ಜಾತಿಗಳೇ ಜೈಲಾಗದಿರಿ

ಜಾತಿಗಳೇ ಜೈಲಾಗದಿರಿ

ಇತ್ತೀಚಿನ ದಿನಗಳಲ್ಲಿ ಹಿಂದೆಂದಿಗಿಂತ ಹೆಚ್ಚಾಗಿ ಜಾತಿ ಸಂಬಂಧೀ ಸಂಗತಿಗಳು ಬೀದಿಗೆ ಬಂದು ಬಾಯಿ ಮಾಡುತ್ತಿವೆ. ಜಾತಿ ಎನ್ನುವುದು ಕೆಲವರಿಗೆ ಅಭಿಮಾನದ, ಇನ್ನು ಕೆಲವರಿಗೆ ಅವಮಾನ ವಿಷಯವಾಗಿ ಪರಿಣಮಿಸಿದ ಇಂಡಿಯಾ ವಿಷವರ್ತುಲದಲ್ಲಿ ಜಾತಿಯು ಸಾಮಾಜಿಕ ವಾಸ್ತವದ ವಿಶ್ಲೇಷಣೆಗೆ ಸಾಧನವಾಗಬೇಕಾದ್ದು ಅಧ್ಯಯನ ಅನಿವಾರ್ಯತೆ. ಆದರೆ ಇದೇ ಜಾತಿ ಕೇವಲ ಸವಲತ್ತುಗಳ ಸಾಧನವಾಗಿ ಬಳಕೆಯಾಗುತ್ತಿದ್ದು ಅಭಿಮಾನ ಮತ್ತು ಅವಮಾನದ ಅರ್ಥ ಕಲ್ಪನೆಗಳೇ ಅರ್ಥ ಕಳೆದುಕೊಳ್ಳುತ್ತಿವೆ. ಸಾಮಾಜಿಕವಾಗಿ ಮುಂದುವರೆದ ಪಟ್ಟದಲ್ಲಿ ಸಾವಿರಾರು ವರ್ಷ ವಿಜೃಂಭಿಸಿದ ಜಾತಿಗಳು ಹಿಂದುಳಿದ ಪಟ್ಟಿ ಸೇರಲು ಹಾತೊರೆಯುತ್ತಿವೆ. ಹಿಂದುಳಿದ ಪಟ್ಟಿಯಲ್ಲಿರುವ ಜಾತಿಗಳು ಮುಂದುವರೆದ ಪಟ್ಟದಲ್ಲಿ ಕುಳಿತುಕೊಳ್ಳುವ ಸಹಜ ಆಕಾಂಕ್ಷೆಯಲ್ಲಿ ಶಿಕ್ಷಿತರ ಸವಲತ್ತಿಗೇ ಆದ್ಯತೆ ಕೊಡುತ್ತಿವೆ. ಒಟ್ಟು ಸಾಮಾಜಿಕ ಬದಲಾವಣೆ ಮೂಲಕ ಜಾತಿ ವಿನಾಶ ಮಾಡುವುದು ಅಸಾಧ್ಯವೆಂಬ ಭಾವನೆಯಿಂದ, ಸವಲತ್ತುಗಳ ಸರದಾರರಾಗುವ ಏಕೈಕ ಆಸೆಯಿಂದಲೋ ಅಥವಾ ಎರಡು ಅಂಶಗಳೂ ಸೇರಿ ಬೆಂದ ಮನೆಯಲ್ಲಿ ಇರಿದಿದ್ದೇ ಲಾಭ ಎಂಬ ‘ಸಮಯಸಾಧಕ ಸಿದ್ಧಾಂತ’ದಿಂದಲೊ ಲಾಭಕ್ಕಾಗಿ ಜಾತಿಯನ್ನು ಮುಂದು ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಹನ್ನೆರಡನೇ ಶತಮಾನದ ಅಲ್ಲಮಪ್ರಭು ‘ಭಕ್ತಿಯೆಂಬುದು ತೋರಿ ಉಂಬ ಲಾಭ’ ಎಂದು ಹೇಳಿದ್ದನ್ನು ಇವತ್ತಿಗೂ ಹಾಗೆ ಉಳಿಸಿಕೊಂಡು ‘ಜಾತಿಯೆಂಬುದು ತೋರಿ ಉಂಬ ಲಾಭ’ ಎಂಬ ಮತ್ತೊಂದು ಮಾತನ್ನು ಚಲಾವಣೆಗೆ ತರಬೇಕಾಗಿದೆ. ಇದು ಎಲ್ಲ ಜಾತಿಗಳಿಗೂ ಅನ್ವಯಿಸುತ್ತದೆ. ಉದಾಹರಣೆಗೆ ಆಸ್ಪೃಶ್ಯರಲ್ಲಿ ಇರುವ ಎಡಗೈ-ಬಲಗೈ ಕಿತ್ತಾಟ ಬೀದಿಗೆ ಬಂದಿರುವುದನ್ನು ಗಮನಿಸಬಹುದು. ೧೯೪೧ ರ ವರೆಗಿನ ದಾಖಲೆಗಳಲ್ಲಿ ಹೊಲೆಯರು-ಮಾದಿಗರು ಎಂಬ ಹೆಸರಾಗಿದ್ದವರು ಆನಂತರ ಆದಿ ದ್ರಾವಿಡ-ಆದಿ ಕರ್ನಾಟಕ ಎಂದು ಉಲ್ಲೇಖಿಸಲ್ಪಟ್ಟರು, ೧೯೫೧ ರಿಂದ ಒಟ್ಟಿಗೆ ಪರಿಶಿಷ್ಟ ಜಾತಿಯಾದರು. ಮೊದಮೊದಲು ಬಹಿರಂಗಗೊಳ್ಳದೆ ಇದ್ದ ಬಿರುಕು ಸರ್ಕಾರದ ಉನ್ನತ ಸ್ಥಾನಮಾನಗಳನ್ನು ದಕ್ಕಿಸಿಕೊಳ್ಳುವ ಕಾರಣದಿಂದ ಈಗ ಬೀದಿ ಮಾತಾಗಿದೆ. ಹಿಂದುಳಿದ ಜಾತಿಗಳು ಈ ವಿಷಯದಲ್ಲಂತೂ ಹಿಂದೆ ಬಿದ್ದಿಲ್ಲ. ಒಟ್ಟಾರೆ ಹಿಂದುಳಿದ ಜಾತಿ-ವರ್ಗಗಳ ಸಮಗ್ರ ಕಲ್ಪನೆ ಸಾಧ್ಯವಿಲ್ಲವೇನೋ ಎಂಬ ಆತಂಕ ಉಂಟು ಮಾಡುವಂತೆ ಪ್ರತ್ಯೇಕತಾ ಭಾವನೆ ಬೆಳೆಯುತ್ತಿದೆ. ಮೊದಮೊದಲು ದಲಿತರು, ಹಿಂದುಳಿದವರು ಸಮಾವೇಶಗಳನ್ನು ನಡೆಸಿ ಸಾಮಾಜಿಕ ಘನತೆ ಹಾತೊರೆಯುತ್ತಿದ್ದರೆ ಇಂದು ಮುಂದುವರಿದ ಜಾತಿಗಳು ಸಮಾವೇಶಗಳಲ್ಲಿ ಆವೇಶಗೊಳ್ಳುತ್ತಿವೆ. ಈ ಸಮಾವೇಶಗಳ ಆವೇಶ ನಮ್ಮ ಸಮಾಜವನ್ನು ಎಲ್ಲಿಗೆ ಕೊಂಡೊಯ್ಯಬಹುದು ಎಂಬ ಆತಂಕ ನಮ್ಮನ್ನೆಲ್ಲ ಕಾಡಿಸಬೇಕಾಗಿದೆ.

