Home / ಲೇಖನ / ಪುಸ್ತಕ / ಕಲಾವಿದನ ಬದುಕಿನ ಕಪ್ಪು ಬಿಳಿ ಬಣ್ಣಗಳು- ರಾಬರ್ಟ ಬ್ರೌನಿಂಗ್‌ನ “Andrea del Sarto”

ಕಲಾವಿದನ ಬದುಕಿನ ಕಪ್ಪು ಬಿಳಿ ಬಣ್ಣಗಳು- ರಾಬರ್ಟ ಬ್ರೌನಿಂಗ್‌ನ “Andrea del Sarto”

ಭಾಗ ೧

ಆಂಡ್ರಿಯಾ ಡೆಲ್ ಸಾರ್‍ಟೊ [Andrea del Sarto] ಒಬ್ಬ ಹೆಸರಾಂತ ಚಿತ್ರ ಕಲಾವಿದ. ನ್ಯೂನ್ಯತೆಗಳೇ ಇಲ್ಲದ ಕಲಾವಿದ. ೧೫೧೨ರಲ್ಲಿ ಲೂಕ್ರೇಸಿಯಾ [Lucrezia] ಎಂಬ ಅಪೂರ್ವ ಸುಂದರಿಯನ್ನು ವಿವಾಹವಾದ ಆತನ ಅನೇಕ ಕಲಾಕೃತಿಗಳಿಗೆ ಆಕೆಯೇ ರೂಪದರ್ಶಿಯಾಗಿದ್ದಳು. ಪ್ಲೋರೆನ್ಸ್‌ನ ಪಿಟ್ಟಿ ಪ್ಯಾಲೇಸ್‌ನಲ್ಲಿ ತೂಗಾಡುತ್ತಿದ್ದ, ಸ್ವತಃ ಆಂಡ್ರಿಯಾ ಚಿತ್ರಕ್ಕಿಳಿಸಿದ ಆಂಡ್ರಿಯಾ ಮತ್ತು ಲೂಕ್ರೇಸಿಯಾರ ಜೊತೆಗೂಡಿ ಇದ್ದ ಚಿತ್ರಪಟ ನೋಡಿದ ಬ್ರೌನಿಂಗ್‌ಗೆ ದಿ ಪಾಲ್ಟಲೆಸ್ ಪೇಂಟರ್ ಅಥವಾ ಆಂಡ್ರಿಯಾ ಡೆಲ್ ಸಾರ್‍ಟೊ ಎಂಬ [Dramatic Monologue] ಡ್ರಮ್ಯಾಟಿಕ್ ಮೊನೊಲಾಗ್ ಬರೆಯಲು ಸ್ಪೂರ್‍ತಿಯಾಯಿತು. ೧೮೧೨ರಲ್ಲಿ ಜನಿಸಿದ ರಾಬರ್ಟ ಬ್ರೌನಿಂಗ್ ತನ್ನ ಅತಿ ಚಿಕ್ಕ ವಯಸ್ಸಿನಲ್ಲೆ ಕವನಗಳ ರಚನೆಯಲ್ಲಿ ಪಳಗಿದ, ಆತನ ಮೊದಲ ಕವಿತೆ ಅದನ್ನು ತನ್ನ ೨೦ನೇ ವಯಸ್ಸಿಗೆ ಬರೆದ. ಆದರೆ ಟೆನಿಸನ್ನ ಸಮಕಾಲೀನ ರಾಬರ್ಟ ಬ್ರೌನಿಂಗ್ ಖ್ಯಾತನಾಮನಾದದ್ದು ತನ್ನ ಡ್ರೆಮ್ಯಾಟಿಕ್ ಮೊನೊಲಾಗ್ ಕಾವ್ಯ ಪ್ರಕಾರದಿಂದಲೇ.

