ಒಮ್ಮೆ ಹೀಗೇ ಮಾತಾಡುತ್ತಾ ಕುಳಿತಿರುವಾಗ ಒಬ್ಬ ಮಹಾಶಯರು ಹೇಳಿದ್ದರು – ಹೆಂಗಸರಲ್ಲಿ ಇರುವ ದೊಡ್ಡ ಸಮಸ್ಯೆ ಎಂದರೆ, ಆಯ್ಕೆಯದ್ದು. ಅವರ ಸ್ಪಷ್ಟಿಕರಣ ಹೀಗಿತ್ತು. ‘ನೀವು ಯಾವುದಾದರೂ ಅಂಗಡಿಗೆ ಹೋದರೆ ಆಯ್ದು ಕೊಳ್ಳಲು ಬಹಳ ಕಾಲ ತೆಗೆದುಕೊಳ್ಳುತ್ತೀರಿ. ಅಂಗಡಿಯವನಿಗೆ ಬೇಸರವಾಗುವಷ್ಟು ಬಟ್ಟೆ ಎಳೆದು ಹಾಕಿಸುತ್ತೀರಿ.’ ಇದು ಎಲ್ಲ ಗಂಡಸರ ದೂರು, ಇದು ನಿಜವೂ ಹೌದು. ಬಟ್ಟೆ ಮಾತ್ರವಲ್ಲ. ಏನನ್ನಾದರೂ ತೆಗೆದುಕೊಳ್ಳುವಾಗ ಪರೀಕ್ಷಿಸಿ ಸಮಾಧಾನವಾದರೆ ಮಾತ್ರ ತೆಗೆದುಕೊಳ್ಳುವುದು. ನಾಲ್ಕಾರು ಅಂಗಡಿ ಅಲೆದರೂ ಬೇಸರವಿಲ್ಲ. ತೆಗೆದುಕೊಂಡ ವಸ್ತು ಸರಿಯಾಗಿರಬೇಕು ಎನ್ನುವ ಕಾಳಜಿ ಹೆಂಗಸರದ್ದು.

ಆ ಕ್ಷಣದಲ್ಲಿ ಅವರ ಮಾತು ಕೇಳಿ ನನಗೆ ಸಿಟ್ಟು ಬಂದಿತ್ತು. ಆದರೆ ಈಗ ಎಷ್ಟೋ ಸಲ ಅನಿಸುತ್ತದೆ. ಹೌದು, ಆಯ್ಕೆಯ ಸಮಸ್ಯೆ ನಮ್ಮನ್ನು ಯಾವಾಗಲೂ ಕಾಡಿಸುತ್ತದೆ. ಖರ್‍ಚು ಮಾಡುವ ಹಣಕ್ಕೆ ಸರಿಯಾದ ವಸ್ತು ಸಿಗಬೇಕು ಎನ್ನುವ ಭಾವನೆಯೂ ಇದಕ್ಕೆ ಕಾರಣವಾಗಿರಬಹುದು. ತೆಗೆದುಕೊಂಡ ನಂತರ ‘ಓ ಇದಕ್ಕಿಂತ ಅದೇ ಚೆನ್ನಾಗಿತ್ತೆನೋ’ ಎನ್ನುವ ಭಾವನೆ ಬಾರದಿರಲಿ ಎನ್ನುವ ಮುಂದಾಲೋಚನೆಯೂ ಇರಬಹುದು.

ಜೀವನದಲ್ಲಿ ಇಂತಹ ಸಾವಿರಾರು ಆಯ್ಕೆಗಳನ್ನು ಮಾಡುವಾಗ ನಮ್ಮ ಸಹನೆಯನ್ನು ನಾವೇ ಪರೀಕ್ಷೆಗೊಡ್ಡುತ್ತೇವೆ. ಆಗ ನಾವು ಎದುರಿಸುವ ಒದ್ದಾಟ ಅವು ನಮ್ಮ ಮೇಲೆ ಬೀರುವ ಒತ್ತಡ ನಮ್ಮ ಬಿ.ಪಿ. ಏರಿಸಲು ಎಷ್ಟೋ ಸಾಕು. ಇದು ಯಾಕೆ ಹೀಗೆ ಎಂದು ನಾವೆಂದಾದರೂ ಯೋಚಿಸಿದ್ದೇವೆಯೇ? ಒಂದೇ ಸಲಕ್ಕೆ ಯಾಕೆ ನಾವು ಏನನ್ನೂ ನಿರ್ಧರಿಸಲಾರೆವು? ಈ ಆಯ್ಕೆಯ ಸಮಸ್ಯೆ ಹೆಂಗಸರಿಗೆ ಮಾತ್ರ ಸೀಮಿತವಲ್ಲ. ಗಂಡಸರಿಗೂ ಈ ಸಮಸ್ಯೆ ಇದೆ. ಹಲವಾರು ಸಂದರ್‍ಭಗಳಲ್ಲಿ ಅವರು ಹೆಂಗಸರಿಗಿಂತ ಹೆಚ್ಚು ಒದ್ದಾಡುತ್ತಾರೆ.

