ಬೀದಿಗೆ ಬಂದ ಜಾತಿವಾದ-ಕೋಮುವಾದ

ಬೀದಿಗೆ ಬಂದ ಜಾತಿವಾದ-ಕೋಮುವಾದ

ಕರ್ನಾಟಕದಲ್ಲಿ ಈಗ ಎರಡು ಕೃತಿಗಳ ಸುತ್ತ ವಿವಾದದ ಉರಿ ಎದ್ದಿದೆ. ಡಾ. ಬಂಜಗೆರೆ ಜಯಪ್ರಕಾಶ್ ಅವರ ‘ಆನುದೇವಾ ಹೊರಗಣವನು’ ಮತ್ತು ಡಾ. ಎಸ್.ಎಲ್. ಭೈರಪ್ಪ ಅವರ ‘ಆವರಣ’ ಕೃತಿಗಳು ಈ ವಿವಾದಕ್ಕೆ ಕಾರಣವಾಗಿವೆ. ‘ಆನುದೇವಾ…’ ವಿಶ್ಲೇಷಣಾತ್ಮಕ ಕೃತಿಯಾದರೆ, ‘ಆವರಣ’ ಕಾದಂಬರಿ. ‘ಆನುದೇವಾ’ ಕೃತಿಗೆ ವಿರುದ್ಧವಾದವರು ಮತ್ತು ‘ಆವರಣ’ ಕೃತಿಗೆ ಪರವಾದವರು, ವಿವಾದವನ್ನು ವೈಚಾರಿಕ ವಾಗ್ವಾದಕ್ಕೆ ಬಿಟ್ಟುಕೊಡದೆ ಅದರಾಚೆಗಿನ ಸಂಗತಿಗಳನ್ನು ಕೈಗೆತ್ತಿಕೊಂಡು ಭಿನ್ನಾಭಿಪ್ರಾಯಕ್ಕೆ ತಡೆಯೊಡ್ಡುವ ವಿಷಮ ವಾತಾವರಣವನ್ನು ನಿರ್ಮಾಣ ಮಾಡುತ್ತಿದ್ದಾರೆ. ಯಾವುದಾದರೂ ಸಭೆಯಲ್ಲಿ ‘ಆನುದೇವಾ’ ಪುಸ್ತಕದ ಪರವಾಗಿ ಎರಡು ಸಾಲು ಬಂದರೂ ಸಹಿಸದೆ ಲೇಖಕರನ್ನು ಮತ್ತು ಪುಸ್ತಕವನ್ನು ಸುಡಬೇಕು ಎನ್ನುವಷ್ಟರ ಮಟ್ಟಿಗೆ ಗಲಾಟೆ ಎಬ್ಬಿಸುವುದಲ್ಲದೆ ಈ ಪುಸ್ತಕವನ್ನು ಮುಟ್ಟುಗೋಲು ಹಾಕಬೇಕೆಂದು ಕೂಗಾಡುತ್ತಾರೆ. ಮಾತೆ ಮಹಾದೇವಿ ವಿಶ್ವ ಬಸವ ಧರ್ಮ ಪೀಠದ ಸ್ವಾಮಿ ಭೀಮಣ್ಣ ಖಂಡ್ರೆ – ಇಂಥವರ ಜೊತೆಗೆ ಪಾಟೀಲ ಪುಟ್ಟಪ್ಪನವರೂ ಸೇರಿಕೊಂಡು ಮುಟ್ಟುಗೋಲು ಹಾಕಲೇ ಬೇಕೆಂದು ಧಮಕಿ ಹಾಕುತ್ತಾರೆ, ಮುಟ್ಟುಗೋಲು ಹಾಕದಿದ್ದರೆ ಕರ್ನಾಟಕದಲ್ಲಿ ರಕ್ತದಕೋಡಿ ಹರಿದೀತೆಂದು ಭೀಮಣ್ಣ ಖಂಡ್ರೆಯವರೂ ಕಿಚ್ಚು ಹತ್ತೀತೆಂದು ಪಾಟೀಲ ಪುಟ್ಟಪ್ಪನವರೂ ಬೆದರಿಕೆ ಹಾಕುತ್ತಿದ್ದಾರೆ. ವಿಶ್ವ ಬಸವಧರ್ಮ ಪೀಠದ ದಯಾನಂದ ಸ್ವಾಮಿ ತಮ್ಮ ಅಭಿಪ್ರಾಯಕ್ಕೆ ವಿರುದ್ಧವಾದವರ ಮೇಲೆ ಕೈ ಮಾಡುವಷ್ಟು ದಯಾನಿಧಿಗಳೂ ಆನಂದ ಪರವಶರೂ ಆಗಿದ್ದಾರೆ. (ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ ಸಭೆಯೊಂದರಲ್ಲಿ ಈ ಸ್ವಾಮಿ ಕೈ ಎತ್ತಿದ್ದನ್ನು ನೆನೆಯ ಬಹುದು). ಮಾತೆ ಮಹಾದೇವಿಯವರು ಮುಟ್ಟುಗೋಲಿನ ಕ್ರಮವನ್ನು ತಾತ್ವಿಕವಾಗಿ ವಿರೋಧಿಸಿದ ಬಂಡಾಯ ಸಾಹಿತ್ಯ ಸಂಘಟನೆಯವರನ್ನು ಕೆಟ್ಟುದಾಗಿ ಜರೆಯುತ್ತ ತಮ್ಮ ಅಭಿರುಚಿಯನ್ನು ತಾವೇ ಬಯಲು ಮಾಡಿಕೊಳ್ಳುತ್ತ ಮುಟ್ಟುಗೋಲು ಆಗಲೇಬೇಕೆಂಬ ಹಟಯೋಗ ತೊಟ್ಟಿದ್ದಾರೆ. ಇಂತಹ ಕೆಲ ಧುರೀಣರು ಸಾಮಾನ್ಯ ಜನರನ್ನು ಬೀದಿಗೆ ಎಳೆ ತಂದಿದ್ದಾರೆ.

‘ಆವರಣ’ದ ವಿಷಯ ಸ್ವಲ್ಪ ಬೇರೆ ರೀತಿಯದು. ತಮ್ಮ ಮೊದಲನೇ ಕಾದಂಬರಿಯಿಂದಲೂ (ಧರ್ಮಶ್ರೀ) ಹಿಂದೂ ಮೂಲಭೂತವಾದಕ್ಕೆ, ಜಡ ಸಂಪ್ರದಾಯದ ಮೌಲ್ಯಗಳಿಗೆ ಬದ್ಧವಾಗಿ ಬರೆಯುತ್ತ ಬಂದ ಡಾ. ಎಸ್.ಎಲ್. ಭೈರಪ್ಪನವರು ಈ ಮಧ್ಯೆ ಗೃಹಭಂಗ, ಪರ್ವ – ಇಂತಹ ವಿಶಿಷ್ಟ ಗುಣಾತ್ಮಕ ಕಾದಂಬರಿಗಳನ್ನು ಕೊಟ್ಟಿದ್ದಲ್ಲದೆ, ‘ದಾಟು’ ವಿನಂತಹ ಗಂಭೀರ ವಾಗ್ವಾದದ ಕಾದಂಬರಿಯನ್ನೂ ಬರೆದರು. ಇಂತಹ ಬೆರಳೆಣಿಕೆಯ ‘ಅಪವಾದ’ಗಳನ್ನು ಬಿಟ್ಟರೆ ಅವರ ಧಾರ್ಮಿಕ ಮೂಲಭೂತವಾದ ಸದಾ ಕೆಲಸ ಮಾಡುತ್ತಿತ್ತು. ಆದರೆ ಅಪಾರ ಓದುಗರನ್ನು ಸಂಪಾದಿಸಿದ ಸರಳ, ಸುಭಗ ನಿರೂಪಣೆಯ ಕಾದಂಬರಿಕಾರರಾಗಿ ಭೈರಪ್ಪನವರು ಜನಪ್ರಿಯರು. ಈ ಜನಪ್ರಿಯತೆಗೆ ಧಾರ್ಮಿಕ ಮೂಲಭೂತವಾದದ ಆಯಾಮವೂ ಸೇರಿದರೆ ಆಗುವ ದುಷ್ಪರಿಣಾಮವನ್ನು ‘ಆವರಣ’ ಕಾದಂಬರಿಯ ಸಂದರ್ಭದಲ್ಲಿ ನಾವು ಚರ್ಚಿಸಬೇಕಾಗುತ್ತದೆ. ಆದರೆ ಇಂತಹ ಚರ್ಚೆಯನ್ನು ಮಾಡಹೊರಟ ಕೂಡಲೇ ಎದ್ದು ಕೂಗುವ, ಅಡ್ಡಿಪಡಿಸುವ ತಂಡಗಳು ಕಾಣಿಸುತ್ತವೆ. ನೀವು ಹಿಂದೂ ಧರ್ಮದ ವಿರೋಧಿಗಳು, ಮುಸ್ಲಿಮರ ಸಮರ್ಥಕರು, ಮುಸ್ಲಿಂ ಮೂಲಭೂತವಾದವನ್ನು ನೀವು ಏಕೆ ವಿರೋಧಿಸುವುದಿಲ್ಲ? ನಿಮ್ಮ ಪ್ರಗತಿ ಪರತೆಗೆ ಧಿಕ್ಕಾರ’ – ಇಂತಹ ಹತ್ತಾರು ವಾಗ್‍ತ್ರಿಶೂಲಗಳನ್ನು ಎಸೆಯುತ್ತಾರೆ. ಹಿಂದೂ ಮೂಲಭೂತ ವಾದವನ್ನು ವಿರೋಧಿಸುವವರು ಮುಸ್ಲಿಂ ಮೂಲಭೂತವಾದವನ್ನೂ ವಿರೋಧಿಸಬೇಕಾಗುತ್ತದೆ ಯೆಂಬುದನ್ನು ನಾನು ಒಪ್ಪುತ್ತೇನೆ. ನಾನು ಎಲ್ಲ ಧರ್ಮಗಳ ಮೂಲಭೂತವಾದದ ವಿರೋಧಿ, ನನ್ನಂತೆಯೇ ಅನೇಕರು ಈ ನಿಲುವು ತಾಳಿದ್ದಾರೆ. ಸಂದರ್ಭ ಬಂದಾಗ ತಮ್ಮ ನಿಲುವನ್ನು ಪ್ರಕಟಿಸಿದ್ದಾರೆ. ಆದರೆ ಅದನ್ನು ಪರಿಗಣಿಸದೆ ಹಿಂದೂ ಮೂಲಭೂತವಾದದ ಸಮರ್ಥನೆಗಾಗಿ ಮಿಥ್ಯಾರೋಪ ಮಾಡುವುದು ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗುವುದು ಸರಿಯಲ್ಲ. ತಮ್ಮ ಧರ್ಮದ ಜಡಮೌಲ್ಯಗಳನ್ನು ವಿಮರ್ಶೆಗೊಡ್ಡಿದ ಮುಸ್ಲಿಂ ಮೂಲದ ಸಾಹಿತಿಗಳು ನಮ್ಮಲ್ಲಿದ್ದಾರೆಂಬುದನ್ನು ಮರೆಯಬಾರದು. ಸಾಮಾನ್ಯ ಮುಗ್ಧ ಹಿಂದೂ ಮನಸ್ಸುಗಳನ್ನು ಮಲಿನ ಗೊಳಿಸಲು ಅನ್ಯಧರ್ಮದ್ವೇಷವನ್ನು ಆಯುಧವಾಗಿ ಬಳಸುವವರು ಧಾರ್ಮಿಕರಾಗಲು ಹೇಗೆ ಸಾಧ್ಯ? ಇನ್ನೊಂದು ಧರ್ಮವನ್ನು ದ್ವೇಷಿಸುವುದೇ ಸ್ವಧರ್ಮ ಪ್ರೀತಿ, ದೇಶಭಕ್ತಿ ಎಂದಾದರೆ ಅಂತಹ ಪ್ರೀತಿ, ಭಕ್ತಿಗಳು ಯಾರಿಗೆ ಬೇಕು? ಇಂತಹ ಪ್ರಶ್ನೆಗಳನ್ನು ಕೇಳಿಕೊಳ್ಳಲು ಅಥವಾ ಕೇಳಿಸಿಕೊಳ್ಳಲು ಸಿದ್ದವಿಲ್ಲದ ಯುದ್ಧ ಸನ್ನದ್ದರು ‘ಆವರಣ’ ಕೃತಿಯ ಪರವಾಗಿ ಗದ್ದಲ ಎಬ್ಬಿಸುತ್ತಿದ್ದಾರೆ. ಈ ಕೃತಿಯಲ್ಲಿರುವ ಮುಸ್ಲಿಂ ವಿರೋಧಿ ಆಶಯವೇ ಇಂಥವರಿಗೆ ಆದರ್ಶವಾಗಿದೆ. ಸಾಹಿತ್ಯ ಕೃತಿಯೊಂದರ ನಿಜವಾದ ಚರ್ಚೆ ಬೇಡವಾಗಿದೆ.

