ಮನದೊಳಗಣ ಕಿಚ್ಚು

ಮನದೊಳಗಣ ಕಿಚ್ಚು

ಕರೀಮ ಆ ಕತ್ತಲನ್ನು ಸೀಳಿಕೂಂಡು ಬಂದ. ಪೆಡಸುಪಡಸಾದ ಮೈ…. ಅಗಲಿಸಿದ ಕಣ್ಣುಗಳಲ್ಲಿ ದ್ವೇಷಾಗ್ನಿ. ಕೈಯಲ್ಲಿ ಹರಿತವಾದ ಕುಡಗೋಲು….”ಲೇಽಽ ಅಬಿದಾಲಿ. ಇವತ್ತ ನಿನ್ನ ಕತಲ್‍ರಾತ್ರಿ !” ಕತ್ತಲನ್ನು ಬೆಚ್ಚಿಬೀಳಿಸುವ ಆಸ್ಪೋಟದ ಧ್ವನಿ …… ತೋಟದ ಅಂಗಳದ ತುಂಬಾ ಒಣಗಲು ಹರವಿದ್ದ ಶೇಂಗಾ…. ಪಕ್ಕದಲ್ಲಿ ಮಲಗಿದ್ದ ಅಬಿದಾಲಿ…. ಅವನ ಎದೆಯ ಮೇಲೆ ಒಂದೇ ನೆಗೆತಕ್ಕೆ ಹಾರಿ ಕುಳಿತ ಕರೀಮ. ಉಸಿರಾಡಲು ಹೆಣಗಾಡಿದ ಅಬಿದಾಲಿಯ ಕತ್ತು ಕತ್ತರಿಸಿತ್ತು ಅವನ ಕೈಯ ಕುಡುಗೋಲು. ಮುಲ್ಲಾನ ಚೂರಿಯಿಂದ ಕೊರಳು ಕತ್ತರಿಸಿಕೊಂಡ ಕೋಳಿಯಂತೆ ಅಬಿದಾಲಿ ವಿಲಿವಿಲಿಸಿದ. ಧಾರೆಧಾರೆ ರಕ್ತ. ಸೈತಾನ ಹೊಕ್ಕಂತೆ ಅಬಿದಾಲಿಯ ರುಂಡ, ಮುಂಡ, ಕ್ಕೆಕಾಲು ಕೊಚ್ಚಿ “ಈ ತ್ವಾಟ ನಮಗ…. ಗೋರಿ ನಿನಗ” ಎಂದು ವಿಕಾರವಾಗಿ ಕೂಗಿದ ಕರೀಮ. ಅವನ ಕೇಕೆಗೆ ಹುಚ್ಚು ನಗೆಯ ಆವೇಶ ತುಂಬಿತ್ತು.

ದಿಗ್ಗನೆದ್ದು ಕುಳಿತಳು ಹಮೀದಾ. ತಲ್ಲಣದ ಮೈತುಂಬಾ ಬೆವರು. ಕರುಳಲ್ಲಿ ಸಂಕಟ. ಸಾವರಿಸಿಕೊಂಡು ಎದ್ದು ಅಬಿದಾಲಿಯ ಕೋಣೆಯತ್ತ ಧಾವಿಸಿ “ಬೇಟಾ” ಎಂದು ಕರೆದಳು. “ಏನು ಅಮ್ಮಾ?” ನಿದ್ದೆಗಣ್ಣಲ್ಲೇ ಕೇಳಿದ್ದ ಅಬಿದಾಲಿ. ಮಗನ ಧ್ವನಿ ಕೇಳಿ ಹಮೀದಾಳ ಕಳವಳದ ಮನಸ್ಸು ಸಮಾಧಾನಗೊಂಡಿತು. “ಏನಿಲ್ಲ ಮಲಗು ಬೇಟಾ” ಎಂದು ಹಿಂತಿರುಗಿ ಬಂದು ಹಾಸಿಗಯಲ್ಲಿ ಕುಳಿತಳು. ಕಂಡದ್ದು ಕನಸು ಎಂಬುದು ಅವಳ ಅರಿವಿಗೆ ಬಾರದಿರಲಿಲ್ಲ. ಆದರೆ ಅದೆಂಥ ಖರಾಬ್ ಕನಸು !

ಕರೀಮನ ಮತ್ಸರಾವತಾರ ಅವಳ ತೆರೆದ ಕಣ್ಣೆದುರು ಮತ್ತೆ ಪ್ರತ್ಯಕ್ಷವಾಗಿತ್ತು. “ಆ ಹರಾಮಜಾದೆಯನ್ನು ಕಡಿದು ಚೂರುಚೂರು ಮಾಡಿ ತ್ವಾಟದ ತುಂಬ ಚರಾಗ ಚಲ್ತಿನಿ” ಅಂದ ಅವನ ಮಾತು ಅವಳ ಎದೆಯ ಗಹ್ವರದಲ್ಲಿ ಪ್ರತಿಧ್ವನಿಸಿತು. ಒಂದೇ ರಕ್ತಕ್ಕೆ ಹುಟ್ಟಿದ ಮಕ್ಕಳು ಪರಸ್ಪರ ವೈರಿಗಳಾದರು ! ಮುಂದೆ ಎಂಥ ದುರಂತ ಸಂಭವಿಸುವುದೋ ? ತಹತಹಿಸಿದಳು ಹಮೀದಾ. ಕನಸು ವಿಜೃಂಭಿಸಿದ ಕಣ್ಣುಗಳು ಹನಿಯೊಡೆದವು.

***

ಅಬಿದಾಲಿಯ ಮೇಲೆ ಕರೀಮನಿಗೆ ವಿಪರೀತ ಸಿಟ್ಟಿದೆ ಎಂಬುದು ಅವಳಿಗೆ ಚನ್ನಾಗಿ ಗೊತ್ತಿದೆ. ತೋಟದಲ್ಲಿಪಾಲು ಸಿಗಲಿಲ್ಲ‌ಎನ್ನುವ ಕಾರಣ ಅವನ ಮನಸ್ಸಿನೊಳಗೆ ಆಸೂಯೆಯ ಲಾವಾವನ್ನು ಕುದಿಸುತ್ತಿರುವುದು ಕೂಡಾ ಗೊತ್ತು. ಊರಿಗೆ ತೀರಾ ಹತ್ತಿರದಲ್ಲಿರುವ ತೋಟ ಎಲ್ಲರ ಕಣ್ಣು ಕುಕ್ಕಿಸುವುದು. ಅದರ ಮಣ್ಣ ಚಿನ್ನವೇ ! ಕಾಸೀಮಸಾಹೇಬರಿಗೆ ಅದು ಅದೃಷ್ಟ ಎನ್ನುವಂತೆ ಸಿಕ್ಕಿತ್ತು. ಕಿರಾಣಿ ವ್ಯಾಪಾರಿಗಳಾದ ಅವರು ಹಾಳುಬಿದ್ದ ಆ ಹೊಲವನ್ನು ನಂದನವನವಾಗಿ ಪರಿವರ್ತಿಸುವಲ್ಲಿ ಸಫಲರಾದರು. ಆ ವೇಳೆಗೆ ಅಲೆಮಾರಿಯಾಗಿ ಬಂದು ಅವರ ಜೊತೆಗೂಡಿದ ಚಲುವಜ್ಜ ತನ್ನೂಡೊಲ ಪ್ರೀತಿಯನ್ನು ತೋಟದ ಮಣ್ಣಿಗೆ ಬಸಿದ.

ಮದುವೆಯಾಗಿ ಹನ್ನೆರಡು ವಷ೯ವಾದರೂ ಮಕ್ಕಳಾಗದ ಹಮೀದಾ, ಮತ್ತೊಂದು ನಿಕಾಹ್ ಮಾಡಿಕೊಳ್ಳಲು ಗಂಡನಿಗೆ ಒತ್ತಾಯಿಸಿದ್ದಳು. ಕಾಸೀಮಸಾಹೇಬರು ಬಿಲ್ಕುಲ್ ಆಗದೆಂದು ನಿರಾಕರಿಸಿದ್ದರು. ಹೆಂಡತಿಯ ಮೇಲಿನ ಸಾಂದ್ರವಾದ ಪ್ರೀತಿ ಆ ದಿಸೆಯಲ್ಲಿ ಅವರನ್ನು ಗಟ್ಟಿಗೊಳಿಸಿತ್ತು. ಆದರೆ ಹಮೀದಾ ಹಠ ಹಿಡಿದು, ಅನ್ನ-ನೀರು ತ್ಯಜಿಸಿ ಕುಳಿತಳು. ಸೋತ ಕಾಸೀಮಸಾಹೇಬರು ಜುಬೇದಾಳೊಂದಿಗೆ ನಿಕಾಹ್ ಮಾಡಿಕೊಂಡರು. ಅಂಥ ಸಂಭ್ರಮದ ಕ್ಷಣದಲ್ಲಿ ಅಚ್ಚರಿ ಎನ್ನುವಂತೆ
ಜುಬೇದಾ ಮನೆ ತುಂಬಿದ ಮೂರು ತಿಂಗಳಿಗೆ ಹಮೀದಾಳ ಗರ್ಭ ಬೀಜಾಂಕುರದ ಪುಳಕ ಅನುಭವಿಸಿತ್ತು. ಆಕೆ ಅಬಿದಾಲಿಗೆ ಜನ್ಮನೀಡಿದ ಬಳಿಕ ಜುಬೇದಾ, ಶರೀಫ್,ರಹಮತ್, ಕರೀಮ್ ಹಾಗೂ ತಸ್ರಿಫಾ ಅವರಿಗೆ ತಾಯಿಯಾಗಿದ್ದಳು.

