಅಂದು ಮಾತ್ರ-

‘ಸುನೀ….ನೀನೇನೂ ಹೆದರಬೇಡ. ನಾನಿರುವ ತನಕ ನಿನ್ನ ಸುಖ ನನ್ನ ಸುಖ. ಹೆದರಿಕೆ ಬದುಕುವ ಮಾರ್ಗವನ್ನು ದುರ್ಗಮ ಮಾಡುತ್ತದೆ. ನನ್ನ ದೃಷ್ಟಿಯಲ್ಲಿ ಹೆಣ್ಣಿಗೂ ಅವಳಿಗೆ ಬೇಕಾದಂತೆ ಮೆಚ್ಚಿನ ಗಂಡಿನೊಂದಿಗೆ ಬಾಳುವ ಹಕ್ಕಿದೆ. ನಮ್ಮ ಸಮಾಜ ಮಾತ್ರ ಒಂದು ತೊಡಕು. ಅದು ಸರಿಯಾಗಿ ಯಾರನ್ನೂ ಬದುಕಲು ಬಿಡುವದಿಲ್ಲ. ನಾವು ಅದನ್ನು ಗಣಿಸಬಾರದು. ಅವನು ನಿನ್ನನ್ನು ಬಿಟ್ಟಿದ್ದಲ್ಲ. ನಾವೆ-ನೀನೆ-ಅವನನ್ನು ಬಿಟ್ಟಿದ್ದು, ಅವನು ಅಯೋಗ್ಯ, ನಿನ್ನಂಥಾ ಹೆಣ್ಣಿಗೆ ಸುಖಕೊಡಲು ಅವನು ಸಮರ್ಥನಾಗಿರಲಿಲ್ಲ’ ಎಂದು ಉದ್ದ ಭಾಷಣ ಮಾಡಿದ್ದಾಗ ಮನಸ್ಸಿಗೆ ನೆಮ್ಮದಿಯಾಗಿತ್ತು. ಭಾವನಿಗೆ ನಾನು ಬೇಕು. ಅವನು ಎಂದೆಂದೂ ನನ್ನವನೆ ಎಂದು ಹೃದಯ ಹಿಗ್ಗಿತ್ತು.

ಯೋಚನೆಯೇ ಮುಗಿಯಲಿಲ್ಲ. ಅದು ದಿಶೆ ಬದಲಿಸಿ ಕ್ರಮ ತಪ್ಪಿ ಓಡುತ್ತದೆ. ಮಾಡ ಹೊರಟ ಶೃಂಗಾರದಲ್ಲಿ ತುಟಿ ಮತ್ತೆ ಮತ್ತೆ ಕಾಣಿಸಿ ಕೊಳ್ಳುತ್ತದೆ. ಮಗಳು ಶಾಲೆಯಿಂದ ಬರುವ ಹೊತ್ತಾಗಿದೆ. ಮಗನೂ ಬರಬಹುದು. ಅವನು ಮೂಕಣ್ಣ, ಮಾತನ್ನೆ ಬಿಟ್ಟ ಹಾಗೆ. ‘ಮಮಿ’ ಎನ್ನದೆ ಕಾಲವೇ ಆಯಿತಲ್ಲ.

ಭಾವ ಇನ್ನು ಮುಂದೆ ಇಲ್ಲಿಗೆ ಬರುವದನ್ನೆ ಕಡಿಮೆ ಮಾಡುತ್ತಾರೆ. ಕೊನೆಗೆ ನಿಲ್ಲಿಸಿಬಿಡಲೂಬಹುದು. ಅವರಿಗೆ ಸ್ವಂತ ಕುಟುಂಬದ ಮಕ್ಕಳ ಸಮೃದ್ಧಿಯ ಚಿಂತೆ. ಅದಕ್ಕಾಗಿ ವ್ಯಾಪಾರವನ್ನು ಮತ್ತಷ್ಟು ಬೆಳೆಸಿ ಸುಖದ ಸಾಮಾನುಗಳನ್ನೆಲ್ಲ ಶೇಖರಿಸುವುದರಲ್ಲಿ ಬಿಡುವು ಸಿಗಲಾರದು. ಅಲ್ಲದೆ ನನ್ನಿಂದ ಎಲ್ಲ ಸುಖವನ್ನೂ, ಯವ್ವನದ ಸುಂದರ ದಿನಗಳನ್ನೂ ಈವರೆಗೂ ಅನುಭವಿಸಿಯಾದ ಮೇಲೆ ಇನ್ನೇನಿದೆಯೆಂದು ಹೀಗೊಂದು ವಿಚಾರ ಬಂದಾಗ ಅವಳಿಗೆ ಭಯವಾಯಿತು. ಅವರಿಗೆ ನನ್ನ ಮೇಲೆ ಸಾತ್ವಿಕ ಪ್ರೇಮವಿಲ್ಲ. ತನ್ನ ಸ್ವಾರ್ಥಕ್ಕಾಗಿ, ಕಾಮನೆಗಾಗಿ ನನ್ನನ್ನು ಉಪಯೋಗಿಸಿ, ಇಳಿ ವಯಸ್ಸಿನ ಭವಣೆಗಳಿಗೆ ಬಿಡುವ ವ್ಯವಹಾರವನ್ನೆ ಅವರು ನಡೆಸಿದ್ದು.

