ಮೈಸೂರಿನಿಂದ ಬಂದವರು

ಮೈಸೂರಿನಿಂದ ಬಂದವರು

ನಾನು ಕನವರಿಸಿರಬೇಕು – ಸಾಕಷ್ಟು ದೊಡ್ಡದಾಗಿಯೆ. ತಾಯಿ ಬಳಿ ಒಂದು “ಪುಟ್ಟ! ಪುಟ್ಟ! ಏನಾಯಿತು? ಕನಸು ಕಂಡಿಯ?” ಎಂದು ಹೊರಳಿ ಎಬ್ಬಿಸಿದಾಗ ಎಚ್ಚರಾಯಿತು. ನಾನು ಇನ್ನು ಯಾರನ್ನಾದರೂ ಎಬ್ಬಿಸಿದೆನೆ ಎಂದು ಆತಂಕದಿಂದ ಆಚೀಚೆ ನೋಡಿದೆ. ಇಲ್ಲ, ತಾಯಿ ಮಾತ್ರ ಎಚ್ಚರಾಗಿ ಎದ್ದು ಬಂದಿದ್ದಳು. ಆಕೆ ಕಬ್ಬಿಣದ ಚೂರೊಂದನ್ನು ನನ್ನ ಚಾಪೆಯ ಕೆಳಗಿಟ್ಟು, “ಏನೂ ಆಗಲ್ಲ, ಮಲಕ್ಕೊ” ಎಂದು ಹೇಳಿ ಹೊರಟು ಹೋದಳು. ನನಗೆ ಮಾತ್ರ ನಿದ್ದೆ ಬರಲಿಲ್ಲ-ಕನಸಿನ ಬಗ್ಗೆಯೆ ಚಿಂತಿಸತೊಡಗಿದೆ. ಕನಸಿನಲ್ಲಿ ದಾಂಡಿಗನೊಬ್ಬ ನನ್ನ ಬೆನ್ನಟ್ಟಿ ಬಂದಿದ್ದ. ಅವನಿಂದ ತಪ್ಪಿಸಿಕೊಳ್ಳಲೆಂದು ಓಡಲೆಳಸಿದರೆ ನನಗೆ ಕಾಲುಗಳೇ ಏಳುತ್ತಿರಲಿಲ್ಲ. ಅವನು ತನ್ನ ದಪ್ಪವಾದ ಕೈಗಳಿಂದ ನನ್ನ ಕುತ್ತಿಗೆಯನ್ನು ಹಿಚುಕ ತೊಡಗಿದಾಗ ನಾನು ಒದ್ದಾಡಿದೆ, ಕಿರುಚಲು ಯತ್ನಿಸಿದೆ. ಬಹುಶಃ ಕಿರುಚಿದೆ. ತಾಯಿ ಎಚ್ಚರಿಸಿದಾಗ ನನಗೆ ಇದೆಲ್ಲ ಕನಸೆಂದು ಸಮಾಧಾನವಾದರೂ ನಿಜಕ್ಕೂ ನಾನು ಎಷ್ಟೋ ದೂರ ಓಡಿದಂತೆಯೇ ಆಯಾಸಗೊಂಡಿದ್ದೆ. ನನ್ನ ಕತ್ತು ಮುಟ್ಟಿ ನೋಡಿಕೊಂಡೆ. ಕತ್ತಿನ ಮೇಲೆ ಆ ಧಾಂಡಿಗನ ಕೈ ಬೆರಳುಗಳು ಮೂಡಿರಬಹುದೆ? ಆತ ಯಾರು? ಯಾಕೆ ನನ್ನ ಬೆನ್ನು ಹತ್ತಿದ? ಮುಂತಾದ ಪ್ರಶ್ನೆಗಳು ಮನಸ್ಸಿನಲ್ಲಿ ಎದ್ದವು. ನನಗವನ ಪರಿಚಯವಿತ್ತು. ಕಳೆದ ಬೇಸಿಗೆಯಲ್ಲಿ ಅವನನ್ನು ಕಣ್ಣಾರ ಕಂಡಿದ್ದೆ. ಅದೆಲ್ಲ ನಡೆದುದು ಹೀಗೆ–

ಮೈಸೂರಿನಿಂದ ನಮ್ಮ ದೂರದ ಸಂಬಂಧಿಕರು ಬಂದಿದ್ದರು. ಗಂಡ, ಹೆಂಡತಿ ಮತ್ತು ಸುಮಾರು ನನ್ನದೆ ಅಥವಾ ನನ್ನಕ್ಕಿಂತ ಸ್ವಲ್ಪ ಸಣ್ಣ ವಯಸ್ಸಿನ ಇಬ್ಬರು ಹುಡುಗಿಯರು. ವಿನಯ ಮತ್ತು ಸ್ನೇಹ ಅವರ ಹೆಸರು. ಹೆಸರಿನಷ್ಟೆ ಚಂದ ಇದ್ದರು. ಅವಳಿ ಜವಳಿಗಳಂತೆ ನೋಡುವುದಕ್ಕೆ ಇಬ್ಬರೂ ಒಂದೇ ಥರ. ಆದರೆ ಅವಳಿ ಜವಳಿಗಳಲ್ಲ. ವಿನಯ ದೊಡ್ಡವಳು-ಅವಳ ಮೂಗು ತುಸು ಮೇಲಕ್ಕೆ. ಈ ಒಂದು ವ್ಯತ್ಯಾಸ ಬಿಟ್ಟರೆ ಇಬ್ಬರೂ ಒಂದೇ ಹಾಗೆ. ಇಬ್ಬರಲ್ಲಿ ಹೆಚ್ಚು ಸುಂದರಿ ಯಾರೆಂದು ಕೇಳಿದರೆ ಉತ್ತರಿಸುವುದು ಕಷ್ಟ. ಈ ಪ್ರಶ್ನೆ ನನಗೆ ನಾನೆ ಹಲವು ಬಾರಿ ಕೇಳಿಕೊಂದಿದ್ದೆ. ಅವರಲ್ಲೊಬ್ಬರನ್ನು ನಾನು ಪ್ರೇಮಿಸಿ ಮದುವೆ ಯಾಗಬೇಕು ಎಂಬ ಆಸೆ ಮೊದಲ ಭೇಟಿಯಲ್ಲೆ ನನ್ನ ಮನಸ್ಸಿನಲ್ಲಿ ಮೂಡಿತ್ತು. ಇಬ್ಬರಲ್ಲಿ ಯಾರನ್ನು ಆಗಲಿ- ವಿನಯಳನ್ನೆ, ಸ್ನೇಹಳನ್ನೆ? ಇಬ್ಬರಲ್ಲಿ ಯಾರನ್ನು ಆರಿಸಿಕೊಂಡರೂ ಇನ್ನೊಬ್ಬಳನ್ನು ಕೈಬಿಡಬೇಕಾದ ದುಃಖದಿಂದ ಪಾರಾಗುವಂತಿಲ್ಲ. ನಿಜಕ್ಕೂ ನನಗೆ ಇಬ್ಬರೂ ಬೇಕೆನಿಸುತ್ತಿತ್ತು. ನನ್ನ ಕಲ್ಪನೆಯ ಪ್ರಪಂಚದಲ್ಲಿ ಇಂಥ ಬಯಕೆಗಳು ವಿಚಿತ್ರವೆಂದಾಗಲಿ, ಅಸಾಧ್ಯವೆಂದಾಗಲಿ ಕಾಣಿಸಲಿಲ್ಲ. ಯಾಕಾಗಬಾರದು? ಒಂದು ವೇಳೆ ವಿನಯ ಮತ್ತು ಸ್ನೇಹ ಇಬ್ಬರೂ ನನ್ನನ್ನು ಗಾಢವಾಗಿ ಪ್ರೀತಿಸುವುದಾದರೆ! ಮತ್ತು ಅವರು ನನ್ನನ್ನಲ್ಲದೆ. ಇನ್ನು ಯಾರನ್ನೂ ಕಣ್ಣೆತಿ ಸಹಾ ನೋಡಲಾರೆವು ಎಂದು ಹಟ ಹಿಡಿದರೆ! ಆತ್ಮಹತ್ಯೆಗೂ ಸಿದ್ಧರಾದರೆ! ಹೀಗೆ ಏಳುತ್ತಿದ್ದುವು ನನ್ನ ಕಲ್ಪನಾ ಲಹರಿಗಳು.

