ಪ್ರಾಚೀನ ಸಾಹಿತ್ಯದ ಪ್ರಸ್ತುತತೆಯ ಪ್ರಶ್ನೆ

ಪ್ರಾಚೀನ ಸಾಹಿತ್ಯದ ಪ್ರಸ್ತುತತೆಯ ಪ್ರಶ್ನೆ

ಸಾಹಿತ್ಯ ಮನುಷ್ಯನ ಚರಿತ್ರೆಯೇ ಆಗಿದೆ. ಮನುಷ್ಯನ ಚರಿತ್ರೆಯನ್ನು ಯಾವ ಕಾಲದಲ್ಲಿಯೂ ಅರಿತುಕೊಳ್ಳುವುದು ಇನ್ನೊಬ್ಬ ಮನುಷ್ಯನ ಅಗತ್ಯವಾಗುತ್ತದೆ. ಇದು ಮನುಷ್ಯನ ಸಂಸ್ಕೃತಿಯೂ ಆಗಿದೆ. ಒಂದು ರಾಷ್ಟ್ರದ ಸಂಸ್ಕೃತಿಯನ್ನು ಇತಿಹಾಸ ತೆರೆದಿಡುವಂತೆ ಮನುಷ್ಯನ ಸಾಂಸ್ಕೃತಿಕ ಇತಿಹಾಸವನ್ನು ಸಾಹಿತ್ಯದರ್ಶಿಸುತ್ತದೆ. ರಾಮಾಯಣ, ಮಹಾಭಾರತಗಳನ್ನು ಪ್ರಾಚೀನ ಇತಿಹಾಸವೆಂದು ಪರಿಗಣಿಸಲು ನಡೆದಿರುವ ಸಂಶೋಧನೆಯ ಮೂಲವನ್ನು ನಾವು ಈ ಹಿನ್ನೆಲೆಯಲ್ಲಿ ಕಾಣಬಹುದು. ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂದು ಪಂಪ ಹೇಳಿದ್ದೂ ಈ ಅರ್ಥದಲ್ಲೆ. ಆದ್ದರಿಂದ ಪ್ರಾಚೀನ ಸಾಹಿತ್ಯ ನಮಗೆ ಇಂದಿಗೂ ಪ್ರಸ್ತುತವಾಗುತ್ತದೆ. ಸಾಹಿತ್ಯವನ್ನು ನಾವು ಎಷ್ಟು ಕಾಲ ಹಿಂದಿನಿಂದ ಹುಡುಕಿ ತೆಗೆದು ತಿಳಿದುಕೊಳ್ಳಲು ಪ್ರಯತ್ನಿಸುತ್ತೇವೆಯೋ ಆ ಕಾಲದಿಂದ ಮನುಷ್ಯನ ಪ್ರಾಚೀನ ಸಂಸ್ಕೃತಿಯ ನೆಲೆ ಬೆಲೆಗಳನ್ನು ತಿಳಿಯಲು ಸಾಧ್ಯವಾಗುವುದು. ಮನುಷ್ಯ ಬದುಕಿದ ರೀತಿ. ಅವನ ನಾಡಿನ ಸಂಸ್ಕೃತಿಯ ಸ್ವರೂಪ. ರಾಜಕೀಯ, ಶಾಸನ, ಸಾಮಾಜಿಕ ಪರಿಸ್ಥಿತಿ. ಅವನ ಅವ್ಯಕ್ತ ಅನುಭವಗಳು ಪ್ರಾಚೀನ ಕೃತಿಗಳ ಪುಟಗಳಲ್ಲಿ ತುಂಬಿಕೊಂಡಿರುತ್ತವೆ. ಉದಾ : ‘ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡಡೊಳ್ ಭಾವಿಸಿದ ಜನಪದಂ ವಸುಧಾವಲಯ ವಿಲೀನ ವಿಶದ ವಿಷಯ ವಿಶೇಷಂ’ ಕವಿಯ ಈ ಸಾಲು ಪ್ರಾಚೀನ ಕರ್ನಾಟಕದ ಭೂಗೋಲ (ಕ್ಷೇತ್ರ ವಿಸ್ತೀರ್ಣ) ಜ್ಞಾನವನ್ನು, ಜನಪದ ವಿಶೇಷತೆಯನ್ನೂ ತಿಳಿಸುತ್ತದೆ. ಅದರಲ್ಲಿಯೂ ‘ಪುಲಿಗೆರೆಯ ಒಕ್ಕುಂದದ ನಡುವಣ ನಾಡೆ ಕನ್ನಡದ ತಿರುಳ್‌’ ಪದನರಿದು ನುಡಿಯಲುಂ ನುಡಿದುದನರಿದಾರಯಲುಮಾರ್ಪರಾ ನಾಡವರ್‍ಗಳ್. ಚದುರರ್ ನಿಜದಿಂದ ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತ ಮತಿಗಳ್’ ಅಲ್ಲದೆ ‘ಸುಭಟರ್ಕಳ್‌ ಕವಿಗಳ್ ಸುಪ್ರಭುಗಳ್‌ ಚೆಲ್ವರ್ಕಳಭಿಜನರ್ಕಳ್ ಗುಣಿಗಳ್ ಅಭಿಮಾನಿಗಳತ್ಯುಗ್ರರ್ ಗಂಭೀರಚಿತ್ತರ್ ವಿವೇಕಿಗಳ್ ನಾಡವರ್ಗಳ್‌’ ತಿರುಳ್ಗನ್ನಡದ ಸಾಂಸ್ಕೃತಿಕ ಸ್ವರೂಪವನ್ನು ಇಷ್ಟೊಂದು ಸ್ಫುಟವಾಗಿ ಚಿತ್ರಿಸಿದ ಕವಿ ಧನ್ಯನಲ್ಲವೆ.