ಒಮ್ಮೆಲೆ ಅವಳಿಗೆ ತನ್ನ ನಶೀಬು ಯಾವ ದಿಕ್ಕನ್ನು ಹಿಡಿಯಲಿದೆ ಎಂಬ ಚಿಂತೆಯಾಯಿತು. ಮಕ್ಕಳು, ತಾನು ಭಾವನ ಹಂಗಿಗೆ ಸ್ಪಷ್ಟ ರೀತಿಯಲ್ಲಿ ಬೀಳಲಿರುವ ದಿನಗಳು ದೂರವಿಲ್ಲ. ಮಗನ ಭವಿಷ್ಯ, ಮಗಳ ಮದುವೆ- ತಾನು ಬದುಕಿರುವ ಜೀವನದ ಈ ಹಿನ್ನೆಲೆಯಲ್ಲಿ-ಹೇಗಿರಬಹುದೆಂದು ಊಹಿಸಲು ಅವಳಿಂದ ಸಾಧ್ಯವಾಗದೆ ಅಳು ಬಂದಿತು. ತಾನು ನಿಜವಾಗಿ ಒಂಟಿಯಾಗುತ್ತಿದ್ದೇನೆ. ತನ್ನ ಅವಿವೇಕದ ಪರಮಾವಧಿ ಭಾವನೊಟ್ಟಿಗೆ ಸೇರಿಕೊಂಡು ಗಂಡನನ್ನು ಬಿಟ್ಟ ಸಂದರ್ಭ. ಅವನು ಮೂರ್ಖನಾಗಿದ್ದರೂ, ಷಂಡನಾಗಿದ್ದರೂ ಅಗ್ನಿಸಾಕ್ಷಿಯ ಗಂಡನಾಗಿದ್ದ. ಈ ಎರಡು ಮಕ್ಕಳ ತಂದೆಯಾಗಿದ್ದ. ಈಗ ಎರಡನೆಯ ಮದುವೆಯಾಗಿ ಸುಖವಾಗಿದ್ದಾನೆ. ಮೊನ್ನೆ ದೀನನಾಥ ಸಭಾಮಂದಿರದಲ್ಲಿ ಅವನನ್ನು ಎಷ್ಟೋ ವರ್ಷಗಳ ನಂತರ ಕಂಡಾಗ, ಯಾರೊಡನೆಯೋ ಮಾತಾಡುತ್ತಿದ್ದ ಗಂಡ-ಹೆಂಡತಿ ಎಷ್ಟು ಚೆನ್ನಾಗಿ ಕಾಣುತ್ತಿದ್ದರು. ಸ್ವಲ್ಪ ತಡೆದು ನೋಡುವ ಆಸೆಯಾಗಿತ್ತಲ್ಲ. ಲಕ್ಷಣವಾದ ಹೆಣ್ಣವಳು. ನನಗಿಂತಲೂ ತುಸು ಚಿಕ್ಕ ಪ್ರಾಯ. ಮುಖಭಾವ ಅವಳಿಗೆ ಒಮ್ಮೆಲೆ ಹಿಡಿಸಿತ್ತು. ಗಂಡನ ಬಗ್ಗೆ ಅಸೂಯೆಯಾಗಿತ್ತು. ಆ ಮೋಹಕತೆಯೆ ಬಹುಶಃ ನಂದೂನನ್ನು ಅಲ್ಲಿಗೆ ಒಯ್ಯುತ್ತಿದೆ. ಅವನ ಒಲವು ಅವರೆಡೆಗೇ ಹೆಚ್ಚಿರುವುದರ ಲಕ್ಷ್ಯ ಅವಳಿಗೆ ಬಂದಿದೆ. ಅದು ಕಾಳಜಿಯಾಗಿ ಮನಸ್ಸಿನ ಆತಂಕವನ್ನು ಹೆಚ್ಚಿರುವುದರ ಲಕ್ಷ್ಯ ಇವಳಿಗೆ ಬಂದಿದೆ. ತಮ್ಮ ನಡುವೆ ಒಂದು ಕಂದರ ನಿರ್ಮಾಣವಾಗಿ ಬೆಳೆಯುತ್ತಿರುವ ಅರಿವು ಅವಳಿಗಾಗಹತ್ತಿದೆ. ಸೋನೂ (ಮಗಳು) ಹಾಗೆಯೆ. ನಿನ್ನೆಯ ಆಕೆ ‘ಶಾಲೆಗೆ ಡ್ಯಾಡಿ ಬಂದು ಮಾತಾಡಿಸಿದರು. ಅವರ ಮನೆಗೆ ಕರೆದಿದ್ದಾರೆ. ಎಷ್ಟು ಸ್ವೀಟ್ ಡ್ಯಾಡಿ… ಅಲ್ಲ ಮಮಿ….? ನಾಳೆ ನಾನಲ್ಲಿಗೆ ಹೋಗುತ್ತೇನೆ’ ಎಂದಿದ್ದಾಗ ಹಿಂಸೆಯಾಗಿತ್ತು. ತಂದೆಯ ಕೊರತೆ…. ಮಕ್ಕಳ ಹಂಬಲ ಮಿತಿಮೀರಿದ ಅಳುಕು, ಕಾಲಬುಡದ ನೆಲ ಸರಕ್ಕನೆ ಸರಿದ ಆಭಾಸದಲ್ಲಿ ಕುಸಿಯುವಂತಾಗಿತ್ತು.

