ಕೀಟ್ಸ್ ಎಂಬ ಕವಿ

ಕೀಟ್ಸ್ ಎಂಬ ಕವಿ

ಇಪತ್ತೈದರ ಹರೆಯದ ಒಬ್ಬ ಕವಿ. ಆತ ಮೂರು ಕವನ ಸಂಕಲನಗಳನ್ನು ಪ್ರಕಟಿಸಿದ್ದಾನೆ. ಮೊದಲ ಸಂಕಲನಕ್ಕೆ ವಿಮರ್ಶಕರದು ಸಾಮಾನ್ಯವಾದ ಉತ್ತರ. ಎರಡನೆಯ ಸಂಕಲನವನ್ನು ಅವರು ಹರಿದು ಚಿಂದಿ ಚಿಂದಿ ಮಾಡುತ್ತಾರೆ. ಮೂರನೆಯದರ ಗತಿ ಏನಾಯಿತೆಂದು ನೋಡುವುದಕ್ಕೆ ಅವನು ಬದುಕಿ ಉಳಿದಿರುವುದಿಲ್ಲ. ಜಾನ್ ಕೀಟ್ಸ್‌ನ (೧೭೯೫-೧೮೨೧) ಈ ಚಿಕ್ಕ ಜೀವನವನ್ನು ಅವಲೋಕಿಸಿದರೆ ಅದು ಹೇಗೆ ದುರಂತದತ್ತ ಧಾವಿಸುತ್ತಿತ್ತು ಎನ್ನುವುದು ಗೊತ್ತಾಗುತ್ತದೆ. ಕುಟುಂಬ ಜೀವನವನ್ನು ತುಂಬಾ ಪ್ರೀತಿಸುತ್ತಿದ್ದ ಆತ ಶಾಲಾವಿದ್ಯಾರ್ಥಿಯಾಗಿದ್ದಾಗಲೇ ತಂದೆ ತಾಯಂದಿರನ್ನು ಕಳಕೊಳ್ಳುತ್ತಾನೆ. ಮುಂದೆ ವೈದ್ಯರೊಬ್ಬರ ಬಳಿ ಶಸ್ತ್ರಚಿಕಿತ್ಸೆ ಕಲಿತರೂ, ಅದರಲ್ಲಿ ಅವನಿಗೆ ಆಸಕ್ತಿಯಿರುವುದಿಲ್ಲ. ತಾನೊಬ್ಬ ಕವಿಯಾಗಬೇಕು ಎನ್ನುವುದೇ ಶಾಲಾದಿನಗಳಿಂದಲೂ ಅವನ ಹೆಬ್ಬಯಕೆಯಾಗಿರುತ್ತದೆ. ತನ್ನ ಸಹಪಾಠಿಯೊಂದಿಗೆ ಆತನ ತಂದೆ ಹಾಗೂ ತನ್ನ ಹಳೆ ಹೆಡ್ಮಾಸ್ಟರ್ ನೀಡಿದ ಹೋಮರ್ ಕಾವ್ಯದ ಭಾಷಾಂತರವನ್ನು ಇಬ್ಬರೂ ಹುಡುಗರೂ ರಾತ್ರಿಯಿಡೀ ಓದಿರುತ್ತಾರೆ. ‘ಚಾಪ್‌ಮಾನ್‌ನ ಹೋಮರ್ ಓದಿ’ ಎಂಬ ಸೊಗಸಾದ ಸುನೀತವೊಂದನ್ನು ಕೀಟ್ಸ್ ನಂತರ ಬರೆಯುತ್ತಾನೆ. ಈ ಓದಿನ ಪರಿಣಾಮವಾಗಿ ಕೀಟ್ಸ್‌ನ ಮುಂದೊಂದು ಸುಂದರವಾದ ಜಗತ್ತು ತೆರೆದುಕೊಳ್ಳುತ್ತದೆ; ಅದನ್ನು ಸುಂದರವಾದ ಜಗತ್ತು ಎನ್ನುವುದಕ್ಕಿಂತಲೂ ಜಗತ್ತಿನ ಸೌಂದರ್ಯವನ್ನು ನೋಡುವ ಬಗೆ ಎನ್ನುವುದೇ ಒಳ್ಳೆಯದು. ಯಾಕೆಂದರೆ, ಕೀಟ್ಸ್ ಕಲಿತುದು ಕಾಣುವ, ಕೇಳುವ, ಆಸ್ವಾದಿಸುವ ರೀತಿಯನ್ನು.

