ಜೀವನ ಸಂಧ್ಯೆ

ಜೀವನ ಸಂಧ್ಯೆ

ಮನುಷ್ಯರು ಹುಟ್ಟುತ್ತಾರೆ, ಬೆಳೆಯುತ್ತಾರೆ, ವೃದ್ಧರಾಗುತ್ತಾರೆ. ಒಂದು ದಿನ ಸಾಯಲೂಬೇಕು. ಆದರೆ ವೃದ್ಧರಾಗಿ ಸಾಯುವತನಕದ ಕಾಲ ಅವರು ಅನೇಕ ರೋಗರುಜಿನುಗಳಿಗೆ ತುತ್ತಾಗಬಹುದು, ಏಕಾಕಿಯಾಗಬಹುದು. ಆಗ ನೋಡಿಕೊಳ್ಳುವುದಕ್ಕೆ ಮನೆ ಮಂದಿ ಬೇಕಾಗುತ್ತಾರೆ. ಮನೆ ಮಂದಿಯಿಲ್ಲದಿದ್ದಾಗ ಏನು ಗತಿ?

ಗೋಪಾಲ ಹೊನ್ನಲ್ಗೆರೆ ಎಂಬ ಕವಿಯೊಬ್ಬರಿದ್ದಾರೆ-ಇದ್ದರು. ಕನ್ನಡದವರು, ಆದರೆ ಇಂಗ್ಲಿಷ್‌ನಲ್ಲಿ ಕವಿತೆಗಳನ್ನು ಬರೆಯುತ್ತಿದ್ದರು. ನಾನವರನ್ನು ಭೇಟಿಯಾದುದು ಹೈದರಾಬಾದಿನಲ್ಲಿ. ಗೋಪಾಲ್ ಇಲ್ಲಿನ ಖಾಸಗಿ ಶಾಲೆಯೊಂದರಲ್ಲಿ ಇಂಗ್ಲಿಷ್ ಕಲಿಸುತ್ತಿದ್ದರು. ತುಂಬಾ ಸರಳ ಸಜ್ಜನ ವ್ಯಕ್ತಿ. ಇವರ ಕವಿತೆಗಳು ಸರಳವೂ ಸುಂದರವೂ ಆಗಿರುತ್ತಿದ್ದುವು. ಎಷ್ಟು ಸರಳವಾಗಿರುತ್ತಿದ್ದುವೆಂದರೆ ಶಾಲೆಗೆ ಹೋಗುತ್ತಿದ್ದ ನನ್ನ ಮಕ್ಕಳು ಅವನ್ನು ಓದಿ ಅರ್ಥಮಾಡಿಕೊಳ್ಳುತ್ತಿದ್ದರು. ಹಲವು ವರ್ಷಗಳಾದ ಮೇಲೆ ಈಗಲೂ ನನ್ನ ಮಕ್ಕಳು ಈ ಕವಿತೆಗಳಲ್ಲಿ ಕೆಲವನ್ನು ನೆನಪಿಸಿಕೊಳ್ಳುತ್ತಾರೆ. ಗೋಪಾಲ್ ಆಗಲೇ ಸಣ್ಣ ಸಣ್ಣ ಐದಾರು ಕವನ ಸಂಕಲನಗಳನ್ನು ಪ್ರಕಟಿಸಿದ್ದರು. ಕೆಲವನ್ನು ಸ್ವಂತ ಖರ್ಚಿನಿಂದ, ಕೆಲವನ್ನು ಇತರರ ಸಹಾಯದಿಂದ. ಗೋಪಾಲ್ ಕನ್ನಡ ಕೂಡಾ ಓದುತ್ತಿದ್ದರು. ಅವರಿಗೆ ಅದೇಕೋ ನನ್ನ ಕವಿತೆಗಳೆಂದರೆ ವಿಶೇಷವಾಗಿ ಇಷ್ಪ. ಅವರು ತಮ್ಮದೊಂದು ಇಂಗ್ಲಿಷ್ ಕವಿತೆಯನ್ನು ನನಗೆ ಅರ್ಪಿಸಿಯೂ ಇದ್ದಾರೆ.

ಗೋಪಾಲ್ ಅವರ ಕವಿತೆಗಳನ್ನು ಮೆಚ್ಚಿಕೊಂಡವರ ಬಳಗ ಸಣ್ಣದು. ಆದರೆ ಅದರಲ್ಲಿ ಪ್ರೊಫೆಸರ್ ಸಿ. ಡಿ. ನರಸಿಂಹಯ್ಯನಂಥವರೂ ಇದ್ದರು. ಸಿ. ಡಿ. ಎನ್. ಅವರ ಧ್ವನ್ಯಾಲೋಕದಲ್ಲಿ ಗೋಪಾಲ್ ಒಂದೆರಡು ತಿಂಗಳು ಅತಿಥಿ ಲೇಖಕರಾಗಿ ನೆಲಸಿದ್ದರು ಕೂಡಾ. ಆದರೂ ಭಾರತದ ಇಂಗ್ಲಿಷ್ ಕವಿಗಳ ಪ್ರಸ್ತಾಪ ಬರುವಾಗ ಗೋಪಾಲರ ಹೆಸರನ್ನು ಯಾರೂ ಉಲ್ಲೇಖಿಸದಿರುವುದು ಆಶ್ಚರ್ಯವೇ ಸರಿ.

ನಿಸ್ಸಿಮ್ ಎಝೆಕಿಲ್, ಪಾರ್ಥಸಾರಧಿ, ಕೇಕಿ ದಾರುವಾಲ ಎಲ್ಲರೂ ಸರಿ; ಆದರೆ ಗೋಪಾಲರನ್ನು ಕೂಡಾ ನಾವು ನೆನೆಯಲೇಬೇಕು. ವಾಸ್ತವತೆ ಹೇಗಿದೆಯೆಂದರೆ, ಸಾಹಿತ್ಯಲೋಕ ಕನ್ನಡದಲ್ಲಿ ಮಾತ್ರವೇ ಅಲ್ಲ, ಇಂಗ್ಲಿಷ್‌ನಲ್ಲಿ ಕೂಡಾ ಕೇವಲ ಕೃತಿಸತ್ವದ ಮೇಲಿಂದ ಲೇಖಕರನ್ನು ಆದರಿಸುತ್ತದೆ ಎನ್ನುವುದು ತಪ್ಪು. ಆದ್ದರಿಂದ ಗೋಪಾಲರ ಕವಿತೆಗಳು ತಮ್ಮ ಓದುಗರಿಗಾಗಿ ಇನ್ನಷ್ಟು ಕಾಲ ಕಾಯಬೇಕಾಗುತ್ತದೆ. ಗೋಪಾಲ್ ಕೆಲಸದ ನಿಮಿತ್ತ ಉತ್ತರಭಾರತಕ್ಕೆ ತೆರಳಿದರು. ಅಲ್ಲಿ ಅವರಿಗೆ ಮದುವೆಯೂ ಆಯಿತು. ಅವರ ಪತ್ನಿ ಕೂಡಾ ಶಾಲಾಧ್ಯಾಪಕಿ. ಒಬ್ಬ ಮಗ ಹುಟ್ಟಿದ. ಆತ ಬೆಳೆಯುತ್ತಿರುವಂತೆಯೇ ಅಪಘಾತದಲ್ಲಿ ತೀರಿಯೂ ಬಿಟ್ಟ. ಈ ಆಘಾತ ಗೋಪಾಲ್ ಮತ್ತವರ ಪತ್ನಿಯ ಮೇಲೆ ಯಾವ ರೀತಿಯ ಪರಿಣಾಮ ಬೀರಿತೋ ತಿಳಿಯದು. ಕೆಲವೇ ವರ್ಷಗಳಲ್ಲಿ ಅವರು ಪರಸ್ಪರರಿಂದ ದೂರವಾದರು. ಗೋಪಾಲ್ ಆಂಧ್ರಪ್ರದೇಶಕ್ಕೆ ಮರಳಿದರು. ಎಲ್ಲೋ ಒಂದು ಕಡೆ ಅವರ ಸ್ನೇಹಿತರ ಆಶ್ರಯದಲ್ಲಿ ಉಳಿದರು. ಆಗ ಅವರೊಮ್ಮೆ ಹೈದರಾಬಾದಿಗೆ ಬಂದು ತಮ್ಮ ಮೊದಲಿನ ಗೆಳೆಯರನ್ನೆಲ್ಲ ಭೇಟಿಯಾಗಿದ್ದರು. ನನಗೂ ಸಿಕ್ಕಿದ್ದರು. ಕವಿತೆಯ ಉತ್ಸಾಹ ಅವರಲ್ಲಿ ಇನ್ನೂ ಇತ್ತು. ಅದುವರೆಗಿನ ತಮ್ಮ ಎಲ್ಲ ಕವಿತೆಗಳನ್ನೂ ಒಟ್ಟಿಗೆ ಪ್ರಕಟಿಸುವ ಒಂದು ದೊಡ್ಡ ಯೋಜನೆಯ ಬಗ್ಗೆ ನನ್ನಲ್ಲಿ ಚರ್ಚಿಸಿದರು.