ಮಕ್ಕಳಿಗೆ ಓದಿಸಬೇಕೆಂಬ ಮಹತ್ವಾಕಾಂಕ್ಷೆ ಸಾಹೇಬರದಾಗಿತ್ತು ಆದರೆ ಮಕ್ಕಳಿಗೆ ವ್ಯವಹಾರದ ಕಡೆಗೆ ಆಸಕ್ತಿ. ರಹಮತ್, ಕರೀಮ್ ಆ ಸೆಳೆತದಿಂದ ಕಿರಾಣಿ ಅಂಗಡಿ ಹಿಡಿದು ಕುಳಿತರು. ವಸ್ತುಗಳ ಖರೀದಿಯ ಜವಾಬ್ದಾರಿಯನ್ನು ಶರೀಫ್ ವಹಿಸಿಕೊಂಡರೆ ಅಬಿದಾಲಿ ತೋಟದ ಉಸ್ತುವಾರಿಗೆ ನಿಂತ. ತೋಟದ ತೆಂಗು, ಬಾಳೆ, ದಾಳಂಬರಿ, ದ್ರಾಕ್ಷಿ, ಸೇಂಗಾ, ತರಕಾರಿ, ಧಾನ್ಯಗಳ ಮಾರ್ಕೆಟ್ ವ್ಯವಹಾರವನ್ನು ಅವನೇ ನೋಡಿ ಕೊಂಡಿದ್ದ. ಮಕ್ಕಳ ಪರಿಶ್ರಮ, ವ್ಯವಹಾರ ಚತುರತೆ ಕಾಸೀಮ ಸಾಹೇಬರಿಗೆ ನೆಮ್ಮದಿ ತಂದಿತ್ತು. ತಸ್ರಿಫಾ ಒಳ್ಳೆಯ ಮನೆ ಸೇರಿಕೊಂಡ ಮೇಲೆ ಅಬಿದಾಲಿ ಮತ್ತು ಶರೀಫ್‍ರ ನಿಕಾಹ್ ಜರುಗಿದ್ದವು. ಹಮೀದಾ-ಜುಬೇದಾ ತನುವೆರಡಾದರೂ ಮನಸ್ಸೊಂದಾಗಿ ಅನ್ಯನ್ಯತೆಯ ಗಂಧ ತೀಡಿದ್ದರು. ಕಾಸೀಮಸಾಹೇಬರ ಬದುಕು ಘಮ-ಘಮಿಸತೊಡಗಿತ್ತು.

ಅದರಲ್ಲಿ ಕೊಳಕು ಸ್ರವಿಸುವ ಇರಾದೆಯೋ ಎಂಬಂತೆ ದಾವೂದನ ಪ್ರವೇಶವಾಗಿತ್ತು. ಅಬಿದಾಲಿಗೆ ಹೆಣ್ಣುಕೊಟ್ಟ ಮಾವ ಅವನು. ನೆಂಟಸ್ತನದ ನೆಪದಲ್ಲಿ ಆಗಾಗ ಮುಖ ತೋರಿಸಿ ಹೋಗುತ್ತಿದ್ದವನು ವಷಾ೯ರು ತಿಂಗಳು ಕಳೆದ ಮೇಲೆ ಅಳಿಯನ ಮನೆಯಲ್ಲಿತನ್ನ ಮನಸ್ಸೋ ಇಚ್ಚೆ ತಳವೂರತೊಡಗಿದ್ದ. ಕಾಸೀಮಸಾಹೇಬರು ಊರಿನಲ್ಲಿ ನಾಲ್ಕು ಉಪ್ಪರಿಗೆಯ ಮನೆ ಮತ್ತು ಆದಕ್ಕೆ ಹೊಂದಿಕೊಂಡಂತೆ ದೊಡ್ಡ ಕಿರಾಣಿ ಅಂಗಡಿಯನ್ನು ಕಟ್ಟಿಸಿದರು. ಆಲ್ಲಿ ಜುಬೇದಾ ಮತು ತೋಟದ ಮನೆಯಲ್ಲಿ ಹಮೀದಾ ಇದ್ದರು. ಇದೆಲ್ಲ ಕೌಟುಂಬಿಕ ವ್ಯವಹಾರವನ್ನು ಸರಿದೂಗಿಸುವ ಕಾಸೀಮಸಾಹೇಬರ ಕ್ರಮವಾಗಿತ್ತು. ದಾವೂದನೂ ಅದನ್ನು ತಿಳಿದವನಾಗಿದ್ದ. ಆದರೆ ಅವನ ಅಕ್ರಮ ಬುದ್ದಿ ಇದನ್ನು ಸಹ್ಯವೆಂದು ಒಪ್ಪಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಹಾಲಿನಲ್ಲಿ ಹುಳಿ ಹಿಂಡುವುದು ಅವನ ನೀಚ ಪ್ರವೃತ್ತಿ. ಆದರೆ ಅದು ದಿಢೀರೆಂದು ಕಾಯಾ೯ಚರಣೆಗೆ ತೊಡಗುವಂಥದ್ದಲ್ಲ. ಅಂತಸ್ತು ಮತ್ತು ಆರ್ಥಿಕ ಸಾಮಥ್ಯ೯ದಿಂದ ಆವನು ಪ್ರಬಲನಾಗಿರಲಿಲ್ಲ. ಸಮೃದ್ಧ ಮಾತುಗಾರಿಕೆಯ ಜಂಭದಲ್ಲಿ ಏನೆಲ್ಲವನ್ನು ತನ್ನ ಸುಪರ್ದಿಗೆ ಒಪ್ಪಿಸಿಕೊಂಡುಬಿಡುವ ಚಾಲಾಕುತನದಿಂದ ಮುಗ್ದ ಅಬಿದಾಲಿಯನ್ನು ತನ್ನ ತಾಳಕ್ಕೆ ಕುಣಿಯುವಂತೆ ಮಾಡಿದ್ದ. ಅವನಿಗೆ ಸಾಲುಸಾಲಾಗಿ ಆರು ಜನ ಹೆಣ್ಣಮಕ್ಕಳು, ಅವರನ್ನು ಒಳ್ಳೆಯ ಮನೆತನಕ್ಕೆ ಕೊಟ್ಟಿದ್ದ. ಅಬಿದಾಲಿಯ ಹೆಂಡತಿ ನಸೀಮಾ ಅವನ ಕೊನೆಯ ಮಗಳು. ಚಲುವಿನ ಚಿತ್ತಾರದಂತಿದ್ದ ಆಕೆಯೆಂದರೆ ಅವನಿಗೆ ವಿಶೇಷ ಮಮತೆ. ಅಬಿದಾಲಿ ಜೋರುಕಾ ಗುಲಾಮನಾಗಿ ಮಾಪ೯ಡುವಲ್ಲಿ ನಸೀಮಾಳ ಲಾವಣ್ಯವೂ, ದಾವೂದನ ಕಾರಸ್ಥಾನವೂ ಯಶಸ್ಸು ಕಂಡಿದ್ದವು.

ಕಾಸೀಮಸಾಹೇಬರ ಆವಿಭಕ್ತ ಕುಟುಂಬದಲ್ಲಿ ಕಳ್ಳಿಯಹಾಲು ಸುರಿಯಲು ಅವನ ಒಳತೋಟಿ ಕಾತರಿಸಿತ್ತು ಅವನ ಆದೃಷ್ಟ ಎನ್ನುವಂತೆ ಕಾಸೀಮಸಾಹೇಬರು ಅಚಾನಕ್ಕಾಗಿ ಲಕ್ವಾ ಪೀಡಿತರಾದರು. ಕೊಡಿಸಿದ ಯಾವ ಚಿಕಿತ್ಸೆಯೂ ಫಲಕಾರಿಯಾಗದೇ ಅವರು ಬದುಕು ಸಾವಿನ ಹೋರಾಟದೊಂದಿಗೆ ಹಾಸಿಗೆಯಲ್ಲಿ ಸ್ಥಿರವಾದರು. ದಾವೂದ ಕ್ಷಿಪ್ರವಾಗಿ ಮಗಳ ಮೂಲಕ ಅಳಿಯನ ಆಂತರಾಳದಲ್ಲಿ ಸುನಾಮಿಯ ಅಲೆಯೆಬ್ಬಿಸಿದ್ದ. ತನಗೂ ಎಷ್ಟು ಸಾಧ್ಯವೋ ಅಷ್ಟು ಪಿತೂರಿಯ ಗೊಬ್ಬರವನ್ನು ಅವನ ತಲೆಯಲ್ಲಿ ತುಂಬಿಸಿದ್ದ. ಅಬಿದಾಲಿ ಆ ಗೊಬ್ಬರದೊಳಗೆ ಹುಳುವಾಗಿ ಹರಿದಾಡಿದ.

