ಸುಳ್ಳು ಸ್ವಪ್ನ

ಸುಳ್ಳು ಸ್ವಪ್ನ

೨೬-೫-೧೯೨೮
ಕಾಲ ಕಳೆಯುವುದೊಂದು ದೊಡ್ಡ ಭಾರ, ಅದನ್ನು ಹೊರುವ ಕಷ್ಟವನ್ನು ಬರೆಯಲಾರೆ. ಮಾತಾಡಲು ಯಾರೂ ಇಲ್ಲ. ಓದಲು ನನಗೆ ಬೇಕಾದ ಪುಸ್ತಕವಿಲ್ಲ. ಇದ್ದರೂ ಹೇಗೆ ತಾನೆ ಓದಲಿ ? ‘ಅವನ’ ಮನೆಯಿಂದ ಬರುವಾಗ ನನ್ನ ಪುಸ್ತಕವನ್ನು ಮರೆತು ಬಂದಿರುವೆನು. ಪುಸ್ತಕವು ಮರೆತು ಹೋಯ್ತು-ಹೋಗಲಿ, ಆದರೆ ಅದಕ್ಕೂ ಹೆಚ್ಚಿನದನ್ನು ತರಲಾರದೆ ಬಂದಿರುವೆನು.

ಶಾಂತೆಯು ಕಾಗದ ಬಂದಿದೆ. ಬೇಕಾದ ಹಾಗೆ ಬರೆದಿರುವಳು. ಆದರದು ನನ್ನ ಉರಿಯುವ ಹೃದಯವನ್ನು ತಂಪುಮಾಡಬಲ್ಲುದೇ ? ಮನಸ್ಸಿಗೆ ಸುಖಕೊಡಬಲ್ಲುದೇ ? ಯಾರೊಡನೆ ಹೇಳಲಿ….ಹೇಳುವಂತಹ ಮಾತುಗಳಲ್ಲ. ಏನು ಮಾಡಲಿ……

ಜ್ಞಾಪಕಶಕ್ತಿಯನ್ನು ದೇವರು ಮನುಷ್ಯನಿಗೆ ಕೊಡಬಾರದಿತ್ತೆಂದು ತೋರುವುದು. ಎಷ್ಟು ಕ್ರೂರ! ಎಂತಹ ಹಟಮಾರಿ! ತಪ್ಪಿಸಿಕೊಳ್ಳಲು ನನ್ನ ಪ್ರಯತ್ನವೆಲ್ಲವೂ ನಿಷ್ಫಲ. ಯಾವ ರೀತಿಯಿಂದಲೂ ಜ್ಞಾಪಕವು ಬಂಧಿಸಿರುವ ಬಲೆಯಿಂದ ಬಿಡಿಸಿಕೊಳ್ಳಲಾಗುವುದಿಲ್ಲ. ನಮ್ಮ ಮನೆಯ ಸುತ್ತುಮುತ್ತ ಸೃಷ್ಟಿ ತನ್ನ ಸೌಂದರ್‍ಯದ ಬೀಡನ್ನು ಕಟ್ಟಿದೆ. ಅದರ ವೈಭವಪೂರ್ಣವಾದ ಸೌಂದರ್ಯವನ್ನು ನೋಡಹೊರಟರೆ ತಾನೆ ಜ್ಞಾಪಕದ ಕ್ರೂರತ್ವವು ತಪ್ಪುವುದೇ? ಇಲ್ಲ-ಸಾಧ್ಯವಿಲ್ಲ. ಇನ್ನಾವುದನ್ನು ಮೊರೆಹೋಗಲಿ ? ಪುಸ್ತಕವನ್ನೆ ? ಅದೂ ಆಯಿತು. ಒಣ ಪುಸ್ತಕಕ್ಕೂ ಚಿಗುರು ಜ್ಞಾಪಕಕ್ಕೂ ಎಲ್ಲಿಯ ಸಾಟಿ! ಅಮ್ಮ, ಅಣ್ಣ, ಲಲಿತ ನಾಡಿದ್ದು ಊರಿಗೆ ಹೋಗುವರು. ಮನೆಯಲ್ಲಿ ನಾನು ಮಾತ್ರ. ಜ್ಞಾಪಕದ ಹಬ್ಬ- ನನ್ನನ್ನು ಕುಯಿದು ತಿನ್ನಬಹುದು. ವಿಶ್ವನಿಯಮವೇ ಹೀಗೇನು ? ಕಷ್ಟ-ಎತ್ತ ನೋಡಿದರೂ ಕಷ್ಟ, ಯಾವನಿಗೂ ಸುಖವಿಲ್ಲ. ನನಗೂ ಒಂದು ತರದ ಕಷ್ಟ ಬೇಡವೆ ? ಬೇಕು ! ಹಾಗಾದರೆ ನಾನೇಕೆ ದುಃಖಿ ಸಲಿ ? ಹೇಳಿದರೆ ಪ್ರಯೋಜನವೇನು ? ಸುಮ್ಮನಿರುವುದೇ ಮೇಲೆಂದು ತೋರುವುದು. ಆದರೆ ಸುಮ್ಮನೆಂತಿರಲಿ ?