ಇಲ್ಲಿ ಬಸವಣ್ಣನವರ ಒಂದು ವಚನ ನೆನಪಿಗೆ ಬರುತ್ತದೆ.

‘ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ; ನೋಡಿ ನೋಡಿ ಕೆಟ್ಟರು
ನಿಜವಿಲ್ಲದೆ, ಮಾಡುವ ನೀಡುವ ನಿಜ ಗುಣವುಳ್ಳರೆ ಕೂಡಿಕೊಂಬ
ನಮ್ಮ ಕೂಡಲ ಸಂಗಮದೇವ’

ಮನವಿಲ್ಲದೆ ಮಾಡಿದ ಕೆಲಸ, ನಿಜವಿಲ್ಲದೆ ನೋಡಿದ ನೋಟ, ಧೈರ್‍ಯವಿಲ್ಲದೆ ಆಡಿದ ಆಟ, ಆತ್ಮವಿಶ್ವಾಸವಿಲ್ಲದೆ ಮಾಡಿದ ಆಯ್ಕೆ ಯಾವುದೂ ಸರಿಯಾಗಿರುವುದಿಲ್ಲ. ಹಾಗಾಗಿಯೇ ನಮ್ಮ ಮುಂದೆ ಯಾವಾಗಲೂ ಆಯ್ಕೆಯ ಸಮಸ್ಯೆ ಎದ್ದು ನಿಲ್ಲುತ್ತದೆ.

ಆಯ್ಕೆಯ ಮೇಲೆ ಹಲವಾರು ಒತ್ತಡಗಳಿರುತ್ತವೆ. ಅದು ವೈಯುಕ್ತಿಕವಾಗಿರಬಹುದು, ಕೌಟುಂಬಿಕವಾಗಿರಬಹುದು, ಸಾಮಾಜಿಕವಾಗಿರಬಹುದು, ಸಾಂಸ್ಕೃತಿಕವಾಗಿರಬಹುದು. ನಿನ್ನೆಯ ಆಯ್ಕೆ ಇವತ್ತು ತಪ್ಪೆಂದು ಅನಿಸುವುದು. ಈ ಎಲ್ಲ ಒತ್ತಡಗಳಿಂದ.

ನಮಗೆ ಏನಾದರೂ ಕೊಳ್ಳಬೇಕಾದರೆ, ಏನಾದರೂ ಹೇಳಬೇಕಾದರೆ ಅದಕ್ಕೆ ಬೇರೆಯವರ ಒಪ್ಪಿಗೆಗೆ ಕಾಯುವುದರಿಂದಲೇ ನಮ್ಮ ಮುಂದಿದೆ ಈ ಸಮಸ್ಯೆ ಎಂದು ನನಗನಿಸುತ್ತದೆ. ನಮ್ಮ ಅಂತರಾಳಕ್ಕೆ, ನಮ್ಮ ಆತ್ಮಸಾಕ್ಷಿಗೆ ಬದ್ಧರಾಗಿ ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ ನಮ್ಮ ಆಯ್ಕೆಯಲ್ಲಿ ವಿಶ್ವಾಸವಿದ್ದರೆ ಆಯ್ಕೆಯ ಸಮಸ್ಯೆ ಕಾಡುವುದಿಲ್ಲ. ಯಾರು ಏನೆಂದರೂ ತಪ್ಪೆನಿಸುವುದಿಲ್ಲ.

ನಾನು ಚಿಕ್ಕಂದಿನಲ್ಲಿ ಇನ್ನೊಂದು ವಚನವನ್ನು ಬಹಳ ಇಷ್ಟ ಪಟ್ಟಿದ್ದೆ, ಈಗಲೂ ಅದನ್ನು ಆಗಾಗ ಮೆಲುಕು ಹಾಕುತ್ತಲೂ ಇರುತ್ತೇನೆ. ಇವತ್ತಿಗೂ ಅದು ಹಳತಾಗಿದೆ ಎಂದು ಅನಿಸಿಲ್ಲ. ನನ್ನ ಮಕ್ಕಳಿಗೆ ಜೋಗುಳ ಹಾಡುವಾಗಲೂ ಅದನ್ನು ಹಾಡಿದ್ದೆ. ಮೊಮ್ಮಗನಿಗೆ ಜೋಗುಳ ಹಾಡುವಾಗಲೂ ಹಾಡುತ್ತಿದ್ದೆ.

‘ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ, ತನ್ನ ಬಣ್ಣಿಸಬೇಡ
ಇದಿರು ಹಳಿಯಲು ಬೇಡ; ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ
ಶುದ್ಧಿ; ಇದೇ ಕೂಡಲ ಸಂಗಮನೊಲಿಸುವ ಪರಿ’

ಈ ಸಾಲುಗಳು ಎಷ್ಟು ಸಿಂಪಲ್ ಆಗಿವೆ ಎಂದು ಅನಿಸಿದರೂ ಇಡೀ ಜೀವನಕ್ಕೆ ಪಾಠವಾಗಿ ನಿಲ್ಲುವಷ್ಟು ತಾಕತ್ತು ಈ ಸಾಲುಗಳಲ್ಲಿವೆ. ಆದರೆ, ಇವತ್ತಿನ ಮಕ್ಕಳಿಗೆ ಇಂತಹ ಸುಂದರ ವಚನಗಳ ಬೋಧನೆ ಯಾಗುತ್ತಿದೆಯೇ? ಇಲ್ಲ. ಯಾಕೆಂದರೆ ನಮ್ಮ ಮಕ್ಕಳು ಆಂಗ್ಲ ಮಾಧ್ಯಮ ದಲ್ಲಿ ಕಲಿಯುತ್ತಾರೆ. ‘ಬಾಬಾ ಬ್ಲಾಕ್‌ಶೀಪ್’ ಎಂದು ಹೇಳಲು ಕಲಿತು ಗುಂಪಿನಲ್ಲಿ ಅವರೂ ಒಂದು ಕುರಿ ಆಗಿ, ಯಾವುದೇ ಆಯ್ಕೆಯಿಲ್ಲದೆ ಗುಂಪಿನಲ್ಲಿ ಗೋವಿಂದ ಎನ್ನುವಂತೆ ಒಂದು ಕುರಿಯ ಹಿಂದೆ ಅದು ಎಲ್ಲಿಗೆ ಹೋಗುತ್ತಿದೆಯೆಂದು ಗೊತ್ತಿಲ್ಲದಿದ್ದರೂ, ಹೆಜ್ಜೆ ಹಾಕುತ್ತಿದ್ದರೆ ನಮಗೂ ಖುಷಿ ನಮ್ಮ ಮಗು ಸರಿಯಾದ ದಾರಿಯಲ್ಲಿ ಹೋಗುತ್ತಿದೆಯೆಂದು. ಇದಕ್ಕೆ ಕಾರಣ ಇತ್ತೀಚೆಗಿನ ಕೆಲವು ವರ್‍ಷಗಳಲ್ಲಿ ನಾವು ನಂಬಿಕೊಂಡು ಬಂದಿರುವ ಅನೇಕ ಮೌಲ್ಯಗಳು ಸಾಮಾಜಿಕ ಹಾಗೂ ರಾಜಕೀಯ ಒತ್ತಡಕ್ಕೊಳಗಾಗಿ ಕುಸಿಯುತ್ತಿರುವುದು.

