ಗೋಕಾಕ್ ವರದಿ – ೪

ಗೋಕಾಕ್ ವರದಿ – ೪

(ಇ) ಇನ್ನೊಂದು ಅಂತರವೆಂದರೆ ಆಧುನಿಕ ಭಾರತೀಯ ಭಾಷೆಗಳ ಮಾಲಿಕೆಯು (ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಗುಜರಾತಿ, ಉರ್ದು, ಹಿಂದೀ) ೧೫೦ ಅಂಕಗಳ ಏಕೈಕ ಪ್ರತಹಮಭಾಷೆಯಾದ ಕನ್ನಡದ ಜೊತೆಗೆ ನಿಲ್ಲುವುದಿಲ್ಲ ನಿಜ. ಆದರೆ ಕನ್ನಡೇತರ ವಿದ್ಯಾರ್ಥಿಗಳಿಗಾಗಿ ಈ ಭಾಷೆಗಳು ಪ್ರಥಮ ಭಾಷೆಯೇ (೧೫೦ ಅಂಕಗಳು) ಆಗಿ ೧೯೮೬-೮೭ರ ವರೆಗೆ ಮುಂದುವರಿಯಬೇಕಾಗಿದೆ. ಅದೇ ಪ್ರಕಾರ ೧೯೮೬-೮೭ರ ವರೆಗೆ ಕನ್ನಡೇತರ ವಿದ್ಯಾರ್ಥಿಗಳಿಗಾಗಿ ಕನ್ನಡ ದ್ವಿತೀಯ ಹಾಗೂ ತೃತೀಯ ಭಾಷೆಯಾಗಿ ಮುಂದುವರಿಯುವುದು.

(ಈ) ಆದರೆ ಕನ್ನಡಿಗ ವಿದ್ಯಾರ್ಥಿಗಳಿಗಾಗಿ ೧೯೮೧-೮೨ರಿಂದಲೇ ಕನ್ನಡವು ಏಕೈಕ ಪ್ರಥಮಭಾಷೆ (೧೫೦ ಅಂಕಗಳು) ಯಾಗುವುದು. ಕನ್ನಡವನ್ನು ಬಿಟ್ಟು ಉಳಿದ ಆಧುನಿಕ ಭಾರತೀಯ ಭಾಷೆಗಳು (ತಮಿಳು ಮುಂತಾದ) ದ್ವಿತೀಯ ಹಾಗೂ ತೃತೀಯ ಭಾಷೆಗಳ ಅಂಕಣಗಳಲ್ಲಿ (ಕಾಲಮ್ಗಳು) ಪ್ರಾಚೀನ ಭಾಷೆಗಳೊಡನೆ ಕಾಣಿಸಿಕೊಂಡು ಮುಂಬರುವ ಎಲ್ಲ ವರ್ಷಗಳಲ್ಲಿಯೂ ಅದೇ ರೀತಿಯಾಗಿ ಮುಂದುವರಿಯುವುವು.

(ಉ) ಸಮಿತಿಯ ಸಲಹೆಗಳ ಪ್ರಕಾರ ಎರಡು ಭಾಷೆಗಳನ್ನು (ದ್ವಿತೀಯ ಹಾಗೂ ತೃತೀಯ) ತಮಗೆ ಇಚ್ಚೆಯಿದ್ದಂತೆ ವಿದ್ಯಾರ್ಥಿಗಳು ಆಯ್ದುಕೊಳ್ಳಬಹುದು. ಆದರೆ ಇಂಗ್ಲಿಷು ಭಾಷೆಯೊಂದನ್ನು ೧೯೮೫-೮೬ನೆಯ ಶೈಕ್ಷಣಿಕ ವರ್ಷ ಮುಗಿಯುವವರೆಗೆ ದ್ವಿತೀಯ ಭಾಷೆಯೆಂದು ಮಾತ್ರ ಅಭ್ಯಸು‌ಇಸಬಹುದೆಂದು ತಾತ್ಪೂರ್ತಿಕ ವ್ಯವಸ್ಥೆಯಲ್ಲಿ ವಿಧಿಸಲಾಗಿದೆ. ೧೯೮೬-೮೭ರಿಂದ ವಿದ್ಯಾರ್ಥಿಗಳು ಕನ್ನಡವನ್ನು ಕಡ್ಡಾಯವಾಗಿ ಕಲಿತು ಉಳಿದ ಯಾವ ಎರಡು ಭಾಷೆಗಳನ್ನಾದರೂ ಆಯ್ದುಕೊಳ್ಳಬಹುದು.

(ಊ) ಕನ್ನಡ ಬೇರೆ ಒಂದು ಆಧುನಿಕ ಭಾರತೀಯ ಭಾಷೆ, ಒಂದು ಪ್ರಾಚೀನ ಭಾಷೆ; ಯಾವ ಭಾಷೆಯನ್ನೇ ವಿದ್ಯಾರ್ಥಿಯು ತೃತೀಯ ಭಾಷೆಯೆಂದು ಆಯ್ದುಕೊಂಡಿರಲಿ, ಅದು ೧೮೧-೮೨ರಿಂದಲೇ ಕಡ್ಡಾಯದ ಪರೀಕ್ಷಾ ವಿಷಯವಾಗಿರುವುದು. ಇದೇ ವ್ಯವಸ್ಥೆಯು ಸಮಿತಿಯ ೪ನೆಯ ಸಲಹೆಯ ಪ್ರಕಾರ ಮುಂದೆಯೂ ನಡೆದುಕೊಂಡುಬರುವುದು.

(೨) ಪ್ರಥಮ, ದ್ವಿತೀಯ ಹಾಗೂ ತೃತೀಯ ಭಾಷೆಗಳು
‘ಭಾಷಾ ಶಿಕ್ಷಣದ ಗೊತ್ತುಗುರಿಗಳು’ ಎಂಬ ಭಾಗದಲ್ಲಿ ಹೈಸ್ಕೂಲುಗಳಲ್ಲಿ ಕಲಿಯಬೇಕಾದ ಎಲ್ಲ ಭಾಷೆಗಳ ತರತಮ ಮಹತ್ವವನ್ನು ಅಳೆಯಲು ಹವಣಿಸಿದೆ. ಹೀಗೆ ಅಳೆಯುವಾಗ ಉಪಯೋಗಿಸಿದ ಅಳತೆಗೋಲೆಂದರೆ ಇಂದಿನ ಒಬ್ಬ ಸುಸಂಸ್ಕೃತ ನಾಗರಿಕನಿಗೆ ಕನ್ನಡ ನಾಡಿನಲ್ಲಿ ವಿವಿಧ ಭಾಷೆಗಳಿಂದ ಬರುವ ಕೊಡುಗೆಯೇ ಸರಿ.

ಅಭ್ಯಸಿಸಲಿರುವ ಮೂರು ಭಾಷೆಗಳಿಗೂ ಸರಿಸಮಾನ ಅಂಕಗಳಿರಬೇಕೆಂದು ಒಂದು ಅಭಿಪ್ರಾಯವಿದೆ. ಆದರೆ ಪ್ರಥಮ-ದ್ವಿತೀಯ-ತೃತೀಯ ಎಂದು ಭಾಷೆಗಳನ್ನು ವಿಂಗಡಿಸುವುದರಲ್ಲಿಯೇ ಒಂದು ವಿಶೇಷ ಅರ್ಥವಿದೆ. ‘ಪ್ರಥಮ’ ಎಂಬುದು ಬರಿ ಒಂದು ಅಭಿಮಾನ ಇಲ್ಲವೆ ಭಾವನಾವೇಶದ್ಯೋತಕವಾದ ಪದವಲ್ಲ. ಇಂದಿನ ಸಾಮಾನ್ಯ ಅಬಳಕೆಯಲ್ಲಿ ಅಂಥದೊಂದು ಅರ್ಥ ಅದಕ್ಕೆ ಬಂದಿದೆ. ಆದರೆ ಶಿಕ್ಷಣ ಪಡೆಯಬೇಕೆಂಬ ಹವ್ಯಾಸವುಳ್ಳ ಲಕ್ಷಾವಧಿ ವಿದ್ಯಾರ್ಥಿಗಳಿಗೆ ಕನ್ನಡ ನಾಡಿನಲ್ಲಿ ಅತ್ಯಂತ ಪ್ರಯೋಜನಕಾರಿಯಾದ ಭಾಷೆ ಯಾವುದು? ಕನ್ನಡ ನಾಡಿನಲ್ಲಿ ಕನ್ನಡವೊಂದೇ ಆ ‘ಪ್ರಥಮ’ ಭಾಷೆಯಾಗಬಲ್ಲದು. ಅದು ಕನ್ನಡ ಜನತೆಯ ಭಾಶೆ. ಅಂತೇ ಕನ್ನಡ ನಾಡಿನಲ್ಲಿಯ ವ್ಯವಹಾರದ, ಆಡಳಿತದ, ಸೇವಾ ಆಯೋಗದ, ಶಾಲೆ ಕಾಲೇಜುಗಳ, ವಿಶ್ವವಿದ್ಯಾನಿಲಯಗಳ ಮಾಧ್ಯಮವಾದ ಭಾಷೆ. ಅದರ ಪ್ರಯೋಜಕತೆ ಜನತೆಗೆ ಸಂಪೂರ್ಣ ಲಭ್ಯವಿರಲು ತಡವಾದರೆ ಜನತೆ ರೊಚ್ಚಿಗೇಳುವುದರಲ್ಲಿ ಸಂಶಯವಿಲ್ಲ. ಪ್ರಪಂಚದ ಕೆಲವೊಂದು ವಿಶಿಷ್ಟ ವಿಜ್ಞಾನ ವಿಭಾಗಗಳನ್ನು ತೆರ್ದಿಡಲು ಇನ್ನೂ ಅನೇಕ ವರ್ಷಗಳ ವರೆಗೆ ಇಂಗ್ಲಿಷಿನ ಪ್ರತ್ಯಕ್ಷ ಜ್ಞಾನ ಬೇಕಾಗಬಹುದು. ನಾವು ಮೆಚ್ಚಿದ ಒಂದು ಸಾಹಿತ್ಯದ ಮೇಲ್ಮೆಯನ್ನು-ಅದು ಸಂಸ್ಕೃತವೇ ಇರಲಿ ಇಲ್ಲವೇ ಇನ್ನಾವ ಭಾಷೆಯೇ ಇರಲಿ-ಹೃದಯ ತುಂಬಿ ಸೂಸುವಂತೆ ಸವಿಯಲು ಆ ಸಾಹಿತ್ಯದ ಭಾಷೆಯ ನಿಚ್ಚಳವಾದ ಜ್ಞಾನ ಅವಶ್ಯವಾಗಬಹುದು. ಆದರೆ ಕಾಲ ಗತಿಸಿದಂತೆ ನಮ್ಮ ನಾಡಿನ ವಿವಿಧ ಸಂಸ್ಥೆಗಳ ದೃಷ್ಟಿ ನಿಚ್ಚಳವಾದಂತೆ-ಪ್ರಪಂಚದ ಜ್ಞಾನ ವಿಜ್ಞಾನವೆಲ್ಲ ಕನ್ನಡದಲ್ಲಿ ಒಡಮೂಡುವುದರಲ್ಲಿ ಸಂಷಯವಿಲ್ಲ.

ಆಡಳಿತ, ಸಾರವಜನಿಕ ಸೇವೆ, ವ್ಯವಹಾರ, ಉದ್ಯೋಗ, ಉಚ್ಚ ಶಿಕ್ಷಣ-ಹೀಗೆ ಜೀವನದ ವಿವಿಧ ಭಾಗಗಳನ್ನು ಅಭಿವ್ಯಕ್ತಗೊಳಿಸುವುದರಿಂದ ವಿದ್ಯಾರ್ಥಿಯು ಪಡೆಯುವ ಕನ್ನಡದ ಜ್ಞಾನಕ್ಕೆ ಆಳವೂ, ವಿಸ್ತಾರವೂ ಇರಬೇಕಾಗುತ್ತದೆ. ಅನೇಕ ವಿಷಯಗಳ ವ್ಯಾಸಮ್ಗಕ್ಕಾಗಿ ಭಾಶೆಯೇ ಹಿಗ್ಗಬೇಕಾಗುತ್ತದೆ. ಈ ದಿಕ್ಕಿನಲ್ಲಿ ವಿದ್ಯಾರ್ಥಿಯ ಕನ್ನಡದ ಅಭ್ಯಾಸ ಮುಂದುವರಿದಿರಬೇಕು. ಹೀಗೆ ಮುಂದುವರಿಸಲು ಭಾಷೆಯ ಜೊತೆಗೆ ಆಧುನಿಕ ಕನ್ನಡ ಸಾಹಿತ್ಯದ ಅಭ್ಯಾಸವೂ ಅವಶ್ಯವಾಗುತ್ತದೆ. ಕನ್ನಡೇತರ ವಿದ್ಯಾರ್ಥಿಯೂ ಕನ್ನಡವನ್ನು ಹೀಗೆ ವೈವಿಧ್ಯಪೂರ್ಣವಾಗಿ ಅಭ್ಯಸಿಸುತ್ತಾನೆ. ಅಂತೆಯೇ ಪ್ರಥಮ ಭಾಷೆಯಾದ ಕನ್ನಡಕ್ಕೆ ೧೫೦ ಅಂಕಗಳನ್ನು ಕಾದಿರಿಸಿದೆ.