ಆಸರೆ ವಾಸ್ತವದಲ್ಲಿ ಪೇಟೆ ಹುಡುಗಿಯರನ್ನು ಕಂಡರೆ ತರತರ ನಡುಗುವ ಅಳ್ಳೆದೆಯ ಗ್ರಾಮಾಂತರದ ಹುಡುಗರದೇ ಸ್ಥಿತಿಯಾಗಿತ್ತು ನನ್ನದೂ ಕೂಡ. ಅವರು ಮನೆಗೆ ಬಂದ ಹೊಸದರಲ್ಲಿ ಅವರ ಮುಂದೆ ಕಾಣಿಸಿಕೊಳ್ಳುವುದಕ್ಕೆ ನನಗೆ ಅಳುಕಾಗುತ್ತಿತ್ತು. ಬಸ್ಸಿನಲ್ಲಿ ನಾನು ದಿನಾ ಕಾಲೇಜಿಗೆ ಹೋಗಿ ಬರುತ್ತಿದ್ದೆ. ಬೆಳಿಗ್ಗೆ ಎಂಟಕ್ಕೆ ಮನೆಯಿಂದ ಹೊರಟರೆ ಸಂಜೆ ಐದಕ್ಕೆ ವಾಪಸಾಗುತ್ತಿದ್ದೆ. ಉಳಿದ ಸಮಯದಲ್ಲಿ ಅಧ್ಯಯನದಲ್ಲಿ ಮಗ್ನನಾದವನಂತೆ ಕಾಣಿಸಿಕೊಳ್ಳಲು ಸುರುಮಾಡಿದೆ. ಊಟ ತಿಂಡಿಯ ಸಂದರ್ಭದಲ್ಲಿ ವಿನಯ ಮತ್ತು ಸ್ನೇಹ ಕೆಲವೊಮ್ಮೆ ನನ್ನೆದುರಿಗೆ ಕುಳಿತುಕೊಳ್ಳುತ್ತಿದ್ದರು ಅಥವಾ ಇಕ್ಕಲು ಮುಂದಾಗುತ್ತಿದ್ದರು. ಇಬ್ಬರಲ್ಲಿ ವಿನಯ ಯಾರು, ಸ್ನೇಹ ಯಾರು, ಎಂದು ಗುರುತು ಹಿಡಿಯುವುದಕ್ಕೆ ತುಸು ಸಮಯ ಬೇಕಾಯಿತು. ಕೊನೆಗೆ ವಿನಯಳ ಮೂಗಿನ ರಹಸ್ಯವನ್ನು ಕಂಡುಕೊಂಡೆ. ಮೂಗಿನ ಹೊಳ್ಳೆಗಳು ತುಸುವೆ ಮೇಲಕ್ಕೆ ಕಾಣಿಸುವುದರಿಂದ ಅವಳು ಅಹಂಕಾರಿ ಯಿದ್ದರೂ ಇರಬಹದು ಎಂದು ಮೊದಮೊದಲು ನನಗೆ ಅನಿಸಿತ್ತು. ಆದರೆ ಅವಳು ಮಾತ್ರ ಹೆಸರಿಗೆ ತಕ್ಕಂತೆ ವಿನಯವಂತಳಾಗಿದ್ದಳು. ಅಷ್ಟೇ ಅಲ್ಲ; ಅವಳ ಮೂಗು ಅವಳ ಮುಖಕ್ಕೆ ವಿಶೇಷವಾದ ಸೌಂದರ್ಯವನ್ನು ತಂದುಕೊಟ್ಟಿತ್ತು. ಅವರು ಮನೆಗೆ ಬಂದ ಕೆಲವೇ ದಿನಗಳಲ್ಲಿ ವಿದ್ಯಾರ್ಥಿ ಗಲಭೆಯ ಕಾರಣದಿಂದ ನಮ್ಮ ಕಾಲೇಜು ಮುಚ್ಚಿತು. ಅದ್ದರಿಂದ ದಿನವಿಡೀ ನಾನು ಮನೆಯಲ್ಲೇ ಇರುವಂತಾಯಿತು. ಈಗಲಾದರೆ ನಾನು ಮೊದಲಿನಂತೆ ಓದಿನಲ್ಲಿ ಮಗ್ನನಾದ ಹಾಗೆ ನಟಿಸುವುದು ಸಾಧ್ಯವಿರಲಿಲ್ಲ. ಒಂದೇ ಮನೆಯಲ್ಲಿ ವಾಸವಾಗಿರುತ್ತ ಈ ಹುಡುಗಿಯರೆದುರಿನಿಂದ ತಪ್ಪಿಸಿಕೊಳ್ಳುವುದಾದರೂ ಹೇಗೆ? ಅಲ್ಲದೆ, ಯಾಕಾದರೂ ತಪ್ಪಿಸಿಕೊಳ್ಳಬೇಕು ಎಂದು ನನ್ನ ಅಂತರಂಗ ಎಚ್ಚರಿಸುತ್ತಲೇ ಇತ್ತು.