ಅಸಹನೆಯಿಂದ ಭಾವನ ಕಾರಖಾನೆಗೆ ಫೋನ್ ಹಚ್ಚಿ ‘ಭಾವ ನಾನು ಸುನೀತಾ…’ ಎಂದಳು.
‘ಏನು ಸುನೀ… ಏನು ಸಮಾಚಾರ…’

‘ನೀವಿಲ್ಲಿ ಬಾರದೆ ಒಂದು ತಿಂಗಳೇ ಹೆಚ್ಚಾಯಿತು.’

‘ಬರುತ್ತೇನೆ… ತುಂಬಾ ಬಿಜಿ, ನಾಳೆ ಮತ್ತೆ ಹೈದರಾಬಾದಿಗೆ ಹೋಗುತ್ತೇನೆ.’

‘ನಿಮ್ಮಲ್ಲಿ ತುಂಬಾ ಮಾತಾಡುವುದಿದೆ.’

‘ಬೇಗ…ಹೇಳು, ನಿನ್ನ ತುಂಬಾ ಮಾತು ಮುಗಿಯುವುದೇ ಇಲ್ಲ’

‘ಮುಗಿಸಬೇಕೆ… ಇಟ್ಟು ಬಿಡುತ್ತೇನೆ.’

‘ಆಯ್ತಲ್ಲ… ಸಿಟ್ಟು ಬಂದೇಬಿಟ್ಟಿತ್ತು. ನಿನಗೆ ಒಂದೂ ಅರ್ಥ ವಾಗೋದಿಲ್ಲ.’

‘ಎಲ್ಲ ಅರ್ಥವಾಗಹತ್ತಿದೆ. ಇಂದು ನೀವು ಇಲ್ಲಿ ಬನ್ನಿ, ಅಕ್ಕನಿಗೆ ಹೆದರ ಬೇಡಿ… ನಾನು ಫೋನ್ ಮಾಡಿ ಹೇಳುತ್ತೇನೆ’

‘ಅಚ್ಛಾ… ಬರುತ್ತೇನೆ.’

