ಅಪರಾಧದ ಒಂದು ಮುಖವಾಗಬಲ್ಲ – ವೈವಾಹಿಕ ಅತ್ಯಾಚಾರ

ಅಪರಾಧದ ಒಂದು ಮುಖವಾಗಬಲ್ಲ – ವೈವಾಹಿಕ ಅತ್ಯಾಚಾರ

“ಗಲಗಸದೆ ಗಾಬರಿಗೊಳಿಸದೆ ಮಿಗೆ
ಕಲಹವ ಗಂಟುವಡಿಸದೆ
ಬಲುಮೆಗೆಯ್ಯದೆ ಬಾಲೆಯ ಬಣ್ಣವಾತಿನಿಂ
ದೊಲಿಸಿಯೊತ್ತಿಗೆ ಬರಿಸುವುದು”

ಇದು ಸಂಚಿಯ ಹೊನ್ನಮ್ಮ ತನ್ನ ಕೃತಿ “ಹದಿಬದೆಯ ಧರ್‍ಮ”ದಲ್ಲಿ ಪತಿಧರ್‍ಮದ ಕುರಿತು ಹೇಳಿದ ನುಡಿಗಳಲ್ಲಿ ಒಂದು. ಹೆಣ್ಣು ಸೂಕ್ಷ್ಮಮನಸ್ಸಿನವಳು. ಹಾಗಾಗಿ ಪತಿಯಾದವನು ಆಕೆಯನ್ನು ಗೊಂದಲ ಪಡಿಸದೆ, ಗಾಬರಿಗೊಳಿಸದೆ, ಕಲಹಕ್ಕೆಳೆಸದೆ, ಅವಳ ಮೇಲೆ ಅಧಿಕಾರ ಬಲತೋರದೆ, ಆಕೆಯನ್ನು ಪ್ರೀತಿಯ ಮಾತುಗಳಿಂದ ಒಲಿಸಿಕೊಳ್ಳಬೇಕು. ಆಕೆ ಮನಃಪೂರ್‍ವಕವಾಗಿ ಆತನ ಒಪ್ಪುವಂತೆ ಮಾಡಬೇಕೆ ಹೊರತು ಒತ್ತಾಯದಿಂದ ಒರಟಾಗಿ ನಡೆಸಿಕೊಳ್ಳಬಾರದು ಎಂದಿದ್ದಾಳೆ. ಯಾಕೆಂದರೆ ಪತಿಪತ್ನಿ ಸಂಬಂಧಗಳು ಸೂಕ್ಷ್ಮ. ಆದರೆ ಇಂದು ಪರಿಸ್ಥಿತಿ ತೀರಾ ವ್ಯತಿರಿಕ್ತವಾಗಿದೆ.

