“ಅದು ಇಲ್ಲ! ಇದು ಇಲ್ಲ! ಯಾವುದೇನೆನಗಿಲ್ಲ-
ವೆನಬೇಡ, ಎಲ್ಲವಿದನಾರು ಪಡೆದರು, ಹೇಳು ?
ದೈವವಿತ್ತಿಹ ಕೂಳು, ದೇವನಿತ್ತಿಹ ತೋಳು-
ಬಲವ ನಂಬಿರಬಾರದೇ ! ಆಲಿಸೀ ಸೊಲ್ಲ !
’ಬಾ’ ಎಂದವನೆ ಗೆಳೆಯ; ಬಾಯ್ಗೆ ಬಿದ್ದುದೆ ಬೆಲ್ಲ!
ಕೊರೆದಿಟ್ಟ ತಾಣದಲಿ ಕೊನರುತಿರಲೀ ಬಾಳು.
ಫಲೋನ್ಮುಖತೆಯಾ ಕಾಲ ಬರಬಹುದು, ತುಸು ತಾಳು,
ಹಾಡಿ ದೂರುವ ಕವಿಯು ಬರಿಯ ಮಾತಿನ ಮಲ್ಲ”!
“ನೀನೊರೆಯುವದು ನಿಜವು. ಸೃಷ್ಟಿಯಲಿ ವೈಷಮ್ಯ-
ವಿಹುದೊ ನಮ್ಮೊಳಗಿಹುದೋ,- ತಿಳಿಯದಾಗಿಹುದೆಮಗೆ.
ಈ ಪ್ರಪಂಚದ ಹೊಂಚೆ ಬೇರೆಯಿರಬೇಕಿನ್ನು.
ಇಲ್ಲದಿರೆ ನಾವ್ ಬದುಕುವದೆ ಪಾಪ, ಅಕ್ಷಮ್ಯ.
ಬೇರೆ ನೆಲ ಬೇಕಿನ್ನು, ಇಲ್ಲದಿರೆ ಹಣೆಗಣ್ಣು.
ಇಂತಿದರ ಭಾವವಿದೆ ಎಂತು ಬರಬಹುದೊಸಗೆ?”
*****