‘ಅಗತ್ಯ ಬನ್ನಿ…’ ಎಂದು ಹೇಳಿ ಫೋನಿಟ್ಟಳು. ಅಕ್ಕನ ಮನೆಗಿನ್ನು ಬೇಡ – ಎಂದು ಸಿಲ್ಕ ಸೀರೆಯನ್ನುಟ್ಟು ಸ್ವಲ್ಪ ಎದುರಿನ ಪಾರ್ಕಿಗೆ ಹೋಗಿ ಬರಲೆಂದು ಮನೆ ಮುಚ್ಚಿ ಹೊರ ಬಂದಳು. ಸೀಡಿ ಇಳಿಯುವಾಗ, ಭಾವನಿಗೆ ಏನೆಲ್ಲ ಹೇಳುವುದು. ನನ್ನ ಮನಸ್ಸಿನ ತುಯ್ತ ಅವರಿಗೆ ತಿಳಿಯದು. ನಾನು ಎದುರಿಸುತ್ತಿರುವ ಸಹಜ ಇಕ್ಕಟ್ಟುಗಳ ಕಲ್ಪನೆ ಅವರಿಗಿರದು. ಈ ಕೆಲವು ವರ್ಷಗಳಲ್ಲಿ ಮನೆ ಬಿಟ್ಟು ಹೋಗುವ, ಗುರುತಿನವರನ್ನು ಎದುರಿಸುವ ಸ್ಥಿತಿಯನ್ನೆ ಕಳಕೊಂಡು ಯಾವ ರೀತಿಯಲ್ಲಿ ಉಸಿರುಗಟ್ಟಿದೆ ಎಂಬುದನ್ನು ಅವರಿಗೆ ಬಿಡಿಸಿ ಹೇಳುವುದು ಹೇಗೆ ಎಂಬ ಸಂದೇಹಗಳು ಬರತೊಡಗಿದವು. ಮನಸ್ಸಿನ ನಿರ್ಧಾರ ಸಡಿಲಗೊಳ್ಳುವುದು. ಕಾಣಿಸಿದಾಗ…ಮನಸ್ಸನ್ನು ಬಿಗಿಹಿಡಿದು ಎಲ್ಲವನ್ನು ಸದ್ಯಕ್ಕೆ ಮರೆಯುವ ಪ್ರಯತ್ನ ಮಾಡಿದಳು.

ಅವಳು ಮರಳಿ ಬಂದಾಗ ಮಕ್ಕಳಿಬ್ಬರೂ ಬಂದಿದ್ದರು. ತುಂಬ ಅಂತರ್ಮುಖಿಯಾಗಿ ಬೆಳೆದ ಈ ಮಕ್ಕಳು ಮಾತಾಡಿಕೊಳ್ಳುವುದು ಅಗತ್ಯಬಿದ್ದಾಗ ಮಾತ್ರ. ಪರಸ್ಪರ ಜಗಳಾಡಿಕೊಂಡದ್ದೂ ಅಪರೂಪವೆ. ಇಬ್ಬರೂ ಒಂದೊಂದು ಕಡೆಯಲ್ಲಿ ಕೈಯಲ್ಲಿ ಏನೋ ಹಿಡಿದುಕೊಂಡು ಕೂತಿದ್ದರು. ಇವರ ಈ ಒಳಮನಸ್ಸಿನ ಸ್ವಭಾವ ಒಮ್ಮೊಮ್ಮೆ ಅವಳನ್ನು ದಿಗಿಲುಗೊಳಿಸುತ್ತದೆ. ಅದಕ್ಕೆ ತಾನೂ ಹೆಚ್ಚಾಗಿ ಅವರನ್ನು ಅವರ ಮಟ್ಟಿಗೆ ಬಿಟ್ಟು – ಟಿ. ವಿ. ಯೊ, ಇನ್ನಿತರದಲ್ಲಿಯೊ ವ್ಯಸ್ತಳಾಗಿರುವಳು. ಎಳೆಯವರಿರುವಾಗ ‘ದೊಡ್ಡಪ್ಪ’ನಲ್ಲಿದ್ದ ಸಲಿಗೆ ದೊಡ್ಡವರಾದಾಗ ಮಾಯವಾದ ಪರಿಸ್ಥಿತಿಯೆ ತಿಳಿಯದಾಗಿತ್ತು.