ಕನ್ನಡವನ್ನು ಪ್ರಥಮ ಭಾಶೆಯಾಗಿ ಅಭ್ಯಸಿಸುವಾಗ ಈ ಅಭ್ಯಾಸದ ಗುರಿಗಳೇನಿರಬೇಕು? ಪಠ್ಯಪುಸ್ತಕಗಳ ನಿರ್ದೇಶನ ಮಂಡಲವೂ ಗುರಿಗಳನ್ನು ಈ ರೀತಿಯಾಗಿ ಸ್ಫುಟಗೊಳಿಸಿದೆ. ಆ ಮಾತುಗಳನ್ನೇ ಕೆಲವು ಹೆಚ್ಚು ಕಡಿಮೆಗಳೊಡನೆ ಇಲ್ಲಿ ಸೇರಿಸಿದೆ.
(ಅ) ಉತ್ತಮ ಶ್ರವಣ, ಉತ್ತಮ ಅರ್ಥಗ್ರಹಣ, ಹಾಗೂ ಶೀಘ್ರ ವಾಚನ ಸಾಧ್ಯವಾಗುವಂತೆ ವಿದ್ಯಾರ್ಥಿಗಳ ಬುದ್ಧಿಶಕ್ತಿಯನ್ನು ಬೆಳೆಸಬೇಕು.
(ಆ) ಮನೋರಂಜನಾ, ಜ್ಞಾನಾರ್ಜನಾ, ಸಾಹಿತ್ಯಾಭಿರುಚಿ, ಹಾಗೂ ಸೂಕ್ಷ್ಮ ಪರಿಜ್ಞಾನದ ತೃಪ್ತಿಗಾಗಿ ಸ್ವತಂತ್ರ ಅಭ್ಯಾಸವನ್ನು ಮುಂದುವರಿಸಲು ವಿದ್ಯಾರ್ಥಿಗಳನ್ನು ಸಮರ್ಥರನ್ನಾಗಿ ಮಾಡುವುದು.
(ಇ) ಅವರ ರಸಗ್ರಹಣ ಶಕ್ತಿ, ಕಲ್ಪಕತೆ, ಸ್ವಂತಿಕೆ, ಹಾಗೂ ಸೃಜನಶೀಲತೆಗಳ ಉದ್ದೀಪ್ತವಾಗುವಂತೆ ಹವಣಿಸುವುದು.
(ಈ) ಉಕ್ತ ಹಾಗೂ ಲಿಖಿತ ಅಭಿವ್ಯಕ್ತಿಯ ಒಳ್ಳೆಯ ವಿಕಾಸ ವಿದ್ಯಾರ್ಥಿಗಳಲ್ಲಿ ರೂಪುಗೊಳ್ಳುವಂತೆ ನೋಡಿಕೊಳ್ಳುವುದು.
(ಉ) ಶುದ್ಧ ಉಚ್ಚಾರ, ದಿನದಿನಕ್ಕೆ ಬೆಳೆಯುತ್ತಿರುವ ಶಬ್ದಕೋಶ, ಭಾಷೆಯು ದೇಹರಚನೆ ಇಲ್ಲವೆ ವಾಕ್ಯಗಳ ಮೈಕಟ್ಟನ್ನು ಚೆನ್ನಾಗಿ ಅರಿತುಕೊಂಡು ಅದನ್ನು ಉಚಿತವಾಗಿ ದೋಷರಹಿತವಾಗಿ ಹಾಗೂ ಪರಿಣಾಮಕಾರಿಯಾಗಿ ಉಪಯೋಗಿಸುವ ಜಾಣ್ಮೆ: ಇವು ವಿದ್ಯಾರ್ಥಿಗಳಲ್ಲಿ ಬೆಳೆಯುವಂತೆ ಪ್ರತ್ನಿಸುವುದು.
(ಊ) ವ್ಯಾಕರಣ, ಭಾಷೆಯಲ್ಲಿಯ ಮುಖ್ಯ ಸಾಹಿತ್ಯ ಪ್ರಕಾರಗಳು ಹಾಗೂ ಮಹತ್ವದ ಕವಿ ಹಾಗೂ ಸಾಹಿತಿಗಳು: ಈ ವಿಷಯಗಳ ಹಾಗೂ ವ್ಯಕ್ತಿಗಳ ಪರಿಚಯ ಮಾಡಿಕೊಡುವುದು. ಆಧುನಿಕ ಕನ್ನಡ ಭಾಷಾ ಸಾಹಿತ್ಯಗಳಿಗೆ ಸಂಬಂಧಿಸಿದಂತೆ ಮಾತ್ರ ವ್ಯಾಕರಣ ಪ್ರಾಕಾರ ಸಾಹಿತ್ಯ ಹಾಗೂ ಸಾಹಿತಿ-ಕವಿಗಳ ಪರಿಚಯವನ್ನು ಮಾಡಿಕೊಡುವುದು.
(ಋ) ಅವರಿಗೆ ಕಲಿಸುವ ಆಧುನಿಕ ಕನ್ನಡ ಗದ್ಯ ಪದ್ಯಗಳ ದ್ವಾರಾ ಜೀವನದ ಶ್ರೇಷ್ಠ ಮೌಲ್ಯಗಳು ದೊರೆತು ಭಾವನೆಗಳ ಉದಾತ್ತೀಕರಣದ ಮಾರ್ಗವಾಗಿ ಉತ್ತಮ ಹೃದಯ ಸಂಸ್ಕೃತಿ ವಿದ್ಯಾರ್ಥಿಗಳದಾಗಿ ಅವರ ವ್ಯಕ್ತಿತ್ವದ ಸರ್ವಾಂಗೀಣ ವಿಕಾಸವಾಗುವಂತೆ ಪ್ರಯತ್ನಿಸಬೇಕು. ಹಳಗನ್ನಡ-ನಡುಗನ್ನಡದ ಮುಖ-ಪರಿಚಯವಿರಲೆಂದು ಮಾತ್ರ ಕೀರ್ತಿವಂತ ಕವಿ-ಸಾಹಿತಿಗಳಿಂದ ಒಂದೆರಡು ಉಧೃತ ಭಾಗಗಳನ್ನು ಪಠ್ಯಪುಸ್ತಕದಲ್ಲಿ ಸಂಗ್ರಹಿಸಬಹುದು.
(ೠ) ವಿದ್ಯಾರ್ಥಿಗಳಿಗೆ ಈ ನಾಡು ಹಾಗೂ ರಾಷ್ಟ್ರ ತಮ್ಮದು, ಭಾಶೆ ತಮ್ಮದು, ಸಾಹಿತ್ಯ ಹಾಗೂ ಸಂಸ್ಕೃತಿ ತಮ್ಮದೆಂಬ ಭಾವನೆ ಜಾಗೃತವಾಗುವಂತೆ ಪಠ್ಯಕ್ರಮವನ್ನು ಪಠ್ಯಸಾಮಗ್ರಿಯನ್ನು ಹಾಗೂ ಬೋಧನ ವಿಧಾನವನ್ನು ರೂಪಿಸಬೇಕು.
(ಎ) ಓದು: ಗದ್ಯ: ಪ್ರಬಂಧ, ಸಣ್ಣಕತೆ ಆಟ ನೋಟಗಳ ಪ್ರಪಂಚ, ಸಾಹಸ-ವೈಜ್ಞಾನಿಕ ಸಂಶೋಧನೆಗಳು ಹಾಗೂ ಯಂತ್ರ ಚಮತ್ಕಾರಗಳು, ಸಾಂಸ್ಕೃತಿಕ ಪರಂಪರೆಯ ಕೊಡುಗೆ, ಸಾಹಿತ್ಯಕ ಇಲ್ಲವೆ ಐತಿಹಾಸಿಕ ಮಹತ್ವದ ಪತ್ರಗಳು, ಕಾದಂಬರಿಗಳಿಂದ ಉದ್ಧೃತ ಭಾಗಗಳು: ಭಾಷಣಗಳು, ಪ್ರವಾಸ ಸಾಹಿತ್ಯ, ಚರಿತ್ರೆ, ಆತ್ಮ ಚರಿತ್ರೆ, ಜನತೆಯ ಆಚಾರ ವಿಚಾರ, ಜನತೆಯ ಐತಿಹಾಸಿಕ ಇಲ್ಲವೆ ಭೌಗೋಳಿಕ ವೃತ್ತಾಂತ ವೈಜ್ಞಾನಿಕ ಕಥಾ ಪ್ರಪಂಚ, ಪಶುಪಕ್ಷಿಗಳ ಜಗತ್ತು, ನಾಟಕಗಳಿಂದ ಆಯದ ದೃಶ್ಯಗಳು, ಏಕಾಂಕಗಳು, ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಗಳ ಮೇಲೆ ಪ್ರಬಂಧಗಳು, ಡೈರಿಗಳು, ಉದ್ಧೃತ ಭಾಗಗಳನ್ನು ಆದಷ್ಟು ಮಟ್ಟಿಗೆ ಆಧುನಿಕ ಕನ್ನಡ ಸಾಹಿತ್ಯದ (ಅಲ್ಲಲ್ಲಿ ನಡುಗನ್ನಡ ಸಾಹಿತ್ಯದ) ವಿವಿಧ ಶೈಲಿಗಳು ನಿದರ್ಶನಕ್ಕೆ ಬರುವಂತೆ ಆಯ್ದಿರಬೇಕು.

ಪದ್ಯ:
ಭಾವಗೀತೆಗಳು, ಕಥನಕವನಗಳು, ಲಾವಣಿಗಳು, ತ್ರಿಪದಿಗಳು, ಅಷ್ಟಷಟ್ಪದಿಗಳು, ಶೋಕಗೀತೆಗಳು, ಓಡುಗಳು, ನೀಳ್ಗವನಗಳೋಳಗಿಂದ ಉದ್ಧತ ಭಾಗಗಳು, ರಾಷ್ಟ್ರೀಯತೆ, ಶೌರ್ಯ, ನಿಸರ್ಗ, ನೀತಿ, ಭಕ್ತಿ ಮೊದಲಾದ ಜೀವನ ಮೌಲ್ಯಗಳನ್ನು ಕುರಿತ ಕವನಗಳು, ವಚನಗಳು, ಕಂದಗಳು, ದಾಸರ ಹಾಡುಗಳು, ಸಾಂಗತ್ಯ, ಕೆಲವು ವೃತ್ತಗಳು, ಷಟ್ಪದಿಗಳು.
ಉಪಪಠ್ಯ ಗದ್ಯ: ಒಂದು ಏಕಸೂತ್ರತೆಯುಳ್ಳ ಕೃತಿ, ಕಾದಂಬರಿ, ವೈಜ್ಞಾನಿಕ ಕಾದಂಬರಿ, ಸಾಹಸದ ಕತೆ, ವೈದಿಕ ಕತೆಗಳು, ಚರಿತ್ರೆ, ಆತ್ಮಚರಿತ್ರೆ, ಕರ್ನಾಟಕದ ಸಮಗ್ರ ಇತಿಹಾಸವನ್ನು ಒಳಗೊಂಡ ಗ್ರಂಥ. ಸಂಕ್ಷಿಪ್ತಗೊಳಿಸಿದ ಜಗತ್ಪ್ರಸಿದ್ಧ ಕಾದಂಬರಿ, ಒಂದು ನಾಟಕ, ಐದು ಏಕಾಂತಗಳ ಸಂಗ್ರಹ.