ಹಾಗೆಯೇ ರಾಮಾಯಣದ ಅಗಸ ಅವನ ಹೆಂಡತಿ. ರಾಮ ಸೀತೆಯರ ದಾಂಪತ್ಯದ ವಿಷಮತೆಗಳು. ಲಕ್ಷ್ಮಣ ಊರ್ಮಿಳೆಯರ ನಡುವಿನ ಕಂದರ. ಮಹಾಭಾರತದ ಕಾಲೀನ ವರ್ಗ ವರ್ಣಬೇಧಗಳು. ಕರ್ಣ ಸುಯೋಧನರ ಸ್ನೇಹ-ಸ್ವಾರ್ಥ, ಕೌರವ ಪಕ್ಷದ ಯೋಧರ ರಾಜಕಾರಣ. ಕರ್ಣ ಪಾತ್ರದ ಸಾರ್ವಕಾಲಿಕ ಮೌಲ್ಯ. ದ್ರೌಪದಿಯ ಸ್ತ್ರೀಪರವಾದ ವಿವಶತೆಯಲ್ಲಿ ಹೊಳಹು ಹಾಕುವ ಪ್ರತಿಶೋಧ ಮುಂತಾದ ಮಾನವವಾದೀ ಚಿತ್ರಣ ಚಿಂತನಗಳು ಪ್ರಾಚೀನ ಸಾಹಿತ್ಯದ ಘನತೆಯನ್ನು ಹೆಚ್ಚಿಸುತ್ತದೆ. ಪ್ರಪಂಚದ ಯಾವುದೇ ಪ್ರಾಚೀನ ಸಾಹಿತ್ಯದಲ್ಲಿ ಆ ಮೌಲ್ಯಗಳು ಬೆರೆತುಕೊಂಡಿರುವ ತನಕ ಅದು ಜೀವಂತ ಸಾಹಿತ್ಯವಾಗಿ ಉಳಿಯುತ್ತದೆ. `war is ugly but ILIAD is beautiful’ ಎಂದು ವಿಲ್‌ ದುರಾಂಟ್ ‘ಇಲಿಯಡ್’ ಕುರಿತು ಹೇಳಿದ ಮಾತನ್ನು ಮಹಾಭಾರತಕ್ಕೂ ಅನ್ವಯಿಸಬಹುದು. “ಸಾಮಾಜಿಕ ಮನಸ್ಥಿತಿ. ಪರಿಸ್ಥಿತಿಗಳಲ್ಲಿ ಜೀವಂತ ಬದಲಾವಣೆ ನಡೆಯುವಾಗಲೆ ಸಾಹಿತ್ಯವು ಜೀವಂತವಾಗುವುದು. ಸಾಹಿತ್ಯಕ್ಕೆ ಜೀವವವು ಬಿಂಬ. ಜೀವನವು ಸಾಹಿತ್ಯ ಬಿಂಬ” (ಬೇಂದ್ರೆ). ಗ್ರೀಕಿನ ಮಾನವ್ಯ ಸಂಸ್ಕೃತಿಯ ವಿವಿಧ ಸ್ವರೂಪಗಳನ್ನು ಚಿತ್ರಿಸುವ ನಾಟಕಗಳು; ಈಡಿಪಸ್. ಅಂತಿಗೊನ. ಹೆಲನ್‌. ಹರ್ಕ್ಯುಲಸ್ ಈಜಿಪ್ಟಿನ ಚಿರಸುಂದರಿ ಕ್ಲಿಯೋಪಾತ್ರಾ ಮೊದಲಾದ ವ್ಯಕ್ತಿಗಳ ಕಲ್ಪನೆ: ಶೇಕ್ಸ್ಪಿಯರ್‌ನ ನಾಟಕಗಳ ರಚನೆಯಲ್ಲಿ ಅವನು ತೋರಿಸಿದ ಮಾನವ್ಯ ಗುಣ. ದೌರ್ಬಲ್ಯಗಳ ಚಿತ್ರಣಾ ಕೌಶಲ್ಯ. ಒಥೆಲೊ, ಹೆಮಲೆಟ್, ಮೆಕ್‌ಬೆತ್, ಈಯಾಗೊ, ಶೈಲೋಕ್, ಡೆಸ್ಪಿಮೋನಾ ಮುಂತಾದವರು ಈ ಸಮಕಾಲೀನ ಸಂದರ್ಭದಲ್ಲಿಯೂ ಇರುವ ವ್ಯಕ್ತಿಗಳು. ಮನುಷ್ಯನ ಸ್ವಭಾವದ ನಿಷ್ಕ್ರಿಯತೆ ಗೊಂದಲ. ಕ್ರೌರ್ಯ, ಪುಕ್ಕಲುತನ, ದುರ್ಬುದ್ಧಿ, ಸಾಹಸ-ಶೌರ್ಯ, ಸಂಶಯ-ಸಂದಿಗ್ಧತೆಗಳನ್ನು ಸದಾಕಾಲ ಓದುಗನ ಗಮನಕ್ಕೆ ತರುವ ಕೃತಿಗಳು ನಮಗೆ ಯಾವ ಕಾಲಕ್ಕೂ ಬೇಕು. ಆದರೂ ಪ್ರಾಚೀನ ಸಮಗ್ರ ಸಾಹಿತ್ಯವನ್ನು ಸೂಕ್ತವಾಗಿ ವರ್ಗೀಕರಿಸಿಯೇ ಕೆಲವು ಖಚಿತ ಅಭಿಪ್ರಾಯಗಳನ್ನು ಕೊಡುವುದು ಉಚಿತವಾಗಬಹುದು.

ಕನ್ನಡದ ಪ್ರಾಚೀನ ಸಾಹಿತ್ಯವನ್ನು ಅದರ ಸಾರ್ವಕಾಲಿಕ ಮೌಲ್ಯದ ನಿರ್ಧಾರ ಮಾಡುವ ಸಲುವಾಗಿ ಈ ಕೆಳಗಿನಂತೆ ವಿಂಗಡಿಸಿಕೊಳ್ಳುವುದು ಅಗತ್ಯವಾಗುತ್ತದೆ.

ಜೀವಂತ ಸಾಹಿತ್ಯ: ಸಾಹಿತ್ಯವು ಸಂಜೀವನ ವಿದ್ಯೆ. ಅದರ ಪ್ರಯೋಜನ ಜೀವದಾನ ಮಾಡುವುದು. ಮಮ್ಮಟ ಪಂಪ ಮೊದಲಾದವರು ಸಾಹಿತ್ಯದ ಪ್ರಯೋಜನದ ಕುರಿತು ಹೇಳಿದ್ದಾರೆ.

‘ಕಾವ್ಯಂ ಯಶಸೇ. ಅರ್ಥಕೃತೇ, ವ್ಯವಹಾರವಿದೇ. ದುರಿತರಕ್ಷತೇ. ಸದ್ಯಪದ ನಿವೃತಯೇ. ಕಾಂತಾಸಂಮಿತಯೇ’ (ಪಂಪ) ಮನುಷ್ಯ ಜೀವನಕ್ಕೆ ಅಗತ್ಯವಾದ ಅವನ ಜೀವನ ಮೌಲ್ಯವನ್ನು ವೃದ್ಧಿಸಬಲ್ಲ ಸಕಲ ಸಾಮರ್ಥ್ಯ ಸಾಹಿತ್ಯಕ್ಕಿದೆ. ಮಾನವಿಕ ಸಂಪನ್ಮೂಲಗಳಿಂದ ಕೂಡಿದ ಮನುಷ್ಯನ ಸಾಂಸ್ಕೃತಿಕ ವಿಕಾಸದ ಬಗೆಯನ್ನು ಹಂತ ಹಂತಗಳಲ್ಲಿ ಗುರುತಿಸುವ ಅನೇಕ ಕೃತಿಗಳು ಕನ್ನಡದಲ್ಲಿವೆ. ಆ ರಾಶಿಯಿಂದ ಜೀವಂತ ಸಾಹಿತ್ಯವನ್ನು ಗುರುತಿಸಿ ಹೊರತೆಗೆಯುವುದು ಸುಲಭದ ಕೆಲಸವಲ್ಲ. ತನ್ನ ವೈಯಕ್ತಿಕ ಪರಿಶೀಲನೆ ಮತ್ತು ಅನುಭೂತ ಆಸಕ್ತಿಯ ಹಿನ್ನೆಲೆಯಲ್ಲಿ ಈ ಬಗೆಯ ಸಾಹಿತ್ಯದ ಮೌಲ್ಯಮಾಪನ ಮಾಡಬಹುದು. ಸಾಹಿತ್ಯ ಮಾನವ ಸಂಸ್ಕ್ರತಿಯ ಸ್ವಯಂಪೂರ್ಣ ಉಲ್ಲೇಖವೂ ಹೌದು. ಬೆಳೆಯುತ್ತಿರುವ ಮಾನವೀಯ ಪ್ರಜ್ಞೆ ಸಂವೇದನೆಗಳ ಅರ್ಥವಿವರಣೆಯ ಈ ಸಂದಿಗ್ಧ ಕಾಲದಲ್ಲಿ ಹೆಚ್ಚು ಪ್ರಸ್ತುತವಾಗುವುದೇ ಈ ಬಗೆಯ ಸಾಹಿತ್ಯ. ಯಾಕೆಂದರೆ Classics are ageless. ಇವುಗಳ ಅಧ್ಯಯನ ಶಿಕ್ಷಣ ಇಂದು ಎಲ್ಲಾ ಸ್ತರದಲ್ಲಿಯೂ ಅಗತ್ಯವಾಗಿದೆ. ಶಿಕ್ಷಣ ಮಾಧ್ಯಮದಲ್ಲಿ ಎಲ್ಲ ಜ್ಞಾನ ಮೂಲಗಳ ಕ್ಷಿತಿಜದಲ್ಲಿಯೂ ಸಾಹಿತ್ಯಾಭ್ಯಾಸ ಅವಶ್ಯವಾಗಿ, ಅಧಿಕೃತವಾಗಿ ಇರಬೇಕಾದ ಅಗತ್ಯವನ್ನು ಸಂಬಂಧಪಟ್ಟವರು ತಿಳಿಯಬೇಕು. ಇಂದು ಪ್ರಸ್ತುತವಾಗುವ ಸಾಹಿತ್ಯಾಂಶಗಳನ್ನು ಹೀಗೆ ಕ್ರೋಢೀಕರಿಸಬಹುದು.

ಶಾಸನ ಸಾಹಿತ್ಯದಲ್ಲಿ ನಾಡಿನ ಪ್ರಾಚೀನತೆ, ಜನಜೀವನ-ಭಾಷೆ, ಆಡಳಿತ ವ್ಯವಸ್ಥೆ. ರಾಜನ ಯೋಗ್ಯತೆ. ಸಾಂಸ್ಕೃತಿಕ ಕೊಡುಗೆ ಇತ್ಯಾದಿಗಳ ಜ್ಞಾನ ಲಭ್ಯವಾಗುತ್ತದೆ.

ಪಂಪಭಾರತದಲ್ಲಿ ದಾಯಾದಿವೈರ. ಮಿತ್ರಪ್ರೇಮ, ರಾಜಕಾರಣ, ಧರ್ಮಕಾರಣ, ಸಮಾಜದ ಸ್ವರೂಪ. ವ್ಯಕ್ತಿಘರ್ಷಣೆ. ವರ್ಗ ವರ್ಣಬೇಧಗಳು, ಕರ್ಣ, ದ್ರೌಪದಿ, ಭೀಷ್ಮ ಶಂತನು, ಶಕುನಿ, ಕೃಷ್ಣ, ಸತ್ಯವತಿ, ಏಕಲವ್ಯ, ಕುಂತಿ ಮೊದಲಾದ ಪಾತ್ರಗಳ ಸಾರ್ವಕಾಲಿಕವಾದ ಸಂವೇದನೆಗಳ ಪರಿಚಯ : ಗಧಾಯುದ್ಧದ ನಾಟಕೀಯ ಗುಣ. ದುರ್ಯೋಧನನ ಕುರಿತಾದ ದುರಂತ ಪಾತ್ರ ಕಲ್ಪನೆ. ಯಶೋಧರ ಚರಿತೆಯಲ್ಲಿ ಹೆಣ್ಣು ಗಂಡಿನ ಸಂಬಂಧಗಳ ಸೂಕ್ಷ್ಮ ಸಂಘರ್ಷ, ಮನುಷ್ಯನ ಸೂಕ್ಷ್ಮಭಾವಗಳು (instincts) ನೈತಿಕತೆಯ ಮೇಲೆ ಹಾವಿಯಾಗಿ ಭಾವ ಸಂಘರ್ಷ (conflicts) ಹುಟ್ಟಿಕೊಳ್ಳುವ ಸ್ಥಿತಿಗಳು.

ಕುಮಾರ ರಾಮ ಚರಿತೆಯಲ್ಲಿ ಮಲತಾಯಿ ಮನೋಭಾವ, ಹೆಣ್ಣಿನ ಮನಸ್ಸಿನ ದೌರ್ಬಲ್ಯ ಅಪರಾಧಕ್ಕೆ ಕಾರಣವಾಗುವ ಚಿತ್ರಣ.