೦೩-೦೬-೧೯೨೮
ಮನೆಯವರೆಲ್ಲರೂ ಊರಿಗೆ ಹೋಗಿರುವರು. ಮನೆಯಲ್ಲಿ ನಾನೂ ಅಕ್ಕ ಇಬ್ಬರೇ. ಅಕ್ಕನಿಗೆ ಮನೆಗೆಲಸ, ಅದು ಮುಗಿದೊಡನೆ ರಾಮಾಯಣ, ನನಗೆ ಸದಾ ನೆನಪಿನ ಹಬ್ಬ…. ಮರೆಯಲು ನೆನಸಿದಂತೆಲ್ಲಾ ಹೆಚ್ಚುತ್ತಿರುವ ನೆನಪು. ನಿನ್ನೆ ತಾನೆ ಅವನ ಕಾಗದವು ಬಂದಿದೆ. ಎಂತಹ ಒರಟು‌ಒಕ್ಕಣೆ.. ಪಾಪ! ನನ್ನ ಹೃದಯಾಂತರಾಳದಲ್ಲಿ ಉರಿಯುತ್ತಿರುವ ಬೆಂಕಿಯನ್ನು ಅವನು ಹೇಗೆ ತಾನೆ ತಿಳಿಯಬಲ್ಲನು? ಅವನ ಕಾಗದವು ಒರಟಾದರೂ ಅದರಲ್ಲಿ ಸವಿ ಇತ್ತು. ‘ತುಟಿಗಳು ಡೊಂಕಾದರೂ ಒಲವಿನ ಮುತ್ತು-ಆ ಮುತ್ತಿನ ನಲಿವು ಡೊಂಕೇ?’ ಅವನನ್ನು ಪ್ರೀತಿಸುವ ನನಗೆ ಅವನ ಕಾಗದವು ಒರಟಾದರೂ ಸವಿ ಕಮ್ಮಿ ಯಾಗುವುದೇ ?

ಅವನು ವಾರಕ್ಕೊಮ್ಮೆ ನನಗೆ ಬರೆಯುವನು. ಪ್ರತಿದಿನ, ಪ್ರತಿ ನಿಮಿಷ ಅವನ ಕಾಗದ ಬಂದರೂ ನನಗೆ ತೃಪ್ತಿಯಿಲ್ಲ. ಇನ್ನು ವಾರಕ್ಕೊಂದು ಬಾರಿ ಬರೆಯುವ ನಾಲ್ಕು ಗೆರೆಗಳಿಂದ ನನ್ನ ಹೃದಯದ ತಾಪವು ಶಾಂತವಾಗುವುದೇ ? ಏನನ್ನು ಯೋಚಿಸುತ್ತಿರುವೆ ಎಂದು ಅಕ್ಕ ಕೇಳುತ್ತಾಳೆ. ನಾನೇನೆಂದು ಪ್ರತ್ಯುತ್ತರ ಕೊಡಲಿ? ಸುಳ್ಳು ಹೇಳಲೇ? ಸ್ವಾಭಾವಿಕವಾಗಿ ನಾನು ಸುಳ್ಳು ಹೇಳುವುದು ಅಪರೂಪ. ಆದರೀಗ ಹೇಳದಿದ್ದರಾಗುವದೇ? ಅಕ್ಕನಿಗೆ ನಾನೆಂದರೆ ಬಲು ಪ್ರೀತಿ. ನಾನು ಸ್ವಲ್ಪ ಬೇಸರಪಟ್ಟುಕೊಂಡರೆ ಅವಳಿಗೆ ಬಲು ಬೇಸರವಾಗುವುದು. ಅಂತಹ ಪ್ರೀತಿಪಾತ್ರಳಾದ ಅಕ್ಕನನ್ನು ವಂಚಿಸುವುದು ನನಗೇ ನಾಚಿಕೆಯಾಗುವುದು… ಏನು ಮಾಡಲಿ ?……

ಕೃಪಾ ನಾಲ್ಕು ಗಂಟೆಗೆ ಬರುವಳಂತೆ. ಬಂದರೆ ಅವನ ಸುದ್ದಿ ಅವಳಿಂದ ತಿಳಿದುಕೊಳ್ಳಬಹುದು. ಆದರೆ ಅವಳೊಡನೆ ಹೇಗೆ ಕೇಳಲಿ? ಕೇಳಿದರೆ ನನ್ನ ಮಾತುಗಳಿಂದ ನನ್ನ ಮನಸ್ಸನ್ನವಳು ಊಹಿಸಿದರೆ! ಇಲ್ಲ-ಕೃಪಾ ಆ ತರದ ಆಲೋಚನೆಗಳಿಗೆ ಎಡೆಕೊಡತಕ್ಕವಳಲ್ಲ-ಅವಳೊಡನೆ ಹೇಗಾದರೂ ಕೇಳಿಯೇ ಬಿಡುವೆನು-ಕೇಳದೆ ಹೇಗೆ ತಾನೆ ಇರಲಿ..ಅಯ್ಯೋ! ನಾಲ್ಕು ಗಂಟೆ ಬೇಗ ಬರಬಾರದೇ? ಪ್ರತಿಯೊಂದು ನಿಮಿಷವೂ ಒಂದೊಂದು ಯುಗವಾಗಿ ಏಕೆ ಬೆಳೆಯುತ್ತಿದೆ……