***

ಕಾಸೀಮಸಾಹೇಬರು ಬರಿ ಕಣ್ಣು ಪಿಳುಕಿಸುತ್ತಿದ್ದರು. ಆವರ ತೊದಲು ಮಾತು ದುಸ್ತರವೆನಿಸಿತ್ತು. ಆವತ್ತು ಅವರು ಅಬಿದಾಲಿಗೆ ಏನನ್ನೋ ಹೇಳಲು ಹಾತೊರೆದಿದ್ದರು. ದಾವೂದ ಆದರ ಹೊಳವು ಗ್ರಹಿಸಿಕೊಂಡವನಂತೆ ತುತಾ೯ಗಿ ಹೋಗಿ ತನಗೆ ಪರಿಚಿತವಿರುವ ವಕೀಲರೊಬ್ಬರನ್ನು ಕರೆದುಕೊಂಡು ಬಂದಿದ್ದ. ವಕೀಲರನ್ನು ಕಂಡ ಸಾಹೇಬರು ಕಣ್ಣರಳಿಸಿದ್ದರು. ವಕೀಲರು ಆವರ ಭಾವನೆಗಳನ್ನು ತಿಳಿದುಕೊಳೃಲು ಬಹಳ ಹೆಣಗಾಡಿದ್ದರು. ಆದರೂ ಆವರಿಂದ ಉಯಿಲು ಸಿದ್ದಗೊಂಡಿತ್ತು. ತಂದೆಯ ಜಡ ಹಸ್ತವನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಅಬಿದಾಲಿ ಅವರಂತೆ ಉಯಿಲಿನಲ್ಲಿಸಹಿ ಹಾಕಿದ್ದ. ಇಂಥ ಕೃತ್ಯಕ್ಕೆ ಪ್ರಚೋದನೆ ನೀಡುವ ಮೂಲಕ ಪಾಪದ ಹೊರೆಯೊಂದನ್ನು ಅಳಿಯನ ತಲೆಯ ಮೇಲೆ ಹೊರಿಸಿದ್ದ ದಾವೂದ. ಅದು ನಿಕೃಷ್ಟ ಹೊರೆಯೆಂದು ಅಬಿದಾಲಿಗೆ ತಿಳಿಯಲಿಲ್ಲ. ಸ್ಯೆತಾನ ದಾವೂದನ ಮನಸ್ಸಿಚ್ಛೆ ಸಂಭ್ರಮವೆಂದರೆ ಅತೀ ಸಂಭ್ರಮವಾಗಿ ಅನಾವರಣಗೊಂಡಿತ್ತು.

ಉಯಿಲಿನಲ್ಲಿ ಬರೆದಿರುವ ವಿಷಯವನ್ನು ಅರಿತುಕೊಳ್ಳುವ ಧಾವಂತವಿತ್ತೇನೋ…. ಕಾಸೀಮಸಾಹೇಬರು ಒಂದೇ ಸಮನೆ ತೊದಲಿದ್ದರು. ದಾವೂದ ಅದನ್ನು ನಿಲ೯ಕ್ಷಿಸಿ ವಕೀಲರನ್ನು ಕರೆದುಕೊಂಡು ಹೋಗಿದ್ದ.

ಉಯಿಲು ಆದ ನಾಲ್ಕನೆಯ ದಿನಕ್ಕೆ ಕಾಸೀಮಸಾಹೇಬರು ಕಬರ್ ಸೇರಿದ್ದರು. ಅವರ ದಿನಕಮ೯ಗಳು ಮುಗಿದ ಮೇಲೆ ಜಮಾತಿನ ಕೆಲವು ಹಿರಿಯರ ಸಮ್ಮುಖದಲ್ಲಿ ಲಕೋಟೆ ಒಡೆಯಲಾಗಿತ್ತು. ಲಾಯರ್ ಅದರೊಳಗಿನ ವಿಷಯವನ್ನು ಓದಿ ಹೇಳಿದ್ದರು. ಊರಿನಲ್ಲಿರುವ ನಾಲ್ಕುಮನೆ, ಕಿರಾಣಿ ಆಂಗಡಿ ಜುಬೇದಾ ಮತ್ತು ಅವಳ ಮಕ್ಕಳಿಗೆ, ತೋಟ, ಅಲ್ಲಿನ ಮನೆ ಹಮೀದಾ ಮತ್ತು ಅಬಿದಾಲಿಗೆ ಪಾಲಾಗಿರುವುದೆಂದು ನಿಣ೯ಯಿಸಲಾಗಿತ್ತು.

ಕರೀಮನ ಒಡಲಲ್ಲಿ ಆಸಮಾಧಾನದ ಹೊಗೆ ಎದ್ದಿತ್ತು. ಮನೆಗೆ ಬಂದವನೇ “ಭಯ್ಯಾ ನಮಗೆ ಮೋಸ ಮಾಡಿದ” ಎಂದು ಹುಯಿಲೆಬ್ಬಿಸಿದ್ದ.
“ಉಯಿಲು ಬರಿಸಿದ್ದು ನಿಮ್ಮ ಬಾಬಾ, ಅದರಾಗೇನು ಮೋಸಾ?” ಮೋಸದ ಒಳಸುಳಿ ಗೊತ್ತಿದರೂ ಜುಬೇದಾ ಆದನ್ನು ತೇಲಿಸಿದ್ದಳು.
“ಉಯಿಲು ಬರೆಸಿದ್ದು ಬಾಬಾ ಅಲ್ಲ, ಆ ದುಷ್ಮನ್ ದಾವೂದ” ಕರೀಮನ
ಬಿಸಿರಕ್ತದ ಆಕ್ರೋಶ ಜುಬೇದಾಳ ಬಾಯಿಕಟ್ಟಿಸಿತ್ತು.

“ನಮ್ಮ ಮನೆ ವಿಚಾರದಾಗ ಆ ನಸಲಿ ಹರಾಮ್ ಯಾಕ್ ಮೂಗು
ತೂರಿಸಬೇಕು?” ಕರೀಮ ಕೇಳಿದ್ದರಲ್ಲಿ ನ್ಯಾಯವಿತ್ತು.

“ಅಲ್ಲಾಹ್ ಎಲ್ಲಾನೂ ನೋಡ್ತಾನೆ ಬಿಡು” ಮಗನನ್ನು ಸಮಾಧಾನ ಮಾಡಲು ನೋಡಿದ್ದಳು ಜುಬೇದಾ.

“ಭಯ್ಯಾನಿಗಾದರೂ ಇದು ತಿಳಿಬೇಕಿತ್ತು’ ಎಂದಿದ್ದ ರಹಮತ್.

“ದಾವೂದನ ಬಗಲ ಬಚ್ಚಾ, ಬೇಶರಮ್ ಅವನು !” ಕರೀಮನ ಮಾತು ತುಚ್ಛವಾಗಿತ್ತು.

“ಅಬಿದಾಲಿ ನಿನಗಿಂತಲೂ ದೊಡ್ಡಾಂವ. ಹಂಗೆಲ್ಲಾ ಅನ್ನಬೇಡ” ಹಗುರಾಗಿ ಗದರಿದ್ದಳು ಜುಬೇದಾ.

” ಅದಕ್ಕೇ ನಮಗ ಮೋಸ ಮಾಡಿ ತನ್ನ ದೊಡ್ಡಸ್ತಿಕೆ ತೋರಿಸಿದ ಅಂವಾ. ನಮಗೂ ಆ ತೋಟದ ಮೇಲೆ ಹಕ್ಕು ಐತಿ. ಅದರಾಗ ಪಾಲು ಸಿಗುತನಕ ನಾನು ಬಿಡೂದಽಽ ಇಲ್ಲ” ಕರೀಮನ ಧೋರಣೆ ಸವಾಲಿನಂತಿತ್ತು.

ಮಗನ ಒಡಲಲ್ಲಿ ಹುಟ್ಟಿಕೂಂಡ ಮತ್ಸರದ ಕಿಚ್ಚಿನಿಂದ ಜುಬೇದಾ ಆತಂಕ ಅನುಭವಿಸಿದ್ದಳು. ಆ ಕಿಚ್ಚು ಹೊತ್ತಿ‌ಉರಿಯಬಾರದೆನ್ನುವ ತಹತಹಿಕೆ ಕೂಡ ಅವಳಲ್ಲಿ ಹೆಚ್ಚಿತ್ತು. ತಂದೆಯ ಆಸ್ತಿಯನ್ನು ಮಕ್ಕಳು ಹೆಚ್ಚುಕಡಿಮೆ ಪಾಲುಮಾಡಿಕೊಂಡಿರಬಹುದು. ಸಂಬಂಧವನ್ನು ಪಾಲುಮಾಡಿಕೊಳ್ಳಲು ಸಾಧ್ಯವಿಲ್ಲ ಅಂದುಕೊಂಡಿದ್ದಳಾಕೆ.

****

ತೋಟದ ಮೇಲೆ ಅಬಿದಾಲಿಗೆ ಸಹಜ ಪ್ರೀತಿ ಇತ್ತು. ಆದರೆ ಕೆಟ್ಟ ದಾಹ ಇದ್ದದ್ದು ದಾವೂದನಿಗೆ. ಅದರ ಫಲದ ಎಷ್ಟೋ ಭಾಗ ಈ ದಾಹದ ಉದರ ಸೇರುತ್ತಿರುವುದರ ಕಲ್ಪನೆ ಕೂಡಾ ಇರದಂತಿದ್ದ ಅಬಿದಾಲಿ. ಚಲುವಜ್ಜನಿಗೆ ತನ್ನ ಕಣ್ಣಗಾವಲು ನಿರಥ೯ಕ ಎನ್ನುವ ಸ್ಥಿತಿ. ಒಂದೆರಡು ಸಲ ದಾವೂದನ ಕಬಳಿಕೆಯ ಬಗ್ಗೆ ಅಬಿದಾಲಿಯ ಎದುರು ಪ್ರಸ್ತಾಪಿಸಿದ್ದು ವ್ಯಥ೯ವೆನಿಸಿತ್ತು. ದಾವೂದನಿಗೆ ಚಲುವಜ್ಜನೆಂದರೆ ಆಷ್ಟಕಷ್ಟೆ. ಕಾಸೀಮಸಾಹೇಬರ ಮೈತ ಆದ ಮೇಲೆ ಅವನನ್ನು ತೋಟದಿಂದ ಓಡಿಸಲು ದಾವೂದ ಹಾಕಿದ ಪ್ಲಾನನ್ನು ಹಮೀದಾ ಹುಸಿಗೊಳಿಸಿದ್ದಳು. “ಚಲುವಜ್ಜ ತೋಟದ ಜೀವಾಳ” ಎಂದಾಕೆ ಸ್ಪಷ್ಟವಾಗಿ ಹೇಳಿದ್ದಳು.