ಅನಂತರ ನಾನವರ ಕುರಿತು ಕೇಳಿದಾಗ ಅವರು ಬೆಂಗಳೂರಿನ ಹೊರವಲಯದ ವೃದ್ಧಾಶ್ರಮವೊಂದರಲ್ಲಿ ಇದ್ದಾರೆ ಎಂದು ತಿಳಿದುಬಂತು. ಅವರು ಆರ್ಥಿಕವಾಗಿ, ಮಾನಸಿಕವಾಗಿ ತೀರಾ ಕಂಗಾಲಾಗಿದ್ದಿರಬೇಕು. ಅವರಿದ್ದ ಜಾಗದ ವಿಳಾಸ, ಫೋನ್ ನಂಬರ್ ತೆಗೆದುಕೊಂಡು ಅವರನ್ನು ಫೋನ್ ಮೂಲಕ ಸಂಪರ್ಕಿಸಿದೆ. ಮುಖ್ಯವಾಗಿ ನಾನವರಿಗೆ ಏನಾದರೂ ಆರ್ಥಿಕ ಸಹಾಯ ಮಾಡಬೇಕಾಗಿತ್ತು. ಅದಕ್ಕೆ ಅವರ ಸಮ್ಮತಿ ಅಗತ್ಯವಿತ್ತು. ಗೋಪಾಲ್ ಸಮ್ಮತಿಸಿದರು. ಫೋನ್ನಲ್ಲಿ ಈ ತರ ಸುಖದುಃಖಗಳನ್ನು ಹಂಚಿಕೊಂಡದ್ದಲ್ಲದೆ ನಾವು ಬೇರೇನೂ ಮಾತಾಡಲಿಲ್ಲ. ಆದರೆ ನಾನು ಅವರನ್ನು ಮಾತಾಡಿಸಿದ್ದು ಅವರಿಗೆ ತುಂಬಾ ಖುಷಿಯಾಯಿತು. ಚೆಕ್ ಕಳಿಸಿದ ಮೇಲೆ ಅದು ತಲುಪಿತೇ ಎಂದು ಖಚಿತಪಡಿಸುವುದಕ್ಕೆ ಅವರಿಗೆ ಇನ್ನೊಮ್ಮೆ ಫೋನ್ ಮಾಡಿದೆ. ತಲುಪಿತ್ತು. ಮುಂದೆ ಎಂದಾದರೂ ಬೆಂಗಳೂರಿಗೆ ಹೋಗಿದ್ದಾಗ ಅವರಿದ್ದಲ್ಲಿಗೆ ಹೋಗಿ ಮುಖತಃ ಭೇಟಿಯಾಗಬೇಕು ಎಂದುಕೊಂಡೆ. ಆದರೆ ಆಮೇಲೆ ನಾನೇ ದೇಶಬಿಟ್ಟು ಹೋದ್ದರಿಂದ ಅದು ಸಾಧ್ಯವಾಗಲಿಲ್ಲ. ಸ್ವಲ್ಪ ಕಾಲದಲ್ಲೇ ಅವರು ತೀರಿಹೋದರು ಎನ್ನುವುದು ನನಗೆ ಇದೀಗ ತಾನೆ ಗೊತ್ತಾಯಿತು. ಗೋಪಾಲ್ ಹೊನ್ನಲ್ಗೆರೆಗೆ ಸಮೀಪದ ಸಂಬಂಧಿಗಳಾರು ಇರಲಿಲ್ಲವೇ? ಅವರು ವೃದ್ಧಾಶ್ರಮ ಸೇರಿಕೊಳ್ಳುವುದು ಅನಿವಾರ್ಯವಾಗಿತ್ತೆ? ಅಥವಾ ಅದು ಅವರದೇ ಆಯ್ಕೆಯಾಗಿತ್ತೆ?

ಇದಾವುದೂ ನನಗೆ ತಿಳಿಯದು. ಆದರೂ ಬದುಕನ್ನು ಲವಲವಿಕೆಯಿಂದ ಪ್ರೀತಿಸುತ್ತಿದ್ದ ಅವರ ಆ ಸ್ಥಿತಿಯನ್ನು ನೆನೆದರೆ ಮನಸ್ಸಿಗೆ ಬೇಸರವಾಗುತ್ತದೆ.