೦೪-೦೬-೧೯೨೮
ಕೃಪಾ ಬಂದೂ ಆಯಿತು. ಅವಳೊಡನೆ ಕೇಳಿಯೂ ಆಯಿತು. ನಿನ್ನೆ ರಾತ್ರಿಯೆಲ್ಲ ಅದೇ ಸುದ್ದಿ… ಕೃಪೆಗೆ ಹೇಳಿ ಹೇಳಿ ಬೇಸರಬಂದು ಹೋಗಿದೆ. ನನಗೆ… ಆದರೆ ನನಗೆ .. ಕೇಳಿದಷ್ಟೂ ತೃಪ್ತಿಯಿಲ್ಲ. ಇನ್ನೊಮ್ಮೆ ಕೇಳಿ-ಕೇಳಿದರೆ ಅವಳೇನೆಂದು ತಿಳಿದುಕೊಳ್ಳುವಳು! ಏನಾದರೂ ತಿಳಿದುಕೊಳ್ಳಲಿ-ಕೇಳಿಯೇ ಬಿಡುವೆನು.. ಬೇಡ.. ಕೇಳಲಾರೆ… ಉರಿಯುವ ಹೃದಯವೇ ಸ್ವಲ್ಪ ಸಹಿಸು… ಕೃಪಾ ಕೂಗುತ್ತಿರುವಳು… ಏಕಿರಬಹುದು… ನನಗೊಂದು ಕಾಗದವಿದೆಯಂತೆ. ಯಾರದಾಗಿರಬಹುದು! ಅವನದೇ? ಅಲ್ಲದೆ ಹೋದರೆ… ನನ್ನ ಆಸೆಗೆ ಎಂತಹ ಆಘಾತ! ಹೌದು-ಅವನದೇ… ಏನೆಂದು ಬರೆದಿರುವನು? ಬರುವನಂತೆ… ನಾಳೆ ಬರುವನಂತೆ… ಹೃದಯವೇ ಸಂತೋಷದಿಂದ ಬಿರಿಯದಿರು… ನಾಳೆ! ಎಂದಿಗೆ ನಾಳೆಯಾಗುವುದು! ಈ ದಿನ ಬೇಗನೆ ಏಕೆ ಮುಗಿಯುವದಿಲ್ಲ. ನಿದ್ರೆಗೂ ನನ್ನ ಮೇಲೆ ದಯವಿಲ್ಲವೇಕೆ?……

೦೬-೦೬-೧೯೨೮
ಎರಡು ದಿನಗಳೆಷ್ಟು ಬೇಗ ಕಳೆದು ಹೋದುವು? ಭಾರವಾದ ಸಮಯವು, ಹೊರಲಾರದ ಸಮಯವು ಅವನಿದ್ದ ಎರಡು ದಿನ ಎಷ್ಟು ಬೇಗ ಹಾರಿಹೋಯಿತು? ಆ ಎರಡು ದಿನಗಳು ಮುಗಿಯದೆ ಇರಬಾರದಿತ್ತೇ… ಕಳೆದ ಆ ಸುಖಮಯವಾದ ದಿನಗಳು ಇನ್ನು ಮುಂದೆ ಬರುವವೇ?… ಬರದಿದ್ದರೇನು!… ಆ ನೆನಪು, ಆ ಸಂಸ್ಮೃತಿಯು ಸದಾ ನನ್ನ ಹೃದಯರಲ್ಲಿ ಜಾಗೃತವಾಗಿಯೇ ಇರುವುದು….

ನಿನ್ನೆ ದಿನವನ್ನು ನೆನಸಿಕೊಂಡರೆ ನನ್ನ ಮನಸ್ಸಿನಲ್ಲಾಗುವ ಭಾವನೆಗಳನ್ನು ಬರೆಯಲಾರೆ… ಹೇಗೆ ತಾನೆ ಬರೆಯಲಿ? ಬರೆದು ಪೂರೈಸುವುದಾದರೂ ಹೇಗೆ? ಬರೆದಂತೆ ಹೆಚ್ಚುವುದು-ದೇವಾ! ಅಂತಹ ದಿನಗಳು ಇನ್ನೂ ಬರುವವೇ?