ತನ್ನ ಇಪ್ತತ್ತಮೂರನೆಯ ವಯಸ್ಸಿನಲ್ಲೇ ಈ ಕವಿ ತನ್ನ ತಮ್ಮ ಟಾಮ್ ಕ್ಷಯದಿಂದ ಸಾವನ್ನಪ್ಪುವುದನ್ನು ನೋಡಬೇಕಾಗುತ್ತದೆ. ನಂತರ ಇನ್ನೊಬ್ಬ ತಮ್ಮ ಜಾರ್ಜ್ ಪತ್ನೀಸಮೇತನಾಗಿ ಅಮೇರಿಕೆಗೆ ವಲಸೆ ಹೋಗುತ್ತಾನೆ. ಇನ್ನುಳಿದ ತಂಗಿ ಫ್ರಾನ್ಸಿಸ್ ಕೂಡಾ ಕೌಟುಂಬಿಕ ಕಾರಣಗಳಿಂದಾಗಿ ದೂರ ಇರುತ್ತಾಳೆ. ಇಪ್ಪತ್ತನಾಲ್ಕನೆಯ ವಯಸ್ಸಿನಲ್ಲಿ ಕೀಟ್ಸ್ ಫ್ಯಾನಿ ಬ್ರೌನ್ ಎಂಬ ತರುಣಿಯ ಪ್ರೇಮಪಾಶದಲ್ಲಿ ಬೀಳುತ್ತಾನೆ. ಅದೇ ಸಮಯಕ್ಕೆ ಅವನಿಗೆ ಕ್ಷಯ ಅಂಟಿಕೊಳ್ಳುತ್ತದೆ. ಇಂಗ್ಲೆಂಡನ್ನು ಬಹಳವಾಗಿ ಪ್ರೀತಿಸುತ್ತಿದ್ದ ಈ ಕವಿ ಅಲ್ಲಿನ ಶೀತ ಹವೆಯಿಂದ ತಪ್ಪಿಸಿಕೊಂಡು ಬೆಚ್ಚಗಿನ ಹವೆಯಲ್ಲಿರುವುದಕ್ಕೆಂದು ಇಟೆಲಿಗೆ ಪ್ರಯಾಣಿಸುತ್ತಾನೆ. ಹೀಗೆ ಬಿಡಾರದಿಂದ ಬಿಡಾರಕ್ಕೆ, ವಸತಿಗೃಹದಿಂದ ವಸತಿಗೃಹಕ್ಕೆ ಸಾಗುತ್ತ, ತನ್ನ ಇಪ್ತತ್ತೈದನೆಯ ವಯಸ್ಸಿನಲ್ಲಿ ಕೀಟ್ಸ್ ರೋಮಿನಲ್ಲಿ ಸಾಯುತ್ತಾನೆ. ಎಳವೆಯಲ್ಲಿ ವಿದೇಶದಲ್ಲಿ ಸತ್ತ ಇಂಗ್ಲಿಷ್ ಕವಿಗಳದೊಂದು ಸರಣಿಯೇ ಇದೆ. ಕೀಟ್ಸ್‌ನ ಸಮಕಾಲೀನರಾದ ಶೆಲ್ಲಿ ಮತ್ತು ಬೈರನ್ ಇಬ್ಬರೂ ಕೀಟ್ಸ್‌ನ ನಂತರ ಒಂದೆರಡು ವರ್ಷಗಳಲ್ಲಿ ಹೀಗೆ ಸತ್ತವರೇ.

