ಆತ್ಮಸಂಯಮ

ಆತ್ಮಸಂಯಮ

ಚಿತ್ರ: ಓಕನ್ ಕಾಲಿಸ್ಕನ್
ಚಿತ್ರ: ಓಕನ್ ಕಾಲಿಸ್ಕನ್

ನಾವು ಒಂದು ಕಾಡುಕುದುರೆಯನ್ನು ವಶಪಡಿಸಿಕೊಳ್ಳಬಲ್ಲೆವು. ಆದರೆ ಒಂದು ಹುಲಿಯ ಬಾಯಿಗೆ ಕಡಿವಾಣ ಹಾಕಲಾರೆವು.

ಹೀಗೇಕೆ? ಯಾಕಂದರೆ ಹುಲಿಯ ಸ್ವಭಾವದಲ್ಲಿ ಕ್ರೂರತನವಿರುತ್ತದೆ. ಅದನ್ನು ಯಾವ ವಿಧದಿಂದಲೂ ತಿದ್ದಲಿಕ್ಕೆ ಶಕ್ಯವಿಲ್ಲ. ಇದೇ ಕಾರಣದಿಂದ ನಾವು ಅದರೊಡನೆ ಯಾವ ಒಳ್ಳೆಯ ವ್ಯವಹಾರವನ್ನೂ ಆಶಿಸುವುದಿಲ್ಲ. ತಿರುಗಿ ಅದನ್ನು ಕೊಂದುಹಾಕುವ ಎತ್ತುಗಡೆಗೇ ತೊಡಗಿಬಿಡುತ್ತೇವೆ. ಹಾಗೆ ಮಾಡಿಬಿಟ್ಟರೆ ಅದು ನಮಗೆ ಯಾವ ಹಾನಿಗೂ ಈಡುಮಾಡಲಾರದು.

ಇದಕ್ಕೆ ವಿಪರೀತವಾಗಿ ಒಂದು ಅಡವಿಯ ಕುದುರೆಯನ್ನು, ಮೊದಲಿಗೆ ಅದು ಎಷ್ಟೇ ಕಿಡಿಗೇಡಿ-ಹಟಮಾರಿ ಆಗಿದ್ದರೂ ಕೆಲವೊಂದು ಯತ್ನದಿಂದಲೂ ಧೈರ್ಯದಿಂದಲೂ ಅದನ್ನು ವಶದಲ್ಲಿ ತಂದುಕೊಳ್ಳಲು ಸಾಧ್ಯವಿದೆ. ಕೆಲವು ದಿನಗಳ ಮೇಲೆ ಅದು ನಮ್ಮ ಆಜ್ಞೆಯನ್ನು ಪಾಲಿಸುವುದಕ್ಕೂ ನಮ್ಮನ್ನು ಪ್ರೀತಿಸುವುದಕ್ಕೂ ಕಲಿತು ಬಿಡುತ್ತದೆ. ಕೊನೆಯಲ್ಲಂತೂ ಅದು ಕಡಿವಾಣ ಹಾಕುವಾಗ ತನ್ನ ಮುಖವನ್ನು ಮುಂದೆ ಚಾಚಿಕೊಡುತ್ತದೆ.

ಮನುಷ್ಯನಲ್ಲಿ ಸಹ ಕೆಲವು ಅಡನಾಡಿಯಾದ ಹಾಗೂ ಕಿಡಿಗೇಡಿಯಾದ ಪ್ರವೃತ್ತಿಗಳೂ ಇಚ್ಛೆಗಳೂ ಇರುತ್ತವೆ. ಒಬ್ಬೊಬ್ಬರಲ್ಲಿ ಹುಲಿಯಂತೆ ವಶದಲ್ಲಿ ತಂದುಕೊಳ್ಳಲಿಕ್ಕಾಗದಂಥವುಗಳೂ ಇರಬಲ್ಲವು. ಹೆಚ್ಚಾಗಿ ಅಡವಿಯ ಕುದುರೆಯಂಥ ಪ್ರವೃತ್ತಿಗಳೇ ಇರುತ್ತವೆ. ಅವುಗಳ ಸುಧಾರಣೆಗೆ ಒಂದೇ ಒಂದು ಕಡಿವಾಣದ ಅವಶ್ಯಕತೆ ಇರುತ್ತದೆ. ತನ್ನ ಸ್ವಂತ ಪ್ರವೃತ್ತಿಗಳಿಗೆ ಹಾಕುವ ಕಡಿವಾಣವೇ ಮನುಷ್ಯನಿಗೆ ಎಲ್ಲಕ್ಕೂ ಹೆಚ್ಚಿನ ಕಡಿವಾಣವಾಗಿದೆ. ಇದಕ್ಕೇ ನಾವು ಆತ್ಮಸಂಯಮವೆನ್ನುತ್ತೇವೆ.

* * * *

ಹುಸೇನನು ಮಹಮ್ಮದ ಪೈಗಂಬರರ ಮೊಮ್ಮಗನು. ಅವನು ವಾಸಿಸುತ್ತಿದ್ದ ಮನೆಯು ಬಹು ಮೇಲ್ತರದ್ದಾಗಿತ್ತು. ಚೀಲಗಳು ಹೊನ್ನನಾಣ್ಯಗಳಿಂದ ತುಂಬಿದ್ದವು. ಅವನನ್ನು ಅಪ್ರಸನ್ನಗೊಳಿಸುವುದೆಂದರೆ ಭಾಗ್ಯ ಪುರುಷನನ್ನು ಅಪ್ರಸನ್ನಗೊಳಿಸಿದಂತೆಯೇ ಸರಿ. ಧನಿಯನು ಬಹುಭಯಂಕರ ವಾದ ಸಿಟ್ಟಿನವನು.