ನಾನು ಆ ದಿನ ಐದು ಗಂಟೆ ಹೊಡೆಯುವ ಮೊದಲೇ ಹಾಸಿಗೆಯನ್ನು ಬಿಟ್ಟು ಎದ್ದಿದ್ದೆ; ಬೆಳಕು ಇನ್ನೂ ಸರಿಯಾಗಿ ಹರಿದಿರಲಿಲ್ಲ. ಎದ್ದು ಮುಖತೊಳೆದುಕೊಂಡು ಬರುವಾಗ ನಾನು ನೆಟ್ಟು ಪ್ರೀತಿಯಿಂದ ಬೆಳೆಸಿದ ಮಲ್ಲಿಗೆಯ ಗಿಡದಿಂದ ಹೂ ಕೊಯಿದು ಬೊಗಸೆಯಲ್ಲಿ ತರುತ್ತಿದ್ದೆ. ಬರುವಾಗ ಇದಿರಾತ. ಅವನೂ ಎದ್ದು ಮುಖ ತೊಳೆಯುವುದಕ್ಕೆ ಬರುತ್ತಿದ್ದ. ನೋಡಿದೊಡನೆ ನನ್ನ ಮನಸ್ಸಿನಲ್ಲೇನಾಯಿತೋ ಹೇಳಲಾರೆ…. ಹೇಳಲು ಪ್ರಯತ್ನಿಸಿದಷ್ಟೂ ಹೇಳುವುದು ಅತಿಕಷ್ಟವಾಗಿ ತೋರುತ್ತದೆ…. ನನ್ನ ಆಗಿನ ಮನಸ್ಸಿನ ಭಾವವು ಬರೆವಣಿಗೆಗೆ ನಿಲುಕುವಂತಹುದಲ್ಲ. ಯಾವಾಗಲೂ ನನಗೆ ಅವನನ್ನು ನೋಡಿದಾಗ ಹಾಗಾಗುವುದು. ಎಷ್ಟೆಷ್ಟು ಮುಚ್ಚಿಡಲು ಪ್ರಯತ್ನಿಸಿದರೂ ನನ್ನ ಕಣ್ಣುಗಳು ಹೃದಯಾಂತರಾಳದಿಂದ ಆ ಭಾವನೆಗಳನ್ನು ಹೊರಗೆಡವಿಬಿಡುವವು. ನನ್ನನ್ನು ನೋಡಿ – ಬೆಳಗಾಗುವ ಮೊದಲೇ ಏಕೆ ಎದ್ದೆ!’ ಎಂದು ಕೇಳಿದ-ನನ್ನ ಬಾಯಿಂದ ಮಾತುಗಳು ಹೊರಡಲಿಲ್ಲ. ಕೈಯಲ್ಲಿದ್ದ ಆಗ ತಾನೆ ಕುಯಿದ ಮಲ್ಲಿಗೆಯ ಮೊಗ್ಗೆಗಳನ್ನು ಅವನ ಮುಖಕ್ಕೆರಚಿ ಅಲ್ಲಿಂದ ಓಡಿ ಹೋಗಿಬಿಟ್ಟೆ. ನನ್ನ ವಿಚಿತ್ರ ವ್ಯವಹಾರವನ್ನು ನೋಡಿ ಅವನೇನು ಗ್ರಹಿಸಿದನೋ ತಿಳಿಯದು… ಸಾಯಂಕಾಲ ನಾವೆಲ್ಲರೂ ತಿರುಗಾಡುವುದಕ್ಕೆ ಹೊರಟೆವು. ಅಂದಿನ ಸಾಯಂಕಾಲ ಸೃಷ್ಟಿಯ ಸೌಂದರ್ಯದಿಂದ ಮೆರೆದಂತೆ ಇನ್ನಾವಾಗಲೂ ಮೆರೆದಿದ್ದುದನ್ನು ನಾನು ನೋಡಲಿಲ್ಲ. ಬಹುಶಃ ನನ್ನೊಡನೆ ಅವನಿದ್ದುದರಿಂದ ಪ್ರಕೃತಿಯು ಅಂದು ನನ್ನ ಕಣ್ಣುಗಳಿಗೆ ಅಷ್ಟು ಮನೋಹರವಾಗಿ ತೋರಿರಬಹುದು. ಹೀಗೆಂದಿಗೂ ಹೇಳಲಾರೆ… ಆದರೆ ಆ ಸಾಯಂಕಾಲವು ಎಂದೆಂದಿಗೂ ನನ್ನ ಮನಸ್ಸಿನಿಂದ ಮಾಯವಾಗಲಾರದು… ಕೃಪಾ ಮತ್ತು ಅಕ್ಕ ಸ್ವಲ್ಪ ಮುಂದೆ ಹೋಗುತ್ತಿದ್ದರು. ನಾವಿಬ್ಬರೂ ಜೊತೆಯಲ್ಲಿ ಸ್ವಲ್ಪ ಹಿಂದಿನಿಂದ ಹೋಗುತ್ತಿದ್ದೆವು. ಕೃಪೆಯ ಅಕ್ಕನೂ ಏನೇನು ಮಾತುಗಳಾಡುತ್ತಿದ್ದರೋ ತಿಳಿಯದು-ಅವರ ಮಾತುಗಳೆಲ್ಲ ಕೇಳುತ್ತಲಿದ್ದರೂ ಮನಸ್ಸೆಲ್ಲವೂ ಬೇರೆ ಕಡೆ ಇದ್ದುದರಿಂದ ಮಾತುಗಳ ಅರ್ಥವಾಗುವ ಸಂಭವವಿರಲಿಲ್ಲ. ಹೋಗುತ್ತಿದ್ದಂತೆಯೇ ಅವನು ನಿಂತ. ನಾನೂ ಅವನೊಡನೆಯೇ ನಿಂತೆ. ಅಕ್ಕನೂ ಕೃಪೆಯ ಮುಂದೆ ಹೋಗುತ್ತಿದ್ದವರು ನಾವು ನಿಂತುದನ್ನು ನೋಡಲಿಲ್ಲ. ಮಾತನಾಡುತ್ತ ಇನ್ನೂ ಮುಂದೆ ಹೋದರು. ಎಷ್ಟು ಹೊತ್ತು ನಾವಿಬ್ಬರು ಹಾಗೆ ನಿಂತಿದ್ದೆವೋ ತಿಳಿಯದು. ಕೊನೆಗೆ ಅವನೇ ಮೌನ ಭಂಗಮಾಡಿ ಕೇಳಿದ. ‘ಸರಸ, ಬೆಳಗ್ಗೆ ಹಾಗೇಕೆ ಮಾಡಿದೆ?’ ನಾನು ಮಾತನಾಡಲಿಲ್ಲ. ‘ಸರಸಿ, ಮಾತೇಕೆ ಆಡುವುದಿಲ್ಲ-ನೀನೇಕೆ ಹಾಗೆ ಮಾಡಿದೆಯೋ ನನಗೆ ಅದು ತಿಳಿಯದು. ಆದರೆ ಅದರಿಂದ ನನ್ನ ಮೇಲಾದ ಪರಿಣಾಮ… ಸರಸ… ನನ್ನ ಸರಸ’ ಮುಂದವನ ಬಾಯಿಂದ ಮಾತುಗಳು ಹೊರಡಲಿಲ್ಲ. ನನ್ನನ್ನು ತನ್ನೆಡೆಗೆ ಎಳೆದುಕೊಂಡು ಮುತ್ತಿನ ಮಳೆಯನ್ನು ಸುರಿಸಿಬಿಟ್ಟ. ಎಷ್ಟು ಹೊತ್ತು ಹಾಗೆಯೇ ಕಳೆಯಿತೋ ಹೇಳಲಾರೆ… ದೂರದಿಂದ ಅಕ್ಕನು ಕೂಗುವದು ಕೇಳಿದೊಡನೆ ಅವನು ನನ್ನ ಕೈಬಿಟ್ಟ ನಾನು ನಿಲ್ಲಲಾರದೆ ಕುಳಿತುಬಿಟ್ಟೆ. ಆಗವನು ಪ್ರೇಮ ಪೂರ್ಣವಾದ ಸ್ವರದಿಂದ ಹೇಳಿದ – ‘ನನ್ನ ಸರಸಾ, ಕ್ಷಮಿಸು; ಇನ್ನು ಮುಂದೆಂದಿಗೂ ಹೀಗೆ ಮಾಡುವುದಿಲ್ಲ-ಇದೊಂದು ಬಾರಿ ಕ್ಷಮಿಸು.’ ಇದಕ್ಕೆ ನಾನು ಉತ್ತರ ಕೊಡುವ ಮೊದಲೇ ಅಕ್ಕ ಬಂದಳು. ಹೆಚ್ಚೇನೂ ಮಾತನಾಡದೆ ನಾವು ಮನೆಗೆ ಬಂದೆವು. ರಾತ್ರಿ ಊಟವಾಯಿತು. ಕೃಪಾ ಅಡಿಕೆಯನ್ನು ತಂದಿಟ್ಟು ಕೊಂಡು ತಿನ್ನುತ್ತಾ ‘ನೀನೇಕೆ ತೆಗೆದುಕೊಳ್ಳುವುದಿಲ್ಲ ಸರಸೀ,’ ಎಂದಳು. ನಾನೆರಡು ಎಲೆಗಳಿಗೆ ಸುಣ್ಣ ಹಾಕಿ ಒಂದನ್ನು ಬಾಯಲ್ಲಿಟ್ಟುಕೊಂಡೆ. ಅಷ್ಟರಲ್ಲಿ ಅವನೂ ಅಲ್ಲಿಗೆ ಬಂದ, ಕೃಪೆಯು ಅಡಕೆಲೆಯ ತಟ್ಟೆಯನ್ನು ಒಳಗಿಡಲು ಹೋದಾಗ ನನ್ನ ಕೈಲಿದ್ದ ಎಲೆಯನ್ನು ನಾನವನ ಕೈಗಿತ್ತೆ. ಆಗವನು ನನ್ನ ಕೈಗಳೆರಡನ್ನೂ ಹಿಡಿದುಕೊಂಡು ‘ಕ್ಷಮೆಯ ಗುರುತೇ ಇದು?’ ಎಂದು ಕೇಳಿದ. ‘ಅಪರಾಧ ಮಾಡಿದರಲ್ಲವೇ ಕ್ಷಮೆ?’ ಎಂದು ನಾನಂದೆ. ಅವನು ನನ್ನ ಮಾತು ಕೇಳಿ ‘ಸರಸ, ದೇವರು ನಿನ್ನನ್ನು ಕಾಪಾಡಲಿ-ಇದೇ ನನ್ನ ಪ್ರಾರ್ಥನೆ’ ಎಂದು ಹೇಳಿ ನನ್ನೆರಡು ಕೈಗಳನ್ನೂ ತನ್ನ ಕಣ್ಣುಗಳಿಗೆತ್ತಿಕೊಂಡು ಹೊರಗೆ ಹೊರಟು ಹೋದ.