ತೋಟದ ದಾಳಂಬರಿ ತುಂಬಿಕೊಂಡು ಲಾರಿ ಹೈದರಾಬಾದಿಗೆ ಹೋಗುವಾಗ, ಟ್ರ್ಯಾಕ್ಟರ ದ್ರಾಕ್ಷಿ, ತೆಂಗು, ಧಾನ್ಯ, ತರಕಾರಿಗಳನ್ನು ಮಾರ್ಕೆಟ್‌ಗೆ ಒಯ್ಯುವಾಗ ಕರೀಮನ ರಕ್ತ ಕಳಕಳ ಎನ್ನುವದು. ಅವನು ಒಳ್ಳೆಯ ಹುಡುಗನಾದರೂ ಸ್ವಭಾವ ನಿಷ್ಠುರ. ಆವೇಶವೂ ಹೆಚ್ಚು. ಜುಬೇದಾಳಿಗೆ ಆದೇ ಭಯ.

ಅವತ್ತು ತನ್ನನ್ನು ಕುರಿತು ಅಬಿದಾಲಿ ಕ್ಷುಲಕ ಮಾತನಾಡಿದನೆಂದು ಕೇಳಿಸಿಕೊಂಡು ಮನೆಗೆ ಬಂದು ಕೈಯಲ್ಲಿಕುಡುಗೋಲು ಹಿಡಿದುಕೊಂಡು ಬಿರುಗಾಳಿಯಂತೆ ತೋಟದ ಕಡೆಗೆ ಹೊರಟವನನ್ನು ಜುಬೇದಾ ಅಡ್ಡಗಟ್ಟಿದ್ದಳು. ಈ ಪ್ರಸಂಗ ಕೇಳಿದ ಹಮೀದಾ ಎದೆ ಒಡೆದು ಹೋದಂತೆ, ಮಗನ ಕಣ್ಣುತಪ್ಪಿಸಿ ತಂಗಿಯ ಮನೆಗೆ ಬಂದು, ಕರೀಮನ ಕೈ ಹಿಡಿದು “ಬೇಟಾ, ನಿಮ್ಮ ಭಯ್ಯಾಗ ಅಕಲು ಕಮ್ಮಿ. ದಾವೂದನ ಮಾತು ಕೇಳಿ ನಮಗ ಅನ್ಯಾಯ ಮಾಡಿದ್ದು ಖರೆ. ನೀವು ನನ್ನ ಪಾಲಿನ ಆಸ್ತಿನss ತಗೋರಿ. ಭಯ್ಯಾಗ ಮಾಫ್ ಮಾಡ್ರಿ” ಎಂದು ಗೋಗರೆದಿದ್ದಳು. ಆಕೆ ದೊಡ್ಡಮ್ಮ ಎಂಬ ಸಂಬಂಧ ಲೆಕ್ಕಿಸದೆ “ಆ ನಾಲಾಯಕನಿಗ ಮಾಫ್ ಇಲ್ಲ ನೀನು ಪಂಚರಂಗಿ ಅಟ ಆಡಬ್ಯಾಡ” ಎಂದು ಹಮೀದಾಳನ್ನು ದೂರಕ್ಕೆ ತಳ್ಳಿದ್ದ. ಜುಬೇದಾ ಮಗನ ಕಪಾಳಕ್ಕೆ ಹೊಡೆದು ಅಕ್ಕನ ಕ್ಷಮೆ ಕೇಳಿದ್ದಳು. ಅಪಮಾನದಿಂದ ಅಳುತ್ತ ಮನೆಗೆ ಹಿಂತಿರುಗಿದ್ದಳು ಹಮೀದಾ.

ನಾ ಇನ್ಸಾಫಿ ಹಕೀಕತ್‍ನೊಂದಿಗೆ ರಾಜಿಮಾಡಿಕೊಳ್ಳುವ ಇರಾದೆ ಕರೀಮನದಲ್ಲ. ತೋಟದಲ್ಲಿ ಸಮಪಾಲು ದೊರಕಿಸಿಕೊಳ್ಳುವ ಹಸಿಹಸಿ ತುಡಿತದಲ್ಲಿ ಅವನು ಕೋಟಿ೯ನ ಮೆಟ್ಟಲೇರಲು ನಿಧ೯ರಿಸಿದ್ದ. ಲಾಯರ್ ಹತ್ತಿರಕ್ಕೂ ಹೋಗಿ ಮಾತನಾಡಿದ್ದ. ಈ ವಿಷಯದಲ್ಲಿ ಜುಬೇದಾ ಮಗನನ್ನು ವಿರೋಧಿಸಿದ್ದಳು. ಅಷ್ಟಲ್ಲದೇ ಜಮಾತಿನ ಚೇರ್ಮನ್ ಫಕ್ರುದ್ದೀನಸಾಹೇಬರನ್ನು ಕರೆಯಿಸಿ ಮಗನಿಗೆ ಬುದ್ಧಿ ಹೇಳಿಸಿದ್ದಳು. ಕೋರ್ಟು-ಕಚೇರಿಯ ಸಂಗತಿ ಸುಖದ್ದಲ್ಲ ಎಂದು ಫಕ್ರುದ್ದೀನರು ಕರೀಮನಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಆದರೆ ಅವನ ಮನದೊಳಗಣ ಕಿಚ್ಚಿನ್ನು ತಣ್ಣಗಾಗಿಸಲು ಅವರಿಂದ ಸಾಧ್ಯವಾಗಲಿಲ್ಲ.

ಅವನು ಹಮೀದಾಳನ್ನು ಆವರಿಸಿಕೊಂಡಿದ್ದು ಇದೇ ಕಾರಣಕ್ಕಾಗಿ. ತನ್ನ ಮಡಿಲಲ್ಲಿ ಕೂಸಾಗಿ ಆಡಿದ ಕರೀಮ ಮೀಸೆ ಬಂದಮೇಲೆ ಎಷ್ಟು ಬದಲಾಗಿದ್ದಾನೆ ಎಂದು ಆಕೆಯ ಹೃದಯ ಚಡಪಡಿಸಿತ್ತು. ಆವನು ತನ್ನನ್ನು ಪಂಚರಂಗಿಯೆಂದು ಲೇವಡಿ ಮಾಡಿ ಕರುಳ
ಮಮತೆ ಕಡೆಗಣಿಸಿ ನೂಕಿದ್ದು ಅಬಿದಾಲಿಯ ಮೇಲಿನ ದ್ವೇಷದ ಪರಿಣಾಮದಿಂದ ಎಂದಾಕೆ ತಿಳಿದಿದ್ದಳು. ಅಬಿದಾಲಿ ಮಾಡಿದ ದ್ರೋಹ ದುಬಾರಿಯದಾಗಿದೆ. ಅದು ಕರೀಮನಿಗೆ ಅಸಹನೆ ಹುಟ್ಟಿಸಿದೆ. ಮಗನ ಬದುಕು ಹೇಗೋ ? ಎಂಬ ಚಿಂತೆಯಿಂದ ಅವಳ ಜೀವ ಸೊಗಸು ಕಳೆಗುಂದಿತ್ತು. ಮೊದಲಿನಂತೆ ಆಕೆ ತೋಟದಲ್ಲಿ ಸುತ್ತಾಡುವುದನ್ನು ನಿಲ್ಲಿಸಿದ್ದಳು. ಹೊರಗೆ ಬಂದರೆ ಕರೀಮನ ವ್ಯಗ್ರ ಮುಖವೇ ಅವಳೆದುರು ನಿಲ್ಲುವುದು. ಇಲ್ಲೆಲ್ಲೋ ಆವನು ಜಪ್ಪಿಸಿಕೂಂಡು ಕುಳಿತಿರುವಂತೆ, ಅಬಿದಾಲಿಯ ಬೇಟೆಗೆ ಹೊಂಚುಹಾಕಿ ಸುಳಿದಾಡುತ್ತಿರುವಂತೆ ಗುಮಾನಿ ಹುಟ್ಟಿಸಿಕೊಂಡ ಆಕೆ “ಯಾರಬ್ಬಾ !” ಎನ್ನುತ್ತಾ ತಸಬಿ ಹಿಡಿದು ಕುಳಿತು ಬಿಡುತ್ತಿದ್ದಳು.

ಮಕ್ಕಳ ಭವಿಷ್ಯಕಾಗಿ ಹೆತ್ತವರು ದುಡಿದು ಸಣ್ಣಾಗುವರು. ಬಾಯಿಗೆ ಮಣ್ಣು ಹಾಕಿಕೊಂಡು ಸಂಪತ್ತು ಸಂಗ್ರಹಿಸುವರು. ಅವರ ಬೆವರು ವಾಸನೆಯ ಪರಿಮಳವನ್ನು ಆಸ್ವಾವದಿಸುವ ಮಕ್ಕಳು ಮಾತ್ರ ನೀಚರಾಗುವರು. ಸಂಪತ್ತು ಗಳಿಸುವವರಿಗೆ ನೋವೇ ಗತಿ ! ಅಲ್ಲಿ ಅವರು ಎಂಥ ಯಾತನೆ ಆನುಭವಿಸುತ್ತಿದ್ದಾರೋ ? ಹಮೀದಾ ಗಂಡನನ್ನು ನೆನಪಿಸಿಕೊಂಡು ಚಡಪಡಿಸುತ್ತಿದ್ದಳು.

****

ರಾತ್ರಿ ಕಂಡ ಭೀಕರ ಕನಸ್ಸಿನಿಂದಾಗಿ ಭೀತಿಗೊಳಗಾದ ಆಕೆ ಇಡೀ ದಿನ ನಮಾಜು ಮಾಡತೊಡಗಿದ್ದಳು. ಅಬಿದಾಲಿ ಆಮ್ಮಾss ಎಂದು ಕೂಗಿದ್ದ . ದು‌ಆ ಬೇಡಿ ಮುಖದ ಮೇಲೆ ಹಸ್ತಗಳನ್ನು ಆಡಿಸಿಕೊಂಡು ಹೊರಬಂದಳು ಹಮೀದಾ.

