ಗಂಡಿನ ಪರಧಿಯೊಳು ಹೆಣ್ಣು – ಬಿಡುಗಡೆಯ ಹಂಬಲ

ಗಂಡಿನ ಪರಧಿಯೊಳು ಹೆಣ್ಣು – ಬಿಡುಗಡೆಯ ಹಂಬಲ

ಆಕಾಶದ ನೀಲಿಯಲ್ಲಿ
ಚಂದ್ರತಾರೆ ತೊಟ್ಟಿಲಲ್ಲಿ
ಬೆಳಕನ್ನಿಟ್ಟು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರಷ್ಟೇ ಸಾಕೆ?’
ರಾಷ್ಟಕವಿ ಡಾ. ಜಿ. ಎಸ್ ಶಿವರುದ್ರಪ್ಪನವರ ಕವನವೊಂದರ ಸಾಲುಗಳಿವು. ಸ್ತ್ರೀಯ ಅಗಾಧ ವ್ಯಕ್ತಿತ್ವ, ಆಳ ಅಗಲಗಳ ಕಲಾತ್ಮಕವಾಗಿ ಬಿಂಬಿಸಿದ ಅಪೂರ್ವ ಸಾಲುಗಳು. ಕೇಳಿದೊಡನೆ ತಾಯಿಯ ರೂಪವೇ ಎದುರು ನಿಂತಂತೆ ಕವಿ ಸ್ತ್ರೀಯನ್ನು ಗೌರವಿಸಿದ ಅನುಪಮ ಭಾವಲಹರಿ ಹಾಗೂ ಸಹೃದಯನ ಸಂವೇದನೆ ಏಕಕಾಲಕ್ಕೆ ತಾದ್ಯಾತ್ಮತೆಯಲ್ಲಿ ಮುಳುಗಿ ಹೋಗುವುದು.

ಆದರೆ ನಿಜಕ್ಕೂ ಭಾರತೀಯ ಸಮಾಜದಲ್ಲಿ ಈ ಗೌರವ ಸ್ಥಾನಮಾನ ಆಕೆ ಅನುಭವಿಸುತ್ತಿದ್ದಾಳೆಯೇ ಎಂಬ ಪ್ರಶ್ನೆ ಬಂದಾಗ ಭಾರತದ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳಾ ಜನಸ್ತೋಮ ಇಂದಿಗೂ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ತುಳಿತಕ್ಕೊಳಗಾಗುತ್ತಲೇ ಇರುವುದು ದಿನನಿತ್ಯದ ಸರ್ವವೇದ ಸಾಮಾನ್ಯ ಸಂಗತಿ. ಆಕೆ ಇನ್ನು ಆತನಿಗೆ ಹೆಗಲೆಣೆಯಾಗಿ ಬೆಳೆದಿಲ್ಲ. ಸಾಮಾಜಿಕ ಆರ್ಥಿಕ ದಾಸ್ಯದಿಂದ ಬಿಡುಗಡೆಗೊಂಡಿಲ್ಲ.

