ಸಾಂಪ್ರದಾಯಿಕತೆ ಮತ್ತು ರಾಜಕಾರಣ

ಸಾಂಪ್ರದಾಯಿಕತೆ ಮತ್ತು ರಾಜಕಾರಣ

“ಸಂಪ್ರದಾಯಗಳು ಸಮಾಜದ ಭದ್ರತಾ ಪಡೆ” ಎಂದು ಸಮಾಜ ವಿಜ್ಞಾನಿ ಜೀರಿಂಗ್ಸ್ ಹೇಳಿದ್ದಾನೆ. ಸಮಾಜವೊಂದು ಜಡವಾಗುತ್ತ ಚಲನ ಹೀನ ಸ್ಥಿತಿ ತಲುಪುತ್ತಿದ್ದಾಗ ಚಲನಶೀಲತೆಯುಂಟುಮಾಡುವ ಕ್ರಮವಾಗಿ ಈ ಭದ್ರತಾಪಡೆ ವ್ಯೂಹವನ್ನು ಭೇದಿಸಲೇಬೇಕಾಗುತ್ತದೆ. ಈ ಕ್ರಿಯೆ ವಿವಿಧ ನೆಲೆ-ಸ್ವರೂಪಗಳಲ್ಲಿ ನಡೆಯಬಹುದು. ಸಂಪ್ರದಾಯಗಳು ಪರಿಣಾಮದಲ್ಲಿ ಸಾಂಪ್ರದಾಯಿಕತೆಯನ್ನು ಬೆಳೆಸುವುದರಿಂದ, ಇಂಥ ಸಾಂಪ್ರದಾಯಿಕತೆಯನ್ನು ಮಾನಸಿಕವಾಗಿ ಮೀರುವ ಕ್ರಿಯೆ ಮೊದಲು ಆರಂಭವಾಗಬೇಕು. ಇಂಥ ಮೀರುವ ಕ್ರಿಯೆಯಿಂದಲೇ ಇಂದು ಅಸ್ಪೃಶ್ಯತೆಯನ್ನು ಸಾಮಾಜಿಕ ಅನಿಷ್ಟವೆಂದು ಪರಿಗಣಿಸುವಷ್ಟರ ಮಟ್ಟಿಗೆ ನಮ್ಮ ಮನಸ್ಸು ರೂಪುಗೊಂಡಿದೆ.