ನಮ್ಮ ಈ ಸನ್ನಿವೇಶದ ಒಂದು ವಿಶೇಷವೆಂದರೆ – ‘ಆನುದೇವಾ’ ವಿರೋಧಿಗಳು ಮುಟ್ಟುಗೋಲಿಗೆ ಒತ್ತಾಯಿಸುತ್ತಿದ್ದರೆ, ‘ಆವರಣ’ ವಿರೋಧಿಗಳು ಮುಟ್ಟುಗೋಲಿಗೆ ಒತ್ತಾಯಿಸುತ್ತಿಲ್ಲ. ಬದಲಾಗಿ ಯಾವ ಕೃತಿಯನ್ನೂ ಮುಟ್ಟುಗೋಲು ಹಾಕಿಕೊಳ್ಳಬಾರದು ಎಂಬ ತಾತ್ವಿಕ ನಿಲುವಿಗೆ ಬದ್ದರಾಗಿದ್ದಾರೆ. ಸಂವಿಧಾನದತ್ತ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕನುಗುಣವಾಗಿ ನಾವು ಪ್ರಜಾ ಸತ್ತಾತ್ಮಕ ನಿಲುವು ತಳೆಯಬೇಕೆಂಬುದು ಮತ್ತು ಸಂವಿಧಾನ, ನ್ಯಾಯಾಂಗಗಳ ತಾಂತ್ರಿಕ ಒತ್ತಾಸೆಯಾಚೆಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಪರಿಕಲ್ಪನೆಯು ವಿಸ್ತಾರ ಉಳ್ಳದ್ದಾಗಿದೆಯೆಂಬುದು, ಮುಟ್ಟುಗೋಲು ವಿರೋಧಿಗಳ ನಿಲುವಾಗಿದೆ. ಮುಟ್ಟುಗೋಲು ಪರವಾಗಿರುವವರು ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗವಾಗಿದೆಯೆಂದೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸ್ವೇಚ್ಛಾಚಾರ ಸಲ್ಲದೆಂದೂ ವಾದಿಸುತ್ತಾರೆ; ಕೆಲವರು ಬರೀ ವಾದಿಸುವುದಿಲ್ಲ, ಔಚಿತ್ಯ ಮೀರಿ ವರ್ತಿಸುತ್ತಾರೆ. ಡಾ. ಪಿ.ವಿ. ನಾರಾಯಣರ ‘ಧರ್ಮಕಾರಣ’ ಕಾದಂಬರಿಯನ್ನು ಅಂದಿನ ಕರ್ನಾಟಕ ಸರ್ಕಾರವು ಮುಟ್ಟುಗೋಲು ಹಾಕಿಕೊಂಡದ್ದು ಸರಿಯೆಂದು ಸುಪ್ರೀಂಕೋರ್ಟು ತಾಂತ್ರಿಕ ತೀರ್ಪು ನೀಡಿದ ಮೇಲೆ ಇಂಥವರ ‘ನೈತಿಕ’ ಬಲ ಹೆಚ್ಚಾದಂತೆ ಕಾಣುತ್ತದೆ. ಎಲ್ಲ ಸಂದರ್ಭಗಳಲ್ಲೂ ಇಂಥದೇ ತೀರ್ಪು ಬರುತ್ತದೆಯೆಂದು ಇವರು ನಂಬಿದಂತಿದೆ.

ಹಾಗಾದರೆ, ಸಂವಿಧಾನವು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಏನು ಹೇಳುತ್ತದೆಯೆಂದು ತಿಳಿಯೋಣ. ಸಂವಿಧಾನದ ೧೯ (೧)ನೇ ಪರಿಚ್ಛೇದವು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ. ಒಬ್ಬ ವ್ಯಕ್ತಿಯು ತನ್ನ ಅಭಿಪ್ರಾಯ ಮತ್ತು ಭಾವನೆಗಳನ್ನು ಮುಕ್ತವಾಗಿ ಮಾತು, ಬರಹ, ಮುದ್ರಣ, ಚಿತ್ರ ಅಥವಾ ಇನ್ನಿತರ ವಿಧಾನಗಳ ಮೂಲಕ ಪ್ರಕಟಿಸುವುದೇ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ’ವೆಂದು ಸಂವಿಧಾನವು ಹೇಳುತ್ತದೆ. ಸಂವಿಧಾನದ ೧೯ (೨)ನೇ ಪರಿಚ್ಚೇದವು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರಕ್ಕೆ ಕೆಲವು ನಿರ್ಬಂಧಗಳನ್ನು ವಿಧಿಸಿದೆ.

(೧) ರಾಷ್ಟ್ರದ ಭದ್ರತೆಗೆ ಧಕ್ಕೆ ತರಬಾರದು
(೨) ವಿದೇಶಗಳ ಜೊತೆಗಿನ ಸಂಬಂಧಕ್ಕೆ ಧಕ್ಕೆಯಾಗಬಾರದು
(೩) ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕದಡಬಾರದು
(೪) ಸಭ್ಯತೆ ಮತ್ತು ನೈತಿಕತೆಯ ಎಲ್ಲೆ ಮೀರಬಾರದು
(೫) ನ್ಯಾಯಾಲಯ ನಿಂದನೆಯಾಗಬಾರದು
(೬) ಅಪರಾಧ ಎಸಗಲು ಪ್ರೇರಣೆ ನೀಡಬಾರದು
(೭) ದೇಶದ ಸಮಗ್ರತೆಗೆ ಧಕ್ಕೆ ತರಬಾರದು | ದೇಶದ್ರೋಹ ಎಸಗಬಾರದು
(೮) ಮಾನಹಾನಿ ಮಾಡಬಾರದು

– ಹೀಗೆ, ಒಟ್ಟು ಎಂಟು ನಿರ್ಬಂಧಗಳನ್ನು ಸಂವಿಧಾನವು ಸ್ಪಷ್ಟವಾಗಿ ನಿರೂಪಿಸಿದೆ.

ಈಗ, ‘ಆನುದೇವಾ…’ ಕೃತಿಯು ಈ ನಿರ್ಬಂಧಗಳ ಚೌಕಟ್ಟಿಗೆ ಬರುತ್ತದೆಯೆ ಎಂಬ ಪ್ರಶ್ನೆ. ಬರುತ್ತದೆ ಎನ್ನುವುದು ಮುಟ್ಟುಗೋಲು ಪರವಾದವರ ವಾದ. ಈ ಕೃತಿಯಿಂದ ಬಸವಣ್ಣ ನವರಿಗೆ ಮಾನಹಾನಿಯಾಗಿದೆಯೆಂದು ಲಿಂಗಾಯಿತರಿಗೆ ನೋವಾಗಿದೆಯೆಂದೂ ಅವರು ಪ್ರತಿ ಪಾದಿಸುತ್ತಾರೆ. ಜೊತೆಗೆ, ಶಾಂತಿ ಸುವ್ಯವಸ್ಥೆಯನ್ನು ಕದಡಿದರೆ ಸಂವಿಧಾನಾತ್ಮಕ ಸಾಕ್ಷಿ ಒದಗಿದಂತಾಗುತ್ತದೆಯೆಂದೂ ಕೆಲವರು ಭಾವಿಸಿ ಉಗ್ರವಾಗಿ ವರ್ತಿಸುತ್ತಿದ್ದಾರೆ. ಹಾಗಾದರೆ, ‘ಆನುದೇವಾ…’ ಕೃತಿಯಲ್ಲಿ ಬಸವಣ್ಣನವರಿಗೆ ಅವಮಾನ ಅಥವಾ ಮಾನಹಾನಿ ಮಾಡುವ ಅಂಶಗಳಿವೆಯೆ, ಲಿಂಗಾಯತರ ಭಾವನೆಗೆ ಧಕ್ಕೆ ತಂದು ನೋವುಂಟು ಮಾಡುವ ಮಾತು ಗಳಿವೆಯ – ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಅವಮಾನ ಮತ್ತು ನೋವಿನ ಕಾರಣ ಕೊಡುವವರು ಮುಖ್ಯವಾಗಿ ಎರಡು ಅಂಶಗಳನ್ನು ಉಲ್ಲೇಖಿಸುತ್ತಾರೆ :

(೧) ಬಸವಣ್ಣನವರನ್ನು ವಿನಾಕಾರಣ ಆಸ್ಪೃಶ್ಯ ಮಾದಿಗ ಜಾತಿಯಲ್ಲಿ ಹುಟ್ಟಿದವರೆಂದು ಪ್ರತಿಪಾದಿಸಲಾಗಿದೆ.
(೨) ಬಸವಣ್ಣನವರು ದೇವದಾಸಿಯ ಅಕ್ರಮ ಸಂತಾನ ಎನ್ನಲಾಗಿದೆ.