ಮರುದಿನ ಬೆಳಗ್ಗೆ ನಾನು ಮುಖ ತೊಳೆಯುವುದಕ್ಕೆ ಹೋದಾಗ ಅವನು ಮಲ್ಲಿಗೆಯ ಮಂಟಪದ ಹತ್ತಿರ ನಿಂತಿದ್ದ. ನನ್ನನ್ನು ನೋಡಿ ‘ಹೂ ಕುಯಿದು ಕೊಡಲೇ ಸರಸ’ ಎಂದು ಕೇಳಿದ. ನಾನು ಮುಖ ತೊಳೆದುಕೊಳ್ಳುವಾಗ ಅವನು ಹೂವೆಲ್ಲಾ ಕುಯಿದು ಒಂದು ಎಲೆಯ ದೊನ್ನೆಯಲ್ಲಿಟ್ಟು ಮುಖ ತೊಳೆದೊಡನೆ ನನ್ನ ಕೈಗೆ ಕೊಟ್ಟ. ನಾನೇನು ಹೇಳಬೇಕೆಂದು ತೋರಲಿಲ್ಲ… ಅವನ ಮುಖವನ್ನು ನೋಡಿದೆ. ನೆಟ್ಟ ದೃಷ್ಟಿಯಿಂದ ನನ್ನನ್ನು ನೋಡುತ್ತಾ ‘ಸರಸಿ, ಹತ್ತು ಗಂಟೆಗೆ ನಾನು ಹೊರಡುವೆನು, ನಿನ್ನನ್ನು ಬಿಟ್ಟು ಹೇಗಿರಲಿ ಹೇಳು? ಕಾಗದ ಬರೆಯುವಿಯಾ?’ ಎಂದು ಕೇಳಿದ. ನನಗೆ ಮಾತನಾಡಲಾಗಲಿಲ್ಲ. ಕಣ್ಣೀರು ತುಂಬಿ ಕಣ್ಣೆ ಕಾಣಿಸಲಿಲ್ಲ. ಆಗವನು ತನ್ನ ಕೈಚೌಕದಿಂದ ನನ್ನ ಕಣ್ಣುಗಳನ್ನೊರಸಿ ‘ಅಳಬೇಡ ಸರಸಾ, ನೀನತ್ತರೆ ನನಗೆ ಬಹಳ ದುಃಖವಾಗುವದು. ನಿನ್ನ ಪ್ರತಿಯೊಂದು ತೊಟ್ಟು-ಕಣ್ಣೀರೂ ನನ್ನ ಹೃದಯವನ್ನು ಚುಚ್ಚುವುದು ಕಾಗದವನ್ನು ಬರೆಯುತ್ತೇನೆಂದು ನಗುತ್ತಾ ಹೇಳು’ ಎಂದ. ಅದಕ್ಕೆ ನಾನೇನು ಹೇಳಿದೆನೋ ಅದೀಗ ನನಗೆ ಜ್ಞಾಪಕವಿಲ್ಲ. ಏನಾದರೇನು, ನಾನು ಏನೆಂದರೇನು? ಅವನು ನನ್ನನ್ನು ಪ್ರೀತಿಸುತ್ತಾನೆ. ಅದಕ್ಕಿಂತಲೂ ಹೆಚ್ಚು ನನಗೆ ಇನ್ನೇನು ಬೇಕು?