ಹತ್ತಾರು ವರ್ಷಗಳ ಹಿಂದೆ ನಾಗರಿಕತೆಗಳಿನ್ನು ಕಾಲಿಡದ ಕಾಲದಲ್ಲಿ ಮುಂಜಾನೆಗೂ ಮುನ್ನ ಕಟ್ಟಿರುಳ ನೀರವತೆಯಲ್ಲಿ ಮೌನವಾಗಿ ಎದ್ದು ಒರಳಲ್ಲಿ ಅಕ್ಕಿಯ ಮಿರಿದು ಬೀಸುವ ಕಲ್ಲಿಗೆ ಹಾಕಿ ಬೀಸಿ ದೋಸೆಗೆ ಸಿದ್ದಪಡಿಸಿ, ಹಾಲುಕರೆದು ,ಮನೆಯ ಕೆಲಸಗಳನ್ನೆಲ್ಲಾ ಅಚ್ಚುಕಟ್ಟಾಗಿ ನಿರ್ವಹಿಸಿ ಮನೆಮಂದಿಗೆಲ್ಲಾ ಆರೋಗ್ಯ ಕರುಣಿಸುವ ಗರತಿ ಸೌಭಾಗ್ಯವತಿ ಎಂಬ ಬಿರುದಿಗಾಗಿ ಹೆಣಗುತ್ತಿದ್ದ ಹೆಣ್ಣಿನ ಪರಿಕಲ್ಪನೆ ನಾಗರಿಕತೆಯ ಈ ಕಾಲದಲ್ಲಿ ಸ್ವಲ್ಪ ಮಟ್ಟಿಗೆ ಬದಲಾಗಿದೆ. ಅಂದ ಮಾತ್ರಕ್ಕೆ ಆಕೆಯ ಬದುಕು ಸುರಳಿತವಾಗಿದೆ. ಸರ್ವಸಮಾನವಾಗಿದೆ ಎಂದರ್ಥವಲ್ಲ. ಆಧುನಿಕ ಕಾಲದಲ್ಲಿ ಸಂವಿಧಾನದ ಹಲವಾರು ವಿಧಿವಿಧಾನಗಳು ಆಕೆಯ ಪರವಾಗಿ ಅನುಮೋದಿಸಲಾಗಿದ್ದರೂ ಅವುಗಳಿನ್ನೂ ಪೂರ್ಣಪ್ರಮಾಣದಲ್ಲಿ ಸಫಲಗೊಂಡಿಲ್ಲ. ಈ ಎಲ್ಲ ಏರಿಳಿತಗಳ ನಡುವೆಯೂ ಆಕೆ ನಿಧಾನವಾಗಿ ದಿಟ್ಟ ನಡೆಯ ಹೆಜ್ಜೆಗಳ ಮೂಡಿಸುತ್ತಿದ್ಧಾಳೆ. ಹೆಣ್ಣು ಬರಿ ಕೋಮಲೆ, ಮಂಗಲೆ,ದುರ್ಬಲೆ ಅಬಲೆ ಮಾತ್ರವಲ್ಲ ಸ್ವಯಂಸಬಲೆ, ರಕ್ಷಕಿ, ಮಾರ್ಗದರ್ಶಕಿ ಕೂಡ.

ಆದಾಗ್ಯೂ ಸ್ತ್ರೀ ಸಾಧನೆಯನ್ನು ನಿರ್ಲಕ್ಷಿಸುವ, ಆಕೆ ದ್ವಿತೀಯ ದರ್ಜೆ ಎಂದೇ ಭಾವಿಸುವ ಮನೋಭಾವ ಇಂದಿನ ದಿನಗಳಲ್ಲೂ ಅಪರೂಪವೇನಲ್ಲ. ಆಕೆಯ ಸ್ಥಾನಮಾನವನ್ನು ಗಂಡಿನ ಪರಧಿಯೊಳಗೆ ನಿರ್ಧರಿಸಲ್ಪಡುವ ಜಾಯಮಾನ ಬದಲಾಗಿಲ್ಲ. ಅದನ್ನು ಮೀರಿ ನಡೆಯುವ ಹೆಣ್ಣು ಸಮಾಜದಲ್ಲಿ ಕೆಂಗಣ್ಣಿಗೆ ಗುರಿಯಾಗಿ ಅಪಪ್ರಚಾರದ ಕೇಂದ್ರಬಿಂದುವಾಗುವ ಪರಿಸ್ಥಿತಿ ಸುಧಾರಿಸಿಲ್ಲ.