ಹೀಗೆಂದಕೂಡಲೇ ಜಾತಿಯ ವಿಷಯವನ್ನೇ ಎತ್ತಬಾರದೆಂದು ಅರ್ಥವಲ್ಲ. ವರ್ಣ ಮತ್ತು ಜಾತಿ ವ್ಯವಸ್ಥೆ ವಿಶ್ಲೇಷಣೆಯಿಲ್ಲದೆ ಈ ದೇಶದ ಇತಿಹಾಸ ಪೂರ್ಣಗೊಳ್ಳುವುದೇ ಇಲ್ಲ. ಕ್ರಿ.ಪೂ. ೧೫೦೦ ರಿಂದ ೧೦೦೦ ವರೆಗಿನ ಅವಧಿಗೆ ವೇದಗಳೇ ನಮಗೆ ಆಕರ. ಋಗ್ವೇದದಲ್ಲಿ ಬ್ರಾಹ್ಮಣ-ಕ್ಷತ್ರಿಯ ವರ್ಣಗಳ ಉಲ್ಲೇಖವಿದ್ದರೆ ಪುರುಷ ಸೂಕ್ತದಲ್ಲಿ ವೈಶ್ಯ-ಶೂದ್ರ ವರ್ಣಗಳ ಉಲ್ಲೇಖವಿದೆ. ಯಜುರ್ವೇದದಲ್ಲಿ ಚಂಡಾಲರ ಪ್ರಸ್ತಾಪವಿದೆ. ತೈತ್ತರೀಯ ಸಂಹಿತೆಯು ಬ್ರಾಹ್ಮಣನು ಸೃಷ್ಟಿಕರ್ತನ ಮುಖದಿಂದ ಕ್ಷತ್ರಿಯ ಬಾಹುಗಳಿಂದ ವೈಶ್ಯರು ಉದರದಿಂದ ಶೂದ್ರ ಪಾದದಿಂದಲೂ ಹುಟ್ಟಿರುವುದಾಗಿ ಹೇಳಿ ವರ್ಣ ವ್ಯವಸ್ಥೆಗೆ ಪೌರಾಣಿಕ ಭದ್ರತೆಯನ್ನು ಒದಗಿಸಿದೆ. ‘ಶತಪಥ ಬ್ರಾಹ್ಮಣವು’ ಬ್ರಾಹ್ಮಣನ ಕೊಲೆಯೊಂದೇ ಕೊಲೆಯೆಂದೂ ಇತರರೊಂದಿಗೆ ವಿವಾದ ಉಂಟಾದಾಗ ನ್ಯಾಯವೂ ಬ್ರಾಹ್ಮಣ ಪರವಾಗಿಯೇ ಇರಬೇಕೆಂದು ಹೇಳುತ್ತದೆ. ಹೀಗೆ ವರ್ಣಾಶ್ರಮದ ವಿಸ್ತರಣೆಯಾಗುತ್ತ ಆನಂತರದ ಶತಮಾನಗಳಲ್ಲಿ ಜಾತಿ ಜನ್ಮತಾಳಿದೆ. ಋಗ್ವೇದದಲ್ಲಿ ಜಾತಿಗಳ ಉಲ್ಲೇಖವಿಲ್ಲವಾದರೂ ಕಸಬುಗಳ ಆಧಾರದ ಮೇಲೆ ಬಡಗಿ, ಚಮ್ಮಾರ, ನಾಯಕ, ವೈದ್ಯ, ಅಕ್ಕಸಾಲಿ, ವ್ಯಾಪಾರಿ-ಮುಂತಾದ ಉಲ್ಲೇಖಗಳಿವೆ. ಮುಂದೆ ವರ್ಣಾಶ್ರಮ ಧರ್ಮದ ಒಳ ಸೀಳುಗಳಾಗಿ ಜಾತಿ ಗುಂಪುಗಳು ಬೆಳೆದಂತೆ ಕಾಣುತ್ತದೆ. ಇದಿಷ್ಟು ನನ್ನ ಅಲ್ಪ ಓದಿನ ಉಲ್ಲೇಖಗಳು. ಜಾತಿಯ ವಿಷಯವನ್ನು ಒಳಗೊಳ್ಳದೆ ಇಂಡಿಯಾ ಇತಿಹಾಸವಿಲ್ಲವೆಂಬ ನನ್ನ ಮಾತಿಗೆ ಹಿನ್ನೆಲೆಯಾಗಿ ಸಮರ್ಥನೆಗಳು.