೦೮-೧೦-೧೯೩೦
ಮದುವೆ! ಮದುವೆಯೆಂದರೆ ಎಷ್ಟು ಮಂದಿ ಸಂತೋಷದಿಂದ ಹಿಗ್ಗುವರು; ಸುಖದ ಹೆದ್ದಾರಿ ಮದುವೆಯಂತೆ! ನಿಜವೇ?

ತಾವು ಪ್ರೀತಿಸುವವರನ್ನು ಪಡೆದ ವಧುಗಳಿಗೆ ನಿಜವಿರಬಹುದು. ನನಗೆ?… ಆದರೆ ನನಗೆ? ಮದುವೆಯೆಂದರೆ ಸಾಯುವದಕ್ಕಿಂತಲೂ ಕಷ್ಟವಾಗಿ ತೋರುವುದೇಕೆ? ಯಾರೊಡನೆ ಕೇಳಲಿ? ಕೇಳಿದರೂ ಹೇಳುವರಾರು? ದೇವರನ್ನು ಬೇಡಲೇ? ದೇವರಿದ್ದರಲ್ಲವೆ ಬೇಡುವುದು? ಇದ್ದುದಾಗಿದ್ದರೆ… ಅಯ್ಯೋ ದೇವರನ್ನೇಕೆ ದೂಷಿಸಲಿ? ಅಣ್ಣನಿಗೆ ದಯವೇ ಇಲ್ಲವೇಕೆ? ಯಾರನ್ನು ಮೊರೆಹೋಗಲಿ? ಅಮ್ಮನಂತೂ ಈ ಲೋಕದಲ್ಲೀಗ ಇಲ್ಲ.-ಅಕ್ಕ? ಅಕ್ಕನ ಮಾತು ಕೇಳುವವರಾರು? ಅವನು ವರನಾಗದ ಮದುವೆಯಲ್ಲಿ ನಾನು ವಧುವಾಗುವದು ಹೇಗೆ? ಅವನೇನು ತಿಳಿದುಕೊಳ್ಳುವನು? ನಿನ್ನೆ ದಿನ ಬಂದಿರುವ ಅವನ ಕಾಗದವನ್ನು ಒಡೆಯಲೇ? ಧೈರ್‍ಯಬರುವುದಿಲ್ಲವೇಕೆ? ಏನಾದರೂ ಇರಲಿ, ಓದಿಬಿಡುವೆನು. ಅಯ್ಯೋ… ಅವನು ಬರೆದಿರುವುದೇನು? ನನ್ನ ಮುಂದಿನ ಜೀವನವು ಸುಖ ಸಂತೋಷಪೂರ್‍ಣವಾಗಿರಲೆಂದು ದೇವರಲ್ಲಿ ಅವನ ಬೇಡಿಕೆಯಂತೆ! ಸುಖ! ಸಂತೋಷ! ಎಂತಹ ಹಾಸ್ಯಾಸ್ಪದ. ಅವನಿಲ್ಲದ ಮೇಲೆ ಸುಖವೇ? ಅವನೂ ನನ್ನನ್ನು ತಿಳಿಯಲಾರನೇನು? ಹೇಗವನನ್ನು ಮರೆಯಲಿ! ಅಂದಿನ ಸಾಯಂಕಾಲ…. ನಾವು ತಿರುಗಾಡಲು ಹೋದ ಸಾಯಂಕಾಲ…. ಅದನ್ನು ಮರೆಯುವುದು ನನ್ನಿಂದ ಸಾಧ್ಯವೇ? ಮಲ್ಲಿಗೆಯ ಹೂವನ್ನು ಕೊಯಿದು ನನ್ನ ಕೈಲಿಟ್ಟು, ‘ಕಾಗದ ಬರೆಯುತ್ತಿರು’ ಎಂದು ಹೇಳುವಾಗ ಚಿತ್ರಿತವಾದ ಅವನ ಸ್ನೇಹಪೂರ್ಣವಾದ ಮುಖ, ಪ್ರೇಮವನ್ನು ಹೊರಚೆಲ್ಲುತ್ತಿದ್ದ ಕಣ್ಣುಗಳು… ಅದೆಲ್ಲವನ್ನೂ ಹೇಗೆ ತಾನೆ ನನ್ನ ಹೃದಯದಿಂದ ಹೊರದೂಡಲಿ?… ಅಯ್ಯೋ… ಅವನ ಕಾಗದಗಳು… ಪ್ರತಿ ಶಬ್ದದಿಂದ ಉಕ್ಕುತ್ತಿರುವ ಪ್ರೇಮ… ಹೀಗಾಗುವುದೆಂದು ಯಾರಿಗೆ ತಿಳಿದಿತ್ತು? ನನಗೇಕೆ ಹುಚ್ಚು ಹಿಡಿಯುವುದಿಲ್ಲ!