ಒಂದು ದಿನ ನಡೆದ ಸಂಗತಿಯೇನಂದರೆ- ಒಬ್ಬ ಜೀತದಾಳು (ಗುಲಾಮ) ಕುದಿಯುತ್ತಿರುವ ನೀರಿನ ಪಾತ್ರೆಯನ್ನು ಎತ್ತಿಕೊಂಡು ಹುಸೇನನ ಹತ್ತಿರದಿಂದ ಹೋಗುತ್ತಿರುವಾಗ ಅವನು ಊಟಮಾಡತ್ತಿದ್ದನು. ದುರ್ಭಾಗ್ಯವಶದಿಂದ ನೀರು ತುಸು ತುಳುಕಿ ಪೈಗಂಬರರ ಮೊಮ್ಮಗನ ಮೇಲೆ ಚಲ್ಲಿದವು. ಅವನು ಸಿಟ್ಟಿನಿಂದ ಕೂಗಾಡತೊಡಗಿದನು.

ಜೀತದಾಳು ಮೊಳಕಾಲೂರಿ ಕುಳಿತುಬಿಟ್ಟನು- ಅವನ ಮನಸ್ಸು ಆ ಕಾಲಕ್ಕೆ ಅದೆಷ್ಟು ಸ್ವಸ್ಥವೂ ಸಂಯತವೂ ಆಗಿದ್ದಿತೆಂದರೆ ಅವನ ಬಾಯಿಗೆ ಕುರಾನದ ಒಂದು ವಾಕ್ಯವು ಬಂದುಬಿಟ್ಟಿತು.

“ಸಿಟ್ಟನ್ನು ವಶದಲ್ಲಿ ಇಟ್ಟುಕೊಂಡವರ ಸಲುವಾಗಿ ಸ್ವರ್ಗವಿದೆ” ಎಂದು ನುಡಿದನು.

ಆ ಮಾತಿನ ಅರ್ಥವನ್ನು ಚೆನ್ನಾಗಿ ತಿಳಕೊಳ್ಳಹತ್ತಿದ್ದರಿಂದ ಹುಸೇನನು ನಡುವೆಯೇ ಮಾತೆತ್ತಿ “ನಾನು ಸಿಟ್ಟಿಗೆ ಬಂದಿಲ್ಲ” ಎಂದು ಹೇಳಿದನು.

“ಮತ್ತು ಯಾರು ಮನುಷ್ಯರನ್ನು ಕ್ಷಮಿಸುತ್ತಾರೆಯೋ ಅವರ ಸಲುವಾಗಿ ಸ್ವರ್ಗವಿದೆ.” ಎಂದು ಜೀತದಾಳು ನುಡಿದನು.

“ನಾನು ನಿನ್ನನ್ನು ಕ್ಷಮಿಸುತ್ತೇನೆ” ಎಂದು ಹುಸೇನನು ಹೇಳಿದನು.

“ಯಾಕಂದರೆ ಪರಮಾತ್ಮನು ದಯಾಳು ವ್ಯಕ್ತಿಗಳನ್ನು ಪ್ರೇಮಿಸುತ್ತಾನೆ” ಎಂದು ಜೀತದಾಳು ಮಾತು ಕೊನೆಗೊಳಿಸಿದನು.

ಈ ಸಂಭಾಷಣೆ ಮುಗಿಯಿತೋ ಇಲ್ಲವೋ ಹುಸೇನನ ಎಲ್ಲ ಸಿಟ್ಟು ಮಾಯವಾಗಿ ಹೋಯಿತು. ತನ್ನ ಹೃದಯವು ಅತ್ಯಂತ ಕೋಮಲವಾಗಿ ಬಿಟ್ಪತೆಂದು ಅವನ ಅನುಭವಕ್ಕೆ ಬಂದಿತು. ಜೀತದಾಳನ್ನು ಎಬ್ಬಿಸುತ್ತ ಅವನಿಗೆ ಹೇಳಿದ್ದೇನಂದರೆ- “ತೆಗೆದುಕೋ ಈ ನಾಲ್ಕು ನೂರು ‘ದರಹಂ’ ಗಳನ್ನ ತೆಗೆದುಕೋ. ನೀನು ಇಂದಿನಿಂದ ಸ್ವತಂತ್ರನು.”

ಈ ಪ್ರಕಾರ ಹುಸೇನನು ತನ್ನ ದುಡುಕುಮನಸ್ಸಿಗೆ-ಅದು ತುಂಬ ಉದಾರವಾಗಿದ್ದುದರಿಂದ ಕಡಿವಾಣ ಹಾಕಲಿಕ್ಕೆ ಕಲಿತನು. ಅವನ ಸ್ವಭಾವವು ಹೀನವೂ ಆಗಿದ್ದಿಲ್ಲ, ಕಠೋವೂ ಆಗಿದ್ದಿಲ್ಲ. ವಶದಲ್ಲಿ ತಂದುಕೊಳ್ಳಲಿಕ್ಕೆ ಶಕ್ಯವಿರುವಂತೆ ಅನುಕೂಲವಾಗಿತ್ತು.

* * * *

ಆದಕಾರಣ ಬಾಲಕರೇ, ನಿಮ್ಮ ತಾಯಿತಂದೆಗಳಾಗಲಿ, ಶಿಕ್ಷಕರಾಗಲಿ ನಿಮಗೆ ನಿಮ್ಮ ಸ್ವಭಾವವನ್ನು ವಶಪಡಿಸಿಕೊಳ್ಳುವ ಸಲುವಾಗಿ ಹೇಳುವರು. ನಿಮ್ಮ ಸಣ್ಣ ದೊಡ್ಡ ದೋಷಗಳು ಯಾವ ಉಪಾಯದಿಂದಲೂ ಸುಧಾರಿಸ ಲಾರವೆಂದು ಅವರೆಣಿಸುವುದಿಲ್ಲ. ಆದರೆ ನಿಮ್ಮ ಓಟದ ಹಾಗೂ ದುಡುಕಿನ ಮನಸ್ಸು ಒಳ್ಳೆಯ ತಳಿಯ ಕುದುರೆಮರಿಯಂತಿದೆಯೆಂದೂ ಅದಕ್ಕೆ ಕಡಿವಾಣವು ಬೇಕೇಬೇಕೆಂದೂ ಹಾಗೆ ಹೇಳುವರು.