ಕೆಲವು ದಿನಗಳ ಮಟ್ಟಿಗೆ ನಮ್ಮಲ್ಲಿ ಇರಲೆಂದೇ ಅವರು ಬಂದಿದ್ದರು. ಕೆಲವು ದಿನಗಳು ಎಂದರೆ ಎಷ್ಟು ದಿನಗಳು ಎಂದು ಯಾರಿಗೂ ಗೊತ್ತಿರಲಿಲ್ಲ. ಒಂದು ವಾರ, ಎರಡು ವಾರ, ತಿಂಗಳು, ಎರಡು ತಿಂಗಳು ಎಷ್ಟಿದ್ದರೂ ಇರಬಹುದು. ಹೀಗೆ ಬಂದುದರಿಂದ ಅವರೆಲ್ಲ ಮನೆಯವರಂತೆಯ ವರ್ತಿಸುತ್ತಿದ್ದರು. ವಿನಯ ಮತ್ತು ಸ್ನೇಹ ತಾ ಮುಂದೆ ತಾ ಮುಂದೆ ಎಂದು ಮನೆಗೆಲಸದಲಿ ತಾಯಿಗೆ ನೆರವಾಗುತ್ತಿದ್ದರು-ಅವರ ಅಮ್ಮನೂ ಹಾಗೆಯೇ. ತರಕಾರಿ ಹಚ್ಚುವುದು, ಅಡುಗೆ ಮಾಡುವುದು, ಮುಸುರೆ ತಿಕ್ಕುವುದು, ಮನೆ ಸಾರಿಸುವುದು, ನೀರು ಸೇದುವುದು, ಬಟ್ಟೆ ಬರೆ ತೊಳೆಯುವುದು ಎಲ್ಲ ಕೆಲಸಕ್ಕೂ ಅವರು ಕೈ ಹಚ್ಚುತ್ತಿದ್ದರು. ಅವರು ಬಂದ ಮೇಲೆ ನಮ್ಮ ಊಟದ ವ್ಯವಸ್ಥೆಯಲ್ಲೂ ತುಸು ಬದಲಾವಣೆ ಕಾಣಿಸತೊಡಗಿತು- ಮೈಸೂರು ಸಾರು, ಬಿಸಿ ಬೇಳೆಬಾತ್, ಕೋಸಂಬರಿಗಳು ಆಗಾಗ ತಟ್ಟೆಯನ್ನು ಅಲಂಕರಿಸುತ್ತಿದ್ದುವು. ಮೈಸೂರಿನ ಈ ಹುಡುಗಿಯರಿಗೆ ಬಾವಿ ಯಿಂದ ನೀರು ಸೇದುವುದು ಒಂದು ಮೋಜಿನ ಸಂಗತಿಯಾಗಿತ್ತು. ಇಬ್ಬರೂ ಸೇರಿ ಹತ್ತಾಳು ಆಳದ ಬಾವಿಯಿಂದ ಬೇಕಷ್ಟು ನೀರು ಎಳೆದು ಹಾಕುತ್ತಿದ್ದರು. ಮೊದಮೊದಲು ಅವರ ಅಂಗೈಯಲ್ಲಿ ಬಾಸುಂಡೆಗಳು ಎದ್ದುವು. ಮನೆಗೆಲಸದಲ್ಲಿ ಸಾಕಷ್ಟು ದಡ್ಡನೇ ಆಗಿದ್ದ ನನಗೆ ಇವರ ಉತ್ಸಾಹದಿಂದ ಇರಿಸುಮುರಿಸಾದ್ದು ನಿಜ. ಮನೆಯಲ್ಲಿ ಇಸ್ತ್ರಿಪೆಟ್ಟಿಗೆ ಇದ್ದರೂ ನಾನಾಗಿ ಎಂದು ಅದನ್ನು ಉಪಯೋಗಿಸಲು ಮುಂದಾದುದಿಲ್ಲ. ಈಗಲಾದರೆ ವಿನಯ ಮತ್ತು ಸ್ನೇಹ ಮನೆಯವರೆಲ್ಲರ ಬಟ್ಟೆ ಒಗೆದು ಗಂಜಿ ನೀರಲ್ಲಿ ಅದ್ದಿ ಅರಿಸಿ ಇಸ್ತ್ರಿ ಹಾಕಿ ರೆಡಿ ಮಾಡಿಡುತ್ತಿದ್ದರು. ಇದರಿಂದ ತಾಯಿಯ ಕೆಲಸದ ಹೊರೆ ಎಷ್ಟೋ ಕಡಿಮೆಯಾಯಿತೆಂದೇ ಹೇಳಬೇಕು. ಆದರೂ ಯಾಕೆ ಅವಳು ಮುಖದಲ್ಲಿ ಸಂತೋಷವನ್ನು ತೋರಿಸುವುದಿಲ್ಲ? ಇದು ನನಗೆ ನಿಜಕ್ಕೂ ಸಮಸ್ಯೆಯೇ ಆಗಿತ್ತು.

ಈ ಹುಡುಗಿಯರ ತಂದೆಯ ಸ್ವಭಾವ ತುಸು ವಿಚಿತ್ರ ವಿತ್ತೆಂದು ಹೇಳಬಹುದು. ಆತ ಬೆಳಿಗ್ಗೆ ಎದ್ದು ಮನೆ ಬಿಟ್ಟರೆ ಮನೆ ಸೇರುವುದು ರಾತ್ರಿಯೇ ಸರಿ. ಕೆಲವೊಮ್ಮೆ ರಾತ್ರಿ ವಾಪಸಾಗುತ್ತಲೇ ಇರಲಿಲ್ಲ. ಮನೆಯಲ್ಲಿ ಕಾದಿದ್ದವರು ಕಾದೇ ಇರಬೇಕಾಗುತ್ತಿತ್ತು. ಈ ಮನುಷ್ಯ ಎಲ್ಲಿಗೆ ಹೋಗುತ್ತಾನೆ ಯಾಕೆ ಹೋಗುತ್ತಾನೆ ಎಂಬುದು ಅವನ ಹೆಂಡತಿ ಮಕ್ಕಳಿಗೇ ಗೊತ್ತಿರಲಿಲ್ಲ. ಅವನು ಮನೆಯಲ್ಲಿ ಇರುತ್ತಿದ್ದುದು ಅಪರೂವಾದ್ದ ರಿಂದ ಅವನ ಜತೆ ಯಾರಿಗೂ ಹೆಚ್ಚಿನ ಮಾತುಕತೆಗೆ ಅವಕಾಶವಿರುತ್ತಿರಲಿಲ್ಲ. ನನ್ನ ತಾಯಿ ಮತ್ತು ತಂದೆಯ ದುಮ್ಮಾನಕ್ಕೆ ಇದು ಕಾರಣವಿರಬಹುದು ಎಂದು ನಾನು ಅಂದುಕೊಂಡೆ ಅಥವಾ ಮನೆಗೆ ಹೊರಗಿನವರು ಬಂದರೆ ದೈನಂದಿನ ವ್ಯವಹಾರಗಳಿಗೆ ಆಗುವ ತೊಂದರೆ ಕಾರಣವಿದ್ದಿರಬಹುದೆ? ಯಾರೂ ಇಲ್ಲ ದಿದ್ದಾಗೆ ತಂದೆ ಮತ್ತು ತಾಯಿ ಹಣಕಾಸಿನ ವ್ಯವಹಾರಗಳ ಬಗ್ಗೆ ಅಥವಾ ನೆರೆಕೆರೆ ಸುದ್ದಿಗಳ ಕುರಿತು ಮಾತಾಡಿಕೊಳ್ಳುತ್ತಿದ್ದರು; ಕೆಲವೊಮ್ಮೆ ಜಗಳಾಡಿಕೊಳ್ಳುತ್ತಿದ್ದರು. ಈಗ ಅದೆಲ್ಲ ಅಸಾಧ್ಯವಾಗಿದೆ. ಒಗ್ಗದ ಸಭ್ಯತೆಯನ್ನು ಪ್ರದರ್ಶಿಸಬೇಕಾಗಿದೆ. ಕೆಲವೊಮ್ಮೆ ಸ್ನಾನದ ಮನೆಯನ್ನು ವಿನಯಳೋ ಸ್ನೇಹಳೋ ಆಕ್ರಮಿಸಿ ಬಿಡುತ್ತಾರೆ. ಅಂಥ ಸಂದರ್ಭಗಳಲ್ಲಿ ತಂದೆ ಕೈಯಲ್ಲಿ ಟವೆಲು ಹಿಡಿದು ಅಂಗಳದಲ್ಲಿ ಅತ್ತಿಂದಿತ್ತ ಅಲೆಯುತ್ತ ಯಾವಾಗ ಎಂದರೆ ಆವಾಗ ಸಿಡಿಯಲಿರುವ ಟೈಮ್ ಬಾಂಬಿನಂತೆ ಕಾಣಿಸುತ್ತಿದ್ದರು. ಅವು ನನ್ನ ಅತ್ಯಂತ ಆತಂಕದ ಕ್ಷಣಗಳು. ಸ್ನಾನದ ಮನೆಯ ಬಾಗಿಲು ತೆರೆದು ವಿನಯಳೋ ಸ್ನೇಹಳೋ ಗರಿಗರಿಯಾದ ಬಟ್ಟೆ ಧರಿಸಿ ಹೊರಬರುವುದನ್ನು ಕಂಡಾಗಲೆ ನನಗೆ ಸಮಾಧಾನ.