ಆದರೆ ಸಾಮಾಜಿಕ-ಆರ್ಥಿಕ ಬೆಳವಣಿಗೆ ಬಲಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ ನಾವು ಜಾತಿಯನ್ನು ಎಲ್ಲಿಯವರೆಗೆ ಉಲ್ಲೇಖಿಸಬಹುದೆಂಬ ಪ್ರಶ್ನೆಯನ್ನು ಹಾಕಿಕೊಳ್ಳಬೇಕಾಗಿದೆ. ಈ ದೇಶದ ಮುಂದುವರಿದ ಜಾತಿಗಳು ಇತಿಹಾಸ ವೈಭವವನ್ನು ಕಟ್ಟಿಕೊಂಡು ಬಂದಿವೆ. ಭವಿಷ್ಯದ ಬೆಳಕು ಬನಾಯಿಸಬೇಕೆಂಬುದಷ್ಟೇ ಅವುಗಳ ಆಸೆ. ಕೆಳಜಾತಿಗಳ ಸಮಸ್ಯೆ ವಿಭಿನ್ನವಾದದ್ದು. ಇವುಗಳಿಗೆ ಇತಿಹಾಸದ ವೈಭವವನ್ನು ಕಟ್ಟಿಕೊಂಡ ಪರಿಣತಿಯಿಲ್ಲ. ಏಕಕಾಲಕ್ಕೆ ಭೂತದ ಚರಿತ್ರೆಯನ್ನೂ ಭವಿಷ್ಯದ ಬೆಳಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸುವ ಕೆಳಜಾತಿಗಳಿಗೆ ಮೇಲ್ಜಾತಿಗಳ ಮಾದರಿಯೇ ಆದರ್ಶ. ಅವರಂತೆ ಇವರೂ ಇತಿಹಾಸ ಪುರುಷರನ್ನು ತಮ್ಮವರೆಂದು ಹೇಳಿಕೊಳ್ಳತೊಡಗುವುದು, ‘ಪುರಾಣ ಪುಣ್ಯ ಪುರುಷ’ರಲ್ಲಿ ತಂತಮ್ಮ ಜಾತಿಯನ್ನು ಗುರುತಿಸಿಕೊಂಡು ಪುನೀತರಾಗುವುದು ಇದೇ ಕಾರಣದಿಂದ. ವಾಲ್ಮೀಕಿ ನಮ್ಮವನು, ಕಾಳಿದಾಸ ನಮ್ಮವನು ಎಂದೆಲ್ಲ ಹೇಳಿಕೊಳ್ಳುವುದರಲ್ಲಿ ಅವರಿಗೆ ಆನಂದ. ಜೊತೆಗೆ ಕನಕದಾಸ ನಮ್ಮವರೇ ಎಂದು ಕುರುಬರು, ನಾಯಕರೂ ಕಿತ್ತಾಡುವುದಕ್ಕೂ ಇದೇ ಮೂಲ ಪ್ರೇರಣೆಯಾಗಿರಬಹುದು. ಹೇಗೆ ಭೂತವನ್ನು ಕಟ್ಟಿಕೊಳ್ಳಲು ನಡೆಸಿದ ಕಿತ್ತಾಟ ಒಂದುಕಡೆಯಾದರೆ ಭವಿಷ್ಯವನ್ನು ಕಟ್ಟಿಕೊಳ್ಳಲು ನಡೆಸಿದ ಕಿತ್ತಾಟ ಇನ್ನೊಂದು ಕಡೆಗಿದೆ.

ಜಾತಿಯ ಕಾರಣಕ್ಕೆ ತುಳಿತಕ್ಕೆ ಒಳಗಾದವರನ್ನು ಜಾತಿಯ ಹೆಸರು ಹೇಳಿ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ನೆಲೆಗೆ ತರಬೇಕೆಂಬ ತತ್ವದಲ್ಲಿ ಅರ್ಥವಿದೆ. ಈ ಕಾರಣಕ್ಕಾಗಿ, ಜಾತಿಯನ್ನು ವಾಸ್ತವವೆಂದು ಒಪ್ಪುವುದು ಮತ್ತು ಅವಮಾನಿತ ಜಾತಿಗಳಿಗೆ ಅಭಿಮಾನದ ಸಾಮಾಜಿಕ ಪರಿಸರ ನಿರ್ಮಿಸುವುದು ಅಗತ್ಯ. ಆದರೆ ಜಾತಿಯನ್ನು ಸರ್ವಸಮಾನತೆಯ ಏಕೈಕ ಸಾಧನವೆಂದು ಭಾವಿಸುವುದು ತಪ್ಪು. ಎಲ್ಲ ಜಾತಿಗಳಲ್ಲೂ ಬಡವ-ಬಲ್ಲಿದರು ರೂಪುಗೊಳ್ಳುತ್ತಿರುವ ವರ್ತಮಾನದಲ್ಲಿ ಕೆಲವು ವಿಶಿಷ್ಟ ಕಾರಣಗಳಿಗಾಗಿ ಜಾತಿಯನ್ನು ಗುರುತಿಸಬೇಕೇ ಹೊರತು ಜಾತಿ ಸಂಘರ್ಷದಿಂದ ಸಮಾನತೆಯನ್ನು ತರುತ್ತೇವೆನ್ನುವುದು ಅನರ್ಥಕಾರಿ ಕಲ್ಪನೆ. ಜಾತಿ ವ್ಯವಸ್ಥೆಯ ವಿಷವುಂಡು ಬದುಕಿ ಬಾಳುತ್ತಿರುವ ಜನಸಮೂಹವನ್ನು ಅದೇ ಕಾರಣಕ್ಕೆ ಗುರುತಿಸಿ, ಗೌರವಿಸಿ, ಸಮಾಜದ ಸಮತಲಕ್ಕೆ ತರುವ ಪ್ರಯತ್ನದವರೆಗೆ ಜಾತಿಯನ್ನು ಇತಿಹಾಸದ ವಾಸ್ತವವಾಗಿ ಬಳಸಬೇಕೇ ಹೊರತು ವರ್ತಮಾನದ ಹೋರಾಟ ಗಳಿಗೆ ಜಾತಿಯೊಂದೇ ಮುಖ್ಯ ಮಾನದಂಡ ಆಗಬಾರದು. ಜಾತಿಯ ಉಲ್ಲೇಖ ಔಚಿತ್ಯದ ಎಲ್ಲೆಯನ್ನು ಮೀರದಂತೆ ನಿಯಂತ್ರಿಸುವ ವಾತಾವರಣ ನಿರ್ಮಾಣವಾಗಬೇಕು. ಇಲ್ಲದಿದ್ದರೆ ವರ್ಗ ಸಮಾಜದ ಗುಣಲಕ್ಷಣಗಳನ್ನು ಪಡೆಯುತ್ತಿರುವ ನಮ್ಮ ಸಂದರ್ಭದಲ್ಲಿ, ಜಾತಿ ವರ್ಗ ಒಂದು ಸಾಧನವು ಆಗಿಬಿಡುತ್ತದೆ. ಔಚಿತ್ಯದ ಎಲ್ಲೆಯನ್ನು ಮೀರುತ್ತದೆ. ಅಸಹ್ಯ ವಾತಾವರಣವನ್ನುಂಟು ಮಾಡುತ್ತದೆ.