ಕುಮಾರವ್ಯಾಸ ಭಾರತದ ಭಕ್ತಿಯ ಸಮರ್ಪಣಾ ಭಾವ, ಸಾಂಸ್ಕೃತಿಕ ವೈಭವ, ಕರ್ಣ ಧುರ್ರ್ಯೊಧನರ ಪಾತ್ರಗಳಲ್ಲಿ ತುಂಬಿದ ಮಾನವತೆ. ವಚನ ಸಾಹಿತ್ಯ ಪ್ರಕಾರದ ಜನಪ್ರಿಯತೆ. ವಚನಗಳು ಚಿತ್ರಿಸುವ ಸಮಾಜ ಜೀವನ. ವ್ಯವಸ್ಥೆ. ಬಂಡಾಯ ದಲಿತ ಮನೋವೃತ್ತಿಗಳ ವ್ಯವಸ್ಥೆ. ಬಂಡಾಯ ದಲಿತ ಮನೋವೃತ್ತಿಗಳ ಅಭಿವ್ಯಕ್ತಿ. ರತ್ನಾಕರವರ್ಣಿಯ ಭರತೇಶನ ಭೋಗ ಯೋಗ ಸಮನ್ವಯ ದರ್ಶನ. ದಾಸ ಸಾಹಿತ್ಯ ಹೇಳುವ ಮಾನವ ಮೌಲ್ಯಗಳ ವಿವರ. ಭೋದನೆಗಳು. ಅಕ್ಕಮಹಾದೇವಿ ಮೊದಲಾದ ಮಹಿಳೆಯರ ಸ್ತ್ರೀಪರ ಬಂಡಾಯ ಹಾಗೂ ಇನ್ನೂ ಅನೇಕ ಮಾನವ ಮತ್ತು ಅವನ ಬದುಕಿನ ಸುತ್ತ ಹೆಣೆದುಕೊಂಡಿರುವ ಸಾಹಿತ್ಯ ಚಿರಕಾಲವೂ ಉಳಿಯುತ್ತದೆ. ಸಮಕಾಲೀನ ಪ್ರಜ್ಞೆಯೊಂದಿಗೆ ಸ್ಪಂದಿಸಿ ನವನವೋನ್ನತಿಯನ್ನು ಪಡೆಯುತ್ತದೆ. ‘ಶ್ರೀ ರಾಮಾಯಣದರ್ಶನಂ’ದಂತಹ ಮಹಾಕಾವ್ಯ ಕುವೆಂಪುವಿನಂಥಾ ಮಹಾಕವಿಯ ಸೃಷ್ಟಿಗೆ ಕಾರಣವಾಗುತ್ತದೆ. ಇಂಥಾದನ್ನು ಪ್ರಾಚೀನ ಸಾಹಿತ್ಯವೆಂದು ಪಕ್ಷವಹಿಸಿ ಕಡೆಗಣಿಸುವುದು ಬೇಡ.

ಜಡ ಸಾಹಿತ್ಯ: ಸಾಹಿತ್ಯದ ಕೆಲವೊಂದು ಪ್ರಾಚೀನ ಪ್ರಕಾರಗಳನ್ನು ಜಡವೆಂದು ಪರಿಗಣಿಸಿ ಅವುಗಳು ಇಂದಿನ ಪ್ರಜ್ಞೆಗೆ ಮತ್ತು ಶಿಕ್ಷಣ ಕ್ರಮಕ್ಕೆ ಎಷ್ಟು ಪ್ರಸ್ತುತ ಎಂಬುದರ ಬಗ್ಗೆ ಕೆಲವು ವಿಚಾರಗಳು.

