ಪುರುಷೋತ್ತಮ ಯಶವಂತ ಚಿತ್ತಾಲರು ಇನ್ನಿಲ್ಲ. ಇಂದಿನ ಪ್ರಜಾವಣಿಯ ಮುಖಪುಟದಲ್ಲಿ ಅವರ ನಿರ್ಗಮನದ ಸುದ್ದಿಯನ್ನು ಓದಿ ಮನಸ್ಸು ನೆನಪಿನ ಸುರುಳಿ ಬಿಚ್ಚಿ ೨೦೦೬ನೆ ಇಸವಿಯ ಡಿಸೆಂಬರ್ ಮಾಹೆಯ ಒಂದು ಇಳಿಸಂಜೆಯ ಮೆಲುಕು ಹಾಕಲಾರಂಭಿಸಿತು. ಅಂದು ನಾನು ಇಂದು ಇನ್ನಿಲ್ಲವಾಗಿರುವ ಚಿತ್ತಾಲರನ್ನು ಅವರ ಬಾಂದ್ರಾ ನಿವಾಸದಲ್ಲಿ ಭೇಟಿಯಾಗಿದ್ದೆ. ಅವರ ಪ್ರೀತಿಯ ಸಮುದ್ರ ನೋಟವನ್ನು ಸವಿಯುತ್ತ ಅವರೆದಿರಾಗಿ ಕುರ್ಚಿಯಲ್ಲಿ ಕುಳಿತು ಸಾಹಿತ್ಯ, ತಾಂತ್ರಜ್ಞಾನದ ಬಗ್ಗೆ ಅವರ ವಿಚಾರಗಳನ್ನು ಕೇಳಿದ್ದೆ. ಅಂದು ಅವರು ಹೇಳಿದ ಒಂದು ಮಾತು ನನ್ನನ್ನು ಬಹಳವಾಗಿ ಪ್ರಭಾವಿಸಿತು. ದಕ್ಷಿಣ ಅಮೇರಿಕದ ಲೇಖಕನೊಬ್ಬ ಬರೆಯುವಾಗ/ಟೈಪಿಸುವಾಗ ತಪ್ಪಾದಾಗ ಅದು ಬರಿ ಕೈತಪ್ಪಲ್ಲ, ಮನಸ್ಸಿನ ಚಿಂತನೆಯಲ್ಲಿನ ತಪ್ಪು, ಎಂದು ಪರಿಭಾವಿಸಿ ಆ ಪುಟವನ್ನೇ ಹರಿದುಹಾಕಿ ಪುನಃ ಬರವಣಿಗೆಯನ್ನು ಪ್ರಾರಂಭಿಸುತ್ತಿದ್ದನು, ಆ ಬದ್ಧತೆ ನಮ್ಮ ಎಲ್ಲ ಚಿಂತನೆ, ಕೃತಿಯಲ್ಲಿರಬೇಕು ಎಂದಿದ್ದರು. ಅವರು ಅಂದು ನನ್ನಂತಹ ಕಿರಿಯನೊಂದಿಗೂ ತೋರಿದ ಮುಕ್ತ ಮನಸ್ಕತೆ, ಸೌಜನ್ಯವನ್ನು ನಾನೆಂದಿಗೂ ಮರೆಯಲಾರೆ. ಆತ್ಮದ ಕಲ್ಪನೆಯ ಬಗ್ಗೆ ಸಂಶಯಗಳನ್ನು ಹೊಂದಿರುವ ನಾನು ಚಿತ್ತಾಲರಂತಹ ಚೇತನ ನಾಡಿನೆಲ್ಲರನ್ನು ನೂರ್ಕಾಲ ಉದ್ದೀಪಿಸುತ್ತಿರಲಿ ಎಂದು ಹಾರೈಸ ಬಯಸುತ್ತೇನೆ.