ಸಂಸ್ಕೃತಿಯನ್ನು ‘ಜೀವನವಿಧಾನ’ವೆಂಬ ವಿವರಣೆಯಲ್ಲಿ ಅರ್ಥ ಮಾಡಿಕೊಂಡಾಗ ಸಂಪ್ರದಾಯಗಳು ಸಂಸ್ಕೃತಿಯ ಭಾಗವೆಂದು ಒಪ್ಪಬೇಕಾಗುತ್ತದೆ. ಸಂಪ್ರದಾಯಗಳ ಜಡತ್ವವನ್ನು ಮೀರಿರುವುದರಿಂದಲೇ ಸಂಸ್ಕೃತಿಯಲ್ಲಿ ಹೊಸ ವಿನ್ಯಾಸಗಳ ರೂಪಧಾರಣೆಗೆ ದಾರಿಯಾಗುತ್ತದೆ. ಸಂಸ್ಕೃತಿ ಎನ್ನುವುದು ಕೇವಲ ಭೂತದ ಉಗ್ರಾಣವಲ್ಲ. ವರ್ತಮಾನದ ಒತ್ತಾಸೆಯಲ್ಲಿ ಭೂತವನ್ನು ಬದಲಾಯಿಸಿಕೊಳ್ಳುತ್ತ ಭವಿಷ್ಯದತ್ತ ಹೆಜ್ಜೆಯಿಡುವ ಒಂದು ಕ್ರಿಯಾ ಪರಂಪರೆ. ಇಂಥ ಕ್ರಿಯಾ ಪರಂಪರೆ ಪ್ರೇರಣೆಯಿಂದ ನಮ್ಮ ರಾಜಕಾರಣ ರೂಪುಗೊಳ್ಳಲು ಸಾಧ್ಯವಾದರೆ, ಆಗ ಜಡ ವ್ಯವಸ್ಥೆಯ ಬೇರುಗಳಿಗೆ ಬಿಸಿ ಮುಟ್ಟಿ ಬೂದಿಯಾಗುವ ಕೆಲಸವು ಪ್ರಾರಂಭ ಕಂಡೀತು. ಆದರೆ ನಮ್ಮ ದೇಶದ ರಾಜಕಾರಣ ಬಹುಪಾಲು ಸಾಂಪ್ರದಾಯಿಕ ನೆಲೆಯಲ್ಲಿ ನಿಂತುಬಿಟ್ಟಿದೆ. ಇದರಿಂದ ಮೌಢ್ಯವೆಂದು ಗೊತ್ತಿದ್ದೂ ಮೌಡ್ಯವನ್ನು ಮೀರದೆ ಇರುವ ಪಕ್ಷ ಮತ್ತು ನಾಯಕರುಗಳು ಹೆಚ್ಚಾಗಿದ್ದಾರೆ. ಪ್ರಜಾಪ್ರಭುತ್ವದ ಹೆಸರಿನಲ್ಲಿ ಚುನಾವಣೆ ಪ್ರಧಾನವಾದ ರಾಜಕೀಯ ವ್ಯವಸ್ಥೆಯನ್ನು ರೂಪಿಸುವುದುರಿಂದ ಇಲ್ಲಿ ಓಟಿನ ಮಹಿಮೆಯೇ ಮುಖ್ಯವಾಗುತ್ತಿದೆ. ಬಹುಸಂಖ್ಯಾತ ಮತದಾರರು ಪ್ರತಿನಿಧಿಸುವ ಮೌಲ್ಯ-ಪದ್ಧತಿಗಳನ್ನು ಮೀರಿ ಅಪ್ರಿಯವಾಗುವ ಕೆಲಸವನ್ನು ಬಲಪಂಥೀಯ ಹಾಗೂ ಮಧ್ಯ ಪಂಥೀಯ ರಾಜಕೀಯ ಪಕ್ಷಗಳು ಮಾಡುವುದಿಲ್ಲ. ಅಷ್ಟೇ ಅಲ್ಲ, ಅಂತ ಮೌಢ್ಯ ಮೌಲ್ಯ ಪದ್ಧತಿ ಭಾಗವಾಗಿಯೇ ಈ ಪಕ್ಷ ಮತ್ತು ವ್ಯಕ್ತಿಗಳು ಬೆಳೆಯುತ್ತಿದ್ದಾರೆ. ಎಡಪಂಥೀಯ ರಾಜಕಾರಣದ ತನ್ನದೇ ಆದ ಕ್ರಾಂತಿಕಾರಿ ದರ್ಶನವನ್ನು ಹೊಂದಿರುವುದುರಿಂದ ರಾಜಕೀಯವೆನ್ನುವುದು ಕೇವಲ ‘ಓಟಿನ ಮಹಿಮೆ’ಯಾಗಿಲ್ಲ. ಇಷ್ಟಾದರೂ ಎಡಪಕ್ಷಗಳಲ್ಲಿರುವ ವ್ಯಕ್ತಿಗಳೆಲ್ಲ ಸಾಂಪ್ರದಾಯಿಕ ನೆಲೆಯನ್ನು ಮೀರಿ ಬೆಳೆದಿದ್ದಾರೆಂದು ಹೇಳಿದರೆ ತಪ್ಪಾದೀತು. ಇಲ್ಲಿಯೂ ಗೃಹಕೃತ್ಯಕ್ಕೆ ಜಡ ಸಾಂಪ್ರದಾಯಿಕತೆ, ರಾಜಕೀಯಕ್ಕೆ ಚಲನಶೀಲತೆಗಳನ್ನು ಆಯ್ದುಕೊಂಡ ದ್ವಿಪಾತ್ರಾಭಿನಯಿಗಳು ಸಿಗುತ್ತಾರೆ. ಆದರೆ ಒಟ್ಟಾರೆಯಾಗಿ ಎಡಪಕ್ಷಗಳು ಜಡ ಸಾಂಪ್ರದಾಯಿಕ ಆಲೋಚನೆಗಳನ್ನು ಮೀರಿ ಬೆಳೆಯುವ ರಾಜಕೀಯ ನೆಲೆ ನಿಲುವುಗಳನ್ನು ಪಡೆದಿದೆ. ಸಮಾಜ, ಸಂಸ್ಕೃತಿ ಮತ್ತು ರಾಜಕಾರಣಗಳ ಅಂತರ್‌ಸಂಬಂಧವನ್ನು ಗ್ರಹಿಸುವ ಪ್ರಕ್ರಿಯೆಗೆ ಮಾತ್ರ ಇಂಥ ‘ಮೀರುವ ಕ್ರಿಯೆ’ ಸಾಧ್ಯವಾಗುತ್ತದೆ.