ಈ ಎರಡು ಅಂಶಗಳು ‘ಆನುದೇವಾ…’ದಲ್ಲಿ ಹೇಗೆ ನಿರೂಪಿತವಾಗಿವೆ ಎಂಬುದು ಮುಖ್ಯ ಮತ್ತು ಈ ಅಂಶಗಳು ನಿಜವೇ ಇದ್ದರೆ ಅವು ಅವಮಾನಕರವೆ ಅಥವಾ ನೋವಿನ ಸಂಗತಿಗಳೆ ಎಂಬುದು ಅತಿ ಮುಖ್ಯ. ಬಂಜಗೆರೆ ಜಯಪ್ರಕಾಶ್ ಅವರು ತಮ್ಮ ಕೃತಿಯನ್ನು ‘ಬಸವಣ್ಣನ ಜಾತಿಮೂಲದ ವಿಶ್ಲೇಷಣೆ’ ಎಂದು ಕರೆದುಕೊಂಡಿದ್ದಾರೆ. ಈ ವಿಶ್ಲೇಷಣೆಯ ಹಿಂದೆ ಅವರಿಗೆ ಯಾವುದೇ ದುರುದ್ದೇಶವಿದೆಯೆಂದು ಹೇಳಲಾಗುವುದಿಲ್ಲ. ಬಸವಣ್ಣನವರ ಬಗ್ಗೆ ಅಗೌರವದಿಂದ ಬರೆದಿದ್ದಾರೆಂದು ಆರೋಪಿಸಲಾಗುವುದಿಲ್ಲ. ಯಾಕೆಂದರೆ ಇಡೀ ಕೃತಿಯಲ್ಲಿ ನಿಂದನೆಯ ಯಾವ ಮಾತುಗಳೂ ಬರುವುದಿಲ್ಲ. ವಚನ ಚಳವಳಿ ಮತ್ತು ಬಸವಣ್ಣನವರ ಬಗ್ಗೆ ಅಪಾರ ಗೌರವದಿಂದಲೇ ತಮ್ಮ ವಿಚಾರ ಮಂಡನೆ ಮಾಡುತ್ತಾರೆ. ಅವರ ವಿಚಾರ ಪ್ರತಿಪಾದನೆ ಮತ್ತು ಅಭಿಪ್ರಾಯಗಳನ್ನು ನಾವು ಒಪ್ಪದೆ ಇರಬಹುದು. ಆದರೆ ಅಗೌರವಪೂರ್ವಕವಾಗಿ ಬರೆದಿದ್ದಾರೆಂದು ತೀರ್ಮಾನಿಸಲಾಗದು. ಬಸವ ಸಮಿತಿಯ ಅಧ್ಯಕ್ಷರಾದ ಶ್ರೀ ಅರವಿಂದ ಜತ್ತಿಯವರು ಜುಲೈ ೨೦೦೭ರ ‘ಬಸವಪಥ’ದಲ್ಲಿ ಬಂಜಗೆರೆಯವರ ಕೃತಿಯ ಬಗ್ಗೆ ಕಟು ಆಕ್ಷೇಪ ಮಾಡುತ್ತಲೇ ಹೀಗೆ ಹೇಳುತ್ತಾರೆ: ‘ಆದರೂ ಒಂದು ಮಾತು ಸತ್ಯ. ಕೃತಿಕಾರರು ಸ್ವತಃ ಬಸವಣ್ಣನವರ ಬಗ್ಗೆ ಗೌರವವನ್ನು ಹೊಂದಿರತಕ್ಕಂತಹ ವ್ಯಕ್ತಿಯಾಗಿದ್ದಾರೆ. ನನ್ನ ಅಭಿಪ್ರಾಯವೂ ಇದೇ ಆಗಿದೆ. ಆದ್ದರಿಂದ, ಬಂಜಗೆರೆಯವರ ಪ್ರತಿಪಾದನೆಯನ್ನು ಒಪ್ಪದೆ ಇರುವವರು ಅದು ತಪ್ಪೆಂದು ವಾದಿಸಬಹುದೇ ಹೊರತು ಅಗೌರವದಿಂದ ಬರೆದಿದ್ದಾರೆಂದು ಹೇಳಲಾಗದು. ಬಂಜಗೆರೆಯವರು ತಮ್ಮ ವಿಶ್ಲೇಷಣೆಯನ್ನು ಸಾಂಸ್ಕೃತಿಕ ಶೋಧನೆ’ ಎಂದು ಕರೆದುಕೊಂಡಿದ್ದಾರೆ. ‘ಅಧ್ಯಯನ ಮುಂದುವರೆದಂತೆ ನನ್ನ ಈ ಪ್ರಮೇಯ ಮತ್ತಷ್ಟು ಬಲಗೊಳ್ಳಲು ಬೇಕಾದ ಆಧಾರಗಳು ಕೈಗೂಡುತ್ತವೆಯೇ ಹೊರತು ನಾನು ಮಂಡಿಸಿರುವ ಜಾತಿಮೂಲದ ಅಂಶವಂತೂ ತಲೆಕೆಳಗಾಗುವುದಿಲ್ಲ ಎಂಬ ಪ್ರಾಮಾಣಿಕ ನಂಬುಗೆ ನನಗಿದೆ. ಸತ್ಯವನ್ನು ಹುಡುಕುವುದು, ಸಾಮಾಜಿಕ ಸತ್ಯಗಳನ್ನು ಜನರ ಮುಂದೆ ಇದ್ದುದಿರುವ ಹಾಗೆಯೇ ಮಂಡಿಸುವುದು ಎಂಬ ನನ್ನ ಅಧ್ಯಯನದ ಕಾಯಕದಲ್ಲಿ ಬೇರೆ ಯಾವುದೇ ಬಗೆಯ ಮುಚ್ಚುಮರೆಯ ದುರುದ್ದೇಶಗಳೂ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಅವರಿಗೆ ದುರುದ್ದೇಶವಿಲ್ಲವೆಂಬುದು ಸ್ಪಷ್ಟ. ಆದರೆ ‘ಜಾತಿ ಮೂಲದ ಅಂಶವಂತೂ ತಲೆಕೆಳಗಾಗುವುದಿಲ್ಲ’ ಎಂಬ ದೃಢ, ದಿಟ್ಟ, ಸ್ಪಷ್ಟ ನಿಲುವು ಪುಸ್ತಕದಲ್ಲಿನ ಪ್ರತಿಪಾದನೆ ಬೆಳೆಯುತ್ತ ಹೋದಂತೆ ವಿನಮ್ರವಾಗುತ್ತದೆ. ಬಸವಣ್ಣ ಮತ್ತು ನಾಗಾಯಿ ದೇವರ ಸೇವೆಗೆ ಅಂಕಿತವಾದವರೆಂಬ ಊಹೆಯನ್ನು ಮಂಡಿಸುವಾಗ ‘ಇದು ಹೀಗೇ ಇರಬೇಕು ಎಂದು ಸೂಚಿಸುವಷ್ಟು ನಾನು ಶಕ್ತನಲ್ಲ’ (ಪುಟ-೪೧) ಎಂದು ಹೇಳುತ್ತ ಸಾಂಸ್ಕೃತಿಕ ಸಾಧ್ಯತೆಗಳತ್ತ ವಿನಯದಿಂದಲೇ ಗಮನ ಸೆಳೆಯುತ್ತಾರೆ. ಮುಂದೊಮ್ಮೆ ತಮ್ಮ ಪ್ರತಿಪಾದನೆಯು ಅನುಮಾನಿತ ಸತ್ಯ’ ಎಂದು ಕರೆದುಕೊಳ್ಳುತ್ತಾರೆ. ಮತ್ತೆ ತಳಸ್ತರದ ಸಮುದಾಯಗಳ ಬಗ್ಗೆ ನಾವು ಸಮಗ್ರ ಸಂಶೋಧನೆಯನ್ನು ಹಲವು ಆಯಾಮಗಳ ನೆಲೆಯಲ್ಲಿ ಕೈಗೊಳ್ಳಬೇಕೆಂದೂ ಆಗ ಮಾತ್ರವೇ ಬಸವಣ್ಣ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದವನೆಂಬ ಹುಸಿ ಸತ್ಯವನ್ನು ಹೇಳುವ ಅಪದ್ಧಗಳನ್ನು ನಿವಾರಿಸಲಿಕ್ಕೆ ಸಾಧ್ಯವಾಗುತ್ತದೆ’ (ಪುಟ-೮೪) ಎಂದು ದೃಢವಾಗಿ ಹೇಳುತ್ತಾರೆ. ಬಸವಣ್ಣ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಕಿನ್ನರಿ ಬೊಮ್ಮಯ್ಯ, ಮಡಿವಾಳ ಮಾಚಯ್ಯ ಮುಂತಾದವರು ತಳವರ್ಗದ ‘ಅಸ್ಪೃಶ್ಯ ಜಾತಿಗಳಿಂದ ಮೂಡಿಬಂದ ಶರಣರಾಗಿದ್ದರು’ ಎಂದು ಖಚಿತವಾಗಿ ಹೇಳುವ ಬಂಜಗೆರೆ ಇದಕ್ಕೆ ಪ್ರಾಜ್ಞ ವಿದ್ವಾಂಸರು ತಮ್ಮ ವಿದ್ವತ್ತಿನ ನೆರವು ನೀಡಿ ಸಂಶೋಧನೆಯ ಮುಂದುವರಿಕೆಗೆ ಸಹಕರಿಸಬೇಕು ಎಂಬುದು ನನ್ನ ನಮ್ರ ವಿನಂತಿಯಾಗಿದೆ’ (ಪುಟ-೮೪) ಎಂದು ಪುಸ್ತಕವನ್ನು ಮುಗಿಸುತ್ತಾರೆ. ಹೀಗಾಗಿ ಇವರ ಕೃತಿಯಲ್ಲಿ ಬಸವಣ್ಣನವರು ಅಸ್ಪೃಶ್ಯ (ಮಾದಿಗ) ಎಂಬ ದೃಢತೆ, ದೇವದಾಸಿಯ (ಬಸವಿಯ) ಸಂತಾನವಾಗಿರಬಹುದೆ ಎಂಬ ಅನುಮಾನ ಮತ್ತು ಊಹೆಗಳಿದ್ದ ಕಡೆ ಮೆದುತ್ವ, ವಿನಯ – ಎಲ್ಲವೂ ಸೇರಿಕೊಂಡಿವೆ. ತಮ್ಮ ಪ್ರತಿಪಾದನೆಗೆ ಬಂಜಗೆರೆಯವರು ಬಳಸಿರುವ ಆಧಾರಗಳನ್ನು ಏಕಾ‌ಏಕಿ ನಿರಾಕರಿಸುವಂತಿಲ್ಲ. ಬಸವಣ್ಣನವರ ಕೆಲವು ವಚನಗಳಿಗೆ ಅವರು ಕೊಡುವ ಎಲ್ಲ ಅರ್ಥಗಳೂ ವಾಚ್ಯವೆಂದೊ, ದೂರಾನ್ವಯವೆಂದೂ, ಧ್ವನ್ಯಾರ್ಥಗ್ರಹಿಕೆಯ ಅಭಾವದಿಂದ ಕೂಡಿವೆಯೆಂದೂ ಹೇಳಲಾಗದು. ಆದರೆ ಅವರು ಉಲ್ಲೇಖಿಸುವ ಕೆಲವು ವಿದ್ವಾಂಸರ ಹೇಳಿಕೆಗಳಿಗೆ ಮೂಲವಾದ ಕೃತಿಗಳಿಗೆ ಇವರೇ ನೇರವಾಗಿ ಹೋಗಬೇಕಿತ್ತು ಮತ್ತು ಇವರು ಆಯ್ದುಕೊಂಡ ವಚನಗಳಿಗೆ ವಿರುದ್ಧವಾದ’ ವಚನಗಳನ್ನು ಮುಖಾಮುಖಿಯಾಗಿಸಿ ಮತ್ತಷ್ಟು ಶೋಧ ನಡೆಸಬೇಕಿತ್ತು ಎಂದು ನನಗೆ ಪ್ರಾಮಾಣಿಕವಾಗಿ ಅನ್ನಿಸುತ್ತದೆ. ಬಿ. ರಾಜಶೇಖರಪ್ಪನವರು ತಮ್ಮ ಲೇಖನವೊಂದರಲ್ಲಿ ಎತ್ತಿರುವ ಪ್ರಶ್ನೆಗಳು (ಬಸವಪಥ ಜುಲೈ ೨೦೦೭) ಈ ಮುಖಾಮುಖಿಗೆ ಭಾವೋದ್ವೇಗ ರಹಿತ ಆಧಾರವಾಗ ಬಲ್ಲವು. ಅಂತೆಯೇ ಡಾ. ರಹಮತ್ ತರೀಕೆರೆಯವರು ಜುಲೈ ೨೦೦೭ರ ‘ಸಂವಾದ’ ಸಂಚಿಕೆಯಲ್ಲಿ ಬರೆದಿರುವ ‘ಆನುದೇವಾ ಹೊರಗಣವನು – ಹುಟ್ಟಿಸಿರುವ ಪ್ರಶ್ನೆಗಳು’ ಎಂಬ ಪ್ರಬುದ್ಧ ಲೇಖನವು ಎತ್ತಿರುವ ಪ್ರಶ್ನೆಗಳು ಮಹತ್ವಪೂರ್ಣವಾಗಿವೆ. ನಾನು ಬಂಜಗೆರೆಯವರ ಪ್ರತಿಪಾದನೆಯ ಕೆಲ ಅಂಶಗಳನ್ನು ಒಪ್ಪುತ್ತೇನಾದರೂ ಅಂತಿಮ ತೀರ್ಮಾನಕ್ಕೆ ಬರಲು ಮತ್ತಷ್ಟು ಪುರಾವೆ, ಚರ್ಚೆ ಮತ್ತು ಶೋಧ ಬೇಕಿತ್ತು ಎಂಬ ಅತೃಪ್ತಿ ಉಳಿಯುತ್ತದೆ. ತನ್ನ ಪ್ರತಿಪಾದನೆಯ ಅಂಶಗಳಿಗೆ ವಿರುದ್ಧವಾದ ಅಂಶಗಳಿಗೆ ಸೂಕ್ತವಾಗಿ ಮುಖಾಮುಖಿಯಾಗುವುದು, ಸಂವಾದಿಸುವುದು, ಆ ಮೂಲಕ ತೀರ್ಮಾನಗಳಿಗೆ ತಲುಪುವುದು ಅಗತ್ಯ.