`ಈ ಸಲ ಸೇಂಗಾ ನೂರು ಚೀಲ ಆಗುವುದು ಅಮ್ಮಾ’ ಉತ್ಸಾಹದಿಂದ ಹೇಳಿದ ಅಬಿದಾಲಿ.

“ಎಲ್ಲಾ‌ ಆ ದೇವರ ದಯ !” ಪ್ರತಿಕ್ರಿಯಿಸಿದಳು ಹಮೀದಾ.

“ಅಮ್ಮಾ ನಾಳೆ ಅಡತಿಗೆ ಹೋಗಿ ಸೇಂಗಾ ಹಚ್ಚಿ ಬರಬೇಕು” ಅಬಿದಾಲಿ ಹೇಳಿದ.

“ನಾಡದು ಬಡೋಂಕೆ ಈದ್. ಆಮೇಲೆ ಶಬ್ಬೇ ಬಾರಾತ್ ಅದು ಮುಗಿಲಿ ಬೇಟಾ” ಎಂದಳು ಹಮೀದಾ.

ಅವನ ಉಲ್ಲಾಸದ ಕ್ಷಣವನ್ನು ಅವಕಾಶ ಮಾಡಿಕೊಂಡ ಆಕೆ “ನಿಮ್ಮ ಬಾಬಾನ ಮೈಯತ್ತಾಗಿ ನಾಲ್ಕು ವಷ೯ ಆಯ್ತಲ್ಲಬೇಟಾ” ಎಂದು ತನ್ನಂತರಂಗದ ಮಾತಿಗೆ ಪೀಠಿಕೆ ಹಾಕಿದಳು. ಅಬಿದಾಲಿ ಹೌದು ಎಂದ. ಅವಳ ಕಣ್ಣಲ್ಲಿ ತಟ್ಟನೆ ನೀರು ಜಿನುಗಿತು.

“ನಿಮ್ಮ ಬಾಬಾನ ಆತ್ಮಕ್ಕ ಶಾಂತಿ ಇಲ್ಲಾ ಅನಸ್ತೈತಿ. ಆವರು ಮ್ಯಾಲಿಂದ ಮ್ಯಾಲೆ ಕನಸನ್ಯಾಗ ಬರ್‍ತಾರ. ಒಂದೂ ಮಾತssಸ್ಟ್ ಆಡುದಿಲ್ಲ. ಸುಮ್ಮನ ನಿಂತ್ಕೊಂಡು ಅಳತಾರ” ಹೊಯ್ದಾಡಿದಳು ಹಮೀದಾ.

“ಬಾಬಾನಿಗೆ ಏರಿಸಲು ನಾನು ಕಪಡಾ ತರ್‍ತೀನಿ ಅಮ್ಮ” ತಾಯಿಗೆ ಸಮಾಧಾನ ಹೇಳಿದ ಅಬಿದಾಲಿ.

“ಅವರ ಮನಸ್ಸಿನ್ಯಾಗ ಏನೋ ಕೊರಗು ಇರುವುದು ಬೇಟಾ” ಎಂದ ತಾಯಿಯ ಮುಖವನ್ನು ಅದೇನು ಎನ್ನುವಂತೆ ನೋಡಿದ ಅಬಿದಾಲಿ.

“ನಿನ್ನ ತಮ್ಮಂದಿರು ಬ್ಯಾರೆ ಇರುದರ ಸಂಕಟ ಇರಬೇಕು”

“ನಮ್ಮಿಂದ ಅವರೇ ದೂರ ಇದ್ದಾರಲ್ಲ ಅಮ್ಮಾ”

“ಈ ತ್ವಾಟದಾಗ ಪಾಲು ಸಿಗಲಿಲ್ಲ ಅಂತ ಅವರಿಗೆ ಬೇಜಾರು”

“ಅದು ಹೊಟ್ಟಿಕಿಚ್ಚು ಅನ್ನು”

“ಆ ಹುಡುಗರು ಅಂಥವರಲ್ಲ ಬೇಟಾ”

“ನನಗಿಂತ ನಿನಗೆ ಅವರ ಮ್ಯಾಲೆ ನಂಬಿಕಿ ಜಾಸ್ತಿ”

“ನೀವೆಲ್ಲಾರೂ ನನ್ನ ಮಡಿಲಾಗ ಆಡಿ ಬೆಳದೋರು. ನನಗ ಎಲ್ಲಾರೂ ಅಷ್ಟೆ.
ಆದ್ರ ಪಾಲಿನ ವಿಷಯದಾಗ ಜನರು ಆಡಿಕೊಳ್ಳೋ ಮಾತು ನನ್ನೆದಿ ಇರಿತಾವು
ಬೇಟಾ”

“ಜನರ್‍ಯಾಕಂತಿ? ಆ ನಿನ್ನ ಮಕ್ಳssಊರತುಂಬಾ ಹೇಳ್ಕೊಂತ ತಿರಗತಾರನ್ನು”

“ಎಷ್ಟssಆಗಲಿ ಆವರು ನಿನಗಿಂತ ಸಣ್ಣವರು”

“ಆ ತಾಯಿ-ಮಕ್ಳು ಭಾರಿ ಜಾಬಾದಿ ಆದಾರ. ಬಾಬಾ ಇರುವಾಗss ಒಳಗಿಂದೊಳಗ ರೊಕ್ಕಾ, ಬಂಗಾರ ಮಾಡ್ಕೊಂಡಾರ. ನಿನಗೇನು ಗೊತ್ತಾಗುದಿಲ್ಲ. ದಾವೂದ ಮಾಮು ನನಗೆಲ್ಲಾ ಹೇಳ್ಯಾನ.”

“ನೀನು ಓತಿಕಾಟದ ಮಾತು ನಂಬ್ತಿ. ಬ್ಯಾನಿ ತಿಂದು ಜನ್ಮಕೊಟ್ಟಾಕಿ ಮಾತಿಗೆ ಕಿಮ್ಮತ್ತಿಲ್ಲ ನಿನ್ನ ಛೋಟಿ ಅಮ್ಮ ಆಗ್ಲಿ ತಮ್ಮಗೋಳಾಗ್ಲಿ ಖರಾಬ್ ಆಲ್ಲ. ಈ ತ್ವಾಟಾ ಬೇಕಾದ್ರ ನೀನss ತಗೋ. ಆದ್ರ ಅವರನ್ನ ಹತ್ರ ಕರಕೋ. ದ್ವೇಷಾನ ಪ್ರೀತಿಯಿಂದ ಗೆಲ್ಲುದರಾಗ ಖುಷಿ ಇರೋದು ಬೇಟಾ. ಹ್ಯಾಂಗು ಈಗ ಮೌಕಾ ಐತಿ. ಅವರನ್ನ ಕರಿಸು. ಎಲ್ಲಾರೂ ಕೂಡಿ ಫಾತಿಹಾ ಕೊಟ್ರ ನಿಮ್ಮ ಬಾಬಾನ ಆತ್ಯಕ್ಕ ಶಾಂತಿ ಸಿಗತೈತಿ” ಒಳತುಡಿತ ಪ್ರಕಟಿಸಿದಳು ಹಮೀದಾ.

” ಅವರು ಬೇಕಾದ್ರ ಬರಲಿ. ನಾನಂತೂ ಸಲಾಮ್ ಹೊಡೆಯೊದಿಲ್ಲ ”

” ಇಂಥಾ ಹಠದ ಮಾತು ನಿನಗೆ ಶೋಭಾ ತರುದಿಲ್ಲ ಬೇಟಾ ”

” ಮನಷ್ಟು ಕೆಡಿಸಿಕೊಂಡವರ ಬಗ್ಗೆ ನಾನು ತಲಿ ಕೆಡಿಸಿಕೊಳ್ಳೋದಿಲ್ಲ ”

“ಯಾ ರಬ್ಬಾ! ನಾನು ಗೋರಿಗೆ ಹೋಗುತನಕ ಇಂಥ ಮಾತss ಕೇಳಬೇಕಾ?”

ಹಣೆಬಡಿದುಕೊಂಡಳು ಹಮೀದಾ.

***

ಚೆಲುವಜ್ಜನ ಎದುರು ನಿಂತುಕೊಂಡ ಅಬಿದಾಲಿ ಬೇಸರದಿಂದ ಒಟಗುಟ್ಟಿದ “ಅಮ್ಮಾನದೊಂದು ದೊಡ್ಡ -ಕಿರಿಕಿರಿಯಾಯ್ತು”

” ಏನಾಯ್ತು ಮುನ್ನಾ ? ” ದ್ರಾ,ಕ್ಷಿಯ ಬಳ್ಳಿಗೆ ಔಷಧಿ ಸಿಂಪಡಿಸುತ್ತಲೇ ಕೇಳಿದ ಚಲುವಜ್ಜ.