ಅನಕ್ಷರತೆ ಮತ್ತು ಅಸಮಾನತೆಗಳು ದಟ್ಟವಾಗಿರುವ ದೇಶದಲ್ಲಿ ಮೌಢ್ಯವು ಮತದಾನದ ಮುಖ್ಯ ಸೆಳೆತವಾಗಿ ಕಾಣಿಸುವುದರಿಂದ ಮತ್ತು ಈ ಸಾಮಾನ್ಯೀಕೃತ ಮೌಢ್ಯದಿಂದ ನಮ್ಮ ಬಹುಪಾಲು ರಾಜಕಾರಣಿಗಳು ಮೇಲೆದ್ದು ಬಂದಿಲ್ಲವಾದ್ದರಿಂದ ವಿಪ್ಲವ ಸದೃಶಚಲನೆ ಅಸಾಧ್ಯವೆನ್ನುವಂಥ ವಾತಾವರಣ ನಿರ್ಮಾಣಗೊಳ್ಳುತ್ತಿದೆ, ಯಥಾಸ್ಥಿತಿವಾದಿ ರಾಜಕಾರಣಕ್ಕೆ ಇಂಥ ವಾತಾವರಣವೇ ಬೇಕು. ಬಲಪಂಥೀಯ ಹಾಗೂ ಮಧ್ಯಪಂಥೀಯ ರಾಜಕಾರಣಗಳು ವ್ಯಕ್ತಿಗತವಾಗಿ ಹಾಗೂ ಕೆಲವೊಮ್ಮೆ ಪಕ್ಷ ಮಟ್ಟದಲ್ಲಿ ವಾದವಿವಾದಗಳಿಗೆ ಇಳಿಯುವುದು ಇಲ್ಲಿ ಸಾಮಾನ್ಯ ಸಂಗತಿಯಾಗಿದೆಯಾದರೂ ಸಾಂಪ್ರದಾಯಿಕ ನೆಲೆಯಲ್ಲಿ ಒಮ್ಮತ ಮೂಡಿಸುವ ಸಾಧ್ಯತೆಯೇ ಹೆಚ್ಚು. ಮಾನಸಿಕವಾಗಿ ಮತ್ತು ಮತದಾನದ ಪರಿಣಾಮಗಳಿಗಾಗಿ ಸಾಂಪ್ರದಾಯಿಕತೆಯ ಸೆರೆಯಲ್ಲೇ ಪಕ್ಷಭೇದ ಮರೆತು ಇವರೆಲ್ಲ ಒಂದಾಗಿರುತ್ತಾರೆ.