ಅದೇನೇ ಇರಲಿ, ಬಂಜಗೆರೆಯವರು ಶೂನ್ಯದಲ್ಲಿ ಶೋಧ ನಡೆಸಿಲ್ಲ. ನಿರೂಪಣೆಯಲ್ಲಿ ಸಭ್ಯತೆ, ಸೌಜನ್ಯಗಳ ಎಲ್ಲೆ ಮೀರಿಲ್ಲ. ಅವರು ಸಂಶೋಧನೆಯ ಸಾಂಪ್ರದಾಯಿಕ ವಿಧಾನಗಳನ್ನೂ ಅನುಸರಿಸಿಲ್ಲ. ತಮ್ಮದೇ ಆದ ಆಕರ, ಆಧಾರ, ವಿಧಾನಗಳ ಮೂಲಕ ಬರೆದಿದ್ದಾರೆ. ಆ ಬಗ್ಗೆ ಭಿನ್ನಾಭಿಪ್ರಾಯಿಸುವ ಅಥವಾ ಅನುಮೋದಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಬಸವಣ್ಣ ನವರು ಅಸ್ಪೃಶ್ಯ (ಮಾದಿಗ) ಸಂಜಾತ ಅಥವಾ ದೇವದಾಸಿ ಪುತ್ರ ಎಂಬುದು ನಿಜವೇ ಇದ್ದರೆ ಅದು ನೋವಿನ ಸಂಗತಿಯೆ? ಅವಮಾನಕರವೆ? ಈ ಪ್ರಶ್ನೆಗಳು ಸಾಮಾಜಿಕವಾಗಿ ಮಹತ್ವವುಳ್ಳವು, ಈ ಅಂಶಗಳ ಸತ್ಯಾಸತ್ಯತೆ ಏನೇ ಇರಲಿ, ‘ಅಸ್ಪೃಶ್ಯ’ ಎನ್ನುವುದು ‘ಅವಮಾನ’ ಎಂದು ಭಾವಿಸುವುದೇ ಬಸವಣ್ಣನವರಿಗೆ ಮಾಡುವ ಅವಮಾನ. ಯಾಕೆಂದರೆ ಬಸವಣ್ಣನವರು ತನ್ನನ್ನು ಅಸ್ಪೃಶ್ಯ ಎಂದು ಕರೆದುಕೊಳ್ಳುವಲ್ಲಿ ಆನಂದ ಅನುಭವಿಸುತ್ತಿದ್ದರು ಎಂಬುದನ್ನು ಅವರು ಅಸ್ಪೃಶ್ಯರಾಗಿ ಹುಟ್ಟಿಲ್ಲವೆಂದು ವಾದಿಸುವವರೂ ಒಪ್ಪುತ್ತಾರೆ. ಸ್ವತಃ ಬಸವಣ್ಣನವರಿಗೆ ಅದರಲ್ಲಿ ಆನಂದವಿರುವಾಗ ಅವಮಾನದ ಪ್ರಶ್ನೆ ಎಲ್ಲಿ ಬಂತು? ಬಸವಣ್ಣ ಅಸ್ಪೃಶ್ಯರಾಗಿ ಹುಟ್ಟಿದ್ದಾರೆಂಬ ವಾದವನ್ನು ಅವಮಾನವೆಂದು ಭಾವಿಸುವವರು ಈ ಮೂಲಕ ಆಸ್ಪೃಶ್ಯರಿಗೆ ಅವಮಾನ ಮಾಡುತ್ತಿದ್ದಾರೆ. ಆದ್ದರಿಂದ ಆ ಅಭಿಪ್ರಾಯವನ್ನು ಬೇಕಾದರೆ ಅಲ್ಲಗಳೆಯಲಿ, ಅವಮಾನ ಎಂದು ಭಾವಿಸುವುದು ಬೇಡ, ಇನ್ನು ದೇವದಾಸಿ ಅಥವಾ ಬಸವಿಪುತ್ರರಾಗಿರಬಹುದೆಂಬ ಅನುಮಾನವನ್ನೂ ‘ಅವಮಾನ’ ಎಂದು ಭಾವಿಸಬೇಕಾಗಿಲ್ಲ, ಮೂಢನಂಬಿಕೆಗೆ ಬಲಿಯಾಗಿ ಪುರುಷ ಪ್ರಧಾನ ಸಮಾಜದ ಶೋಷಣೆಗೆ ಒಳಗಾದ ದೇವದಾಸಿ ಅಥವಾ ಬಸವಿ ಸಮುದಾಯದ ನೋವು ಮತ್ತು ಅವಮಾನಗಳನ್ನು ಅರ್ಥಮಾಡಿಕೊಂಡವರಾರೂ ಅಂಥವರ ಸಂತಾನವಾದದ್ದೇ ಅವಮಾನಕರವೆಂದೂ ನೋವಿನ ಸಂಗತಿಯೆಂದೂ ತಿಳಿಯುವುದಿಲ್ಲ. ಹಾಗೆ ತಿಳಿದರೆ ಅದು ಪುರುಷ ಪ್ರಧಾನ ಸಮಾಜದ ಜೀವ ವಿರೋಧಿ ನಿಲುವಾಗುತ್ತದೆ. ಇದರರ್ಥ, ಬಂಜಗೆರೆಯವರ ವಾದವನ್ನು ಒಪ್ಪಬೇಕೆಂಬ ಒತ್ತಾಯವಲ್ಲ; ಸಾಮಾಜಿಕ ವಾಸ್ತವತೆಯ ಒಂದು ಅವಲೋಕನ ಅಷ್ಠೆ.

ಆದ್ದರಿಂದ ಬಂಜಗೆರೆಯವರ ಕೃತಿಯನ್ನು ಮುಟ್ಟುಗೋಲು ಹಾಕಬೇಕೆಂದು ಹಟ ಮಾಡುತ್ತಿರುವವರ ವಾದದಲ್ಲಿ ಹುರುಳಿಲ್ಲ. ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಒತ್ತಾಯಿಸುವ ಬದಲು ‘ಆನುದೇವಾ’ ಕೃತಿಯ ನಿಲುವುಗಳನ್ನು ಅಲ್ಲಗಳೆಯುವಂತಹ ಕೃತಿ, ಅಥವಾ ಲೇಖನಗಳನ್ನು ಬರೆಯಲಿ; ತಪ್ಪು ಮಾಹಿತಿಯಿದ್ದರೆ ರಚನಾತ್ಮಕವಾಗಿ ಟೀಕಿಸಲಿ; ಈ ಕೃತಿಯ ಬಗ್ಗೆ ಗೌರವವೇ ಇಲ್ಲದಿದ್ದರೆ ಸಂಪೂರ್ಣ ನಿರ್ಲಕ್ಷಿಸಲಿ. ಅದರ ಬದಲು ಸಂವಾದದ ವಾತಾವರಣವನ್ನೇ ನಾಶ ಮಾಡಹೊರಡುವುದು, ಮುಗ್ಧರನ್ನು ಹಾದಿತಪ್ಪಿಸಿ ಬೀದಿ ಜಗಳಕ್ಕೆ ಹಚ್ಚುವುದು ಸರಿಯಲ್ಲ.