ಒಂದು ಬಡಗುಡಿಸಲು ಮತ್ತು, ಒಂದು ಅರಮನೆ ಇವುಗಳಲ್ಲಿ ಯಾವುದನ್ನು ನೀವು ಇರುವುದಕ್ಕೆಂದು ಆರಿಸಿಕೊಳ್ಳುತ್ತೀರಿ ? ಅರಮನೆಯನ್ನು ಆರಿಸಿಕೊಳ್ಳುತ್ತೀರಿ-ಸಂಶಯವಿಲ್ಲ.

ಒಂದು ಕಥೆಯಿದೆ ಏನೆಂದರೆ-ಹಜರತ ಮಹಮ್ಮದರವರು ಒಮ್ಮೆ ಸ್ವರ್ಗವನ್ನು ನೋಡುವ ಸಲುವಾಗಿ ಹೋದಾಗ ಅಲ್ಲಿ ಅವರು, ತುಸು ಎತ್ತರವಾಗಿ ಕಟ್ಟಿತೆಗೆದ ಕೆಲವೊಂದು ದೊಡ್ದ ದೊಡ್ಡ ಉಪ್ಪರಿಗೆಗಳನ್ನು ನೋಡಿದರು. ಅವುಗಳ ಸೌಂದರ್ಯದ ಮುಂದೆ ಸರ್ವದೇಶದ ಸೌಂದರ್ಯವು ನಿಸ್ಸಾರವಾಗಿತ್ತು.

“ಓ! ಜಿಬ್ರಾಯಿಲರೇ” ಎಂದು ಮಹಮ್ಮದರು ಕೂಗಿ ತಮಗೆ ಸ್ವರ್ಗವನ್ನು ತೋರಿಸುತ್ತಿದ್ದ ದೇವದೂತನಿಗೆ ಕೇಳಿದರು- “ಈ ಉಪ್ಪರಿಗೆಗಳನ್ನು ಯಾರ ಸಲುವಾಗಿ ಕಟ್ಟಿದ್ದಾರೆ ?”

ದೇವದೂತನು ಮರುನುಡಿದನು.- “ಯಾರು ಸಿಟ್ಟನ್ನು ತಮ್ಮ ವಶದಲ್ಲರಿಸಿಕೊಂಡಿರುತ್ತಾರೋ ಅವರ ಸಲುವಾಗಿ. ಹಾಗೂ ತಮಗೆ ಕೇಡು ಬಗೆಯುವವರನ್ನು ಸಹ ಯಾರು ಕ್ಷಮಿಸಬಲ್ಲರೋ ಅವರ ಸಲುವಾಗಿ.”

ನಿಜವಾಗಿ, ಶಾಂತವೂ ದ್ವೇಷರಹಿತವೂ ಅದ ಮನವೊಂದು ವಾಸ್ತವಿಕವಾಗಿ ಉಪ್ಪರಿಗೆಯಂತೆಯೇ ಇರುತ್ತದೆ. ಆದರೆ ಈ ಮಾತು ಒಂದು ಅವೇಶಯುಕ್ತವೂ ಪ್ರತಿಹಿಂಸಾಪೂರ್ಣವೂ ಆದ ಮನಸ್ಸಿನ ವಿಷಯದಲ್ಲಿ ಹೇಳಲಾಗುವದಿಲ್ಲ. ನಮ್ಮ ಮನವೊಂದು ತಮ್ಮ ಮನೆ ಇದ್ದಹಾಗಿದೆ. ಅದನ್ನು ನಾವು ನಮ್ಮ ಇಚ್ಛೆಯಂತೆ ಸ್ವಚ್ಛ, ಶಾಂತ ಹಾಗೂ ಮಧುರವನ್ನಾಗಿ ಮಾಡಿಕೊಳ್ಳಲು ಸಾಧ್ಯವಿದೆ. ಇಂಥ ಮನೆಯು ಅಪಸ್ವರವಲ್ಲದ ತಾಳ ಬದ್ಧವಾದ ಸ್ವರಗಳಿಂದ ತುಂಬಿರುತ್ತದೆ. ಆದರೆ, ನಾವು ಬೇಕಾದರೆ ಅದನ್ನು, ದುಃಖಪ್ರದವಾವ ಶಬ್ಧಗಳಿಂದಲೂ ಅಪಸ್ವರದ ಕೂಗಾಟಗಳಿಂದಲೂ ತುಂಬಿದ ಹಾಗೂ ಹೆದರಿಕೆ ಹುಟ್ಟಿಸುವ ಒಂದು ಕತ್ತಲೆಗವಿಯನ್ನಾಗಿ ಸಹ ಮಾಡಿಕೊಳ್ಳ ಬಲ್ಲೆವು.
* * * *

ಉತ್ತರಫ್ರಾನ್ಸದ ಒಂದು ನಗರದಲ್ಲಿ ಇರುತ್ತಿದ್ದ ಒಬ್ಬ ಬಾಲಕನೊಡನೆ ನನ್ನ ಪರಿಚಯವಿತ್ತು. ಅವನು ಬಾಲಕನಾಗಿದ್ದರೂ ಅವನ ಮನಸ್ಸು ಬಹು ಸರಳವಾಗಿತ್ತು. ಆದರೆ ಅವನ ಹೃದಯವು ಬಲು ಉತ್ಸಾಹಪೂರ್ಣವಾಗಿತ್ತು. ಸಿಟ್ಟಿಗೇಳುವುದಕ್ಕಾಗಿ ಅವನು ಯಾವಾಗಲೂ ಸಿದ್ಧನಾಗಿಯೇ ಇರುತ್ತಿದ್ದನು.