ಹೆಸರಾಂತ ಕವಿಯಾಗಬೇಕೆಂಬ ಆಸೆಯಿದ್ದ ಕೀಟ್ಸ್‌ನ ಕವನ ಸಂಕಲನಗಳನ್ನು ಬಲಪಂಥೀಯ ಪತ್ರಿಕೆಗಳು ಸಾಹಿತ್ಯಿಕವಾಗಿಯೂ ವೈಯಕ್ತಿಕವಾಗಿಯೂ ಬಲವಾಗಿ ಟೀಕಿಸಿದುವು. ಕೀಟ್ಸ್ ಎಡ ಬಲವೆಂಬ ಯಾವ ರಾಜಕೀಯ ಪಂಥಕ್ಕೂ ಸೇರಿದ್ದವನಲ್ಲ; ಆದರೆ ಅರಸೊತ್ತಿಗೆಯ ವಿರೋಧಿಯಾಗಿದ್ದ ಕವಿ ಲೀ ಹಂಟ್ನ ಸ್ನೇಹದಲ್ಲಿದ್ದ; ಹಾಗೂ ಸಾಮಾಜಿಕವಾಗಿ ಕೆಳ ಮಧ್ಯಮ ವರ್ಗದಿಂದ ಬಂದವನೂ ಕೂಡ. ಪತ್ರಿಕೆಗಳಿಗೆ ಈ ಹೊಸ ಕವಿಯನ್ನು ತೆಗಳಲು ಇಷ್ಟೇ ಸಾಕಿದ್ದುವು! ಕೀಟ್ಸ್ ಈ ವೈಯಕ್ತಿಕ ಟೀಕೆಗಳನ್ನು ಕಂಡು ಬೇಸತ್ತರೂ, ‘ಇದು ಬರೀ ತಾತ್ಕಾಲಿಕವಾದ್ದು-ಇಂಗ್ಲಿಷ್ ಕವಿಗಳ ಸಾಲಿನಲ್ಲಿ ತನ್ನನ್ನು ಗುರುತಿಸುತ್ತಾರೆ ಎಂದುಕೊಂಡಿದ್ದೇನೆ’ ಎಂಬ ಆಸೆಯನ್ನು ಜಾರ್ಜಿಗೆ ಪತ್ರವೊಂದರಲ್ಲಿ ವ್ಯಕ್ತಪಡಿಸಿದ್ದ; ಆದರೆ ತನ್ನ ಸಾವು ಖಚಿತ ಎನಿಸಿದಾಗ, ಇದೇ ಕವಿ ‘ನೀರಿನಲ್ಲಿ ಹೆಸರು ಬರೆದವನೊಬ್ಬ ಇಲ್ಲಿ ಮಲಗಿದ್ದಾನೆ’ ಎಂದು ತನ್ನ ಮರಣಶಾಸನವನ್ನು ತಾನೇ ಬರೆಸುತ್ತಾನೆ. ರೋಮಿನ ಅವನ ಗೋರಿಯಲ್ಲಿರುವುದು ಇದೇ ವಾಕ್ಯ! ಒಂದು ವೇಳೆ ತಾನು ರೋಗಮುಕ್ತನಾದರೂ, ಫ್ಯಾನಿಯ ಕುರಿತಾದ ಪ್ರೇಮದ ಉತ್ಕಟತೆ ತನ್ನನ್ನು ಸಾಯಿಸದೆ ಇರದು ಎಂದು ಆತ ತಿಳಿದಿದ್ದ. ಇದೆಲ್ಲ ಸಾಯುವ ಕಾಲಕ್ಕೆ ಈ ಕವಿ ಎಂಥ ಮನಃಸ್ಥಿತಿಯಲ್ಲಿದ್ದ ಎನ್ನುವುದನ್ನು ತೋರಿಸುತ್ತದೆ. ಆದರೆ ಇಂದು ಇಂಗ್ಲಿಷ್ ಸಾಹಿತ್ಯವನ್ನು ಅಭ್ಯಾಸಮಾಡಿದವರಿಗೆಲ್ಲ ಕೀಟ್ಸ್‌ನ ಹೆಸರು ಪರಿಚಿತ. ಆ ಕಾಲದ ಕವಿಗಳ ಕುರಿತಾಗಿ ನಂತರ ಬಂದ ಪುಸ್ತಕ ಮತ್ತು ಲೇಖನಗಳನ್ನು ನೋಡಿದರೆ ಕೀಟ್ಸನೇ ಮುಂದೆ ನಿಲ್ಲುತ್ತಾನೆ. ಬಹುಶಃ ನೀರಿನಲ್ಲಿ ಹೆಸರು ಬರೆಯುವುದೇ ನಿಜವಾದ ಪ್ರಸಿದ್ಧಿಯೆಂದು ಕಾಣುತ್ತದೆ. ಯಾಕೆಂದರೆ ಜೀವಿತ ಕಾಲದಲ್ಲಿ ಯಾವ ಯಾವದೋ ಬಾಹ್ಯ ಕಾರಣಗಳಿಗೋಸ್ಕರ ಬಂದ ಪಸಿದ್ಧಿ ಹೆಚ್ಚು ಕಾಲ ಉಳಿಯುವುದಿಲ್ಲ. ಕೀಟ್ಸ್ ಈಗ ನಮ್ಮ ಮನಸ್ಸಿನಲ್ಲಿರುವುದು ಅವನ ಕವಿತೆಗಳಿಗೋಸ್ಕರವಲ್ಲದೆ ಬೇರೆ ಯಾವ ಕಾರಣದಿಂದಲೂ ಅಲ್ಲ. ಆದರೆ ಕೀಟ್ಸ್‌ಗೆ ತನ್ನ ಕವಿತೆಗಳ ಕುರಿತಾಗಿ ಕೀಳರಿಮೆ ಮತ್ತು ಪ್ರೇಮದ ಬಗ್ಗೆ ಹತಾಶೆ ಇದ್ದಿತೇ? ತಾನು ಪರಿಶ್ರಮದಿಂದ ಬರೆದ ‘ಎಂಡೀಮಿಯನ್’ನಂಥ ನೀಳ್ಗವಿತೆಗಳ ಕುರಿತು ಅವನಿಗೆ ಅತೃಪ್ತಿಯಿತ್ತು ನಿಜ; ಆದರೆ ತನ್ನ ಒಟ್ಟಾರೆ ಕಾವ್ಯಧರ್ಮದ ಬಗ್ಗೆ ಅಲ್ಲ. ಅವನು ವಿಷಣ್ಣನಾಗಿದ್ದುದು ಮಹತ್ವದ ಕವಿತೆಗಳನ್ನು ಬರೆಯುವ ಮುನ್ನವೇ ಸಾವಿಗೆ ಶರಣಾಗುತ್ತಿದ್ದೇನೆ ಎಂದು. ಅದೇ ರೀತಿ, ಪ್ರೇಮದ ಉತ್ಕಟತೆಯೂ ಇನ್ನೊಂದು ತರದ ಸಾವು ಎನ್ನುವುದು ಅವನ ನಂಬಿಕೆಯಾಗಿತ್ತು.

ಇಷ್ಟೂ ವರ್ಷಗಳ ಸುತ್ತಾಟದಲ್ಲಿ ನನ್ನ ಹತ್ತಿರ ಈಗಲೂ ಇರುವ ಕೆಲವು ಪುಸ್ತಕಗಳಲ್ಲಿ ಕೀಟ್ಸ್‌ನ ಕವಿತಾಸಂಗ್ರಹವೂ ಒಂದು. ಕಾಲೇಜಿನಲ್ಲಿದ್ದಾಗ ಕನ್ನಡ ಪ್ರಬಂಧ ಸ್ಫರ್ಧೆಯಲ್ಲಿ ಬಹುಮಾನವಾಗಿ ಸಿಕ್ಕಿದ ಪುಸ್ತಕ ಇದು. ಬಹುಶಃ ನನ್ನ ಇಂಗ್ಲಿಷ್ ಓದಿಗೆ ಅನುಕೂಲವಾಗಲಿ ಎಂದು ಬಹುಮಾನ ಪುಸ್ತಕಗಳ ಆಯ್ಕೆಮಾಡಿದವರು ಇದನ್ನು ನನಗೆ ಕೊಟ್ಟಿರಲೂ ಸಾಕು. ನನಗಂತೂ ಈ ಪುಸ್ತಕ ದೊರೆತದ್ದು ಅನುಕೂಲವೇ ಆಯಿತು. ಯಾಕೆಂದರೆ ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಯಾಗಿದ್ದ ನನಗೆ ಕೀಟ್ಸ್‌ನ ಕೆಲವು ಕವಿತೆಗಳು ಪಠ್ಯವಾಗಿದ್ದುವು. ಹಾಗಿರುತ್ತ ಒಂದೇ ಪುಸ್ತಕದಲ್ಲಿ ಇಡಿಯಾಗಿ ಈ ಕವಿಯ ಕವಿತೆಗಳು ದೊರೆತರೆ ಎಷ್ಟು ಸಂತೋಷವಾಗಬೇಡ! ಅಲ್ಲದೆ ನನ್ನ ಪ್ರೀತಿಯ ಇಂಗ್ಲಿಷ್ ಪ್ರೊಫೆಸರಾದ ಮಧುಕರ ರಾವ್‌ಗೆ ಕೀಟ್ಸ್ ತುಂಬಾ ಇಷ್ಟದ ಕವಿ. ಅವರು ಪಾಠ ಮಾಡುತ್ತಿರುವಾಗ ಕೀಟ್ಸ್‌ನ ಪಸ್ತಾಪ ಮಾಡದೆ ಇರುವುದು ಅಪರೂಪವೇ. ಕೀಟ್ಸ್‌ನ ಪಸಿದ್ಧ ಸುನೀತಗಳಿಂದಲೂ ಪ್ರಗಾಥಗಳಿಂದಲೂ ಕೆಲವು ಸಾಲುಗಳನ್ನು ಉದ್ಧರಿಸಿ ಹೇಳುತ್ತಿದ್ದರು. ಇಂಗ್ಲಿಷ್ ವಿಮರ್ಶಕ ಮಿಡ್ಲ್‌ಟನ್ ಮರ್ರಿ ಹೇಗೆ ಈ ಯುವ ಕವಿಯನ್ನು ಶೇಕ್ಸ್‌ಪಿಯರಿಗೆ ಹೋಲಿಸಿದ್ದಾನೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಕೀಟ್ಸ್ ಪೂರ್ಣಾಯುಸ್ಸು ಬದುಕಿರುತ್ತಿದ್ದರೆ ಶೇಕ್ಸ್‌ಪಿಯರನನ್ನೂ ಮೀರುತ್ತಿದ್ದ ಎಂಬ ಮಿಡ್ಲ್‍ಟನ್ ಮರ್ರಿಯ ಅಭಿಪ್ರಾಯವನ್ನು ಅವರು ಅನುಮೋದಿಸುತ್ತಿದ್ದರು. ಇದೇ ಕಾರಣಕ್ಕೆ ನಾನು ಕಾಲೇಜಿನಲ್ಲಿದ್ದಾಗಲೇ ಮರ್ರಿಯ ಪುಸ್ತಕವನ್ನು ಲೈಬ್ರರಿಯಿಂದ ಇಸಿದುಕೊಂಡು ಓದಿದೆ. ಸರಿಯಾಗಿ ಅರ್ಥವಾಗಲಿಲ್ಲ. ಈಗ ನೋಡಿದರೆ, ಮರ್ರಿ ಒಬ್ಬ ಆರಾಧಕನಂತೆ ಮಾತಾಡುತ್ತಾನೆ ಎನಿಸುತ್ತದೆ. ಆದರೆ ಅದರಿಂದಾಗಿ ಕೀಟ್ಸನ ಬಗೆಗಿನ ನನ್ನ ಪ್ರೀತಿಯೇನೂ ಕಡಿಮೆಯಾಗಿಲ್ಲ.

