ಬೆಸಗರಹಳ್ಳಿ ರಾಮಣ್ಣ : ಸುಗ್ಗಿ-ಸಂಕಟಗಳ ಕತೆಗಾರ

ಬೆಸಗರಹಳ್ಳಿ ರಾಮಣ್ಣ : ಸುಗ್ಗಿ-ಸಂಕಟಗಳ ಕತೆಗಾರ

ಡಾ. ಬೆಸಗರಹಳ್ಳಿ ರಾಮಣ್ಣ ೧೯೯೮ ಜುಲೈ ೧೩ರಂದು ನಮ್ಮನ್ನು ದೂರ ಸರಿಸಿ ಕೊನೆಯದಾರಿ ಹಿಡಿದೇಬಿಟ್ಟರು. ಅದು ನಾವು ಕಾಣದ ದಾರಿ, ಕಾಣದ ಸತ್ಯಗಳನ್ನು ಹುಡುಕುತ್ತ, ಹಿಡಿದಿಡುತ್ತ, ಕತೆ ಕಟ್ಟುತ್ತಿದ್ದ ಈ ಗೆಳೆಯ, ಸಾವಿನ ಸತ್ಯವನ್ನು ಇಷ್ಟು ಬೇಗ ಹುಡುಕಿದ್ದು ಸೃಜನಶೀಲ ಶೋಧದ ಎಂಥ ವ್ಯಂಗ್ಯ!

ನಿಜ; ರಾಮಣ್ಣ ನಮ್ಮ ಕಾಲದ ಅಸಲೀ ಕತೆಗಾರ. ಇತ್ತೀಚಿನ ದಿನಗಳಲ್ಲಿ ಈ ಕತೆಗಾರನ ಕತೆಯನ್ನು ಸಾವು ಬರೆಯತೊಡಗಿತ್ತು. ಕಳೆದ ಕಾಲಕಾಲದಿಂದ ರಾಮಣ್ಣನವರ ಬವಣೆಯ ಕತೆ ಬೆಳೆಯುತ್ತಿರುವುದನ್ನು ನೋಡುತ್ತಲೇ ಈ ಸಾವು ತೀವ್ರಗತಿಯಲ್ಲಿ ಅವರ ಕತೆಯನ್ನು ಬರೆಯತೊಡಗಿತು. ಸಾವು ತನ್ನ ‘ಸೃಜನಶೀಲತೆ’ಯನ್ನು ಮೂರು ವರ್ಷಗಳ ಹಿಂದೆಯೇ ಪ್ರಾರಂಭಿಸಿ ರಾಮಣ್ಣನವರ ಮಗನನ್ನೇ ಮೊದಲ ‘ಅನುಭವ’ವನ್ನಾಗಿಸಿತು.

ಮಂಡ್ಯದ ರಸ್ತೆ ದಾಟುತ್ತಿದ್ದ ರಾಮಣ್ಣನವರ ಪ್ರೀತಿಯ ಮಕ್ಕಳಲ್ಲಿ ಧೂರ್ತವಾಹನಕ್ಕೆ ಸಿಕ್ಕಿ ಒಬ್ಬ ಸತ್ತ, ಇದು ಲೇಖನಿ ಹಿಡಿದು ಕೂತ ಸಾವಿನ ಮೊದಲ ಸಾಲು.

