Home / ಲೇಖನ / ಇತರೆ / ದೇವದಾಸಿ ಪದ್ಧತಿ – ದೇವರ ಹೆಸರಲ್ಲಿ ಸ್ತ್ರೀ ದೌರ್‍ಜನ್ಯ

ದೇವದಾಸಿ ಪದ್ಧತಿ – ದೇವರ ಹೆಸರಲ್ಲಿ ಸ್ತ್ರೀ ದೌರ್‍ಜನ್ಯ

ಸಮಾಜ ಜಾಗೃತಿಯ ಅರಿವು ಪರಿವರ್‍ತನೆಯ ಮೆಟ್ಟಿಲು. ಆಧುನಿಕತೆ ಭರಾಟೆಯ ಈ ದಿನಗಳಲ್ಲಿ ಆಚರಣಾಯೋಗ್ಯ ಧಾರ್‍ಮಿಕತೆ, ಸಂಸ್ಕೃತಿ ಸಂಪ್ರದಾಯಗಳನ್ನು ಭಾರತೀಯ ಪುರಾತನ ಮೌಲ್ಯಗಳನ್ನು ಅನುಸರಿಸುವ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಾದ ಅಗತ್ಯತೆ ಇಂದಿನ ಅನಿವಾರ್‍ಯತೆ. ಅನಿಷ್ಟಕಾರಕ ಧಾರ್‍ಮಿಕ ಮೌಲ್ಯಗಳನ್ನು ಪ್ರಶ್ನಿಸುವ, ತಡೆಗಟ್ಟುವ ಅನಿವಾರ್‍ಯತೆಯೂ ಇಂದಿಗೆ ಬಹಳ ಅಗತ್ಯ. ನಮ್ಮಲ್ಲಿ ಅಂಧಶ್ರದ್ಧೆಯಿಂದ, ಅಜ್ಞಾನದಿಂದ ಆಳಕ್ಕೆ ಇಳಿದ ಹಲವು ಅಸಭ್ಯ ಅನಾಗರಿಕ ಸಂಪ್ರದಾಯಗಳ ಆಚರಣೆಗಳ ಬೀಳಲುಗಳಿವೆ. ಅವುಗಳನ್ನು ಆಳದಿಂದಲೇ ಕತ್ತರಿಸಿಹಾಕಬೇಕಾದುದು ಕೂಡಾ ಅತಿ ಅಗತ್ಯ.

ಸಾಮಾಜಿಕ ಜೀವನದ ಅನಿಷ್ಟಗಳು ಹತ್ತು ಹಲವು. ಅದರಲ್ಲಿ ಬಹುತೇಕ ಸ್ತ್ರೀಯೇ ಹೆಚ್ಚಾಗಿ ದೌರ್‍ಜನ್ಯಕ್ಕೆ ಒಳಗಾಗಿರುವುದು ಮತ್ತೊಂದು ವಿಪರ್‍ಯಾಸ. ಬಾಲ್ಯವಿವಾಹ, ಸತಿಪದ್ಧತಿ, ಪರ್‍ದಾಪದ್ದತಿ, ವಿಧವಾ ಸ್ಥಾನಮಾನ, ತಿಂಗಳ ಮೂರು ದಿನಗಳ ಮೈಲಿಗೆ, ವ್ಯಭಿಚಾರ ಪದ್ಧತಿ, ದೇವದಾಸಿ ಪದ್ಧತಿ ಇತ್ಯಾದಿ ಇತ್ಯಾದಿಯಾಗಿ ಒಂದರ ಹಿಂದೆ ಒಂದರಂತೆ ಪಟ್ಟಿ ಮಾಡಬಹುದು. ಇದಕ್ಕೆಲ್ಲಾ ಕಾರಣ ಗಂಡಿನ ಪ್ರಾಬಲ್ಯದ ಸಮಾಜದಲ್ಲಿ ಹೆಣ್ಣು ಕೇವಲ ಆತನ ಅನತಿಯಂತೆ ವ್ಯವಹರಿಸುವ, ದುಡಿಯುವ, ಬದುಕುವ ಒಂದು ವಸ್ತುವೇ ಹೊರತು ಜೀವವಲ್ಲ ಎಂಬ ತಾತ್ಸಾರದ ಮನೋಧರ್‍ಮ.