ಆಂಡ್ರಿಯಾ ತನ್ನ ಪತ್ನಿ ಲೂಕ್ರೇಜಿಯಾಳನ್ನು ಉದ್ದೇಶಿಸಿ ಹೇಳುತ್ತಾನೆ. ಅವರಿಬ್ಬರ ನಡುವೆ ಮನಸ್ತಾಪವೇರ್ಪಟ್ಟಿದೆ. ಆಕೆ ತನ್ನ ಗೆಳೆಯನ ಗೆಳೆಯನಿಗೊಂದು ಚಿತ್ರ ಬರೆದು ಕೊಡಲು ಗಂಡನಲ್ಲಿ ಕೇಳುತ್ತಾಳೆ. ಆ ಚಿತ್ರದಿಂದ ಬರುವ ಹಣ ಆಕೆಯ ಗೆಳೆಯನ ಗೆಳೆಯನಿಗಾಗಿ. ಆತ ಆಕೆಯ ಪ್ರೇಮಿ. ಇದು ತಿಳಿದು ಆಕೆಗಾಗಿ ಆಂಡ್ರಿಯಾ ಚಿತ್ರ ಬರೆಯಲು ಸಿದ್ಧ. ಯಾಕೆಂದರೆ ಆತನೊಬ್ಬ ಪತ್ನಿಯ ಮೋಹಪಾಶದಲ್ಲಿ ಬಂಧಿಯಾದ ಕಲಾವಿದ. ಆಕೆಯ ಎದುರು ಆತ ದೀನ. ಇದಕ್ಕಾಗಿ ಆತ ಬಯಸುವುದು ಆಕೆ ತನ್ನ ಪಕ್ಕದಲ್ಲಿ ಸದಾ ಕುಳಿತಿರಬೆಕೆಂಬುದು, ತನ್ನ ಕೈಯೊಳಗೆ ಆಕೆ ತನ್ನ ಕೈಗಳನ್ನಿಟ್ಟು ಕುಳಿತುಕೊಳ್ಳಬೇಕೆಂಬುದು. ಇದಾತನ ನಿವೇದನೆ. ಆದರಾಕೆ ಇತನ ಬಗ್ಗೆ ಯಾವ ಕಾಳಜಿ ಮುತುವರ್ಜಿ ಇಲ್ಲದ ಹೆಣ್ಣು. ತನ್ನ ಮನಬಂದಂತೆ ಕುಣಿಸುವ ಅವಳಲ್ಲಿ ಆತನ ಭಾವನೆಗಳಿಗೆ ಬೆಲೆಯಿಲ್ಲ. ಆದರೂ ಆತ ವ್ಯರ್ಥ ಪ್ರಯತ್ನದಲ್ಲಿದ್ದಾನೆ. ಸಂಜೆಹೊತ್ತಿಗೆ ಚಿತ್ರ ಬರೆದು ಸುಣ್ಣವಾದರೂ ಆಕೆಯ ಸೌಂದರ್ಯ ಉಪಾಸನೆಯಲ್ಲಿ ಆತನಿಗೆ ಬಳಲಿಕೆಯಿಲ್ಲ. ಆಕೆಯ ರೂಪಲಾವಣ್ಯ ನಾಗಕನ್ಯೆಯ ಅಂಕುಡೊಂಕುಗಳಂತೆ ಆಕರ್ಷಣೀಯ. ಆದರದು ಆಕೆಯ ವಿನಾಶಕಾರಿ ಸೌಂದರ್ಯಕ್ಕೆ ರೂಪಕ.

ಬ್ರೌನಿಂಗ್ ಕಾವ್ಯದಲ್ಲಿ ಆಂಡ್ರಿಯಾನ ಬದುಕಿನ ಭೂತ ವರ್ತಮಾನ ಭವಿಷ್ಯ ಚಿತ್ರಣಗಳನ್ನು ನಮ್ಮ ಮುಂದೆ ತೆರೆದಿಡುತ್ತಾನೆ. ಕಾವ್ಯ ಮುಂದುವರೆಯುತ್ತಾ ಆಂಡ್ರಿಯಾ ಶೋಕಿತನಾಗಿದ್ದಾನೆ. ಪತ್ನಿಯಾದವಳು ತನ್ನ ಕಲೆಯನ್ನು ಪೋಷಿಸುತ್ತಿಲ್ಲವೆಂಬುದು ಆತನ ಆಪಾದನೆ. ಆಕೆ ಆತನ ಚಿತ್ರ ಮಡೊನ್ನಾ [ಕನ್ಯೆ ಮೇರಿಗೆ] ರೂಪದರ್ಶಿ. ಕನ್ಯೆ ಮೇರಿ ನಿಷ್ಕಲ್ಮಷ ಸುಂದರಿ. ಆದರೆ ಆಂಡ್ರಿಯಾನ ರೂಪದರ್ಶಿ ಅಪೂರ್ವ ಸುಂದರಿ. ಆದರೆ ನಿಷ್ಟಾವಂತಳಲ್ಲ.