ಕೆಳಗೆ ಕಾರಿನ ಸದ್ದಾಗಿ ಬಾಲ್ಕನಿಗೆ ಬಂದು ಭಾವ ಕಾರಿನಿಂದ ಇಳಿದು ಮೇಲೆ ನೋಡಿದ್ದನ್ನು ನೋಡಿ ಹಾಲಿಗೆ ಬಂದಳು. ಬಾಗಿಲು ತೆರೆದಿಟ್ಟಳು. ಮಕ್ಕಳಿಬ್ಬರೂ ಅವಳ ಮುಖ ನೋಡಿದಾಗ ‘ದೊಡ್ಡಪ್ಪ’ ಎಂದೂ ಅವರ ಮುಖಭಾವ ನೋಡತೊಡಗಿದಳು. ಆಗಲೆ ಭಾವ ಒಳಹೊಕ್ಕು ‘ಹಲೋ…’ ಎಂದು ಎಲ್ಲರಿಗೂ ಹೇಳಿ ಬೆಡ್‌ರೂಮಿನ ಕಡೆಗೆ ನಡೆದರು. ಅವರು ಹೋಗುವುದನ್ನೇ ನೋಡುತ್ತಿದ್ದ ಅವಳಿಗೆ… ಸೋತ ದೇಹ, ಬಿಳಿಹರಡಿದ ಕೂದಲು, ಮುಖದ ಮೀಸೆಯಲ್ಲೂ ಬಿಳಿ, ವಲಯದಲ್ಲಿ ಸುಕ್ಕುಗಳು ಕಾಣಿಸಿ ಭಾವ ಒಮ್ಮೆಲೆ ಮುದುಕನಾಗಿರುವಂತೆ ಭಾಸವಾಗಿ ವಿಚಿತ್ರವೆನಿಸಿತು. ಸ್ವಲ್ಪ ಮರುಕವೂ ಉಂಟಾಯಿತು. ಅಡಿಗೆ ಮನೆಗೆ ಹೋಗಿ ಆಗಲೆ ಬಿಸಿಮಾಡಿದ ಹಾಲಿಗೆ ಕಂಪ್ಲಾನ್ ಬೆರಸಿ ಗ್ಲಾಸು ತುಂಬ ಸುರಿದು ನೀರಿನ ಇನ್ನೊಂದು ಗ್ಲಾಸಿನೊಂದಿಗೆ ಬೆಡ್‌ರೂಮ್ ಸೇರಿದಳು. ಅವನು ಒರಗಿರುವ ಮಂಚದ ಪಕ್ಕದ ಟೀಪಾಯಿಯಲ್ಲಿ ಗ್ಲಾಸುಗಳನ್ನಿರಿಸಿ ‘ತಗೊಳ್ಳಿ’ ಎಂದಳು. ಅವನ ಹತ್ತಿರ ಬಂದು ಕುಳಿತು ಮುಖ ಓದತೊಡಗಿದಳು. ತುಟಿಯ ಕೊನೆಯಲ್ಲಿ ಮುಗುಳು ನಗೆ ಸುಳಿಯಿತು.

‘ಏಕೆ ನಗುತ್ತಿ ಸುನೀ… ಹತ್ತಿರ ಬಾ…’
‘ನಿಮ್ಮ ಮುಖ ನಿಮ್ಮ ಪ್ರಾಯ ಹೇಳ ಹತ್ತಿದೆ. ಪಾಪ…ಎರಡು ಹೆಂಗಸರ ಸಂಸಾರ’

‘ಈಚೆಗೆ ತುಂಬಾ ಕೆಲಸ’

‘ಕೆಲಸ ಮೊದಲೂ ನಿಮಗಿರುತ್ತಿತ್ತು. ಈಗ ಜವಾಬ್ದಾರಿಯ ಹೊರೆ… ಅದರ ಭಾರ, ಅದಕ್ಕೆ ಹೀಗೆ ಕುಗ್ಗಿದ್ದೀರಿ ಅಲ್ಲ… ನನಗೆ ತಿಳಿಯುತ್ತೆ’ ಅವಳು ತುಂಟವಾಗಿ ನಕ್ಕಳು.