ಲಿಂಗ ತಾರತಮ್ಯ ಮತ್ತು ಸಮಾನತೆಯ ಹೋರಾಟಗಳು ನಿನ್ನೆ ಮೊನ್ನೆಯದಲ್ಲ. ಜಗತ್ತಿನಾದ್ಯಂತದ ದೀರ್ಘಕಾಲದ ಹೋರಾಟಗಳು. ಇದು ನಮ್ಮ ದೇಶದ ಸಮಸ್ಯೆ ಮಾತ್ರವಲ್ಲ. ಆಧುನಿಕ ಜಗತ್ತಿಗೆ ಆಗಷ್ಟೇ ತೆರೆದುಕೊಳ್ಳುತ್ತಿದ್ದ ಪ್ರಾನ್ಸನಲ್ಲಿ ತನ್ನ ಬಂಡಾಯದ ಬರಹಗಳು, ಅಮೋಘವಾದ ಭಾಷಣಕಲೆಯ ಮೂಲಕ ಹೊಸ ಮಹಿಳಾಪರ ಹೋರಾಟಕ್ಕೆ ಮುನ್ನುಡಿ ಬರೆದ ಓಲಿಂಪೆ ಗೌಜ್ ಎಂಬ ಮಹಿಳೆಯ ಬಗ್ಗೆ ಹೇಳಲೇ ಬೇಕು. ೧೮ನೇ ಶತಮಾನದಲ್ಲಿ ಪ್ರಾನ್ಸ ದೇಶದ ರಾಜಕೀಯ ಸಮಸ್ಯೆಗಳು, ನಿಗ್ರೋ ಗುಲಾಮಗಿರಿ ವಿರುದ್ಧ ಹೋರಾಟ, ಸ್ತ್ರೀ ಲೈಂಗಿಕ ಸ್ವಾತಂತ್ರ್ಯ, ಮಹಿಳಾ ಸಾಮಾಜಿಕ ರಾಜಕೀಯ ಸ್ವಾತಂತ್ರ್ಯ ಹೀಗೆ ಹತ್ತು ಹಲವು ವಿಚಾರಗಳನ್ನು ಪ್ರತಿಪಾದಿಸಿದ ಒಲಿಂಪೆ ತನ್ನ ೪೫ ನೇ ವಯಸ್ಸಿಗೆ ಗಿಲೋಟಿನ್ ಯಂತ್ರಕ್ಕೆ ತನ್ನ ಕತ್ತನ್ನು ಒಪ್ಪಿಸಬೇಕಾಯ್ತು. ಕಾರಣವಿಷ್ಟೇ ಆಕೆಯ ಸಾಮರ್ಥ್ಯಕ್ಕೆ ಸಮಾನವಾದ ಜಕೋಬಿಯನ್ನ ಪುರುಷರೊಬ್ಬರು ಆ ಕಾಲಕ್ಕೆ ಇರಲೇ ಇರಲಿಲ್ಲ. ಅಷ್ಟೇ ಅಲ್ಲ ಸಂಪ್ರದಾಯಸ್ಥ, ಪಟ್ಟಭದ್ರ ಹಿತಾಸಕ್ತಿಗಳಿಗೆ ಹೊಸತನ್ನು ಒಪ್ಪಿಕೊಳ್ಳುವ ಮನಸ್ಸಿರಲಿಲ್ಲ.

ಐತಿಹಾಸಿಕ ಸ್ತ್ರೀ ಪಾತ್ರಗಳಲ್ಲಿ ಅಪೂರ್ವವಾದ ಶಿಲ್ಪವಾಗಿ ಉಳಿಯುವ ಜೋನ ಆಪ್ ಆರ್ಕ ಅದ್ಭುತವಾದ ಶೌರ್‍ಯ,ಅಗಾಧವಾದ ಆತ್ಮವಿಶ್ವಾಸದ ವರದೇವತೆ. ಪ್ರಾನ್ಸಿನ ಸ್ವಾತಂತ್ರ್ಯವನ್ನು ಗಳಿಸಿಕೊಟ್ಟ ಜೋನಳ ಪಾತ್ರ ಆಕೆಯ ಸಾಧನೆಗಳ ಭವ್ಯತೆ ದಿವ್ಯತೆಗಳು ಅಸೀಮ ಮಟ್ಟದ್ದು. ಇಂಗ್ಲೀಷ ಧಾಳಿಕೋರರಿಂದ ಪ್ರಾನ್ಸನ್ನು ಕಾಪಾಡಲು ಅವರ ಸಾಮ್ರಾಜ್ಯದ ಕನಸನ್ನು ನನಸು ಮಾಡಲು ಶ್ರಮಿಸಿದ ಆಕೆ ತನ್ನನ್ನು ದೇವ ಪ್ರತಿನಿಧಿಯೆಂದು ಕರೆಸಿಕೊಳ್ಳುವುದು ಕೆಲವರ ಮನಸ್ತಾಪಕ್ಕೆ ಕಾರಣವಾಗುತ್ತದೆ.