ಈಗ ನೇರ ಸಂಗತಿಗಳನ್ನು ಪ್ರಸ್ತಾಪಿಸೋಣ. ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದಾಗ, ಅವರು ಶುದ್ಧ ಹಿಂದೂವಲ್ಲವೆಂಬ ಕಾರಣ ಹೇಳಿ, ಪುರಿ ಜಗನ್ನಾಥ ದೇವಾಲಯ ಪ್ರವೇಶಿಸಲು ಅವಕಾಶ ನೀಡಲಿಲ್ಲ. ಪ್ರಧಾನಮಂತ್ರಿಗಳಿಗೆ ಪ್ರವೇಶ ನಿರಾಕರಣೆ ಮಾಡಿದ ಸಂದರ್ಭವನ್ನು ಬಳಸಿಕೊಂಡು ಒಂದು ಸಾಮಾಜಿಕ ಅನಿಷ್ಟ ಬಗ್ಗೆ ನಮ್ಮ ರಾಜಕಾರಣಿಗಳು ಚರ್ಚಿಸಬಹುದಿತ್ತು. ಯಾರೂ ಹಾಗೆ ಮಾಡಲಿಲ್ಲ. ಸ್ವತಃ ಇಂದಿರಾಗಾಂಧಿಯವರು ‘ಅವಮಾನ’ ವನ್ನು ‘ವರದಾನ’ವೆಂಬಂತೆ ಒಪ್ಪಿಕೊಂಡು ಸುಮ್ಮನಾದರು. ಇದೇ ಪುರಿಯ ಜಗದ್ಗುರುಗಳು ಅಸ್ಪೃಶ್ಯತೆ ಪರವಾಗಿ ಹೇಳಿಕೆ ಕೊಟ್ಟರು. ಸತಿ ಪದ್ಧತಿಯನ್ನು ಸಮರ್ಥಿಸಿದರು. ಈ ಬಗ್ಗೆ ಬೇರೆ ಕ್ಷೇತ್ರದ ಜನ ಚರ್ಚೆ ಮಾಡಿದ್ದಾರೆ. ಈ ಜನವಿರೋಧಿ ನಿಲುವನ್ನು ಟೀಕಿಸಿದ್ದಾರೆ. ಆದರೆ ಇಂಥ ಜನವಿರೋಧಿ ನಿಲುವುಳ್ಳ ‘ಧಾರ್ಮಿಕ ಕ್ಷೇತ್ರ’ಕ್ಕೆ ಕಾಲಿಡುವುದಿಲ್ಲವೆಂದು ಹೇಳುವ ಧೈರ್ಯ ನಿಲುವನ್ನು ಎಷ್ಟು ಜನ ರಾಜಕಾರಣಿಗಳು ತೆಗೆದುಕೊಳ್ಳಬಲ್ಲರು? ನಿಲುವು ತೆಗೆದುಕೊಳ್ಳುವುದಿರಲಿ, ಅಸ್ಪೃಶ್ಯತೆ ಮತ್ತು ಸತೀ ಪದ್ಧತಿಗಳನ್ನು ವಿರೋಧಿಸುವ ರಾಜಕಾರಣಿಗಳು ಪುರಿ ಜಗದ್ಗುರುಗಳನ್ನು ಉಲ್ಲೇಖಿಸಿ ವಿರೋಧ ಸೂಚಿಸಲು ಅಳುಕುತ್ತಾರೆ. ಏಕೆಂದರೆ ಮಠಮಾನ್ಯಗಳು ನಮ್ಮ ಜನ ಜೀವನದ ಮೇಲೆ ಪ್ರಬಲ ಹಿಡಿತ ಸಾಧಿಸಿದೆ. ಇಂಥ ಮಠ ಮಾನ್ಯಗಳನ್ನು ಎದುರು ಹಾಕಿಕೊಳ್ಳುವುದು ‘ಜಾಣತನ’ವಲ್ಲವೆಂಬ ಭಾವನೆಯಿಂದ ರಾಜಕಾರಣಿಗಳು ಉಪಾಯವಾಗಿ ವರ್ತಿಸುತ್ತ ವಾಲುತ್ತಾರೆ. ಇದು ‘ಒಪ್ಪಿತ ವಸ್ತುಸ್ಥಿತಿ’. ನಮ್ಮ ರಾಜಕಾರಣವು ಈ ಒಪ್ಪಿತ ವಸ್ತುಸ್ಥಿತಿಯನ್ನು ಬದಲಾಯಿಸುವ ಒಂದು ಪ್ರಕ್ರಿಯೆಯಾದಾಗ ಹೊಸ ಆಲೋಚನೆಗಳು ರೂಪುಗೊಂಡು ಸ್ಥಿತ್ಯಂತರ ಸ್ಥಿತಿಯನ್ನು ಜನಮನಸ್ಸು ತಲುಪುತ್ತದೆ. ಆಗ ಉಂಟಾಗುವ ಮಾನಸಿಕ ಒಳನೋಟದ ಸಾರ್ಥಕ ನೆಲೆ ತಲುಪಲು ನಮ್ಮ ಸಾಮಾಜಿಕ-ರಾಜಕೀಯ ಪರಿಸರ ಒಂದು ಒತ್ತಾಸೆಯಾಗಿ ಕೆಲಸ ಮಾಡ ಬೇಕಾಗುತ್ತದೆ. ಇದಕ್ಕೆ ಬದಲು ನಮ್ಮ ಪ್ರಮುಖ ರಾಜಕಾರಣಿಗಳು ಸಾಮಾಜಿಕ ಅನಿಷ್ಟಗಳ ಬಗ್ಗೆ ದಿವ್ಯ ಮೌನವಹಿಸಿ ಬಿಡುತ್ತಾರೆ. ಕೆಲವು ವರ್ಷಗಳ ಹಿಂದೆ ರೂಪಾ ಕನ್ವರ್ ಎಂಬ ಹೆಂಗಸು ಸತಿಸಹಗಮನ ಮಾಡಿದ ಬಗ್ಗೆ ಪ್ರತಿಕ್ರಿಯಿಸಲು ನಮ್ಮ ‘ರಾಷ್ಟ್ರ ನಾಯಕರು’ ಮುಂದಾಗಲೇ ಇಲ್ಲ. ವಿ. ಪಿ. ಸಿಂಗ್, ರಾಮಕೃಷ್ಣ ಹೆಗಡೆ- ಇಂಥ ವಿರೋಧಿ ಧುರೀಣರಿಗೂ ವಿರೋಧ ಮರೆತೇಹೋಗಿತ್ತು. ತುಂಬಾ ತಡವಾಗಿ ಅಂದಿನ ಪ್ರಧಾನಿ ರಾಜೀವ ಗಾಂಧಿಯವರು ಈ ಸತಿ ಆಚರಣೆಯನ್ನು ವಿರೋಧಿಸಿದ ಹೇಳಿಕೆ ಕೊಟ್ಟರು. ಈ ಮೌನ ಮತ್ತು ವಿಳಂಬಗಳ ಹಿಂದೆ ಕೆಲಸ ಮಾಡುವ ಸಾಂಪ್ರದಾಯಿಕ ಸೆಳೆತದ ಶಕ್ತಿಯನ್ನು ಅರ್ಥಮಾಡಿಕೊಳ್ಳಬೇಕು. ಸಾಂಪ್ರದಾಯಿಕತೆಯು ನಮ್ಮ ರಾಜಕಾರಣವನ್ನು ನಿಯಂತ್ರಿಸುತ್ತಿರುವ ವಿಧಾನಕ್ಕೆ ಇದೊಂದು ಉದಾಹರಣೆ ಮಾತ್ರ.