ಈ ಪ್ರಸ್ತುತಿಯ ಅಗತ್ಯವೆಂದರೆ ಮೊನ್ನೆಮೊನ್ನೆ ಕೇಂದ್ರ ಸರಕಾರ ವೈವಾಹಿಕ ಅತ್ಯಾಚಾರ ಅಪರಾಧವನ್ನಾಗಿ ಪರಿಗಣಿಸಬಾರದು ಎಂದು ದೆಹಲಿ ಹೈಕೊರ್‍ಟಿಗೆ ಪ್ರಮಾಣ ಪತ್ರ ಸಲ್ಲಿಸಿದೆ. ವಿವಾಹಿತ ಮಹಿಳೆಗೆ ಪತಿಗೆ ಕಿರುಕುಳ ನೀಡಲು ಇದೊಂದು ಸುಲಭದ ಅಸ್ತ್ರವಾಗಲಿದೆ ಎಂಬ ಉಲ್ಲೇಖಿಸಿದೆ. ಇದು ಪತಿಯಾದವ ಪತ್ನಿಯ ಮೇಲೆ ಮಾಡುವ ಲೈಂಗಿಕ ಜಬರದಸ್ತಿಗೆ ಬೆಂಬಲವಾಗಿದೆ. ಪತ್ನಿಯನ್ನು ಒಲಿಸಿಕೊಳ್ಳದೇ ದೈಹಿಕ ಪ್ರಯೋಗದಿಂದ ಒತ್ತಾಯದ ಆಕ್ರಮಣಕ್ಕೆ ಸಹಕಾರ ಸಿಕ್ಕಂತಾಗಿದೆ. ಅದೂ ಅಲ್ಲದೇ ಭಾರತದ ಸಂಪ್ರದಾಯಶೀಲತೆಯನ್ನು ಮೂಲಭೂತವಾದಿ ಧೊರಣೆಯನ್ನು ಮತ್ತೊಮ್ಮೆ ಸರಕಾರವೇ ಎತ್ತಿ ಹಿಡಿದಿದೆ. ವೈವಾಹಿಕ ಅತ್ಯಾಚಾರ ಅಪರಾಧವಾದರೆ ವಿವಾಹ ಸಂಬಂಧವೇ ಅಸ್ಥಿರವಾಗುತ್ತದೆ ಎಂಬ ವಾದವನ್ನು ಮುಂದಿಟ್ಟಿದೆ. ಈ ಮೂಲಕ ಪುರುಷ ಸಮುದಾಯದ ಮೇಲೆಗೈಗೆ ತನ್ನ ಕೈ ಜೋಡಿಸುವ ತುಳಿತಕ್ಕೊಳಗಾದ ದಮನಕ್ಕೊಳಗಾಗುತ್ತಿರುವ ಸ್ತ್ರೀ ಸಮುದಾಯವನ್ನು ದೌರ್‍ಜನ್ಯದ ಬಂಧಿಖಾನೆಗೆ ನೂಕುವ ಪ್ರಯತ್ನ ಮಾಡುತ್ತಿದೆ. ಇನ್ನೂ ಕಾಯಿದೆಗಳ ಕೈ ಕಟ್ಟಿ ಹಾಕಿ ಕಾನೂನಿನಲ್ಲಿ ವೈವಾಹಿಕ ಅತ್ಯಾಚಾರ ವ್ಯಾಖ್ಯಾನಿಸಿಲ್ಲ. ಐಪಿಸಿ ಸೆಕ್ಷನ್ ೩೭೫ರಡಿಯಲ್ಲಿ ಅತ್ಯಾಚಾರ ಮಾತ್ರ ವ್ಯಾಖ್ಯಾನಿಸಲ್ಪಟ್ಟಿದೆ ಎಂದು ತಿಳಿಸಿದೆ. ೪೯೮ ಎ ರಡಿಯಲ್ಲಿರುವ ಕಾನೂನು ಕೂಡಾ ದುರ್‍ಬಳಕೆ ಆಗುತ್ತಿದ್ದು ವಿವಾಹಿತ ಮಹಿಳೆಗೆ ಪತಿ ಮತ್ತು ಅತ್ತೆ ಮಾವ ನೀಡುವ ಕಿರುಕುಳಕ್ಕೆ ಸಂಬಂದಿಸಿದಂತೆ ಇದು ದುರ್ಬಳಕೆ ಆಗುತ್ತಿದೆ ಎಂಬ ಸಲಹೆ ನೀಡಿದೆ. ಒಟ್ಟಾರೆ ಮತ್ತೊಮ್ಮೆ ಸ್ತ್ರೀ ತನ್ನ ರಕ್ಷಣೆಗೆ ಅವಕಾಶ ಮಾಡಿಕೊಟ್ಟ ಹಲವು ಕಾನೂನುಗಳು ಮುಂದಿನ ದಿನಗಳಲ್ಲಿ ಬದಲಾಗುವ ಮೂಲಕ ಸ್ತ್ರೀ ದೌರ್‍ಜನ್ಯದ ಪ್ರಕರಣಗಳು ಸಾವಿರ ಪಟ್ಟು ಹೆಚ್ಚಾಗುವ ಎಲ್ಲ ಸಾಧ್ಯತೆಗಳು ಕಂಡುಬರುತ್ತಿವೆ.