ಕೆಲವರು ಕೇಳುತ್ತಾರೆ : ಜಾತಿ ವಿನಾಶದ ಬಗ್ಗೆ ಹೋರಾಟ ಮಾಡಿದ ಬಸವಣ್ಣನವರ ಜಾತಿ ಹುಡುಕುವುದು ಏಕೆ? – ಎಂದು. ಮೇಲ್ನೋಟಕ್ಕೆ ಇದು ಉತ್ತಮ ಆದರ್ಶದ ಮಾತೇ ಸರಿ. ಆದರೆ ಇಲ್ಲಿ ಎರಡು ಪ್ರಶ್ನೆಗಳಿವೆ. ಮೊದಲನೆಯದು ಬಸವಣ್ಣನವರ ಹೋರಾಟ ಜಾತಿ ವಿನಾಶವನ್ನು ಆದ್ಯತೆಯನ್ನಾಗಿಟ್ಟುಕೊಂಡಿತ್ತೊ ಅಥವಾ ಎಲ್ಲ ಜಾತಿಯವರಿಗೂ ಧಾರ್ಮಿಕ ಸಮಾನತೆಯನ್ನು ತಂದುಕೊಡುವ ಶಿವ ಕೇಂದ್ರಿತ ಹೋರಾಟವಾಗಿತ್ತೋ ಎಂಬುದು. ಎರಡನೆಯದು ಕನ್ನಡ ಸಾಹಿತ್ಯ ಸಂಶೋಧನೆಯಲ್ಲಿ ಯಾರೂ ಜಾತಿಯನ್ನು ಹುಡುಕಿಲ್ಲವೆ? ಎಂಬುದು. ನಾನು ಎತ್ತಿದ ಮೊದಲನೆಯ ಪ್ರಶ್ನೆಯನ್ನು ವಚನ ಚಳವಳಿಯ ಗೌರವಯುತ ಪುನರ್ ಮೌಲ್ಯೀಕರಣಕ್ಕೆ ಪ್ರೇರಣೆಯಾಗಿ ಬಳಸಿಕೊಳ್ಳಬಹುದೆಂದು ಭಾವಿಸುತ್ತೇನೆ. ವಚನ ಚಳವಳಿಯು ಧಾರ್ಮಿಕ ಸಮಾನತೆಗಾಗಿ ನಡೆದ ಬಹುದೊಡ್ಡ ಆಂದೋಲನ; ವಚನ ಸಾಹಿತ್ಯ – ವಿಶೇಷವಾಗಿ ಭಕ್ತಿಸ್ಥಲ – ಕವಿಮನಸ್ಸಿನ ಅನನ್ಯ ಕೊಡುಗೆ. (ಇದೇ ಮಾತನ್ನು ನಾನು ಮಾಹೇಶ್ವರ ಸ್ಥಲದ ಬಗ್ಗೆ ಹೇಳುವುದಿಲ್ಲ) ವೈದಿಕ ಧರ್ಮಕ್ಕೆ ಎದುರಾಗಿ, ಉತ್ತರವಾಗಿ ಬಂದ, ಬೆಳೆದ ಈ ಚಳವಳಿ ಚಾರಿತ್ರಿಕವಾಗಿ ಪ್ರಗತಿಪರ ಪಕ್ವತೆಯನ್ನು ತೋರಿದಂತೆಯೇ ಕೆಲವು ಇತಿಮಿತಿಗಳಿಗೂ ಒಳಪಟ್ಟಿತ್ತು. ದೇಹದೊಳಗೆ ದೇವಾಲಯದ ಕಲ್ಪನೆಯನ್ನು ತಂದದ್ದು ತಾತ್ವಿಕ ಪಕ್ವತೆಗೆ ಒಂದು ಉತ್ತಮ ಉದಾಹರಣೆ. ಅಂತೆಯೇ ‘ಶರಣ ಸತಿ ಲಿಂಗಪತಿ’ ಎಂಬ ಕಲ್ಪನೆಯಲ್ಲಿ ಭಕ್ತಿಯನ್ನು ಖಾಸಗಿ ಗೊಳಿಸಿದ್ದು ಮತ್ತೊಂದು ಪ್ರಬುದ್ಧ ತಾತ್ವಿಕ ಚಿಂತನೆ. ಆದರೆ ಎಲ್ಲವೂ ನಡೆದದ್ದು ‘ಏಕದೇವೋ ಪಾಸನೆ’ಯ ಕೇಂದ್ರದಲ್ಲಿ ಎಂಬುದು ಇದರ ಇತಿಮಿತಿ. ಈ ಅಂಶವನ್ನು ಕುರಿತು ನಾನು ೧೯೯೩ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ‘ಕನ್ನಡ ಸಾಹಿತ್ಯ ಪುನರ್‌ಮೌಲ್ಯೀಕರಣ ಮಾಲೆ’ಗೆ ಬರೆದ ಪ್ರಸ್ತಾವನೆಯಲ್ಲಿ ಪ್ರಸ್ತಾಪಿಸಿದ್ದೆ. ಅಲ್ಲಿನ ಕೆಲವು ಸಾಲುಗಳು ಹೀಗಿವೆ : “ವಚನಕಾರರು ಎಲ್ಲ ಜಾತಿ-ವರ್ಗಗಳನ್ನು ಒಂದುಗೂಡಿಸಲು ಪ್ರಯತ್ನಿಸಿದ್ದು ನಿಜವಾದರೂ ಅದಕ್ಕೆಲ್ಲ ಕೇಂದ್ರವೆಂದರೆ ಶಿವಭಕ್ತಿ, ಶಿವಭಕ್ತನಲ್ಲದವನು ರಾಜನಾದರೂ ಒಂದೇ, ಸಾಮಾನ್ಯ ನಾದರೂ ಒಂದೇ. ಭವಿಯ ಬಗ್ಗೆ ಪ್ರೀತ್ಯಾದರಗಳಿಲ್ಲದ ನಿಲುವು ತೆಗೆದುಕೊಂಡ ವಚನ ಚಳವಳಿ ಶಿವಭಕ್ತಿಯನ್ನು ಶಕ್ತಿ ಕೇಂದ್ರವಾಗಿಸಿಕೊಂಡಿತು, ಭಕ್ತಿಯ ಖಾಸಗೀಕರಣ ಮತ್ತು ಕೇಂದ್ರೀಕರಣಗಳ ವೈರುಧ್ಯವನ್ನು ಒಡಲೊಳಗಿಟ್ಟುಕೊಂಡೇ ಬೆಳೆಯಿತು. ಏಕದೇವೋಪಾಸನೆಯ ತತ್ವಕ್ಕೆ ಶಿವನೇ ಕೇಂದ್ರ, ಶಿವನೇ ಶಕ್ತಿ, ಈ ಕೇಂದ್ರ ಶಕ್ತಿಗೆ ಬದ್ಧರಾದವರು ಮಾತ್ರ ಭಕ್ತರು… ಶಿವವ್ಯಕ್ತಿತ್ವ, ಶಿವಮನಸ್ಸು ಮತ್ತು ಶಿವಮನುಷ್ಯ ಮುಖ್ಯವಾದ ವಚನ ಚಳವಳಿಯ ಫಲಿತವನ್ನು ನಾನು ‘ಶಿವಸಂಸ್ಕೃತಿ’ ಎಂದು ಕರೆಯುತ್ತೇನೆ… ವಚನ ಚಳವಳಿಯನ್ನು ಬೇರೆಲ್ಲ ಅಂಶಗಳಿಗಿಂತ ‘ಶಿವಸಂಸ್ಕೃತಿ ಚಳವಳಿ’ಯೆಂದು ಗುರುತಿಸುವುದೇ ಸರಿ….. ಕೇಂದ್ರೀಕೃತ ಅಲ್ಲಾಭಕ್ತಿ, ರಾಮಭಕ್ತಿ, ಶಿವಭಕ್ತಿಗಳು ಉಗ್ರರೂಪ ಪಡೆದಂತೆಲ್ಲ ಧಾರ್ಮಿಕ ಮೂಲಭೂತವಾದೀ ಶಕ್ತಿಗಳಾಗುವ ಅಪಾಯವಿರುತ್ತದೆ. ಭಕ್ತಿಯ ಕೇಂದ್ರೀಕರಣಕ್ಕೂ ಮೂಲಭೂತವಾದಕ್ಕೂ ಆಳದಲ್ಲಿ ಸಂಬಂಧ ಸಾಧ್ಯವೆಂಬ ಸೂಚನೆಯನ್ನು ಇಲ್ಲಿ ಸಾದರಪಡಿಸುತ್ತಿದ್ದೇನೆ…” ಮುಂದೆ ನಾನು ೨೦೦೩ರಲ್ಲಿ ‘ಪ್ರಜಾವಾಣಿ’ಯಲ್ಲಿ ಬರೆಯುತ್ತಿದ್ದ ‘ಪರಂಪರೆಯೊಂದಿಗೆ ಪಿಸುಮಾತು’ ಎಂಬ ಅಂಕಣದಲ್ಲಿ ‘ಭಕ್ತ ಭವಿಗಳ ನಡುವೆ ಬೆಚ್ಚಿ ಬಿದ್ದ ಭಕ್ತಿ’ ಎಂಬ ಲೇಖನ ಬರೆದು ಈ ವಿಚಾರವನ್ನು ಮತ್ತಷ್ಟು ಪುರಾವೆಗಳ ಸಮೇತ ವಿಸ್ತರಿಸಿದ್ದೆ. ಹರಿಹರ, ರಾಘವಾಂಕರ ಕೆಲ ಕೃತಿಗಳನ್ನು ಮೆಚ್ಚುತ್ತಲೇ ಶಿವಭಕ್ತರಲ್ಲದವರ ಬಗ್ಗೆ ತಳೆದ ಕಠೋರ ನಿಲುವನ್ನು ಚರ್ಚಿಸಿದ್ದೆ. ‘ಸಿದ್ದರಾಮ ಚಾರಿತ್ರ’ ಒಂದು ಕಡೆ ಶಿವನಲ್ಲವೆಂಬ ಪರವಾದಿಯ ತಲೆಯ ಮೇಲೆ ಎಡಗಾಲಿನ ಚಪ್ಪಲಿ ಇಡಬೇಕು ಎಂಬರ್ಥದ ಮಾತು ಬರುವುದನ್ನು ಜ್ಞಾಪಿಸಿದರೆ ಶಿವಕೇಂದ್ರಿತ ಭಕ್ತಿ ತಳೆಯುತ್ತ ಹೋದ ಉಗ್ರರೂಪಕ್ಕೆ ಒಳ್ಳೆ ಉದಾಹರಣೆಯಾದೀತು. ಇಂತಹ ಇತಿಮಿತಿಗಳ ಬಗ್ಗೆ ಸೂಕ್ತ ಚರ್ಚೆಯಾಗಬೇಕಾದ ಅಗತ್ಯವಿದೆ. ಸಂಕ್ಷಿಪ್ತವಾಗಿ ಈ ಅಂಶಗಳನ್ನು ಪ್ರಸ್ತಾಪಿಸಲು ಕಾರಣವಿದೆ. ಅಂದು ಭಕ್ತಿಯ ಕೇಂದ್ರೀಕರಣದಲ್ಲಿ – ಏಕದೈವನಿಷ್ಠೆಯ ಉಗ್ರತೆಯಲ್ಲಿ ಸೇರಿಕೊಂಡಿದ್ದ ಮೂಲಭೂತವಾದಿ ಮನೋಧರ್ಮವು ಇಂದು ‘ಮುಟ್ಟುಗೋಲು ಮನೋಧರ್ಮ’ದಲ್ಲಿ ಪ್ರಕಟಗೊಳ್ಳುತ್ತಿದೆಯೆಂದು ನನಗನ್ನಿಸುತ್ತಿದೆ. ಹನ್ನೆರಡನೆಯ ಶತಮಾನದಲ್ಲೇ ಬಸವಣ್ಣನವರ ವಿಚಾರಧಾರೆಯನ್ನು ಒಪ್ಪದ ಜಡ ಸಂಪ್ರದಾಯದ ವೀರಶೈವರಿದ್ದರೆಂದೂ ಕೆಲವು ಸಂಶೋಧಕರು ಗುರುತಿಸಿದ್ದಾರೆ. ಸಂಶೋಧಕರಾದ ಶ್ರೀ ಪಿ.ಬಿ. ದೇಸಾಯಿಯವರು ಬಿಜ್ಜಳನು ಜೈನನಲ್ಲವೆಂದೂ ಸಂಪ್ರದಾಯಸ್ಥ ವೀರಶೈವನೆಂದೂ ಪ್ರತಿಪಾದಿಸುತ್ತಾರೆ. ಇದರ ಸತ್ಯಾಸತ್ಯತೆ ಏನೇ ಇರಲಿ, ಏಕದೇವೋಪಾಸನೆಯು ವಿವಿಧ ಜಾತಿ-ವರ್ಗಗಳನ್ನು ಧಾರ್ಮಿಕ ಸಮಾನತೆಯ ‘ಶಿವಧರ್ಮ’ ಮತ್ತು ‘ಶಿವ ಸಂಸ್ಕೃತಿ’ಗೆ ಕರೆತಂದಂತೆ ಮುಂದೆ ಉಗ್ರರೂಪಿಗಳಿಗೂ ಒಂದು ಒತ್ತಾಸೆಯಾಯಿತೆಂದು ಭಾವಿಸಬಹುದು. ಶಿವಭಕ್ತರಲ್ಲದವರನ್ನು ಉಗ್ರನಿರಾಕರಣೆಗೆ ಒಳಪಡಿಸುವುದರಲ್ಲೇ ಈ ಒತ್ತಾಸೆಯಿದೆ. ಅಂದಿನಂತೆ ಇಂದೂ ಪ್ರಗತಿಪರ ವೀರಶೈವರು ಮತ್ತು ಯಥಾಸ್ಥಿತಿವಾದಿ, ಜಾತಿವಾದಿ ವೀರಶೈವರು ಇದ್ದಾರೆ. ಆದ್ದರಿಂದ ‘ಆನುದೇವಾ’ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಎಲ್ಲ ವೀರಶೈವರೂ ಒತ್ತಾಯಿಸುತ್ತಿದ್ದಾರೆಂದೂ ಎಲ್ಲ ವೀರಶೈವರೂ ಯಥಾಸ್ಥಿತಿವಾದಿಗಳೆಂದೂ ತಿಳಿಯಬಾರದು. ಚನ್ನವೀರಕಣವಿ, ಚಂದ್ರಶೇಖರ ಪಾಟೀಲ, ಕೆ. ಮರುಳಸಿದ್ದಪ್ಪ, ಲಿಂಗದೇವರು ಹಳೇಮನೆ, ಚನ್ನಬಸಪ್ಪ ಬೆಟ್ಟದೂರು, ಚಂದ್ರಶೇಖರ ತಾಳ್ಯ – ಈ ಕೆಲವರು ಹುಟ್ಟಿನಿಂದ ಲಿಂಗಾಯತರಾದರೂ ಅದನ್ನು ಮೀರಿದ ನಿಲುವುಗಳನ್ನು ತೆಗೆದುಕೊಂಡು ಮುಟ್ಟುಗೋಲನ್ನು ವಿರೋಧಿಸಿದ್ದಾರೆ. ದಿಟ್ಟನಿಲುವು ತೆಗೆದುಕೊಂಡ ಇವರು ಅಭಿನಂದನಾರ್ಹರು. ‘ಬಸವ ಸಮಿತಿ’ಯು ‘ಆನುದೇವಾ’ಕ್ಕೆ ಪ್ರತಿಕ್ರಿಯೆಯಾಗಿ ‘ಬಸವಪಥ’ದ ಒಂದು ಸಂಚಿಕೆಯನ್ನೇ ಮೀಸಲಾಗಿಟ್ಟಿದೆ. ಅಧ್ಯಕ್ಷರು ಕೆಲವು ಉದ್ರೇಕದ ಮಾತುಗಳನ್ನಾಡಿದ್ದರೂ ಲೇಖನಗಳು ಚರ್ಚೆಯನ್ನು ಸಾಧ್ಯವಾಗಿಸುತ್ತವೆ.

ಆದರೆ ನನಗೆ ಆಘಾತಕಾರಿಯೆನ್ನಿಸಿದ್ದೆಂದರೆ ಹುಟ್ಟಿನಿಂದ ಲಿಂಗಾಯತರಾದ ಅನೇಕ ಪ್ರಸಿದ್ದ ಗಣ್ಯ ಲೇಖಕರು ಮುಟ್ಟುಗೋಲಿನ ವಿಷಯದಲ್ಲಿ ವಹಿಸಿದ ಮೌನ! ತಮಗೆ ಒಪ್ಪಿತವಾಗದಿದ್ದರೆ, ಸದರಿ ಕೃತಿಯ ವಿಚಾರವನ್ನು ನಿರಾಕರಿಸಿಯೂ ಮುಟ್ಟುಗೋಲಿನ ಒತ್ತಾಯವನ್ನು ವಿರೋಧಿಸುವಷ್ಟು ಪ್ರಜಾಸತ್ತಾತ್ಮಕತೆ ಇವರಲ್ಲಿಲ್ಲವೆ ಎಂಬ ಪ್ರಶ್ನೆ ತೀರಾ ಸಹಜ.