೦೬-೦೪-೧೯೩೧
ಲತ್ತೆಯ ಪೆಟ್ಟುಗಳನ್ನು ಸಹಿಸಬಹುದು; ಲೇಖನಿಯ ಒದೆಗಳನ್ನು ಸಹಿಸುವುದು ಕಷ್ಟ. ಅದರಲ್ಲಿಯೂ ಅವನ ಲೇಖನಿಯಿಂದ ಬರೆಯಲ್ಪಟ್ಟ ಮಾತುಗಳನ್ನು ಓದುವಾಗ ನನ್ನ ಕಲ್ಲಿನಂಥ ಹೃದಯವೂ ಕರಗಿಹೋಗುತ್ತಿದೆ. ಮದುವೆಯ ದಿನ ನಾನು ಮನಸ್ಸಿನಲ್ಲಿ ಮಾಡಿಕೊಂಡ ದೃಢ ಪ್ರತಿಜ್ಞೆಯೂ ಅವನ ಕಾಗದವನ್ನು ಓದಿದೊಡನೆ ಓಡಲು ಯತ್ನಿಸುತ್ತಿದೆಯೇಕೆ? ‘ನೀನೆಂಥ ಕ್ರೂರಿ ಸರಸಿ, ನನ್ನ ಕಾಗದಗಳೊಂದಕ್ಕೂ ಪ್ರತ್ಯುತ್ತರವನ್ನೇ ಬರೆಯುತ್ತಿಲ್ಲವೇಕೆ?’ ಎಂದು ಬರೆದಿರುವನು. ಹೌದು, ನಾನು ಕ್ರೂರಿ… ಅಣ್ಣನು ನನ್ನ ಮೇಲೆ ನಡೆಸಿದ ಕ್ರೂರತನದ ಪ್ರತಿಫಲವಾಗಿ ನಾನವನಿಗೆ ಕ್ರೂರಿ… ಇದೀಗ ಇಂದಿನ ನ್ಯಾಯ. ಏನು ಮಾಡಲಿ? ಏನೆಂದು ಬರೆಯಲಿ? ಬರೆಯದೆ ಇರಲೆ? ಅವನೇನೆಂದು ತಿಳಿದುಕೊಳ್ಳುವನು? ಈ ತರದ ಸಂಕಟವನ್ನು ಅನುಭವಿಸುವುದಕ್ಕೇ ನನ್ನ ಜನ್ಮವಾಯಿತೇನು? ನಾನೇಕೆ ಸಾಯುವುದಿಲ್ಲ? ಬಾವಿಗೆ ಹಾರಲೇ? ಹಾರಲಾರೆ… ನನ್ನನ್ನು ತನ್ನ ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವ ಅಕ್ಕನಿರುವಳು- ತಮ್ಮ ಪ್ರಾಣಕ್ಕಿಂತಲೂ ಹೆಚ್ಚಾಗಿ ನೋಡುವ ಪತಿ ಇರುವರು. ಅವರ ಅಷ್ಟೊಂದು ಪ್ರೀತಿಯ ಪ್ರತಿಫಲವಾಗಿ ಕೊಡಲು ನನ್ನಲ್ಲೇನಿದೆ?…. ಇದ್ದುದನ್ನೆಲ್ಲಾ ಅವನಿಗೆ ಬಲು ದಿನಗಳ ಹಿಂದೆಯೇ ಅರ್‍ಪಿಸಿಬಿಟ್ಟಿರುವೆನು… ಇನ್ನಿರುವುದೇನು? ಅವರಿಗಾಗಿ ಭಕ್ತಿಯಿಂದ ಚಿಕ್ಕ ದೊಡ್ಡ ಕೆಲಸಗಳನ್ನು ಜಾಗರೂಕತೆಯಿಂದ ಮಾಡುವೆನು, ಆದರೆ ಯಾವುದು ಮುಖ್ಯವೋ ಅದು ಮಾತ್ರ ನನ್ನೆಡೆಯಲ್ಲಿಲ್ಲ-ಏನು ಮಾಡಲಿ?… ಸಾಯಲಾರೆ… ಬದುಕಲಾರೆ…. ಏನು ಮಾಡಲಿ?…. ಏನು ಮಾಡಲಿ…. ಕೇಳುವುದು ಯಾರೊಡನೆ…

೧೮-೧೧-೧೯೩೧
ನಾಳೆ ಅವನಿಗೆ ಮದವೆಯಂತೆ! ಆಗಲಿ… ನನಗೇನು? ನಾನೇಕೆ ‘ಅಯ್ಯೋ’ ಅನ್ನಬೇಕು? ಮೂರು ವರುಷಗಳಿಂದಲೂ ಅವನಿಗೆ ಬೇಗ ಮದುವೆಯಾಗಲಿ ನನ್ನನ್ನವನು ಮರೆಯಲಿ’ ಎಂದು ಪ್ರಾರ್ಥಿಸುತ್ತಿದ್ದ ನಾನು ಇಂದೇಕೆ ಅವನ ಮದುವೆಯ ವರ್ತಮಾನ ಕೇಳಿ ದುಃಖಿತಳಾಗ ಬೇಕು? ನನಗಾಗಿ ಅವನೇಕೆ ಮದುವೆಯಾಗದಿರಬೇಕು? ನಾನು ಮನಸ್ಸನ್ನು ಎಷ್ಟೆಷ್ಟು ಕಾರಣಗಳನ್ನು ಕೇಳಿಕೊಂಡರೂ ಹೃದಯಾಂತರಾಳದಿಂದ ಸಣ್ಣದನಿಯೊಂದು ‘ಅಯ್ಯೋ’ ಎನ್ನುವುದೇಕೆ? ಆಗಲಿ… ಅವನು ಮದುವೆಯಾಗಲಿ… ಪರಮಾತ್ಮನು ಅವರಿಬ್ಬರನ್ನೂ ಕಾಪಾಡಲಿ… ಅವರ ಸಂಸಾರವು ಸುಖಮಯವಾಗಲಿ…..