ಭಾರತೀಯ ಹಿಂದೂ ವಿವಾಹಗಳಲ್ಲಿ “ಧರ್ಮೇ ಚ ಅರ್‍ಥೇ ಚ ಕಾಮೇ ಚ ನಾತಿಚರಿತವ್ಯಾ” ಎಂದು ಏಳು ಹೆಜ್ಜೆಗಳನ್ನು ಗಂಡು ಹೆಣ್ಣು ತುಳಿದು ದಾಂಪತ್ಯಕ್ಕೆ ಕಾಲಿಡುತ್ತಾರೆ. ಈ ಸಂದರ್‍ಭದಲ್ಲೇ ಇಬ್ಬರೂ ದೈಹಿಕ ಸಂಪರ್‍ಕಕ್ಕೆ ಸಮ್ಮತಿಸಿಯೇ ಒಂದಾಗಿರುತ್ತಾರೆ. ಆದರೆ ಕೆಲವೊಮ್ಮೆ ಹೆಣ್ಣಿನ ದೇಹಪ್ರಕೃತಿ ಪುರುಷನಿಗೂ ವಿಭಿನ್ನವಾಗಿರುವುದು, ಮುಟ್ಟು ಬರುವ ಸಂದರ್‍ಭಗಳಲ್ಲಿ ದೈಹಿಕ ಆಲಸ್ಯ ಹೊರೆಯಾಗುವುದು ಸರ್‍ವೆಸಾಮಾನ್ಯ. ಕೆಲವೊಮ್ಮೆ ಜಾಡ್ಯಗಳಿಂದ ಆಕೆ ಹೈರಾಣಾಗಿರಬಹುದು. ಅಂತಹ ಸಂದರ್‍ಭಗಳಲ್ಲಿ ಪತಿಯ ದೈಹಿಕ ಬಯಕೆಗಳ ಹೆಣ್ಣು ತಿರಸ್ಕರಿಸಬಹುದು. ಅಂತಹ ಸಂದರ್‍ಭಗಳಲ್ಲಿ ಪತಿಯಾದವನು ಧರ್‍ಮದ ನೆಲೆಯಲ್ಲಿ ಚಿಂತಿಸಬೇಕೆ ಹೊರತು ಬಲಪ್ರಯೋಗದಿ ಆಕೆಯ ಕೂಟ ಬಯಸಿದರೆ ಆದು ನಿಜಕ್ಕೂ ಅತ್ಯಾಚಾರವೇ ಎಂಬುದನ್ನು ಯಾರೂ ಅಲ್ಲಗಳಿಯುವಂತಿಲ್ಲ. ಪತಿಯಾದವ ಪ್ರೀತಿಯಿಂದ ಹೆಣ್ಣನ್ನು ಕೂಟಕ್ಕೆ ಕರೆದು ಸಮಾನ ಸಂತೃಪ್ತಿ ಪಡೆದಾಗಲೇ ಅದಕ್ಕೊಂದು ಅರ್‍ಥ ಬರಲು ಸಾಧ್ಯ. ಅದಾಗದೇ ಗಂಡಿನ ಇಚ್ಛೆಗೆ ತಕ್ಕಂತೆ ಆಕೆ ಕುಣಿವ ಗೊಂಬೆ ಎಂದು ತಿಳಿಯುವುದು ಅನಾಗರಿಕ ಪರಂಪರೆ, ಸಮಾನತೆಯ ವಿರುದ್ಧ ನಡಿಗೆ.