ಒಂದು ದಿನ ನಾನು ಅವನಿಗೆ ಹೇಳಿದ್ದೇನಂದರೆ- “ತುಸು ಎಣಿಕೆ ಹಾಕಿ ನೋಡಿದರೆ ನಿನ್ನಂಥ ಹೃಷ್ಟಪುಷ್ಠ್ಯ ಬಾಲಕನಿಗೆ ಯಾವ ಮಾತು ಹೆಚ್ಚು ಕಠಿಣವಿದೆ-ಏಟಿಗೆ ಬದಲು ಮರು ಏಟು ಕೊಡುವುದು ಅಂದರೆ ಹೊಡೆದವನ ಮುಖದ ಮೇಲೆ ಗುದಿಕೆ ಕೊಡುವುದೋ ಇಲ್ಲವೆ, ಸರಿಯಾಗಿ ಆ ಕೂಡಲೇ ತನ್ನ ಮುಷ್ಟಿಯನ್ನು ಚಕ್ಕನೆ ಕಿಸೆಯಲ್ಲಿ ಹಾಕಿಕೊಳ್ಳುವುದೋ?”

“ತನ್ನ ಮುಷ್ಟಿಯನ್ನು ಕಿಸೆಯಲ್ಲಿ ಹಾಕಿಕೊಳ್ಳುವುದು” ಎಂದವನು ಉತ್ತರ ಕೊಟ್ಟನು.

“ಒಳ್ಳೆಯದು. ಹಾಗಾದರೆ ಇನ್ನು ನಿನ್ನಂಥ ಸಾಹಸಿಯಾದ ಬಾಲಕನು ಎಲ್ಲರೂ ಮಾಡಬಹುದಾದ ಹಗುರ ಕೆಲಸ ಮಾಡುವುದು ಉಚಿತವೋ ಅದಕ್ಕೆ ವಿಪರೀತವಾಗಿ ಎಲ್ಲರಿಗೂ ಮಾಡಲಿಕ್ಕಾಗದ ಗಡಚು ಕೆಲಸವನ್ನು ಮಾಡುವುದು ಉಚಿತವೋ-ಹೇಳಿಬಿಡು.”

ಒಂದು ಕ್ಷಣಹೊತ್ತು ಯೋಚಿಸಿ ತುಸು ಬಾಯಿಸವರುತ್ತ ಉತ್ತರ ಹೇಳಿದನು- “ಎಲ್ಲರಿಗೂ ಮಾಡಲಿಕ್ಕಾಗದ ಗದಚು ಕೆಲಸ.”

“ಬಹಳ ಒಳ್ಳೆಯದು. ಇನ್ನು ಮತ್ತೊಂದು ಸಾರೆ ಅಂಥ ಪ್ರಸಂಗ ಬಂದಾಗ ಹಾಗೆಯೆ ಮಾಡಲು ಯತ್ನಿಸಬೇಕು.”

ಅದಾದ ಕೆಲವು ದಿನಗಳ ತರುವಾಯ ಅ ತರುಣನು ಒಂದು ದಿವಸ ನನ್ನ ಹತ್ತಿರ ಬಂದನು. ಆತನು ಸಮುಚಿತವಾವ ಹೆಮ್ಮೆಯೊಡನೆ, ನಾನು ಎಲ್ಲರಿಗೂ ಮಾಡಲಿಕ್ಕಾಗದ ಗಡಚುಕೆಲಸ ಮಾಡುವುದರಲ್ಲಿ ಸಫಲನಾಗಿದ್ದೇನೆಂದು ಹೇಳಿದನು.

ಅವನು ಮುಂದುವರಿಸಿದ್ದೇನೆಂದರೆ-ಕಾರಖಾನೆಯಲ್ಲಿ ನನ್ನೊಡನೆ ಕೆಲಸ ಮಾಡುವ ಒಬ್ಬ ಜೊತೆಗಾರನು ಹೀನಸ್ವಭಾವದ ಬಗ್ಗೆ ಪ್ರಸಿದ್ಧನಾಗಿದ್ದನು. ಅವನು ಸಿಟ್ಟಿನಿಂದ ಬಂದವನೇ ನನ್ನನ್ನು ಹೊಡೆದುಬಿಟ್ಟನು. ಯಾಕಂದರೆ-ನಾನು ಸಾಮಾನ್ಯವಾಗಿ ಕ್ಷಮಿಸತಕ್ಕವನಲ್ಲವೆಂಬುದನ್ನೂ ನನ್ನ ರಟ್ಟೆಯಲ್ಲಿ ಬಲವಿದೆಯೆಂಬುದನ್ನೂ ಅವನು ಬಲ್ಲವನಾಗಿದ್ದನು. ಅವನು ತನ್ನನ್ನು ರಕ್ಷಿಸಿಕೊಳ್ಳುವುದಕ್ಕೆ ಸಿದ್ಧನಾಗಿ ನಿಂತನು. ಆ ಸಮಯಕ್ಕೆ ತಟ್ಟನೆ ತಾವು ಕಲಿಸಿಕೊಟ್ಟ ಮಾತು ನೆನಪಿಗೆ ಬಂತು. ಅದರಂತೆ ಮಾಡಲಿಕ್ಕೆ ನಾನು ಯೋಚಿಸಿದಕ್ಕಿಂತ ತುಸು ಹೆಚ್ಚಾಗಿಯೇ ಬಿಗಿಯಾಯಿತು. ಆದರೆ ನಾನು ನನ್ನ ಮುಷ್ಟಿಯನ್ನು ನನ್ನ ಕಿಸೆಯಲ್ಲಿ ಹಾಕಿಕೊಂಡೇ ಬಿಟ್ಟೆನು. ನಾನು ಹಾಗೆ ಮಾಡಿದ ಕೂಡಲೇ ನನ್ನ ಸಿಟ್ಟು ಎಲ್ಲಿ ಕಾಣೆಯಾಗಿಬಿಟ್ಟತೋ ತಿಳಿಯಲಿಲ್ಲ. ಅದರ ಸ್ಥಳದಲ್ಲಿ ನನ್ನ ಆ ಜೊತೆಗಾರನ ಮೇಲೆ ತಿರುಗಿ ದಯೆಯು ಆವರಿಸಿತು. ಆಗ ನಾನು ಅವನ ಕಡೆಗೆ ನನ್ನ ಕೈಚಾಚಿದೆನು- ಇವರಿಂದ ಅವನಿಗೆ ಅದೆಷ್ಟು ಅಶ್ಚರ್ಯವಾಯಿತೆಂದರೆ-ಒಂದು ಕ್ಷಣಹೊತ್ತು ಅವನು ಬಾಯಿಮುಚ್ಚಿ ನನ್ನ ಕಡೆಗೆ ಹೊಂಚಿನಿಂತನು. ಒಂದು ಶಬ್ದವನ್ನು ಸಹ ನುಡಿಯಲಿಕ್ಕಾಗಲಿಲ್ಲ. ಅಲ್ಲದೆ ಅವನು ತಟ್ಟನೆ ನನ್ನ ಕೈ ಮೇಲೆ ಕುಪ್ಪಳಿಸಿದನು. ನಾನು ಅವನನ್ನು ಗಟ್ಟಿಯಾಗಿ ಹಿಡಕೊಂಡೆನು. ಅವನು ಒಮ್ಮಲೆ ಕರಗಿ ನೀರಾಗಿ- “ಇಂದಿನಿಂದ ನೀನು ನನಗೆ ಬೇಕಾದ್ದನ್ನು ಮಾಡಬಲ್ಲೆ. ನಾನು ನಿನಗೆ ನಿರಂತರ ಮಿತ್ರನಾಗಿ ಬಿಟ್ಟಿದ್ದೇನೆ.” ಎಂದನು.