ಮನೆಯಲ್ಲಿ ಸ್ಥಳಾವಕಾಶದ ಸಮಸ್ಯೆಯೂ ಇತ್ತು. ನನ್ನ ತಂದೆ, ತಾಯಿ, ತಾಯಿಯ ತಾಯಿ, ನಾನು ಸ್ಕೂಲಿಗೆ ಹೋಗುವ ಇಬ್ಬರು ತಮ್ಮಂದಿರು; ಇವರಲ್ಲದೆ ಆಗಾಗ್ಗೆ ಮನೆಗೆ ಬಂದು ಹೋಗುವ ಹತ್ತಿರದ ಬಂಧು ಬಳಗ. ಈಗ ಮೈಸೂರಿನ ನಾಲ್ಕು ಮಂದಿಯೂ ಸೇರಿ ಮನೆ ತುಂಬ ಜನವಾಯಿತು. ಮನೆ ಚಾವಡಿಯಲ್ಲಿ ಡಾರ್ಮೆಟರಿ ಯಂತೆ ಸಾಲು ಸಾಲಾಗಿ ಚಾಪೆ ಹಾಕಬೇಕಾಗುತ್ತಿತ್ತು. ಇದೆಲ್ಲ ನನ್ನ ತಂದೆ ತಾಯಿಯರ ಕಸಿವಿಸಿಗೆ ಕಾರಣವಾಗಿರಬಹುದು ಎಂದು ಊಹಿಸಿಕೊಂಡೆ. ಆದರೆ ಇದೇ ವಿಕೋಪಕ್ಕೆ ಹೋಗಿ ಒಂದು ಪ್ರಸಂಗವಾಗುವುದು ನನಗೆ ಬೇಕಿರಲಿಲ್ಲ ವಾದ್ದರಿಂದ ನನ್ನಿಂದಾದಷ್ಟು ಮಟ್ಟಿಗೆ ತಂದೆ ತಾಯಿಯರ ಸಂತೋಷವನ್ನು ಗಳಿಸಲು ಯತ್ನಿಸಿದೆ.

ಮೈಸೂರಿನ ನಮ್ಮ ಬಂಧುಗಳು ನಿಜಕ್ಕೂ ದೂರದ ಬಂಧುಗಳೇ ಆಗಿದ್ದಿರಬೇಕು. ಯಾಕೆಂದರೆ ಅವರ ಮತ್ತು ನಮ್ಮ ಸಂಬಂಧ ಸ್ಪಷ್ಟವಾಗಿ ಏನಿತ್ತು ಎನ್ನುವುದು ನನಗೆ ಕೊನೆತನಕವೂ ಗೊತ್ತಾಗಲಿಲ್ಲ. ವಿನಯ ಮತ್ತು ಸ್ನೇಹ ನನ್ನನ್ನು ಅಣ್ಣ, ಮಾವ ಎಂದಿತ್ಯಾದಿಯಾಗಿ ಕರೆಯದೆ ಮಹೇಶ್ ಎಂದು ಹೆಸರು ಹಿಡಿದೆ ಕರೆಯುತ್ತಿದ್ದರು. ಇದು ನನಗೆ ಖುಶಿಯ ಸಂಗತಿ. ಹರೆಯದ ಹುಡುಗಿಯರ ಬಾಯಿಂದ ಹೆಸರು ಕೇಳುವುದು ಯಾರಿಗೆ ತಾನೆ ಖುಶಿಯಿಲ್ಲ! ಮೊದಮೊದಲು ಅವರ ಮುಂದೆ ಸುಳಿಯಲು ಅಳುಕುತ್ತಿದ್ದ ನಾನು ಈಗ ಅವರಿಗೆ ಅತ್ಯಂತ ಆಪ್ತನಂತೆ ವರ್ತಿಸತೊಡಗಿದೆ. ಅವರಿಗೆ ಬೇಕಾದ ಕತೆ ಕಾದಂಬರಿಗಳು, ಸ್ನೋ ಪೌಡರು, ಸೋಪು, ಪಿನ್ನು ಇತ್ಯಾದಿಗಳನ್ನು ಪೇಟೆಯಿಂದ ತಂದೊದಗಿಸುವುದು ನನ್ನ ಕೆಲಸವಾಯಿತು. ಅವರ ಜತೆ ನಾನು ಏಕಾಂತವನ್ನು ಬಯಸುತ್ತಿದ್ದೆ. ಆದರೆ ನನ್ನ ತಮ್ಮಂದಿರಿಬ್ಬರು ಮಹಾ ಪಿರ್ಕಿಗಳಂತೆಯೂ ಬುದ್ಧಿ ಹೀನರಂತೆಯೂ ನನಗೆ ಅಡ್ಡ ಗಾಲು ಹಾಕುತ್ತಿದ್ದರು. ಪೇಟೆಯ ಈ ಹುಡುಗಿಯರು ಅವಕ್ಕೆ ದೇವತೆಗಳೇ ಆಗಿ ಆಗಿದ್ದರೆಂಬುದು ಅವುಗಳ ಮುಖ ನೋಡಿದರೇ ಗೊತ್ತಾಗುತ್ತಿತ್ತು. ಇಬ್ಬರಲ್ಲೊಬ್ಬನಾದರೂ ವಿನಯ ಮತ್ತು ಸ್ನೇಹಳ ಹಿಂದೆ ನಮ್ರಸೇವಕನಂತೆ ಸುಳಿದಾಡುವುದು ತಪ್ಪುತ್ತಿರಲಿಲ್ಲ. ಈ ಹುಡುಗರಿಗೆ ವಿಧವಿಧ ಚಾಕರಿ ಹೇಳಿ ಅಥವಾ ಹೋಂ ವರ್ಕ್ ಕೊಟ್ಟು ಅವುಗಳನ್ನು ವಿನಯ ಮತ್ತು ಸ್ನೇಹಳ ಸಾಮೀಪ್ಯದಿಂದ ದೂರವಿರಿಸುವುದರಲ್ಲೆ ನನ್ನ ಕೌಶಲ್ಯವೆಲ್ಲ ವ್ಯಯವಾಗುತ್ತಿತ್ತು. ಹೀಗೆ ಗಳಸಿದ ಸುವರ್ಣಾವಕಾಶಗಳನ್ನು ಉಪಯೋಗಿಸಿಕೊಂಡು ನಾನು ಮೈಸೂರಿನ ಹುಡುಗಿಯರನ್ನು ತಿರುಗಾಟಕ್ಕೆ ಕರಕೊಂಡು ಹೋಗುತ್ತಿದ್ದೆ. ಬಯಲು ಸೀಮೆಯ ಈ ಹುಡುಗಿಯರಿಗೆ ನಮ್ಮೂರಿನ ಗುಡ್ಡ ಕಣಿವೆ, ಏರು ತಗ್ಗುಗಳು, ಕೊರಕಲು ದಾರಿಗಳು. ಗಿಡಮರಗಳು ಹೊಸತು. ಆಗ ಗೇರು ಮರಗಳಲ್ಲಿ ಎಳೆಗಾಯಿಗಳು ಕಾಣಿಸಿಕೊಂಡ ಸಮಯ. ಹಸಿರಾದ ಎಳೆ ಬೀಜಗಳ ಮೂತಿಯನ್ನು ಕಲ್ಲಿಗೆ ಉಜ್ಜಿ ಹಿಮ್ಮಡಿಯಿಂದ ಮೆಟ್ಟಿ ಒಳಗಿನ ತಿರುಳನ್ನು ಹೊರತೆಗೆಯುವ ಉಪಾಯವನ್ನು ಅವರಿಗೆ ಕಲಿಸಿಕೊಟ್ಟೆ. ಇಂಥ ಉಪಾಯಗಳೇನೂ ಒಂದೆರಡಲ್ಲ ನನ್ನ ಬಳಿ ಇದ್ದುದು.