ಜಾಗತೀಕರಣ ಮತ್ತು ಉದಾರೀಕರಣದ ಪರಿಣಾಮಗಳು ನಮ್ಮ ಜೀವನದ ಎಲ್ಲ ಮಜಲುಗಳಿಗೂ ಪ್ರವೇಶಿಸಿರುವುದರಿಂದ, ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಮತ್ತು ಸ್ವಾತಂತ್ರ್ಯ ಪಡೆದ ನಂತರ ನಮ್ಮನ್ನು ನಾವು ರೂಪಿಸಿಕೊಳ್ಳುವ ಕಾಲಘಟ್ಟದಲ್ಲಿ ಕಟ್ಟಿದ್ದ ಕನಸುಗಳನ್ನು ಹೊಸಕಿ ಹಾಕುತ್ತಿರುವುದನ್ನು, ನಮ್ಮ ಸಂಸ್ಕೃತಿಯನ್ನು ನಾಶಗೊಳಿಸುತ್ತಿರುವುದನ್ನು, ನಾವು ನಂಬಿಕೊಂಡಿದ್ದ ಮೌಲ್ಯಗಳು ಸ್ವಲ್ಪ ಸ್ವಲ್ಪವೇ ಕರಗಿ ಹೋಗುತ್ತಿರುವುದನ್ನು ನೋಡಿ ಏನೂ ಮಾಡಲಾಗದೇ ಅಸಹಾಯಕತೆಯಿಂದ ಕೈಕಟ್ಟಿ, ಕಣ್ಣು ಮುಚ್ಚಿ ಕುಳಿತಿರುವ ಅವಸ್ಥೆಯಲ್ಲಿ ನಾವಿದ್ದೇವೆ. ಹಾಗಾಗಿ ನನಗೆ ಇಷ್ಟವಾದ ವಚನದ ಸಾಲುಗಳು ನನ್ನ ಮಕ್ಕಳಿಗೆ ಇಷ್ಟವಾಗುವುದೆಂದು ನಾನು ಹೇಳಲಾರೆ. ಇದನ್ನೇ ನೀವೂ ಒಪ್ಪಿಕೊಳ್ಳಬೇಕು ಎನ್ನುವ ಒತ್ತಡವನ್ನೂ ಹೇರಲಾರೆ. ಯಾಕೆಂದರೆ ಈ ಮಾತುಗಳ ಸತ್ಯ ಇವತ್ತು ಎಲ್ಲಿ ಇದೆ ಎನ್ನುವುದನ್ನು ನಾನು ನನ್ನ ಮಕ್ಕಳಿಗೆ ಸ್ಪಷ್ಟವಾಗಿ ತೋರಿಸಿಕೊಡಲಾರೆ. ಲೋಕ ಅಷ್ಟು ಬದಲಾಗಿದೆ, ಮೌಲ್ಯಗಳು ಅಷ್ಟು ಬದಲಾಗಿವೆ. ನಮ್ಮ ಮಾಧ್ಯಮಗಳು ನಮ್ಮ ಮಕ್ಕಳ ಮೇಲೆ ಹೇರುವುದು ಇದಕ್ಕೆ ವಿರುದ್ಧವಾದ ಮೌಲ್ಯಗಳನ್ನೇ. ಟೆರರಿಸಮ್ ಅಂದರೆ ನಮಗೇನೆಂದೂ ಗೊತ್ತಿರಲಿಲ್ಲ. ಈಗ ಮಕ್ಕಳ ಕಣ್ಣಮುಂದೆಯೇ ಟೆರರಿಸಮ್ ಅದರ ಎಲ್ಲಾ ವಿಕಾರಗಳೊಂದಿಗೆ ತೆರೆದುಕೊಳ್ಳುತ್ತಿದೆ. ಅದೇ ಸತ್ಯ ಎನ್ನುವಷ್ಟು ಪರಿಣಾಮಕಾರಿಯಾಗಿ ತೋರಿಸಲಾಗುತ್ತಿದೆ. ಇದನ್ನು ತಡೆಗಟ್ಟುವ ಪ್ರಯತ್ನವನ್ನು ನಾವೂ ಮಾಡಲಾರೆವು. ಯಾಕೆಂದರೆ ಬದುಕುವ ಓಟದಲ್ಲಿ ಒಂದರ ಹಿಂದೆ ಒಂದು ತಲೆತಗ್ಗಿಸಿ ಹೋಗುವ ಕುರಿಗಳ ಗುಂಪಿನಲ್ಲಿ ನಾವೂ ಸೇರಿಹೋಗಿದ್ದೇವೆ. ನಮಗೆ ಆಯ್ಕೆಯ ಪ್ರಶ್ನೆಯೇ ಇಲ್ಲ. ತಂದೆ-ತಾಯಿಯೋ, ಟೀಚರೊ, ಗಂಡನೋ ಸಮಾಜವೋ ಯಾರಾದರೂ ಒಬ್ಬರು ಹೇಳಿದ ದಾರಿಯಲ್ಲಿ ಕಣ್ಣುಮುಚ್ಚಿ ಸಾಗುವುದೇ ಇವತ್ತಿನ ರೀತಿ.