ಆ ನಂತರದ ದಿನಗಳಲ್ಲಿ ರಾಮಣ್ಣನವರು ಜರ್ಝರಿತರಾದರು. ಈ ಅನುಭವದ ಹಿನ್ನೆಲೆಯಲ್ಲಿ ಮೂರು ವರ್ಷಗಳ ಹಿಂದೆ ತುಮಕೂರಿಗೆ ಬಂದಿದ್ದ ಇವರು ರಾಜ್ಯ ಬಂಡಾಯ ಸಾಹಿತ್ಯ ಸಮ್ಮೇಳನದಲ್ಲಿ ಭಾಷಣ ಮಾಡುತ್ತ ಭಾವಪರವಶರಾದರು. ಸಾವಿನ ಸರ್ಪ ಬೆಂಗಾವಲಿಗೆ ನಿಂತಿತ್ತು! ನಾಲಗೆ ನೋವಾಗಿತ್ತು. ನಮ್ಮ ನಾಡು ಹಾಳಾಗ್ತಾ ಇದೆ, ಕನ್ನಡಿಗರನ್ನ, ಬಡವರನ್ನ, ಕೇಳೋರೆ ಇಲ್ಲ. ನಾವು ನಮ್ಮ ಕನಸಿನ ನಾಡನ್ನು ಕಟ್ಟಬೇಕಾಗಿದೆ. ಆದರೆ ನಾನು ಹೆಚ್ಚುಕಾಲ ಬದುಕಲಾರೆ. ಇಲ್ಲಿರೋ ನನ್ನ ಸ್ನೇಹಿತರು ಈ ಕೆಲಸ ಮಾಡ್ಬೇಕು. ನನ್ನ ಒಳಗೆ ಇರೊ ಕಳಕಳೀನ ಅವರು ಅರ್ಥ ಮಾಡ್ಕೊತಾರೆ. ನಾನೀಗ… ನಾನೀಗ…’- ಹೀಗೆ ಮಾತಾಡುತ್ತ ರಾಮಣ್ಣನವರು ಅತ್ತುಬಿಟ್ಟರು. ಸಾವಿನ ಸರ್ಪ ಪಿಳಿ ಪಿಳಿ ಕಣ್ಣು ಬಿಡುತ್ತಿರುವಾಗ ರಾಮಣ್ಣನವರ ಕಣ್ಣು ಹನಿಹನಿಯಾಗಿ ಹರಿಯುತ್ತಿತ್ತು. ನನಗೆ ಗೊತ್ತಿರುವಂತೆ ಅಂದಿನಿಂದ ಕೊನೆಯವರೆಗೆ ಸಾವಿನ ಕತೆ ಬೆಳೆಯುತ್ತ ಬಂತು.

ಜುಲೈ ೧೩ರಂದು ಮಲ್ಯ ಆಸ್ಪತ್ರೆಯಲ್ಲಿ ಬೆಸಗರಹಳ್ಳಿ ರಾಮಣ್ಣ ಸಾವಾಗಿ ಮಲಗಿದ್ದನ್ನು ಕಂಡಾಗ ಸಂಕಟ ಹೆಪ್ಪುಗಟ್ಟಿತ್ತು. ದೇಶಹಳ್ಳಿಯಲ್ಲಿ ಇಡೀ ದಿನ ಮಿತ್ರರೊಂದಿಗೆ ಇದ್ದು ರಾಮಣ್ಣ ಮಣ್ಣಾಗಿ ಮಲಗಿದ್ದನ್ನು ನೋಡಿ ಹಿಂತಿರುಗಿದಾಗ ನೆನಪು ಬಿಚ್ಚತೊಡಗಿತು.

