ಭಾಷೆಯೂ ಲೋಕಸೌಂದರ್ಯವೂ

ಭಾಷೆಯೂ ಲೋಕಸೌಂದರ್ಯವೂ

ಲೋಕದಲ್ಲಿ ಒಟ್ಟಾರೆ ಎಷ್ಟು ಭಾಷೆಗಳಿವೆ ಎನ್ನುವುದನ್ನು ಯಾರೂ ನಿಖರವಾಗಿ ಲೆಕ್ಕ ಹಾಕಿಲ್ಲ, ಹಾಗೆ ಲೆಕ್ಕ ಹಾಕುವುದು ಸಾಧ್ಯವೂ ಇಲ್ಲ. ಜನ ಮಾತಾಡುವಂಥ ಸುಮಾರು ಎರಡು ಸಾವಿರ ಭಾಷೆಗಳಿವೆ ಎಂದು ಒಂದು ಅಂದಾಜು. ಇವುಗಳಲ್ಲಿ ಬರಹಕ್ಕೆ ಉಪಯೋಗವಾಗುವಂಥವು ಒಂದು ನೂರು ಚಿಲ್ಲರೆ ಇರಬಹುದು. ಉಳಿದವೆಲ್ಲ ಕೇವಲ ಮೌಖಿಕವಾಗಿ ಮಾತ್ರ ಉಪಯೋಗಕ್ಕೆ ಬರುವಂಥವು. ಭಾಷೆಯೆನ್ನುವುದು ಒಂದು ತೋರಮಟ್ಟಿನ ಕಲ್ಪನೆ; ನಾವು ಒಂದೇ ಎಂದು ಯಾವ ಕಾರಣಕ್ಕೋ ತಿಳಿದುಕೊಂಡಿರುವ ಭಾಷೆಯೊಳಗೆ ಹಲವು ಉಪಭಾಷೆಗಳು, ಪ್ರಬೇಧಗಳು ಇದ್ದು ಅವು ಒಂದಕ್ಕೊಂದು ಅರ್ಥವಾಗದೆ ಇರಬಹುದು. ಪರಸ್ಪರ ಅರ್ಥವಾಗದ ಭಾಷೆಗಳನ್ನು ಒಂದೇ ಎಂದು ತಿಳಿಯುವುದು ಸಮಸ್ಯಾತ್ಮಕವಾದ ಸಂಗತಿ. ಚಾರಿತ್ರಿಕ, ರಾಜಕೀಯ, ಭಾವನಾತ್ಮಕ ಸಂಬಂಧಗಳು ಇಲ್ಲಿ ಕೆಲಸ ಮಾಡುತ್ತವೆ. ಉದಾಹರಣೆಗೆ, ಚೈನೀಸ್ ಎನ್ನುವುದು ಒಂದೇ ಭಾಷೆಯೇ, ಬೇರೆ ಬೇರೆ ಭಾಷೆಗಳೇ? ವಿಸ್ತಾರವಾದ ಚೀನಾ ದೇಶದಲ್ಲಿ ಒಂದೊಂದು ಕಡೆ ಒಂದೊಂದು ರೀತಿಯ ಮಾತು. ಆದ್ದರಿಂದ ಬರಹದಲ್ಲಿ ಮಾತ್ರ ಒಂದೇ ಚೈನೀಸ್ ಭಾಷೆಯಿದೆಯಲ್ಲದೆ ಮಾತಿನಲ್ಲಲ್ಲ; ಈ ಬರಹ ಕೂಡಾ ಚಿತ್ರಲಿಪಿಯನ್ನು ಅವಲಂಬಿಸಿರುವುದರಿಂದ ಇದನ್ನು ಅರ್ಥಮಾಡಿಕೊಳ್ಳುವುದಕ್ಕೆ ಮಾತಿನ ಹಂಗು ಬೇಕಿಲ್ಲ; ಎಂದರೆ, ಬರಹದ ಚೈನೀಸ್ ಭಾಷೆ ಕೂಡಾ ಎಲ್ಲಕ್ಕಿಂತಲೂ ಬೇರೆ ಎಂದಾಯಿತು.