ಆ ಬಾಲಕನು ತನ್ನ ಸಿಟ್ಟನ್ನು ಖಲೀಫಾ ಹುಸೇನನು ಮಾಡಿದ ಪ್ರಕಾರ ವಶಕ್ಕೆ ತಂದುಕೊಂಡನು.

ಆದರೆ ಇದನ್ನುಳಿದು, ಅವಶ್ಯವಾಗಿ ವಶಪಡಿಸಿಕೊಳ್ಳಬೇಕಾದ ಕೆಲವೊಂದು ವಿಷಯಗಳಿವೆ.

* * * *

ಅರಬದೇಶದ ಕವಿಯಾದ ಅಲ್‌ಕೋಜಾಯಿಯು ರೇಗಿಸ್ತಾನದಲ್ಲಿ ಇರುತ್ತಿದ್ದನು. ಒಂದು ದಿವಸ ಅವನು. ‘ನಾಬಾ’ ದ ಒಂದು ಸುಂದರವಾದ ಮರವನ್ನು ಕಂಡನು. ಅವನು ಅದರ ಕವಲುಗಳಿಂದ ಒಂದು ಬಿಲ್ಲನ್ನೂ ಕೆಲವು ಬಾಣಗಳನ್ನೂ ಮಾಡಿಕೊಂಡನು.

ರಾತ್ರಿಯಲ್ಲಿ ಅವನು ಕಾಡುಕತ್ತೆಗಳನ್ನು ಬೇಟೆಯಾಡಬೇಕೆಂದು ಹೊರಟನು. ತುಸು ಹೊತ್ತಿನಲ್ಲಿಯು ಅವನು ಕತ್ತೆಗಳ ಒಂದು ಹಿಂಡಿನ ಕಾಲಸಪ್ಪಳವನ್ನು ಕೇಳಿದನು. ಅವನು ಒಂದು ಬಾಣವನ್ನು ಬಿಟ್ಟನು. ಆದರೆ ಅವನು ಬಿಲ್ಲಿನ ಹೆದೆಯನ್ನು ಅದೆಷ್ಟು ಬಲವಾಗಿ ಪ್ರಯೋಗಿಸಿದನೆಂದರೆ- ಬಾಣವು ಹಿಂಡಿನೊಳಿಗಿನ ಒಂದು ಪ್ರಾಣಿಯ ಶರೀರವನ್ನು ಭೇದಿಸಿದ್ದಲ್ಲದೆ ಹತ್ತಿರದ ಒಂದು ಬಂಡೆಗಲ್ಲಿಗೆ ಹೋಗಿ ಟಕ್ಕರಿಸಿತು. ಬಂಡೆಗಲ್ಲಿಗೆ ಬಾಣವು ಟಕ್ಕಿಸಿದ ಸಪ್ಪಳವನ್ನು ಕೇಳಿ ಅಲಕೋಜಾಯಿಯು ತನ್ನ ಬಾಣವು ನಿಷ್ಫಲವಾಯಿತೆಂದು ಎಣಿಸಿದನು. ಆಗ ಅವನು ಬೇರೊಂದು ಬಾಣವನ್ನು ಬಿಟ್ಟನು. ಈ ಸಾರೆಯೂ ಅದು ಒಂದು ಪ್ರಾಣಿಯ ಶರೀರದೊಳಗಿಂದ ಹಾಯಿದು ಬಂಡೆಗಲ್ಲಿಗೆ ಹೋಗಿ ಅಪ್ಪಳಿಸಿತು. ಈ ಸಾರಿಯೂ ಗುರಿತಪ್ಪಿಹೋಯಿತೆಂದು ಅಲಕೋಜಾಯಿಯು ತಿಳಿದನು. ಇದೇ ಬಗೆಯಾಗಿ ಅವನು ಮೂರನೇ ನಾಲ್ಕನೇ ಐದನೇ ಬಾಣಗಳನ್ನು ಪ್ರಯೋಗಿಸಿದನು. ಹಾಗೂ ಪ್ರತಿಯೊಂದು ಸಲ ಅವನು ಅದೇ ಸದ್ದನ್ನು ಕೇಳಿದನು. ಆಗಂತೂ ಅವನು ಸಿಟ್ಪಗೇರಿ ತನ್ನ ಬಿಲ್ಲನ್ನೇ ಮುರಿದುಹಾಕಿದನು.

ಮರುದಿನ ಬೆಳಗಾದ ಬಳಿಕ ಆಯ್ದೂ ಕತ್ತೆಗಳು ಬಾಣಗಳ ಬಳಿಯಲ್ಲಿ ಸತ್ತುಬಿದ್ದಿರುವುದನ್ನು ಅವನು ಕಂಡನು.