ಸ್ತ್ರೀ ಭಾವ ಜೀವಿ. ತನ್ನ ನೆಲೆಯಲ್ಲಿ ತೃಪ್ತಿಯ ಹೊಂಗೆಯ ನೆರಳಿಗಾಗಿ ಕನವರಿಸುವವಳು. ಗಂಡು ತನ್ನ ತಾಕತ್ತಿನ ಬಲದಿಂದ ಆಕೆಯನ್ನು ಗೆಲ್ಲುವ ಕ್ರಮ ಹಿಂದಿನಿಂದಲೂ ಪ್ರಚಲಿತ. ಮಹಾಭಾರತದಲ್ಲಿ ತನ್ನ ತಾಯಿಯ ಅಣತಿಯಂತೆ ತನ್ನ ಅಶಕ್ತ ಸಹೋದರರಿಗಾಗಿ ಭೀಷ್ಮ ಗೆದ್ದು ತಂದ ಅಂಬೆ ಅಂಬಿಕೆ ಅಂಬಾಲಿಕೆಯ ಕಥೆ ನಮಗೆಲ್ಲಾ ಗೊತ್ತಿರುವುದೇ ಅಗಿದೆ. ಹೆಣ್ಣನ್ನು ವಸ್ತುವಿನಂತೆ ಗೆಲ್ಲುವ ಸಂಸ್ಕೃತಿ ಬರಿಯ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಗ್ರೀಕ್‌ನ ಸ್ಪಾರ್‍ಟಾದ ರಾಜ ಮೆನೆಲಸ್‌ನ ಪತ್ನಿ ಅಪೂರ್‍ವ ಸುಂದರಿ. ಹೆಲನ್‌ಗೋಸ್ಕರ ಆಕೆಯನ್ನು ಹೊಂದುವುದಕ್ಕೋಸ್ಕರವೇ ಟ್ರಾಯ್‌ನ ರಾಜಕುಮಾರ ಪ್ಯಾರಿಸ ಆಕೆಯ ಅಪಹರಿಸಿ ಗ್ರೀಕ್ ಮತ್ತು ಟ್ರೋಜನ್ ಯುದ್ಧಕ್ಕೆ ಕಾರಣನಾಗುತ್ತಾನೆ. ಅಂದರೆ ಹೆಲನ್ ಮೆನೆಲಸ್‌ನನ್ನು ಮೆಚ್ಚಿ ಮದುವೆಯಾಗಿದ್ದರೂ ಆಕೆಯ ಮನಸ್ಸಿನ ಸಂವೇದನೆಗಳಿಗೆ ಬೆಲೆಕೊಡದ ಪುರುಷನೋರ್‍ವನ ನೆತ್ತಿಗೇರಿದ ಪಿತ್ತ ಯುದ್ಧಕ್ಕೆ ಕಾರಣವಾಗಿ ಸಾವಿರ ವೀರಯೋಧರ ಮರಣಕ್ಕೂ ಅವರ ಹೆತ್ತವರ ನಂಬಿದವರ ರೋದನಕ್ಕೂ ಎಲ್ಲ ಅನಾಹುತಕ್ಕೂ ಮೂಲವಾಗಿದ್ದು. ಇದೆಲ್ಲಕ್ಕೂ ಕಾರಣ ಸ್ತ್ರೀಯನ್ನು ಉಸಿರಾಡುವ ವಸ್ತು ಎಂದು ಗೃಹಿಸಿದ ಪುರುಷ ಪರಿಕಲ್ಪನೆ. ಆಕೆಯನ್ನು ಆಳುವ ಗೆಲ್ಲುವ ತುಳಿಯುವ ಮರ್‍ದಿಸುವ ಎಲ್ಲ ಅಧಿಕಾರವೂ ತನ್ನದೇ ಎಂಬ ದೈಹಿಕ ಪ್ರಾಬಲ್ಯದ ಧಿಮಾಕು. ಇತಿಹಾಸ ಪುಟಗಳಲ್ಲಿನ ರಾಣಿವಾಸದ ಕಥೆಗಳಿಂದ ಹಿಡಿದು ಇಂದಿನ ಮನೆವಾಳ್ತೆಯ ಹೆಂಗಳೆಯರ ಬದುಕಿನ ದುಗುಡ ದುಮ್ಮಾನಗಳು ಆಕೆಗೆ ಸ್ವತಂತ್ರ ಅಭಿವ್ಯಕ್ತಿಯ ವ್ಯಕ್ತಿತ್ವವನ್ನು ಮೊಟಕುಗೊಳಿಸುತ್ತಿವೆ ಎಂಬುದು ಸತ್ಯ. ಅವರ ಬದುಕಿನ ನೆಮ್ಮದಿಯ ಹೊಳವು ಎಲ್ಲವೂ ಪುರುಷನನ್ನೆ ಅವಲಂಬಿಸಿರುವುದು. ಕನ್ನಡಿಯಂತೆ ಸ್ಪಷ್ಟ.

ಹೆಣ್ಣನ್ನು ವಸ್ತುವಾಗಿ ಪರಿಗಣಿಸಿ ಆಕೆಯ ಪಣದ ವಸ್ತುವಾಗಿಸಿ ಮೆರೆದ ಪಂಚಮವೇದವೆಂದೆ ಖ್ಯಾತವಾದ ಮಹಾಭಾರತದ ಧರ್‍ಮರಾಜ ಎಂಬ ಮಹಾನ್ ಧರ್‍ಮಬೀರುವಿನಿಂದ ಹಿಡಿದು ಇಂದಿನ ಯಃಕಶ್ಚಿತ ಪುರುಷ ರೂಪಿಗಳು ಕೂಡ ಹೆಣ್ಣನ್ನು ಕಾಣುವುದು ವಸ್ತುವಾಗಿಯೇ. ದೇವರ ಹೆಸರಿನಲ್ಲಿ ವ್ಯಭಿಚಾರಕ್ಕೆ ಬಲಿಯಾದವರು ಅದೆಷ್ಟು ಜನ. ಮನೆಯ ಯಾವುದೋ ಕಷ್ಟಕ್ಕೆ ಹೆತ್ತ ಹೆಣ್ಣು ಮಗುವನ್ನು ದೇವರಿಗೆ ಬಿಟ್ಟು ಆಕೆಯ ಸಂವೇದನೆಗಳ ಅರ್‍ಥಮಾಡಿಕೊಳ್ಳದ ಅದೆಷ್ಟು ಪೋಷಕರು ಹಡೆದ ಮಗಳ ಬಾಳಿಗೆ ಕೊಳ್ಳಿಯಿಟ್ಟ ಮೌಢ್ಯಕ್ಕೆ ಏನೆನ್ನೋಣ?

ದೇವದಾಸಿ ಪದ್ಧತಿಯನ್ನೆ ತೆಗೆದುಕೊಂಡರೆ ಇದೊಂದು ಸಾಮಾಜಿಕ ಅನಿಷ್ಟ. ಕಪ್ಪು ಚುಕ್ಕೆ. ಪುರುಷಪ್ರಾಬಲ್ಯಶಾಹಿ ವ್ಯವಸ್ಥೆಯಲ್ಲಿ ಸಮಾಜದ ಮೇಲ್ವರ್‍ಗದ ಕೀಳು ಅಭಿರುಚಿಗೆ ದೃಷ್ಟಾಂತವಾಗಿ ನಿಲ್ಲುತ್ತದೆ. ದೇವರ ಹೆಸರಿನಲ್ಲಿ ಮೇಲ್ಜಾತಿಯ ಮಹಾನುಭಾವರು ರೂಪಿಸಿದ ನಿಕೃಷ್ಟ ಸಂಪ್ರದಾಯವೊಂದಕ್ಕೆ ಇದಕ್ಕಿಂತ ಬೇರೆ ಉದಾಹರಣೆಗಳು ಬೇಡ. ದೇವಸ್ಥಾನದ ಗಣಿಕೆಯರಾಗಿ ದೇವರ ಸೇವೆ ಎಂದು ಬಿಡಲ್ಪಡುವ ಹೆಣ್ಣುಗಳಿಗೆ ಸಂತಾನ ಭಾಗ್ಯ ಕರುಣಿಸುವ ಊರ ಗೌಡನೋ ಮುಖಂಡನೋ ಇಲ್ಲ ಪೂಜಾರಿಯೋ ಆ ಸಂತಾನದ ಜವಾಬ್ದಾರಿ ಹೊರುವುದಿಲ್ಲ.