(ಏ) ವ್ಯಾಕರಣ, ಛಂದಸ್ಸು, ಮತ್ತು ಅಲಂಕಾರ-ಶಾಸ್ತ್ರ:
ವ್ಯಾಕರಣ: ಇದು ಕ್ರಿಯಾತ್ಮಕವಾಗಿರಬೇಕು. ಈಗಿನ ಕನ್ನಡ ಪ್ರಥಮಭಾಷಾ ಪಠ್ಯಕ್ರಮದಲ್ಲಿ ಇದರ ವಿವರಗಳು ಸಾಕಷ್ಟು ಬಂದಿವೆ.
ಛಂದಸ್ಸು: ಭಾಷಾಭ್ಯಾಸಕ್ಕೆ ನಿಲ್ಲದೆ ಸಾಹಿತ್ಯದ ಅಭ್ಯಾಸವನ್ನೂ ಆಸ್ಥೆಯಿಂದ ಪ್ರಥಮ ಭಾಷಾಭ್ಯಾಸವು ಪಾಲಿಸುವದೆಂಬುವ ಮಾತಿಗೆ ಛಂದಸ್ಸು ಹಾಗೂ ಅಲಂಕಾರ ಶಾಸ್ತ್ರದ ಅಭ್ಯಾಸ ಸಾಕ್ಷಿಯಾಗಿದೆ. ಆದರೆ ಛಂದಸ್ಸನ್ನು ಕಲಿಸುವಾಗ ಬರಿ ಮಾತ್ರೆ, ಗಣ, ಗುರು, ಲಘುಗಳನಲ್ಲದೆ ಕೆಳಗೆ ಕಾಣಿಸಿದ ವಿಷಯಗಳನ್ನು ಮೊದಲು ಕಲಿಸುವುದು ಅವಶ್ಯಕವಾಗಿದೆ:-
೧. ತಾಳ ಲಯವೆಂದರೇನು?
೨. ಗದ್ಯ ಹಾಗು ಪದ್ಯದ ತಾಳ ಲಯಕ್ಕೆ ಇರುವ ಅಂತರವೇನು?
೩. ವಚನ ಹಾಗು ಸ್ವಚಂದ ಛಂದಗಳ ತಾಳ ಲಯಕ್ಕೂ ಗದ್ಯ ಪದ್ಯಗಳ ತಾಳಲಯಕ್ಕೂ ಇರುವ ಅಂತರವೇನು?
ಅಲ್ಲದೆ ಛಂದಸ್ಸು ಕಲಿಸುವಾಗ ಕಂದ ಪದ್ಯ, ಷಟ್ಪದಿಗಳು, ರಗಳೆಗಳು ಹಾಗು ವೃತ್ತಗಳ ಛಂದಸ್ಸನ್ನು ಅಭ್ಯಸಿಸುವ ಏರ್ಪಾಟಿದೆಯೇ ಹೊರೆತು ಆಧುನಿಕ ಕಾವ್ಯದ ಭಾವಗೀತೆ, ಸರಳ ರಗಳೆ, ಅಷ್ಟ ಷಟ್ಪದಿಗಳ ಹಾಗೂ ತ್ರಿಪದೆ- ಸಾಂಗತ್ಯಗಳ ಛಂದಸ್ಸನ್ನು ತಿಳಿಸುವ ಏರ್ಪಾಟ್ ಅಲ್ಲ. ಆಧುನಿಕ ಕಾವ್ಯ ಛಂದಸ್ಸನ್ನು ವಿಧ್ಯಾರ್ಥಿಗಳಿಗೆ ಮೊದಲು ತಿಳಿಸಿಕೊಡುವ ಏರ್ಪಾಟಾಗಬೇಕು. ಇದರ ಬಗ್ಗೆ ಒಳ್ಳೆ ಗ್ರಂಥಗಳು ಪ್ರಕಟವಾಗಿವೆ. ವೇಳೆ ಉಳಿದರೆ ವಚನ, ಸಾಂಗತ್ಯ- ತ್ರಿಪದಿ-ಷಟ್ಪದಿಗಳ ಛಂದಸ್ಸನ್ನೂ ತಿಳಿಸಿಕೊಡಬಹುದು.
ಅಲಂಕಾರಗಳ ವಿಷಯದಲ್ಲಿಯೂ ಕೆಲವು ಮೂಲಭೂತ ವಿವರಣೆಗಳೂ ಅವಶ್ಯವಾಗಿವೆ. ಅಲಂಕಾರಿಕ ಭಾಷೆ ಎಂದರೇನು? ಅದು ವ್ಯಾವಹಾರಿಕ ಹಾಗು ಶಾಸ್ತ್ರೀಯ ಭಾಷೆಯಿಂದ ಹೇಗೆ ಭಿನ್ನವಿರುತ್ತದೆ? ಅಲಂಕಾರಗಳಿಗೂ ಹಾಗೂ ಕಲ್ಪಕತೆ ಮತ್ತು ಭಾವನಾಭಿವ್ಯಕ್ತಿಗೂ ಎನು ಸಂಬಂದ? ಈ ಪ್ರಶ್ನೆಗಳನ್ನು ಬಿಡಿಸಿದಾಗ ಮಾತ್ರ ಅಯ್ದ ಕೆಲ ಒಂದು ಅಲಂಕಾರಗಳ ವಿವರಣೆಗೆ ಅರ್ಥ ಬರುತ್ತದೆ.
ಒ. ಲೇಖನ ಕಾರ್ಯ: ಕನ್ನಡವನ್ನು ಪ್ರಥಮ ಭಾಷೆಯಾಗಿ ಅಭ್ಯಸಿಸಿದ ವಿದ್ಯಾರ್ಥಿಗಳಿಂದ ಯಾವ ಮಟ್ಟದ ಬರವಣಿಗೆಯನ್ನು ನಿರೀಕ್ಷಿಸಬಹುದು? ಇದರ ತರಹಗಳನ್ನು ಮುಂದೆ ಕಾಣೆಸಿದೆ:-
೧. ಉಪಪಠ್ಯ ಪುಸ್ತಕದಿಂದ ಉದ್ಧತವಾದ ಒಂದು ಭಾಗವನ್ನು ಅದರ ಸಾರಕೆಡದಂತೆ ಸಂಕ್ಷೇಪಿಸುವುದೆ.
೨. ಆ ಪುಸ್ತಕದಿಂದಾಯ್ದ ಒಂದು ಸೂತ್ರದ ಸಾರವನ್ನು ವಿಸ್ತಾರವಾಗಿಸಿ ಬರೆಯುವುದು.
೩. ಸಾಮಾನ್ಯ ವಿಷಯಗಳ ಮೇಲಿನ ವಿಚಾರಪೂರ್ಣ ನಿಭಂದಗಳು ಇಲ್ಲವೆ ಅಂತರಂಗವನ್ನು ತೆರೆದು ಬರೆಯುವ ಪ್ರಭಂದಗಳು.
೪. ಪಠ್ಯೇತರ ಪದ್ಯಗಳ ಸಾರಗ್ರಹಣ, ರಸಗ್ರಹಣ, ವಿವರಣೆ, ಇತ್ಯದಿ.
೫. ಸ್ವತಂತ್ರ ಕಥೆ, ವರ್ಣನೆ, ಪ್ರವಾಸ ಕಥನ, ನಿತ್ಯಾನುಭವ ನಿರೂಪಣ, ಇತ್ಯಾದಿ.
೬. ಆಡಳಿತ ಇಲ್ಲದೆ ವ್ಯವಹಾರವನ್ನು ಕುರಿತ ಬರವಣೆಗೆ: ಮನವಿ, ವರದಿ ಇತ್ಯಾದಿ.
೭. ಒಂದು ಸರ್ವ ಸಾಮಾನ್ಯ ಐತಿಹಾಸಿಕ, ಸಾಮಾಜಿಕ, ರಾಜಕೀಯ, ಆರ್ಥಿಕ ಇಲ್ಲವೆ ವೈಜ್ಞಾನಿಕ ವಿಷಯದ ಮೇಲೆ ಪ್ರಭಂದ.

ದ್ವಿತೀಯ ಭಾಷೆ: ಇದು ನಮ್ಮ ಸಲಹೆಯ ಪ್ರಕಾರ ಅಧುನಿಕ ಭಾರತೀಯ ಭಾಷೆಗಳಲ್ಲಿ ಒಂದಾಗಬಹುದು. ಇಂಗ್ಲೀಷಾಗಬಹುದು, ಸಂಸ್ಕೃತ ಮೊದಲಾದ ಪ್ರಾಚೀನ ಭಾಷೆಗಳಲ್ಲಿ ಒಂದಾಗಬಹುದು. ಇದಕ್ಕೆ ಅಂಕಗಳು ೧೦೦. ಹೀಗೆ ಆಯ್ದುಕೊಂಡ ಭಾಷೆಯನ್ನು ಕಲಿಸಲು ಯಾವ ಗುರಿಗಳನಿಟ್ಟುಕೊಳ್ಳಬೇಕು? ಗುರಿಗಳನ್ನು ಹೀಗೆ ನಿರ್ದಿಷ್ಟಗೊಳಿಸಬಹುದು:

ಅ. ಬಳಕೆ ಮಾತಿನ ಹಾಗೂ ರೆಡಿಯೊ ಭಾಷಣಗಳ ಅರ್ಥಗ್ರಹಣ, ಘಟನೆಗಳು ಮಾಡಿದ ವರ್ಣನೆಗಳು ಇಲ್ಲವೆ ಟೀಕೆ ಟಿಪ್ಪಣಿಗಳು ಹಾಗು ವಿಚಾರಗಳ ಕ್ರಮಾನುಗ್ರತಿ: ಇವುಗಳ ಅರ್ಥ ಮಾಡಿಕೊಳ್ಳುವದು.
ಆ. ವಾಕ್ಯಗಳನ್ನು ಹಾಗೂ ಉದ್ಧೃತ ಗದ್ಯ ಭಾಗಗಳ ಅರ್ಥವನ್ನು ತಿಳಿದುಕೊಂಡು ಸ್ಪಷ್ಟವಾಗಿ ಓದುವದು: ಕವಿತಗಳನ್ನು ಅವುಗಳ ತಾಳಲಯ ಹಾಗೂ ಉಚಿತ ಸ್ವರ ಭಾರ ಇಲ್ಲವೆ ಕಾಕುವನ್ನು ಲಕ್ಷಿಸಿ ಹೇಳುವದು.
ಇ. ಪುಸ್ತಕ ಸಂಗ್ರಹಾಲಯದಲ್ಲಿಯ ಪುಸ್ತಕಗಳನ್ನೂ ಮಾಸಿಕಗಳನ್ನೂ ವೃತ್ತಪತ್ರಿಕೆಗಳನ್ನೂ ಓದಲು ನೈಜ ಲವಲವಿಕೆಯನ್ನು ಬೆಳೆಸಿಕೊಳ್ಳುವುದು.
ಈ. ಮೊದಲು ಓದಿಕೊಳ್ಳದೆ ಇದ್ದ ಉದ್ಧತ ಭಾಗಗಳ ಅರ್ಥಗ್ರಹಣ ಇಲ್ಲವೆ ಸಾರಗ್ರಹಣವನ್ನು ಕುರಿತು ಪ್ರಶ್ನೆಗಳಿಗೆ ಉತ್ತರಗಳನ್ನು ಬರೆಯುವದು: ಅರ್ಧಮರ್ಧ ಸೂಚಿಸಿದ ಇಲ್ಲವೆ ತುಣುಕು ತುಣುಕಾಗಿ ಕೊಟ್ಟ ಕಥೆಗಳಲ್ಲಿ ಬಿಟ್ಟಿರುವ ವಿವರಗಳನ್ನು ತುಂಬುವದು ಇಲ್ಲವೆ ಸಂಪೂರ್ಣವಾಗಿಸಿ ಮುಕ್ತಾಯಗೊಳಿಸುವದು: ಖಾಸಗಿ ಪತ್ರಗಳನ್ನು ಇಲ್ಲವೆ ಅನೌಪಚಾರಿಕ ಆಮಂತ್ರಣಗಳನ್ನು ಬರೆಯುವದು: ಜಾಹಿರಾತು ಕೊಟ್ಟ ಹುದ್ದೆಗಳಿಗಾಗಿ ಅರ್ಜಿಗಳನ್ನು ಬರೆಯುವದು: ಎಲ್ಲರಿಗೂ ಗೊತ್ತಿರುವ ವಿಷಯಗಳ ಮೇಲೆ ಚಿಕ್ಕ ಚಿಕ್ಕ ಪ್ಯಾರಾಗಳನ್ನು ಬರೆಯುವದು ಸಾಧ್ಯವಿದ್ದರೆ ಚಿಕ್ಕ ನಿಬಂಧಗಳನ್ನು ಬರೆಯುವದು.
ಉ. ವ್ಯಾಕರಣ:- ಪ್ರತಿ ನಿತ್ಯದ ಬಳಕೆ ಮಾತಿನಲ್ಲಿ ಹಾಗೂ ಬರೆಹದಲ್ಲಿ ಬಳಸಲಾಗುತ್ತಿರುವ ಮುಖ್ಯ ಭಾಷಾರೂಡಿಯ ಜೀವಾಣುಗಳನ್ನು (ಹಳೆಯ ಮಾತಿನಲ್ಲಿ ಹೇಳುವುದಾದರೆ ವಿವಿಧ ವ್ಯಾಕರಣ ನಿಯಮಗಳನ್ನು) ಕ್ರಿಯಾತ್ಮಕ ವ್ಯಾಕರಣದಲ್ಲಿ ವಿದ್ಯಾರ್ಥಿಗಳಿಗೆ ಮಾತಿನಲ್ಲಿಯೂ ಬರೆಹದಲ್ಲಿಯೂ ಮನದಟ್ಟಾಗುವಂತೆ ಅವುಗಳನ್ನು ಉಚಿತ ಉದ್ಧೃತ ಇಲ್ಲವೆ ಕಲ್ಪಿತ ಉದಾಹರಣೆಗಳೊಡನೆ ಕಲಿಸಬೇಕು. ಇದೇ ರೀತಿಯಾಗಿ ಸರ್ವಸಾಮಾನ್ಯವಾಗಿ ಮಾತು ಹಾಗೂ ಬರೆಹದಲ್ಲಿದ್ದ ಶಬ್ದಗಳು ಮಕ್ಕಳಿಗೆ ಅನಾಯಾಸ ಉಪಯೋಗಿಸಲು ಬರುವಂತೆ ಅವರು ಅಭ್ಯಸಿಸುವ ಗದ್ಯ-ಪದ್ಯದಲ್ಲಿ ಕಾಣೆಸಿಕೊಳ್ಳುತ್ತಿರಬೇಕು. ಇಂಗ್ಲಿಷಿನಲ್ಲಿ ಇಂಥ ಶಬ್ದಗಳು ಸುಮಾರು ೩೦೦೦ ಇವೆಯೆಂದು ತಜ್ಞರು ಕಂಡುಹಿಡಿದಿದ್ದಾರೆ.
ಊ. ಗದ್ಯ-ಪದ್ಯ ಸಂಗ್ರಹವನ್ನೂ ಒಂದು ಉಪ ಪಠ್ಯ ಪುಸ್ತಕವನ್ನೂ ವಿದ್ಯಾರ್ಥಿಗಳು ಅಭ್ಯಸಿಸುತ್ತಾರೆ.
ಋ. ಸಾಧ್ಯವಿದ್ದರೆ ಸಾದಾ ವಿಷಯಗಳನ್ನು ಕುರಿತು ಕಲಿತ ಭಾಷೆಯಲ್ಲಿ ಮಾತನಾಡುವುದು: ಸಂಭಾಷಣೆಯನ್ನು ಹಾಗೂ ಲೇಖನವನ್ನೂ ಉಳಿದ ಆಧುನಿಕ ಭಾಷೆಗಳ ವ್ಯಾಸಂಗದಲ್ಲಿ ನಿರೀಕ್ಷಿಸಬಹುದು. ಇಂಗ್ಲಿಷಿನಲ್ಲಿ ಇದು ಸುಲಭಸಾಧ್ಯವಲ್ಲ. ಆ ವಿಷಯವನ್ನು ಮುಂದೆ ಚರ್ಚಿಸಿದೆ.