” ಈದ್ಗೆ ಅವರನ್ನು ಕರಸು ಅಂತಾಳೆ ಅಮ್ಮಾ”

” ಯಾರನ್ನ? ”

” ಛೋಟಿ ಅಮ್ಮಾ ಮತ್ತ ಆಕೆಯ ಮಕ್ಕಳನ್ನ ”

” ಭಾಭಿ ಹೇಳಿದ್ದು ಛಲೋ ಮಾತು. ಕರಸಿ ಬಿಡು ಮುನ್ನಾ ”

” ಚಾಚಾ, ನಿಂದೂ ಆದೇ ರಾಗ, ಅದೇ ಹಾಡಾತು ”

” ಭಾಭಿ ಹೇಳುದ್ರಾಗ ತಪ್ಪಿಲ್ಲ ಮುನ್ನಾ ”

” ನಾನು ಸವ೯ನಾಶ ಆಗಬೇಕಂತ ಯೋಚಿಸ್ತಾರ ಆವರು ”

” ಹಾಗಾಂತ ಯಾರು ಹೇಳಿದ್ರು ನಿನಗ? ”

” ಅದೆಲ್ಲಾ ಬೆನ್ನ ಹಿಂದಿನ ಮಾತು. ಖರೆ ಎಷ್ಟೋ, ಸುಳ್ಳು ಎಷ್ಟೋ? ಅವರು ಅಂದ್ರಂತ ನೀನು, ನೀನು ಮಾತಾಡದಿ ಅಂತ ಅವರು ಸುಮ್ಮ ಸುಮ್ಮಕ ಮನಸ್ಸಿನ್ಯಾಗ ಕಿಚ್ಚು ಹೊತ್ತಿಸಿಕೊಂಡೀರಿ. ಇಂಥಾ ಕಿಚ್ಚಿಗೇ ಅಲ್ಲೇನು ಮಹಾಭಾರತ ನಡೆದಿದ್ದು; ಕುರುಕ್ಷೇತ್ರ ಯುದ್ಧ ಆಗಿದ್ದು ”

” ಆ ಕಿಚ್ಚು ಅವರ ಹೊಟ್ಯಾಗಿಂದು ”

” ನಿಂದೋ, ಅವರದೋ. ಕಿಚ್ಚಿಗೆ ಗಾಳಿ ಊದಾಕಹತ್ತೀರಿ. ಅದು ನಿಮ್ಮನ್ನ ಸುಡತೈತಿ ಅನ್ನೋ ಪ್ರಜ್ಞಾ ಇಲ್ಲಾ”

” ಎಲ್ಲಾರೂ ಒಂದಿನಾ ಸಾಯೋದೈತಿ ಬಿಡು ಚಾಚಾ ”

” ಹುಟ್ಟಿದ ಮನುಷ್ಯಾ ಸಾಯೋದು ಖರೆ. ಆದ್ರ ಹೀಂಗ ದ್ವೇಷಾ ಮಾಡಿ ಸಾಯೋದ್ರಾಗ ಅಥ೯ ಇಲ್ಲ. ದೇವರು ನಮಗ ಬದುಕಾಕ ಹುಟ್ಟಿಸ್ಯಾನ. ಒಟ್ಟಿಗೇ ಇರಾಕಂತ ಭೂಮಿ ಕೊಟ್ಟಾನ. ಪ್ರೀತಿ ಹಂಚ್ಗೊಂಡು ಇರುದು ಬಿಟ್ಟು ಸಾಯೋ ಆಟಾ ಆಡ್ತೀನಂದ್ರ ಇದೇನು ಬುದ್ಧಿನೋ ತಮ್ಮ ” ಚಲುವಜ್ಜ ನಿಟ್ಟುಸಿರಿದ. ಮತ್ತೆ ಅವನ ಕಣ್ಣಿಂದ ನೀರು ಉದುರಿತು. “ಚಾಚಾ, ನೀನು ಅಳಾಕ ಹತ್ತಿ ?” ಅಚ್ಚರಿಯಿಂದ ಕೇಳಿದ ಅಬಿದಾಲಿ.

“ಹಳೆದೆಲ್ಲಾ ನೆಪ್ಪಾತು ಮುನ್ನಾ …. ..” ಧೋತರದ ಚುಂಗಿನಿಂದ ಕಣ್ಣೊತ್ತಿಕೊಂಡ ಚಲುವಜ್ಜ.

“ನೆನಪಾ…. ಅದೇನು ಚಾಚಾ?” ಅಬಿದಾಲಿ ಕೇಳಿದ.

ಚಲುವಜ್ಜನ ಮುಖದಲ್ಲಿ ಒಮ್ಮೆಲೇ ದುಗುಡ ಆವರಿಸಿಕೊಂಡಿತು. ತಾನು ಇದುವರೆಗೂ ಕಂಡಿರದ ನೋವು ಅಲ್ಲಿ ಹೆಪ್ಪುಗಟ್ಟಿದೆ ಅನಿಸಿ, ಏನೂ ಕೇಳಬಾರದೆಂದು ಅಬಿದಾಲಿ ಮೌನವಹಿಸಿದ. ಆದರೆ ಹೇಳದೇ ಇರಬಾರದೆಂದು ನಿಧ೯ರಿಸಿದವನಂತೆ
ಚಲುವಜ್ಜ ತನ್ನ ಹೆಗಲಿಗೆ ಹಾಕಿಕೊಂಡಿದ್ದ ಪಂಪನ್ನು ಕೆಳಗಿರಿಸಿ, ಸಮೀಪದ ಬದುವಿನ ಮೇಲೆ ಕುಳಿತ. ಬಗಲಗಸಿ ಅಂಗಿಯ ಜೇಬಿನಿಂದ ಬೀಡಿಯೊಂದನ್ನು ತೆಗೆದು ಬಾಯಿಗಿಟ್ಟು ಕಡ್ಡೀಗೀರಿದ. ಉರಿಯುತ್ತಿದ್ದ ಕಡ್ಡಿಯನ್ನು ಅಬಿದಾಲಿಗೆ ತೋರಿಸುತ್ತ “ಇದss ಉರಿ ತಮ್ಮ, ನನ್ನ ಜೀವನಾನss ಭಸ್ಮ ಮಾಡ್ತು” ಎಂದು ಬೀಡಿ ಹಚ್ಚಿಕೊಂಡು ಕಡ್ಡಿಯನ್ನು ಮಣ್ಣಿನಲ್ಲಿ ತಿಕ್ಕಿ “ಹೀಂಗ ಉರಿ ಆರಸಾಕ ನನಗಾಗ ಸಾಧ್ಯ ಆಗಲಿಲ್ಲ ” ಎಂದು ನೆನಪಿನ ಸುರುಳಿ ಬಿಚ್ಚಿದ.

“ಹತ್ತು-ಹನ್ನೆರಡರ ವಯಸ್ಸು ನಂದು. ಸಾಲಿ ಕಲ್ಯಾಕಂತ ಅಜ್ಜಿ ಊರಾಗ ಇದ್ಯಾ. ನನಗ ಒಬ್ಬಾಕಿ ತಂಗಿ. ಮೂರು ಮಂದಿ ಅಣ್ಣಂದಿರು. ಅಪ್ಪನ ಕೂಡ ಅವರು ಒಕ್ಕಲತನ ಮಾಡ್ತಿದ್ರು. ನಮ್ಮದು ಹತ್ತು ಎಕರೆ ನಿರಾವರಿ ಜಮೀನು. ಅಜ್ಜ ಗಳಿಸಿದ ಆಸ್ತಿ ಅದು. ಅಂವ ತೀರಿಕೊಂಡ ಮ್ಯಾಲೆ ಅವನ ಅಣ್ಣನ ಮಕ್ಕಳು ತೊಂಟ ನ್ಯಾಯಾ ತಗೆದು ಭೂಮಿ ತಮ್ಮದು ಅಂದ್ರು. ಅವರದೊಂದು ತುಂಡು ಜಮೀನು ನಮ್ಮ ಭೂಮಿಗೆ ಹೊಂದಿಕೊ೦ಡಿತ್ತು. ಅದು ತಲೆಮಾರುಗಳ ಆಸ್ತಿ‌ಎಂದು ಖೊಟ್ಟಿ ದಾಖಲೆ ಸೃಷ್ಟಿ ಮಾಡಿ ಕೋಟಿನ್ಯಾಗ ದಾವಾ ಹೂಡಿದ್ರು. ಪ್ರತಿ ಹಂತದಾಗೂ ಕೇಸು ನಮ್ಮಂಗ ಆತು. ಸೋತ ಅವರು ರಾಕ್ಷಸರಾದರು. ಅವರ ಮನದಾಗ ದ್ವೇಷದ ಬೆಂಕಿ ಹೊತಗೊಂತು. ಅದು ಪ್ರಳಯಾಗ್ನಿ ಆತು. ಒಂದಿನಾ ರಾತ್ರಿ ಅವರು ನಮ್ಮ ತ್ವಾಟದ ಮನಿಗ ಬೆಂಕಿ ಹಚ್ಚಿದ್ರು. ಒಳಗ ಮಲ್ಕೊಂ೦ಡ ನಮ್ಮಪ್ಪ, ನಮ್ಮವ್ವ, ತಂಗಿ, ಅಣ್ಣಂದಿರು, ಅವರ ಹೆಂಡಿರು – ಮಕ್ಕಳು ಸುಟ್ಟು ಕರಕಲಾದ್ರು….” ಚಲುವಜ್ಜ ಬಿಕ್ಕಳಿಸಿದ. ತುಸು ಹೊತ್ತಿನ ಬಳಿಕ ಹೇಳಿದ “ಭೂಮಿ ಮ್ಯಾಲೆ ಈ ಪರದೇಶಿ ಜನ್ಮ ಒಂದssಸ್ಸ್  ಉಳಿತು”

ಅಬಿದಾಲಿ ಕೇಳಿದ “ಚಾಚಾ ನೀನು ಮತ್ತ ಅಲ್ಲಿಗೆ ಹೋಗಲ್ಲಿಲ್ಲೇನು? ”

“ಅವರು ಬಹಳ ದುಷ್ಟರು ಅಂತ ನಮ್ಮಜ್ಜಿ ನನ್ನ ಅಲ್ಲಿಗ ಕರಕೊಂಡು ಹೋಗಲಿಲ್ಲ. ಆಕಿ ಒಬ್ಬಾಕಿ ಹೋಗಿ ಕರಕಲ ದೇಹಕ್ಕ ಮಣ್ಣುಹಾಕಿ ಬಂದ್ಲು” ಗಂಟಲು ತುಂಬಿಕೊಂಡು ಹೇಳಿದ ಚಲುವಜ್ಜ.