ಒಂದು ದಿನ ಮಾವ ಬಹಳ ಬೇಗನೆ ಬಂದ – ಪ್ರಾಮಿಡಿಯನ್ ಕಾರಣದಿಂದಲೋ ಏನೋ ವಿನಯ ಮತ್ತು ಸ್ನೇಹಳ ತಂದೆಯನ್ನು ಮಾವನೆಂದೂ ತಾಯಿಯನ್ನು ಅತ್ತೆಯೆಂದೂ ನಾನು ಕರೆಯುತ್ತಿದ್ದೆ. ಮಾವನ ಕೈಯಲ್ಲಿ ಒಂದು ಹಿತ್ತಾಳಿಯ ಹರಿವಾಣ ಇತ್ತು. ಅದರ ಮೇಲೆ ತೆಂಗಿನಕಾಯಿ, ವೀಳಯದೆಲೆ, ನೂರೊಂದು ರೂಪಾಯಿಗಳು ಮತ್ತು ಒಂದು ರೇಶಿಮೆ ಶಲ್ಯ. ಈ ಹರಿವಾಣವನ್ನು ಎಲ್ಲರಿಗೂ ತೋರಿಸುತ್ತ ಮಾವ ಹೇಳಿದ : ಈ ದಿನ ಸ್ವಾಮಿಗಳ ಭೇಟಿ ಮಾಡುವುದಕ್ಕೆ ಹೋಗಿದ್ದೆ. ಸಂಸ್ಕೃತದ ಹತ್ತು ಶ್ಲೋಕಗಳನ್ನೂ ಒಂದು ಕವಿತೆಯನ್ನೂ ಕಟ್ಟಿ ಹೇಳಿದೆ. ಉದ್ದಂಡ ನಮಸ್ಕಾರ ಹಾಕಿದೆ. ಸ್ವಾಮಿಗಳಿಗೆ ಖುಶಿಯಾಯಿತೆಂದು ಕಾಣತ್ತೆ. ಆಗದ ಇರುತ್ತದೆಯೆ-ಮೈಸೂರು ಅರಮನೆಯ ಆಸ್ಥಾನ ಪಂಡಿತ ಎಂದು ಬುರುಡೆ ಹಾರಿಸಿದ್ದೆ. ಹೀಗೆಂದು ಆತ ಗೊಳ್ಳನೆ ನಕ್ಕ. ಎಲ್ಲರೂ ಬಂದು ಹರಿವಾಣ ಮತ್ತು ಅದರ ಮೇಲಿಟ್ಟಿದ್ದ ವಸ್ತುಗಳನ್ನು ನೋಡಿದರು. ಯಾರೂ ಏನೂ ಹೇಳಲಿಲ್ಲ. ಮಾರನೆ ಮುಂಜಾನೆ ಯಥಾಪ್ರಕಾರ ಮಾವ ಮಾಯವಾದ – ಆ ಹರಿವಾಣ ಎಲ್ಲೂ ಕಾಣಿಸಲಿಲ್ಲ.

“ಮೈಸೂರಲ್ಲಿ ಏನು ಮಾಡುತ್ತೀರಿ?” ಎಂದು ಒಮ್ಮೆ ನಾನು ಹುಡುಗಿಯರನ್ನು ಕೇಳಿದೆ. ಸ್ಕೂಲ್ ಫ಼ೈನಲ್ ಆಗಿರಲಿಲ್ಲ ಇಬ್ಬರಿಗೂ. ಕಾರಣ ಅವರು ಸಂಗೀತ, ನೃತ್ಯ ಕಲಿಯುತ್ತಿದ್ದರು. ಒಬ್ಬಾಕೆ ಮೈಸೂರು ಆಕಾಶವಾಣಿಯಲ್ಲಿ ಹಾಡುಗಾರಿಕೆ ಪ್ರಸಾರ ಮಾಡಿದ್ದಳು. ಮೂರು ತಿಂಗಳಿಗೊಮ್ಮೆ ಅಲ್ಲಿ ಅವಳ ಕಾರ್ಯಕ್ರಮ ರೆಕಾರ್ಡ್ ಮಾಡುತ್ತಿದ್ದರು. ಇನ್ನೊಬ್ಬಾಕೆ ಈಗಾಗಲೆ ಒಂದು ಕನ್ನಡ ಸಿನಿಮಾದಲ್ಲಿ ಚೈಲ್ಡ್ ಆಕ್ಟ್ರೆಸ್ ಆಗಿ ನಟಿಸಿದ್ದಳು. ಇಬ್ಬರೂ ಸಿನಿಮಾ ಸೇರುವ ಕನಸು ಕಾಣುತ್ತಿದ್ದರು. ಇವರ ಈ ವಿಚಾರ ಕೇಳಿ ನಾನು ತುಸು ಅಸ್ಥಿರನಾದೆ – ಶರ್ಮಿಳಾ ಟಾಗೂರ್, ಮುಮ್ತಾಜ್, ಆಶಾಪರೇಖರ ಸಾಲಿಗೆ ನಾಳೆ ಸೇರಲಿರುವ ತಾರೆಗಳೊಂದಿಗೆ ನಾನೀಗ ಮಾತಾಡುತ್ತಿದ್ದೇನೆಯೆ ಎನಿಸಿತು.