ಸೈನ್ಯದ ಮುಂಚೂಣಿಯಲ್ಲಿ ಸಾಗುವ ಆಕೆಯ ಧೈರ್‍ಯ,ಸ್ಥೈರ್ಯ ಮಂತ್ರಮುಗ್ಧಗೊಳಿಸುವಂತಹುದು. ದೈವದ ಪ್ರಭಾವವೆಂಬಂತೆ ನುಡಿದದ್ದೆಲ್ಲಾ ಸತ್ಯವಾಗುತ್ತಲೂ ತಾನು ದೇವ ವಾಣಿಯಿಂದ ಪ್ರಭಾವಿತಳಾಗಿದ್ದೇನೆ ಎಂಬ ಆಕೆಯ ಮಾತನ್ನು ಒಪ್ಪಿಕೊಂಡ ಕೆಲವರು ಆಕೆಯನ್ನು ಸಂತಳೆಂದು ಭಾವಿಸಿದರೆ ಇನ್ನು ಕೆಲವು ಆಷಾಢಭೂತಿ, ಸಂಪ್ರದಾಯಸ್ಥ, ಪಟ್ಟಭದ್ರ ಹಿತಾಶಕ್ತಿಗಳು ಆಕೆಯನ್ನು ಮಾಟಗಾತಿಯೆಂದು ಬಿಂಬಿಸಲಾರಂಭಿಸುತ್ತವೆ. ಅವರಿಗಾಕೆ ಸಂತಳಂತೆ ಕಾಣುವುದಿಲ್ಲ. ಆಕೆಯ ಚಾತುರ್‍ಯವನ್ನು ಶಂಕಿಸುತ್ತಾರೆ. ಮತ್ಸರದಿ ಬೇಯುತ್ತಾರೆ.ಇದು ಸ್ತ್ರೀ ಸಮೂಹದ ಸಾಮರ್ಥ್ಯವನ್ನು ಒಪ್ಪಿಕೊಳ್ಳದ ಜಗತ್ತಿನ ನೀತಿ. ಇದಕ್ಕೆ ಕಾಲ ಸ್ಥಳ ಬೇಧವಿಲ್ಲ. ೧೫ನೇ ಶತಮಾನದ ಐರೋಪ್ಯದ ಅಂದಿನ ಸಮಾಜ ಭಾರತದ ಇಂದಿನ ಸಮಾಜಕ್ಕೆ ಸಂವಾದಿಯಾಗಿ ಕಂಡುಬರುತ್ತದೆ. ಇಂಗ್ಲೀಷ ಸೈನ್ಯ ಆಕೆಯ ಶೌರ್‍ಯ ಕಪ್ಪು ವಿದ್ಯೆಯ ಬಲವೆಂದು ತಿಳಿದು ಆಕೆಗೆ ಜೀವಾವಧಿ ಶಿಕ್ಷೆಗೆ ಗುರಿಪಡಿಸಲು ನಿರ್ಧರಿಸುತ್ತದೆ. ಅದನ್ನು ವಿರೋಧಿಸಿದ ಆಕೆ ತಾನಾಗಿಯೇ ಉರಿಯುವ ಬೆಂಕಿಗೆ ಹಾರಿ ಆತ್ಮಾಹುತಿ ಮಾಡಿಕೊಳ್ಳುತ್ತಾಳೆ. ಮಧ್ಯಯುಗೀನ ಕಾಲದಲ್ಲಿ ಚರ್ಚಿನ ಗರಿಷ್ಟ ಅಧಿಕಾರದ ಮಿತಿಯಿಂದಾಗಿ ಅವುಗಳೇ ಜನರ ಆಧ್ಯಾತ್ಮಿಕ, ಬೌಧ್ಧಿಕ ಸಾಮರ್ಥ್ಯವನ್ನು ನಿಯಂತ್ರಿಸುತ್ತಿದ್ದವು. ಜನರೂ ಆ ವಿಚಾರದಲ್ಲಿ ಸ್ವಾಯತ್ತವಾಗಿ ವ್ಯವಹರಿಸುವಂತಿರಲಿಲ್ಲ. ಆದರೆ ಜೋನ್ ತನ್ನನ್ನು ದೇವರಿಂದ ಅನುಗ್ರಹಿಸಪಟ್ಟವಳೆಂದು ಕರೆದುಕೊಂಡಿದ್ದು ಚರ್ಚಿನ ಹಿತಾಸಕ್ತಿಗೆ ಸಹ್ಯವಾಗುವುದಿಲ್ಲ. ದೇವರ ನುಡಿಗಳು ಬರಿಯ ಚರ್ಚಿನ ಮೂಲಕವೇ ಬರಬೇಕೆಂಬುದು, ಚರ್ಚಮಾತ್ರವೇ ಆಧ್ಯಾತ್ಮಿಕ ಶಕ್ತಿಯ ಕೇಂದ್ರವೆಂದು-ಪರಿಗಣಿಸಲ್ಪಟ್ಟಿತ್ತು. ಹಾಗಾಗಿ ಜೋನ್‌ಳ ಪವಿತ್ರತೆಯನ್ನು ಒಪ್ಪಿಕೊಳ್ಳದ ಈ ಗುಂಪಿಗೆ ಜೋನ್‌ಳನ್ನು ಜನರ ದೃಷ್ಟಿಯಲ್ಲಿ ಮಾಟಗಾತಿಯೆಂದು ಬಿಂಬಿಸಬೇಕಾಗಿತ್ತು. ಆಕೆಯ ಸುಮಾರ್ಗದ ಹಾದಿಯಲ್ಲಿ ಇದ್ದ ಮತ್ತೊಂದು ಮುಳ್ಳೆಂದರೆ ಅದು ರಾಜಕೀಯ ವ್ಯವಸ್ಥೆಯ ಕರಾಳ ಹಸ್ತಗಳು. ಹೊಸತನ್ನು ಒಪ್ಪಿಕೊಳ್ಳುವುದು, ಹಳೆಯ ಸಿದ್ಧಾಂತಗಳ ವಿರುದ್ಧ ಮಾತನಾಡುವುದು ತಪ್ಪೆಂದು ವಾದಿಸುವ ಜಗತ್ತು. ಇದನ್ನು ಪ್ರಚೋದಿಸಿದ್ದು ಅದೇ ಪುರುಷಪ್ರಧಾನ ವ್ಯವಸ್ಥೆ.