ಕೀಟ್ಸ್ ಬರೆದುದು ಹೆಚ್ಚಿಲ್ಲ; ಅದರಲ್ಲೂ ಅರ್ಧದಷ್ಟೂ ಕವಿತೆಗಳನ್ನು ಇಂದು ಓದುವುದು ಕಷ್ಟ. ಹಲವು ನೀಳ್ಗವಿತೆಗಳು ಸ್ಪೆನ್ಸರ್, ಮಿಲ್ಟನ್ ಮೊದಲಾದವರ ಶೈಲಿಗಳ ಅನುಕರಣೆಯಲ್ಲಿವೆ. ಪ್ರೊಫೆಸರ್ ಮಧುಕರ ರಾವ್ ಇವುಗಳ ಕುರಿತು ಪ್ರಸ್ತಾಪಿಸುತ್ತ, Milton weighs heavily on my shoulders (“ಮಿಲ್ಟನ್ ನನ್ನ ಹೆಗಲ ಮೇಲೆ ಭಾರವಾಗಿ ಕೂತಿದ್ದಾನೆ”) ಎಂಬ ಕೇಟ್ಸನ ಮಾತನ್ನು ಉದ್ಧರಿಸುತ್ತಿದ್ದುದು ನನಗೆ ನೆನಪಿದೆ. ಒಬ್ಬ ಯುವಕವಿಯ ಮೇಲೆ ಹಿಂದಿನ ಹಿರಿಯ ಕವಿಗಳು ಉಂಟುಮಾಡುವ ಒತ್ತಡವನ್ನು ನಾವೀ ಮಾತಿನಿಂದ ಅರ್ಥಮಾಡಿಕೊಳ್ಳಬಹುದು. ಕೀಟ್ಸನನ್ನು ಇಂದು ಮತ್ತು ಯಾವ ಕಾಲಕ್ಕೂ ಪ್ರಸಿದ್ಧನನ್ನಾಗಿಮಾಡುವುದು ಇಂಥ ಅನುಕರಣೆಯಿಲ್ಲದ ಕೆಲವೇ ಕವಿತೆಗಳು ಮಾತ್ರ; ಒಂದಷ್ಟು ಸುನೀತಗಳು, ಹಾಗೂ ಗ್ರೀಕ್ ಅಸ್ಥಿಕಲಶ, ನೈಟಿಂಗೇಲ್ ಹಕ್ಕಿ, ಸೈಖಿ (ಮನೋದೇವತೆ) ಮುಂತಾದ ವಿಷಯಗಳ ಕುರಿತಾದ ಪ್ರಗಾಥಗಳು, ‘ದಯೆಯಿಲ್ಲದ ದೇವಿ’ ಮುಂತಾದ ಇತರ ಭಾವಗೀತೆಗಳು. ಒಬ್ಬ ಕವಿಯನ್ನು ಅಮರನನ್ನಾಗಿಸುವುದು ಕವಿತೆಗಳ ಸಂಖ್ಯೆಯಲ್ಲ, ಅವುಗಳ ಕಾವ್ಯಗುಣ.