“ಅದರೆ ನನಗೆ ಇಂಥ ಹಳ್ಳಿಯಲ್ಲಿರುವುದೇ ಇಷ್ಟ, ಮಹೇಶ್” ಎಂದಳು ವಿನಯ ಒಂದು ಹುಲ್ಲುಗರಿಕೆಯನ್ನು ಕಚ್ಚುತ್ತ.

“ನನಗೂನೂ” ಎಂದಳು ಸ್ನೇಹ ತಾನೂ ಒಂದು ಹುಲ್ಲುಗರಿಕೆಯನ್ನು ಕಿತ್ತುಕೊಂಡು.

“ಇಬ್ಬರೂ ಇಲ್ಲೇ ಇದ್ದುಬಿಡಿ! ” ಎಂದೆ ನಾನು.

“ಹೌದೌದು, ಎಷ್ಟು ಚೆನ್ನಾಗಿರುತ್ತೆ!” ಎಂದಳು ವಿನಯ.

“ನಿಜ” ಎಂದಳು ಸ್ನೇಹ.

ಒಂದು ದಿನ ನಾನು ವಿನಯಳನ್ನು ಪ್ರತ್ಯೇಕಿಸಿ ವಾಕಿಂಗ್ ಗೆ ಕರೆದುಕೊಂಡು ಹೋದೆ. ಇಂಥ ಅವಕಾಶ ದುರ್ಲಭವಾಗಿದ್ದುದರಿಂದ ಅದರ ಪೂರ್ತಿ ಸದುಪಯೋಗಮಾಡಿಕೊಳ್ಳಬೇಕೆಂದು ಸಂಕಲ್ಪಿಸಿದೆ. ಊರ ದಾರಿಗಳಲ್ಲಿ ನಾವು ನಡೆಯುತ್ತ ಒಂದು ಎತ್ತರದ ಕೋಡುಗಲ್ಲಿನ ಮೇಲೆ ಹತ್ತಿ ಕುಳಿತೆವು. ಆಲಿಂದ ಸೂರ್ಯ ಪಡುಗಡಲಲ್ಲಿ ಮುಳುಗುವ ದೃಶ್ಯ ಕಾಣಿಸುತ್ತಿತ್ತು. ವಿನಯಳನ್ನು ನನ್ನ ತೆಕ್ಕೆಯಲ್ಲಿ ತೆಗೆದುಕೊಂಡು ಚುಂಬಿಸಬೇಕೆನ್ನುವ ಬಯಕೆ ನನ್ನಲ್ಲಿ ಅದಮ್ಯವಾಗಿ ಬೆಳೆಯುತ್ತಿತ್ತು. ಆದರೆ ಅದನ್ನು ಕಾರ್ಯಗತಗೊಳಿಸುವ ಧೈರ್ಯ ಮಾತ್ರ ಇರಲಿಲ್ಲ. ಉದ್ವೇಗದಿಂದ ನನ್ನ ಮಾತು ಕಂಪಿಸುತ್ತಿತ್ತು. ನಾನು ಅವಳ ಮುಖವನ್ನೆ ನೋಡುತ್ತ ಕುಳಿತೆ. ಅವಳು ಮಾತ್ರ ಮೈಸೂರಿನ ಬಗ್ಗೆ ಮಾತನಾಡುತ್ತ ಏನೇನೋ ಹೇಳುತ್ತಿದ್ದಳು. ಕೊನೆಗೆ ನನ್ನ ಅವಸ್ಥೆ ಅರಿವಾದವಳಂತೆ.

“ಯಾಕೆ ಮಹೇಶ್ ನೀನೊಂಥರಾ ಇದೀಯಾ? ಜ್ವರ ಬಂದವರ ಹಾಗೆ” ಎಂದಳು.

“ಏನಿಲ್ಲ” ಎಂದೆ.

ನನ್ನ ಮೈ ಮುಟ್ಟಿ ನೋಡಿ –

“ತುಸು ಬೆಚ್ಚಗಿದೆ. ಮನೆಗೆ ಹೋಗೋಣೇನು? ಅತ್ತೆ ಏನಾದ್ರೂ ಔಷಧ ಹಾಕ್ತಾರೆ” ಎಂದಳು.

“ನೀನೇ ನನಗೆ ಔಷಧ” ಎಂದೆ.

“ಹಾಗಂದ್ರೆ?”

“ಆ ಮುಳುಗುತ್ತಿರೋ ಸೂರ್ಯ ನಿನ್ನ ಕಣ್ಣುಗಳಲ್ಲಿ ಎರಡಾಗಿ ಬಿದ್ದಿದ್ದಾನೆ. ನೀನು ರೆಪ್ಪೆ ಮುಚ್ಚಿದರೆ ಅವನು ನಾಶವಾಗ್ತಾನೆ. ನಾನೂ ಕೂಡ. ಕೆಳಗೆ ನೋಡು – ಪ್ರಪಾತ. ಇಲ್ಲಿಂದ ಜಗಿದರೆ ಏನಾಗುತ್ತೆ ಗೊತ್ತೆ?”

“ಏನು ಹುಚ್ಚುಚ್ಚು ಮಾತಾಡ್ತ ಇದೀಯ? ಸೂರ್ಯ ಮುಳುಗಿದ ತಕ್ಷಣ ಹೊರಟು ಬಿಡೋಣ – ಏನು. ನಿಜಕ್ಕೂ ನನಗೆ ಇಲ್ಲಿ ನಿನ್ನ ಜತೆ ಕೂತಿರೋದು ತುಂಬಾ ಇಷ್ಟ ಮಹೇಶ್.”

ನನಗೆ ಅಷ್ಟೇ ಸಾಕಾಗಿತ್ತು. ಅಲ್ಪ ತೃಪ್ತ ನಾನು. ಆದರೆ ನಿಜಕ್ಕೂ ನನ್ನ ಅತೃಪ್ತಿಯ ಬೆಂಕಿಗೆ ಗಾಳಿ ಹಾಕಿದಂತಾಗಿತ್ತು ಅವಳ ಮಾತಿನಿಂದ.

“ನಿನ್ನ ಮೂಗು ತುಂಬಾ ಚಂದ” ಎಂದೆ.

ನಂಬದವಳಂತೆ ಅವಳು ನಕ್ಕಳು.”ಸ್ನೇಹ ನನಗಿಂತಲೂ ಚಂದ ಇದ್ದಾಳೆ.” ಎಂದಳು.

“ಇಲ್ಲ” ಎಂದೆ.

“ನಿನಗೇನೂ ತಿಳೀದು” ಎಂದು ಅವಳೇ ಕೊನೆ ಮಾತು ಹೇಳಿದಳು.