ಲೋಕದ ಈ ಬಹುಭಾಷಿತ್ವ ಮನುಷ್ಯನ ಪುರೋಗತಿಗೆ ಸಹಾಯಕವೇ ಅಥವಾ ತೊಡಕೇ ಎಂಬ ಪ್ರಶ್ನೆ ಮನುಷ್ಯ ಸಮಾಜವನ್ನು ಹಿಂದಿನಿಂದಲೂ ಕಾಡುತ್ತ ಬಂದಿದೆ. ಬೈಬಲಿನ ಮೊದಲ ಅಧ್ಯಾಯವಾದ ಜೆನಿಸಿಸ್ ಅರ್ಥಾತ್ ವಂಶಪುರಾಣದಲ್ಲಿ ಬರುವ ಕತೆಯೊಂದಿದೆ. ಆದಿಯಲ್ಲಿ ಮನುಷ್ಯರೆಲ್ಲಾ ಒಂದೇ ಭಾಷೆಯನ್ನು ಆಡುತ್ತಿದ್ದರು; ಒಂದೇ ಕಡೆ ಇದ್ದರು. ಕ್ರಮೇಣ ಇವರು ಪಟ್ಟಣವೊಂದನ್ನು ಮಾಡಿಕೊಂಡು ಅಲ್ಲೊಂದು ಬಹು ಎತ್ತರದ ಗೋಪುರ ಕಟ್ಟಲು ತೊಡಗುತ್ತಾರೆ. ಈ ಗೋಪುರದ ತುದಿ ಸ್ವರ್‍ಗ ತಲುಪಬೇಕು ಎನ್ನುವುದು ಅವರ ಗುರಿ. ಇದಕ್ಕೆ ಕೋಪಿಸಿದ ದೇವರು ಗೋಪುರವನ್ನು ಕೆಡವಿದ್ದು ಮಾತ್ರವೇ ಅಲ್ಲ, ಮನುಷ್ಯರನ್ನು ಚದುರಿಸಿ, ಇವರ ಮಾತು ಪರಸ್ಪರ ಅರ್ಥವಾಗದಂತೆ ಮಾಡುತ್ತಾನೆ. ಹೀಗೆ ಚದುರಿಹೋದ ಮನುಷ್ಯರ ಸಂತಾನವೇ ಇಂದು ಲೋಕದ ಎಲ್ಲೆಡೆ ಕಾಣಿಸುವಂಥದು. ಪ್ರತಿಯೊಂದು ಪಂಗಡವೂ ತಮ್ಮದೇ ‘ಭಾಷೆ’ಯನ್ನು-ಚೈನೀಸ್, ರಶಿಯನ್, ಜರ್ಮನ್, ಇಂಗ್ಲಿಷ್ ಮೊದಲಾಗಿ ರೂಢಿಸಿಕೊಂಡುದರಿಂದ ಪರಸ್ಪರ ಅರ್ಥಮಾಡುವುದು ಕಷ್ಟವಾಗಿದೆ. ಇತರರ ಮಾತು ಅರ್ಥವಾಗಬೇಕಾದರೆ, ಒಂದೋ ಅವರ ಭಾಷೆಯನ್ನು ಕಲಿತುಕೊಳ್ಳಬೇಕಾಗುತ್ತದೆ. ಇಲ್ಲವೇ ಕಲಿತುಕೊಂಡವರು ಮಾಡಿದ ಭಾಷಾಂತರವನ್ನು ಅವಲಂಬಿಸಬೇಕಾಗುತ್ತದೆ. ಬೈಬಲಿನ ಈ ಕತೆಯನ್ನು ಒಂದು ರೂಪಕವನ್ನಾಗಿ ಬಳಸಿಕೊಂಡು ಜರ್ಮನ್ ಇಂಗ್ಲಿಷ್ ಲೇಖಕ ಜಾರ್ಜ್ ಸ್ಪೈನರ್ ಭಾಷಾಂತರಕಾರ್ಯದ ಬಗ್ಗೆ After Babel(ಬೇಬಲ್‍ನ ನಂತರ) ಎಂಬ ಹೆಸರಿನ ಒಂದು ಉದ್ಗ್ರಂಥವನ್ನು ಬರೆದಿದ್ದಾನೆ. ಈ ಬೇಬಲ್ ನಮ್ಮ ಆದಿಮ ಮಾನವರು ಕಟ್ಟಲು ಹೊರಟ ಗೋಪುರಕ್ಕೆ ಬಂದ ಕುಖ್ಯಾತ ನಾಮಧೇಯ. ಇಲ್ಲಿ ‘ಬೇಬಲ್’ ಎಂದರೆ ಅರ್ಥವಾಗದಂಥ ಮಾತು, ಬಡಬಡಿಕೆ ಎಂದು ಅರ್ಥ! ನಮಗೆ ಅರ್ಥವಾಗದ ಭಾಷೆ ಕೇವಲ ಬಡಬಡಿಕೆಯಂತೆ ಅನಿಸುತ್ತದೆಯಲ್ಲವೇ?

ಲೋಕದ, ಭಾಷಾದ್ಯೆವಿಧ್ಯವನ್ನು ವಿವರಿಸುವ ಈ ಕತೆ ಭಾಷಾವೈವಿಧ್ಯವನ್ನು ಒಂದು ಶಾಪವಾಗಿ ಕಾಣುತ್ತದೆ ಎನ್ನುವುದು ಗಮನಾರ್ಹ. ಮಾನವರೆಲ್ಲರಿಗೂ ಒಂದೇ ಭಾಷೆಯಿರುತ್ತಿದ್ದು ಅವರು ದೈವವನ್ನು ಧಿಕ್ಕರಿಸದಿರುತ್ತಿದ್ದರೆ ಚೆನ್ನಾಗಿತ್ತು ಎಂಬ ಆಶಯ ಇಲ್ಲಿ ಇರುವಂತಿದೆ. ಹಾಗೆಯೇ, ಒಂದೇ ಭಾಷೆಯಿರುತ್ತಿದ್ದರೆ ಮನುಷ್ಯರು ದೈವವನ್ನು ಧಿಕ್ಕರಿಸದೆ ಇರುತ್ತಿರಲಿಲ್ಲ ಎಂಬ ಸೂಚನೆಯೂ ಇದೆ! ಹೀಗೆ ಭಾಷೆಯೊಂದಿಗೆ ಮನುಷ್ಯರ ನೈತಿಕ ಜೀವನ ಆದಿಯಿಂದಲೇ ಬೆರೆತಿರುವ ಕುರಿತಾದ ಅರಿವು ಮಹತ್ವದ್ದು. ಆದರೂ ಪಾಶ್ಚಾತ್ಯ ಚಿಂತನೆ ಯಾವತ್ತೂ ಏಕಭಾಷೆಯ ಕಡೆ ತುಡಿಯುತ್ತ ಬಂದಿದೆಯೆನ್ನುವುದೂ ಅಷ್ಟೇ ಗಮನಾರ್ಹ. ಅದು ವರ್ಣ, ಧರ್ಮ ಮತ್ತು ರಾಷ್ಟ್ರ್‍ಈಯ ಪರಿಕಲ್ಪನೆಗಳ ಜತೆ ಮಿಳಿತವಾದಾಗ ಭಯಂಕರವಾದ ಸ್ಥಿತಿಯನ್ನು ನಿರ್ಮಾಣಮಾಡುತ್ತದೆ. ಏಕ ಭಾಷೆ, ಏಕ ವರ್ಣ, ಏಕ ಧರ್ಮ, ಏಕ ರಾಷ್ಟ್ರ ಎನ್ನುವ ಪರಿಪೂರ್ಣ ಏಕತೆ ದೇವರಿಗೇ ಸವಾಲೆಸೆದಂತೆ! ಇದು ಎಷ್ಟು ಘೋರ ಎನ್ನುವುದನ್ನು ನಾಝಿಸಂ ನಮಗೆ ತೋರಿಸಿಕೊಟ್ಟಿದೆ. ಯಾಕೆಂದರೆ ದೇವರು ಯಾವತ್ತೂ ಇಂಥ ಏಕತೆಯನ್ನು ತನ್ನ ಸೃಷ್ಟಿಯಲ್ಲಿ ಉದ್ದೇಸಿದ್ದೇ ಇಲ್ಲ.

ಭಾಷಾ ವೈವಿಧ್ಯ ರಾಷ್ಟ್ರದ ಬೆಳವಣಿಗೆಗೆ ಅಡ್ಡಿಯಾಗುತ್ತದೆ ಎಂಬ ಕಲ್ಪನೆಯೊಂದು ಪಾಶ್ಚಾತ್ಯರಲ್ಲಿ ತೀರಾ ಈಚಿನವರೆಗೆ ಇತ್ತು. ಮಾತ್ರವಲ್ಲ, ಮಗುವೊಂದು ಚಿಕ್ಕಂದಿನಲ್ಲಿ ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಕಲಿತರೆ ಅದರ ಬೌದ್ಧಿಕ ವಿಕಸನ ಕುಂಠಿತಗೊಳ್ಳುತ್ತದೆ ಎಂಬ ‘ಮನೋವಿಜ್ಞಾನ’ ಕೂಡಾ ಈ ಏಕಭಾಷಾಸೂತ್ರದ ಹಿಂದೆ ಸ್ವಲ್ಪ ಕಾಲ ಕೆಲಸ ಮಾಡಿದ್ದಿದೆ. ಈ ಎರಡೂ ಕಲ್ಪನೆಗಳೂ ಆಧಾರರಹಿತವೆನ್ನುವುದು ಈಗಿನ ತಿಳಿವಳಿಕೆ. ಇನ್ನು ಆರ್ಥಿಕ ಕಾರಣಗಳಿಗೋಸ್ಕರ ಏಕಭಾಷೆ ಲಾಭದಾಯಕ ಎನ್ನುವವರೂ ಇದ್ದಾರೆ. ಭಾರತದಲ್ಲಿ ಮಹಾತ್ಮಾ ಗಾಂಧಿಯವರು ಕೂಡಾ, ತಮ್ಮ ಸ್ವಂತ ಮಾತೃಭಾಷೆ ಗುಜರಾತಿಯಾಗಿದ್ದರೂ, ಆರ್ಥಿಕ ದೃಷ್ಟಿಯಿಂದ ದೇಶದಲ್ಲೆಲ್ಲ ಹಿಂದಿಯೊಂದೇ ಭಾಷೆಯಾಗಿದ್ದರೆ ಒಳ್ಳೆಯದೆಂಬ ಮನೋಭಾವದವರಾಗಿದ್ದರು. ದೇಶದ ಐಕ್ಯತೆಯ ದೃಷ್ಟಿಯಿಂದಲೂ ಇದೇ ಸರಿ ಎಂದು ತಿಳಿದುಕೊಂಡ ರಾಷ್ಟ್ರೀಯವಾದಿಗಳಂತೂ ಇದ್ದೇ ಇದ್ದರು. ಆದರೆ ಈಗ ಇಂಗ್ಲಿಷ್ ಭಾಷೆಯ ಸಾರ್ವತ್ರಿಕ ಪ್ರಾದುರ್ಭಾವವನ್ನು ನೋಡಿದರೆ, ಭಾರತವೂ ಸೇರಿದಂತೆ, ಲೋಕದಲ್ಲೆಲ್ಲ ಇನ್ನೊಮ್ಮೆ ಬೇಬೆಲ್ ಪೂರ್ವದ ಒಂದೇ ಭಾಷೆಯಾಗಿಬಿಡಬಹುದೇ ಎಂಬ ಭಯ ಕೆಲವರನ್ನಾದರೂ ಕಾಡುತ್ತಿದೆ. ಯಾಕೆಂದರೆ, ಇಂಗ್ಲಿಷ್‍ಗೆ ಅಂಥ ಅಭಿವೃದ್ಧಿ ‘ಗುಣ’ಗಳೆಲ್ಲ ಇರುವಂತೆ ಕಾಣಿಸುತ್ತದೆ: ಆಧುನಿಕ ಜಗತ್ತಿನ ಅಗತ್ಯಗಳಾದ ವಿಜ್ಞಾನ, ತಂತ್ರಜ್ಞಾನ, ತತ್ವಜ್ಞಾನ, ವೈಚಾರಿಕತೆ, ಕಂಪ್ಯೂಟರ್, ಅಂತರ್ಜಾಲ ಮುಂತಾದ ಎಲ್ಲವನ್ನೂ ಸಾಧ್ಯಮಾಡಿದ ಭಾಷೆ ಇದು! ಮಾತ್ರವಲ್ಲ, ಏನನ್ನೇ ಕೊಟ್ಟರೂ ಅದನ್ನು ತನ್ನದಾಗಿಸಿಕೊಳ್ಳುವ ಒಂದು ಅದ್ಭುತ ವಿಕಸನ ಗುಣವೂ ಇಂಗ್ಲಿಷ್‍ಗೆ ಇದೆ. ಯಾಕೆಂದರೆ ಅದಕ್ಕೆ ಮಡಿವಂತಿಕೆಯೇ ಇಲ್ಲ! ಒಟ್ಟಾರೆಯಾಗಿ, ಅಭಿವೃದ್ಧಿಯೆಂದರೆ ಇಂಗ್ಲಿಷ್, ಇಂಗ್ಲಿಷ್ ಎಂದರೆ ಅಭಿವೃದ್ಧಿ ಎಂದಾಗಿಬಿಟ್ಟಿದೆ. ಆದ್ದರಿಂದಲೇ ಆಧುನಿಕ ವಿದ್ಯಾಭ್ಯಾಸದ ಮಾಧ್ಯಮವಾಗಿಯೂ ಇಂಗ್ಲಿಷ್ ಈಗ ಎಲ್ಲ ದೇಶಗಳಲ್ಲೂ ತೀವ್ರವಾಗಿ ದಾಂಗುಡಿಯಿಡುತ್ತಿದೆ. ಸದ್ಯಕ್ಕಂತೂ ಅದು ಸರ್ವಮಾನ್ಯವಾದ ಅಂತರರಾಷ್ಟ್ರೀಯ ಸಂಪರ್ಕಭಾಷೆ!lingua franca(ತಮಾಷೆಯ ಸಂಗತಿಯೆಂದರೆ, ಮೂಲದ ‘ಲಿಂಗ್ವಾ ಪ್ರಾಂಕಾ’ದಲ್ಲಿ ಇಂಗ್ಲಿಷ್ ಇರಲೇ ಇಲ್ಲ; ಮೆಡಿಟರೇನಿಯನ್ ಸಮುದ್ರದ ಪೂರ್ವ ಪ್ರಾಂತಗಳಲ್ಲಿ ಬಳಸುತ್ತಿದ್ದ ಈ ‘ಫ್ರಾಂಕ್ ಜನರ ಭಾಷೆ’ ಫ್ರೆಂಚ್, ಗ್ರೀಕ್, ಅರೇಬಿಕ್ ಮತ್ತು ಸ್ಪಾನಿಶ್‍ಗಳ ಮಿಶ್ರಣವಾಗಿತ್ತು.)