ಈಗ ನಮ್ಮ ನಾಯಕರುಗಳನ್ನು ನೋಡಿ, ಅವರು ಸಾಧ್ಯವಾದಾಗಲೆಲ್ಲ ಮಠಮಾನ್ಯಗಳಿಗೆ ಭೇಟಿ ಕೊಡುತ್ತಾರೆ. ಜಗದ್ಗುರುಗಳ ಆಶೀರ್ವಾದ ಪಡೆಯುತ್ತಾರೆ : ದೇವಸ್ಥಾನಗಳಿಗೆ ಹೋಗಿ ಶ್ರೀಮಂತ ಪೂಜೆ ಸಲ್ಲಿಸುತ್ತಾರೆ. ದೇವರ ‘ಅನುಗ್ರಹ’ ಬೇಡುತ್ತಾರೆ. ಈ ಮೂಲಕ ಜನತೆಯ ದುರಾಗ್ರಹಕ್ಕೆ ತುತ್ತಾಗುವುದರಿಂದ ತಪ್ಪಿಸಿಕೊಂಡೆವೆಂದು ನಿಟ್ಟುಸಿರು ಬಿಡುತ್ತಾರೆ. ಆದರೆ ಜನತೆಯ ಮುಗ್ಧ ಮೌಢ್ಯಕ್ಕೆ ಮನ್ನಣೆ ಕೊಟ್ಟು ಮತದಾನದ ಮೇಲೆ ಪರಿಣಾಮವುಂಟು ಮಾಡುವುದೊಂದೇ ಇಂಥ ಚಟುವಟಿಕೆಗೆ ಕಾರಣವಾಗಿರುವುದಿಲ್ಲ. ಇದರೊಂದಿಗೆ ಸ್ವಂತ ಸಾಂಪ್ರದಾಯಿಕತೆ ಮತ್ತು ರಾಜಕೀಯ ಅಭದ್ರತೆಗಳೂ ಪ್ರೇರಕವಾಗಿರುತ್ತದೆ.