ನಾನು ಕಾಸರಗೋಡಿನಲ್ಲಿ ಕಾಲೇಜು ವಿದ್ಯಾಭ್ಯಾಸ ಮಾಡುತ್ತಿದ್ದಾಗ ಒಂದು ಅವಧಿಯಲ್ಲಿ ಪ್ರೊಫೆಸರ್ ಶೆಣೈ ಎಂಬ ಕೇರಳದ ಕಡೆಯ ಕೊಂಕಣಿಯೊಬ್ಬರು ಪ್ರಿನ್ಸಿಪಾಲ್ ಆಗಿದ್ದರು. ಎತ್ತರದ ಗಂಭೀರ ನಿಲುವು. ನಗುಮುಖ. ಎಲ್ಲರನ್ನೂ ಮಾತಾಡಿಸುವವರು. ಇವರು ಬಿ‌ಎಸ್.ಸಿ. ತರಗತಿಗಳಿಗೆ ಗಣಿತವನ್ನೂ ಕಲಿಸುತ್ತಿದ್ದರು. ನಾನು ಗಣಿತದ ವಿದ್ಯಾರ್ಥಿಯಾಗಿರಲಿಲ್ಲ. ಆದರೆ ಶೆಣೈಯವರು ಪ್ರಿನ್ಸಿಪಾಲ್ ಆದ್ದರಿಂದ ಅವರ ಮಾತುಗಳನ್ನು ಆಲಿಸುವ ಸಂದರ್ಭಗಳು ಓದಗುತ್ತಿದ್ದುವು. ಇಂಗ್ಲಿಷ್ ಮತ್ತು ಮಲೆಯಾಳಂ ಭಾಷೆಗಳಲ್ಲಿ ಚೆನ್ನಾಗಿ ಮಾತಾಡುತ್ತಿದ್ದರು. ಇಡೀ ಕಾಸರಗೋಡು ಪೇಟೆಯಲ್ಲಿ ಪ್ರಿನ್ಸಿಪಾಲ್ ಶೆಣೈ ಬೇಗನೆ ಜನಪ್ರಿಯರಾದರು. ಇವರ ಪಾಠ ಕೇಳುವ ಕುತೂಹಲದಿಂದ ಒಮ್ಮೆ ನಾನು ಅವರ ಕ್ಲಾಸಿನಲ್ಲಿ ಹೋಗಿ ಕುಳಿತಿದ್ದೆ. ಆವತ್ತು ಅವರು ಇನ್ಫಿನಿಟಿ ಅರ್ಥಾತ್ ಅನಂತತೆಯ ಕುರಿತು ಪಾಠ ಹೇಳುತ್ತಿದ್ದರು. ಆ ವಿಷಯ ಬಹುಶಃ ಬಿ‌ಎಸ್. ಸಿ. ಪಾಠಪಟ್ಟಯಲ್ಲಿ ಇದ್ದಿರಲಾರದು. ಆದರೂ ಇನ್ನು ಯಾವುದನ್ನೋ ಕಲಿಸುತ್ತ ಪರ್ಯಾಯವಾಗಿ ಈ ಬಗ್ಗೆ ಹೇಳುತ್ತಿದ್ದರು. ತಾವು ಮಾತಾಡುವ ವಿಷಯದಲ್ಲಿ ಅವರು ತುಂಬಾ ಆಸಕ್ತರಾಗಿದ್ದರು ಎನ್ನುವುದು ಅವರ ಉತ್ಸಾಹದಿಂದಲೇ ಗೊತ್ತಾಗುತ್ತಿತ್ತು. ಉತ್ತಮ ಅಧ್ಯಾಪಕರ ಗುಣವೇ ಇದು. ಅನಂತತೆಯ ಬಗ್ಗೆ ಸಾಧಾರಣವಾಗಿ ಆಧ್ಯಾತ್ಮಿಕರು ಮಾತಾಡುತ್ತಾರೆನ್ನುವುದು ನನಗೆ ತಿಳಿದಿತ್ತು. ಆದರೆ ಒಬ್ಬ ಗಣಿತದ ಪ್ರೊಫೆಸರ್ ಈ ಕುರಿತು ಮಾತಾಡಿದರೆ ಹೇಗಿರುತ್ತೆ ಎನ್ನುವುದನ್ನು ಆ ದಿನ ಕಂಡುಕೊಂಡೆ. ನನಗೆ ತುಂಬಾ ಖುಷಿಯೆನಿಸಿತು. ನನ್ನಲ್ಲಿ ಪ್ರೊಫೆಸರ್ ಶೆಣೈಯವರ ಕುರಿತಾದ ಗೌರವ ಹೆಚ್ಚಿತು.

