ಬಾನಂಗಣದಲ್ಲಿ ಮಲಗಿ
ಉಸಿರೆಳೆಯುತ್ತಿದೆ ಹಗಲು.
ರೋಗಿಯ ಸುತ್ತಮುತ್ತ
ಮಿಕಿ ಮಿಕಿ ನೋಡುತ್ತ
ತಲ್ಲಣಿಸಿ ಕಾಯುತ್ತಿವೆ ಕೆಂಪಗೆ
ಹತ್ತಾರು ಪುಟ್ಟ ಮುಗಿಲು.
ಬೆಳಗಿನ ಎಳೆಪಾಪ
ಮಧ್ಯಾಹ್ನಕ್ಕೆ ಬೆಳೆದು,
ಮಧ್ಯಾಹ್ನದ ಉರಿ ಪ್ರತಾಪ
ಮುಸ್ತಂಜೆಗೆ ಕಳೆದು
ಈಗ
ಕತ್ತಲ ಕರಾಳ ಕೋಣ
ಕೆಂಬಾಯಿ ಆಡಿಸುತ್ತ
ಹೂಂಕರಿಸಿ ಬರುತ್ತಿದೆ ನೋಡಿ
ಅಳಿದುಳಿದ ಬೆಳಕನ್ನೂ ಮೇದು.
*****