ಆಂಡ್ರಿಯಾ ಹೇಳುತ್ತಾನೆ ತಾನೊಬ್ಬ ವಿಶಿಷ್ಟ ಕಲಾವಿದ ಬಯಸಿದ್ದನ್ನು ಬಿಡಿಸಬಲ್ಲ. ಆದರೂ ಆತ ಅಪರಿಪೂರ್ಣ. ಅದಕ್ಕೆ ಕಾರಣ ಲೂಕ್ರೇಜಿಯಾ. ಆಕೆಯಲ್ಲಿ ಬಾಹ್ಯ ಚೆಲುವಿದೆಯೇ ಹೊರತು ಹೃದಯದ ಚೆಲುವಲ್ಲ. ಹಾಗಾಗಿ ಆತನ ಚಿತ್ರಗಳಿಗೆ ಮಾಡೆಲ್ ಆದ ಆಕೆಯ ಪ್ರತಿರೂಪದ ನಿರ್ಭಾವ, ನಿರ್ದಯಿ ಅಭಿವ್ಯಕ್ತಿಯ ಚಿತ್ರಗಳನ್ನಷ್ಟೇ ಆತ ಚಿತ್ರಿಸಬಲ್ಲ.

ಈಗ ಆಂಡ್ರಿಯಾ ಗತ ಕಾಲದ ಘಟನೆಗಳನ್ನು ಮೆಲಕು ಹಾಕುತ್ತಾನೆ. ಕಿಂಗ್ ಪ್ರಾನ್ಸಿಸ್ ಮತ್ತು ಪ್ರೆಂಚ ಕೋರ್ಟನಲ್ಲಿ ತಾನು ಹೇಗೆ ನಿರ್ಲಕ್ಷಿಸಲ್ಪಟ್ಟೆ ಎಂಬುದನ್ನು ನೆನಪಿಸುತ್ತಾನೆ. ಅರಮನೆಯ ಕಲಾಕೃತಿಗಳನ್ನು ಹೆಮ್ಮೆಯಿಂದ ಚಿತ್ರಿಸಿದ ತಾನು ಲೂಕ್ರೇಜಿಯಾಳ ಕಾರಣದಿಂದ ರಾಜ ವೈಭೋಗದಿಂದ ಹೊರಬರಬೇಕಾಯಿತು. ಲೂಕ್ರೇಜಿಯಾ ಅರಮನೆಯ ಉಸಿರುಗಟ್ಟಿಸುವ ವಾತಾವರಣಕ್ಕೆ ಒಗ್ಗಿಕೊಳ್ಳಲಿಲ್ಲ. ಅಲ್ಲಿಯ ವೈಭೋಗ ಆಕೆಗೆ ಇಷ್ಟವಾಗಲಿಲ್ಲ. ಆಕೆ ಆತನನು ಪ್ಲೋರೆನ್ಸಿಯಾಗೆ ಕರೆದು ತರುತ್ತಾಳೆ. ಸತ್ಯ ಸಂಗತಿ ಎಂದರೆ ರಾಜ ನೀಡಿದ ಹಣದಿಂದ ಆಂಡ್ರಿಯಾ ಮನೆಯೊಂದನ್ನು ನಿರ್ಮಿಸಿಕೊಳ್ಳುತ್ತಾನೆ. ಆಂಡ್ರಿಯಾನ ನೋವಿಗೆ ಸಂಪೂರ್ಣವಾಗಿ ಆಕೆಯೇ ಕಾರಣವಲ್ಲ. ಯಾಕೆಂದರೆ ಆಕೆಯನ್ನು ಎದುರಿಸುವ ಧೈರ್ಯ ಆತನಲ್ಲಿ ಇಲ್ಲದೇ ಇರುವುದು. ಆತ ಜಗದ್ವಿಖ್ಯಾತ ಕಲಾಕಾರರಾದ ಲಿಯೊನಾರ್ಡೋ, ಮೈಕಲೆಂಜೆಲ್ಲೋ ಹಾಗೂ ರಾಫೆಲ್‌ರು ಗಳಿಸಿದ ಖ್ಯಾತಿಯನ್ನು ಗಳಿಸಲಾಗಲಿಲ್ಲ. ಯಾಕೆಂದರೆ ಅವರಾರು ವಿವಾಹಿತರಾಗಿರಲಿಲ್ಲ. ಆದರೆ ಆಂಡ್ರಿಯಾ ಒಬ್ಬ ಸಮ್ಮೋಹಿತ ಪತಿ. ಆಕೆಯ ನಗು ಕಲಾವಿದನಾದ ಆತನ ಎಲ್ಲ ಆಶೋತ್ತರಗಳನ್ನು ಕೊಲ್ಲುವ ಸಾಧನ. ಆಕೆಗೆ ಬೇಕಿರುವುದಿಷ್ಟೇ ಆತನ ಚಿತ್ರಗಳು ಆಕೆಗೆ ಹಣದ ಹರಿವು. ತನ್ನ ಗೆಳೆಯರ ಕಷ್ಟಗಳಿಗೆ ಆಕೆ ಆಂಡ್ರಿಯಾನ ದುಡಿಮೆಯ ಹಣವನ್ನು ಕಬಳಿಸಿ ಪತಿಯ ಕಷ್ಟ ಹೆಚ್ಚಿಸುವ ಹೆಣ್ಣು. ಆ ದಯನೀಯತೆಯನ್ನು ಆಂಡ್ರಿಯಾ ಹೀಗೆ ನುಡಿಸುತ್ತಾನೆ. “I mean that i should ear more, give you more”

ಈಗ ಕತ್ತಲಾಗಿದೆ. ಆಂಡ್ರಿಯಾ ಲೂಕ್ರೇಜಿಯಾಳನ್ನು ಮನೆಯೊಳಗೆ ಕರೆಯುತ್ತಿದ್ದಾನೆ ಅದೇ ಹೊತ್ತಿಗೆ ಆಕೆಯ ಗೆಳೆಯನ ಸೀಟಿಯ ಸದ್ದು ಅವರ ಏಕಾಂತಕ್ಕೆ ಭಂಗತಂದಿದೆ. ನಿರಾಶೆಯಿಂದ ಆಂಡ್ರಿಯಾ ಲೂಕ್ರೇಜಿಯಾಳನ್ನು ಹೋಗಗೊಡುತ್ತಾನೆ. ಆಕೆಯ ಪ್ರೀತಿ ಬರಿಯ ಸೋಗು ಅವನಿಂದ ಗಳಿಕೆಯನ್ನು ಮಾತ್ರ ಪ್ರೀತಿಸುವ ಅವಳು ನಂಬಿಗಸ್ಥ ಪತ್ನಿಯಲ್ಲ. ಹೀಗೆ ಒಬ್ಬ ಕಲಾವಿದ ಬದುಕಿನ ಸ್ಥೂಲ ಚಿತ್ರಣವನ್ನು ಡ್ರಮ್ಯಾಟಿಕ್ ಮೊನೊಲೊಗ್ [ನಾಟಕೀಯ ಏಕಾಂತ ಭಾಷಣ]ಕಾವ್ಯ ಪ್ರಕಾರದಲ್ಲಿ ರಚಿಸಿದ ಬ್ರೌನಿಂಗ್ ಒಬ್ಬ ಸಿದ್ಧಕವಿ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...