ಈ ಪ್ರೊಫೆಸರರಿಗೆ ಇಬ್ಬರು ಮಗಂದಿರು ಮತ್ತು ಓಬ್ಬ ಮಗಳು ಇದ್ದರು. ಒಬ್ಬ ಮಗ ಓದಿನಲ್ಲಿ ಚುರುಕಾಗಿದ್ದು ಸುರತ್ಕಲ್ಲಿನ ಕಾಲೇಜಿನಲ್ಲಿ ಎಂಜಿನೀಯರಿಂಗ್ ಮಾಡಿದ. ಶೆಣೈಯವರು ನಿವೃತ್ತರಾದ ಮೇಲೂ ಯುಜಿಸಿ ಅವರನ್ನು ಇನ್ನೂ ಎರಡು ವರ್ಷಗಳ ಕಾಲ ಪ್ರೊಫೆಸರರಾಗಿ ಕಾಲೇಜಿನಲ್ಲಿ ಇರಿಸಿಕೊಂಡಿತು. ಈ ಮಧ್ಯೆ ಅವರ ಔದ್ಯೋಗಿಕ ಜೀವನದಲ್ಲಿ ಸ್ವಲ್ಪ ಏರುಪಾರಾದ್ದು ಕೂಡಾ ಇತ್ತು. ಕಾಸರಗೋಡು ಕಾಲೇಜಿನ ಮುಖ್ಯ ಕಟ್ಟಡಗಳು ನಿರ್ಮಿತವಾದ್ದು ಶೆಣೈಯವರು ಪ್ರಿನ್ಸಿಪಾಲರಾಗಿದ್ದ ಕಾಲದಲ್ಲಿಯೇ. ಈ ಕಟ್ಟಡಗಳು ತಲೆಯೆತ್ತುತ್ತಿದ್ದಂತೆ ಕಾಲೇಜು ಆವರಣಕ್ಕೆ ತಾಗಿಕೊಂಡು ಹೊರಗೆ ಪುಟ್ಟದಾದ ಮನೆಯೊಂದು ಕೂಡ ನಿರ್ಮಾಣವಾಗುತ್ತಿತ್ತು. ಇದು ಶೆಣೈಯವರ ಮನೆಯಾಗಿತ್ತು. ಅಲ್ಲಿ ಅವರು ಸಣ್ಣದೊಂದು ಮನೆ ಜಾಗ ಕೊಂಡುಕೊಂಡಿದ್ದರು. ಬಹುಶಃ ಕಾಲೇಜು ಕಟ್ಟುತ್ತಿದ್ದ ಕಂತ್ರಾಶತುದಾರನೇ ಈ ಮನೆಯನ್ನೂ ಕಟ್ಟುತ್ತಿದ್ದನೆಂದು ಕಾಣುತ್ತದೆ. ಶೆಣೈಯವರು ನ್ಯಾಯಪ್ರಕಾರವೇ ಈ ಮನೆ ಕಟ್ಟಸುತ್ತಿದ್ದಿರಬಹುದಾದರೂ ಇದು ಊಹಾಪೋಹಗಳಿಗೆ ಕಾರಣವಾಯಿತು. ಈ ಕಂತ್ರಾತುದಾರನು ಹಣ ತೆಗೆದುಕೊಳ್ಳದೇ ಮನೆ ಕಟ್ಟಿಸಿಕೊಡುತ್ತಿದ್ದಾನೆ, ಆದರೆ ಇದರ ಲಾಭವನ್ನು ಕಾಲೇಜು ಕಟ್ಟಡಗಳ ಕೆಲಸದಲ್ಲಿ ಆತ ಮಾಡಿಕೊಳ್ಳುತ್ತಾನೆ, ಹಾಗೂ ಇದರಲ್ಲಿ ಪ್ರಿನ್ಸಿಪಾಲರು ಶಾಮೀಲಾಗಿರುತ್ತಾರೆ ಎನ್ನುವ ದೂರು ಸರಕಾರಕ್ಕೂ ಹೋಯಿತು. ಈ ಕೇಸು ಕೆಲವು ವರ್ಷ ನಡೆಯಿತೆಂದು ತೋರುತ್ತದೆ. ಶೆಣೈಯವರಿಗೆ ಕಾಸರಗೋಡಿನಿಂದ ವರ್ಗವೂ ಆಯಿತು. ಆದರೆ ಕೇಸಿನ ಪರಿಣಾಮವೇನಾಯಿತೋ ತಿಳಿಯದು. ಈ ಪ್ರಕರಣದಿಂದ ಶೆಣೈಯವರ ಅಭಿಮಾನಿಗಳಿಗೆ ಆಘಾತವಾಯಿತೆಂದು ಬೇರೆ ಹೇಳಬೇಕಾಗಿಲ್ಲ. ನ್ಯಾಯವಾಗಿದ್ದರೆ ಸಾಲದು, ಜನರಿಗೆ ಹಾಗೆ ಮನವರಿಕೆಯಾಗುವಂತೆಯೂ ಬೇಕು ಎಂಬ ಮಾತು ಇದರಿಂದ ಮತ್ತೊಮ್ಮೆ ಸಾಬೀತಾಯಿತು ಎಂದು ಹೇಳಬಹುದು.