ತಾನು ಸಾಯುವುದಕ್ಕೆ ಒಂದು ವರ್ಷ ಮೊದಲು ಕೀಟ್ಸ್ ಫ್ಯಾನಿ ಬ್ರೌನ್ಗೆ ಬರೆದ ಪತ್ರವೊಂದರಲ್ಲಿ ಹೀಗೆನ್ನುತ್ತಾನೆ: ‘ನಾನು ನನಗೇ ಅಂದುಕೊಂಡೆ: ನಾನು ನನ್ನ ಬೆನ್ನ ಹಿಂದೆ ಯಾವುದೇ ಶಾಶ್ವತ ಕೃತಿಯನ್ನು ಬಿಟ್ಟಿಲ್ಲ-ನನ್ನನ್ನು ಗೆಳೆಯರು ಹೆಮ್ಮೆಯಿಂದ ನೆನೆದುಕೊಳ್ಳುವ ಎಂಥದನ್ನೂ-ಆದರೆ ನಾನು ಸಕಲ ವಸ್ತುಗಳಲ್ಲೂ ಸೌಂದರ್ಯದ ತತ್ವವನ್ನು ಪ್ರೀತಿಸಿದೆ ಮತ್ತು ನನಗೆ ಸಮಯವಿರುತ್ತಿದ್ದರೆ ನನ್ನನ್ನು ಸ್ಮರಣಾರ್ಹನನ್ನಾಗಿಯೂ ಮಾಡುತ್ತಿದ್ದೆ’. ಯಾವುದೀ ಸೌಂದರ್ಯ ತತ್ವ? ‘ಓಡ್ ಆನ್ ಎ ಗ್ರೀಶಿಯನ್ ಅರ್ನ್’ (ಗ್ರೀಕ್ ಅಸ್ಥಿಕಲಶದ ಮೇಲೊಂದು ಪ್ರಗಾಥ) ಎಂಬ ಕವಿತೆ ಒಂದು ಪುರಾತನ ಗ್ರೀಕ್ ಕುಂಭದ ಕುರಿತಾದ್ದು; ಗ್ರೀಕರು ಅಸ್ಥಿಸಂಗ್ರಹಕ್ಕೆ ಬಳಸುತ್ತಿದ್ದ ಪಾತ್ರೆ ಇದು. ಕೀಟ್ಸ್ ಇದನ್ನು ಎಲ್ಲಿ ನೋಡಿದನೋ ತಿಳಿಯದು ಬ್ರಿಟಿಷ್ ವಸ್ತುಸಂಗಹಾಲಯದಲ್ಲಿ ಅಥವಾ ಹೇಡನ್ ಎಂಬ ಕಲಾವಿದನ ಮನೆಯಲ್ಲಿ. ಕೀಟ್ಸ್ ಈ ಕಲಶದ ಮೇಲೆ ಇದೆಯೆನ್ನುವ ಚಿತ್ರಗಳು ಅವನ ಕಲ್ಪನೆಯದೂ ಇದ್ದಿರಬಹುದು. ಅಂತೂ ಈ ಚಿತ್ರಗಳ ಸೌಂದರ್ಯ ಕಲೆಯ ಅಮರತ್ವಕ್ಕೆ ಮಾತ್ರವೇ ಅಲ್ಲ, ಸೌಂದರ್ಯತತ್ವಕ್ಕೂ ಸಾಕ್ಷಿಯಾಗುತ್ತವೆ. ಕವಿತೆ ಕೊನೆಗೊಳ್ಳುವುದು ಹೀಗೆ:

ವೃದ್ಧಾಪ್ಯ ಈ ತಲೆಮಾರನ್ನು ಸೊರಗಿಸಿದ ವೇಳೆ,
ನೀನಿರುತ್ತೀ, ನಮ್ಮ ದುಃಖಗಳಿಗಿಂತ ಬೇರೆ ದುಃಖದ ಮಧ್ಯೆ,
ಮನುಷ್ಯನಿಗೊಬ್ಬ ಸ್ನೇಹಿತನಾಗಿ, ಹಾಗೂ ನೀನನ್ನುವಿ ಅವನಿಗೆ,
‘ಸೌಂದರ್ಯವೇ ಸತ್ಯ, ಸತ್ಯವೇ ಸೌಂದರ್ಯ -ಅಷ್ಪೇ
ಜಗತ್ತಿನಲ್ಲಿ ನಿನಗೆ ಗೊತ್ತಿರುವುದು, ಮತ್ತು ಗೊತ್ತಿರಬೇಕಾದ್ದು.’

ಕಲೆಯಲ್ಲಿ ಯಾವುದು ಶಾಶ್ವತವೋ ಅದು ಜೀವನದಲ್ಲಿ ನಶ್ವರವಾಗಿರುತ್ತದೆ ಎಂಬ ಶಿಲ್ಲರನ ಮಾತನ್ನೇ ಇದು ಇನ್ನೊಂದು ರೀತಿಯಲ್ಲಿ ಅನುರಣಿಸುವಂಥದು. ‘ಸೌಂದರ್ಯವೇ ಸತ್ಯ, ಸತ್ಯವೇ ಸೌಂದರ್ಯ’ ಎಂಬ ವಾಕ್ಯ ಕೀಟ್ಸ್‌ನಿಗೆ ಕಲೆಯಲ್ಲಿರುವ ನಂಬಿಕೆಯನ್ನು ಪೃಥಕ್ಕರಿಸುತ್ತದೆ. ಐ.ಎ. ರಿಚರ್ಡ್, ಟಿ. ಎಸ್. ಎಲಿಯಟ್ ಮುಂತಾದ ಕೆಲವರು ಕವಿತೆಯ ಈ ಕೊನೆ ಸಾಲನ್ನು ಮೆಚ್ಚಲಿಲ್ಲ ಎನ್ನುವುದು ಬೇರೆ ಮಾತು. ‘ಕೀಟ್ಸನ ಈ ಹೇಳಿಕೆಗೆ ಅರ್ಥವಿಲ್ಲ ಅನಿಸುತ್ತದೆ, ಅಥವಾ ಅದು ವ್ಯಾಕರಣಬದ್ಧವಾಗಿ ಅರ್ಥಶೂನ್ಯವಾದ್ದು ಎನ್ನುವುದು ಇನ್ನೊಂದು ಅರ್ಥವನ್ನು ನನ್ನಿಂದ ಮರೆಸುತ್ತಿದೆ,’ ಎನ್ನುತ್ತಾನೆ ಎಲಿಯೆಟ್. ಕೀಟ್ಸ್‌ನ ಈ ವಾಕ್ಯವನ್ನು ಇಡೀ ಕವಿತೆಯ ಹಿನ್ನೆಲೆಯಲ್ಲಿ ಮಾತ್ರವೇ ಅಲ್ಲ, ಅವನ ಇಡೀ ಕಾವ್ಯಜೀವನದ ಹಿನ್ನೆಲೆಯಲ್ಲೂ ಇಟ್ಟು ನೋಡಬೇಕಾಗುತ್ತದೆ.