“ಮೈಸೂರಿನ ಈ ಇಬ್ಬರು ಹುಡುಗೀರನ್ನೂ ಕರಕೊಂಡು ಬರುವಂತೆ ನನ್ನ ಅಕ್ಕ ಒಮ್ಮೆ ಹೇಳಿ ಕಳಿಸಿದ್ದರಿಂದ ಒಂದು ಮುಂಜಾನೆ ಅವರ ಜತೆ ಬಸ್ಸು ಹತ್ತಿ ಆಕೆಯ ಊರಿಗೆ ಹೋದೆ. ಅಕ್ಕ ಬಹಳ ಸಂಭ್ರಮದಿಂದ ಪಾಯಸದಡುಗೆ ಮಾಡಿ ಔತಣ ಹಾಕಿದಳು. ಆಕೆಗೆ ಇವರು ತುಂಬಾ ಹಿಡಿಸಿತೆಂದು ಕಾಣುತ್ತದೆ. ಒಂದು ದಿನ ಇದ್ದು ಹೋಗುವಂತೆ ಒತ್ತಾಯಿಸಿದಳು. ಆದರೆ ಮರುದಿನದಿಂದ ನನಗೆ ಕ್ಲಾಸುಗಳು ಆರಂಭವಾಗುವ ಸೂಚನೆಯಿದ್ದುದರಿಂದ ಇರಲಾಗಲಿಲ್ಲ. ಸಾಯಂಕಾಲ ಇನ್ನಿಷ್ಟು ತಿಂಡಿ ಕಾಫ಼ಿ ಆಯಿತು. ಇನ್ನೊಮ್ಮೆ ಬರುತ್ತೇವೆಂದು ಮಾತು ಕೊಟ್ಟ ಮೇಲೆಯೇ ಅಕ್ಕ ನಮ್ಮನ್ನು ಕಳಿಸಿಕೊಟ್ಟುದು. ಸಂಜೆ ವಾಪಸಾಗುತ್ತ ನಿಮಗೆ ಚೋರಟೆಪಾರೆಯನ್ನು ತೋರಿಸುತ್ತೇನೆ ಎಂದು ನಾನು ಹುಡುಗಿಯರನ್ನ ಕರಕೊಂಡು ಇನ್ನೊಂದು ದಾರಿ ಹಿಡಿದೆ. ಚೋರಟೆಪಾರೆಯೆಂದರೆ ಸಾವಿರಾರು ಎಕರೆ ಹರಡಿದ ಹಾಸುಗಲ್ಲಿನ ಬಯಲು. ಮಳೆಗಾಲದಲ್ಲಿ ಬಿದ್ದ ನೀರು ಅದರ ಹೊಂಡಗಳಲ್ಲಿ ಅಲ್ಲಲ್ಲಿ ಅನೇಕ ತಿಂಗಳು ನಿಂತಿರುತ್ತಿತ್ತು. ಆದ್ದರಿಂದ ಅಲ್ಲಿ ಕಪ್ಪೆ, ಚೋರಟೆ, ಹಾವು, ಕ್ರಿಮಿಕೀಟಗಳು ಇತ್ಯಾದಿ ಜಂತುಗಳನ್ನು ಕಾಣಬಹುದಾಗಿತ್ತು. ಈ ಬಯಲು ದಾಟಿದರೆ ಒಂದು ಕೊರಕಲಿನ ಇಳಿಜಾರು. ಅದರಾಚೆಗೆ ನದ್ಮು ಬಸ್ಸು ಬರುವ ಮಾರ್ಗ. ಈ ದಾರಿಯಲ್ಲಿ ಚಿಕ್ಕಂದಿನಲ್ಲಿ ನಡೆದ ನೆನಪು ನನಗೆ. ದಾರಿ ಸ್ವಲ್ಪ ಬಳಸಾದ್ದರಿಂದ ಈಗ ಯಾರೂ ಅದನ್ನು ಉಪಯೋಗಿಸುತ್ತಿರಲಿಲ್ಲ. ನಮ್ಮ ಊರಿನ ವಿಶೇಷಗಳೆಲ್ಲವನ್ನೂ ಈ ಹುಡುಗಿಯರಿಗೆ ತೋರಿಸುವ ಉತ್ಸಾಹದಿಂದ ಚೋರಟೆಪಾರೆಯ ಬಗ್ಗೆ ಮಾತಾಡುತ್ತ ಅವರ ಜತೆ ನಡೆಯುತ್ತಿದ್ದವನಿಗೆ ಎಷ್ಟು ಹೊತ್ತಾದರೂ ಮಾರ್ಗ ಕಾಣಿಸದಿರುವಾಗ ದಾರಿ ತಪ್ಪಿತೇ ಎಂಬ ಸಂದೇಹ ಬಂದಿತು. ಸಂಜೆಯ ಸೂರ್ಯ ಮಾಯವಾಗುವ ಸಮಯ ಅದು. ಹಾವುಗಳಿರುವ ಜಾಗದಲ್ಲಿ ಅಂಥ ಸಮಯದಲ್ಲಿ ದಾರಿ ತಪ್ಪುವುದೆಂದರೆ ಅಪಾಯ. ಹೀಗೆ ನಾನು ಆತಂಕದಲ್ಲಿರುವಾಗ ಫಕ್ಕನೆ ಒಬ್ಬ ಧಡೂತಿ ಆಸಾಮಿ ನಮ್ಮೆದುರು ಪ್ರತ್ಯಕ್ಷನಾದ. ಆರಡಿ ಎತ್ತರ, ಗಡ್ಡ ಮೀಸೆ ಬೆಳಿಸಿ ಭಯಂಕರವಾಗಿ ಕಾಣುವ ದಾಂಡಿಗ.

“ಎತ್ತ ಹೊರಟಿದ್ದೀರಿ? ” ಎಂದು ನೇರವಾಗಿ ಕೇಳಿದ.

ಹೇಳಿದೆ. ಅದಕ್ಕವನು, “ಈ ದಾರಿ ಯಿಂದ ಮಾರ್ಗ ಸೇರುವುದಕ್ಕೆ ತುಂಬ ದೂರ ನಡೆಯಬೆಕು. ನನ್ನ ಜತೆ ಬನ್ನಿ” ಎಂದ. ಅವನನ್ನು ಹಿಂಬಾಲಿಸುವುದೆಂದರೆ ನನಗೆ ಅವಮಾನಕರ. ಈ ಹುಡುಗಿಯರ ಸುರಕ್ಷಿತತೆಯ ಬಗ್ಗೆ ಕೂಡ ನಾನು ಯೋಚಿಸುತ್ತಿದ್ದೆ. ಆದರೆ ಬೇರೆ ಉಪಾಯವೇ ಇರಲಿಲ್ಲ. ಅವನನ್ನು ಹಿಂಬಾಲಿಸಿದೆವು. ಈ ಹುಡುಗಿಯರು ಯಾರು? ನೀವು ಎಲ್ಲಿಗೆ ಹೋಗಿದ್ದಿರಿ? ಯಾಕೆ ಹೋಗಿದ್ದಿರಿ? ಇವರ ಹೆಸರೇನು? ಎಂದು ಮುಂತಾದ ಅಧಿಕ ಪ್ರಸಂಗದ ಪ್ರಶ್ನೆಗಳನ್ನು ಆತ ಕೇಳತೊಡಗಿದ. ಈ ಪ್ರಶ್ನೆಗಳಿಗೆ ಅವರು ಉತ್ತರಿಸುವುದು ನನಗೆ ಸ್ವಲ್ಪವೂ ಇಷ್ಟವಿರಲಿಲ್ಲವಾದರೂ ಅವರಿಗೆ ಸುಮ್ಮನಿರಿ ಎಂದು ನಾನು ಹೇಳುವುದು ಹೇಗೆ? ಇಂಥ ಬೇಗುದಿಯಲ್ಲೆ ದಾರಿ ಕ್ರಮಿಸಿ ಸೂರ್ಯ ಮುಳುಗುವ ಹೊತ್ತಿಗೆ ಮಾರ್ಗ ಸೇರಿದೆವು. ಆ ದಾಂಡಿಗ ಇನ್ನೊಂದು ದಾರಿ ಹಿಡಿದು ಹೊರಟು ಹೋದ ಮೇಲೆಯ ನನಗೆ ಸಮಾಧಾನವಾದುದು. ಆದರೂ ಈ ಅನುಭವ ನನಗೆ ಕೊಟ್ಟಷ್ಟು ಮಾನಸಿಕ ಹೆಂಸೆಯನ್ನು ಇನ್ನು ಬೇರಾವ ಅನುಭವವೂ ಕೊಟ್ಟಿರಲಿಲ್ಲ.