ಕೆಲವು ವರ್ಷಗಳ ಹಿಂದೆ ಶೆಣೈಯವರ ಬಗ್ಗೆ ನಾನು ಕೇಳಿದಾಗ ಅವರು ಕೊಚ್ಚಿಯ ವೃದ್ಧಾಶ್ರಮವೊಂದರಲ್ಲಿ ಜೀವನಸಂಧ್ಯೆಯನ್ನು ಕಳೆಯುತ್ತಿದ್ದರು. ಶೆಣೈಯವರ ವಿಷಯದಲ್ಲೂ, ಅವರಾಗಿಯೇ ಅದನ್ನು ಆರಿಸಿಕೊಂಡರೋ ಅಥವಾ ಅವರಿಗದು ಅನಿವಾರ್ಯವಾಯಿತೋ ಎನ್ನುವುದು ನನಗೆ ಗೊತ್ತಿಲ್ಲ. ಯಾರಾದರೂ ಬೇಕೆಂದೇ ವೃದ್ಧಾಶ್ರಮದಲ್ಲಿ ಕೊನೆಗಾಲ ಕಳೆಯಲು ಬಯಸುತ್ತಾರೆಯೇ? ಅದೂ ನನಗೆ ತಿಳಿಯದು. ಆದರೆ ಯಾವುದೇ ಅಂತರರಾಷ್ಟ್ರೀಯ ಯುನಿವರ್ಸಿಟಿಯಲ್ಲೂ ಗಣಿತದ ಖಾಯಂ ಪ್ರೊಫೆಸರರಾಗಿ ಹೆಸರುಗಳಿಸಲು ಯೋಗ್ಯರಾಗಿದ್ದ ಶೆಣೈಯವರ ಜೀವನ ಸಂಧ್ಯೆ ಈ ರೀತಿಯಾದ್ದು ನನಗೆ ಬೇಸರ ತರಿಸಿದ ವಿಷಯ.