ಇನ್ನೊಂದು ವಿಚಾರವೆಂದರೆ ಮೇಲ್ಜಾತಿಯ ಹೆಣ್ಣು ಈ ಪದ್ಧತಿಯ ಅನಿಷ್ಟಕ್ಕೆ ಒಳಗಾಗುವುದಿಲ್ಲ. ದೇವದಾಸಿಯಾಗಿ ಹೆಣ್ಣಿನ ಬದುಕನ್ನು ಮುಳ್ಳಿಗೆ ಹರಡುವುದು ದಲಿತ ಕೆಳವರ್‍ಗದ ಮಹಿಳೆಯರದ್ದು ಎಂಬುದು ದುರಂತ. ದೇವರ ಹೆಸರಿನಲ್ಲಿ ಪೂಜಾರಿ ಮಹಿಳೆಯ ಕುತ್ತಿಗೆಗೆ ಕೆಂಪು ಬಿಳಿ ಮಣಿಗಳ ತಾಳಿಯನ್ನು ತೊಡಿಸುವ ಮೂಲಕ ದೇವರಿಗೆ ಬಿಡಲಾಗುತ್ತದೆ. ಇದನ್ನು ಮುತ್ತು ಕಟ್ಟಿಸುವುದು ಎಂತಲೂ ಕರೆಯಲಾಗುತ್ತದೆ. ಒಮ್ಮೆ ಮುತ್ತು ಕಟ್ಟಿಸಿಕೊಂಡ ಹೆಣ್ಣು ದೇವರ ಸೇವೆ ಎಂಬ ಹೆಸರಿನಲ್ಲಿ ಅನ್ಯಾಯದ ಆಟಕ್ಕೆ ದಾಳವಾಗುತ್ತಾಳೆ. ಕೆಲವೊಮ್ಮೆ ಕುಟುಂಬಕ್ಕೆ ಆರ್‍ಥಿಕ ಗಳಿಕೆಗೆ ಉರುಳುವ ಗೋಲವಾಗುತ್ತಾಳೆ. ಬಡತನ ಎಂಬ ಪಿಶಾಚಿ ನೆಲಸಿದ ಅದೆಷ್ಟೋ ಕೆಳ ಜಾತಿಯ ಬಡ ಕುಟುಂಬಗಳು ಇಂದಿಗೂ ದೇವರಿಗೆ ಬಿಟ್ಟ ಮಗಳ ಉತ್ಪಾದನೆಯಲ್ಲಿ ದಿನಕಳೆಯುತ್ತವೆ. ಒಮ್ಮೆ ಈ ಪದ್ಧತಿಯ ಕಪಿಮುಷ್ಠಿಯಲ್ಲಿ ಬಂಧಿಯಾದ ಹೆಣ್ಣು ಚಿಕ್ಕ ಪ್ರಾಯದಲ್ಲಿಯೇ ದೈಹಿಕವಾಗಿ ದಮನಿಸಲ್ಪಟ್ಟು ಮಕ್ಕಳನ್ನು ಪಡೆದು, ಪೌಷ್ಟಿಕಾಂಶದ ಕೊರತೆಯಿಂದ ನಿಶ್ಯಕ್ತಿ ದೈಹಿಕ ಅಸಮರ್‍ಥತೆ ಹೀಗೆ ಕಾಯಿಲೆಗಳಿಗೆ ಬಲಿಯಾಗುತ್ತಾಳೆ. ಮಕ್ಕಳ ಜವಾಬ್ದಾರಿಯನ್ನು ಕೂಡಾ ಈಕೆಯೇ ಹೊರಬೇಕಿದ್ದು ಬದುಕು ಮೂರಾಬಟ್ಟೆಯಾಗುತ್ತದೆ. ಇನ್ನು ಇವರಿಗೆ ಹುಟ್ಟುವ ಮಕ್ಕಳಿಗೆ ಕೂಡಾ ತಂದೆಯ ಹೆಸರಿಲ್ಲದೇ ಬೆಳೆಯಬೇಕಾದ ದುರವಸ್ಥೆ. ಇವರಿಗೆ ಹೆಣ್ಣು ಮಗು ಜನಿಸಿದರೆ ಸಂಭ್ರಮಿಸುವ ಕುರುಡು ಸಮಾಜ ಆ ಮುಗ್ಧ ಬದುಕನ್ನು ಬಲಿತೆಗೆದುಕೊಳ್ಳುತ್ತದೆ. ದೇವದಾಸಿ ಪದ್ಧತಿ ಸಭ್ಯತೆಯ ಮೌಲ್ಯಗಳಿಗೆ ತೀವ್ರ ಅಪಾಯಕಾರಿ. ಪುರಾತನ ಆಚರಣೆಯಾದ ಈ ಪದ್ಧತಿ ಹಿಂದೆಲ್ಲ ದೇಗುಲದ ನರ್‍ತಕಿಯರು ಎಂಬ ಗೌರವ ಹೊಂದಿದ್ದು, ಶ್ರೇಷ್ಠ ಪರಿಕಲ್ಪನೆಯಾಗಿತ್ತು. ಆದರೆ ಕ್ರಮೇಣ ಅನೈತಿಕ ಲಾಲಸೆಗಳಿಗೆ ವಿಸ್ತಾರಗೊಂಡಿತು.. ಇದು ನಿಜಕ್ಕೂ ದೇವರ ಹೆಸರಿನ ದಬ್ಬಾಳಿಕೆ, ಊರಗೌಡನ ಹಾಗೂ ಪೂಜಾರಿಯ ಕಾಮ ಲಾಲಸೆಗೆ ಧರ್‍ಮದ ಹೆಸರಿನಲ್ಲಿ ಅಧರ್‍ಮದ ಆಚರಣೆ.

ಇಂತಹುದೇ ಸ್ವಲ್ಪ ಭಿನ್ನವಾದ ಆಚರಣೆ ಇಂಗ್ಲೆಂಡ ಹಾಗೂ ಅಮೇರಿಕಾದಲ್ಲಿ ಜೀತದಾಳು ಪದ್ಧತಿಯಲ್ಲಿತ್ತು. ಅಲ್ಲಿ ಕರಿಯ ಸ್ತ್ರೀ ಜೀತದಾಳುಗಳೊಂದಿಗೆ ಅನೈತಿಕ ಸಂಬಂಧವನ್ನು ಹೊಂದುತ್ತಿದ್ದ ಜಮೀನುದಾರ ಆಕೆಗೆ ಹುಟ್ಟಿದ ತನ್ನದೇ ಮಕ್ಕಳನ್ನು ಜೀತಕ್ಕಿಟ್ಟುಕೊಳ್ಳುತ್ತಿದ್ದ. ತನ್ನ ಬಿಳಿಯ ಪತ್ನಿಯ ಮಕ್ಕಳನ್ನು ತನ್ನ ವಾರಸುದಾರರೆಂದು ಬೆಳೆಸುತ್ತಿದ್ದ. ಜೀತಕ್ಕಿರುವ ಹೆಣ್ಣು ಒಡೆಯನ ಆಸೆಯನ್ನು ತಣಿಸುವ ಕಾಮದ ಗೊಂಬೆಯಾಗಿರುತ್ತಿದ್ದು, ಆತನ ವಿರೋಧಿಸುವ ಸಾಮರ್‍ಥ್ಯವಿಲ್ಲದೇ ದೌರ್‍ಜನ್ಯಕ್ಕೆ ಬಲಿಯಾಗುತ್ತಿದ್ದು ಅದೊಂದು ಕಠೋರ ಪದ್ಧತಿಯಾಗಿತ್ತು. ಹೆಣ್ಣು ಇಂತಹ ಅನೇಕ ದೌರ್‍ಜನ್ಯಗಳ ನಡುವೆಯೂ ಬದುಕುತ್ತ ಸಹನಾಮೂರ್‍ತಿಯಾಗಿ ಮನುಕುಲವನ್ನು ಮುನ್ನೆಡೆಸುತ್ತಿರುವ ತಾಯಿ.