ಕೆಲವೊಂದು ವಿದ್ಯಮಾನಗಳನ್ನು ಗಮನಿಸಿ: ನಮ್ಮ ಭಾಷೆಗಳಲ್ಲಿ ಹೆಸರು ಮಾಡಿದ ಲೇಖಕರಿಗೆ ಕೂಡಾ ತಮ್ಮ ಬರಹಗಳು ಇಂಗ್ಲಿಷಿಗೆ ಭಾಷಾಂತರಗೊಳ್ಳದಿರುವ ತನಕ ಸಮಾಧಾನವಿಲ್ಲ. ಇಂಗ್ಲಿಷಿಗೆ ಅವಕ್ಕೆ ಒಂದು ಶಾಶ್ವತತೆ ಬರುತ್ತದೆ ಎಂಬಂಥ ಮನೋಭಾವ. ಇಂಗ್ಲಿಷ್ ಗೊತ್ತಿರುವ ಕೆಲವರು ಈ ಭಾಷಾಂತರದ ಮಧ್ಯವರ್ತಿತ್ವವೇ ಬೇಡವೆಂದು ನೇರವಾಗಿ ಇಂಗ್ಲಿಷಿನಲ್ಲೇ ಬರೆಯಲು ಸುರುಮಾಡಿದ್ದಾರೆ. ಯಾಕೆಂದರೆ, ಎಷ್ಟಾದರೂ ಭಾಷಾಂತರ ಭಾಷಾಂತರವೇ; ಮೂಲವೇ ಇಂಗ್ಲಿಷ್ ಆದಾಗ ಅದರ ಋಜುತ್ವವೇ ಬೇರೆ! ಜನಸಾಮಾನ್ಯರಲ್ಲಂತೂ ತಮ್ಮ ಮಾತೃಭಾಷೆಗಳ ಕುರಿತಾದ ಕೀಳರಿಮೆ ಹೇಳುವಂತಿಲ್ಲ. ತಮ್ಮ ಮಗು ಇಂಗ್ಲಿಷ್ ಮಾತಾಡುತ್ತದೆ ಎನ್ನುವುದೇ ಹೆಮ್ಮೆಯ ವಿಷಯವಾಗುತ್ತದೆ. ಎಳವೆಯಲ್ಲೇ ಮಕ್ಕಳಿಗೆ ಆದಷ್ಟೂ ಹೆಚ್ಚು ಇಂಗ್ಲಿಷ್ ಕಲಿಸಿಬಿಡಬೇಕೆನ್ನುವ ಆತುರ ಇಂದು ಮನೋವೈಕಲ್ಯದ ಮಟ್ಟ ತಲುಪಿದೆ. (ನನ್ನ ಶಾಲಾ ಸಹಪಾಠಿಯೊಬ್ಬನ ನೆನಪಾಗುತ್ತಿದೆ. ಆತನ ತಂದೆಗೆ ಅಲ್ಪಸ್ವಲ್ಪ ವಿಧ್ಯಾಭ್ಯಾಸವಿತ್ತು. ಅವರು ಮಗನಿಗೊಂದು ಆಕ್ಸ್‍ಫರ್ಡ್ ಇಂಗ್ಲಿಷ್ ನಿಘಂಟು ತರಿಸಿಕೊಟ್ಟಿದ್ದರು. ಹಾಗೂ ಪ್ರತಿದಿನ ಅದೆಷ್ಟೋ ಹೊಸ ಶಬ್ದಗಳನ್ನು ಕಲಿಯುವಂತೆ ಮಗನ ಮೇಲೆ ಒತ್ತಾಯ ಹೇರುತ್ತಿದ್ದರೆಂದು ಕಾಣುತ್ತದೆ. ಈ ನನ್ನ ಸಹಪಾಠಿ ಯಾವಾಗಲೂ ಮಂಕಾಗಿರುತ್ತಿದ್ದ. ಕೊನೆಗೆ ಫೈನಲ್ ಪರೀಕ್ಷೆಯಲ್ಲಿ ತೇರ್ಗಡೆಯಾಗದೆ ಹೋದ)

ಇಂಥ ಪರಿಸ್ಥಿತಿಯಲ್ಲಿ ಸಣ್ಣ ಸಣ್ಣ ಭಾಷೆಗಳ ಭವಿಷ್ಯವೇನು? ಹುಟ್ಟುವುದು, ಬೆಳೆಯುವುದು, ಸಾಯುವುದು ಭಾಷೆಗಳ ಸಹಜ ಗುಣ. ವಿಕಸನ ಯಾವಾಗಲೂ ಸ್ಪರ್‍ಧಾತ್ಮಕವಾಗಿಯೇ ಇತ್ತು ಎಂದು ಚಾರ್ಲ್ ಡಾರ್ವಿನ್ ಕಲಿಸಿದ. ಈಗಿನ ‘ಮುಕ್ತಮಾರುಕಟ್ಟೆ’ಯ ಜಗತ್ತು ಕೂಡಾ ಆರ್ಥಿಕ ವಲಯದಲ್ಲಿ ಇದೇ ತತ್ವವನ್ನು ಸ್ವೀಕರಿಸಿದೆ: ಯಾರು ಹೊಂದಿಕೊಳ್ಳುತ್ತಾರೋ ಅವರು ಬದುಕುತ್ತಾರೆ; ಇಲ್ಲದವರು ಕ್ರಮೇಣ ಡೈನಾಸಾರುಗಳಂತೆ ನಾಶವಾಗುತ್ತಾರೆ! ಹೀಗಿರುತ್ತ ಭಾಷೆಗಳ ಬಗ್ಗೆ ಯಾಕೆ ಕಣ್ಣೀರಿಡಬೇಕು ಎನ್ನುವುದು ಪ್ರಶ್ನೆ. ಈ ಧೋರಣೆಯನ್ನು ನಾನು ಹಲವರಿಂದ ಹಲವು ರೂಪಗಳಲ್ಲಿ ನೋಡಿದ್ದೇನೆ; ಈ ಡಾರ್ವಿನಿಯನ್ ವಾದವನ್ನು ಎತ್ತಿಹಿಡಿಯುವ ‘ಅಚ್ಚ ಕನ್ನಡ’ದ ನೆಲವು ಭಾಷಾವಿಜ್ಞಾನಿಗಳು ಕೂಡಾ ಇದ್ದಾರೆ. ಇವರೆಲ್ಲರೂ ಒಂದು ದೊಡ್ಡ ತಪ್ಪು ಮಾಡುತ್ತಿದ್ದಾರೆ: ಭಾಷೆಯನ್ನೊಂದು ಉಪಕರಣ ಮಾತ್ರವಾಗಿ ಕಾಣುವುದೇ ಈ ತಪ್ಪು. ಭಾಷೆ ಉಪಕರಣಗುಣ ಮುಖ್ಯವಾದರೂ ಅದೇ ಅದರ ಕೊನೆಯಲ್ಲ. ಭಾಷೆ ನಮಗೊಂದು ಅಸ್ಮಿತೆಯನ್ನು ನೀಡುತ್ತದೆ; ನಮ್ಮ ಭಾವನೆಗಳಿಗೆ ಅದೊಂದು ಆಶ್ರಯವಾಗುತ್ತದೆ; ಸಂಸ್ಕೃತಿಯ ಆಗರವಾಗಿರುತ್ತದೆ; ನಮ್ಮ ಚರಿತ್ರೆಯನ್ನು ತನ್ನಲ್ಲಿ ಬರೆದಿಟ್ಟುಕೊಂಡಿರುತ್ತದೆ. ‘ಭಾಷೆ ಜೀವಿತದ ಮನೆ’ (Language is the house of being)ಎನ್ನುವುದು ಜರ್ಮನ್ ತತ್ವಜ್ಞಾನಿ ಮಾರ್ಟಿನ್ ಹೈಡೆಗ್ಗರನ ಪ್ರಸಿದ್ಧ ಮಾತು. ಆದರೆ ಇದೆಲ್ಲ ಮೇಲ್ವರ್ಗದ ಸಂಗತಿ; ನಮ್ಮ ಭಾಷೆಯೆಂದರೆ ನಮ್ಮ ಜಾತೀಯ ಅವಮಾನ, ಅದ್ದರಿಂದ ಬಿಡುಗಡೆಗೊಳ್ಳಲು ಇಂಗ್ಲಿಷ್ ಬೇಕು ಎನ್ನುವ ಕೆಲವು ದಲಿತರ ವಾದವೂ ಇದೆ. ಆದರೆ ಹೀಗೆ ನಿರಾಕರಿಸುತ್ತ ಹೋದರೆ, ಒಂದಲ್ಲ ಒಂದು ಪಾಪಕ್ಕೆ ಜಗತ್ತಿನ ಎಲ್ಲಾ ಭಾಷೆಗಳನ್ನೂ ಅಲ್ಲಗಳೆಯಬೇಕಾಗುತ್ತದೆ! ಇದಕ್ಕೆ ಇಂಗ್ಲಿಷ್ ಕೂಡಾ ಅಪವಾದವಲ್ಲ.

ಕೇವಲ ಏಕ ಭಾಷೆ ಏಕ ಮತ, ಏಕ ಪಕ್ಷ ಎಂಬಂಥ ಪರಿಪೂರ್ಣ ಐಕ್ಯತೆಯ ಜಗತ್ತನ್ನು ಕಲ್ಪಿಸಿನೋಡಿ: ಅದು ಕಾಗದದಲ್ಲಿ ಕೊರೆದಂಥ ಚಪ್ಪಟೆ ಜಗತ್ತಾಗಿರುತ್ತದೆ; ಅದರಲ್ಲಿನ ಮನುಷ್ಯರು ಕುರಿಗಳಂತೆ ಜೀವಿಸುತ್ತಾರೆ; ಅವರು ತಮ್ಮೆಲ್ಲಾ ವಿಮರ್ಶಾ ಪ್ರಜ್ಞೆಯನ್ನೂ ಕಳೆದುಕೊಂಡಿರುತ್ತಾರೆ; ಆದ್ದರಿಂದ ಅಲ್ಲಿ ಯಾವ ಬೆಳವಣಿಗೆಯೂ ಸಾಧ್ಯವಾಗದು. ವಿಮರ್‍ಶಾಪ್ರಜ್ಞೆ ರೂಪುಗೊಳ್ಳುವುದಕ್ಕೆ ಭಿನ್ನತೆಯ ಅರಿವು ಅತ್ಯಗತ್ಯ. ನೀರಿನಲ್ಲಿರುವ ಮೀನು ನೀರಿನಲ್ಲಿ ಓಡಾಡಿಕೊಂಡಿರುತ್ತದೆ ನಿಜ; ಆದರೆ ಅದಕ್ಕೆ ನೀರಿನ ಅರಿವಿಲ್ಲ, ಹಾಗೂ ನೀರಿನ ಕುರಿತು ಅದು ಏನನ್ನೂ ಮಾಡಲಾರದು! ಆದ್ದರಿಂದ ಮನುಷ್ಯ ಸಮಾಜದಲ್ಲಿ ಕೆಲವೊಮ್ಮೆ ಭಿನ್ನತೆಯೇ ಮೌಲ್ಯವಾಗುತ್ತದೆ. ಭಾಷೆಯ ಕುರಿತಾದ ಇನ್ನೊಂದು ನಿಜವೂ ಇದೆ: ಯಾವ ಭಾಷೆಯೂ ಒಂಟಿಯಾಗಿದ್ದರೆ ಅದು ಬೆಳೆಯದು. ಒಂಟಿ ಇರುವೆ ಹೆಚ್ಚುಕಾಲ ಜೀವಿಸಿರುವುದಿಲ್ಲ! ಭಾಷೆ ಒಂಟಿಯಾಗಿರುವುದೆಂದರೆ, ಅದಕ್ಕೆ ಇತರ ಭಾಷೆಗಳ ಸಂಪರ್ಕ ಇಲ್ಲದೆ ಇರುವುದು. ಸಾಮಾನ್ಯವಾಗಿ ನಿಜ ಜಗತ್ತಿನಲ್ಲಿ ಅಂಥ ಸ್ಥಿತಿಯೇ ನಿರ್‍ಮಾಣವಾಗುವುದಿಲ್ಲ. ಯಾಕೆಂದರೆ ಮನುಷ್ಯವರ್ಗಗಳು ಒಂದಲ್ಲ ಒಂದು ಕಾರಣಕ್ಕೆ ಪರಸ್ಪರ ಸಂಪರ್ಕದಲ್ಲಿ ಇದ್ದುಕೊಂಡೇ ಚರಿತ್ರೆ ನಿರ್ಮಾಣವಾಗಿದೆ. ಆದ್ದರಿಂದ ಅವರ ಭಾಷೆಗಳೂ ಪರಸ್ಪರ ಸಂಬಂಧಗಳನ್ನು ಹೊಂದಿಕೊಂಡುವು: ಒಂದೋ ಅವು ಸಮಾನ ಮೂಲದಿಂದ ಕವಲೊಡೆದುವು, ಇಲ್ಲವೇ ಪರಸ್ಪರ ಸಂಪರ್ಕ ಪಡೆದಂಥವು. ನಮ್ಮ ಇಂದಿನ ಕನ್ನಡವೇ ಎಷ್ಟೆಲ್ಲಾ ಬೇರೆ ಭಾಷೆಗಳಿಂದ ಪಡೆದುಕೊಂಡಿದೆ ಎಂದು ವಿಚಾರಿಸಿದರೆ ಅಚ್ಚರಿಗೊಳ್ಳುತ್ತೇವೆ: ಸಂಸ್ಕೃತ, ಪ್ರಾಕೃತ, ಪಾಳಿ, ಪರ್ಶಿಯನ್, ಅರೆಬಿಕ್, ಮರಾಠಿ, ಹಿಂದಿ, ಇಂಗ್ಲಿಷ್! ಇನ್ನು ಒಂದು ಪ್ರಧಾನ ದ್ರಾವಿಡ ಭಾಷೆಯಾಗಿ ಅದು ತಮಿಳು, ತೆಲುಗು, ಮಲೆಯಾಳಂ, ತುಳು ಇತ್ಯಾದಿ ಇತರ ದ್ರಾವಿಡ ಭಾಷೆಗಳನ್ನೂ ಹೋಲುತ್ತದೆ. ಲೋಕದ ಯಾವ ಭಾಷೆಯೂ ತನಗೂ ಇತರ ಭಾಷೆಗಳಿಗೂ ಸಂಬಂಧವಿಲ್ಲ ಎನ್ನುವಂತಿಲ್ಲ, ಅದೇ ರೀತಿ ತಾನು ಪರಿಪೂರ್ಣ ಶುದ್ಧ ಎನ್ನುವಂತೆಯೂ ಇಲ್ಲ. ಎಲ್ಲವೂ ಸಂಕರ ಭಾಷೆಗಳೇ; ಕೆಲವು ಹೆಚ್ಚು. ಕೆಲವು ಕಡಿಮೆ ಅಷ್ಟೆ. ಆದ್ದರಿಂದ ಅತಿಯಾದ ಮಡಿವಂತಿಕೆ ಅರ್ಥಹೀನ. ಆದರೂ ಇತರ ಸಾಂಸ್ಕೃತಿಕ ವಿದ್ಯಮಾನಗಳಂತೆಯೇ ಭಾಷೆಗೂ ಕೂಡಾ ಎರಡು ಗುಣಗಳು ಅಗತ್ಯವಾಗುತ್ತವೆ: ಒಂದು, ಸ್ಥಿತಿಸ್ಥಾಪಕತ್ವ ಇನ್ನೊಂದು ಉದಾರತೆ. ಸ್ಥಿತಿಸ್ಥಾಪಕತ್ವ ಅದರ ಸ್ವಂತಿಕೆಯ ಅಸ್ತಿತ್ವಕ್ಕಾದರೆ, ಉದಾರತೆ ಬೆಳವಣಿಗೆಗೆ.