ಅಯೋವಾ ಯೂನಿವರ್ಸಿಟಿ ಆವರಣದಲ್ಲಿ ನಾನೊಮ್ಮೆ ಒಬ್ಬರು ಪ್ರೊಫೆಸರ್ ಮಿತ್ರರೊಂದಿಗೆ ಮಧ್ಯಾಹ್ನದ ಊಟ ಮುಗಿಸಿ ಒಂದು ದೊಡ್ಡದಾದ ಕಟ್ಟಡದ ಪಕ್ಕದಲ್ಲಿ ಸಾಗುತ್ತಿದ್ದಾಗ, ಮಿತ್ರರು ಆ ಕಟ್ಟಡವನ್ನು ತೋರಿಸಿ, ಇದೇನು ಕಟ್ಟಡವೆಂದು ಗೊತ್ತಿದೆಯೇ ಎಂದು ಕೇಳಿದರು. ಗೊತ್ತಿಲ್ಲ ಎಂದೆ. ಇದೊಂದು ವೃದ್ಧಾಶ್ರಮ ಎಂದರು. ನೀವೆಂದಾದರೂ ಇದರ ಒಳಕ್ಕೆ ಹೋಗಿದ್ದೀರಾ ಎಂದು ವಿಚಾರಿಸಿದೆ. ಇಲ್ಲ ಎಂದರು. ನನಗೊಮ್ಮೆ ಅಲ್ಲಿ ಹೋಗಿ ನೋಡುವ ಆಸೆಯಾದರೂ ಅದು ಕೈಗೂಡಲಿಲ್ಲ. ಮಾತ್ರವಲ್ಲ ಸುಮ್ಮನೆ ಒಂದು ಮ್ಯೂಸಿಯಂ ನೋಡುವವನಂತೆ ಅಲ್ಲಿ ಹೋಗಿ ನೋಡುವುದು ಸರಿಯಲ್ಲ ಎಂದೂ ನನಗನಿಸಿತು. ಆದರೆ ಅಮೇರಿಕದಲ್ಲಿ ಇಂಥ ವೃದ್ಧಾಶ್ರಮಗಳಲ್ಲಿ ಎಲ್ಲ ಆಧುನಿಕ ಸವಲತ್ತುಗಳೂ ಇರುತ್ತವೆ ಎನ್ನುವುದು ನನಗೆ ಗೊತ್ತಿತ್ತು. ಇಲ್ಲಿ ವಾಸಿಸುವವರ ಮಕ್ಕಳು, ಮರಿಮಕ್ಕಳು ವರ್ಷಕ್ಕೊಮ್ಮೆಯೋ ಎರಡು ಸಲವೋ ಬಂದು ತಮ್ಮ ತಮ್ಮ ಹಿರಿಯರ ಜತೆ ಸ್ವಲ್ಪ ಕಾಲ ಇದ್ದು ಹೋಗುತ್ತಾರೆ. ಊರ ಮಂದಿ ಕೂಡಾ ಇಲ್ಲಿ ಭೇಟಿ ನೀಡುತ್ತಾರೆ. ಊಟ ಉಪಚಾರ, ವ್ಯಾಯಾಮವು, ಮನರಂಜನೆ, ವೈದ್ಯಕೀಯ ಚಿಕಿತ್ಸೆ ಎಲ್ಲದಕ್ಕೂ ಇಲ್ಲಿ ಅನುಕೂಲತೆಯಿರುತ್ತದೆ.

ಚಕ್ (ಚಾರ್ಲ್ಸ್ ಎಂಬ ಹೆಸರಿನ ಅಮೇರಿಕನ್ ಸಂಕ್ಷಿಪ್ತರೂಪ) ಎಂಬ ವಯಸ್ಸಾದ ಕವಿಯೊಬ್ಬ ಆಗಾಗ ನಾನಿದ್ದ ಯೂನಿವರ್ಸಿಟಿ ಕಟ್ಟಡಕ್ಕೆ ಬರುತ್ತಿದ್ದ. ಆತನ ಪರಿಚಯವಾಯಿತು. ಆತ ತನ್ನದೊಂದು ಕವನ ಸಂಕಲನ ಕೊಟ್ಟ. ಅವನಲ್ಲೊಂದು ಹಳೆಯದಾದ ಕಾರೂ ಇತ್ತು; ಅದರಲ್ಲಿ ಒಮ್ಮೆ ನನ್ನನ್ನು ಕೂತುಕೊಳ್ಳಿಸಿ ಒಂದೆಡೆಗೆ ಕರೆದೊಯ್ದಿದ್ದ. ಆ ಕಾರಿನ ಹಿಂದಣ ಸೀಟಿನ ತುಂಬಾ ಅದೇನೇನೋ ಸಾಮಾನುಗಳು ತುಂಬಿದ್ದು, ಅದೊಂದು ಜಂಕ್ ಯಾರ್ಡಿನಂತಿತ್ತು. ಅಲ್ಲಿ ಇಲಿಗಳೂ ಇದ್ದಾವೆಂದು ಆತನ ಗೆಳೆಯರು ತಮಾಷೆ ಮಾಡುತ್ತಿದ್ದರು. ಚಕ್‌ಗೆ ಅಮೇರಿಕದಲ್ಲಿ ಕೆಲಸವಿರಲಿಲ್ಲ. ಆದ್ದರಿಂದ ಆಗಾಗ ಚೀನಾ ದೇಶಕ್ಕೆ ಹೋಗಿ ಅಲ್ಲಿ ಇಂಗ್ಲಿಷ್ ಕಲಿಸಿ ದುಡ್ಡು ಸಂಪಾದಿಸಿಕೊಂಡು ಬರುತ್ತಿದ್ದ. ಅವನಿಗೆ ಚೈನೀಸ್ ಭಾಷೆ ಸ್ವಲ್ಪ ಸ್ವಲ್ಪ ಬರುತ್ತಿತ್ತು. ಇನ್ನಷ್ಟು ಕಲಿತುಕೊಳ್ಳಲೆಂದು ಚೈನೀಸ್ ಡಿಪಾರ್ಟ್ಮೆಂಟಿನಲ್ಲಿ ಹೆಸರು ಹಚ್ಚೆಸಿಕೊಂಡಿದ್ದ. ಆದ್ದರಿಂದಲೇ ಅವನು ಈ ಕಟ್ಟಡಕ್ಕೆ ಆಗಾಗ ಭೇಟಿಕೊಡುತ್ತಿದ್ದುದು.