ಮೇಲಿನ ಮಾತಿಗೆ ಉದಾಹರಣೆಯಾಗಿ ಪ್ರತಿಯೊಂದು ಜಾತಿಯನ್ನು ಪ್ರತಿನಿಧಿಸುತ್ತಿರುವ ‘ವರ್ಗ’ಗಳನ್ನು ನೋಡಬಹುದು. ಇಂದು ಪ್ರತಿ ಜಾತಿಯಲ್ಲೂ ವಿದ್ಯಾವಂತರೂ ಬರುತ್ತಿದ್ದಾರೆ. ಹೆಚ್ಚು ವಿದ್ಯಾವಂತರಿರುವ ಜಾತಿಗಳಲ್ಲಿ ಜಾತಿ ಪ್ರಜ್ಞೆ ಬಯಲಿಗೆ ಬರುತ್ತಿದೆಯಲ್ಲ, ಯಾಕೆ ? ರಾಜ ಕಾರಣಿಗಳು, ಶ್ರೀಮಂತರೂ ಶಿಕ್ಷಿತರು ಹೆಚ್ಚಾಗಿ ಜಾತಿಯ ಬಳಕೆ ಮಾಡಿ ಕೊಳ್ಳುತ್ತಿದ್ದಾರೆ, ಯಾಕೆ ? ಈ ಪ್ರಶ್ನೆಗಳು ಇವತ್ತು ಮುಖ್ಯವಾಗಬೇಕು. ಇದೀಗ ವಿವಿಧ ಸವಲತ್ತು ಸ್ಥಾನ ಮಾನಗಳನ್ನು ಪಡೆಯುತ್ತಿರುವ ಜಾತಿಗಳಲ್ಲಿ ಅವುಗಳನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲು ಆತುರ; ಆಕಾಂಕ್ಷೆಗಳು ಹೆಚ್ಚುತ್ತಿದೆ. ಅದಕ್ಕಾಗಿ ಅನ್ಯ ಜಾತಿಯೊಂದಿಗೆ ಹೋಲಿಸಿಕೊಂಡು ತನ್ನನ್ನು ಗುರುತಿಸಿಕೊಳ್ಳುವ ಸ್ಥಾಪಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. “ಜಾತಿ ತನಗೆ ತಾನೇ ಅಸ್ತಿತ್ವವನ್ನು ಹೊಂದಿರುವುದಿಲ್ಲ. ಅದು ಇತರ ಜಾತಿಗಳ ಜೊತೆಗೆ ಹೊಂದಿರುವ ವ್ಯತ್ಯಾಸದಿಂದ ಗುರುತಿಸಿಕೊಳ್ಳುತ್ತದೆ. ಈ ವ್ಯತ್ಯಾಸದಲ್ಲಿ ಆಯಾ ಜಾತಿಗಳ ಜನರು ಹೊಂದಿರುವ ಆರ್ಥಿಕ, ರಾಜಕೀಯ ಹಾಗೂ ಆಚರಣಾತ್ಮಕ ಸಂಬಂಧಗಳು ಅಡಕವಾಗಿರುತ್ತವೆ” ಎಂಬುದಾಗಿ ಇ. ಆರ್. ಲೀಚ್ ಹೇಳಿರುವ ಮಾತು ಇಲ್ಲಿ ಉಲ್ಲೇಖನೀಯವೆನಿಸುತ್ತದೆ.