ಸಾಮರ್ಥ್ಯದ ಪ್ರಶ್ನೆ ಬಿಟ್ಟು ಭಾವನಾತ್ಮಕ ನೆಲೆಯಲ್ಲಿ ಯೋಚಿಸಿದಾಗಲೂ ಅಲ್ಲಿಯೂ ಸರಳೀಕೃತ ಸಂಯೋಗಗಳಿಲ್ಲ. ಗಂಡು ಹೆಣ್ಣು ಬಂಧ ಅನುಬಂಧ ಸಂಬಂಧಗಳೆಲ್ಲ ನೈಸರ್ಗಿಕ ವಾಂಛೆ. ಪ್ರಕೃತಿ ಪುರುಷ ಸಮ್ಮೋಹನ ಸಹಜ ಬಯಕೆ. ಸೃಷ್ಟಿಯ ಸೊಬಗು. ಈ ಭಾವನಾತ್ಮಕ ನೆಲೆಯಲ್ಲಿಯೂ ಹೆಣ್ಣು ಗಂಡಿನಡಿಯಾಳಾಗಿಯೇ ತನ್ನ ಆಕಾಂಕ್ಷೆಗಳ ನಿರಂತರ ತ್ಯಾಗ ಮಾಡುತ್ತಲೇ ಹೋಗಬೆಕೆನ್ನುವುದು. ಇನ್ನು ಗಂಡ ಮನೆಗೆ ಬರುವವರೆಗೂ ಉಣ್ಣದೇ ಕಾದು ಬಸವಳಿಯುವ ಸ್ತ್ರೀರತ್ನಗಳಿದ್ದಾರೆ. ಅವರನ್ನು ಕಾಯುವಂತೆ ಮಾಡಿ ಅದರಲ್ಲಿಯೇ ಖುಷಿಪಡುವ ವಿಕೃತ ಪುರುಷರತ್ನಗಳು ನಮ್ಮ ನಿಮ್ಮ ನಡುವೆ ಸಾಹಿತ್ಯ ಸಮಾನತೆ ಎಂದೆಲ್ಲ ಭಾಷಣ ಕೊರೆಯುವ ವೀರರೂ ಇದ್ದಾರೆ.