‘ಇಲ್ಲ…. ಚಿಂತೆ ನನಗಿಲ್ಲ… ನಾನೆಂದೂ ಚಿಂತೆ ಮಾಡಿದವನೂ ಅಲ್ಲ. ತುಂಬಾ ಕಷ್ಟದ ದಿನಗಳನ್ನು ಕಂಡಿದ್ದೇನೆ. ದುಡಿಮೆ… ಈ ಸಮಾಜದಲ್ಲಿ ಚೈನಿನಲ್ಲಿರಬೇಕಾದರೆ ಸಾಕಷ್ಟು ಸಂಪತ್ತು ಬೇಕು. ಇಲ್ಲದೆ ಕಿಮ್ಮತ್ತಿಲ್ಲ…. ಹಾಂ… ಅದಿರಲಿ, ನೀನು ಏನೋ ಗಂಭೀರ ವಿಷಯ ಹೇಳಬೇಕೆಂದಿಯಲ್ಲ.’

‘ಹೌದು ಭಾವ, ನಿಮಗೆ ಹೇಳದೆ ನಾನು ಇನ್ಯಾರಿಗೆ ಹೇಳಲಿ, ಎಲ್ಲರನ್ನೂ ಧಿಕ್ಕರಿಸಿ ನಿಮ್ಮನ್ನೆ ನಂಬಿಕೂತವಳು ನಾನು’ ಭಾವ ಅವಳ ಮುಖ ನೋಡಿದ. ಮಾತಿನಲ್ಲಿ ತುಂಬಿದ ಭಾವವನ್ನು ತಿಳಿಕೊಳ್ಳವ ಮೊದಲು ‘ಇಂದು ಒಳ್ಳೆ ಸೆಂಟಿಮೆಂಟ್ಸನ್ನ ತೋರಿಸುತ್ತಿರುವೆಯಲ್ಲ’ ಎಂದು ಅವಳ ಮಾತನ್ನು ಕಡಿದ.

‘ಹಾಗೇನೂ ಇಲ್ಲ. ಇಷ್ಟು ವರ್ಷ ಮತಿಹೀನಳಂತೆ ಜೀವನ ಮಾಡಿ ಇಂದು ಅದೇನೆಂದು ಕಾಣತೊಡಗಿದೆ.’

‘ಅಂದರೆ ಏನು ಸಮಸ್ಯೆ… ನಿನಗೇನಾದರೂ ಕಡಿಮೆಯಾಗಿದೆಯೆ…’

‘ಭಾವ’ ಇಂದು ನಿಮಗೆ ನನ್ನ ಮನಸ್ಸನ್ನು ಬಿಚ್ಚಿ ಹೇಳುತ್ತೇನೆ. ಆ ಸುಖಭೋಗದ ಸ್ಟುಪಿಡ್ ಅಪೇಕ್ಷ ನನಗಿಂದು ಇಲ್ಲ. ನೀವು ಎಲ್ಲವನ್ನು ಮುಗಿಸಿದ್ದೀರಿ. ನನಗಿಂದು ಒಬ್ಬ ಜೋತೆಗಾರನ ಅಗತ್ಯವಿದೆ. ನನ್ನವನೆಂದು ನನ್ನ ಸಣ್ಣ-ಪುಟ್ಟ ವಿಷಯಗಳಿಗೆ ಕಾಳಜಿ ಮಾಡುವ ಒಬ್ಬ ಸಹಜೀವಿ. ನಾನು ಪ್ರತಿದಿನ ಒಂಟಿಯಾಗುತ್ತಿದ್ದೇನೆ.’

‘ಹೀಗೇಕೆ ಹೇಳುತ್ತಿ ಸುನೀ, ನಿನಗೇನಾಗಿದೆ, ನಾನಿಲ್ಲವೆ….’

