ಬಿಚ್ಚು ಮನಸಿನ ಹುಚ್ಚು ಕುದುರೆ
ಓಡುತಿದೆ ||

ಅಕ್ಕ ಹಾಸಿನ ಕುದುರೆ
ತಂಗಿ ಹಾಸಿನ ಕುದುರೆ
ಅಣ್ಣ ತಮ್ಮರ
ಭಾವದ ಕುದುರೆ ||
ಬಯಲು ಹಾಸಿನ
ರಹದಾರಿ ತುಳಿದು ಓಡುತಿದೆ ||

ಅಂಗ ಸಂಗದಾ
ಆಸೆಗಳ ಮೊಳೆತು
ಭಂಗ ಬಾರದ
ಅಂಗಿ ತೊಟ್ಟು
ವೇಶ ಭೂಷಣದ ವೈಯಾರ ಕುದುರೆ
ಓಡುತಿದ ಓಡುತಿದೆ ||

ಅತ್ತೆ ಹಾಸಿನ ಕುದುರೆ
ಸೊಸೆ ಹಾಸಿನ ಕುದುರೆ
ಮಾವ ಅಳಿಯರ ಮಾನದಾ ಕುದುರೆ |
ಕೂಡುವ ಸಂತೆಯ
ಮಾಳಿಗೆ ಬಣ್ಣ ಬಣ್ಣದ
ಅಂಬರ ಆಡಂಬರ
ಬಿಂಬ ಸಾರುವ ಕುದುರೆ
ಓಡುತಿದೆ ಓಡುತಿದೆ ||

ತಂದೆ ಹಾಸಿನ ಕುದುರೆ
ತಾಯಿ ಹಾಸಿನ ಕುದುರೆ
ಮುದ್ದು ಬಿನ್ನಾಣದ ಕುದುರೆ ||
ಬಿಂಕ ಬಿಗುಮಾನ
ಕಂಬ ತೊಡೆಯುವ ಕುದುರೆ
ಜಾತಿಗಾವುದ ಬೇಧವ
ತೊರೆವ ಸಂಭ್ರಮ ಕುದುರೆ ||

ಸುಂಕದ ಮ್ಯಾಲ ಅಂಗ.
ಮಂಗ ಮಾಯದ ಚೆಂದದ ಕುದುರೆ ||
ಚಂಚಲ ಮನಸಿನ
ಬೆದರು ಗೊಂಬೆಯ ಕುದುರೆ
ಮಾತಿನ ಸರಮಾಲೆ
ಮಾತಾಗುವ ಹಂದರದ ಕುದುರೆ
ಓಡುತಿದೆ ಓಡುತಿದೆ ||

ಸೆಟೆದು ನಿಲ್ಲುವ ಜಾಣ
ಬಯಸಿದಾ ಕುದುರೆ ||
ಮಾಯಾ ದರ್‍ಪಣ
ಕಾಲಮಾನ ಸೆರೆಯ ಕುದುರೆ
ಪಂಚಭೂತ ಮಂದಹಾಸ
ಚಲಿತ ತನುಮನ ಕುದುರೆ ||

ಸಾಧು ಸಂತರ ದಂಡ
ಜಂತರ ಮಂತರ ಕುದುರೆ ||
ದೇವ ಮಾನವ ಹಿಡಿಯ
ಪುಂಜ ಪಲ್ಲಂಗದ ಕುದುರೆ
ಓಡುತಿದೆ ಓಡುತಿದೆ
ಹಿಡಿಯುವರಾರು ಹಿಡಿಯುವರಾರು?
*****