ಪುಗಸೆಟ್ಟಿ ಕೊಡತೇನಿ ನನಮೈಕು
ಪುರಸೆಟ್ಟಿ, ಭಾಸಣಕ ನೀ ಲೈಕು ||ಪಲ್ಲ||

ಹೊಡಿಹೊಡಿ ಭಾಸಣ ಹುಡೆಹಾರಿ ಬೀಳಂಗ
ಹುಡಿಗೇರ ಕೊಡಪಾನ ವಡೆವಂಗ.
ತುಡಿಗೇರ ಹಿಡಿವಂಗ ತುರುಬಾನ ಎಳೆವಂಗ.
ಕಿವಿಯಾನ ಹಾಲಿಯು ಹರಿವಂಗ

ಖಾರಾನ ಕುಟ್ಟಂಗ ಕುಟ್ಟಯ್ಯ ಭಾಸಣ
ಕೇಳೋರು ಚರ್ಚೂರು ಚೂರ್‍ಮರೆ
ರೊಕ್ಕಿಲ್ಲ ಲೆಕ್ಕಿಲ್ಲ ಪೆಂಡಾಲ್ಕ ಭಾಡ್ಗಿಲ್ಲ
ಕೇಳೋರ ಕಿವಿಯಲ್ಲ ಕಾಲ್ಮರೆ ||೨||

ಮಂತ್ರ್ಯಾರು ಯಡವಟ್ಟ ತಂತ್ರ್ಯಾರು ಅಡಮುಟ್ಟ
ಅಡಕೊತ್ತು ಕತ್ರ್ಯಾಗ ನೀವತ್ತ
ಹೋಟೀಗು ಹೂಂ ಅನ್ನ ನೋಟಿಗು ನೋ ಅನ್ನ
ಕುಂಡೀಯ ಕೀಲಾ ನೀ ಕಿತ್ತ ||೩||

ಕೇಳ್ಕೇಳಿ ಭಾಸಣಾ ಕೌಳ್ಹೆತ್ತಿ ಬೀಳಲೆ
ಬಿದ್ದಾಗ ನಿನಹೆಂಡ ನೀ ಕುಡಿಸ
ಕತ್ಲಾಗ ಇದ್ದೋರು ಹಿತ್ಲಾಗ ಹೋದೋರು
ಬತ್ಲಾಗಿ ಇತ್ಲಾಗ ಎಳಕೊಳ್ಳ ||೪||

ಪುರಸೆಟ್ಟಿ ನೀ ಅಂದ್ರ ಪುಗಸಟ್ಟಿ ಪಂಚ್ಮೆಲ್ಲ
ಹೊಲದಾಗ ನಟುಕಟ್ಟಿ ನೀ ಕಡಸ
ಕೊಡಬ್ಯಾಡ ದಿನಗೂಲಿ ಬಸರಾದ್ರ ಬಿಡಬೇಡ
ಹಸರಾದ್ರ ಸೋಬಾನ ಹಾಡ ||೫||
*****