ಇಷ್ಟೆಲ್ಲ ವಿವರಿಸುವಾಗ ಬಸವಣ್ಣನವರು ಮತ್ತು ವಚನ ಚಳವಳಿಯು ಜಾತಿವಿನಾಶವನ್ನು ಆದ್ಯ ಅಂಶವನ್ನಾಗಿಟ್ಟುಕೊಂಡಿತ್ತೆ ಅಥವಾ ಎಲ್ಲ ಜಾತಿಯವರಿಗೂ ಧಾರ್ಮಿಕ ಸಮಾನತೆಯನ್ನು ತಂದುಕೊಡುವ ಶಿವಕೇಂದ್ರಿತ ಹೋರಾಟವಾಗಿತ್ತೆ ಎಂದು ನಾನೇ ಹಾಕಿಕೊಂಡ ಪ್ರಶ್ನೆಗೆ ಉತ್ತರಿಸುತ್ತಿದ್ದೆ. ಈಗ ಎರಡನೇ ಪ್ರಶ್ನೆಗೆ ಬರೋಣ. ಕನ್ನಡ ಸಾಹಿತ್ಯ ಸಂಶೋಧನೆಯಲ್ಲಿ ಯಾರೂ ಜಾತಿಯನ್ನು ಹುಡುಕಿಲ್ಲವೆ? ಎಲ್ಲಾದರೂ ಉಂಟೆ! ಕವಿಗಳ ಜಾತಿ-ಧರ್ಮಗಳನ್ನು ಬಿಟ್ಟು ಎಷ್ಟು ಜನ ಸಂಶೋಧನೆ ಮಾಡಿದ್ದಾರೆ? ಪ್ರತಿ ಕವಿಯ ಜನ್ಮ ಮೂಲದ ಬಗ್ಗೆ ಸಂಶೋಧನೆ ಮತ್ತು ಚರ್ಚೆ ನಡೆದಿದೆ. ಅಷ್ಟೇ ಅಲ್ಲ, ತಂತಮ್ಮ ಜಾತಿ-ಧರ್ಮದ ಕವಿ-ಲೇಖಕರನ್ನು ಕುರಿತು ಸಂಶೋಧನೆ ಮಾಡಿದವರೇ ಹೆಚ್ಚು. ಈ ವಿಷಯಕ್ಕೆ ಕಾಣಿಸದ ಜಾತಿವಿನಾಶದ ಪ್ರಶ್ನೆ ಈಗ ಮಾತ್ರ ಯಾಕೆ ಮುಖ್ಯವಾಗುತ್ತಿದೆ? ಬಸವಣ್ಣನವರು ಮೂಲತಃ ಬ್ರಾಹ್ಮಣರು ಎಂದು ಸಂಶೋಧಿಸಿದಾಗ ಅವರ ಜಾತಿಯನ್ನೇಕೆ ಹುಡುಕುತ್ತೀರಿ ಎಂದು ಪ್ರಶ್ನಿಸದೆ ಸುಮ್ಮನಿದ್ದು ‘ಅಸ್ಪೃಶ್ಯ’ ಎಂದಕೂಡಲೆ (ಅದು ತಪ್ಪೋ, ಸರಿಯೊ ಬೇರೆ ಪ್ರಶ್ನೆ) ಜಾತಿ ವಿನಾಶದ ವಿಷಯವನ್ನು ಯಾಕೆ ಮುಂದು ಮಾಡಲಾಗುತ್ತಿದೆ? ಒಂದು ವೇಳೆ ಬಸವಣ್ಣನವರು ಅಸ್ಪೃಶ್ಯರಾಗಿಯೇ ಹುಟ್ಟಿದ್ದು ನಿಜವಾದರೆ, ಈ ದೇಶದಲ್ಲಿ ಎಂಟುನೂರು ವರ್ಷಗಳ ಹಿಂದೆ ಅಸ್ಪೃಶ್ಯರೊಬ್ಬರು ಧಾರ್ಮಿಕ ಸಮಾನತೆಯ ಹೋರಾಟ ಕಟ್ಟಲು ಸಾಧ್ಯವಾಯಿತೆಂಬುದು ನಮ್ಮ ಸಾಮಾಜಿಕ ಚರಿತ್ರೆಯಲ್ಲಿ ಒಂದು ಮೈಲಿಗಲ್ಲಾಗುವುದಿಲ್ಲವೆ? ಆದ್ದರಿಂದ ಹುಸಿ ಆದರ್ಶದ ಮಾತುಗಳನ್ನು ಬದಿಗಿಟ್ಟು ವಾಸ್ತವವನ್ನು ಎದುರಿಸೋಣ. ನಿರ್ವಿಕಾರವಾಗಿ ಜಾತಿಯನ್ನು ಸಾಮಾಜಿಕ ವಾಸ್ತವವೆಂದು ಗ್ರಹಿಸುವುದು ಬೇರೆ; ಜಾತಿವಾದ ಮಾಡುವುದು ಬೇರೆ, ಮುಟ್ಟುಗೋಲಿಗೆ ಒತ್ತಾಯಿಸುತ್ತಿರುವವರ ವರ್ತನೆಯಲ್ಲಿ ಜಾತಿವಾದದ ವಾಸನೆಯಿದೆ; ಧಾರ್ಮಿಕ ಮೂಲಭೂತವಾದ ಆವರಿಸಿಕೊಂಡಿದೆ.

‘ಆನುದೇವಾ ಹೊರಗಣವನು’ ಕುರಿತ ವಾದ-ವಿವಾದ-ಮೊಂಡು ವಾದಗಳ ಮಧ್ಯೆ ನಾನು ರಹಮತ್ ತರೀಕೆರೆಯವರಂತೆಯೇ ಹೀಗೆ ಭಾವಿಸುತ್ತೇನೆ : ‘ಇಬ್ಬರು ದಲಿತ ಶರಣರ ಮನೆಯ ದಾಸರ ಮಕ್ಕಳು ಬೆರಣಿ ಆರಿಸಲು ಹೋಗಿ ಸಂಗ ಮಾಡಿದಾಗ ತಾನು ಹುಟ್ಟಿದೆ ಎಂದು ಹೇಳಿಕೊಳ್ಳುವ ಬಸವಣ್ಣ, ದಲಿತ ಮೂಲದವನು ಎಂದು ಸಾಬೀತಾದರೆ ಸಂತೋಷವಾಗುತ್ತದೆ. ಸಾಬೀತಾಗದಿದ್ದರೆ ದುಗುಡವಾಗುವುದಿಲ್ಲ. (ಸಂವಾದ-ಜುಲೈ-೨೦೦೭).

ಡಾ. ಎಸ್.ಎಲ್. ಭೈರಪ್ಪನವರ ‘ಆವರಣ’ದ್ದು ಇನ್ನೊಂದು ಕತೆ. ಈ ಕಾದಂಬರಿಯ ನಾಯಕಿ ಲಕ್ಷ್ಮಿ ‘ಅಪ್ಪಟ ಗಾಂಧಿವಾದಿ’ ನರಸಿಂಹಯ್ಯನವರ ಮಗಳು. ಮುಸ್ಲಿಂ ಅಮೀರನನ್ನು ಮದುವೆಯಾದವಳು. ಬರಬರುತ್ತ ಅಮೀರನ ವರ್ತನೆ ಇಷ್ಟವಾಗುವುದಿಲ್ಲ. ಇಬ್ಬರೂ ಪರಸ್ಪರ ದೂರವಾಗುವ ಸನ್ನಿವೇಶ ನಿರ್ಮಾಣವಾಗುತ್ತೆ. ಈಕೆ ಸಂಶೋಧನಾತ್ಮಕ ಗ್ರಂಥಗಳನ್ನು ಅಧ್ಯಯನ ಮಾಡಿ ಔರಂಗಜೇಬನ ಕಾಲ ಕುರಿತು ಕಾದಂಬರಿ ಬರೆಯತೊಡಗುತ್ತಾಳೆ. ಇದರ ಫಲವಾಗಿ ಕಾದಂಬರಿಯೊಳಗೊಂದು ಕಾದಂಬರಿ ಹುಟ್ಟುತ್ತದೆ.

‘ಆವರಣ’ವನ್ನು ಐತಿಹಾಸಿಕ ಕಾದಂಬರಿ ಎಂದು ಭೈರಪ್ಪನವರೇ ಹೇಳಿಕೊಂಡಿದ್ದಾರೆ. ಸಮಕಾಲೀನ ಪಾತ್ರಗಳು ಮತ್ತು ಸನ್ನಿವೇಶಗಳ ನಡುವೆ ಐತಿಹಾಸಿಕ ಕಾದಂಬರಿಯು ನಿರೂಪಿತ ಗೊಂಡಿರುವುದರಿಂದ ಲೇಖಕರ ಇವತ್ತಿನ ಆಲೋಚನೆಗಳು ಅಂತರ್ಗತವಾಗಿವೆ. ಇದು ತಪ್ಪಲ್ಲ. ಆದರೆ ಈ ಆಲೋಚನೆಗಳ ಸತ್ಯಾಸತ್ಯತೆ, ಪ್ರಸ್ತುತತೆ ಮತ್ತು ದೃಷ್ಟಿ-ಧೋರಣೆಗಳು ಯಾವುವು, ಎಂತಹವು ಎಂಬ ಪ್ರಶ್ನೆ ಮುಖ್ಯವಾಗುತ್ತದೆ.

ಲಕ್ಷ್ಮಿಯು ಒಂದು ಸಭೆಯಲ್ಲಿ ಹೀಗೆ ಪ್ರತಿಪಾದಿಸುತ್ತಾಳೆ : ‘ಐತಿಹಾಸಿಕ ವ್ಯಕ್ತಿಗಳನ್ನು ಪುನರ್ವಿನ್ಯಾಸಗೊಳಿಸುವ ಕೆಲಸವನ್ನು ರಾಜಕಾರಣಿಗಳು ಮಾಡಿಸುತ್ತಿದ್ದಾರೆ. ರಾಜಕೀಯ ಸಿದ್ಧಾಂತಗಳಂತೂ ಇವರ ಬೆನ್ನೆಲುಬಾಗಿವೆ. ಇತಿಹಾಸದ ಜವಾಬ್ದಾರಿಯಿಲ್ಲದ ಸಾಹಿತಿಗಳು ಅದಕ್ಕೆ ತಕ್ಕಂತೆ ಕಥೆ, ಕಾದಂಬರಿ, ನಾಟಕಗಳನ್ನು ಬರೆಯುತ್ತಲೇ ಇದ್ದಾರೆ’ (ಪು-೧೩೩) ಈ ಮಾತುಗಳು ಸ್ವತಃ ಸಂಘ ಪರಿವಾರದವರಿಗೆ ಮತ್ತು ಭೈರಪ್ಪನವರಿಗೆ ಅನ್ವಯಿಸುತ್ತವೆ. ‘ಆವರಣ’ವೇ ನನ್ನ ಈ ಮಾತಿಗೆ ತಕ್ಕ ನಿದರ್ಶನವಾಗಿದೆ. ಇಡೀ ಕಾದಂಬರಿಯು ಔರಂಗಜೇಬನ ನೆಪದಲ್ಲಿ ಮುಸ್ಲಿಂ ಸಮುದಾಯದ ಬಗ್ಗೆ ತೀವ್ರ ಅಸಹನೆ ಹುಟ್ಟಿಸುತ್ತದೆ. ಅರೆ ಸತ್ಯಗಳನ್ನು ಪೂರ್ಣ ಸತ್ಯಗಳೆಂಬಂತೆ ಪ್ರತಿಪಾದಿಸುತ್ತದೆ; ಕಾದಂಬರಿಯ ಉದ್ದೇಶವೇ ಮುಸ್ಲಿಂ ವಿರೋಧಿ ಮನೋ ಧರ್ಮದಿಂದ ಪ್ರೇರಿತವಾಗಿದೆ. ಹೀಗಾಗಿ ‘ಆವರಣ’ವು ಸಂಘ ಪರಿವಾರದ ಕರಪತ್ರವಾಗಿ ಮಾತ್ರ ಯಶಸ್ವಿಯಾಗುತ್ತದೆ. ಕಾದಂಬರಿಯಾಗಿ ಸೋಲುತ್ತದೆ. ಕಾದಂಬರಿಯ ಪಾತ್ರವಾದ ಲಕ್ಷ್ಮಿ ಎದುರಿಸುವ ಬಿಕ್ಕಟ್ಟು ಮತ್ತು ಕಂಡುಕೊಳ್ಳುವ ಪರಿಹಾರಗಳು ಸ್ವತಃ ಕಾದಂಬರಿಕಾರರವೇ ಆಗಿವೆ. ಲಕ್ಷ್ಮಿಯು ತಾನು ಬರೆಯುತ್ತಿರುವ ಕಾದಂಬರಿಯ ಬಗ್ಗೆ ಒಮ್ಮೆ ಹೀಗೆ ಯೋಚಿಸುತ್ತಾಳೆ : ‘ತಾನು ಬರೆದ ಕಥಾ ನಿರೂಪಣೆಗೆ ಇನ್ನಷ್ಟು ಕಲಾತ್ಮಕತೆಯನ್ನು ಕೊಡಹೊರಟರೆ ಇತಿಹಾಸದ ವಾಸ್ತವತೆ ತೆಳುವಾಗುತ್ತದೆ. ಇತಿಹಾಸದ ವಾಸ್ತವತೆಯನ್ನು ಘನಿಷ್ಠವಾಗಿ ಉಳಿಸಿಕೊಳ್ಳಬೇಕೆಂದರೆ ಕಲಾತ್ಮಕತೆಯ ಹಂಬಲವನ್ನು ಕೈಬಿಡಬೇಕು’ (ಪು-೧೩೮). ಈ ದ್ವಂದ್ವ ಸ್ವತಃ ಭೈರಪ್ಪನವರದೂ ಆಗಿರುವಂತಿದೆ ಮತ್ತು ಈ ಚಿಂತನೆಯೇ ತೆಳುವಾದ ತಳಹದಿಯ ಮೇಲೆ ನಿಂತಿದೆ. ಇತಿಹಾಸದ ವಾಸ್ತವತೆಯನ್ನು ವಿವಿಧ ಕಲಾತ್ಮಕ ಸಾಧ್ಯತೆಯ ಮೂಲಕ – ರೂಪಕಾತ್ಮಕವಾಗಿ, ಧ್ವನ್ಯಾತ್ಮಕ ನೆಲೆಯಲ್ಲಿ – ನಿರೂಪಿಸುವುದು ಉತ್ತಮ ಕಾದಂಬರಿಕಾರರಿಗೆ ಸಾಧ್ಯವಾಗುತ್ತದೆ. ಇತಿಹಾಸದ ವಾಸ್ತವತೆಯೆಂದರೆ ಪ್ರತಿ ಸಾಲನ್ನೂ ಹಾಗೆಯೇ ಉಲ್ಲೇಖಿಸುವುದಲ್ಲ; ವ್ಯಾಖ್ಯಾನ, ಪುನರ್ ವ್ಯಾಖ್ಯಾನಗಳಿಂದ ಇತಿಹಾಸದ ವಾಸ್ತವತೆಯು ಸಮಕಾಲೀನ ಪ್ರಜ್ಞೆಯಲ್ಲಿ ಪ್ರತಿಫಲಿಸುತ್ತ ಸೋಪಜ್ಞ ಕಲಾಕಾರನ ಕೈಯ್ಯಲ್ಲಿ ಕಲಾತ್ಮಕವಾಗಲು ಸಾಧ್ಯ. ‘ಆವರಣ’ದಲ್ಲಿ ಇದು ಸಾಧ್ಯವಾಗಿಲ್ಲ. ಹೀಗಾಗಿ, ಏಕಕಾಲಕ್ಕೆ ಕಲಾತ್ಮಕತೆ ಮತ್ತು ಇತಿಹಾಸದ ವಾಸ್ತವತೆಗಳ ಕೊರತೆ ಎದ್ದುಕಾಣುತ್ತದೆ.