ರಾಜಕಾರಣದಲ್ಲಿ ಸಾಂಪ್ರದಾಯಿಕತೆ ಇಷ್ಟು ದೃಢವಾಗಿರುವುದರಿಂದಲೇ ಈ ದೇಶದಲ್ಲಿ ಸಮೂಹ ಚಳುವಳಿಗಳು ಪ್ರಬಲವಾಗಿಲ್ಲ. ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಪೂರ್ವ ಚಳವಳಿಯು ಸಮೂಹವನ್ನು ದೊಡ್ಡ ಪ್ರಮಾಣದಲ್ಲಿ ಒಳಗೊಳ್ಳುವುದಕ್ಕೆ ಬ್ರಿಟಿಷ್ ಅಧಿಕಾರದ ವಿರೋಧಿ ಆಶಯವೇ ಪ್ರಧಾನವಾಗಿದ್ದದ್ದು ಕಾರಣವೆನ್ನಬಹುದು. ಸಾಮಾಜಿಕ ಸುಧಾರಣೆಯನ್ನು ಗಾಂಧೀಜಿಯವರು ತಮ್ಮದೇ ಮಾರ್ಗದಲ್ಲಿ ಕೈಗೆತ್ತಿಕೊಂಡರಾದರೂ ‘ಅಸಹಕಾರ ಚಳವಳಿ’ಯು ಪ್ರಧಾನವಾಗಿ ಬ್ರಿಟಿಷರ ವಿರುದ್ಧವೇ ಆಗಿತ್ತು. ಇಲ್ಲಿ ದೇಶಪ್ರೇಮದ ಭಾವನಾತ್ಮಕತೆ ಕೆಲಸ ಮಾಡಿತು. ಈ ಮೂಲಕ ಜನಸಮೂಹವನ್ನು ಕ್ರಿಯೆಗೆ ಇಳಿಸಿತು. ಜಯಪ್ರಕಾಶ ನಾರಾಯಣರ ‘ಸಮಗ್ರಕಾಂತಿ’ಯ ಕರೆಯಲ್ಲಿ ಯಶಸ್ವಿಯಾಗಿದದ್ದು ಇಂದಿರಾ ಆಡಳಿತದ ವಿರೋಧ ಮಾತ್ರ- ಎನ್ನುವುದನ್ನು ಇಲ್ಲಿ ಉಲ್ಲೇಖಿಸಬಹುದು. ಅಲ್ಲಿ ಬ್ರಿಟಿಷ್ ವಿರೋಧ : ಇಲ್ಲಿ ಇಂದಿರಾ ವಿರೋಧ (ಕಾಂಗೈ ವಿರೋಧ). ಜಯಪ್ರಕಾಶನಾರಾಯಣರು ಯುವಕರಿಗೆ ‘ನಿಮ್ಮ ಜನಿವಾರಗಳನ್ನು ಕಿತ್ತು, ಹಾಕಿ’ ಎಂದಾಗ ‘ಸಮಗ್ರ ಕ್ರಾಂತಿಗೆ ಸಜ್ಜಾಗಿ ಬಂದಿದ್ದ’ ಅನೇಕ ಯುವಕರು ಪ್ರತಿಭಟಿಸಿದರು. ಇಲ್ಲಿ ಜನಿವಾರವೊಂದೇ ಅಲ್ಲ ಶಿವದಾರದ ಸಂದರ್ಭದಲ್ಲಿ ಇದೇ ಪ್ರತಿಕ್ರಿಯೆ ಬರಬಹುದು. ಒಟ್ಟು ಜಾತಿ ಪದ್ಧತಿಯ ವಿರೋಧಕ್ಕೂ ಆಳದ ಗತಿ ಇದೇ ಆಗಬಹುದು.

ಇದರಿಂದ ಅರ್ಥವಾಗುವುದಿಷ್ಟು : ಆಡಳಿತ-ಅಧಿಕಾರಿಗಳಿಗೆ ಸಂಬಂಧಿಸಿದಂತೆ ಸ್ಥೂಲ ನೆಲೆ-ನಿಲುವುಗಳು ಸಮೂಹ ಚಳುವಳಿಯನ್ನು ಸಂಘಟಿಸಿದಷ್ಟು ಸುಲಭವಾಗಿ, ಸಂಪ್ರದಾಯ ವಿರೋಧಿ ಆಶಯದ ರಾಜಕೀಯ ಚಳುವಳಿ ಸಂಘಟಿಸುವುದು ಸಾಧ್ಯವಿಲ್ಲ. ಇದಕ್ಕೆ ಸಾಕಷ್ಟು ಶ್ರಮ, ವಿವಿಧ ಕ್ಷೇತ್ರಗಳನ್ನು ಒಗ್ಗೂಡಿಸಿ ಹೊಮ್ಮುವ ಚಿಂತನಶೀಲತೆ ಮತ್ತು ಅದಕ್ಕನುಗುಣವಾಗಿ ಯೋಜನಾಬದ್ಧ ಕ್ರಿಯಾಶೀಲತೆ ಮುಖ್ಯ.