ಮಾತೃಭಾಷೆಯ ಜತೆಗೇ ನಾವು ಆದಷ್ಟೂ ಹೆಚ್ಚು ಇತರ- ದೇಶೀಯ ಹಾಗೂ ವಿದೇಶೀಯ-ಭಾಷೆಗಳನ್ನೂ ಕಲಿಯಬೇಕು. ತಟ್ಟನೆ ಎದುರಾಗುವ ಪ್ರಶ್ನೆ: ಏನು ಉಪಯೋಗ? ಎನ್ನುವುದು. ಕೆಲವು ಸಲ ನಾವು ಈ ಉಪಯೋಗಸಂಬಂಧೀ ಪ್ರಶ್ನೆಯನ್ನು ಕೈಬಿಟ್ಟು ಭಾಷೆಗಳನ್ನು ಕೇವಲವಾಗಿ ಕಲಿಯುವುದು ಅಗತ್ಯ. ಈ ಮಾತು ಇಂದಿನ ಕಾಲದಲ್ಲಿ ವಿಚಿತ್ರವೆನಿಸಬಹುದು; ಯಾಕೆಂದರೆ ಈಗ ಪ್ರತಿಯೊಂದನ್ನೂ ನಮ್ಮ ಉಪಯೋಗದ ದೃಷ್ಟಿಯಿಂದ ಪರಿಗಣಿಸುವುದು ರೂಢಿಯಾಗಿದೆ. ಭಾಷೆಯನ್ನು ಒಂದು ಮೌಲ್ಯವಾಗಿ ಕಲಿಯುವುದು ಅಗತ್ಯ; ಇದೊಂದು ರೀತಿಯ ಸೌಂದರ್ಯತತ್ವ ಎಂದು ತಿಳಿದುಕೊಳ್ಳಬಹುದು. ಕಲಿತದ್ದು ಯಾವತ್ತೂ ನಿರರ್ಥಕವಾಗುವುದಿಲ್ಲ ಎನ್ನುವುದು ಸಹಾ ಒಂದು ಸತ್ಯ. ಇತರ ಭಾಷೆಗಳನ್ನು ಹೆಚ್ಚೆಚ್ಚು ಕಲಿತಂತೆ ನಮಗೆ ನಮ್ಮ ಭಾಷೆಯ ಕುರಿತಾಗಿ ಹೆಚ್ಚು ಅರಿವು ಆದರಗಳು ಮೂಡುವುದು ಕೂಡಾ ಸಾಧ್ಯ. ನಮ್ಮ ಒಟ್ಟಾರೆ ದೃಷ್ಟಿಕೋನವಂತೂ ವಿಶಾಲವಾಗುತ್ತದೆ. ನನ್ನ ಭಾಷೆಯ ಮಿತಿ ನನ್ನ ಲೋಕದ ಮಿತಿ ಎನ್ನುತ್ತಾನೆ ತತ್ವಜ್ಞಾನಿ ಲುಡ್ವಿಗ್ ವಿಟ್‍ಗೆನ್‍ಸ್ಟೈನ್. ಬಹುಭಾಷಿತ್ವವನ್ನು ಹೊಂದುವುದು ಈ ಮಿತಿಯನ್ನು ದಾಟುವುದಕ್ಕಿರುವ ಏಕೈಕ ವಿಧಾನ. ಯಾಕೆಂದರೆ ಯಾವುದೇ ಒಂದು ಭಾಷೆಯಿಂದ ನೋಡಿದರೂ ನಮಗೆ ಸಿಗುವುದು ಲೋಕದ ಪಾರ್ಶ್ವನೋಟ ಮಾತ್ರವೇ. ಭಾಷೆಯ ಸಹಾಯವಿಲ್ಲದೆ ನಾವು ಲೋಕವನ್ನು ನೋಡಲಾರೆವು ಎಂದಮೇಲೆ ಆದಷ್ಟೂ ಹೆಚ್ಚು ಭಾಷೆಗಳಿಂದ ಅದನ್ನು ನೋಡುವುದೇ ಒಳ್ಳೆಯದು. ಭಾಷೆಗಳ ಕುರಿತಾದ ಈ ಧೋರಣೆಯನ್ನು ಧರ್ಮ ಹಾಗೂ ವಿಚಾರಗಳ ಕುರಿತಾಗಿಯೂ ಬೆಳೆಸಿಕೊಂಡರೆ ನಾವು ನೋಡುವ ಲೋಕ ಇನ್ನಷ್ಟು ಸುಂದರವಾಗಿ ಕಾಣಿಸುವುದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗೆಳತಿ, ನೀನಲ್ಲಿ ನಾನಿಲ್ಲಿ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೪೪

ಸಣ್ಣ ಕತೆ

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

cheap jordans|wholesale air max|wholesale jordans|wholesale jewelry|wholesale jerseys