ಅವನಲ್ಲಿ ತುಸು ಹೆಚ್ಚು ಧೈರ್ಯವಿದ್ದಿದ್ದರೆ, ಅವನು ಹೊತ್ತು ಹೊರಡುವ ವರೆಗೆ ಕಾದಿದ್ದರೆ ತನ್ನ ಶಾಂತಿಯೊಡನೆ ಅವನು ತನ್ನ ಧನುಷ್ಯವನ್ನೂ ಉಳಿಸಿಕೊಳ್ಳುತ್ತಿದ್ದನು.

* * * *

ಮನುಷ್ಯನೆ ಸದ್ಗುಣದ ಸರ್ವ ಉತ್ಸಾಹವನ್ನೂ ಬಲವನ್ನೂ ದೂರಗೊಳಿಸಿ ಅವನನ್ನು ದುರ್ಬಲಗೊಳಸುವ ಶಿಕ್ಷಣಕ್ಕೆ ನಾನು ಉಚಿತವೆಣಿಸಿರುವೆನೆಂದು ಇದರಿಂದ ಯಾರೂ ತಿಳಕೊಳ್ಳಬಾರದು. ಯಾವುದೊಂದು ಕಾಡು ಕುದುರೆಗೆ ಕಡಿವಾಣ ಹಾಕುವುದು ಅದರ ಬಾಯಿಯನ್ನು ಹರಿಯುವದಕ್ಕಾಗಿಯೂ ಅಲ್ಲ; ಆದರೆ ಹಲ್ಲು ಮುರಿಯುವದಕ್ಕಾಗಿಯೂ ಅಲ್ಲ. ಅದು ನಮ್ಮ ಇಚ್ಛೆಯಂತೆ ಒಳ್ಳೆಯ ರೀತಿಯಿಂದ ಕೆಲಸವನ್ನು ಪೂರ್ತಿಗೊಳಿಸುವದಾದರೆ ನಾವದನ್ನು ಚೆನ್ನಾಗಿ ನಡೆಸಲು ಶಕ್ಯವಾಗುತ್ತದೆಂದು ಅದಕ್ಕೆ ಕಡಿವಾಣ ಹಾಕತಕ್ಕದ್ದು. ನಾವು ಕಡಿವಾಣವನ್ನು ನಿರ್ದಯತೆಯಿಂದ ಬಿಗಿ ಹಿಡಿದು ಹಿಂದೆ ಸಹ ಸರಿಯಲಿಕ್ಕೆ ಬಾರದ ಹಾಗೆ ಮಾಡುವುದಕ್ಕಲ್ಲ.

ಬಹುಜನ ದುರ್ಬಲ ಚರಿತ್ರರು ಹೆಚ್ಚು ಪ್ರಮಾಣದಲ್ಲಿ ಕುರಿಯ ಸ್ವಭಾವದವೆರೇ ಸಿಕ್ಕುತ್ತಿರುವುದು ನಿಜವಾಗಿ ದುರ್ಭಾಗ್ಯದ ಸಂಗತಿಯಾಗಿದೆ. ಅವರನ್ನು ನಡೆಸಿಕೊಂಡು ಹೋಗುವುದಕ್ಕೆ ವಾಡಿಕೆಯ ಕಥನವೇ ಬೇಕಾದಷ್ಟು ಇರುತ್ತದೆ.

ಕೆಲವು ಜೀತದಾಳುಗಳ ಸ್ವಭಾವವು ಜಡ, ದುರ್ಬಲ ಹಾಗೂ ಮೇರೆ ಮೀರಿದ ತೋರಿಕೆಯದು ಆಗಿರುತ್ತದೆ.

ಅಬು‌ಉಸ್ಮಾನ ಅಲ-ಹಿರಿಯ ತನ್ನ ಅತ್ಯಧಿಕ ಧೈರ್ಯದ ಸಲುವಾಗಿ ಹೆಸರಾಗಿದ್ದನು. ಒಂದು ದಿನ ಅವನು ಒಂದು ಉತ್ಸವದಲ್ಲಿ ಸಹಭಾಗಿಯಾಗುವುದಕ್ಕೆ ಆಮಂತ್ರಿತನಾಗಿದ್ದನು. ತನ್ನ ನಿಮಂತ್ರಕನ ಮನೆಯನ್ನು ತಲಪುತ್ತಲೇ ಅವನಿಗೆ ಕೇಳಿಸಿದ್ದೇನೆಂದರೆ- “ನನ್ನನ್ನಿಂದು ಕ್ಷಮಿಸಿರಿ. ಇಂದು ನಾನು ತಮ್ಮನ್ನು ಸ್ವಾಗತಿಸಲು ಸಾಧ್ಯವಿಲ್ಲ. ತಾವು ಮನೆಗೆ ಹೊರಳಿ ಹೋಗಿರೆಂದು ತಮ್ಮಲ್ಲಿ ನನ್ನ ಪ್ರಾರ್ಥನೆಯಿದೆ. ತಮ್ಮ ಮೇಲೆ ಪರಮಾತ್ಮನ ದಯೆಯಿರಲಿ.”

ಅಬು‌ಉಸ್ಮಾನನು ತನ್ನ ಮನೆಗೆ ಮರಳಿದನು. ಮನೆಯನ್ನು ತಲುಪುವ ಹೊತ್ತಿಗೇ ಅವನ ಮಿತ್ರನು ಅವನಿಗೆ ಅಮಂತ್ರಣ ಕೊಡುವುದಕ್ಕೆ ಮತ್ತೆ ಬಂದನು.

ಅಬು‌ಉಸ್ಮಾನನು ತನ್ನ ಮಿತ್ರನನ್ನು ಹಿಂಬಾಲಿಸಿ ಹೊರಟನು. ಅವರ ಮನೆಯ ಬಾಗಿಲಿಗೆ ತಲುಪಿದ ಕೂಡಲೇ ಮಿತ್ರನು ಅವನಿಗೆ ಪುನಃ ಅಂದಿನ ದಿನದ ಸಲುವಾಗಿ ಕ್ಷಮೆ ಕೇಳಿದನು. ಅಬು‌ಉಸ್ಮಾನನು ಪಿಟ್ಟೆನ್ನದೆ ಮತ್ತೆ ಹೊರಳಿ ಹೋದನು.