ಈ ಕುರಿಗಳ ಗುಂಪಿನಿಂದ ಹೊರಬಂದಾಗ ಮಾತ್ರ ನಾವು ಪ್ರತ್ಯೇಕವಾಗಿ ನಿಲ್ಲುವುದು ಸಾಧ್ಯ. ಸರಿಯಾದುದನ್ನು ಆರಿಸುವುದು ಸಾಧ್ಯ. ಆದರೆ ನಮಗೆ ಸರಿಕಂಡ ರೀತಿಯಲ್ಲಿ ಆಯ್ಕೆಮಾಡುವ ಧೈರ್‍ಯ ಇರಬೇಕು. ದೃಢ ನಿರ್‍ಧಾರ ಇರಬೇಕು. ಸರಿಯಾದುದನ್ನು ಆರಿಸುವ ಪ್ರಯತ್ನ ಇರಬೇಕು. ಉಸಿರಾಡಲಿಕ್ಕೇ ಸಮಯವಿಲ್ಲದ ಮೇಲೆ ಪ್ರಯತ್ನಕ್ಕೆ ಸಮಯವೆಲ್ಲಿ ಎನ್ನುವ ಪ್ರಶ್ನೆ ಕಾಡಬಹುದು. ಏನನ್ನಾದರೂ ಸಾಧಿಸಬೇಕೆನ್ನುವ ಮನಸ್ಸಿದ್ದರೆ ಸಮಯವನ್ನು ಒದಗಿಸಿಕೊಳ್ಳುವುದು ಕಷ್ಟವಲ್ಲ. ಎಷ್ಟೇ ಕಾರ್‍ಯನಿರತರಾಗಿದ್ದರೂ ನಾವಿದನ್ನು ಮಾಡಲೇಬೇಕು ಎನ್ನುವ ನಿರ್‍ಧಾರ ದೃಢವಾಗಿದ್ದರೆ ಸಮಯ ಒದಗಿಸಿಕೊಂಡು ಸರಿಯಾಗಿ ಯೋಚಿಸಿ ಸರಿಯಾದ ಆಯ್ಕೆ ಮಾಡುವ ಅವಕಾಶ ನಮಗಿದೆ. ನಮ್ಮ ಮುಂದಿರುವ ಅವಕಾಶಗಳಲ್ಲಿ ಕೆಲವನ್ನಾದರೂ ಆಯ್ಕೆ ಮಾಡಿಕೊಂಡು ಏನನ್ನಾದರೂ ಸಾಧಿಸಿದರೆ ಮುಂದೆ ಜೀವನದ ಹಳೆಯ ಪುಟಗಳನ್ನು ಮಗುಚುವಾಗ ನಾನು ಇದನ್ನೆಲ್ಲ ಮಾಡಿದ್ದೇನೆ ಎನ್ನುವ ಸಂತಸ ಸಿಕ್ಕೇಸಿಗುತ್ತದೆ. ಇಲ್ಲವಾದರೆ ಪುಟಗಳೆಲ್ಲ ಖಾಲಿಯಾಗಿಯೇ ಉಳಿಯುತ್ತದೆ. ಮೆಲುಕು ಹಾಕಲು ಏನೂ ಇರುವುದಿಲ್ಲ.

ಜೀವನ ನಮಗೆ ಹಲವಾರು ಅವಕಾಶಗಳನ್ನು ತೋರಿಸುತ್ತಲೇ ಇರುತ್ತದೆ, ಅದರಲ್ಲಿ ನಮಗೆ ಬೇಕಾದುದನ್ನು ಆಯ್ಕೆ ಮಾಡಿಕೊಂಡು ಅವಕಾಶಗಳನ್ನು ನಮ್ಮದಾಗಿಸಿಕೊಳ್ಳುವುದು ಜಾಣತನ. ಒಮ್ಮೆ ನಮ್ಮ ಮುಂದೆ ಬಂದ ಅವಕಾಶವನ್ನು ಬಿಟ್ಟರೆ ಅದೇ ಅವಕಾಶ ನಮಗೆ ಪುನಃ ಸಿಗುವುದಿಲ್ಲ. ಹಾಗಾಗಿ ದೊರೆತ ಅವಕಾಶಗಳನ್ನು ಬಿಡದೆ ಉಪಯೋಗಿಸಿಕೊಳ್ಳುವುದು ನಮ್ಮ ನಮ್ಮ ಕೈಯಲ್ಲಿಯೇ ಇದೆ. ಆಯ್ಕೆಯ ಮಹತ್ವ ಇರುವುದು, ಜೀವನದ ಸಾರ್‍ಥಕತೆ ಇರುವುದು ಇಲ್ಲಿಯೇ.

ಆಯ್ಕೆ ಮಾಡಲಾಗದೆ ಏನನ್ನೂ ಸಾಧಿಸದೆ ಇದ್ದರೆ ಬಾಳ ಮುಸ್ಸಂಜೆಯಲ್ಲಿ ಮೆಲುಕು ಹಾಕುವುದಾದರೂ ಏನನ್ನು?
*****