ಬೋಳತಲೆ ಚಾಮರಾಜ ಒಡೆಯರರ ತರುವಾಯ ಬೆಟ್ಟದ ಒಡೆಯರೆಂದು ಪ್ರಸಿದ್ಧರಾದ ಒಡೆಯರು ಪಟ್ಟಕ್ಕೆ ಬಂದರು. ಇವರು ಶೂರರಾಗಿದ್ದರು; ಆದರೆ ಮುಂದಾಲೋಚನೆಯಿಲ್ಲದೆ ದುಡುಕುತ್ತಿದ್ದರು. ಮೃದು ಸ್ವಭಾವವಿದ್ದರೂ ನಿದಾನವಿರಲಿಲ್ಲ. ಇವರು ಎರಡು ವರ್ಷಗಳಾಳ್ವಿಕೆಯಲ್ಲಿ ಬೊಕ್ಕಸದಲ್ಲಿದ್ದ ಹಣವೆಲ್ಲವನ್ನೂ ವೆಚ್ಚ ಮಾಡಿಬಿಟ್ಟರು. ಶ್ರೀರಂಗಪಟ್ಟಣಕ್ಕೆ ಸಲ್ಲಬೇಕಾಗಿದ್ದ ಪೊಗದಿಯು, ಹಾಗೆಯೇ ಉಳಿದುಹೋಯಿತು. ಆಗ ಅರಮನೆಯ ಹಿರಿಯರು ಬೆಟ್ಟದ ಒಡೆಯರನ್ನು ಪಟ್ಟದಿಂದ ತಪ್ಪಿಸಿ ರಾಜ ಒಡೆಯರಿಗೆ ಪಟ್ಟವನ್ನು ಕಟ್ಟುವ ಆಲೋಚನೆ ಮಾಡಿದರು. ದುರಾಲೋಚನಾ ಪರರಾದ ರಾಜ ಒಡೆಯರು ಸಾಲ ತೀರುವಂತೆಯು ಹಣ ಬರವಂತೆಯೂ ಮುಖ್ಯಸ್ಥರಿಂದ ಮಾತು ತೆಗೆದುಕೊಂಡು ಪಟ್ಟಕ್ಕೊಪ್ಪಿದರು.

ಬೆಟ್ಟದ ಒಡೆದುರನ್ನು ಕೊಲೆಮಾಡಿಸಬೇಕೆಂದು ಯಾರೂ ಆಲೋಚಿಸಲಿಲ್ಲ. ರಾಜ ಒಡೆಯರಿಗೆ ಪಟ್ಟ ಕಟ್ಟುವ ನಿಶ್ಚಯವು ನಡೆಯುತ್ತಿದ್ದಾಗಲೇ ಬೆಟ್ಟದ ಒಡೆಯರು ಅಲ್ಲಿಗೆ ಬಂದರು. ಅಲ್ಲಿಯ ಪರಿವಾರದವರು ಕೂಡಲೆ ವಿನೀತರಾಗಿ ಆ ನಿಶ್ಚಯವನ್ನು ಅರಿಕೆ ಮಾಡಿ “ದೇಶದ ಸಾಲವನ್ನು ತೀರಿಸಲು ಈ ನಿಶ್ಚಯವು ಅವಶ್ಯವಾಯಿತು. ಇದರಿಂದ ತಾವು ಖಿನ್ನರಾಗಬಾರದು. ತಾವು ಶ್ರೀರಂಗಪಟ್ಟಣದಲ್ಲಿ ರಾಜಪ್ರತಿನಿಧಿಯ ಸಭೆಯಲ್ಲಿ ಮೈಸೂರಿನ ಗೌರವವನ್ನುಳಿಸುತ್ತ ಇರಬಹುದು ; ಅಧವಾ ತಮಗೆ ಸ್ವತಂತ್ರವಾಗಿರಲು ಇಷ್ಟವಾದರೆ ಮೈಸೂರಿನಲ್ಲಿಯೇ ತಾವೂ ಇರಬಹುದು” ಎಂದು ಸೂಚಿಸಿದರು. ಆಗ ಬೆಟ್ಟದ ಒಡೆಯರಿಗೆ ಕೋಪ ಬಂದಿತು. “ನಾವು ಶ್ರೀರಂಗಪಟ್ಟಣದಲ್ಲಿ ಇರುವುದಿಲ್ಲ, ಮೈಸೂರಿನಲ್ಲಿಯೂ ಇರುವುದಿಲ್ಲ. ನಮಗೇನೂ ಬೇಡ” ಎಂದುಬಿಟ್ಟು ಆ ಸ್ಥಳದಿಂದ ಹೊರಟುಹೋದರು.