ಔರಂಗಜೇಬನು ಕಾಶಿಯ ವಿಶ್ವನಾಥ ದೇವಾಲಯವನ್ನು ಧ್ವಂಸ ಮಾಡಿಸಿದ ಎಂದು ನಂಬಿದರೂ ಅದಕ್ಕಾಗಿ ಇಡೀ ಮುಸ್ಲಿಂ ಸಮುದಾಯದ ಬಗ್ಗೆ ದ್ವೇಷ ಸಾಧಿಸಬೇಕಾಗಿಲ್ಲ. ಹನ್ನೊಂದನೇ ಶತಮಾನದಲ್ಲಿ ಕಾಶ್ಮೀರದ ರಾಜಹರ್ಷನು ವ್ಯವಸ್ಥಿತವಾಗಿ ದೇವಾಲಯಗಳ ನಾಶ ಮತ್ತು ವಿಗ್ರಹ ಭಂಜಕ ಕೆಲಸಗಳನ್ನು ನಡೆಸಲು ‘ದೇವೋತ್ಪಾಟನ ನಾಯಕ’ ಎಂಬ ವಿಶೇಷಾಧಿಕಾರಿಯನ್ನು ನೇಮಿಸಿಕೊಂಡಿದ್ದನೆಂದು ಕವಿಕಲಣನ ‘ರಾಜ ತರಂಗಿಣಿ’ಯು ಉಲ್ಲೇಖಿಸುತ್ತದೆ. ಈ ಕಾರಣಕ್ಕಾಗಿ ನಾವು ಎಲ್ಲ ಹಿಂದೂ ರಾಜರನ್ನು ಮತ್ತು ಹಿಂದೂಧರ್ಮಿಯರನ್ನು ದ್ವೇಷಿಸಬಹುದೆ? ಇಂಥ ಕೃತ್ಯಗಳ ಹಿಂದೆ ರಾಜತ್ವದ ರಾಜಕೀಯದ ಪಾಲು ಎಷ್ಟು, ಮತಾಂಧತೆಯ ಪಾಲು ಎಷ್ಟು ಎಂದು ವಿಶ್ಲೇಷಿಸುವ ಅಗತ್ಯವೂ ಇದೆ. ಇಲ್ಲದಿದ್ದರೆ ನಮ್ಮ ಚರ್ಚೆಗೆ ಅಗತ್ಯ ಸಮಗ್ರತೆ ಲಭ್ಯವಾಗುವುದಿಲ್ಲ. ಹಿಂದೂ ರಾಜರಲ್ಲಿ ಉತ್ತಮರೂ ಮತ್ತು ಕೆಟ್ಟವರೂ ಇದ್ದಂತೆ ಮುಸ್ಲಿಂ ರಾಜರಲ್ಲೂ ಇದ್ದಾರೆ. ಮೂಲತಃ ಇವರೆಲ್ಲ ಪ್ರಭುತ್ವದ ಪ್ರಭುಗಳು; ರಾಜಕಾರಣದ ರಾಜರು; ಆನಂತರ ನಿರ್ದಿಷ್ಟ ಧರ್ಮಿಯರು.

ಭೈರಪ್ಪನವರು ತಮ್ಮ ತಿಳುವಳಿಕೆ ಮತ್ತು ನಿಲುವುಗಳನ್ನು ಪ್ರತಿಪಾದಿಸಲು ಸಮರ್ಥ ಪ್ರತಿನಾಯಕರನ್ನೂ ಸೃಷ್ಟಿಸಿಕೊಳ್ಳುವುದಿಲ್ಲ. ಯಾವುದೇ ನಿಲುವು ತನಗೆ ವಿರುದ್ಧವಾದ ನೆಲೆಗಳೊಂದಿಗೆ ಮುಖಾಮುಖಿಯಾಗಿ ಸಂವಾದಿಸಿ, ಹೊಸ ಬೆಳಕಿನಲ್ಲಿ ಹೊರಬಂದಾಗ ‘ಸತ್ಯ’ವಾಗುತ್ತದೆ. ತನ್ನ ಕಾದಂಬರಿಯಲ್ಲಿ ಸತ್ಯಾನ್ವೇಷಣೆ ಮಾಡುತ್ತಿದ್ದೇನೆಂದು ಹೇಳಿಕೊಳ್ಳುವ ಭೈರಪ್ಪನವರು ಸೃಷ್ಟಿಸುವ ‘ಅಪ್ಪಟ ಗಾಂಧಿವಾದಿ’ಯ ಪಾತ್ರವು ಸಂಘ ಪರಿವಾರದ ನೇತಾರನಂತಿದೆ. ಲಕ್ಷ್ಮಿಯ ತಂದೆ ‘ಅಪ್ಪಟ ಗಾಂಧಿವಾದಿ’ ತನ್ನ ಮಗಳು ಮುಸ್ಲಿಮನನ್ನು ಮದುವೆಯಾಗ ಹೊರಟಾಗ ‘ನಿನ್ನ ಹೊಟ್ಟೇಲಿ ಹುಟ್ಟುವ ಮಗುವೋ ಅದರ ಮಗುವೋ, ಯಾವುದೂ ಒಂದು ತಲೆಮಾರಿನ ಮಗುವು ನಮ್ಮ ದೇವಸ್ಥಾನವನ್ನು ಒಡೆದು ನಾಶ ಮಾಡುತ್ತೆ. ಅದರ ಪಾಪ ನಿನಗೆ ತಟ್ಟುತ್ತೆ’ (ಪು-೧೯) ಎಂದು ಹೇಳುತ್ತಾನೆ. ಗಾಂಧಿ ಹೆಸರು ಹೇಳುತ್ತಲೇ ಪುರೋಹಿತ ಶಾಹಿಯಾಗಿರುವ ಅಥವಾ ಮೂಲಭೂತವಾದಿಯಾಗಿರುವ ಮನೋಧರ್ಮದವರು ಮಾತ್ರ ಹೀಗೆ ಹೇಳಲು ಸಾಧ್ಯ. ಅಪ್ಪಟಗಾಂಧಿಗಳಲ್ಲ. ಇನ್ನು ಪ್ರೊ. ಶಾಸ್ತ್ರಿಗಳ ಪಾತ್ರ. ಈ ಪಾತ್ರವು ಲಕ್ಷ್ಮಿಯು ತಳೆಯುತ್ತ ಬಂದ ಮುಸ್ಲಿಂ ವಿರೋಧಿ ವಿಚಾರಗಳಿಗೆ ಎದುರಾಗುವ ಪಾತ್ರ. ಲಕ್ಷ್ಮಿ ಕಂಡುಕೊಂಡದ್ದನ್ನು ‘ಸತ್ಯ’ ಎಂದು ಕರೆದು ಆ ಪಾತ್ರವನ್ನು ಗಟ್ಟಿಗೊಳಿಸುವ ಕಾದಂಬರಿಕಾರರು ಪ್ರೊ. ಶಾಸ್ತ್ರಿಗಳ ಪಾತ್ರವನ್ನು ‘ಮಾರ್ಕ್ಸ್‌ವಾದಿ’ ಎಂದು ಕರೆದು ದುರ್ಬಲಗೊಳಿಸುತ್ತಾರೆ. ಭೈರಪ್ಪನವರಿಗೆ ಗಡ್ಡ ಬಿಟ್ಟವರೆಲ್ಲ ಮಾರ್ಕ್ಸ್‌ವಾದಿಗಳಂತೆ ಕಾಣುತ್ತಾರೇನೊ! ‘ಅದು ಮಾರ್ಕ್ಸಿಸ್ಟ್ ಗಡ್ಡವೋ ಆಧುನಿಕ ಮುಸ್ಲಿಂ ಗಡ್ಡವೋ’ (ಪು-೨೩೨) ಎಂದು ಅನುಮಾನಿಸುವ ಲಕ್ಷ್ಮಿ ದೃಷ್ಟಿಕೋನ ಸ್ವತಃ ಭೈರಪ್ಪನವರದೇ ಎನ್ನಿಸುತ್ತದೆ. ಹೇಗೆ ಅಪ್ಪಟ ಗಾಂಧಿವಾದಿಗಳು ಲಕ್ಷ್ಮಿಯ ತಂದೆಯ ಪಾತ್ರದಂತೆ ಇರುವುದಿಲ್ಲವೋ ಹಾಗೆಯೇ ಅಪ್ಪಟ ಮಾರ್ಕ್ಸ್‌ವಾದಿಗಳು ಪ್ರೊ. ಶಾಸ್ತ್ರಿಗಳಂತೆ ಇರುವುದಿಲ್ಲ. (ಡಾ. ಯು.ಆರ್. ಅನಂತಮೂರ್ತಿಯವರನ್ನು ಗಮನದಲ್ಲಿಟ್ಟುಕೊಂಡು ಈ ಪಾತ್ರವನ್ನು ಸೃಷ್ಟಿಸಲಾಗಿದೆಯೆಂಬ ಊಹೆ ಒತ್ತಟ್ಟಿಗಿರಲಿ). ಒಟ್ಟಿನಲ್ಲಿ ಲಕ್ಷ್ಮಿಗೆ ಎದುರಾಗಬಹುದಾದ ಶಾಸ್ತ್ರೀ ಪಾತ್ರವಾಗಲಿ, ಅಮೀರನ ಪಾತ್ರವಾಗಲಿ ಶಕ್ತಿಯುತವಾಗಿ ಬೆಳೆಯದೆ ಇರುವುದರಿಂದ ಸಮರ್ಥ ವೈಚಾರಿಕ ಮುಖಾಮುಖಿ ಸಾಧ್ಯವಾಗಿಲ್ಲ. ನಾಯಕಿಗೆ ಪ್ರತಿಯಾದ ಪಾತ್ರಗಳನ್ನು ದುರ್ಬಲವಾಗಿ ಚಿತ್ರಿಸುವ ಪೂರ್ವಾಗ್ರಹದಿಂದ ಇಡೀ ಕಾದಂಬರಿಯು ಏಕ ಪಕ್ಷೀಯ’ ಪ್ರತಿಭೆಯನ್ನು ಮೆರೆದಿದೆ. ಹಾಗೆ ನೋಡಿದರೆ ನಮ್ಮ ಪ್ರಾಚೀನ ಮಹಾಕಾವ್ಯಗಳ ಔಚಿತ್ಯ ಉನ್ನತವಾದುದು, ನಾಯಕನಿಗೆ ಸಮರ್ಥ ಎದುರಾಳಿಯಾಗಿ ಪ್ರತಿನಾಯಕನನ್ನು ಸೃಷ್ಟಿಸಬೇಕೆಂಬ ನಿಯಮವನ್ನು ನಿಷ್ಠೆಯಿಂದ ಪಾಲಿಸಿದ ಮಹಾಕಾವ್ಯಗಳು ನಿಜವಾದ ‘ಮೌಲ್ಯಮುಖಾಮುಖಿ’ ಯನ್ನು ನಡೆಸಿವೆ. ಭೈರಪ್ಪನವರ ಕಾದಂಬರಿಗೆ ಇದು ಸಾಧ್ಯವಾಗಿಲ್ಲ. ಸಾಧ್ಯವಾಗಲು ಕಾದಂಬರಿಕಾರರು ಬಿಟ್ಟಿಲ್ಲ.