ನಾನು ರಾಮಣ್ಣನವರನ್ನು ನೋಡಿದ್ದು ಬಿ.ಎ. ವಿದ್ಯಾರ್ಥಿಯಾಗಿದ್ದಾಗ, ಮೈಸೂರು ವಿಶ್ವವಿದ್ಯಾಲಯವು ವ್ಯವಸ್ಥೆಗೊಳಿಸಿದ ‘ಯುಜನೋತ್ಸವ’ಕ್ಕೆ ನಮ್ಮ ತುಮಕೂರು ಕಾಲೇಜಿನ ಪ್ರಾತಿನಿಧಿಕ ತಂಡದಲ್ಲಿದ್ದ ನಾನು ಮೈಸೂರಿನ ಶತಮಾನೋತ್ಸವ ಭವನದಲ್ಲಿ ನಾಟಕದಲ್ಲಿ ಪಾಲ್ಗೊಳ್ಳುವ ದಿನ, ಬಾಗಿಲ ಬಳಿ ನಿಂತಿದ್ದ ಬೆಸಗರಹಳ್ಳಿ ರಾಮಣ್ಣ ಮತ್ತು ಕೃಷ್ಣ ಆಲನಹಳ್ಳಿಯ ವರನ್ನು ನನಗೆ ದೂರದಿಂದಲೇ ಮಿತ್ರರು ತೋರಿಸಿದರು. ಇಬ್ಬರನ್ನೂ ನೋಡಿ ಸಂಭ್ರಮಗೊಂಡೆ. ಹತ್ತಿರ ಹೋಗಿ ಮಾತನಾಡಿಸುವ ‘ಧೈರ್ಯ’ ಬರಲಿಲ್ಲ. ಏನೋ ಸಂಕೋಚ. ಕೃಷ್ಣ ಆಲನಹಳ್ಳಿ ತಮ್ಮದೇ ಶೈಲಿಯಲ್ಲಿ ಮಾತನಾಡುತ್ತಿದ್ದುದನ್ನು ಕಂಡು ಹಿಂಜರಿದೆನೊ ಅಥವಾ ಬೆಸಗರಹಳ್ಳಿ ರಾಮಣ್ಣನವರು ತಮ್ಮ ಕತೆಗಾಗಿ ‘ಪ್ರಜಾವಾಣಿ’ಯ ಪ್ರಥಮ ಬಹುಮಾನ ಪಡೆದಿದ್ದ ನೆನಪಿನಲ್ಲಿ ಹತ್ತಿರಕ್ಕೆ ಹೋಗಲು ಅಳುಕಿದೆನೋ- ಒಟ್ಟಿನಲ್ಲಿ ಪರಿಚಯ ಮಾಡಿಕೊಳ್ಳಲು ಆಗಲಿಲ್ಲ. ಹಾಗೆ ನೋಡಿದರೆ ಇಬ್ಬರೂ ಮಾತುಗಾರರೇ ಎನ್ನಿಸಿತು. ಆದರೆ ಇಬ್ಬರ ಮಾತಿನ ಸೆಲೆ ಬೇರೆ; ಬುದ್ಧಿ-ಭಾವಗಳು ಒಟ್ಟಿಗೆ ನಿಂತು ಮಾತಲ್ಲಿ ತೊಡಗಿದ ರೀತಿಯಲ್ಲಿ ಅವರಿಬ್ಬರೂ ನನಗೆ ಕಂಡರು. ಒಂದು ಕಡೆ ಬುದ್ಧಿಯ ಭಾವ, ಇನ್ನೊಂದು ಕಡೆ ಮನಸ್ಸಿನ ಭಾವ. ಈ ಹಾವ-ಭಾವಗಳು
ಬೆರೆತ ಎಂಥ ಜೋಡಿ!

ಮುಂದೆ ರಾಮಣ್ಣನವರ ಪರಿಚಯವಾಯಿತು. ಅವರ ಅಂತಃಕರಣದ ಅನುಭವವಾಗ ತೊಡಗಿತು. ಕತೆಗಾರ ರಾಮಣ್ಣನವರಲ್ಲಿ ಈ ಅಂತಃಕರಣ ಸದಾ ದುಡಿಯುತ್ತದೆ. ದುಡಿಯುತ್ತಲೇ ದಣಿಯುತ್ತದೆ. ದಣಿವಾರಿಸಿಕೊಳ್ಳುವ ಪ್ರಶ್ನೆಯೇ ಎದುರಾಗುವುದಿಲ್ಲ. ಯಾಕೆಂದರೆ ತಾನೇ ಪ್ರಶ್ನೆಯಾಗಿ ಅರೆ-ಕೊರೆಗಳನ್ನು ಜಗ್ಗಿಸುತ್ತದೆ. ಕತೆಯಾಗಿ ಬೆಳೆಯುತ್ತದೆ.