ಚುನಾವಣೆ ಮತ್ತು ಬಜೆಟ್‌ಗಳ ಆಚರಣೆಯನ್ನು ಪೂರೈಸುವುದೊಂದೇ ಪ್ರಜಾಪ್ರಭುತ್ವದ ಪ್ರಮುಖ ಗುರಿಯಾಗಬಾರದು. ಸಮಾನತೆಯ ಸಮಾಜವನ್ನು ಕಟ್ಟುವ ಕ್ರಿಯೆಯ ಭಾಗವಾಗಿ ಬಜೆಟ್ ಮತ್ತು ಚುನಾವಣೆಗಳು ಬರಬೇಕು. ಇವಕ್ಕೆ ಸಾಂಪ್ರದಾಯಿಕತೆಯನ್ನು ಮೀರಿದ ರಾಜಕೀಯ ದರ್ಶನದ ಆಧಾರವಿರಬೇಕು. ಆಗ ಮಾತ್ರ ಮತೀಯ ಮೂಲಭೂತವಾದಿಗಳನ್ನು ಮೆಟ್ಟಿ ಹೊಸ ಹೆಜ್ಜೆ ಹಾಕಬಹುದು. ಮೂಲಭೂತವಾದಿಗಳು ಹಿಂದೂಗಳಿರಲಿ, ಮುಸ್ಲಿಮರಿರಲಿ, ಸಿಖ್ ಜನಾಂಗದವರಿರಲಿ, ಕ್ರೈಸ್ತರಾಗಲಿ-ಇವರ ಸಾಂಪ್ರದಾಯಿಕ ಹಿಡಿತದಿಂದ ಹೊರಬರುವ ಹೊಸ ರಾಜಕೀಯ ನನಗೆ ಬೇಕು. ಈ ದಿಕ್ಕಿನಲ್ಲಿ ಕಾರ್ಯಾಚರಣೆಯ ವಿಧಿ ವಿಧಾನಗಳ ಸೂಕ್ಷ್ಮಾವಲೋಕನ, ನಿರ್ಧಾರ ಮತ್ತು ಕ್ರಿಯೆಯಿಂದ ಜಡ ಸಾಂಪ್ರದಾಯಿಕತೆಯನ್ನು ಮೀರಿದ ರಾಜಕಾರಣದ ವ್ಯಾಪ್ತಿಯನ್ನು ವಿಸ್ತರಿಸಬೇಕಾಗಿದೆ. ರಾಜಕೀಯ ಸಂದರ್ಭ-ವಿಮರ್ಶೆ, ಸ್ವ ವಿಮರ್ಶೆಗಳನ್ನು ಮಾಡಿಕೊಳ್ಳಲೇಬೇಕಾದ ಕಾಲಘಟ್ಟದಲ್ಲಿದೆ.

ಕೊನೆಯಲ್ಲಿ ಒಂದು ಮಾತು : ಸಾಮಾನ್ಯ ಜನರಲ್ಲಿ ಸಾಂಪ್ರದಾಯಿಕತೆಯು ಒಂದು ನಂಬಿಕೆಯಾಗಿರುವುದು ಬೇರೆ. ರಾಜಕಾರಣಿಗಳ ಕೈಯಲ್ಲಿ ಓಟಿನ ಅಸ್ತ್ರವಾಗುವುದು ಬೇರೆ. ಮೊದಲನೆಯದು ನಮ್ಮ ಸಂದರ್ಭದ ಒಂದು ವಾಸ್ತವ. ಎರಡನೆಯದು ಅಪಾಯಕಾರಿ : ವಂಚನೆ ಮತ್ತು ಆತ್ಮವಂಚನೆ.
*****
೨೬-೨-೧೯೯೫

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುತ್ತು ಚೆಲ್ಲಾಪಿಲ್ಲಿ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೨೧

ಸಣ್ಣ ಕತೆ

 • ಒಲವೆ ನಮ್ಮ ಬದುಕು

  "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

 • ನಿರೀಕ್ಷೆ

  ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

 • ಪ್ರೇಮನಗರಿಯಲ್ಲಿ ಮದುವೆ

  ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

 • ತ್ರಿಪಾದ

  ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

 • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

  ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

cheap jordans|wholesale air max|wholesale jordans|wholesale jewelry|wholesale jerseys