ಮೂರನೇ ಸಾರೆ ನಾಲ್ಕನೇ ಸಾರೆ ಸಹ ಅದೇ ಕ್ರಮವು ಮತ್ತೆಮತ್ತೆ ನಡೆಯಿತು. ಆದರೆ ಕೊನೆಯಲ್ಲಿ ಅವನ ಮಿತ್ರನು ಅವನನ್ನು ಸ್ವಾಗತಿಸಿದನು. ಹಾಗೂ ಎಲ್ಲ ಜನರ ಎದುರಿನಲ್ಲಿ ಅವನಿಗೆ ಹೇಳಿದ್ದೇನೆಂದರೆ- “ನಿಮ್ಮ ಸ್ವಭಾವದ ಪರೀಕ್ಷೆಯಾಗಿಬಿಡಲೆಂದು ನಾನು ನಿಮ್ಮೊಡನೆ ಹೀಗೆ ವರ್ತಿಸಿದೆನು. ನಿಮ್ಮ ಧೈರ್ಯ ಹಾಗೂ ನಮ್ರತೆಗಳನ್ನು ನಾನು ಪ್ರಶಂಸಿಸುತ್ತೇನೆ.”

ಅಬು‌ಉಸ್ಮಾನನು ಮರುನುಡಿದುದೇನೆಂದರೆ- “ನನ್ನನ್ನು ಪ್ರಶಂಸಿಸಬೇಡಿರಿ. ಯಾಕಂದರೆ ಈ ಗುಣಗಳು ನಾಯಿಯಲ್ಲಿ ಸಹ ಇರುತ್ತವೆ. ಅದು ಕರೆದಾಗ ಹತ್ತಿರಕ್ಕೆ ಬರುತ್ತದೆ. ಹೀಗಳೆದರೆ ಹೊರಳಿ ಹೋಗುತ್ತದೆ.”

ಅಬು‌ಉಸ್ಮಾನನು ಮನುಷ್ಯನು. ನಾಯಿ ಅಲ್ಲ. ಅವನು ನ್ಯಾಯವನ್ನೂ ಅತ್ಮತುಷ್ಟಿಯನ್ನೂ ಆಶಿಸದೆ ತನ್ನ ಸಂತೋಷದ ಅವಹೇಳನ ಮಾಡಿದನು. ಹಾಗೂ ಮಿತ್ರನ ನಗೆಗೆ ಕಾರಣನಾದನು. ಇದರಿಂದ ಯಾರಿಗೂ ಯಾವ ಲಾಭವೂ ಆಗಲಿಲ್ಲ.

ಇಂಥ ನಮ್ರಸ್ವಭಾವದ ಮನುಷ್ಯನ ಒಳಗೆ, ವಶದಲ್ಲಿ ತಂದುಕೊಳ್ಳಬಹುದಾದುದು ಯಾವುದೂ ಇರುವುದಿಲ್ಲವೇ? ಇರುತ್ತದೆ. ಅದನ್ನು ವಶದಲ್ಲಿ ತಂದುಕೊಳ್ಳುವುದು ಎಲ್ಲಕ್ಕಿಂತ ಬಿಗಿಯಾಗಿದೆ. ಅದೇ ಅವನ ಸ್ವಭಾವದ ದುರ್ಬಲತೆ. ತನ್ನನ್ನು ತಾನು ನಡೆಸಿಕೊಳ್ಳಲು ಅವನು ಸ್ವತಃ ಅಸಮರ್ಥನಾಗಿದ್ದನು. ಅಂತೆಯೇ ಪ್ರತಿಯೊಬ್ಬರು ಅವನನ್ನು ತಮ್ಮಿಚ್ಛೆಗೆ ತಕ್ಕಂತೆ ನಡೆಸಿಕೊಳ್ಳುತ್ತಿದ್ದರು.

* * * *

ಒಬ್ಬ ನವಯುವಕನಾದ ಬ್ರಹ್ಮಚಾರಿಯು ಬಹು ಚತುರನಾಗಿದ್ದನು. ಹಾಗೂ ಅವನು ಸ್ವತಃ ತನ್ನ ಈ ಗುಣಗಳನ್ನು ತಿಳಿದವನಾಗಿದ್ದನು. ಎಲ್ಲೆಲ್ಲಿಯೂ ತನ್ನ ಪ್ರಶಂಸೆಯುಂಟಾಗುವಂತೆ ತನ್ನ ಯೋಗ್ಯತೆಯನ್ನು ಹೆಚ್ಚು ಹೆಚ್ಚಾಗಿ ಬೆಳೆಸಿಕೊಳ್ಳಬೇಕೆಂದು ಅವನ ದೊಡ್ಡ ಇಚ್ಛೆಯಿತ್ತು. ಅದಕ್ಕಾಗಿ ಅವನು ಒಂದಾದ ಮೇಲೆ ಒಂದರಂತೆ ಅನೇಕ ದೇಶಗಳನ್ನು ಸಂಚರಿಸಿದನು.

ಬಾಣ ಮಾಡಬಲ್ಲವನೊಬ್ಬನಲ್ಲಿಗೆ ಹೋಗಿ ಅವನು ಬಾಣ ಮಾಡಲು ಕಲಿತುಕೊಂಡನು.

ತುಸುದೂರ ಮುಂದರಿದು ಅವನು ನಾವೆ ಕಟ್ಟಲಿಕ್ಕೂ ದೋಣಿ ನಡಿಸಲಿಕ್ಕೂ ಕಲಿತನು.

ಒಂದು ಕಡೆ ಅವನು ಮನೆ ಕಟ್ಟುವ ವಿದ್ಯೆ ಕಲಿತನು.