ಅವರ ಅಂತಃಕರಣಕ್ಕೆ ಉದಾಹರಣೆಯಾಗಿ ಎರಡು ಪ್ರಸಂಗಗಳನ್ನು ಹೇಳಬಯಸುತ್ತೇನೆ. ಮೂರು ವರ್ಷಗಳ ಹಿಂದೆ ನನ್ನ ಚಿಕ್ಕ ಮಗನಿಗೆ ಪಾರ್ಶ್ವವಾಯು ಬಡಿಯಿತು. ಅದೇ ವೇಳೆಗೆ ನಾವೊಂದು ‘ಮಾನವತಾ ಸಮಾವೇಶ’ವನ್ನು ಸಂಘಟಿಸಿದ್ದೆವು. ಬೆಸಗರಹಳ್ಳಿ ರಾಮಣ್ಣ ಅಧ್ಯಕ್ಷತೆ ವಹಿಸಿದ್ದರು. ನಾನು ಸಮಾವೇಶದ ಸಂಘಟಕರಲ್ಲೊಬ್ಬನಾಗಿದ್ದರಿಂದ ಪ್ರಾಸ್ತಾವಿಕ ಮಾತುಗಳನ್ನಾಡ ಬೇಕಿತ್ತು. ಸ್ವಲ್ಪ ಸುಧಾರಿಸಿಕೊಳ್ಳುತ್ತಿದ್ದ ಮಗನನ್ನು ಬಿಟ್ಟು ಸಮಾವೇಶದ ಬಳಿಗೆ ಹೋಗಿ ಊಟ ವಗೈರೆ ವ್ಯವಸ್ಥೆ ಮಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿ ಹಿಂತಿರುಗಿದೆ. ಆ ನಂತರ ನನ್ನನ್ನು ಸಮಾವೇಶದ ಸ್ಥಳದಲ್ಲಿ ಕಾಣದ ರಾಮಣ್ಣನವರು ನನ್ನ ಮಗನ ಖಾಯಿಲೆ ವಿಷಯ ತಿಳಿದು ಮನೆಗೆ ಬಂದರು. ನನ್ನ ಮಗನ ಯೋಗಕ್ಷೇಮ ವಿಚಾರಿಸಿದರು. ಸ್ವತಃ ವೈದ್ಯರಾದ್ದರಿಂದ ಪರೀಕ್ಷೆ ಮಾಡಿದರು. ಮಗನಿಗೆ ಧೈರ್ಯ ತುಂಬಿದರು. ಅನಂತರ ನನ್ನ ಕೈಯನ್ನು ಭದ್ರವಾಗಿ ಹಿಡಿದುಕೊಂಡು ನೀವು ಪುಣ್ಯವಂತ್ರು ಬರಗೂರ್’ ಎಂದರು. ಬೇರೇನೂ ಮಾತಾಡಲಿಲ್ಲ. ಅವರ ಕಣ್ಣುಗಳಲ್ಲಿ ಇಣುಕುತ್ತಿದ್ದ ಹನಿ ಎಲ್ಲವನ್ನೂ ಹೇಳುತ್ತಿತ್ತು.

ಆನಂತರ ಮೂರ್‍ನಾಲ್ಕು ದಿನಗಳಲ್ಲಿ ಅವರಿಂದ ಪತ್ರ ಬಂತು. ‘ನಾನು ವೈದ್ಯನಾಗಿ ಹೇಳ್ತಿದ್ದೇನೆ. ನಿಮ್ಮ ಮಗ ನಿಮ್ ಕೈಯಲ್ಲಿದ್ದಾನೆ. ಅಪಾಯದಿಂದ ಪಾರಾಗಿದ್ದಾನೆ. ನೀವು ನಿಜಕ್ಕೂ ಪುಣ್ಯಶಾಲಿಗಳು’ ಎಂದು ಬರೆದರು. ನೇರವಾಗಿ ಬರೆಯದಿದ್ದರೂ ಆ ಪತ್ರದ ಮರೆಯಲ್ಲಿ ರಾಮಣ್ಣನವರ ಸತ್ತಮಗ ಇಣುಕುತ್ತಿರುವುದು ನನಗೆ ಗೊತ್ತಾಯಿತು. ನನಗೆ ಮತ್ತು ನನ್ನ ಮಡದಿ ಮಗನಿಗೆ ಆಗಿದ್ದ ಆಘಾತದಿಂದ ಹೊರಬರಲು ಬೇಕಾದ ಧೈರ್ಯವನ್ನು, ನೋವು ನುಂಗಿಕೊಳ್ಳುತ್ತಲೇ ಕೊಟ್ಟಿದ್ದ ರಾಮಣ್ಣ, ಮನುಷ್ಯ ಸಂಬಂಧಗಳಿಗೆ ಮನಸೋಲುತ್ತಿದ್ದ ವಿಶಿಷ್ಟ ವ್ಯಕ್ತಿ.