ತಾನು ಬರೆದ ಐತಿಹಾಸಿಕ ಕಾದಂಬರಿಯನ್ನು ಸರ್ಕಾರ ಮುಟ್ಟುಗೋಲು ಹಾಕಬಹುದೆಂಬ ನಿರೀಕ್ಷೆಯಲ್ಲಿ ಲಕ್ಷ್ಮಿಯು – ತನ್ನ ಕಾದಂಬರಿಯನ್ನು ಮುಟ್ಟುಗೋಲು ಹಾಕುವುದಾದರೆ ಅದಕ್ಕೆ ಆಧಾರವಾದ ಸಂಶೋಧನಾ ಕೃತಿಗಳನ್ನೂ ಮುಟ್ಟುಗೋಲು ಹಾಕಿಕೊಳ್ಳಬೇಕಾಗುತ್ತದೆಯೆಂದು ಒಂದು ಪಟ್ಟಿ ಮಾಡುತ್ತಾಳೆ. ಆ ಬೃಹತ್‌ ಪಟ್ಟಿಯಿಂದಲೇ ಕಾದಂಬರಿಯು ಮುಕ್ತಾಯವಾಗುತ್ತದೆ. ಆ ಪಟ್ಟಿಯು ಸ್ವತಃ ಭೈರಪ್ಪನವರ ಸಂಶೋಧನಾ ಕೃತಿಗಳ ಪಟ್ಟಿಯೆಂಬುದು ಸ್ಪಷ್ಟ. ಭೈರಪ್ಪ ನವರು ‘ಆವರಣ’ ಕಾದಂಬರಿಯನ್ನು ಸರ್ಕಾರ ಮುಟ್ಟುಗೋಲು ಹಾಕಬೇಕೆಂಬ ಒತ್ತಾಯ ಬಂದೀತೆಂದು ನಿರೀಕ್ಷಿಸಿದ್ದರೆಂದು ಕಾಣುತ್ತದೆ. ಅದಕ್ಕಾಗಿ ಈ ದೊಡ್ಡ ಪಟ್ಟಿ ಕೊಟ್ಟಿರಬಹುದು. ಆದರೆ ಕರ್ನಾಟಕದ ಪ್ರಗತಿಪರರು ‘ಆವರಣ’ದ ಆಶಯವನ್ನು ಕಟುವಾಗಿ ವಿರೋಧಿಸಿದರೂ ಮುಟ್ಟುಗೋಲಿಗೆ ಒತ್ತಾಯಿಸುವುದಿಲ್ಲವೆಂಬುದು ಅವರಿಗೆ ಈಗ ಸ್ಪಷ್ಟವಾಗಿರಬೇಕು. ಸಮಸ್ಯೆ ಇಷ್ಟೇ ಅಲ್ಲ, ಸಂಶೋಧನ ಕೃತಿಗಳ ದೊಡ್ಡ ಪಟ್ಟಿಯಲ್ಲಿ ಮಧ್ಯಕಾಲೀನ ಭಾರತದ ಬಗ್ಗೆ ಅಧಿಕೃತ ಸಂಶೋಧಕರೆಂದು ಹೆಸರಾದ ಡಾ. ಇರ್ಫಾನ್ ಹಬೀಬ್ ಅವರ ಕೃತಿ ಯಾಕಿಲ್ಲ? ಅಂತರರಾಷ್ಟ್ರೀಯ ಖ್ಯಾತಿಯ ಭಾರತದ ಇತಿಹಾಸಕಾರರಾದ ಡಾ. ರೊಮಿಲಾಥಾಪರ್, ಡಾ, ಬಿಪಿನ್‌ಚಂದ್ರ, ಡಾ. ಎಸ್, ಗೋಪಾಲ್ (ಡಾ. ಎಸ್. ರಾಧಾಕೃಷ್ಣನ್ ಪುತ್ರ) – ಇಂತಹ ಅನೇಕರ ಹೆಸರುಗಳು ಯಾಕಿಲ್ಲ. ‘ಆವರಣ’ವು ಪ್ರತಿಪಾದಿಸುವ ನಿಲುವುಗಳು ಮುಖಾ ಮುಖಿಯಾಗಬೇಕಾದ್ದು ಇಂತಹ ಸಮರ್ಥ ಇತಿಹಾಸಕಾರರ ವಿಚಾರಗಳೊಂದಿಗೆ. ಆದರೆ ‘ಆವರಣ’ವು ಇಂತಹ ಮುಖಾಮುಖಿಗೆ ಸಿದ್ದವಾಗುವ ಬದಲು ಎಲ್ಲ ಎಡಪಂಥೀಯರು ಮತ್ತು ಪ್ರಗತಿಪರರನ್ನು ಸಂಘ ಪರಿವಾರದವರ ಬಹಿರಂಗ ಸಭೆಯ ಭಾಷಣದ ಶೈಲಿಯಲ್ಲಿ ಲೇವಡಿ ಮಾಡುತ್ತದೆ. ಲಘುವಾಗಿ ಕಾಣುತ್ತದೆ. ಪೂರ್ವಾಗ್ರಹದಿಂದ ನಿರಾಕರಿಸುವ ನಿರ್ಧಾರ ತಳೆದು ಮಾತು ಆರಂಭಿಸುತ್ತದೆ. ಹೀಗಾಗಿ, ಭೈರಪ್ಪನವರು ಪ್ರಬುದ್ಧ ಪ್ರತಿನಾಯಕ (ಕಿ) ಪಾತ್ರಗಳನ್ನೂ ಸೃಷ್ಟಿಸಿದೆ, ತಾವು ಸಂಶೋಧಿಸಿದ ಕೃತಿಗಳಿಗೆ ಭಿನ್ನವಾದ ಪ್ರಬುದ್ಧ ಇತಿಹಾಸಕಾರರನ್ನೂ ಅನುಲಕ್ಷಿಸದೆ ಏಕಮುಖೀ ಮನೋಧರ್ಮವನ್ನೇ ಸತ್ಯಾನ್ವೇಷಣೆಯ ಹೆಸರಲ್ಲಿ ನಿರೂಪಿಸುತ್ತಾರೆ. ಹೀಗಾಗಿ ‘ಆವರಣ’ ಕಾದಂಬರಿಯು ಆಶಯ ಮತ್ತು ಅಭಿವ್ಯಕ್ತಿ ವಿಧಾನಗಳಲ್ಲಿ ಅಪ್ರಬುದ್ಧವೂ ಅತಾರ್ಕಿಕವೂ ಆಗುತ್ತದೆ.

ಭೈರಪ್ಪನವರು ಕಾದಂಬರಿಕಾರರೇ ಅಲ್ಲವೆಂದು ಹೇಳಿದರೆ ನಾನು ಒಪ್ಪುವುದಿಲ್ಲ. ಆದರೆ ಹೀಗೆ ಹೇಳಿದರೆಂದು ಪ್ರಚುರವಾದ ಡಾ. ಯು.ಆರ್. ಅನಂತಮೂರ್ತಿಯವರು ಹಾಗೆ ಹೇಳಿಲ್ಲವೆಂದು ಸ್ಪಷ್ಟಪಡಿಸುವುದಕ್ಕೂ ಅವಕಾಶವಾಗದಂತೆ ಅಪಪ್ರಚಾರ ನಡೆದದ್ದು ಎಷ್ಟು ಸರಿ? ಅನಂತಮೂರ್ತಿಯವರ ಎಲ್ಲ ವಿಚಾರಗಳನ್ನೂ ನನ್ನಂಥವರು ಒಪ್ಪುತ್ತೇವೆಂದಲ್ಲ. ಆದರೆ ಅವರ ಭಿನ್ನಾಭಿಪ್ರಾಯವನ್ನು ಕೆಲ ಶಕ್ತಿಗಳು ಎದುರಿಸಿದ ರೀತಿ ಸಾಂಸ್ಕೃತಿಕವಾಗಿರಲಿಲ್ಲ. ಅಂತೆಯೇ ಚಂದ್ರಶೇಖರ ಪಾಟೀಲರು ‘ಆವರಣ’ದ ಬಗ್ಗೆ ಸಭೆಯೊಂದರಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದಾಗ ಎದ್ದು ಗದ್ದಲ ಮಾಡಿ ಮಾತಾಡಲು ಅಡ್ಡಿ ಮಾಡಿದ್ದು ಸರಿಯಲ್ಲ. ಇಂತಹ ಘಟನೆಗಳನ್ನು ಧರ್ಮನಿಷ್ಠ ಸಾಹಿತಿಗಳು ಯಾಕೆ ಖಂಡಿಸುವುದಿಲ್ಲ? ಅಬ್ಬ! ಈ ಮೌನ ಎಷ್ಟು ಆತಂಕಕಾರಿ!

‘ಆವರಣ’ ಕಾದಂಬರಿಯ ಕೊನೆಯ ಭಾಗದಲ್ಲಿ ವಿವೇಕಾನಂದರ ಮಾತುಗಳನ್ನು ಉಲ್ಲೇಖಿಸುವ ಲೇಖಕಿ (ಕ) ಅದೇ ವಿವೇಕಾನಂದರ ಈ ಮಾತುಗಳನ್ನು ಗಮನಿಸಬೇಕು : ‘ಪ್ರತಿಯೊಬ್ಬರೂ ಒಂದೇ ಧರ್ಮಕ್ಕೆ ಸೇರಿ, ಒಂದೇ ಮಾರ್ಗವನ್ನು ಅನುಸರಿಸುವ ದುರ್ದಿನ ಪ್ರಪಂಚಕ್ಕೆ ಬಾರದಿರಲಿ. ಆಗ ಧರ್ಮ ಮತ್ತು ಆಧ್ಯಾತ್ಮಿಕ ಭಾವನೆ ನಾಶವಾಗುವುದು. ವೈವಿಧ್ಯವೇ ಜೀವನದ ರಹಸ್ಯ…. ನಮ್ಮ ಮಾತೃಭೂಮಿಯಲ್ಲಿ ಹಿಂದೂ ಮತ್ತು ಇಸ್ಲಾಂ ಧರ್ಮಗಳೆರಡೂ ಮಿಲನವಾಗಬೇಕು; ವೇದಾಂತದ ಮೆದುಳು, ಇಸ್ಲಾಮಿನ ದೇಹ – ಇದೇ ನಮ್ಮ ಪುರೋಭಿವೃದ್ಧಿಗೆ ಹಾದಿ.’

ವಿವೇಕಾನಂದರ ಈ ಮಾತುಗಳು ಧಾರ್ಮಿಕ ಮೂಲಭೂತವಾದಿಗಳಿಗೆ ಅರ್ಥವಾಗುತ್ತವೆಯೆ? ಅರ್ಥವಾದ ಗಳಿಗೆಯಿಂದ ವಿವೇಕಾನಂದರ ಹೆಸರನ್ನೇ ತಮ್ಮ ಪಟ್ಟಿಯಿಂದ ಹೊಡೆದು ಹಾಕಬಹುದು! ಮುಂದೊಂದು ದಿನ ಬಸವಣ್ಣನವರಿಗೂ ಇದೇ ಗತಿಯಾಗಬಹುದು!

ಒಟ್ಟಿನಲ್ಲಿ ‘ಆನುದೇವಾ ಹೊರಗಣವನು’ ಮತ್ತು ‘ಆವರಣ’ ಕೃತಿಗಳು ಕ್ರಮವಾಗಿ ವಿರೋಧ ಮತ್ತು ಸಮರ್ಥನೆಗಳ ಮೂಲಕ ಅನೇಕರ ಒಳ ಹುನ್ನಾರಗಳನ್ನು ಬಯಲು ಮಾಡಿವೆ. ಇಂದು ಜಾತಿವಾದ ಮತ್ತು ಕೋಮುವಾದ ಬೀದಿಗೆ ಬಂದಿದೆ. ನಮ್ಮ ಸಾಮಾಜಿಕ-ಸಾಂಸ್ಕೃತಿಕ ಸನ್ನಿವೇಶ ಈ ವಿಷಾದದ ಹಂತವನ್ನು ಬೇಗ ಹಾದು ಹೊರಬರಬೇಕಾಗಿದೆ.
*****
(ಅಕ್ಟೋಬರ್ ೨೦೦೭ – ‘ಹೊಸತು’)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೇಗಿದ್ದ ನಗರ ….?
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೪೧

ಸಣ್ಣ ಕತೆ

 • ಡಿಪೋದೊಳಗಣ ಕಿಚ್ಚು…

  ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

 • ಗದ್ದೆ

  ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

 • ಧರ್ಮಸಂಸ್ಥಾಪನಾರ್ಥಾಯ

  ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

 • ಅಹಮ್ ಬ್ರಹ್ಮಾಸ್ಮಿ

  ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

 • ಮನೆ “ಮಗಳು” ಗರ್ಭಿಣಿಯಾದಾಗ

  ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

cheap jordans|wholesale air max|wholesale jordans|wholesale jewelry|wholesale jerseys