ಇಂಗ್ಲೀಷು ಇವತ್ತಿಗೆ ಜಾಗತಿಕ ಭಾಷೆಯಾಗಿದೆ. ಅದರ ಹೊಟ್ಟೆಯಲ್ಲಿ ಅನೇಕ ಉಪ ಭಾಷೆಗಳಿವೆ: ಲಂಡನ್ ಡೈಯಲೆಕ್ಟ್, ಸ್ಕೌಟ್ಸ್, ಯಾಃರ್ಕ್‌ಷೈರ್ ಡೈಯಲೆಕ್ಟ್ ಮುಂತಾಗಿ. ಆದರೆ ಇಂಗ್ಲೀಷು ತಳೆದ ಜಾಗತಿಕ ರೂಪದಲ್ಲಿ ಅಮೇರಿಕನ್, ಆಸ್ಟ್ರೇಲಿಯನ್, ಸೌತ್ ಆಫ್ರಿಕನ್, ಕನೇಡಿಯನ್ ಮುಂತಾದ ಪ್ರಕಾರಗಳಿವೆ. ಇಂಗ್ಲೆಂಡಿನ ಜನ ಜಗತ್ತಿನ ಬೇರೆಬೇರೆ ಭಾಗಗಳಿಗೆ ಹೋಗಿ ಅಲ್ಲಿ ನೆಲೆಸಿದಂತೆ ಅಲ್ಲಿಯ ಪರಿಸರದಂತೆ ಕೆಲವು ಪರಿವರ್ತನೆಗಳನ್ನು ಹೊಂದಿದ ಇಂಗ್ಲೀಷುಗಳು ಇವು, ಇಂಗ್ಲಿಷ್- ಇಂಗ್ಲಿಷ್, ಆಫ್ರಿಕನ್-ಇಂಗ್ಲಿಷ್ ಎಂದು ಬೇರೆಬೇರೆ ಜನಾಂಗಗಳು ತಮ್ಮ ದೇಶೀಯ ಭಾಷೆಗಳ ಜೊತೆಗೆ ರಾಜಕೀಯ ಕಾರಣಗಳ ಸಲುವಾಗಿ ಕಲಿತು ಇಂದಿಗೂ ಉಳಿಸಿಕೊಂಡ ಇಂಗ್ಲಿಷುಗಳು ತುಸು ಭಿನ್ನವಾಗಿವೆ. ಇವಕ್ಕೆ ಸ್ವತಂತ್ರ ಪ್ರಕ್ರಿಯೆಯಿಲ್ಲ. ಇವುಗಳ ವ್ಯಾಕರಣ ಇಲ್ಲವೆ ತಿರುಳುನುಡಿಗಳು ಇಂಗ್ಲಿಷಿನ ಸ್ವತಂತ್ರ ಪ್ರತಿಭೆ ಹಾಗೂ ಉತ್ಪಾದಕ ಶಕ್ತಿಯೆದ್ದ ದೇಶಗಳಿಂದ ಮಾತ್ರ ಬರಬಲ್ಲವು. ಅಲಂಕಾರಗಳು, ಅಲ್ಲಲ್ಲಿ ಕೆಲವು ಶಬ್ದಗಳನ್ನು ಮಾತ್ರ ದೇಶೀಯ ಭಾಷೆಗಳು ತಮ್ಮತಮ್ಮ ಇಂಗ್ಲಿಷುಗಳಲ್ಲಿ ಸೇರಿಸಿಕೊಳ್ಳಬಲ್ಲವು.

ಹೀಗಾಗಿ ಇಂಗ್ಲಿಷನ್ನು ಒಂದು ಇತಿಯಾದ ಭಾಷೆಯೆಂದು ಕಲಿತುಕೊಡು ಅದನ್ನು ತಿಳಿದು, ಮಾತನಾಡಿ, ಬರೆದು ಓದಿ ಗ್ರಹಿಸಿಕೊಳ್ಳುವ ಅನೇಕ ಮುಖ ಪ್ರಕ್ರಿಯೆಯು ಇಂದು ಕಷ್ಟಕರವಾಗಿದೆ. ಕಾರಖಾನೆಗಳ ಇಂಗ್ಲಿಷು, ಇಂಜನಿಯರಿಂಗ್ ಇಂಗ್ಲಿಷು, ಕೋರ್ಟು ಕಚೇರಿಗಳ ಇಂಗ್ಲಿಷು, ವೈದಕೀಯ ಇಂಗ್ಲಿಷು-ಹೀಗೆ ಭಿನ್ನ ಭಿನ್ನ ಪ್ರಕಾರದ ಇಂಗ್ಲಿಷುಗಳು ‘ಟೇಪ್’ ಆಗಿ ದೊರೆಯುತ್ತವೆ, ಅದೇ ಪ್ರಕಾರ ಬಳಕೆಮಾತಿನ ಇಂಗ್ಲಿಷು, ಬರವಣೆಗೆಯ ಇಂಗ್ಲಿಷು, ಅರ್ಥಗ್ರಹಣ ಇಂಗ್ಲಿಷು: ಹೀಗೆ ವಿವಿಧ ಇಂಗ್ಲಿಷುಗಳ ಪಠ್ಯಕ್ರಮಗಳು (೩ ತಿಂಗಳು-೪ ತಿಂಗಳಿನ ಸರ್ಟಿಫಿಕೆಟ್ ಇಲ್ಲವೆ ಡಿಪ್ಲೊಮಾ ಕೋರ್ಸ್‌ಗಳು) ಜಗತ್ತಿನ ತುಂಬ ಹರಡಿಕೊಂಡಿವೆ.

ಇಂಗ್ಲಿಷ್ ಮಾತೃಭಾಷೆಯೆಂದು ಮಾತನಾಡುವವರೇ ಇಲ್ಲದಾಗಿ ಭಾರತೀಯರೂ ಕ್ರಮೇಣ ಇಂಗ್ಲಿಷಿನಿಂದ ದೂರವಾಗುತ್ತಿರುವಾಗ ಶಾಲೆ-ಕಾಲೇಜುಗಳಲ್ಲಿ ಮೊದಲಿನಂತೆ ಇಂಗ್ಲಿಷು ಕಲಿತು ಇಂಗ್ಲಿಷಿನ ಮೇಲೆ ಸರ್ವಾಂಗೀಣ ಪ್ರಭುತ್ವವನ್ನು ಸ್ಥಾಪಿಸುವೆವೆನ್ನುವದು ಕನಸಿನಲ್ಲಿ ಮಂಡಿಗೆ ತಿಂದಂತೆಯೇ ಸರಿ. ಸಾರಗ್ರಹಣಕ್ಕೆ ನೆರವಾಗುವಷ್ಟು ಇಂಗ್ಲಿಷನ್ನು ನಾವು ಹೈಸ್ಕೂಲುಗಳಲ್ಲಿ ಕಲಿಯಬಹುದು. ಇದರಿಂದ ಇಂಗ್ಲಿಷಿನಲ್ಲಿ ಪುಸ್ತಕಗಳನ್ನು ಓದಿಕೊಳ್ಲಲು ಸಹಾಯವಾಗುವದು. ಇಂಗ್ಲಿಷನ್ನು ಹೆಚ್ಚಿನ ಜ್ಞಾನಾರ್ಜನೆಗಾಗಿ ಕನ್ನಡದಲ್ಲಿ ಭಾಷಾಂತರವಾಗಿದಿದ್ದ ಪುಸ್ತಕ ಓದಲು ಇಲ್ಲವೆ ಸೇರ್ಪಡೆಯಾಗದ ಜ್ಞಾನವನ್ನು ಪಡೆಯಲು ಉಪಯೋಗಿಸಬಹುದು. ಸಾಧ್ಯವಿದ್ದಷ್ಟು ಮಾತು-ಬರೆಹ ಸಾಧಿಸಬಹುದು. ಇದಕ್ಕೂ ಹೆಚ್ಚಿಗೆ ಇಂಗ್ಲಿಷನ್ನು ಹೈಸ್ಕೂಲು ಪಠ್ಯ ಕ್ರಮದಿಂದಲೇ ಸಂಪಾದಿಸಲು ಬಯಸುವದು ಸಾಹಸವೇ ಸರಿ. ಅಂತಹ ಶುದ್ಧ ಮಾತು-ಬರೆಹಗಳು ಶಿಕ್ಷಕರಿಗೇ ಸಾಧಿಸಿರುವುದಿಲ್ಲ. ಇಂದಿನ ಇಂಗ್ಲಿಷಿನಲ್ಲಿ ಬಳಕೆ ಮಾತು-ಬರೆಹಗಳನ್ನು ಕಲಿಯಲು ಮುಂಜಾನೆಯ ಇಲ್ಲವೆ ಸಾಯಂಕಾಲದ ಸರ್ಟಿಫಿಕೆಟ್ ಇಲ್ಲವೆ ಡಿಪ್ಲೊಮಾ ಪಠ್ಯಕ್ರಮಗಳನ್ನು ಅನುಸರಿಸಿ ಪರೀಕ್ಷೆಗೆ ಕುಳಿತುಕೊಳ್ಳಬೇಕು.

ಇಂಗ್ಲಿಷನ್ನೇ ಮಾಧ್ಯಮವಾಗಿ ಬಳಸುವ ಶಾಲೆಗಳು ಬೆಳೆಯುತ್ತಿವೆ; ಹುಟ್ಟುತ್ತಲಿವೆ. ನಗರಗಳಲ್ಲಿ ಇಂತಹ ಶಾಲೆಗಳಲ್ಲಿಯ ವಿದ್ಯಾರ್ಥಿಗಳು ಒಂದು ತರಹದ ಉಚ್ಚಾರದ ಇಂಗ್ಲಿಷನ್ನು ಮಾತನಾಡುತ್ತಾರೆ. ಅವರ ಮನೆಮಾತುಗಳು ಬೇರೆಬೇರೆ ಭಾಷೆಗಳಾಗಿರುವುದರಿಂದ ಇಂತಹ ವಿದ್ಯಾರ್ಥಿಗಳು ಒಂದೆಡೆ ಸೇರಿ ಸಂಭಾಷಣೆ ನಡೆಸಲು ಇಂಗ್ಲಿಷು ಸಹಾಯವಾಗುತ್ತದೆ. ಆದರೆ ಇಂಗ್ಲಿಷು ಮಾಧ್ಯಮವಿದ್ದಮಾತ್ರಕ್ಕೆ ಇಂಗ್ಲಿಷು ಚೆನ್ನಾಗಿ ಬರುವದೆಂದು ತಿಳಿಯುವದು ಭ್ರಮೆಯಲ್ಲದೆ ಬೇರೆ ಅಲ್ಲವೆಂದು ಹಿಂದೆ ಹೇಳಿದ್ದೇವೆ. ಅಲ್ಲದೆ ಪ್ರಾದೇಶಿಕ ಭಾಷೆಯ ಹಾಗೂ ಮಾತೃಭಾಷೆಯ ಜ್ಞಾನವಿಲ್ಲದೆ ಇಂತಹ ವಿದ್ಯಾರ್ಥಿಗಳು ತಮ್ಮ ಸಂಸ್ಕೃತಿಗೆ ದೂರವಾಗಿ ಉಳಿಯುವದಲ್ಲದೆ ಕ್ರಿಯಾತ್ಮಕ ಶಿಕ್ಷಣ ಕ್ರಮದಿಂದಲೇ ದೂರವಾಗುತ್ತಾರೆ. ಮಂಜು ಬೆಳಕಿನಲ್ಲಿ ಕಾರಿನ ಹೆಡ್‌ಲೈಟುಗಳಂತೆ ವಿಚಾರಗಳು ದೀರ್ಘವಾದರೂ ಸತ್ವಹೀನವಾಗಿ ಅವರ ಕಣ್ಣೆದುರಿಗೆ ಹಾಯುತ್ತವೆ. ಇಂಗ್ಲಿಷು ಹೀಗೆ ಮಾಧ್ಯಮವಿದ್ದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿಯೂ ೩ನೆಯ ಇಯತ್ತೆಯಿಂದ ಪ್ರಾರಂಭಿಸಿ ಪ್ರತಿಯೊಂದು ಇಯತ್ತೆಗೆ, ಉಳಿದ ಭಾಷೆಗಳು ಮಾಧ್ಯಮವಿದ್ದ ಶಾಲೆಗಲಲ್ಲಿಯಂತೆ, ಕನ್ನಡ ಕಲಿಸಿ ೪ನೆ ಇಯತ್ತೆಯಿಂದ ೧೦ನೆ ಇಯತ್ತೆ (ಅಂದರೆ ಎಸ್.ಎಸ್.ಎಲ್.ಸಿ) ಮುಗಿಯುವವರೆಗೆ ೧೫೦ ಅಂಕಗಳ ಕನ್ನಡವನ್ನು ಕಡ್ಡಾಯವಾಗಿ ಕಲಿಸುವಂತಾಗಿರಬೇಕು.

ಒಟ್ಟಾರೆ ದ್ವಿತೀಯ ಭಾಷಯಾಗಿ ಒಂದು ಆಧುನಿಕ ಭಾಷೆಯನ್ನು ಅಭ್ಯಸಿಸುವಾಗ ವಿದ್ಯರ್ಥಿಯ ಗುರಿಗಳೇನು? ಈ ಮೊದಲೇ ಸ್ಪಷ್ಟಪಡಿಸಿದಂತೆ ಸಾರಗ್ರಹಣ, ಅರ್ಥಗ್ರಹಣಗಳು ಇಲ್ಲಿಯ ಭಾಷಾಭ್ಯಾಸದ ಮುಖ್ಯ ಗುರಿಯಾಗುತ್ತವೆ. ಗೊತ್ತುಪಡಿಸಿದ ಪಠ್ಯ ಪುಸ್ತಕಗಳನ್ನು ಸಹ ಈ ಭಾಷಾದೃಷ್ಟಿಯಿಂದ ಅಭ್ಯಸಿಸಬೇಕಾಗುತ್ತದೆ ರಸಾನುಭವ-ತಂತ್ರ-ಅಲಂಕಾರ-ತಾಳಲಯ ಮೊದಲಾದ ಸಾಹಿತ್ಯಕ ದೃಷ್ಟಿಗಳು ಇಲ್ಲಿ ಅಪ್ರಸ್ತುತವಾಗುತ್ತವೆ. ಸಂಭಾಷಣೆ-ಬರೆಹಗಳು ಆಧುನಿಕ ಭಾರತೀಯ ಭಾಷೆಗಳಲ್ಲಿ ಸಾಧ್ಯವಾಗಬಲ್ಲವು. ಆದರೆ ಇಲ್ಲಿ ತನ್ನ ಪರಿಸರವೇ ಇಲ್ಲದ ಇಂಗ್ಲೀಷು ಭಾಷೆಯನ್ನು ಕಲಿಯಬೇಕಾದಾಗ ಮಾತ್ರ ದೋಷಯುಕ್ತವಾದ ಸಂಭಾಷಣೆ ಹಾಗೂ ಬರೆಹ ಮಾತ್ರ ಸಾಧ್ಯವಾಗಬಹುದು.

ಒಂದು ಪ್ರಾಚೀನ ಭಾಷೆಯನ್ನು ದ್ವಿತೀಯ ಭಾಷೆಯೆಂದು ಅಭ್ಯಾಸಕ್ಕೆ ತೆಗೆದುಕೊಂಡಾಗ ಅಭ್ಯಾಸದ ಗುರಿ ಮೇಲಿನ ಗುರಿಗಳಿಗಿಂತ ಬೇರೆಯಾಗುತ್ತದೆ. ಇಲ್ಲಿಯ ಗುರಿಗಳನ್ನು ಹೀಗೆ ಉಲ್ಲೇಖಿಸಬಹುದು.
೧. ಸಂಸ್ಕೃತ ವ್ಯಾಕರಣದ ಮೂಲತತ್ವ ಹಾಗು ರೂಡಿಗಳನ್ನು ವಿದ್ಯಾರ್ಥಿಗಳಿಗೆ ಚೆನ್ನಾಗಿ ತಿಳಿಸಿಕೊಡುವುದು.
೨. ತನ್ನ ಪ್ರಾದೇಶಿಕ ಭಾಷೆಯನ್ನು ಇನ್ನಿಷ್ಟು ಚೆನ್ನಾಗಿ ತಿಳಿದುಕೊಳ್ಳುವಂತೆ ಆ ಭಾಷೆಯಲ್ಲಿದ್ದ ತತ್ಸಮ ಶಬ್ದಗಳು ಹಾಗು ಆಗಿರಬಹುದಾದ ಅವುಗಳ ಅರ್ಥಾಂತರ ಇಲ್ಲವೆ ರೂಪಾಂತರ, ಸಂಸ್ಕೃತ ವಾಕ್ಯರಚನೆ, ಸಂಧಿ, ಸಮಾಸ ಮೊದಲಾದ ವಿಶಿಷ್ಟ ಪ್ರಯೋಗಗಳನ್ನು ತಿಳಿಸಿಕೊಡುವದು. (ಈ ವಿಷಯವನ್ನು ಕುರಿತು ಹೊಸತಾಗಿ ಒಂದು ಪುಸ್ತಕವನ್ನು ಬರೆಯಿಸಬೇಕು.)
೩. ಸಂಸ್ಕೃತ ಗದ್ಯ-ಪದ್ಯಗಳನ್ನು ಶುದ್ಧವಾಗಿ ದೋಷರಹಿತವಾಗಿ ಓದಲು ಕಲಿಸಬಹುದು.
೪. ಸಂಸ್ಕೃತ ಭಾಷೆ ಹಾಗು ಸಾಹಿತ್ಯದ ವಿವಿಧ ಹಂತಗಳ ಸೌಂದರ್ಯವನ್ನು ಉದಾಹರಿಸುವ ಸುಲಭ ಉದ್ಧೃತ ಭಾಗಗಳನ್ನು ವೇದೋಪನಿಷತ್ತು, ಪುರಾಣ, ಮಹಾಕಾವ್ಯ ನಾಟಕ, ಕಥೆ, ಗದ್ಯ, ಗೀತಕಾವ್ಯ, ಸುಭಾಷಿತ ಮೊದಲಾದ ಸಾಹಿತ್ಯ ಪ್ರಕಾರಗಳಿಂದ ಆಯ್ದು ಅವುಗಳ ದ್ವಾರಾ ಈ ಸೌಂದರ್ಯಾನುಭವವನ್ನು ವಿದ್ಯಾರ್ಥಿಗಳಿಗೆ ತಂದುಕೊಡುವುದು.
೫. ಸಂಸ್ಕೃತದಿಂದ ಕನ್ನಡಕ್ಕೆ ಒಂದು ಉದ್ಧೃತಭಾಗವನ್ನು ಭಾಷಾಂತರಿಸುವುದು.
೬. ಭಾರತೀಯ ಸಂಸ್ಕೃತಿಯ ಸ್ಪಷ್ಟ ಕಲ್ಪನೆ ಬರುವಂತೆ ಅಭ್ಯಾಸಕ್ಕೆ ಗದ್ಯ-ಪದ್ಯ ಭಾಗಗಳನ್ನು ಆಯ್ದುಕೊಳ್ಳುವುದು.

ಇಲ್ಲಿ ಪ್ರಾಚೀನ ಭಾಷೆಯೊಂದನ್ನು ಅಭ್ಯಸಿಸುವಾಗ ಸಂಭಾಷಣೆ ಇಲ್ಲವೆ ಬರೆಹದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅರ್ಥಗ್ರಹಣ ಇಲ್ಲವೆ ರಸಗ್ರಹಣಕ್ಕೇನೆ ಇಲ್ಲಿ ಹೆಚ್ಚಿನ ಪ್ರಾದಾನ್ಯವಿದೆ. ಉಳಿದ ಭಾಷೆಗಳ ಅಭ್ಯಾಸದಲ್ಲಿ ಕಂಡುಬರುವ ಈ ಎರಡು ನೈಪುಣ್ಯಗಳು (ಸ್ಕಿಲ್ಲ್ಸ್) ಪ್ರಾಚೀನ ಭಾಷೆಯ ಅಭ್ಯಾಸದಲ್ಲಿ ಇಲ್ಲವಾದಕಾರಣ ಅಭ್ಯಾಸವನ್ನು ಸರಿಸಮ ಮಟಕ್ಕೆ ತರಲು ಈ ಕೆಳಗನ ಅಂಶಗಳನ್ನು ಉಪಯೋಗಿಸಲಾಗುವದು.

ಅ. ಅರ್ಥ-ರಸ-ಗ್ರಹಣಕ್ಕಾಗಿ ವಿವಿಧ ಸಾಹಿತ್ಯ ಪ್ರಕಾರಗಳಿಂದ ಗದ್ಯ-ಪದ್ಯ ಆಯ್ದುಕೊಳ್ಳುವದು.
ಆ. ಒಂದು ಸುಲಭ ಸಂಸ್ಕೃತ ಗದ್ಯವನ್ನು ಉಪಪಠ್ಯವನ್ನು ಗೊತ್ತುಪಡಿಸ ಬೇಕು. ಅಲ್ಲದೆ ಹೆಚ್ಚಿನ ಪ್ರಶ್ನೆಗಳನ್ನು ಅರ್ಥಗ್ರಹಣದಲ್ಲಿ ಕೇಳಿ ರಸಗ್ರಹಣವನ್ನು ಕುರಿತು ಒಂದೋ ಎರಡೋ ಇರಬಹುದು.
ಇ. ಛಂದಸ್ಸಿನ ಅಭ್ಯಾಸ.
ಈ. ಅಲಂಕಾರ ಇತ್ಯಾದಿ ಸಾಹಿತ್ಯಾಂಶಗಳ ಅಭ್ಯಾಸ.
ಸಂಭಾಷಣೆ ಹಾಗು ಸಂಸ್ಕೃತ ಲೇಖನ ವಿದ್ಯೆಯ ವಿಷಯಗಳಿಗಾಗಿ ಪಾಠಶಾಲೆಗಳ ಪರಂಪರೆಯ ಏರ್ಪಾಟಿದೆ. ಅಲ್ಲದೆ ಸ್ನಾತಕೋತ್ತರ ಸಂಸ್ಕೃತದ ಅಭ್ಯಾಸಕ್ರಮದಲ್ಲಿ ಒಂದು ಐಚ್ಛಿಕ ಪೇಪರನ್ನು ಸಂಭಾಷಣಿರ-ಲೇಖನಗಳಿಗಾಗಿಯೇ ಇಡಬಹುದು.
ಈಚೆಗಿನ ಸಂಸ್ಕೃತ ಸಾಹಿತ್ಯದ ಗದ್ಯ-ಪದ್ಯ ಭಾಗಗಲನ್ನು ಅಭ್ಯಸಕ್ರಮಕ್ಕಾಗಿ ಒಂದೊ ಎರಡೋ ಉದ್ಧರಗಳನ್ನು ಆಯಿದರಬೇಕಲ್ಲದೆ ಅದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಇಂದಿನ ಸಂಸ್ಕೃತ ಸೇರ್ಪಡೆಯಾಗಿರುವ ಕಾರಣವಿಲ್ಲ. ಇಂದಿನ ಸಂಸ್ಕೃತ ಸಾಹಿತ್ಯವನ್ನು ಮೀರಿದ ಸಾಹಿತ್ಯ ಪ್ರತಿಯೊಂದು ಅಧುನಿಕ ಭಾರತೀಯ ಭಾಷೆಯಲ್ಲಿ ದೊರೆಯುತ್ತದ. ಸಂಸ್ಕೃತವು ಜಗನ್ಮಾನ್ಯವಾಗಿರುವದು ಅದರಲ್ಲಿರುವ ಪ್ರಾಚೀನ ಸಾಹಿತ್ಯಕ್ಕೋಸ್ಕರ.
ಉಳಿದ ಪ್ರಾಚೀನ ಭಾಷೆಗಳು
ದ್ವಿತೀಯ ಭಾಷೆಗಳೆಂದು ಇವುಗಳ ಅಭ್ಯಾಸವನ್ನು ಸಹ ಸಂಸ್ಕೃತದ ಅಭ್ಯಾಸದ ಮಾದರಿಯ ಮೇಲೆ ಏರ್ಪಡಿಸಬಹುದು.

ತೃತೀಯ ಭಾಷೆ
ಕನ್ನಡ, ಉಳಿದ ಅಧುನಿಕ ಭಾರತೀಯ ಭಾಷೆಗಳಲ್ಲಿ ಒಂದು ಇಂಗ್ಲಿಷು ಇಲ್ಲವೆ ಪ್ರಾಚೀನ ಭಾಷೆಗಳಲ್ಲಿ ಒಂದು ತೃತೀಯ ಭಾಷೆಯಾಗಬಹುದು.
ಸಮಿತಿಯ ಸಲಹೆಯ ಪ್ರಕಾರ ಕನ್ನಡವು ಆಡಳಿತದ ಸೌಕರ್ಯಕ್ಕಾಗಿ ಮಾತ್ರ ೧೯೮೫-೮೬ರವರೆಗೆ ತೃತೀಯ ಇಲ್ಲವೆ ದ್ವಿತೀಯ ಭಾಷೆಯಾಗುವದು. ೧೯೮೬-೮೭ ರಿಂದ ಕನ್ನಡೇತರ ವಿದ್ಯಾರ್ಥಿಗಳಿಗೂ ಅದು ಪ್ರಥಮ ಭಾಷೆ. ಕನ್ನಡ ವಿದ್ಯಾರ್ಥಿಗಳಿಗಂತೂ ಅದು ೧೯೮೧-೮೨ ರಿಂದಲೇ ಪ್ರಥಮ ಭಾಷೆಯಾಗುವದು.

ತೃತೀಯ ಭಾಷೆಗೆ ೫೦ ಅಂಕಗಳಿವೆ.
ಉಳಿದ ಆಧುನಿಕ ಭಾರತೀಯ ಭಾಷೆಗಳು ತೃತೀಯ ಭಾಷೆಗಳಾದಾಗ ಅವುಗಳಭ್ಯಾಸದ ಗುರಿ ಏನಿರಬೇಕು?
೧. ವೃತ್ತಪತ್ರಿಕೆಗಳನ್ನೂ, ಪತ್ರಗಳನ್ನೂ, ಚಿಕ್ಕಚಿಕ್ಕ ಕಥೆಗಳನ್ನೂ, ಪಠ್ಯಪುಸ್ತಕದಲ್ಲಿರುವ ಸರಳ ಗದ್ಯ-ಪದ್ಯವನ್ನೂ ಓದಿ ಅರ್ಥಮಾಡಿಕೊಳ್ಳುವ ಶಕ್ತಿಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವದು.
೨. ದೈನಂದಿನ ವ್ಯವಹಾರದಲ್ಲಿ ಆ ಭಾಷೆಯಲ್ಲಿ ಮಾತನಾಡುವ ಅನುಕೂಲವನ್ನು ಮಾಡಿಕೊಡುವದು.
೩. ಆ ಭಾಷೆಯ ವ್ಯಾಕರಣದ ಮೂಲ ತತ್ವ ಹಾಗು ರೂಢಿಗಳನ್ನು ತಿಳಿಸಿಕೊಡುವುದು.
೪. ಅರ್ಜಿಗಳನ್ನು ಬರೆಯುವುದು, ಪತ್ರಗಳು, ಪಠ್ಯಪುಸ್ತಕಗಳಲ್ಲಿಯ ವಿಷಯಗಳ ಮೇಲೆ ಒಂದೆರಡು ಪ್ಯಾರಾಗಳು, ಭಾಷೆಯಲ್ಲಿರುವ ಕೆಲವು ಪ್ಯಾರಗಳ ಭಾಷಾಂತರಗಳು: ಹೀಗೆ ಲೇಖನ ಕಾರ್ಯವನ್ನೆಸಗುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ಪಡೆದಿರಬೇಕು.
೫. ಆ ಭಾಷೆಯಲ್ಲಿ ಮಾಡಿದ ಉಪನ್ಯಾಸಗಳನ್ನು ತಿಳಿದುಕೊಳ್ಳುವ ಯೋಗ್ಯತೆ ಬಂದಿರಬೇಕು.