ಈ ಬಗೆಯಾಗಿ ಅವನು ಹದಿನಾರು ದೇಶಗಳನ್ನು ಸುತ್ತಾಡಿ ಮರಳಿ ಮನೆಗೆ ಬಂದನು. ಬಹು ಹೆಮ್ಮೆಯಿಂದ ಹೇಳತೊಡಗಿದದೇನೆಂದರೆ-ಈ ಪೃಥ್ವಿಯ ಮೇಲೆ ನನಗೆ ಸರಿಯಾದ ಚತುರನು ಇನ್ನು ಬೇರೆ ಯಾವನಿದ್ದಾನೆ?

ಒಂದುದಿನ ಬಗವಾನ್ ಬುದ್ಧರನ್ನು ಆ ಬ್ರಹ್ಮಚಾರಿಯು ಕಂಡನು, ಹಾಗೂ ಅವರಿಗೆ ಕೇಳಿಕೊಂಡಿದ್ದೇನೆಂದರೆ- “ಇಲ್ಲಿಯವರೆಗೆ ನಾನು ಕಲಿತ ಎಲ್ಲಕ್ಕಿಂತ ಹೆಚ್ಚು ಶ್ರೇಷ್ಠವಾದ ವಿದ್ಯೆಯನ್ನು ಹೇಳಿಕೊಡಬೇಕು.” ಅವರು ಒಬ್ಬ ಮುಪ್ಪಿನ ಶ್ರವಣನ ರೂಪವನ್ನು ಧರಿಸಿ ಅ ನವಯುವಕನ ಹತ್ತಿರ ಹೋದರು. ಶ್ರವಣನ ಹತ್ತಿರ ಒಂದು ಭಿಕ್ಷಾಪಾತ್ರೆ ಇತ್ತು.

“ನೀವಾರು ?” ಎಂದು ಬ್ರಹ್ಮಚಾರಿಯು ಪ್ರಶ್ನಿಸಿದನು.

“ನಾನು ನನ್ನ ಶರೀರವನ್ನು ವಶದಲ್ಲಿ ಇಟ್ಟುಕೊಳ್ಳಬಲ್ಲ ಒಬ್ಬ ಮನುಷ್ಯ…”

“ಏನು ಹೇಳಬೇಕೆಂದು ನೀವು ಅಶಿಸುತ್ತೀರಿ?”

“ಒಬ್ಬ ಧನುರ್ವೇದಿಯು ಬಾಣ ಪ್ರಯೋಗಿಸಲು ಬಲ್ಲನು.” ಬುದ್ಧ ದೇವರು  ಉತ್ತರವಿತ್ತರು- “ಒಬ್ಬ ನಾವಿಕನು ನಾವೆ ನಡೆಸುತ್ತಾನೆ. ಒಬ್ಬ ಶಿಲ್ಪಿಯು ತನ್ನ ಮೇಲ್ವಿಚಾರಣೆಯಲ್ಲಿ ಮನೆ ಕಟ್ಟಿಕೊಳ್ಳುತ್ತಾನೆ. ಆದರೆ ಒಬ್ಬ ಜ್ಞಾನಿಯು ಸ್ವತಃ ತನ್ನ ಮೇರೆ ತಾನು ಶಾಸನವನ್ನು ನಡೆಸುತ್ತಾನೆ.”

“ಯಾವ ಪ್ರಕಾರ ?”

“ಯಾರಾದರೂ ತನ್ನನ್ನು ಪ್ರಶಂಸಿಸಿದರೆ ಅವನ ಮನಸ್ಸು ಚಂಚಲವಾಗುವುದಿಲ್ಲ. ಯಾರಾದರೂ ತನ್ನನ್ನು ನಿಂದಿಸಿದರೆ ಅವನ ಮನಸ್ಸು ಸ್ಥಿರವಾಗಿ ಉಳಿಯುತ್ತದೆ. ಅವನು ಸರ್ವರಿಗೂ ಹಿತವಾಗುವ ಮಹಾನಿಯಮಗಳನ್ನು ಅನುಸರಿಸಿ ಕಾರ್ಯ ಮಾಡುತ್ತಾನೆ. ಈ ಪ್ರಕಾರ ಅವನು ಯಾವಾಗಲೂ ಶಾಂತಿಯಲ್ಲಿ ನೆಲೆಸುತ್ತಾನೆ.”

ಒಳ್ಳೇದು. ಮಕ್ಕಳೇ, ನಿಮ್ಮನ್ನು ನೀವು ಆಳಲು ಕಲಿತುಕೊಳ್ಳಿರಿ. ನಿಮ್ಮ ಸ್ವಭಾವವನ್ನು ವಶಗೊಳಿಸಿಕೊಳ್ಳುವುದಕ್ಕಾಗಿ ನೀವು ಕಠೋರವಾದ ಕಡಿವಾಣವನ್ನು ಹಾಕಿಕೊಳ್ಳುವ ಆವಶ್ಯಕತೆಯೆನಿಸಿದರೆ ದೂರಿಕೊಳ್ಳುವುದನ್ನು ಬಿಟ್ಟುಬಿಡಿರಿ.

ಒಂದು ಚಂಚಲವಾದ ಹರೆಯದ ಕುದುರೆಯು ಬರಬರುತ್ತ ಈಲವಾಗಿ ಬಿಡುವದು. ಅದು ಒಂದು ಕಟ್ಟಿಗೆಯ ಮೂಕ ಕುದುರೆಗಿಂತ ಎಷ್ಟೋ ಒಳ್ಳೆಯದು. ಅದು ತನ್ನನ್ನು ಮಾಡಿ ನಿಲ್ಲಿಸಿದಂತೆಯೇ ಯಾವಾಗಲೂ ಇರುತ್ತದೆ. ಅದಕ್ಕೆ ನಗೆಚಾಟ್ಟಿಕೆಯ ಸಲುವಾಗಿ ಮಾತ್ರ ಕಡಿವಾಣವನ್ನು ಏರಿಸಲಾಗುತ್ತದೆ.
*****
ಹಿಂದಿ ಮೂಲ: ಶ್ರೀ ತಾಯಿಯವರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾವು
Next post ಹೃದಯ

ಸಣ್ಣ ಕತೆ

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

cheap jordans|wholesale air max|wholesale jordans|wholesale jewelry|wholesale jerseys