‘ಭಾವ, ನೀವು ನನ್ನ ಪತಿಯಲ್ಲ. ನನಗೆ ಸುಖಕೊಟ್ಟ ಪುರುಷ ಮಾತ್ರ. ಇಂದು ಆ ಪರಿಸ್ಥಿತಿಯೇ ಇಲ್ಲ. ನಮ್ಮ ಸಂಬಂಧವೆ ನನ್ನಿಂದ ನನ್ನ ಮಕ್ಕಳನ್ನು ದೂರ ಮಾಡುತ್ತಿದೆ. ಆಗ ಡೈವೋರ್ಸಿಗೆ ನಿಮಗಾಗಿ ರುಜು ಹಾಕಿದೆ. ಕೋರ್ಟಿನಲ್ಲಿ ಹೇಳಿಕೊಟ್ಟಂತೆ ಹೇಳಿದೆ. ಭವಿಷ್ಯ ಹೀಗಿದೆ ಎಂದು ಆಗ ಹೊಳೆಯಲೇ ಇಲ್ಲ. ಸುಖದ ಆಶೆ ನೋಡಿಯಲ್ಲ ಹೇಗೆ ಬುದ್ದಿಗೆ ಮಂಕು ಹಿಡಿಸುತ್ತದೆ. ಮೊನ್ನೆ ಒಂದು ಸಮಾರಂಭದಲ್ಲಿ ಅವನನ್ನು ಹೆಂಡತಿಯೊಂದಿಗೆ ನೋಡಿದೆ. ಅವರ ಸುಖ ಕಂಡು ಅಸೂಯೆಯಾಯಿತು. ಈಗಿನ ಸುಖದ ಸ್ವರೂಪವೇ ಬೇರೆ ಎಂಬಂತಾಯಿತು.’

‘ನಿನ್ನ ಬುದ್ದಿ ಕೆಟ್ಟಿದೆ… ಮತ್ತೆ ಅವನ ಆಶೆಯಾಯಿತೆ.’

‘ಇಲ್ಲ, ಬದಲು ಮನೆಗೆ ಬಂದು ಕೂಗಿದೆ. ಸ್ವಲ್ಪವೇ ಕಾಲದಲ್ಲಿ ಎಲ್ಲವೂ ಯಥಾವತ್ ಕಾಣುತ್ತದಲ್ಲ ಎಂದು. ನನ್ನ ಸ್ಥಿತಿಯ ಅರಿವಾಯಿತು.’

‘ನೀವು ಹೆಂಗಸರು ಹೀಗೆಯೆ ತಲೆಹರಟೆ ನೀನು ಇಷ್ಟೆಲ್ಲ ಯೋಚಿಸುವುದೇಕೆ.’

‘ನಿಮ್ಮ ಮನೆಯಲ್ಲಿ ನೀವು-ಹೆಂಡತಿ-ಮಕ್ಕಳೊಂದಿಗೆ ಬೆಳೆದ ಮಕ್ಕಳ ಕಣ್ಣು ತಪ್ಪಿಸಿ ಅಪರೂಪಕ್ಕೊಮ್ಮೆ ಬಂದುಹೋದರೆ ಏನು ಮಾಡಿದ ಹಾಗಾಯಿತು.’

‘ಮತ್ತೆ ನಾನೇನು ಮಾಡಬೇಕು. ಇಷ್ಟೊಂದು ತೊಡಕು ಬರುತ್ತದೆಂದು ವಿಚಾರ ಮಾಡುವ ಗೋಜಿಗೇ ಹೋಗಿರಲಿಲ್ಲ. ನೋಡು ಸುನೀ…..ನೀನು ವ್ಯರ್ಥವಾಗಿ ಏನನ್ನಾದರೂ ತಲೆಗೆ ಹಾಕಿಕೊಂಡು ತಲೆ ಕೆಡಿಸಿಕೊಳ್ಳುವುದು ಬೇಡ. ನಿಶ್ಚಿಂತೆಯಾಗಿರು’ ಎಂದು ಅವಳನ್ನು ಮೈಗೆಳೆದುಕೊಂಡ.

‘ಭಾವ, ನೀವು ಎಲ್ಲವನ್ನೂ ಬಿಟ್ಟು ಇಲ್ಲಿ ನನ್ನ ಜೊತೆ ಇರುತ್ತೀರಾ. ನನ್ನ ಮಕ್ಕಳಿಗೆ ತಂದೆಯಿಲ್ಲ. ಅದನ್ನು ಕಳಕೊಂಡ ನೋವು ಅವರನ್ನು ಮೂಕ ಮಾಡಿದೆ. ನನಗೆ ತಿಳಿಯದಂತೆ ತಂದೆಯನ್ನು ನೋಡಿ ಬರುತ್ತಾರೆ. ಬಂದು ಆ ಹೊಸಬಳನ್ನು ಹೊಗಳುತ್ತಾರೆ.’

‘ಸ್ಟುಪಿಡ್, ಯಾಕೆ ಬಿಡುತ್ತಿ ಅದಕ್ಕೆಲ್ಲ. ನಾನೇ ಹೇಳುತ್ತೇನೆ ನಡಿ…’ ಎಂದು ಹಿಡಿದುಕೊಂಡವಳನ್ನು ಬಿಟ್ಟು ಅಸಹನೆಯಿಂದ ಎದ್ದುನಿಂತ. ಅವನನ್ನು ಹಾಗೆಯೆ ಕುಳ್ಳಿರಿಸಿ ‘ನಾನು ಹೇಳಿದ್ದು ನಿಮ್ಮಿಂದ ಸಾಧ್ಯವಿಲ್ಲ. ಮಡದಿ ಮಕ್ಕಳನ್ನು ಬಿಟ್ಟು ನೀವು ನನ್ನ ಜೊತೆ ಇರಲಾರಿರಿ. ಅದು ನನಗೆ ಗೊತ್ತು. ನಾನದನ್ನು ಅಪೇಕ್ಷಿಸುವುದೂ ಇಲ್ಲ. ಆದರೂ ಈ ಜಂಜಡದ ಪರಿಹಾರಕ್ಕೊಂದು ದಾರಿಯಿದೆ….’ ಎಂದು ಭಾವನನ್ನು ಅಪ್ಪಿ ಹಿಡಿದಳು. ಅಳು ಒತ್ತರಿಸಿ ಬಂದಿತು, ಅಸಹಾಯ ಭಾವದಿಂದ ಬಿಕ್ಕಳಿಸಿದಳು. ಅವನ ಎದೆಯ ಮೇಲೆ ತಲೆಯಿಟ್ಟು ಅಳುವನ್ನು ಒತ್ತಿಹಿಡಿದಳು.

‘ಏನಿದೂ ಸುನೀ…. ಇಷ್ಟೇಕೆ ಗಾಬರಿ… ಎಲ್ಲ ಸರಿಯಾಗುತ್ತೆ.’

‘ಇಲ್ಲ, ಏನೂ ಸರಿಯಾಗಲ್ಲ. ನನ್ನ ಬದುಕಿಗೆ ನಾನೀಗ ಯೋಚಿಸಿದ ದಾರಿಯೆ ಸರಿಯಾದ ದಾರಿ. ಇದರಲ್ಲಿ ತೊಡಕಿಲ್ಲ. ಅದಕ್ಕೆಯೆ… ಅದಕ್ಕೆಯೆ ಇನ್ನು ಮುಂದೆ ನೀವಿಲ್ಲಿ ಬರಬೇಡಿ. ನಮ್ಮ ಅನೈತಿಕ ಸಂಬಂಧ ಮಕ್ಕಳ ನೈತಿಕ ಪತನಕ್ಕೆ ಕಾರಣವಾಗಬಾರದಲ್ಲ… ನಮ್ಮನ್ನು ನಮ್ಮ ಕರ್ಮಧರ್ಮಕ್ಕೆ ಬಿಟ್ಟು ಬಿಡಿ’ ಎಂದವಳೆ ಅವನನ್ನು ಬಿಟ್ಟೆದ್ದಳು. ಭಾವ ಆಘಾತವಾದಂತೆ ಎದ್ದು ನಿಂತು ಒಮ್ಮೆ ಅವಳನ್ನು ನಖಶಿಖಾಂತ ಅವಲೋಕಿಸಿ ಹೊರಗೆ ಹೆಜ್ಜೆ ಇಟ್ಟ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೋವಿನ ಬರೆ
Next post ಪುಷ್ಪ… ಪುಷ್ಪ…

ಸಣ್ಣ ಕತೆ

 • ಉರಿವ ಮಹಡಿಯ ಒಳಗೆ

  ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

 • ನಾಗನ ವರಿಸಿದ ಬಿಂಬಾಲಿ…

  ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

 • ಆ ರಾಮ!

  ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

 • ಅಜ್ಜಿ-ಮೊಮ್ಮಗ

  ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

 • ಜುಡಾಸ್

  "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

cheap jordans|wholesale air max|wholesale jordans|wholesale jewelry|wholesale jerseys