೨೧-೦೩-೧೯೩೪
ನಾಳೆ ಅವನ ಹೆಂಡತಿಯನ್ನೂ ಮಗುವನ್ನೂ ಕರೆದುಕೊಂಡು ಬರುವನಂತೆ. ದೇವಾ, ಅವನು ಬಂದಾಗ ಅವನ ಹೆಂಡತಿಯ ಇದಿರಿನಲ್ಲಿ ನನ್ನ ಅಧೈರ್‍ಯ ಪ್ರಕಟವಾಗದಂತೆ ಅನುಗ್ರಹಿಸು, ಹೃದಯವೇ-ಸ್ವಲ್ಪ ಶಾಂತವಾಗು… ಮನಸ್ಸೇ ಉದ್ವೇಗವನ್ನು ಸಹಿಸಿಕೋ. ಅವನೊಡನೆ ಏನೆಂದು ಮಾತಾಡಲಿ… ಈ ಮುಖವನ್ನು ಅವನಿಗೆ ಹೇಗೆ ತೋರಿಸಲಿ? ಪರಮಾತ್ಮಾ-ನನ್ನ ಕಣ್ಣುಗಳು ನಾಳೆ ಅವನಿದಿರಿನಲ್ಲಿ ನನ್ನ ಹೃದಯದ ಗುಟ್ಟನ್ನು ಹೊರಗೆಡವದಂತೆ ಕಾಪಾಡು……

೨೬-೦೩-೧೯೩೪
ಅವನು ಹೆಂಡತಿ ಮಗುವಿನೊಡನೆ ಬಂದು ಕುಳಿತಿರುವನು. ಹೇಗೆ ಹೋಗಿ ಅವನಿಗೆ ಮುಖ ತೋರಿಸಲಿ! ಏನೆಂದು ಮಾತಾಡಲಿ! ಹೇಗೆ ಹೊರಗೆ ಹೋಗಲಿ? ಹೋಗದೆ ಇರಲಾಗುವುದೇ?… ಅವನು ಹೇಳುತ್ತಿರುವದೇನು? ‘ಚೆನ್ನಾಗಿರುವೆಯಾ ಸರಸಿ?’… ಹೌದಪ್ಪ ಚೆನ್ನಾಗಿರುವೆನು. ನೀನು ಹೆಂಡತಿಯನೂ ಮಗುವನೂ ಕರೆತಂದುದು ಬಲು ಸಂತೋಷವಾಯಿತು… ಮಗುವಿನ ಹೆಸರೇನು? ಪ್ರಭೆ ಎಂತಲೇ ಚೆನ್ನಾಗಿದೆ… ನನ್ನ ಪ್ರೀತಿಯ ಹೆಸರದು… ಬಾಮ್ಮಾ ಪ್ರಭಾ… ಮಗು ಎಷ್ಟು ಮುದ್ದಾಗಿದೆ? ನಾನು ಕರೆದೊಡನೆಯೇ ನಗುತ್ತ ನನ್ನೆಡೆಗೆ ಬರುತ್ತಿರುವಳಲ್ಲ. ಅವನ ಕಣ್ಣುಗಳಂತೆಯೇ ಇರುವ ತನ್ನ ಕಣ್ಣುಗಳಿಂದ ನನ್ನನ್ನು
ನೋಡುತ್ತಿರುವಳಲ್ಲ. ಅವನ ಅದೇ ಆ ವಿಶಾಲವಾದ ಕಣ್ಣುಗಳು-ಅದೇ ಮೂಗು-ಅದೇ ಕೆಂಪು ತುಟಿಗಳು-ಅವನೇ ಮಗುವಿನ ನಿರ್ಮಲ ಕಣ್ಣುಗಳಿಂದ ನೋಡುತ್ತಿರುವನೇನು? ಅವನ ಹೆಂಡತಿ ಅವಳು ಅವನಿಗೆ ಅನುರೂಪಳಾದ ಪತ್ನಿ. ಅವಳ ನಗುಮುಖ… ಹೌದು, ಅವಳವನಿಗೆ ಅನುರೂಪಳಾದ ಪತ್ನಿ. ಅವನ ಮುಖದಲ್ಲಿ ಸುಖ ಸಂತೋಷನಲಿದಾಡುತ್ತಿದೆ. ಅವನು ಈಗ ಸುಖಿ. ದೇವರವನನ್ನು ಸದಾ ಹಾಗಿಟ್ಟಿರಲಿ.. ಅವನ ಹೆಂಡತಿಯನ್ನೂ ಮಗುವನ್ನೂ ಪರಮಾತ್ಮನು ಕಾಪಾಡಲಿ… ಇದೇ ನನ್ನ ಪ್ರಾರ್ಥನೆ.

ನಾನು! ದುಃಖಮಯವಾದ ಪ್ರಪಂಚದಲ್ಲಿ ನಾನೇಕೆ ಸುಖವನ್ನು ಬಯಸಬೇಕು? ಸುಖ ಪಡೆಯಲು ನನಗಾವ ಅಧಿಕಾರವೂ ಇಲ್ಲ… ಆದರೆ ದೇವಾ! ನನಗೆ ಜ್ಞಾಪಕವನ್ನು ಮಾತ್ರ ಕೊಡಬೇಡ. ನೆನಪು ಬೀಸಿರುವ ಬಲೆಯಿಂದ ನನ್ನನ್ನು ಬಿಡಿಸು. ಮರೆಯಲು ಪ್ರಯತ್ನಿಸಿದಷ್ಟೂ ಚಿಗುರುವ ಜ್ಞಾಪಕದ ಹಿಡಿತದಿಂದ ನನ್ನನ್ನು ಪಾರುಮಾಡು.. ನನಗೇಕೆ ಹುಚ್ಚು ಹಿಡಿಯುವದಿಲ್ಲ……
*****
ಮೇ ೧೯೩೪

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮತ್ಸರ
Next post ಕೆಳಗೆ ಬಿದ್ದೆಯಾ ಮಗನೆ

ಸಣ್ಣ ಕತೆ

 • ಕತೆಗಾಗಿ ಜತೆ

  ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

 • ಬಾಳ ಚಕ್ರ ನಿಲ್ಲಲಿಲ್ಲ

  ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

 • ವ್ಯವಸ್ಥೆ

  ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

 • ಟೋಪಿ ಮಾರುತಿ

  "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

 • ನಂಟಿನ ಕೊನೆಯ ಬಲ್ಲವರಾರು?

  ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

cheap jordans|wholesale air max|wholesale jordans|wholesale jewelry|wholesale jerseys