ಹೀಗೆ ಸಾರಗ್ರಹಣ, ಲೇಖನ, ಉಕ್ತೋಕ್ತಿಯ ಸಾರಗ್ರಹಣ, ಸಂಭಾಷಣಾ ಸೌಲಭ್ಯ ಹಾಗು ಲೇಖನ ಸೌಲಭ್ಯಗಳು ಹಂತಹಂತವಾಗಿ ಸಾಧಿಸುವಂತೆ ಪ್ರೌಢಶಾಲೆಯ ಮೂರು ವರ್ಷಗಳ ಪಠ್ಯಕ್ರಮವನ್ನು ಸುಲಭಾಂಶಗಳಿಂದ ಪ್ರಾರಂಭಿಸಿ ಕಠಿಣವಾದುದನ್ನು ನಾಲ್ಕೂ ಭಾಷಾ ನೈಪುಣ್ಯಗಳಲ್ಲಿ ಕ್ರಮೇಣ ಸೇರಿಸುತ್ತ ಹೋಗಬೇಕು.

ಮಾತನಾಡುವ ಅನುಕೂಲತೆ ಇಂಗ್ಲೀಷಿನಲ್ಲಿ ಮಾತ್ರ ದೋಷರಹಿತವಾಗಿ ಸಾಧಿಸಲಿಕ್ಕಿಲ್ಲ; ಸಾಧ್ಯವಾದಷನ್ನು ಸ್ವಾಗತಿಸಬೇಕು.

ತೃತೀಯ ಭಾಷೆಯ ಸಂಸ್ಕೃತ ಇಲ್ಲವೆ ಇನ್ನೊಂದು ಪ್ರಾಚೀನ ಭಾಷೆಯಿದ್ದಾಗ ಅಭ್ಯಾಸದ ಗುರಿಗಳು ಇನ್ನೂ ಸ್ವಲ್ಪ ಬೇರೆಯಾಗುತ್ತವೆ.
ಲೇಖನಕಾರ್ಯ ಇಲ್ಲಿ ಸಾಧ್ಯವಿಲ್ಲ. ಓದಿದ ಪಠ್ಯಪುಸ್ತಕಗಳೊಳಗಿನ ಒಂದೆರಡು ಪ್ಯಾರಾಗಳನ್ನು ಭಾಷಾಂತರ ಮಾಡಬಹುದು. ಅದಲ್ಲದೆ ವಿದ್ಯಾರ್ಥಿಗಳು ಓದದೇ ಇಲ್ಲ ಅಷ್ಟೇ ಸುಲಭವಾದ ಒಂದು ಉದ್ಧೃತ ಭಾಗದ ಸಾರವನ್ನು ಕನ್ನಡದಲ್ಲಿ ಕೊಡಬಹುದು. ಅಲ್ಲದೆ ಲೇಖನ ಕಾರ್ಯ ಇಲ್ಲವೆ ಸಂಭಾಷಣೆ ಇಲ್ಲಿ ವ್ಯವಹಾರದ ದೃಷ್ಟಿಯಿಂದ ಚಮತ್ಕಾರಿಕವಾಗಬಹುದೇ ಹೊರತು ಬಹುತೇಕ ಪ್ರಯೋಜನಕರವಲ್ಲ.

ಆದರೆ ರೇಡಿಯೋವಾರ್ತೆಗಳ ಅರ್ಥಗ್ರಹಣ, ಸಂಸ್ಕೃತ ಪ್ರವಚನಗಳ ಸಾರಗ್ರಹಣ, ಪಠ್ಯಪುಸ್ತಕಗಳ ಹಾಗು ಉಪಪಠ್ಯ ಪುಸ್ತಕಗಳ ರಸಗ್ರಹಣ ಹಾಗು ಅರ್ಥಗ್ರಹಣ, ಅದೇ ಪಾತಳಿಯ ಭಾಷಾ ಸೌಲಭ್ಯದ ಗದ್ಯ-ಪದ್ಯಗಳ ಅರ್ಥ-ರಸಗ್ರಹಣ: ಇದೆಲ್ಲ ವಿದ್ಯಾರ್ಥಿಗಳಿಗೆ ಸಾಧ್ಯವಾಗಬೇಕು.

ಅಲ್ಲದೆ ಹಲವಾರು ಸಂಸ್ಕೃತ ಪದ್ಯಗಳ ಬಾಯಿಪಾಠ ಮತ್ತು ದೋಷರಹಿತವಾಗಿ ಶಬ್ದಗಳ ಅಕ್ಷರಸಂಯೋಜನೆ (ಸ್ಪೆಲಿಂಗ್) ಹಾಗು ಉಚ್ಚಾರಗಳು ಸಹಜ ಸಾಧ್ಯವಾಗಬೇಕು. ಭಾಷೆಯ ವ್ಯಾಕರಣದ ಸರಳ ತತ್ವ-ರೂಡಿಗಳನ್ನೂ, ಸಂಧಿ ಸಮಾಸಗಳಂತಹ ಘಟಕಗಳನ್ನೂ ಚೆನ್ನಾಗಿ ವಿದ್ಯಾರ್ಥಿಯು ತಿಳಿದುಕೊಂಡಿರಬೇಕು.

ಅಲ್ಲದೆ ಒಂದು ಕೃತಿಯ ರಸವಂತಿಕೆ, ಧ್ವನಿ, ಭಾಷೆಯ ಅಲಂಕಾರಿಕತೆ ಹಾಗು ತಾಳಲಯ, ವಿವಿಧ ಸಾಹಿತ್ಯ ಪ್ರಕಾರಗಳು ತಂತ್ರನೈಪುಣ್ಯ ಮೊದಲಾದ ವಿಷಯಗಳನ್ನು ಕುರಿತು ರಸಾಸ್ವಾದನೆ (ಅಪ್ರಿಸಿಯೇಷನ್) ವಿದ್ಯಾರ್ಥಿಗೆ ಸಾಧ್ಯವಾಗಿರಬೇಕು.
ಉಳಿದ ಪ್ರಾಚೀನ ಭಾಷೆಗಳ ಅಭ್ಯಾಸಕ್ರಮವನ್ನೂ ಇದೇ ರೀತಿಯಾಗಿ ಅಳವಡಿಸಬಹುದು.

ತೃತೀಯ ಭಾಷೆಗೆ ೫೦ ಅಂಕಗಳಿವೆ. ಪ್ರಥಮ ಭಾಷೆಯ ಅಭ್ಯಾಸದಲ್ಲಿ ಒಂದು ಪೂರ್ಣ ದೃಷ್ಟಿಯಿಂದೆ. ಅಲ್ಲಿ ನಾಲ್ಕು ಭಾಷಾ ನೈಪುಣ್ಯಗಳಿಗೂ (ಲ್ಯಾಂಗ್ವೇಜ್ ಸ್ಕಿಲ್ಸ್) ಲಿಖಿತಾರ್ಥಗ್ರಹಣ, ಉತಾರ್ಥಗ್ರಹಣ, ಉಕ್ತಾಭಿವ್ಯಕ್ತಿ, ಲಿಖಿತಾವ್ಯಕ್ತಿ, ವ್ಯಾಕರಣ, ತಿರುಳ್ನುಡಿ, ಸಂಧಿ, ಸಮಾಸ ಮೊದಲಾದ ಭಾಷ ಶಾಸ್ತ್ರಾಂಗಗಳ ತಿಳುವಳಿಕೆಗಳು, ರಸಾನುಭಾವ, ಅಲಂಕಾರಿಕ ಭಾಷೆ, ತಾಳಲಯ ಹಾಗು ಛಂದಸ್ಸು, ತಂತ್ರ, ಸಾಹಿತ್ಯ ಪ್ರಕಾರ ಮೊದಲಾದ ಸಾಹಿತ್ಯಾಂಶಗಳ ಸ್ವಾರಸ್ಯಗ್ರಹಣಕ್ಕೂ ಕೂಡಿಯೇ ಅವಕಾಶವಿದೆ. ದ್ವಿತೀಯ ಭಾಷೆಯ ಅಭ್ಯಾಸದಲ್ಲಿ ನಾಲ್ಕು ಭಾಷಾ ನೈಪುಣ್ಯಗಳನ್ನೂ ವ್ಯಾಕರಣ ಮೊದಲಾದ ಶಾಸ್ತ್ರಾಂಗಗಳನ್ನೂ ದಾಟಿ ನಾವು ಹೋಗುವುದಿಲ್ಲ. ಇಂಗ್ಲಿಷನ್ನು ದ್ವಿತೀಯ ಭಾಷೆ ಎಂದು ಅಭ್ಯಸಿಸಿದಾಗ ಈ ನಾಲ್ಕು ನೈಪುಣ್ಯಗಳೂ ಚೆನ್ನಾಗಿ ಸಾಧಿಸುವುದಿಲ್ಲ. ಲಿಖಿತ ಇಲ್ಲವೆ ಉಕ್ತಾಭಿವ್ಯಕ್ತಿ ಅಲ್ಲಿ ದುಃಖಸಾಧ್ಯವಾಗುತ್ತದೆ. ಸಾಧ್ಯವಿದ್ದಲ್ಲಿ ದೋಷಯುಕ್ತವಾಗಿರುತ್ತದೆ. ತೃತೀಯ ಭಾಷೆಯ ಅಭ್ಯಾಸದಲ್ಲಿ ವ್ಯಾಕರಣ ಹಾಗು ಸಂಬಂಧಿಸಿದ ಅಂಶಗಳ ಅಭ್ಯಾಸ ನಡೆಯುತ್ತದೆ. ಆದರೆ ನಾಲ್ಕು ಭಾಷಾ ನೈಪುಣ್ಯಗಳ ಸಾಧನೆಯು ತೀರಾ ಸಾಮಾನ್ಯ ಸ್ತರದಲ್ಲಿ ನಡೆಯುತ್ತದೆ. ಇಂಗ್ಲಿಷಿನಲ್ಲಿ ಅಭಿವ್ಯಕ್ತಿಯ ಎರಡು ನೈಪುಣ್ಯಗಳು ಸಾಧ್ಯವಾಗುವುದೇ ಇಲ್ಲ.

ಸಂಸ್ಕೃತ ಇಲ್ಲವೆ ಇನ್ನೊಂದು ಪ್ರಾಚೀನ ಭಾಷೆಯನ್ನು ದ್ವಿತೀಯ ಇಲ್ಲವೆ ತೃತೀಯ ಭಾಷೆಯೆಂದು ಅಭ್ಯಸಿಸಬಹುದು. ಇಲ್ಲಿ ವ್ಯಾಕರಣ ಹಾಗು ಅದಕ್ಕೆ ಸಂಬಂಧಿಸಿದ ಉಳಿದ ಅಂಶಗಳ ಅಭ್ಯಾಸವಾಗುತ್ತದೆ. ಆದರೆ ಅಭಿವ್ಯಕ್ತಿಗಳ ಎರಡು ನೈಪುಣ್ಯಗಳ ಅಭ್ಯಾಸ ಇಲ್ಲಿ ಪ್ರಸ್ತುತವಾಗುವುದಿಲ್ಲ. ಅವುಗಳ ಬದಲಾಗಿ ಅಭ್ಯಸಿಸುವ ಪಠ್ಯ ಹಾಗು ಉಪಪಠ್ಯ ಪುಸ್ತಕಗಳ ಪುಟಸಂಖ್ಯೆಗಳ ಅರ್ಥ-ರಸ-ಗ್ರಹಣ, ಛಂದಸ್ಸು, ಅಲಂಕಾರಿಕ ಭಾಷೆ, ರಸಾನುಭವ, ತಂತ್ರ, ಸಾಹಿತ್ಯ ಪ್ರಕಾರ ಮೊದಲಾದ ಸಾಹಿತ್ಯಾಂಶಗಳ ಅಭ್ಯಾಸಕ್ಕೆ ಮಹತ್ವ ಕೊಡುವುದು: ಈ ರೀತಿಯಾಗಿ ಪಠ್ಯ ಕ್ರಮದ ಮಟ್ಟವನ್ನು ಸರಿಸಮಾನವಾಗಿ ಮಾಡಬೇಕಾಗುವುದು. ಅಲ್ಲದೆ ಸಂಸ್ಕೃತ ಸಾಹಿತ್ಯ ವಿಕಾಸದ ವಿವಿಧ ಹಂತಗಳಿಂದ ಭಾಗಗಳನ್ನು ಆಯ್ದುಕೊಂಡು ಅವುಗಳ ಸೌಂದರ್ಯಾನುಭವಗಳನ್ನು ಪಡೆದು ಅವು ಭಾರತೀಯ ಸಂಸ್ಕೃತಿಯ ಸ್ಪಷ್ಟ ಕಲ್ಪನೆಯನ್ನು ಹೇಗೆ ಕೊಡುತ್ತವೆಂಬುದನ್ನು ತಿಳಿದುಕೊಳ್ಳಬೇಕಾಗುವುದು.