ಹೆಣ್ಣು ಕೇವಲ ಭೋಗವಸ್ತು ಎಂಬ ಧೋರಣೆ ಎಲ್ಲಿಯವರೆಗೆ ಸಾಯುವುದಿಲ್ಲವೋ ಅಲ್ಲಿಯವರೆಗೆ ಗಂಡು ಹೆಣ್ಣಿನ ಸ್ನೇಹವೂ ಶುದ್ಧ ರೂಪ ಪಡೆದುಕೊಳ್ಳಲಾರದು. ಶುದ್ಧ ಪ್ರೇಮವೂ ಹುಟ್ಟಲಾರದು.ಕೃಷ್ಣ-ರಾಧೆಯರ ಪ್ರೇಮ ನಿಷ್ಕಾಮ ಮೂಲದಿಂದ ಹುಟ್ಟಿಬೆಳೆದಿದ್ದು. ದೈಹಿಕ ವಾಸನೆಯ ಹಂಗಿಲ್ಲದ ಆತ್ಮಮಿಲನದ ಅಸೀಮ ಅನ್ವಯತೆ ಇರುವುದರಿಂದಲೇ ಅಲ್ಲಿ ವಯಸ್ಸಿನ ಮಿತಿಯಾಗಲಿ, ಗಂಡುಹೆಣ್ಣಿನ ತರತಮಭಾವವಾಗಲಿ ಇಲ್ಲದೇ ಅದ್ವಿತೀಯ ದೈವಿಪ್ರೇಮದ ಸಾಕಾರ ಸಾಧ್ಯವಾಯಿತು.

ಸ್ತ್ರೀವಾದದ ಬಗ್ಗೆ ಪುಟಗಟ್ಟಲೆ ಬರೆಯುವ ನಾವು ಕೂಡ ಪುರುಷನೊಂದಿಗೆ ವ್ಯವಹರಿಸುವಾಗ ಪ್ರಾಮಾಣಿಕವಾಗಿ ವ್ಯವಹರಿಸದೆ ಅವರೇನೆಂದಾರೋ? ಇವರೇನೆಂದಾರೋ? ಎಲ್ಲಿ ಕೆಟ್ಟ ಅಪವಾದಕ್ಕೆ ಗುರಿಯಾಗುವೇನೋ ಎಂಬ ಹಿಂಸೆಯಲ್ಲಿಯೇ ಮುಕ್ತವಾಗಿ ಬೆರೆಯಲಾರೆವು. ಇದು ನಮ್ಮ ಸಮಾಜಕ್ಕೆ ಅದರ ರೂಪುರೇಷೆಗಳಿಗೆ ಅಗತ್ಯವೆಂದಾದರೂ ಅದು ಸಮಾನತೆಯ ಹಾದಿಯಲ್ಲಿ ಮುಳ್ಳೇ.