ಛಂದೋಬುದಿ, ಧ್ವನ್ಯಾಲೋಕ, ಛಂದಶಾಸ್ತ್ರ, ಕಾವ್ಯಾವಲೋಕನ, ಶಬ್ದಮಣಿದರ್ಪಣ, ಭಾಷಾಶಾಸ್ತ್ರ, ಚರಿತ್ರೆ, ಅಲಂಕಾರ ಶಾಸ್ತ್ರ, ಶತಕಗಳು ಇಂದಿನ ಅಭ್ಯಾಸ ಕ್ರಮಕ್ಕೆ ಸಲ್ಲುವುದಿಲ್ಲ. ಇದನ್ನು ನಿಷ್ಪ್ರಯೋಜಕ ಎಂದು ಹೇಳದೆ ಇಂದಿನ ಜ್ಞಾನ ಮತ್ತು ಜೀವನ ಮೌಲ್ಯದ ಅಭಿವೃದ್ದಿಗೆ ಇವುಗಳಿಂದ ಹೆಚ್ಚು ಪ್ರಯೋಜನವಾಗಲಾರದೆಂದು ನನ್ನ ವಿಚಾರ. ಶಾಲೆ ಕಾಲೇಜುಗಳ ಪಠ್ಯ ಪುಸ್ತಕದ ಆವರಣದೊಳಗೆ ಬರುವಷ್ಟನ್ನು ಮಾತ್ರ ಸುಲಭ ರೀತಿಯಲ್ಲಿ ಅಳವಡಿಸಿಕೊಂಡು ಹೋದರೆ ಹಳೆಯ ಕಾಲದ ಈ ನಿರ್ಜೀವ ಸಾಹಿತ್ಯವನ್ನು ಪರಿಚಯಿಸಿದಂತಾಗುವುದು. ಹಾಗೂ ಸಾಹಿತ್ಯವನ್ನೇ ಪದವಿ. ಪದವಿಯ ನಂತರದ ಅಭ್ಯಾಸಕ್ರಮದಲ್ಲಿಟ್ಟು ವಿಸ್ತ್ರತ ಅಧ್ಯಯನವನ್ನು ಮಾಡುವವರಿಗಾಗಿ ಉಳಿದ ಮಾನವಿಕ ಮತ್ತು ದೈವಿಕ ಸಾಹಿತ್ಯದೊಂದಿಗೆ ಸೇರಿಸಿಕೊಳ್ಳಬಹುದು. ಇವುಗಳ ಅಧ್ಯಯನವನ್ನು ಯಾವುದೇ ಕಾರಣಕ್ಕಾಗಿ ಪ್ರಯೋಜನಕಾರೀ ಎನ್ನಲಾಗುವುದಿಲ್ಲ. ಇವುಗಳು ಓದುಗನ ಜಿಜ್ಞಾಸೆಯನ್ನು ಕೆರಳಿಸುವ ಕಾರ್ಯವನ್ನೂ ತೀವ್ರವಾಗಿ ಮಾಡಲಾರವು. ಭಾವನೆಯನ್ನು ಸ್ಫುರಿಸಲು ಇಂಥಾ ಸಾಹಿತ್ಯದಲ್ಲಿ ಯಾವ ಸಾಮಗ್ರಿಯೂ ಇರುವುದಿಲ್ಲ. ಬುದ್ಧಿ ವಿಕಾಸಕ್ಕಾಗಿ, ಅಕಾಡಮಿಕ್ ಪದವಿಗಳಿಗಾಗಿ ಈ ಪ್ರಕಾರದ ಸಾಹಿತ್ಯಕ ವಿಷಯಗಳನ್ನು ಆಯ್ಕೆಯ ವಿಷಗಳನ್ನಾಗಿ ತೆಗೆದುಕೊಂಡು ಅಧ್ಯಯನ ಮಾಡಬಹುದು. ಪ್ರಯೋಜನದ ಅಂಶ ಇಲ್ಲಿಯೂ ಕಡಿಮೆಯೇ. ಶೋಧಗಳನ್ನು ಮಾಡಿ ಹೊಸ ಹೊಸ ನೆಲೆಯಲ್ಲಿ ಅರ್ಥವಿವರಣೆ ಕೊಡಲು ವಿದ್ವಾಂಸರಿಗೆ ಅವಕಾಶ ಕಡಿಮೆ. ಸಂಶೋಧನೆಯ ಕ್ಷೇತ್ರ ಇಂದು ಅದರ ಅಧ್ಯಯನದ ಗಂಭೀರತೆಯನ್ನು ಕಳಕೊಂಡು ಯುನಿವರ್ಸಿಟಿಯ ಉಚ್ಚತಮ ಡಿಗ್ರಿ ಪಡೆಯುವ ಒಂದು ಸುಲಭ ಮಾರ್ಗವನ್ನು ಅನುಸರಿಸುತ್ತಿದೆ. ಜಾನವದ ಸಾಹಿತ್ಯ ಕಲೆ, ಜನಾಂಗೀಯ ವಿಷಯ. ಸ್ಥಳನಾಮಗಳ ಅಧ್ಯಯನ, ಐತಿಹ್ಯ ಹಾಗೂ ವ್ಯಕ್ತಿನಿಷ್ಠ ಸಾಹಿತ್ಯದ ಅಧ್ಯಯನವೆ ಮೊದಲಾದ ಸರಳ, ಪರಿಶ್ರಮ ಕಡಿಮೆ ಇರುವ ವಿಷಯಗಳು ಇಂದಿನ ಸಂಶೋಧನೆಯ ಮುಖ್ಯ ವಿಷಯಗಳಾಗಿವೆ. ನೌಕರಿಯನ್ನು ಪಡೆಯುವ ನೆಲೆಯಲ್ಲಿಯೂ ಸಾಹಿತ್ಯದ ಅಭ್ಯಾಸ ಇಂದು ತುಂಬಾ ಅಪ್ರಸ್ತುತವಾಗಿದೆ. ಪ್ರಾದೇಶಿಕ ಭಾಷೆಯ ಯಾವುದೇ ಉನ್ನತ ಮಟ್ಟ ಸಾಹಿತ್ಯದ ಅಭ್ಯಾಸ ಮಾಡಿ ಡಿಗ್ರಿ ಪಡೆಯುವುದರಿಂದ ಇಂದು ಉತ್ತಮ ಬಗೆಯ ಸಂಪಾದನಾ ಅವಕಾಶ ಲಭಿಸಬಹುದೆಂಬ ಕನಸು ಗಗನ ಕುಸುಮವಾಗಿದೆ. ಶಿಕ್ಷಕ ವೃತ್ತಿಯೂ ಇಂದಿನ ಪರಿಸ್ಥಿತಿಯಲ್ಲಿ ಘನತೆಯನ್ನು ಕಳಕೊಂಡಿದೆ. ಯುವಕರ ಐಚ್ಛಿಕ ವೃತ್ತಿಯಾಗಿ ಉಳಿದಿಲ್ಲ. ಇಂದಿನ ಶಿಕ್ಷಣಕ್ರಮದಲ್ಲಿ ಅಳವಡಿಸಿಕೊಂಡಿರುವ ಅನೇಕ ವೃತ್ತಿಪರ ವಿಷಯಗಳನ್ನು ಗಮನಿಸಿದರೆ ಪ್ರಾಚೀನ ಸಾಹಿತ್ಯದ ಅಧ್ಯಯನ ಯಾವ ಮಟ್ಟಕ್ಕೆ ಬಂದು ನಿಂತಿದೆ ಎಂದು ತಿಳಿಯಬಹುದಾಗಿದೆ. ವಿಶ್ವವಿದ್ಯಾಲಯಗಳಲ್ಲಿ, ಕನ್ನಡ ಸಾಹಿತ್ಯದ ಕುರಿತು ಸದ್ಭಾವನೆಯನ್ನು ಉಳಿಸಿಕೊಳ್ಳುವ ಸಲುವಾಗಿ, ಕನ್ನಡದ ಪ್ರಾಚೀನ ಸಾಹಿತ್ಯದ ಅಧ್ಯಯನ ಜಡ ನಿರ್ಜೀವ ಪ್ರಕಾರಗಳನ್ನು ಕಲಿಯಬೇಕೆಂಬ ಲವಲವಿಕೆ ಇರುವ ಸಾಹಿತ್ಯ ಪ್ರೇಮಿ ವಿದ್ಯಾರ್ಥಿಗಳಿಗಾಗಿ ಹಾಗೂ ಭಾಷೆ ಸಾಹಿತ್ಯ ಸಂಸ್ಕೃತಿಯ ಕುರಿತು ಪ್ರಾಂತೀಯ ಒಲವನ್ನು ಕಾಪಾಡಿಕೊಳ್ಳುವ ಸಲುವಾಗಿ ಇಂಥಾ ಸಾಹಿತ್ಯಾಭ್ಯಾಸದ ವಾತಾವರಣವನ್ನು ಉಳಿಸಿಕೊಳ್ಳಬೇಕಾಗುತ್ತದೆ. ವಿಚಾರ ಮಾಡಿ ನೋಡಿದರೆ ಧರ್ಮಾಮೃತ. ಶೂನ್ಯ ಸಂಪಾದನೆ. ರಚನಾಮೃತ, ದಾಶಭೋಧಯೇ ಮೊದಲಾದ ತತ್ವಶಾಸ್ತ್ರದ ಗ್ರಂಥಗಳು ಓದುಗನ ವಿದ್ವತ್ತನ್ನು ಜಿಜ್ಞಾಸೆಯನ್ನು ಮಾತ್ರ ಹೆಚ್ಚಿಸುವವೇ ಹೊರತು ಜೀವನದ ವಾಸ್ತವ ಮೌಲ್ಯಗಳನ್ನು ಉದ್ಘೋಷಿಸಲಾರವು. ಅಲ್ಲದೆ ಈ ವಿಷಯಗಳು ಜನ ಸಾಮಾನ್ಯರ ಹಿತಾಶಕ್ತಿಯ ವಿಷಯಗಳಾಗಲಾರವು. ಈಗಿನದು ಕಂಪ್ಯೂಟರ್ ಯುಗ. ಐಟಿ. ಯುಗ. ಯಾವ ಬಗೆಯ ಶಿಕ್ಷಣ ಯಾವ ಬಗೆಯ ಜೀವನ ಸವಲತ್ತುಗಳನ್ನು ಕಲೆ ಹಾಕಲು ಉಪಯೋಗವಾಗಬಲ್ಲವು. ಸಾರ್ಥಕ ಜೀವನ ಮೌಲ್ಯ ಯಾವುದು ಎಂಬ ತರ್ಕ ಮತ್ತು ಆಯ್ಕೆ ಮಾಡುವ ಕಡೆಗೆಯೆ ಪ್ರತಿ ಸಾಮಾಜಿಕನ ಲಕ್ಷ್ಯ ಕೇಂದ್ರಿತವಾಗಿದೆ. ಈಗಿನ ತಂದೆ ತಾಯಿಯರಲ್ಲಿ ಮಾತ್ರವಲ್ಲ. ತರುಣರಲ್ಲಿಯೂ ಅತ್ಯಾಧುನಿಕ ವೃತ್ತಿಪರವಾದ ವಿಷಯಗಳಿರುವ ಡಿಗ್ರಿಗಳನ್ನು ಪಡೆದು ಹೊರ ಜಗತ್ತಿನೊಡನೆ ಸ್ಪರ್ಧಿಸಬೇಕೆಂಬ ಮನಸ್ಸು ತೆರೆದುಕೊಂಡಿದೆ. ಉದ್ಯೋಗಶೀಲವಾಗಿ ಆರ್ಥಿಕ ಸಮಷ್ಟಿಯ ಕಡೆಗೆ ಸಾಗಿರುವ ಈ ದೇಶದಲ್ಲಿ ಪ್ರತಿಯೊಬ್ಬನೂ ಆರ್ಥಿಕವಾಗಿ ಭದ್ರನಾಗಬೇಕೆಂಬ ಹಂಬಲವನ್ನು ಹೊಂದಿಕೊಂಡಿರುತ್ತಾನೆ. ಆದರ್ಶಕ್ಕಾಗಿ ಸ್ವಂತದ ಅಭಿವೃದ್ಧಿಯನ್ನು ಬಿಟ್ಟುಕೊಡಲು ಯಾರೂ ಇಷ್ಟಪಡುವುದಿಲ್ಲ. ಅಲ್ಲದೆ ಸಂಶೋಧನೆಗಳನ್ನು ಮಾಡಿ ಗ್ರಂಥರಚನೆ ಪ್ರಕಟನೆಗಳನ್ನು ಮಾಡಲು ಯಾವುದೇ ಬಗೆಯ ಆರ್ಥಿಕ ಪ್ರಚಾರ ಪ್ರೋತ್ಸಾಹವೂ ಸಿಗದ ಕಾಲವಿದು. ಪತ್ರಿಕಾ ಲೇಖನಗಳನ್ನು ಬರೆದು ಸ್ವಯಂ ತೃಪ್ತಿಯನ್ನು ಪಡಕೊಳ್ಳಬಹುದೇ ಹೊರತು ಇದರಿಂದ ಮೆಟೀರಿಯಲ್ ಗೆಯಿನ್ ಏನೂ ಆಗುವುದಿಲ್ಲ. ಆದ್ದರಿಂದ ನಾನು ಜಡಸಾಹಿತ್ಯವೆಂದು ಪ್ರಾಕ್ಟಿಕಲ್ ಪ್ರಯೋಜನದ ದೃಷ್ಟಿಯಿಂದ ಪರಿಗಣಿಸುತ್ತೇನೆ. ಪ್ರಾಚೀನ ಸಾಹಿತ್ಯ ಪ್ರಕಾರವನ್ನು ವಿಶ್ವ ವಿದ್ಯಾಲಯದ ಪ್ರಕಾಶನವಿಭಾಗ. ಅಕಾಡೆಮಿಗಳು. ಸಂಸ್ಕೃತಿ ಇಲಾಖೆ. ಪ್ರಾಧಿಕಾರಗಳು ಮರು ಪ್ರಕಟಿಸುವ ಯೋಜನೆಗಳನ್ನು ಹಮ್ಮಿಕೊಳ್ಳುವುದರಲ್ಲಿ ಹೆಚ್ಚಿನ ಅರ್ಥ ಹೊಳೆಯುವುದಿಲ್ಲ. ಬದಲಿಗೆ ಜೀವಂತ ಸಾಹಿತ್ಯವೆಂದು ಪರಿಗಣಿಸಲಾದ ಸಾಹಿತ್ಯದಲ್ಲಿ ಚಿಂತನೆ, ಮರುಚಿಂತನೆ, ಮರುವಿಮರ್ಶೆ, ಸಮಕಾಲೀನ ಸಮನ್ವಯ ಸಾಧನೆ. ಹೊಸ ಹೊಸ ಕೃತಿರಚನೆಯೇ ಮೊದಲಾದ ಅರ್ಥಪೂರ್ಣವಾದ ಸೃಜನ ಸಾಹಿತ್ಯವನ್ನು ಈ ಸಂಸ್ಥೆಗಳು ಪ್ರೋತ್ಸಾಹಿಸುವುದು ಅತ್ಯಂತ ಸೂಕ್ತವಾಗಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೆಜ್ಜೆ
Next post ಶಿವಮುನಿಗಣಾ

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…