ಸ್ಟ್ರೈಕು ಮುಗಿದು ಕಾಲೇಜು ಆರಂಭವಾಯಿತು.

ಒಂದು ದಿನ ನಾನು ಕಾಲೇಜು ಲೈಬ್ರರಿಯಿಂದ ಎರಡು ಕಾದಂಬರಿಗಳನ್ನು ತೆಗೆದುಕೊಂಡು ಬಂದೆ. ವಿನಯ ಮತ್ತು ಸ್ನೇಹಳನು ಕರೆದು ಪುಸ್ತಕಗಳನ್ನು ಕೊಟ್ಟೆ. ಯಾಕೋ ಅವರಲ್ಲಿ ನಾನು ನಿರೀಕ್ಷಿಸಿದ ಉತ್ಸಾಹ ಕಾಣಿಸಲಿಲ್ಲ. ಇಡೀ ಮನೆಯಲ್ಲಿ ಒಂದು ರೀತಿಯ ಬಿಗುವಿನ ವಾತಾವರಣ ಹೆಪ್ಪುಗಟ್ಟಿದ ಹಾಗಿತ್ತು. ಯಾಕೆಂದು ತಿಳಿಯುವ ಮನಸ್ಸಾದರೂ ಯಾರನ್ನೂ ಕೇಳುವ ಧೈರ್ಯ ಬರಲಿಲ್ಲ. ಅಪ್ರಿಯವಾದ ಘಟನೆಯೇನಾದರೂ ನಡೆದಿದ್ದರೆ ಅದನ್ನು ತಿಳಿಯದೆ ಇರುವುದರಿಂದ ಇಲ್ಲದಾಗಿಸುವ ಪ್ರಯತ್ನವಾಗಿತ್ತು ನನ್ನದು. ಮರುದಿನ ಮತ್ತೆ ಕಾಲೇಜು, ಪಾಠ, ಇದೊಂದೂ ನನಗೀಗ ಬೇಕಿರಲಿಲ್ಲ. ವಿನಯ ಮತ್ತು ಸ್ನೇಹಳನ್ನು ಕರೆದುಕೊಂಡು ಎಲ್ಲಾದರೂ ದೂರದ ಊರಿಗೆ ಹೋಗಿಬಿಡಬೇಕು ಎಂದು ನನ್ನ ಬಯಕೆ. ನನ್ನ ಮನೆಯೊಂದು ಕೆಟ್ಟ ನರಕವಾಗಿ ನನಗೆ ಕಾಣಿಸಿತು.

ಅಂದು ಸಂಜೆ ಬಸ್ಸು ಸಮಯಕ್ಕೆ ಸರಿಯಾಗಿ ಸಿಗದ್ದರಿಂದ ನಾನು ಮನೆ ಸೇರುವಾಗ ಸ್ವಲ್ಪ ತಡವೇ ಆಯಿತು. ಮನೆಯಲ್ಲಿ ನನಗೆ ಎದುರಾದ್ದು ಅತ್ಯಂತ ಭೀಕರವಾದ ವಾಸ್ತವತೆ- ಮೈಸೂರಿನ ಮಂದಿ ಎಲ್ಲೂ ಕಾಣಿಸಲಿಲ್ಲ. ಅವರೆಲ್ಲ ಎಲ್ಲಿ ಹೋದರು ಎಂದು ನಾನು ತಾಯಿಯನ್ನು ಕೇಳಿದೆ.

“ಹೊರಟು ಹೋದರು” ಎಂದಳು ನೀರಸವಾಗಿ.

“ಎಲ್ಲಿಗೆ ಹೋದರು?”

“ಹೀಗೆ ಇನ್ನೊಂದು ಊರಿಗೆ ಹೋಗಿರಬೇಕು. ನನಗೇನೂ ಗೊತ್ತು? ನೀನು ಯಾಕೆ ಸಿಟ್ಟಾಗುತ್ತೀ ನನ್ನ ಮೇಲೆ? ಹೋಗಿ ಎಂದು ನಾನೇನೂ ಹೇಳಲಿಲ್ಲ. ಕಾಫ಼ಿ ತಗೋ.”

ಇದಾದ ಮೇಲೆ ನಾನೆಂದೂ ಆ ಮೈಸೂರಿನ ಹುಡುಗಿಯರನ್ನು ಕಂಡಿಲ್ಲ. ಅವರ ಸುದ್ದಿಯನ್ನು ಮನೆಯಲ್ಲಿ ಯಾರೂ ಎತ್ತುತ್ತಿರಲಿಲ್ಲ. ಎಷ್ಟೋ ವರ್ಷಗಳನಂತರ ನನಗೆ ಯಾರೋ ಹೇಳಿದರು – ಅವರಲ್ಲಿ ಒಬ್ಬಾಕೆಗೆ ಹುಚ್ಚು ಹಿಡಿಯಿತು ಎಂದು. ಇನ್ನೊಬ್ಬಾಕೆ ಏನಾದಳೋ ತಿಳಿಯದು. ಇಷ್ಟು ಕಾಲದ ಮೇಲೆ ಇದೆಲ್ಲ ಕೇವಲ ಕನವರಿಕೆಯಾಗಿ ಕಾಣಿಸಿದರೂ ಪ್ರತಿಯೊಂದು ಬಾರಿ ಕನಸು ಬಿದ್ದಾಗಲೂ ಆ ಅನುಭವ ನನಗೆ ಹೊಸತಾಗಿಯೇ ಅನಿಸುತ್ತದೆ.
*****

ಕೀಲಿಕರಣ: ಬುಸಿರಾಜು ಲಕ್ಷ್ಮೀದೇವಿ ದೇಶಾಯಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಿಂಗಾರ
Next post ಕವಿಯ ನಿರೀಕ್ಷೆ

ಸಣ್ಣ ಕತೆ

 • ಉಪ್ಪು

  ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

 • ಸಿಹಿಸುದ್ದಿ

  ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

 • ತೊಳೆದ ಮುತ್ತು

  ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

 • ಆವರ್ತನೆ

  ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

 • ಹೃದಯ ವೀಣೆ ಮಿಡಿಯೆ….

  ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

cheap jordans|wholesale air max|wholesale jordans|wholesale jewelry|wholesale jerseys