“ಅವರಿಗೆ ಶಿಕ್ಷಾ ಆಗಲಿಲ್ಲೇನು?”

“ಅವರ ವಿರುದ್ದ ಹೋರಾಡೋರು ಯಾರಿದ್ರು? ಕೋರ್ಟ್‌ನ್ಯಾಗ ಸಾಕ್ಷಿ ಇಲ್ಲದ ಪಾರಾದ್ರು. ನಮ್ಮ ಜಮೀನು ನುಂಗಿದ್ರು. ಆದ್ರ ದಿನಾ ಕಳಧಾಂಗ ಅವರವರ ಕಚ್ಚಾಡಿ, ಭೂಮಿ ಮಾರ್ಕೊಂಡು ಒಬ್ಬಿಬ್ಬರ ಬ್ಯಾನಿ ಎಂಬೋ ಬ್ಯಾನಿಯೊಳಗ, ನರಕಾ ಆನ್ನೋ ನರಕದಾಗ ನೆಳ್ಳಾಡಿ ಸತ್ರು. ದೇವರ ಕೋರ್ಟನ್ಯಾಗ ಯಾರು ಪಾರಾಗ್ತಾರೋ ತಮ್ಮ?” ಎಂದು ಮತ್ತೆ ಆರಿದ ಬೀಡಿಗೆ ಕಡ್ಡಿಗೀರಿ ಜುರುಕಿ ಎಳೆದ ಚಲುವಜ್ಜ. ಮತ್ತೆ ಹೊಗೆಯ ಜೊತೆಗೆ “ನಮ್ಮ ಆಜ್ಜಿನೂ ಸತ್ತು ಹ್ವಾದ್ಲು. ನಾನೂ ಊರೂರು ತಿರುಕೊಂತ ಇಲ್ಲಿ ಬಂದು ಸೇರ್ಕೊಂಡ್ಯಾ. ನಿಮ್ಮ ಬಾಬಾ ನನ್ನ ತಮ್ಮನಂಗ ನೋಡಕ್ಕೊಂಡ” ಎನ್ನುತ್ತಿರುವಂತೆ ದಾವೂದ ಆವನ ಹತ್ತಿರ ಬಂದು ನಿಂತಿದ್ದ.

“ಏನ ಕತಿ ಸುರು ಮಾಡಿಯಪ ಚಲುವಜ್ಜ. ನಮ್ಮ ಅಳೀಯ ದಂಗಾಗಿ ಕುಂತು ಬಿಟ್ಟಾನ ?” ಎಂದು ಕೇಳಿದ ಆವನ ಪ್ರಶ್ನೆಗೆ ಉತ್ತರಿಸದೇ ಆಲ್ಲಿಂದ ಎದ್ದು ಹೋದ ಚಲುವಜ್ಜ .

“ನಾಳೆ ನಾನು ಊರಿಗೆ ಹೋಗಿ ಬತ್ತೀನಿ ” ಎಂದ ದಾವೂದ. ಕೂಡಲೆ ತಾಯಿ ಆಡಿದ ಮಾತುಗಳನ್ನು ಮಾವನೆದುರು ಪ್ರಸ್ತಾಪಿಸಿದ ಅಬಿದಾಲಿ.

“ಅವರನ್ನು ಕರಿಬ್ಯಾಡ. ನಿನ್ನ ಅಮ್ಮಾನಿಗೆ ಏನೂ ಗೊತ್ತಾಗುದಿಲ್ಲ. ದೂರ ಇರುವ ಇಬ್ಲೀಸಗಳನ್ನು ಮತ್ತ ಒಳಗ ಕರಕೋಬ್ಯಾಡ ನೀನು. ಅದರಿಂದ ನಿನಗss ಲುಕ್ಸಾನು” ದಾವೂದ ಎಚ್ಚರಿಸಿದ.

“ಆದ್ರ ಆಮ್ಮ ಹಠ ಹಿಡಿದಾಳ ” ದಿಕ್ಕು ತೋಚದಂತೆ ಹೇಳಿದ ಅಬಿದಾಲಿ.

“ನಿಮ್ಮ ಅಮ್ಮಾಂದು ಸೆರಗಿನ್ಯಾಗ ಕೆಂಡಾ ಕಟಗೊಳ್ಳು ಚಾಳಿ. ಆ ಕರೀಮಾ ಮೊದಲ ಧಗಾಧಗಾ ಉರ್‍ಯಾಕ ಹತ್ಯಾನ. ಮತ್ತ ತ್ವಾಟಕ್ಕ ಬೆಂಕಿನೂ ಹಚ್ಚತೀನಿ ಅಂದಾನ. ನೀನು ಹುಷಾರಿರು” ಹೆದರಿಸುವ ಮಾತು ಆಡಿದ ದಾವೂದ. ಅಣ್ಣ ತಮ್ಮಂದಿರ ನಡುವೆ ಇದ್ದ ದ್ವೇಷವನ್ನು ಬಲಗೊಳಿಸುವ ಧಾಟಿ ಆವನ ಮಾತಿನಲ್ಲಿತ್ತು. ಅದನ್ನು ಅರ್ಥ ಮಾಡಿಕೊಳ್ಳದೆ ” ಆ ನಾಮರ್ದ ಹೀಂಗ ಹೇಳಕೊಂತ ಬಂದಾನ ಬಿಡು ಮಾಮು” ಎಂದು ಉದಾಸೀನ ವ್ಯಕ್ತಪಡಿಸಿದ ಅಬಿದಾಲಿ.

***

ಶಬ್ಬೇ ಬಾರಾತದ ನಮಾಜಿಗೆಂದು ಅಬಿದಾಲಿ ಮಸೀದಿಗೆ ಬಂದ. ತಳಮಳದ ಮನಸ್ಸಿನಿಂದಲೇ ನಮಾಜು ಪೂರೈಸಿದ. ಬೇರೆ ಕಡೆಯಿಂದ ಆಗಮಿಸಿದ ಮೌಲಾನಾ ಆವರು ಶಬ್ಬೇ ಬಾರಾತದ ಮಹತ್ವ ಕುರಿತು ಬಯಾನಾ ಶುರು ಮಾಡಿದರು. ಅಬಿದಾಲಿಯ ಎದುರು ತಾಯಿಯ ಮುಖ ಕಂಡಿತ್ತು. ಅವಳ ಮೌನ ಪ್ರತಿಭಟನೆಯ ನಡುವೆ ತಾನು ಬಾಬಾನಿಗೆ ಫಾತಿಹಾ ಕೊಟ್ಟ ಪ್ರಸಂಗವನ್ನು
ಜ್ಞಾಪಿಸಿಕೊಂಡ. “ಅಲ್ಲಾಹ್ ಈ ರಾತ್ರಿ ಭೂಲೋಕದ ಕಡೆಗೆ ಗಮನ ಕೊಡುವನು ” ಮೌಲಾನಾ ಗಂಭೀರವಾಗಿ ಹೇಳಿದರು. ತಾಯಿ ತುತ್ತು ಅನ್ನವನ್ನು ಬಾಯಿಗೆ ಹಾಕಿಕೊಳ್ಳದೆ, ಮುಖ ಬಾಡಿಸಿಕೊಂಡು ಕಣ್ಣೀರು ಉದುರಿಸಿದ ಸನ್ನಿವೇಶ ಅಬಿದಾಲಿಯ ಕಣ್ಣು ಕಟ್ಟಿತು. ” ಅಲ್ಲಾಹ್ ಮನುಷ್ಯನ ಪಾಪ – ಪುಣ್ಯಗಳ ಪ್ರಕಾರ ಸುಖ – ದುಃಖಗಳನ್ನು ಹಂಚುವನು ” ಎತ್ತರದ ಧ್ವನಿಯಲ್ಲಿ ಉಲಿದರು ಮೌಲಾನಾ. ಅಬಿದಾಲಿಯೆದುರು ಕಾಸೀಮಸಾಹೇಬರ ಆರೆಪ್ರಜ್ಞಾವಸ್ಥೆಯ ನಿತ್ರಾಣ ದೇಹ ತೇಲಿ ಬಂದಿತ್ತು ಬಾಬಾನ ದುಬ೯ಲ ಆವಸ್ಥೆಯೊಂದಿಗೆ ತಾನು ವರ್ತಿಸಿದ ಕ್ಷುದ್ರ ಕ್ರಿಯೆ ನೆನಪಾಗಿ ಒಳಗೆ ಕಂಪಿಸಿದ ಅವನು.

***

ಅಬಿದಾಲಿ ಮನೆ ತಲುಪಿದಾಗ ಮಧ್ಯರಾತ್ರಿ. ಹೆಂಡತಿಯನ್ನು ಎಬ್ಬಿಸದೇ ಮನೆ ಮುಂದಿನ ಕಟ್ಟೆಯ ಮೇಲೆ ಚಾಪೆ ಬಿಡಿಸಿ ಮೈ ಚಲ್ಲಿದ.

ತನ್ನದೆನ್ನುವುದು ಏನಿತ್ತು ಈ ತೋಟದಲ್ಲಿ? ಅದೆಲ್ಲಾ ಬಾಬಾನ ಗಳಿಕೆ. ಅದನ್ನು ಅವನು ತನ್ನೊಂದಿಗೆ ಹೊತ್ತೊಯ್ಯಲಿಲ್ಲ. ತೋಟದ ಮಣ್ಣಾಗಲಿ, ಅದರೊಳಗೆ ಊರಿಕೊಂಡು ಪಲ್ಲವಿಸುವ ಬೀಜವಾಗಲಿ ಯಾವ ಫಲವನ್ನು ಅಪೇಕ್ಷಿಸುವುದಿಲ್ಲ. ತನಗೇಕೆ ಹುಟ್ಟಿತೋ ದುರಾಸೆ ? ಪಕ್ಕ ಬದಲಾಯಿಸಿದ ಅಬಿದಾಲಿ. ಅವನ ಉರಿವ ಕಣ್ಣು ನಿದ್ದೆಯ ಮಾಯೆಗೆ ಒಳಗಾಗಲು ತಡವಾಗಲಿಲ್ಲ.