ಸತ್ಯ ಸಂಗತಿ ಎಂದರೆ ವೈಜ್ಞಾನಿಕವಾಗಿ ವಿರುದ್ಧ ಲಿಂಗಗಳಲ್ಲಿ ಪರಸ್ಪರ ಆಕರ್ಷಣೆ ಹೆಚ್ಚು. ಹಾಗಾಗೇ ಮನೆಯಲ್ಲಿ ತಂದೆಗೆ ಮಗಳೆಂದರೆ ತಾಯಿಗೆ ಮಗನೆಂದರೆ ಪ್ರೀತಿ, ಅತ್ತೆಗೆ ಅಳಿಯನೆಂದರೆ, ಮಾವನಿಗೆ ಸೊಸೆಯೆಂದರೆ ಅಕ್ಕರೆ, ಇನ್ನು ಶಾಲೆಗಳಲ್ಲಿ ಶಿಕ್ಷಕರಿಗೆ ವಿದ್ಯಾರ್ಥಿನಿಯರೆಂದರೆ ಶಿಕ್ಷಕಿಯರಿಗೆ ವಿದ್ಯಾರ್ಥಿಗಳೆಂದರೆ ಹೆಚ್ಚು ಮುತುವರ್ಜಿ. ಆದರೆ ಗಂಡಿಗಿಂತ ಹೆಣ್ಣು ಕರುಣಾಮಯಿ, ವಾತ್ಸ್ಯಲ್ಯಮಯಿ.ಯಾರಿಗೆ ನೋವಾದರೂ ಬಹುಬೇಗ ಕರಗುವ ಮರಗುವ ಕರಳು ಹೆಣ್ಣಿನದು.ಮತ್ಸರ ಬರೀಯ ಹೆಣ್ಣುಗಳಿಗೆ ಮಾತ್ರವಿರುವುದಿಲ್ಲ. ಮತ್ಸರವಿದ್ದ ಮಾತ್ರಕ್ಕೇ ಆಕೆ ಕ್ರೂರಿ ಎಂಬರ್ಥವಲ್ಲ. ಮತ್ಸರ ಗಂಡಿನ ಗುಣವೂ ಹೌದು. ಅರಿಷಡ್ವರ್ಗಗಳಲ್ಲಿ ಅದೊಂದು. ಆದರೆ ವಿಪರ್ಯಾಸವೆಂದರೆ ಮತ್ಸರಕ್ಕೆ ಹೆಣ್ಣನ್ನೆ ಉದಾಹರಣೆಯಾಗಿ ಕೊಡುವ ಪರಂಪರೆ ಎಂದಿನಿಂದ ಹುಟ್ಟಿತೋ ಗೊತ್ತಿಲ್ಲ.ಪುರುಷ ಪ್ರಧಾನ ಸಮಾಜ ಹೆಣ್ಣಿನ ಸೌಂದರ್ಯವೊಂದನ್ನು ಬಿಟ್ಟು ಆಕೆಗೆ ಕೊಟ್ಟ ಬಿರುದುಗಳೆಲ್ಲ ಕ್ಷುಲ್ಲಕವಾದವುಗಳೆ ಎನ್ನಬೇಕು.ಉದಾಹರಣೆಗೆ ಮಾವ ಅಳಿಯ ಎಲ್ಲಾದರೂ ಹೊಡೆದಾಡಿಕೊಂಡರೆ, ಅದು ಕೊಲೆಯಲ್ಲಿ ಪರ್ಯಾವಸಾನಗೊಂಡರೂ ಅದಕ್ಕೆ ವಿಪರೀತ ಅರ್ಥ ಹಚ್ಚಲಾಗುವುದಿಲ್ಲ. ಅದೇ ಅತ್ತೆ ಸೊಸೆಯರು ಹೊಡೆದಾಟ ಬೇಡ, ಬರಿಯ ಬಾಯಲ್ಲಿ ಕಚ್ಚಾಡಿಕೊಂಡರೂ ಸಾಕು, ಗಲ್ಲಿ ಗಲ್ಲಿಯಲ್ಲೂ ಅದೇ ಸುದ್ದಿಯಾಗುವುದು, ಕಾರಣವಿಷ್ಟೇ ಹೆಣ್ಣು ಹಾಗೂ ಆಕೆಯ ಪ್ರತಿಯೊಂದು ವಿಚಾರಗಳನ್ನು, ಸಂಗತಿಗಳನ್ನು ವೈಭವಿಕರಿಸುವುದು, ಆಕೆ ಗಂಡಿನಷ್ಟು ಸಮರ್ಥಳಲ್ಲ ಎಂದು ಜಗತ್ತಿಗೆ ಸಾರುವುದು, ವ್ಯವಸ್ಥೆಯ ತಂತ್ರಗಾರಿಕೆ ಇರಬಹುದೇನೋ?ಎಂದೆನ್ನಿಸದಿರದು.

ಒಟ್ಟಾರೆ ಇವೆಲ್ಲದರ ನಡುವೆಯೂ ಆಧುನಿಕ ಸ್ತ್ರೀ – ಸ್ತ್ರೀ ಪರಿಕಲ್ಪನೆ ಅದರ ಅಗತ್ಯ, ಪ್ರಸ್ತುತತೆಗಳ ಅಡಿಯಲ್ಲಿ ನಿರಂತರ ಪಳಗುತ್ತ ತನ್ನನ್ನು ಆ ವ್ಯವಸ್ಥೆಯ ಹಂದರದೊಳಗೆ ಅಚ್ಚುಕಟ್ಟಾದ ಶಿಲ್ಪವನ್ನಾಗಿಸಿಕೊಳ್ಳಬೇಕಾದ ಅನಿವಾರ್ಯತೆಯೂ ಇದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಡ್ಡಗೊಂಡ ಪದ
Next post ಶ್ರೀ ಸಾಮಾನ್ಯ

ಸಣ್ಣ ಕತೆ

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…