ಚಕ್ ಮೂಲತಃ ಅಯೋವಾದವನೇ ಆಗಿದ್ದರೂ ಕುಟುಂಬ ಎನ್ನುವುದು ಅವನಿಗೆ ಇರಲಿಲ್ಲ. ಹೆಂಡತಿಯ ಜತೆ ವಿಚ್ಛೇದನವಾಗಿತ್ತು. ಇದ್ದ ಒಬ್ಬ ಮಗ ಅದು ಹೇಗೋ ಇವನ ಆಸ್ತಿಯನ್ನೆಲ್ಲ ದೋಚಿಕೊಂಡು ಇವನನ್ನು ಮನೆಯಿಂದ ಹೊರಗೆ ಹಾಕಿದ್ದ. ಆದ್ದರಿಂದ ಊರಿಗೆ ಬಂದಾಗಲೆಲ್ಲ ಅವನು ಈ ವೃದ್ಧಾಶ್ರಮದಲ್ಲಿ ತಂಗುತ್ತಿದ್ದ. ಒಮ್ಮೆ ಚಕ್ ದಾರಿಯಲ್ಲಿ ಸಿಕ್ಕಿದಾಗ ನನಗವನು ಅದೇ ಕಟ್ಟಡವನ್ನು ತೋರಿಸಿ ನಾನಿರುವುದು ಇಲ್ಲೇ ಎಂದಿದ್ದ. ಆಮೇಲೆ, ಇದೊಂದು ಜೇಲು, ಆದರೆ ವ್ಯತ್ಯಾಸವೆಂದರೆ ಇಲ್ಲಿ ಖೈದಿಗಳಿಗೆ ಕೀಲಿ ಕೈ ಕೊಟ್ಟುಬಿಡುತ್ತಾರೆ ಎಂದು ನನ್ನತ್ತ ನೋಡಿ ಕಣ್ಣು ಮಿಟುಕಿಸಿದ. ಈ ಮಾತು ಎಲ್ಲವನ್ನೂ ಹೇಳುತ್ತದೆ. ಅಮೇರಿಕದ ವೃದ್ಧಾಶ್ರಮಗಳಲ್ಲಿ ಎಲ್ಲಾ ಅನನುಕೂಲತೆಗಳಿದ್ದರೂ ಮನುಷ್ಯನಿಗೆ ಮೂಲಭೂತವಾಗಿ ಅಂಟಿಕೊಂಡಿರುವ ಒಂಟಿತನದ ದುಃಖದಿಂದ ಬಿಡುಗಡೆಯಿಲ್ಲ. ಒಮ್ಮೆ ಚೆಕ್ ನನ್ನನ್ನು ಬೆಕೆಟ್‌ನ ‘ವೈಟಿಂಗ್ ಫಾರ್ ಗೊದೋ’ ನಾಟಕಕ್ಕೆ ಕರೆದುಕೊಂಡು ಹೋಗಿದ್ದ. ಅವನ ಜತೆ ಒಬ್ಬಾಕೆ ಧಡೂತಿ ಹೆಂಗಸೂ ಇದ್ದಳು. ಅವನಂತೆಯೇ ಒಬ್ಬ ನತದೃಷ್ಟೆ. ಬೆಕೆಟ್ ಇಡೀ ನಾಟಕವನ್ನು ನಮ್ಮದೇ ಜೀವನ ನಾಟಕದಂತೆ ಹೇಗೆ ಬರೆದಿದ್ದಾನೆ ಎನಿಸಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂಜೆ
Next post ಚಮತ್ಕಾರ

ಸಣ್ಣ ಕತೆ

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…