ದೇವದಾಸಿ ಪದ್ಧತಿ ತಡೆಯಲು ೧೯೮೪ರಲ್ಲಿಯೇ ಸರಕಾರ ದೇವದಾಸಿ ಪದ್ಧತಿ ನಿರ್‍ಮೂಲನಾ ಕಾಯ್ದೆ ಜಾರಿಗೆ ತಂದಿದೆ. ಆದಾಗ್ಯೂ ಇಂದಿಗೂ ಉತ್ತರ ಕರ್‍ನಾಟಕ ಹಾಗೂ ಮೈಸೂರು ಮಂಡ್ಯ ಮುಂತಾದ ಕರ್‍ನಾಟಕದ ಹಲವು ಭಾಗಗಳಲ್ಲಿ ಈ ಆಚರಣೆ ಅವ್ಯಾಹತವಾಗಿ ನಡೆದುಕೊಂಡು ಬರುತ್ತಲಿದೆ. ಇದಕ್ಕೆ ಒಂದು ಮುಖ್ಯ ಕಾರಣ ಕುಟುಂಬದ ಬಡತನವೂ ಒಂದಾಗಿದ್ದರೂ ಇದೊಂದು ಹೆಣ್ಣನ್ನು ಬಲಿಪಶುವಾಗಿಸುವ ಅನಾಗರಿಕ ಪರಂಪರೆ.

ದೇವದಾಸಿಯರನ್ನು ಸಮಾಜದ ಮೇಲಸ್ತರಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಈಗಾಗಲೇ ದೇವದಾಸಿ ಪುನರ್‍ವಸತಿ ಯೋಜನೆಯಡಿ ನಲವತ್ತು ವರ್‍ಷ ಮೀರಿದ ದೇವದಾಸಿಯರಿಗೆ ಸರಕಾರ ೪೦೦ ರೂ. ಮಾಸಾಶನ ನೀಡುತ್ತಿದೆ. ಹತ್ತು ಹಲವು ಜಾಗೃತಿ ಕಾರ್‍ಯಕ್ರಮಗಳು ನಡೆಯುತ್ತಿವೆ. ಕೆಲವು ದಿನಗಳ ಹಿಂದೆ ರಾಷ್ಟ್ರೀಯ ಕಾನೂನು ಶಾಲೆಯ ತಳ ಸಮುದಾಯಗಳ ಅಧ್ಯಯನ ಕೇಂದ್ರ ಹಾಗೂ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯಗಳ ಸಂಯುಕ್ತ ಆಶ್ರಯದ ಕಾರ್‍ಯಾಗಾರವೊಂದರಲ್ಲಿ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ದೇವದಾಸಿಯರಿಗೆ ತಲಾ ಎರಡು ಎಕರೆ ಭೂಮಿ ನೀಡುವ ಯೋಜನೆಯನ್ನು ಪ್ರಕಟಿಸಿದ್ದಾರೆ. ಈ ಪದ್ಧತಿ ತ್ಯಜಿಸಿ ವಿವಾಹವಾದವರಿಗೆ ಎರಡು ಲಕ್ಷ ಧನಸಹಾಯ ಹಾಗೂ ದೇವದಾಸಿಯರ ಮಕ್ಕಳು ಎಂಜನೀಯರಿಂಗ ಅಥವಾ ವೈದ್ಯಕೀಯ ಶಿಕ್ಷಣ ಪಡೆದರೆ ಅದರ ವೆಚ್ಚ ಸರಕಾರ ಭರಿಸಲಿದೆ ಎಂಬ ಹೇಳಿದ್ದಾರೆ. ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ದೇವದಾಸಿ ತಾಯಂದಿರಿಗೆ ಮಾಸಿಕ ೨,೦೦೦ ಪ್ರೋತ್ಸಾಹ ಧನ ನೀಡುವುದಾಗಿಯೂ ಪ್ರಕಟಿಸಿದ್ದಾರೆ. ಇವೆಲ್ಲವೂ ಜರ್‍ಜರಿತಗೊಂಡ ಗಣಿಕೆಯರ ಬದುಕಿನಲ್ಲಿ ಒಂದು ಬೆಳಕಾಗಲಿ. ಹೆಣ್ಣು ಬರಿಯ ದೇಹವಲ್ಲ. ಆಕೆಯೂ ವ್ಯಕ್ತಿ ಎಂಬ ನಿಲುವು ಸರ್‍ವರಲ್ಲಿ ಮೊಳೆಯಲಿ ಎಂಬ ಸದೀಚ್ಛೆ ಸ್ತ್ರೀ ಸಮುದಾಯದ ಆಕಾಂಕ್ಷೆ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...