ಕವಿಯಾಗಿ ಕೀಟ್ಸ್ ಸಹಜ ಸಂವೇದನೆಗಳಲ್ಲಿ ನಂಬಿಕೆಯಿರಿಸಿದವನು. ಕವಿತೆಗೂ ತಾರ್ಕಿಕತೆಗೂ ಸಂಬಂಧವಿಲ್ಲ; ಮಾತ್ರವಲ್ಲ, ಕವಿ ತನ್ನ ‘ಸ್ವಂತ’ವನ್ನೂ ಕೂಡಾ ಮುಂದೊಡ್ಡಬಾರದು. ಇದನ್ನು ಕೀಟ್ಸ್ Negative Capability (ಋಣಾತ್ಮಕ ಸಾಮರ್ಥ್ಯ) ಎನ್ನುತ್ತಾನೆ. ವಾಸ್ತವ ಮತ್ತು ತರ್ಕವನ್ನು ತಲುಪಬೇಕೆನ್ನುವ ಕಿರಿಕಿರಿಯಿಲ್ಲದೆ, ಅನಿಶ್ಚಿತತೆಗಳಲ್ಲಿ, ಅದ್ಭುತಗಳಲ್ಲಿ, ಸಂದೇಹಗಳಲ್ಲಿ, ಮನುಷ್ಯನು ಇರಲು ಸಾಧ್ಯವಾಗುವ ಗುಣ ಇದು. “ಕವಿತೆಯ ಪ್ರತಿಭೆ ಮನುಷ್ಯನಲ್ಲಿ ತನ್ನ ಮೋಕ್ಷವನ್ನು ತಾನೇ ಸಾಧಿಸಬೇಕು: ಅದು ಕಾನೂನು ಅಥವಾ ನಿಯಮದಿಂದ ಮಾಗುವುದಲ್ಲ, ಆದರೆ ಸ್ಪಂದನೆ ಮತ್ತು ವೀಕ್ಷಣೆಯಿಂದ-ಯಾವುದು ಸೃಜನಾತ್ಮಕವೋ ಅದು ತನ್ನನ್ನು ತಾನೇ ಸೃಜಿಸಿಕೊಳ್ಳಬೇಕು.’ ನೆಗೆಟಿವ್ ಕೇಪೇಬಿಲಿಟಿ ಎಂದರೆ ಅಹಮನ್ನು ಮರೆಸುವ ಒಂದು ವಿನಯ. ಕೀಟ್ಸ್ ಇದನ್ನು ಶೇಕ್ಸ್‌ಪಿಯರಿನಲ್ಲಿ ಪರಿಪೂರ್ಣವಾಗಿ ಕಾಣುತ್ತಾನೆ; ಕಾಲರಿಜ್‌ನಲ್ಲಿ ಅರ್ಧಮಾತ್ರ, ಕವಿತೆ ಬರುವುದಾದರೆ ಮರಕ್ಕೆ ಎಲೆಗಳು ಬರುವಂತೆ ಸಹಜವಾಗಿ ಬರಬೇಕು, ಇಲ್ಲದಿದ್ದರೆ ಬರದಿರುವುದೇ ಒಳ್ಳೆಯದು ಎಂದವನೂ ಅವನೇ.