೩. ಪರೀಕ್ಷೆಗೆ ಕಡ್ಡಾಯದ ವಿಷಯವಾದ ತೃತೀಯ ಭಾಷೆ.
ಪರೀಕ್ಷೆಯ ವ್ಯವಸ್ಥೆಯೇ ಇಲ್ಲದೇ ತೃತೀಯ ಭಾಷೆಯ ಅಭ್ಯಾಸ ಶಿಥಿಲವಾಗಿದೆ. ಈಗ ಬಹಿರಂಗದಲ್ಲಿ-ಅಂದರೆ-ಭೋಧನದಲ್ಲಿ-ತೃತೀಯ ಭಾಷೆಯನ್ನು ಒಪ್ಪಿಕೊಂಡು ಅಂತರಂಗದಲ್ಲಿ-ಅಂದರೆ ಪರೀಕ್ಷೆಯಲ್ಲಿ-ಅದನ್ನು ಕೈಬಿಡಲಾಗಿದೆ. ಇದು ಕ್ಷೇಮಕರ ವ್ಯವಸ್ಥೆಯಲ್ಲ. ತೃತೀಯ ಭಾಷೆಯ ಅಭ್ಯಾಸಕ್ಕೆ ಏರ್ಪಾಟಿದ್ದರೆ ಅಭ್ಯಾಸದ ಕೊನೆಗೆ ಪರೀಕ್ಷೆಯೂ ಇರಬೇಕು. ಮೇಲಾಗಿ ತೃತೀಯ ಭಾಷೆಯು ಒಂದು ದೃಷ್ಟಿಯಿಂದ ಅರ್ಧ ಭಾಷೆಯೇ ಆಗಿದೆ. ಎರಡು-ಮೂರು ಭಾಷೆಗಳನ್ನು ಕಲಿಸಿ ಪರೀಕ್ಷೆ ತೆಗೆದುಕೊಳ್ಳುವುದು ಬಹುಭಾಷಾಬೂಷಿತವಾದ ಭಾರತದಲ್ಲಿ ಭಾರವಾಗುವುದೆಂದು ನಾವು ಹೇಳಲಾರೆವು. ಮೇಲಾಗಿ ಕನ್ನಡವೊಂದನ್ನು ಕಡ್ಡಾಯದ ಭಾಷೆಯನ್ನಾಗಿ ಮಾಡಿ ಉಳಿದೆರಡು ಭಾಷೆಗಳ ಆಯ್ಕೆಯಲ್ಲಿ ಪೂರ್ಣ ಸ್ವಾತಂತ್ರ್ಯವಿರುವಾಗ ಇದು ನ್ಯಾಯವೂ, ಶಿಕ್ಷಣ ಶಾಸ್ತ್ರ ಸಮ್ಮತವೂ ಎಂದು ಸಮಿತಿಯ ಸ್ಪಷ್ಟ ಸಲಹೆಯಿದೆ.

೪. ಸಮಿತಿಯ ಸಲಹೆಗಳು (ಸಾರಾಂಶ ರೂಪದಲ್ಲಿ)
೧. ೧೯೮೧-೮೨ ನೆಯ ಶೈಕ್ಷಣಿಕ ವರ್ಷದಿಂದಲೇ ಕನ್ನಡವನ್ನು ಏಕೈಕ ಪ್ರಥಮ ಭಾಷೆಯನ್ನಾಗಿ ಮಾಡಿ ಅದು ಕಡ್ಡಾಯದ ವಿಷಯವಾಗಬೇಕು. ಅದಕ್ಕೆ ೧೫೦ ಅಂಕಗಳಿರಬೇಕು. ಈ ವಿಷಯದಲ್ಲಿ ಒಂದು ತಾತ್ಪೂರ್ತಿಕ ವ್ಯವಸ್ಥೆಯು ಅವಷ್ಯವಾಗಿದೆ. ಅದನ್ನು ೮ ನೆಯ ಸಲಹೆಯಲ್ಲಿ ಉಲ್ಲೇಖಿಸಲಾಗಿದೆ.
೨. ಕೆಳಗೆ ಕಾಣಿಸಿದ ಭಾಷೆಗಳಲ್ಲಿ ಒಂದನ್ನು ದ್ವಿತೀಯ ಭಾಷೆಯಾಗಿ ಅಭ್ಯಸಿಸಬಹುದು. ಅದಕ್ಕೆ ೧೦೦ ಅಂಕಗಳು;
ತಮಿಳು, ತೆಲುಗು, ಮಲಯಾಳಂ, ಮರಾಠಿ, ಗುಜರಾತಿ, ಹಿಂದಿ, ಉರ್ದು; ಹೀಗೆ ಆಧುನಿಕ ಭಾರತೀಯ ಭಾಷೆಗಳಲ್ಲಿ ಒಂದು.
ಇಲ್ಲವೆ
ಇಂಗ್ಲಿಷು
ಇಲ್ಲವೆ
ಸಂಸ್ಕೃತ, ಅರೇಬಿಕ್, ಪರ್ಸಿಯನ್, ಲ್ಯಾಟಿನ್, ಗ್ರೀಕ್; ಈ ಪ್ರಾಚೀನ ಭಾಷೆಗಳಲ್ಲಿ ಒಂದು.
೩. ಒಂದು ತೃತೀಯ ಭಾಷೆಯನ್ನೂ ತೆಗೆದುಕೊಳ್ಳಬೇಕಾಗುವುದು. ಅದಕ್ಕೆ ೫೦ ಅಂಕಗಳು. ಮೇಲೆ (೨) ರಲ್ಲಿ ಕೊಟ್ಟ ಮಾಲಿಕೆಯಿಂದ ದ್ವಿತೀಯ ಭಾಷೆಯೆಂದು ಆಯ್ದುಕೊಂಡ ಭಾಷೆಯೊಂದನ್ನು ಬಿಟ್ಟು ಆ ಮಾಲಿಕೆಯಲ್ಲಿಯ ಬೇರೆ ಯಾವುದೊಂದು ಭಾಷೆಯನ್ನು ತೃತೀಯ ಭಾಷೆಯೆಂದು ತೆಗೆದುಕೊಳ್ಳಬಹುದು.
೪. ತೃತೀಯ ಭಾಷೆಯು ಪರೀಕ್ಷೆಗೆ ಕಡ್ಡಾಯದ ವಿಷಯವಾಗಬೇಕು.
೫. ದ್ವಿತೀಯ ಮತ್ತು ತೃತೀಯ ಭಾಷೆಗಳ ಮಾಲಿಕೆಗಳಲ್ಲಿ ಎಲ್ಲ ಭಾಷಾ ವರ್ಗಗಳೂ ಸೇರ್ಪಡೆಯಾಗುತ್ತವೆ. ಅಭ್ಯಸಿಸಲಿರುವ ಭಾಷೆಯು ಆರ್ವಾಚೀನವಿರಲಿ, ಪ್ರಾಚೀನವಿರಲಿ, ಉಳಿದ ಭಾಷಾ ವರ್ಗಗಳ ಮಟ್ಟಕ್ಕೆ ಅದರ ಮಟ್ಟವೂ ಸರಿಸಮಾನವಾಗಿರಬೇಕು.
೬. ಪ್ರತಿಭಾವಂತೆ ವಿದ್ಯಾರ್ಥಿಗಳ ಸುಪ್ತ ಚೇತನವನ್ನು ಉದ್ದೀಷಿಸುವ ಒಂದು ಆರೋಹಣ ಕ್ರಮವೂ ಅವಶ್ಯವಾಗಿದೆ. ಒಂದು ವಿಶಿಷ್ಟ ವಿಷಯಪರೀಕ್ಷೆಯನ್ನು ಈ ಉದ್ದೇಶದ ಸಲುವಾಗಿ ಏರ್ಪಡಿಸಲಾಗಿದೆ. ಈ ವಿಷಯಕ್ಕೆ ೧೦೦ ಅಂಕಗಳು. ಆದರೆ ೧೫೦ ಅಂಕಗಳದ್ದು ನಾಲ್ಕು ಭಾಷಾ ನೈಪುಣ್ಯಗಳು ವ್ಯಾಕರಣ ಹಾಗು ಉಳಿದ ಸಂಬಂಧಿಸಿದ ಅಂಗಗಳು ಸಾಹಿತ್ಯಾಂಶಗಳು: ಈ ವೈವಿಧ್ಯದ ಪೂರ್ಣ ಅಭ್ಯಾಸವನ್ನು ಇಲ್ಲಿ ೧೦೦ ಅಂಕಗಳಿಗಾಗಿಯೇ ರೂಪಿಸಿದೆ. ಇಂಗ್ಲಿಷು, ಕನಡ, ಉಳಿದ ಆಧುನಿಕ ಭಾರತೀಯ ಭಾಷೆಗಳಲ್ಲಿ ಒಂದು, ಸಂಸ್ಕೃತ ಮೊದಲಾದ ಪ್ರಾಚೀನ ಭಾಷೆಗಳಲ್ಲಿ ಒಂದು: ಇವುಗಳಲ್ಲಿ ಯಾವುದೊಂದು ಭಾಷೆಯನ್ನು ಇಲ್ಲವೇ ಚಿತ್ರಕಲೆ, ಸಂಗೀತ, ನೃತ್ಯ. ಇತ್ಯಾದಿಗಳಲ್ಲಿ ಒಂದು- ಈ ವಿಶಿಷ್ಟ ವಿಷಯಪರೀಕ್ಷೆಗಾಗಿ ತೆಗೆದುಕೊಳ್ಳಬಹುದು ವಿದ್ಯಾರ್ಥಿಗಳು ಈ ವಿಷಯದಲ್ಲಿ ಪಡೆದ ಅಂಕಗಳನ್ನು ಎಸ್.ಎಸ್.ಎಲ್.ಸಿ ಯ ಫಲಿತಾಂಶದಲ್ಲಿ ಸೇರಿಸಲಾಗುವುದಿಲ್ಲ. ಈ ವಿಷಯದ ಪರೀಕ್ಷೆಯನ್ನು ಎಸ್.ಎಸ್.ಎಲ್.ಸಿ; ಪರೀಕ್ಷೆಯ ಜೊತೆಯಲ್ಲಿಯೋ ಅಥವಾ ಅನಂತರವೋ ನಡೆಸಬಹುದು. ಇದರಲ್ಲಿ ಪ್ರತ್ಯೇಕ ಅರ್ಹತಾಪತ್ರವನ್ನು ಕೊಡಲಾಗುವುದು. ಈ ವಿಷಯದ ಮಟ್ಟ ಎಸ್.ಎಸ್.ಎಲ್.ಸಿಗಿಂತ ಸ್ವಲ್ಪ ಮೇಲಿನದಾಗಿರುತ್ತದ. ಇದು ಸ್ವಸಂತೋಷದ ಪರೀಕ್ಷೆ. ಈ ವಿಶಿಷ್ಟ ವಿಷಯವನ್ನು ಶಾಲೆಯಲ್ಲಿ ಕಲಿಸುವುದಿಲ್ಲ. ಅದನ್ನು ತೆಗೆದುಕೊಂಡ ವಿದ್ಯಾರ್ಥಿಗಳು ತಾವೇ ಸ್ವತಂತ್ರವಾಗಿ ಅದನ್ನು ಅಭ್ಯಸಿಸುತ್ತಾರೆ.
೭. ಸಂಸ್ಕೃತವು ೧೯೮೧-೮೨ನೆಯ ಶೈಕ್ಷಣಿಕ ವರ್ಷದಿಂದ ಪ್ರಥಮ ಭಾಷೆಯಾಗಿ ಉಲಿಯುವದಿಲ್ಲ. ಎರಡನೆಯ ಹಾಗು ಮೂರನೆಯ ಸಲಹೆಯಲ್ಲಿ ಹೇಳಿದಂತೆ ಸಂಸ್ಕೃತವನ್ನು ದ್ವಿತೀಯ ಇಲ್ಲವೆ ತೃತೀಯ ಭಾಷೆಯಾಗಿ ಅಭ್ಯಸಿಸಬಹುದು.
೮. ಮೊದಲನೆಯ ಸಲಹೆಯ ವಿಷಯದಲ್ಲಿ ತಾತ್ಪೂತಿಕವಾಗಿ ಮಾಡಬೇಕಾದ ವ್ಯವಸ್ಥೆ.
ಅ. ಕನ್ನಡೆತರ ವಿದ್ಯಾರ್ಥಿಗಳು ತಮ್ಮ ಶಾಲೆಗಳಲ್ಲಿ ಪ್ರಾಥಮಿಕ ೩ನೆಯ ಇಯತ್ತೆಯಿಂದ ಕನ್ನಡವನ್ನು ಕಲಿಯಬೇಕೆಂಬ ನಿಯಮ ಅಂಗೀಕೃತವಾಗಿದ್ದರೂ ಕನ್ನಡ ಶಿಕ್ಷಕರು ನೇಮಕವಾಗಿ ಅದಿನ್ನೂ ಜಾರಿಯಲ್ಲಿ ಬಂದಿಲ್ಲ ಕಾರಣ ಮೊದಲನೆಯ ಸಲಹೆಯನ್ನು ಕನ್ನಡೇತರ ವಿದ್ಯಾರ್ಥಿಗಳನ್ನು ಕುರಿತು ಆಚರಣೆಗೆ ತರುವ ಪೂರ್ವದಲ್ಲಿ ಕೆಲವೊಂದು ವ್ಯವಸ್ಥೆಗಳನ್ನುಮಾಡಬೇಕಾಗಿದೆ.
ಆ. ಮೊತ್ತಮೊದಲು ಕರ್ಕಾರವು ಕನ್ನಡೇತರ ವಿದ್ಯಾರ್ಥಿಗಳ ಶಾಲೆಗಳಲ್ಲಿ ಕೊದಲೆ, ಅಂದರೆ ೧೯೮೧-೮೨ನೆಯ ಶೈಕ್ಷಣಿಕ ವರ್ಷದಿಂದ ಈ ವಿದ್ಯಾರ್ಥಿಗಳಿಗೆ ಪ್ರಾಥಮಿಕ ೩ನೆ ಇಯತ್ತೆಯಲ್ಲಿ ಹೀಗೆ ಕನ್ನಡ ಕಲಿಸಲು ಕನ್ನಡ ಶಿಕ್ಷಕರನ್ನು ನೇಮಿಸಬೇಕು.
ಇ. ೩ನೆ ಇಯತ್ತೆಯಲ್ಲಿ ಹೀಗೆ ಕನ್ನಡ ಕಲಿತ ಈ ಕನ್ನಡೆತರ ವಿದ್ಯಾರ್ಥಿಗಳಿಗೆ ಪ್ರತಿವರ್ಷ ನಾಲ್ಕು ವರ್ಷಗಳವರೆಗೆ ಕನ್ನಡವನ್ನು ಕಡ್ಡಾಯವಾಗಿ ಕಲಿಸುತ್ತ ಹೋಗಬೇಕು.
೧೯೮೨-೮೩ ೧೯೮೩-೮೪
೧೯೮೪-೮೫ ೧೯೮೫-೮೬