ನಾನು ಹೇಳಬೇಕೆಂದು ಬಯಸಿದ್ದು ಇಷ್ಟು: ಇಂದು ಜಾತಿ ಬಳಕೆ ತನ್ನ ಔಚಿತ್ಯದ ಎಲ್ಲೆಯನ್ನು ಮೀರಿ ಬೀದಿಗೆ ಬರಲು ಕಾರಣವಾಗಿರುವವರು ಆಯಾ ಜಾತಿಗಳಲ್ಲಿ ಈಗಾಗಲೇ ಸವಲತ್ತಿನ ದವಲತ್ತು ಕಂಡ ಜನರೇ ಹೊರತು, ಜಾತಿ ಸೂಕ್ಷ್ಮಗಳಲ್ಲಿ ಸೊರಗುತ್ತಿರುವ ಸಾಮಾನ್ಯ ಜನರಲ್ಲ. ರಾಜಕಾರಣಿಗಳು, ಶ್ರೀಮಂತರು ಮತ್ತು ವಿದ್ಯಾವಂತರ ವರ್ಗಗಳು ಇಂದು ಜಾತಿಯನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿವೆ. ವರ್ಗಗಳು ಜಾತಿಯನ್ನು ಸವಲತ್ತಿನ ಸಾಧನವಾಗಿ ಬಳಸಿಕೊಳ್ಳುತ್ತಿರುವ ವಿಪರ್ಯಾಸ ನಮ್ಮೆದುರು ರಾಚುತ್ತಿದೆ. ಕೆಳಜಾತಿಗಳಲ್ಲಿ ಅರಿವು ಮೂಡುತ್ತಿದ್ದಂತೆ, ಅದನ್ನು ಸಾಮಾಜಿಕ ಬದಲಾವಣೆಯ ಸಾಧನವಾಗಿ ಬಳಸಿಕೊಳ್ಳುವ ಬದಲು ಸ್ವಾರ್ಥ ಸಾಧನೆಗೆ ಬಳಸಿಕೊಳ್ಳುವ ‘ಶ್ರೇಷ್ಠ ಶ್ರೇಣಿ’ಯ ಮಾದರಿಗಳಲ್ಲಿ ಮುಳುಗಿ ಹೋಗುತ್ತಿರುವ ವಿದ್ಯಾವಂತರು ವಿವೇಕ ಹೊತ್ತು ಹೊರಬರುವ ಕಾಲ ಬೇಗ ಬರಬೇಕಾಗಿದೆ.