ಪ್ರಜ್ವಲಿಸುವ ಕೆಂಡ. ಅದರ ಬೆಳಕಿನಲ್ಲಿ ಶರೀಫ್, ರಹಮತ್, ಕರೀಮರ ಮುಖಗಳು ಢಾಳವಾಗಿಯೇ ಗೋಚರಿಸಿದವು. ತನ್ನನ್ನೆ ನುಂಗುವಂತಿರುವ ಅವರ ಕೆಂಪು ಕಣ್ಣುಗಳು ! ಕರೀಮನ ದೇಹ ಎಂಬೋ ದೇಹ ಉರಿಯ ಕೊಳ್ಳಿಯಾಗಿ ತನ್ನ ಹತ್ತಿರ ಧಾವಿಸಿ ಬರುತ್ತಿದೆ. ಚಲುವಜ್ಜನ ವಂಶವನ್ನು ಸುಟ್ಟು ಬೂದಿಮಾಡಿದ ಬೆಂಕಿಯೇ ಅದು! ಅಬಿದಾಲಿ ದಿಗ್ಗನೆದ್ದು ಕುಳಿತ. ಸಹಸ್ರ ನಾಲಗೆಗಳನ್ನು ಹೊರಚಾಚಿದ ಆ ಉರಿ ಭಯಂಕರ ಸದ್ದುಮಾಡಿತು. ಎಷ್ಟೋ ಸಮಯದ ದಾಹವೋ ಎಂಬಂತೆ ಗಾಳಿಯೊಂದಿಗೆ ಕೊಬ್ಬಿ ತನ್ನನ್ನು ಹಿಗ್ಗಿಸಿಕೊಳ್ಳುತ್ತ ಹೋಗಿ ದಾಳಂಬರಿ, ದ್ರಾಕ್ಷಿ, ತೆಂಗು, ಬಾಳೆಗಿಡಗಳನ್ನು ಕಬಳಿಸಿತು. ಅಷ್ಟು, ಸಾಕಾಗಲಿಲ್ಲವಾಗಿ ಸೇಂಗಾ ತುಂಬಿದ ಮೂಟೆಗಳನ್ನು ಆಕ್ರಮಿಸಿಕೊಂಡಿತು.

“ಬೆಂಕಿ …. .. ಬೆಂಕಿ …. .. ಮುನ್ನಾ ಬೆಂಕಿ… ಬೆಂಕಿ…” ಚಲುವಜ್ಜನ ಕೂಗಿಗೆ ಇರುಳು ತತ್ತರಿಸಿತು. ಹಮೀದಾ, ನಸೀಮ ಬಾಗಿಲು ತೆರೆದು ಓಡಿಬಂದರು. ರಕ್ಕಸ ಬೆಂಕಿ ಸೇಂಗಾ ಚೀಲಗಳನ್ನು ಹುರಿದು ಮುಕ್ಕತೊಡಗಿತ್ತು “ಬೇಟಾ ಅಬಿದಾಲಿ, ಬೆಂಕಿ…ಚಿಂಕಿ…” ಮಗನ ಹತ್ತಿರ ಬಂದು ಮೈ ಅಲುಗಾಡಿಸಿದಳು ಹಮೀದಾ. ” ಆಂ …. .. ” ಎಂದು ಮೈ ಮೇಲಿನ ಚಾದರ ಕೊಡವಿ ಎದ್ದು ಬಂದು ನಿಂತವನಿಗೆ ನೆಲದಾಳದಿಂದ ಆಕಾಶದೆತ್ತರಕ್ಕೆ ಚಿಮ್ಮುತ್ತಿರುವ ಉರಿ ಕಂಡಿತ್ತು. ಕನಸಿನಲ್ಲಿ ಕಂಡ ಉರಿಯೇ ಅದು! ಎದೆ ಝಲ್ ಎಂದಿತು. ತನ್ನ ಶಕ್ತಿಮೀರಿ ಒಮ್ಮೆ ಮಣ್ಣು ತೂರುತ್ತ, ಇನ್ನೊಮ್ಮೆ ನೀರು ಹೊಯ್ಯುತ್ತ ಚಲುವಜ್ಜ ಬೆಂಕಿ ಆರಿಸಲು ಹೋರಾಡುತ್ತಿದ್ದ. ಅಬಿದಾಲಿ, ಹಮೀದಾ, ನಸೀಮಾ ಬೆಂಕಿಯ ಮೇಲೆ ಬೊಗಸೆ ಬೊಗಸೆ ಮಣ್ಣು ತೂರಿದರು. ಸುತ್ತಮುತ್ತಲಿನ ಜನ ಧಾವಿಸಿ ಬಂದರು. ನಂತರ ಊರಿಗೆ ಊರೇ ಬಂದಿತು.

ಬೆಂಕಿ ಹೇಗೆ ಬಿತ್ತು? ಅಬಿದಾಲಿ ಯೋಚಿಸಿದ. ದಾವೂದ ಮಾಮು ಹೇಳಿದ್ದೇ ನಿಜವಾಯಿತು. ಇದು ಆ ನಸಲಿ ಹರಾಮ್ ಕರೀಮನದೇ ಕೆಲಸ. ಅವನನ್ನು ಹೆಡಮುರಿಗೆ ಕಟ್ಟಿ ತಂದು ಈ ಬೆಂಕಿಯಲ್ಲಿ‌ಒಗೆಯಬೇಕು ಎಂದು ಹಲ್ಲು ಕಡಿಯುತ್ತಿರುವಂತೆ ಜನರ ಗುಂಪಿನೊಳಗಿಂದ ಶರೀಫ್, ರಹಮತ್ ಧಾವಿಸಿ ಬಂದರು. ಅವರೊಂದಿಗೆ ಕರೀಮನೂ ಇದ್ದ. ಜನರ ಜೊತೆಗೆ ಅವರೂ ಬೆಂಕಿ ಆರಿಸಲು ಹೆಣಗಾಡತೊಡಗಿದರು. ಕರೀಮ ಸೇಂಗಾ ಚೀಲಗಳನ್ನು ಎಳೆದೆಳೆದು ಬಯಲಿಗೆ ಹಾಕಿದ. ದಿಙ್ಮೂಢನಾಗಿ ನಿಂತ ಅಬಿದಾಲಿ. ಹಾಗೆ ನಿಂತವನ ಪಕ್ಕ ಸೇಂಗಾ ಚೀಲವೊಂದು ಉರುಳಿ ಬಿತ್ತು. ಕರೀಮ ಅತ್ತ ಚಿಗಿದವನೇ ಅಬಿದಾಲಿಯನ್ನು ಪಕ್ಕಕ್ಕೆ ಸರಿಸಿ, ಚೀಲವನ್ನು ದೂರಕ್ಕೆ ಒದ್ದು, ಅನಾಹುತ ತಪ್ಪಿಸಿದ. ಸುಮಾರು ಹೊತ್ತಿನ ಬಳಿಕ ಬೆಂಕಿ ತಹಬಂದಿಗೆ ಬಂದಿತು.

ಚಲುವಜ್ಜ ತೋಟದ ಮಣ್ಣಲ್ಲಿ ಅಚ್ಚೊತ್ತಿದ್ದ ಹೆಜ್ಜೆಗಳನ್ನು ಗಮನಿಸುತ್ತ ಹೋಗಿದ್ದ. ಹೆಜ್ಜೆಗಳು ಅಸ್ಪಷ್ಟವಾಗಿಯೇ ಇದ್ದವು. ದೂರಕ್ಕೆ ಹೋದಂತೆ ಅಲ್ಲಿಗೊಂದು ಇಲ್ಲಿಗೊಂದರಂತೆ ಎರಡು ಚಪ್ಪಲಿಗಳು ಸಿಕ್ಕವು. ಚಲುವಜ್ಜಂಗೆ ಬೆಂಕಿ ಹಚ್ಚಿದವರು ಯಾರೆಂದು ಖಾತ್ರಿಯಾಯಿತು. ಆ ಚಪ್ಪಲಿ ತೆಗೆದುಕೂಂಡು ಬಂದು ಅಬಿದಾಲಿಗೆ ತೋರಿಸಿದ. ದಾವೂದ ಧರಿಸುತ್ತಿದ್ದ ಕಾನ್ಪುರಿ ಚಪ್ಪಲಿಗಳು! ತೀವ್ರ ಆಘಾತಕ್ಕೊಳಗಾದ ಅಬಿದಾಲಿ ತಟ್ಟನೆ ಕುಸಿದು ಕುಳಿತ. ಶರೀಫ್, ರಹಮತ್, ಕರೀಮರು ಅಣ್ಣನ ಹತ್ತಿರ ಬಂದು ಪ್ರೀತಿಯಿಂದ ಮೈ ದಡವಿದರು. ಕತ್ತಲಿನ ಆಕಾಶ ಸಾವಕಾಶವಾಗಿ ಶುಭ್ರವಾಗತೊಡಗಿತು.

*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗುಡಗುಡಿಯನು ಸೇದಿನೋಡೋ
Next post ಸಾಲೆಯ ನೋಡಿದಿಯಾ ಸರಕಾರದ

ಸಣ್ಣ ಕತೆ

 • ಕೆಂಪು ಲುಂಗಿ

  ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

 • ಹಳ್ಳಿ…

  ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

 • ಮನೆ “ಮಗಳು” ಗರ್ಭಿಣಿಯಾದಾಗ

  ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

 • ಗೋಪಿ

  ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

 • ಧನ್ವಂತರಿ

  ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

cheap jordans|wholesale air max|wholesale jordans|wholesale jewelry|wholesale jerseys