ಈ ಸಮಾಚಾರವನ್ನು ಕೇಳಿದಕೂಡಲೆ ಕಾರುಗಹಳ್ಳಿಯ ಪಾಳೆಯಗಾರನು ತನಗೆ ಒಳ್ಳೆ ಸಮಯ ಬಂದಿತೆಂದು ನೆನೆದು ಸೈನ್ಯವನ್ನು ನಡೆಸಿಕೊಂಡು ಮೈಸೂರಿನಮೇಲೆ ಅಕಸ್ಮಾತ್ತಾಗಿ ದಂಡೆತ್ತಿ ಬಂದು ಮುತ್ತಿದನು. ಬೆಟ್ಟದ ಒಡೆಯರು ಎಲ್ಲವನ್ನೂ ಬಿಟ್ಟವರಂತೆ ತಿರಸ್ಕಾರಭಾವದಿಂದ ಒಂದೆಡೆಯಲ್ಲಿ ಶತಪಥ ತಿರುಗುತ್ತಿದ್ದರು. ಕೋಟೆಯ ಒಳಗೆ ಗಜಿಬಿಜಿ, ಕೋಟೆಯು ಹೊರಗಡೆ ಶತ್ರುಗಳ ಹಾವಳಿ. ಆದರೂ ಬೆಟ್ಟದ ಒಡೆಯರು ತಟಸ್ಥರಾಗಿದ್ದರನ್ನು ಕಂಡು ಹೆಂಗಸೊಬ್ಬಳು ಹತ್ತಿರ ಹೋಗಿ “ಇದೇನು ಈ ಕಾಲದಲ್ಲಿಯೂ ಒಡೆಯರ ವಂಶದಲ್ಲಿ ಹುಟ್ಟಿದವರು ತಟಸ್ಟರಾಗಿರುವದೇ!” ಎಂದು ಮೂದಲಿಸಿದಳು. ತಕ್ಷಣವೇ ಬೆಟ್ಟದ ಒಡೆಯರು ಒಂದು ಗಂಡು ಕೊಡಲಿಯನ್ನು ಎತ್ತಿಕೊಂಡು ತನ್ನ ಸೈನ್ಯವನ್ನು ಕೂಗಿ ಒಟ್ಟು ಕೂಡಿಸಿ” ಹಿಂದೆ ಬನ್ನಿ ಎಂದು ಕೋಟೆಯ ಬಾಗಿಲ ಕಡೆಗೆ ನುಗ್ಗಿದರು. ಬಾಗಿಲ ಆಗಣಿ ಹಾಕಿತ್ತು. ಬೆಟ್ಟದ ಒಡೆಯರು ತಮ್ಮ ಕೊಡಲಿಯಿಂದ ಒಂದೇ ಏಟು ಹೊಡೆದರು. ಬಾಗಿಲು ತೆರೆಯಿತು. ತರುವಾಯ ಒಡೆಯರು ತಮ್ಮ ಭಟರೊಡನೆ ಶತ್ರುಗಳ ಮಧ್ಯೆ ನುಗ್ಗಿದರು, ವೀರಾವೇಶದಿಂದ ಯುದ್ದ ಮಾಡಿ ಅವರನ್ನು ಸೋಲಿಸಿ ಅಟ್ಟಿ ಬಿಟ್ಟರು. ಈ ರೀತಿಯಲ್ಲಿ ಮುತ್ತಲು ಬಂದ ಶತ್ರುಗಳು ತಾವೇ ಸೋತು ಪಲಾಯನರಾದರು.
*****
[ವಿಲ್ಕ್ಸ್‌ ಸಂ೧; ಪುಟ ೨೫]