ಕೀಟ್ಸನ್ನು ನಾವು ಗುರುತಿಸುವ ಇಂಗ್ಲಿಷ್ ರೊಮ್ಯಾಂಟಿಕ್ (ರಮ್ಯ) ಪಂಥದಲ್ಲಿ ವರ್ಡ್ಸ್‌ವರ್ತ್, ಕಾಲರಿಜ್, ಶೆಲ್ಲಿ ಮತ್ತು ಬೈರನ್‌ರಂಥ ಸುಪಸಿದ್ಧರೂ ಸೇರಿದ್ದಾರೆ. ಎಲ್ಲರೂ ಒಂದೇ ‘ಪಂಥ’ ದವರಾದರೂ, ಒಬ್ಬೊಬ್ಬರದೂ ಒಂದೊಂದು ಬಗೆ. ವರ್ಡ್‌ವರ್ತ್ ನಿಸರ್ಗದ ಪ್ರತಿಯೊಂದು ವಸ್ತುವಿನಲ್ಲೂ ದೈವತ್ವವನ್ನು ಕಾಣುವವನು; ಕಾಲರಿಜ್‌ಗೆ ಕವಿತೆಯಲ್ಲಿ ತಾತ್ವಿಕತೆ ಮತ್ತು ನೈತಿಕತೆ ಮುಖ್ಯ; ಶೆಲ್ಲಿ ಕ್ರಾಂತಿಕಾರಿ; ಹಾಗೂ ಬೈರನ್ ಸಮಾಜ ವಿಮರ್ಶಕ. ಇವರಲ್ಲಿ ಕೀಟ್ಸ್ ಒಬ್ಬನೇ ಸಂಪೂರ್ಣವಾಗಿ ತನ್ನನ್ನು ತಾನು ಸತ್ಯ ಮತ್ತು ಸೌಂದರ್ಯಕ್ಕೆ ಸಂಪೂರ್ಣವಾಗಿ ಒಪ್ಪಿಸಿಕೊಂಡವನು. ಕೀಟ್ಸ್‌ನ ಮರಣಾನಂತರ ಶೆಲ್ಲಿ ಬರೆದ ‘ಎಡೊನಿಸ್’ ಎಂಬ ಪ್ರಸಿದ್ಧವಾದ ಕವಿತೆಯ ಈ ಸಾಲುಗಳು ಇದನ್ನೇ ಹೇಳುವಂಥವು:

ಅವನು ಚೆಲುವಿನದೊಂದು ಅಂಗವಾಗಿದ್ದಾನೆ
ಆ ಚೆಲುವನ್ನವನು ಒಮ್ಮೆ ಇನ್ನಷ್ಟು ಚೆಲುವಾಗಿಸಿದ್ದ

ಆದರೆ ಈ ಕಾರಣಕ್ಕಾಗಿ ನಾವಿಂದು ಅವನನ್ನು ಕೇವಲ ಸೌಂದರ್ಯ ಲೋಲುಪನೆಂದೋ ಕಲೆಗಾಗಿ ಕಲೆ ಎಂದು ನಂಬಿದವನೆಂದೋ ತಿಳಿದರೆ ಅದರಿಂದ ನಮಗೇ ನಷ್ಟವಾಗುತ್ತದೆ. ಯಾಕೆಂದರೆ ಇಂದಿನ ನಮ್ಮ ಯುಗ ಬೇರೆಯದು. ಹಲವು ಕವಿಗಳು ಉಗ್ರಗಾಮಿತ್ವಕ್ಕೆ ಇನ್ನು ಕೆಲವರು ತೀವ್ರಗಾಮಿತ್ವಕ್ಕೆ ಶರಣಾಗಿದ್ದಾರೆ. ಯಾವುದಾದರೊಂದು ರಾಜಕೀಯ ಇಲ್ಲದ ಕವಿತೆಯೇ ಅಪರೂಪವಾಗಿದೆ. ಸಂವೇದನೆ, ಭಾವನೆ, ಸತ್ಯ, ಸೌಂದರ್ಯ ಮುಂತಾದ ಕಲ್ಪನೆಗಳು ಅರ್ಥಹೀನವೆನಿಸುವಷ್ಟು ಹಳತಾಗಿಹೋಗಿವೆ. ಪ್ರತಿಯೊಂದನ್ನೂ ಅಕ್ಷರಮಟ್ಟದಲ್ಲಿ ತೆಗೆದುಕೊಳ್ಳುವವರು ಆಳವಾಗಿರುವುದಿಲ್ಲ ಎನ್ನುತ್ತಾನೆ ಕೀಟ್ಸ್. ಆದರೆ ಇಂದು ಈ ಅಕ್ಷರಶತೆಯೇ ಆಳುತ್ತಿದೆ. ಈ ಸಂದರ್ಭದಲ್ಲಿ ಕೀಟ್ಸನ ‘ಋಣಾತ್ಮಕ ಸಾಮರ್ಥ್ಯ’ ತಂಪು ಗಾಳಿಯಂತೆ ನಮ್ಮ ಮನಸ್ಸನ್ನು ತಲುಪಬೇಕು. ‘ಕೇಳಿದ ರಾಗಗಳು ಮಧುರ, ಆದರೆ ಕೇಳದವು ಅತಿಮಧುರ; ಆದುದರಿಂದ, ಮೆಲುದನಿಯ ಪಿಳ್ಳಂಗೋವಿಗಳೆ, ಹಾಡುವುದ ಮುಂದರಿಸಿ…’ ಎನ್ನುತ್ತಾನೆ ಕವಿ, ಚಿತ್ರದ ವಾದಕರನ್ನು ಉದ್ದೇಶಿಸಿ; ಕೇಳದ ಹಾಡುಗಳು ಬರುವುದು ಅತ್ತಣಿಂದಲೇ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪರಿಧಿ
Next post ನೀನಿಲ್ಲದೆ ನಾನಿಲ್ಲವೋ

ಸಣ್ಣ ಕತೆ

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…