ಮತ್ತೊಂದು ಪ್ರಸಂಗ ಇತ್ತೀಚಿನದು. ರಾಮಣ್ಣನವರು ಆಗಲೇ ಆಸ್ಪತ್ರೆಯಲ್ಲಿದ್ದರು. ಚನ್ನಬಸವಣ್ಣ, ಎಲ್. ಹನುಮಂತಯ್ಯ, ಅಗ್ರಹಾರ ಕೃಷ್ಣಮೂರ್ತಿ ಮುಂತಾದ ಆತ್ಮೀಯರು ಮತ್ತೆ ಮತ್ತೆ ಅವರ ಆರೋಗ್ಯದ ಬಗ್ಗೆ ಮುತುವರ್ಜಿ ವಹಿಸುತ್ತಿದ್ದರು. ಆಸ್ಪತ್ರೆಯಲ್ಲೂ ಅವರಿಗೆ ಸಾಮಾಜಿಕ ಕಾಳಜಿ. ಒಳಗೆ ಒತ್ತಿಬರುವ ಸಂಕಟ, ನಮ್ಮ ನಾಡು ಎತ್ತ ಸಾಗಿದೆ ಎಂಬ ಆತಂಕ, ಜಾತಿ-ವರ್ಗ ವ್ಯವಸ್ಥೆಯ ಬಗ್ಗೆ ಸಿಟ್ಟು, ನೋಡಲು ಹೋದವರೊಂದಿಗೆ ಇದೇ ಮಾದರಿಯ ಚರ್ಚೆ. ಬೇಡವೆಂದರೂ ಬಿಡದ ಮಾತಿನ ಮಾಯೆ. ಆದರೆ ಇದು ಮೈ ಮರೆಸುವ ಮಾಯೆಯಲ್ಲ. ಎಚ್ಚರಗೊಳಿಸುವ ಮಾಯೆ. ಅದೇ ರಾಮಣ್ಣನವರ ಮಾತಿನ ಮಾಯೆಯ ವಿಶಿಷ್ಟ ಆಯಾಮ. ಹೀಗೆ ಆಸ್ಪತ್ರೆಯಲ್ಲಿರುವಾಗ ದಿನವೂ ಬರುತ್ತಿದ್ದ ಹನುಮಂತಯ್ಯನವರ ದಾರಿ ಕಾದರು. ಕುಡಿಯಬೇಕಾಗಿದ್ದ ಹಾಲಿನ ಲೋಟವನ್ನು ಕೈಯಲ್ಲಿ ಹಿಡಿದು ಕೂತರು. ಹನುಮಂತಯ್ಯ ಬಂದಕೂಡಲೇ ಲೋಟವನ್ನು ಮುಂದಿಟ್ಟು ‘ಅರ್ಧ ಕುಡಿದು ಕೊಡು; ಉಳಿದರ್ಧ ನಾನು ಕುಡಿಯುತ್ತೇನೆ’ ಎಂದರು. ಹನುಮಂತಯ್ಯ ‘ಇದೆಲ್ಲ ಯಾಕೆ ಸಾರ್, ನೀವ್ ಕುಡೀರಿ’ ಎಂದು ಎಷ್ಟೇ ಹೇಳಿದರೂ ಅವರು ಒಪ್ಪಲಿಲ್ಲ. ‘ಅಲ್ಲಯ್ಯ ಇದೇನಯ್ಯಾ, ಈ ದೇಶದಲ್ಲಿ ಜಾತಿ ಜಾತಿ ಅಂತ ಬಡದಾಡ್ತಾರೆ. ಕಡೇಪಕ್ಷ ನಾನು ನನಗೆ ಜಾತಿಭಾವನೆ ಇಲ್ಲ ಅಂತ ಗಟ್ಟಿ ಆಗ್ಬೇಕು ಕಣಯ್ಯ. ನೀನು ಒಂದು ಗುಟುಕಾದ್ರೂ ಕುಡಿದು ಕೊಡ್ಲೇಬೇಕು’ ಎಂದು ಒತ್ತಾಯಿಸಿದರು. ದಲಿತ ಮೂಲದ ಹನುಮಂತಯ್ಯ ಒಂದು ಗುಟುಕು ಕುಡಿದು ಕೊಟ್ಟಾಗ ಸಂತೋಷದಿಂದ ಲೋಟ ಖಾಲಿ ಮಾಡಿದ ರಾಮಣ್ಣನವರು ‘ಅಲ್ಲಯ್ಯಾ ಈಗ ನಾವಿಬ್ರೂ ಇದ್ದಂಗ್ ಇರೋಕೆ ಏನಯ್ಯ ಆಗಿದೆ ಈ ಜನಕ್ಕೆ’ ಎಂದು ಕೇಳಿದರು; ಕೇಳಿಕೊಳ್ಳುತ್ತಾ ಹೋದರು. ಸಾಮಾಜಿಕ-ಆರ್ಥಿಕ ಅಸಮಾನತೆಯ ಬಗ್ಗೆ ನೋವಿನಿಂದ ಮಿಡಿಯತೊಡಗಿದರು.

ಮೇಲಿನ ಎರಡು ಪ್ರಸಂಗಗಳಲ್ಲಿ ಮೊದಲನೆಯದು ಮನುಷ್ಯ ಸಂಬಂಧ ಮೂಲದ ನಡವಳಿಕೆಯಾದರೆ, ಎರಡನೆಯದು ಸಮಾಜಮುಖಿ ಮೂಲದ ಕಳಕಳಿಯ ನಡವಳಿಕೆ. ಒಂದು ವೈಯಕ್ತಿಕ. ಇನ್ನೊಂದು ಸಾಮಾಜಿಕ ಎನ್ನಿಸಿದರೂ, ಮೂಲತಃ ಮಿಡಿದದ್ದು ಅಂತಃಕರಣ ವೈಯಕ್ತಿಕ ಮತ್ತು ಸಾಮಾಜಿಕತೆಗಳನ್ನು ಒಂದು ಮಾಡುವ ಅಂತಃಕರಣ. ಇದೇ ಡಾ. ಬೆಸಗರಹಳ್ಳಿ ರಾಮಣ್ಣನವರ ಕತೆಗಳ ಅಂತಃಸತ್ವ, ಗ್ರಾಮೀಣ ಬದುಕನ್ನು ಅನಾವರಣಗೊಳಿಸುವ ಕತೆಗಾರರೆಂದೇ ಕರೆಸಿಕೊಳ್ಳುವ ಬೆಸಗರಹಳ್ಳಿ ರಾಮಣ್ಣನವರು ಯಾವತ್ತೂ ಸ್ಥಗಿತಗೊಂಡ ಸಂಸ್ಕೃತಿಯ ನೆಲೆಯಿಂದ ಹಳ್ಳಿಯನ್ನು ನೋಡಲಿಲ್ಲ. ಶವಾಗಾರಕ್ಕೆ ಸಾಗಬೇಕಾದ ಸಂಸ್ಕೃತಿಯ ಹುಸಿಮಾದರಿಗಳನ್ನು ಶೈತ್ಯಾಗಾರದಲ್ಲಿಟ್ಟು ಸಂರಕ್ಷಿಸಲು ಹೋಗಲಿಲ್ಲ. ಹಳ್ಳಿಯ ಸುಗ್ಗಿ-ಸಂಕಟಗಳನ್ನು ಒಟ್ಟಿಗೇ ಕಟ್ಟಿಕೊಟ್ಟ ಕತೆಗಾರ ಇವರು. ಹಳ್ಳಿಯ ಆಚರಣೆಗಳನ್ನು ದಾಖಲಿಸುವಾಗಲೂ ಅದರಾಚೆ ತುಡಿಯುತ್ತ, ಪರಿಶೀಲಿಸುತ್ತ, ಸಾಮಾಜಿಕ ಕಾಳಜಿಯ ಆಯಾಮಕ್ಕೆ ಕೊಂಡೊಯ್ಯುವ ಕಲೆಗಾರಿಕೆ ಅವರದಾಗಿತ್ತು. ಹಳ್ಳಿಯನ್ನು ವೈಭವೀಕರಿಸದೆ ಕಟುವಾಸ್ತವಗಳ ಗ್ರಹಿಕೆಯಿಂದಲೇ ಗೌರವಿಸುವ ವಿಶಿಷ್ಟ ವಿಧಾನ ಹಾಸುಹೊಕ್ಕಾಗಿತ್ತು. ಅವರದು ನಗರದಲ್ಲಿ ನಿಂತು ಹಳ್ಳಿಯನ್ನು ನೋಡುವ ಕುತೂಹಲದ ಕಣ್ಣಲ್ಲ. ಹಳ್ಳಿಯ ಒಳಗಿನಿಂದಲೇ ಹುಡುಕುತ್ತ, ಪೊರೆ ಕಳಚಿ ಪರಿಶೀಲಿಸುವ ಕಳಕಳಿಯ ಕಣ್ಣು, ಹೀಗಾಗಿ ಬೆಸಗರಹಳ್ಳಿ ರಾಮಣ್ಣನವರು ಗ್ರಾಮೀಣ ಬದುಕಿನ ಸ್ಥಿತ್ಯಂತರಗಳನ್ನು ಸಂವೇದನೆಯಾಗಿಸಿಕೊಟ್ಟ ಮಹತ್ವದ ಕತೆಗಾರರಾದರು. ಊಳಿಗಮಾನ್ಯ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ಆಶಯಗಳ ನಡುವೆ ನುಚ್ಚುನೂರಾಗುತ್ತಿದ್ದ ಸಮುದಾಯದ ಕನಸುಗಳನ್ನು ಜೀವಂತವಾಗಿಸುವ ತೀವ್ರತೆಯಿಂದ ಬರೆದರು. ಸ್ಥಿತ್ಯಂತರದ ಸಂಕಟ ಇವರಿಗೆ ಮುಖ್ಯವೇ ಹೊರತು ಆ ಸನ್ನಿವೇಶದ ವಿಕಾರಗಳಲ್ಲ. ಈ ಮಾತನ್ನು ಹೀಗೆ ವಿಸ್ತರಿಸಬಹುದು. ಕೆಲವರಿಗೆ ಹಳ್ಳಿಯಾಗಲಿ, ನಗರವಾಗಲಿ, ಕಾಮ ಮಾತ್ರ ಕಾಣಿಸುತ್ತದೆ. ಅದೂ ಕುತೂಹಲದ ಕಾಮದ ಕಣ್ಣು: ಬೆಸಗರಹಳ್ಳಿಯವರಲ್ಲಿ ಕಾಮ ಕ್ರೌರ್ಯವಾಗುತ್ತದೆ ವಿಕೃತಿಯ ವೈಭವೀಕರಣ ಹಾಗೂ ಸಂಭ್ರಮ ಇವರ ಕತೆಗಳಲ್ಲಿ ಕಾಣಿಸುವುದಿಲ್ಲ. ಹಾಗೆಯೇ ಆಧುನಿಕತೆಯ ಪ್ರವೇಶದಿಂದ ಹಳ್ಳಿಯಲ್ಲಿ ವಿಕಾರಗಳು ಜಾಗೃತಗೊಳ್ಳುತ್ತವೆಯೆಂಬ ಆತಂಕವೂ ಇವರಿಗಿಲ್ಲ. ಅಥವಾ ಅದು ಇವರ ಕತೆಗಳ ಕಾಳಜಿಯಲ್ಲ, ಆಧುನಿಕತೆಯು ಬದಲಾವಣೆಯ ಆರೋಗ್ಯದಲ್ಲಿ ಭಾಗಿಯಾಗಬೇಕಾದ ಮೌಲ್ಯವಾಗಬೇಕಾದ್ದರಿಂದ ಹಾಗೂ ವಿಕಾರಗಳು ಕಾಣಸಿಗುವುದಿಲ್ಲ. ಬದಲಾಗಿ ಸ್ವಾತಂತ್ರ್ಯೋತ್ತರ ಭಾರತದ ಬದುಕು ಎದುರಿಸುತ್ತಿರುವ ತಳಮಳಗಳ ಕುದಿತ ಇವರ ಕತೆಗಳಲ್ಲಿದೆ.