ಹೀಗೆ ೪, ೫, ೬, ೭ನೆ ಇಯತ್ತೆಯಲ್ಲಿ ಕನ್ನಡವನ್ನು ಕಡ್ಡಾಯವಾಗಿ ಕಲಿತ ವಿದ್ಯಾರ್ಥಿಗಳ ೧೯೮೬-೮೭ನೆ ವರ್ಷದಲ್ಲಿ ೮ನೆ ಇಯತ್ತೆಯಲ್ಲಿ ೧೦೦ ಅಂಕಗಳ ಕನ್ನಡವನ್ನು ಕಡ್ಡಯವಾಗಿ ಕಲಿಯಲು ಶಕ್ತರಾಗುವರು ಮುಂದೆ ೧೯೮೨-೮೩ರಿಂದ ಪ್ರಾಥಮಿಕ ೩ನೆ ಇಯತ್ತೆಯಲ್ಲಿ ಕನ್ನಡವನ್ನು ಕಡ್ಡಾಯವಾಗಿ ಕಲಿಯುವ ವಿದ್ಯಾರ್ಥಿಗಳು ಇದೇ ದಾರಿಯನ್ನು ಅನುಸರಿಸುವರು.

ಈ. ೧೯೮೬-೮೭ ವರೆಗೆ ಕನ್ನಡೇತರ ವಿದ್ಯಾರ್ಥಿಗಳು ೧೫೦ ಅಂಕಗಳ ಮಾತೃ ಭಾಷೆಯನ್ನು ಪ್ರಥಮ ಭಾಷೆಯಾಗಿ ಹಾಗು ಬರಿ ೫೦ ಅಂಕಗಳ ಕನ್ನಡವನ್ನು ತೃತೀಯ ಭಾಷೆ ಇಲ್ಲವೆ ೧೦೦ ಅಂಕಗಳ ಕನ್ನಡವನ್ನು ದ್ವಿತೀಯ ಭಾಷೆಯಾಗಿ ಕಲಿಯಬೇಕಾಗುವದು.

ಉ. ೧೯೮೬-೮೭ರಿಂದ ಎಲ್ಲ ವಿದ್ಯಾರ್ಥಿಗಳಿಗೂ ೧೫೦ ಅಂಕಗಳ ಕನ್ನಡವು ಕಡ್ಡಯದ ಪ್ರಥಮ ಭಾಷೆಯಾಗುವದು. ಕರ್ನಾಟಕ ರಾಜ್ಯದಲ್ಲಿ ೧೦ವರ್ಷ ಹಾಗು ಮೇಲ್ಪಟ್ಟು ನೆಲಸಿದ ಎಲ್ಲ ಮಕ್ಕಳಿಗೆ ಕನ್ನಡವು ಹೀಗೆ ಕಡ್ಡಾಯದ ವಿಷಯವಾಗುತ್ತದೆ.
ಊ. ಕನ್ನಡಿಗರಾದ ವಿದ್ಯಾರ್ಥಿಗಳಿಗೆ ೧೯೮೧-೮೨ನೆಯ ಶೈಕ್ಷಣಿಕ ವರ್ಷದಿಂದ ಕನ್ನಡವು ಏಕೈಕ ಪ್ರಥಮ ಭಾಷೆಯಾಗಿ ೧೫೦ ಅಂಕಗಳ ಕಡ್ಡಾಯದ ವಿಷಯವಾಗುತ್ತದೆ
ಋ. ಅಲ್ಲದೆ ಕನ್ನಡಿಗರಾದ ವಿದ್ಯಾರ್ಥಿಗಳಿಗೆ ೧೯೮೧-೮೨ರಿಂದ ಕನ್ನಡವನ್ನು ಬಿಟ್ಟು ಉಳಿದೆಲ್ಲ ಭಾರತೀಯ ಭಾಷೆಗಳು ದ್ವಿತೀಯ ಹಾಗು ತೃತೀಯ ಭಾಷೆಗಳ ಅಂಕಣಗಳಲ್ಲಿ (ಕಾಲಂಗಳು) ಸಂಸ್ಕೃತ ಮೊದಲಾದ ಪ್ರಾಚೀನ ಭಾಷೆಗಳೊಡನೆ ಕಾಣೆಸಿಕೊಂಡು ಮುಂಬರುವ ಎಲ್ಲ ವರ್ಷಗಳಲ್ಲಿಯೂ ಅದೇ ರೀತಿಯಾಗಿ ಮುಂದುವರಿಯುವವು.
ೠ. ಸಮಿತಿಯ ೨ನೆ ಹಾಗೂ ೩ನ್ದ್ ಸಲಹೆಗಳ ಪ್ರಕಾರ ಪ್ರಥಮ ಭಾಷೆಯಾದ ಕನ್ನಡವೊಂದನ್ನು ಬಿಟ್ಟು ಉಳಿದ ಯಾವ ಭಾಷೆಯನ್ನಾದರೂ ವಿದ್ಯಾರ್ಥಿಯ ದ್ವಿತೀಯ ಇಲ್ಲವೆ ತೃತೀಯ ಭಾಷೆಯಾಗಿ ತೆಗೆದುಕೊಳ್ಳಬಹುದು. ಆದರೆ ಈ ತಾತ್ಪೂರ್ತಿಕ ವ್ಯವಸ್ಥೆಯಲ್ಲಿ ಇಂಗ್ಲಿಷನ್ನು ೧೯೮೫-೮೬ನೆಯ ವರ್ಷ ಮುಗಿಯುವವರೆಗೆ ಬರಿ ದ್ವಿತೀಯ ಭಾಷೆಯೆಂದು ಅಭ್ಯಸಿಸಬಹುದು.
ಎ. ಕನ್ನಡ, ಉಳಿದ ಅಧುನಿಕ ಭಾರತೀಯ ಭಾಷೆಗಳಲ್ಲಿ ಒಂದು (ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಗುಜರಾಥಿ, ಹಿಂದೀ, ಉರ್ದು) ಹಾಗು ಸಂಸ್ಕೃತ ಇಲ್ಲವೆ ಇನ್ನೊಂದು ಪ್ರಾಚೀನ ಭಾಷೆ (ಅರೇಬಿಕ್, ಪರ್ಷಿಯನ್, ಲ್ಯಾಟಿನ್, ಗ್ರೀಕ್) ಇವುಗಳಲ್ಲಿ ಒಂದು ಭಾಷೆಯನ್ನು ತೃತೀಯ ಭಾಷೆಯೆಂದು ಆಯ್ದುಕೊಂಡು ಅಭ್ಯಸಿಸಬಹುದು. ಹೀಗೆ ಆಯ್ದುಕೊಂಡ ಭಾಷೆ ೧೯೮೧-೮೨ರಿಂದಲೇ ಪರೀಕ್ಷೆಗೆ ಕಡ್ಡಾಯ ವಿಷಯವಾಗುವುದು. ಇದೇ ವ್ಯವಸ್ಥೆ ಮುಂದೆಯೂ ನಡೆದುಕೊಂಡು ಬರುವದು. ೧೯೮೬-೮೭ ರಿಂದ ಕನ್ನಡವು ತೃತೀಯ ಭಾಷೆಗಳ ಪಟ್ಟಿಯಲ್ಲಿರುವುದಿಲ್ಲ. ಬದಲ್ಲಗಿ ಆ ವರ್ಷದಿಂದ ಇಂಗ್ಲಿಷು ಆ ಪಟ್ಟಿಯಲ್ಲಿ ಸೇರುತ್ತದೆ.

೯. ನೆರೆಹೊರೆಯ ರಾಜ್ಯಗಳಲ್ಲಿ ಕನ್ನಡಕ್ಕೆ ಪ್ರಾಥಮಿಕ ಶಿಕ್ಷಣಕ್ಕೂ ಸಹ ನ್ಯಾಯವಾಗಿ ದೊರೆಯಬೇಕಾದ ಮನ್ನಣೆಯಾಗಲಿ, ಪುರಸ್ಕಾರವಾಗಲಿ ದೊರೆಯುವುದೇ ಇಲ್ಲವೆಂಬ ದೂರು ಅಲ್ಲಿಯ ಕನ್ನಡಿಗರಿಂದ ಕೇಳಿ ಬರುತಿದೆ. ಅಲ್ಪಸಂಖ್ಯಾತರ ಭಾಷೆಗಳಲ್ಲಿ ಹೈಸ್ಕೂಲನ್ನು ಇಲ್ಲವೆ ಹೈಸ್ಕೂಲುಗಳಲ್ಲಿ ಅಲ್ಪಸಂಖ್ಯಾತರ ಭಾಷೆಗಳ ಅಭ್ಯಾಸಕ್ಕೆ ಮನ್ನಣೆ ಕೊಡುವ ವಿಷಯದಲ್ಲಿಯೂ ಈ ದೂರ ಕೇಳಿಬರುತ್ತದೆ. ಈ ವಿಷಯಗಳಕ್ಕೆಲ್ಲ ಕರ್ನಾಟಕದ ರಾಜ್ಯ ಸರ್ಕಾರ ತುಂಬ ಔದಾರ್ಯದಿಂದ ನಡೆದುಕೊಂಡು ಬಂದಿದೆ. ಆದರೆ ಇಂತಹ ಧೋರಣವನ್ನು ಮುಂದುವರಿಸುವಾಗ ಕನ್ನಡಕ್ಕೂ ಅಂತಹ ಪುರಸ್ಕಾರ, ನೆರೆಹೊರೆಯ ರಾಜ್ಯಗಳಲ್ಲಿ ದೊರೆತಿದೆಯೇ ಎಂದು ತಿಳಿದುಕೊಂಡು ಮುಂದುವರಿಯುವ ಸಮಯ ಬಂದಿದೆ. ಅಲ್ಲದೆ ಕನ್ನಡ ಜನತೆಯ ಮಕ್ಕಳಿಗೇ ಪ್ರಾಥಮಿಕ ಶಾಲೆಗಳನ್ನು ಕರ್ನಾಟಕದಲ್ಲಿ ಇನ್ನೂ ಎಲ್ಲಾ ಕಡೆ ಸ್ಥಾಪಿಸುವ ಕೆಲಸ ಮುಗಿಯದಿರುವಾಗ ಉಳಿದ ಭಾಷೆಗಳಿಗೆ ಅದಕ್ಕೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವುದು ಸಾಧುವಲ್ಲ.

೧೦. ಇಂಗ್ಲಿಷು ಮಾಧ್ಯಮವಿದ್ದ ಪ್ರಾಥಮಿಕ ಶಾಲೆಗಳಲ್ಲಿ ಸಹ ಮೂರನೆ ಇಯತ್ತೆಯಿಂದ ಪ್ರಾರಂಭಿಸಿ ಪ್ರತಿಯೊಂದು ಇಯತ್ತೆಗೆ ಉಳಿದ ಭಾಷೆಗಳ ಮಾಧ್ಯಮವಿದ್ದ ಶಾಲೆಗಳಲ್ಲಿರುವಂತೆಯೇ ಕನ್ನಡ ಕಲಿಸಿ ಪ್ರೌಢ ಶಾಲೆಗಳಲ್ಲಿ ೮ನೆ ಇಯತ್ತೆಯಿಂದ ೧೦ನೆ ಇಯತ್ತೆ (ಅಂದರೆ ಎಸ್.ಎಸ್.ಎಲ್,ಸಿ) ಮುಗಿಯುವವರೆಗೆ ೧೫೦ ಅಂಕಗಳ ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕು.
*****
ಮುಕ್ತಾಯ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅರ್‍ಪಣೆ
Next post ಬಿಚ್ಚು ಮನಸಿನ ಹುಚ್ಚು ಕುದುರೆ

ಸಣ್ಣ ಕತೆ

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

cheap jordans|wholesale air max|wholesale jordans|wholesale jewelry|wholesale jerseys