ತುಳಿತಕ್ಕೊಳಗಾದ ಜಾತಿ ಜನ ಸಮೂಹಕ್ಕೆ ರಾಜಕೀಯ ಪ್ರಾತಿನಿಧ್ಯ, ಶಿಕ್ಷಣ ಮತ್ತು ಉದ್ಯೋಗದ ಮೀಸಲಾತಿ ಬೇಕೇಬೇಕು. ಇದಕ್ಕೆ ಎರಡು ಮಾತಿಲ್ಲ. ಈ ಅಂಶವನ್ನು ಉಳಿಸಿಕೊಂಡು ಆರೋಗ್ಯಕರವಾಗಿ ಬಳಸಿ ಕೊಳ್ಳುವ ವಿವೇಕವನ್ನು ನಮ್ಮ ವಿದ್ಯಾವಂತರು ರಾಜಕಾರಣಿಗಳು ಪ್ರಬುದ್ಧವಾಗಿ ಪ್ರಕಟಿಸಬೇಕು. ಹಸಿಹಸಿಯಾಗಿ ಬಳಕೆಯಾಗುತ್ತಿರುವ ಜಾತಿ ವ್ಯವಸ್ಥೆಯ ಇತಿಹಾಸಕ್ಕೆ ಔಚಿತ್ಯಪೂರ್ಣ ಪ್ರಬುದ್ಧತೆ ಲಭ್ಯವಾಗಬೇಕು. ಜಾತಿಯನ್ನು ಗುರುತಿಸಿ ಅಭಿವೃದ್ಧಿಯ ಹಾದಿಗೆ ತರುವುದು ಮತ್ತು ಜಾತಿವಾದ ಮಾಡಿ ಸ್ವಾರ್ಥ ಸಾಧಿಸುವುದು ಬೇರೆ ಬೇರೆಯೆಂಬ ಸೂಕ್ಷ ನಮಗೆ ಅರ್ಥವಾಗಬೇಕು. ಹೀಗೆ ಜಾತಿ ಮತ್ತು ಜಾತಿವಾದಿಗಳ ನೆಲೆಯನ್ನು ಅರಿಯದೆ ಜಾತಿವಾದವನ್ನು ಜಾತಿ ಜನ ಸಮುದಾಯದ ಉದ್ಧಾರದ ಹಾದಿಯೆಂದು ಭ್ರಮಿಸಿದರೆ ಇತಿಹಾಸ ನಮ್ಮನ್ನು ಕ್ಷಮಿಸುವುದಿಲ್ಲ.

ಜಾತಿಯನ್ನು ಬಳಸಿಕೊಳ್ಳುತ್ತ ವರ್ಗಗಳು ವಿಜೃಂಭಿಸುತ್ತಿರುವುದು ಮತ್ತು ಬಿಡುಗಡೆಗೊಳ್ಳಬೇಕಾದ ಜಾತಿಗಳೇ ಜೈಲುಗಳಾಗುತ್ತಿರುವುದು ಎಂಥ ವಿಪರ್ಯಾಸ! ವಿಪರ್ಯಾಸವೇ ಇಂದಿನ ವಾಸ್ತವ.
*****
೧೯-೦೬-೧೯೯೪

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೋಲಿಯಾಟದ ಜಗತ್ತು
Next post ಯಾರು ನೀನು?

ಸಣ್ಣ ಕತೆ

 • ಹನುಮಂತನ ಕಥೆ

  ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

 • ಅಹಮ್ ಬ್ರಹ್ಮಾಸ್ಮಿ

  ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

 • ದುರಾಶಾ ದುರ್ವಿಪಾಕ

  "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

 • ಜೀವಂತವಾಗಿ…ಸ್ಮಶಾನದಲ್ಲಿ…

  ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

 • ಕೇರೀಜಂ…

  ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

cheap jordans|wholesale air max|wholesale jordans|wholesale jewelry|wholesale jerseys