ಇಂಥ ಅಸಲೀ ಕತೆಗಾರ, ಅಸಲೀ ಮನುಷ್ಯ ಆಸ್ಪತ್ರೆಯಿಂದ ಮತ್ತೆ ಮನೆಗೆ ಬರಲಿಲ್ಲ. ಡಾ. ಬೆಸಗರಹಳ್ಳಿ ರಾಮಣ್ಣನವರು ಆಸ್ಪತ್ರೆಯಿಂದ ತಮ್ಮ ಮನೆಗೆ ಹಿಂತಿರುಗಿ ಬರಲೆಂದು ಎಲ್ಲ ಹಿತೈಷಿಗಳೂ ಹಾರೈಸುತ್ತಿದ್ದಾಗ, ಸಾವು ತಾನು ಬರೆದ ಕತೆಯನ್ನು ಓದಲು ತನ್ನ ಮನೆಗೆ ಕರೆದೊಯ್ದಿತು.

ನಿಜ : ಸಾವು ರಾಮಣ್ಣನವರ ಕತೆ ಬರೆಯಿತು. ತನ್ನ ಅಭಿವ್ಯಕ್ತಿಯೇ ಶ್ರೇಷ್ಠಾತಿಶ್ರೇಷ್ಠವೆಂಬ ಡೌಲು ಮೆರೆಯಿತು. ನಾವೆಲ್ಲ ಈಗ ಒಂದೇ ದನಿಯಲ್ಲಿ ಈ ಸಾವಿಗೆ ಹೇಳಬೇಕು- ‘ಏ ಸಾವೇ, ನೀನು ಬರೆದ ಕತೆಯ ಕೊನೆಯಲ್ಲ; ಬದುಕಿಗೆ ಕೊನೆಯೆಂಬುದಿಲ್ಲ. ನಮ್ಮ ರಾಮಣ್ಣನವರನ್ನು ನಮ್ಮೊಳಗೆ ನಾವು ಬದುಕಿಸಿಕೊಳ್ಳುತ್ತೇವೆ; ಬದುಕುತ್ತ ಹೋಗುತ್ತೇವೆ.’
*****
(೨೭-೭-೧೯೯೮)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಸಾಧ್ಯ
Next post ಎಲೆ ಚೆಲುವ ದುಂದುಗಾರನೆ

ಸಣ್ಣ ಕತೆ

 • ಅವಳೇ ಅವಳು

  ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

 • ಹೃದಯದ ತೀರ್ಪು

  ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

 • ಉಪ್ಪು

  ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

 • ಬಲಿ

  ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

 • ಮರೀಚಿಕೆ

  ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…