ಬಡ ಕುಟುಂಬಗಳಲ್ಲಿ ಇತರ ಮನೋರಂಜನೆಯ ಅವಕಾಶಗಳು ಕಡಿಮೆ. ಹಾಗಾಗಿ ಕುಡಿದು ಬರುವ ಗಂಡ ಪತ್ನಿಯ ಗೋಳು ಹೊಯ್ದುಕೊಳ್ಳುವ ಅನೇಕ ಉದಾಹರಣೆಗಳಿವೆ. ನಮ್ಮ ಸುತ್ತಮುತ್ತಲಿನ ಹಲವು ಕುಟುಂಬಗಳಲ್ಲಿ ಮೂರು ನಾಲ್ಕು ಮಕ್ಕಳ ಹುಟ್ಟಿಸಿದ ತಂದೆ ಅವರ ಬದುಕಿನ ಯಾವ ಹೊರೆಯನ್ನು ಹೊರದೆ, ಬಿಟ್ಟರೆ ಸಿಕ್ಕದವನಂತೆ ತನ್ನ ಚಟಗಳಲ್ಲೆ ವ್ಯಸ್ತನಾಗಿರುವ ಸಾಮಾನ್ಯ ದೃಶ್ಯಗಳು ಬಹುತೇಕರ ಅನುಭವ ವೇದ್ಯ. ಹೆತ್ತ ತಾಯಿಯೇ ಆ ಮಕ್ಕಳ ವಿದ್ಯಾಭ್ಯಾಸಕ್ಕೆ ಹೊಟ್ಟೆಗೆ ದುಡಿದು ಹಾಕುತ್ತಿರುವುದು ಸರ್‍ವಸಾಮಾನ್ಯವಾಗಿ ಕುಡಿತಕ್ಕೆ ಬಲಿಯಾದ ಪುರುಷರ ಮನೆಯಲ್ಲಿ ನಿತ್ಯದ ಸಂಗತಿ. ಇಂತಲ್ಲಿ ದುಡಿದು ಬಂದು ಹೈರಾಣಾಗಿರುವ ಆ ಹೆಣ್ಣು ಪತಿಯ ಲೈಂಗಿಕ ದೌರ್ಜನ್ಯವೇನಾದರೂ ನಿತ್ಯದರ್‍ಶನವಾದರೆ ಆಕೆಯ ಬದುಕು ನರಕವೇ. ಹೀಗಿದ್ದೂ ಸ್ತ್ರೀಗೆ ಈ ಕಿರುಕುಳದಿಂದ ಸ್ವಲ್ಪ ಮಟ್ಟಿಗಾದರೂ ಮುಕ್ತಿ ಸಿಗುವ ಆತನ ಬೆದರಿಸುವ ಈ ತಂತ್ರವೂ ಇಲ್ಲವೆಂದಾದರೆ ಆಕೆಯ ಜೀವನ ಇನ್ನಷ್ಟು ಯಾತನಾಮಯವಾಗುವುದರಲ್ಲಿ ಸಂದೇಹವಿಲ್ಲ. ಎಲ್ಲೋ ಒಂದೆರಡು ಹೆಣ್ಣುಗಳು ಈ ಅವಕಾಶವನ್ನು ದುರುಪಯೋಗ ಮಾಡಿಕೊಂಡಿದ್ದಾದರೆ ಇಡೀ ಹೆಣ್ಣು ಸಮಾಜಕ್ಕೆ ಒಂದು ಭರವಸೆಯ ಬೆಳಕಾಗಿದ್ದ ಈ ಕಾನೂನಿನ ವಿರುದ್ಧ ಸರಕಾರವೇ ತಿರುಗಿ ಬಿದ್ದು ಪಟ್ಟಭಧ್ರ ಮೂಲಭೂತವಾದಿತ್ವವನ್ನು ಪ್ರತಿಪಾದಿಸಹೊರಟಿದೆ. ಜನಸಂಖ್ಯೆಯ ಸುಮಾರು ಅರ್‍ಧದಷ್ಟಿರುವ ಸ್ತ್ರೀ ಸಮೂಹದ ಮೇಲೆ ತನ್ನ ಆ ಹಳೆಯ ಮೌಢ್ಯಭರಿತ ನಿಯಂತ್ರಣದ ಬಲೆ ಮುತ್ತಹೊರಟಿದೆ. ಸಮಾನತೆಯ ಸ್ವರಕ್ಷಣೆಯ ಅವಕಾಶಗಳನ್ನು ಕಿತ್ತೆಸೆದು ಅವರ ದುರ್‍ಬಲರನ್ನಾಗಿಸಲು ನಡೆಸಿದ ಹುನ್ನಾರದಂತಿದೆ.
ಹೆಣ್ಣು ತನ್ನ ಸಹನೆ ದಯೆ ತ್ಯಾಗ ಕ್ಷಮೆಯ ಕಾರಣ ಪುರುಷಗಿಂತ ವಿಶಿಷ್ಟಳಾಗುತ್ತಾಳೆ. ಅದರಲ್ಲೂ ನಮ್ಮ ಭಾರತೀಯ ಸ್ತ್ರೀ ಸಮುದಾಯ ಸದಾಕಾಲ ಅಂತಹ ಚೌಕಟ್ಟಿನ ಬಲೆಯಲ್ಲಿಯೇ ತನ್ನದೇ ಆದ ಶ್ರೇಷ್ಠ ಮಾದರಿಯ ಪಾತ್ರಗಳಾಗಿ ಇತಿಹಾಸ ಪುರಾಣಕಾಲದಿಂದಲೂ ಸರ್‍ವಶ್ರೇಷ್ಠ ಸಾದ್ವಿ ಎಂದೆಲ್ಲ ಗೌರವಕ್ಕೆ ಪಾತ್ರರಾಗಿದ್ದುದು ಇದೆ. ಇದಕ್ಕೆ ಕಾರಣ ಕೂಡಾ ಪುರುಷ ಪ್ರಧಾನ ಮೌಲ್ಯಗಳು ಎಂಬ ವಾದವನ್ನು ಅಲ್ಲೆಗಳೆಯದೇ ಇದ್ದರೂ ಆ ಶ್ರೇಷ್ಟತೆ ತಂದುಕೊಡುವ ಅವಿಚ್ಛಿನ್ನ ಆದರ್‍ಶಪ್ರಾಯ ವ್ಯಕ್ತಿತ್ವದ ಬೆಲೆಯನ್ನು ಮರೆಯುವಂತಿಲ್ಲ. ಅದರೊಂದಿಗೆ ಪುರುಷನ ದುಷ್ಟ ಪ್ರವೃತ್ತಿ, ಆತನ ಧಾರ್ಷ್ಟ್ಯದ ವಿರುದ್ಧ ಆಕೆಯ ಸಹನೆ ಕ್ಷಮೆ ಉತ್ಕೃಷ್ಟವಾಗುತ್ತವೆ. ಹಾಗೆಂದ ಮಾತ್ರಕ್ಕೆ ಗಂಡಿನ ಎಲ್ಲ ದೌರ್‍ಜನ್ಯಗಳ ಸಹಿಸಿ ನುಂಗಿ ಬದುಕಬೇಕೆನ್ನುವ ಕಾನೂನನ್ನು ಸರಕಾರವೇ ರೂಪಿಸಹೊರಟಿರುವುದು ನಿಜಕ್ಕೂ ಕಳವಳಕಾರಿಯಾದ ಸಂಗತಿ. ಇದು ಆಕೆಯ ಲೈಂಗಿಕ ಸ್ವಾತಂತ್ರ್ಯವನ್ನು ಹರಣಗೊಳಿಸಿದಂತೆ. ಲೈಂಗಿಕ ಸ್ವಾತಂತ್ರ್ಯವೆಂದರೆ ಸಾಮಾನ್ಯವಾಗಿ ಉದಾಹರಿಸುವಂತೆ ಮನಸ್ಸಿಗೆ ಹಿಡಿಸಿದವರೊಂದಿಗೆ ಕೂಟಕ್ಕೆಳೆಸುವುದಲ್ಲ. ತನಗಿಷ್ಟವಿಲ್ಲದ ತನ್ನಿಂದಾಗದ ಸಂದರ್‍ಭಗಳಲ್ಲಿ ಅದರಿಂದ ದೂರವಿರುವುದು. ಅದಕ್ಕೆ ಪತಿಯಾದರೂ ಸರಿಯೇ. ಆಕೆ ಕೂಡ ತನ್ನಂತೆ ಮಾನವಳು, ಎಲ್ಲ ಸ್ವಾತಂತ್ರ್ಯಕ್ಕೆ ಅರ್‍ಹಳು ಎಂಬ ಸಾಮಾನ್ಯ ಜ್ಞಾನವಿಲ್ಲದೇ ವ್ಯವಹರಿಸುವ ಸಾವಿರ ಪುರುಷರ ನಾಡಿನಲ್ಲಿ ಸರಕಾರ ಸಾಧಿಸಹೊರಟಿರುವ ಇಂತಹ ಪ್ರಯತ್ನಕ್ಕೆ ಸ್ತ್ರೀ ಸಮೂಹ ಎಂದೂ ಸಹಮತಿಸದು.

ಹೆಣ್ಣು ಗಂಡು ಪರಸ್ಪರ ಗೌರವದಿಂದ ಸಮಾನ ಭಾವದಿಂದ, ಒಬ್ಬರನ್ನೊಬ್ಬರು ಅರಿತು ಬದುಕುವ ರೀತಿಯಿಂದ ಮಾತ್ರ ಬದುಕಿನ ಆನಂದ ಹೆಚ್ಚುತ್ತದೆ. ಅವರಲ್ಲಿ ಯಾರೊಬ್ಬರೂ ಕೀಳಲ್ಲ, ಮೇಲಲ್ಲ. ಬೇಧ ಮರೆತು ಯಾವ ಸತಿಪತಿಗಳು ಸಹಕರಿಸಿ ಬದುಕುವರೋ ಅವರ ಜೀವನ ಸ್ವರ್‍ಗಸಮಾನವೆಂದು ಸಂಚಿಯ ಹೊನ್ನಮ್ಮ ತನ್ನ ಹದಿಬದಿಯ ಧರ್‍ಮದಲ್ಲಿ ಉಲ್ಲೇಖಿಸಿದ್ದಾಳೆ. ಆದರೆ ಸಾಂಪ್ರದಾಯಿಕ ವ್ಯವಸ್ಥೆಯಲ್ಲಿದ್ದಂತೆ ಆಕೆಯ ವ್ಯಕ್ತಿತ್ವ ಗೌಣವಾಗಿ ಪರಿಗಣಿಸಲ್ಪಟ್ಟಿದ್ದು ಕೀಳಾಗಿ ಕಾಣುವ ಪರಂಪರೆ ಕಡಿಮೆ ಆಗಬೇಕಿದೆ. ಆದ್ದರಿಂದ ಪತಿಪತ್ನಿ ಸಮಾನ ಮನೋಭಾವದ ಸಹಕಾರದ ಸಹಬಾಳ್ವೆಯಿಂದ ಜೀವಿಸುವುದ ಪ್ರೇರೇಪಿಸುವ ಅಗತ್ಯತೆ ಇದೆ ಹೊರತು ಯಾರೊಬ್ಬರ ಮೇಲೂ ದಬ್ಬಾಳಿಕೆ ಅವಕಾಶಗಳ ಕಲ್ಪಿಸುವ ಕಾಯಿದೆ ಕಾನೂನುಗಳಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾಳೆ
Next post ಭರತವಾಕ್ಯ

ಸಣ್ಣ ಕತೆ

 • ಲೋಕೋಪಕಾರ!

  ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

 • ಕಳಕೊಂಡವನು

  ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

 • ಬೂಬೂನ ಬಾಳು

  ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

 • ನಿರಾಳ

  ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

 • ಮನೆಮನೆಯ ಸಮಾಚಾರ

  ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

cheap jordans|wholesale air max|wholesale jordans|wholesale jewelry|wholesale jerseys